ಸಂತ ಲೂಕನ ಶುಭ ಸಂಧೇಶ - 16: 9-15
"ಸಣ್ಣ ವಿಷಯಗಳಲ್ಲಿ ಪ್ರಾಮಾಣಿಕನಾಗಿ ನಡೆದುಕೊಳ್ಳುವವನು ದೊಡ್ಡ ವಿಷಯಗಳಲ್ಲೂ ಪ್ರಾಮಾಣಿಕನಾಗಿ ನಡೆದುಕೊಳ್ಳುತ್ತಾನೆ"
ನಾನು ಹೇಳುವುದನ್ನು ಗಮನಿಸಿರಿ; ಲೌಕಿಕ ಆಸ್ತಿಪಾಸ್ತಿಯಿಂದ ಗೆಳೆಯರನ್ನು ಗಳಿಸಿಕೊಳ್ಳಿರಿ. ಅದು ವ್ಯಯವಾಗಿ ಹೋದಾಗ ನಿಮ್ಮನ್ನು ಅಮರ ನಿವಾಸಕ್ಕೆ ಸ್ವಾಗತಿಸಲಾಗುವುದು. ಸಣ್ಣ ವಿಷಯಗಳಲ್ಲಿ ಪ್ರಾಮಾಣಿಕನಾಗಿ ನಡೆದುಕೊಳ್ಳುವವನು ದೊಡ್ಡ ವಿಷಯಗಳಲ್ಲೂ ಪ್ರಾಮಾಣಿಕನಾಗಿ ನಡೆದುಕೊಳ್ಳುತ್ತಾನೆ. ಸಣ್ಣ ವಿಷಯಗಳಲ್ಲಿ ದ್ರೋಹ ಮಾಡುವವನು ದೊಡ್ಡ ವಿಷಯಗಳಲ್ಲೂ ದ್ರೋಹ ಮಾಡುತ್ತಾನೆ. ಲೌಕಿಕ ಆಸ್ತಿಪಾಸ್ತಿಗಳ ವಿಷಯದಲ್ಲಿ ನೀವು ಪ್ರಾಮಾಣಿಕರಾಗಿ ನಡೆದುಕೊಳ್ಳದೆ ಹೋದರೆ, ನಿಮ್ಮನ್ನು ನಂಬಿ ನೈಜ ಸಂಪತ್ತನ್ನು ನಿಮ್ಮ ವಶಕ್ಕೆ ಕೊಡುವವರಾರು? ಇನ್ನೊಬ್ಬರಿಗೆ ಸೇರಿದ ವಸ್ತುಗಳ ವಿಷಯದಲ್ಲಿ ನೀವು ಪ್ರಾಮಾಣಿಕರಾಗಿ ನಡೆದುಕೊಳ್ಳದೆ ಹೋದರೆ, ನಿಮ್ಮ ಸ್ವಂತಕ್ಕೆ ಏನನ್ನಾದರೂ ಕೊಡುವವರಾರು?
“ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾಗದು; ಅವನು ಒಬ್ಬನನ್ನು ದ್ವೇಷಿಸಿ, ಇನ್ನೊಬ್ಬನನ್ನು ಪ್ರೀತಿಸುತ್ತಾನೆ; ಅಥವಾ ಒಬ್ಬನೊಡನೆ ಹೊಂದಿಕೊಂಡು ಇನ್ನೊಬ್ಬನನ್ನು ತಾತ್ಸಾರ ಮಾಡುತ್ತಾನೆ. ದೇವರಿಗೂ ದ್ರವ್ಯಕ್ಕೂ ಒಟ್ಟಿಗೆ ಸೇವೆಮಾಡಲು ನಿಮ್ಮಿಂದಾಗದು,” ಎಂದರು.
ಹಣದಾಶೆಯಿಂದ ಕೂಡಿದ್ದ ಫರಿಸಾಯರು ಈ ಮಾತುಗಳನ್ನೆಲ್ಲಾ ಕೇಳಿ, ಯೇಸುವನ್ನು ಪರಿಹಾಸ್ಯಮಾಡಿದರು. ಅದಕ್ಕೆ ಯೇಸು, “ನೀವು ಮಾನವರ ಮುಂದೆ ಸತ್ಪುರುಷರೆಂದು ತೋರಿಸಿಕೊಳ್ಳುತ್ತೀರಿ; ದೇವರದರೋ ನಿಮ್ಮ ಅಂತರಂಗವನ್ನು ಅರಿತಿದ್ದಾರೆ. ಮಾನವರಿಗೆ ಅಮೂಲ್ಯವಾದುದು ದೇವರಿಗೆ ಅಸಹ್ಯವಾದುದು,’ ಎಂದರು.
No comments:
Post a Comment