ಮೊದಲನೇ ವಾಚನ:ಧರ್ಮೋಪದೇಶಕಾಂಡ 34:1- 8
ಮೋಶೆ ಮೋವಾಬ್ಯರ ಬಯಲು ನಾಡಿನಿಂದ ಜೆರಿಕೋ ಪಟ್ಟಣಕ್ಕೆ ಎದುರಾಗಿ ಇರುವ ನೆಬೋಪರ್ವತಕ್ಕೆ ಹೋಗಿ, ಪಿಸ್ಗಾ ಎಂಬ ಬೆಟ್ಟದ ಶಿಖರವನ್ನು ಹತ್ತಿದನು. ಆಗ ಸರ್ವೇಶ್ವರ ಕಾನಾನ್ ನಾಡೆಲ್ಲವನ್ನು ಅಂದರೆ, ದಾನ್ ಪಟ್ಟಣದವರೆಗಿದ್ದ ಗಿಲ್ಯಾದ್ ಪ್ರಾಂತ್ಯ, ನಫ್ತಾಲಿ ಪ್ರದೇಶ, ಎಫ್ರಯಿಮ್ ಮನಸ್ಸೆಕುಲಗಳವರ ಪ್ರಾಂತ್ಯ, ಪಶ್ಚಿಮ ಸಮುದ್ರದವರೆಗಿದ್ದ ಜುದೇಯನಾಡು, ದಕ್ಷಿಣ ಪ್ರದೇಶ, ಚೋಗರೂರಿನ ತನಕ ಇದ್ದ ಜೆರಿಕೋ ಎಂಬ ಖರ್ಜೂರಗಳ ಪಟ್ಟಣದ ಸುತ್ತಲಿನ ಬಯಲು, ಇದನ್ನೆಲ್ಲಾ ಅವನಿಗೆ ತೋರಿಸಿದರು. ಅನಂತರ, “ನಾನು ಅಬ್ರಹಾಮ್, ಇಸಾಕ್, ಯಕೋಬರಿಗೆ ಪ್ರಮಾಣಮಾಡಿ ಅವರ ಸಂತತಿಯವರಿಗೆ ಕೊಡುವೆನೆಂದು ವಾಗ್ದಾನ ಮಾಡಿದ ನಾಡು ಇದೇ; ಇದನ್ನು ನಿನಗೆ ಪ್ರತ್ಯಕ್ಷವಾಗಿ ತೋರಿಸಿದ್ದೇನೆ. ಆದರೆ ನೀನು ನದಿದಾಟಿ ಅಲ್ಲಿಗೆ ಹೋಗಕೂಡದು,” ಎಂದು ಹೇಳಿದರು.
ಸರ್ವೇಶ್ವರನ ಮಾತಿನಂತೆ ಅವರ ದಾಸ ಮೋಶೆ ಅಲ್ಲೇ ಮೋವಾಬ್ಯರ ದೇಶದಲ್ಲಿ ಮೃತನಾದನು. ೬ಮೋವಾಬ್ಯರ ದೇಶದಲ್ಲಿ ಬೇತ್ಪೆ ಗೋರಿಗೆ ಎದುರಾಗಿರುವ ಕಣಿವೆಯಲ್ಲಿ ಅವನ ದೇಹವನ್ನು ಸಮಾಧಿಮಾಡಿದರು. ಅವನ ಸಮಾಧಿ ಎಲ್ಲಿದೆಯೆಂದು ಇಂದಿನವರೆಗೆ ಯಾರಿಗೂ ತಿಳಿಯದು. ಮೋಶೆ ಸಾಯುವಾಗ ನೂರಿಪ್ಪತ್ತು ವರ್ಷದವನಾಗಿದ್ದನು. ಅವನ ಕಣ್ಣು ಮೊಬ್ಬಾಗಲಿಲ್ಲ, ಅವನ ಜೀವಕಳೆ ಕುಂದಿ ಹೋಗಿರಲಿಲ್ಲ. ಮೋವಾಬ್ಯರ ಬಯಲಿನಲ್ಲಿ ಇಸ್ರಯೇಲರು ಮೋಶೆಗಾಗಿ ಮೂವತ್ತು ದಿನ ದುಃಖಿಸಿದರು. ಅಲ್ಲಿಗೆ ಮೋಶೆಯ ಸಂತಾಪದ ದಿನಗಳು ಮುಗಿದವು.
ಕೀರ್ತನೆ: ಧರ್ಮೋಪದೇಶಕಾಂಡ 32:3-4.7.8-9.12
ಶ್ಲೋಕ:ಪ್ರಭೂ ದಯಾಳು ಕೃಪಾಪೂರ್ಣನು
1.ಪ್ರಕಟಿಸುವೆನು ನಾನು ಸರ್ವೇಶ್ವರನ ನಾಮಮಹತ್ವವನು
ಕೊಂಡಾಡಿ ನೀವು ಆ ದೇವನ ಮಹಾಮಹಿಮೆಯನು.
“ನಿಮಗೆ ಪೊರೆಬಂಡೆ ಆತ, ಆತನ ಕಾರ್ಯ ದೋಷರಹಿತ
ಆತನ ಮಾರ್ಗ ನ್ಯಾಯಯುತ,ಆ ದೇವ ನಂಬಿಕಸ್ತ.
2.ನೆನಪಿಗೆ ತಂದುಕೊಳ್ಳಿ ಆ ಪೂರ್ವಕಾಲವನು
ಆಲೋಚಿಸಿ ನೋಡಿ ಪೂರ್ವಿಕರ ಚರಿತೆಯನು.
ವಿಚಾರಿಸಿದರೆ ತಿಳಿಸುವರು ನಿಮ್ಮ ನಿಮ್ಮ ತಂದೆಗಳು
ಕೇಳಿದರೆ ವಿವರಿಸುವರು ನಿಮ್ಮ ನಿಮ್ಮ ಹಿರಿಯರು.
3.ಪರಾತ್ಮರ ದೇವರು ಜನಾಂಗಗಳನು ಬೇರೆಬೇರೆ ಮಾಡಿದಾಗ,
ಅವರವರಿಗೆ ಸ್ವದೇಶಗಳನು ವಿಂಗಡಿಸಿಕೊಟ್ಟಾಗ,
ದೇವಕುವರರ ಸಂಖ್ಯಾನುಸಾರ ಪ್ರದೇಶಗಳನು ಗೊತ್ತುಮಾಡಿದಾಗ.
4.ಇಸ್ರಯೇಲರು ಮಾತ್ರ ಸ್ವಜನರಾದರು ಸರ್ವೇಶ್ವರನಿಗೆ,
ಸ್ವಕೀಯ ಪ್ರಜೆಯಾದರು ಆ ಯಕೋಬ ವಂಶಜರು ಆತನಿಗೆ.
ಅವರನು ನಡೆಸಿದವನು ಸರ್ವೇಶ್ವರನೇ, ಅನ್ಯದೇವರಾರೂ ಇಲ್ಲ, ಆತನೊರ್ವನೇ.
ಶುಭಸಂದೇಶ: ಮತ್ತಾಯ 18:1-5,10,12-14.
ಆ ಕಾಲದಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು ಆ ಸಮಯದಲ್ಲಿ ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, "ಸ್ವರ್ಗಸಾಮ್ರಾಜ್ಯದಲ್ಲಿ ಎಲ್ಲರಿಗಿಂತಲೂ ದೊಡ್ಡವನು ಯಾರು?" ಎಂದು ಕೇಳಿದರು. ಯೇಸು ಒಂದು ಚಿಕ್ಕ ಮಗುವನ್ನು ತಮ್ಮ ಹತ್ತಿರಕ್ಕೆ ಕರೆದು, ಅದನ್ನು ಶಿಷ್ಯರ ನಡುವೆ ನಿಲ್ಲಿಸಿ ಹೀಗೆಂದರು: “ನೀವು ಪರಿವರ್ತನೆ ಹೊಂದಿ ಮಕ್ಕಳಂತೆ ಆಗದಿದ್ದರೆ ಸ್ವರ್ಗಸಾಮ್ರಾಜ್ಯವನ್ನು ಸೇರಲಾರಿರಿ, ಎಂದು ನಿಶ್ಚಯವಾಗಿ ಹೇಳುತ್ತೇನೆ. ಈ ಮಗುವಿನಂತೆ ನಮ್ರಭಾವವುಳ್ಳವನೇ ಸ್ವರ್ಗಸಾಮ್ರಾಜ್ಯದಲ್ಲಿ ಎಲ್ಲರಿಗಿಂತ ದೊಡ್ಡವನು. ೫ನನ್ನ ಹೆಸರಿನಲ್ಲಿ ಇಂತಹ ಮಗುವೊಂದನ್ನು ಸ್ವೀಕರಿಸುವವನು ನನ್ನನ್ನೇ ಸ್ವೀಕರಿಸುತ್ತಾನೆ." "ಎಚ್ಚರಿಕೆ! ಈ ಚಿಕ್ಕವರಲ್ಲಿ ಯಾರನ್ನೂ ತೃಣೀಕರಿಸಬೇಡಿ. ಸ್ವರ್ಗದಲ್ಲಿನ ಇವರ ದೂತರು ಸದಾಕಾಲ ನನ್ನ ಸ್ವರ್ಗೀಯ ಪಿತನ ಸಮ್ಮುಖದಲ್ಲಿ ಇದ್ದಾರೆ; ಇದು ನಿಮಗೆ ತಿಳಿದಿರಲಿ.“ನಿಮ್ಮಲ್ಲಿ ಒಬ್ಬನಿಗೆ ನೂರು ಕುರಿಗಳು ಇವೆಯೆನ್ನೋಣ, ಅವುಗಳಲ್ಲಿ ಒಂದು ಕುರಿ ತಪ್ಪಿಸಿಕೊಂಡು ಹೋಯಿತೆಂದು ಇಟ್ಟುಕೊಳ್ಳಿ. ಆಗ ನಿಮಗೇನು ಅನ್ನಿಸುತ್ತದೆ? ಅವನು ಉಳಿದ ತೊಂಭತ್ತೊoಭತ್ತು ಕುರಿಗಳನ್ನು ಗುಡ್ಡದಲ್ಲೇ ಬಿಟ್ಟು, ತಪ್ಪಿಸಿಕೊಂಡು ಹೋದ ಆ ಒಂದು ಕುರಿಯನ್ನು ಹುಡುಕಿಕೊಂಡು ಹೋಗುವುದಿಲ್ಲವೇ? ಅದು ಸಿಕ್ಕಿತು ಅನ್ನಿ; ತಪ್ಪಿಸಿಕೊಳ್ಳದ ಈ ತೊಂಭತ್ತೊoಭತ್ತು ಕುರಿಗಳಿಗಿಂತ ಸಿಕ್ಕಿದ ಈ ಒಂದು ಕುರಿಗಾಗಿ ಅವನು ಹೆಚ್ಚು ಆನಂದಪಡುತ್ತಾನೆ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಅಂತೆಯೇ, ಈ ಚಿಕ್ಕವರಲ್ಲಿ ಒಬ್ಬನು ಕೂಡ ಕಳೆದುಹೋಗಬಾರದು; ಇದೇ ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತ.
No comments:
Post a Comment