ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

18.09.22 - "ದೇವರಿಗೂ ದ್ರವ್ಯಕ್ಕೂ ಒಟ್ಟಿಗೆ ಸೇವೆಮಾಡಲು ನಿಮ್ಮಿಂದಾಗದು,"

ಮೊದಲನೇ ವಾಚನ: ಆಮೋಸ 8:4-7

ದಿಕ್ಕಿಲ್ಲದವರನ್ನು ತುಳಿದುಬಿಡುವವರೇ, ನಾಡಿನಬಡವರನ್ನು ನಿರ್ಮೂಲ ಮಾಡುವವರೇ,  ಕೇಳಿ, "ದವಸಧಾನ್ಯಗಳನ್ನು ಮಾರಬೇಕಲ್ಲ, ಈ ಅಮಾವಾಸ್ಯೆ ತೀರುವುದು ಯಾವಾಗ? ಗೋದಿಯ ವ್ಯಾಪಾರ ಮಾಡಬೇಕಾಗಿದೆ. ಸಬ್ಬತ್ ದಿನ ಕಳೆಯುವುದು ಯಾವಾಗ? ಕೊಳಗವನ್ನು ಕಿರಿದು ಮಾಡೋಣ. ತೊಲವನ್ನು ಹಿರಿದು ಮಾಡೋಣ, ಕಳ್ಳತಕ್ಕಡಿಯನ್ನು ಬಳಸೋಣ, ಬಡವರನ್ನು ಬೆಳ್ಳಿಗೆ, ದಿಕ್ಕಿಲ್ಲದವರನ್ನು ಒಂದು ಜೊತೆ ಕೆರಕ್ಕೆ ಕೊಂಡುಕೊಳ್ಳೋಣ ಗೋದಿಯ ನುಚ್ಚುನುಸಿಯನ್ನೂ ಬಿಡದಂತೆ ಮಾರಿಬಿಡೋಣ," ಎಂದುಕೊಳ್ಳುತ್ತೀರಿ ಅಲ್ಲವೆ?  ಯಕೋಬನ ಮಹಿಮಾನ್ವಿತ ಸರ್ವೇಶ್ವರ ಆಣೆಯಿಟ್ಟು ಹೇಳುವುದೇನೆಂದರೆ; ಖಂಡಿತವಾಗಿ ಅವರ ದುಷ್ಕ್ರತ್ಯಗಳಲ್ಲಿ ಯಾವುದನ್ನೂ ಎಂದಿಗೂ ನಾನು ಮರೆಯಲಾರೆ".

ಕೀರ್ತನೆ: 113:1-2, 4-6, 7-8

ಶ್ಲೋಕ: ಪ್ರಭುವಿನ ದಾಸರೇ, ಪ್ರಭುವಿನ ನಾಮಸ್ತುತಿಯನು ಮಾಡಿರಿ

ಎರಡನೇ ವಾಚನ: 1 ತಿಮೊಥೇಯನಿಗೆ 2:1-8

ಮೊತ್ತಮೊದಲು ಮಾನವರೆಲ್ಲರಿಗೋಸ್ಕರ ದೇವರಿಗೆ ವಿಜ್ಞಾಪನೆ, ಪ್ರಾರ್ಥನೆ, ಬಿನ್ನಹ ಹಾಗೂ ಕೃತಜ್ಞತಾಸ್ತುತಿಗಳನ್ನು ಸಲ್ಲಿಸಬೇಕೆಂದು ಕೇಳಿಕೊಳ್ಳುತ್ತೇನೆ. ನಾವು ದೈವಭಕ್ತಿಯುಳ್ಳವರಾಗಿ ಮತ್ತು ಗೌರವಯುತರಾಗಿ ಶಾಂತಿ ಸಮಾಧಾನದಿಂದಲೂ ನೆಮ್ಮದಿಯಿಂದಲೂ ಜೀವಿಸಲು ಅನುಕೂಲವಾಗುವಂತೆ ಅರಸರಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ಪ್ರಾರ್ಥಿಸಬೇಕು. ಹೀಗೆ ಮಾಡುವುದು ಒಳ್ಳೆಯದು, ನಮ್ಮ ಉದ್ಧಾರಕರಾದ ದೇವರಿಗೆ ಮೆಚ್ಚುಗೆಯಾದುದು. ಎಲ್ಲಾ ಮಾನವರೂ ಸತ್ಯವನ್ನರಿತು ಜೀವೋದ್ಧಾರ ಪಡೆಯಬೇಕೆಂಬುದೇ ದೈವೇಚ್ಛೆ, ದೇವರು ಒಬ್ಬರೇ; ದೇವರನ್ನೂ ಮಾನವರನ್ನೂ ಒಂದುಗೂಡಿಸುವ ಮಧ್ಯಸ್ಥರೂ ಒಬ್ಬರೇ ಅವರೇ ಮಾನವರಾಗಿರುವ ಕ್ರಿಸ್ತ ಯೇಸು. ಇವರು ಎಲ್ಲರ ಉದ್ಧಾರಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು. ಸರ್ವರೂ ಉದ್ಧಾರವಾಗಬೇಕೆಂಬ ದೈವೇಚ್ಛೆಗೆ ಸೂಕ್ತ ಸಮಯದಲ್ಲಿ ಸಾಕ್ಷಿ ನೀಡಿದರು. ವಿಶ್ವಾಸ ಮತ್ತು ಸತ್ಯದ ಸಂದೇಶವನ್ನು ಸಾರುವುದಕ್ಕಾಗಿಯೇ ದೇವರು ನನ್ನನ್ನು ಪ್ರೇಷಿತನನ್ನಾಗಿಯೂ ಯೆಹೂದ್ಯೇತರಿಗೆ ಬೋಧಕನನ್ನಾಗಿಯೂ ನೇಮಕಮಾಡಿದರು. ನಾನು ಹೇಳುತ್ತಿರುವುದು ಸುಳ್ಳಲ್ಲ, ಸತ್ಯಸ್ಯ ಸತ್ಯ. ಪ್ರಾರ್ಥನೆ ಮಾಡುವ ಸ್ಥಳಗಳಲ್ಲೆಲ್ಲಾ ಪುರುಷರು ಕೋಪತಾಪವಿಲ್ಲದೆ, ಕೋಲಾಹಲವಿಲ್ಲದೆ ಕರಗಳನೆತ್ತಿ ಭಕ್ತಿಪೂರ್ವಕವಾಗಿ ಪ್ರಾರ್ಥಿಸಬೇಕು ಎಂಬುದೇ ನನ್ನ ಅಪೇಕ್ಷೆ.

 ಶುಭಸಂದೇಶ: ಲೂಕ 16:1-13

ಯೇಸುಸ್ವಾಮಿ ತಮ್ಮ ಶಿಷ್ಯರನ್ನು ಉದ್ದೇಶಿಸಿ ಇಂತೆಂದರು: "ಒಬ್ಬ ಧನಿಕನಿದ್ದ. ಅವನ ವ್ಯವಹಾರಗಳನ್ನು ನೋಡಿಕೊಳ್ಳಲು ಒಬ್ಬ ಮೇಸ್ತ್ರಿಯಿದ್ದ. ಇವನು ಧನಿಕನ ಆಸ್ತಿಯನ್ನು ಹಾಳುಮಾಡುತ್ತಿದ್ದಾನೆಂದು ದೂರು ಬಂದಿತು. ಧನಿಕನು ಅವನನ್ನು ಕರೆದು, "ಏನಿದು, ನಿನ್ನ ವಿಷಯವಾಗಿ ನಾನು ಹೀಗೆಲ್ಲ ಕೇಳುತ್ತಾ ಇದ್ದೇನೆ? ನಿನ್ನ ಕೆಲಸದ ಲೆಕ್ಕಾಚಾರವನ್ನು ಒಪ್ಪಿಸಿಬಿಡು. ಇನ್ನು ನೀನು ಮೇಸ್ತ್ರಿ ಆಗಿರಲು ಆಗದು," ಎಂದ. ಆಗ ಮೇಸ್ತ್ರಿ "ಈಗ ಏನು ಮಾಡಲಿ? ಯಜಮಾನನು ನನ್ನನ್ನು ಕೆಲಸದಿಂದ ತೆಗೆದು ಬಿಡುತ್ತಾನಲ್ಲಾ; ಅಗೆಯಲು ಶಕ್ತಿ ಸಾಲದು; ಭಿಕ್ಷೆ ಬೇಡಲು ನನಗೆ ನಾಚಿಕೆ," ಎಂದು ಚಿಂತಕ್ರಾಂತನಾದ. ಮರುಕ್ಷಣ, "ಸರಿ, ಕೆಲಸದಿಂದ ನನ್ನನ್ನು ತೆಗೆದುಹಾಕಿದ ಮೇಲೆ, ಜನರು ನನ್ನನ್ನು ತಮ್ಮ ಮನೆಗೆ ಸೇರಿಸಿಕೊಳ್ಳುವಂತೆ ನಾನು ಏನು ಮಾಡಬೇಕೆಂದು ಈಗ ಗೊತ್ತಾಯಿತು," ಎಂದುಕೊಂಡ. ಯಜಮಾನನ ಸಾಲಗಾರರನ್ನು ಒಬ್ಬೊಬ್ಬರನ್ನಾಗಿ ಬರಮಾಡಿಕೊಂಡು,  "ನೀನು ನನ್ನ ಯಜಮಾನನಿಗೆ ತೀರಿಸಬೇಕಾದ ಸಾಲ ಎಷ್ಟು?" ಎಂದು ಮೊದಲನೆಯವನನ್ನು ಕೇಳಿದ. ಅವನು, "ನೂರು ಬುದ್ದಲಿ ಎಣ್ಣೆ," ಎಂದ. ಅದಕ್ಕೆ ಮೇಸ್ತ್ರಿ, "ಇಗೋ, ನಿನ್ನ ಪತ್ರ, ಕುಳಿತುಕೊಂಡು "ಐವತ್ತು" ಎಂದು ಬೇಗನೆ ಬರೆ," ಎಂದ. ಬಳಿಕ ಇನ್ನೊಬ್ಬನನ್ನು ಕರೆದು, "ನೀನೆಷ್ಟು ಸಾಲ ತೀರಿಸಬೇಕು?" ಎಂದು ಕೇಳಿದ. ಅವನು "ನೂರು ಖಂಡುಗ ಗೋದಿ" ಎಂದಾಗ  "ಇಗೋ ನಿನ್ನ ಪತ್ರ, "ಎಂಬತ್ತು" ಎಂದು ಬರೆ", ಎಂದ ಈ ಅಪ್ರಮಾಣಿಕ ಮೇಸ್ತ್ರಿ ಮಾಡಿದ ಮುಂದಾಲೋಚನೆಯನ್ನು ಅವನ ಯಜಮಾನ ಪ್ರಶಂಸಿಸಿದ. ಏಕೆಂದರೆ, ತಮ್ಮತಮ್ಮ ವ್ಯವಹಾರಗಳಲ್ಲಿ ಲೌಕಿಕ ಜನರು ಬೆಳಕಿನ ರಾಜ್ಯದ ಜನರಿಗಿಂತ ಜಾಣರು. ನಾನು ಹೇಳುವುದನ್ನು ಗಮನಿಸಿರಿ; ಲೌಕಿಕ ಆಸ್ತಿಪಾಸ್ತಿಯಿಂದ ಗೆಳೆಯರನ್ನು ಗಳಿಸಿಕೊಳ್ಳಿರಿ. ಅದು ವ್ಯಯವಾಗಿ ಹೋದಾಗ ನಿಮ್ಮನ್ನು ಅಮರ ನಿವಾಸಕ್ಕೆ ಸ್ವಾಗತಿಸಲಾಗುವುದು. ಸಣ್ಣ ವಿಷಯಗಳಲ್ಲಿ ಪ್ರಾಮಾಣಿಕನಾಗಿ ನಡೆದುಕೊಳ್ಳುವವನು ದೊಡ್ಡ ವಿಷಯಗಳಲ್ಲೂ ಪ್ರಾಮಾಣೆಕನಾಗಿ ನಡೆದುಕೊಳ್ಳುತ್ತಾನೆ. ಸಣ್ಣ ವಿಷಯಗಳಲ್ಲಿ ದ್ರೋಹ ಮಾಡುವವನು ದೋಡ್ಡ ವಿಷಯಗಳಲ್ಲೂ ದ್ರೋಹ ಮಾಡುತ್ತಾನೆ. ಲೌಕಿಕ ಆಸ್ತಿಪಾಸ್ತಿಗಳ ವಿಷಯದಲ್ಲಿ ನೀವು ಪ್ರಾಮಾಣಿಕರಾಗಿ ನಡೆದುಕೊಳ್ಳದೆ ಹೋದರೆ, ನಿಮ್ಮನ್ನು ನಂಬಿ ನೈಜ ಸಂಪತ್ತನ್ನು ನಿಮ್ಮ ವಶಕ್ಕೆ ಕೊಡುವವರಾರು? ಇನ್ನೊಬ್ಬರಿಗೆ ಸೇರಿದ ವಸ್ತುಗಳ ವಿಷಯದಲ್ಲಿ ನೀವು ಪ್ರಾಮಾಣಿಕರಾಗಿ ನಡೆದುಕೊಳ್ಳದೆ ಹೋದರೆ, ನಿಮ್ಮ ಸ್ವಂತಕ್ಕೆ ಏನನ್ನಾದರೂ ಕೊಡುವವರಾರು? ಯಾವನೂ ಇಬ್ಬರು ಯಜಮಾನರಿಗೆ ಸೇವೆ ಮಾಡಲಾಗದು; ಅವನು ಒಬ್ಬನನ್ನು ದ್ವೇಶಿಸಿ, ಇನ್ನೊಬ್ಬನನ್ನು ಪ್ರೀತಿಸುತ್ತಾನೆ; ಅಥವಾ ಒಬ್ಬನೊಡನೆ ಹೊಂದಿಕೊಂಡು ಇನ್ನೊಬ್ಬನನ್ನು ತಾತ್ಸಾರ ಮಾಡುತ್ತಾನೆ. ದೇವರಿಗೂ ದ್ರವ್ಯಕ್ಕೂ ಒಟ್ಟಿಗೆ ಸೇವೆಮಾಡಲು ನಿಮ್ಮಿಂದಾಗದು," ಎಂದರು.

No comments:

Post a Comment