ಮೊದಲನೇ ವಾಚನ: ವಿಮೋಚನಾಕಾಂಡ 12:37-42
ಇಸ್ರಯೇಲರು ರಮ್ಸೇಸ್ ಪಟ್ಟಣದಿಂದ ಹೊರಟು ಸುಕ್ಕೋತಿಗೆ ಬಂದರು. ಅವರಲ್ಲಿ ಮಹಿಳೆಯರನ್ನೂ ಮಕ್ಕಳನ್ನೂ ಬಿಟ್ಟು ಗಂಡಸರ ಸಂಖ್ಯೆಯೇ ಸುಮಾರು ಆರು ಲಕ್ಷವಿತ್ತು. ಅವರೊಂದಿಗೆ ಬಹು ಮಂದಿ ಅನ್ಯದೇಶೀಯರೂ ಹೊರಟು ಬಂದಿದ್ದರು. ಕುರಿ, ದನ ಮುಂತಾದ ಪಶುಪ್ರಾಣಿಗಳು ಬಹಳವಿದ್ದವು. ಈಜಿಪ್ಟ್ ದೇಶದಿಂದ ಅವರು ತಂದಿದ್ದ ಕಣಕದ ಮುದ್ದೆಯಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿ ಸುಟ್ಟರು. ಅಲ್ಲಿಂದ ಅವರನ್ನು ಹೊರಡಿಸಿದಾಗ ಸ್ವಲ್ಪವೂ ಸಮಯ ಸಿಕ್ಕದೆ ಕಣಕದಲ್ಲಿ ಹುಳಿಯನ್ನು ಕಲಸಲಿಕ್ಕೂ ಆಗಲಿಲ್ಲ ಹಾಗು ಬೇರೆ ಅಹಾರವನ್ನು ಸಿದ್ಧಪಡಿಸಿಕೊಳ್ಳಲೂ ಸಾಧ್ಯವಾಗಿರಲಿಲ್ಲ. ಇಸ್ರಯೇಲರು ಈಜಿಪ್ಟ್ ದೇಶದಲ್ಲಿ ನಾನೂರ ಮೂವತ್ತು ವರ್ಷಗಳ ಕಾಲ ವಾಸವಾಗಿದ್ದರು. ಈ ನಾನೂರ ಮೂವತ್ತು ವರ್ಷಗಳು ಕಳೆದ ನಂತರ ಅದೇ ದಿವಸದಲ್ಲಿ ಸರ್ವೇಶ್ವರನ ಪಡೆಗಳೆಲ್ಲವೂ ಈಜಿಪ್ಟ್ ದೇಶವನ್ನು ಬಿಟ್ಟು ಹೊರಟು ಬಂದವು. ಸರ್ವೇಶ್ವರ ಅವರನ್ನು ಈಜಿಪ್ಟ್ ದೇಶದಿಂದ ಹೊರಗೆ ಬರಮಾಡಲು ಜಾಗರೂಕರಾಗಿದ್ದುದ್ದು ಆ ರಾತ್ರಿಯೇ. ಆದುದರಿಂದಲೇ ಇಸ್ರಯೇಲರೆಲ್ಲರು ತಲ ತಲಾಂತಕ್ಕೂ ಸರ್ವೇಶ್ವರನ ಗೌರವಾರ್ಥ ಈ ರಾತ್ರಿಯಲ್ಲೇ ಜಾಗರಣೆಯನ್ನು ಅನುಸರಿಸಬೇಕು.
ಕೀರ್ತನೆ: 136:1, 23-24, 10-12, 13-15
ಶ್ಲೋಕ: ಪ್ರಭುವಿನ ಪ್ರೀತಿ ಶಾಶ್ವತ
ಶುಭಸಂದೇಶ: ಮತ್ತಾಯ 12:14-21
ಫರಿಸಾಯರು ಯೇಸುವನ್ನು ಕೊಲೆ ಮಾಡಲು ಒಳ ಸಂಚು ಹೂಡಿದರು. ತಮಗೆ ವಿರುದ್ಧ ಒಳ ಸಂಚು ನಡೆಯುತ್ತಿದೆ ಎಂದು ಯೇಸುಸ್ವಾಮಿ ಅರಿತುಕೊಂಡು ಅಲ್ಲಿಂದ ಹೊರಟು ಹೋದರು. ಅನೇಕ ಜನರು ಅವರ ಹಿಂದೆಯೇ ಹೋದರು. ಯೇಸು ಅಸ್ವಸ್ಥರಾಗಿದ್ದ ಎಲ್ಲರನ್ನು ಗುಣಪಡಿಸಿದರು. ಮತ್ತು ತಮ್ಮ ವಿಷಯಗಳನ್ನು ಯಾರಿಗೂ ತಿಳಿಸಬಾರದೆಂದು ಆಜ್ಞೆ ಮಾಡಿದರು. ಹೀಗೆ ದೇವರು ಪ್ರವಾದಿ ಯೆಶಾಯನ ಮುಖಾಂತರ ಹೇಳಿದ ಈ ವಚನ ನೆರವೇರಿತು: "ಇದಿಗೋ, ನನ್ನ ದಾಸನು, ನನ್ನಿಂದಾಯ್ಕೆಯಾದವನು, ನನಗೆ ಪರಮಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು. ನೆಲೆಗೊಳಿಸುವೆ ಇವನಲಿ ಎನ್ನಾತ್ಮವನು; ಸಾರುವನಿವನು ಜಗದಲಿ ನನ್ನ ಧರ್ಮವನು. ವಾದಿಸುವವನಲ್ಲ, ದನಿಯೆತ್ತಿ ಕೂಗುವವನಲ್ಲ, ಹಾದಿ ಬೀದಿಯಲ್ಲಿವನ ಕಂಠ ಮೊರೆಯುವುದಿಲ್ಲ. ಮುರಿದ ಜೊಂಡಿನಂತಹ ದುರ್ಬಲರಿಗೀತ ದೀನ ಬಂಧು, ನಂದಿ ಹೋಗುತಿಹ ದೀನ ದಲಿತರಿಗೆ ಕೃಪಾಸಿಂಧು, ನ್ಯಾಯ ನೀತಿಗೆ ಜಯ ದೊರಕಿಸದೆ ಬಿಡನಿವನು. ನಂಬುವರು ಅನ್ಯ ಜನರೆಲ್ಲರು ಇವನ ನಾಮವನು."
No comments:
Post a Comment