15.06.23

ಮೊದಲನೆಯ ವಾಚನ: 2 ಕೊರಿಂಥಿಯರಿಗೆ  3:15-4:1, 3-6

" ಹೌದು, ಮೋಶೆ ಬರೆದುದನ್ನು ಓದುವಾಗಲೆಲ್ಲಾ ಅವರ ಮನಸ್ಸು ಇಂದಿಗೂ ಅದೇ ಮುಸುಕಿನಿಂದ ಮುಚ್ಚಿದೆ. ಪ್ರಭುವಿಗೆ ಅಭಿಮುಖರಾದಾಗ ಮಾತ್ರ ಆ ಮುಸುಕನ್ನು ತೆಗೆಯಲಾಗುತ್ತದೆ. ' ಈ ವಾಕ್ಯದಲ್ಲಿ, 'ಪ್ರಭು' ಎಂದರೆ ದೇವರ ಆತ್ಮವೇ. ಪ್ರಭುವಿನ ಆತ್ಮ ಎಲ್ಲಿದೆಯೋ ಅಲ್ಲಿ ವಿಮೋಚನೆಯೂ ಇದೆ. ಮುಸುಕು ತೆರೆದ ಮುಖವುಳ್ಳ ನಾವೆಲ್ಲರೂ ಪ್ರಭುವಿನ ಮಹಿಮೆಯನ್ನು ಪ್ರತಿಬಿಂಬಿಸುವ ಕನ್ನಡಿಯಂತೆ ಇದ್ದೇವೆ. ಆ ಪ್ರಭುವಿನಿಂದ ಹೊರಹೊಮ್ಮುವ ಮಹಿಮೆ ನಮ್ಮನ್ನು ಅಧಿಕಾಧಿಕವಾಗಿ ಮಾರ್ಪಡಿಸಿ ಅವರನ್ನೆ ಹೋಲುವಂತೆ ಮಾಡುತ್ತದೆ. ಇದೆಲ್ಲಾ ದೇವರಾತ್ಮವಾಗೀರುವ ಪ್ರಭುವಿನ ಕಾರ್ಯವೇ ಸರಿ. ದೇವರ ಕರುಣೆಯಿಂದ ಈ ಸೇವೆಯನ್ನು ಕೈಗೊಂಡಿರುವ ನಾವು ಧೈರ್ಯಗೆಟ್ಟು ಹಿಂಜರಿಯುವುದಿಲ್ಲ. ನಾವು ಪ್ರಚಾರಮಾಡುವ ಶುಭಸಂದೇಶ ಕೆಲವರಿಗೆ ಇನ್ನೂ ಮುಸುಕಿನ ಮರೆಯಾಗಿದ್ದರೆ, ಹಾಗಿರುವುದು ವಿನಾಶ ಮಾರ್ಗದಲ್ಲಿರುವವರಿಗೆ ಮಾತ್ರ. ಇವರು ವಿಶ್ವಾಸಿಸುವುದಿಲ್ಲ. ಏಕೆಂದರೆ, ಪೃಥ್ವಿಯ ಮಿಥ್ಯ ದೈವವು ಇವರ ಮನಸ್ಸನ್ನು ಮಂಕಾಗಿಸಿದೆ; ದೇವರ ಪ್ರತಿರೂಪವಾಗಿರುವ ಕ್ರಿಸ್ತ ಯೇಸುವಿನ ಮಹಿಮೆಯನ್ನು ಸಾರುವ ಶುಭಸಂದೇಶದ ಬೆಳಕನ್ನು ಕಾಣುವಂತೆ ಇವರನ್ನು ಕುರುಡಾಗಿಸಿದೆ. ನಾವು ನಮ್ಮನ್ನೇ ಕುರಿತು ಪ್ರಚಾರ ಮಾಡುತ್ತಿಲ್ಲ. ಆದರೆ ಕ್ರಿಸ್ತ ಯೇಸುವೇ ಪ್ರಭುವೆಂದೂ ಅವರಿಗೋಸ್ಕರ ನಾವು ನಿಮ್ಮ ದಾಸರೆಂದೂ ಪ್ರಚುರಪಡಿಸುತ್ತಿದ್ದೇವೆ. " ಕತ್ತಲೆಯಿಂದ ಬೆಳಕು ಹೊಳೆಯಲಿ, " ಎಂದ ದೇವರೇ, ತಮ್ಮ ಜ್ಯೋತಿಯಿಂದ ನಮ್ಮ ಅಂತರಂಗವನ್ನು ಬೆಳಗಿಸಿದ್ದಾರೆ. ಇದರ ಪರಿಣಾಮವಾಗಿ ಕ್ರಿಸ್ತ ಯೇಸುವಿನ ಮುಖಮಂಡಲದಲ್ಲಿ ಪ್ರಜ್ವಲಿಸುತ್ತಿರುವ ದೇವರ ಮಹಿಮೆಯ ದಿವ್ಯಜ್ಞಾನವು ನಮ್ಮಲ್ಲಿ ಉದಯಿಸುವಂತಾಗಿದೆ.

ಕೀರ್ತನೆ 85:8-9,10-11,12-13,V.9
ಶ್ಲೋಕ: ಪ್ರಭುವಿನ ಮಹಿಮೆ ನಾಡಿನಲ್ಲಿರುವುದು ನಿರುತ|

ನಾ ಕೇಳುತ್ತಿರುವೆನು, ಪ್ರಭು ಹೇಳುವುದನು|
ತನ್ನ ಜನರಿಗಾತ ನುಡಿವುದು ಶಾಂತಿಯನು||
ಭಯಭತ್ತಿಯುಳ್ಳವರಿಗಾತನ ರಕ್ಕಣೆ ಸನ್ನಿಹಿತ|
ಇದರಿಂದಾತನ ಮಹಿಮೆ ನಾಡಿನಲ್ಲಿರುವುದು ನಿರುತ||

ಪ್ರೀತಿಯೂ ಸತ್ಯವೂ ಒಂದಾನೊಂದು ಕೂಡಿರುವುವು|
ನೀತಿಯೂ ಶಾಂತಿಯೂ ಒಂದಾನೊಂದು ಚುಂಬಿಸುವುವು||
ಸತ್ಯತೆಯು ಹುಟ್ಟುವುದು ಭೂಮಿಯಿಂದ|
ನೀತಿಯು ದೃಷ್ಟಿಸುವುದು ಗಗನದಿಂದ ||

ಪ್ರಭು ಕೊಟ್ಟೇತೀರುವನು ಒಳಿತನು|
ನಮ್ಮ ನಾಡು ನೀಡುವುದು ಬೆಳೆಯನು||
ನಡೆವುದು ಪ್ರಭುವಿನ ಮುಂದೆ ನೀತಿ|
ಮಾಡುವುದು ಆತನ ಹೆಜ್ಜೆಗೆ ಹಾದಿ||

ಶುಭಸಂದೇಶ: ಮತ್ತಾಯ 5:20-26

ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ ಹೇಳಿದ್ದೇನೆಂದರೆ: "ಧರ್ಮಶಾಸ್ತ್ರಿಗಳ ಹಾಗೂ ಫರಿಸಾಯರ ಧರ್ಮನಿಷ್ಠೆಗಿಂತ ನಿಮ್ಮ ಧರ್ಮನಿಷ್ಠೆ ಉತ್ತಮವಾಗದ ಹೊರತು ನೀವು ಸ್ವರ್ಗಸಾಮ್ರಾಜ್ಯವನ್ನು. ಪ್ರವೇಶಿಸಲಾರಿರಿ ಎಂಬುದು ನಿಶ್ಚಯ. ' ನರಹತ್ಯೆ ಮಾಡುವವನು ನ್ಯಾಯತೀರ್ಪಿಗೆ ಗುರಿಯಾಗುವನು' ಎಂದು ಪೂರ್ವಿಕರಿಗೆ ಹೇಳಿದ್ದನ್ನು ನೀವು ಕೇಳಿದ್ದೀರಿ. ಆದರೆ ನಾನೀಗ ನಿಮಗೆ ಹೇಳುತ್ತೇನೆ, ಕೇಳಿ: ತನ್ನ ಸೋದರನ ಮೇಲೆ ನಿಷ್ಠಾರಣವಾಗಿ ಕೋಪಗೊಳ್ಳುವ ಪ್ರತಿಯೊಬ್ಬನೂ ನ್ಯಾಯತೀರ್ಪಿಗೆ ಈಡಾಗುವನು ; ತನ್ನ ಸೋದರನನ್ನು ತುಚ್ಛೀಕರಿಸುವವನು ನ್ಯಾಯಸಭೆಯ ವಿಚಾರಣೆಗೆ ಒಳಗಾಗುವನು ; 'ಮೂರ್ಖ' ಎಂದು ಮೂದಲಿಸುವವನು ನರಕಾಗ್ನಿಗೆ ಗುರಿಯಾಗುವನು. ಆದಕಾರಣ, ಬಲಿಪೀಠದ ಮುಂದೆ ದೇವರಿಗೆ ಕಾಣಿಕೆಯನ್ನು ಅರ್ಪಿಸಲಿರುವಾಗ, ನಿನ್ನ ಸೋದರನಿಗೆ ನಿನ್ನ ಮೇಲೆ ಏನೋ ಮನಸ್ತಾಪವಿದೆ ಎಂಬುದು ನಿನ್ನ ನೆನಪಿಗೆ ಬಂದರೆ, ನಿನ್ನ ಕಾಣಿಕೆಯನ್ನು ಆ ಬಲಿಪೀಠದ ಮುಂದೆಯೇ ಇಟ್ಟುಬಿಡು. ಮೊದಲು ಹೋಗಿ ನಿನ್ನ ಸೋದರನೊಡನೆ ಸಮಾಧಾನಮಾಡಿಕೊ ಅನಂತರ ಬಂದು ನಿನ್ನ ಕಾಣಿಕೆಯನ್ನು ಒಪ್ಪಿಸು. ನಿನ್ನ ಎದುರಾಳಿ ನಿನ್ನನ್ನು ನ್ಯಾಯಸ್ಥಾನಕ್ಕೆ ಎಳೆಯುವಾಗ ಮಾರ್ಗಮಧ್ಯದಲ್ಲೇ ಅವನೊಡನೆ ಬೇಗ ಸಂಧಾನಮಾಡಿಕೊ. ಇಲ್ಲದಿದ್ದರೆ, ಅವನು ನಿನ್ನನ್ನು ನ್ಯಾಯಧಿಪತಿಗೆ ಒಪ್ಪಿಸಬಹುದು. ನ್ಯಾಯಾಧಿಪತಿ ನಿನ್ನನ್ನು ಪೋಲೀಸರ ವಶಕ್ಕೆ ಬಿಡಬಹುದು. ಅನಂತರ ನಿನಗೆ ಸೆರೆವಾಸ ಪ್ರಾಪ್ತವಾದೀತು ! ಅಲ್ಲಿಂದ ನೀನು ಹೊರಗೆ ಬರಬೇಕಾದರೆ ಬಿಡಿಕಾಸನ್ನೂ ಬಿಡದೆ ಎಲ್ಲವನ್ನೂ ತೆರಬೇಕಾಗುವುದು. ಇದನ್ನು ನೆನಪಿನಲ್ಲಿಡು."

14.06.23

ಮೊದಲನೆಯ ವಾಚನ: 2 ಕೊರಿಂಥಿಯರಿಗೆ 3:4-11

ಕ್ರಿಸ್ತ ಯೇಸುವಿನ ಮುಖಾಂತರ ನಮಗೆ ದೇವರಲ್ಲಿ ಇಂಥ ಭರವಸೆ ಇರುವುದರಿಂದಲೇ ಇದನ್ನು ಹೇಳುತ್ತಿದ್ದೇವೆ. ನಮ್ಮ ಸ್ವಂತ ಶಕ್ತಿಯಿಂದಲೇ ಏನನ್ನೊ? ಸಾಧಿಸಿಬಿಟ್ಟಿದ್ದೇವೆ ಎಂದು ಹೇಳಿಕೊಳ್ಳುವ ಸಾಮರ್ಥ್ಯ ನಮಗಿಲ್ಲ. ನಮ್ಮ ಸಾಮರ್ಥ್ಯವೆಲ್ಲ ದೇವರಿಂದಲೇ ಬಂದುದು. ನಮಗೆ ಹೊಸ ಒಡಂಬಡಿಕೆಯ ಸೇವಕರಾಗುವಂಥ ಸಾಮರ್ಥ್ಯವನ್ನು ನೀಡಿದವರು ದೇವರೇ. ಈ ಒಡಂಬಡಿಕೆ ಲಿಖಿತ ಶಾಸನಕ್ಕೆ ಸಂಬಂಧಿಸಿದ್ದಲ್ಲ , ಪವಿತ್ರಾತ್ಮರಿಗೆ ಸಂಬಂಧಿಸಿದ್ದು. ಲಿಖಿತವಾದುದು, ಮೃತ್ಯುಕಾರಕವಾದುದು ; ಪವಿತ್ರಾತ್ಮಸಂಬಂಧವಾದುದು, ಸಜೀವದಾಯಕವಾದುದು. ಕಲ್ಲಿನ ಮೇಲೆ ಕೊರೆಯಲಾದ ಶಾಸನ ಪ್ರಕಟವಾದಾಗ ದೇವರ ಮಹಿಮೆ ಕಾಣಿಸಿಕೊಂಡಿತು. ಆಗ ಮೋಶೆಯ ಮುಖವನ್ನು ಆವರಿಸಿದ್ದ ಪ್ರಭೆ ಕುಂದಿಹೋಗುವಂಥದ್ದಾಗಿದ್ದರೂ ಆ ಪ್ರಭೆಯಿಂದಾಗಿ ಆತನ ಮುಖವನ್ನು ದಿಟ್ಟಿಸಿ ನೋಡಲು ಇಸ್ರಯೇಲರಿಗೆ ಆಗಲಿಲ್ಲ. ಮೃತ್ಯುಕಾರಕವಾದ ಈ ಶಾಸನ ಅಷ್ಟು ಮಹಿಮೆಯಿಂದ ಕೂಡಿದ್ದಾದರೆ ಪವಿತ್ರಾತ್ಮ ಚೈತನ್ಯದಿಂದ ಕೂಡಿದ ಸೇವೆಯು ಇನ್ನೆಷ್ಟು ಮಹಿಮೆಯಿಂದ ಕೂಡಿದ್ದಾದರೆ, ಸದ್ದರ್ಮಿಗಳೆಂದು ನಿರ್ಣಯಿಸುವ ಸೇವೆ ಇನ್ನೆಷ್ಟು ಮಹಿಮೆಯಿಂದ ಕೂಡಿರಬೇಕು ? ಈ ಸೇವೆಯ ಅಪರಿಮಿತ ಮಹಿಮೆಯ ಮುಂದೆ ಹಿಂದಿನ ಶಾಸನದ ಮಹಿಮೆ ಇಲ್ಲದಂತಾಗಿದೆ. ಅಳಿದು ಹೋಗುವಂಥದ್ದೇ, ಅಷ್ಟು ಮಹಿಮೆಯಿಂದ ಕೂಡಿತ್ತಾದರೆ, ಶಾಶ್ವತವಾಗಿ ಉಳಿಯುವಂಥದ್ದು ಮತ್ತೆಷ್ಟು ಮಹಿಮೆಯಿಂದ ಕೂಡಿರಬೇಕು?

ಕೀರ್ತನೆ 99:5-6,7-8,9,V.9
ಶ್ಲೋಕ: ಪರಮ ಪವಿತ್ರನು ನಮ್ಮ ದೇವನು |


ಪರಮ ಪಾವನನು ನಮ್ಮೀ ಸ್ವಾಮಿ ದೇವನು|
ಹೊಗಳಿರಿ, ಆತನ ಪಾದಪೀಠಕೆ ಅಡ್ಡಬೀಳಿರಿ ನೀವೆಲ್ಲರು||
ಪ್ರಭುವಿನ ಯಾಜಕರು, ಮೋಶೆ ಮತ್ತು ಆರೋನರು|
ಸಮುವೇಲನು ಸಹ ಆತನ ಶರಣದಲಿ ಒಬ್ಬನು|
ಪ್ರಾರ್ಥಿಸಲು ಇವರು, ಪ್ರಭುವು ಸದುತ್ತರಿಸಿದರು||

ಮೇಘಸ್ತಂಭದಲ್ಲಿದ್ದು ಅವರೊಡನೆ ಮಾತಾಡಿದನು|
ಕೈಗೊಂಡರು ಅವರು ಅವನಿತ್ತ ವಿಧಿನಿಯಮಗಳನು||
ಸ್ವಾಮಿ ದೇವಾ, ನೀನವರಿಗೆ ಸದುತ್ತರ ಪಾಲಿಸಿದೆ|
ತಪ್ಪನ್ನು ದಂಡಿಸಿದೆಯಾದರೂ ಕ್ಷಮಿಸುವ ದೇವನಾಗಿದ್ದೆ||

ಘನಪಡಿಸಿರೆಮ್ಮ ಸ್ವಾಮಿ ದೇವನನು|
ಶ್ರೀಪರ್ವತದಲಿ ವಂದಿಸಿ ಆತನನು|
ಪರಮಪವಿತ್ರನು ಆ ನಮ್ಮ ದೇವನು||

ಶುಭಸಂದೇಶ: ಮತ್ತಾಯ 5:17-19

ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ಮೋಶೆಯ ಧರ್ಮಶಾಸ್ತ್ರವನ್ನಾಗಲಿ, ಪ್ರವಾದಿಗಳ ಪ್ರವಚನಗಳನ್ನಾಗಲಿ ರದ್ದುಮಾಡಲು ನಾನು ಬಂದೆನೆಂದು ತಿಳಿಯಬೇಡಿ. ರದ್ದುಮಾಡಲು ಅಲ್ಲ, ಅವುಗಳನ್ನು ಸಿದ್ಧಿಗೆ ತರಲು ಬಂದಿದ್ದೇನೆ. ಭೂಮ್ಯಾಕಾಶಗಳು ಉಳಿದಿರುವ ತನಕ ಧರ್ಮಶಾಸ್ತ್ರವೆಲ್ಲ ನೆರವೇರುವುದೇ ಹೊರತು ಅದರಲ್ಲಿ ಒಂದು ಚಿಕ್ಕ ಅಕ್ಷರವಾಗಲಿ, ಚುಕ್ಕೆಯಾಗಲಿ ನಿರರ್ಥಕವಾಗದೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಹೀಗಿರುವಲ್ಲಿ, ಅದರ ಆಜ್ಞೆಗಳಲ್ಲಿ ಅತಿ ಚಿಕ್ಕದೊಂದನ್ನು ಮೀರುವವನು, ಮೀರುವಂತೆ ಜನರಿಗೆ ಬೋಧಿಸುವವನು, ಸ್ವರ್ಗಸಾಮ್ರಾಜ್ಯದಲ್ಲಿ ಅತ್ಯಲ್ಪನೆಂದು ಪರಿಗಣಿಗನಾಗುವನು ; ಧರ್ಮಶಾಸ್ತ್ರವನ್ನು ಪಾಲಿಸುವವನು, ಪಾಲಿಸುವಂತೆ ಜನರಿಗೆ ಬೋಧಿಸುವವನು, ಸ್ವರ್ಗಸಾಮ್ರಾಜ್ಯದಲ್ಲಿ ಮಹಾತ್ಮನೆಂದು ಪರಿಗಣಿತನಾಗುವನು."

13.06.23

ಮೊದಲನೆಯ ವಾಚನ: 2 ಕೊರಿಂಥಿಯರಿಗೆ 1:18-22

ಸಹೋದರರೇ ನಾನು ನಿಮಗೆ ಕೊಟ್ಟ ಮಾತು ದ್ವಂದ್ವಾರ್ಥವುಳ್ಳದಾಗಿರಲಿಲ್ಲ. ಇದಕ್ಕೆ ದೇವರೇ ಸಾಕ್ಷಿ. ನಾವು, ಅಂದರೆ ಸಿಲ್ವಾನ, ತಿಮೋಥೇಯ ಮತ್ತು ನಾನು, ಪ್ರಚಾರಮಾಡಿದ ದೇವರ ಪುತ್ರರಾದ ಯೇಸುಕ್ರಿಸ್ತರು, ಈ ಕ್ಷಣ ಹೌದು, ಮರುಕ್ಷಣ ಇಲ್ಲ ಎಂದು ಹೇಳುವವರಲ್ಲ , ಅವರು ದೇವರ ತಥಾಸ್ತು ಆಗಿದ್ದಾರೆ. ಏಕೆಂದರೆ, ದೇವರು ಮಾಡಿದ ಸಮಸ್ತ ವಾಗ್ದಾನಗಳಿಗೂ 'ಹೌದು' ಎಂಬ ಉತ್ತರ ಸಾಕ್ಷತ್ ಅವರೇ. ಈ ಕಾರಣದಿಂದಲೇ ನಾವು ದೇವರ ಮಹಿಮೆಯನ್ನು ಸಾರುವಾಗ ಯೇಸುಕ್ರಿಸ್ತರ ಮುಖಾಂತರವೇ 'ಆಮೆನ್' ಎನ್ನುತ್ತೇವೆ. ನಿಮ್ಮನ್ನೂ ನಮ್ಮನ್ನೂ ಕ್ರಿಸ್ತ ಯೇಸುವಿನಲ್ಲಿ ಒಂದಾಗಿಸಿ ಸ್ಥಿರಪಡಿಸಿದವರು ದೇವರೇ. ನಮ್ಮನ್ನು ಅಭಿಷೇಕಿಸಿದವರೂ, ಮೀಸಲಾಗಿಟ್ಟವರೂ ದೇವರೇ. ಅವರೇ ನಮ್ಮ ಮೇಲೆ ತಮ್ಮ ಮುದ್ರೆಯನ್ನೊತ್ತಿ, ನಮ್ಮ ಅಂತರಂಗದಲ್ಲಿ ಪವಿತ್ರಾತ್ಮ ಅವರನ್ನು ಖಾತರಿಯಾಗಿ ಇರಿಸಿದ್ದಾರೆ.

ಕೀರ್ತನೆ: 119:129-130,131-132,133,135. V.135
ಶ್ಲೋಕ: ತೋರು ನಿನ್ನ ಮುಖದರ್ಶನ ಈ ದಾಸನಿಗೆ |


ಅಪೂರ್ವವಾದ ನಿನ್ನ ಕಟ್ಟಳೆಗಳನು|
ಹೃತ್ಪೂರ್ವಕವಾಗಿ ನಾ ಪಾಲಿಸುವೆನು||
ತರುವುದು ನಿನ್ನ ವಾಕ್ಯೋಪದೇಶ|
ಸರಳ ಜನರಿಗೆ ಜ್ಞಾನಪ್ರಕಾಶ||

ಬಾಯ್ದೆರೆದು ಹಾತೊರೆಯುತಿರುವೆ|
ನಿನ್ನ ಆಜ್ಞೆಗಳನು ಅರಸುತಿರುವೆ||
ನಿನ್ನ ನಾಮಪ್ರಿಯರಿಗೆ ಮಾಡುವಂತೆ|
ನನಗಭಿಮುಖನಾಗಿ ತೋರು ನೀ ಮಮತೆ||

ನಿನ್ನ ನುಡಿಗನುಸಾರ ದೃಢಪಡಿಸು ನನ್ನ ನಡತೆಯನು|
ಕೆಡುಕೊಂದೂ ಅಧೀನಪಡಿಸದಿರಲಿ ನನ್ನನ್ನು||
ತೋರು ನಿನ್ನ ಮುಖದರ್ಶನ ಈ ದಾಸನಿಗೆ|
ನೀ ಕಲಿಸು ನಿನ್ನ ನಿಬಂಧನೆಗಳನು ಎನಗೆ||

ಘೋಷಣೆ ಕೀರ್ತನೆ 147:15
ಅಲ್ಲೆಲೂಯ, ಅಲ್ಲೆಲೂಯ!
ಧನ್ಯವಾದವಿತ್ತು ಹಾಡಿರಿ ಪ್ರಭುವನು | ಕಳಿಸುವನು ಧರೆಗೆ ತನ್ನ ಆಣತಿಯನು ||

ಶುಭಸಂದೇಶ: ಮತ್ತಾಯ 5:13-16

ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: " ಈ ಧರೆಗೆ ನೀವೇ ಉಪ್ಪು ; ಉಪ್ಪೇ ಸಪ್ಪೆಯಾಗಿಬಿಟ್ಟರೆ ಅದಕ್ಕೆ ಇನ್ನಾವುದರಿಂದ ಪುನಃ ರುಚಿ ಬಂದೀತು? ಇನ್ನು ಅದು ಕೆಲಸಕ್ಕೆ ಬಾರದ ವಸ್ತು. ಜನರು ಅದನ್ನು ಆಚೆ ಬಿಸಾಡುತ್ತಾರೆ. ದಾರಿಗರು ಅದನ್ನು ತುಳಿದುಬಿಡುತ್ತಾರಷ್ಟೆ. ಜಗತ್ತಿಗೆ ನೀವೇ ಜ್ಯೋತಿ. ಬೆಟ್ಟದ ಮೇಲಿನ ಪಟ್ಟಣವನ್ನು ಮುಚ್ಚಿಡಲಾಗದು. ಅಂತೆಯೇ ಯಾರೂ ದೀಪವನ್ನು ಹಚ್ಚಿ ಬಟ್ಟಲಿ ಕೆಳಗೆ ಬಚ್ಚಿಡುವುದಿಲ್ಲ ; ದೀಪಸ್ತಂಭದ ಮೇಲೆ ಇಡುತ್ತಾರೆ. ಆಗ ಅದು ಮನೆಯಲ್ಲಿರುವ ಎಲ್ಲರಿಗೆ ಬೆಳಕನ್ನು ಕೊಡುತ್ತದೆ. ಅದೇ ರೀತಿ ನಿಮ್ಮ ಜ್ಯೋತಿ ಜನರ ಮುಂದೆ ಬೆಳಗಲಿ ; ಹೀಗೆ ಅವರು ನಿಮ್ಮ ಸತ್ಕಾರ್ಯಗಳನ್ನು ಕಂಡು ಸ್ವರ್ಗದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡಲಿ.

12.06.23 - " ಪಾರಮಾರ್ಥಿಕವಾಗಿ ಬಡವರು ಭಾಗ್ಯವಂತರು."

ಮೊದಲನೆಯ: 2 ಕೊರಿಂಥಿಯರಿಗೆ 1:1-7


ಕೊರಿಂಥದಲ್ಲಿರುವ  ದೇವರ  ಸಭೆಗೂ  ಅಖಾಯ  ಸೀಮೆಯಲ್ಲಿರುವ  ಎಲ್ಲಾ  ದೇವಜನರಿಗೂ - ದೇವರ  ಚಿತ್ತಾನುಸಾರ  ಕ್ರಿಸ್ತ  ಯೇಸುವಿನ  ಪ್ರೇಷಿತನಾದ  ಪೌಲನು  ಸಹೋದರ  ತಿಮೊಥೇಯನೊಡನೆ  ಸೇರಿ  ಬರೆಯುವ  ಪತ್ರ.  ನಮ್ಮ  ತಂದೆಯಾದ  ದೇವರಿಂದಲೂ  ಪ್ರಭುವಾದ  ಯೇಸುಕ್ರಿಸ್ತರಿಂದಲೂ  ನಿಮಗೆ  ಆಶೀರ್ವಾದವೂ  ಶಾಂತಿಸಮಾಧಾನವೂ  ಲಭಿಸಲಿ !  ನಮ್ಮ  ಪ್ರಭು  ಯೇಸುಕ್ರಿಸ್ತರ  ತಂದೆಯಾದ  ದೇವರಿಗೆ  ಸ್ತೋತ್ರವಾಗಲಿ.   ಅವರು  ಕರುಣಾಭರಿತ  ತಂದೆ ;  ಸಕಲ  ಸಾಂತ್ವನವನ್ನೀಯುವ  ದೇವರು.  ನಮಗೆ  ಒದಗುವ  ಎಲ್ಲಾ  ಸಂಕಷ್ಟಗಳಲ್ಲಿ  ಅವರು  ನಮ್ಮನ್ನು  ಸಂತೈಸುತ್ತಾರೆ‌.   ಹೀಗೆ  ದೇವರಿಂದ  ದೊರೆತ  ಆದರಣೆಯಿಂದ  ವಿವಿಧ  ಸಂಕಷ್ಟಗಳಲ್ಲಿ  ನರಳುತ್ತಿರುವವರನ್ನು  ಸಂತೈಸುವುದಕ್ಕೆ  ನಾವು  ಶಕ್ತರಾಗುತ್ತೇವೆ.   ಕ್ರಿಸ್ತ  ಯೇಸುವಿನ  ಯಾತನೆಯು  ನಮ್ಮ  ಬಾಳಿನಲ್ಲಿ  ತುಂಬಿರುವಂತೆ  ಅವರ  ಮುಖಾಂತರ  ಲಭಿಸುವ  ಸಾಂತ್ವನವೂ  ನಮ್ಮಲ್ಲಿ  ತುಂಬಿರುತ್ತದೆ.   ನಾವು  ಕಷ್ಟಸಂಕಟಗಳನ್ನು  ಸಹಿಸಬೇಕಾಗುವುದು  ಸಹ  ನಿಮ್ಮ  ಉಪಶಮನ  ಹಾಗೂ  ಸಾಂತ್ವನಕ್ಕಾಗಿಯೇ.  ನಮ್ಮ  ಕಷ್ಟಸಂಕಟಗಳು  ನಿವಾರಣೆಯಾದರೆ  ಅದೂ  ನಿಮ್ಮ  ಆದರಣೆಗಾಗಿಯೇ.  ನೋವು  ಪಡುವ  ಯಾತನೆಯನ್ನು  ನೀವು  ಸಹನೆಯಿಂದ  ಅನುಭವಿಸುವಂತೆ  ಅದು  ಹುರಿದುಂಬಿಸುತ್ತದೆ.  ನಿಮ್ಮಲ್ಲಿ  ನಮಗೆ  ಅಚಲವಾದ  ಭರವಸೆಯಿದೆ.   ಏಕೆಂದರೆ,  ನಮ್ಮ  ಯಾತನೆಗಳಲ್ಲಿ  ನೀವು  ಪಾಲ್ಗೊಳ್ಳುವಂತೆ  ನಾವು  ಪಡೆಯುವ  ಸಾಂತ್ವನದಲ್ಲಿಯೂ  ನೀವು  ಸಹಭಾಗಿಗಳಾಗಿದ್ದೀರಿ,  ಎಂಬುದು  ನಮಗೆ  ಗೊತ್ತಿದೆ.

ಕೀರ್ತನೆ   34:2-3, 4-5, 6-7, 8-9
ಶ್ಲೋಕ:  ಸವಿದು  ನೋಡು  ಪ್ರಭುವಿನ ಮಾಧುರ್ಯವನು||

ಪ್ರಭುವನು ನಾ ಕೊಂಡಾಡುವೆ  ಎಲ್ಲ  ಕಾಲದೊಳು|
ಆತನ  ಸ್ತುತಿ  ಸದಾ  ಇಹುದು  ನನ್ನ  ಬಾಯೊಳು||
ಪ್ರಭುವಿನಲ್ಲಿದೆ  ನನ್ನ  ಮನದಭಿಮಾನ|
ದೀನರಿದನು  ಕೇಳಿ,  ಪಡೆಯಲಿ  ಸುಮ್ಮಾನ||

ಬನ್ನಿ,  ಕೊಂಡಾಡುವ  ಪ್ರಭು  ದೇವರನು|
ಘನಪಡಿಸೋಣ  ಅವನ  ಶ್ರೀನಾಮವನು||
ಬೇಡಿಕೊಳ್ಳಲು  ಕೊಟ್ಟನಾತ  ಸದುತ್ತರವನು|
ಭಯಭೀತಿಯಿಂದೆನ್ನನು  ಮುಕ್ತನಾಗಿಸಿಹನು||

ಆತನತ್ತ  ತಿರುಗಿದ  ಮುಖ  ಅರಳುವುದು|
ಲಜ್ಜೆಯಿಂದೆಂದಿಗು  ಕುಂದಿಹೋಗದು||
ನಿರ್ಗತಿಕನು  ಮೊರೆಯಿಡಲು  ಪ್ರಭು  ಕಿವಿಗೊಟ್ಟನು|
ಸರ್ವಾಪತ್ತಿನಿಂದವನು ಮುಕ್ತಗೊಂಡನು||

ಭಯಭಕುತಿಯುಳ್ಳವರ  ಸುತ್ತಲು  ಕಾವಲಿದ್ದು|
ಕಾಯುವನು  ಪ್ರಭುವಿನ  ದೂತನೇ  ಬಂದಿಳಿದು||
ಸವಿದು  ನೋಡು  ಪ್ರಭುವಿನ  ಮಾಧುರ್ಯವನು|
ಆತನನು  ಆಶ್ರಯಿಸಿಕೊಂಡವನು  ಧನ್ಯನು||

ಶುಭಸಂದೇಶ  ವಾಚನ: ಮತ್ತಾಯ 5:1-12


ಆ  ಕಾಲದಲ್ಲಿ  ಜನರ  ಗುಂಪನ್ನು  ಕಂಡ  ಯೇಸು  ಒಂದು  ಬೆಟ್ಟವನ್ನು  ಹತ್ತಿ  ಕುಳಿತುಕೊಂಡರು.
ಅವರ  ಶಿಷ್ಯರು  ಸುತ್ತಲೂ  ನೆರೆದರು.   ಆಗ  ಯೇಸು  ಇಂತೆಂದು  ಪ್ರಬೋಧಿಸಿದರು:
" ಪಾರಮಾರ್ಥಿಕವಾಗಿ  ಬಡವರು  ಭಾಗ್ಯವಂತರು ; ಸ್ವರ್ಗಸಾಮ್ರಾಜ್ಯ  ಅವರದು.
ದುಃಖಿಗಳು  ಭಾಗ್ಯವಂತರು ;  ದೇವರು  ಅವರನ್ನು  ಸಂತೈಸುವರು.
ವಿನಯಶೀಲರು  ಭಾಗ್ಯವಂತರು ;  ದೇವರ  ವಾಗ್ದತ್ತ  ನಾಡಿಗೆ  ಬಾಧ್ಯಸ್ಥರು  ಅವರು.
ನ್ಯಾಯನೀತಿಗಾಗಿ  ಹಸಿದು  ಹಾತೊರೆಯುವವರು  ಭಾಗ್ಯವಂತರು;
ದೇವರು  ಅವರಿಗೆ  ತೃಪ್ತಿಯನ್ನೀಯುವರು.
ದಯಾವಂತರು  ಭಾಗ್ಯವಂತರು ; ದೇವರ  ದಯೆ  ಅವರಿಗೆ  ದೊರಕುವುದು.
ನಿರ್ಮಲ  ಹೃದಯಿಗಳು  ಭಾಗ್ಯವಂತರು ;  ಅವರು  ದೇವರನ್ನು  ಕಾಣುವರು.
ಶಾಂತಿಗಾಗಿ  ಶ್ರಮಿಸುವವರು  ಭಾಗ್ಯವಂತರು;  ಅವರು  ದೇವರ  ಮಕ್ಕಳೆನಿಸಿಕೊಳ್ಳುವರು.  
ನ್ಯಾಯನೀತಿಯ  ನಿಮಿತ್ತ  ಹಿಂಸೆಯನ್ನು  ತಾಳುವವರು  ಭಾಗ್ಯವಂತರು;  ಸ್ವರ್ಗಸಾಮ್ರಾಜ್ಯ  ಅವರದು.
ನನ್ನ  ಶಿಷ್ಯರು  ನೀವಾದ್ದರಿಂದ  ಜನರು  ನಿಮ್ಮನ್ನು  ಧಿಕ್ಕರಿಸುವರು,  ಹಿಂಸಿಸುವರು,  ಅನ್ಯಾಯವಾಗಿ  ಇಲ್ಲಸಲ್ಲದ್ದನ್ನು  ನಿಮ್ಮ  ಮೇಲೆ  ಹೊರಿಸುವರು;  ಆಗ  ನೀವು  ಭಾಗ್ಯವಂತರು.
ಅದಕ್ಕಾಗಿ  ಹರ್ಷಿಸಿ  ಆನಂದಪಡಿ;  ಏಕೆಂದರೆ  ಸ್ವರ್ಗದಲ್ಲಿ  ನಿಮಗೆ  ಸಿಗುವ  ಪ್ರತಿಫಲ  ಹಿರಿದು.   ನಿಮಗಿಂತ  ಮೊದಲಿದ್ದ  ಪ್ರವಾದಿಗಳನ್ನೂ  ಜನರು  ಹೀಗೆಯೇ  ಚಿತ್ರಹಿಂಸೆಗೆ  ಒಳಪಡಿಸಿದರು."

11.06.23 - " ನನ್ನ ಮಾಂಸವೇ ನಿಜವಾದ ಆಹಾರ; ನನ್ನ ರಕ್ತವೇ ನಿಜವಾದ ಪಾನ."

ಮೊದಲನೆಯ ವಾಚನ: ಧರ್ಮೋಪದೇಶಕಾಂಡ 8:2-3, 14-16

ಮೋಶೆ ಇಸ್ರಯೇಲರನ್ನು ಕರೆದು ಅವರಿಗೆ ಹೀಗೆಂದು ಹೇಳಿದನು: " ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಈ ನಲವತ್ತು ವರ್ಷ ಮರುಭೂಮಿಯಲ್ಲಿ ನಡೆಸಿದ್ದನ್ನು ಹಾಗೂ ನೀವು ಅವರ ಆಜ್ಞೆಗಳನ್ನು ಕೈಕೊಳ್ಳುವವರೋ ಅಲ್ಲವೋ ಎಂದು ತಿಳಿದುಕೊಳ್ಳುವುದಕ್ಕೆ ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ ನಿಮ್ಮ ಮನೋಭಾವವನ್ನು ಪರೀಕ್ಷಿಸಿದ್ದನ್ನು ನೆನಪಿಗೆ ತಂದುಕೊಳ್ಳಿರಿ. ಮಾನವರು ಆಹಾರ ಮಾತ್ರದಿಂದಲ್ಲ. ಸರ್ವೇಶ್ವರ ಆಡುವ ಪ್ರತಿಯೊಂದು ನುಡಿಯಿಂದಲೂ ಜೀವಿಸುತ್ತಾರೆ ಎಂಬುದು ನಿಮಗೆ ತಿಳಿಯುವಂತೆ ಅವರು ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿದರು. ಹಸಿವೆಯಿಂದ ಬಳಲಿಸಿದರು. ನಿಮಗೂ ನಿಮ್ಮ ಪೂರ್ವಿಕರಿಗೂ ಗೊತ್ತಿಲ್ಲದ ಮನ್ನವನ್ನು ಕೊಟ್ಟು ಪೋಷಿಸಿದರು. ನೀವು ಗರ್ವಗೊಂಡು ನಿಮ್ಮ ದೇವರಾದ ಸರ್ವೇಶ್ವರನನ್ನು ಮರೆತುಬಿಟ್ಟೀರಿ ! ಅವರು ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ ಪರೀಕ್ಷಿಸಿದ ನಂತರ ನಿಮಗೆ ಒಳಿತನ್ನು ಉಂಟುಮಾಡಬೇಕೆಂಬ ಉದ್ದೇಶದಿಂದ ಈಜಿಪ್ಟ್ ದೇಶದಲ್ಲಿ ಗುಲಾಮರಾಗಿದ್ದ ನಿಮ್ಮನ್ನು ಬಿಡುಗಡೆ ಮಾಡಿದರು. ವಿಷಸರ್ಪಗಳೂ ಚೇಳುಗಳೂ ಇದ್ದ ಆ ಘೋರವಾದ ಮಹಾಮರುಭೂಮಿಯನ್ನೂ ನೀರು ಬತ್ತಿಹೋಗಿದ್ದ ಭೂಮಿಗಳನ್ನೂ ದಾಟಿಸಿದರು; ಗಟ್ಟಿಯಾದ ಬಂಡೆಯೊಳಗಿಂದ ನೀರನ್ನು ಹೊರಡಿಸಿಕೊಟ್ಟರು. ನಿಮ್ಮ ಪೂರ್ವಿಕರಿಗೆ ತಿಳಿಯದೆ ಇದ್ದ ಮನ್ನವನ್ನು ಕೊಟ್ಟು ಪೋಷಿಸಿದರು.

ಕೀರ್ತನೆ 147:12-15, 19-20
ಶ್ಲೋಕ: ಜೆರುಸಲೇಮೇ, ಕೀರ್ತಿಸು ಪ್ರಭುವನು ||


ಜೆರುಸಲೇಮೇ, ಕೀರ್ತಿಸು ಪ್ರಭುವನು|
ಸಿಯೋನೇ, ಸ್ತುತಿಸು ನಿನ್ನ ದೇವರನು||
ಬಲಪಡಿಸುವನಾತ ನಿನ್ನ ಹೆಬ್ಬಾಗಿಲುಗಳನು|
ಆಶೀರ್ವದಿಸಿಹನು ನಿನ್ನಲ್ಲಿರುವ ಮಕ್ಕಳನು||

ನಿನ್ನ ಪ್ರಾಂತದೊಳಗೆಲ್ಲ ಇರುವುದು ನೆಮ್ಮದಿ|
ನೀಡುವನು ನಿನಗೆ ಅತ್ಯುತ್ತಮ ಗೋಧಿ||
ಕಳುಹಿಸುವನು ಧರೆಗೆ ತನ್ನ ಆಣತಿ|
ಸಿದ್ಧಿಯಾಗುವುದು ಬಲು ಶೀಘ್ರದಿ||

ತಿಳಿಸುವನು ವಾಕ್ಯವನು ಯಕೋಬ್ಯರಿಗೆ|
ತನ್ನ ವಿಧಿನಿಯಮಗಳನು ಇಸ್ರಾಯೇಲರಿಗೆ||
ಬೇರಾವ ಜನಾಂಗಕೂ ಆತ ಹೀಗೆ ಮಾಡಿಲ್ಲ|
ಆತನ ವಿಧಿನಿಯಮಗಳನು ಅವರಿಗೆ ತಿಳಿಸಿಲ್ಲ||

ಎರಡನೆಯ: 1 ಕೊರಿಂಥಿಯರಿಗೆ 10:16-17

ಸಹೋದರರೇ, ನಾವು ದೇವರಿಗೆ ಕೃತಜ್ಞತಾ ಸ್ತೋತ್ರವನ್ನು ಸಲ್ಲಿಸಿ ಪಾನಪಾತ್ರೆಯಿಂದ ಕುಡಿಯುವಾಗ ಕ್ರಿಸ್ತಯೇಸುವಿನ ರಕ್ತದಲ್ಲಿ ಪಾಲುಗೊಳ್ಳುತ್ತೇವಲ್ಲವೇ? ರೊಟ್ಟಿಯನ್ನು ಮುರಿದು ತಿನ್ನುವಾಗ ಕ್ರಿಸ್ತಯೇಸುವಿನ ಶರೀರದಲ್ಲಿ ಪಾಲುಗೊಳ್ಳುತ್ತೇವಲ್ಲವೇ? ರೊಟ್ಟಿ ಒಂದೇ; ಆದ್ದರಿಂದ ನಾವು ಅನೇಕರಿದ್ದರೂ ಒಂದೇ ಶರೀರವಾಗುತ್ತೇವೆ. ಏಕೆಂದರೆ ನಾವೆಲ್ಲರೂ ಆ ಒಂದೇ ರೊಟ್ಟಿಯಲ್ಲಿ ಭಾಗಿಗಳಾಗುತ್ತೇವೆ.

ಶುಭಸಂದೇಶ: ಯೊವಾನ್ನ 6:51-58

ಆ ಕಾಲದಲ್ಲಿ ಯೇಸು ಜನರಿಗೆ ಬೋಧಿಸುತ್ತಾ, " ನಾನೇ ಸ್ವರ್ಗದಿಂದ ಇಳಿದು ಬಂದ ಜೀವಂತ ರೊಟ್ಟಿ. ಈ ರೊಟ್ಟಿಯನ್ನು ತಿಂದವನು ಚಿರಕಾಲ ಬಾಳುತ್ತಾನೆ. ಲೋಕೋದ್ಧಾರಕ್ಕಾಗಿ ನಾನು ಅರ್ಪಿಸುವ ನನ್ನ ಮಾಂಸವೇ ನಾನು ಕೊಡುವ ರೊಟ್ಟಿ, " ಎಂದು ಹೇಳಿದರು. ಅಷ್ಟಕ್ಕೆ ಆ ಯೆಹೂದ್ಯರಲ್ಲಿ ತೀವ್ರ ವಾಗ್ದಾದ ಉಂಟಾಯಿತು. "ಈತನು ತನ್ನ ಮಾಂಸವನ್ನು ತಿನ್ನಲು ಹೇಗೆ ಕೊಟ್ಟಾನು? " ಎಂದು ಕೇಳತೊಡಗಿದರು. ಅದಕ್ಕೆ ಯೇಸು, " ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನೀವು ನರಪುತ್ರನ ಮಾಂಸವನ್ನು ತಿನ್ನದೆ, ಆತನ ರಕ್ತವನ್ನು ಕುಡಿಯದೆ ಹೋದರೆ ನಿಮ್ಮಲ್ಲಿ ಜೀವ ಇರುವುದಿಲ್ಲ. ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನಲ್ಲಿ ನಿತ್ಯಜೀವ ಇರುತ್ತದೆ. ಅಲ್ಲದೆ ಅಂತಿಮ ದಿನದಂದು ನಾನು ಅವನನ್ನು ಜೀವಕ್ಕೆ ಎಬ್ಬಿಸುತ್ತೇನೆ. ನನ್ನ ಮಾಂಸವೇ ನಿಜವಾದ ಆಹಾರ; ನನ್ನ ರಕ್ತವೇ ನಿಜವಾದ ಪಾನ. ನನ್ನ ಮಾಂಸವನ್ನು ತಿಂದು, ನನ್ನ ರಕ್ತವನ್ನು ಕುಡಿಯುವವನು ನನ್ನಲ್ಲಿ ನೆಲಸಿರುತ್ತಾನೆ. ನಾನು ಅವನಲ್ಲಿ ನೆಲೆಸಿರುತ್ತೇನೆ. ಜೀವಸ್ವರೂಪಿ ಆದ ಪಿತನು ನನ್ನನ್ನು ಕಳುಹಿಸಿಕೊಟ್ಟಿರುವರು. ನಾನು ಅವರಿಂದಲೇ ಜೀವಿಸುತ್ತೇನೆ. ಅಂತೆಯೇ ನನ್ನನ್ನು ಭುಜಿಸುವವನು ನಿನ್ನಿಂದಲೇ ಜೀವಿಸುತ್ತಾನೆ. ಸ್ವರ್ಗದಿಂದ ಇಳಿದು ಬಂದ ರೊಟ್ಟಿ ಇದೇ. ನಿಮ್ಮ ಪೂರ್ವಜರು 'ಮನ್ನಾ'ವನ್ನು ತಿಂದರೂ ಸಾವಿಗೆ ತುತ್ತಾದರು. ಇದು ಹಾಗಲ್ಲ, ಈ ರೊಟ್ಟಿಯನ್ನು ತಿನ್ನುವವನು ಚಿರಕಾಲ ಬಾಳುವನು, " ಎಂದು ಹೇಳಿದರು.

10.06.23 - "ಇವರನ್ನು ದೇವರು ಬಹಳ ಕಠಿಣವಾದ ದಂಡನೆಗೆ ಗುರಿಪಡಿಸುವರು"

ಮೊದಲನೇ ವಾಚನ: ತೊಬೀತ 12:1, 5-15, 20

ವಿವಾಹ ಮಹೋತ್ಸವ ಮುಗಿದ ಮೇಲೆ ತೊಬೀತನು ತನ್ನ ಮಗ ತೊಬಿಯಾಸನನ್ನು ಕರೆದು, “ಮಗನೇ, ನಿನ್ನ ಸಹಪ್ರಯಾಣಿಕನಿಗೆ ಸಲ್ಲಿಸಬೇಕಾದ ಹಣವನ್ನು ಗಮನಿಸು; ಒಪ್ಪಿಕೊಂಡದ್ದಕ್ಕೂ ಹೆಚ್ಚಾಗಿ ಕೊಡು,” ಎಂದು ಆಜ್ಞಾಪಿಸಿದನು. ಅಂತೆಯೇ ತೊಬಿಯಾಸನು ರಫಯೇಲನನ್ನು ಕರೆದು, “ಇಗೋ, ನೀನು ತಂದಿರುವ ಎಲ್ಲಾ ವಸ್ತುಗಳಲ್ಲಿ ಅರ್ಧಭಾಗವನ್ನು ಸಂಭಾವನೆಯಾಗಿ ತೆಗೆದುಕೊ, ಸಂತೋಷದಿಂದ ಹೋಗಿ ಬಾ,” ಎಂದನು. ದಾನವೇ ಧರ್ಮದ ಮೂಲ ಆಗ ರಫಯೇಲನು ತಂದೆ ಮಗ ಇಬ್ಬರನ್ನೂ ಪಕ್ಕಕ್ಕೆ ಕರೆದು, ಇಂತೆಂದನು: “ಎಲ್ಲಾ ಜೀವಿಗಳ ಮುಂದೆ ದೇವರು ನಿಮಗೆ ಮಾಡಿರುವ ಸಕಲ ಉಪಕಾರಗಳಿಗಾಗಿ ಕೃತಜ್ಞತಾಸ್ತುತಿಯನ್ನು ಸಲ್ಲಿಸಿರಿ. ಅವರ ನಾಮವನ್ನು ಭಜಿಸಿ ಹಾಡಿರಿ. ದೇವರ ಮಹತ್ಕಾರ್ಯಗಳನ್ನು ಎಲ್ಲಾ ಜನರಿಗೆ ಪ್ರಕಟಿಸಿರಿ. ಅವರಿಗೆ ವಂದನೆಯನ್ನು ಸಲ್ಲಿಸುವುದರಲ್ಲಿ ಹಿಂದಾಗಬೇಡಿ. “ರಾಜರುಗಳ ಗುಟ್ಟನ್ನು ಬಚ್ಚಿಡುವುದು ಸರಿಯಷ್ಟೆ. ಆದರೆ, ದೇವರ ಮಹತ್ಕಾರ್ಯಗಳನ್ನು ಒಪ್ಪಿಕೊಂಡು ತಕ್ಕ ಮರ್ಯಾದೆಯಿಂದ ಪ್ರಕಟಿಸುವುದು ಉಚಿತ. ಒಳಿತನ್ನು ಮಾಡುವವರ ಮೇಲೆ ಕೆಡುಕು ಜಯಗಳಿಸದು. “ಜಪತಪ, ಉಪವಾಸವ್ರತ ಇದೆಲ್ಲಾ ಒಳ್ಳೆಯದೇ. ಆದರೆ ನ್ಯಾಯನೀತಿ, ದಾನಧರ್ಮ ಅದಕ್ಕಿಂತಲೂ ಮೇಲಾದುದು! ಅನ್ಯಾಯದಿಂದ ಕೂಡಿದ ಅತುಳೈಶ್ವರ್ಯಕ್ಕಿಂತ ನೀತಿಯಿಂದ ಕೂಡಿದ ಕಿಂಚಿತ್ತು ಲೇಸು. ಬೆಳ್ಳಿಬಂಗಾರವನ್ನು ಕೂಡಿಸಿಡುವುದಕ್ಕಿಂತ ದಾನಧರ್ಮ ಮಾಡುವುದು ಲೇಸು. ಏಕೆಂದರೆ ದಾನಧರ್ಮವು ಮರಣದಿಂದ ರಕ್ಷಿಸುತ್ತದೆ, ಪಾಪದಿಂದ ಶುದ್ಧೀಕರಿಸುತ್ತದೆ. ದಾನಮಾಡುವವರ ಜೀವನ ಸೌಭಾಗ್ಯ ತುಂಬಿದ ಜೀವನ. ಪಾಪಮಾಡುವವರು, ಕೇಡುಮಾಡುವವರು ತಮಗೆ ತಾವೇ ಕಟು ವಿರೋಧಿಗಳು. “ನಾನೀಗ ನಿಮಗೆ ಮುಚ್ಚುಮರೆ ಇಲ್ಲದೆ ಸತ್ಯಾಂಶವನ್ನು ಬಯಲು ಮಾಡುತ್ತೇನೆ. ಈಗಾಗಲೇ ನಾನು ನಿಮಗೆ ಸ್ಪಷ್ಟಪಡಿಸಿರುವಂತೆ, ರಾಜನ ಗುಟ್ಟನ್ನು ಬಚ್ಚಿಡುವುದೇನೋ ಸರಿಯಷ್ಟೆ. ಆದರೆ ದೇವರ ಮಹತ್ಕಾರ್ಯಗಳನ್ನು ತಕ್ಕ ಮರ್ಯಾದೆಯಿಂದ ಪ್ರಕಟಿಸಬೇಕು. ಅಂತೆಯೇ, ನೀನೂ ಮತ್ತು ಸಾರಲೂ ಪ್ರಾರ್ಥನೆ ಮಾಡಿದಾಗ, ಸತ್ತವರನ್ನು ನೀನು ಸಮಾಧಿ ಮಾಡಿದಾಗ, ಮಹಿಮಾಭರಿತ ಸರ್ವೇಶ್ವರನ ಸಮ್ಮುಖದಲ್ಲಿ ಅದನ್ನು ವರದಿಮಾಡಿದವನು ನಾನೇ. ಅಂತೆಯೇ ನಿನ್ನ ಊಟವನ್ನು ಬಿಟ್ಟು, ಎದ್ದು ಹೋಗಿ ಸತ್ತವನನ್ನು ಸಮಾಧಿಮಾಡಿದಾಗ ನಿನ್ನನ್ನು ಪರೀಕ್ಷಿಸಲು ಕಳುಹಿಸಲಾದವನು ನಾನೇ. ಅದೇ ಪ್ರಕಾರ, ನಿನ್ನನ್ನೂ ನಿನ್ನ ಸೊಸೆ ಸಾರಳನ್ನೂ ಗುಣಪಡಿಸಲು ದೇವರೇ ನನ್ನನ್ನು ಕಳುಹಿಸಿದರು. ನಾನೇ ರಫಯೇಲ್. ಮಹಿಮಾಭರಿತ ಸರ್ವೇಶ್ವರನ ಸಮ್ಮುಖದಲ್ಲಿ ಸೇವಾರ್ಥಿಗಳಾಗಿ ಸಿದ್ಧರಿರುವ ಏಳು ದೂತರಲ್ಲಿ ನಾನೂ ಒಬ್ಬನು,” ಎಂದನು. ಈಗ ನೀವು ಮೇಲಕ್ಕೆದ್ದು ದೇವರಲ್ಲಿ ನಂಬಿಕೆಯಿಡಿ; ವಿಶ್ವಾಸವಿಡಿ. ನೋಡಿ, ನನ್ನನ್ನು ಇಲ್ಲಿಗೆ ಕಳುಹಿಸಿದವರ ಬಳಿಗೆ ನಾನು ಏರಿ ಹೋಗುತ್ತಿದ್ದೇನೆ. ನಿಮಗೆ ಸಂಭವಿಸಿದ್ದ ಎಲ್ಲವನ್ನು ಬರೆದಿಡಿ.” ಇಷ್ಟನ್ನು ಹೇಳಿ ರಫಯೇಲನು ಮೇಲಕ್ಕೆ ಏರಿಹೋದನು.

ಕೀರ್ತನೆ: 13:2, 6, 8
ಶ್ಲೋಕ: ಚಿರಂಜೀವಿಯಾದ ಸರ್ವೇಶವರನಿಗೆ ಸ್ತುತಿಸ್ತೋತ್ರ

ಶಿಕ್ಷಿಸುವವನೂ ಕ್ಷಮಿಸುವವನೂ ಆತನೇ
ಪಾತಾಳಕ್ಕಿಳಿಸುವವನೂ ಮೇಲಕ್ಕೆತ್ತುವವನೂ ಆತನೇ
ಆತನ ಕೈಯಿಂದ ತಪ್ಪಿಸಿಕೊಳ್ಳುವವನು ಯಾವನಿದ್ದಾನೆ? ಶ್ಲೋಕ

ಅಭಿಮುಖರಾದರೆ ನೀವು ಪೂರ್ಣ ಹೃದಯದಿಂದ ಪೂರ್ಣಪ್ರಾಣದಿಂದ
ನಡೆದರೆ ಆತನ ಸಮ್ಮುಖದಲ್ಲಿ ಸತ್ಯತೆಯಿಂದ,
ಮರೆಮಾಚಿಕೊಳ್ಳನಾತ ಮುಖವನ್ನು ನಿಮ್ಮಿಂದ. ಶ್ಲೋಕ

ಸ್ತುತಿಸಿರಿ ಸತ್ಯಸ್ವರೂಪಿಯಾದ ಸರ್ವೇಶ್ವರನನು
ಯುಗಯುಗಾಂತರಕ್ಕೂ ಆಳುವ ಅರಸನನು.
ದೇವರ ಮಹಿಮಾಸ್ತುತಿ ಇರಲಿ ಸರ್ವರ ಬಾಯಲಿ,
ನಾನಾತನ ಭಕ್ತನು ಗಡಿಪಾರಾದ ಈ ನಾಡಿನಲಿ. ಶ್ಲೋಕ

ಶುಭಸಂದೇಶ: ಮಾರ್ಕ 12:38-44


ಜನಸಮೂಹವು ಸಂತಸಚಿತ್ತದಿಂದ ಯೇಸುಸ್ವಾಮಿಯ ಮಾತುಗಳನ್ನು ಆಲಿಸುತ್ತಿತ್ತು. ಯೇಸು ತಮ್ಮ ಉಪದೇಶವನ್ನು ಮುಂದುವರಿಸುತ್ತಾ, “ಧರ್ಮಶಾಸ್ತ್ರಿಗಳ ಬಗ್ಗೆ ಎಚ್ಚರಿಕೆ! ಅವರು ನಿಲುವಂಗಿಗಳನ್ನು ಧರಿಸಿಕೊಂಡು ತಿರುಗಾಡುತ್ತಾರೆ; ಪೇಟೆ ಬೀದಿಗಳಲ್ಲಿ ವಂದನೋಪಚಾರಗಳನ್ನೂ ಪ್ರಾರ್ಥನಾ ಮಂದಿರಗಳಲ್ಲಿ ಉನ್ನತ ಆಸನಗಳನ್ನೂ ಔತಣ ಸಮಾರಂಭಗಳಲ್ಲಿ ಶ್ರೇಷ್ಠಸ್ಥಾನಗಳನ್ನೂ ಅಪೇಕ್ಷಿಸುತ್ತಾರೆ. ವಿಧವೆಯರ ಮನೆಮಾರುಗಳನ್ನು ದೋಚಿಕೊಳ್ಳುವ ಈ ಜನ ನಟನೆಗಾಗಿ ದೀರ್ಘವಾಗಿ ಜಪತಪಗಳನ್ನು ಮಾಡುತ್ತಾರೆ. ಇವರನ್ನು ದೇವರು ಬಹಳ ಕಠಿಣವಾದ ದಂಡನೆಗೆ ಗುರಿಪಡಿಸುವರು,” ಎಂದರು. ಯೇಸುಸ್ವಾಮಿ ದೇವಾಲಯದಲ್ಲಿ ಕಾಣಿಕೆ ಪೆಟ್ಟಿಗೆಗಳಿಗೆ ಎದುರಾಗಿ ಕುಳಿತಿದ್ದರು. ಜನರು ಅದರಲ್ಲಿ ಹಣಹಾಕುವ ರೀತಿ ಅವರ ಕಣ್ಣಿಗೆ ಬಿತ್ತು. ಧನವಂತರನೇಕರು ಹೆಚ್ಚು ಹೆಚ್ಚು ಹಣವನ್ನು ಹಾಕುತ್ತಿದ್ದರು. ಅಷ್ಟರಲ್ಲಿ ಬಡ ವಿಧವೆ ಒಬ್ಬಳು ಅಲ್ಲಿಗೆ ಬಂದಳು. ತಾಮ್ರದ ಚಿಕ್ಕ ನಾಣ್ಯಗಳೆರಡನ್ನು ಕಾಣಿಕೆಯಾಗಿ ಹಾಕಿದಳು. ಆಗ ಯೇಸು ತಮ್ಮ ಶಿಷ್ಯರನ್ನು ಕರೆದು, “ಕಾಣಿಕೆ ಪೆಟ್ಟಿಗೆಯಲ್ಲಿ ಹಣ ಹಾಕಿದ ಎಲ್ಲರಿಗಿಂತಲೂ ಈ ವಿಧವೆ ಹೆಚ್ಚಾಗಿ ಅರ್ಪಿಸಿದಳು ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ; ಇವರೆಲ್ಲರೂ ತಮ್ಮ ಅಪರಿಮಿತ ಐಶ್ವರ್ಯದಿಂದ ಕಾಣಿಕೆಯಿತ್ತರು. ಈಕೆಯಾದರೋ ತನ್ನ ಕಡುಬಡತನದಲ್ಲೂ ತನ್ನಲ್ಲಿ ಇದ್ದುದೆಲ್ಲವನ್ನು ಅರ್ಪಿಸಿದಳು; ತನ್ನ ಜೀವನಾಧಾರವನ್ನೇ ಕೊಟ್ಟುಬಿಟ್ಟಳು,” ಎಂದರು.

09.06.23

ಮೊದಲನೇ ವಾಚನ: ತೊಬೀತ 11: 5-15

ಇತ್ತ ಅನ್ನಳು, ಮಗನು ಬರುವ ದಾರಿಯನ್ನೇ ಕಾಯುತ್ತ ಕುಳಿತಿದ್ದಳು. ತೊಬಿಯಾಸನು ಬರುತ್ತಿರುವುದನ್ನು ಕಂಡಕೂಡಲೇ ತೊಬೀತನಿಗೆ, “ಇಗೋ, ನಮ್ಮ ಮಗ ಬರುತ್ತಿದ್ದಾನೆ. ಅವನೊಡನೆ ಹೋಗಿದ್ದ ವ್ಯಕ್ತಿ ಸಹ ಬರುತ್ತಿದ್ದಾನೆ,” ಎಂದಳು. ಮನೆಯನ್ನು ಸೇರುವ ಮುಂಚೆ ರಫಯೇಲನು ತೊಬಿಯಾಸನಿಗೆ, “ನಿನ್ನ ತಂದೆಯ ಕಣ್ಣುಗಳು ತೆರೆಯುವುವು. ಮೀನಿನ ಪಿತ್ತರಸವನ್ನು ಅವನ ಕಣ್ಣುಗಳಿಗೆ ಹಚ್ಚು. ಈ ಔಷಧ ಅವನ ಕಣ್ಣುಗಳ ಬಿಳಿ ಮಚ್ಚೆಯನ್ನು ಒಣಗಿಸಿ, ಸುಲಿದುಬಿಡುತ್ತದೆ. ನಿನ್ನ ತಂದೆ ದೃಷ್ಟಿಪಡೆದು ಬೆಳಕನ್ನು ನೋಡುವನು,” ಎಂದನು. ತೊಬೀತನಿಗೆ ಮರುಕಳಿಸಿದ ದೃಷ್ಟಿ ತೊಬೀತನು ತಡವರಿಸುತ್ತಾ ಅಂಗಳದ ಬಾಗಿಲಿನ ಹೊರಗೆ ಬಂದನು. ತೊಬಿಯಾಸನು ಅವನ ಬಳಿಗೆ ಧಾವಿಸಿದನು. (ಮೀನಿನ ಪಿತ್ತರಸ ಅವನ ಕೈಯಲ್ಲಿತ್ತು). ತಂದೆಯನ್ನು ಬಿಗಿಯಾಗಿ ಹಿಡಿದು ಅವನ ಕಣ್ಣುಗಳನ್ನು ಊದಿ, “ಅಪ್ಪಾ, ಧೈರ್ಯವಾಗಿರು” ಎಂದು ಹೇಳಿ, ಕಣ್ಣುಗಳಿಗೆ ಆ ಔಷಧವನ್ನು ಹಚ್ಚಿದನು. ಅವನ ಕಣ್ಣುಗಳು ಉರಿಯತೊಡಗಿದವು. ಅನಂತರ ತನ್ನ ಎರಡು ಕೈಗಳಿಂದ ಆ ಬಿಳಿಮಚ್ಚೆಯನ್ನು ಅವನ ಕಣ್ಣುಗಳ ಕೊನೆಯಿಂದ ಸುಲಿದುಬಿಟ್ಟನು. ಆಗ ತೊಬೀತನಿಗೆ ಕಣ್ಣು ಕಾಣಿಸಿತು. ಅವನು ಮಗನನ್ನು ಎರಡು ಕೈಗಳಿಂದ ತಬ್ಬಿಕೊಂಡು ಅಳುತ್ತಾ, “ಮಗನೇ, ನನ್ನ ಕಣ್ಣುಗಳಿಗೆ ನೀನು ಕಾಣಿಸುತ್ತಿದ್ದಿಯೇ; ನೀನೇ ನನ್ನ ಕಣ್ಣುಗಳಿಗೆ ಬೆಳಕು!” ಎಂದನು. ಅನಂತರ ಹೀಗೆ ನುಡಿದನು: “ದೇವರಿಗೆ ಸ್ತುತಿಸ್ತೋತ್ರ! ಅವರ ಮಹಿಮಾ ನಾಮ ಪೂಜಿತ ಅವರ ಪೂಜ್ಯ ದೂತರೆಲ್ಲರಿಗೆ ಸ್ತೋತ್ರ! ಯುಗಯುಗಾಂತರಕ್ಕೂ ಅವರ ಶ್ರೀನಾಮ ಪೂಜಿತ. “ಅವರೆನಗೆ ನೀಡಿದ್ದರು ಯಾತನೆ ಈಗಲಾದರೂ ತೋರಿದರು ಕರುಣೆ ಕಾಣುತ್ತಿರುವನು ನನ್ನ ಮಗ ತೊಬಿಯನೆ!” ಹೀಗೆ ತೊಬೀತನು ಸಂತೋಷದಿಂದ ಘಂಟಾಘೋಷವಾಗಿ ದೇವರನ್ನು ಸ್ತುತಿಸುತ್ತಾ ಮನೆಯೊಳಕ್ಕೆ ಹೋದನು. ತೊಬಿಯಾಸನು ತನ್ನ ಪ್ರಯಾಣ ಯಶಸ್ವಿಯಾದುದನ್ನು ಕುರಿತು ವರದಿ ಮಾಡಿದನು. ತಾನು ಹಣವನ್ನು ಮರಳಿ ತಂದುದು ಮಾತ್ರವಲ್ಲ, ಸಾರಳೊಡನೆ ಮದುವೆಯಾದುದು ಹಾಗೂ ಆಕೆ ನಿನೆವೆ ನಗರದ ಬಾಗಿಲ ಬಳಿ ಬರುತ್ತಿರುವುದು, ಇದೆಲ್ಲದರ ಬಗ್ಗೆ ವಿವರಿಸಿದನು.


ಕೀರ್ತನೆ: 146: 1-2, 6-7, 8-10
ಶ್ಲೋಕ: ನನ್ನ ಮನವೇ, ಪ್ರಭುವನು ವಂದಿಸು.

ಪ್ರಭುವಿಗೆ ಸ್ತುತಿಸ್ತೋತ್ರ
ಮನವೇ, ವಂದಿಸು ಆತನನು
ಪ್ರಾಣವಿರುವವರೆಗೆ ಸ್ತುತಿಸುವೆನು ಪ್ರಭುವನು
ಬಾಳೆಲ್ಲ ಹಾಡಿ ಭಜಿಪೆನು ನನ್ನ ದೇವರನು. ಶ್ಲೋಕ

ಕೊಟ್ಟ ವಾಗ್ದಾನಗಳನು ತಪ್ಪದೆ ನೆರವೇರಿಸುವವ ಆತನೆ
ದೊರಕಿಸುವನು ನ್ಯಾಯ ದಲಿತರಿಗೆ
ಒದಗಿಸುವನು ಆಹಾರ ಹಸಿದವರಿಗೆ
ನೀಡುವನು ಬಿಡುಗಡೆ ಬಂಧಿತರಿಗೆ. ಶ್ಲೋಕ

ಕಣ್ಣನ್ನೀಯುವನು ಪ್ರಭು ಕುರುಡರಿಗೆ
ಉದ್ಧಾರಕನಾ ಪ್ರಭು ಕುಗ್ಗಿದವರಿಗೆ
ರಕ್ಷಿಸುವನು ಪ್ರಭು ಪರದೇಶಿಗಳನು
ಆದರಿಸುವನು ಅನಾಥರನು, ವಿಧವೆಯರನು. ಶ್ಲೋಕ

ಆತನ ಒಲವಿರುವುದು ಸಾಧು ಸಜ್ಜನರಿಗೆ
ನಿರ್ಮೂಲ ಮಾಡುವನು ದುರ್ಜನರ ಮಾರ್ಗವನು
ಪ್ರಭುವೇ ಅರಸನು ಸದಾಕಾಲಕು
ಸಿಯೋನ್, ನಿನ್ನ ದೇವನಾಳ್ವನು ತಲತಲಾಂತರಕು. ಶ್ಲೋಕ

ಶುಭಸಂದೇಶ: ಮಾರ್ಕ 12: 35-37

ಬಳಿಕ ಯೇಸುಸ್ವಾಮಿ ಮಹಾದೇವಾಲಯದಲ್ಲಿ ಉಪದೇಶಮಾಡುತ್ತಾ ಈ ಪ್ರಶ್ನೆ ಎತ್ತಿದರು: “ಅಭಿಷಿಕ್ತನಾದ ಲೋಕೋದ್ಧಾರಕನನ್ನು ಧರ್ಮಶಾಸ್ತ್ರಿಗಳು ‘ದಾವೀದನ ಪುತ್ರ’ ಎಂದು ಕರೆಯುತ್ತಾರಲ್ಲ! ಅದು ಹೇಗಾದೀತು? ‘ನಿನ್ನ ಶತ್ರುಗಳನ್ನು ನಾನು ನಿನ್ನ ಪಾದದಡಿ ಹಾಕುವ ತನಕ ನನ್ನ ಬಲಗಡೆಯಲ್ಲಿ ಆಸೀನನಾಗಿರು ಎಂದು ನನ್ನ ಪ್ರಭುವಿಗೆ ಸರ್ವೇಶ್ವರ ಹೇಳಿದ್ದಾರೆ,’ ಎಂದು ದಾವೀದನೇ ಪವಿತ್ರಾತ್ಮ ಪ್ರೇರಣೆಯಿಂದ ಹೇಳಿದ್ದಾನಲ್ಲಾ! ದಾವೀದನೇ, ಕ್ರಿಸ್ತನನ್ನು ‘ನನ್ನ ಪ್ರಭು’ ಎಂದು ಕರೆದಿರುವಲ್ಲಿ ಆತನು ದಾವೀದನ ಪುತ್ರನಾಗಿರುವುದು ಹೇಗೆ?” ಎಂದು ಪ್ರಶ್ನಿಸಿದರು.

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...