ಮೊದಲನೇ ವಾಚನ: ವಿಮೋಚನಕಾಂಡ 32:7-11, 13-14
ಸರ್ವೇಶ್ವರ ಮೋಶೆಗೆ, "ನೀನು ಕೂಡಲೆ ಬೆಟ್ಟದಿಂದ ಇಳಿದು ಹೋಗು. ಈಜಿಪ್ಟಿನಿಂದ ನೀನು ಕರೆದುತಂದ ನಿನ್ನ ಜನರು ಕೆಟ್ಟು ಹೋದರು. ನಾನು ಅವರಿಗೆ ಆಜ್ಞಾಪಿಸಿದ ಮಾರ್ಗವನ್ನು ಇಷ್ಟು ಬೇಗನೆ ತೊರೆದು ಬಿಟ್ಟು ತಮಗೇ ಲೋಹದ ಹೋರಿ ಕರುವನ್ನು ಮಾಡಿಸಿಕೊಂಡು, ಅದಕ್ಕೆ ಅಡ್ಡ ಬಿದ್ದು, ಬಲಿಗಳನರ್ಪಿಸಿ, "ಇಸ್ರಯೇಲರೇ ನೋಡಿ, ನಿಮ್ಮನ್ನು ಈಜಿಪ್ಟಿನಿಂದ ಕರೆದುತಂದ ದೇವರು" ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ಜನರ ಸ್ವಭಾವ ನನಗೆ ಗೊತ್ತಿದೆ. ಇವರು ನನ್ನ ಆಜ್ಞೆಗೆ ಬಗ್ಗದ ಹಟಮಾರಿಗಳು. ಆದ ಕಾರಣ ನೀನು ನನಗೆ ಅಡ್ಡ ಬರಬೇಡ. ನನ್ನ ಕೋಪಾಗ್ನಿ ಉರಿಯಲಿ. ಅವರನ್ನು ಸುಟ್ಟು ಭಸ್ಮ ಮಾಡುವೆನು. ಬಳಿಕ ನಿನ್ನಿಂದಲೇ ಬೇರೆ ಒಂದು ದೊಡ್ಡ ಜನಾಂಗ ಉದಯಿಸುವಂತೆ ಮಾಡುವೆನು." ಎಂದು ಹೇಳಿದರು. ಆಗ ಮೋಶೆ ತನ್ನ ದೇವರಾದ ಸರ್ವೇಶ್ವರನನ್ನು ಹೀಗೆಂದು ಬೇಡಿಕೊಂಡನು: "ಸ್ವಾಮಿ ಸರ್ವೇಶ್ವರ, ಮಹಾಶಕ್ತಿಯಿಂದಲೂ ಬುಜಬಲದಿಂದಲೂ ತಾವೇ ಈಜಿಪ್ಟಿನಿಂದ ಬಿಡಿಸಿದ ತಮ್ಮ ಪ್ರಜೆಯ ಮೇಲೆ ಕೋಪಾಗ್ನಿ ಕಾರಬಹುದೆ? ತಮ್ಮ ದಾಸರಾದ ಅಬ್ರಹಾಮ್, ಇಸಾಕ್ ಹಾಗು ಯಕೋಬರನ್ನು ನೆನಪಿಗೆ ತಂದುಕೊಳ್ಳಿ. ತಾವು ತಮ್ಮ ಜೀವದಾಣೆ ಪ್ರಮಾಣಮಾಡಿ ಅವರಿಗೆ, "ನಾನು ನಿಮ್ಮ ಸಂತತಿಯನ್ನು ಹೆಚ್ಚಿಸಿ ಆಕಾಶದ ನಕ್ಷತ್ರಗಳಷ್ಟು ಅಸಂಖ್ಯವಾಗಿ ಮಾಡುವೆನು; ನಾನು ಸೂಚಿಸಿರುವ ಈ ಪ್ರದೇಶಗಳನ್ನೆಲ್ಲಾ ನಿಮ್ಮ ಸಂತತಿಯವರಿಗೆ ಕೊಡುವೆನು; ಮತ್ತು ಅವರು ಈ ನಾಡನ್ನು ಶಾಶ್ವತವಾಗಿ ಸ್ವಾಧೀನದಲ್ಲಿಟ್ಟುಕೊಳ್ಳುವರು" ಎಂದು ತಾವು ಮಾತುಕೊಡಲಿಲ್ಲವೆ?" ಎಂದನು. ಆಗ ಸರ್ವೇಶ್ವರ ತಮ್ಮ ಪ್ರಜೆಗಳಿಗೆ ಮಾಡುವೆನೆಂದು ಹೇಳಿದ ಕೇಡಿನ ಬಗ್ಗೆ ಮನಸ್ಸನ್ನು ಮಾರ್ಪಡಿಸಿಕೊಂಡರು.
ಕೀರ್ತನೆ: 51:1-2, 10-11, 15, 17
ಶ್ಲೋಕ: ನಾನು ಇದೀಗಲೇ ಹೊರಟು ತಂದೆಯ ಬಳಿಗೆ ಹೋಗುತ್ತೇನೆ
ಎರಡನೇ ವಾಚನ: 1 ತಿಮೊಥೇಯನಿಗೆ 1:12-17
ತಿಮೊಥೇಯನೇ, ಶುಭಸಂದೇಶದ ಸೇವೆಯನ್ನು ಕೈಗೊಳ್ಳಲು ಯೋಗ್ಯನೆಂದು ಎಣಿಸಿ ನನಗೆ ಬೇಕಾದ ಶಕ್ತಿ ಸಾಮರ್ಥ್ಯವನ್ನು ದಯಪಾಲಿಸಿದ ನಮ್ಮ ಪ್ರಭು ಯೇಸುಕ್ರಿಸ್ತರಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಹಿಂದೆ ನಾನು ಅವರನ್ನು ದೂಷಿಸಿದೆ, ಹಿಂಸಿಸಿದೆ, ಅವಮಾನಪಡಿಸಿದೆ. ಆದರೆ ದೇವರು ದಯಾಮಯಿ; ಆಗ ನಾನು ತಿಳಿಯದೆ ಅವಿಶ್ವಾಸಿಯಾಗಿ ಹಾಗೆ ಮಾಡಿದ್ದರಿಂದ ದೇವರು ನನಗೆ ಕರುಣೆ ತೋರಿದರು. ಕ್ರಿಸ್ತ ಯೇಸುವಿನ ಅನ್ಯೋನ್ಯತೆಯಿಂದ ಲಭಿಸುವ ಪ್ರೀತಿವಿಶ್ವಾಸದಲ್ಲಿ ಭಾಗಿಯಾಗುವಂತೆ ಅವರು ನನ್ನ ಮೇಲೆ ತಮ್ಮ ಕೃಪಾವರಗಳನ್ನು ಹೇರಳವಾಗಿ ಸುರಿಸಿದರು. ಕ್ರಿಸ್ತ ಯೇಸು, ಪಾಪಿಗಳ ಉದ್ಧಾರಕ್ಕಾಗಿ ಈ ಲೋಕಕ್ಕೆ ಬಂದರು. ಎನ್ನುವ ಮಾತು ಸತ್ಯವಾದುದು, ನಂಬಲರ್ಹವಾದುದು ಹಾಗೂ ಎಲ್ಲರ ಅಂಗೀಕಾರಕ್ಕೆ ಯೋಗ್ಯವಾದುದು. ಅಂಥ ಪಾಪಿಗಳಲ್ಲಿ ನಾನೇ ಪ್ರಮುಖನು. ಇದರಿಂದಾಗಿ, ಮುಂದೆ ವಿಶ್ವಾಸಿಗಳಾಗಿ ನಿತ್ಯಜೀವ ಪಡೆಯುವವರಿಗೆ ಆದರ್ಶ ದೊರಕುವಂತೆ ಕ್ರಿಸ್ತ ಯೇಸು ನನಗೆ ಪೂರ್ಣ ಸಹನೆ ತೋರಿದರು. ಇದು ದೇವರ ಕರುಣೆಯೇ ಸರಿ. ಸರ್ವ ಯುಗಗಳ ಅರಸರೂ ಅಮರರೂ ಅಗೋಚರರೂ ಆಗಿರುವ ಏಕೈಕ ದೇವರಿಗೆ ಯುಗಯುಗಾಂತರಕ್ಕೆ ಗೌರವವೂ ಮಹಿಮೆಯೂ ಸಲ್ಲಲಿ! ಆಮೆನ್.
ಶುಭಸಂದೇಶ: ಲೂಕ 15:1-32

ಯೇಸುಸ್ವಾಮಿಯ ಉಪದೇಶವನ್ನು ಕೇಳಲು ಎಲ್ಲಾ ಸುಂಕದವರೂ ಪಾಪಿಗಳೂ ಬರುತ್ತಿದ್ದರು ಇದನ್ನು ಕಂಡ ಫರಿಸಾಯರು ಮತ್ತು ಧರ್ಮಶಾಸ್ತ್ರಿಗಳು, ಈ ಮನುಷ್ಯ ಪಾಪಿಗಳನ್ನು ಬರಮಾಡಿಕೊಳ್ಳುತ್ತಾನೆ; ಅವರೊಡನೆ ಊಟಮಾಡುತ್ತಾನೆ,"ಎಂದು ಗೊಣಗಿದರು. ಆ ಸಂದರ್ಭದಲ್ಲಿ ಯೇಸು ಈ ಸಾಮತಿಯನ್ನು ಹೇಳಿದರು; "ನಿಮ್ಮಲ್ಲಿ ಯಾರ ಬಳಿಯಾದರೂ ನೂರು ಕುರಿಗಳು ಇವೆ ಎನ್ನೋಣ. ಅವುಗಳಲ್ಲಿ ಒಂದು ಕುರಿ ಕಾಣದೆ ಹೋದಾಗ ಅವನೇನು ಮಾಡುತ್ತಾನೆ? ಇರುವ ತೊಂಭತ್ತೊಂಭತ್ತು ಕುರಿಗಳನ್ನು ಹುಲ್ಲುಗವಲಿನಲ್ಲೇ ಬಿಟ್ಟು ಕಾಣದೆ ಹೋದ ಆ ಒಂದು ಕುರಿ ಸಿಕ್ಕುವ ತನಕ ಹುಡುಕಿಕೊಂಡು ಹೋಗುತ್ತಾನಲ್ಲವೆ? ಅದು ಸಿಕ್ಕಿದಾಗ ಸಿಕ್ಕಿತೆಂಬ ಸಂತೋಷದಿಂದ ಅದನ್ನು ಹೆಗಲ ಮೇಲೆ ಎತ್ತಿಕೊಂಡು ಮನೆಗೆ ಬರುತ್ತಾನೆ; ಸ್ನೇಹಿತರನ್ನೂ ನೆರೆಯವರನ್ನೂ ಒಟ್ಟಿಗೆ ಕರೆಯುತ್ತಾನೆ "ಕಳೆದುಹೋಗಿದ್ದ ಕುರಿ ಸಿಕ್ಕಿತು; ನನ್ನೊಡನೆ ಸೇರಿ ಸಂತೋಷಪಡಿ," ಎನ್ನುತ್ತಾನೆ, ಅಲ್ಲವೆ? ಅದೇ ರೀತಿಯಲ್ಲಿ, ಪಶ್ಚಾತ್ತಾಪದ ಅವಶ್ಯಕತೆಯಿಲ್ಲದ ತೊಂಭತ್ತೊಂಭತ್ತು ಸತ್ಪುರುಷರ ವಿಷಯವಾಗಿ ಸ್ವರ್ಗದಲ್ಲಿ ಉಂಟಾಗುವ ಸಂತೋಷಕ್ಕಿಂತ, ಪಶ್ಚಾತಾಪಪಟ್ಟು ಪಾಪಕ್ಕೆ ವಿಮುಖನಾಗಿ ದೇವರಿಗೆ ಅಭಿಮುಖನಾಗುವ ಒಬ್ಬ ಪಾಪಿಯ ವಿಷಯವಾಗಿ ಹೆಚ್ಚು ಸಂತೋಷ ಉಂಟಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಅಂತೆಯೇ, ಮನೆಯಾಕೆಯೊಬ್ಬಳು ತನ್ನ ಬಳಿಯಿದ್ದ ಹತ್ತು ನಾಣ್ಯಗಳಲ್ಲಿಒಂದನ್ನು ಕಳೆದುಕೊಂಡಳು ಎನ್ನೋಣ. ಆಗ ಅವಳೇನು ಮಾಡುತ್ತಾಳೆ? ದೀಪ ಹಚ್ಚಿ ಮನೆಯನ್ನು ಗುಡಿಸಿ, ಕಳೆದುಹೋದ ನಾಣ್ಯ ಸಿಕ್ಕುವವರೆಗೂ ಚೆನ್ನಾಗಿ ಹುಡುಕಾಡುತ್ತಾಳೆ, ಅಲ್ಲವೆ? ಅದು ಸಿಕ್ಕಿದಾಗ ತನ್ನ ಗೆಳತಿಯರನ್ನೂ ನೆರೆಯವರನ್ನೂ ಒಟ್ಟಿಗೆ ಕರೆದು "ಕಳೆದುಹೋದ ನಾಣ್ಯ ಸಿಕ್ಕಿಬಿಟ್ಟಿತು. ನನ್ನೊಡನೆ ಸೇರರಿ ಸಂತೋಷಪಡಿ," ಎನ್ನುತ್ತಾಳಲ್ಲವೆ? ಅದೇ ಮೇರೆಗೆ ಪಶ್ಚಾತಾಪಪಟ್ಟು ದೇವರಿಗೆ ಅಭಿಮುಖನಾಗುವ ಒಬ್ಬ ಪಾಪಿಯ ವಿಷಯವಾಗಿ ದೇವದೂತರಿಗೆ ಸಂತೋಷ ಉಂಟಾಗುತ್ತದೆಂಬುದು ನಿಶ್ಚಯ," ಎಂದರು. ಯೇಸುಸ್ವಾಮಿ ಮುಂದುವರಿಸುತ್ತಾ ಈ ಸಾಮತಿಯನ್ನು ಹೇಳಿದರು: ಒಬ್ಬಾತನಿಗೆ ಇಬ್ಬರು ಮಕ್ಕಳಿದ್ದರು. ಅವರಲ್ಲಿ ಕಿರಿಯವನು "ಅಪ್ಪಾ, ಆಸ್ತಿಯಲ್ಲಿ ನನಗೆ ಬರಬೇಕಾದ ಪಾಲನ್ನು ಕೊಟ್ಟುಬಿಡು," ಎಂದು ಕೇಳಿದ. ತಂದೆ ಅವರಿಬ್ಬರಿಗೂ ಆಸ್ತಿಯನ್ನು ಹಂಚಿಕೊಟ್ಟ. ಕೆಲವು ದಿವಸಗಳಾದ ಮೇಲೆ ಕಿರಿಯ ಮಗ ತನ್ನ ಆಸ್ತಿಯನ್ನೆಲ್ಲಾ ಮಾರಿ, ಬಂದ ಹಣವನ್ನು ತೆಗೆದುಕೊಂಡು ಮನೆಬಿಟ್ಟು ಹೋದ. ದೂರದೇಶಕ್ಕೆ ಹೋಗಿ, ದುಂದು ಜೀವನ ನಡೆಸಿ ಹಣವನ್ನೆಲ್ಲಾ ಪೋಲು ಮಾಡಿಬಿಟ್ಟ. ಹೀಗೆ ಅವನು ಎಲ್ಲವನ್ನು ಹಾಳುಮಾಡಿಕೊಂಡಮೇಲೆ ಆ ದೇಶಾದಾದ್ಯಂತ ಘೋರವಾದ ಕ್ಷಾಮ ತಲೆದೋರಿತು. ನಿರ್ಗತಿಕನಾದ ಅವನು ಹೋಗಿ, ಆ ದೇಶದ ನಿವಾಸಿಯೊಬ್ಬನನ್ನು ಆಶ್ರಯಿಸಿದ. ಆತ ಇವನನ್ನು ಹಂದಿ ಮೇಯಿಸಲು ತನ್ನ ರೊಪ್ಪಗಳಿಗೆ ಕಳುಹಿಸಿದ. ಅಲ್ಲಿ ಹಂದಿ ತಿನ್ನುತ್ತಿದ್ದ ಕಾಳುಗಳನ್ನಾದರೂ ತಿಂದು ಹಸಿವನ್ನು ನೀಗಿಸಿಕೊಳ್ಳಲು ಹಂಬಲಿಸಿದ. ಆದರೆ ಅದನ್ನೂ ಅವನಿಗೆ ಯಾರೂ ಕೊಡಲಿಲ್ಲ. ಆಗ ಅವನಿಗೆ ಬುದ್ಧಿ ಬಂದಿತು. ನನ್ನ ತಂದೆಯ ಮನೆಯಲ್ಲಿ ಎಷ್ಟೋ ಮಂದಿ ಕೂಲಿಯಾಳುಗಳಿಗೆ ತಿಂದು ತೇಗುವಷ್ಟು ಆಹಾರವಿದೆ. ನಾನಾದರೋ ಇಲ್ಲಿ ಹಸಿವಿನಿಂದ ಸಾಯುತ್ತಾ ಇದ್ದೇನೆ. ನಾನು ಇದೀಗಲೇ ಹೊರಟು, ತಂದೆಯ ಬಳಿಗೆ ಹೋಗಿ, "ಅಪ್ಪಾ, ದೇವರಿಗೂ ನಿಮಗೂ ವಿರುದ್ಧವಾಗಿ ಪಾಪಮಾಡಿದ್ದೇನೆ; ನಿಮ್ಮ ಮಗನು ಎನಿಸಿಕೊಳ್ಳುವ ಯೋಗ್ಯತೆಯೂ ನನಗಿಲ್ಲ; ನನ್ನನ್ನು ನಿಮ್ಮ ಮನೆಯ ಕೂಲಿಯಾಳುಗಳಲ್ಲಿ ಒಬ್ಬನನ್ನಾಗಿ ಇಟ್ಟುಕೊಳ್ಳಿ" ಎಂದು ಬೇಡಿಕೊಳ್ಳುತ್ತೇನೆ, ಎಂದುಕೊಂಡ. ಅಂತೆಯೇ ಎದ್ದು ತಂದೆಯ ಬಳಿಗೆ ಹೊರಟ. ಮಗನು ಇನ್ನೂ ಅಷ್ಟುದೂರದಲ್ಲಿ ಇರುವಾಗಲೇ ತಂದೆ ನೋಡಿದ. ಆತನ ಹೃದಯ ಕನಿಕರದಿಂದ ಕರಗಿಹೋಯಿತು. ಓಡಿಹೋಗಿ, ಮಗನನ್ನು ಬಿಗಿಯಾಗಿ ತಬ್ಬಿಕೊಂಡು ಮುತ್ತಿಟ್ಟ. ಆದರೂ ಮಗನು, "ಅಪ್ಪಾ, ದೇವರಿಗೂ ನಿಮಗೂ ವಿರುದ್ಧವಾಗಿ ಪಾಪಮಾಡಿದ್ದೇನೆ; ನಿಮ್ಮ ಮಗನೆನಿಸಿಕೊಳ್ಳುವ ಯೋಗ್ಯತೆಯೂ ನನಗಿಲ್ಲ" ಎಂದ. ತಂದೆಯಾದರೋ ಆಳುಗಳನ್ನು ಕರೆದು, ಅತ್ಯುತ್ತಮವಾದ ಅಂಗಿಯನ್ನು ತಕ್ಷಣವೇ ತಂದು ಇವನಿಗೆ ಉಡಿಸಿರಿ ಬೆರಳಿಗೆ ಉಂಗುರವನ್ನು ತೊಡಿಸಿರಿ. ಕಾಲಿಗೆ ಪಾದರಕ್ಷೆಗಳನ್ನು ಮೆಟ್ಟಿಸಿರಿ; ಕೊಬ್ಬಿಸಿದ ಕರುವನ್ನು ತಂದು ಕೊಯ್ಯಿರಿ; ಹಬ್ಬಮಾಡೋಣ, ಆನಂದಿಸೋಣ. ಏಕೆಂದರೆ, ಈ ನನ್ನ ಮಗ ಸತ್ತುಹೋಗಿದ್ದ, ಈಗ ಬದುಕಿ ಬಂದಿದ್ದಾನೆ. ತಪ್ಪಿಹೋಗಿದ್ದ, ಈಗ ಸಿಕ್ಕಿದ್ದಾನೆ," ಎಂದು ಹೇಳಿದ. ಒಡನೆಯೇ ಹಬ್ಬದ ಸಡಗರ ತೊಡಗಿತು. ಇತ್ತ ಹೊಲಕ್ಕೆ ಹೋಗಿದ್ದ ಹಿರಿಯ ಮಗ ಹಿಂದಿರುಗಿ ಮನೆಯನ್ನು ಸಮೀಪಿಸುವಾಗ ನಾನ, ನರ್ತನಗಳ ಶಬ್ದವು ಅವನ ಕಿವಿಗೆ ಬಿತ್ತು. "ಮನೆಯಲ್ಲೇನು ವಿಶೇಷ?" ಎಂದು ಒಬ್ಬ ಆಳನ್ನು ಕರೆದು ವಿಚಾರಿಸಿದ. "ನಿಮ್ಮ ತಮ್ಮ ಬಂದಿದ್ದಾರೆ; ಅವರು ಮರಳಿ ಸುರಕ್ಷಿತವಾಗಿ ಬಂದುದಕ್ಕಾಗಿ ಕೊಬ್ಬಿಸಿದ ಕರುವನ್ನು ನಿಮ್ಮ ತಂದೆ ಕೊಯ್ಯಿಸಿದ್ದಾರೆ," ಎಂದು ಆಳು ತಿಳಿಸಿದ. ಇದನ್ನು ಕೇಳಿದ ಹಿರಿಯ ಮಗನಿಗೆ ಸಿಟ್ಟು ಬಂದಿತು. ಮನೆಯೊಳಕ್ಕೆ ಕಾಲಿಡಲೂ ಒಪ್ಪಲಿಲ್ಲ. ತಂದೆಯೇ ಹೊರಗೆ ಬಂದು ಬೇಡಿಕೊಂಡಾಗ ಅವನು, "ನೋಡಿ, ನಾನು ಇಷ್ಟು ವರ್ಷಗಳಿಂದ ನಿಮಗೆ ಗುಲಾಮನಂತೆ ಸೇವೆ ಮಾಡುತ್ತಿದ್ದೇನೆ. ನಿಮ್ಮ ಮಾತನ್ನು ಎಂದೂ ಮೀರಿಲ್ಲ; ಆದರೂ ನಾನು ನನ್ನ ಸ್ನೇಹಿತರೊಡನೆ ಹಬ್ಬಮಾಡಲು ಒಂದು ಆಡುಮರಿಯನ್ನು ಕೂಡ ನೀವು ಕೊಟ್ಟಿಲ್ಲ. ಆದರೆ ನಿಮ್ಮ ಆಸ್ತಿಪಾಸ್ತಿಯನ್ನೆಲ್ಲಾ ವೇಶ್ಯೆಯರಿಗೆ ಸುರಿದ ಈ ನಿಮ್ಮ ಮಗ ಬಂದದ್ದೇ ಕೊಬ್ಬಿಸಿದ ಕರುವನ್ನು ಕೊಯ್ಯಿಸಿದ್ದೀರಿ!" ಎಂದು ವಾದಿಸಿದ. ಆಗ ತಂದೆ ಅವನಿಗೆ, ಮಗನೇ, ನೀನು ಯಾವಾಗಲೂ ನನ್ನ ಸಂಗಡ ಇದ್ದೀ; ನನ್ನ ಸರ್ವಸ್ವವೂ ನಿನ್ನದೇ ಆಗಿದೆ. ಈ ನಿನ್ನ ತಮ್ಮ ನಮ್ಮ ಪಾಲಿಗೆ ಸತ್ತುಹೋಗಿದ್ದ, ಈಗ ಬದುಕಿಬಂದಿದ್ದಾನೆ. ತಪ್ಪಿ ಹೋಗಿದ್ದ, ಈಗ ಸಿಕ್ಕಿದ್ದಾನೆ. ಆದುದರಿಂದ ನಾವು ಹಬ್ಬಮಾಡಿ ಆನಂದಿಸುವುದು ಸಹಜವಲ್ಲವೇ?" ಎಂದನು."
No comments:
Post a Comment