ಸಂತ ಲೂಕನ ಶುಭ ಸಂದೇಶ - 18: 35-43
ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥ ಮಾಡಿದೆ
ಯೇಸುಸ್ವಾಮಿ ಜೆರಿಕೊ ಪಟ್ಟಣವನ್ನು ಸಮೀಪಿಸುತ್ತಿದ್ದಾಗ ಕುರುಡನೊಬ್ಬನು ದಾರಿಯ ಪಕ್ಕದಲ್ಲಿ ಕುಳಿತು ಭಿಕ್ಷೆ ಬೇಡುತ್ತಿದ್ದನು. ಜನಸಂದಣಿಯ ಶಬ್ದವನ್ನು ಆಲಿಸಿ, ಅದೇನೆಂದು ವಿಚಾರಿಸಿದನು. “ನಜರೇತಿನ ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾರೆ,” ಎಂದು ಅವನಿಗೆ ತಿಳಿಸಲಾಯಿತು. ಕೂಡಲೇ ಅವನು, “ಯೇಸುವೇ, ದಾವೀದ ಕುಲಪುತ್ರರೇ, ನನಗೆ ದಯೆ ತೋರಿ,” ಎಂದು ಗಟ್ಟಿಯಾಗಿ ಕೂಗಿಕೊಂಡನು. ಮುಂದೆ ಹೋಗುತ್ತಿದ್ದವರು, “ಸುಮ್ಮನಿರು” ಎಂದು ಅವನನ್ನು ಗದರಿಸಿದರು. ಅವನಾದರೋ, “ದಾವೀದ ಕುಲಪುತ್ರರೇ, ನನಗೆ ದಯೆತೋರಿ,” ಎಂದು ಮತ್ತಷ್ಟು ಗಟ್ಟಿಯಾಗಿ ಕೂಗಿಕೊಂಡನು. ಇದನ್ನು ಕೇಳಿ ಯೇಸು, ಅಲ್ಲೇ ನಿಂತು, ಅವನನ್ನು ತಮ್ಮ ಬಳಿಗೆ ಕರೆದು ತರುವಂತೆ ಅಪ್ಪಣೆ ಮಾಡಿದರು. ಅವನು ಹತ್ತಿರಕ್ಕೆ ಬಂದಾಗ, “ನನ್ನಿಂದ ನಿನಗೇನಾಗಬೇಕು?” ಎಂದು ಕೇಳಲು ಅವನು, “ಸ್ವಾಮೀ, ನನಗೆ ಕಣ್ಣು ಕಾಣುವಂತೆ ಮಾಡಿ,” ಎಂದು ಪ್ರಾರ್ಥಿಸಿದನು. ಯೇಸು ಅವನಿಗೆ, “ದೃಷ್ಟಿಯನ್ನು ಪಡೆ; ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಮಾಡಿದೆ,”ಎಂದರು. ಆ ಕ್ಷಣವೇ ಅವನಿಗೆ ದೃಷ್ಟಿ ಬಂದಿತು. ದೇವರನ್ನು ಸ್ತುತಿಸುತ್ತಾ ಅವನೂ ಯೇಸುವನ್ನು ಹಿಂಬಾಲಿಸಿದನು. ಇದನ್ನು ನೋಡಿದ ಜನರೆಲ್ಲರೂ ದೇವರನ್ನು ಕೊಂಡಾಡಿದರು.
No comments:
Post a Comment