18.04.25 - "ನನ್ನ ಪಿತನೇ ಕೊಟ್ಟಿರುವ ಕಷ್ಟದ ಕೊಡವಿದು; ಇದರಲ್ಲಿರುವುದನ್ನು ನಾನು ಕುಡಿಯದೆ ಹೋದರೆ ಹೇಗೆ?”

 ಮೊದಲನೇ ವಾಚನ: ಯೆಶಾಯ 52:13-53:12
























ನನ್ನ ದಾಸನಿದೋ, ಕೃತಾರ್ಥ ಆಗುವವನಾತ ಮಹಿಮಾನ್ವಿತ ಏರುವನು ಉನ್ನತ ಪದವಿಗಾತ. ಆತನ ಮುಖ ನರಮಾನವರ ಮುಖಕ್ಕಿಂತ ಆತನ ರೂಪ ನರಪುತ್ರರ ರೂಪಕ್ಕಿಂತ ವಿಕಾರಗೊಂಡಿದೆ ನಿಜ; ಆದರೆ ಹಲವರು ನೋಡಿ ಆದರು ಚಕಿತ. ಅಂತೆಯೆ ಹಲರಾಷ್ಟ್ರಗಳು ಚಕಿತವಾಗುವುವು ಅಚ್ಚರಿಗೊಂಡು ಬಾಯಿಮುಚ್ಚಿಕೊಳ್ಳುವರು ಅರಸರು ಆತನನು ಕಂಡು. ಏಕೆನೆ, ನೋಡುವರವರು ಅಪೂರ್ವ ಸಂಗತಿಯೊಂದನು ಗ್ರಹಿಸಿಕೊಳ್ಳುವರವರು ಎಂದೂ ಕೇಳದ ವಿಷಯವನು. ನಂಬುವರಾರು ನಾವು ಕೇಳಿದ ಸಂಗತಿಯನು? ಗುರುತಿಸುವರಾರು ಸರ್ವೇಶ್ವರನ ಶಕ್ತಿಯನು? ಸರ್ವೇಶ್ವರನ ಮುಂದೆ ಬೆಳೆದನಾತ ಸಸಿಯಂತೆ ಒಣನೆಲದೊಳಗೆ ಇಳಿಯುವ ಬೇರಿನಂತೆ. ಆತನಲಿ ಅಂದಚೆಂದಗಳಾವುವೂ ಇರಲಿಲ್ಲ, ನೋಡಲು ಲಕ್ಷಣವಾದುವು ಏನೂ ಕಾಣಲಿಲ್ಲ. ಧಿಕ್ಕರಿಸಲ್ಪಟ್ಟವನು, ಮನುಜರಿಂದ ತಿರಸ್ಕೃತನು, ದುಃಖಕ್ರಾಂತನು, ಕಷ್ಟಸಂಕಟ ಅನುಭವಿಸಿದವನು. ನೋಡಿದವರು ಮುಖ ತಿರುಗಿಸುವಷ್ಟು ನಿಂದಕನು ! ನಾವೋ ಲಕ್ಷ್ಯಕ್ಕೂ ತೆಗೆದುಕೊಳ್ಳಲಿಲ್ಲ ಆತನನು. ನಿಜವಾಗಿ ವಹಿಸಿಕೊಂಡನಾತ ನಮ್ಮ ಬಾಧೆಗಳನು ಹೊರೆಯಂತೆ ಹೊತ್ತನಾತ ನಮ್ಮ ಕಷ್ಟಸಂಕಟಗಳನು ನಾವು ಭಾವಿಸಿದ್ದಾದರು ಏನು? ಆತ ದೇವರಿಂದ ಬಾಧಿತನೆಂದು ದಂಡನೆಗೆ ಗುರಿಯಾದವನು, ತಿರಸ್ಕೃತನಾದವನೆಂದು ! ನಿನ್ನ ಸೃಷ್ಟಿಕರ್ತನೆ ನಿನಗೆ ಪತಿಯು ‘ಸೇನಾಧೀಶ್ವರನಾದ ಸರ್ವೇಶ್ವರ’ ಆತನ ಹೆಸರು. ಇಸ್ರಯೇಲಿನ ಪರಮಪಾವನನೆ ನಿನ್ನ ಉದ್ಧಾರಕನು. ‘ಸರ್ವಲೋಕದ ದೇವ’ ಆತನ ನಾಮಧೇಯ. ತೊಳಲುತ್ತಿದ್ದೆವು ನಾವೆಲ್ಲರು ದಾರಿತಪ್ಪಿದ ಕುರಿಗಳಂತೆ ಹಿಡಿಯುತ್ತಿದ್ದನು ಪ್ರತಿಯೊಬ್ಬನು ತನ್ನ ತನ್ನ ದಾರಿಯನ್ನೆ. ನಮ್ಮೆಲ್ಲರ ದೋಷವನು ಸರ್ವೇಶ್ವರ ಹಾಕಿದ್ದ ಆತನ ಮೇಲೆ. ಬಾಧೆಗಳಿಗೊಳಗಾದ, ಹಿಂಸೆ ಸಹಿಸಿದ ಆತ ಬಾಯ್ದೆರೆಯದೆ. ಹೌದು, ಬಾಯ್ದೆರೆಯದಿದ್ದ ಬಲಿಗೊಯ್ದ ಕುರಿಮರಿಯಂತೆ ತುಪ್ಪಟ ಕತ್ತರಿಸುವವನ ಮುಂದಿರುವ ಮೂಕ ಕುರಿಮರಿಯಂತೆ. ಎಳೆದೊಯ್ದರು ಬಂಧನದಿಂದ, ನ್ಯಾಯಸ್ಥಾನದಿಂದ ಹೌದು, ದೂರಮಾಡಿದರು ಆತನನು ಜೀವಲೋಕದಿಂದ. ವಧೆಯಾದನಾತ ನಮ್ಮ ಜನರ ಪಾಪದ ದೆಸೆಯಿಂದ. ಆದರೂ ಸಮಕಾಲೀನವರಾರು ಮರುಗಲಿಲ್ಲ ಕನಿಕರದಿಂದ. ಮಾಡಲಿಲ್ಲ ಆತ ಯಾವ ಪಾಪಕೃತ್ಯ ಅವನ ಬಾಯಲಿರಲಿಲ್ಲ ವಂಚನೆಯ ವಾಕ್ಯ ಹೂಣಿದರಾತನನು ಸತ್ತಮೇಲೆ ದುರುಳರ ಹಾಗೂ ದುಷ್ಕರ್ಮಿಗಳ ನಡುವೆ. ಸರ್ವೇಶ್ವರನ ಚಿತ್ತದಂತೆ ಜಜ್ಜರಿತನಾದ ಹಿಂಸೆಬಾಧೆಗಳಿಂದ ಪಾಪ ಪ್ರಾಯಶ್ಚಿತ್ತಕ್ಕಾಗಿ ತನ್ನ ಪ್ರಾಣವನೆ ಸಮರ್ಪಿಸಿದ. ಈ ಪರಿ ಕಾಣುವನು ತನ್ನ ಸಿರಿಸಂತಾನವನು ಪಡೆಯುವನು ಚಿರಜೀವವನು ತಾನೇ ನೆರವೇರಿಸುವೆನು ಸರ್ವೇಶ್ವರನ ಸಂಕಲ್ಪವನು. ತೃಪ್ತನಾಗುವನಾತ ಕಂಡು ತನ್ನ ಪ್ರಾಣಯಾತನೆಯ ಫಲವನು. ಸಜ್ಜನನಾದ ಆ ನನ್ನ ದಾಸ ತರುವನು ಸನ್ಮಾರ್ಗಕೆ ಬಹು ಜನರನು. ತಾನೇ ಹೊತ್ತುಕೊಳ್ಳುವನು ಅವರ ಅಪರಾಧಗಳ ಹೊರೆಯನು. ಎಂತಲೆ ನೀಡುವೆ ಇವನಿಗೆ ಪಾಲನ್ನು ದೊಡ್ಡವರ ಸಂಗಡ ಹಂಚಿಕೊಳ್ಳುವನು ಸೂರೆಯನ್ನು ಬಲಿಷ್ಠರ ಸಂಗಡ ಏಕೆನೆ ಪ್ರಾಣವನ್ನೆ ಧಾರೆಯೆರೆದು ಮರಣಹೊಂದಿದ ದ್ರೋಹಿಗಳೊಂದಿಗೆ ತನ್ನನೆ ಒಂದಾಗಿ ಎಣಿಸಿಕೊಂಡ. ಅನೇಕರ ಪಾಪವನ್ನು ಹೊತ್ತು ಅವರಿಗಾಗಿ ಪ್ರಾರ್ಥಿಸಿದ.

ಕೀರ್ತನೆ: 31:2, 6, 12-13, 15-16, 17, 25

ಶ್ಲೋಕ: ಪಿತನೇ, ನನ್ನಾತ್ಮವನ್ನು ನಿಮ್ಮ ಕೈಗೊಪ್ಪಿಸುತ್ತೇನೆ

ನನಗೆ ಕಿವಿಗೊಡು ಪ್ರಭು, ನನ್ನನು ಬಿಡಿಸು ಬೇಗನೆ |
ನನ್ನಾಶ್ರಯಗಿರಿ, ದುರ್ಗಾಸ್ಥಾನವಾಗಿರು
ನೀನೆ ||
ಇಲ್ಲಸಲ್ಲದ ದೇವರನು ಅವಲಂಬಿಪರನು ನೀ ಒಲ್ಲೆ |
ನಾನಾದರೋ ಪ್ರಭು ಭರವಸೆಯಿಟ್ಟಿರುವುದು ನಿನ್ನಲ್ಲೆ ||

ನುಚ್ಚು ನೂರಾದೆ, ಮಡಕೆಚಿಪ್ಪಿನಂತಾದೆ |
ಸತ್ತವರಂತಾದೆ : ನೆನಪಿಗೆ ಬಾರದಾದೆ ||
ನನಗೆ ವಿರುದ್ಧ ಜನರಾಡುವ ಗುಸುಗುಸು
ಮಾತು ಕೇಳಿ ಬರುತಿದೆ |
ಭಯಭೀತಿ ಎನ್ನನಾವರಿಸಿದೆ, ಒಳಸಂಚು,
ಪ್ರಾಣಹರಣ ನಡೆಯುತಿವೆ

ನಿನ್ನ ಕೈಯಲ್ಲಿದೆ ನನ್ನ ಇಡೀ
ಜೀವಮಾನ |
ಬೆನ್ನಟ್ಟಿ ಬರುವ ವೈರಿಯಂದ ರಕ್ಷಿಸೆನ್ನ ||
ಬೆಳಗಿಸಲಿ‌ ದಾಸನನು ನಿನ್ನ ಮುಖ ತೇಜವು |
ಕಾಪಾಡಲಿ ಎನ್ನನು ನಿನ್ನನಂತ ಪ್ರೇಮವು ||

ನಿನಗೆ ಮೊರೆಯಿಡುವೆ, ನನಗಾಗದಿರಲಿ
ಹೇ ಪ್ರಭು ಮಾನಭಂಗ |

ದುರುಳರಿಗಾಗಲಿ‌ ಆಶಾಭಂಗ ಮೂಕರಾಗವರು ಸೇರಲಿ ನರಕ |

ಎರಡನೇ ವಾಚನ: ಹಿಬ್ರಿಯರಿಗೆ 4:14-16, 5:7-9

ಸ್ವರ್ಗಲೋಕಕ್ಕೆ ಏರಿಹೋದ ದೇವರ ಪುತ್ರನಾದ ಯೇಸುವೇ ನಮಗೆ ಶ್ರೇಷ್ಠ ಹಾಗೂ ಪ್ರಧಾನಯಾಜಕ ಆಗಿರುವುದರಿಂದ ನಾವು ನಿವೇದಿಸುವ ವಿಶ್ವಾಸದಲ್ಲಿ ಸದೃಢರಾಗಿರೋಣ. ಈ ಪ್ರಧಾನ ಯಾಜಕ, ನಮ್ಮ ದೌರ್ಬಲ್ಯಗಳನ್ನು ಕಂಡು ಅನುಕಂಪ ತೋರದೆ ಇರುವವರಲ್ಲ. ಅವರು, ನಮ್ಮಂತೆಯೇ ಇದ್ದುಕೊಂಡು ಎಲ್ಲಾ ವಿಷಯಗಳಲ್ಲೂ ಶೋಧನೆ-ಸಂಕಟಗಳನ್ನು ಅನುಭವಿಸಿದರು. ಆದರೆ ಪಾಪವನ್ನು ಮಾತ್ರ ಮಾಡಲಿಲ್ಲ. ಆದಕಾರಣ, ನಾವು ಸಮಯೋಚಿತ ಸಹಾಯವನ್ನು ಅವರ ಅನುಗ್ರಹದಿಂದ ಪಡೆಯಲು ಮತ್ತು ಅವರ ಕರುಣೆಯನ್ನು ಸವಿಯಲು ಧೈರ್ಯದಿಂದ ಅವರ ಕೃಪಾಸನವನ್ನು ಸಮೀಪಿಸೋಣ. ಕ್ರಿಸ್ತಯೇಸು ಈ ಭೂಲೋಕದಲ್ಲಿದ್ದಾಗ, ತಮ್ಮನ್ನು ಮರಣದಿಂದ ಕಾಪಾಡಲು ಶಕ್ತರಾದ ದೇವರನ್ನು ಉಚ್ಚಸ್ವರದಿಂದ ಕೂಗುತ್ತಾ ಕಣ್ಣೀರಿಡುತ್ತಾ ವಿನಂತಿಸಿ ಪ್ರಾರ್ಥಿಸಿದರು. ಅವರ ಭಯಭಕ್ತಿಯನ್ನು ನೋಡಿ ದೇವರು ಅವರ ಮೊರೆಯನ್ನು ಆಲಿಸಿದರು. ಯೇಸು, ದೇವರ ಪುತ್ರರಾಗಿದ್ದರೂ ಹಿಂಸೆಬಾಧೆಗಳನ್ನು ತಪ್ಪಿಸಿಕೊಳ್ಳದೆ ವಿಧೇಯತೆಯನ್ನು ಅನುಭವದಿಂದ ಅರಿತುಕೊಂಡರು. ಹೀಗೆ, ಅವರು ಸ್ವತಃ ಪರಿಪೂರ್ಣರಾಗಿ ತಮಗೆ ವಿಧೇಯರಾಗುವ ಎಲ್ಲರಿಗೂ ಶಾಶ್ವತ ಜೀವೋದ್ಧಾರಕ್ಕೆ ಕಾರಣರಾದರು.

ಶುಭಸಂದೇಶ: ಯೊವಾನ್ನ 18:1-19:42


ಯೇಸುಸ್ವಾಮಿ ತಮ್ಮ ಶಿಷ್ಯರೊಡನೆ ಹೊರಟು, ಕೆದ್ರೋನ್ ಹಳ್ಳವನ್ನು ದಾಟಿ, ಅಲ್ಲೇ ಇದ್ದ ತೋಟವನ್ನು ಹೊಕ್ಕರು. ಅವರು ತಮ್ಮ ಶಿಷ್ಯರೊಡನೆ ಆಗಾಗ ಅಲ್ಲಿಗೆ ಬರುವುದು ವಾಡಿಕೆ. ಅವರನ್ನು ಹಿಡಿದುಕೊಡಲಿದ್ದ ಯೂದನಿಗೆ ಆ ಸ್ಥಳ ಚೆನ್ನಾಗಿ ಗೊತ್ತಿತ್ತು ಆದುದರಿಂದ ಯೂದನು ಸೈನಿಕರ ಒಂದು ತಂಡವನ್ನೂ ಮುಖ್ಯ ಯಾಜಕರು ಮತ್ತು ಫರಿಸಾಯರು ಕಳುಹಿಸಿದ ಕಾವಲಾಳುಗಳನ್ನೂ ಕರೆದುಕೊಂಡು ದೀವಟಿಗೆ, ಪಂಜು ಮತ್ತು ಆಯುಧಗಳ ಸಮೇತ ಅಲ್ಲಿಗೆ ಬಂದನು. ಯೇಸುಸ್ವಾಮಿಗೆ ತಮಗೆ ಸಂಭವಿಸಲಿರುವುದೆಲ್ಲವೂ ತಿಳಿದಿತ್ತು ಎಂದೇ ಮುಂದೆ ಬಂದು, “ನೀವು ಯಾರನ್ನು ಹುಡುಕುತ್ತಿದ್ದೀರಿ?” ಎಂದು ಕೇಳಿದರು. ಅವರು, “ನಜರೇತಿನ ಯೇಸುವನ್ನು” ಎಂದರು. ಯೇಸು, “ನಾನೇ ಆತನು” ಎಂದು ಉತ್ತರಕೊಟ್ಟರು. ಅವರನ್ನು ಹಿಡಿದುಕೊಡಲಿದ್ದ ಗುರುದ್ರೋಹಿ ಯೂದನು ಅವರ ಸಂಗಡವೇ ನಿಂತುಕೊಂಡಿದ್ದನು. “ನಾನೇ ಆತನು,” ಎಂದು ಯೇಸು ನುಡಿಯುತ್ತಲೇ, ಅವರೆಲ್ಲರೂ ಹಿಂದೆ ಸರಿದು ನೆಲದ ಮೇಲೆ ಬಿದ್ದರು. ಯೇಸು ಮತ್ತೊಮ್ಮೆ, “ನೀವು ಯಾರನ್ನು ಹುಡುಕುತ್ತಿದ್ದೀರಿ?” ಎಂದು ಕೇಳಲು, “ನಜರೇತಿನ ಯೇಸುವನ್ನು” ಎಂದು ಉತ್ತರ ಬಂದಿತು. ಅದಕ್ಕೆ ಯೇಸು, “ನಾನೇ ಆತನೆಂದು ನಿಮಗೆ ಆಗಲೇ ಹೇಳಿದೆ. ನೀವು ಹುಡುಕುತ್ತಾ ಇರುವುದು ನನ್ನನ್ನಾದರೆ, ಮಿಕ್ಕ ಇವರನ್ನು ಹೋಗಬಿಡಿ,” ಎಂದು ನುಡಿದರು. ‘ನೀವು ನನಗೆ ಕೊಟ್ಟವರಲ್ಲಿ ಒಬ್ಬನನ್ನಾದರೂ ಕಳೆದು ಕೊಳ್ಳಲಿಲ್ಲ’ ಎಂದು ತಾವೇ ನುಡಿದ ಮಾತು ನೆರವೇರುವಂತೆ ಯೇಸು ಹೀಗೆಂದರು ಅಷ್ಟರೊಳಗೆ ಸಿಮೋನ ಪೇತ್ರನು ತನ್ನಲ್ಲಿದ್ದ ಖಡ್ಗವನ್ನು ಹಿರಿದು, ಪ್ರಧಾನ ಯಾಜಕನ ಸೇವಕನಾದ ಮಾಲ್ಕನ ಬಲಗಿವಿಯನ್ನು ಕತ್ತರಿಸಿಬಿಟ್ಟನು. ಆಗ ಯೇಸು ಪೇತ್ರನಿಗೆ, “ನಿನ್ನ ಖಡ್ಗವನ್ನು ಒರೆಯಲ್ಲಿ ಹಾಕು. ನನ್ನ ಪಿತನೇ ಕೊಟ್ಟಿರುವ ಕಷ್ಟದ ಕೊಡವಿದು; ಇದರಲ್ಲಿರುವುದನ್ನು ನಾನು ಕುಡಿಯದೆ ಹೋದರೆ ಹೇಗೆ?” ಎಂದು ನುಡಿದರು.

ಅನ್ನನ ಮುಂದೆ ಯೇಸು ಅನಂತರ ಸೈನಿಕರು, ಸಹಸ್ರಾಧಿಪತಿ ಹಾಗು ಯೆಹೂದ್ಯರು ಕಳುಹಿಸಿದ್ದ ಕಾವಲಾಳುಗಳು ಯೇಸುವನ್ನು ಹಿಡಿದು ಕಟ್ಟಿ ಮೊದಲು ಅನ್ನನ ಬಳಿಗೆ ಕೊಂಡೊಯ್ದರು. ಅನ್ನನು, ಆ ವರ್ಷ ಪ್ರಧಾನ ಯಜಕನಾಗಿದ್ದ ಕಾಯಫನ ಮಾವ. ಸಮಸ್ತ ಜನತೆಗಾಗಿ ಒಬ್ಬನು ಸತ್ತರೆ ವಿಹಿತವೆಂದು ಸಲಹೆ ಕೊಟ್ಟವನು ಈ ಕಾಯಫನೇ. ಗುರುವನ್ನು ಅಲ್ಲಗಳೆದ ಪೇತ್ರ ಸಿಮೋನ್ ಪೇತ್ರನು ಮತ್ತು ಪ್ರಧಾನ ಯಾಜಕನಿಗೆ ಪರಿಚಿತನಾಗಿದ್ದ ಇನ್ನೊಬ್ಬ ಶಿಷ್ಯನು ಯೇಸುಸ್ವಾಮಿಯನ್ನು ಹಿಂಬಾಲಿಸುತ್ತಾ ಹೋದರು. ಪರಿಚಿತನಾಗಿದ್ದ ಶಿಷ್ಯನು ಯೇಸುವಿನೊಡನೆ ಪ್ರಧಾನ ಯಾಜಕನ ಮನೆಯ ಅಂಗಳವನ್ನು ಹೊಕ್ಕನು. ಪೇತ್ರನು ಹೊರಗಡೆ ಬಾಗಿಲ ಬಳಿಯಲ್ಲೇ ನಿಂತನು. ಪರಿಚಿತನಾಗಿದ್ದವನು ಅನಂತರ ಹೊರಗೆ ಬಂದು ದ್ವಾರಪಾಲಕಿಗೆ ಹೇಳಿ ಪೇತ್ರನನ್ನು ಒಳಕ್ಕೆ ಕರೆದುಕೊಂಡು ಹೋದನು. ಆ ದ್ವಾರಪಾಲಕಿಯು ಪೇತ್ರನನ್ನು ನೋಡಿ, “ನೀನೂ ಯೇಸುವಿನ ಶಿಷ್ಯರಲ್ಲಿ ಒಬ್ಬನಲ್ಲವೆ?” ಎಂದು ಕೇಳಿದಳು. ಅದಕ್ಕೆ ಪೇತ್ರನು, “ಇಲ್ಲ, ನಾನಲ್ಲ,” ಎಂದುಬಿಟ್ಟನು. ಆಗ ಚಳಿಯಿದ್ದುದರಿಂದ ಸೇವಕರೂ ಕಾವಲಾಳುಗಳೂ ಇದ್ದಲಿನ ಬೆಂಕಿ ಮಾಡಿ, ಸುತ್ತಲೂ ನಿಂತು ಚಳಿಕಾಯಿಸಿಕೊಳ್ಳುತ್ತಿದ್ದರು. ಪೇತ್ರನೂ ಅವರ ಸಂಗಡ ನಿಂತುಕೊಂಡು ಚಳಿಕಾಯಿಸಿಕೊಳ್ಳತೊಡಗಿದನು. ಅಷ್ಟರಲ್ಲಿ ಪ್ರಧಾನಯಾಜಕನು ಯೇಸುಸ್ವಾಮಿಯನ್ನು ಅವರ ಶಿಷ್ಯರ ವಿಷಯವಾಗಿ ಹಾಗು ಬೋಧನೆಯ ವಿಷಯವಾಗಿ ವಿಚಾರಿಸಿದನು.

ಮನಸ್ಸಿಗೊಂದಿಷ್ಟು :  ಪಾದ ತೊಳೆದು ದೀನತೆಯನ್ನು ಮೆರೆದ ಯೇಸು, ಈಗ ತಮ್ಮ ಹಿಡಿಯ ಬಂದವರ ಮುಂದೆ ತೋರುವ ಅಧಿಕಾರಯುತ ವರ್ತನೆಗೆ ಕಾರಣವಾದರು ಏನು? ಎರಡೂ ಭಾವಗಳ ಹಿಂದಿನ ಸ್ಫೂರ್ತಿ ಸೆಲೆ ಪ್ರೀತಿಯೇ. ಅಡಗಿ ಕುಳಿತ್ತಿರಬಹುದು ಎಂದುಕೊಂಡು ಬಂದ ಸೈನಿಕರನ್ನು ಯೇಸು ದೈರ್ಯವಾಗಿ ಎದುರಿಸುತ್ತಾರೆ. "ನಾನೇ ಯೇಸು" ಎನ್ನುತ್ತಾರೆ, "ಶಿಷ್ಯರನ್ನು ಬಿಡಿ" ಎನ್ನುತ್ತಾರೆ, "ಈ ರೀತಿ ಬರಬೇಕಾಗಿತ್ತೇ" ಎಂದು ವ್ಯಂಗ್ಯವಾಗಿ ಕೇಳುತ್ತಾರೆ. ಒಟ್ಟಿನಲ್ಲಿ ಕೆಲವೇ ಘಂಟೆಗಳಲ್ಲಿನ ಸಾವು ನೋವು  ಅವರನ್ನು ವಿಚಲಿತರನ್ನಾಗಿಸಿಲ್ಲ. ಅದು ತಾವು ಮಾಡಬೇಕಾದ ಕಾರ್ಯದ ಕಡೆಗಿನ ಪ್ರೀತಿ, ಕಾರ್ಯವನ್ನು ವಹಿಸಿದ ಪಿತನ ಮೇಲಿನ ಪ್ರೀತಿ, ತಾವು ಪ್ರಾಣ ನೀಡಬೇಕಾಗಿರುವ ಮಾನವನ  ಮೇಲಿನ ಪ್ರೀತಿ. ಈ ಕಷ್ಟದ ಸಮಯದಲ್ಲೂ ಪ್ರೀತಿ ಬರಿದಾಗಲಿಲ್ಲ .   

ಇತ್ತ ಯೇಸು ಜೊತೆಗಿದ್ದಾಗ ಇಡೀ ಗುಂಪನ್ನೇ ಎದುರು ಹಾಕಿಕೊಳ್ಳುವಷ್ಟು   ಧೈರ್ಯ ತೋರಿದ ಪೇತ್ರ, ನಂತರ ಒಬ್ಬ ದ್ವಾರಪಾಲಕಿಯ ಮುಂದೆ ಧೈರ್ಯ ಕಳೆದುಕೊಳ್ಳುತ್ತಾನೆ. 

ಯೇಸು ಸದಾ ನಮ್ಮೊಡನಿರಲಿ.

ಪ್ರಶ್ನೆ : ನಿಜಕ್ಕೂ ನಮ್ಮ ಮನ ಯೇಸುವಿನ ಯಾತನೆಯ ಧ್ಯಾನ ಮಾಡುತ್ತಿದೆಯೇ?

ಪ್ರಭುವೇ,
ತಾವಾಗಿಯೇ ಒಪ್ಪಿಸಿಕೊಂಡಿರಿ
ವೈರಿಗಳ ಮುಂದೆ
ಪಡೆಯಲೆಂದು ಪಾಪ ಪರಿಹಾರವ 
ನಿಮ್ಮ ಮಂದೆ
ದುಗುಡವಿಲ್ಲ ಬರಲಾಗದಿದ್ದರೂ 
ಯಾರೂ ನಿಮ್ಮ ಹಿಂದೆ
ಭರವಸೆ ಸದಾ 
ಜೊತೆಗಿರುವರೆಂದು ತಂದೆ
ನಮ್ಮದೋ ನಿಮ್ಮಿಂದಲೇ 
ತಪ್ಪಿಸಿಕೊಳ್ಳುವ ಹುನ್ನಾರ
ದುಗುಡವಿಲ್ಲ ಕಂಡೂ ಕಂಡೂ
ನಿಮ್ಮ ಆ ಹಿಂಸೆ ನೋವ 
ಪೇತ್ರನಂತೆ ಅರಿಯಲಾರೆ 
ಎನ್ನುತ್ತಲೇ ಇರುವೆನಲ್ಲ 
ಮಿಡಿಯಲಿ ನಿಮಗಾಗಿ 
ನಮ್ಮ ಈ ಮನ
ನುಡಿ ನಡೆಯಲ್ಲಿ 
ಮಾಡುತ್ತಿರಲಿ 
ನಿಮ್ಮ ಶಿಲುಬೆಯ ಸನ್ಮಾನ     

17.04.25 - “ಸ್ನಾನ ಮಾಡಿಕೊಂಡವನು ಕಾಲುಗಳನ್ನು ತೊಳೆದುಕೊಂಡರೆ ಸಾಕು, ಅವನ ಮೈಯೆಲ್ಲಾ ಶುದ್ಧವಾಗಿರುತ್ತದೆ"

 ಮೊದಲನೇ ವಾಚನ: ವಿಮೋಚನಕಾಂಡ 12:1-8, 11-14

ಸರ್ವೇಶ್ವರಸ್ವಾಮಿ ಮೋಶೆ ಮತ್ತು ಆರೋನರ ಸಂಗಡ ಮಾತನಾಡಿ ಹೀಗೆಂದರು: “ಎಲ್ಲ ಮಾಸಗಳಲ್ಲಿ ಇದೇ ನಿಮಗೆ ಆದಿ ಮಾಸವಾಗಿರಬೇಕು. ಇದೇ ನಿಮಗೆ ಪ್ರತಿ ವರ್ಷದ ಮೊದಲನೆಯ ತಿಂಗಳಾಗಿರಬೇಕು. ಈ ವಿಷಯದಲ್ಲಿ ನೀವು ಇಸ್ರಯೇಲರ ಸಮಾಜಕ್ಕೆಲ್ಲ ಈ ರೀತಿ ಕಟ್ಟಳೆ ಇಡಬೇಕು: ‘ಈ ತಿಂಗಳ ಹತ್ತನೆಯ ದಿನದಲ್ಲಿ ನಿಮ್ಮ ನಿಮ್ಮ ಗೋತ್ರಗಳ ಪ್ರತಿಯೊಂದು ಮನೆಯವರು ಒಂದೊಂದು ಕುರಿಮರಿಯನ್ನಾಗಲಿ, ಆಡುಮರಿಯನ್ನಾಗಲಿ ಆರಿಸಿಕೊಳ್ಳಬೇಕು ಕುಟುಂಬವು ಚಿಕ್ಕದಾಗಿದ್ದು ಒಂದು ಮರಿಯನ್ನು ಪೂರ್ತಿಯಾಗಿ ತಿನ್ನಲಾಗದಿದ್ದರೆ ಹತ್ತಿರದ ನೆರೆಮನೆಯ ಕುಟುಂಬದೊಂದಿಗೆ ಸೇರಿ ಒಬ್ಬೊಬ್ಬನು ಇಷ್ಟಿಷ್ಟು ತಿನ್ನುವನೆಂದು ಲೆಕ್ಕ ಹಾಕಿ ಜನಗಳ ಸಂಖ್ಯಾನುಸಾರ ಮರಿಗಳನ್ನು ಆರಿಸಿಕೊಳ್ಳಲಿ. ಆ ಮರಿಯು ಯಾವ ದೋಷವೂ ಇಲ್ಲದ ಒಂದು ವರ್ಷದ ಗಂಡಾಗಿರಬೇಕು. ಕುರಿಗಳಿಂದಾಗಲಿ ಆಡುಗಳಿಂದಾಗಲಿ ಅದನ್ನು ಆರಿಸಿಕೊಳ್ಳಬಹುದು. ಈ ತಿಂಗಳಿನ ಹದಿನಾಲ್ಕನೆಯ ದಿನದವರೆಗೆ ಅವುಗಳನ್ನು ಇಟ್ಟುಕೊಂಡಿದ್ದು ಆ ದಿನದ ಸಂಜೆ ವೇಳೆಯಲ್ಲಿ ಇಸ್ರಯೇಲ್ ಸಮಾಜದವರೆಲ್ಲರು ತಮ್ಮ ತಮ್ಮ ಕೂಟಗಳಲ್ಲಿ ಕೊಯ್ಯಬೇಕು ಅವುಗಳ ರಕ್ತದಲ್ಲಿ ಸ್ವಲ್ಪ ತೆಗೆದು ತಾವು ಆ ಭೋಜನ ಮಾಡುವ ಮನೆಯ ಬಾಗಿಲಿನ ಎರಡು ನಿಲುವು ಕಂಬಗಳಿಗೂ ಮೇಲಿನ ಪಟ್ಟಿಗೂ ಹಚ್ಚಬೇಕು. ಆ ರಾತ್ರಿಯಲ್ಲೇ ಆ ಮಾಂಸವನ್ನು ತಿನ್ನಬೇಕು. ಅದನ್ನು ಬೆಂಕಿಯಲ್ಲಿ ಸುಟ್ಟು ಹುಳಿಯಿಲ್ಲದ ರೊಟ್ಟಿಗಳ ಮತ್ತು ಕಹಿ ಆದ ಪಲ್ಯಗಳ ಸಮೇತ ಊಟಮಾಡಬೇಕು. ಆ ಭೋಜನವನ್ನು ಮಾಡಬೇಕಾದ ಕ್ರಮ ಇದು: ನೀವು ನಡುಕಟ್ಟಿಕೊಂಡು, ಕೆರಮೆಟ್ಟಿಕೊಂಡು ಊರುಗೋಲನ್ನು ಹಿಡಿದುಕೊಂಡು, ಬೇಗಬೇಗನೆ ಊಟ ಮಾಡಬೇಕು. ಏಕೆಂದರೆ ಅದು ಸರ್ವೇಶ್ವರಸ್ವಾಮಿಗೆ ಆಚರಿಸತಕ್ಕ ಪಾಸ್ಕಹಬ್ಬ. ‘ಆ ರಾತ್ರಿ ನಾನು ಈಜಿಪ್ಟ್ ದೇಶದ ನಡುವೆ ಹಾದು ಹೋಗುವೆನು; ಮನುಷ್ಯರಾಗಿ ಇರಲಿ, ಪ್ರಾಣಿಗಳಾಗಿರಲಿ ಚೊಚ್ಚಲಾದುದೆಲ್ಲವನ್ನು ಸಂಹರಿಸುವೆನು. ಈಜಿಪ್ಟ್ ದೇಶದ ಸಮಸ್ತ ದೇವತೆಗಳನ್ನೂ ದಂಡಿಸುವೆನು. ನಾನೇ ಸರ್ವೇಶ್ವರ! ನೀವು ಬಾಗಿಲಿಗೆ ಹಚ್ಚಿದ ಆ ರಕ್ತವು ನೀವಿರುವ ಮನೆಗಳನ್ನು ಸೂಚಿಸುವುದು. ಅದನ್ನು ಕಂಡು ನಿಮಗೆ ಯಾವ ಹಾನಿಯನ್ನು ಮಾಡದೆ ಮುಂದಕ್ಕೆ ದಾಟಿ ಹೋಗುವೆನು. ನಾನು ಈಜಿಪ್ಟಿನವರನ್ನು ಸಂಹರಿಸುವಾಗ ನಿಮಗೆ ಯಾವ ಕೇಡೂ ಆಗದು. ಆ ದಿನವು ನಿಮಗೆ ಸ್ಮರಣೀಯ ದಿನವಾಗಿರುವುದು. ಅಂದು ನೀವು ಸರ್ವೇಶ್ವರನ ಗೌರವಾರ್ಥ ಹಬ್ಬವನ್ನು ಕೊಂಡಾಡಬೇಕು. ಅದನ್ನು ಶಾಶ್ವತ ನಿಯಮವೆಂದು ತಲತಲಾಂತರಕ್ಕೂ ಆಚರಿಸಬೇಕು’.

ಕೀರ್ತನೆ: 116:12-13, 15-16, 17-18

ಶ್ಲೋಕ: ನಾವು ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ,
ಪಾನಾಪಾತ್ರೆಯಿಂದ ಕುಡಿಯುವಾಗ ಕ್ರಿಸ್ತೇಸುವಿನ ರಕ್ತದಲ್ಲಿ ಪಾಲ್ಗೊಳ್ಳುತ್ತೇವೆ.

ನನಗಿದೆ ಪ್ರಭುವಿನಲಿ ಪ್ರೀತಿ |
ಅಲಿಸಿಹನಾತ ನನ್ನ ವಿನಂತಿ ||

ಪ್ರಭು ಎನಗೆ ಮಾಡಿದ ಮಹೋಪಕಾರಗಳಿಗಾಗಿ |
ನನ್ನಿಂದೇನು ಮಡಲು‌ ಸಾಧ್ಯ
ಪ್ರತಿಯಾಗಿ ? ||
ಎತ್ತಿ ಹಿಡಿವೆನು ರಕ್ಷಣೆಯ
ಪಾನಪಾತ್ರೆಯನು |
ಪ್ರಖ್ಯಾತಪಡಿಸುವೆನು ಪ್ರಭುವಿನ‌ ನಾಮವನು ||

ಪ್ರಭು ಅಲ್ಪವೆಂದೆಣಿಸನು |
ತನ್ನ‌ ಭಕ್ತರ ಮರಣವನು ||
ಹೇ ಪ್ರಭು ಕರುಣಿಸು ನಾ ನಿನ್ನ ಕಿಂಕರನು |
ನಿನ್ನ ದಾಸಿಯ ಮಗನು‌ ನಿನ್ನ ಸೇವಕನು |
ಬಿಡಸಿರುವೆ  ನೀ ನನ್ನ ಬಂಧನಗಳನು ||

ಅರ್ಪಿಸುವೆ ನಾ ನಿನಗೆ ಕೃತಜ್ಞತಾ ಬಲಿಗಳನು |
ಪ್ರಖ್ಯಾತಪಡಿಸುವೆನು ಪ್ರಭುವಿನ ನಾಮವನು ||
ಹೇ ಜೆರುಸಲೇಮೇ ನಿನ್ನ ಮಧ್ಯದೊಳು |

ಅತನಿರುವ  ಮಂದಿರದ ಅಂಗಳದೋಳು ||

ಎರಡನೇ ವಾಚನ: 1 ಕೊರಿಂಥಿಯರಿಗೆ 11: 23-26

ಸಹೋದರರೇ, ನಿಮಗೆ ಮಾಡಿದ ಉಪದೇಶವನ್ನು ನಾನು ಪ್ರಭುವಿನಿಂದಲೇ ಪಡೆದೆನು. ಅದೇನೆಂದರೆ; ಪ್ರಭುಯೇಸು, ತಮ್ಮನ್ನು ಹಿಡಿದುಕೊಡಲಾದ ಆ ರಾತ್ರಿ ರೊಟ್ಟಿಯನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತಾ ಸ್ತೋತ್ರವನ್ನು ಸಲ್ಲಿಸಿ ಅದನ್ನು ಮುರಿದು, “ಇದು ನಿಮಗಾಗಿ ಒಪ್ಪಿಸಲಾಗುವ ನನ್ನ ಶರೀರ, ಇದನ್ನು ನನ್ನ ಸ್ಮರಣೆಗಾಗಿ ಮಾಡಿ,” ಎಂದರು. ಅಂತೆಯೇ ಭೋಜನದ ಕೊನೆಯಲ್ಲಿ ಪಾನ ಪಾತ್ರೆಯನ್ನು ತೆಗೆದುಕೊಂಡು, “ಈ ಪಾತ್ರೆ ನನ್ನ ರಕ್ತದಿಂದ ಮುದ್ರಿತವಾದ ಹೊಸ ಒಡಂಬಡಿಕೆ; ಇದನ್ನು ನೀವು ಪಾನಮಾಡುವಾಗಲೆಲ್ಲಾ ನನ್ನ ಸ್ಮರಣೆಗಾಗಿ ಮಾಡಿರಿ,” ಎಂದರು. ಎಂದೇ, ನೀವು ಈ ರೊಟ್ಟಿಯನ್ನು ಭುಜಿಸಿ ಈ ಪಾತ್ರೆಯಿಂದ ಪಾನಮಾಡುವಾಗಲೆಲ್ಲಾ ಪ್ರಭು ಬರುವ ತನಕ ಅವರ ಮರಣವನ್ನು ಸಾರುತ್ತೀರಿ.

ಶುಭಸಂದೇಶ: ಯೊವಾನ್ನ 13:1-15


ಅಂದು ಪಾಸ್ಕ ಹಬ್ಬದ ಹಿಂದಿನ ದಿನ. ತಾವು ಈ ಲೋಕವನ್ನು ಬಿಟ್ಟು ಪಿತನ ಬಳಿಗೆ ಹೋಗಬೇಕಾದ ಗಳಿಗೆ ಬಂದಿರುವುದು ಎಂದು ಯೇಸುಸ್ವಾಮಿಗೆ ತಿಳಿದಿತ್ತು. ಈ ಲೋಕದಲ್ಲಿದ್ದ ತಮ್ಮವರನ್ನು ಯಾವಾಗಲೂ ಪ್ರೀತಿಸುತ್ತಿದ್ದ ಅವರು ಆ ಪ್ರೀತಿಯ ಪರಮಾವಧಿಯನ್ನು ಈಗ ತೋರಿಸಲಿದ್ದರು. (ಯೇಸುವನ್ನು ಗುರುದ್ರೋಹದಿಂದ ಹಿಡಿದುಕೊಡಬೇಕೆಂಬ ಆಲೋಚನೆಯನ್ನು ಸೈತಾನನು ಸಿಮೋನನ ಮಗ ಇಸ್ಕರಿಯೋತಿನ ಯೂದನಲ್ಲಿ ಈಗಾಗಲೇ ಹುಟ್ಟಿಸಿದ್ದನು). ಊಟಕ್ಕೆ ಎಲ್ಲರೂ ಕುಳಿತಿದ್ದರು. ಪಿತನು ಎಲ್ಲವನ್ನೂ ತಮ್ಮ ಕೈಗೆ ಒಪ್ಪಿಸಿರುವರೆಂದೂ ತಾವು ದೇವರ ಬಳಿಯಿಂದ ಬಂದಿದ್ದು, ಈಗ ದೇವರ ಬಳಿಗೇ ಮರಳುತ್ತಿದ್ದೇನೆಂದೂ ಯೇಸುವಿಗೆ ತಿಳಿದಿತ್ತು. ಅವರು ಊಟದಿಂದ ಎದ್ದು, ತಮ್ಮ ಮೇಲುಹೊದಿಕೆಯನ್ನು ತೆಗೆದಿಟ್ಟರು. ಅಂಗವಸ್ತ್ರವನ್ನು ಸೊಂಟಕ್ಕೆ ಕಟ್ಟಿಕೊಂಡರು. ಅನಂತರ ಒಂದು ಬೋಗುಣಿಗೆ ನೀರು ಸುರಿದುಕೊಂಡು ತಮ್ಮ ಶಿಷ್ಯರ ಕಾಲುಗಳನ್ನು ತೊಳೆಯುತ್ತಾ ತಾವು ಕಟ್ಟಿಕೊಂಡಿದ್ದ ಅಂಗವಸ್ತ್ರದಿಂದ ಒರಸತೊಡಗಿದರು. ಹೀಗೆ, ಅವರು ಸಿಮೋನ ಪೇತ್ರನ ಹತ್ತಿರಕ್ಕೆ ಬಂದಾಗ ಆತ, “ಪ್ರಭುವೇ, ನೀವು ನನ್ನ ಕಾಲುಗಳನ್ನು ತೊಳೆಯುವುದೇ?” ಎಂದನು. ಯೇಸು, “ನಾನು ಮಾಡುತ್ತಿರುವುದು ನಿನಗೆ ಈಗ ಅರ್ಥವಾಗದು, ಮುಂದೆ ಅರ್ಥವಾಗುತ್ತದೆ,” ಎಂದು ಉತ್ತರಿಸಿದರು. “ನೀವು ನನ್ನ ಕಾಲುಗಳನ್ನು ತೊಳೆಯುವುದು ಎಂದಿಗೂ ಕೂಡದು,” ಎಂದು ಪೇತ್ರನು ಪ್ರತಿಭಟಿಸಿದನು. ಅದಕ್ಕೆ ಯೇಸು, “ನಾನು ತೊಳೆಯದಿದ್ದರೆ ನಿನಗೆ ನನ್ನಲ್ಲಿ ಪಾಲು ಇಲ್ಲ,” ಎಂದು ನುಡಿದರು. ಆಗ ಪೇತ್ರನು, “ಹಾಗಾದರೆ ಪ್ರಭೂ, ನನ್ನ ಕಾಲುಗಳನ್ನು ಮಾತ್ರವಲ್ಲ, ನನ್ನ ಕೈಗಳನ್ನೂ ತಲೆಯನ್ನೂ ತೊಳೆಯಿರಿ,” ಎಂದನು. ಯೇಸು, “ಸ್ನಾನ ಮಾಡಿಕೊಂಡವನು ಕಾಲುಗಳನ್ನು ತೊಳೆದುಕೊಂಡರೆ ಸಾಕು, ಅವನ ಮೈಯೆಲ್ಲಾ ಶುದ್ಧವಾಗಿರುತ್ತದೆ. ನೀವೂ ಕೂಡ ಶುದ್ಧರಾಗಿದ್ದೀರಿ. ಆದರೆ ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ,” ಎಂದು ಹೇಳಿದರು. ತಮ್ಮನ್ನು ಗುರುದ್ರೋಹದಿಂದ ಹಿಡಿದುಕೊಡುವವನು ಯಾರೆಂಬುದು ಅವರಿಗೆ ಗೊತ್ತಿತ್ತು. ಅದಕ್ಕಾಗಿಯೇ ಅವರು, ‘ನಿಮ್ಮಲ್ಲಿ ಎಲ್ಲರೂ ಶುದ್ಧರಲ್ಲ,’ ಎಂದು ಹೇಳಿದರು. ಶಿಷ್ಯರ ಪಾದಗಳನ್ನು ತೊಳೆದ ಮೇಲೆ ಯೇಸು ತಮ್ಮ ಮೇಲುಹೊದಿಕೆಯನ್ನು ಹಾಕಿಕೊಂಡು ಕುಳಿತುಕೊಂಡರು. ತಮ್ಮ ಶಿಷ್ಯರಿಗೆ, “ನಿಮಗೆ, ನಾನು ಮಾಡಿರುವುದು ಏನೆಂದು ಅರ್ಥವಾಯಿತೇ? ‘ಬೋಧಕರೇ, ಪ್ರಭುವೇ’ ಎಂದು ನೀವು ನನ್ನನ್ನು ಕರೆಯುತ್ತೀರಿ; ನೀವು ಹಾಗೆ ಹೇಳುವುದು ಸರಿಯೆ. ನಾನು ಬೋಧಕನೂ ಹೌದು, ಪ್ರಭುವೂ ಹೌದು. ನಿಮಗೆ ಪ್ರಭುವೂ ಬೋಧಕನೂ ಆಗಿರುವ ನಾನೇ ನಿಮ್ಮ ಕಾಲುಗಳನ್ನು ತೊಳೆದಿರುವಾಗ ನೀವು ಸಹ ಒಬ್ಬರ ಕಾಲುಗಳನ್ನು ಇನ್ನೊಬ್ಬರು ತೊಳೆಯುವ ಹಂಗಿನಲ್ಲಿದ್ದೀರಿ. ನಾನು ನಿಮಗೆ ಒಂದು ಆದರ್ಶವನ್ನು ಕೊಟ್ಟಿದ್ದೇನೆ. ನಾನು ನಿಮಗೆ ಮಾಡಿದಂತೆಯೇ ನೀವೂ ಇತರರಿಗೆ ಮಾಡಿರಿ.

ಮನಸ್ಸಿಗೊಂದಿಷ್ಟು : ಪಿತನ ಬಳಿಗೆ ಹೋಗುವ ಅಥವಾ ಕಾಣುವ ಹತ್ತಿರದ ಸಮಯದಲ್ಲಿ ಯೇಸು ಪರಪ್ರೀತಿಯ ಉತ್ತುಂಗವನ್ನು ಮೆರೆಯುತ್ತಾರೆ.  ನಾವು ದೇವರಿಗೆ ಹತ್ತಿರವಾದಷ್ಟೂ ನಮ್ಮಲ್ಲಿನ ಮಾನವೀಯತೆ, ದೀನತೆ, ಪರ ಪ್ರೀತಿ ಜಾಗೃತವಾಗುತ್ತದೆ. ಅತ್ಯಂತ ನೋವು, ಕಷ್ಟದ ಸಮಯವು,  ದೇವರ ಸಾನಿಧ್ಯ ಹತ್ತಿರದಲ್ಲೇ ಇರುವ ಸಂಕೇತ. ಯೇಸುವಿನ ಪಾದ ತೊಳೆಯುವಿಕೆಯ  ಈ ಕಾರ್ಯ ನಮ್ಮ ಹೃದಯದಲ್ಲಿನ ಅಹಂ ಅನ್ನು ತೊಳೆದು ಹಾಕಲಿ. 

ಶುಭಸಂದೇಶದ ಅತ್ಯಂತ ಮನಮುಟ್ಟುವ ಘಟನೆ 'ಪಾದ ತೊಳೆಯುವಿಕೆ'. ನಮ್ಮ ಬಾಳಿನಲ್ಲಿ ಇದು ಕೇವಲ ಒಂದು ಘಟನೆಯಾಗಿ ಉಳಿಯದಿರಲಿ.    

ಪ್ರಭು,
ಜಗದೊಡೆಯ ನೀ 
ಬಾಗಿಹೆ ಮೊಣಕಾಲೂರಿ 
ಪಾದವ ತೊಳೆಯಲು 
ಲೋಕ ರೂಢಿಯ ಮೀರಿ 

ಗುರುವೂ ದೊರೆಯೂ 
ಸೇವಕನಾಗಲೆಂಬುದ ಸಾರಿ
ಹೊರಡಲಣಿಯಾದೆಯಲ್ಲಾ   
ಹಿಂಸೆ ತ್ಯಾಗದ ಬೆನ್ನೇರಿ 

ತೊಳೆಸಿಕೊಳ್ಳುತ್ತಿರುವೆ ದಿನವೂ  
ಲಜ್ಜೆಯಿಲ್ಲದೆ ಕಾಲ ಚಾಚಿ
ನಾ ಶ್ರೇಷ್ಠನೆಂಬ ಅಹಮಿನಲ್ಲಿ 
ಶುದ್ಧಿಯಾಗಿಸು ಈ ನನ್ನ ಮನವ 
ಪಶ್ಚಾತ್ತಾಪದ ಕಣ್ಣೀರಿಳಿಸಿ 

16.04.25 - “ನಿಮ್ಮಲ್ಲೇ ಒಬ್ಬನು ನನಗೆ ದ್ರೋಹ ಬಗೆಯುತ್ತಾನೆ, ಎಂದು ನಿಮಗೆ ಖಂಡಿತವಾಗಿ ಹೇಳುತ್ತೇನೆ,”

 ಮೊದಲನೇ ವಾಚನ: ಯೆಶಾಯ 50: 4-9

ದಣಿದವರನ್ನು ಹಿತನುಡಿಗಳಿಂದ ತಣಿಸುವಂತೆ ಅನುಗ್ರಹಿಸುತ್ತಾನೆನಗೆ ಸ್ವಾಮಿ ಸರ್ವೇಶ್ವರ ಶಿಕ್ಷಿತರ ನಾಲಗೆಯನು; ಶಿಷ್ಯನೋಪಾದಿ ನಾನು ಆತನನ್ನು ಆಲಿಸುವಂತೆ ಬೆಳಬೆಳಗೂ ನನ್ನನೆಚ್ಚರಿಸಿ ಚೇತನಗೊಳಿಸುತ್ತಾನೆ ನನ್ನ ಕಿವಿಯನು. ತೆರೆದಿಹನು ಸ್ವಾಮಿ ಸರ್ವೇಶ್ವರ ನನ್ನ ಕಿವಿಯನು ಎಂದೇ ವಿಮುಖನಾಗಲಿಲ್ಲ ನಾನು, ಪ್ರತಿಭಟಿಸಲಿಲ್ಲ ಆತನನು. ಬೆನ್ನುಕೊಟ್ಟೆನು ಹೊಡೆಯುವವರಿಗೆ ಗಡ್ಡ ಒಡ್ಡಿದೆನು ಅದನ್ನು ಕೀಳುವವರಿಗೆ ಮುಖ ಮರೆಮಾಡಲಿಲ್ಲ ಉಗುಳುಬುಗುಳಿಗೆ. ನೆರವಾಗಿಹನು ನನಗೆ ಸ್ವಾಮಿ ಸರ್ವೇಶ್ವರ ಎಂದೇ ತಲೆತಗ್ಗಿಸಲಿಲ್ಲ ನಾನು ನಾಚಿಕೆಯಿಂದ ಗಟ್ಟಿಮಾಡಿಕೊಂಡೆ ಮುಖವನು ಕಗ್ಗಲ್ಲಿನ ಹಾಗೆ ಆಶಾಭಂಗಪಡಲಾರೆನೆಂದು ಗೊತ್ತು ನನಗೆ. ನನ್ನ ಪರ ತೀರ್ಪುಕೊಡುವವನು ಇಹನು ಹತ್ತಿರದಲೆ ನನಗೆ ಪ್ರತಿಕಕ್ಷಿ ಯಾರೆ ಬರಲಿ ಮುಂದಕೆ. ನನ್ನೊಡನೆ ವ್ಯಾಜ್ಯಮಾಡಬಲ್ಲವನಾರೇ ನಿಲ್ಲಲಿ ನ್ಯಾಯಕೆ. ಇಗೋ, ಸ್ವಾಮಿ ಸರ್ವೇಶ್ವರ ನಿಂತಿಹರು ನನಗೆ ನೆರವಾಗಿ ನಿರ್ಣಯಿಸುವವನು ಯಾರು ನನ್ನನ್ನು ಅಪರಾಧಿಯಾಗಿ? ನುಸಿತಿಂದ ವಸ್ತ್ರದಂತೆ ಅಳಿದು ಹೋಗುವರವರು ಜೀರ್ಣವಾಗಿ.

ಕೀರ್ತನೆ: 69:8-10, 21-22, 31, 33-34
ಶ್ಲೋಕ: ಪ್ರಸನ್ನಕಾಲದಲ್ಲಿ ಪ್ರಭು, ನಾ ಮೊರೆಯಿಡುತ್ತಿರುವೆ ನಿನಗೆ, ಪ್ರೀತಿಮಯ ದೇವಾ, ಜೀವೋದ್ಧಾರಕ, ಸದುತ್ತರ ನೀಡೆನಗೆ.

ನಿನಗಾಗಿಯೇ ನಾ ನಿಂದೆಗೊಳಗಾದೆನಯ್ಯಾ I
ನಾಚಿಕೆಯಿಂದಲೆ ಮುಖ ಮುಚ್ಚಿಕೊಂಡೆನಯ್ಯಾ II
ನನ್ನವರಿಗೇ ನಾನನ್ಯನಾದೆನಯ್ಯಾ I
ಒಡ ಹುಟ್ಟಿದವರಿಗೇ ಹೊರಗಿನವನಾದೆನಯ್ಯಾ II

ಅಗ್ನಿಯಂತೆನ್ನ ದಹಿಸುತ್ತಿದೆ ನಿನ್ನಾಲಯದಭಿಮಾನ I
ಎನ್ನ ಮೇಲೆರಗಿದೆ ನಿನ್ನ ಕಡುದ್ರೋಹಿಗಳ ದೂಷಣ II
ನಿಂದೆಯಿಂದ ಮನನೊಂದು ಹತಾಶನಾಗಿರುವೆನಯ್ಯಾ I
ಹಾತೊರೆದರೂ ದಯೆತೋರುವನಾರೂ ಸಿಗಲಿಲ್ಲ I
ಅರಸಿದರೂ ಸಾಂತ್ವನನೀಡುವವನು ದೊರಕಲಿಲ್ಲ II

ಹಸಿದ ನನಗೆ ವಿಷಬೆರೆತ ಆಹಾರವಿತ್ತರಯ್ಯಾ I
ಬಾಯಾರಿದೆನಗೆ ಕಹಿ ಕಾಡಿಯನು ಕೊಟ್ಟರಯ್ಯಾ II
ಸಂಕೀರ್ತಿಸುವೆನು ದೇವರ ಶ್ರೀನಾಮವನು I
ಕೃತಜ್ಞತೆಯಿಂದಾತನನು ಕೊಂಡಾಡುವೆನು II

ಇದನರಿತು ದೀನದಲಿತರು ಆನಂದಗೊಳ್ಳಲಿ I
ದೇವನನು ಅರಸುವವರು ಪುನಶ್ಚೇತನಗೊಳ್ಳಲಿ II
ಬಡಬಗ್ಗರ ಮೊರೆಗೆ ಪ್ರಭು ಕಿವಿಗೊಡದಿರನು I
ಸೆರೆಯಲ್ಲಿಹ ತನ್ನವರನು ತಿರಸ್ಕರಿಸನು II

ಶುಭಸಂದೇಶ: ಮತ್ತಾಯ 26:14-25


ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತಿನ ಯೂದ ಎಂಬಾತ ಮುಖ್ಯ ಯಾಜಕರ ಬಳಿಗೆ ಹೋದನು. “ನಿಮಗೆ ನಾನು ಯೇಸುವನ್ನು ಹಿಡಿದುಕೊಟ್ಟರೆ ನನಗೇನು ಕೊಡುವಿರಿ?” ಎಂದು ಅವರನ್ನು ವಿಚಾರಿಸಿದನು. ಅವರೋ, ಅವನಿಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ನಿಗದಿ ಮಾಡಿ ಕೊಟ್ಟರು. ಆ ಗಳಿಗೆಯಿಂದ ಯೇಸುವನ್ನು ಹಿಡಿದೊಪ್ಪಿಸಲು ಅವನು ಸಂದರ್ಭ ಕಾಯುತ್ತಾ ಇದ್ದನು. ಅಂದು ಹುಳಿರಹಿತ ರೊಟ್ಟಿಯ ಹಬ್ಬದ ಮೊದಲನೆಯ ದಿನ. ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, “ತಮಗೆ ಪಾಸ್ಕ ಭೋಜನವನ್ನು ನಾವು ಎಲ್ಲಿ ಸಿದ್ಧಪಡಿಸಬೇಕೆನ್ನುತ್ತೀರಿ?” ಎಂದು ಕೇಳಿದರು. ಅದಕ್ಕೆ ಅವರು, “ಪಟ್ಟಣದಲ್ಲಿ ನಾನು ಸೂಚಿಸುವಂಥವನ ಬಳಿಗೆ ಹೋಗಿರಿ, ‘ನನ್ನ ಕಾಲ ಸವಿೂಪಿಸಿತು, ಪಾಸ್ಕವನ್ನು ನನ್ನ ಶಿಷ್ಯರ ಸಮೇತ ನಿನ್ನ ಮನೆಯಲ್ಲಿಯೇ ಆಚರಿಸಬೇಕೆಂದಿದ್ದೇನೆ’; ಇದನ್ನು ನಮ್ಮ ಗುರುವೇ ಹೇಳಿಕಳುಹಿಸಿದ್ದಾರೆ ಎಂದು ಅವನಿಗೆ ತಿಳಿಸಿರಿ,” ಎಂದರು. ಯೇಸು ಸೂಚಿಸಿದಂತೆಯೇ ಶಿಷ್ಯರು ಹೋಗಿ ಪಾಸ್ಕ ಭೋಜನವನ್ನು ತಯಾರಿಸಿದರು. ಸಂಜೆಯಾಯಿತು. ಯೇಸುಸ್ವಾಮಿ ಹನ್ನೆರಡು ಮಂದಿ ಶಿಷ್ಯರ ಸಂಗಡ ಊಟಕ್ಕೆ ಕುಳಿತರು. ಅವರೆಲ್ಲರೂ ಊಟಮಾಡುತ್ತಿದ್ದಾಗ ಯೇಸು, “ನಿಮ್ಮಲ್ಲೇ ಒಬ್ಬನು ನನಗೆ ದ್ರೋಹ ಬಗೆಯುತ್ತಾನೆ, ಎಂದು ನಿಮಗೆ ಖಂಡಿತವಾಗಿ ಹೇಳುತ್ತೇನೆ,” ಎಂದರು. ಶಿಷ್ಯರು ಬಹಳ ಕಳವಳಗೊಂಡರು. ಒಬ್ಬರಾದ ಮೇಲೊಬ್ಬರು, “ಸ್ವಾವಿೂ, ನಾನೋ? ನಾನೋ?” ಎಂದು ಕೇಳತೊಡಗಿದರು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಊಟದ ಬಟ್ಟಲಲ್ಲಿ ನನ್ನೊಡನೆ ಕೈ ಅದ್ದಿ ಉಣ್ಣುವವನೇ ನನಗೆ ದ್ರೋಹ ಬಗೆಯುತ್ತಾನೆ. ನರಪುತ್ರನೇನೋ ಪವಿತ್ರ ಗ್ರಂಥದಲ್ಲಿ ಬರೆದಿರುವ ಪ್ರಕಾರ ಹೊರಟುಹೋಗುತ್ತಾನೆ, ನಿಜ. ಆದರೆ ಅಯ್ಯೋ, ನರಪುತ್ರನಿಗೆ ದ್ರೋಹ ಬಗೆಯುವವನ ದುರ್ಗತಿಯನ್ನು ಏನೆಂದು ಹೇಳಲಿ! ಅವನು ಹುಟ್ಟದೇ ಇದ್ದಿದ್ದರೆ ಎಷ್ಟೋ ಚೆನ್ನಾಗಿತ್ತು!” ಎಂದರು. ಗುರುದ್ರೋಹಿಯಾದ ಯೂದನು ಆಗ, “ಗುರುವೇ, ಅವನು ನಾನಲ್ಲ ತಾನೇ?” ಎಂದನು. ಅದಕ್ಕೆ ಯೇಸು, “ಅದು ನಿನ್ನ ಬಾಯಿಂದಲೇ ಬಂದಿದೆ,” ಎಂದರು.




ಮನಸ್ಸಿಗೊಂದಿಷ್ಟು :  ಕಾಲು ತೊಳೆದು ದಾಸನ ವಿನಯ ತೋರಿದ ಯೇಸುವನ್ನು ಸಣ್ಣ ಮೊತ್ತಕ್ಕೆ ಜೂದಾಸ ದ್ರೋಹ ಮಾಡುತ್ತಾನೆ. ದೇವರ ಚಿತ್ತಕ್ಕಿಂತ ನಮ್ಮ ಯೋಜನೆಗಳಲ್ಲೇ ನಾವು ಬದುಕಿದರೆ ಜೂದಾಸನಂತೆ ನಿರಾಸರಾಗಬಹುದುಭ್ರಮನಿರಸನಗೊಳ್ಳಬಹುದು ಹಾಗೂ ದೈವ ಯೋಜನೆಗೆ ನಮ್ಮದೇ ಆದ ರೀತಿಯಲ್ಲಿ ದ್ರೋಹ ಬಗೆಯಬಹುದುದೈವ ಚಿತ್ತಕ್ಕೆ ಅನುಗುಣವಾಗಿ ಬಾಳೋಣ. ಇಂದಿನ ಶುಭಸಂದೇಶದಲ್ಲಿ ಶಿಷ್ಯರೆಲ್ಲರೂ ಯೇಸುವನ್ನು ಸ್ವಾಮಿಪ್ರಭು ಎಂದು ಕರೆದರೆ ಜೂದಾಸ ಮಾತ್ರ ಇನ್ನೂ ‘ಗುರುವೇ?’ ಎನ್ನುತ್ತಿದ್ದಾನೆ.

ಪ್ರಶ್ನೆ : ಯೇಸು ನಮಗೆ ಗುರು ಮಾತ್ರವೇ ಅಥವಾ ನಮ್ಮ ಸಕಲವೂ ಆದ ಪ್ರಭು ದೇವರೇ

ಪ್ರಭುವೇ,
ಜೂದಾಸ ದ್ರೋಹವೆಸಗಲು
ಪಡೆದದ್ದು ಮೂವತ್ತು
ಬೆಳ್ಳಿ ನಾಣ್ಯ
ನಾವಾದರೋ ಹೃದಯದೊಳು
ನೀಡಿರುವೆವು ನಿಮಗೆಷ್ಟು
ಮೌಲ್ಯ
ನಮ್ಮೊಳಗಿನ ಜೂದಾಸನ
ಕ್ಷಮಿಸಿರಿ
ನಿಮ್ಮೊಳಗಿನ ಪ್ರೇಮವ
ಕಲಿಸಿರಿ.

15.04.25 - "ನೀವು ನನ್ನನ್ನು ಹುಡುಕುವಿರಿ, ‘ಆದರೆ ನಾನು ಹೋಗುವಲ್ಲಿಗೆ ನೀವು ಬರಲಾರಿರಿ"

 ಮೊದಲನೇ ವಾಚನ: ಯೆಶಾಯ 49:1-6

ಕಿವಿಗೊಡಿ ನನ್ನ ದ್ವೀಪನಿವಾಸಿಗಳೇ, ಆಲಿಸಿ ನನ್ನನ್ನು ದೂರದ ಜನಾಂಗಗಳೇ, ಸರ್ವೇಶ್ವರ ಕರೆದನೆನ್ನನ್ನು ಗರ್ಭದಲ್ಲಿದ್ದಾಗಲೇ; ಹೆಸರಿಟ್ಟನೆನಗೆ ನಾನು ತಾಯಿಯ ಉದರಲ್ಲಿದ್ದಾಗಲೇ. ಮಾಡಿದನು ನನ್ನ ನುಡಿಯನ್ನು ಹರಿತವಾದ ಖಡ್ಗವನ್ನಾಗಿ ಮುಚ್ಚಿಟ್ಟಿಹನು ನನ್ನನ್ನು ತನ್ನ ಕರದ ನೆರಳಿನಲ್ಲಿ ರೂಪಿಸಿಹನು ನನ್ನನ್ನು ಚೂಪಾದ ಬಾಣವನ್ನಾಗಿ, ಬಚ್ಚಿಟ್ಟಿಹನು ನನ್ನನು ತನ್ನ ಬತ್ತಳಿಕೆಯಲ್ಲಿ. ಆತನೆನಗೆ ಇಂತೆಂದ: “ನೀನೆನ್ನ ದಾಸ; ನನ್ನ ಮಹಿಮೆ ಬೆಳಗಿಸುವ ಇಸ್ರಯೇಲ.” ಇಂತೆಂದುಕೊಂಡೆ ನಾನಾಗ: ವ್ಯರ್ಥವಾಯಿತು ನನ್ನ ಸಾಮಥ್ರ್ಯವೆಲ್ಲ ಶೂನ್ಯವಾಗಿ ಹೋಯಿತು ನನ್ನ ಶಕ್ತಿಯೆಲ್ಲ ನನಗೆ ದೊರಕುವುದು ನ್ಯಾಯ ಸರ್ವೇಶ್ವರನ ಕೈಯಲ್ಲೇ, ನನಗೆ ಬರುವುದು ಬಹುಮಾನ ಆ ದೇವರಿಂದಲೇ. ಯಕೋಬ್ಯರನ್ನು ತನ್ನ ಬಳಿಗೆ ಕರೆತರಲು ಇಸ್ರಯೇಲರನ್ನು ತನ್ನೊಂದಿಗೆ ಸೇರಿಸಿಕೊಳ್ಳಲು ತನ್ನ ದಾಸನನ್ನಾಗಿ ನನ್ನ ರೂಪಿಸಿದನು, ತಾಯ ಗರ್ಭದಲ್ಲಿದ್ದಾಗಲೇ ಮಾಡಿದನಿದನು. ಸನ್ಮಾನ್ಯನು ನಾನು ಸರ್ವೇಶ್ವರನ ದೃಷ್ಟಿಯಲಿ ನನ್ನ ಶಕ್ತಿಸಾಮಥ್ರ್ಯ ಇರುವುದು ಆ ದೇವರಲಿ. ಮತ್ತೆ ಆತ ಇಂತೆಂದನು ನನಗೆ: “ಮಹತ್ಕಾರ್ಯವೇನೂ ಅಲ್ಲ ನನ್ನ ದಾಸನಾದ ನಿನಗೆ ಕುಲಗಳನು ಉದ್ಧರಿಸುವ ಮಾತ್ರಕೆ ಇಸ್ರಯೇಲರಲಿ ರಕ್ಷಿತರಾದವರನ್ನು ಮರಳಿ ಬರಮಾಡುವ ಮಾತ್ರಕೆ. ನೇಮಿಸಿರುವೆನು ನಿನ್ನನ್ನು ಜ್ಯೋತಿಯನ್ನಾಗಿ ಸರ್ವಜನಾಂಗಗಳಿಗೆ ನನ್ನ ರಕ್ಷಣೆ ವ್ಯಾಪಿಸಿರುವಂತೆ ಮಾಡಲು ಜಗದ ಕಟ್ಟಕಡೆಯವರೆಗೆ.”

ಕೀರ್ತನೆ: 71:1-2, 3-4, 5-6, 15, 17

ಶ್ಲೋಕ: ವರ್ಣಿಸುವೆನು ದಿನವೆಲ್ಲ ನಿನ್ನ ನ್ಯಾಯನೀತಿಯನು

ಆಶ್ರಯಕೋರಿ ಹೇ ಪ್ರಭು ನಾ ಬಂದಿರುವೆ |
ಆಶಾ ಭಂಗವಾಗದಿರಲೆಂದು ನಾ ಬೇಡುವೆ ||

ಸತ್ಯ ಸ್ವರೂಪನೆ, ನನ್ನ ಬಿಡಿಸಿ ರಕ್ಷಿಸಲಯ್ಯಾ |
ನನಗೆ ಕಿವಿಗೊಟ್ಟು ನನ್ನನುದ್ಧರಿಸಯ್ಯ ||
ನೀನಾಗಿರು ನನಗಾಶ್ರಯದುರ್ಗ, ಕೋಟೆಕೊತ್ತಲು |
ನೀನೇ ನನ್ನ ದುರ್ಗ ,ಕೋಟೆ ನನ್ನನು ರಕ್ಷಿಸಲು ||

ದುರುಳರ ಕೈಯಿಂದೆನ್ನನು ದೇವಾ, ಬಿಡಿಸಯ್ಯ |
ಕ್ರೂರ ಕೇಡಿಗರ ವಶದಿಂದೆನ್ನನು ತಪ್ಪಿಸಯ್ಯ ||
ಸ್ವಾಮಿ ದೇವಾ, ನೀನೇ ನನ್ನ ಭರವಸೆ |
ಬಾಲ್ಯದಿಂದಲೂ ನೀನೇ ನನ್ನ ನಂಬಿಕೆ ||

ವರ್ಣಿಸುವೆನು ದಿನವೆಲ್ಲ ನಿನ್ನ ನ್ಯಾಯ ನೀತಿಯನು |
ವಿತರಿಸಲು ಅಸದಳವಾದ ನಿನ್ನಗಣಿತ ರಕ್ಷಣೆಯನು ||
ದೇವಾ ಬಾಲ್ಯಾರಭ್ಯ ನನಗೆ ಬೋಧಿಸಿರುವೆಯಲ್ಲವೆ ?  |

ನಿನ್ನ ಅದ್ಭುತ ಕಾರ್ಯಗಳನೆಂದಿಗು ನಾ ಘೋಷಿಸುತ್ತಿರುವೆ ||

ಶುಭಸಂದೇಶ: ಯೊವಾನ್ನ 13:21-33, 36-38


ಯೇಸುಸ್ವಾಮಿ ಮನಸ್ಸಿನಲ್ಲಿ ಬಹಳವಾಗಿ ನೊಂದುಕೊಂಡರು. ಅವರು, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನಿಮ್ಮಲ್ಲೊಬ್ಬನು ದ್ರೋಹ ಬಗೆದು ನನ್ನನ್ನು ಹಿಡಿದೊಪ್ಪಿಸುವನು,” ಎಂದು ಸ್ಪಷ್ಟವಾಗಿ ಹೇಳಿದರು. ಯೇಸು ಯಾರನ್ನು ಕುರಿತು ಹಾಗೆಂದರೆಂದು ತಿಳಿಯದೆ ಶಿಷ್ಯರು ಒಬ್ಬರನ್ನೊಬ್ಬರು ಸಂಶಯದಿಂದ ನೋಡುವವರಾದರು. ಯೇಸುವಿನ ಪಕ್ಕದಲ್ಲೇ ಒರಗಿ ಕುಳಿತಿದ್ದ ಅವರ ಆಪ್ತ ಶಿಷ್ಯನಿಗೆ, ಸಿಮೋನ ಪೇತ್ರನು, “ಯಾರನ್ನು ಕುರಿತು ಹಾಗೆ ಹೇಳುತ್ತಿದ್ದಾರೆಂದು ಕೇಳು,” ಎಂದು ಸನ್ನೆ ಮಾಡಿದನು. ಅಗ ಆ ಶಿಷ್ಯನು, ಯೇಸುವಿನ ಮಗ್ಗುಲಿಗೆ ಸರಿದು, “ಅಂತವನು ಯಾರು ಪ್ರಭೂ?” ಎಂದು ಕೇಳಿದನು. ಯೇಸು, “ನಾನು ರೊಟ್ಟಿಯ ತುಂಡನ್ನು ಬಟ್ಟಲಿನಲ್ಲಿ ಅದ್ದಿ ಅದನ್ನು ಯಾರಿಗೆ ಕೊಡುತ್ತೇನೋ ಅವನೇ,” ಎಂದು ಹೇಳಿ ರೊಟ್ಟಿಯ ತುಂಡನ್ನು ಅದ್ದಿ ಸಿಮೋನನ ಮಗ ಇಸ್ಕರಿಯೋತಿನ ಯೂದನಿಗೆ ಕೊಟ್ಟರು. ಯೂದನು ಅದನ್ನು ತೆಗೆದುಕೊಂಡದ್ದೇ ತಡ, ಸೈತಾನನು ಅವನನ್ನು ಹೊಕ್ಕನು. ಆಗ ಯೇಸು, “ನೀನು ಮಾಡಬೇಕೆಂದಿರುವುದನ್ನು ಬೇಗನೆ ಮಾಡಿಮುಗಿಸು,” ಎಂದರು. ಊಟಕ್ಕೆ ಕುಳಿತಿದ್ದ ಶಿಷ್ಯರಿಗೆ, ಯೇಸು ಹಾಗೇಕೆ ಹೇಳಿದರೆಂದು ಅರ್ಥವಾಗಲಿಲ್ಲ. ಯೂದನ ವಶದಲ್ಲಿ ಹಣದ ಚೀಲವಿದ್ದುದರಿಂದ, ‘ಹಬ್ಬಕ್ಕೆ ನಮಗೆ ಬೇಕಾದುದನ್ನು ಕೊಂಡು ಬಾ,” ಎಂದೋ, ‘ಬಡವರಿಗೆ ಏನಾದರೂ ಕೊಡು’ ಎಂದೋ, ಯೇಸು ಹೇಳಿರಬೇಕೆಂದು ಕೆಲವು ಶಿಷ್ಯರು ಭಾವಿಸಿದರು. ಆ ರೊಟ್ಟಿಯ ತುಂಡನ್ನು ತೆಗೆದುಕೊಂಡಕೂಡಲೇ ಯೂದನು ಎದ್ದು ಹೊರಟುಹೋದನು; ಆಗ ರಾತ್ರಿಯಾಗಿತ್ತು. ಹೊಸ ಕಟ್ಟಳೆ ಯೂದನು ಹೊರಟುಹೋದಮೇಲೆ ಯೇಸುಸ್ವಾಮಿ ಹೀಗೆಂದರು: “ಈಗ ನರಪುತ್ರನ ಮಹಿಮೆ ಪ್ರಕಟವಾಗುವುದು. ಆತನಲ್ಲಿ ದೇವರ ಮಹಿಮೆಯೂ ಪ್ರಕಟವಾಗುವುದು. ದೇವರ ಮಹಿಮೆ ಆತನಲ್ಲಿ ಪ್ರಕಟವಾದರೆ, ದೇವರೇ ನರಪುತ್ರನ ಮಹಿಮೆಯನ್ನು ತಮ್ಮಲ್ಲಿ ಪ್ರಕಟಪಡಿಸುವರು, ತಕ್ಷಣವೇ ಪ್ರಕಟಪಡಿಸುವರು. ಪ್ರಿಯ ಮಕ್ಕಳೇ, ಇನ್ನು ತುಸುಕಾಲ ಮಾತ್ರ ನಾನು ನಿಮ್ಮೊಡನೆ ಇರುತ್ತೇನೆ, ಆಮೇಲೆ ನೀವು ನನ್ನನ್ನು ಹುಡುಕುವಿರಿ, ‘ಆದರೆ ನಾನು ಹೋಗುವಲ್ಲಿಗೆ ನೀವು ಬರಲಾರಿರಿ’ ಎಂದು ನಾನು ಯೆಹೂದ್ಯರಿಗೆ ಹೇಳಿದಂತೆಯೇ ನಿಮಗೂ ಹೇಳುತ್ತೇನೆ. ಆಗ ಸಿಮೋನ ಪೇತ್ರನು, “ಪ್ರಭುವೇ, ನೀವು ಹೋಗುವುದಾದರೂ ಎಲ್ಲಿಗೆ?” ಎಂದು ಕೇಳಿದನು. “ನಾನು ಹೋಗುವಲ್ಲಿಗೆ ನೀನು ಈಗ ಬರಲಾರೆ. ಅನಂತರ ಬರುವೆ,” ಎಂದು ಯೇಸು ಉತ್ತರಕೊಡಲು ಪೇತ್ರನು, “ಈಗಲೇ ನಿಮ್ಮ ಹಿಂದೆ ಬರಲು ಏಕಾಗದು? ಪ್ರಭೂ, ನಿಮಗಾಗಿ ಪ್ರಾಣವನ್ನು ಕೊಡಲೂ ಸಿದ್ಧನಿದ್ದೇನೆ,” ಎಂದನು. ಆಗ ಯೇಸು, “ನನಗಾಗಿ ಪ್ರಾಣವನ್ನು ಕೊಡಲೂ ಸಿದ್ಧನಿರುವೆಯಾ? ನಾನು ನಿನಗೆ ನಿಜವಾಗಿ ಹೇಳುತ್ತೇನೆ ಕೇಳು: ನೀನು ನನ್ನನ್ನು ಅರಿಯೆನೆಂದು ಮೂರುಬಾರಿ ತಿರಸ್ಕರಿಸುವ ತನಕ ನಾಳೆ ಮುಂಜಾನೆ ಕೋಳಿ ಕೂಗುವುದಿಲ್ಲ,” ಎಂದು ನುಡಿದರು.

ಮನಸ್ಸಿಗೊಂದಿಷ್ಟು : ತಿಳಿದೂ ತಿಳಿದೂ ಸೈತಾನನ ಆಣತಿಗೆ ಓಗೊಟ್ಟ ಜೂದಾಸ, ಮಾನವ ಸಹಜ ಭಯಕ್ಕೆ ತನ್ನ ಪ್ರೀತಿ ಪಾತ್ರರನ್ನು ಅಲ್ಲಗೆಳೆದ ಪೇತ್ರ. ಎಲ್ಲವೂ ತಿಳಿದಿದ್ದರೂ ಪ್ರೀತಿಯಲ್ಲಿ ವ್ಯತ್ಯಾಸ ಮಾಡದ ಯೇಸು, ಎಲ್ಲರೂ ಇಂದಿನ ಶುಭಸಂದೇಶದಲ್ಲಿದ್ದಾರೆ. ಮಾನವ ಸಹಜ ಭಯ, ಆಸೆ, ದುರಾಸೆಗಳಿಗೆ ನಾವು ಶರಣಾಗುತ್ತೇವೆ, ಸೈತಾನನನ್ನು ನಾವೇ ಆಹ್ವಾನಿಸುತ್ತೇವೆ. ಕೊನೆಗೆ ಯೇಸುವಿನ ಆ ಪ್ರೀತಿಯೇ ನಮ್ಮನು ಪೊರಯಬೇಕು, ಅದನ್ನೇ ನಾವು ನೆಚ್ಚಿಕೊಳ್ಳಬೇಕು.

ಪ್ರಶ್ನೆ : ಯೇಸುವನ್ನು ದಿನಕೆಷ್ಟು ಬಾರಿ ಅಲ್ಲಗಳೆಯುತ್ತೇವೆ.

ಪ್ರಭುವೇ,
ಅರಿಯನೆಂದು 
ಅಲ್ಲಗಳೆದಿರುವೆ 
ನಿನ್ನ ಅನುದಿನ
ಬಗೆದಿರುವೆ ದ್ರೋಹ 
ಹೃದಯದಲ್ಲಿ ನಾ
ಪಶ್ಚಾತ್ತಾಪದಲ್ಲಿ
ಯೂದನಂತಾಗದೆ
ಪೇತ್ರನಂತಾಗಲು
ಆತ್ಮರ ವರವಿರಿಸಿ
ಬಂಡೆಯಲ್ಲದಿದ್ದರೂ
ನಿಮ್ಮ ರಾಜ್ಯದ ಕೋಟೆಯ
ಒಂದು ಸಣ್ಣ ಕಲ್ಲಾಗಿಸಿ

14.04.25 - “ಆಕೆಯ ಗೊಡವೆ ನಿನಗೆ ಬೇಡ. ನನ್ನ ಶವಸಂಸ್ಕಾರದ ದಿನಕ್ಕಾಗಿ ಆಕೆ ಅದನ್ನು ಇಟ್ಟುಕೊಳ್ಳಲಿ"

ಮೊದಲನೇ ವಾಚನ: ಯೆಶಾಯ 42:1-7

ಇಗೋ, ನನ್ನ ದಾಸನು ! ನನ್ನ ಆಧಾರ ಪಡೆದವನು ನನ್ನಿಂದ ಆಯ್ಕೆಯಾದವನು ನನಗೆ ಪರಮ ಪ್ರಿಯನು. ನೆಲೆಗೊಳಿಸಿರುವೆ ಇವನಲ್ಲಿ ನನ್ನ ಆತ್ಮವನು ಅನ್ಯರಾಷ್ಟ್ರಗಳಿಗೆ ಸಾರುವನಿವನು ಸದ್ಧರ್ಮವನು. ಆತ ಕೂಗಾಡುವಂಥವನಲ್ಲ, ಕಿರಿಚಾಡುವಂಥವನಲ್ಲ, ಹಾದಿಬೀದಿಗಳಲ್ಲಿ ಅವನ ಧ್ವನಿ ಕೇಳಿಸುವುದೇ ಇಲ್ಲ. ಮುರಿಯುವುದಿಲ್ಲ ಆತ, ಜಜ್ಜಿದ ದಂಟನು ನಂದಿಸುವುದಿಲ್ಲ ಆತ, ಕಳೆಗುಂದಿದ ದೀಪವನು ತಪ್ಪದೆ ಸಿದ್ಧಿಗೆ ತರುವನಾತ ಸದ್ಧರ್ಮವನು. ಎಡವಿ ಬೀಳನವನು, ಎದೆಗುಂದನವನು ಜಗದೊಳು ಸ್ಥಾಪಿಸುವ ತನಕ ಸದ್ಧರ್ಮವನು, ಎದುರುನೋಡುವುವು ದ್ವೀಪ- ದ್ವೀಪಾಂತರಗಳು ಆತನ ಧರ್ಮಶಾಸ್ತ್ರವನು. ಆಕಾಶಮಂಡಲವನ್ನುಂಟುಮಾಡಿ ಹರಡಿದ ದೇವರು, ಭೂಮಂಡಲವನ್ನೂ ಅದರಲ್ಲಿ ಬೆಳೆದು ದೆಲ್ಲವನ್ನೂ ವೃದ್ಧಿಗೊಳಿಸುವವನು, ಭೂನಿವಾಸಿಗಳಿಗೆ ಜೀವವನ್ನೂ ಭೂಚರರಿಗೆ ಜೀವಾತ್ಮವನ್ನೂ ಅನುಗ್ರಹಿಸುವಾ ಸರ್ವೇಶ್ವರ ಇಂತೆನ್ನುತಿಹನು: ಸರ್ವೇಶ್ವರಸ್ವಾಮಿಯಾದ ನಾನು ಕೈ ಹಿಡಿದು ಕಾದಿರಿಸುವೆನು ನಿನ್ನನು, ಕರೆದಿಹೆನು ನಿನ್ನನ್ನು ಸದ್ಧರ್ಮ ಸಾಧನೆಗಾಗಿ ಇತ್ತಿರುವೆನು ನಿನ್ನನು ಜನರಿಗೆ ಒಡಂಬಡಿಕೆಯಾಗಿ ನೇಮಿಸಿರುವೆನು ನಿನ್ನನು ರಾಷ್ಟ್ರಗಳಿಗೆ ಬೆಳಕಾಗಿ. ಕೊಡುವೆ ನೀನು ಕಣ್ಣನ್ನು ಕುರುಡರಿಗೆ ತರುವೆ ಬಂಧಿಗಳನ್ನು ಸೆರೆಯಿಂದ ಹೊರಗೆ ಕತ್ತಲೆಯ ಕಾರಾಗೃಹದಿಂದ ಅವರನ್ನು ಬೆಳಕಿಗೆ.

ಕೀರ್ತನೆ: 27:1, 2, 3, 13-14
ಶ್ಲೋಕ: ನನಗೆ ಬೆಳಕು, ನನಗೆ ರಕ್ಷೆ ಪ್ರಭುವೆ

ನನಗೆ ಬೆಳಕು‌ ನನಗೆ ರಕ್ಷೆ ಪ್ರಭುವೆ |
ನಾನಾರಿಗೂ ಅಳುಕೆನು ||

ನನ್ನ ಬಾಳಿಗಾಧಾರ ಪ್ರಭುವೆ |
ನಾನಾರಿಗೂ ಅಂಜೆನು ||
ಕೇಡು ಮಾಡಬಂದರೆನಗೆ ಕೊಲೆಕಡುಕರು |
ಎಡವಿಬಿದ್ದರು, ತಾವೇ ಅಳಿದುಹೋದರು ||

ಸೇನೆ ಸಮೇತ ಶತ್ರು ಬಂದರೂ ಎದೆಗುಂದೆನು |
ಸಮರಕ್ಕೆರಗಿದರೂ ನಾ ಭರವಸೆಯಿಂದಿರುವೆನು‌ ||

ಪ್ರಭುವಿನೊಳಿತನು ನಾ ಕಾಣುವೆ ಜೀವಲೋಕದೊಳು |
ನಾನಿಟ್ಟಿರುವೆ ನಂಬಿಕೆ ನಿರೀಕ್ಷೆ ಅದರೊಳು ||
ಪ್ರಭುವನು ಎದುರುನೋಡುತ್ತಿರು ಮನವೇ
ಧೈರ್ಯದಿಂದ ನಿರೀಕ್ಷಿಸುತ್ತಿರು ಎದೆಗುಂದದೆ ||

ಶುಭಸಂದೇಶ: ಯೊವಾನ್ನ 12:1-11



ಪಾಸ್ಕಹಬ್ಬಕ್ಕೆ ಇನ್ನೂ ಆರು ದಿನಗಳಿರುವಾಗ ಯೇಸುಸ್ವಾಮಿ ಬೆಥಾನಿಯಕ್ಕೆ ಬಂದರು. ಅವರು ಲಾಸರನನ್ನು ಸಾವಿನಿಂದ ಜೀವಕ್ಕೆ ಎಬ್ಬಿಸಿದ ಊರದು. ಯೇಸುವಿಗೆ ಅಲ್ಲಿ ಒಂದು ಔತಣವನ್ನು ಏರ್ಪಡಿಸಲಾಗಿತ್ತು. ಮಾರ್ತಳು ಬಡಿಸುತ್ತಿದ್ದಳು. ಯೇಸುವಿನೊಡನೆ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದವರಲ್ಲಿ ಲಾಸರನೂ ಒಬ್ಬ. ಆಗ ಮರಿಯಳು ಸುಮಾರು ಅರ್ಧ ಲೀಟರಿನಷ್ಟು, ಅತ್ಯಂತ ಬೆಲೆಬಾಳುವ ಅಚ್ಚ ಜಟಾಮಾಂಸಿ ಸುಗಂಧ ತೈಲವನ್ನು ತಂದು ಯೇಸುವಿನ ಪಾದಗಳಿಗೆ ಹಚ್ಚಿ, ತನ್ನ ತಲೆಗೂದಲಿನಿಂದ ಆ ಪಾದಗಳನ್ನು ಒರಸಿದಳು. ತೈಲದ ಸುವಾಸನೆ ಮನೆಯಲ್ಲೆಲ್ಲಾ ಹರಡಿತು. ಯೇಸುವನ್ನು ಹಿಡಿದುಕೊಡಲಿದ್ದ ಹಾಗೂ ಶಿಷ್ಯರಲ್ಲಿ ಒಬ್ಬನಾಗಿದ್ದ ಇಸ್ಕರಿಯೋತಿನ ಯೂದನು, “ಈ ಸುಗಂಧ ತೈಲವನ್ನು ಮುನ್ನೂರು ದೆನಾರಿ ನಾಣ್ಯಗಳಿಗೆ ಮಾರಿ, ಬಂದ ಹಣವನ್ನು ಬಡಬಗ್ಗರಿಗೆ ಕೊಡಬಹುದಿತ್ತಲ್ಲಾ?” ಎಂದನು. ಬಡವರ ಹಿತಚಿಂತನೆಯಿಂದೇನೂ ಅವನು ಹೀಗೆ ಹೇಳಲಿಲ್ಲ. ತನ್ನ ವಶದಲ್ಲಿ ಇಡಲಾಗಿದ್ದ ಹಣದ ಚೀಲದಿಂದ ಸ್ವಂತ ಉಪಯೋಗಕ್ಕಾಗಿ ಬಳಸುತ್ತಿದ್ದ ಕಳ್ಳ ಅವನು. ಆಗ ಯೇಸು, “ಆಕೆಯ ಗೊಡವೆ ನಿನಗೆ ಬೇಡ. ನನ್ನ ಶವಸಂಸ್ಕಾರದ ದಿನಕ್ಕಾಗಿ ಆಕೆ ಅದನ್ನು ಇಟ್ಟುಕೊಳ್ಳಲಿ. ಬಡಬಗ್ಗರು ನಿಮ್ಮ ಬಳಿಯಲ್ಲಿ ಯಾವಾಗಲೂ ಇರುತ್ತಾರೆ. ಆದರೆ ನಾನು ಯಾವಾಗಲೂ ನಿಮ್ಮ ಬಳಿ ಇರುವುದಿಲ್ಲ,” ಎಂದರು.
ಲಾಸರನ ಕೊಲೆಗೆ ಹಂಚಿಕೆ : ಯೇಸುಸ್ವಾಮಿ ಅಲ್ಲಿರುವುದನ್ನು ಕೇಳಿ ಯೆಹೂದ್ಯರ ಒಂದು ದೊಡ್ಡಗುಂಪು ಬಂದಿತು. ಯೇಸುವನ್ನು ಮಾತ್ರವಲ್ಲ, ಅವರು ಸಾವಿನಿಂದ ಜೀವಕ್ಕೆ ಎಬ್ಬಿಸಿದ ಲಾಸರನನ್ನೂ ಕಾಣಲು ಆ ಜನರು ಅಲ್ಲಿಗೆ ಬಂದಿದ್ದರು. ಲಾಸರನ ನಿಮಿತ್ತವಾಗಿ ಅನೇಕ ಯೆಹೂದ್ಯರು ತಮ್ಮನ್ನು ಬಿಟ್ಟು ಯೇಸುವಿನಲ್ಲಿ ನಂಬಿಕೆಯಿಟ್ಟ ಕಾರಣ ಲಾಸರನನ್ನು ಕೂಡ ಕೊಲ್ಲಬೇಕೆಂದು ಮುಖ್ಯಯಾಜಕರು ಆಲೋಚಿಸಿದರು.

ಮನಸ್ಸಿಗೊಂದಿಷ್ಟು : ಸುಮಾರು 300 ದಿನಗಳ ಅಥವಾ 9 ತಿಂಗಳ ದಿನಗೂಲಿಯಷ್ಟು ಭಾರಿ ಬೆಲೆಯ ಸುಗಂಧ ದ್ರವ್ಯವನ್ನು ಮರಿಯಳು ಯೇಸುವಿಗಾಗಿ ವ್ಯಯಿಸುತ್ತಾಳೆ. ಯಹೂದ್ಯ ಸಂಪ್ರದಾಯದಲ್ಲಿ ಒಬ್ಬ ಮಹಿಳೆ ಕೂದಲನ್ನು ಕಟ್ಟದೆ ಬಿಡಬಾರದು ಎಂಬುದನ್ನೂ ಲೆಕ್ಕಿಸದೆ ತನ್ನ ಕೂದಲಿನಿಂದ ಯೇಸುವಿನ ಪಾದವನ್ನು ಒರೆಸಿ ಯೇಸುವಿಗಿಂತ ಶ್ರೇಷ್ಠವಾದುದು ಮತ್ತೇನಿಲ್ಲ ಎಂಬ ಸಂದೇಶವನ್ನು ಲೋಕಕ್ಕೆ ನೀಡುತ್ತಾಳೆ. ಈ ಲೋಕದ ಸರ್ವವೂ ಅದೆಷ್ಟೇ ಮೌಲ್ಯದ್ದಾಗಿದ್ದರೂ, ಸಂಪ್ರದಾಯದ ಹಿನ್ನಲೆಯದ್ದಾಗಿದ್ದರೂ ಯೇಸುವಿನ ಮುಂದೆ ಗೌಣ್ಯವಾಗಬೇಕು ಎಂಬ ಸಂದೇಶ ನಮ್ಮ ಹೃದಯದಲ್ಲಿ ಆ ಸುಗಂಧ ದ್ರವ್ಯದ ಪರಿಮಳದಂತೆ ಹರಡಿ, ವ್ಯಾಪಿಸಿ ಉಳಿದುಕೊಳ್ಳಲಿ.

ಪ್ರಶ್ನೆ : ಯೇಸುವಿಗೆ ನಮ್ಮ ಜೀವನದಲ್ಲಿ ನಾವು ಕೊಟ್ಟಿರುವ ಮೌಲ್ಯವೆಷ್ಟು?

13.04.25 - ‘ನನ್ನ ಕಾಲ ಸವಿೂಪಿಸಿತು, ಪಾಸ್ಕವನ್ನು ನನ್ನ ಶಿಷ್ಯರ ಸಮೇತ ನಿನ್ನ ಮನೆಯಲ್ಲಿಯೇ ಆಚರಿಸಬೇಕೆಂದಿದ್ದೇನೆ’

ಗರಿಗಳ ಭಾನುವಾರ   



 ಮೊದಲನೇ ವಾಚನ: ಯೆಶಾಯ: 50:4-7

ದಣಿದವರನ್ನು ಹಿತನುಡಿಗಳಿಂದ ತಣಿಸುವಂತೆ ಅನುಗ್ರಹಿಸುತ್ತಾನೆನಗೆ ಸ್ವಾಮಿ ಸರ್ವೇಶ್ವರ ಶಿಕ್ಷಿತರ ನಾಲಗೆಯನು; ಶಿಷ್ಯನೋಪಾದಿ ನಾನು ಆತನನ್ನು ಆಲಿಸುವಂತೆ ಬೆಳಬೆಳಗೂ ನನ್ನನೆಚ್ಚರಿಸಿ ಚೇತನಗೊಳಿಸುತ್ತಾನೆ ನನ್ನ ಕಿವಿಯನು. ತೆರೆದಿಹನು ಸ್ವಾಮಿ ಸರ್ವೇಶ್ವರ ನನ್ನ ಕಿವಿಯನು ಎಂದೇ ವಿಮುಖನಾಗಲಿಲ್ಲ ನಾನು, ಪ್ರತಿಭಟಿಸಲಿಲ್ಲ ಆತನನು. ಬೆನ್ನುಕೊಟ್ಟೆನು ಹೊಡೆಯುವವರಿಗೆ ಗಡ್ಡ ಒಡ್ಡಿದೆನು ಅದನ್ನು ಕೀಳುವವರಿಗೆ ಮುಖ ಮರೆಮಾಡಲಿಲ್ಲ ಉಗುಳುಬುಗುಳಿಗೆ. ನೆರವಾಗಿಹನು ನನಗೆ ಸ್ವಾಮಿ ಸರ್ವೇಶ್ವರ ಎಂದೇ ತಲೆತಗ್ಗಿಸಲಿಲ್ಲ ನಾನು ನಾಚಿಕೆಯಿಂದ ಗಟ್ಟಿಮಾಡಿಕೊಂಡೆ ಮುಖವನು ಕಗ್ಗಲ್ಲಿನ ಹಾಗೆ ಆಶಾಭಂಗಪಡಲಾರೆನೆಂದು ಗೊತ್ತು ನನಗೆ.

ಕೀರ್ತನೆ: 22:8-9, 17-18, 19-20, 23-24
ಶ್ಲೋಕ: ದೇವಾ, ಓ ಎನ್ನ ದೇವಾ, ಏಕೆನ್ನ ಕೈ ಬಿಟ್ಟೆ?

ದೇವಾ ಓ ಎನ್ನ ದೇವಾ ಏಕೆನ್ನ ಕೈ ಬಿಟ್ಟೆ ? |
ಕಿವಿಗೊಡದೆ ಏಕೆ ದೂರವಾಗಿ ಬಿಟ್ಟೆ ? ||

ಇತ್ತನಿವನು ಭರವಸೆ , ಪ್ರಭುವೆ ತನ್ನುದ್ಧಾರಕ ನೆಂದು |
ಅತನಿಗಿವನು ಮೆಚ್ಚುಗೆಯಾದರೆ ರಕ್ಷಿಸಲಿ ಇಂತೆಂದು ||

ಮಾತೆಯುದರದಿಂದ ಎನ್ನನು ಹೊರ ಬರಿಸಿದವನು ನೀನು |
ನಿಶ್ಚಿಂತೆಯಾ ಕೂಸನು ಆಕೆಯ ಮಡಿಲಿನಲಿ ಇರಿಸಿದವನು ನೀನು ||

ಎಣಿಸಬಹುದಿದೆ ನನ್ನೆಲುಬುಗಳನ್ನೆಲ್ಲವನು |
ಹಿಗ್ಗುತ್ತಹರು ದುರುಗುಟ್ಟಿ ನೋಡೆನ್ನನು ||
ನನ್ನ ಉಡುಗೆಗಳನ್ನು ಹಂಚಿಕೊಂಡರು |
ನನ್ನ ಅಂಗಿಗೋಸ್ಕರ ಚೀಟು ಹಾಕಿದರು ||

ನನ್ನಿಂದ ದೂರ ಸರಿಯಲು ಬೇಡ, ಪ್ರಭು |
ನೀನೆನ್ನ ಶಕ್ತಿ, ನೆರವಾಗಲು ತ್ವರೆ ಮಾಡು ||
ಕತ್ತಿಗೆ ತುತ್ತಾಗದಂತೆ ತಪ್ಪಿಸು |
ಕುಕ್ಕುರಗಳಿಂದ ಪ್ರಾಣವನುಳಿಸು ||

ಮಣಿಯಿರಿ, ಪ್ರಭುವಿನಲಿ ಭಯ ಭಕುತಿಯುಳ್ಳವರೆ  |
ಭಜಿಸಿರಿ ಇಸ್ರಯೇಲರೆ , ಯಾಕೋಬ ಕುಲಜರೇ ||

ತೃಣೀಕರಿಸನು, ತಿರಸ್ಕರಿಸನು ದಲಿತನನು |
ವಿಮುಖನಾಗನು, ಪ್ರಾರ್ಥನೆಗೆ ಕಿವಿಗೊಡುವನು ||


ಎರಡನೇ ವಾಚನ: ಪಿಲಿಪ್ಪಿಯರಿಗೆ: 2:6-11

ದೇವಸ್ವರೂಪಿ ತಾನಾಗಿದ್ದರೂ ನಿರುತ ದೇವರಿಗೆ ಸಮನಾದ ಆ ಸಿರಿ ಪದವಿಯನಾತ ಹಿಡಿದಿಟ್ಟುಕೊಳ್ಳಲಿಲ್ಲ ಬಿಡಲೊಲ್ಲೆನೆನುತ. ತನ್ನನೇ ಬರಿದು ಮಾಡಿಕೊಂಡು ದಾಸನ ರೂಪವನು ಧರಿಸಿಕೊಂಡು ಮನುಜನಾಕಾರದಲಿ ಕಾಣಿಸಿಕೊಂಡು ನರಮಾನವರಿಗೆ ಸರಿಸಮನಾದ. ತನ್ನನೇ ಆತ ತಗ್ಗಿಸಿಕೊಂಡು ವಿಧೇಯನಾಗಿ ನಡೆದುಕೊಂಡು ಮರಣಪರಿಯಂತ, ಹೌದೌದು, ಶಿಲುಬೆಯ ಮರಣಪರಿಯಂತ ವಿಧೇಯನಾದ. ಎಂತಲೇ ಪರಮೋನ್ನತ ಸ್ಥಾನಕ್ಕೇರಿಸಿದನಾತನನು ಇತ್ತನು ಹೆಸರುಗಳೊಳುತ್ತಮ ಹೆಸರನು ದೇವಪರಮನು. ಯೇಸುವಿನ ಹೆಸರಿಗೆಂದೇ ಮೊಣಕಾಲೂರಿ ಮಣಿವರು ಸ್ವರ್ಗವಾಸಿಗಳು, ಭೂನಿವಾಸಿಗಳು, ಪಾತಾಳ ಜೀವರಾಶಿಗಳು. ‘ಕ್ರಿಸ್ತ ಯೇಸುವೇ ಪ್ರಭು’ ಎಂದೆಲ್ಲರಿಗೆ ಅರಿಕೆ ಮಾಡುವರು ಪಿತದೇವನ ಮಹಿಮೆಯನು ಈ ಪರಿ ಹೊಗಳಿ ಸಾರುವರವರು.

ಶುಭಸಂದೇಶ: ಮಾರ್ಕ 14: 1-15:47 (15: 1-39)


ಬೆಳಗಾದ ಕೂಡಲೇ, ಮುಖ್ಯಯಾಜಕರೂ ಪ್ರಮುಖರೂ ಧರ್ಮಶಾಸ್ತ್ರಿಗಳೂ ಹಾಗು ನ್ಯಾಯಸಭೆಯ ಇತರೆ ಸದಸ್ಯರೂ ಒಟ್ಟುಗೂಡಿ ಸಮಾಲೋಚನೆ ನಡೆಸಿದರು. ಯೇಸುಸ್ವಾಮಿಗೆ ಬೇಡಿಹಾಕಿ ಪಿಲಾತನ ಬಳಿಗೆ ಕರೆದೊಯ್ದು ಆತನ ವಶಕ್ಕೊಪ್ಪಿಸಿದರು. ಪಿಲಾತನು ಯೇಸುವನ್ನು, “ನೀನು ಯೆಹೂದ್ಯರ ಅರಸನೋ?” ಎಂದು ಪ್ರಶ್ನಿಸಿದನು. “ಅದು ನಿಮ್ಮ ಬಾಯಿಂದಲೇ ಬಂದಿದೆ,” ಎಂದು ಯೇಸು ಮರುನುಡಿದರು. ಮುಖ್ಯ ಯಾಜಕರು ಯೇಸುವಿನ ಮೇಲೆ ಅನೇಕ ಆಪಾದನೆಗಳನ್ನು ಹೊರಿಸುತ್ತಿದ್ದರು. ಆದುದರಿಂದ ಪಿಲಾತನು ಪುನಃ ಯೇಸುವನ್ನು, “ಇವರು ಇಷ್ಟೊಂದು ಆಪಾದನೆಗಳನ್ನು ನಿನ್ನ ಮೇಲೆ ಹೊರಿಸುತ್ತಿರುವಾಗ ನೀನು ಯಾವ ಉತ್ತರವನ್ನೂ ಕೊಡುವುದಿಲ್ಲವೇ?” ಎಂದು ಕೇಳಿದನು. ಆದರೆ ಯೇಸು ಇನ್ನೊಂದು ಮಾತನ್ನೂ ಆಡದೆ ಮೌನವಾಗಿದ್ದರು. ಇದನ್ನು ಕಂಡು ಪಿಲಾತನು ಆಶ್ಚರ್ಯಪಟ್ಟನು. ಪ್ರತಿ ಪಾಸ್ಕಹಬ್ಬದ ಸಂದರ್ಭದಲ್ಲಿ, ಜನರು ಕೇಳಿಕೊಂಡ ಒಬ್ಬ ಸೆರೆಯಾಳನ್ನು ಬಿಡುಗಡೆ ಮಾಡುವುದು ಪಿಲಾತನ ಪದ್ಧತಿಯಾಗಿತ್ತು. ದಂಗೆಯೊಂದರಲ್ಲಿ ಕೊಲೆಮಾಡಿದ್ದ ಕೆಲವರು ಈ ಸಮಯದಲ್ಲಿ ಸೆರೆಮನೆಯಲ್ಲಿ ಇದ್ದರು. ಇವರೊಡನೆ ಬರಬ್ಬ ಎಂಬವನೂ ಸೆರೆಯಲ್ಲಿದ್ದನು. ಜನರ ಗುಂಪು ಪಿಲಾತನ ಬಳಿಗೆ ಹೋಗಿ, ಪದ್ಧತಿಯಂತೆ ಈ ವರ್ಷವೂ ಒಬ್ಬ ಕೈದಿಯನ್ನು ತಮಗೆ ಬಿಟ್ಟು ಕೊಡಬೇಕೆಂದು ಕೇಳಿದಾಗ ಪಿಲಾತನು, “ಯೆಹೂದ್ಯರ ಅರಸನನ್ನು ನಾನು ನಿಮಗೆ ಬಿಟ್ಟುಕೊಡಬಹುದೋ?” ಎಂದು ಅವರನ್ನು ಕೇಳಿದನು. ಏಕೆಂದರೆ, ಮುಖ್ಯಯಾಜಕರು ಅಸೂಯೆಯಿಂದಲೇ ಯೇಸುವನ್ನು ತನಗೆ ಒಪ್ಪಿಸಿದ್ದಾರೆ ಎಂದು ಅವನಿಗೆ ಚೆನ್ನಾಗಿ ತಿಳಿದಿತ್ತು. ಆದರೆ ಬರಬ್ಬನನ್ನೇ ಬಿಡುಗಡೆ ಮಾಡುವಂತೆ ಪಿಲಾತನನ್ನು ಕೇಳಿಕೊಳ್ಳಬೇಕೆಂದು ಮುಖ್ಯ ಯಾಜಕರು ಜನರನ್ನು ಪ್ರಚೋದಿಸಿದರು. ಆಗ ಪಿಲಾತನು ಪುನಃ “ಹಾಗಾದರೆ ಯೆಹೂದ್ಯರ ಅರಸನೆಂದು ನೀವು ಕರೆಯುವ ಈತನನ್ನು ನಾನೇನು ಮಾಡಲಿ?” ಎಂದು ಜನರನ್ನು ಕೇಳಿದನು. ಅದಕ್ಕೆ ಅವರು, “ಅವನನ್ನು ಶಿಲುಬೆಗೇರಿಸಿ,” ಎಂದು ಬೊಬ್ಬೆ ಹಾಕಿದರು. “ಏಕೆ, ಇವನೇನು ಮಾಡಿದ್ದಾನೆ?” ಎಂದು ಪಿಲಾತನು ಮತ್ತೆ ಅವರನ್ನು ಪ್ರಶ್ನಿಸಲು ಅವರು, “ಅವನನ್ನು ಶಿಲುಬೆಗೇರಿಸಿ, ಶಿಲುಬೆಗೇರಿಸಿ,” ಎಂದು ಇನ್ನೂ ಹೆಚ್ಚಾಗಿ ಆರ್ಭಟಿಸಿದರು. ಪಿಲಾತನು ಜನಸಮೂಹವನ್ನು ಮೆಚ್ಚಿಸುವ ಸಲುವಾಗಿ ಬರಬ್ಬನನ್ನು ಬಿಡುಗಡೆ ಮಾಡಿದನು. ಯೇಸುವನ್ನು ಕೊರಡೆಗಳಿಂದ ಹೊಡೆಸಿ, ಶಿಲುಬೆಗೇರಿಸುವುದಕ್ಕೆ ಒಪ್ಪಿಸಿಬಿಟ್ಟನು. ಅನಂತರ ಸೈನಿಕರು ಯೇಸುಸ್ವಾಮಿಯನ್ನು ರಾಜಭವನದ ಅಂಗಣದೊಳಕ್ಕೆ ಕೊಂಡೊಯ್ದು, ತಮ್ಮ ಪಡೆಯೆಲ್ಲವನ್ನೂ ಒಟ್ಟಿಗೆ ಕರೆದರು. ಯೇಸುವಿಗೆ ನಸುಗೆಂಪು ಮೇಲಂಗಿಯನ್ನು ಹೊದಿಸಿದರು. ಮುಳ್ಳಿನಿಂದ ಒಂದು ಕಿರೀಟವನ್ನು ಹೆಣೆದು, ಅವರ ತಲೆಯ ಮೇಲೆ ಇರಿಸಿದರು. ತರುವಾಯ, “ಯೆಹೂದ್ಯರ ಅರಸನಿಗೆ ಜಯವಾಗಲಿ,” ಎಂದು ನಾಟಕೀಯವಾಗಿ ವಂದಿಸಿದರು. ಕೋಲಿನಿಂದ ಅವರ ತಲೆಯ ಮೇಲೆ ಹೊಡೆದು, ಉಗುಳಿ, ಮೊಣಕಾಲೂರಿ ಗೌರವಿಸುವಂತೆ ನಟಿಸಿದರು. ಹೀಗೆ ಯೇಸುವನ್ನು ಪರಿಹಾಸ್ಯ ಮಾಡಿದ ಬಳಿಕ, ಆ ನಸುಗೆಂಪು ಮೇಲಂಗಿಯನ್ನು ತೆಗೆದುಹಾಕಿ, ಅವರ ಬಟ್ಟೆಯನ್ನೇ ಮತ್ತೆ ತೊಡಿಸಿದರು. ಬಳಿಕ ಶಿಲುಬೆಗೆ ಏರಿಸುವುದಕ್ಕಾಗಿ ಅವರನ್ನು ಕರೆದುಕೊಂಡು ಹೋದರು. ಆಗ ಸಿರೇನ್ ಪಟ್ಟಣದ ಸಿಮೋನ ಎಂಬುವನು ಹಳ್ಳಿಯ ಕಡೆಯಿಂದ ಆ ಮಾರ್ಗವಾಗಿ ಬರುತ್ತಿದ್ದನು. ಈತನು ಅಲೆಕ್ಸಾಂಡರ್ ಹಾಗೂ ರೂಫ ಎಂಬವರ ತಂದೆ. ಯೇಸುಸ್ವಾಮಿಯ ಶಿಲುಬೆಯನ್ನು ಹೊರುವಂತೆ ಸೈನಿಕರು ಅವನನ್ನು ಬಲವಂತಮಾಡಿದರು. ಬಳಿಕ ಯೇಸುವನ್ನು ಗೊಲ್ಗೊಥ ಎಂಬ ಸ್ಥಳಕ್ಕೆ ಕರೆದುಕೊಂಡು ಬಂದರು. ಗೊಲ್ಗೊಥ ಎಂದರೆ ‘ಕಪಾಲ ಸ್ಥಳ’ ಎಂದು ಅರ್ಥ. ಅಲ್ಲಿ ರಕ್ತಬೋಳ ಮಿಶ್ರಿತ ದ್ರಾಕ್ಷಾರಸವನ್ನು ಯೇಸುವಿಗೆ ಕೊಟ್ಟರು. ಆದರೆ ಅದನ್ನು ಅವರು ಕುಡಿಯಲಿಲ್ಲ. ಕೊನೆಗೆ ಅವರನ್ನು ಶಿಲುಬೆಗೆ ಏರಿಸಿದರು. ಅವರ ಬಟ್ಟೆಗಳನ್ನು ಯಾವು ಯಾವುದು, ಯಾರು ಯಾರಿಗೆ ಸಿಗಬೇಕೆಂದು ತಿಳಿಯಲು ಚೀಟುಹಾಕಿ ತಮ್ಮತಮ್ಮೊಳಗೆ ಹಂಚಿಕೊಂಡರು. ಯೇಸುವನ್ನು ಶಿಲುಬೆಗೇರಿಸಿದಾಗ, ಬೆಳಿಗ್ಗೆ ಸುಮಾರು ಒಂಬತ್ತು ಗಂಟೆಯಾಗಿತ್ತು. ಅವರ ಮೇಲೆ ಹೊರಿಸಿದ್ದ ದೋಷಾರೋಪಣೆಯನ್ನು, ‘ಈತ ಯೆಹೂದ್ಯರ ಅರಸ’ ಎಂದು ಬರೆಯಲಾಗಿತ್ತು. ಅಲ್ಲದೆ ಯೇಸುವಿನ ಬಲಗಡೆ ಒಬ್ಬನು, ಎಡಗಡೆ ಒಬ್ಬನು, ಹೀಗೆ ಇಬ್ಬರು ಕಳ್ಳರನ್ನು ಅವರ ಸಂಗಡ ಶಿಲುಬೆಗೇರಿಸಿದರು. (ಹೀಗೆ ‘ಅವರನ್ನು ದ್ರೋಹಿಗಳ ಸಾಲಿನಲ್ಲಿ ಸೇರಿಸಿದರು,’ ಎಂಬ ಪವಿತ್ರಗ್ರಂಥದ ವಾಕ್ಯವು ನೆರವೇರಿತು). ಪಕ್ಕದಲ್ಲಿ ಹಾದುಹೋಗುತ್ತಿದ್ದ ಜನರು ತಲೆಯಾಡಿಸುತ್ತಾ, “ಆಹಾ, ಮಹಾದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಅದನ್ನು ಮತ್ತೆ ಕಟ್ಟಬಲ್ಲವನೇ, ಶಿಲುಬೆಯಿಂದ ಇಳಿದು ಬಂದು ನಿನ್ನನ್ನು ನೀನೇ ಈಗ ರಕ್ಷಿಸಿಕೋ!” ಎಂದು ಯೇಸುವನ್ನು ಮೂದಲಿಸಿದರು. ಅದೇ ಪ್ರಕಾರ ಮುಖ್ಯಯಾಜಕರೂ ಧರ್ಮಶಾಸ್ತ್ರಿಗಳೂ ಸೇರಿ ಅವರನ್ನು ಪರಿಹಾಸ್ಯ ಮಾಡುತ್ತಾ, “ಇವನು ಇತರರನ್ನು ರಕ್ಷಿಸಿದ, ಆದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲು ಇವನಿಂದಾಗದು; ಇಸ್ರಯೇಲರ ಅರಸನಾದ ಈ ಕ್ರಿಸ್ತನು ಶಿಲುಬೆಯಿಂದ ಇಳಿದು ಬರಲಿ; ಆಗ ನೋಡಿ ನಂಬುತ್ತೇವೆ,” ಎಂದು ಪರಸ್ಪರ ಮಾತನಾಡಿಕೊಂಡರು. ಯೇಸುವಿನೊಡನೆ ಶಿಲುಬೆಗೇರಿಸಲಾಗಿದ್ದವರು ಸಹ ಅವರನ್ನು ಹಂಗಿಸುತ್ತಿದ್ದರು. ಆಗ ನಡುಮಧ್ಯಾಹ್ನ. ಆ ಹೊತ್ತಿನಿಂದ ಮೂರುಗಂಟೆಯವರೆಗೂ ನಾಡಿನಲ್ಲೆಲ್ಲಾ ಕತ್ತಲೆ ಕವಿಯಿತು. ಮೂರನೆಯ ಗಂಟೆಯ ಸಮಯದಲ್ಲಿ, ಯೇಸುಸ್ವಾಮಿ: “ಎಲೋಹಿ, ಎಲೋಹಿ, ಲಮಾ ಸಬಕ್ತಾನಿ?” ಎಂದರೆ, “ನನ್ನ ದೇವರೇ, ನನ್ನ ದೇವರೇ, ನನ್ನನ್ನೇಕೆ ಕೈಬಿಟ್ಟಿದ್ದೀರಿ?” ಎಂದು ಗಟ್ಟಿಯಾಗಿ ಕೂಗಿಕೊಂಡರು. ಅಲ್ಲಿ ನಿಂತಿದ್ದವರಲ್ಲಿ ಕೆಲವರು ಇದನ್ನು ಕೇಳಿ, “ಇಗೋ, ಇವನು ಎಲೀಯನನ್ನು ಕರೆಯುತ್ತಿದ್ದಾನೆ!” ಎಂದರು. ಆಗ ಅವರಲ್ಲೊಬ್ಬನು ಓಡಿಹೋಗಿ, ಸ್ಪಂಜನ್ನು ಹುಳಿರಸದಲ್ಲಿ ತೋಯಿಸಿ, ಅದನ್ನು ಒಂದು ಕೋಲಿನ ತುದಿಗೆ ಸಿಕ್ಕಿಸಿ, ಯೇಸುವಿಗೆ ಕುಡಿಯಲು ಕೊಡುತ್ತಾ, “ತಾಳಿ, ಇವನನ್ನು ಶಿಲುಬೆಯಿಂದ ಬಿಡುಗಡೆ ಮಾಡಿ ಇಳಿಸುವುದಕ್ಕೆ ಎಲೀಯನು ಬರುವನೋ, ನೋಡೋಣ,” ಎಂದನು. ಯೇಸುವಾದರೋ ಗಟ್ಟಿಯಾಗಿ ಕೂಗಿ ಪ್ರಾಣಬಿಟ್ಟರು. ಆಗ ಮಹಾದೇವಾಲಯದ ತೆರೆ ಮೇಲಿನಿಂದ ಕೆಳಗಿನವರೆಗೂ ಇಬ್ಭಾಗವಾಗಿ ಸೀಳಿಹೋಯಿತು. ಯೇಸು ಹೀಗೆ ಪ್ರಾಣಬಿಟ್ಟದ್ದನ್ನು ಎದುರುನಿಂತು ನೋಡುತ್ತಿದ್ದ ಶತಾಧಿಪತಿ, “ಸತ್ಯವಾಗಿಯೂ ಈ ಮನುಷ್ಯ ದೇವರ ಪುತ್ರ!” ಎಂದನು.

ಮನಸ್ಸಿಗೊಂದಿಷ್ಟು : ಯೇಸುಕ್ರಿಸ್ತರು ಜೆರುಸಲೇಮನ್ನು ಪ್ರವೇಶಿಸಿದ ಘಟನೆ ಮೈನವಿರೇಳಿಸುವಂಥದ್ದು.  ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನ ಯೇಸುವಿಗೆ ಕೊಟ್ಟ ಸ್ವಾಗತ ಐತಿಹಾಸಿಕ. ಯೇಸು ಬದುಕಿದ್ದ ಸುಮಾರು 160 ವರ್ಷಗಳ ಹಿಂದೆ ತಮ್ಮ ವೈರಿಗಳನ್ನು ಬಗ್ಗು ಬಡಿದ ಸೈಮನ್ ಮೆಕಾಭಿಯಸ್ ಎಂಬ ಸೈನ್ಯಾಧಿಕಾರಿಗೆ ಇದೇ ರೀತಿಯ ಸ್ವಾಗತವನ್ನು ಜನ ಜೆರುಸಲೇಮಿನಲ್ಲಿ ಕೊಟ್ಟಿದ್ದರು. ಯೇಸು ಸಹಾ ತಮ್ಮನ್ನು ಕಷ್ಟಗಳಿಂದ ಬಿಡಿಸುವ ಅದೇ ರೀತಿಯ ಕ್ರಾಂತಿಕಾರಿ ರಾಜ ಎಂಬ ಬಲವಾದ ನಂಬಿಕೆಯಿಂದಲೇ, ಒಬ್ಬ ರಾಜನಿಗೆ ಕೊಡುವ ಸ್ವಾಗತವನ್ನು ಗೌರವವನ್ನು ಯೇಸುವಿಗೆ ನೀಡುತ್ತಾರೆ.

ಆದರೆ ಯೇಸುವಿನ ಆಶಯವೇ ಬೇರೆಯಾಗಿತ್ತು ಯೇಸು ಒಂದು ಕತ್ತೆಯ ಮೇಲೆ ಶಾಂತಿದೂತನಾಗಿ ಪ್ರವೇಶಿಸುತ್ತಾರೆ. ಅಂದಿನಸಮಾಜದಲ್ಲಿ ಕತ್ತೆಗೆ ಮಹತ್ವದ ಸ್ಥಾನವಿತ್ತು. ಯುದ್ಧಕ್ಕೆ ಹೊರಟ ರಾಜ ಕುದುರೆಯ ಮೇಲೂ, ಶಾಂತಿಯನ್ನು ಸಾರುವ ರಾಜ ಕತ್ತಯ ಮೇಲೆ ಕೂತು ಸಾಗುವ ಪದ್ಧತಿಯಿತ್ತು. ಜನ ಅಂದು ಸಂಭ್ರಮಿಸಿದರೂ, ಕೆಲವೇ ದಿನಗಳ ಅಂತರದಲ್ಲಿ ಯೇಸು ನಿಸ್ಸಹಾಯಕರಾಗಿ ಪಿಲಾತನ ಎದುರು ನಿಂತಿರುವುದನ್ನು ಕಂಡು ಅವರ ನಿರೀಕ್ಷೆಗೆ ಪೆಟ್ಟು ಬಿತ್ತು. ಇಂದು ಗರಿಗಳನ್ನು ಹಿಡಿದು ಸ್ತುತಿಗೀತೆ ಹಾಡುತ್ತಿರುವ ನಾವು ಯೇಸುವಿನಿಂದ ಏನನ್ನು ನಿರೀಕ್ಷಿಸುತ್ತಿದ್ದೇವೆ?

ಹೊಸಾನ್ನ  ಎಂಬುದರ ಮೂಲ ಅರ್ಥ ’ರಕ್ಷಿಸು’  ಎಂದು ಪಂಡಿತರ ಅಭಿಪ್ರಾಯ. ಅನೇಕ ತಲ್ಲಣಗಳ ಈ ಸಮಯದಲ್ಲಿ ಹೊಸಾನ್ನದ ’ರಕ್ಷಿಸು’ ಎಂಬ ಮಾತೇ ನಮ್ಮದಾಗಲಿ. 

ಪ್ರಭುವೇ,
ಜೆರುಸಲೇಮ್ ದ್ವಾರಕ್ಕೆ
ಬಂದಿರಿ ಗರಿ ಜಯಘೋಷಗಳ 
ನಡುವೆ ರಾಜನಂತೆ

ದಿನಗಳಂತರದಲ್ಲಿ ನಿಂತಿರಿ  
ಮೌನದಿ ಪಿಲಾತನ 
ಮುಂದೆ ಅಪರಾಧಿಯಂತೆ

ಹೊತ್ತಿರಿ ಶಿಲುಬೆಯನ್ನು  
ಕಲ್ವಾರಿಯೆಡೆಗೆ ದೀನನಂತೆ
ತೂಗಿ ಮಡಿದಿರಿ ಘೋರ
ನೋವಿನಿಂದ ಕಳ್ಳನಂತೆ

ನಾನಾದರೋ ಇರುವೆ
ಏನೂ ಅಗಿಲ್ಲದಂತೆ
ಬನ್ನಿರಿ ಈ ಮನದ ದ್ವಾರಕ್ಕೆ
ನನ್ನ ಪಶ್ಚಾತ್ತಾಪದ
ಗರಿಗಳ ನಡುವೆ
ನಿಮ್ಮೊಡನೆ ನಾನೂ 
ಬರುವೆ ಸಿಮೋನನಂತೆ

12.04.25 - “ಇಡೀ ರಾಷ್ಟ್ರವೇ ನಿರ್ನಾಮವಾಗುವುದಕ್ಕಿಂತ ಜನತೆಗೋಸ್ಕರ ಒಬ್ಬನು ಸಾಯುವುದೇ ವಿಹಿತವೆಂದು ನಿಮಗೆ ಅರ್ಥವಾಗುತ್ತಿಲ್ಲವಲ್ಲಾ,”

ಮೊದಲನೇ ವಾಚನ: ಯೆಜೆಕಿಯೇಲ 37:21-28

ಸರ್ವೇಶ್ವರ ಇನ್ನೊಂದು ವಾಣಿಯನ್ನು ನನಗೆ ದಯಪಾಲಿಸಿದರು: "ನರಪುತ್ರನೇ, ಇದನ್ನು ಅವರಿಗೆ ನುಡಿ. ‘ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ಇಗೋ, ಇಸ್ರಯೇಲರು ವಶವಾಗಿರುವ ಜನಾಂಗಗಳಿಂದ ನಾನು ಅವರನ್ನು ಉದ್ಧರಿಸಿ, ಎಲ್ಲ ಕಡೆಯಿಂದಲು ಒಟ್ಟುಗೂಡಿಸಿ, ಸ್ವದೇಶಕ್ಕೆ ಕರೆದು ತರುವೆನು. ಅಲ್ಲಿ ಇಸ್ರಯೇಲಿನ ಪರ್ವತಗಳ ಮೇಲೆ, ಒಂದೇ ಜನಾಂಗವನ್ನಾಗಿ ಮಾಡುವೆನು; ಒಬ್ಬನೇ ಅವರೆಲ್ಲರಿಗೂ ರಾಜನಾಗಿರುವನು; ಅವರು ಇನ್ನೆಂದಿಗೂ ಎರಡು ಜನಾಂಗದವರಾಗಿರರು; ಭಿನ್ನರಾಜ್ಯದವರಾಗಿ ಇರರು. ತಮ್ಮ ವಿಗ್ರಹಗಳಿಂದಾಗಲಿ, ಅಸಹ್ಯ ವಸ್ತುಗಳಿಂದಾಗಲಿ, ಯಾವ ದುರಾಚಾರದಿಂದಲೇ ಆಗಲಿ, ತಮ್ಮನ್ನು ಇನ್ನು ಮುಂದೆ ಹೊಲೆಗೆ ಹೊಯ್ದುಕೊಳ್ಳರು. ಅವರು ಪಾಪ ಮಾಡಿಮಾಡಿ ಸಿಕ್ಕಿಬಿದ್ದ ದೇವದ್ರೋಹದಿಂದೆಲ್ಲಾ ನಾನು ಅವರನ್ನು ಉದ್ಧರಿಸಿ ಶುದ್ಧೀಕರಿಸುವೆನು; ಅವರು ನನಗೆ ಪ್ರಜೆಯಾಗಿರುವರು, ನಾನು ಅವರಿಗೆ ದೇವರಾಗಿರುವೆನು. ನನ್ನ ದಾಸ ದಾವೀದನು ಅವರಿಗೆ ರಾಜನಾಗಿರುವನು; ಅವರೆಲ್ಲರಿಗು ಒಬ್ಬನೇ ಪಾಲಕನಿರುವನು; ಅವರು ನನ್ನ ನಿಯಮಗಳನ್ನು ಅನುಸರಿಸಿ, ನನ್ನ ವಿಧಿಗಳನ್ನು ಕೈಕೊಂಡು ಆಚರಿಸುವರು. ನನ್ನ ದಾಸ ಯಕೋಬನಿಗೆ ನಾನು ದಯಪಾಲಿಸಿದ ನಾಡಿನಲ್ಲಿ ಅವರು ವಾಸಿಸುವರು. ಹೌದು, ನಿಮ್ಮ ಪಿತೃಗಳು ವಾಸಿಸಿದ ನಾಡಿನಲ್ಲಿ ಅವರೂ ಅವರ ಸಂತಾನದವರೂ ತಲತಲಾಂತರವಾಗಿ ವಾಸಿಸುವರು; ನನ್ನ ದಾಸ ದಾವೀದನು ಅವರಿಗೆ ಸದಾ ಪ್ರಭುವಾಗಿರುವನು. ನಾನು ಅವರೊಂದಿಗೆ ಶಾಂತಿಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ಅದು ಶಾಶ್ವತವಾಗಿರುವುದು. ನಾನು ಅವರನ್ನು ನೆಲೆಗೊಳಿಸಿ, ವೃದ್ಧಿಮಾಡಿ, ನನ್ನ ಪವಿತ್ರಾಲಯವನ್ನು ಅವರ ನಡುವೆ ಯುಗಯುಗಾಂತರಕ್ಕೂ ನಿಲ್ಲಿಸುವೆನು. ಹೌದು, ನನ್ನ ವಾಸಸ್ಥಾನವು ಅವರ ಮಧ್ಯೆಯಿರುವುದು; ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು. ನನ್ನ ಪವಿತ್ರಾಲಯ ಅವರ ಮಧ್ಯೆ ಶಾಶ್ವತವಾಗಿರಲು ಇಸ್ರಯೇಲನ್ನು ವಿೂಸಲು ಮಾಡಿಕೊಂಡಾತ ಸರ್ವೇಶ್ವರ ನಾನೇ ಎಂದು ಜನಾಂಗಗಳಿಗೆ ತಿಳಿದುಬರುವುದು”.

ಯೆರೆಮೀಯ: 31:10, 11, 12, 13
ಶ್ಲೋಕ: ಕುರಿಮಂದೆಯನ್ನು ಕಾಯುವ ಕುರುಬನಂತೆ,
ಅವರನ್ನು ಕೂಡಿಸಿ ಕಾಪಾಡುವನೆಂದು ಪ್ರಕಟಿಸಿರಿ

ಎನ್ನನುದ್ಧರಿಸು ಪ್ರಭು, ನಿನ್ನ ನೀತಿಗನುಸಾರ
ನಿನ್ನ ಶರಣನಾದೆ ನನಗಾಗದಿರಲಿ ತಾತ್ಸಾರ
ಕರಗುತ್ತಿದೆ ಬದುಕು ತಾಪದಲಿ; ಕುಂದುತ್ತಿದೆ ಶಕ್ತಿ ಪಾಪದಲಿ |
ಸವೆದು ಹೋಗುತ್ತವೆ ನನ್ನ ದೇಹದೆಲುಬುಗಳು ಕಾಲ ಚಕ್ರದಲಿ ||

ಶತ್ರುಗಳ ದೂಷಣೆಗೆ ಗುರಿಯಾದೆ,
ನೆರೆಯವರಿಗೆ ನಿಂದಾಸ್ಪದನಾದೆ |
ಮಿತ್ರರೂ ಬೆದರುವಂತಾದೆ;
ದಾರಿಹೋಕರು ದೂರವಾಗುವಂತಾದೆ ||

ನುಚ್ಚು ನೂರಾದೆ, ಮಡಕೆಚಿಪ್ಪಿನಂತಾದೆ |
ಸತ್ತವರಂತಾದೆ : ನೆನಪಿಗೆ ಬಾರದಾದೆ ||
ನನಗೆ ವಿರುದ್ಧ ಜನರಾಡುವ ಗುಸುಗುಸು
ಮಾತು ಕೇಳಿ ಬರುತಿದೆ |
ಭಯಭೀತಿ ಎನ್ನನಾವರಿಸಿದೆ, ಒಳಸಂಚು,
ಪ್ರಾಣಹರಣ ನಡೆಯುತಿವೆ ||

ಶುಭಸಂದೇಶ: ಯೊವಾನ್ನ 11:45-57


ಮರಿಯಳನ್ನು ನೋಡಲು ಬಂದಿದ್ದ ಹಲವು ಮಂದಿ ಯೆಹೂದ್ಯರು ನಡೆದ ಸಂಗತಿಯನ್ನು ನೋಡಿ ಯೇಸುವನ್ನು ವಿಶ್ವಾಸಿಸಿದರು. ಕೆಲವರಾದರೋ ಫರಿಸಾಯರ ಬಳಿಗೆ ಹೋಗಿ ಯೇಸು ಮಾಡಿದ್ದೆಲ್ಲವನ್ನೂ ತಿಳಿಸಿದರು. ಮುಖ್ಯ ಯಾಜಕರೂ ಫರಿಸಾಯರೂ ‘ನ್ಯಾಯಸಭೆ’ಯನ್ನು ಕರೆದರು. “ಈಗ ನಾವೇನು ಮಾಡೋಣ? ಈ ಮನುಷ್ಯನು ಎಷ್ಟೋ ಸೂಚಕಕಾರ್ಯಗಳನ್ನು ಮಾಡುತ್ತಾನಲ್ಲಾ; ಇವನನ್ನು ಹೀಗೆಯೇ ಬಿಟ್ಟರೆ ಜನರೆಲ್ಲರೂ ಇವನನ್ನೇ ನಂಬುವರು. ರೋಮನರು ಬಂದು ನಮ್ಮ ಪವಿತ್ರ ದೇವಾಲಯವನ್ನೂ ರಾಷ್ಟ್ರವನ್ನೂ ನೆಲಸಮ ಮಾಡುವರು,” ಎಂದು ವಾದಿಸಿದರು. ಆ ವರ್ಷ ಪ್ರಧಾನ ಯಾಜಕನಾಗಿದ್ದ ಕಾಯಫನು, “ಇಡೀ ರಾಷ್ಟ್ರವೇ ನಿರ್ನಾಮವಾಗುವುದಕ್ಕಿಂತ ಜನತೆಗೋಸ್ಕರ ಒಬ್ಬನು ಸಾಯುವುದೇ ವಿಹಿತವೆಂದು ನಿಮಗೆ ಅರ್ಥವಾಗುತ್ತಿಲ್ಲವಲ್ಲಾ,” ಎಂದು ನುಡಿದನು. ಇದನ್ನು ಅವನು ತಾನಾಗಿಯೇ ಹೇಳಲಿಲ್ಲ. ಆ ವರ್ಷ ಆತನು ಪ್ರಧಾನ ಯಾಜಕನಾಗಿದ್ದ ಕಾರಣ, ಯೇಸು ಜನತೆಗಾಗಿ ಪ್ರಾಣತ್ಯಾಗ ಮಾಡಲಿದ್ದಾರೆ ಎಂದು ಹೀಗೆ ಪ್ರವಾದಿಸಿದನು. ಆ ಜನತೆಗಾಗಿ ಮಾತ್ರವಲ್ಲ, ಚದರಿಹೋಗಿದ್ದ ದೇವಜನರನ್ನು ಒಂದುಗೂಡಿಸುವ ಸಲುವಾಗಿಯೂ ಪ್ರಾಣತ್ಯಾಗ ಮಾಡಲಿದ್ದಾರೆಂಬುದು ಆ ಮಾತಿನ ಇಂಗಿತ. ಅಂದಿನಿಂದಲೇ ಯೆಹೂದ್ಯ ಅಧಿಕಾರಿಗಳು ಯೇಸುವನ್ನು ಕೊಲ್ಲಬೇಕೆಂದು ನಿರ್ಧಾರ ಮಾಡಿಕೊಂಡರು. ಎಂದೇ ಯೇಸು ಜುದೇಯದಲ್ಲಿ ಬಹಿರಂಗವಾಗಿ ಓಡಾಡುವುದನ್ನು ಕೈಬಿಟ್ಟರು. ಬೆಂಗಾಡಿನ ಪಕ್ಕದಲ್ಲಿದ್ದ ಪ್ರದೇಶಕ್ಕೆ ತೆರಳಿ ಎಫ್ರಯಿಮ್ ಎಂಬ ಗ್ರಾಮದಲ್ಲಿ ತಮ್ಮ ಶಿಷ್ಯರ ಸಂಗಡ ತಂಗಿದರು. ಆಗ ಯೆಹೂದ್ಯರ ಪಾಸ್ಕಹಬ್ಬವು ಸಮೀಪಿಸಿತ್ತು. ಹಬ್ಬಕ್ಕೆ ಮುಂಚೆ ನಡೆಯುವ ಶುದ್ದೀಕರಣಕ್ಕಾಗಿ ಹಲವರು ಜೆರುಸಲೇಮಿಗೆ ಗ್ರಾಮಾಂತರ ಪ್ರದೇಶಗಳಿಂದ ಮೊದಲೇ ಬಂದಿದ್ದರು. ಯೇಸುವನ್ನು ನೋಡಬೇಕೆಂಬ ಆಸೆ ಅವರಿಗಿತ್ತು. “ಆತ ಹಬ್ಬಕ್ಕೆ ಬರುತ್ತಾನೋ ಇಲ್ಲವೋ ನಿಮ್ಮ ಎಣಿಕೆ ಏನು?” ಎಂದು ಮಹಾದೇವಾಲಯದಲ್ಲಿ ತಮ್ಮತಮ್ಮೊಳಗೆ ವಿಚಾರಿಸಿಕೊಳ್ಳುತ್ತಿದ್ದರು. ಯೇಸುವನ್ನು ಬಂಧಿಸುವ ಉದ್ದೇಶದಿಂದ ಮುಖ್ಯಯಾಜಕರೂ ಫರಿಸಾಯರೂ ಆತನ ಸುಳಿವು ಯಾರಿಗಾದರೂ ಸಿಕ್ಕಿದ್ದೇ ಆದರೆ ತಮಗೆ ತಿಳಿಸಬೇಕೆಂದು ಆಜ್ಞೆ ಹೊರಡಿಸಿದ್ದರು.

ಮನಸ್ಸಿಗೊಂದಿಷ್ಟು : ಯೇಸುವಿನ ಮರಣದ ಬಗ್ಗೆ ಶತ್ರು ಕಾಯಿಫನೇ ಪ್ರವಾದಿಸುವಂತೆ ದೇವರ ಚಿತ್ತವಾಗಿರುವುದನ್ನು ಕಾಣುತ್ತೇವೆ. ದೇವರ ಸಾಧನವಾಗುವುದು ಎಲ್ಲರಿಗೂ ಸಾಧ್ಯ. ನಾವೂ ಸಹ ದೇವರ ಸಾಧನಗಳಾಗುವ ಅವಕಾಶವಿದೆ. ಆ ಅವಕಾಶಕ್ಕಾಗಿ ಹಾತೊರೆಯೋಣ. "ಎನ್ನನುದ್ಧರಿಸು ಪ್ರಭು, ನಿನ್ನ ನೀತಿಗನುಸಾರ" ಎಂಬ ಇಂದಿನ ಕೀರ್ತನೆ ನಮ್ಮ ಬಾಳಿನ ಧ್ಯೇಯವಾಗಲಿ.

ಪ್ರಶ್ನೆ : ಪ್ರಭುವಿನ ನೀತಿ ನಮ್ಮ ಬಾಳಿನ ರೀತಿಯಾಗಿದೆಯೇ?

ಪ್ರಭುವೇ,
ನಿನ್ನ ನೀತಿಗನುಸಾರ
ಬಾಳುವುದಾಗಲಿ
ನನ್ನ ಬಾಳ ಸಾರ
ನಿನ್ನ ರೀತಿಗನುಸಾರ
ನಡೆವುದಾಗಲಿ
ಗಮ್ಯ ಅದೆಷ್ಟೇ ಇದ್ದರು ದೂರ
ಕ್ಷಣ ಕ್ಷಣವೂ ಆಗುತ್ತಾ
ನಿನ್ನ ಸಾಧನ
ನಲಿಯಲಿ ಈ ಮನ
ನಿತ್ಯ ನೂತನ

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...