ಸಂತ ಲೂಕನ ಶುಭ ಸಂದೇಶ - 19: 1-10
ನರಪುತ್ರನು ಬಂದಿರುವುದು ಪತಿತರನ್ನು ಅರಸಿ ಉದ್ಧರಿಸುವುದಕ್ಕೆ.
ಯೇಸುಸ್ವಾಮಿ ಜೆರಿಕೊ ಪಟ್ಟಣವನ್ನು ಪ್ರವೇಶಿಸಿ ಅದರ ಬೀದಿಗಳಲ್ಲಿ ಹಾದು ಹೋಗುತ್ತಿದ್ದರು. ಅಲ್ಲಿ ಜಕ್ಕಾಯ ಎಂಬವನಿದ್ದನು. ಅವನು ಸುಂಕ ವಸೂಲಿಯವರ ಮುಖಂಡ ಹಾಗೂ ಧನಾಢ್ಯ. ಯೇಸು ಯಾರೆಂದು ನೋಡಬೇಕೆಂಬ ಅಪೇಕ್ಷೆ ಅವನದು. ಆದರೆ ಅವನು ಗಿಡ್ಡ ವ್ಯಕ್ತಿ. ಜನಜಂಗುಳಿಯ ಮಧ್ಯೆ ಯೇಸುವನ್ನು ನೋಡಲು ಪ್ರಯತ್ನಿಸಿದರೂ ಅವನಿಂದಾಗಲಿಲ್ಲ. ಆದಕಾರಣ ಮುಂದಕ್ಕೆ ಓಡಿಹೋಗಿ ಯೇಸು ಬರುತ್ತಿದ್ದ ಆ ಮಾರ್ಗದಲ್ಲಿ ಒಂದು ಆಲದ ಮರವನ್ನು ಕಂಡು ಅದನ್ನು ಹತ್ತಿದನು. ಯೇಸು ಆ ಸ್ಥಳಕ್ಕೆ ಬಂದು, ತಲೆಯೆತ್ತಿ ನೋಡಿ, “ಜಕ್ಕಾಯಾ, ಒಡನೆ ಇಳಿದು ಬಾ; ಈ ದಿನ ನಿನ್ನ ಮನೆಯಲ್ಲಿ ನಾನು ತಂಗಬೇಕು,” ಎಂದರು. ಜಕ್ಕಾಯನು ತಕ್ಷಣವೇ ಇಳಿದು ಬಂದು ಯೇಸುವನ್ನು ಸಂತೋಷದಿಂದ ಸ್ವಾಗತಿಸಿದನು. ಇದನ್ನು ನೋಡಿದವರೆಲ್ಲರು, “ಯೇಸು ಪಾಪಿಷ್ಠನ ಮನೆಗೆ ಅತಿಥಿಯಾಗಿ ಹೋಗುತ್ತಾನಲ್ಲಾ?” ಎಂದು ಗೊಣಗುಟ್ಟಿದರು.
ಜಕ್ಕಾಯನು ನೆರೆದಿದ್ದ ಜನರ ಮುಂದೆ ಎದ್ದುನಿಂತು ಯೇಸುವಿಗೆ, “ಪ್ರಭುವೇ, ನನ್ನ ಆಸ್ತಿಪಾಸ್ತಿಯಲ್ಲಿ ಅರ್ಧ ಭಾಗವನ್ನು ಬಡಬಗ್ಗರಿಗೆ ಕೊಟ್ಟುಬಿಡುತ್ತೇನೆ. ಯಾರಿಗಾದರೂ ಮೋಸ ಮಾಡಿ ಅವರಿಂದೇನಾದರೂ ನಾನು ಕಸಿದುಕೊಂಡಿದ್ದರೆ ಅದಕ್ಕೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ,” ಎಂದನು. ಆಗ ಯೇಸು, “ಇಂದು, ಈ ಮನೆ ಉದ್ಧಾರವಾಯಿತು. ಇವನು ಕೂಡ ಅಬ್ರಹಾಮನ ವಂಶಕ್ಕೆ ಸೇರಿದವನಲ್ಲವೆ? ನರಪುತ್ರನು ಬಂದಿರುವುದು ಪತಿತರನ್ನು ಅರಸಿ ಉದ್ಧರಿಸುವುದಕ್ಕೆ,” ಎಂದು ಹೇಳಿದರು.
No comments:
Post a Comment