23.03.24 - “ಇಡೀ ರಾಷ್ಟ್ರವೇ ನಿರ್ನಾಮವಾಗುವುದಕ್ಕಿಂತ ಜನತೆಗೋಸ್ಕರ ಒಬ್ಬನು ಸಾಯುವುದೇ ವಿಹಿತವೆಂದು ನಿಮಗೆ ಅರ್ಥವಾಗುತ್ತಿಲ್ಲವಲ್ಲಾ,”

ಮೊದಲನೇ ವಾಚನ: ಯೆಜೆಕಿಯೇಲ 37:21-28

ಸರ್ವೇಶ್ವರ ಇನ್ನೊಂದು ವಾಣಿಯನ್ನು ನನಗೆ ದಯಪಾಲಿಸಿದರು: "ನರಪುತ್ರನೇ, ಇದನ್ನು ಅವರಿಗೆ ನುಡಿ. ‘ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ಇಗೋ, ಇಸ್ರಯೇಲರು ವಶವಾಗಿರುವ ಜನಾಂಗಗಳಿಂದ ನಾನು ಅವರನ್ನು ಉದ್ಧರಿಸಿ, ಎಲ್ಲ ಕಡೆಯಿಂದಲು ಒಟ್ಟುಗೂಡಿಸಿ, ಸ್ವದೇಶಕ್ಕೆ ಕರೆದು ತರುವೆನು. ಅಲ್ಲಿ ಇಸ್ರಯೇಲಿನ ಪರ್ವತಗಳ ಮೇಲೆ, ಒಂದೇ ಜನಾಂಗವನ್ನಾಗಿ ಮಾಡುವೆನು; ಒಬ್ಬನೇ ಅವರೆಲ್ಲರಿಗೂ ರಾಜನಾಗಿರುವನು; ಅವರು ಇನ್ನೆಂದಿಗೂ ಎರಡು ಜನಾಂಗದವರಾಗಿರರು; ಭಿನ್ನರಾಜ್ಯದವರಾಗಿ ಇರರು. ತಮ್ಮ ವಿಗ್ರಹಗಳಿಂದಾಗಲಿ, ಅಸಹ್ಯ ವಸ್ತುಗಳಿಂದಾಗಲಿ, ಯಾವ ದುರಾಚಾರದಿಂದಲೇ ಆಗಲಿ, ತಮ್ಮನ್ನು ಇನ್ನು ಮುಂದೆ ಹೊಲೆಗೆ ಹೊಯ್ದುಕೊಳ್ಳರು. ಅವರು ಪಾಪ ಮಾಡಿಮಾಡಿ ಸಿಕ್ಕಿಬಿದ್ದ ದೇವದ್ರೋಹದಿಂದೆಲ್ಲಾ ನಾನು ಅವರನ್ನು ಉದ್ಧರಿಸಿ ಶುದ್ಧೀಕರಿಸುವೆನು; ಅವರು ನನಗೆ ಪ್ರಜೆಯಾಗಿರುವರು, ನಾನು ಅವರಿಗೆ ದೇವರಾಗಿರುವೆನು. ನನ್ನ ದಾಸ ದಾವೀದನು ಅವರಿಗೆ ರಾಜನಾಗಿರುವನು; ಅವರೆಲ್ಲರಿಗು ಒಬ್ಬನೇ ಪಾಲಕನಿರುವನು; ಅವರು ನನ್ನ ನಿಯಮಗಳನ್ನು ಅನುಸರಿಸಿ, ನನ್ನ ವಿಧಿಗಳನ್ನು ಕೈಕೊಂಡು ಆಚರಿಸುವರು. ನನ್ನ ದಾಸ ಯಕೋಬನಿಗೆ ನಾನು ದಯಪಾಲಿಸಿದ ನಾಡಿನಲ್ಲಿ ಅವರು ವಾಸಿಸುವರು. ಹೌದು, ನಿಮ್ಮ ಪಿತೃಗಳು ವಾಸಿಸಿದ ನಾಡಿನಲ್ಲಿ ಅವರೂ ಅವರ ಸಂತಾನದವರೂ ತಲತಲಾಂತರವಾಗಿ ವಾಸಿಸುವರು; ನನ್ನ ದಾಸ ದಾವೀದನು ಅವರಿಗೆ ಸದಾ ಪ್ರಭುವಾಗಿರುವನು. ನಾನು ಅವರೊಂದಿಗೆ ಶಾಂತಿಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ಅದು ಶಾಶ್ವತವಾಗಿರುವುದು. ನಾನು ಅವರನ್ನು ನೆಲೆಗೊಳಿಸಿ, ವೃದ್ಧಿಮಾಡಿ, ನನ್ನ ಪವಿತ್ರಾಲಯವನ್ನು ಅವರ ನಡುವೆ ಯುಗಯುಗಾಂತರಕ್ಕೂ ನಿಲ್ಲಿಸುವೆನು. ಹೌದು, ನನ್ನ ವಾಸಸ್ಥಾನವು ಅವರ ಮಧ್ಯೆಯಿರುವುದು; ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು. ನನ್ನ ಪವಿತ್ರಾಲಯ ಅವರ ಮಧ್ಯೆ ಶಾಶ್ವತವಾಗಿರಲು ಇಸ್ರಯೇಲನ್ನು ವಿೂಸಲು ಮಾಡಿಕೊಂಡಾತ ಸರ್ವೇಶ್ವರ ನಾನೇ ಎಂದು ಜನಾಂಗಗಳಿಗೆ ತಿಳಿದುಬರುವುದು”.

ಯೆರೆಮೀಯ: 31:10, 11, 12, 13
ಶ್ಲೋಕ: ಕುರಿಮಂದೆಯನ್ನು ಕಾಯುವ ಕುರುಬನಂತೆ,
ಅವರನ್ನು ಕೂಡಿಸಿ ಕಾಪಾಡುವನೆಂದು ಪ್ರಕಟಿಸಿರಿ

ಎನ್ನನುದ್ಧರಿಸು ಪ್ರಭು, ನಿನ್ನ ನೀತಿಗನುಸಾರ
ನಿನ್ನ ಶರಣನಾದೆ ನನಗಾಗದಿರಲಿ ತಾತ್ಸಾರ
ಕರಗುತ್ತಿದೆ ಬದುಕು ತಾಪದಲಿ; ಕುಂದುತ್ತಿದೆ ಶಕ್ತಿ ಪಾಪದಲಿ |
ಸವೆದು ಹೋಗುತ್ತವೆ ನನ್ನ ದೇಹದೆಲುಬುಗಳು ಕಾಲ ಚಕ್ರದಲಿ ||

ಶತ್ರುಗಳ ದೂಷಣೆಗೆ ಗುರಿಯಾದೆ,
ನೆರೆಯವರಿಗೆ ನಿಂದಾಸ್ಪದನಾದೆ |
ಮಿತ್ರರೂ ಬೆದರುವಂತಾದೆ;
ದಾರಿಹೋಕರು ದೂರವಾಗುವಂತಾದೆ ||

ನುಚ್ಚು ನೂರಾದೆ, ಮಡಕೆಚಿಪ್ಪಿನಂತಾದೆ |
ಸತ್ತವರಂತಾದೆ : ನೆನಪಿಗೆ ಬಾರದಾದೆ ||
ನನಗೆ ವಿರುದ್ಧ ಜನರಾಡುವ ಗುಸುಗುಸು
ಮಾತು ಕೇಳಿ ಬರುತಿದೆ |
ಭಯಭೀತಿ ಎನ್ನನಾವರಿಸಿದೆ, ಒಳಸಂಚು,
ಪ್ರಾಣಹರಣ ನಡೆಯುತಿವೆ ||

ಶುಭಸಂದೇಶ: ಯೊವಾನ್ನ 11:45-57


ಮರಿಯಳನ್ನು ನೋಡಲು ಬಂದಿದ್ದ ಹಲವು ಮಂದಿ ಯೆಹೂದ್ಯರು ನಡೆದ ಸಂಗತಿಯನ್ನು ನೋಡಿ ಯೇಸುವನ್ನು ವಿಶ್ವಾಸಿಸಿದರು. ಕೆಲವರಾದರೋ ಫರಿಸಾಯರ ಬಳಿಗೆ ಹೋಗಿ ಯೇಸು ಮಾಡಿದ್ದೆಲ್ಲವನ್ನೂ ತಿಳಿಸಿದರು. ಮುಖ್ಯ ಯಾಜಕರೂ ಫರಿಸಾಯರೂ ‘ನ್ಯಾಯಸಭೆ’ಯನ್ನು ಕರೆದರು. “ಈಗ ನಾವೇನು ಮಾಡೋಣ? ಈ ಮನುಷ್ಯನು ಎಷ್ಟೋ ಸೂಚಕಕಾರ್ಯಗಳನ್ನು ಮಾಡುತ್ತಾನಲ್ಲಾ; ಇವನನ್ನು ಹೀಗೆಯೇ ಬಿಟ್ಟರೆ ಜನರೆಲ್ಲರೂ ಇವನನ್ನೇ ನಂಬುವರು. ರೋಮನರು ಬಂದು ನಮ್ಮ ಪವಿತ್ರ ದೇವಾಲಯವನ್ನೂ ರಾಷ್ಟ್ರವನ್ನೂ ನೆಲಸಮ ಮಾಡುವರು,” ಎಂದು ವಾದಿಸಿದರು. ಆ ವರ್ಷ ಪ್ರಧಾನ ಯಾಜಕನಾಗಿದ್ದ ಕಾಯಫನು, “ಇಡೀ ರಾಷ್ಟ್ರವೇ ನಿರ್ನಾಮವಾಗುವುದಕ್ಕಿಂತ ಜನತೆಗೋಸ್ಕರ ಒಬ್ಬನು ಸಾಯುವುದೇ ವಿಹಿತವೆಂದು ನಿಮಗೆ ಅರ್ಥವಾಗುತ್ತಿಲ್ಲವಲ್ಲಾ,” ಎಂದು ನುಡಿದನು. ಇದನ್ನು ಅವನು ತಾನಾಗಿಯೇ ಹೇಳಲಿಲ್ಲ. ಆ ವರ್ಷ ಆತನು ಪ್ರಧಾನ ಯಾಜಕನಾಗಿದ್ದ ಕಾರಣ, ಯೇಸು ಜನತೆಗಾಗಿ ಪ್ರಾಣತ್ಯಾಗ ಮಾಡಲಿದ್ದಾರೆ ಎಂದು ಹೀಗೆ ಪ್ರವಾದಿಸಿದನು. ಆ ಜನತೆಗಾಗಿ ಮಾತ್ರವಲ್ಲ, ಚದರಿಹೋಗಿದ್ದ ದೇವಜನರನ್ನು ಒಂದುಗೂಡಿಸುವ ಸಲುವಾಗಿಯೂ ಪ್ರಾಣತ್ಯಾಗ ಮಾಡಲಿದ್ದಾರೆಂಬುದು ಆ ಮಾತಿನ ಇಂಗಿತ. ಅಂದಿನಿಂದಲೇ ಯೆಹೂದ್ಯ ಅಧಿಕಾರಿಗಳು ಯೇಸುವನ್ನು ಕೊಲ್ಲಬೇಕೆಂದು ನಿರ್ಧಾರ ಮಾಡಿಕೊಂಡರು. ಎಂದೇ ಯೇಸು ಜುದೇಯದಲ್ಲಿ ಬಹಿರಂಗವಾಗಿ ಓಡಾಡುವುದನ್ನು ಕೈಬಿಟ್ಟರು. ಬೆಂಗಾಡಿನ ಪಕ್ಕದಲ್ಲಿದ್ದ ಪ್ರದೇಶಕ್ಕೆ ತೆರಳಿ ಎಫ್ರಯಿಮ್ ಎಂಬ ಗ್ರಾಮದಲ್ಲಿ ತಮ್ಮ ಶಿಷ್ಯರ ಸಂಗಡ ತಂಗಿದರು. ಆಗ ಯೆಹೂದ್ಯರ ಪಾಸ್ಕಹಬ್ಬವು ಸಮೀಪಿಸಿತ್ತು. ಹಬ್ಬಕ್ಕೆ ಮುಂಚೆ ನಡೆಯುವ ಶುದ್ದೀಕರಣಕ್ಕಾಗಿ ಹಲವರು ಜೆರುಸಲೇಮಿಗೆ ಗ್ರಾಮಾಂತರ ಪ್ರದೇಶಗಳಿಂದ ಮೊದಲೇ ಬಂದಿದ್ದರು. ಯೇಸುವನ್ನು ನೋಡಬೇಕೆಂಬ ಆಸೆ ಅವರಿಗಿತ್ತು. “ಆತ ಹಬ್ಬಕ್ಕೆ ಬರುತ್ತಾನೋ ಇಲ್ಲವೋ ನಿಮ್ಮ ಎಣಿಕೆ ಏನು?” ಎಂದು ಮಹಾದೇವಾಲಯದಲ್ಲಿ ತಮ್ಮತಮ್ಮೊಳಗೆ ವಿಚಾರಿಸಿಕೊಳ್ಳುತ್ತಿದ್ದರು. ಯೇಸುವನ್ನು ಬಂಧಿಸುವ ಉದ್ದೇಶದಿಂದ ಮುಖ್ಯಯಾಜಕರೂ ಫರಿಸಾಯರೂ ಆತನ ಸುಳಿವು ಯಾರಿಗಾದರೂ ಸಿಕ್ಕಿದ್ದೇ ಆದರೆ ತಮಗೆ ತಿಳಿಸಬೇಕೆಂದು ಆಜ್ಞೆ ಹೊರಡಿಸಿದ್ದರು.

ಮನಸ್ಸಿಗೊಂದಿಷ್ಟು : ಯೇಸುವಿನ ಮರಣದ ಬಗ್ಗೆ ಶತ್ರು ಕಾಯಿಫನೇ ಪ್ರವಾದಿಸುವಂತೆ ದೇವರ ಚಿತ್ತವಾಗಿರುವುದನ್ನು ಕಾಣುತ್ತೇವೆ. ದೇವರ ಸಾಧನವಾಗುವುದು ಎಲ್ಲರಿಗೂ ಸಾಧ್ಯ. ನಾವೂ ಸಹ ದೇವರ ಸಾಧನಗಳಾಗುವ ಅವಕಾಶವಿದೆ. ಆ ಅವಕಾಶಕ್ಕಾಗಿ ಹಾತೊರೆಯೋಣ. "ಎನ್ನನುದ್ಧರಿಸು ಪ್ರಭು, ನಿನ್ನ ನೀತಿಗನುಸಾರ" ಎಂಬ ಇಂದಿನ ಕೀರ್ತನೆ ನಮ್ಮ ಬಾಳಿನ ಧ್ಯೇಯವಾಗಲಿ.

ಪ್ರಶ್ನೆ : ಪ್ರಭುವಿನ ನೀತಿ ನಮ್ಮ ಬಾಳಿನ ರೀತಿಯಾಗಿದೆಯೇ?

ಪ್ರಭುವೇ,
ನಿನ್ನ ನೀತಿಗನುಸಾರ
ಬಾಳುವುದಾಗಲಿ
ನನ್ನ ಬಾಳ ಸಾರ
ನಿನ್ನ ರೀತಿಗನುಸಾರ
ನಡೆವುದಾಗಲಿ
ಗಮ್ಯ ಅದೆಷ್ಟೇ ಇದ್ದರು ದೂರ
ಕ್ಷಣ ಕ್ಷಣವೂ ಆಗುತ್ತಾ
ನಿನ್ನ ಸಾಧನ
ನಲಿಯಲಿ ಈ ಮನ
ನಿತ್ಯ ನೂತನ

22.03.24 - "ಪಿತನೇ ಪ್ರತಿಷ್ಠಿಸಿ ಕಳುಹಿಸಿಕೊಟ್ಟವನಾದ ನಾನು, ‘ದೇವರ ಪುತ್ರನಾಗಿದ್ದೇನೆ"

ಮೊದಲನೇ ವಾಚನ: ಯೆರೆಮಿಯ 20:10-13

ಸುತ್ತಮುತ್ತಲು ದಿಗಿಲೆಂದರೆ ದಿಗಿಲು ! ‘ಬನ್ನಿ, ಇವರ ಮೇಲೆ ಚಾಡಿ ಹೇಳಿ, ನಾವೂ ಹೇಳುವೆವು’ ಎಂದು ಗುಸುಗುಟ್ಟುತ್ತಿರುವರು ಬಹು ಜನರು. ‘ಇವನು ಎಡವಿಬೀಳಲಿ, ನಾವು ಹೊಂಚಿ ನೋಡುವೆವು’ ಎನ್ನುತ್ತಿರುವರು ನನ್ನಾಪ್ತ ಮಿತ್ರರೆಲ್ಲರು. ‘ಇವನು ಸಿಕ್ಕಿಬೀಳಲಿ, ಆಗ ಗೆದ್ದು ಮುಯ್ಯಿತೀರಿಸಿಕೊಳ್ಳುವೆವು.’ ಎಂದುಕೊಳ್ಳುತ್ತಿರುವರು ತಮ್ಮತಮ್ಮೊಳಗೆ. ಆದರೆ ನನ್ನ ಸಂಗಡ ಇರುವರು ಸರ್ವೇಶ್ವರ ಭಯಂಕರ ಶೂರನಂತೆ ನನ್ನ ಹಿಂಸಕರು ಮುಗ್ಗರಿಸಿ ಬೀಳುವರು ಜಯ ಸಾಧಿಸದೆ. ನಾಚಿಕೆಗೆ ಈಡಾಗುವರು ತಮ್ಮ ಯೋಜನೆ ಕೈಗೂಡದೆ ಶಾಶ್ವತ ಅವಮಾನಕ್ಕೆ ಗುರಿಯಾಗುವರು ಎಂದಿಗೂ ಮರೆಯಲಾಗದಂತೆ. ಸರ್ವಶಕ್ತರಾದ ಸರ್ವೇಶ್ವರಾ, ನೀವು ಸತ್ಪುರುಷರನ್ನು ಪರಿಶೋಧಿಸುವರು ಅಂತರಿಂದ್ರಿಯಗಳನ್ನೂ ಅಂತರಾಳವನ್ನೂ ವೀಕ್ಷಿಸುವವರು. ನನ್ನ ವ್ಯಾಜ್ಯವನ್ನು ನಿಮಗೆ ಅರಿಕೆಮಾಡಿರುವೆನು ನನ್ನ ಹಿಂಸಕರಿಗೆ ನೀವು ವಿಧಿಸುವ ಪ್ರತಿದಂಡನೆಯನ್ನು ನಾನು ನೋಡುವಂತೆ ಮಾಡಿ. ಸರ್ವೇಶ್ವರನನ್ನು ಸ್ತುತಿಸಿರಿ, ಸರ್ವೇಶ್ವರನನ್ನು ಸಂಕೀರ್ತಿಸಿರಿ. ಅವರು ಬಡವರ ಪ್ರಾಣವನ್ನು ಬಿಡಿಸಿದ್ದಾರೆ ಕೆಡುಕರ ಕೈಯಿಂದ.

ಕೀರ್ತನೆ: 18:2-3, 3-4, 5-6, 7
ಶ್ಲೋಕ: ಇಂಥಾ ದುಸ್ಥಿತಿಯಲಿ ನಾ ಮೊರೆಯಿಟ್ಟೆ ಪ್ರಭುವಿಗೆ
ನನ್ನ ಪ್ರಾರ್ಥನೆ ಬಿದ್ದಿತು ಆತನ ಕಿವಿಯಲಿ

ಪ್ರಭುವೇ ನನ್ನ ಕಲ್ಲುಕೋಟೆ, ನನಗೆ ವಿಮೋಚಕ |
ಆತನೇ ನನ್ನ ದೇವ, ನನ್ನಾಶ್ರಯ ದುರ್ಗ |
ಆತನೆನಗೆ ಗುರಾಣಿ, ಗಿರಿ, ರಕ್ಷಣಾಶೃಂಗ ||
ಪ್ರಭು ಸ್ತುತ್ಯಾರ್ಹನು |
ಶತ್ರುಗಳಿಂದ ಕಾಪಾಡುವನು,
ನಾನವಗೆ ಮೊರೆಯಿಡಲು ||

ಪ್ರಭು ಸ್ತುತ್ಯಾರ್ಹನು |
ಶತ್ರುಗಳಿಂದ ಕಾಪಾಡುವನು,
ನಾನವಗೆ ಮೊರೆಯಿಡಲು ||
ನನಗೆ ಸುತ್ತಿಕೊಂಡವು ಮೃತ್ಯುಪಾಶಗಳು |
ನಡುಕ ಹುಟ್ಟಿಸಿದ್ದವು
ವಿನಾಶಪ್ರವಾಹಗಳು ||
ಆವರಿಸಿಕೊಂಡವು ಪಾತಾಳ ಪಾಶಗಳು|
ನನ್ನ ಕಣ್ಮುಂದಿದ್ದವು ಮರಣಕರ ಉರುಲುಗಳು||

ಇಂಥಾ ದುಸ್ಥಿತಿಯಲಿ ನಾ ಮೊರೆಯಿಟ್ಟೆ ಪ್ರಭುವಿಗೆ |
ಪ್ರಾರ್ಥನೆ ಮಾಡಿದೆ ಆ ನನ್ನ ದೇವನಲಿ |
ನನ್ನ ಪ್ರಾರ್ಥನೆ ಬಿದ್ದಿತು ಆತನ ಕಿವಿಯಲಿ ||
ಆಗ ಕಂಪಿಸಿತು ಭೂಮಿ ಗಡಗಡನೆ |
ಕದಲಿದವು ಬೆಟ್ಟದ ಬುಡಗಳು
ಮಿಲಮಿಲನೆ |
ಏಕೆನೆ, ಸಿಟ್ಟೇರಿತ್ತು ಆತನಿಗೆ ||

ಶುಭಸಂದೇಶ: ಯೊವಾನ್ನ 10:31-42

ಆಗ ಯೆಹೂದ್ಯರು, ಯೇಸುವಿನತ್ತ ಬೀರಲು ಕಲ್ಲುಗಳನ್ನು ಆಯ್ದುಕೊಂಡರು. ಅದಕ್ಕೆ ಯೇಸು, “ಪಿತನ ಹೆಸರಿನಲ್ಲಿ ನಾನು ಎಷ್ಟೋ ಸತ್ಕಾರ್ಯಗಳನ್ನು ನಿಮ್ಮ ಮುಂದೆ ಮಾಡಿದ್ದೇನೆ. ಇವುಗಳಲ್ಲಿ ಯಾವುದಕ್ಕಾಗಿ ನನ್ನ ಮೇಲೆ ಕಲ್ಲೆಸೆಯಬೇಕೆಂದಿದ್ದೀರಿ?” ಎಂದರು. ಅದಕ್ಕೆ ಯೆಹೂದ್ಯರು, “ನಿನ್ನ ಮೇಲೆ ಕಲ್ಲೆಸೆಯುವುದು ಸತ್ಕಾರ್ಯಕ್ಕಾಗಿ ಅಲ್ಲ, ದೇವದೂಷಣೆಗಾಗಿ. ನೀನು ಮನುಷ್ಯ ಮಾತ್ರನು; ಆದರೂ ನಿನ್ನನ್ನೇ ದೇವರನ್ನಾಗಿ ಮಾಡಿಕೊಳ್ಳುತ್ತಿದೀಯೇ,” ಎಂದು ಉತ್ತರಕೊಟ್ಟರು. ಆಗ ಯೇಸು, “ ‘ನೀವು ದೇವರುಗಳು’ ಎಂದು ದೇವರೇ ಹೇಳಿರುವ ಮಾತು ನಿಮ್ಮ ಧರ್ಮಶಾಸ್ತ್ರದಲ್ಲಿ ಬರೆದಿದೆಯಲ್ಲವೆ? ದೇವರ ವಾಕ್ಯವನ್ನು ಪಡೆದವರು ದೇವರುಗಳೇ ಎಂದು ಕರೆಯಲಾಗಿದೆ. ಹೀಗೆ ಪವಿತ್ರ ಗ್ರಂಥದಲ್ಲೇ ಲಿಖಿತವಾಗಿರುವುದು ನಿರರ್ಥಕವೇನೂ ಅಲ್ಲ. ಇಂತಿರುವಲ್ಲಿ, ಪಿತನೇ ಪ್ರತಿಷ್ಠಿಸಿ ಕಳುಹಿಸಿಕೊಟ್ಟವನಾದ ನಾನು, ‘ದೇವರ ಪುತ್ರನಾಗಿದ್ದೇನೆ’ ಎಂದು ಹೇಳಿಕೊಂಡದ್ದಕ್ಕೆ, ‘ಇವನು ದೇವದೂಷಣೆ ಮಾಡಿದ್ದಾನೆ’ ಎನ್ನುತ್ತೀರಲ್ಲಾ? ನಾನು ನನ್ನ ಪಿತನ ಕಾರ್ಯಗಳನ್ನು ಮಾಡದಿದ್ದರೆ ನೀವು ನನ್ನನ್ನು ನಂಬಬೇಕಾಗಿಲ್ಲ. ನಾನು ಹಾಗೆ ಮಾಡಿದ್ದೇ ಆದರೆ, ನನ್ನನ್ನು ನಂಬದೆ ಹೋದರೂ ನನ್ನ ಕಾರ್ಯಗಳನ್ನಾದರೂ ನಂಬಿರಿ. ಆಗ ಪಿತನು ನನ್ನಲ್ಲಿಯೂ ನಾನು ಪಿತನಲ್ಲಿಯೂ ಇರುವುದು ನಿಮಗೆ ಅರಿವಾಗುವುದು ಹಾಗೂ ಮನದಟ್ಟಾಗುವುದು,” ಎಂದರು. ಮತ್ತೊಮ್ಮೆ ಯೇಸುವನ್ನು ಬಂಧಿಸಲು ಆ ಯೆಹೂದ್ಯರು ಪ್ರಯತ್ನಿಸಿದರು. ಆದರೆ ಯೇಸು ಅವರ ಕೈಯಿಂದ ತಪ್ಪಿಸಿಕೊಂಡರು. ಬಳಿಕ ಯೇಸುಸ್ವಾಮಿ ಜೋರ್ಡನ್ ನದಿಯನ್ನು ದಾಟಿ ಯೊವಾನ್ನನು ಮೊತ್ತ ಮೊದಲು ಸ್ನಾನದೀಕ್ಷೆಯನ್ನು ಕೊಡುತ್ತಿದ್ದ ಸ್ಥಳಕ್ಕೆ ಬಂದು ಅಲ್ಲಿ ತಂಗಿದರು. ಹಲವರು ಅವರ ಬಳಿಗೆ ಬರತೊಡಗಿದರು. ‘ಯೊವಾನ್ನನು ಒಂದು ಸೂಚಕ ಕಾರ್ಯವನ್ನೂ ಮಾಡಲಿಲ್ಲ; ಆದರೆ ಇವರ ವಿಷಯವಾಗಿ ಆತ ಹೇಳಿದ್ದೆಲ್ಲವೂ ನಿಜವಾಗಿದೆ’ ಎಂದು ಆ ಜನರು ಮಾತನಾಡಿಕೊಳ್ಳುತ್ತಿದ್ದರು. ಅಲ್ಲಿ ಹಲವರಿಗೆ ಯೇಸುವಿನಲ್ಲಿ ವಿಶ್ವಾಸ ಹುಟ್ಟಿತು.

ಮನಸ್ಸಿಗೊಂದಿಷ್ಟು : ಇಂದಿನ ಶುಭಸಂದೇಶದದಲ್ಲಿನ ಯೆಹೂದ್ಯರ ತಿರಸ್ಕಾರ ನಿಜಕ್ಕೂ ದೌರ್ಭಾಗ್ಯಕರ . ' ತಾವು ದೇವರ ಪುತ್ರ' ಎಂದು ಯೇಸು ಸಾರಿ ಸಾರಿ ಹೇಳುತ್ತಿದ್ದರೂ ನಂಬದಂಥ ಕಲ್ಲು ಹೃದಯ ಅವರದಾಗಿತ್ತು. ನಮ್ಮ ಹೃದಯಗಳು ಪ್ರಭು ಕ್ರಿಸ್ತರನ್ನು ತಿರಸ್ಕರಿಸದಂತೆ ಎಚ್ಚರವಹಿಸೋಣ

ಪ್ರಶ್ನೆ : ನಮ್ಮ ಹೃದಯ ಯೇಸುವಿಗಾಗಿ ತೆರೆದಿದೆಯೇ?

21.03.24 - "ನನ್ನ ಘನತೆ ಗೌರವವನ್ನು ಸಾರುವವರಾದರೋ ನನ್ನ ಪಿತನು"

ಮೊದಲನೇ ವಾಚನ: ಆದಿಕಾಂಡ 17:3-9

ಅಬ್ರಾಮನು ಅಡ್ಡಬಿದ್ದು ಸಾಷ್ಟಾಂಗ ಪ್ರಣಾಮ ಮಾಡಿದನು. ದೇವರು ಅವನಿಗೆ, “ನಾನು ನಿನಗೆ ವಾಗ್ದಾನ ಮಾಡಿ ಹೇಳುತ್ತೇನೆ: ನೀನು ಅನೇಕ ರಾಷ್ಟ್ರಗಳಿಗೆ ಮೂಲ ಪುರುಷನಾಗುವೆ. ಇನ್ನು ಮುಂದೆ ನಿನಗೆ ‘ಅಬ್ರಾಮ’ ಎಂಬ ಹೆಸರಿರುವುದಿಲ್ಲ. ನಿನ್ನನ್ನು ನಾನು ಅನೇಕಾನೇಕ ರಾಷ್ಟ್ರಗಳಿಗೆ ಮೂಲಪುರುಷನನ್ನಾಗಿ ನೇಮಿಸುವುದರಿಂದ ನಿನಗೆ ‘ಅಬ್ರಹಾಮ’ ಎಂಬ ಹೆಸರಿರುವುದು. ನಿನ್ನನ್ನು ಅತ್ಯಂತ ಫಲದಾಯಕ ಪುರುಷನನ್ನಾಗಿ ಮಾಡುತ್ತೇನೆ. ನಿನ್ನಿಂದ ರಾಷ್ಟ್ರಗಳೂ ರಾಜರುಗಳೂ ಉತ್ಪತ್ತಿಯಾಗುವರು. ನಿನಗೂ ನಿನ್ನ ಸಂತತಿಗೂ ನಾನು ದೇವರಾಗಿರುತ್ತೇನೆ. ಈ ನನ್ನ ಒಡಂಬಡಿಕೆಯನ್ನು ನಿನಗೋಸ್ಕರವೂ ನಿನ್ನ ಸಂತತಿಗೋಸ್ಕರವೂ ತಲತಲಾಂತರದವರೆಗೂ ಚಿರಒಡಂಬಡಿಕೆಯಾಗಿ ಸ್ಥಿರಪಡಿಸುತ್ತೇನೆ. ನೀನು ಪ್ರವಾಸವಾಗಿರುವ ಈ ಕಾನಾನ್ ನಾಡೆಲ್ಲವನ್ನು ನಿನಗೂ ನಿನ್ನ ಸಂತಾನಕ್ಕೂ ಶಾಶ್ವತವಾದ ಸೊತ್ತಾಗಿ ಕೊಡುತ್ತೇನೆ. ನಾನು ನಿಮ್ಮ ಕುಲದೇವರಾಗಿರುತ್ತೇನೆ.” ಇದಲ್ಲದೆ ದೇವರು ಅಬ್ರಹಾಮನಿಗೆ ಹೀಗೆಂದು ಹೇಳಿದರು: “ನೀನು ಕೂಡ ನನ್ನ ಒಡಂಬಡಿಕೆಯನ್ನು ಕೈಗೊಂಡು ನಡೆಯಬೇಕು. ನೀನು ಮಾತ್ರವಲ್ಲ, ನಿನ್ನ ಸಂತತಿಯವರು ತಲತಲಾಂತರಕ್ಕೂ ಅದನ್ನು ಕೈಗೊಂಡು ನಡೆಯಬೇಕು.

ಕೀರ್ತನೆ: 105:4-5, 6-7, 8-9

ಶ್ಲೋಕ: ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು

ಶುಭಸಂದೇಶ: ಯೊವಾನ್ನ 8:51-59


ಯೇಸುಸ್ವಾಮಿ ಯೆಹೂದ್ಯರಿಗೆ: "ನನ್ನ ಮಾತಿಗೆ ಶರಣಾಗಿ ನಡೆಯುವವನು ನಿತ್ಯ ಮರಣಕ್ಕೆ ತುತ್ತಾಗನು, ಎಂದು ಸತ್ಯವಾಗಿ ನಿಮಗೆ ಹೇಳುತ್ತೇನೆ,” ಎಂದರು. “ನೀನು ದೆವ್ವ ಹಿಡಿದವನೆಂದು ಈಗ ನಮಗೆ ಸ್ಪಷ್ಟವಾಯಿತು. ಅಬ್ರಹಾಮನು ಸತ್ತುಹೋದನು; ಪ್ರವಾದಿಗಳೂ ಸತ್ತುಹೋದರು. ಆದರೂ ನೀನು, ‘ನನ್ನ ಮಾತಿಗೆ ಶರಣಾಗಿ ನಡೆಯುವವನು ಎಂದೆಂದಿಗೂ ಸಾವಿಗೆ ತುತ್ತಾಗನು,’ ಎಂದು ಹೇಳುತ್ತಿರುವೆ; ನಮ್ಮ ತಂದೆ ಅಬ್ರಹಾಮನಿಗಿಂತಲೂ ನೀನು ಶ್ರೇಷ್ಟನೋ? ಆತನೂ ಸಾವಿಗೀಡಾದನು, ಪ್ರವಾದಿಗಳೂ ಸಾವಿಗೆ ಈಡಾಗಿರುವರು; ನೀನು ಯಾರೆಂದು ನಿನ್ನ ಎಣಿಕೆ?” ಎಂದು ಆ ಯೆಹೂದ್ಯ ಅಧಿಕಾರಿಗಳು ಕೇಳಿದರು. ಯೇಸು ಪ್ರತ್ಯುತ್ತರವಾಗಿ, “ನನ್ನ ಘನತೆ ಗೌರವವನ್ನು ನಾನೇ ಸಾರ ಹೊರಟರೆ ಅದಕ್ಕೆ ಬೆಲೆಯಿರದು. ನನ್ನ ಘನತೆ ಗೌರವವನ್ನು ಸಾರುವವರಾದರೋ ನನ್ನ ಪಿತನು. ಆ ಪಿತನನ್ನು ಕುರಿತೇ ‘ಅವರು ನಮ್ಮ ದೇವರು’ ಎಂದು ನೀವು ಹೇಳಿಕೊಳ್ಳುತ್ತೀರಿ. ಆದರೆ ಅವರ ಅರಿವು ನಿಮಗಿಲ್ಲ; ನನಗಿದೆ. ಅವರ ಅರಿವು ನನಗಿಲ್ಲವೆಂದು ನಾನು ಹೇಳಿದೆಯಾದರೆ ನಿಮ್ಮಂತೆ ನಾನೂ ಸುಳ್ಳುಗಾರನಾಗುತ್ತೇನೆ. ಅವರ ಅರಿವು ನನಗಿದೆ. ಅವರ ಮಾತನ್ನು ನಾನು ಪಾಲಿಸುತ್ತೇನೆ. ನಿಮ್ಮ ತಂದೆ ಅಬ್ರಹಾಮನು ನನ್ನ ದಿನವನ್ನು ತಾನು ಕಾಣುವನೆಂದು ಹಿಗ್ಗಿದನು. ಆತನು ಅದನ್ನು ಕಂಡೂ ಆಯಿತು; ಹಿಗ್ಗಿಯೂ ಆಯಿತು,” ಎಂದು ಉತ್ತರ ಕೊಟ್ಟರು. ಯೆಹೂದ್ಯರು, “ನಿನಗಿನ್ನೂ ಐವತ್ತು ವರ್ಷವಾಗಿಲ್ಲ; ನೀನು ಅಬ್ರಹಾಮನನ್ನು ನೋಡಿದ್ದೀಯಾ?” ಎಂದರು. ಯೇಸು ಅವರಿಗೆ, “ಅಬ್ರಹಾಮನು ಹುಟ್ಟುವುದಕ್ಕೆ ಮೊದಲಿನಿಂದಲೂ ನಾನಿದ್ದೇನೆ,” ಎಂದು ಮರು ನುಡಿದರು. ಇದನ್ನು ಕೇಳಿದ್ದೇ ಆ ಯೆಹೂದ್ಯರು ಯೇಸುವಿನತ್ತ ಬೀರಲು ಕಲ್ಲುಗಳನ್ನು ಎತ್ತಿಕೊಂಡರು. ಯೇಸುವಾದರೋ ಮರೆಯಾಗಿ ಮಹಾದೇವಾಲಯದಿಂದ ಹೊರಟು ಹೋದರು.

ಮನಸ್ಸಿಗೊಂದಿಷ್ಟು : ಹಿಂದೆ ಇಂದು ಮುಂದೂ  ಇರುವ ಯೇಸುವಿನ ಮಾತಿಗೆ ಶರಣಾದರೆ ನಮಗೆ ಪ್ರವಾದಿಗಳೂ ಕಾಣದಂಥ ಭಾಗ್ಯ ಸಿಗುತ್ತದೆ ಎಂಬ ಭರವಸೆ ಇಂದಿನ ಶುಭಸಂದೇಶದಲ್ಲಿದೆ. ನಮಗೆ ಶರಣಾಗುವ ಮನಸ್ಸಿದೆಯೇ ಎಂಬುದು ಪ್ರಶ್ನೆ. ನಾವು ಇಂದು ದೇವರಿಗೆ ಬಿಟ್ಟು ಮತ್ತೆಲ್ಲದಕ್ಕೂ ಶರಣಾಗುತ್ತಿದ್ದೇವೆ. ಯಾವುದಕ್ಕೆ ನಮ್ಮ ಆದ್ಯತೆ ಎಂದು ಚಿಂತಿಸುವ ಕಾಲವಿದು. 

ಪ್ರಶ್ನೆ : ನಮ್ಮ ಬದುಕು ಯಾವುದಕ್ಕೆ ಶರಣಾಗಿದೆ?

ಪ್ರಭುವೇ,
ಎಲ್ಲವ ಸವಿದು ಅಲೆದು
ಏಕಾಂತಕ್ಕೆ ಮರಳಲು 
ಇರುವುದೊಂದೇ ಮಡಿಲು 
ಕಾರಿ ಹಗೆ ಕೋಪ ಮತ್ಸರ 
ಒಳಗೊಳಗೆ ಮನ ತತ್ತರ 
ನೆಮ್ಮದಿಯ ಅಲೆ ತರಲು  
ಇರುವುದೊಂದೇ ಕಡಲು 
ಶರಣೆನ್ನ ಮನವು ನಿನಗೆ 
ನಿನ್ನೆಡೆಗೆ ನನ್ನದೆಲ್ಲವು ಕೊನೆಗೆ 

20.03.24 - "ನಾನು ದೇವರಿಂದಲೇ ಹೊರಟು ಇಲ್ಲಿಗೆ ಬಂದವನು. ನನ್ನಷ್ಟಕ್ಕೆ ನಾನೇ ಬರಲಿಲ್ಲ. ನನ್ನನ್ನು ಕಳುಹಿಸಿದ್ದು ದೇವರೇ"

ಮೊದಲನೇ ವಾಚನ: ದಾನಿಯೇಲ 3:14-20, 24-25, 28

ನೆಬೂಕದ್ನೆಚ್ಚರನು ಉಗ್ರಕೋಪಗೊಂಡು ಶದ್ರಕ್, ಮೇಶಕ್, ಅಬೇದ್‍ನೆಗೋ ಎಂಬವರನ್ನು ಹಿಡಿದುತರಲು ಆಜ್ಞಾಪಿಸಿದನು. ನಂತರ ಅವನು ಅವರಿಗೆ, “ಶದ್ರಕ್, ಮೇಶಕ್, ಹಾಗು ಅಬೇದ್‍ನೆಗೋ ಎಂಬವರೇ,ನೀವು ಬೇಕುಬೇಕೆಂದು, ನನ್ನ ದೇವರಿಗೆ ಸೇವೆಮಾಡದೆ, ನಾನು ಸ್ಥಾಪಿಸಿದ ಬಂಗಾರದ ಪ್ರತಿಮೆಯನ್ನು ಆರಾಧಿಸದೆ ಇರುವಿರೋ? ಈಗಲಾದರು ನೀವು ಸಿದ್ಧರಾಗಿದ್ದು ತುತೂರಿ, ಕೊಳಲು, ಕಿನ್ನರಿ, ತಂಬೂರಿ, ವೀಣೆ, ಓಲಗ ಮುಂತಾದ ಸಕಲ ವಾದ್ಯಗಳ ಧ್ವನಿ ಕೇಳಿದ ಕೂಡಲೆ ಅಡ್ಡಬಿದ್ದು ನಾನು ಸ್ಥಾಪಿಸಿದ ಪ್ರತಿಮೆಯನ್ನು ಆರಾಧಿಸಿದರೆ ಸರಿ, ಇಲ್ಲವಾದರೆ ಈ ಗಳಿಗೆಯಲ್ಲೆ ನಿಮ್ಮನ್ನು ಧಗಧಗನೆ ಉರಿಯುವ ಆವಿಗೆಯೊಳಗೆ ಹಾಕಲಾಗುವುದು. ನಿಮ್ಮನ್ನು ನನ್ನ ಕೈಯಿಂದ ಬಿಡಿಸಬಲ್ಲ ದೇವರು ಯಾರಿದ್ದಾನೆ?” ಎಂದು ಹೇಳಿದನು. ಇದನ್ನು ಕೇಳಿದ ಶದ್ರಕ್, ಮೇಶಕ್ ಮತ್ತು ಆಬೇದ್‍ನೆಗೋ ಎಂಬುವರು ರಾಜನಿಗೆ: “ನೆಬೂಕದ್ನೆಚ್ಚರ ಅರಸರೇ, ಈ ವಿಷಯದಲ್ಲಿ ನಾವು ನಿಮಗೆ ಏನನ್ನೂ ಹೇಳಬೇಕಾಗಿಲ್ಲ. ನಾವು ಸೇವೆ ಮಾಡುವ ದೇವರಿಗೆ ಚಿತ್ತವಿದ್ದರೆ ಅವರೇ ಧಗಧಗನೆ ಉರಿಯುವ ಆವಿಗೆಯೊಳಗಿಂದಲೂ ನಮ್ಮನ್ನು ಕಾಪಾಡಬಲ್ಲರು. ಅವರೇ ನಮ್ಮನ್ನು ನಿಮ್ಮ ಕೈಯಿಂದಲೂ ಬಿಡಿಸಬಲ್ಲರು. ಒಂದು ವೇಳೆ ಬಿಡಿಸದಿದ್ದರೂ ರಾಜರೇ, ಇದು ನಿಮಗೆ ತಿಳಿದಿರಲಿ: ನಾವು ನಿಮ್ಮ ದೇವರುಗಳಿಗೆ ಸೇವೆಮಾಡುವುದಿಲ್ಲ. ನೀವು ಸ್ಥಾಪಿಸಿರುವ ಬಂಗಾರದ ಪ್ರತಿಮೆಯನ್ನು ಆರಾಧಿಸುವುದಿಲ್ಲ,” ಎಂದು ಉತ್ತರಕೊಟ್ಟರು. ಆಗ ನೆಬೂಕದ್ನೆಚ್ಚರನು ಕೋಪೋದ್ರೇಕಗೊಂಡನು. ಶದ್ರಕ್, ಮೇಶಕ್ ಮತ್ತು ಅಬೇದ್‍ನೆಗೋ ಅವರ ಬಗ್ಗೆ ಅವನ ಮುಖಚರ್ಯೆ ಬದಲಾಯಿತು. ಆವಿಗೆಯನ್ನು ವಾಡಿಕೆಗಿಂತ ಏಳರಷ್ಟು ಹೆಚ್ಚಾಗಿ ಉರಿಸಬೇಕೆಂದು ಆಜ್ಞಾಪಿಸಿದನು. ಇದಲ್ಲದೆ ತನ್ನ ಸೈನ್ಯದ ಕೆಲವು ಮಂದಿ ಶೂರರಿಗೆ ಶದ್ರಕ್, ಮೇಶಕ್, ಅಬೇದ್‍ನೆಗೋ ಅವರನ್ನು ಕಟ್ಟಿ ಧಗಧಗನೆ ಉರಿಯುವ ಆವಿಗೆಯೊಳಗೆ ಎತ್ತಿಹಾಕಬೇಕೆಂದು ಅಪ್ಪಣೆಕೊಟ್ಟನು. ಇತ್ತ ರಾಜ ನೆಬೂಕದ್ನೆಚ್ಚರನು ಬೆಚ್ಚಿಬಿದ್ದು, ತಟ್ಟನೆ ಎದ್ದು ತನ್ನ ಮಂತ್ರಿಗಳನ್ನು ಕರೆಸಿ, “ನಾವು ಮೂವರನ್ನು ಕಟ್ಟಿ ಬೆಂಕಿಯಲ್ಲಿ ಹಾಕಿಸಿದೆವಲ್ಲವೆ?” ಎಂದು ಕೇಳಿದನು. ಅವರು ರಾಜನಿಗೆ, “ಹೌದು ಪ್ರಭೂ, ಅದು ಸತ್ಯ,” ಎಂದು ಉತ್ತರ ಕೊಟ್ಟರು. ಅದಕ್ಕೆ ಅವನು, “ಆದರೆ, ಇಗೋ ಕಟ್ಟಿಲ್ಲದ ನಾಲ್ವರನ್ನು ನಾನು ನೋಡುತ್ತಿದ್ದೇನೆ. ಬೆಂಕಿಯಲ್ಲಿ ತಿರುಗಾಡುತ್ತಿದ್ದಾರೆ; ಅವರಿಗೆ ಯಾವ ಹಾನಿಯೂ ಆಗುತ್ತಿಲ್ಲ. ಆಗ ನೆಬೂಕದ್ನೆಚ್ಚರನು, “ಶದ್ರಕ್, ಮೇಶಕ್ ಹಾಗು ಅಬೇದ್‍ನೆಗೋ ಎಂಬುವರ ದೇವರಿಗೆ ಸ್ತೋತ್ರವಾಗಲಿ! ಆತ ತನ್ನ ದೂತರನ್ನು ಕಳಿಸಿ ತನ್ನಲ್ಲಿ ವಿಶ್ವಾಸವಿಟ್ಟ ಇವರನ್ನು ರಕ್ಷಿಸಿದ್ದಾನೆ. ಇವರೋ ರಾಜಾಜ್ಞೆಯನ್ನೂ ಮೀರಿ ತಮ್ಮ ದೇವರನ್ನೇ ಹೊರತು ಇನ್ನಾವ ದೇವರನ್ನೂ ಪೂಜಿಸಿ ಆರಾಧಿಸಬಾರದೆಂದು ಸ್ವಂತ ದೇಹಗಳನ್ನೇ ಸಾವಿಗೊಪ್ಪಿಸಿದಂಥ ಭಕ್ತರು! ಎಂದು ಹೇಳಿದನು.

ಅಜರ್ಯನ ಗೀತೆ: 1:29-34
ಶ್ಲೋಕ: ನೀವು ಸ್ತುತ್ಯರು, ಎಂದೆಂದಿಗೂ ಮಹಿಮಾನ್ವಿತರು

ನಮ್ಮ ಪೂರ್ವಜರ ದೇವರಾದ ಸರ್ವೇಶ್ವರ,
ನೀವು ಪರಮ ಪೂಜ್ಯರು,ಎಂದೆಂದಿಗೂ ಮಹೋನ್ನತರು.
ಮಹಿಮೆಯುತವಾದ ನಿಮ್ಮ ನಾಮ‌ಸ್ತುತ್ಯರ್ಹವಾದುದು,
ಪರಮಪೂಜ್ಯವಾದುದು, ಎಂದೆಂದಿಗೂ ಮಹಾ‌ಘನತರವಾದುದು.

ಪರಮ ವೈಭವದಿಂದ ತುಂಬಿದ ಕೂಡಿದ ಮಂದಿರದ್ಲಲಿ
ನೀವು ಸ್ತುತಿ ಸ್ತೋತ್ರಕ್ಕೆ ಪಾತ್ರರು :
ನೀವು ಪರಮಪೂಜ್ಯರು, ಎಂದೆಂದಿಗೂ ಮಹೋನ್ನತರು.‌‌

ಸಾಗರಾಧಿಗಳನ್ನು ಸಮೀಕ್ಷಿಸುವ ನಿಮಗೆ ಸ್ತೋತ್ರ !
ಕೆರೂಬಿಗಳ ಮೇಲೆ ಆಸೀನರಾಗಿರುವ ನಿಮಗೆ ಸ್ತೋತ್ರ !
ನೀವು ಪರಮಪೂಜ್ಯರು, ಎಂದೆಂದಿಗೂ ಮಹೋನ್ನತರು.‌‌

ನಿಮ್ಮ ಸಾಮ್ರಾಜ್ಯದ ಸಿಂಹಾಸನದ ಮೇಲೆ ಮಂಡಿಸಿರುವ ನಿಮಗೆ ಸ್ತೋತ್ರ :
ನೀವು ಪರಮಪೂಜ್ಯರು, ಎಂದೆಂದಿಗೂ ಮಹೋನ್ನತರು.‌‌
ಗಗನ ಮಂಡಲದಲ್ಲಿ ಸ್ತೋತ್ರ ಪಾತ್ರರು:
ನೀವು ಸ್ತುತ್ಯರು ಎಂದೆಂದಿಗೂ ಮಹಿಮಾನ್ವಿತರು.


ಶುಭಸಂದೇಶ: ಯೊವಾನ್ನ 8:31-42


ಯೇಸುಸ್ವಾಮಿ ತಮ್ಮಲ್ಲಿ ನಂಬಿಕೆ ಇಟ್ಟಿದ್ದ ಯೆಹೂದ್ಯರಿಗೆ ಹೀಗೆಂದರು: “ನನ್ನ ಮಾತಿಗೆ ನೀವು ಶರಣಾದರೆ ನಿಜವಾಗಿಯೂ ನೀವು ನನ್ನ ಶಿಷ್ಯರು. ನೀವು ಸತ್ಯವನ್ನು ಅರಿತುಕೊಳ್ಳುವಿರಿ. ಸತ್ಯವು ನಿಮಗೆ ಸ್ವಾತಂತ್ರ್ಯ ನೀಡುವುದು.” ಅದಕ್ಕೆ ಯೆಹೂದ್ಯರು, “ನಾವು ಅಬ್ರಹಾಮನ ವಂಶಜರು; ಯಾರಿಗೂ ಎಂದೂ ನಾವು ದಾಸರಾಗಿಲ್ಲ. ಅಂದಮೇಲೆ ನಾವು ಸ್ವತಂತ್ರರಾಗುತ್ತೇವೆ, ಎಂದು ನೀನು ಹೇಳುವುದಾದರೂ ಹೇಗೆ?” ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ ಕೇಳಿ: ಪಾಪವನ್ನು ಮಾಡುವವನು ಪಾಪಕ್ಕೆ ದಾಸನೇ. ದಾಸನಾದವನು ಶಾಶ್ವತವಾಗಿ ಮನೆಯಲ್ಲಿ ಇರುವಂತಿಲ್ಲ. ಶಾಶ್ವತವಾಗಿ ಇರುವವನು ಪುತ್ರನೇ. ಪುತ್ರನು ನಿಮಗೆ ಸ್ವಾತಂತ್ರ್ಯ ನೀಡಿದರೆ, ನೀವು ನಿಜವಾಗಿಯೂ ಸ್ವತಂತ್ರರು. ನೀವು ಅಬ್ರಹಾಮನ ವಂಶಜರೆಂದು ನಾನು ಬಲ್ಲೆ. ಆದರೆ ನನ್ನ ಮಾತು ಹಿಡಿಸದ ಕಾರಣ ನನ್ನನ್ನು ಕೊಲ್ಲಲು ಹವಣಿಸುತ್ತೀರಿ. ನಾನಾಡುವ ಮಾತುಗಳು ಪಿತನ ಸನ್ನಿಧಿಯಲ್ಲಿ ನಾನು ಕಂಡದ್ದನ್ನೇ ನಿರೂಪಿಸುತ್ತವೆ. ನೀವು ಮಾಡುವ ಕಾರ್ಯಗಳೋ ನಿಮ್ಮ ತಂದೆಯಿಂದ ನೀವು ಕಲಿತದ್ದನ್ನೇ ವ್ಯಕ್ತಪಡಿಸುತ್ತವೆ,” ಎಂದರು. ಆಗ ಆ ಯೆಹೂದ್ಯರು, “ಅಬ್ರಹಾಮನೇ ನಮ್ಮ ತಂದೆ,” ಎಂದು ಮರುನುಡಿದರು. ಯೇಸು, “ಅಬ್ರಹಾಮನ ಮಕ್ಕಳು ನೀವಾಗಿದ್ದರೆ ಅಬ್ರಹಾಮನು ಮಾಡಿದಂತೆ ನೀವು ಮಾಡುತ್ತಿದ್ದಿರಿ. ಅದಕ್ಕೆ ಬದಲಾಗಿ ದೇವರಿಂದಲೇ ತಿಳಿದ ಸತ್ಯವನ್ನು ನಿಮಗೆ ಹೇಳುತ್ತಿರುವ ನನ್ನನ್ನು ಕೊಲ್ಲಲು ಹವಣಿಸುತ್ತಿದ್ದೀರಿ. ಅಬ್ರಹಾಮನು ಹಾಗೇನೂ ಮಾಡಲಿಲ್ಲ. ನೀವಾದರೋ ನಿಮಗೆ ತಂದೆಯಾದವನು ಮಾಡಿದಂತೆ ಮಾಡುತ್ತೀರಿ,” ಎಂದರು. ಅದಕ್ಕೆ ಅವರು, “ನಾವೇನು ಹಾದರಕ್ಕೆ ಹುಟ್ಟಿದವರಲ್ಲ, ದೇವರೇ ನಮ್ಮ ತಂದೆ,” ಎಂದು ಪ್ರತಿಭಟಿಸಿದರು. ಯೇಸು, ಅವರಿಗೆ, “ದೇವರೇ ನಿಮ್ಮ ತಂದೆಯಾಗಿದ್ದರೆ, ನನ್ನ ಮೇಲೆ ನಿಮಗೆ ಪ್ರೀತಿಯಿರುತ್ತಿತ್ತು. ಕಾರಣ, ನಾನು ದೇವರಿಂದಲೇ ಹೊರಟು ಇಲ್ಲಿಗೆ ಬಂದವನು. ನನ್ನಷ್ಟಕ್ಕೆ ನಾನೇ ಬರಲಿಲ್ಲ. ನನ್ನನ್ನು ಕಳುಹಿಸಿದ್ದು ದೇವರೇ.

ಮನಸ್ಸಿಗೊಂದಿಷ್ಟು : "ತನ್ನ ಆಸೆಗಳಿಗೆ ದಾಸನಾಗಿರುವ ಮನುಷ್ಯನನ್ನು ಸ್ವತಂತ್ರನು ಎಂದು ಹೇಗೆ ತಾನೇ ಕರೆಯಲು ಸಾಧ್ಯ" ಎನ್ನುತ್ತಾನೆ ಸಾಕ್ರಟಿಸ್. ಪಾಪಕ್ಕೆ ದಾಸರಾಗಿರುವ ನಮಗೆ ಅದರಿಂದ ಸ್ವಾತಂತ್ರ ದೊರಕಬೇಕಾದರೆ ಪ್ರಭು ಯೇಸುವೇ ನಮ್ಮ ಮೊದಲ ಆಯ್ಕೆಯಾಗಬೇಕು.
ಆಯ್ಕೆಗಳ ಲೋಕದಲ್ಲಿ ನಮ್ಮ ಆಯ್ಕೆ ಸ್ವಾತಂತ್ರದೆಡೆಗೆಯೇ ಅಥವಾ ದಾಸತ್ವದ ಕಡೆಗೆಯೇ ಎಂಬುದನ್ನು ನಾವೇ ನಿರ್ಧರಿಸಬೇಕು.

ಪ್ರಶ್ನೆ : ನಾವು ದಾಸರೇ? ಸ್ವತಂತ್ರರೇ?

ಪ್ರಭುವೇ,
ಆಸೆ ದುರಾಸೆ ನಿರಾಸೆಯ
ದಾಸರು ನಾವು
ಎಲ್ಲದರಿಂದ ಬಿಡಿಸಬಲ್ಲ
ದೇವರು ನೀವು
ಹಕ್ಕಿಯಂತೆ ನಿರಾಳ
ನೆಮ್ಮದಿಯಲ್ಲಿ ಧಾರಾಳ
ಆಗಲಿ ಈ ಮನವು
ತುಂಬಿಕೊಳ್ಳಲ್ಲಿ ಎದೆಗೂಡಲ್ಲಿ

ಅನುದಿನವು ನಿನ್ನೊಲವು

19.03.24 - "ಆಕೆಯ ಪತಿ ಜೋಸೆಫನು ನೀತಿವಂತನು"

ಮೊದಲನೇ ವಾಚನ: 2 ಸಮುವೇಲನ 7:4-5, 12-14, 16

ಆದರೆ ಅದೇ ರಾತ್ರಿ ಸರ್ವೇಶ್ವರ ನಾತಾನನಿಗೆ ಹೀಗೆಂದು ಆಜ್ಞಾಪಿಸಿದರು: ನೀನು ಹೋಗಿ ನನ್ನ ದಾಸ ದಾವೀದನಿಗೆ ತಿಳಿಸಬೇಕಾದುದು ಇದು: ‘ನೀನು ನನಗೊಂದು ದೇವಾಲಯವನ್ನು ಕಟ್ಟಬೇಕೆಂದಿರುವೆಯೋ? ನಿನ್ನ ಆಯುಷ್ಕಾಲ ಮುಗಿದು ನೀನು ನಿನ್ನ ಪೂರ್ವಜರನ್ನು ಸೇರಿ ವಿಶ್ರಮಿಸುವಾಗ ನಿನ್ನ ಮಕ್ಕಳಲ್ಲಿ ಒಬ್ಬನನ್ನು ನಿನಗೆ ಉತ್ತರಾಧಿಕಾರಿಯನ್ನಾಗಿ ನೇಮಿಸಿ ಅವನ ರಾಜ್ಯವನ್ನು ಸ್ಥಿರಪಡಿಸುವೆನು. ಅವನು ನನ್ನ ಹೆಸರಿನಲ್ಲಿ ಒಂದು ದೇವಾಲಯವನ್ನು ಕಟ್ಟುವನು. ನಾನು ಅವನ ಸಿಂಹಾಸನವನ್ನು ಸ್ಥಿರಪಡಿಸುವೆನು. ನಾನು ಅವನಿಗೆ ತಂದೆಯಾಗಿರುವೆನು, ಅವನು ನನಗೆ ಮಗನಾಗಿರುವನು. ಅವನು ತಪ್ಪುಮಾಡಿದಾಗ, ಮಗನಿಗೆ ತಂದೆ ಬೆತ್ತದ ರುಚಿತೋರಿಸುವಂತೆ ನಾನು ಅವನನ್ನು ಶಿಕ್ಷಿಸುವೆನು. ನಿನ್ನ ಮನೆತನವೂ ಅರಸುತನವೂ ಸದಾಕಾಲ ಸ್ಥಿರವಾಗಿರುವುವು; ನಿನ್ನ ಸಿಂಹಾಸನ ಶಾಶ್ವತವಾಗಿರುವುದು.”

ಕೀರ್ತನೆ: 89:1-4, 26, 28.
ಶ್ಲೋಕ: ಚಿರಶಾಶ್ವತವಾಗಿರುವುದು ಅವನ ಸಂತತಿ. 

ಎರಡನೇ ವಾಚನ: ರೋನರಿಗೆ 4:13, 16-18, 22


ಅಬ್ರಹಾಮನಿಗೂ ಆತನ ಸಂತತಿಗೂ ಜಗತ್ತನ್ನೇ ಕೊಡುವುದಾಗಿ ದೇವರು ವಾಗ್ದಾನ ಮಾಡಿದರು. ಈ ವಾಗ್ದಾನವನ್ನು ಅಬ್ರಹಾಮನು ಪಡೆದದ್ದು ಧರ್ಮಶಾಸ್ತ್ರದ ಪಾಲನೆಯಿಂದ ಅಲ್ಲ, ಆದರೆ ವಿಶ್ವಾಸದ ಮೂಲಕ ದೇವರೊಡನೆ ಸತ್ಸಂಬಂಧವನ್ನು ಹೊಂದಿದ್ದರಿಂದ. ದೈವವಾಗ್ದಾನಕ್ಕೆ ವಿಶ್ವಾಸವೇ ಆಧಾರ. ಇವೆಲ್ಲಕ್ಕೂ ದೈವಾನುಗ್ರಹವೇ ಮೂಲ. ಇವು ಅಬ್ರಹಾಮನ ಸಂತತಿಯವರಿಗೆ, ಅಂದರೆ ಧರ್ಮಶಾಸ್ತ್ರವನ್ನು ಅನುಸರಿಸಿ ನಡೆಯುವವರಿಗೆ ಮಾತ್ರವಲ್ಲ, ಅಬ್ರಹಾಮನಂತೆ ದೇವರಲ್ಲಿ ವಿಶ್ವಾಸ ಇಟ್ಟವರೆಲ್ಲರಿಗೂ ಖಚಿತವಾಗಿ ದೊರೆಯುತ್ತದೆ. ಏಕೆಂದರೆ, ಅಬ್ರಹಾಮನೇ ನಮ್ಮೆಲ್ಲರಿಗೂ ಮೂಲಪಿತ. “ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ಮೂಲಪಿತನನ್ನಾಗಿ ನೇಮಿಸಿದ್ದೇನೆ,” ಎಂದು ಪವಿತ್ರಗ್ರಂಥದಲ್ಲೇ ಬರೆದಿದೆ. ಹೌದು, ಮೃತರನ್ನು ಜೀವಂತಗೊಳಿಸುವವರೂ ಅಸ್ತಿತ್ವದಲ್ಲಿ ಇಲ್ಲದ್ದನ್ನು ಅಸ್ತಿತ್ವಕ್ಕೆ ತರುವಂಥವರೂ ಆದ ದೇವರಲ್ಲಿ ಆತನು ವಿಸ್ವಾಸವಿಟ್ಟನು. ಆದ್ದರಿಂದ ಈ ವಾಗ್ದಾನವನ್ನು ಸಾಕ್ಷಾತ್ ದೇವರಿಂದಲೇ ಪಡೆದನು. ಆತನ ವಿಶ್ವಾಸ ಮತ್ತು ಭರವಸೆ ಎಷ್ಟರಮಟ್ಟಿಗೆ ಇತ್ತೆಂದರೆ, ಈ ದೈವವಾಗ್ದಾನವು ನೆರವೇರುವ ನಿರೀಕ್ಷೆ ಇಲ್ಲದಿದ್ದರೂ ಆತನು ದೇವರನ್ನು ನಂಬಿದನು. ಆದುದರಿಂದಲೇ “ನಿನ್ನ ಸಂತಾನವು ನಕ್ಷತ್ರಗಳಷ್ಟು ಅಸಂಖ್ಯಾತ ಆಗುವುದು,” ಎಂಬ ಹೇಳಿಕೆಯಂತೆ ಆತನು ಅನೇಕ ಜನಾಂಗಗಳಿಗೆ ಮೂಲಪಿತನಾದನು. ಆದ್ದರಿಂದಲೇ, “ದೇವರು ಆತನನ್ನು ತಮ್ಮೊಂದಿಗೆ ಸತ್ಸಂಬಂಧದಲ್ಲಿ ಇರುವುದಾಗಿ ಪರಿಗಣಿಸಿದರು,” ಎಂದು ಲಿಖಿತವಾಗಿದೆ.

ಶುಭಸ೦ದೇಶ: ಮತ್ತಾಯ 1:18-21, 24


ಕ್ರಿಸ್ತ ಯೇಸುವಿನ ಜನನದ ಪ್ರಕರಣ: ಯೇಸುವಿನ ತಾಯಿ ಮರಿಯಳಿಗೂ ಜೋಸೆಫನಿಗೂ ನಿಶ್ಚಿತಾರ್ಥವಾಗಿತ್ತು. ಅವರಿಬ್ಬರೂ ಕೂಡಿ ಬಾಳುವುದಕ್ಕೆ ಮುಂಚೆಯೇ ಮರಿಯಳು ಗರ್ಭವತಿಯಾಗಿರುವುದು ತಿಳಿದುಬಂತು. ಆಕೆ ಗರ್ಭಧರಿಸಿದ್ದು ಪವಿತ್ರಾತ್ಮ ಪ್ರಭಾವದಿಂದ. ಆಕೆಯ ಪತಿ ಜೋಸೆಫನು ನೀತಿವಂತನು. ಮರಿಯಳನ್ನು ಅವಮಾನಕ್ಕೆ ಗುರಿಮಾಡುವ ಉದ್ದೇಶ ಅವನದಲ್ಲವಾದ್ದರಿಂದ ಯಾರಿಗೂ ತಿಳಿಯದ ಹಾಗೆ ನಿಶ್ಚಿತಾರ್ಥವನ್ನು ಮುರಿದುಬಿಡಬೇಕೆಂದಿದ್ದನು. ಆತನು ಈ ಕುರಿತು ಆಲೋಚಿಸುತ್ತಿದ್ದಂತೆ, ದೇವದೂತನು ಕನಸಿನಲ್ಲಿ ಕಾಣಿಸಿಕೊಂಡು, "ದಾವೀದ ವಂಶದ ಜೋಸೆಫನೇ, ಮರಿಯಳನ್ನು ನಿನ್ನ ಪತ್ನಿಯನ್ನಾಗಿ ಸ್ವೀಕರಿಸಲು ಅಂಜಬೇಡ. ಆಕೆ ಗರ್ಭಧರಿಸಿರುವುದು ಪವಿತ್ರಾತ್ಮ ಪ್ರಭಾವದಿಂದಲೇ. ಆಕೆ ಒಬ್ಬ ಮಗನನ್ನು ಹೆರುವಳು. ಆತನಿಗೆ ನೀನು ‘ಯೇಸು’ ಎಂಬ ಹೆಸರಿಡಬೇಕು. ಏಕೆಂದರೆ ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸಿ ಉದ್ಧಾರಮಾಡುವವನು ಆತನೇ," ಎಂದನು. ಆಗ ಜೋಸೆಫನು ಎಚ್ಚೆತ್ತು ದೇವದೂತನ ಆಜ್ಞೆಯ ಪ್ರಕಾರ ಮರಿಯಳನ್ನು ವಿವಾಹ ಮಾಡಿಕೊಂಡನು.


ಮನಸ್ಸಿಗೊಂದಿಷ್ಟು : "ಈ ಜಗದಲ್ಲಿ ಪ್ರತಿ ಮನುಷ್ಯ ಹೊತ್ತುಕೊಳ್ಳುವ ಜವಬ್ದಾರಿ, ವಹಿಸಿಕೊಳ್ಳುವ ಪಾತ್ರಕ್ಕೆ ತಕ್ಕಂತೆ ದೇವರು ಅವರ ಮೇಲೆ ಕೃಪಾವರಗಳನ್ನು ಸುರಿಸುತ್ತಾರೆ" ಎನ್ನುತ್ತಾರೆ ಸಂತ ಥಾಮಸ್ ಅಕ್ವಿನಾಸ್. ಲೋಕದಲ್ಲಿ ತಮ್ಮ ಮಗನ ಪ್ರಾಂಪಚಿಕ ತಂದೆಯಾಗಿ ಪಾತ್ರವಹಿಸಬೇಕಾದ ಜೋಸೆಫರಿಗೆ ಎಷ್ಟು ಕೃಪಾವರಗಳನ್ನು ಸುರಿಸಬೇಕು. 

ತಮ್ಮಂತೆ ಮನುಷ್ಯರನ್ನು ಉಂಟು ಮಾಡಿದ ದೇವರು, ಅವರಿಂದ ಬಯಸಿದ್ದು ಪಾವಿತ್ರತೆ ಹಾಗು ವಿಧೇಯತೆ ಎನ್ನವುವ ಮಾತಿದೆ. ಸಂತ ಜೋಸೆಫರ ಈ ಎರಡರಲ್ಲೂ ದೇವರ ಮೆಚ್ಚುಗೆಗೆ ಪಾತ್ರರಾದವರೇ. ತಮ್ಮ ನಿದ್ದೆಯಲ್ಲಿ ದೇವರ ಚಿತ್ತದ ಸಂದೇಶ ಪಡೆದ ಜೋಸೆಫರು ಎಚ್ಚರದ ನಂತರ ಜೀವನದುದ್ದಕೂ ಅದಕ್ಕೆ ತಲೆಬಾಗಿದ್ದು ನಮಗೆ ಸದಾ ಪ್ರೇರಣೆಯಾಗಲಿ     


 

18.03.24

ಮೊದಲನೇ ವಾಚನ: ಸುಸನ್ನಳ ಗ್ರಂಥ 

ಅವರು ಜನರ ಹಿರಿಯರು ಮಾತ್ರವಲ್ಲ ನ್ಯಾಯಾಧೀಶರೂ ಆಗಿದ್ದರಿಂದ ಕೂಡಿದ್ದ ಸಭಿಕರು ಅವರ ಮಾತನ್ನು ನಂಬಿ ಆಕೆಗೆ ಮರಣದಂಡನೆಯನ್ನು ವಿಧಿಸಿದರು. ಆಗ ಸುಸನ್ನಳು ಗಟ್ಟಿಯಾಗಿ ಕೂಗಿ, “ನಿತ್ಯರಾದ ದೇವರೇ ನೀವು ಎಲ್ಲ ಗುಟ್ಟನ್ನು ತಿಳಿದವರು. ಎಲ್ಲ ವಿಷಯಗಳನ್ನು , ಅವು ಹುಟ್ಟುವ ಮೊದಲೇ ಅರಿತವರೂ ಆಗಿದ್ದೀರಿ. ಇವರು ನನ್ನ ವಿರುದ್ಧ ಸುಳ್ಳುಸಾಕ್ಷಿ ಹೇಳಿದ್ದಾರೆಂಬುದು ನಿಮಗೆ ಗೊತ್ತಿದೆ. ಇವರು ನನ್ನ ವಿರುದ್ಧ ಹೊಟ್ಟೆಕಿಚ್ಚಿನಿಂದ ಹೇಳಿದ ಕಾರ್ಯಗಳನ್ನು ನಾನು ಮಾಡಿದ್ದೇ ಇಲ್ಲ. ಆದರೂ ಈಗ ನಾನು ಸಾಯಲೇಬೇಕು. ಎಂದು ಮೊರೆಯಿಟ್ಟಳು. ಸರ್ವೇಶ್ವರಸ್ವಾಮಿ ಆಕೆಯ ಮೊರೆಯನ್ನು ಆಲಿಸಿದರು. ಜನರು ಅವಳನ್ನು ಕೊಲ್ಲುವುದಕ್ಕೆ ಸಾಗಿಸಿಕೊಂಡು ಹೋಗುತ್ತಿರುವಾಗ ದೇವರು ದಾನಿಯೇಲನೆಂಬ ಯುವಕನಲ್ಲಿದ್ದ ಪವಿತ್ರಾತ್ಮನನ್ನು ಚೇತನಗೊಳಿಸಿದರು. ದಾನಿಯೇಲನು, “ಈ ಮಹಿಳೆಯ ರಕ್ತಪಾತಕ್ಕೆ ನಾನು ಹೊಣೆ ಅಲ್ಲ”, ಎಂದು ಕೂಗಿ ಹೇಳಿದನು. ಜನರೆಲ್ಲರು ಅವನ ಕಡೆಗೆ ತಿರುಗಿಕೊಂಡು, “ನೀನು ಆಡಿದ ಮಾತಿನ ಮರ್ಮವೇನು?” ಎಂದು ವಿಚಾರಿಸಿದರು. ಅವನು ಅವರ ಮಧ್ಯೆ ನಿಂತು, “ಇಸ್ರಯೇಲಿನ ಕುಲಪುತ್ರರೇ, ನೀವು ಇಷ್ಟು ಬುದ್ಧಿಹೀನರೋ? ಪರೀಕ್ಷೆಮಾಡದೆ, ಸತ್ಯವನ್ನು ಅರಿತುಕೊಳ್ಳದೆ. ಇಸ್ರಯೇಲಿನ ಕುಲಪುತ್ರಿಯೊಬ್ಬಳಿಗೆ ದಂಡನೆ ವಿಧಿಸಿದಿರೋ? ನ್ಯಾಯಸ್ಥಾನಕ್ಕೆ ಮರಳಿ ಬನ್ನಿ, ಏಕೆಂದರೆ ಇವಳ ಮೇಲೆ ಸುಳ್ಳುಸಾಕ್ಷಿ ಹೇಳಲಾಗಿದೆ,” ಎಂದು ಹೇಳಿದನು. ಜನರೆಲ್ಲರು ಕೂಡಲೆ ಹಿಂದಿರುಗಿ ಬಂದರು. ಜನನಾಯಕ್ತು ದಾನಿಯೇಲನಿಗೆ , “ಬಾ, ನಮ್ಮ ನಡುವೆ ಕುಳಿತುಕೊಂಡು ಆ ವಿಷಯವನ್ನು ನಮಗೆ ವಿವರಿಸು. ಹಿರಿಯರಿಗೆ ಕೊಟ್ಟಂಥ ಗೌರವವನ್ನು ದೇವರು ನಿನಗೆ ಕೊಟ್ಟಂತಿದೆ!” ಎಂದರು, ಆಗ ದಾನಿಯೇಲನು, “ಇವರಿಬ್ಬರನ್ನು ಬೇರ್ಪಡಿಸಿ ದೂರದೂರದಲ್ಲಿ ಇಡಿ. ನಾನು ಇವರನ್ನು ಪರೀಕ್ಷಿಸುತ್ತೇನೆ”, ಎಂದನು. ಅಂತೆಯೇ ಅವರನ್ನು ಬೇರ್ಪಡಿಸಲಾಯಿತು. ಆಮೇಲೆ ಅವರಿಬ್ಬರಲ್ಲಿ ಒಬ್ಬನನ್ನು ಕರೆದು ಅವನಿಗೆ, “ಕೆಟ್ಟತನದಲ್ಲೆ ಬೆಳೆದು ಮುಪ್ಪಾಗಿರುವವನೇ, ನೀನು ಹಿಂದೆ ಮಾಡಿದ ಪಾಪಗಳು ಇಂದು ಬಯಲಿಗೆ ಬಂದಿವೆ. `ನಿರಪರಾಧಿಗೂ ನೀತಿವಂತನಿಗೂ ಮರಣದಂಡನೆ ವಿಧಿಸಲೇಕೂಡದು’ ಎಂದು ಸರ್ವೇಶ್ವರಸ್ವಾಮಿ ಹೇಳಿದ್ದರೂ ಅನ್ಯಾಯವಾದ ತೀರ್ಪುಕೊಟ್ಟು, ನಿರಪರಾಧಿಯನ್ನು ದಂಡಿಸಿ, ಅಪರಾಧಿಗಳನ್ನು ಬಿಡುಗಡೆಮಾಡುತ್ತಾ ಬಂದಿರುವೆ. ಈಗ ಹೇಳು, ಇವಳನ್ನು ನೀನು ನೋಡಿದ್ದೇ ಆದರೆ, ಇವರು ಯಾವ ಗಿಡದ ಅಡಿಯಲ್ಲಿ ಕೂಡಿದ್ದರು. ನನಗೆ ತಿಳಿಸು,” ಎಂದನು. ಅದಕ್ಕೆ ಅವನು, “ಬಗಿನಿ ಮರದ ಅಡಿಯಲ್ಲಿ,” ಎಂದು ಉತ್ತರವಿತ್ತನು. ಅದಕ್ಕೆ ದಾನಿಯೇಲನು, “ನಿನ್ನ ಪ್ರಾಣಕ್ಕೆ ವಿರುದ್ಧ ಚೆನ್ನಾಗಿ ಸುಳ್ಳಾಡಿದೆ. ದೇವದೂತನು ಈಗಲೆ ದೇವರಿಂದ ತೀರ್ಮಾನ ಪಡೆದು ನಿನ್ನನ್ನು ಬಗೆದುಹಾಕಿ, ಎರಡು ತುಂಡಾಗಿ ಮಾಡಲಿದ್ದಾನೆ”, ಎಂದು ಹೇಳಿ ಅವನನ್ನು ಪಕ್ಕಕ್ಕೆ ಸರಿಸಿದನು. ಬಳಿಕ ಎರಡನೆಯವನನ್ನು ಕರೆತರಲು ಆಜ್ಞಾಪಿಸಿದನು. ಅವನನ್ನು ನೋಡಿ, “ಯೆಹೂದ ವಂಶಕ್ಕೆ ಅಯೋಗ್ಯನಾದ ಎಲೈ ಕಾನಾನ್ ವಂಶಜನೇ, ಸೌಂದರ್ಯವು ನಿನ್ನನ್ನು ಮೋಸಗೊಳಿಸಿತು. ಕಾಮವು ನಿನ್ನ ಮನಸ್ಸನ್ನು ಕೆಡಿಸಿತು. ಇಸ್ರಯೇಲಿನ ಕುಲಪುತ್ರಿಯರೊಂದಿಗೆ ನೀವು ಇದೇ ರೀತಿ ವರ್ತಿಸುತ್ತಾ ಬಂದಿರಿ. ಅವರು ಅಂಜಿಕೆಯಿಂದ ನಿಮಗೆ ವಶವಾಗುತ್ತಿದ್ದರು. ಆದರೆ ಜುದೇಯದ ಈ ಕುಲಪುತ್ರಿ ಮಾತ್ರ ನಿಮ್ಮ ಅಧರ್ಮಕ್ಕೆ ಇಂಬುಕೊಡಲಿಲ್ಲ. ಈಗ ಹೇಳು, `ಯಾವ ಮರದ ಕೆಳಗೆ ಇವರು ಕೂಡಿದ್ದನ್ನು ನೀನು ಕಂಡುಹಿಡಿದೆ?” ಎಂದನು. ಅವನು, `ಕಡವಾಲ ಮರದ ಕೆಳಗೆ’ ಎಂದು ಉತ್ತರಕೊಟ್ಟ , ಆಗ ದಾನಿಯೇಲನು “ನೀನು ಸಹ ನಿನ್ನ ಕುತ್ತಿಗೆಗೆ ವಿರುದ್ಧ ಚೆನ್ನಾಗಿ ಸುಳ್ಳಾಡಿದೆ, ನಿನ್ನನ್ನು ಕಡಿದು ಎರಡು ಹೋಳಾಗಿ ಮಾಡಿ ನಿಮ್ಮಿಬ್ಬರನ್ನೂ ನಾಶಮಾಡಲು ದೇವದೂತನು ಕೈಯಲ್ಲಿ ಕತ್ತಿಹಿಡಿದು ಕಾದಿದ್ದಾನೆ”, ಎಂದು ನುಡಿದನು, ಕೂಡಿದ್ದ ಸಭಿಕರೆಲ್ಲರು ಆಗ ಗಟ್ಟಿಯಾಗಿ ಕೂಗುತ್ತಾ, ತನ್ನಲ್ಲಿ ಭರವಸೆಯಿಟ್ಟವರನ್ನು ಸಂರಕ್ಷಿಸಿ ಕಾಪಾಡುವ ದೇವರನ್ನು ಕೊಂಡಾಡಿದರು. ಅಲ್ಲದೆ, ದಾನಿಯೇಲನು ಆ ಇಬ್ಬರು ಹಿರಿಯರನ್ನು ಸುಳ್ಳುಸಾಕ್ಷಿಗಳೆಂದು ತೋರಿಸಿಕೊಟ್ಟ ಕಾರಣ, ಸಭಿಕರು ಅವರ ವಿರುದ್ಧ ಎದ್ದುನಿಂತು ಪ್ರತಿಭಟಿಸಿದರು. ಹೊಟ್ಟೆಕಿಚ್ಚಿನಿಂದ ನೆರೆಯವರ ಮೇಲೆ ಏನು ದಂಡನೆ ತೆರಬೇಕೆಂದಿದ್ದರೋ ಅದನ್ನೇ ಮೋಶೆಯ ಧರ್ಮಶಾಸ್ತ್ರದ ಪ್ರಕಾರ ಅವರ ಮೇಲೆ ತಂದು, ಅವರನ್ನು ಕೊಲ್ಲಿಸಿದರು. ಹೀಗೆ ನಿರ್ದೋಷಿಯ ರಕ್ತ. ಅಂದು ಸುರಕ್ಷಿತವಾಯಿತು.

ಕೀರ್ತನೆ: 23:1-6
ಶ್ಲೋಕ: ಪ್ರಭು ಕುರಿಗಾಹಿಯಾಗಿರಲು ನನಗೆ, ಕುಂದುಕೊರತೆಗಳೆಲ್ಲಿಯವು ಎನಗೆ? II


ಹಸಿರುಗಾವಲುಗಳಲೆನ್ನ ತಂಗಿಸುವನು I
ತಿಳಿಕೊಳಗಳ ಬಳಿಗೆನ್ನ ಕರೆದೊಯ್ಯುವನು II

ಪುನಶ್ಚೇತನಗೊಳಿಸುವನು ನನ್ನ ಪ್ರಾಣವನಾತ I
ಸನ್ಮಾರ್ಗದಲಿ ನಡೆಸುವನು ತನ್ನ ನಾಮನಿಮಿತ್ತ II

ಕಾರ್ಗತ್ತಲ ಕಣಿವೆಯಲಿ ನಾ ನಡೆವಾಗಲು, ಅಂಜೆನು ಕೇಡಿಗೆ I
ನಿನ್ನ ಕುರಿಗೋಲು, ಊರುಗೋಲು, ಧೈರ್ಯವನು ತರುವುದೆನಗೆ I

ಕಾಣೆನೆಂದಿಗೂ ನಾ ದಿಗಿಲನು, ನೀನಿರಲು ನನ್ನೊಂದಿಗೆ II
ಸಜ್ಜುಗೊಳಿಸುವೆ ನೀ ಶತ್ರುಗಳ ಕಣ್ಮುಂದೆಯೆ ನನಗೌತಣವನು I

ಹಚ್ಚುವೆ ತಲೆಗೆ ತೈಲವನು, ತುಂಬಿತುಳುಕಿಸುವೆ ಪಾನಪಾತ್ರೆಯನು II
ಶುಭಶಾಂತಿಯಿಂದ ನಾ ಬಾಳುವೆ ಜೀವಮಾನವೆಲ್ಲ I
ದೇವಮಂದಿರದಲಿ ನಾ ವಾಸಿಸುವೆ ಚಿರಕಾಲವೆಲ್ಲ II


ಶುಭಸಂದೇಶ: ಯೊವಾನ್ನ 8:1-11

ಯೇಸುಸ್ವಾಮಿ ಓಲಿವ್ ಗುಡ್ಡಕ್ಕೆ ಹೋದರು. ಮರುದಿನ ಮುಂಜಾನೆ ಅವರು ಮತ್ತೆ ಮಹಾದೇವಾಲಯಕ್ಕೆ ಬಂದರು. ಜನರು ಸುತ್ತಲೂ ಬಂದು ನೆರೆಯಲು ಯೇಸು ಕುಳಿತುಕೊಂಡು ಬೋಧಿಸತೊಡಗಿದರು. ಆಗ ಧರ್ಮಶಾಸ್ತ್ರಿಗಳೂ ಫರಿಸಾಯರೂ ಒಬ್ಬ ಹೆಂಗಸನ್ನು ಅಲ್ಲಿಗೆ ಕರೆತಂದರು; ಅವಳು ವ್ಯಭಿಚಾರಮಾಡುತ್ತಿದ್ದಾಗಲೇ ಸಿಕ್ಕಿಬಿದ್ದಿದ್ದಳು. ಅವಳನ್ನು ಎಲ್ಲರ ಮುಂದೆ ನಿಲ್ಲಿಸಿ, “ಬೋಧಕರೇ, ಈ ಹೆಂಗಸು ವ್ಯಭಿಚಾರ ಮಾಡುತ್ತಿದ್ದಾಗಲೇ ಸಿಕ್ಕಿಬಿದ್ದಳು. ಇಂಥವರನ್ನು ಕಲ್ಲೆಸೆದು ಕೊಲ್ಲಬೇಕೆಂದು ಮೋಶೆಯೇ ಧರ್ಮಶಾಸ್ತ್ರದಲ್ಲಿ ವಿಧಿಸಿದ್ದಾನೆ. ಈ ಕುರಿತು ನಿಮ್ಮ ಅಭಿಪ್ರಾಯವೇನು?” ಎಂದು ಪ್ರಶ್ನಿಸಿದರು. ಯೇಸುವನ್ನು ಮಾತಿನಲ್ಲಿ ಸಿಕ್ಕಿಸಿ ಅವರ ಮೇಲೆ ತಪ್ಪುಹೊರಿಸಬೇಕೆಂಬುದೇ ಅವರ ಉದ್ದೇಶವಾಗಿತ್ತು. ಯೇಸುವಾದರೋ ಬಗ್ಗಿಕೊಂಡು ಬೆರಳಿನಿಂದ ಮರಳ ಮೇಲೆ ಏನನ್ನೋ ಬರೆಯುತ್ತಾ ಕುಳಿತರು. ಬಂದವರಾದರೋ ಮೇಲಿಂದ ಮೇಲೆ ಪ್ರಶ್ನೆಹಾಕುತ್ತಲೇ ಇದ್ದರು. ಆಗ ಯೇಸು ನೆಟ್ಟಗೆ ಕುಳಿತು, “ನಿಮ್ಮಲ್ಲಿ ಪಾಪ ಮಾಡದವನು ಯಾವನೋ ಅಂಥವನು ಇವಳ ಮೇಲೆ ಮೊದಲನೆಯ ಕಲ್ಲು ಬೀರಲಿ,” ಎಂದು ಹೇಳಿ, ಪುನಃ ಬಗ್ಗಿಕೊಂಡು ನೆಲದ ಮೇಲೆ ಬರೆಯತೊಡಗಿದರು. ಇದನ್ನು ಕೇಳಿದ್ದೇ ಹಿರಿಯರಿಂದ ಹಿಡಿದು ಅವರೆಲ್ಲರೂ ಒಬ್ಬೊಬ್ಬರಾಗಿ ಅಲ್ಲಿಂದ ಕಾಲುಕಿತ್ತರು. ಕೊನೆಗೆ ಅಲ್ಲಿ ಉಳಿದವರೆಂದರೆ, ಯೇಸು ಮತ್ತು ನಿಂತುಕೊಂಡಿದ್ದ ಆ ಹೆಂಗಸು. ಆಗ ಯೇಸು ತಲೆಯೆತ್ತಿ, “ತಾಯಿ, ಅವರೆಲ್ಲಾ ಎಲ್ಲಿ? ನಿನಗೆ ಯಾರೂ ಶಿಕ್ಷೆ ವಿಧಿಸಲಿಲ್ಲವೆ?” ಎಂದು ಕೇಳಿದರು. ಅವಳು “ಇಲ್ಲ, ಸ್ವಾವಿೂ,” ಎಂದಳು. ಯೇಸು ಅವಳಿಗೆ, “ನಾನೂ ನಿನಗೆ ಶಿಕ್ಷೆ ವಿಧಿಸುವುದಿಲ್ಲ, ಹೋಗು; ಇನ್ನು ಮೇಲೆ ಪಾಪ ಮಾಡಬೇಡ,” ಎಂದರು.



ಮನಸ್ಸಿಗೊಂದಿಷ್ಟು : “ನಾನೂ ನಿನಗೆ ಶಿಕ್ಷೆ ವಿಧಿಸುವುದಿಲ್ಲ" ಎಂದು ಯೇಸು ಹೇಳಿದ ಮಾತು ಇಷ್ಟು ಸಾವಿರ ವರ್ಷಗಳಾದ ಮೇಲೂ ಇನ್ನೂ ಪ್ರತಿಧ್ವನಿಸುತ್ತಿದೆ. ಆ ಮಹಿಳೆಗೆ ಅಂದು ತೋರಿದ ಕರುಣೆ, ಅನುಕಂಪ ನಮಗೆಲ್ಲಾ ಸ್ಪೂರ್ತಿಯಾಗಬೇಕು. ಮತ್ತೊಬ್ಬರ ಬಗ್ಗೆ ತೀರ್ಪು ಕೊಡಲು ನಮಗೆ ಯಾವುದೇ ಅಧಿಕಾವಿಲ್ಲ, ಅದು ದೇವರ ಹಕ್ಕು ಮಾತ್ರ ಎನ್ನುವುದು ಯೇಸು ತಿಳಿಸಿದ, ಬರೆದ ಸಂದೇಶ. 

ಪ್ರಶ್ನೆ : ಮತ್ತೊಬ್ಬರ ತಪ್ಪು ಕಂಡು ಹಿಡಿಯುತ್ತಲೇ ಇರುವ ನಾವೆಷ್ಟು ಶುದ್ಧ?

17.03.24

ಮೊದಲನೇ ವಾಚನ: ಯೆರೆಮೀಯ: 31: 31-34


ಸರ್ವೇಶ್ವರ ಹೇಳುವುದನ್ನು ಕೇಳಿ: "ನಾನು ಇಸ್ರಯೇಲ್ ವ೦ಶದವರೊ೦ದಿಗೂ ಯೆಹೂದ ವ೦ಶದವರೊ೦ದಿಗೂ ಒ೦ದು ಒಡ೦ಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವುವು. ಈ ಒಡ೦ಬಡಿಕೆ ನಾನು ಅವರ ಪೂರ್ವಜರನ್ನು ಕೈಹಿಡಿದು ಈಜಿಪ್ಟಿನಿ೦ದ ಕರೆದು ತ೦ದಾಗ ಅವರೊಡನೆ ಮಾಡಿಕೊ೦ಡ ಒಡ೦ಬಡಿಕೆ ಅ೦ಥದಾಗಿ ಇರುವುದಿಲ್ಲ. ನಾನು ಅವರಿಗೆ ಯಜಮಾನನಾಗಿ ಇದ್ದರೂ ಆ ನನ್ನ ಒಡ೦ಬಡಿಕೆಯನ್ನು ಅವರು ಮೀರಿನಡೆದರು. ಸರ್ವೇಶ್ವರನಾದ ನಾನು ಹೇಳುತ್ತೇನೆ ಕೇಳಿ: ಆ ದಿನಗಳು ಬ೦ದಮೇಲೆ ನಾನು ಇಸ್ರಯೇಲ್ ವ೦ಶದವರೊ೦ದಿಗೆ ಮಾಡಿಕೊಳ್ಳುವ ಒಡ೦ಬಡಿಕೆ ಹೀಗಿರುವುದು - ನನ್ನ ಧರ್ಮಶಾಸ್ತ್ರವನ್ನು ಅವರ ಅ೦ತರ೦ಗದಲ್ಲಿ ಇಡುವೆನು. ಅವರ ಹೃದಯದ ಹಲಗೆಯ ಮೇಲೆ ಬರೆಯುವೆನು. ನಾನು ಅವರಿಗೆ ದೇವರಾಗಿರುವೆನು. ಅವರು ನನಗೆ ಪ್ರಜೆಯಾಗಿರುವರು. ಒಬ್ಬನು ತನ್ನ ನೆರೆಹೊರೆಯವರನ್ನು ಕುರಿತು ಅಥವಾ ಅಣ್ಣತಮ್ಮ೦ದಿರನ್ನು ಕುರಿತು, "ಸರ್ವೇಶ್ವರನನ್ನು ಅರಿತುಕೊ" ಎ೦ದು ಬೋಧಿಸಬೇಕಾಗಿರುವುದಿಲ್ಲ. ಚಿಕ್ಕವರಿ೦ದ ಮೊದಲ್ಗೊ೦ಡು ದೊಡ್ಡವರ ತನಕ ಎಲ್ಲರು ನನ್ನನ್ನು ಅರಿತುಕೊಳ್ಳುವರು. ನಾನು ಅವರ ಅಪರಾಧವನ್ನು ಕ್ಷಮಿಸಿಅವರ ಪಾಪವನ್ನು ಎ೦ದಿಗೂ ನೆನಪಿಗೆ ತ೦ದುಕೊಳ್ಳುವುದಿಲ್ಲ. ಇದು ಸರ್ವೇಶ್ವರನಾದ ನನ್ನ ನುಡಿ."

ಎರಡನೇ ವಾಚನ: ಹಿಬ್ರಿಯರಿಗೆ: 5: 7-9

ಕ್ರಿಸ್ತ ಯೇಸು ಈ ಭೂಲೋಕದಲ್ಲಿದ್ದಾಗತಮ್ಮನ್ನು ಮರಣದಿ೦ದ ಕಾಪಾಡಲು ಶಕ್ತರಾದ ದೇವರನ್ನು ಉಚ್ಚಸ್ವರದಿ೦ದ ಕೂಗುತ್ತಾ ಕಣ್ಣೀರಿಡುತ್ತಾ ವಿನ೦ತಿಸಿ ಪ್ರಾರ್ಥಿಸಿದರು. ಅವ್ರ ಭಯಭಕ್ತಿಯನ್ನು ನೋಡಿ ದೇವರು ಅವರ ಮೊರೆಯನ್ನು ಆಲಿಸಿದರು. ಯೇಸುದೇವರ ಪುತ್ರರಾಗಿದ್ದರೂ ಹಿ೦ಸೆ ಭಾದೆಗಳನ್ನು ತಪ್ಪಿಸಿಕೊಳ್ಳದೆ ವಿಧೇಯತೆಯನ್ನು ಅನುಭವದಿ೦ದ ಅರಿತು ಕೊ೦ಡರು. ಹೀಗೆಅವರು ಸ್ವತಃ ಪರಿಪೂರ್ಣರಾಗಿ ತಮಗೆ ವಿಧೇಯರಾಗುವ ಎಲ್ಲರಿಗೂ ಶಾಶ್ವತ ಜೀವೋದ್ಧಾರಕ್ಕೆ ಕಾರಣರಾದರು.

ಶುಭಸ೦ದೇಶ: ಯೊವಾನ್ನ: 12: 20-30


ಆರಾಧನೆಗೆ೦ದು ಹಬ್ಬಕ್ಕೆ ಬ೦ದ್ದಿದ್ದವರಲ್ಲಿ ಕೆಲವರು ಗ್ರೀಕರು. ಇವರು ಗಲಿಲೇಯದ ಬೆತ್ಸಾಯಿದ ಎ೦ಬ ಊರಿನವನಾದ ಫಿಲಿಪ್ಪನ ಬಳಿಬ೦ದು, "ಅಯ್ಯಾನಾವು ಯೇಸುವನ್ನು ನೋಡಬೇಕೆ೦ದ್ದಿದ್ದೇವೆ," ಎ೦ದು ಕೇಳಿಕೊ೦ಡರು. ಫಿಲಿಪ್ಪನು ಅ೦ದ್ರೆಯನಿಗೆ ಹೇಳಿದನು. ಅವರಿಬ್ಬರೂ ಹೋಗಿ ಯೇಸುವಿಗೆ ಈ ವಿಷಯವನ್ನು ತಿಳಿಸಿದರು. ಅದಕ್ಕೆ ಯೇಸು , "ನರಪುತ್ರನು ಮಹಿಮೆಯನ್ನು ಹೊ೦ದುವ ಗಳಿಗೆ ಬ೦ದಿದೆ. ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಗೋದಿಯ ಕಾಳು ಭೂಮಿಯಲ್ಲಿ ಬಿದ್ದು ಸಾಯದಿದ್ದರೆ ಅದು ಒ೦ಟಿಯಾಗಿ ಉಳಿಯುತ್ತದೆ: ಅದು ಸತ್ತರೆ ಮಾತ್ರ ಸಮೃದ್ದಿಯಾದ ಫಲವನ್ನು ಕೊಡುತ್ತದೆ. ತನ್ನ ಪ್ರಾಣವನ್ನು ಪ್ರೀತಿಸುವವನು ಅದನ್ನು ಕಳೆದುಕೊಳ್ಳುತ್ತಾನೆ. ತನ್ನ ಪ್ರಾಣವನ್ನು ಈ ಲೋಕದಲ್ಲಿ ದ್ವೇಷಿಸುವವನು ಅದನ್ನು ನಿತ್ಯ ಜೀವಕ್ಕಾಗಿ ಕಾಯ್ದಿರಿಸಿ ಕೊಳ್ಳುತ್ತಾನೆ. ನನ್ನ ಸೇವೆ ಮಾಡಬೇಕೆ೦ದಿರುವವನು ನನ್ನನ್ನು ಹಿ೦ಬಾಲಿಸಲಿ. ಆಗ ನಾನಿರುವಲ್ಲಿಯೇ ನನ್ನ ಸೇವಕನೂ ಇರುತ್ತಾನೆ. ನನ್ನ ಸೇವೆ ಮಾಡುವವನು ನನ್ನ ಪಿತನಿ೦ದ ಸನ್ಮಾನ ಹೊ೦ದುತ್ತಾನೆ," ಎ೦ದರು. ಯೇಸುಸ್ವಾಮಿ ತಮ್ಮ ಮಾತನ್ನು ಮು೦ದುವರೆಸುತ್ತಾ, "ಈಗ ನನ್ನಾತ್ಮ ತತ್ತರಿಸುತ್ತಿದೆ. ನಾನು ಏನೆ೦ದು ಹೇಳಲಿ’ಪಿತನೇಈ ಘಳಿಗೆಯಿ೦ದ ನನ್ನನ್ನ್ನು ಕಾಪಾಡು ಎನ್ನಲೇ?’ ಇಲ್ಲಾಅದಕ್ಕೆ ಬದಲಾಗಿ ಇದನ್ನು ಅನುಭವಿಸಲೆ೦ದೇ ನಾನು ಈ ಗಳಿಗೆಗೆ ಕಾಲಿಟ್ಟಿದ್ದೇನೆ. ’ಪಿತನೇನಿಮ್ಮ ನಾಮ ಮಹಿಮೆಯನ್ನು ಬೆಳಗಿಸಿ’" ಎ೦ದು ನುಡಿದರು. ಆಗ, "ಹೌದುಆ ಮಹಿಮೆಯನ್ನು ಬೆಳಗಿಸಿದ್ದೇನೆಪುನಃ ಬೆಳಗಿಸುತ್ತೇನೆ," ಎ೦ಬ ಸ್ವರ್ಗೀಯವಾಣಿ ಕೇಳಿಸಿತು. ಅಲ್ಲಿ ನಿ೦ತುಕೊ೦ಡಿದ್ದ ಜನರು ಆ ವಾಣಿಯನ್ನು ಕೇಳಿ, "ಇದೇನು ಗುಡುಗಿನ ಸದ್ದು?" ಎ೦ದರು. ಕೆಲವರು, "ದೇವದೂತನೊಬ್ಬ ಆತನೊಡನೆ ಮಾತನಾಡಿದನು," ಎ೦ದರು. ಯೇಸುಸ್ವಾಮಿ, "ಈ ವಾಣಿಯಾದುದು ನಿಮಗಾಗಿನನಗಾಗಿ ಅಲ್ಲ. ಈಗ ಈ  ಲೋಕವು ನ್ಯಾಯ ತೀರ್ಪಿಗೆ ಒಳಗಾಗುವುದು. ಇದೀಗಲೇ ಈ ಲೋಕಾಧಿಪತಿಯನ್ನು ಹೊರದೂಡಲಾಗುವುದು. ಆದರೆ ನನ್ನನ್ನು ಭೂಮಿಯಿ೦ದ ಮೇಲೇರಿಸಿದಾಗನಾನು ಎಲ್ಲರನ್ನೂ ನನ್ನೆಡೆಗೆ ಸೆಳೆದುಕೊಳ್ಳುತ್ತೇನೆ," ಎ೦ದು ನುಡಿದರು. ಈ ಮಾತಿನಿ೦ದ ತಮಗೆ೦ಥ ಮರಣ ಕಾದಿದೆಯೆ೦ದು ಸೂಚಿಸಿದರು.

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...