20.05.25 - "ನಾನು ಶಾಂತಿಸಮಾಧಾನವನ್ನು ನಿಮಗೆ ಬಿಟ್ಟು ಹೋಗುತ್ತೇನೆ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 14:19-28

ಆಗ ಅಂತಿಯೋಕ್ಯ ಮತ್ತು ಇಕೋನಿಯದಿಂದ ಕೆಲವು ಯೆಹೂದ್ಯರು ಅಲ್ಲಿಗೆ ಬಂದರು. ಅವರು ಜನಸಮೂಹವನ್ನು ತಮ್ಮಕಡೆ ಒಲಿಸಿಕೊಂಡು ಪೌಲನ ಮೇಲೆ ಕಲ್ಲುಬೀರಿ, ಅವನು ಸತ್ತನೆಂದು ಭಾವಿಸಿ, ಪಟ್ಟಣದಿಂದ ಹೊರಗೆ ಎಳೆದುಹಾಕಿದರು. ಆದರೆ, ಭಕ್ತವಿಶ್ವಾಸಿಗಳು ಬಂದು ಅವನ ಸುತ್ತಲೂ ನೆರೆದಿದ್ದಾಗ ಅವನು ಎದ್ದು ಪಟ್ಟಣವನ್ನು ಪ್ರವೇಶಿಸಿದನು. ಮರುದಿನ ಅವನು ಬಾರ್ನಬನ ಸಂಗಡ ದೆರ್ಬೆಗೆ ಹೊರಟುಹೋದನು. ದೆರ್ಬೆಯಲ್ಲಿ ಪೌಲ ಮತ್ತು ಬಾರ್ನಬ ಶುಭಸಂದೇಶವನ್ನು ಸಾರಿ ಅನೇಕರನ್ನು ಭಕ್ತವಿಶ್ವಾಸಿಗಳನ್ನಾಗಿ ಮಾಡಿಕೊಂಡರು. ಅನಂತರ ಅಲ್ಲಿಂದ ಲುಸ್ತ್ರಕ್ಕೂ ಇಕೋನಿಯಕ್ಕೂ ಅಂತಿಯೋಕ್ಯಕ್ಕೂ ಹಿಂದಿರುಗಿ ಬಂದರು. ಅಲ್ಲಿ ಭಕ್ತಾದಿಗಳನ್ನು ದೃಢಪಡಿಸಿ ವಿಶ್ವಾಸದಲ್ಲಿ ನಿಷ್ಠರಾಗಿರುವಂತೆ ಪ್ರೋತ್ಸಾಹಿಸಿದರು. ‘ಕಷ್ಟಸಂಕಟಗಳ ಮೂಲಕ ನಾವು ದೇವರ ಸಾಮ್ರಾಜ್ಯವನ್ನು ಪ್ರವೇಶಿಸಬೇಕಾಗಿದೆ’ ಎಂದು ಬೋಧಿಸಿದರು. ಇದಲ್ಲದೆ ಪ್ರತಿಯೊಂದು ಕ್ರೈಸ್ತಸಭೆಗೂ ಪ್ರಮುಖರನ್ನು ನೇಮಿಸಿದರು. ಪ್ರಾರ್ಥನೆ ಮತ್ತು ಉಪವಾಸಮಾಡಿ ತಾವು ಅಚಲವಾಗಿ ನಂಬಿದ್ದ ಪ್ರಭುವಿಗೆ ಅವರನ್ನು ಒಪ್ಪಿಸಿದರು. ಇದಾದ ಮೇಲೆ ಪಿಸಿದಿಯ ಪ್ರದೇಶವನ್ನು ದಾಟಿ ಪಾಂಫೀಲಿಯ ಎಂಬಲ್ಲಿಗೆ ಬಂದರು. ಪೆರ್ಗದಲ್ಲಿ ಶುಭಸಂದೇಶವನ್ನು ಸಾರಿ ಅತ್ತಾಲಿಯ ಎಂಬಲ್ಲಿಗೆ ಹೋದರು. ಅಲ್ಲಿಂದ ನೌಕಾಯಾನಮಾಡಿ ಅವರು ಅಂತಿಯೋಕ್ಯಕ್ಕೆ ಮರಳಿದರು. ಈವರೆಗೆ ಮಾಡಿ ಮುಗಿಸಿದ್ದ ಸೇವಾಕಾರ್ಯಕ್ಕಾಗಿ ಅವರು ದೇವರ ಕೃಪಾಶ್ರಯಕ್ಕೆ ಮೊದಲು ಸಮರ್ಪಿತರಾದದ್ದು ಇಲ್ಲಿಯೇ. ಇಲ್ಲಿಗೆ ತಲುಪಿದ ಕೂಡಲೇ ಅವರು ಕ್ರೈಸ್ತಸಭೆಯನ್ನು ಒಟ್ಟುಗೂಡಿಸಿದರು. ದೇವರು ತಮ್ಮೊಡನೆ ಇದ್ದು ಸಾಧಿಸಿದ್ದೆಲ್ಲವನ್ನೂ ವರದಿಮಾಡಿದರು; ಅದೂ ಅಲ್ಲದೆ, ದೇವರು ಅನ್ಯಧರ್ಮೀಯರಿಗೆ ವಿಶ್ವಾಸದ ದ್ವಾರವನ್ನು ಹೇಗೆ ತೆರೆದರೆಂದು ವಿವರಿಸಿದರು. ತರುವಾಯ ಭಕ್ತವಿಶ್ವಾಸಿಗಳ ಸಂಗಡ ಹೆಚ್ಚುಕಾಲ ತಂಗಿದ್ದರು.

ಕೀರ್ತನೆ: 145:10-11, 12-13, 21
ಶ್ಲೋಕ: ಅರಿವರಿಂತು ಜನರು ತನ್ನ ಶೂರಕಾರ್ಯಗಳನು, ಗ್ರಹಿಸುವರು ನಿನ್ನ ರಾಜ್ಯದ ಮಹಿಮೆ ಪ್ರಭಾವವನು.

ಪ್ರಭುನಿನ್ನನು ಸ್ತುತಿಪುದು ಸೃಷ್ಟಿಯೆಲ್ಲವು I
ಕೊಂಡಾಡುವುದು ನಿನ್ನನು ಭಕ್ತ ಸಮೂಹವು II
ಪ್ರಸಿದ್ಧಪಡಿಸುವರು ನಿನ್ನ ರಾಜ್ಯದ ಮಹತ್ವವನು I
ವರ್ಣಿಸುವರವರು ನಿನ್ನ ಶಕ್ತಿ ಸಾಮರ್ಥ್ಯವನು II

ಅರಿವರಿಂತು ಜನರು ನಿನ್ನ ಶೂರ ಕಾರ್ಯಗಳನು I
ಗ್ರಹಿಸುವರು ನಿನ್ನ ರಾಜ್ಯದ ಮಹಿಮೆ ಪ್ರಭಾವವನು II
ಶಾಶ್ವತವಾದುದು ನಿನ್ನ ರಾಜ್ಯವು I
ಇರುವುದೆಂದಿಗು ನಿನ್ನ ಆಳ್ವಿಕೆಯು II

ಸಲಹುವನು ತನ್ನನು ಪ್ರೀತಿಸುವವರೆಲ್ಲರನು I
ನಾಶಮಾಡುವನು ದುರ್ಮಾರ್ಗಿಗಳೆಲ್ಲರನು II

ಶುಭಸಂದೇಶ: ಯೊವಾನ್ನ 14:27-31


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ: "ನಾನು ಶಾಂತಿಸಮಾಧಾನವನ್ನು ನಿಮಗೆ ಬಿಟ್ಟು ಹೋಗುತ್ತೇನೆ; ನನ್ನ ಶಾಂತಿಸಮಾಧಾನವನ್ನು ನಿಮಗೆ ಕೊಡುತ್ತೇನೆ. ಈ ಲೋಕವು ಕೊಡುವ ರೀತಿಯಲ್ಲಿ ನಾನದನ್ನು ನಿಮಗೆ ಕೊಡುವುದಿಲ್ಲ. ನೀವು ಹೃದಯದಲ್ಲಿ ಕಳವಳಗೊಳ್ಳದಿರಿ, ಭಯಪಡಬೇಡಿ. ನಾನು ಹೊರಟುಹೋಗುತ್ತೇನೆಂದೂ ಮತ್ತೆ ನಿಮ್ಮ ಬಳಿಗೆ ಬರುತ್ತೇನೆಂದೂ ನಾನು ಹೇಳಿದ್ದನ್ನು ನೀವು ಕೇಳಿದ್ದೀರಿ. ನೀವು ನನ್ನನ್ನು ಪ್ರೀತಿಸುವವರಾಗಿದ್ದರೆ ನಾನು ಪಿತನ ಬಳಿಗೆ ಹೋಗುತ್ತಿರುವುದನ್ನು ಕುರಿತು ಹಿಗ್ಗುತ್ತಿದ್ದಿರಿ. ಏಕೆಂದರೆ ಪಿತ ನನಗಿಂತಲೂ ಶ್ರೇಷ್ಠರು. ಇದೆಲ್ಲಾ ಈಡೇರುವಾಗ ನೀವು ವಿಶ್ವಾಸಿಸುವಂತೆ ಅದು ಈಡೇರುವುದಕ್ಕೆ ಮುಂಚೆಯೇ ನಿಮಗೆ ತಿಳಿಯಪಡಿಸಿದ್ದೇನೆ. ಇಹದ ಲೋಕಾಧಿಪತಿ ಬರುವ ಸಮಯವಾಯಿತು. ಇನ್ನು ಬಹಳ ಹೊತ್ತು ನಾನು ನಿಮ್ಮೊಡನೆ ಮಾತನಾಡಲು ಕಾಲಾವಕಾಶವಿಲ್ಲ. ನನ್ನ ಮೇಲೆ ಅವನಿಗೆ ಯಾವ ಅಧಿಕಾರವೂ ಇಲ್ಲ. ಆದರೆ ನಾನು ಪಿತನನ್ನು ಪ್ರೀತಿಸುತ್ತೇನೆಂಬುದನ್ನೂ ಅವರು ವಿಧಿಸಿದಂತೆಯೇ ಮಾಡುತ್ತೇನೆ ಎಂಬುದನ್ನೂ ಲೋಕವು ತಿಳಿಯಬೇಕು.” ಎಂದರು.

19.05.25 - “ನನ್ನನ್ನು ಪ್ರೀತಿಸುವವನು ನನ್ನ ಮಾತನ್ನು ಕೈಗೊಂಡು ನಡೆಯುವನು"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 14:5-18

ಅನ್ಯಧರ್ಮದವರು ಮತ್ತು ಯೆಹೂದ್ಯರು ತಮ್ಮ ಅಧಿಕಾರಿಗಳೊಡನೆ ಸೇರಿ ಪ್ರೇಷಿತರಿಗೆ ಕಿರುಕುಳಕೊಡಲು ಹಾಗೂ ಅವರ ಮೇಲೆ ಕಲ್ಲು ತೂರಲು ಪ್ರಯತ್ನಿಸಿದರು. ಇದನ್ನರಿತುಕೊಂಡ ಪ್ರೇಷಿತರು ಅಲ್ಲಿಂದ ಪಲಾಯನ ಮಾಡಿ ಲುಕವೋನಿಯದ ಪಟ್ಟಣಗಳಾದ ಲುಸ್ತ್ರ ಮತ್ತು ದೆರ್ಬೆಗೂ ಅದರ ಸುತ್ತಮುತ್ತಲ ಪ್ರದೇಶಗಳಿಗೂ ಹೊರಟುಹೋದರು. ಅಲ್ಲೂ ಶುಭಸಂದೇಶವನ್ನು ಸಾರತೊಡಗಿದರು. ಲುಸ್ತ್ರದಲ್ಲಿ ಒಬ್ಬ ಕುಂಟನಿದ್ದ. ಅವನೊಬ್ಬ ಹುಟ್ಟುಕುಂಟ. ಎಂದೂ ಕಾಲೂರಿ ನಡೆದವನಲ್ಲ. ಒಮ್ಮೆ, ಅವನು ಕುಳಿತಲ್ಲೇ ಪೌಲನ ಮಾತುಗಳನ್ನು ಆಲಿಸುತ್ತಿದ್ದನು. ಆಗ ಪೌಲನು ಅವನನ್ನೇ ದಿಟ್ಟಿಸಿ ನೋಡಿದನು. ಅವನಲ್ಲಿ ಸ್ವಸ್ಥ ಪಡೆಯುವಷ್ಟು ವಿಶ್ವಾಸವನ್ನು ಕಂಡು ಸ್ವರವೆತ್ತಿ, “ಎದ್ದೇಳು, ಕಾಲೂರಿ ನೆಟ್ಟಗೆ ನಿಲ್ಲು,” ಎಂದು ಹೇಳಿದನು. ಆ ಮನುಷ್ಯನು ನೆಗೆದುನಿಂತು ನಡೆಯಲಾರಂಭಿಸಿದನು. ಪೌಲನು ಮಾಡಿದ ಈ ಮಹತ್ಕಾರ್ಯವನ್ನು ಜನಸಮೂಹವು ನೋಡಿತು. “ದೇವರುಗಳೇ ಮನುಷ್ಯರೂಪದಲ್ಲಿ ನಮ್ಮಲ್ಲಿಗೆ ಬಂದಿದ್ದಾರೆ,” ಎಂದು ತಮ್ಮ ಲುಕವೋನಿಯ ಭಾಷೆಯಲ್ಲಿ ಗಟ್ಟಿಯಾಗಿ ಕೂಗಲಾರಂಭಿಸಿದರು. ಆ ಜನರು ಬಾರ್ನಬನನ್ನು ‘ಜೆಯುಸ್’ ದೇವರೆಂದೂ ಪೌಲನು ಮುಖ್ಯ ಭಾಷಣಕಾರನಾದುದರಿಂದ, ಅವನನ್ನು ‘ಹೆರ್ಮೆ’ ದೇವರೆಂದೂ ಕರೆಯಲಾರಂಭಿಸಿದರು. ಆ ಜೆಯುಸ್ ದೇವರ ಗುಡಿ ಪಟ್ಟಣದ ಮುಂದೆಯೇ ಇತ್ತು. ಅಲ್ಲಿಯ ಅರ್ಚಕನು ದ್ವಾರದ ಬಳಿಗೆ ಹೋರಿಗಳನ್ನೂ ಹೂವಿನ ಹಾರಗಳನ್ನೂ ತೆಗೆದುಕೊಂಡು ಬಂದನು. ಜನರೊಡನೆ ಸೇರಿ ಪ್ರೇಷಿತರಿಗೆ ಬಲಿಯನ್ನು ಅರ್ಪಿಸಬೇಕೆಂದಿದ್ದನು. ಇದನ್ನು ಕೇಳಿದ ಬಾರ್ನಬ ಮತ್ತು ಪೌಲರು ಸಿಟ್ಟಿನಿಂದ ತಮ್ಮ ಮೇಲಂಗಿಗಳನ್ನು ಹರಿದು, ಜನಸಂದಣಿಯತ್ತ ಧಾವಿಸಿ ಹೀಗೆಂದು ಕೂಗಿಹೇಳಿದರು: “ಮಹಾಜನರೇ, ನೀವು ಮಾಡುತ್ತಿರುವುದೇನು? ನಾವು ನಿಮ್ಮಂತೆ ಕೇವಲ ನರಮಾನವರು. ನಾವು ಬಂದಿರುವುದು ನಿಮಗೆ ಶುಭಸಂದೇಶವನ್ನು ಸಾರುವುದಕ್ಕೆ; ನೀವು ಈ ನಿರರ್ಥಕ ಕಾರ್ಯವನ್ನು ಬಿಟ್ಟುಬಿಡಬೇಕು; ಭೂಮ್ಯಾಕಾಶವನ್ನೂ ಸಮುದ್ರ ಸರೋವರವನ್ನೂ ಮತ್ತು ಅವುಗಳಲ್ಲಿರುವ ಸಮಸ್ತ ಸೃಷ್ಟಿಯನ್ನೂ ಉಂಟುಮಾಡಿದ ಜೀವಂತ ದೇವರ ಭಕ್ತರಾಗಬೇಕು. ಹಿಂದಿನ ಕಾಲದಲ್ಲಿ ಸಮಸ್ತ ಜನಾಂಗಗಳು ತಮಗೆ ಇಷ್ಟಬಂದಂತೆ ನಡೆಯಲೆಂದು ದೇವರು ಬಿಟ್ಟುಬಿಟ್ಟರು. ಆದರೆ ತಮ್ಮ ಅಸ್ತಿತ್ವವನ್ನು ಅರಿತುಕೊಳ್ಳುವಂತೆ ಸುಕೃತ್ಯಗಳ ಸಾಕ್ಷ್ಯ ನೀಡುತ್ತಲೇ ಬಂದಿದ್ದಾರೆ; ನಿಮಗೆ ಆಕಾಶದಿಂದ ಮಳೆಯನ್ನೂ ಸಕಾಲಕ್ಕೆ ಬೆಳೆಯನ್ನೂ ಕೊಡುತ್ತಾ ಆಹಾರವನ್ನು ಒದಗಿಸಿ, ನಿಮ್ಮ ಹೃದಯವನ್ನು ಪರಮಾನಂದಗೊಳಿಸುತ್ತಾ ಬಂದಿದ್ದಾರೆ.” ಪ್ರೇಷಿತರು ಇಷ್ಟು ಹೇಳಿದರೂ ಜನರು ತಮಗೆ ಬಲಿಯರ್ಪಿಸುವುದನ್ನು ತಡೆಯುವುದು ಕಷ್ಟಸಾಧ್ಯವಾಯಿತು.

ಕೀರ್ತನೆ: 115:1-2, 3-4, 15-16
ಶ್ಲೋಕ: ನಮಗಲ್ಲ ಹೇ ಪ್ರಭೂ, ನಮಗಲ್ಲ ಮಹಿಮೆ, ನಿನ್ನ ನಾಮಕೇ ಸಲ್ಲಲಿ ಆ ಮಹಿಮೆ.

ನಮಗಲ್ಲ ಹೇ ಪ್ರಭು, ನಮಗಲ್ಲ ಮಹಿಮೆ
ನಿನ್ನ ನಾಮಕೇ ಸಲ್ಲಲಿ ಆ ಮಹಿಮೆ
ನಿನ್ನ ನೀತಿ ಸತ್ಯತೆಗಳ ನಿಮಿತ್ತವೆ
ಅನ್ಯಜನರು ನುಡಿಯುವುದೆಂತು
“ಅವರ ದೇವರೆಲ್ಲಿ?” ಎಂದು

ಪರದಲ್ಲಿಹನು ನಮ್ಮ ದೇವನು
ಗೈವನು ತನಗಿಷ್ಟ ಬಂದುದನು
ಅವರ ವಿಗ್ರಹ ಬರೀ ಬೆಳ್ಳಿ ಬಂಗಾರ
ಅವು ಮಾನವನ ಕೈ ಕೆಲಸಗಳು ಮಾತ್ರ

ಇಹಪರಗಳನು ಉಂಟುಮಾಡಿದ ಪ್ರಭುವಿಂದ
ಲಭಿಸುವಂತಾಗಲಿ ನಿಮಗೆ ಆಶೀರ್ವಾದ
ಪ್ರಭುವಿಗೆ ಸ್ವಂತವಾದುದು ಪರಲೋಕ
ನರರಿಗೆ ಕೊಟ್ಟಿಹನಾತನು ಭೂಲೋಕ

ಶುಭಸಂದೇಶ: ಯೊವಾನ್ನ 14:21-26

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ: "ನನ್ನ ಆಜ್ಞೆಗಳನ್ನು ಅಂಗೀಕರಿಸಿ ಅವುಗಳ ಪ್ರಕಾರ ನಡೆಯುವವನೇ ನನ್ನನ್ನು ಪ್ರೀತಿಸುವವನು. ನನ್ನನ್ನು ಪ್ರೀತಿಸುವವನು ನನ್ನ ಪಿತನಿಗೂ ಪ್ರಿಯನಾಗಿರುವನು. ನಾನೂ ಅವನನ್ನು ಪ್ರೀತಿಸಿ ನನ್ನನ್ನೇ ಅವನಿಗೆ ಸಾಕ್ಷಾತ್ಕರಿಸಿಕೊಡುವೆನು.” ಆಗ ಯೂದನು, (ಈತ ಇಸ್ಕರಿಯೋತಿನ ಯೂದನಲ್ಲ) “ಪ್ರಭೂ, ನೀವು ಈ ಲೋಕಕ್ಕೆ ನಿಮ್ಮನ್ನು ಸಾಕ್ಷಾತ್ಕರಿಸಿಕೊಳ್ಳದೆ ನಮಗೆ ಮಾತ್ರ ಸಾಕ್ಷಾತ್ಕರಿಸಿಕೊಳ್ಳುತ್ತೀರಲ್ಲಾ, ಏಕೆ?” ಎಂದು ಕೇಳಿದನು. ಆಗ ಯೇಸು, “ನನ್ನನ್ನು ಪ್ರೀತಿಸುವವನು ನನ್ನ ಮಾತನ್ನು ಕೈಗೊಂಡು ನಡೆಯುವನು. ಅವನನ್ನು ನನ್ನ ಪಿತನೂ ಪ್ರೀತಿಸುವರು ಮತ್ತು ನಾವಿಬ್ಬರೂ ಅವನ ಬಳಿ ಬಂದು ಅವನಲ್ಲಿ ನೆಲೆಸುವೆವು. ನನ್ನನ್ನು ಪ್ರೀತಿಸದೆ ಇರುವವನು ನನ್ನ ಮಾತನ್ನು ಕೈಗೊಂಡು ನಡೆಯುವುದಿಲ್ಲ. ನೀವು ಕೇಳುತ್ತಿರುವ ಮಾತು ನನ್ನದಲ್ಲ, ನನ್ನನ್ನು ಕಳುಹಿಸಿದ ಪಿತನದೇ. ನಾನು ನಿಮ್ಮೊಡನೆ ಇರುವಾಗಲೇ ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. ಆದರೆ ಪಿತನು ನನ್ನ ಹೆಸರಿನಲ್ಲಿ ಕಳುಹಿಸಿಕೊಡುವ ಪೋಷಕರಾದ ಪವಿತ್ರಾತ್ಮ ನಿಮಗೆ ಎಲ್ಲವನ್ನೂ ಬೋಧಿಸಿ ನಾನು ಹೇಳಿರುವುದನ್ನೆಲ್ಲಾ ನಿಮ್ಮ ನೆನಪಿಗೆ ತರುವರು." ಎಂದರು.

18.05.25 - "ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಿರಿ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 14:21-27

ದೆರ್ಬೆಯಲ್ಲಿ ಪೌಲ ಮತ್ತು ಬಾರ್ನಬ ಶುಭಸಂದೇಶವನ್ನು ಸಾರಿ ಅನೇಕರನ್ನು ಭಕ್ತವಿಶ್ವಾಸಿಗಳನ್ನಾಗಿ ಮಾಡಿಕೊಂಡರು. ಅನಂತರ ಅಲ್ಲಿಂದ ಲುಸ್ತ್ರಕ್ಕೂ ಇಕೋನಿಯಕ್ಕೂ ಅಂತಿಯೋಕ್ಯಕ್ಕೂ ಹಿಂದಿರುಗಿ ಬಂದರು. ಅಲ್ಲಿ ಭಕ್ತಾದಿಗಳನ್ನು ದೃಡಪಡಿಸಿ ವಿಶ್ವಾಸದಲ್ಲಿ ನಿಷ್ಠರಾಗಿರುವಂತೆ ಪ್ರೋತ್ಸಾಹಿಸಿದರು. ಕಷ್ಟಸಂಕಟಗಳ ಮೂಲಕ ನಾವು ದೇವರ ಸಾಮ್ರಾಜ್ಯವನ್ನು ಪ್ರವೇಶಿಸಬೇಕಾಗಿದೆ," ಎಂದು ಬೋಧಿಸಿದರು. ಇದಲ್ಲದೆ ಪ್ರತಿಯೊಂದು ಕ್ರೃಸ್ತಸಭೆಗೂ ಪ್ರಮುಖರನ್ನು ನೇಮಿಸಿದರು. ಪ್ರಾರ್ಥನೆ ಮತ್ತು ಉಪವಾಸ ಮಾಡಿ ತಾವು ಅಚಲವಾಗಿ ನಂಬಿದ್ದ ಪ್ರಭುವಿಗೆ ಅವರನ್ನು ಒಪ್ಪಿಸಿದರು. ಇದಾದ ಮೇಲೆ ಪಿಸಿದಿಯ ಪ್ರದೇಶವನ್ನು ದಾಟಿ ಪಾಂಫೀಲಿಯ ಎಂಬಲ್ಲಿಗೆ ಬಂದರು. ಪೆರ್ಗದಲ್ಲ ಶುಭಸಂದೇಶವನ್ನು ಸಾರಿ ಅತ್ತಾಲಿಯ ಎಂಬಲ್ಲಿಗೆ ಹೋದರು.ಅಲ್ಲಿಂದ ನೌಕಯಾನ ಮಾಡಿ ಅವರು ಅಂತಿಯೋಕ್ಯಕ್ಕೆ ಮರಳಿದರು. ಈವರೆಗೆ ಮಾಡಿ ಮುಗಿಸಿದ್ದ ಸೇವಾಕಾರ್ಯಕ್ಕಾಗಿ ಅವರು ದೇವರ ಕೃಪಾಶ್ರಯಕ್ಕೆ ಮೊದಲು ಸಮರ್ಪಿತರಾದದ್ದು ಇಲ್ಲಿಯೇ. ಇಲ್ಲಿಗೆ ತಲುಪಿದ ಕೂಡಲೇ ಅವರು ಕ್ರೈಸ್ತಸಭೆಯನ್ನು ಒಟ್ಟುಗೂಡಿಸಿದರು. ದೇವರು ತಮ್ಮೊಡನೆ ಇದ್ದು ಸಾಧಿಸಿದ್ದೆಲ್ಲವನ್ನು ವರದಿ ಮಾಡಿದರು; ಅದೂ ಅಲ್ಲದೆ, ದೇವರು ಅನ್ಯಧರ್ಮೀಯರಿಗೆ ವಿಶ್ವಾಸದ ದ್ವಾರವನ್ನು ಹೇಗೆ ತೆರೆದರೆಂದು ವಿವರಿಸಿದರು.

ಕೀರ್ತನೆ: 145:8-9, 10-11, 12-13
ಶ್ಲೋಕ: ದೇವಾ, ನನ್ನೊಡೆಯಾ, ಮಾಡುವೆ ನಿನ್ನ ಗುಣಗಾನ!

ಎರಡನೇ ವಾಚನ: ಪ್ರಕಟನಾಗ್ರಂಥ 21:1-5

ಯೊವಾನ್ನನಾದ ನಾನು ತರುವಾಯ ನೂತನ ಆಕಾಶ ಮಂಡಲನವನ್ನೂ ನೂತನ ಭೂಮಂಡಲವನ್ನೂ ಕಂಡೆ. ಮೊದಲಿದ್ದ ಆಕಾಶಮಂಡಲವೂ ಮೊದಲಿದ್ದ ಭೂಮಂಡಲವೂ ಕಣ್ಮರೆಯಾಗಿ ಹೋದವು. ಸಮೂದ್ರವು ಇನ್ನಿಲ್ಲವಾಯಿತು. ಇದಲ್ಲದೆ, ಪವಿತ್ರ ನಗರವಾದ ನೂತನ ಜೆರುಸಲೇಮ್ ಸ್ವರ್ಗದಿಂದಲೂ ದೇವರ ಸನ್ನಿಧಿಯಿಂದಲೂ ಕೆಳಗಿಳಿದು ಬರುವುದನ್ನು ಕಂಡೆ. ಅದು ಮದುಮಗನನ್ನು ಎದುರುಗೊಳ್ಳುವುದಕ್ಕಾಗಿ ಅಲಂಕೃತಳಾದ ಮದುವಣಗಿತ್ತಿಯಂತೆ ಶೃಂಗಾರಮಯವಾಗಿತ್ತು. ಆಗ ಸಂಹಾಸನದ ಕಡೆಯಿಂದ ಬಂದ ಮಹಾಧ್ವನಿ ಇಂತೆಂದಿತು; "ಇಗೋ ಮಾನವರ ಮಧ್ಯೆಯೇ ಇದೆ ದೇವಾಲಯ, ಆತನವರೊಡನೆ ವಾಸಿಸುವನು; ಅವರಾತನಿಗೆ  ಪ್ರಜೆಗಳಾಗುವರು; ದೇವರೇ ಅವರ ಜೊತೆಗಾರ; ಆತನಲ್ಲದೆ ಅವರಿಗಿಲ್ಲ ಬೇರಾವ ದೇವ. ಒರಸುವನಾತ ಅವರ ಕಂಬನಿಯನ್ನೆಲ್ಲಾ, ಇರದಿನ್ನು ಸಾವು ನೋವು ಅವರಿಗೆಲ್ಲಾ; ಇರವು ಶೋಕ ದುಖಃಗಳಾವುವು, ಮರೆಯಾಗಿ ಹೋದವು.  ಹಿಂದಿನದೆಲ್ಲವು." ಸಿಂಹಾಸನರೂಢನಾಗಿದ್ದವನು ಆಗ, "ಇಗೋ, ನಾವೆಲ್ಲವನ್ನೂ ಹೊಸದಾಗಿಸುತ್ತೇನೆ," ಎಂದನು. ಅಲ್ಲದೆ ಅವನು, "ಇದನ್ನು ನೀನು ಬರೆ, ಈ ಮಾತುಗಳು ಸತ್ಯವಾದುವು ಹಾಗೂ ವಿಶ್ವಾಸಾರ್ಹವಾದುವು," ಎಂದು ಹೇಳಿದನು.

ಶುಭಸಂದೇಶ:ಯೊವಾನ್ನ 13:31-35


ಯೂದನು ಹೊರಟುಹೋದಮೇಲೆ ಯೇಸುಸ್ವಾಮಿ ಹೀಗೆಂದರು: "ಈಗ ನರಪುತ್ರನ ಮಹಿಮೆ ಪ್ರಕಟವಾಗುವುದು. ಆತನಲ್ಲಿ ದೇವರ ಮಹಿಮೆಯೂ ಪ್ರಕಟವಾಗುವುದು. ದೇವರ ಮಹಿಮೆ ಆತನಲ್ಲಿ ಪ್ರಕಟವಾದರೆ, ದೇವರೇ ನರಪುತ್ರನ ಮಹಿಮೆಯನ್ನು ತಮ್ಮಲ್ಲಿ ಪ್ರಕಟಪಡಿಸುವರು. ತಕ್ಷಣವೇ ಪ್ರಕಟಪಡಿಸುವರು. ಪ್ರಿಯಮಕ್ಕಳೇ, ಇನ್ನು ತುಸುಕಾಲ ಮಾತ್ರ ನಾನು ನಿಮ್ಮೊಡನೆ ಇರುತ್ತೇನೆ, ಆಮೇಲೆ ನೀವು ನನ್ನನ್ನು ಹುಡುಕಿವಿರಿ, 'ಆದರೆ ನಾನು ಹೋಗುವಲ್ಲಿಗೆ ನೀವು ಬರಲಾರಿರಿ" ಎಂದು ನಾನು ಯೆಹೂದ್ಯರಿಗೆ ಹೇಳಿದಂತೆಯೇ ನಿಮಗೂ ಹೇಳುತ್ತೇನೆ. ನಿಮಗೊಂದು ಹೊಸ ಆಜ್ಞೆಯನ್ನು ಕೊಡುತ್ತೇನೆ: ಒಬ್ಬರನ್ನೊಬ್ಬರು ಪ್ರೀತಿಸಿರಿ. ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಿರಿ. ನಿಮ್ಮ ಈ ಪರಸ್ಪರ ಪ್ರೀತಿಯನ್ನು ಕಂಡು ನೀವು ನನ್ನ ಶಿಷ್ಯರೆಂದು ಜನರೆಲ್ಲರೂ ಅರಿತುಕೊಳ್ಳುವರು.

17.05.25 - "ನಾನು ಪಿತನಲ್ಲಿ ಇದ್ದೇನೆ. ಪಿತನು ನನ್ನಲ್ಲಿ ಇದ್ದಾರೆ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 13:44-52

ಮುಂದಿನ ಸಬ್ಬತ್ದಿನ ದೇವರ ವಾಕ್ಯವನ್ನು ಕೇಳಲು ನಗರಕ್ಕೆ ನಗರವೇ ಆಗಮಿಸಿತು. ಜನರು ತಂಡೋಪತಂಡವಾಗಿ ಬರುತ್ತಿರುವುದನ್ನು ಕಂಡು ಯೆಹೂದ್ಯರು ಮತ್ಸರಭರಿತರಾದರು. ಅವರು ಪೌಲನ ಮಾತುಮಾತಿಗೂ ವಿರೋಧವಾಗಿ ವಾದಿಸಿ ದೂಷಣೆಮಾಡತೊಡಗಿದರು. ಪೌಲ ಮತ್ತು ಬಾರ್ನಬ ಮತ್ತಷ್ಟು ಧೈರ್ಯದಿಂದ ಮಾತನಾಡಿದರು: “ದೇವರ ವಾಕ್ಯವನ್ನು ಮೊಟ್ಟಮೊದಲು ನಿಮಗೆ ಬೋಧಿಸುವುದು ಅಗತ್ಯವಾಗಿತ್ತು. ಆದರೆ ನೀವು ಅದನ್ನು ನಿರಾಕರಿಸಿ ಅಮರಜೀವಕ್ಕೆ ಅಪಾತ್ರರೆಂದು ನಿಮ್ಮನ್ನು ನೀವೇ ತೀರ್ಮಾನಿಸಿಕೊಂಡಿರಿ. ಆದುದರಿಂದ ನಾವು ನಿಮ್ಮನ್ನು ಬಿಟ್ಟು ಅನ್ಯಧರ್ಮದವರ ಕಡೆ ಹೋಗುತ್ತೇವೆ. ಏಕೆಂದರೆ ಪ್ರಭು ನಮಗಿತ್ತ ಆಜ್ಞೆ ಹೀಗಿದೆ: ಅನ್ಯಧರ್ಮೀಯರಿಗೆ ಜ್ಯೋತಿಯನ್ನಾಗಿಯೂ ವಿಶ್ವಪೂರ್ತಿಗೆ ಜೀವೋದ್ಧಾರದ ಸಾಧನವಾಗಿಯೂ ನಾನು ನಿನ್ನನ್ನು ನೇಮಿಸಿದ್ದೇನೆ.’ ಇದನ್ನು ಕೇಳಿದ ಅನ್ಯಧರ್ಮೀಯರು ಸಂತೋಷಪಟ್ಟು ದೇವರ ಸಂದೇಶಕ್ಕಾಗಿ ಸ್ತುತಿಸಿದರು. ಅಮರಜೀವಕ್ಕೆ ಆಯ್ಕೆಯಾದವರೆಲ್ಲರೂ ವಿಶ್ವಾಸಿಗಳಾದರು. ಪ್ರಭುವಿನ ವಾಕ್ಯ ಆ ಪ್ರದೇಶದಲ್ಲೆಲ್ಲಾ ಹಬ್ಬಿ ಹರಡಿತು. ಯೆಹೂದ್ಯರಾದರೋ ದೇವಭಕ್ತೆಯರಾದ ಕುಲೀನ ಸ್ತ್ರೀಯರನ್ನೂ ಪಟ್ಟಣದ ಪ್ರಮುಖ ಜನರನ್ನೂ ಪ್ರಚೋದಿಸಿದರು: ಪೌಲ ಮತ್ತು ಬಾರ್ನಬರನ್ನು ಹಿಂಸಿಸುವಂತೆ ಹುರಿದುಂಬಿಸಿ, ಅವರನ್ನು ಆ ಪ್ರದೇಶದಿಂದ ಹೊರಗಟ್ಟಿದರು. ಇದಕ್ಕೆ ಪ್ರತಿಯಾಗಿ ಪ್ರೇಷಿತರು ತಮ್ಮ ಪಾದಧೂಳನ್ನು ಝಾಡಿಸಿ ಇಕೋನಿಯಕ್ಕೆ ಹೊರಟುಹೋದರು. ಭಕ್ತ ವಿಶ್ವಾಸಿಗಳಾದರೋ ಪರಮಾನಂದಪಟ್ಟರು, ಪವಿತ್ರಾತ್ಮಭರಿತರಾದರು.

ಕೀರ್ತನೆ: 98:1, 2-3, 3-4

ಶ್ಲೋಕ: ಕಂಡು ಬಂದಿತು ಜಗದ ಎಲ್ಲೆ ಎಲ್ಲೆಗೆ, ನಮ್ಮ ದೇವ ಸಾಧಿಸಿದ ಜಯಗಳಿಗೆ

ಹಾಡಿರಿ ಪ್ರಭುವಿಗೆ ಹೊಸಗೀತೆಯೊಂದನು I
ಎಸಗಿಹನಾತನು ಪವಾಡಕಾರ್ಯಗಳನು I
ಗಳಿಸಿತಾತನ ಕೈ ಪೂತಭುಜ ಗೆಲುವನು II
ಪ್ರಕಟಿಸಿಹನಾ ಪ್ರಭು ತನ್ನ ಮುಕ್ತಿವಿಧಾನವನು I
ರಾಷ್ಟ್ರಗಳಿಗೆ ತೋರಿಸಿಹನು ಜೀವೋದ್ಧಾರಕಾ ಶಕ್ತಿಯನು II
ಕಂಡುಬಂದಿತು ಜಗದ ಎಲ್ಲೆ ಎಲ್ಲೆಗೆ I
ನಮ್ಮ ದೇವ ಸಾಧಿಸಿದ ಜಯಗಳಿಕೆ II
ಸ್ಮರಿಸಿಕೊಂಡನಾ ಪ್ರಭು ತನ್ನ ಪ್ರೀತಿಯನು I
ಇಸ್ರಯೇಲ್ ಕುಲದ ಬಗ್ಗೆ ತನ್ನ ಸತ್ಯತೆಯನು II

ಕಂಡುಬಂದಿತು ಜಗದ ಎಲ್ಲೆ ಎಲ್ಲೆಗೆ I
ನಮ್ಮ ದೇವ ಸಾಧಿಸಿದ ಜಯಗಳಿಕೆ II
ಸ್ಮರಿಸಿಕೊಂಡನಾ ಪ್ರಭು ತನ್ನ ಪ್ರೀತಿಯನು I
ಇಸ್ರಯೇಲ್ ಕುಲದ ಬಗ್ಗೆ ತನ್ನ ಸತ್ಯತೆಯನು II
ಭೂನಿವಾಸಿಗಳೇಮಾಡಿರಿ ಜಯಕಾರ ಪ್ರಭುವಿಗೆ I
   ಮುದದಿ ಹಾಡಿರಿಮಾಡಿರಿ ಸುಮಧುರ ಭಜನೆ II

ಶುಭಸಂದೇಶ ಯೊವಾನ್ನ 14:7-14

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ, "ನೀವು ನನ್ನನ್ನು ಅರಿತವರಾಗಿದ್ದರೆ ನನ್ನ ಪಿತನನ್ನು ಕೂಡ ಅರಿಯುತ್ತಿದ್ದಿರಿ. ಈಗಿನಿಂದ ಅವರನ್ನು ನೀವು ಅರಿತವರಾಗಿದ್ದೀರಿ ಹಾಗೂ ಕಂಡೂ ಇದ್ದೀರಿ,” ಎಂದು ನುಡಿದರು. ಆಗ ಫಿಲಿಪ್ಪನು, “ಪ್ರಭೂ, ನಮಗೆ ಪಿತನನ್ನು ತೋರಿಸಿ; ಅಷ್ಟೇ ಸಾಕು,” ಎಂದನು. ಅದಕ್ಕೆ ಉತ್ತರವಾಗಿ ಯೇಸು, “ನಾನು ಇಷ್ಟುಕಾಲ ನಿಮ್ಮೊಡನೆ ಇದ್ದರೂ ನಾನು ಯಾರೆಂಬುದನ್ನು ನೀನು ಅರಿತುಕೊಳ್ಳಲಿಲ್ಲವೆ? ನನ್ನನ್ನು ನೋಡಿದವನು ಪಿತನನ್ನೇ ನೋಡಿದವನಾಗಿದ್ದಾನೆ. ಹೀಗಿರುವಾಗ, ಫಿಲಿಪ್ಪನೇ, ‘ನಮಗೆ ಪಿತನನ್ನು ತೋರಿಸಿ’ ಎಂದು ಹೇಗೆ ಕೇಳುತ್ತೀ? ನಾನು ಪಿತನಲ್ಲಿ ಇದ್ದೇನೆ, ಪಿತನು ನನ್ನಲ್ಲಿ ಇದ್ದಾರೆ. ಇದನ್ನು ನೀನು ವಿಶ್ವಾಸಿಸುವುದಿಲ್ಲವೇ? ನಾನು ನಿಮಗೆ ಹೇಳುವ ಮಾತುಗಳನ್ನು ನನ್ನಷ್ಟಕ್ಕೆ ನಾನೇ ಆಡುತ್ತಿಲ್ಲ. ಪಿತನೇ ನನ್ನಲ್ಲಿದ್ದುಕೊಂಡು ತಮ್ಮ ಕಾರ್ಯವನ್ನು ಸಾಧಿಸುತ್ತಾರೆ. ‘ನಾನು ಪಿತನಲ್ಲಿ ಇದ್ದೇನೆ. ಪಿತನು ನನ್ನಲ್ಲಿ ಇದ್ದಾರೆ,’ ಎನ್ನುವ ನನ್ನ ಮಾತುಗಳನ್ನು ವಿಶ್ವಾಸಿಸಿರಿ; ಇಲ್ಲವೇ, ನಾನು ಸಾಧಿಸಿದ ಸುಕೃತ್ಯಗಳ ನಿಮಿತ್ತದಿಂದಾದರೂ ವಿಶ್ವಾಸಿಸಿರಿ. ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನನ್ನಲ್ಲಿವಿಶ್ವಾಸವುಳ್ಳವನು ನಾನು ಸಾಧಿಸುವ ಕಾರ್ಯಗಳನ್ನು ಆತನೂ ಸಾಧಿಸುವನು. ಅಷ್ಟೇ ಏಕೆ, ಅವುಗಳಿಗಿಂತಲೂ ಮಹತ್ತಾದುವುಗಳನ್ನು ಸಾಧಿಸುವನು. ಏಕೆಂದರೆ ನಾನು ಪಿತನ ಬಳಿಗೆ ಹೋಗುತ್ತೇನೆ. ಇದಲ್ಲದೆ ನೀವು ನನ್ನ ಹೆಸರಿನಲ್ಲಿ ಕೇಳಿಕೊಳ್ಳುವುದನ್ನೆಲ್ಲಾ ಮಾಡುತ್ತೇನೆ. ಹೀಗೆ ಪಿತನಿಗೆ ಪುತ್ರನಲ್ಲಿ ಮಹಿಮೆ ಉಂಟಾಗುವುದು. ಹೌದು, ನನ್ನ ಹೆಸರಿನಲ್ಲಿ ನೀವು ಏನನ್ನು ಕೇಳಿದರೂ ನಾನು ಅದನ್ನು ಮಾಡಿಯೇ ತೀರುವೆನು." ಎಂದರು

16.05.25 - "ನಾನಿರುವೆಡೆಯಲ್ಲಿಯೇ ನೀವೂ ಇರಬೇಕು. ನಾನು ಹೋಗುವ ಎಡೆಗೆ ಮಾರ್ಗವು ನಿಮಗೆ ತಿಳಿದೇ ಇದೆ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 13:26-33

ಅಂತಿಯೋಕ್ಯದಲ್ಲಿ ಪ್ರಾರ್ಥನಾಮಂದಿರದಲ್ಲಿ ಪೌಲನು ಜನರನ್ನುದ್ದೇಶಿಸಿ, ಇಂತೆಂದನು. “ನನ್ನ ಸಹೋದರರೇ, ಅಬ್ರಹಾಮನ ಸಂತತಿಯವರೇ, ಮತ್ತು ದೇವರಲ್ಲಿ ಭಯಭಕ್ತಿ ಉಳ್ಳ ಇನ್ನಿತರರೇ, ಈ ಜೀವೋದ್ಧಾರದ ಸಂದೇಶವನ್ನು ಕಳುಹಿಸಿರುವುದು ನಮಗಾಗಿಯೇ. ಜೆರುಸಲೇಮಿನ ನಿವಾಸಿಗಳು ಮತ್ತು ಅವರ ಅಧಿಕಾರಿಗಳು ಯೇಸು ಲೋಕೋದ್ಧಾರಕನೆಂದು ಅರಿತುಕೊಳ್ಳಲಿಲ್ಲ. ಪ್ರತಿ ಸಬ್ಬತ್ದಿನ ಓದಲಾದ ಪ್ರವಾದಿಗಳ ವಾಕ್ಯಗಳನ್ನು ಅವರು ಗ್ರಹಿಸಿಕೊಳ್ಳಲಿಲ್ಲ. ಯೇಸುವಿಗೆ ಮರಣದಂಡನೆಯನ್ನು ವಿಧಿಸಿ ಆ ಪ್ರವಾದನೆಗಳು ನಿಜವಾಗಲು ಕಾರಣರಾದರು. ಮರಣದಂಡನೆ ವಿಧಿಸಲು ಯಾವ ಕಾರಣವಿಲ್ಲದಿದ್ದರೂ ಅವರನ್ನು ಕೊಲ್ಲಿಸುವಂತೆ ಪಿಲಾತನನ್ನು ಕೇಳಿಕೊಂಡರು. ಯೇಸುವನ್ನು ಕುರಿತು ಪವಿತ್ರಗ್ರಂಥ ಹೇಳುವುದೆಲ್ಲವೂ ನೆರವೇರಿದ ಮೇಲೆ ಅವರನ್ನು ಶಿಲುಬೆಯಿಂದ ಕೆಳಗಿಳಿಸಿ ಸಮಾಧಿಮಾಡಿದರು. ಆದರೆ ದೇವರು ಅವರನ್ನು ಮರಣದಿಂದ ಪುನರುತ್ಥಾನಗೊಳಿಸಿದರು. ಹೀಗೆ ಪುನರುತ್ಥಾನ ಹೊಂದಿದ ಯೇಸು, ಗಲಿಲೇಯದಿಂದ ತಮ್ಮೊಡನೆ ಜೆರುಸಲೇಮಿಗೆ ಬಂದಿದ್ದವರಿಗೆ ಕಾಣಿಸಿಕೊಂಡರು. ಆ ವ್ಯಕ್ತಿಗಳೇ ಈಗ ನಮ್ಮ ಜನರ ಮಧ್ಯೆ ಇರುವ ಯೇಸುವಿನ ಪರವಾದ ಸಾಕ್ಷಿಗಳು. ನಾವೀಗ ನಿಮಗೆ ಸಾರುವ ಶುಭಸಂದೇಶ ಇದು: ದೇವರು ಯೇಸುಸ್ವಾಮಿಯನ್ನು ಪುನರುತ್ಥಾನಗೊಳಿಸಿದ್ದಾರೆ. ಈ ಮೂಲಕ ನಮ್ಮ ಪೂರ್ವಜರಿಗೆ ಮಾಡಿದ ವಾಗ್ದಾನವನ್ನು ಅವರ ಸಂತತಿಯಾದ ನಮಗಿಂದು ಈಡೇರಿಸಿದ್ದಾರೆ. ಎರಡನೆಯ ಕೀರ್ತನೆಯಲ್ಲಿ ಹೀಗೆಂದು ಬರೆದಿದೆ: ‘ನೀನೇ ನನ್ನ ಪುತ್ರ, ನಾನಿಂದು ನಿನ್ನ ಜನಕ.

ಕೀರ್ತನೆ: 2:6-7, 8-9, 10-11
ಶ್ಲೋಕ: ಈ ದಿನ ನಾನಿನ್ನ ಹಡೆದಿಹನು; ನೀನೆನಗೆ ಮಗನು

ಶುಭಸಂದೇಶ ಯೊವಾನ್ನ 14:1-6

ಯೇಸು ಸ್ವಾಮಿ ತಮ್ಮ ಮಾತನ್ನು ಮುಂದುವರಿಸುತ್ತಾ ಶಿಷ್ಯರಿಗೆ, “ನೀವು ಹೃದಯದಲ್ಲಿ ಕಳವಳಗೊಳ್ಳದಿರಿ; ದೇವರಲ್ಲಿ ವಿಶ್ವಾಸವಿಡಿ; ನನ್ನಲ್ಲಿಯೂ ವಿಶ್ವಾಸವಿಡಿ. ನನ್ನ ಪಿತನ ಆಸ್ಥಾನದಲ್ಲಿ ಅನೇಕ ನಿವಾಸಗಳು ಇವೆ. ಹಾಗಿಲ್ಲದ ಪಕ್ಷದಲ್ಲಿ ನಿಮಗೆ ತಿಳಿಸುತ್ತಿದ್ದೆ. ನಾನು ಹೋಗಿ ನಿಮಗೆ ಸ್ಥಳವನ್ನು ಅಣಿಗೊಳಿಸುತ್ತೇನೆ. 3ಅಣಿಗೊಳಿಸಿದ ಬಳಿಕ ಹಿಂದಿರುಗಿ ಬಂದು ನಿಮ್ಮನ್ನು ಕರೆದೊಯ್ಯುತ್ತೇನೆ. ನಾನಿರುವೆಡೆಯಲ್ಲಿಯೇ ನೀವೂ ಇರಬೇಕು. ನಾನು ಹೋಗುವ ಎಡೆಗೆ ಮಾರ್ಗವು ನಿಮಗೆ ತಿಳಿದೇ ಇದೆ,” ಎಂದು ಹೇಳಿದರು. ಆಗ ತೋಮನು, “ಪ್ರಭುವೇ, ನೀವು ಎಲ್ಲಿಗೆ ಹೋಗುತ್ತೀರೆಂದು ನಮಗೆ ತಿಳಿಯದು; ಅಂದಮೇಲೆ ಅಲ್ಲಿಗೆ ಹೋಗುವ ಮಾರ್ಗವು ಹೇಗೆ ತಿಳಿದೀತು?” ಎಂದು ಕೇಳಿದನು. ಅದಕ್ಕೆ ಯೇಸು, “ಮಾರ್ಗವೂ ಸತ್ಯವೂ ಜೀವವೂ ನಾನೇ. ನನ್ನ ಮುಖಾಂತರ ಬಾರದ ಹೊರತು ಯಾರೂ ಪಿತನ ಬಳಿಗೆ ಬರಲಾರರು. ಎಂದರು.

15.05.25 - "ನನ್ನೊಡನೆ ಉಂಡವನೇ ನನಗೆ ದ್ರೋಹ ಬಗೆದನು"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 13:13-25

ಪೌಲ ಮತ್ತು ಸಂಗಡಿಗರು ಪಾಫೊಸಿನಿಂದ ನೌಕಾಯಾನ ಮಾಡಿ ಪಾಂಫೀಲಿಯದ ಪೆರ್ಗ ಎಂಬಲ್ಲಿಗೆ ಬಂದರು. ಮಾರ್ಕನೆನಿಸಿಕೊಂಡ ಯೊವಾನ್ನನು ಅವರನ್ನು ಅಲ್ಲೇ ಬಿಟ್ಟು ಜೆರುಸಲೇಮಿಗೆ ಹಿಂದಿರುಗಿದನು. ಉಳಿದವರು ಪೆರ್ಗದಿಂದ ಹೊರಟು ಪಿಸಿದಿಯ ಸೀಮೆಗೆ ಸೇರಿದ ಅಂತಿಯೋಕ್ಯಕ್ಕೆ ಬಂದರು. ಸಬ್ಬತ್ದಿನದಲ್ಲಿ ಪ್ರಾರ್ಥನಾಮಂದಿರಕ್ಕೆ ಹೋಗಿ ಕುಳಿತುಕೊಂಡರು. ಧರ್ಮಶಾಸ್ತ್ರ ಮತ್ತು ಪ್ರವಾದಿಗಳ ಗ್ರಂಥಗಳಿಂದ ವಾಚನವಾದ ನಂತರ ಪ್ರಾರ್ಥನಾಮಂದಿರದ ಅಧಿಕಾರಿಗಳು ಅವರಿಗೆ, “ಸಹೋದರರೇ, ಜನರಿಗೆ ಉಪಯುಕ್ತವಾದ ಹಿತೋಕ್ತಿ ಏನಾದರೂ ಇದ್ದರೆ ಉಪದೇಶಮಾಡಿ,” ಎಂದು ಕೇಳಿಕೊಂಡರು. ಆಗ ಪೌಲನು ಎದ್ದು ನಿಂತು ಜನರಿಗೆ ನಿಶ್ಯಬ್ದವಾಗಿರುವಂತೆ ಕೈಸನ್ನೆ ಮಾಡಿ, ಹೀಗೆಂದು ಉಪದೇಶ ಮಾಡಲಾರಂಭಿಸಿದನು: “ಇಸ್ರಯೇಲ್ ಬಾಂಧವರೇ, ಹಾಗು ನಿಜದೇವರಲ್ಲಿ ಭಯಭಕ್ತಿಯುಳ್ಳ ಇನ್ನಿತರರೇ, ಕೇಳಿ: ಇಸ್ರಯೇಲ್ ಜನರ ದೇವರು ನಮ್ಮ ಪೂರ್ವಜರನ್ನು ಆರಿಸಿಕೊಂಡರು. ಈಜಿಪ್ಟಿನಲ್ಲಿ ಪರಕೀಯರಾಗಿ ವಾಸಿಸುತ್ತಿದ್ದ ನಮ್ಮ ಜನರನ್ನು ಪ್ರಬಲ ಜನಾಂಗವನ್ನಾಗಿ ಮಾಡಿದರು. ತಮ್ಮ ಮಹಾಶಕ್ತಿಯನ್ನು ಪ್ರಯೋಗಿಸಿ ಅವರನ್ನು ಈಜಿಪ್ಟಿನಿಂದ ಹೊರಗೆ ತಂದರು. ಬೆಂಗಾಡಿನಲ್ಲಿ ಸುಮಾರು ನಾಲ್ವತ್ತು ವರ್ಷಗಳ ಕಾಲ ಅವರನ್ನು ಕಾಪಾಡಿದರು. ಕಾನಾನ್ ನಾಡಿನ ಏಳು ಜನಾಂಗಗಳನ್ನು ನಾಶಮಾಡಿ ನಮ್ಮ ಜನರಿಗೆ ಆ ನಾಡನ್ನು ಸ್ವಾಸ್ತ್ಯವಾಗಿ ಕೊಟ್ಟರು. ಹೀಗೆ ಸುಮಾರು ನಾನೂರ ಐವತ್ತು ವರ್ಷಗಳು ಕಳೆದವು. ಅನಂತರ ಪ್ರವಾದಿ ಸಮುವೇಲನ ಕಾಲದವರೆಗೆ ದೇವರು ಅವರಿಗೆ ನ್ಯಾಯಾಧಿಪತಿಗಳನ್ನು ಕಳುಹಿಸಿದರು. ತಮಗೆ ಅರಸನು ಬೇಕೆಂದು ಕೇಳಿಕೊಂಡಾಗ ದೇವರು ಬೆನ್ಯಾಮೀನ ಗೋತ್ರದ ಕೀಷನ ಮಗ ಸೌಲನನ್ನು ನೇಮಿಸಿದರು. ಇವನು ನಾಲ್ವತ್ತು ವರ್ಷ ಆಳಿದನು. ಅನಂತರ ದೇವರು ಸೌಲನನ್ನು ತ್ಯಜಿಸಿ ದಾವೀದನನ್ನು ಅರಸನನ್ನಾಗಿ ನೇಮಿಸಿದರು. ಇವನ ಬಗ್ಗೆ ದೇವರು, “ಜೆಸ್ಸೆಯನ ಮಗ ದಾವೀದನು ನನಗೆ ಮೆಚ್ಚುಗೆಯಾದ ವ್ಯಕ್ತಿ; ಇವನು ನನ್ನ ಆಶೆ ಆಕಾಂಕ್ಷೆಗಳನ್ನೆಲ್ಲಾ ಪೂರೈಸುವನು,” ಎಂದು ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಈ ದಾವೀದನ ಸಂತತಿಯಿಂದಲೇ ದೇವರು ತಮ್ಮ ವಾಗ್ದಾನದ ಪ್ರಕಾರ ಇಸ್ರಯೇಲ್ ಜನರಿಗೆ ಒಬ್ಬ ಉದ್ಧಾರಕನನ್ನು ಕಳುಹಿಸಿದರು. ಇವರೇ ಯೇಸುಸ್ವಾಮಿ. ಇವರ ಆಗಮನಕ್ಕೆ ಸಿದ್ಧತೆಯಾಗಿ, ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿ ಸ್ನಾನದೀಕ್ಷೆಯನ್ನು ಪಡೆಯಬೇಕೆಂದು ಯೊವಾನ್ನನು ಇಸ್ರಯೇಲಿನ ಎಲ್ಲ ಜನರಿಗೆ ಸಾರಿದರು. ಯೊವಾನ್ನನು ತನ್ನ ನಿಯೋಗವನ್ನು ಪೂರೈಸುತ್ತಿದ್ದಂತೆ ಜನರಿಗೆ, ‘ನಾನು ಯಾರೆಂದು ನೀವು ನೆನೆಸುತ್ತೀರಿ? ನೀವು ಎದುರು ನೋಡುತ್ತಿರುವ ವ್ಯಕ್ತಿ ನಾನಲ್ಲ. ನನ್ನ ಅನಂತರ ಒಬ್ಬರು ಬರುವರು; ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ,’ ಎಂದನು.

ಕೀರ್ತನೆ:  89:2-3, 21-22, 25, 27
ಶ್ಲೋಕ: ಪ್ರಭು, ಕೀರ್ತಿಸುವೆನು ಸದಾ ನಿನ್ನಚಲ ಪ್ರೀತಿಯನು

ನಿನ್ನಚಲ ಪ್ರೀತಿ ಪ್ರಭುನನಗೆ ಶಾಶ್ವತ ಸಿದ್ಧ 
ನಿನ್ನ ಸತ್ಯತೆ ಆಗಸದಂತೆ ಸ್ಥಿರ ಸ್ಥಾಪಿತ 
ನೀನೆಂದೆ, “ನಾನಾರಿಸಿದವನೊಡನೆ ಮಾಡಿರುವೆ ಒಪ್ಪಂದ 
ನನ್ನ ದಾಸ ದಾವೀದನಿಗಿತ್ತಿರುವೆ ಈ ತೆರವಾದ ಶಪಥ 

ನನ್ನ ಕೈಯ ಆಸರೆ ಅವನಿಗಿದೆ ಸತತ 
ನನ್ನ ಭುಜಬಲವು ಅವನಿಗೆ ಶಕ್ತಿಯುತ 
ಸಿಗನು ಶತ್ರುವಿನ ಕುತಂತ್ರಕೆ 
ಕುಗ್ಗನು ಕೆಡುಕರಾ ದರ್ಪಕೆ 

ತೊರೆನದಿಗಳಿಂದ ಸಾಗರದವರೆಗೆ 
ಅಧಿಕಾರ ನೀಡುವೆ ಅವನ ಕೈಗೆ 

ಮಾಡುವೆನವನನು ಜೇಷ್ಠಪುತ್ರನನ್ನಾಗಿ
ಭೂರಾಜರುಗಳೊಳು ಅತ್ಯುನ್ನತನನ್ನಾಗಿ

ಶುಭಸಂದೇಶ :  ಯೊವಾನ್ನ 13:16-20

ತಮ್ಮ ಶಿಷ್ಯರ ಪಾದಗಳಾನ್ನು ತೊಳೆದ ನಂತರ ಯೇಸು ಹೀಗೆಂದರು: "ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ; ಧಣಿಗಿಂತ ದಾಸನು ದೊಡ್ಡವನಲ್ಲ. ಅಂತೆಯೇ ಕಳುಹಿಸಲಾದವನು ಕಳುಹಿಸುವವನಿಗಿಂತ ಶ್ರೇಷ್ಠನಲ್ಲ. ಇದನ್ನೆಲ್ಲಾ ಅರ್ಥಮಾಡಿಕೊಂಡು ಅದರಂತೆ ನಡೆದರೆ, ನೀವು ಧನ್ಯರು ! “ನಾನು ನಿಮ್ಮೆಲ್ಲರನ್ನೂ ಕುರಿತು ಹೀಗೆ ಹೇಳುತ್ತಾ ಇಲ್ಲ. ಯಾರನ್ನು ನಾನು ಆರಿಸಿಕೊಂಡಿದ್ದೇನೆಂಬುದು ನನಗೆ ಗೊತ್ತು. ಆದರೆ ‘ನನ್ನೊಡನೆ ಉಂಡವನೇ ನನಗೆ ದ್ರೋಹ ಬಗೆದನು’ ಎಂಬುದಾಗಿ ಪವಿತ್ರಗ್ರಂಥದಲ್ಲಿ ಬರೆದಿದೆ. ಆ ಮಾತು ಈಡೇರಬೇಕಾಗಿದೆ. ಅದು ಈಡೇರುವಾಗ ‘ಇರುವಾತನು ನಾನೇ’ ಎಂದು ನೀವು ವಿಶ್ವಾಸಿಸುವಂತೆ ಅದು ಈಡೇರುವುದಕ್ಕೆ ಮುಂಚೆಯೇ ನಿಮಗೆ ಹೇಳುತ್ತಿದ್ದೇನೆ. ನಾನು ಕಳುಹಿಸಿದಾತನನ್ನು ಬರಮಾಡಿಕೊಳ್ಳುವವನು ನನ್ನನ್ನೇ ಬರಮಾಡಿಕೊಳ್ಳುತ್ತಾನೆ. ನನ್ನನ್ನು ಬರಮಾಡಿಕೊಳ್ಳುವವನು ನನ್ನನ್ನು ಕಳುಹಿಸಿದಾತನನ್ನೇ ಬರಮಾಡಿಕೊಳ್ಳುತ್ತಾನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ,”.

14.05.25 - "ಗೆಳೆಯರಿಗಾಗಿ ತನ್ನ ಪ್ರಾಣವನ್ನೇ ಧಾರೆಯೆರೆಯುವ ಪ್ರೀತಿಗಿಂತ ಮಿಗಿಲಾದ ಪ್ರೀತಿ ಯಾರಲ್ಲೂ ಇಲ್ಲ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 1: 15-17, 20-26

ಸ್ವಲ್ಪ ದಿನಗಳ ನಂತರ ಸುಮಾರು ನೂರ ಇಪ್ಪತ್ತು ಮಂದಿ ಭಕ್ತವಿಶ್ವಾಸಿಗಳು ಸಭೆ ಸೇರಿದ್ದರು. ಆಗ ಪೇತ್ರನು ಎದ್ದುನಿಂತು ಹೀಗೆಂದನು: “ಪ್ರಿಯ ಸಹೋದರರೇ, ಯೇಸುವನ್ನು ಬಂಧಿಸಿದವರಿಗೆ ಮುಂದಾಳಾಗಿದ್ದವನು ಯೂದನು. ಅವನ ವಿಷಯವಾಗಿ ಪವಿತ್ರಾತ್ಮ ಅವರು ದಾವೀದನ ಮುಖಾಂತರ ಮುಂತಿಳಿಸಿದ ವಾಕ್ಯ ನೆರವೇರಲೇಬೇಕಾಗಿತ್ತು. ಈ ಯೂದನು ನಮ್ಮಲ್ಲಿ ಒಬ್ಬನಾಗಿದ್ದವನು. ನಾವು ಕೈಗೊಂಡಿರುವ ಸೇವೆಯಲ್ಲಿ ಭಾಗಿಯಾಗಲು ಆಯ್ಕೆಯಾಗಿದ್ದವನು. ‘ಅವನ ಮನೆ ಹಾಳಾಗಲಿ, ಅದು ಪಾಳುಬೀಳಲಿ,’ ಎಂದೂ, ‘ಅವನ ಸ್ಥಾನ ಇನ್ನೊಬ್ಬನದಾಗಲಿ,’ ಎಂದೂ ಕೀರ್ತನ ಗ್ರಂಥದಲ್ಲಿ ಬರೆಯಲಾಗಿದೆ. “ಆದುದರಿಂದ ಪ್ರಭು ಯೇಸುವಿನ ಪುನರುತ್ಥಾನಕ್ಕೆ ನಮ್ಮೊಡನೆ ಸಾಕ್ಷಿಯಾಗಿರಲು ಒಬ್ಬನನ್ನು ನಾವು ಆರಿಸಬೇಕಾಗಿದೆ. ಅಂಥವನು ಯೇಸುವಿನ ಸೇವಾಸಂಚಾರದಲ್ಲೆಲ್ಲಾ ನಮ್ಮೊಡನೆ ಇದ್ದವನಾಗಿರಬೇಕು. ಅಂದರೆ, ಸ್ನಾನಿಕ ಯೊವಾನ್ನನು ಸ್ನಾನದೀಕ್ಷೆಯನ್ನು ಕುರಿತು ಬೋಧಿಸಿದ ದಿನದಿಂದ ಯೇಸುವಿನ ಸ್ವರ್ಗಾರೋಹಣದ ದಿನದವರೆಗೂ ನಮ್ಮ ಸಂಗಡ ಇದ್ದವನಾಗಿರಬೇಕು.” ಆಗ ಬಾರ್ನಬ ಎಂದು ಹೆಸರಿಸಲಾದ ಜೋಸೆಫ್ (ಇವನನ್ನು ಯುಸ್ತ ಎಂದೂ ಕರೆಯುತ್ತಿದ್ದರು) ಮತ್ತು ಮತ್ತೀಯ ಎಂಬ ಇಬ್ಬರ ಹೆಸರನ್ನು ಸೂಚಿಸಲಾಯಿತು. ಅನಂತರ ಎಲ್ಲರೂ ಪ್ರಾರ್ಥನೆಮಾಡುತ್ತಾ, “ಸರ್ವೇಶ್ವರಾ, ನೀವು ಸರ್ವರ ಅಂತರಂಗಗಳನ್ನು ಅರಿತಿರುವಿರಿ. ಯೂದನು ತನ್ನ ಪ್ರೇಷಿತಸ್ಥಾನದಿಂದ ಭ್ರಷ್ಟನಾದ, ತನಗೆ ತಕ್ಕುದಾದ ಸ್ಥಳಕ್ಕೆ ತೆರಳಿದ. ಈ ಸೇವಾಸ್ಥಾನಕ್ಕೆ ಇವರಿಬ್ಬರಲ್ಲಿ ನೀವು ಆರಿಸಿದವನು ಯಾರೆಂದು ನಮಗೆ ತೋರಿಸಿರಿ,” ಎಂದರು. ಅನಂತರ ಚೀಟು ಹಾಕಿದರು. ಅದು ಮತ್ತೀಯನ ಪರವಾಗಿತ್ತು. ಅವನನ್ನು ಹನ್ನೊಂದು ಮಂದಿಯೊಡನೆ ಪ್ರೇಷಿತಸ್ಥಾನಕ್ಕೆ ಸೇರಿಸಿಕೊಳ್ಳಲಾಯಿತು.

ಕೀರ್ತನೆ: 113:1-2, 3-4, 5-6, 7-8
ಶ್ಲೋಕ: ಕೂರಿಸುವನಾತ ಅವರನು ಅಧಿಪತಿಗಳ ನಡುವೆ, ತನ್ನ ಪ್ರಜೆಯನಾಳುವಾ ಅಧಿಪತಿಗಳ ನಡುವೆ.

ಅಲ್ಲೆಲೂಯ I
ಪ್ರಭುವಿನ ದಾಸರೇಸ್ತುತಿಮಾಡಿ I
ಪ್ರಭುವಿನ ನಾಮಸ್ತುತಿಯನು ಮಾಡಿ II
ಪ್ರಭುವಿನ ಸಿರಿನಾಮವು ಪೂಜ್ಯ I
ಇಂದಿಗೂ ಎಂದೆಂದಿಗೂ ಪೂಜ್ಯ II

ಪ್ರಭುವಿನಾ ಸಿರಿನಾಮವು ಸ್ತುತ್ಯ I
ಪೂರ್ವ ಪಶ್ಚಿಮದವರೆಗೂ ಸ್ತುತ್ಯ II
ಸಕಲ ಜಾತಿಜನಾಂಗಗಳಲಿ ಪ್ರಭು ಶ್ರೇಷ್ಠ I
ಆತನ ಮಹಿಮೆ ಗಗನಕ್ಕಿಂತಲೂ ಉತ್ಕೃಷ್ಟ II

ನಮ್ಮ ಪ್ರಭು ದೇವನಂತೆ ಯಾರು ಸಮರ್ಥ I
ಉನ್ನತದಲಿ ಆಸನಾರೂಢನು ಆತ I
ಇಹಪರಗಳನು ವೀಕ್ಷಿಸಲಾತ ಶಕ್ತ II

ದೀನರನು ಎಬ್ಬಿಸುವನು ಧೂಳಿನಿಂದ I
ಬಡವರನು ಎತ್ತುವನು ತಿಪ್ಪೆಯಿಂದ II
ಕೂರಿಸುವನಾತ ಅವರನು ಅಧಿಪತಿಗಳ ನಡುವೆ I
ತನ್ನ ಪ್ರಜೆಯನಾಳುವಾ ಅಧಿಪತಿಗಳ ನಡುವೆ II

ಶುಭಸಂದೇಶ: ಯೊವಾನ್ನ 15:9-17

ಯೇಸು ತಮ್ಮ ಶಿಷ್ಯರಿಗೆ ಹೇಳಿದ್ದೇನೆಂದರೆ: "ಪಿತನು ನನ್ನನ್ನು ಪ್ರೀತಿಸಿದಂತೆಯೇ ನಾನೂ ನಿಮ್ಮನ್ನು ಪ್ರೀತಿಸಿದ್ದೇನೆ. ನನ್ನ ಪ್ರೀತಿಯಲ್ಲಿ ನೆಲೆಗೊಂಡು ನಿಲ್ಲಿರಿ. ನನ್ನ ಪಿತನು ಕೊಟ್ಟ ಆಜ್ಞೆಗಳನ್ನು ಪಾಲಿಸಿ ಅವರ ಪ್ರೀತಿಯಲ್ಲಿ ನಾನು ನೆಲೆಗೊಂಡಿರುವ ಹಾಗೆ ನೀವು ಕೂಡ ನಾನು ಕೊಟ್ಟ ಆಜ್ಞೆಗಳನ್ನು ಪಾಲಿಸಿದರೆ ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ. “ನನ್ನಲ್ಲಿರುವ ಆನಂದವು ನಿಮ್ಮಲ್ಲಿ ಇರಬೇಕೆಂತಲೂ ನಿಮ್ಮ ಆನಂದವು ತುಂಬಿ ತುಳುಕಬೇಕೆಂತಲೂ ಇದನ್ನೆಲ್ಲಾ ನಿಮಗೆ ಹೇಳುತ್ತಿದ್ದೇನೆ. ನಾನು ಕೊಡುವ ಆಜ್ಞೆ ಏನೆಂದರೆ: ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು. ಗೆಳೆಯರಿಗಾಗಿ ತನ್ನ ಪ್ರಾಣವನ್ನೇ ಧಾರೆಯೆರೆಯುವ ಪ್ರೀತಿಗಿಂತ ಮಿಗಿಲಾದ ಪ್ರೀತಿ ಯಾರಲ್ಲೂ ಇಲ್ಲ. ನಾನು ಆಜ್ಞಾಪಿಸಿದಂತೆ ನಡೆದರೆ ನೀವು ನನ್ನ ಗೆಳೆಯರು. ನಾನಿನ್ನು ನಿಮ್ಮನ್ನು ದಾಸರೆಂದು ಕರೆಯುವುದಿಲ್ಲ. ಧಣಿಯ ಕೆಲಸಕಾರ್ಯಗಳು ದಾಸನಿಗೆ ತಿಳಿಯವು. ನಾನಾದರೋ ಪಿತನಿಂದ ಕೇಳಿಸಿಕೊಂಡದ್ದನ್ನೆಲ್ಲಾ ನಿಮಗೆ ತಿಳಿಸಿದ್ದೇನೆ. ಈ ಕಾರಣ ನಿಮ್ಮನ್ನು ಗೆಳೆಯರೆಂದು ಕರೆದಿದ್ದೇನೆ. ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ, ನಾನೇ ನಿಮ್ಮನ್ನು ಆರಿಸಿಕೊಂಡಿದ್ದೇನೆ. ನೀವು ಲೋಕಕ್ಕೆ ಹೋಗಬೇಕು, ಸಫಲರಾಗಬೇಕು; ಆ ಫಲ ಶಾಶ್ವತವಾಗಿರಬೇಕೆಂದೇ ನಿಮ್ಮನ್ನು ನೇಮಿಸಿದ್ದೇನೆ. ಹೀಗಿರಲಾಗಿ ನೀವು ನನ್ನ ಹೆಸರಿನಲ್ಲಿ ಪಿತನಿಂದ ಏನು ಕೇಳಿದರೂ ನಿಮಗೆ ಅದು ಸಿಗುವುದು. ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನಾನು ನಿಮಗೆ ಕೊಡುವ ಆಜ್ಞೆ."

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...