ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

22.12.23

ಮೊದಲನೆಯ ವಾಚನ: 1 ಸಮುವೇಲ 1:24-28

ಹನ್ನಳು ಮಗುವನ್ನು ಶಿಲೋವಿನಲ್ಲಿದ್ದ ಸರ್ವೇಶ್ವರನ ಮಂದಿರಕ್ಕೆ ತಂದಳು. ಅವನು ಇನ್ನೂ ಚಿಕ್ಕವನು ಆಗಿದ್ದನು. ಜೊತೆಗೆ ಅವರು ಮೂರು ವರ್ಷದ ಹೋರಿಯೊಂದನ್ನು, ಹತ್ತು ಕಿಲೋಗ್ರಾಂ ಹಿಟ್ಟನ್ನು ಹಾಗು ಒಂದು ತಿತ್ತಿ ದ್ರಾಕ್ಷಾರಸವನ್ನೂ ತಂದಿದ್ದರು. ಆ ಹೋರಿಯನ್ನು ಬಲಿದಾನ ಮಾಡಿದ ಮೇಲೆ ಮಗುವನ್ನು ಏಲಿಯ ಬಳಿಗೆ ತರಲಾಯಿತು. ಹನ್ನಳು ಏಲಿಗೆ, "ಸ್ವಾಮಿ, ನಿಮ್ಮ ಜೀವದಾಣೆ, ಹಿಂದೊಮ್ಮೆ ಸರ್ವೇಶ್ವರನ ಸನ್ನಿಧಿಯಲ್ಲಿ ಪ್ರಾರ್ಥನೆಮಾಡುತ್ತಾ ಇಲ್ಲಿ ನಿಮ್ಮ ಹತ್ತಿರ ನಿಂತಿದ್ದ ಮಹಿಳೆ ನಾನೇ. ಸರ್ವೇಶ್ವರ ನನ್ನ ಪ್ರಾರ್ಥನೆಯ ಫಲವಾಗಿ ಅನುಗ್ರಹಿಸಿದ ಮಗನು ಇವನೇ. ಇವನನ್ನು ಸರ್ವೇಶ್ವರನಿಗೆ ಸಮರ್ಪಿಸಿಬಿಟ್ಟಿದ್ದೇನೆ. ಬದುಕಿರುವ ತನಕ ಇವನು ಅವರಿಗೆ ಪ್ರತಿಷ್ಠಿತನು, " ಎಂದು ಹೇಳಿದಳು. ಬಳಿಕ ಅವರು ಸರ್ವೇಶ್ವರಸ್ವಾಮಿಯನ್ನು ಆರಾಧಿಸಿದರು.

ಕೀರ್ತನೆ: 1 ಸಮುವೇಲ 2:1,4-6,6-7,8.V.1
ಶ್ಲೋಕ: ಆನಂದಿಸುತ್ತಿದೆ ನನ್ನ ಮನ ಸರ್ವೇಶ್ವರನಲಿ |

ಆನಂದಿಸುತ್ತಿದೆ ನನ್ನ ಮನ ಸರ್ವೇಶ್ವರನಲಿ|
ಉನ್ನತೋನ್ನತವಾಗಿದೆ ನನ್ನ ಶಕ್ತಿ ಆ ದೇವನಲಿ||
ನನಗಿದೆ ಶತ್ರುಗಳನ್ನು ಧಿಕ್ಕರಿಸುವ ಶಕ್ತಿ|
ನನಗಿತ್ತಿರುವನಾ ಸಂತಸದಾಯಕ ಮುಕ್ತಿ.||

ಮುರಿದು ಬಿದ್ದಿವೆ ಶೂರರ ಬಿಲ್ಲುಬಾಣಗಳು|
ದುರ್ಬಲರಾದರೋ ಶೌರ್ಯದ ನಡುಕಟ್ಟಿ ನಿಂತಿಹರು||
ಉಂಡು ಸುಖದಿಂದಿರುವವರು ಹಸಿವುಗೊಂಡವರು|
ಹೊಟ್ಟೆಗಾಗಿ ಕೂಲಿ ಮಾಡುತ್ತಿಹರು, ತೃಪ್ತರಿದ್ದವರು||
ಬಂಜೆ ಹೆರುವಳು ಆರೇಳು ಮಕ್ಕಳನು|
ಒಬ್ಬಂಟಿಗಳಾಗಿರುವಳು ಮಕ್ಕಳಿವೆ ಎಂದವಳು||

ಜೀವಕೊಡುವವನು, ತೆಗೆದುಕೊಳ್ಳುವವನು ಆ ಸರ್ವೇಶ್ವರನೇ|
ಪಾತಾಳಕ್ಕಿಳಿಸುವವನು, ಮೇಲಕ್ಕೆಳೆದುಕೊಳ್ಳುವವನು ಆತನೇ||
ಬಡತನ ಸಿರಿತನ ಕೊಡುವವನು ಆ ಸರ್ವೇಶ್ವರನೇ|
ತಗ್ಗಿಸುವವನು ಹೆಚ್ಚಿಸುವವನು ಆತನೇ ||

ಎತ್ತುವನಾತ ದೀನರನು ಧೂಳಿನಿಂದ ದರಿದ್ರರನು ತಿಪ್ಪೆಯಿಂದ|
ಕುಳ್ಳರಿಸುವನವರನು ಅಧಿಪತಿಗಳ ಸಮೇತ||
ಅನುಗ್ರಹಿಸುವನು ಹಕ್ಕಾಗಿ ಆ ಮಹಿಮಾಸನ|
ಕಾರಣ, ಭೂಮಿಯ ಆಧಾರಸ್ಥಂಭಗಳು ಸರ್ವೇಶ್ವರನವೇ|
ಭೂಮಂಡಲವನು ಅವುಗಳ ಮೇಲೆ ಸ್ಥಾಪಿಸಿದವನು ಆತನೇ||

ಅಲ್ಲೆಲೂಯ, ಅಲ್ಲೆಲೂಯ!

ಓ ಜನಾಂಗಗಳ ಅರಸರೇ, ಮತ್ತು ಧರ್ಮಸಭೆಯ ಮೂಲೆಗಲ್ಲೇ | ಬನ್ನಿ, ಮಣ್ಣಿನಿಂದ ನೀವು ಉಂಟುಮಾಡಿದ ಮನುಷ್ಯನನ್ನು ರಕ್ಷಿಸಲು ಬನ್ನಿ ||

ಶುಭಸಂದೇಶ: ಲೂಕ 1:46-56

ಮರಿಯಳು ಹೀಗೆಂದು ಹೊಗಳಿದಳು: "ಎನ್ನ ಮನ ಮಾಡುತ್ತಿದೆ ಸರ್ವೇಶ್ವರನ ಸ್ತುತಿ, ಉಲ್ಲಾಸಿಸುತ್ತಿದೆ ಮುಕ್ತಿದಾತ ದೇವನಲಿ; ತನ್ನ ದಾಸಿಯ ದೀನತೆಯನು ನೆನಪಿಗೆ ತಂದುಕೊಂಡನಾತ. ಧನ್ಯರೆಂದು ಹೊಗಳುವರೆನ್ನನು ಇಂದಿನಿಂದ ಸರ್ವ ಜನಾಂಗ, ಏಕೆನೆ ಮಾಡಿಹನೆನಗೆ ಸರ್ವಶಕ್ತನು ಮಹತ್ಕಾರ್ಯ, ನಿಜಕ್ಕೂ ಆತನ ನಾಮಧೇಯ ಪರಮ ಪೂಜ್ಞ. ಆತನಲ್ಲಿ ಭಯಭಕ್ತಿಯುಳ್ಳವರಿಗಾತನ ಪ್ರೀತಿ ತಲೆತಲಾಂತರದವರೆಗೆ, ಗರ್ವ ಹೃದಯಿಗಳನಾತ ಚದರಿಸಿರುವನು, ಪ್ರದರ್ಶಿಸಿರುವನು ತನ್ನ ಬಾಹುಬಲವನು, ಇಳಿಸಿಹನು ಗದ್ದುಗೆಯಿಂದ ಘನಾಧಿಪತಿಗಳನು, ಏರಿಸಿರುವನು ಉನ್ನತಿಗೆ ದೀನದಲಿತರನು. ತೃಪ್ತಿಪಡಿಸಿರುವನಾತ ಹಸಿದವರನು ಮೃಷ್ಟಾನ್ನದಿ, ಹೊರದೂಡಿರುವನು ಸಿರಿವಂತರನು ಬರಿಗೈಯಲಿ, ನೆರವಾದನು ತನ್ನ ದಾಸ ಇಸ್ರಯೇಲನಿಗೆ, ಪೂರ್ವಜರಿಗಿತ್ತ ವಾಗ್ಧಾನದ ಮೇರೆಗೆ ಮರೆಯಲಿಲ್ಲ ಆತ ಕರುಣೆತೋರಲು ಅಬ್ರಹಾಮನಿಗೆ ಅವನ ಸಂತತಿಗೆ, ಯುಗಯುಗಾಂತರದವರೆಗೆ. ಮರಿಯಳು ಸುಮಾರು ಮೂರು ತಿಂಗಳು ಎಲಿಜಬೇತಳೊಡನೆ ತಂಗಿದ್ದು ತನ್ನ ಮನೆಗೆ ಹಿಂದಿರುಗಿದಳು.

21.12.23

ಮೊದಲನೆಯ ವಾಚನ: ಯೆಶಾಯ 7:10-14

ಪುನಃ ಸರ್ವೇಶ್ವರಸ್ವಾಮಿ ಆಹಾಜನಿಗೆ ಹೇಳಿದ್ದೇನೆಂದರೆ: "ನಿನ್ನ ದೇವರಾದ ಸರ್ವೇಶ್ವರನಿಂದ ಒಂದು ಗುರುತನ್ನು ಕೇಳಿಕೊ. ಅದು ಪಾತಾಳದಷ್ಟು ಆಳದಲ್ಲೇ ಇರಲಿ, ಆಕಾಶದಷ್ಟು ಎತ್ತರದಲ್ಲೇ ಇರಲಿ, ಕೇಳು. ಎಂದರು. ಅದಕ್ಕೆ ಆಹಾಜನು "ಇಲ್ಲ, ನಾನು ಗುರುತನ್ನು ಕೇಳುವುದಿಲ್ಲ, ಸರ್ವೇಶ್ವರನನ್ನು ಪರೀಕ್ಷಿಸುವುದಿಲ್ಲ " ಎಂದನು. ಆಗ ಯೆಶಾಯನು : "ದಾವೀದ ವಂಶಜರೇ, ಕೇಳಿರಿ, ಮಾನವರನ್ನು ಕೆಣಕಿದ್ದು ಸಾಲದೆಂದು ದೇವರನ್ನೇ ಕೆಣಕುತ್ತಿರುವಿರಾ? ಆಗಲಿ, ಸರ್ವೇಶ್ವರ ನಿಮಗೊಂದು ಗುರುತನ್ನು ಕೊಡುವರು. ಇಗೋ, ಕನ್ಯೆಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು. ಇಮ್ಮಾನುವೇಲ್ ಎಂದು ಆತನಿಗೆ ಹೆಸರಿಡುವಳು."

ಕೀರ್ತನೆ 24:1-2,3-4,5-6.V.8
ಶ್ಲೋಕ: ಆಗಮಿಸುತಿಹನಿದೋ ಮಹಿಮಾವಂತ ರಾಜಾಧಿರಾಜನು| ಇವನೇ ಪ್ರಭು, ಯುದ್ಧವೀರನು, ಶಕ್ತಿಸಮರ್ಥನು ||

ಪೊಡವಿಯೂ ಅದರಲ್ಲಿರುವುದಲ್ಲವೂ ಪ್ರಭುವಿನದೇ|
ಜಗವೂ ಅದರ ಜೀವಜಂತುಗಳೆಲ್ಲವೂ ಆತನದೇ||
ಕಡಲನು ತಳಪಾಯವನಾಗಿಸಿದವನು ಆತನೇ|
ಜಲರಾಶಿನಡುವೆ ಅದನು ಸ್ಥಿರಗೊಳಿಸಿದವನಾತನೇ||

ಪ್ರಭುವಿನ ಶಿಖರವನು ಏರಬಲ್ಲವನಾರು|
ಆ ನಿವಾಸದಲಿ ನಿಲ್ಲಲು ಯೋಗ್ಯನಾರು?||
ಅಂಥವನಿರಬೇಕು ಶುದ್ಧಹಸ್ತನು, ಸುಮನಸ್ಕನು|
ಅನಾಚಾರಕೆ ಅಪ್ರಾಮಾಣಿಕತೆಗೆ ಒಲಿಯನವನು||

ಲಭಿಸುವುದಾತನಿಗೆ ಶುಭ ಪ್ರಭುವಿನಿಂದ|
ನೀತಿಯು ಸತ್ಪಲ ರಕ್ಷಕ ದೇವನಿಂದ||
ಇಂಥವರೇ ದೇವರ ದರ್ಶನಾಭ್ಯರ್ಥಿಗಳು|
ಇಂಥವರೇ ಯಕೋಬ ದೇವನ ಭಕ್ತಾದಿಗಳು||

ಘೋಷಣೆ
ಅಲ್ಲೆಲೂಯ, ಅಲ್ಲೆಲೂಯ!

ಮೋಕ್ಷರಾಜ್ಯದ ಬಾಗಿಲನ್ನು ತೆರೆಯುವ ಓ ದಾವೀದನ ಬೀಗದ ಕೈಗಳೇ | ಕಾರ್ಗತ್ತಲೆಯ ಸೆರೆಮನೆಯಲ್ಲಿ ಬಂಧಿತರಾದವರನ್ನು ಬಿಡುಗಡೆ ಮಾಡಲು ಬನ್ನಿ ||

ಶುಭಸಂದೇಶ: ಲೂಕ 1:26-38

ಎಲಿಜಬೇತಳು ಗರ್ಭಿಣಿಯಾದ ಆರನೇ ತಿಂಗಳಲ್ಲಿ, ದೇವರು ಗಬ್ರಿಯೇಲ್ ದೂತನನ್ನು ಗಲಿಲೇಯ ಪ್ರಾಂತ್ಯದ ನಜರೇತೆಂಬ ಊರಿನಲ್ಲಿದ್ದ ಒಬ್ಬ ಕನ್ನಿಕೆಯಲ್ಲಿಗೆ ಕಳುಹಿಸಿದರು. ಆಕೆಗೆ ದಾವೀದರಸನ ವಂಶಜನಾದ ಜೋಸೆಫನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆಕೆಯ ಹೆಸರು ಮರಿಯ. ದೇವದೂತನು ಆಕೆಯ ಬಳಿಗೆ ಬಂದು, "ಧೈವಾನುಗ್ರಹಭರಿತಳೇ, ನಿನಗೆ ಶುಭವಾಗಲಿ; ಸರ್ವೇಶ್ವರ ನಿನ್ನೊಡನೆ ಇದ್ದಾರೆ! " ಎಂದನು. ಇದನ್ನು ಕೇಳಿದ ಮರಿಯಳು ತಬ್ಬಿಬ್ಬಾದಳು. 'ಇದೆಂಥ ಶುಭಾಶಯ' ಎಂದು ಅವಳು ಯೋಚಿಸತೊಡಗಿದಳು. ದೂತನು ಆಕೆಗೆ, "ಮರಿಯಾ, ನೀನು ಅಂಜಬೇಕಾಗಿಲ್ಲ ; ದೇವರ ಅನುಗ್ರಹ ನಿನಗೆ ಲಭಿಸಿದೆ ; ಇಗೋ, ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೇರುವೆ. ಆತನಿಗೆ 'ಯೇಸು' ಎಂಬ ಹೆಸರಿಡಬೇಕು; ಆತನು ಮಹಾಪುರುಷನಾಗುವನು; ಪರಾತ್ಪರ ದೇವರ ಪುತ್ರ ಎನಿಸಿಕೊಳ್ಳುವನು. ಪಿತಾಮಹ ದಾವೀದರಸನ ಸಿಂಹಾಸನವನ್ನು ಸರ್ವೇಶ್ವರನಾದ ದೇವರು ಆತನಿಗೆ ಕೊಡುವರು. ಯಕೋಬನ ವಂಶವನ್ನು ಆತನು ಚಿರಕಾಲ ಆಳುವನು; ಆತನ ರಾಜ್ಯಭಾರಕ್ಕೆ ಅಂತ್ಯವೇ ಇರದು, " ಎಂದನು. ಅದಕ್ಕೆ ಮರಿಯಳು, "ಇದು ಆಗುವುದಾದರೂ ಹೇಗೆ? ನನಗೆ ಯಾವ ಪುರುಷನ ಸಂಸರ್ಗವೂ ಇಲ್ಲವಲ್ಲಾ? " ಎಂದು ವಿಚಾರಿಸಿದಳು. ದೂತನು ಪ್ರತ್ಯುತ್ತರವಾಗಿ, "ಪವಿತ್ರಾತ್ಮ ನಿನ್ನ ಮೇಲೆ ಬರುವರು; ಪರಾತ್ಪರ ದೇವರ ಶಕ್ತಿ ನಿನ್ನನ್ನು ಆವರಿಸುವುದು; ಈ ಕಾರಣದಿಂದ, ನಿನ್ನಲ್ಲಿ ಹುಟ್ಟುವ ಆ ಪವಿತ್ರ ಶಿಶು 'ದೇವರ ಪುತ್ರ' ಎನಿಸಿಕೊಳ್ಳುವನು. ನಿನ್ನ ಸಂಬಂಧಿಕಳಾದ ಎಲಿಜಬೇತಳ ವಿಷಯವನ್ನು ಕೇಳು; ಆಕೆಗೆ ತನ್ನ ಮುಪ್ಪಿನಲ್ಲೂ ಒಬ್ಬ ಮಗನನ್ನು ಹೆರಲಿದ್ದಾಳೆ; ಬಂಜೆ ಎನಿಸಿಕೊಂಡಿದ್ದ ಆಕೆ ಈಗ ಆರು ತಿಂಗಳ ಗರ್ಭಿಣಿ. ದೇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ, " ಎಂದನು. ಆಗ ಮರಿಯಳು "ಇಗೋ ನಾನು ದೇವರ ದಾಸಿ, ನೀವು ಹೇಳಿದಂತೆ ನನಗಾಗಲಿ, " ಎಂದಳು. ದೇವದೂತನು ಆಕೆಯನ್ನು ಬೀಳ್ಕೊಟ್ಟು ಅದೃಶ್ಯನಾದನು.

20.12.23

 ಮೊದಲನೇ ವಾಚನ: ಯೆಶಾಯ 7:10-14 

ಪುನಃ ಸರ್ವೇಶ್ವರಸ್ವಾಮಿ ಅಹಾಜನಿಗೆ ಹೇಳಿದ್ದೇನೆಂದರೆ: "ನಿನ್ನ ದೇವರಾದ ಸರ್ವೇಶ್ವರನಿಂದ ಒಂದು ಗುರುತನ್ನು ಕೇಳಿಕೊ, ಅದು ಪಾತಾಳದಷ್ಟು ಆಳದಲ್ಲೇಇರಲಿ, ಆಕಾಶದಷ್ಟು ಎತ್ತರದಲ್ಲೇ ಇರಲಿ, ಕೇಳು" ಎಂದರು. ಅದಕ್ಕೆ ಅಹಾಜನು "ಇಲ್ಲ, ನಾನು ಗುರುತನ್ನು ಕೇಳುವುದಿಲ್ಲ. ಸರ್ವೇಶ್ವರನನ್ನು ಪರೀಕ್ಷಿಸುವುದಿಲ್ಲ" ಎಂದನು. ಆಗ ಯೆಶಾಯನು: "ದಾವೀದ ವಂಶಜರೇ, ಕೇಳಿರಿ, ಮಾನವರನ್ನು ಕೆಣಕಿದ್ದು ಸಾಲದೆಂದು ದೇವರನ್ನೇ ಕೆಣಕುತ್ತಿರುವಿರಾ? ಆಗಲಿ, ಸರ್ವೇಶರ ನಿಮಗೊಂದು ಗುರುತನ್ನು ಕೊಡುವರು. ಇಗೋ, ಕನ್ಯಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು. ಇಮ್ಮಾನುವೇಲ್ ಎಂದು ಆತನಿಗೆ ಹೆಸರಿಡುವಳು," ಎಂದರು.

ಕೀರ್ತನೆ: 24:1-2, 3-4, 5-6
ಶ್ಲೋಕ: ಆಗಮಿಸುತಿಹನಿದೋ ಮಹಿಮಾವಂತ ರಾಜಾದಿರಾಜನು ಇವನೇ ಪ್ರಭು, ಯುದ್ಧವೀರನು, ಶಕ್ತಿಸಮರ್ಥನು.

 ಶುಭಸಂದೇಶ: ಲೂಕ 1:26-38

ಎಲಿಜಬೇತಳು ಗರ್ಭಿಣಿಯಾದ ಆರನೇ ತಿಂಗಳಲ್ಲಿ, ದೇವರು ಗಬ್ರಿಯೇಲ್ ದೂತನನ್ನು ಗಲಿಲೇಯ ಪ್ರಾಂತ್ಯದ ನಜರೇತೆಂಬ ಊರಿನಲ್ಲಿದ್ದ ಒಬ್ಬ ಕನ್ನಿಕೆಯಲ್ಲಿಗೆ ಕಳುಹಿಸಿದರು. ಆಕೆಗೆ ದಾವೀದರಸನ ವಂಶಜನಾದ ಜೋಸೆಫನೊಂದಿಗೆ ನಿಶ್ಚಿತಾರ್ಥವಾಗಿತ್ತು. ಆಕೆಯ ಹೆಸರು ಮರಿಯ. ದೇವದೂತನು ಆಕೆಯ ಬಳಿಗೆ ಬಂದು " ದೈವಾನುಗ್ರಹಭರಿತಳೇ, ನಿನಗೆ ಶುಭವಾಗಲಿ; ಸರ್ವೇಶ್ವರ ನಿನ್ನೊಡನೆ ಇದ್ಧಾರೆ!" ಎಂದನು. ಇದನ್ನು ಕೇಳಿದ ಮರಿಯಳು ತಬ್ಬಿಬ್ಬಾದಳು. 'ಇದೆಂಥ ಶುಭಾಶಯ' ಎಂದು ಅವಳು ಯೋಚಿಸತೊಡಗಿದಳು. ದೂತನು ಆಕೆಗೆ, "ಮರಿಯಾ, ನೀನು ಅಂಜಬೇಕಾಗಿಲ್ಲ; ದೇವರ ಅನುಗ್ರಹ ನಿನಗೆ ಲಭಿಸಿದೆ; ಇಗೋ, ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ. ಆತನಿಗೆ 'ಯೇಸು' ಎಂಬ ಹೆಸರಿಡಬೇಕು; ಆತನು ಮಹಾಪುರುಷನಾಗುವನು; ಪರಾತ್ಪರ ದೇವರ ಪುತ್ರ ಎನಿಸಿಕೊಳ್ಳುವನು. ಪಿತಾಮಹ ದಾವೀದರಸನ ಸಿಂಹಾಸನವನ್ನು ಸರ್ವೇಶ್ವರನಾದ ದೇವರು ಆತನಿಗೆ ಕೊಡುವರು. ಯಕೋಬನ ವಂಶವನ್ನು ಆತನು ಚಿರಕಾಲ ಆಳುವನು; ಆತನ ರಾಜ್ಯಭಾರಕ್ಕೆ ಅಂತ್ಯವೇ ಇರದು," ಎಂದನು. ಅದಕ್ಕೆ ಮರಿಯಳು, "ಇದು ಆಗುವುದಾದರು ಹೇಗೆ? ನನಗೆ ಯಾವ ಪುರುಷನ ಸಂಸರ್ಗವೂ  ಇಲ್ಲವಲ್ಲಾ?" ಎಂದು ವಿಚಾರಿಸಿದಳು. ದೂತನು ಪ್ರತ್ಯುತ್ತರವಾಗಿ, "ಪವಿತ್ರಾತ್ಮ ನಿನ್ನ ಮೇಲೆ ಬರುವರು; ಪರಾತ್ಪರ ದೇವರ ಶಕ್ತಿ ನಿನ್ನನ್ನು ಆವರಿಸುವುದು; ಈ ಕಾರಣದಿಂದ, ನಿನ್ನಲ್ಲಿ ಹುಟ್ಟುವ ಆ ಪವಿತ್ರ ಶಿಶು 'ದೇವರ ಪುತ್ರ' ಎನಿಸಿಕೊಳ್ಳುವನು. ನಿನ್ನ ಸಂಬಂಧಿಕಳಾದ ಎಲಿಜಬೇತಳ‌ ವಿಷಯವನ್ನು ಕೇಳು: ಆಕೆ ತನ್ನ ಮುಪ್ಪಿನಲ್ಲೂ ಒಬ್ಬ ಮಗನನ್ನು ಹೆರಲಿದ್ದಾಳೆ; ಬಂಜೆ ಎನಿಸಿಕೊಂಡಿದ್ದ ಆಕೆ ಈಗ ಆರು ತಿಂಗಳ ಗರ್ಭಿಣಿ. ದೇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ," ಎಂದನು. ಆಗ ಮರಿಯಳು, "ಇಗೋ, ನಾನು ದೇವರ ದಾಸಿ, ನೀವು ಹೇಳಿದಂತೆ ನನಗಾಗಲಿ," ಎಂದಳು. ದೇವದೂತನು ಆಕೆಯನ್ನು ಬೀಳ್ಕೊಟ್ಟು ಅದೃಶ್ಯನಾದನು.

19.12.23 - "ಜಕರೀಯಾ, ಭಯ ಪಡಬೇಡ! ನಿನ್ನ ಪ್ರಾರ್ಥನೆಯನ್ನು ದೇವರು ಆಲಿಸಿದ್ದಾರೆ"

 ಮೊದಲನೇ ವಾಚನ: ನ್ಯಾಯಸ್ಥಾಪಕರು 13:2-7, 24-25

ಚೊರ್ಗಾ ಎಂಬ ಊರಲ್ಲಿ ದಾನ್ ಕುಲದ ಮಾನೋಹ ಎಂಬ ಒಬ್ಬ ಮನುಷ್ಯನಿದ್ದನು. ಅವನ ಹೆಂಡತಿ ಬಂಜೆಯಾಗಿದ್ದುದರಿಂದ ಅವನಿಗೆ ಮಕ್ಕಳಿರಲಿಲ್ಲ. ಒಂದಾನೊಂದು ದಿನ ಸರ್ವೇಶ್ವರನ ದೂತ ಆಕೆಗೆ ಪ್ರತ್ಯಕ್ಷನಾಗಿ, "ಇಗೋ, ಬಂಜೆಯಾಗಿ ಮಕ್ಕಳಿಲ್ಲದಿರುವ ನೀನು  ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ. ಈ ಕಾರಣ ಜಾಗರೂಕತೆಯಿಂದಿರು; ದ್ರಾಕ್ಷಾರಸವನ್ನಾಗಲಿ, ಬೇರೆ ಯಾವ ಮದ್ಯವನ್ನಾಗಲಿ ಕುಡಿಯದಿರು. ನೀನು ಗರ್ಭವತಿಯಾಗಿ ಹೆರುವ ಮಗನ ತಲೆಯ ಮೇಲೆ ಕ್ಷೌರದ ಕತ್ತಿಯನ್ನು ಉಪಯೋಗಿಸಲೇ ಬಾರದು. ಅವನು ಹುಟ್ಟಿನಿಂದ ದೇವರಿಗೆ ಪ್ರತಿಷ್ಠಿತನಾಗುವನು. ಅವನು ಇಸ್ರಯೇಲರನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸುವುದಕ್ಕೆ ಪ್ರಾರಂಭಿಸುವನು," ಎಂದನು. ತರುವಾಯ ಆ ಸ್ತ್ರೀ ತನ್ನ ಗಂಡನ ಬಳಿಗೆ ಹೋಗಿ, "ಒಬ್ಬ ದೇವಪುರುಷ ನನ್ನ ಹತ್ತಿರ ಬಂದಿದ್ದನು. ಅವನ ರೂಪ ದೇವದೂತನ ರೂಪದಂತೆ ಘನಗಂಭೀರವಾಗಿತ್ತು. 'ಎಲ್ಲಿಂದ ಬಂದಿರಿ? ಎಂದು ನಾನು ಅವನನ್ನು ಕೇಳಲಿಲ್ಲ; ಅವನು ತನ್ನ ಹೆಸರನ್ನು ತಿಳಿಸಲಿಲ್ಲ. ಆದರೆ ಆತ ನನಗೆ, 'ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ; ಆದ್ದರಿಂದ ನೀನು ದ್ರಾಕ್ಷಾರಸವನ್ನಾಗಲಿ, ಬೇರೆ ಯಾವ ಮದ್ಯವನ್ನಾಗಲಿ ಕುಡಿಯದಿರು. ಯಾವ ನಿಷಿದ್ಧಾಹಾರವನ್ನೂ ಮುಟ್ಟಬೇಡ; ಆ ಮಗು ಹುಟ್ಟಿದಂದಿನಿಂದ ಸಾಯುವವರೆಗೆ ಪ್ರತಿಷ್ಠಿತನಾಗಿರುವನು.' ಎಂದು ಹೇಳಿದನು," ಎಂದಳು. ಆ ಮಹಿಳೆ ಒಬ್ಬ ಮಗನನ್ನು ಹೆತ್ತು ಅವನಿಗೆ 'ಸಂಸೋನ' ಎಂದು ಹೆಸರಿಟ್ಟಳು. ಹುಡುಗ ಬೆಳೆದು ದೊಡ್ಡವನಾದ. ಸರ್ವೇಶ್ವರನ ಆಶೀರ್ವಾದ ಅವನ ಮೇಲಿತ್ತು. ಇದಲ್ಲದೆ, ಅವನು ಚೊರ್ಗಕ್ಕೂ ಎಷ್ಟಾವೋಲಿಗೂ ಮದ್ಯದಲ್ಲಿರುವ ದಾನ್ ಕುಲದ ಪಾಳೆಯದಲ್ಲಿದ್ದಾಗ ಸರ್ವೇಶ್ವರನ ಆತ್ಮ ಅವನನ್ನು ಚೇತನಗೊಳಿಸ ತೊಡಗಿತು.

ಕೀರ್ತನೆ: 71:3-4, 5-6, 16-17

ಶ್ಲೋಕ: ನಿನ್ನ ಗುಣಗಾನ ನನ್ನ ಬಾಯ್ತುಂಬ ನಿನ್ನ ಘೋಷಣೆ ನನಗೆ ದಿನದಾದ್ಯಂತ.

 ಶುಭಸಂದೇಶ: ಲೂಕ 1:5-25

ಜುದೇಯ ಪ್ರಾಂತ್ಯದ ಅರಸನಾಗಿದ್ದ ಹೆರೋದನ ಕಾಲದಲ್ಲಿ ಅಬೀಯನ ವರ್ಗಕ್ಕೆ ಸೇರಿದ ಜಕರೀಯನೆಂಬ ಒಬ್ಬ ಯಾಜಕನಿದ್ದನು. ಇವನ ಪತ್ನಿಯ ಹೆಸರು ಎಲಿಜಬೇತ್. ಇವಳೂ ಆರೋನನ ಯಾಜಕವಂಶಕ್ಕೆ ಸೇರಿದವಳು. ದಂಪತಿಗಳಿಬ್ಬರೂ ದೇವರ ದೃಷ್ಟಿಯಲ್ಲಿ ಭಯಭಕ್ತಿಯುಳ್ಳವರಾಗಿದ್ದರು. ಸರ್ವೇಶ್ವರನ ವಿಧಿ ನಿಯಮಗಳನ್ನು ನಿಷ್ಠೆಯಿಂದ ಪಾಲಿಸಿಕೊಂಡು ಬರುತ್ತಿದ್ದರು. ಎಲಿಜಬೇತಳು ಬಂಜೆ ಆದುದರಿಂದ ಅವರಿಗೆ ಮಕ್ಕಳಿರಲಿಲ್ಲ. ಅಲ್ಲದೆ ಅವರಿಬ್ಬರೂ ಮುದುಕರಾಗಿದ್ದರು. ಒಮ್ಮೆ ತನ್ನ ವರ್ಗದ ಸರದಿ ಬಂದಾಗ ಜಕರೀಯನು ದೇವರ ಸನ್ನಿಧಿಯಲ್ಲಿ ಯಾಜಕ ವಿಧಿಯನ್ನು ನೆರವೇರಿಸುತ್ತಿದ್ದನು. ಮಹಾದೇವಾಲಯದ ಗರ್ಭಗುಡಿಯನ್ನು ಪ್ರವೇಶಿಸಿ ಧೂಪಾರತಿಯನ್ನು ಅರ್ಪಿಸುವ ಸರದಿಗೆ, ಯಾಜಕರ ಸಂಪ್ರದಾಯದ ಪ್ರಕಾರ, ಚೀಟು ಹಾಕಿದಾಗ ಅದು ಜಕರೀಯನ ಪಾಲಿಗೆ ಬಂದಿತು. ಅಂತೆಯೇ,  ಅವನು ಧೂಪಾರತಿಯನ್ನು ಅರ್ಪಿಸುತ್ತಿದ್ದಾಗ ಭಕ್ತಸಮೂಹವು ಹೊರಗೆ ನಿಂತು ಪ್ರಾರ್ಥನೆ ಮಾಡುತ್ತಿತ್ತು. ಆಗ ಧೂಪಪೀಠದ ಬಲಗಡೆ ಅವನಿಗೆ ದೇವದೂತನೊಬ್ಬನು ಪ್ರತ್ಯಕ್ಷನಾದನು. ಅವನನ್ನು ಕಾಣುತ್ತಲೇ ತತ್ತರಗೊಂಡ ಜಕರೀಯನು ಭಯಭ್ರಾಂತನಾದನು. ದೂತನು ಅವನಿಗೆ, "ಜಕರೀಯಾ, ಭಯಪಡಬೇಡ! ನಿನ್ನ ಪ್ರಾರ್ಥನೆಯನ್ನು ದೇವರು ಆಲಿಸಿದ್ದಾರೆ. ನಿನ್ನ ಪತ್ನಿ ಎಲಿಜಬೇತಳಲ್ಲಿ ನಿನಗೆ ಒಂದು ಗಂಡು ಮಗು ಹುಟ್ಟುವುದು. ನೀನು ಅವನಿಗೆ 'ಯೊವಾನ್ನ' ಎಂದು ನಾಮಕರಣ ಮಾಡಬೆಕು. ಆ ಮಗುವಿನ ಜನನವು ನಿಮಗೆ ಹರ್ಷಾನಂದವನ್ನು ಉಂಟುಮಾಡುವುದು; ಬಹು ಜನಕ್ಕೆ ಸಂತಸವನ್ನು ತರುವುದು. ಸರ್ವೇಶ್ವರನ ದೃಷ್ಟಿಯಲ್ಲಿ ಅವನು ಮಹಾತ್ಮನಾಗುವನು. ದ್ರಾಕ್ಷಾರಸವನ್ನಾಗಲಿ, ಮದ್ಯವನ್ನಾಗಲಿ ಅವನು ಸೇವಿಸನು; ತಾಯಿಯ ಉದರದಿಂದಲೇ ಪವಿತ್ರಾತ್ಮಭರಿತನಾಗುವನು. ಇಸ್ರಯೇಲರಲ್ಲಿ ಅನೇಕರನ್ನು ಅವರ ದೇವರಾದ ಸರ್ವೇಶ್ವರನ ಕಡೆಗೆ ಮರಳಿ ತಿರುಗಿಸುವನು. ಎಲೀಯನಂತೆ ಶಕ್ತಿಪ್ರಭಾವಗಳಿಂದ ಕೂಡಿದವನಾಗಿ ಪ್ರಭುವಿನ ಮುಂದೂತನಾಗುವನು.  ತಂದೆ ಮಕ್ಕಳನ್ನು ಪುನಃ ಒಂದಾಗಿಸುವನು. ಸತ್ಪರುಷರ ಸನ್ಮಾರ್ಗಕ್ಕೆ ಅವಿಧೇಯರು ಹಿಂದಿರುಗುವಂತೆ ಮಾಡುವನು. ಹೀಗಾಗಿ ಪ್ರಭುವಿಗೆ ಯೋಗ್ಯ ಪ್ರಜೆಯನ್ನು ಸಿದ್ಧಗೊಳಿಸುವನು," ಎಂದನು. ಅದಕ್ಕೆ ಜಕರೀಯನು, "ಈ ಮಾತು ನಿಜವಾಗುವುದೆಂದು ನಾನು ತಿಳಿಯುವುದಾದರೂ ಹೇಗೆ? ನಾನೋ ಮುದುಕ; ನನ್ನ ಪತ್ನಿಗೂ ಮುಪ್ಪು," ಎಂದನು. ಆಗ ದೇವದೂತನು, "ನಾನು ದೇವರ ಸನ್ನಿಧಿಯಲ್ಲಿ ಸೇವೆಮಾಡುವ  ಗಬ್ರಿಯೇಲನು; ಈ ಶುಭಸಮಾಚಾರವನ್ನು ನಿನಗೆ ತಿಳಿಸುವುದಕ್ಕಾಗಿ ದೇವರ ಅಪ್ಪಣೆಯ ಪ್ರಕಾರ ಬಂದವನು. ನಾನು ತಿಳಿಸಿದ ಸಂದೇಶವು ಸಕಾಲದಲ್ಲಿ ನೆರವೇರುವುದು. ಆದರೆ ನೀನು ಅದನ್ನು ನಂಬದೆ ಹೋದ ಕಾರಣ ಅದೆಲ್ಲಾ ಈಡೇರುವ ತನಕ ಮಾತನಾಡಲಾಗದೆ ಮೂಕನಾಗಿರುವೆ," ಎಂದನು. ಇತ್ತ ಭಕ್ತಜನರು ಜಕರೀಯನಿಗಾಗಿ ಎದುರು ನೋಡುತ್ತಾ ದೇವಾಲಯದಲ್ಲಿ ಅವನು ಇಷ್ಟು ತಡಮಾಡಲು ಕಾರಣವೇನಿರಬಹುದೆಂದು ಆಶ್ಚರ್ಯಪಡುತ್ತಿದ್ದರು. ಅಷ್ಟರಲ್ಲಿ ಜಕರೀಯನು ಹೊರಗೆ ಬಂದು ಮಾತನಾಡಲೆತ್ನಿಸಿದರೂ ಅವನ ಬಾಯಿಂದ ಮಾತೇ ಹೊರಡಲಿಲ್ಲ. ಬರೀ ಕೈಸನ್ನೆ ಮಾಡುತ್ತಿದ್ದ ಅವನಿಗೆ ದೇವಾಲಯದಲ್ಲಿ ಏನೋ ದಿವ್ಯದರ್ಶನ ಆಗಿರಬೇಕೆಂದು ಜನರು ಅರಿತುಕೊಂಡರು. ಅಂದಿನಿಂದ ಅವನು ಮೂಕನಾಗಿಯೇ ಇದ್ದನು. ತನ್ನ ಯಾಜಕ ಸೇವಾಸರದಿಯು ಮುಗಿದ ನಂತರ ಜಕರೀಯನು ಮನೆಗೆ ಹಿಂದಿರುಗಿ ಹೋದನು. ಕೆಲವು ದಿನಗಳಾದ ಬಳಿಕ ಅವನ ಪತ್ನಿ ಎಲಿಜಬೇತಳು ಗರ್ಭಿಣಿಯಾಗಿ, ಐದು ತಿಂಗಳು ಮನೆಯಲ್ಲಿ ಮರೆಯಾಗಿದ್ದಳು. "ಕಟ್ಟಕಡೆಗೆ ಸರ್ವೇಶ್ವರ ನನಗೆ ಕರುಣೆ ತೋರಿದ್ದಾರೆ; ಜನರ ನಡುವೆ ನನಗಿದ್ದ ಅವಮಾನವನ್ನು ತೊಲಗಿಸಿದ್ದಾರೆ," ಎಂದುಕೊಳ್ಳುತ್ತಿದ್ದಳು.

18.12.23

ಮೊದಲನೇ ವಾಚನ: ಯೆರೆಮೀಯ 23:5-8

ಸರ್ವೇಶ್ವರ ಹೇಳುವುದನ್ನು ಗಮನಿಸಿರಿ: "ದಿನಗಳು ಬರಲಿವೆ; ಆಗ ನಾನು ದಾವೀದನೆಂಬ ಮೂಲದಿಂದ ಒಂದು 'ಮೊಳಕೆ'ಯನ್ನು ಚಿಗುರಿಸುವೆನು. ಆಗ ಸತ್ಪುರುಷ: ರಾಜನಾಗಿ ಆಳುವನು. ವಿವೇಕದಿಂದ ಕಾರ್ಯಸಾಧಿಸುವನು. ಧರೆಯಲ್ಲಿ ನ್ಯಾಯನೀತಿಯನ್ನು ನಿರ್ವಹಿಸುವನು. ಆತನ ಕಾಲದಲ್ಲಿ ಯೆಹೂದ್ಯರು ಸುರಕ್ಷಿತವಾಗಿ ಇರುವರು. ಇಸ್ರಯೇಲರು ನೆಮ್ಮದಿಯಿಂದ ಬಾಳುವರು. 'ಯೆಹೋವ ಚಿದ್ಕೇನು' (ಎಂದರೆ ಸರ್ವೇಶ್ವರನೇ ನಮ್ಮ ಸದ್ಧರ್ಮ) ಎಂಬ ಹೆಸರು ಆತನಿಗಿರುವುದು. " ಬರಲಿರುವ ಆ ಕಾಲದಲ್ಲಿ ಜನರು, 'ಇಸ್ರಯೇಲರನ್ನು ಈಜಿಪ್ಟ್ ದೇಶದಿಂದ ಉದ್ಧರಿಸಿದ ಸರ್ವೇಶ್ವರನ ಜೀವವಾಣಿ' ಎಂದು ಪ್ರಮಾಣ ಮಾಡುವ ಪದ್ಧತಿಯನ್ನು ಬಿಟ್ಟುಬಿಡುವರು. ಬದಲಿಗೆ 'ಇಸ್ರಯೇಲ್ ಮನೆತನವೆಂಬ ಸಂತಾನವನ್ನು ಉತ್ತರ ನಾಡಿನಿಂದಲೂ ಅವರನ್ನು ತಳ್ಳಲಾಗಿದ್ದ ಸಕಲ ಸೀಮೆಗಳಿಂದಲೂ ಬರಮಾಡಿ ಉದ್ಧರಿಸಿದ ಸರ್ವೇಶ್ವರನ ಜೀವದಾಣೆ' ಎಂದು ಪ್ರಮಾಣ ಮಾಡುವರು. ಅವರು ಸ್ವಂತ ನಾಡಿನಲ್ಲಿ ಸುಖವಾಗಿ ಬಾಳುವರು. ಇದು ಸರ್ವೇಶ್ವರನಾದ ನನ್ನ ನುಡಿ."

ಕೀರ್ತನೆ:72:1-2, 12-13, 18-19

ಶ್ಲೋಕ : ಬೆಳೆಯಲಿ ಆತನ ಪಾಲನೆಯಲಿ ನ್ಯಾಯ ನೀತಿ ಬೆಳಗಲಿ ಚಂದ್ರನಂತೆ ಸದಾ ಸಂಪೂರ್ಣ ಶಾಂತಿ.

ಶುಭಸಂದೇಶ: ಮತ್ತಾಯ 1:18-25

ಕ್ರಿಸ್ತಯೇಸುವಿನ ಜನನದ ಪ್ರಕರಣ: ಯೇಸುವಿನ ತಾಯಿ ಮರಿಯಳಿಗೂ ಜೋಸೆಫನಿಗೂ ನಿಶ್ಚಿತಾರ್ಥವಾಗಿತ್ತು. ಅವರಿಬ್ಬರೂ ಕೂಡಿಬಾಳುವುದಕ್ಕೆ ಮುಂಚೆಯೇ ಮರಿಯಳು ಗರ್ಭವತಿಯಾಗಿರುವುದು ತಿಳಿದುಬಂತು. ಆಕೆ ಗರ್ಭಧರಿಸಿದ್ದು ಪವಿತ್ರಾತ್ಮ ಪ್ರಭಾವದಿಂದ. ಆಕೆಯ ಪತಿ ಜೋಸೆಫನು ನೀತಿವಂತನು. ಮರಿಯಳನ್ನು ಅವಮಾನಕ್ಕೆ ಗುರಿಮಾಡುವ ಉದ್ದೇಶ ಅವನದಲ್ಲವಾದ್ದರಿಂದ ಯಾರಿಗೂ ತಿಳಿಯದ ಹಾಗೆ ನಿಶ್ಚಿತಾರ್ಥವನ್ನು ಮುರಿದುಬಿಡಬೇಕೆಂದಿದ್ದನು. ಆತನು ಈ ಕುರಿತು ಆಲೋಚಿಸುತ್ತಿದ್ದಂತೆ, ದೇವದೂತನು ಕನಸಿನಲ್ಲಿ ಕಾಣಿಸಿಕೊಂಡು, "ದಾವೀದ ವಂಶದ ಜೋಸೆಫನೇ, ಮರಿಯಳನ್ನು ನಿನ್ನ ಪತ್ನಿಯನ್ನಾಗಿ ಸ್ವೀಕರಿಸಲು ಅಂಜಬೇಡ. ಆಕೆ ಗರ್ಭ ಧರಿಸಿರುವುದು ಪವಿತ್ರಾತ್ಮ ಪ್ರಭಾವದಿಂದಲೇ. ಆಕೆ ಒಬ್ಬ ಮಗನನ್ನು ಹೆರುವಳು. ಆತನಿಗೆ ನೀನು ಯೇಸು ಎಂದು ಹೆಸರಿಡಬೇಕು. ಏಕೆಂದರೆ ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸಿ ಉದ್ಧಾರಮಾಡುವವನು ಆತನೇ," ಎಂದನು. "ಇಗೋ, ಕನ್ಯೆಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು, 'ಇಮ್ಮಾನುವೇಲ್' ಎಂದು ಆತನಿಗೆ ಹೆಸರಿಡುವರು" ಎಂಬುದಾಗಿ ಪ್ರವಾದಿಯ ಮುಖಾಂತರ ಸರ್ವೇಶ್ವರ ಹೇಳಿದ ಪ್ರವಚನ ನೆರವೇರುವಂತೆ ಇದೆಲ್ಲಾ ಸಂಭವಿಸಿತು. "ಇಮ್ಮಾನುವೇಲ್" ಎಂದರೆ 'ದೇವರು ನಮ್ಮೊಡನೆ ಇದ್ದಾರೆ' ಎಂದು ಅರ್ಥ. ಆಗ ಜೋಸೆಫನು ಎಚ್ಚೆತ್ತು ದೇವದೂತನ ಆಜ್ಞೆಯ ಪ್ರಕಾರ ಮರಿಯಳನ್ನು ವಿವಾಹ ಮಾಡಿಕೊಂಡನು. ಆಕೆ ಗಂಡುಮಗುವಿಗೆ ಜನ್ಮವಿತ್ತಳು. ಜೋಸೆಫನು ಆ ಮಗುವಿಗೆ  'ಯೇಸು'  ಎಂದು ನಾಮಕರಣ ಮಾಡಿದನು.

16.12.23

ಮೊದಲನೆಯ ವಾಚನ: ಸಿರಾಖ 48:1-4,9-11

ಆಮೇಲೆ ಪ್ರವಾದಿ ಎಲೀಯನೆದ್ದನು ಬೆಂಕಿಯಂತೆ, ಉರಿಯಿತವನ ನುಡಿ ಪಂಜಿನಂತೆ. ಕ್ಷಾಮವನ್ನು ಬರಮಾಡಿದನಿವನು ಜನರ ಮೇಲೆ, ಅವರನ್ನು ಕುಂದಿಸಿದನು ತನ್ನ ರೋಷದಿಂದಲೆ. ಆಕಾಶವನ್ನೇ ಮುಚ್ಚಿಬಿಟ್ಟನು ಸರ್ವೇಶ್ವರನ ಹೆಸರಿನಲ್ಲಿ, ಬೆಂಕಿಯಿಳಿಯುವಂತೆ ಮಾಡಿದನು ಮೂರುಸಾರಿ. ಎಲೈ ಎಲೀಯನೇ, ಮಹತ್ಕಾರ್ಯಗಳಲ್ಲಿ ನೀನು ಎಷ್ಟು ಘನವಂತನಾಗಿದ್ದೆ ! ನಿನ್ನಂತೆ ಹೆಚ್ಚಳಪಡುವವರು ಯಾರಿದ್ದಾರೆ? ನೀ ಒಯ್ಯಲ್ಪಟ್ಟೆ ಬೆಂಕಿಯ ಬಿರುಗಾಳಿಯಲ್ಲಿ, ಅಗ್ನಿಮಯ ಕುದುರೆಗಳೆಳೆದ ರಥದಲ್ಲಿ. ಕೋಪ ರೌದ್ರಕ್ಕೇರುವುದಕ್ಕಾಗಿ ಇಸ್ರಯೇಲಿನ ಕುಲಗಳನ್ನು ಯಥಾಸ್ಥಿತಿಗೆ ತರುವುದಕ್ಕಾಗಿ ತಕ್ಕ ಕಾಲದಲ್ಲಿ ಗದರಿಸುವಾತ ನೀನೆಂದು ಬರೆದಿದೆ ನಿನ್ನ ವಿಷಯವಾಗಿ, ನಿನ್ನನ್ನು ನೋಡುವವರು ಧನ್ಯರು, ಪ್ರೀತಿಯಿಂದ ನಿಧನರಾದವರು ಧನ್ಯರು ! ಕಾರಣ, ನಾವು ಸಹ ನಿಜವಾಗಿ ಜೀವಿಸುವೆವು.

ಕೀರ್ತನೆ: 80:1-2,14-15,17-18,
ಶ್ಲೋಕ: ಸರ್ವಶಕ್ತನಾದ ದೇವನೇ, ಉದ್ಧರಿಸೆಮ್ಮನು | ಬೆಳಗಲಿ ನಿನ್ನ ಮುಖಕಾಂತಿ, ಪಡೆವೆವು ರಕ್ಷಣೆಯನು ||

ಕಿವಿಗೊಟ್ಟು ಆಲಿಸೋ, ಇಸ್ರಯೇಲಿನ ಮೇಷಪಾಲನೇ|
ವಿರಾಜಿಸು ಕೆರುಬೀಯರ ಮಧ್ಯೆ ಆಸೀನನಾದವನೇ||
ತೋರ್ಪಡಿಸು ನಿನ್ನ ಶೌರ್ಯವನು|
ಬಂದು ಜಯಪ್ರದನಾಗು ನಮಗೆ||

ಸರ್ವಶಕ್ತನಾದ ದೇವರೇ, ಮರಳಿ ಮುಖ ತೋರಿಸು|
ಪರದಿಂದೀಕ್ಷಿಸಿ ಆ ದ್ರಾಕ್ಷಾಲತೆಯನು ಪರಾಮರಿಸು||
ಕಾಪಾಡು ನಿನ್ನ ಬಲಗೈ ನೆಟ್ಟು ಸಾಕಿದ ಸಸಿಯನು|
ಕಾದಿರಿಸು ನಿನಗೆಂದೇ ನೀ ಬೆಳೆಸಿದಾ ಬಳ್ಳಿಯನು||

ಕೈ ಹಿಡಿದು ಕಾಪಾಡು ನಿನ್ನ ಬಲಗೈ ಉದ್ದರಿಸಿದ ಪುರುಷನನು|
ನಿನಗೆಂದೇ ನೀ ಬೆಳೆಸಿದಾ ವರಪುತ್ರನನು||
ಆಗ ಬಿಟ್ಟಗಲುವುದಿಲ್ಲ ನಾವೆಂದೆಂದಿಗು ನಿನ್ನನು|
ಪುನರ್ಜೀವಗೊಳಿಸು, ಮಾಳ್ಪೆವು ನಿನ್ನ ನಾಮಸ್ಮರಣೆಯನು||

ಘೋಷಣೆ ಲೂಕ:3:4,6
ಅಲ್ಲೆಲೂಯ, ಅಲ್ಲೆಲೂಯ!

ಪ್ರಭುವಿನ ಮಾರ್ಗವನ್ನು ಸಿದ್ದಪಡಿಸಿರಿ, ಆತನ ಆಗಮನಕ್ಕಾಗಿ ಹಾದಿಯನ್ನು ಸರಾಗಮಾಡಿರಿ | ಆಗ ದೇವರು ದಯಪಾಲಿಸುವ ಜೀವೋದ್ಧಾರವನ್ನು ಮಾನವರೆಲ್ಲರು ಕಾಣುವರು‌ ||

ಶುಭಸಂದೇಶ: ಮತ್ತಾಯ 17:9,10-13

ಆ ಕಾಲದಲ್ಲಿ ಬೆಟ್ಟದಿಂದ ಇಳಿದು ಬರುವಾಗ ಯೇಸು, "ನರಪುತ್ರನು ಸತ್ತು ಪುನರುತ್ಥಾನ ಹೊಂದುವ ತನಕ ಈ ದರ್ಶನವನ್ನು ಯಾರಿಗೂ ಹೇಳಬೇಡಿ, " ಎಂದು ಆಜ್ಞಾಪಿಸಿದರು. ಶಿಷ್ಯರು, ಎಲೀಯನೇ ಮೊದಲು ಬರಬೇಕಾಗಿದೆ ಎಂದು ಶಾಸ್ತ್ರಜ್ಞರು ಹೇಳುತ್ತಾರಲ್ಲಾ ಅದು ಹೇಗೆ? " ಎಂದು ಯೇಸುವನ್ನು ಕೇಳಿದರು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ಎಲೀಯನು ಬಂದು ಎಲ್ಲವನ್ನೂ ಸಜ್ಜುಗೊಳಿಸುವನು ಎಂಬುದು ನಿಜ. ಆದರೆ ನಾನು ನಿಮಗೆ ಹೇಳುತ್ತೇನೆ ; ಎಲೀಯನು ಈಗಾಗಲೇ ಬಂದಾಗಿದೆ; ಜನರು ಆತನನ್ನು ಗುರುತಿಸದೇ ತಮಗೆ ಇಷ್ಟಬಂದ ಹಾಗೆ ಹಿಂಸಿಸಿದ್ದೂ ಆಗಿದೆ. ಅಂತೆಯೇ ನರಪುತ್ರನೂ ಅವರ ಕೈಯಿಂದ ಯಾತನೆಯನ್ನು ಅನುಭವಿಸುವನು, " ಎಂದರು. ಅವರು ಹೇಳುತ್ತಿರುವುದು ಸ್ನಾನಿಕ ಯೊವಾನ್ನನನ್ನು ಕುರಿತೇ ಎಂದು ಪ್ರೇಷಿತರು ಆಗ ಅರ್ಥಮಾಡಿಕೊಂಡರು.

17.12.23

ಮೊದಲನೆಯ ವಾಚನ: ಯೆಶಾಯ: 61:46-50,53-54

ನನ್ನ ಮೇಲಿದೆ ಸರ್ವೇಶ್ವರಸ್ವಾಮಿಯ ಆತ್ಮ; ನನಗೆ ಅಭಿಷೇಕಮಾಡಿ ಕಳುಹಿಸಿಹನು ಆತ; ಬಡವರಿಗೆ ಶುಭಸಂದೇಶ ಬೋಧಿಸಲೆಂದೆ, ಮನನೊಂದವರನು ಸಂತೈಸಿ ಗುಣಪಡಿಸಲೆಂದೇ, ಬಂಧಿತರಿಗೆ ಬಿಡುಗಡೆಯನ್ನು ಪ್ರಕಟಿಸಲೆಂದೆ, ಬಂಧಿತರಿಗೆ ಬಿಡುಗಡೆಯನು ಪ್ರಕಟಿಸಲೆಂದೇ ಸೆರೆಯಾಳುಗಳಿಗೆ ಬಂಧನಮುಕ್ತಿಯಾಗುವುದನು, ಸರ್ವೇಶ್ವರಸ್ವಾಮಿಯ ಅನುಗ್ರಹದ ವರುಷವನು, ನಮ್ಮ ದೇವರು ಮುಯ್ಯಿತೀರಿಸುವಾ ದಿನವನು ಘೋಷಿಸಲೆಂದೆ, ನಾನು ಪಡೆಯುವೆ ಸರ್ವೇಶ್ವರನಲ್ಲಿ ಪರಮಾನಂದ; ಹಿರಿಹಿಗ್ಗುವುದು ನನ್ನ ದೇವರಲಿ ನನ್ನಾತ್ಮ. ಮದುವಣಿಗನಿಗೆ ಬಾಸಿಂಗವನು ತೊಡಿಸುವಂತೆ ವಧುವಿಗೆ ಆಭರಣಗಳಿಂದ ಅಲಂಕರಿಸುವಂತೆ ಹೊದಿಸಿಹನಾತ ನನಗೆ ಮುಕ್ತಿಯೆಂಬ ವಸ್ತ್ರವನು; ತೊಡಿಸಿಹನು ನನಗೆ ನೀತಿಯೆಂಬ ನಿಲುವಂಗಿಯನು. ಭುವಿಯು ತನ್ನಿಂದ ಬೀಜವನು ಮೊಳೆಯಿಸುವಂತೆ, ತೋಟವು ತನ್ನೊಳು ಸಸಿಯನು ಬೆಳೆಸುವಂತೆ ಸ್ವಾಮಿ ಸರ್ವೇಶ್ವರ, ಸಮಸ್ತ ರಾಷ್ಟ್ರಗಳ ಮುಂದೆ ವೃದ್ಧಿಗೊಳಿಸುವನು ಸದ್ಧರ್ಮವನೆ, ಸ್ತುತಿಸ್ತೋತ್ರವನೆ.

ಕೀರ್ತನೆ: ಲೂಕ 1:46-50,53-54
ಶ್ಲೋಕ: ಹಿರಿಹಿಗ್ಗುವುದು ನನ್ನ ದೇವರಲಿ ನನ್ನಾತ್ಮ |

ಎನ್ನ ಮಾಡುತ್ತಿದೆ ಸರ್ವೇಶ್ವರನ ಸ್ತುತಿ|
ಉಲ್ಲಾಸಿಸುತ್ತಿದೆ ಮುಕ್ತಿದಾತ ದೇವನಲಿ||
ತನ್ನ ದಾಸಿಯ ದೀನತೆಯನು ನೆನಪಿಗೆ ತಂದುಕೊಂಡನಾತ|
ಧನ್ಯರೆಂದು ಹೊಗಳುವರೆನ್ನನು ಇಂದಿನಿಂದ ಸರ್ವ ಜನಾಂಗ||

ಏಕೆನೆ ಮಾಡಿಹನೆನಗೆ ಸರ್ವಶಕ್ತನು ಮಹತ್ಕಾರ್ಯ|
ನಿಜಕ್ಕೂ ಆತನ ನಾಮಧೇಯ ಪರಮಪೂಜ್ಞ||
ಆತನಲಿ ಭಯಭಕ್ತಿಯುಳ್ಳವರಿಗೆ|
ಆತನ ಪ್ರೀತಿ ತಲೆತಲಾಂತರದವರೆಗೆ||

ತೃಪ್ತಿಪಡಿಸಿರುವನಾತ ಹಸಿದವರನು ಮೃಷ್ಟಾನ್ನದಿ|
ಹೊರದೂಡಿರುವನು ಸಿರಿವಂತರನು ಬರಿಗೈಯಲಿ||
ನೆರವಾದನು ತನ್ನ ದಾಸ ಇಸ್ರಯೇಲರಿಗೆ|
ಪೂರ್ವಜರಿಗಿತ್ತ ವಾಗ್ಧಾನದ ಮೇರೆಗೆ||

ಎರಡನೆಯ ವಾಚನ: 1 ಥೆಸಲೋನಿಯರಿಗೆ 5:16-24

ಸಹೋದರರೇ ಸದಾ ಹರ್ಷಚಿತ್ತರಾಗಿರಿ. ಎಡೆಬಿಡದೆ ಪ್ರಾರ್ಥಿಸಿರಿ. ಎಲ್ಲಾ ಸಂದರ್ಭಗಳಲ್ಲೂ ಉಪಕಾರ ಸ್ಮರಣೆಮಾಡಿರಿ. ಕ್ರಿಸ್ತಯೇಸುವಿನಲ್ಲಿ ದೇವರು ನಿಮ್ಮಿಂದ ಇಚ್ಚಿಸುವುದು ಇದನ್ನೇ. ಪವಿತ್ರಾತ್ಮರನ್ನು ನಿಶ್ಚೇತನಗೊಳಿಸಬೇಡಿ. ಪ್ರವಾದನೆಗಳನ್ನು ಅಲ್ಲಗಳೆಯದಿರಿ. ಅವುಗಳನ್ನೆಲ್ಲಾ ಪರಿಶೋಧಿಸಿ ಒಳ್ಳೆಯದನ್ನು ಅಂಗೀಕರಿಸಿ, ಕೆಟ್ಟದ್ದನ್ನೆಲ್ಲಾ ಬಿಟ್ಟುಬಿಡಿ. ಶಾಂತಿದಾಯಕ ದೇವರು ನಿಮ್ಮನ್ನು ಪೂರ್ಣವಾಗಿ ಪವಾನಗೊಳಿಸಲಿ. ನಮ್ಮ ಪ್ರಭು ಯೇಸು ಪುನರಾಗಮಿಸುವಾಗ ನಿಮ್ಮ ಆತ್ಮ, ಪ್ರಾಣ, ದೇಹ - ಇವುಗಳು ದೋಷರಹಿತವಾಗಿಯೂ ಸ್ವಸ್ಥವಾಗಿಯೂ ಇರುವಂತೆ ನಿಮ್ಮನ್ನು ಕಾಪಾಡಲಿ. ನಿಮ್ಮನ್ನು ಕರೆದ ದೇವರು ಇದನ್ನು ಈಡೇರಿಸುವರು; ಏಕೆಂದರೆ, ದೇವರು ನಂಬಿಗಸ್ಥರು.

ಘೋಷಣೆ: ಯೆಶಾಯ 61:1(ಲೂಕ 4:18)

ಅಲ್ಲೆಲೂಯ, ಅಲ್ಲೆಲೂಯ!

ನನ್ನ ಮೇಲಿದೆ ಸರ್ವೇಶ್ವರಸ್ವಾಮಿಯ ಆತ್ಮ;| ನನಗೆ ಅಭಿಷೇಕಮಾಡಿ ಕಳುಹಿಸಿಹನು ಆತ; ಬಡವರಿಗೆ ಶುಭಸಂದೇಶ ಬೋಧಿಸಲೆಂದೆ ||

ಶುಭಸಂದೇಶ: ಯೊವಾನ್ನ 1:6-8,19-28

ದೇವರು ಒಬ್ಬ ವ್ಯಕ್ತಿಯನ್ನು ಕಳುಹಿಸಿದರು. ಆತನ ಹೆಸರು ಯೊವಾನ್ನ. ಈತನು ಸಾಕ್ಷಿಕೊಡಲು ಬಂದನು. ತನ್ನ ಮುಖಾಂತರ ಸರ್ವರೂ ವಿಶ್ವಾಸಿಸುವಂತೆ ಆ ಜ್ಯೋತಿಯನ್ನು ಕುರಿತು ಸಾಕ್ಷಿ ನೀಡಿದನು. ಈತನೇ ಜ್ಯೋತಿಯಾಗಿರಿರಲಿಲ್ಲ; ಆ ಜ್ಯೋತಿಯನ್ನು ಕುರಿತು ಸಾಕ್ಷಿ ನೀಡಲೆಂದೇ ಬಂದವನು. ಜೆರುಸಲೇಮಿನ ಯೆಹೂದ್ಯ ಅಧಿಕಾರಿಗಳು, ಯಾಜಕರನ್ನೂ ಲೇವಿಯರನ್ನೂ ಯೊವಾನ್ನನ ಬಳಿಗೆ ಕಳುಹಿಸಿದರು. ಇವರು, "ನೀನು ಯಾರು? " ಎಂದು ಪ್ರಶ್ನಿಸಿದರು. ಯೊವಾನ್ನನು ಅದಕ್ಕೆ ಉತ್ತರವಾಗಿ, "ಅಭಿಷಿಕ್ತನಾದ ಲೋಕೋದ್ಧಾರಕ ನಾನಲ್ಲ, "ಎಂದು ಸ್ಪಷ್ಟವಾಗಿ ಹೇಳಿದನು. ಏನನ್ನೂ ಮರೆಮಾಚಲಿಲ್ಲ. ಹಾಗಾದರೆ, "ನೀನು ಎಲಿಯನೋ? " ಎಂದು ಕೇಳಲು, 'ಅಲ್ಲ' ಎಂದನು. ನೀನು ಬರಬೇಕಾದ ಪ್ರವಾದಿಯಿರಬಹುದೇ? "ಎಂದು ಕೇಳಲು, "ಅದೂ ಅಲ್ಲ, " ಎಂದು ಮರುನುಡಿದನು. "ಹಾಗಾದರೆ ನೀನು ಯಾರೆಂದು ನಮಗೆ ತಿಳಿಸು. ನಮ್ಮನ್ನು ಕಳುಹಿಸಿದವರಿಗೆ ನಾವು ಉತ್ತರಕೊಡಬೇಕಾಗಿದೆ. ನಿನ್ನನ್ನು ಕುರಿತು ನೀನು ಏನು ಹೇಳುತ್ತೀ? " ಎಂದು ಅವರು ಮತ್ತೊಮ್ಮೆ ಕೇಳಿದರು. ಅದಕ್ಕೆ ಯೊವಾನ್ನನು, " ಪ್ರಭುವಿನ ಮಾರ್ಗವನ್ನು ನೇರಗೊಳಿಸಿರೆಂದು ಬೆಂಗಾಡಿನಲ್ಲಿ ಕೂಗುವವನ ಸ್ವರವೇ ನಾನು, " ಎಂದು ಪ್ರವಾದಿ ಯೆಶಾಯನ ಮಾತುಗಳಲ್ಲೇ ಉತ್ತರಕೊಟ್ಟನು. ಆಗ ಫರಿಸಾಯರ ಕಡೆಯಿಂದ ಬಂದಿದ್ದ ಕೆಲವರು, "ನೀನು ಲೋಕೋದ್ಧಾರಕನಾಗಲಿ, ಎಲೀಯನಾಗಲಿ, ಬರಬೇಕಾಗಿದ್ದ ಪ್ರವಾದಿಯೇ ಆಗಲಿ ಅಲ್ಲವೆಂದ ಮೇಲೆ ಸ್ನಾನದೀಕ್ಷೆ ಕೊಡುವುದೇಕೆ? "ಎಂದು ಪ್ರಶ್ನಿಸಿದರು. ಪ್ರತ್ಯುತ್ತರವಾಗಿ ಯೊವಾನ್ನನು, "ನಾನು ನಿಮಗೆ ನೀರಿನಿಂದ ಸ್ನಾನದೀಕ್ಷೆ ಕೊಡುತ್ತಿದ್ದೇನೆ. ನಿಮಗೆ ತಿಳಿಯದ ಒಬ್ಬ ವ್ಯಕ್ತಿ ನಿಮ್ಮ ನಡುವೆ ಇದ್ದಾರೆ. ನನ್ನ ಬಳಿಕ ಬರಬೇಕಾಗಿದ್ದವರು ಅವರೇ. ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ, " ಎಂದನು. ಯೊವಾನ್ನನು ಸ್ನಾನದೀಕ್ಷೆ ಕೊಡುತ್ತಿದ್ದ ಜೋರ್ಡಾನ್ ನದಿಯ ಆಚೆ ದಡದಲ್ಲಿದ್ದ ಬೆಥನಿಯ ಎಂಬಲ್ಲಿ ಇದೆಲ್ಲವೂ ನಡೆಯಿತು.