ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

01.06.24

ಮೊದಲನೆಯ ವಾಚನ: ಯೂದ 1:20-25

ಪ್ರಿಯರೇ, ನೀವಾದರೋ ಅತಿ ಪರಿಶುದ್ಧ ವಿವ್ವಾಸದ ಆಧಾರದ ಮೇಲೆ ನಿರ್ಮಿಸಲಾದ ಮಂರಿರದಂತೆ ಪ್ರವರ್ಧಿಸಿರಿ; ಪವಿತ್ರಾತ್ಮ ಅವರಿಂದ ಪ್ರೇರಿತರಾಗಿ ಪ್ರಾರ್ಥಿಸಿರಿ. ನಿತ್ಯ ಜೀವವನ್ನು ದಯಪಾಲಿಸುವ ಕರುಣಾಮಯ ಪ್ರಭು ಯೇಸುಕ್ರಿಸ್ತರನ್ನು ಎದುರು ನೋಡುತ್ತಾ ದೇವರ ಪ್ರೀತಿಯಲ್ಲಿ ನೆಲಗೊಂಡಿರಿ. ಸಂಶಯಪಡುವವರಿಗೆ ಸಹೃದಯದಿಂದ ನೆರವಾಗಿರಿ. ಬೆಂಕಿಯ ಬಾಯಲ್ಲಿ ಇರುವವರನ್ನು ಎಳೆದು ಸಂರಕ್ಷಿಸಿರಿ. ಕೆಲವರಿಗೆ ದಯೆತೋರಿಸುವಾಗ ಭಯವಿರಲಿ. ಪಾಪದ ನಡತೆಯಿಂದ ಹೊಲಸಾದ ಅವರ ಬಟ್ಟೆಬರೆಗಳನ್ನೂ ಮುಟ್ಟದಿರಿ. ಪಾಪದಲ್ಲಿ ಎಡವಿ ಬೀಳದಂತೆ ನಿಮ್ಮನ್ನು ಕಾಪಾಡುವ ತಮ್ಮ ಮಹಿಮಾಸನ್ನಿಧಿಯಲ್ಲಿ ನಿಮ್ಮನ್ನು ನಿರ್ದೋಷಿಗಳನ್ನಾಗಿಯೂ ಹರ್ಷಭರಿತರನ್ನಾಗಿಯೂ ನಿಲ್ಲಿಸಲು ಶಕ್ತರಾಗಿರುವ ನಮ್ಮ ಉದ್ಧಾರಕರಾದ ಏಕೈಕ ದೇವರಿಗೆ ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ ಮಹಿಮೆ, ಮಹತ್ವ, ಅಧಿಪತ್ಯ, ಅಧಿಕಾರ ಆಧಿಯಲ್ಲಿ ಇದ್ದ ಹಾಗೆ ಈಗಲೂ ಯಾವಾಗಲೂ ಸಲ್ಲಲಿ! ಆಮೆನ್.

ಕೀರ್ತನೆ: 63:3-4,5-6
ಶ್ಲೋಕ: ದೇವಾ, ನೀ ಎನ್ನ ದೇವ, ನಿನಗಾಗಿ ನಾ ಕಾದಿರುವೆ |

ದೇವಾ, ನೀ ಎನ್ನ ದೇವ, ನಿನಗಾಗಿ ನಾ ಕಾದಿರುವೆ|
ನಿರ್ಜಲ ಮರುಭೂಮಿಯಲಿ ನೀರಿಗಾಗಿ ಹಾತೊರೆಯುವಂತೆ||
ನಿನಗೋಸ್ಕರ ಎನ್ನ ತನು ಸೊರಗಿದೆ, ಮನ ಬಾಯಾರಿದೆ|
ನಿನ್ನ ಮಂದಿರದಲಿ ನನಗಾದ ದರ್ಶನದಲಿ||

ನಿನ್ನ ಶಕ್ತಿ ಪ್ರತಿಭೆಯನ್ನು ಕಂಡಿರುವೆನಲ್ಲಿ|
ಪ್ರಾಣಕ್ಕಿಂತ ಮಿಗಿಲಾದುದು ನಿನ್ನಚಲ ಪ್ರೀತಿ||
ಎಡೆಬಿಡದೆ ಮಾಳ್ವುದು ನನ್ನೀ ತುಟಿ ನಿನ್ನ ಸ್ತುತಿ|
ನಿನ್ನ ಸ್ತುತಿಸುವೆ ಜೀವಮಾನ ಪರಿಯಂತ|
ಕೈ ಮುಗಿವೆ ನಿನ್ನ ನಾಮದ ಸ್ಮರಣಾರ್ಥ||

ಮೃಷ್ಟಾನ್ನ ತಿಂದತೆ ಎನ್ನ ಮನ ಸಂತೃಪ್ತ|
ಸಂಭ್ರಮದಿಂದ ನಿನ್ನ ಹೊಗಳುವುದು ಬಾಯ್ತುಂಬ ||

ಘೋಷಣೆ ಕೀರ್ತನೆ 119:27
ಅಲ್ಲೆಲೂಯ, ಅಲ್ಲೆಲೂಯ!

ನಿನ್ನ ನಿಯಮಗಳ ಪಥವೆನಗೆ ತಿಳಿಯಪಡಿಸಯ್ಯಾ | ನಿನ್ನ ಅದ್ಭುತ ಕಾರ್ಯಗಳನು ನಾ ಧ್ಯಾನಿಸುವೆನಯ್ಯಾ ||

ಅಲ್ಲೆಲೂಯ!

ಶುಭಸಂದೇಶ: ಮಾರ್ಕ 11:27-33

ಆ ಕಾಲದಲ್ಲಿ ಯೇಸು ಮತ್ತು ಶಿಷ್ಯರು ಪುನಃ ಜೆರುಸಲೇಮಿಗೆ ಬಂದರು. ಯೇಸು ದೇವಾಲಯದ ಆವರಣದಲ್ಲಿ ತಿರುಗಾಡುತ್ತಿದ್ದಾಗ ಮುಖ್ಯ ಯಾಜಕರು, ಧರ್ಮಶಾಸ್ತ್ರಿಗಳು ಮತ್ತು ಸಭಾಪ್ರಮುಖರು ಅವರ ಬಳಿಗೆ ಬಂದು, "ಇದನ್ನೆಲ್ಲಾ ನೀನು ಯಾವ ಅಧಿಕಾರದಿಂದ ಮಾಡುತ್ತಿರುವೆ? ನಿನಗೆ ಈ ಅಧಿಕಾರವನ್ನು ಕೊಟ್ಟವರು ಯಾರು? "ಎಂದು ಕೇಳಿದರು. ಅದಕ್ಕೆ ಯೇಸು, "ನಾನೂ ನಿಮಗೆ ಒಂದು ಪ್ರಶ್ನೆ ಹಾಕುತ್ತೇನೆ; ಅದಕ್ಕೆ ಉತ್ತರ ಕೊಡಿ. ಆಗ ಯಾವ ಅಧಿಕಾರದಿಂದ ನಾನು ಇದೆಲ್ಲವನ್ನು ಮಾಡುತ್ತೇನೆಂದು ನಿಮಗೆ ಹೇಳುತ್ತೇನೆ. ಸ್ನಾನದೀಕ್ಷೆ ಕೊಡುವ ಅಧಿಕಾರ ಯೊವಾನ್ನನಿಗೆ ಎಲ್ಲಿಂದ ಬಂದಿತು? ದೇವರಿಂದಲೋ? ಮನುಷ್ಯರಿಂದಲೋ? ಉತ್ತರಕೊಡಿ, " ಎಂದರು. ಇದನ್ನು ಕೇಳಿದ ಅವರು ತಮ್ಮತಮ್ಮೊಳಗೇ ತರ್ಕ ಮಾಡುತ್ತಾ. "ದೇವರಿಂದ ಬಂದಿತೆಂದು ಹೇಳಿದರೆ, 'ಹಾಗದರೆ ನೀವೇಕೆ ಅವನನ್ನು ನಂಬಲಿಲ್ಲ?' ಎಂದು ಕೇಳುವನು. 'ಮನುಷ್ಯರಿಂದ ಬಂದಿತು' ಎಂದು ಹೇಳೋಣ ಎಂದರೆ ಅದೂ ಆಗದು, ಎಂದುಕೊಂಡರು. ಯೊವಾನ್ನನು ನಿಜವಾದ ಪ್ರವಾದಿಯೆಂದು ಸರ್ವರು ನಂಬಿದ್ದರಿಂದ ಅವರಿಗೆ ಜನರ ಭಯವಿತ್ತು. ಆದುದರಿಂದ ಅವರು, "ನಮಗೆ ಗೊತ್ತಿಲ್ಲ " ಎಂದು ಉತ್ತರಕೊಟ್ಟರು. ಅದಕ್ಕೆ ಯೇಸು, "ಹಾಗಾದರೆ ನಾನು ಕೂಡ ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ, "ಎಂದರು.

31.05.24 - ಆತನಲ್ಲಿ ಭಮಭಕ್ತಿಯುಳ್ಳವರಿಗೆ ಆತನ ಪ್ರೀತಿ ತಲತಲಾಂತರದವರೆಗೆ

ಮೊದಲನೆಯ ವಾಚನ: ಜೆಫನ್ಯ 3:14-18


ಹರ್ಷಧ್ವನಿಗೈ ಸಿಯೋನ್ ಕುವರಿಯೇ. ಘೋಷಿಸು ಇಸ್ರಯೇಲ್ ದೇಶವೇ, ಹೃತ್ಪೂರ್ವಕವಾಗಿ ಸಂತೋಷಿಸು ಜೆರುಸಲೇಮ್ ನಗರವೇ, ತಪ್ಪಿಸಿಹನು ಸರ್ವೇಶ್ವರ ನಿನಗೆ ವಿಧಿಸಿರುವ ದಂಡನೆಗಳನು, ತಳ್ಳಿ ಹೊರಗಟ್ಟಿಹನು ನಿನ್ನ ಶತ್ರುಗಳನು, ಇಸ್ರಯೇಲಿನ ರಾಜನಾದ ಸರ್ವೇಶ ಇಹನು ನಿನ್ನ ಮಧ್ಯೆ ನೀನಿರುವೆ ಇನ್ನೆಂದಿಗೂ ಕೇಡಿಗಂಜದೆ. ಜೆರುಸಲೇಮಿಗೆ ಈ ಪರಿ ಹೇಳುವರು ಆ ದಿನದೊಳು: "ಅಂಜಬೇಡ ಸಿಯೋನ್, ಸೋತು ಜೋಲುಬೀಳದಿರಲಿ ನಿನ್ನ ಕೈಗಳು. "ಪ್ರಸನ್ನವಾಗಿಹನು ದೇವಾ, ಸರ್ವೇಶ ನಿನ್ನ ಮಧ್ಯೆ, ಕೊಡುವನಾಶೂರ ನಿನಗೆ ರಕ್ಷಣೆ, ಹರ್ಷಾನಂದಗೊಳ್ಳುವನು ನಿನ್ನ ವಿಷಯದಲಿ. ಪುನಶ್ಚೇತನಗೊಳಿಸುವನು ನಿನ್ನನ್ನು ಪ್ರಶಾಂತ ಪ್ರೀತಿಯಲಿ, ಗಾನಗೀತೆಗಳಿಂದ ತೋಷಿಸುವನು ನಿನ್ನಲ್ಲಿ, ಹಬ್ಬಹುಣ್ಣಿಮೆಗಳ ತರದಲಿ.

ಪರ್ಯಾಯ ವಾಚನ: ರೋಮನರಿಗೆ 12:9-18

ಸಹೋದರರೇ, ನಿಮ್ಮ ಪ್ರೀತಿ ನಿಷ್ಠಪಟವಾಗಿರಲಿ. ಕೆಟ್ಟದ್ದನ್ನು ದ್ವೇಷಿಸಿರಿ. ಒಳ್ಳೆಯದನ್ನು ಕೈಬಿಡದಿರಿ. ಸೋದರಭಾವನೆಯಿಂದ ಒಬ್ಬರನ್ನೊಬ್ಬರು ಹೃತ್ಪೂರ್ವಕವಾಗಿ ಪ್ರೀತಿಸಿರಿ. ಗೌರವ ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ. ಪ್ರಭುವಿನ ಸೇವೆಯಲ್ಲಿ ಆಲಸಿಗಳಾಗದೆ ಅತ್ಯಾಸಕ್ತರಾಗಿರಿ. ನಂಬಿಕೆ ನಿರೀಕ್ಷೆಯನ್ನು ಹೊಂದಿರುವ ನೀವು ಉಲ್ಲಾಸದಿಂದಿರಿ. ಸಂಕಟ ಬಂದಾಗ ಸಹನೆಯಿಂದಿರಿ. ಬೇಸರಗೊಳ್ಳದೆ ಪ್ರಾರ್ಥನೆ ಮಾಡಿರಿ. ಕೊರತೆಯಲ್ಲಿರುವ ದೇವಜನರಿಗೆ ನೆರವು ನೀಡಿರಿ. ಅತಿಥಿ ಸತ್ಕಾರದಲ್ಲಿ ತತ್ಪರರಾಗಿರಿ. ನಿಮ್ಮನ್ನು ಹಿಂಸಿಸುವವರನ್ನು ಆಶೀರ್ವದಿಸಿರಿ. ಹೌದು, ಶಪಿಸದೆ ಆಶೀರ್ವದಿಸಿರಿ. ಸಂತೋಷಪಡುವವರೊಂದಿಗೆ ಸಂತೋಷಪಡಿಸಿರಿ; ದುಃಖಿಸುವವರೊಡನೆ ದುಃಖಿಸಿರಿ. ನಿಮ್ಮ ನಿಮ್ಮಲ್ಲಿ ಸಾಮರಸ್ಯವಿರಲಿ. ದೊಡ್ಡಸ್ತಿಕೆಯಿಂದ ವರ್ತಿಸಬೇಡಿ. ದೀನರೊಡನೆ ಗೆಳೆತನ ಬೆಳೆಸಿರಿ, ನೀವೇ ಜಾಣರೆಂದು ಭಾವಿಸದಿರಿ.

ಕೀರ್ತನೆ: ಯೆಶಾಯ 12:2-6
ಶ್ಲೋಕ: ಸಿಯೋನಿನ ನಿವಾಸಿಗಳೇ, ಹಾಡಿರಿ ಮಾಡಿರಿ ಭಜನ ಇಸ್ರಯೇಲಿನಾ ಸ್ವಾಮಿ ಪರಮ ಪಾವನ 

ದೇವರೇ ಉದ್ಧಾರಕನೆನಗೆ, ಆತನಲ್ಲಿದೆ ನನಗೆ ನಿರ್ಭಿತ ನಂಬಿಕೆ|
ದೇವಾದಿದೇವನೇ ಎನಗೆ ಶಕ್ತಿ|
ಆತನೆನ್ನ ಕೀರ್ತನೆಯ ವ್ಯಕ್ತಿ|
ತಂದಿಹನಾತ ಎನಗೆ ಮುಕ್ತಿ||
ಉದ್ಧರಿಸುವಾ ಒರತೆಗಳಿಂದ|
ಸೇದುವಿರಿ ನೀರನ್ನು ಹರುಷದಿಂದ||

ಸಲ್ಲಿಸಿರಿ ಸರ್ವೇಶ್ವರನಿಗೆ ಕೃತಜ್ಞತೆಯನು|
ಸ್ಮರಿಸಿರಿ ಆತನ ಶ್ರೀನಾಮವನು||
ಸಾರಿರಿ ಜನತೆಗೆ ಆತನ ಕಾವ್ಯಗಳನು|
ಘೋಷಿಸಿರಿ ಆತನ ನಾಮ ಘನತೆಯನು||

ಹಾಡಿರಿ ಸರ್ವೇಶ್ವರನಿಗೆ ಸ್ತುತಿಯನು|
ಎಸಗಿಹನಾತ ಮಹಿಮಾಕಾರ್ಯಗಳನು|
ತಿಳಿಸಿರಿ ಜಗದಾದ್ಯಂತಕೆ ಈ ವಿಷಯವನು||
ಸಿಯೋನಿನ ನಿವಾಸಿಗಳೇ, ಹಾಡಿರಿ ಮಾಡಿರಿ ಭಜನ||
ನಿಮ್ಮ ಮಧ್ಯೆಯಿರುವ ಆ ಘನವಂತನ|
ಇಸ್ರಯೇಲಿನಾ ಸ್ವಾಮಿ ಪರಮ ಪಾವನ||

ಘೋಷಣೆ ಲೂಕ 1:45
ಅಲ್ಲೆಲೂಯ, ಅಲ್ಲೆಲೂಯ!

ನಂಬಿ ಧನ್ಯಳಾದೆ ನೀನು | ದೇವರಿಂದ ಬಂದ ವಾರ್ತೆ ನೆರವೇರಿಯೇ ತೀರುವುದೆಂದು ||

ಅಲ್ಲೆಲೂಯ!

ಶುಭಸಂದೇಶ: ಲೂಕ 1:39-56



ಆ ಕಾಲದಲ್ಲಿ ಮರಿಯಳು ಪ್ರಯಾಣ ಹೊರಟು ಜುದೇಯದ ಗುಡ್ಡಗಾಡಿನಲ್ಲಿರುವ ಒಂದು ಊರಿಗೆ ತ್ವರೆಯಾಗಿ ಬಂದಳು. ಅಲ್ಲಿ ಜಕರೀಯನ ಮನೆಗೆ ಹೋಗಿ ಎಲಿಜಬೆತಳನ್ನು ವಂದಿಸಿದಳು. ಮರಿಯಳ ವಂದನೆಯನ್ನು ಎಲಿಜಬೇತಳು ಕೇಳಿದ್ದೇ ತಡ, ಆಕೆಯ ಗರ್ಭದಲ್ಲಿದ್ದ ಶಿಶು ನಲಿದಾಡಿತು; ಎಲಿಜಬೇತಳು ಪವಿತ್ರಾತ್ಮಭರಿತಳಾಗಿ ಹರ್ಷೋದ್ಗಾರದಿಂದ ಹೀಗೆಂದಳು: "ಸ್ತ್ರೀಯರಲ್ಲೆಲ್ಲಾ ಧನ್ಯಳು ನೀನು; ನಿನ್ನ ಕರುಳ ಕುಡಿಯೂ ಧನ್ಯ. ನನ್ನ ಪ್ರಭುವಿನ ತಾಯಿ ನೀನು; ನನ್ನ ಬಳಿಗೆ ಬಂದುದು ಅದೆಂಥ ಭಾಗ್ಯ. ನಿನ್ನ ವಂದನೆಯ ದನಿ ನನ್ನ ಕಿವಿ ತಾಕಿದೊಡನೆ ನಲಿದಾಡಿತು ಆನಂದದಿಂದ, ನನ್ನ ಕರುಳ ಕುಡಿ. ನಂಬಿ ಧನ್ಯಳಾದೆ ನೀನು, ದೇವರಿಂದ ಬಂದ ವಾರ್ತೆ ನೆರವೇರಿಯೇ ತೀರುವುದೆಂದು. " ಆಗ ಹೀಗೆಂದು ಮರಿಯಳು ಹೊಗಳಿದಳು. " ಎನ್ನ ಮನ ಮಾಡುತ್ತಿದೆ ಸರ್ವೇಶ್ವರನ ಸ್ತುತಿ, ಉಲ್ಲಾಸಿಸುತ್ತಿದೆ ಮುಕ್ತಿದಾತ ದೇವನಲಿ. ತನ್ನ ದಾಸಿಯ ದೀನತೆಯನು ನೆನಪಿಗೆ ತಂದುಕೊಂಡನಾತ. ಧನ್ಯಳೆಂದು ಹೊಗಳುವರೆನ್ನನು ಇಂದಿನಿಂದ ಸರ್ವಜನಾಂಗ. ಏಕೆನೆ ಮಾಡಿಹನೆನಗೆ ಸರ್ವಶಕ್ತನು ಮಹತ್ಕಾರ್ಯ, ನಿಜಕ್ಕೂ ಆತನ ನಾಮಧೇಯ ಪರಮಪೂಜ್ಯ. ಆತನಲ್ಲಿ ಭಮಭಕ್ತಿಯುಳ್ಳವರಿಗೆ ಆತನ ಪ್ರೀತಿ ತಲತಲಾಂತರದವರೆಗೆ. ಗರ್ವಹೃದಯಿಗಳನಾತ ಚದುರಿಸಿರುವನು, ಪ್ರದರ್ಶಿಸಿರುವನು ತನ್ನ ಬಾಹುಬಲವನ್ನು. ಇಳಿಸಿಹನು ಗದ್ದುಗೆಯಿಂದ ಘನಾಧಿಪತಿಗಳನು, ಏರಿಸಿರುವನು ಉನ್ನತಿಗೆ ದೀನದಲಿತರನು. ತೃಪ್ತಿಪಡಿಸಿರುವನಾತ ಹಸಿದವರನು ಮೃಷ್ಟಾನ್ನದಿ, ಹೊರದೂಡಿರುವನು ಸಿರಿವಂತರನು ಬರಗೈಯಲಿ. ನೆರವಾದನು ತನ್ನ ದಾಸ ಇಸ್ರಯೇಲನಿಗೆ, ಪೂರ್ವಜರಿಗಿತ್ತ ವಾಗ್ದಾನದ ಮೇರೆಗೆ. ಮರೆಯಲಿಲ್ಲ ಆತ ಕರುಣೆತೋರಲು ಅಬ್ರಹಾಮನಿಗೆ, ಅವನ ಸಂತತಿಗೆ, ಯುಗಯುಗಾಂತರದವರೆಗೆ." ಮರಿಯಳು ಸುಮಾರು ಮೂರು ತಿಂಗಳು ಎಲಿಜಬೇತಳೊಡನೆ ತಂಗಿದ್ದು ತನ್ನ ಮನೆಗೆ ಹಿಂದಿರುಗಿದಳು.

30.05.24 - ಹೋಗು, ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಮಾಡಿದೆ

ಮೊದಲನೆಯ ವಾಚನ: 1 ಪೇತ್ರ 2:2-5,9-12


ಸಹೋದರರೇ, ಹೊಸಜನ್ಮ ಪಡೆದ ಶಿಶುಗಳಂತೆ, ಶುದ್ಧವಾದ ಆಧ್ಯಾತ್ಮಿಕ ಹಾಲಿಗಾಗಿ ಹಂಬಲಿಸಿರಿ; ಅದನ್ನು ಕುಡಿದು ಬೆಳೆಯುತ್ತಾ. ಜೀವೋದ್ಧಾರವನ್ನು ಹೊಂದುವಿರಿ. ಪ್ರಭು ಎಂಥಾ ದಯಾಳು ಎಂಬುದನ್ನು ನೀವು ಅನುಭವದಿಂದ ಅರಿತುಕೊಂಡಿದ್ದೀರಿ. ಪ್ರಭುವಿನ ಬಳಿಗೆ ಬನ್ನಿ ಸಜೀವ ಶಿಲೆಯಾದ ಅವರನ್ನು ಮಾನವರು ನಿಯೋಜಕ ಎಂದು ತಿರಸ್ಕರಿಸಿದರೂ ದೇವರು ಅಮೂಲ್ಯರೆಂದು ಆರಿಸಿಕೊಂಡರು. ನೀವೂ ಶಿಲೆಗಳಾಗಿದ್ದೀರಿ; ಆಧ್ಯಾತ್ಮಿಕ ದೇವಾಲಯವನ್ನು ನಿರ್ಮಿಸಲು ನಿಮ್ಮನ್ನೇ ಅರ್ಪಿಸಿಕೊಳ್ಳಿ. ಆ ದೇವಾಲಯದಲ್ಲೇ ಯೇಸು ಕ್ರಿಸ್ತರ ಮುಖಾಂತರ ದೇವರಿಗೆ ಮೆಚ್ಚುಗೆಯಾಗಿರುವ ಆಧ್ಯಾತ್ಮಿಕ ಬಲಿಗಳನ್ನು ಸಮರ್ಪಿಸುವ ಪವಿತ್ರ ಯಾಜಕ ವರ್ಗದವರು ನೀವಾಗಿರುವಿರಿ. ನೀವು ದೇವರು ಆಯ್ದುಕೊಂಡ ಜನಾಂಗ; ರಾಜಯಾಜಕರು, ಪವಿತ್ರ ಪ್ರಜೆ, ದೇವರ ಸ್ವಕೀಯ ಜನ; ಅವರ ಅದ್ಭುತಕಾರ್ಯಗಳನ್ನು ಪ್ರಚುರಪಡಿಸುವುದಕ್ಕಾಗಿ ಆಯ್ಕೆಯಾದವರು. ಗಾರ್ಗತ್ತಲಿನಿಂದ ತಮ್ಮ ಅದ್ಭುತಕರವಾದ ಬೆಳಕಿಗೆ ನಿಮ್ಮನ್ನು ಕರೆತಂದವರು. ಒಮ್ಮೆ ನೀವು ಗಣನೆಗೆ ಬಾರದ ಜನರಾಗಿದ್ದೀರಿ. ಈಗಲಾದರೋ ದೇವ ಪ್ರಜೆಗಳೇ ಆಗಿದ್ದೀರಿ. ಹಿಂದೊಮ್ಮೆ, ದೇವರ ಕರುಣೆ ಏನೆಂಬುದೇ ನಿಮಗೆ ತಿಳಿದಿರಲಿಲ್ಲ. ಈಗ ಅವರ ಕರುಣೆಯನ್ನು ಸವಿದಿದ್ದೀರಿ. ಪ್ರಿಯರೇ, ಈ ಲೋಕದಲ್ಲಿ ಆಗಂತುಕರಂತೆಯೂ ಅಪರಿಚಿತರಂತೆಯೂ ಬಾಳುವ ನೀವು ಆತ್ಮಕ್ಕೆ ವಿರುದ್ಧ ಹೋರಾಡುವ ದೈಹಿಕ ವ್ಯಾಮೋಹಗಳಿಂದ ದೂರವಿರಬೇಕೆಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ. ಅನ್ಯ ಧರ್ಮೀಯರ ಮಧ್ಯೆ ನಿಮ್ಮ ನಡತೆ ಆದರ್ಶಪ್ರಾಯವಾಗಿರಲಿ. ಅವರು ನಿಮ್ಮನ್ನು ದುಷ್ಠರ್ಮಿಗಳೆಂದು ದೂಷಿಸಿದರೂ ನಿಮ್ಮ ಸತ್ಕಾರ್ಯಗಳನ್ನು ಮೆಚ್ಚಿಕೊಂಡು ಕ್ರಿಸ್ತ ಯೇಸುವಿನ ಪುನರಾಗಮನದ ದಿನದಂದು ದೇವರನ್ನು ಕೊಂಡಾಡುವರು.

ಕೀರ್ತನೆ: 100:2,3,4,5,
ಶ್ಲೋಕ: ಹಾಡುತ ಪಾಡುತ ಬನ್ನಿ ಪ್ರಭುವಿನ ಸನ್ನಿಧಿಗೆ|

ಅತಿ ಸಂತೋಷದಿಂದ ಸೇವೆ ಮಾಡಿ ಆತನಿಗೆ|
ಹಾಡುತ ಪಾಡುತ ಬನ್ನಿ ಆತನ ಸನ್ನಿಧಿಗೆ||
ಪ್ರಭುವೆ ದೇವರೆಂಬುದನು ಮರೆತುಬಿಡಬೇಡಿ ನೀವು|
ನಮ್ಮ ಸೃಷ್ಟಿಕರ್ತ ಆತನು, ಆತನವರು ನಾವು ||

ಆತನ ಜನ, ಆತನೇ ಮೇಯಿಸುವ ಕುರಿಗಳು ನಾವು|
ಆತನ ಗೃಹದ್ವಾರವನು ಪ್ರವೇಶಿಸಿ ಧನ್ಯವಾದದೊಂದಿಗೆ||
ಆತನ ಆವರಣದಲಿ ನಿಲ್ಲಿರಿ ಸ್ತುತಿಸ್ತೋತ್ರಗಳೊಂದಿಗೆ||

ಆತನ ನಾಮವನು ಕೊಂಡಾಡಿ ಉಪಕಾರಸ್ಮರಣೆಯೊಂದಿಗೆ|
ಹೌದು, ಪ್ರಭುವೆನಿತೋ ಒಳ್ಳೆಯವನು||
ಇರುವುದಾತನ ಪ್ರೀತಿ ಯುಗಯುಗಕು|
ಆತನ ಸತ್ಯತೆ ತಲತಲಾಂತರಕು||

ಘೋಷಣೆ ಕೀರ್ತನೆ 111:7,8
ಅಲ್ಲೆಲೂಯ, ಅಲ್ಲೆಲೂಯ!

ಸುಸ್ಥಿರವಾದುವು ಆತನ ನಿಯಮ ನಿಬಂಧನೆಗಳು | ಯುಗಯುಗಾಂತರಕೂ ದೃಢವಾಗಿರುವುವು ||

ಅಲ್ಲೆಲೂಯ!

ಶುಭಸಂದೇಶ: ಮಾರ್ಕ 10:46-52



ಆ ಕಾಲದಲ್ಲಿ ಯೇಸು ಮತ್ತು ಅವರ ಶಿಷ್ಯರು ಜೆರಿಕೊ ಪಟ್ಟಣವನ್ನು ತಲುಪಿದರು. ಅಲ್ಲಿಂದ ಹೊರಡುವಾಗ ಜನರ ದೊಡ್ಡ ಗುಂಪು ಅವರನ್ನು ಹಿಂಬಾಲಿಸಿತು. ಕುರುಡು ಭಿಕ್ಷುಗಾರನಾದ, ತಿಮಾಯನ ಮಗ ಬಾರ್ ತಿಮಾಯನು ದಾರಿಯ ಮಗ್ಗುಲಲ್ಲಿ ಕುಳಿತಿದ್ದನು. ಆ ಮಾರ್ಗವಾಗಿ ಹೋಗುತ್ತಿರುವಾತನು ನಜರೇತಿನ ಯೇಸು ಎಂದು ಕೇಳಿದೊಡನೆಯೇ, ಅವನು, " ಯೇಸುವೇ, ದಾವೀದ ಕುಲಪುತ್ರರೇ, ನನಗೆ ದಯೆತೋರಿ, "ಎಂದು ಗಟ್ಟಿಯಾಗಿ ಕೂಗಿಕೊಂಡನು. ಆನೇಕರು " ಸುಮ್ಮನಿರು " ಎಂದು ಅವನನ್ನು ಗದರಿಸಿದರು. ಅವನಾದರೋ, "ದಾವೀದ ಕುಲಪುತ್ರರೇ, ನನಗೆ ದಯೆತೋರಿ, "ಎಂದು ಇನ್ನಷ್ಟು. ಗಟ್ಟಿಯಾಗಿ ಕೂಗಿಕೊಂಡನು. ಇದನ್ನು ಕೇಳಿ ಯೇಸು ಅಲ್ಲೇ ನಿಂತು, "ಅವನನ್ನು ಕರೆದುಕೊಂಡು ಬನ್ನಿ " ಎಂದು ಅಪ್ಪಣೆ ಮಾಡಿದರು. ಅವರು ಹೋಗಿ, " ಏಳು, ಭಯಪಡಬೇಡ, ಯೇಸು ನಿನ್ನನ್ನು ಕರೆಯುತ್ತಿದ್ದಾರೆ, " ಎಂದು ಹೇಳಿದರು. ಅವನು ತನ್ನ ಮೇಲುಹೊದಿಕೆಯನ್ನು ಅಲ್ಲೆ ಬಿಟ್ಟು, ತಟ್ಟನೆ ಎದ್ದು, ಯೇಸುವಿನ ಬಳಿಗೆ ಬಂದನು. ಯೇಸು, "ನನ್ನಿಂದ ನಿನಗೆ ಏನಾಗಬೇಕು " ಎಂದು ಕೇಳಿದರು. ಅದಕ್ಕೆ ಅವನು, "ಗುರುದೇವಾ! ನನಗೆ ಕಣ್ಣು ಕಾಣುವಂತೆ ಮಾಡಿ, " ಎಂದು ಪ್ರಾರ್ಥಿಸಿದನು. ಯೇಸು ಅವನಿಗೆ, " ಹೋಗು, ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಮಾಡಿದೆ, ಎಂದರು. ಆ ಕ್ಷಣವೇ ಅವನಿಗೆ ದೃಷ್ಟಿ ಬಂದಿತು. ಅವನೂ ಯೇಸುವನ್ನು ಹಿಂಬಾಲಿಸಿ ಹಿಂದೆ ಹೋದನು.

29.05.24 - ನಿಮ್ಮಲ್ಲಿ ಶ್ರೇಷ್ಠನಾಗಿರಲು ಇಚ್ಛಿಸುವವನು ನಿಮ್ಮ ಸೇವಕನಾಗಿರಲಿ; ಪ್ರಥಮನಾಗಿರಲು ಆಶಿಸುವವನು ಎಲ್ಲರ ದಾಸನಾಗಿರಲಿ

ಮೊದಲನೆಯ ವಾಚನ: 1 ಪೇತ್ರ 1:18-25


ಸಹೋದರರೇ, ನಿಮ್ಮ ಪೂರ್ವಜರಿಂದ ಪರಂಪರೆಯಾಗಿ ಬಂದಿರುವ ನಿರರ್ಥಕ ನಡವಳಿಕೆಯಿಂದ ನಿಮ್ಮನ್ನು ಬಿಡುಗಡೆಮಾಡಲು ಕೊಡಲಾದ ಬೆಲೆಯು ಎಂಥದ್ದೆಂದು ನಿಮಗೆ ತಿಳಿದಿದೆ. ಅದು ನಶಿಸಿಹೋಗುವ ಬೆಳ್ಳಿಬಂಗಾರವಲ್ಲ. ಬದಲಿಗೆ, ಯಾವ ನ್ಯೂನತೆಯೂ ಇಲ್ಲದ, ಯಾವ ಕಳಂಕವೂ ಇಲ್ಲದ ಬಲಿಯ ಕುರಿಮರಿಯಂಥ ಕ್ರಿಸ್ತ ಯೇಸುವಿನ ಅಮೂಲ್ಯ ರಕ್ತವೇ ಆ ಬೆಲೆ. ವಿಶ್ವಸೃಷ್ಟಿಗೆ ಮೊದಲೇ ಯೇಸುಕ್ರಿಸ್ತರನ್ನು ದೇವರು ಇದಕ್ಕೆಂದು ಗೊತ್ತುಮಾಡಿದ್ದರು. ಈ ಅಂತಿಮ ದಿನಗಳಲ್ಲಿ ನಿಮಗೋಸ್ಕರ ಯೇಸು ಪ್ರತ್ಯಕ್ಷರಾದರು. ಮರಣದಿಂದ ಪುನರುತ್ಥಾನಗೊಳಿಸಿ ಮಹಿಮೆಪಡಿಸಿದ ದೇವರಲ್ಲಿ ನೀವು ವಿಶ್ವಾಸವಿಟ್ಟದ್ದು ಇವರ ಮುಖಾಂತರವೇ. ಹೀಗೆ ನಿಮ್ಮ ವಿಶ್ವಾಸವೂ ನಿರೀಕ್ಷೆಯೂ ದೇವರಲ್ಲೇ ನೆಲೆಗೊಂಡಿವೆ. ಸತ್ಯಕ್ಕೆ ಶರಣಾಗಿ ಆತ್ಮಶುದ್ದಿ ಹೊಂದಿರುವ ನಿಮ್ಮ ಸಹೋದರನನ್ನು ನಿಷ್ಠಪಟದಿಂದ ಪ್ರೀತಿಸಬಲ್ಲಿರಿ. ಎಂದೇ, ಒಬ್ಬರನ್ನೊಬ್ಬರು ಹೃತ್ಪೂರ್ವಕವಾಗಿಯೂ ಯಥಾರ್ಥವಾಗಿಯೂ ಪ್ರೀತಿಸಿರಿ. ನೀವು ಸಜೀವವಾದ ಅನಂತ ದೈವವಾಕ್ಯದ ಮೂಲಕ ಹೊಸಜನ್ಮವನ್ನು ಪಡೆದಿದ್ದೀರಿ; ಈ ಜನ್ಮವನ್ನು ನೀವು ಪಡೆದಿರುವುದು ಮರ್ತ್ಯಮಾನವನಿಂದಲ್ಲ, ಅಮರ ದೇವರಿಂದ. ಪವಿತ್ರಗ್ರಂಥದಲ್ಲಿ ಬರೆದಿರುವಂತೆ: ನರಮಾನವರೆಲ್ಲರೂ ಗರಿಹುಲ್ಲಿನಂತೆ ಅವರ ವೈಭವವೆಲ್ಲವೂ ಹುಲ್ಲಿನ ಹೂವಿನಂತೆ. ಹುಲ್ಲೊಣಗಿ ಹೂ ಬಾಡಿಬೀಳುವುದು ಪ್ರಭುವಿನ ವಾಕ್ಯವಾದರೋ ಶಾಶ್ವತವಾಗಿ ನಿಲ್ಲುವುದು. ಈ ವಾಕ್ಯವೇ ನಿಮಗೆ ಸಾರಾಲಾದ ಶುಭಸಂದೇಶ.

ಕೀರ್ತನೆ: 147:12-15,19-20
ಶ್ಲೋಕ: ಜೆರುಸಲೇಮೇ, ಕೀರ್ತಿಸು ಪ್ರಭುವನು|

ಜೆರುಸಲೇಮೇ, ಕೀರ್ತಿಸು ಪ್ರಭುವನು|
ಸಿಯೋನೇ, ಸ್ತುತಿಸು ನಿನ್ನ ದೇವರನು||
ಬಲಪಡಿಸಿದನಾತ ನಿನ್ನ ಹೆಬ್ಬಾಗಿಲುಗಳನು|
ಆಶೀರ್ವದಿಸಿಹನು ನಿನ್ನಲ್ಲಿರುವ ಮಕ್ಕಳನು||

ನಿನ್ನ ಪ್ರಾಂತದೊಳಗೆಲ್ಲ ಇರುವುದು ನೆಮ್ಮದಿ|
ನೀಡುವನು ನಿನಗೆ ಅತ್ಯುತ್ತಮವಾದ ಗೋದಿ||
ಕಳಿಸುವನು ಧರೆಗೆ ತನ್ನ ಆಣತಿ|
ಸಿದ್ಧಿಯಾಗುವುದದು ಬಲು ಶೀಘ್ರದಿ||

ತಿಳಿಸಿಹನು ತನ್ನ ವಾಕ್ಯವನು ಯಕೋಬರಿಗೆ|
ತನ್ನ ವಿಧಿನಿಯಮಗಳನು ಇಸ್ರಾಯೇಲರಿಗೆ||
ಬೇರಾವ ಜನಾಂಗಕೂ ಆತ ‌ಹೀಗೆ ಮಾಡಿಲ್ಲ|
ಆತನ ವಿಧಿನಿಯಮಗಳನು ಅವರಿಗೆ ತಿಳಿಸಲಿಲ್ಲ||

ಘೋಷಣೆ ಕೀರ್ತನೆ 95:8
ಅಲ್ಲೆಲೂಯ, ಅಲ್ಲೆಲೂಯ!

ಆತನ ಕರೆಗೆ ಕಿವಿಗೊಟ್ಟರೆನಿತೋ ಒಳಿತು ನೀವಿಂದೇ | ಕಲ್ಲಾಗಿಸಿಕೊಳ್ಳದಿರಿ ಹೃದಯವನು ನಿಮ್ಮ ಪೂರ್ವಜರಂತೆ ||

ಅಲ್ಲೆಲೂಯ!

ಶುಭಸಂದೇಶ: ಮಾರ್ಕ 10:32-45


ಆ ಕಾಲದಲ್ಲಿ ಜೆರುಸಲೇಮಿಗೆ ಪ್ರಯಾಣ ಮಾಡುತ್ತಾ ಇದ್ದಾಗ ಯೇಸು ಎಲ್ಲರಿಗಿಂತ ಮುಂದೆ ನಡೆಯುತ್ತಿದ್ದರು. ಅದನ್ನು ನೋಡಿ ಶಿಷ್ಯರು ಆಶ್ಚರ್ಯಪಟ್ಟರು. ಅವರ ಹಿಂದೆ ಬರುತ್ತಿದ್ದವರು ದಿಗಿಲುಗೊಂಡರು. ಆಗ ಯೇಸು ಹನ್ನೆರಡು ಮಂದಿ ಶಿಷ್ಯರನ್ನು ತಮ್ಮ ಬಳಿಗೆ ಕರೆದು, ತಮಗೆ ಸಂಭವಿಸಲಿರುವ ವಿಷಯಗಳನ್ನು ಮತ್ತೊಮ್ಮೆ ಅವರಿಗೆ ಹೇಳತೊಡಗಿದರು: " ನೋಡಿ, ನಾವು ಜೆರುಸಲೇಮಿಗೆ ಹೋಗುತ್ತಿದ್ದೇವೆ. ಅಲ್ಲಿ ನರಪುತ್ರನನ್ನು ಮುಖ್ಯಯಾಜಕರ ಮತ್ತು ಧರ್ಮಶಾಸ್ತ್ರಿಗಳ ವಶಕ್ಕೆ ಒಪ್ಪಿಸುವರು. ಆತನು ಮರಣದಂಡನೆಗೆ ಅರ್ಹನೆಂದು ಅವರು ತೀರ್ಮಾನಿಸಿ, ಪರಕೀಯರ ಕೈಗೊಪ್ಪಿಸುವರು. ಇವರು ಆತನನ್ನು ಪರಿಹಾಸ್ಯ ಮಾಡುವರು; ಆತನ ಮೇಲೆ ಉಗುಳುವರು; ಕೊರಡೆಯಿಂದ ಹೊಡೆಯುವರು; ಅನಂತರ ಕೊಂದುಹಾಕುವರು. ಆತನಾದರೋ ಮೂರು ದಿನದ ಮೇಲೆ ಪುನರುತ್ಥಾನ ಹೊಂದುವನು, " ಎಂದರು. ಜೆಬೆದಾಯನ ಮಕ್ಕಳಾದ ಯಕೋಬ ಮತ್ತು ಯೊವಾನ್ನ ಯೇಸುವಿನ ಬಳಿಗೆ ಬಂದು, " ಗುರುವೇ, ನಮ್ಮದೊಂದು ಬಿನ್ನಹವಿದೆ, ಅದನ್ನು ನಡೆಸಿಕೊಡಬೇಕು, "ಎಂದು ವಿಜ್ಞಾಪಿಸಿಕೊಂಡರು. "ನನ್ನಿಂದ ನಿಮಗೇನಾಗಬೇಕು? "ಎಂದು ಯೇಸು ಕೇಳಿದರು. "ತಮ್ಮ ಮಹಿಮಾಸ್ಥಾನದಲ್ಲಿ ನಮ್ಮಲ್ಲಿ ಒಬ್ಬನು ತಮ್ಮ ಬಲಗಡೆಯಲ್ಲೂ ಇನ್ನೊಬ್ಬನು ಎಡಗಡೆಯಲ್ಲೂ ಆಸೀನರಾಗುವಂತೆ ಅನುಗ್ರಹಿಸಬೇಕು, ಎಂದು ತಮ್ಮ ಬಯಕೆಯನ್ನು ತೋಡಿಕೊಂಡರು. ಅದಕ್ಕೆ ಯೇಸು, " ನೀವು ಕೋರಿಕೊಂಡದ್ದು ಏನೆಂದು ನಿಮಗೇ ತಿಳಿಯದು. ನಾನು ಕುಡಯಲಿರುವ ಪಾತ್ರೆಯಿಂದ ಕುಡಿಯಲು ನಿಮ್ಮಿಂದಾದೀತೆ? ನಾನು ಪಡೆಯಲಿರುವ ಸ್ಥಾನವನ್ನು ಪಡೆಯಲು ನಿಮ್ಮಿಂದ ಆದೀತೆ? " ಎಂದು ಪ್ರಶ್ನಿಸಿದರು. "ಹೌದು ಆಗುತ್ತದೆ, "ಎಂದು ಅವರು ಮರುನುಡಿದರು. ಆಗ ಯೇಸು, " ನಾನು ಕುಡಿಯುವ ಪಾತ್ರೆಯಿಂದ ನೀವೂ ಕುಡಿಯುವಿರಿ; ನಾನು ಪಡೆಯಲಿರುವ ಸ್ನಾನವನ್ನು ನೀವೂ ಪಡೆಯುವಿರಿ. ಆದರೆ ನನ್ನ ಬಲಗಡೆಯಲ್ಲಾಗಲೀ ಎಡಗಡೆಯಲ್ಲಾಗಲೀ ಆಸೀನರಾಗುವಂತೆ ಅನುಗ್ರಹಿಸುವುದು ನನ್ನದಲ್ಲ. ಅದು ಯಾರಿಗಾಗಿ ಸಿದ್ಧಮಾಡಲಾಗಿದೆಯೋ ಅವರಿಗೇ ಸಿಗುವುದು, "ಎಂದು ನುಡಿದರು. ಉಳಿದ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿದಾಗ ಯಕೋಬ, ಯೊವಾನ್ನರ ಮೇಲೆ ಸಿಟ್ಟುಗೊಂಡರು. ಆಗ ಯೇಸು ಶಿಷ್ಯರೆಲ್ಲರನ್ನು ತಮ್ಮ ಬಳಿಗೆ ಕರೆದು, "ಪ್ರಜಾಧಿಪತಿಗಳು ಎನಿಸಿಕೊಳ್ಳುವವರು ಪ್ರಜೆಗಳ ಮೇಲೆ ದರ್ಪದಿಂದ ದೊರೆತನ ಮಾಡುತ್ತಾರೆ; ಜನನಾಯಕರು ಎನಿಸಿಕೊಳ್ಳುವವರು ಜನರ ಮೇಲೆ ಅಧಿಕಾರ ಪ್ರದರ್ಶನ ಮಾಡುತ್ತಾರೆ; ಇದು ನಿಮಗೆ ಗೊತ್ತು. ಆದರೆ ನೀವು ಹಾಗಿರಬಾರದು. ನಿಮ್ಮಲ್ಲಿ ಶ್ರೇಷ್ಠನಾಗಿರಲು ಇಚ್ಛಿಸುವವನು ನಿಮ್ಮ ಸೇವಕನಾಗಿರಲಿ; ಪ್ರಥಮನಾಗಿರಲು ಆಶಿಸುವವನು ಎಲ್ಲರ ದಾಸನಾಗಿರಲಿ. ನರಪುತ್ರನು ಸಹ ಸೇವೆ ಮಾಡಿಸಿಕೊಳ್ಳುವುದಕ್ಕೆ ಅಲ್ಲ, ಇತರರ ಸೇವೆ ಮಾಡುವುದಕ್ಕೂ ಸರ್ವರ ಉದ್ಧಾರಕ್ಕಾಗಿ ತನ್ನ ಪ್ರಾಣವನ್ನು ಈಡಾಗಿ ಕೊಡುವುದಕ್ಕೂ ಬಂದಿದ್ದಾನೆ, " ಎಂದು ಬೋಧಿಸಿದರು.