ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

21.07.21

ಮೊದಲನೆಯ ವಾಚನ: ವಿಮೋಚನಕಾಂಡ 16:1-5, 9-15


ಇಸ್ರಯೇಲರ ಸಮಾಜ ಏಲೀಮಿನಿಂದ ಹೊರಟ ಮೇಲೆ, ಏಲೀಮಿಗೂ ಸಿನಾಯಿ ಬೆಟ್ಟಕ್ಕೂ ನಡುವೆಯಿರುವ ' ಸೀನ್ ' ಎಂಬ ಮರುಭೂಮಿಗೆ ಬಂದರು. ಈಜಿಪ್ಟನ್ನು ಬಿಟ್ಟು ಬಂದ ಎರಡನೆಯ ತಿಂಗಳಿನ ಹದಿನೈದನೆಯ ದಿನ ಅದು. ಮರುಭೂಮಿಯಲ್ಲಿ ಇಸ್ರಯೇಲರ ಸಮಾಜವೆಲ್ಲ ಮೋಶೆ ಮತ್ತು ಆರೋನರ ವಿರುದ್ಧ ಗೊಣಗುಟ್ಟಿತು. " ಈ ಸಮಾಜವನ್ನೆಲ್ಲ ಹಸಿವೆಯಿಂದ ಸಾಯಿಸಬೇಕೆಂದು ಈ ಮರುಭೂಮಿಗೆ ನಮ್ಮನ್ನು ಕರೆದುತಂದಿದ್ದೀರಿ, ನಾವು ಈಜಿಪ್ಟಿನಲ್ಲಿದ್ದಾಗ ಸರ್ವೇಶ್ವರನ ಕೈಯಿಂದಲೇ ಸತ್ತಿದ್ದರೆ ಎಷ್ಟೋ ಲೇಸಾಗಿತ್ತು. ಆಗ ಮಾಂಸಪಾತ್ರೆಗಳ ಪಕ್ಕದಲ್ಲೇ ಕುಳಿತು ಹೊಟ್ಟೇತುಂಬ ಊಟಮಾಡುತ್ತಿದ್ದೆವು, " ಎಂದು ಗೊಣಗಿದರು. ಆಗ ಸರ್ವೇಶ್ವರ ಮೋಶೆಗೆ, " ಇಗೋ ನೋಡು, ಆಕಾಶದಿಂದ ನಿಮಗೋಸ್ಕರ ಆಹಾರವನ್ನು ಸುರಿಸುವೆನು. ಈ ಜನರು ಪ್ರತಿದಿನವು ಹೊರಗೆ ಹೋಗಿ ಆಯಾದಿನಕ್ಕೆ ಬೇಕಾದಷ್ಟು ಮಾತ್ರ ಕೂಡಿಸಿಕೊಳ್ಳಬೇಕು. ನನ್ನ ಕಟ್ಟಳೆಯ ಪ್ರಕಾರ ನಡೆಯುವವರೋ ಇಲ್ಲವೋ ಎಂದು ಇದರಿಂದ ಪರೀಕ್ಷಿಸಿ ತಿಳಿಯುತ್ತೇನೆ. ಆರನೆಯ ದಿನದಲ್ಲಿ ಮಾತ್ರ ಪ್ರತಿ ದಿನ ಕೂಡಿಸಿದ್ದಕ್ಕಿಂತಲೂ ಎರಡರಷ್ಟು ಕೂಡಿಸಿ ಸಿದ್ದಪಡಿಸಿಕೊಳ್ಳಬೇಕು, " ಎಂದು ಹೇಳಿದರು. ಆರೋನನಿಗೆ ಮೋಶೆ, ' ನೀನು ಇಸ್ರಯೇಲ್ ಸಮಾಜದ ಬಳಿಗೆ ಹೋಗಿ, ಅವರಿಗೆ, ' ಸರ್ವೇಶ್ವರ ನಿಮ್ಮ ಗೊಣಗಾಟವನ್ನು ಕೇಳಿದ್ದಾರೆ. ಆದ್ದರಿಂದ ನೀವೆಲ್ಲರು ಅವರ ಸನ್ನಿಧಿಗೆ ಕೂಡಿಬರಬೇಕು, ' ಎಂದು ಆಜ್ಞಾಪಿಸು, " ಎಂದು ಹೇಳಿದನು. ಅಂತೆಯೇ ಆರೋನನು ಇಸ್ರಯೇಲರ ಸಮಾಜಕ್ಕೆಲ್ಲ ಈ ಮಾತುಗಳನ್ನು ತಿಳಿಸುತ್ತಿರುವಾಗ ಆ ಜನರು ಮರುಭೂಮಿಯ ಕಡೆಗೆ ನೋಡಿದರು. ಆಗ ಇಗೋ, ಮೇಘದಲ್ಲಿ ಸರ್ವೇಶ್ವರನ ತೇಜಸ್ಸು ಅವರಿಗೆ ಕಾಣಿಸಿತು. ಸರ್ವೇಶ್ವರ ಮೋಶೆಯ ಸಂಗಡ ಮಾತಾಡಿ ಹೀಗೆಂದರು: " ಇಸ್ರಯೇಲರ ಗೊಣಗಾಟ ನನಗೆ ಕೇಳಿಸಿತು. ಅವರಿಗೆ, ' ಸಂಜೆ ಮಾಂಸವನ್ನೂ ಬೆಳಿಗ್ಗೆ ಬೇಕಾದಷ್ಟು ರೊಟ್ಟಿಯನ್ನೂ ತಿನ್ನುವಿರಿ, ಇದರಿಂದ ನಾನು ನಿಮ್ಮ ದೇವರಾದ ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು ' ಎಂದು ಹೇಳು, " ಎಂದರು. ಸಂಜೆಯಾಗುತ್ತಲೆ ಲಾವಕ್ಕಿಗಳು ಬಂದು ಅವರ ಪಾಳೆಯವನ್ನು ಮುಚ್ಚಿಕೊಂಡವು. ಬೆಳಿಗ್ಗೆ ಪಾಳೆಯದ ಸುತ್ತಲೂ ಮಂಜುಬಿದ್ದಿತು. ಆ ಮಂಜು ಆರಿಹೋದನಂತರ ಮರುಭೂಮಿಯ ನೆಲದಲ್ಲಿ ಮಂಜಿನ ಹನಿಗಳಂತೆ ಏನೋ ಸಣ್ಣ ಸಣ್ಣ ರವೆಗಳು ಕಾಣಿಸಿದವು. ಇಸ್ರಯೇಲರು ಅದನ್ನು ಕಂಡು ಇಂಥದೆಂದು ತಿಳಿಯದೆ ಒಬ್ಬರಿಗೊಬ್ಬರು ' ಮನ್ನ ' ಎಂದರೆ, ಇದೇನಿರಬಹುದೆಂದು ವಿಚಾರಿಸಿದರು. ಮೋಶೆ ಅವರಿಗೆ, " ಇದು ಸರ್ವೇಶ್ವರಸ್ಸಾಮಿ ನಿಮಗೋಸ್ಕರ ಕೊಟ್ಟ ಆಹಾರ, " ಎಂದನು.

ಕೀರ್ತನೆ: 78:18-19, 23-28
ಶ್ಲೋಕ: ಅನುಗ್ರಹಿಸಿದನು ಪ್ರಭು, ಸ್ವರ್ಗದ ದವಸಧಾನ್ಯವನು.

ಕೋರಿದರು ತಮಗಿಷ್ಟವಾದ ಆಹಾರವನೇ
ಪರೀಕ್ಷಿಸಿದರು ಮನದಲಿ ಆ ದೇವರನೇ
ಜರೆವ ಮಾತಿನಲಿ ಆಡಿಕೊಂಡರಿಂತು
ಅಡವಿಯಲಿ ದೇವನೂಟ ಬಡಿಸುವನೆಂತು

ಆದರೂ ಮೇಘಮಂಡಲಕೆ ಆಜ್ಞೆಯಿತ್ತನಾತ
ಅಂತರಿಕ್ಷದಾ ದ್ವಾರಗಳನು ತೆರೆದನಾತ
ಸುರಿಸಿದನು ಅವರ ಮೇಲೆ ಉಣಲು ಅನ್ನವನು
ಅನುಗ್ರಹಿಸಿದನು ಸ್ವರ್ಗದ ದವಸಧಾನ್ಯವನು

ನರರಿಗುಣಲು ಕೊಟ್ಟನು ದೇವದೂತರ ಆಹಾರವನು
ಇತ್ತನವರಿಗೆ ತೃಪ್ತಿಕರವಾದ ಔತಣವನು
ಆಕಾಶದಲ್ಲೆಬ್ಬಿಸಿದನು ಮೂಡಣ ಗಾಳಿಯನು
ಒಲುಮೆಯಿಂದ ಹೊರಡಿಸಿದನು ತೆಂಕಣಗಾಳಿಯನು

ಧೂಳಿನಷ್ಟು ಸುರಿಸಿದನು ಮಾಂಸವೃಷ್ಟಿಯನು
ಸಮುದ್ರದ ಮರಳಿನಷ್ಟು ರೆಕ್ಕೆ ಹಕ್ಕಿಗಳನು
ಬೀಳ್ವಂತೆ ಮಾಡಿದನು ಪಾಳೆಯದ ಮಧ್ಯದಲೂ
ಉದುರಿದವು ಅವರಿದ್ದ ಗುಡಾರಗಳ ಸುತ್ತಲೂ

ಶುಭಸಂದೇಶ: ಮತ್ತಾಯನು 13:1-9

ಆ ಕಾಲದಲ್ಲಿ ಯೇಸು ಮನೆಯಿಂದ ಹೊರಟು ಸರೋವರದ ತೀರದಲ್ಲಿ ಕುಳಿತರು. ಜನರು ತಂಡೋಪತಂಡವಾಗಿ ಕೂಡಿ ಬಂದುದರಿಂದ ದೋಣಿ ಹತ್ತಿ ಕುಳಿತುಕೊಳ್ಳಬೇಕಾಯಿತು. ಜನರು ದಡದಲ್ಲೇ ನಿಂತರು. ಆಗ ಯೇಸು ಅವರಿಗೆ ಅನೇಕ ವಿಷಯಗಳನ್ನು ಸಾಮತಿಯ ರೂಪದಲ್ಲಿ ಹೇಳಿದರು: " ಒಬ್ಬ ರೈತ ಬಿತ್ತುವುದಕ್ಕೆ ಹೋದ, ಬಿತ್ತನೆ ಮಾಡುತ್ತಿದ್ದಾಗ ಕೆಲವು ಬೀಜಗಳು ಕಾಲ್ದಾರಿಯಲ್ಲಿ ಬಿದ್ದವು. ಬಿದ್ದದ್ದೇ ಹಕ್ಕಿಗಳು ಬಂದು ಆ ಬೀಜಗಳನ್ನು ತಿಂದುಬಿಟ್ಟವು. ಬೇರೆ ಕೆಲವು ಬೀಜಗಳು ಹೆಚ್ಚು ಮಣ್ಣಿಲ್ಲದ ಕಲ್ಲುನೆಲದ ಮೇಲೆ ಬಿದ್ದವು. ಅಲ್ಲಿ ಮಣ್ಣು ತೆಳ್ಳಗಿದ್ದುದರಿಂದ ಅವು ಬೇಗನೆ ಮೊಳೆತವು. ಆದರೆ ಬಿಸಿಲೇರಿದಾಗ ಬಾಡಿದವು. ಬೇರು ಬಲವಾಗಿಲ್ಲದ ಕಾರಣ ಒಣಗಿಹೋದವು. ಮತ್ತೆ ಕೆಲವು ಬೀಜಗಳು ಮುಳ್ಳುಪೊದೆಗಳ ನಡುವೆ ಬಿದ್ದವು. ಆ ಪೊದೆಗಳು ಸಸ್ಯಗಳ ಸಮೇತ ಬೆಳೆದು, ಅವುಗಳನ್ನು ಅಡಗಿಸಿಬಿಟ್ಟವು. ಇನ್ನೂ ಕೆಲವು ಬೀಜಗಳು ಹದವಾದ ಭೂಮಿಯಲ್ಲಿ ಬಿದ್ದವು. ಅವು ಮೊಳೆತು, ಬೆಳೆದು, ತೆನೆಬಿಟ್ಟವು. ಕೆಲವು ನೂರರಷ್ಟು ಮತ್ತೆ ಕೆಲವು ಅರವತ್ತರಷ್ಟು, ಇನ್ನು ಕೆಲವು ಮೂವತ್ತರಷ್ಟು ಫಸಲನ್ನು ಕೊಟ್ಟವು. ಕೇಳಲು ಕಿವಿಯುಳ್ಳವನು ಕೇಳಿಸಿಕೊಳ್ಳಲಿ, " ಎಂದು ಒತ್ತಿ ಹೇಳಿದರು.

No comments:

Post a Comment