ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

19.07.21 - "ಆದರೆ ಸೊಲೊಮೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ"

ಮೊದಲನೇ ವಾಚನ: ವಿಮೋಚನಾಕಾಂಡ 14:5-18



ಇತ್ತ ಫರೋಹನಿಗೆ ಇಸ್ರಯೇಲರು ಓಡಿಹೋದರೆಂಬ ಸುದ್ದಿ ಮುಟ್ಟಿತು. ಅವರ ಬಗ್ಗೆ ಅವನ ಹಾಗು ಅವನ ಪರಿವಾರದವರ ಮನಸ್ಸು ಮಾರ್ಪಟ್ಟಿತು. “ನಮಗೆ ಗುಲಾಮರಾಗಿದ್ದ ಇಸ್ರಯೇಲರನ್ನು ನಾವೇಕೆ ಹೋಗಗೊಟ್ಟೆವು?” ಎಂದು ನೊಂದುಕೊಂಡರು. ಕೂಡಲೆ ಫರೋಹನು ತನ್ನ ರಥಬಲವನ್ನು ಸಜ್ಜುಗೊಳಿಸಿಕೊಂಡು ಸೈನ್ಯ ಸಮೇತನಾಗಿ ಹೊರಟನು. ಈಜಿಪ್ಟಿನ ಎಲ್ಲ ರಥಗಳನ್ನೂ ಆರುನೂರು ಶ್ರೇಷ್ಠರಥಗಳನ್ನೂ ತೆಗೆದುಕೊಂಡು ಹೋದನು. ಈ ಎಲ್ಲ ರಥಗಳಲ್ಲಿ ಸೇನಾನಿಗಳಿದ್ದರು ಈಜಿಪ್ಟ್ ರಾಜ ಫರೋಹನ ಹೃದಯವನ್ನು ಸರ್ವೇಶ್ವರ ಕಠಿಣಪಡಿಸಿದ್ದರಿಂದ ಅವನು ಇಸ್ರಯೇಲರನ್ನು ಬೆನ್ನಟ್ಟಿ ಹೋದನು. ಇತ್ತ ಅಟ್ಟಹಾಸದಿಂದ ಹೊರಟಿದ್ದರು ಇಸ್ರಯೇಲರು. ಈಜಿಪ್ಟಿನವರು, ಅಂದರೆ ಫರೋಹನ ಕುದುರೆಗಳು, ರಥಗಳು, ರಾಹುತರು, ಸೈನ್ಯದವರೆಲ್ಲರು ಅವನ ಹಿಂದೆ ಹೊರಟು ಇಸ್ರಯೇಲರ ಸವಿೂಪಕ್ಕೆ ಬಂದರು. ಪೀಹಹೀರೋತಿನ ಬಳಿ ಬಾಳ್ಚೆಫೋನಿನ ಎದುರಾಗಿ ಸಮುದ್ರ ತೀರದಲ್ಲಿ ಇಳಿದುಕೊಳ್ಳುವಾಗಲೇ ಅವರ ಹತ್ತಿರಕ್ಕೆ ಬಂದರು. ಫರೋಹನು ಸವಿೂಪಿಸುತ್ತಿರುವುದನ್ನು ಇಸ್ರಯೇಲರು ಕಣ್ಣೆತ್ತಿ ನೋಡಿದರು. ತಮ್ಮನ್ನು ಬೆನ್ನಟ್ಟಿ ಬಂದಿದ್ದ ಈಜಿಪ್ಟಿನವರನ್ನು ಕಂಡು ಬಹಳವಾಗಿ ಭಯಪಟ್ಟು ಸರ್ವೇಶ್ವರನಿಗೆ ಮೊರೆಯಿಟ್ಟರು. ಮೋಶೆಗೆ ಅವರು, “ಈಜಿಪ್ಟಿನಲ್ಲಿ ಸಮಾಧಿಗಳಿಲ್ಲವೆಂದು ಮರುಭೂಮಿಯಲ್ಲಿ ಸಾಯಲಿಯೆಂದು ನಮ್ಮನ್ನು ಇಲ್ಲಿಗೆ ಕರೆದು ತಂದಿರೋ? ಈಜಿಪ್ಟಿನಿಂದ ಕರೆದುಕೊಂಡು ಬಂದು ನಮಗೆ ಹೀಗೆ ಮಾಡಿಬಿಟ್ಟಿದ್ದೇಕೆ? ನಾವು ಈಜಿಪ್ಟಿನಲ್ಲಿರುವಾಗಲೇ, ‘ನಮ್ಮ ಗೊಡವೆಗೆ ಬರಬೇಡಿ, ನಾವು ಈಜಿಪ್ಟಿನವರಿಗೆ ಗುಲಾಮರಾಗಿಯೇ ಇರುತ್ತೇವೆ,’ ಎಂದು ನಿಮಗೆ ನಾವು ಹೇಳಲಿಲ್ಲವೆ? ನಾವು ಈ ಮರುಭೂಮಿಯಲ್ಲಿ ಸಾಯುವುದಕ್ಕಿಂತ ಈಜಿಪ್ಟಿನವರಿಗೆ ಗುಲಾಮರಾಗಿರುವುದೇ ಮೇಲಲ್ಲವೆ?” ಎಂದು ದೂರಿದರು. ಅದಕ್ಕೆ ಮೋಶೆ ಆ ಜನರಿಗೆ, “ಅಂಜಬೇಡಿ, ಸುಮ್ಮನಿರಿ. ಈ ದಿನ ಸರ್ವೇಶ್ವರ ನಿಮ್ಮನ್ನು ಹೇಗೆ ರಕ್ಷಿಸುತ್ತಾರೆಂದು ನೋಡಿ! ಈ ದಿನ ನೀವು ನೋಡುವ ಈಜಿಪ್ಟಿನವರನ್ನು ಇನ್ನೆಂದಿಗೂ ನೋಡುವುದಿಲ್ಲ. ಸರ್ವೇಶ್ವರಸ್ವಾಮಿಯೇ ನಿಮ್ಮ ಪರವಾಗಿ ಯುದ್ಧಮಾಡುವರು. ನೀವು ನೆಮ್ಮದಿಯಿಂದಿರಿ,” ಎಂದು ಹೇಳಿದನು. ಆಗ ಸರ್ವೇಶ್ವರ: “ನೀನೇಕೆ ನನಗೆ ಮೊರೆಯಿಡುತ್ತಿರುವೆ? ಮುಂದಕ್ಕೆ ಹೊರಡಬೇಕೆಂದು ಇಸ್ರಯೇಲರಿಗೆ ಹೇಳು. ನೀನು ನಿನ್ನ ಕೋಲನ್ನು ಎತ್ತಿ ಸಮುದ್ರದ ಮೇಲೆ ಚಾಚಿ ಅದನ್ನು ವಿಭಾಗಿಸು; ಆಗ ಇಸ್ರಯೇಲರು ಸಮುದ್ರದ ಮಧ್ಯೆ ಒಣಗಿದ ನೆಲದ ಮೇಲೆ ನಡೆದುಹೋಗುವರು. ನಾನು ಈಜಿಪ್ಟಿನವರ ಹೃದಯಗಳನ್ನು ಕಠಿಣಪಡಿಸುವೆನು; ಎಂದೇ ಅವರು ಇವರ ಹಿಂದೆ ಸಮುದ್ರದೊಳಕ್ಕೆ ಹೋಗುವರು. ಆಗ ನಾನು ಫರೋಹನನ್ನು, ಅವನ ಸಮಸ್ತ ಸೈನ್ಯವನ್ನು, ರಥಗಳನ್ನು ಹಾಗು ರಾಹುತರನ್ನು ಸೋಲಿಸಿ ಪ್ರಖ್ಯಾತಿ ಹೊಂದಿದ ನಂತರ ನಾನೇ ಸರ್ವೇಶ್ವರ ಎಂಬುದನ್ನು ಈಜಿಪ್ಟಿನವರು ತಿಳಿದುಕೊಳ್ಳುವರು,” ಎಂದರು ಮೋಶೆಗೆ.

ಕೀರ್ತನೆ: 15:1, 2, 3-4, 5-6
ಶ್ಲೋಕ: ಮಾಡೋಣ ಸರ್ವೇಶ್ವರನ ಗುಣಗಾನ 

ಮಹೋನ್ನತ ಆತ ಗಳಿಸಿದ ವಿಜಯ!
ಕುದುರೆಗಳನು, ರಾಹುತರನು ಕಡಲಲ್ಲಿ ಕೆಡವಿ ನಾಶಮಾಡಿಹನು.
ಆತನನ್ನು ವರ್ಣಿಸುವೆನು, ಆತನೆನ್ನ ದೇವನು
ಆತನನ್ನು ಸ್ತುತಿಸುವೆನು, ಆತನೆನ್ನ ಪಿತೃಗಳ ದೇವನು.

ಸರ್ವೇಶ್ವರನು ಯುದ್ಧಶೂರನು
‘ಸರ್ವೇಶ್ವರ’ ಎಂಬುದು ಆತನ ನಾಮಧೇಯವು.
ಫರೋಹನ ವೀರ ಶ್ರೇಷ್ಟರನು
ಮುಳುಗಿಸಿಬಿಟ್ಟನಾತ ಕೆಂಪು ಸಮುದ್ರದಲಿ.

ಮುಚ್ಚಿಬಿಟ್ಟಿತವರನು ಸಮುದ್ರ ಸಾಗರವು
ಸೇರಿದರವರು ಕಲ್ಲಿನೋಪಾದಿ ಕಡಲಿನ ತಳವನು.
ಹೇ ಸರ್ವೇಶ್ವರಾ, ನಿನ್ನ ಭುಜಬಲ ಶಕ್ತಿಯುತ
ಪುಡಿ ಪುಡಿ ಮಾಡಿತು ನಿನ್ನ ಶತ್ರುಗಳನು ಆ ಬಾಹುಬಲ

ಶುಭಸಂದೇಶ: ಮತ್ತಾಯ 12:38-42


ಬಳಿಕ ಕೆಲವು ಮಂದಿ ಧರ್ಮಶಾಸ್ತ್ರಿಗಳೂ ಫರಿಸಾಯರೂ ಯೇಸುಸ್ವಾಮಿಯನ್ನು ಉದ್ದೇಶಿಸಿ, "ಬೋಧಕರೇ, ನೀವು ಒಂದು ಸೂಚಕಕಾರ್ಯ ಮಾಡುವುದನ್ನು ನೋಡಬೇಕೆಂದಿದ್ದೇವೆ," ಎಂದರು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು ಇಂತೆಂದರು: "ಈ ಕೆಟ್ಟ ಹಾಗೂ ದೈವಭ್ರಷ್ಟ ಪೀಳಿಗೆ ಸೂಚಕಕಾರ್ಯವನ್ನು ಸಂಕೇತವಾಗಿ ಕೋರುತ್ತದೆ. ಪ್ರವಾದಿ ಯೋನನ ಸಂಕೇತವೇ ಹೊರತು ಬೇರೆ ಯಾವ ಸಂಕೇತವೂ ಇದಕ್ಕೆ ದೊರಕದು. ಯೋನನು ಮೂರುದಿನ ಹಗಲುರಾತ್ರಿ ದೊಡ್ಡ ಮೀನಿನ ಉದರದಲ್ಲಿದ್ದನು. ಅದರಂತೆಯೇ ನರಪುತ್ರನು ಮೂರುದಿನ ಹಗಲುರಾತ್ರಿ ಭೂಗರ್ಭದಲ್ಲಿರುವನು. ತೀರ್ಪಿನ ದಿನ ನಿನೆವೆ ನಗರದವರು ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು ಅಪರಾಧಿಯೆಂದು ಖಂಡಿಸುವರು. ಏಕೆಂದರೆ, ಪ್ರವಾದಿ ಯೋನನ ಬೋಧನೆಯನ್ನು ಕೇಳಿ ಅವರು ಪಾಪಕ್ಕೆ ವಿಮುಖರಾದರು. ಆದರೆ ಪ್ರವಾದಿ ಯೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ. ಅದೇ ತೀರ್ಪಿನ ದಿನ ದಕ್ಷಿಣ ದೇಶದ ರಾಣಿ ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು ಅಪರಾಧಿಯೆಂದು ಖಂಡಿಸುವಳು. ಆಕೆ ಸೊಲೊಮೋನನ ಜ್ಞಾನೋಕ್ತಿಗಳನ್ನು ಕೇಳುವುದಕ್ಕಾಗಿ ದೂರ ದೇಶದಿಂದ ಬಂದಳು. ಆದರೆ ಸೊಲೊಮೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ.

No comments:

Post a Comment