ಶುಭ ಸಂದೇಶ
ಯೊವಾನ್ನ 13:21-33, 36-38
ಇದೆಲ್ಲವನ್ನು ಹೇಳಿ ಆದ ಮೇಲೆ ಯೇಸುಸ್ವಾಮಿ ಮನಸ್ಸಿನಲ್ಲಿ ಬಹಳವಾಗಿ ನೊಂದುಕೊಂಡರು. ಅವರು, " ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನಿಮ್ಮೊಲ್ಲೊಬ್ಬನು ದ್ರೋಹ ಬಗೆದು ನನ್ನನು ಹಿಡಿದೊಪ್ಪಿಸುವನು, " ಎಂದು ಸ್ಪಷ್ಟವಾಗಿ ಹೇಳಿದರು. ಯೇಸು ಯಾರನ್ನು ಕುರಿತು ಹಾಗೆಂದರೆಂದು ತಿಳಿಯದೆ ಶಿಷ್ಯರು ಒಬ್ಬರನೊಬ್ಬರು ಸಂಶಯದಿಂದ ನೋಡುವವರಾದರು.
ಯೇಸುವಿನ ಪಕ್ಕದಲ್ಲೇ ಒರಗಿ ಕುಳಿತಿದ್ದ ಅವರ ಆಪ್ತ ಶಿಷ್ಯನಿಗೆ, ಸಿಮೋನ ಪೇತ್ರನು, "ಯಾರನ್ನು ಕುರಿತು ಹಾಗೆ ಕೇಳುತ್ತಿದ್ದಾರೆಂದು ಕೇಳು" ಎಂದು ಸನ್ನೆ ಮಾಡಿದನು.ಆಗ ಆ ಶಿಷ್ಯನು, ಯೇಸುವಿನ ಮಗ್ಗುಲಿಗೆ ಸರಿದು ,"ಅಂತವನು ಯಾರು ಪ್ರಭೂ?" ಎಂದು ಕೇಳಿದನು. ಯೇಸು "ನಾನು ರೊಟ್ಟಿಯ ತುಂಡನ್ನು ಬಟ್ಟಲಿನಲ್ಲಿ ಅದ್ದಿ ಅದನ್ನು ಯಾರಿಗೆ ಕೊಡುತ್ತೇನೋ ಅವನೇ," ಎಂದು ಹೇಳಿ ರೊಟ್ಟಿಯ ತುಂಡನ್ನು ಅದ್ದಿ ಸಿಮೋನನ ಮಗ ಇಸ್ಕರಿಯೋತಿನ ಯೂದನಿಗೆ ಕೊಟ್ಟರು. ಯೂದನು ಅದನ್ನು ತೆಗೆದುಕೊಂಡದ್ದೇ ತಡ, ಸೈತಾನನು ಅವನನ್ನು ಹೊಕ್ಕನು. ಆಗ ಯೇಸು, " ನೀನು ಮಾಡಬೇಕೆಂದಿರುವುದನ್ನು ಬೇಗನೆ ಮಾಡಿ ಮುಗಿಸು, " ಎಂದರು. ಊಟಕ್ಕೆ ಕುಳಿತಿದ್ದ ಶಿಷ್ಯರಿಗೆ, ಯೇಸು ಹಾಗೇಕೆ ಹೇಳಿದರೆಂದು ಅರ್ಥವಾಗಲಿಲ್ಲ. ಯೂದನ ವಶದಲ್ಲಿ ಹಣದ ಚೀಲವಿದ್ದುದರಿಂದ, ’ಹಬ್ಬಕ್ಕೆ ನಮಗೆ ಬೇಕಾದುದನ್ನು ಕೊಂಡು ಬಾ," ಎಂದೋ, ಬಡವರಿಗೆ ಏನಾದರು ಕೊಡು’ ಎಂದೋ, ಯೇಸು ಹೇಳಿರಬೇಕೆಂದು ಕೆಲವು ಶಿಷ್ಯರು ಭಾವಿಸಿದರು. ಆ ರೊಟ್ಟಿಯ ತುಂಡನ್ನು ತೆಗೆದುಕೊಂಡ ಕೂಡಲೇ ಯೂದನು ಎದ್ದು ಹೊರಟು ಹೋದನು.
ಆಗ ರಾತ್ರಿಯಾಗಿತ್ತು. ಯೂದನು ಹೊರಟು ಹೋದ ಮೇಲೆ ಯೇಸುಸ್ವಾಮಿ ಹೀಗೆಂದರು: " ಈಗ ನರಪುತ್ರನ ಮಹಿಮೆ ಪ್ರಕಟವಾಗುವುದು. ಆತನಲ್ಲಿ ದೇವರ ಮಹಿಮೆಯೂ ಪ್ರಕಟವಾಗುವುದು.ದೇವರ ಮಹಿಮೆ ಆತನಲ್ಲಿ ಪ್ರಕಟವಾದರೆ,ದೇವರೇ ನರಪುತ್ರನ ಮಹಿಮೆಯನ್ನು ತಮ್ಮಲ್ಲಿ ಪ್ರಕಟಪಡಿಸುವರು. ತಕ್ಷಣವೇ ಪ್ರಕಟಪಡಿಸುವರು. ಪ್ರಿಯ ಮಕ್ಕಳೇ, ಇನ್ನು ತುಸು ಕಾಲ ಮಾತ್ರ ನಾನು ನಿಮ್ಮೊಡನೆ ಇರುತ್ತೇನೆ, ಆಮೇಲೆ ನೀವು ನನ್ನನು ಹುಡುಕುವಿರಿ.ಆದರೆ ನಾನು ಹೋಗುವಲ್ಲಿಗೆ ನೀವು ಬರಲಾರಿರಿ ಎಂದು ನಾನು ಯೆಹೂದ್ಯರಿಗೆ ಹೇಳಿದಂತೆಯೇ ನಿಮಗೂ ಹೇಳುತ್ತೇನೆ ಎಂದರು . ಆಗ ಸಿಮೋನ ಪೇತ್ರನು," ಪ್ರಭುವೇ ನೀವೂ ಹೋಗಿವುದಾದರೂ ಎಲ್ಲಿಗೆ?" ಎಂದು ಕೇಳಿದನು. " ನಾನು ಹೋಗುವಲ್ಲಿಗೆ ನೀನು ಈಗ ಬರಲಾರೆ. ಅನಂತರ ಬರುವೆ," ಎಂದು ಯೇಸು ಉತ್ತರ ಕೊಡಲು ಪೇತ್ರನು, "ಈಗಲೇ ನಿಮ್ಮ ಹಿಂದೆ ಬರಲು ಏಕಾಗದು? ಪ್ರಭೂ, ನಿಮಗಾಗಿ ಪ್ರಾಣವನ್ನು ಕೊಡಲೂ ಸಿದ್ಧನಿದ್ದೇನೆ," ಎಂದನು ಆಗ ಯೇಸು," ನನಗಾಗಿ ಪ್ರಾಣವನ್ನು ಕೊಡಲೂ ಸಿದ್ಧನಿರುವೆಯಾ? ನಾನು ನಿನಗೆ ನಿಜವಾಗಿ ಹೇಳುತ್ತೇನೆ ಕೇಳು; ನೀನು ನನ್ನನ್ನು ಅರಿಯನೆಂದು ಮೂರು ಬಾರಿ ತಿರಸ್ಕರಿಸುವ ತನಕ ನಾಳೆ ಮುಂಜಾನೆ ಕೋಳಿ ಕೂಗುವುದಿಲ್ಲ." ಎಂದು ನುಡಿದರು.
No comments:
Post a Comment