25.04.23 - ‘ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ, ಜಗತ್ತಿಗೆಲ್ಲಾ ಶುಭಸಂದೇಶವನ್ನು ಪ್ರಬೋಧಿಸಿರಿ'

ಮೊದಲನೇ ವಾಚನ: 1 ಪೇತ್ರ 5:5-14


ಅಂತೆಯೇ ಯುವಜನರೇ, ನೀವು ಹಿರಿಯರಿಗೆ ವಿಧೇಯರಾಗಿ ನಡೆದುಕೊಳ್ಳಿ. ನೀವೆಲ್ಲರೂ ದೀನ ಮನೋಭಾವನೆಯನ್ನು ಧರಿಸಿಕೊಂಡು ಒಬ್ಬರಿಗೊಬ್ಬರು ಸೇವೆಮಾಡಿ. “ಗರ್ವಿಷ್ಠರನ್ನು ದೇವರು ವಿರೋಧಿಸುತ್ತಾರೆ. ನಮ್ರರಿಗಾದರೋ ಅವರು ದಯೆತೋರು ತ್ತಾರೆ,” ಎಂದು ಪವಿತ್ರಗ್ರಂಥದಲ್ಲಿ ಲಿಖಿತವಾಗಿದೆ.  ದೇವರ ಪರಾಕ್ರಮಕ್ಕೆ ತಗ್ಗಿ ನಮ್ರರಾಗಿ ನಡೆದುಕೊಳ್ಳಿ. ಆಗ ಅವರು ನಿಮ್ಮನ್ನು ಸಕಾಲದಲ್ಲಿ ಮೇಲಕ್ಕೆತ್ತುವರು; ನಿಮ್ಮ ಚಿಂತೆಯನ್ನೆಲ್ಲಾ ಅವರಿಗೇ ಬಿಟ್ಟುಬಿಡಿ. ನಿಮ್ಮ ಮೇಲೆ ಅವರಿಗೆ ಲಕ್ಷ್ಯವಿದೆ. ಸ್ವಸ್ಥಚಿತ್ತರಾಗಿರಿ, ಜಾಗರೂಕರಾಗಿರಿ. ಏಕೆಂದರೆ, ನಿಮ್ಮ ಶತ್ರುವಾಗಿರುವ ಸೈತಾನನು ಗರ್ಜಿಸುವ ಸಿಂಹದಂತೆ, ಯಾರನ್ನು ಕಬಳಿಸುವುದೆಂದು ಅತ್ತಿತ್ತ ಹುಡುಕಾಡುತ್ತಿರುವನು. ವಿಶ್ವಾಸದಲ್ಲಿ ದೃಢವಾಗಿದ್ದು ಅವನನ್ನು ಎದುರಿಸಿರಿ. ನಿಮ್ಮ ಸಹವಿಶ್ವಾಸಿಗಳು ಜಗತ್ತಿನಲ್ಲೆಲ್ಲಾ ಇಂಥ ಹಿಂಸೆಬಾಧೆಗಳನ್ನೇ ಅನುಭವಿಸುತ್ತಿದ್ದಾರೆಂದು ನಿಮಗೆ ತಿಳಿದಿದೆ. ಯೇಸುಕ್ರಿಸ್ತರಲ್ಲಿ ನಿಮ್ಮನ್ನು ತಮ್ಮ ಶಾಶ್ವತ ಮಹಿಮೆಗೆ ಕರೆದ ಕೃಪಾನಿಧಿಯಾದ ದೇವರು ನೀವು ಸ್ವಲ್ಪಕಾಲ ಹಿಂಸೆಬಾಧೆಯನ್ನು ಅನುಭವಿಸಿದ ನಂತರ ನಿಮ್ಮನ್ನು ಪೂರ್ವಸ್ಥಿತಿಗೆ ತರುವರು; ನಿಮ್ಮನ್ನು ಸ್ಥಿರಗೊಳಿಸಿ ಬಲಪಡಿಸುವರು. ಅವರ ಆಳ್ವಿಕೆ ಯುಗಯುಗಾಂತರಕ್ಕೂ ಇರಲಿ. ಆಮೆನ್. ನನ್ನ ಈ ಪುಟ್ಟ ಪತ್ರವನ್ನು ನಂಬಿಕಸ್ಥ ಸಹೋದರನಾದ ಸಿಲ್ವಾನನ ಸಹಾಯದಿಂದ ನಿಮಗೆ ಬರೆದಿರುತ್ತೇನೆ. ನಿಮ್ಮನ್ನು ಪ್ರೋತ್ಸಾಹಿಸಲೆಂದು ಮತ್ತು ಇದುವೇ ದೇವರ ನಿಜವಾದ ಅನುಗ್ರಹವೆಂದು ಸೃಷ್ಟೀಕರಿಸಲು ಬರೆದಿದ್ದೇನೆ. ಈ ಅನುಗ್ರಹದಲ್ಲಿ ನೀವು ದೃಢವಾಗಿ ನಿಲ್ಲಿರಿ. ನಿಮ್ಮ ಹಾಗೆ ದೇವರಿಂದ ಆಯ್ಕೆಯಾದ ಬಾಬಿಲೋನಿನಲ್ಲಿರುವ ಸಭೆ ನಿಮಗೆ ವಂದನೆಗಳನ್ನು ತಿಳಿಸುತ್ತದೆ. ಅಂತೆಯೇ, ನನ್ನ ಮಗನಂತಿರುವ ಮಾರ್ಕನು ನಿಮ್ಮನ್ನು ವಂದಿಸಿದ್ದಾನೆ. ಪ್ರೀತಿಯ ಮುದ್ದನ್ನಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ. ಯೇಸುಕ್ರಿಸ್ತರಲ್ಲಿರುವ ನಿಮ್ಮೆಲ್ಲರಿಗೂ ಶಾಂತಿ ಸಮಾಧಾನ ಲಭಿಸಲಿ ! 

ಕೀರ್ತನೆ: 89:2-3, 6-7, 16-17
ಶ್ಲೋಕ: ಪ್ರಭೂ, ಕೀರ್ತಿಸುವೆನು ಸದಾ ನಿನ್ನಚಲ ಪ್ರೀತಿಯನು

ನಿನ್ನಚಲ ಪ್ರೀತಿ ಪ್ರಭು, ನನಗೆ ಶಾಶ್ವತ ಸಿದ್ಧ I
ನಿನ್ನ ಸತ್ಯತೆ ಆಗಸದಂತೆ ಸ್ಥಿರ ಸ್ಥಾಪಿತ II
ನೀನೆಂದೆ, “ನಾನಾರಿಸಿದವನೊಡನೆ ಮಾಡಿರುವೆ ಒಪ್ಪಂದ I
ನನ್ನ ದಾಸ ದಾವೀದನಿಗಿತ್ತಿರುವೆ ಈ ತೆರವಾದ ಶಪಥ : II

ಮೇಘಮಂಡಲದಲಿ ಸಮಾನನಾರು ಪ್ರಭುವಿಗೆ I
ದೇವದೂತರೊಳು ಹೋಲಿಕೆ ಯಾವುದು ಆತನಿಗೆ II
ಸ್ವರ್ಗೀಯ ಸಭೆಯಲಿ ಪ್ರತಿಭಾವಂತನು ದೇವನು I
ಸುತ್ತಣದೆಲ್ಲ ಪರಿವಾರಕ್ಕಿಂತ ಬಹು ಭೀಕರನು II

ಆನಂದಿಸುವರವರು ಸದಾ ನಿನ್ನ ನಾಮದಲಿ I
ಪ್ರವರ್ಧಿಸುವರವರು ನಿನ್ನ ನ್ಯಾಯನೀತಿಯಲಿ II
ಅವರ ಶಕ್ತಿಸಾಮರ್ಥ್ಯದ ಪ್ರತಿಭೆ ನಿನ್ನದೆ I
ನಿನ್ನ ದಯೆಯಿಂದ ನಮಗೆ ಕೋಡುಮೂಡಿದೆ II

ಶುಭಸಂದೇಶ: ಮಾರ್ಕ 16:15-20 


ಯೇಸು ತಮ್ಮ ಶಿಷ್ಯರಿಗೆ ಹೀಗೆಂದು ಹೇಳಿದರು: ‘ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ, ಜಗತ್ತಿಗೆಲ್ಲಾ ಶುಭಸಂದೇಶವನ್ನು ಪ್ರಬೋಧಿಸಿರಿ. ವಿಶ್ವಾಸವಿಟ್ಟು ದೀಕ್ಷಾಸ್ನಾನ ಪಡೆಯುವವನು ಜೀವೋದ್ಧಾರ ಹೊಂದುವನು. ವಿಶ್ವಾಸಿಸದೆ ಇರುವವನು ಖಂಡನೆಗೆ ಗುರಿಯಾಗುವನು. ವಿಶ್ವಾಸಿಸುವುದರಿಂದ ಈ ಅದ್ಭುತ ಕಾರ್ಯಗಳು ಆಗುವುವು. ಅವರು ನನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವರು; ಹೊಸ ಭಾಷೆಗಳಲ್ಲಿ ಮಾತಾಡುವರು; ಕೈಗಳಿಂದ ಸರ್ಪಗಳನ್ನು ಎತ್ತಿದರೂ ವಿಷ ಪದಾರ್ಥಗಳನ್ನೇನಾದರೂ ಕುಡಿದರೂ ಯಾವ ಹಾನಿಯೂ ಅವರಿಗಾಗದು. ಅವರು ರೋಗಿಗಳ ಮೇಲೆ ಕೈ ಇಟ್ಟರೆ ರೋಗಿಗಳು ಗುಣಹೊಂದುವರು,” ಎಂದರು. ಯೇಸುಸ್ವಾಮಿ ಶಿಷ್ಯರೊಡನೆ ಮಾತನಾಡಿದ ಮೇಲೆ ಸ್ವರ್ಗಾರೋಹಣವಾಗಿ ದೇವರ ಬಲಪಾರ್ಶ್ವದಲ್ಲಿ ಆಸೀನರಾದರು. ಇತ್ತ ಶಿಷ್ಯರು ಹೊರಟುಹೋಗಿ, ಎಲ್ಲೆಡೆಗಳಲ್ಲಿಯೂ ಶುಭಸಂದೇಶವನ್ನು ಬೋಧಿಸತೊಡಗಿದರು. ಪ್ರಭು ಯೇಸು ಅವರೊಂದಿಗೆ ಕಾರ್ಯಸಾಧಿಸುತ್ತಾ, ಮಹತ್ಕಾರ್ಯಗಳಿಂದ ಶುಭಸಂದೇಶವನ್ನು ಸಮರ್ಥಿಸುತ್ತಾ ಇದ್ದರು. 

24.04.23 - “ದೇವರು ಕಳುಹಿಸಿದಾತನನ್ನು ನೀವು ವಿಶ್ವಾಸಿಸಬೇಕು. ಇದೇ ದೇವರು ಮೆಚ್ಚುವ ಕಾರ್ಯ”

 ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 6:8:15


ಸ್ತೇಫನನ ಬಂಧನ ಸ್ತೇಫನನು ದೈವಾನುಗ್ರಹದಿಂದಲೂ ಶಕ್ತಿಯಿಂದಲೂ ತುಂಬಿದ್ದನು. ಜನರ ಮಧ್ಯೆ ಅದ್ಭುತಗಳನ್ನೂ ಸೂಚಕಕಾರ್ಯಗಳನ್ನೂ ಮಾಡುತ್ತಿದ್ದನು. ಆದರೆ ಕೆಲವರು ಸ್ತೇಫನನ ವಿರೋಧಿಗಳಾಗಿದ್ದರು. ಇವರು ‘ಬಿಡುಗಡೆ ಹೊಂದಿದವರು’ ಎಂಬವರ ಪ್ರಾರ್ಥನಾ ಮಂದಿರಕ್ಕೆ ಸೇರಿದವರು. ಸಿರೇನ್ ಮತ್ತು ಅಲೆಕ್ಸಾಂಡ್ರಿಯದಿಂದ ಬಂದ ಯೆಹೂದ್ಯರೂ ಇದರ ಸದಸ್ಯರಾಗಿದ್ದರು. ಇವರೊಡನೆ ಸಿಲಿಸಿಯ ಹಾಗೂ ಏಷ್ಯಾದ ಯೆಹೂದ್ಯರೂ ಸೇರಿ ಸ್ತೇಫನನೊಂದಿಗೆ ತರ್ಕ ಮಾಡತೊಡಗಿದರು. ಆದರೆ ಸ್ತೇಫನನ ಮಾತಿನಲ್ಲಿ ಕಂಡುಬಂದ ಜ್ಞಾನವನ್ನೂ ಪವಿತ್ರಾತ್ಮ ಶಕ್ತಿಯನ್ನೂ ಎದುರಿಸಲು ಅವರಿಂದಾಗಲಿಲ್ಲ. ಆದುದರಿಂದ ಕೆಲವರಿಗೆ ಲಂಚಕೊಟ್ಟು ‘ಸ್ತೇಫನನು ಮೋಶೆಯನ್ನೂ ದೇವರನ್ನೂ ದೂಷಿಸುತ್ತಾನೆ; ಇದನ್ನು ನಾವು ಕೇಳಿದ್ದೇವೆ’ ಎಂದು ಹೇಳಿಸಿದರು. ಹೀಗೆ ಜನರನ್ನೂ ಪ್ರಮುಖರನ್ನೂ ನ್ಯಾಯಶಾಸ್ತ್ರಜ್ಞರನ್ನೂ ಪ್ರಚೋದಿಸಿದರು. ಸ್ತೇಫನನನ್ನು ಬಂಧಿಸಿ ನ್ಯಾಯಸಭೆಯ ಮುಂದೆ ಎಳೆದು ತರುವಂತೆ ಮಾಡಿದರು. ಕೆಲವು ಸುಳ್ಳುಸಾಕ್ಷಿಗಳನ್ನು ನೇಮಿಸಿಕೊಂಡು ಅವರಿಂದ, ‘ಇವನು ಯಾವಾಗಲೂ ನಮ್ಮ ಪವಿತ್ರ ದೇವಾಲಯದ ವಿರುದ್ಧ ಹಾಗೂ ಮೋಶೆಯ ಧರ್ಮಶಾಸ್ತ್ರದ ವಿರುದ್ಧ ಮಾತನಾಡುತ್ತಾನೆ. ನಜರೇತಿನ ಆ ಯೇಸು ಈ ಮಹಾದೇವಾಲಯವನ್ನು ನಾಶಗೊಳಿಸುವನೆಂದೂ ಮೋಶೆ ನಮಗೆ ವಿಧಿಸಿದ ಸಂಪ್ರದಾಯಗಳನ್ನು ಬದಲಿಸುವನೆಂದೂ ಇವನು ಹೇಳಿರುತ್ತಾನೆ. ಇದನ್ನು ನಾವು ಕೇಳಿದ್ದೇವೆ,’ ಎಂದು ಹೇಳಿಸಿದರು. ನ್ಯಾಯಸಭೆಯಲ್ಲಿ ಕುಳಿತಿದ್ದವರೆಲ್ಲರೂ ಅವನ ಮುಖವನ್ನೇ ದಿಟ್ಟಿಸಿ ನೋಡಿದರು. ಅದು ದೇವದೂತನ ಮುಖದಂತೆ ಕಂಗೊಳಿಸಿತು.

ಕೀರ್ತನೆ: 119:23, 24, 26, 27, 29, 30

ಶ್ಲೋಕ: ಪ್ರಭುವಿನ ಶಾಸ್ತ್ರಾನುಸಾರ ನಡೆದವರು ಧನ್ಯರು.

ಒಳಸಂಚು ಮಾಡುತ್ತಿದ್ದರು ಒಡೆಯರು ಎನಗೆದುರಾಗಿ I
ದಾಸ ನಾನಿರುವೆ ನಿನ್ನ ಆಜ್ಞೆಗಳಲೆ ಮಗ್ನನಾಗಿ II

ನಿನ್ನಾಜ್ಞೆಯು ಆನಂದದಾಯಕ I
ಅವೇ ನನಗೆ ಮಂತ್ರಾಲೋಚಕ II

ನನ್ನ ಗತನಡತೆಯನು ಕೇಳಿ ಸದುತ್ತರಿಸಿದೆಯಯ್ಯಾ I
ನಿನ್ನ ನಿಬಂಧನೆಗಳನೀಗ ನನಗೆ ಉಪದೇಶಿಸಯ್ಯಾ II

ನಿನ್ನ ನಿಯಮಗಳ ಪಥವನೆನಗೆ ತಿಳಿಯಪಡಿಸಯ್ಯಾ I
ನಿನ್ನ ಅದ್ಭುತಕಾರ್ಯಗಳನು ನಾ ಧ್ಯಾನಿಸುವೆನಯ್ಯಾ II

ಮಿಥ್ಯಮಾರ್ಗವನು ನನಗೆ ದೂರಮಾಡಯ್ಯಾ I
ಧರ್ಮಶಾಸ್ತ್ರವನು ಎನಗೆ ಅನುಗ್ರಹಿಸಯ್ಯಾ II

ಆರಿಸಿಕೊಂಡಿರುವೆನು ನಾನು ಸತ್ಯಮಾರ್ಗವನು I
ಇರಿಸಿಕೊಂಡಿಹೆನು ಕಣ್ಮುಂದೆ ನಿನ್ನ ವಿಧಿಗಳನು

ಶುಭಸಂದೇಶ: ಯೊವಾನ್ನ 6:22-29


ನೆರೆದಿದ್ದ ಜನರು ಮಾರನೆಯ ದಿನವೂ ಸರೋವರದ ಆಚೆ ಕಡೆಯೇ ಉಳಿದಿದ್ದರು. ಹಿಂದಿನ ದಿನ ಅಲ್ಲಿ ಒಂದೇ ಒಂದು ದೋಣಿ ಇದ್ದುದನ್ನು ಅವರು ನೋಡಿದ್ದರು. ಯೇಸುಸ್ವಾಮಿ ಶಿಷ್ಯರೊಡನೆ ದೋಣಿಯನ್ನು ಹತ್ತಲಿಲ್ಲವಾದ್ದರಿಂದ ಶಿಷ್ಯರು ಮಾತ್ರ ಹೊರಟು ಹೋಗಿದ್ದಾರೆಂದು ಅವರಿಗೆ ತಿಳಿದಿತ್ತು. ತಿಬೇರಿಯದಿಂದ ಹೊರಟಿದ್ದ ದೋಣಿಗಳು ಅಷ್ಟು ಹೊತ್ತಿಗೆ ಅಲ್ಲಿಗೆ ಬಂದು ಸೇರಿದವು. ಪ್ರಭುವು ದೇವರಿಗೆ ಸ್ತೋತ್ರವನ್ನು ಸಲ್ಲಿಸಿ, ಜನರಿಗೆ ರೊಟ್ಟಿ ಬಡಿಸಿದ್ದ ಸ್ಥಳ ಅಲ್ಲೇ ಪಕ್ಕದಲ್ಲಿತ್ತು. ಯೇಸು ಆಗಲಿ, ಅವರ ಶಿಷ್ಯರಾಗಲಿ ಇಲ್ಲದ್ದನ್ನು ನೋಡಿ ಜನರು ಆ ದೋಣಿಗಳನ್ನು ಹತ್ತಿ ಯೇಸುವನ್ನು ಹುಡುಕುತ್ತಾ ಕಫೆರ್ನವುಮಿಗೆ ಬಂದರು. ಜನರು ಯೇಸುಸ್ವಾಮಿಯನ್ನು ಸರೋವರದ ಆಚೆದಡದಲ್ಲಿ ಕಂಡೊಡನೆ, “ಗುರುದೇವಾ, ತಾವಿಲ್ಲಿಗೆ ಬಂದುದು ಯಾವಾಗ?” ಎಂದು ಕೇಳಿದರು. ಯೇಸು ಅವರಿಗೆ, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನೀವು ನನ್ನನ್ನು ಹುಡುಕಿಕೊಂಡು ಬಂದದ್ದು ಸೂಚಕಕಾರ್ಯಗಳನ್ನು ನೋಡಿ ಗ್ರಹಿಸಿಕೊಂಡಿದ್ದರಿಂದ ಅಲ್ಲ, ಹೊಟ್ಟೆ ತುಂಬುವಷ್ಟು ರೊಟ್ಟಿ ಸಿಕ್ಕಿದ್ದರಿಂದ. ಅಳಿದುಹೋಗುವ ಆಹಾರಕ್ಕಾಗಿ ದುಡಿಯಬೇಡಿ; ಉಳಿಯುವ ಮತ್ತು ನಿತ್ಯಜೀವವನ್ನು ಈಯುವ ಆಹಾರಕ್ಕಾಗಿ ದುಡಿಯಿರಿ. ಇಂಥ ಆಹಾರವನ್ನು ನಿಮಗೆ ನೀಡುವವನು ನರಪುತ್ರನೇ. ಏಕೆಂದರೆ, ಪಿತನಾದ ದೇವರು ತಮ್ಮ ಅಧಿಕಾರ ಮುದ್ರೆಯನ್ನು ಆತನ ಮೇಲೆ ಒತ್ತಿದ್ದಾರೆ,” ಎಂದು ಉತ್ತರಕೊಟ್ಟರು. ಆಗ ಆ ಜನರು, “ದೇವರು ಮೆಚ್ಚುವ ಕಾರ್ಯಗಳನ್ನು ನಾವು ಮಾಡಬೇಕಾದರೆ, ಏನು ಮಾಡಬೇಕು?” ಎಂದು ಕೇಳಿದರು. ಅದಕ್ಕೆ ಯೇಸು, “ದೇವರು ಕಳುಹಿಸಿದಾತನನ್ನು ನೀವು ವಿಶ್ವಾಸಿಸಬೇಕು. ಇದೇ ಅವರು ಮೆಚ್ಚುವ ಕಾರ್ಯ,” ಎಂದರು.

23.04.23 - “ಪ್ರಭು ಜೀವಂತರಾಗಿ ಎದ್ದಿರುವುದು ನಿಜ ! "

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 2:14, 22-33

ಆಗ ಪೇತ್ರನು ಇತರ ಹನ್ನೊಂದು ಮಂದಿ ಪ್ರೇಷಿತರೊಡನೆ ಎದ್ದುನಿಂತು, ಜನ ಸಮೂಹವನ್ನು ಉದ್ದೇಶಿಸಿ, ಗಟ್ಟಿಯಾದ ಧ್ವನಿಯಿಂದ ಹೀಗೆಂದು ಪ್ರಬೋಧಿಸಿದನು: “ಯೆಹೂದ್ಯ ಸ್ವಜನರೇ, ಜೆರುಸಲೇಮಿನ ಸಕಲ ನಿವಾಸಿಗಳೇ, ನನಗೆ ಕಿವಿಗೊಡಿ. ಈ ಘಟನೆಯ ಅರ್ಥ ನಿಮಗೆ ಮನದಟ್ಟಾಗಲಿ. ಇಸ್ರಯೇಲ್ ಬಾಂಧವರೇ, ನನ್ನ ಮಾತುಗಳನ್ನು ಆಲಿಸಿರಿ. ನಜರೇತಿನ ಯೇಸುಸ್ವಾಮಿ ದೈವನಿಯಮಿತ ವ್ಯಕ್ತಿ ಎಂಬುದನ್ನು ದೇವರೇ ಅವರ ಮುಖಾಂತರ ನಡೆಸಿದ ಅದ್ಭುತ ಕಾರ್ಯಗಳಿಂದ, ಮಹತ್ಕಾರ್ಯಗಳಿಂದ ಹಾಗೂ ಸೂಚಕಕಾರ್ಯಗಳಿಂದ ನಿಮಗೆ ಸ್ಪಷ್ಟಪಡಿಸಲಾಗಿದೆ. ಇದು ನಿಮಗೆ ತಿಳಿದಿರುವ ವಿಷಯ. ದೇವರು ತಮ್ಮ ಸ್ಥಿರಸಂಕಲ್ಪದಲ್ಲಿ ಹಾಗೂ ಭವಿಷ್ಯತ್ ಜ್ಞಾನದಲ್ಲಿ ಯೇಸು ನಿಮ್ಮ ವಶವಾಗಬೇಕೆಂದು ಈ ಮೊದಲೇ ನಿರ್ಧರಿಸಿದ್ದರು. ನೀವು ಅವರನ್ನು ಪರಕೀಯರ ಕೈಗೊಪ್ಪಿಸಿ, ಶಿಲುಬೆಗೆ ಹಾಕಿಸಿ, ಕೊಲ್ಲಿಸಿದಿರಿ. ಆದರೆ ದೇವರು ಅವರನ್ನು ಮೃತ್ಯುಶೂಲೆಯಿಂದ ಬಿಡಿಸಿ ಎಬ್ಬಿಸಿದರು. ಕಾರಣ - ಅವರನ್ನು ಬಂಧಿಸಿಡುವುದು ಮೃತ್ಯುವಿಗೆ ಅಸಾಧ್ಯವಾಗಿತ್ತು. ಅವರನ್ನು ಕುರಿತು ದಾವೀದನು ಹೀಗೆಂದಿದ್ದಾನೆ: ‘ಪ್ರಭು ಇಹನು ಎನ್ನ ಕಣ್ಮುಂದೆ ಸತತ ನಾ ಹೆದರದಂತೆ ಆತನಿಹನು ಎನ್ನ ಹತ್ತಿರ. ಇದಕಾರಣ ಹರ್ಷಿಸಿತು ಎನ್ನ ಹೃದಯ ತುಳುಕಿತು ಸಂತಸ ಎನ್ನ ನಾಲಗೆಯಿಂದ. ನಂಬಿ ನಿರೀಕ್ಷೆಯಿಂದಿರುವುದು ಎನ್ನ ಮತ್ರ್ಯದೇಹ. ಏಕೆನೆ, ದೂಡಲಾರೆ ಪಾತಾಳಕ್ಕೆ ನೀನೆನ್ನ ಜೀವಾತ್ಮವನು, ಕೊಳೆಯಬಿಡಲಾರೆ ನೀನೊಲಿದಾತನನು. ಅಮರ ಜೀವಮಾರ್ಗವನೆನಗೆ ತೋರ್ಪಡಿಸಿದೆ ನಿನ್ನ ಶ್ರೀ ಸಾನ್ನಿಧ್ಯ ಸಂತಸದಿಂದೆನ್ನ ಭರಿತನಾಗಿಸುವೆ.’ “ಪ್ರಿಯ ಸಹೋದರರೇ, ಪಿತಾಮಹ ದಾವೀದರಸನ ವಿಷಯದಲ್ಲಿ ನಾನು ನಿಮಗೆ ಸ್ಪಷ್ಟವಾಗಿ ಮಾತನಾಡಬೇಕಾಗಿದೆ. ಆತನು ಮೃತನಾದನು; ಆತನನ್ನು ಸಮಾಧಿಮಾಡಲಾಯಿತು. ನಿಮಗೆಲ್ಲರಿಗೆ ತಿಳಿದಿರುವಂತೆ ಆತನ ಸಮಾಧಿ ನಮ್ಮ ಮಧ್ಯೆ ಇಂದಿನವರೆಗೂ ಇದೆ. ಆತನೊಬ್ಬ ಪ್ರವಾದಿಯೂ ಆಗಿದ್ದ. ತನ್ನ ಸಂತತಿಯಲ್ಲೇ ಒಬ್ಬನನ್ನು ಅರಸನನ್ನಾಗಿ ಮಾಡುವುದಾಗಿ ದೇವರು ಮಾಡಿದ್ದ ವಾಗ್ದಾನವನ್ನು ಆತನು ಮರೆತಿರಲಿಲ್ಲ. ಹೀಗಿರುವಲ್ಲಿ ಕ್ರಿಸ್ತಯೇಸುವಿನ ಪುನರುತ್ಥಾನವನ್ನು ಮುಂಚಿತವಾಗಿ ಅರಿತು ಅದರ ವಿಷಯವಾಗಿ ಹೀಗೆಂದು ಪ್ರವಾದನೆ ಮಾಡಿದ: ‘ಆತನನನ್ನು ಪಾತಾಳಕ್ಕೆ ದೂಡಲಿಲ್ಲ; ದೇಹ ಕೊಳೆತುಹೋಗಲು ಬಿಡಲಿಲ್ಲ.’ ಈ ಯೇಸುವನ್ನೇ ದೇವರು ಪುನರುತ್ಥಾನಗೊಳಿಸಿದ್ದಾರೆ; ಈ ಘಟನೆಗೆ ನಾವೆಲ್ಲರೂ ಸಾಕ್ಷಿಗಳಾಗಿದ್ದೇವೆ. ಯೇಸು, ದೇವರ ಬಲಪಾಶ್ರ್ವಕ್ಕೆ ಆರೋಹಿತರಾದರು. ಅವರು ತಮ್ಮ ಪಿತ ವಾಗ್ದಾನ ಮಾಡಿದ ಪವಿತ್ರಾತ್ಮ ಅವರನ್ನು ಪಡೆದು, ನಮ್ಮ ಮೇಲೆ ಸುರಿಸಿದ ಆ ವರವನ್ನೇ ನೀವು ಈಗ ನೋಡುತ್ತಿರುವುದು ಹಾಗೂ ಕೇಳುತ್ತಿರುವುದು.

ಕೀರ್ತನೆ: 16:1-2, 5, 7-8, 9-10, 11

ನೀಡು ದೇವಾ ರಕ್ಷಣೆಯನು I
ನಾ ನಿನಗೆ ಶರಣಾಗತನು II
ನೀನೇ ನನ್ನೊಡೆಯ"ನೆಂದು ನಾ ನುಡಿದೆ I
ನಿನ್ನ ಹೊರತು ನನಗಿಲ್ಲ ಒಳಿತು” ಎಂದೇ II

ನನ್ನ ಸ್ವತ್ತೂ ಸ್ವಾಸ್ತ್ಯವೂ ನೀನೇ I
ನಿನ್ನ ಕೈಯಲ್ಲಿದೆ ಪ್ರಭುನನ್ನ ವಿಮೆ I

ಪ್ರಭುವಿಗೆನ್ನ ಧನ್ಯವಾದ ಆತನೇ ನನಗೆ ಮಾರ್ಗದರ್ಶಕ I
ಅಂಧಕಾರದೊಳೂ ನನ್ನ ಮನಸ್ಸಾಕ್ಷಿಯೆ ನನಗೆ ಬೋಧಕ II
ಇರಿಸಿಕೊಳ್ಳುವೆ ಪ್ರಭುವನು ಸತತ ನನ್ನೆದುರಿಗೆ I
ಆತನಿರಲು ಬಲಕ್ಕೆ ನನಗೆಲ್ಲಿಯದು ಹೆದರಿಕೆ II

ಇದು ಕಾರಣ ಹರ್ಷದಿಂದಿದೆ ಎನ್ನಯ ಹೃದಯ I
ಆನಂದಗೊಂಡಿದೆ ಮನಸುರಕ್ಷಿತವಿದೆ ಕಾಯ II
ಏಕೆನೆ ದೂಡುವುದಿಲ್ಲ ನೀನು ಎನ್ನನು ಅಧೋಲೋಕಕೆ I
ಬಿಟ್ಟುಕೊಡುವುದಿಲ್ಲ ನಿನ್ನ  ಭಕ್ತನನು ಪಾತಾಳಕೆ II

ತೋರ್ಪಡಿಸುವೆ ಎನಗೆ ಅಮರ ಜೀವಮಾರ್ಗವನು I

ನಿನ್ನ ಸನ್ನಿಧಿ ಕೊಡುವುದು ಪರಮಾನಂದವನು I

ಶ್ಲೋಕ: ತೋರ್ಪಡಿಸುವೆ ಎನಗೆ ಅಮರ ಜೀವಮಾರ್ಗವನು

ಎರಡನೇ ವಾಚನ: 1 ಪೇತ್ರ 1:17-21

ನೀವು ದೇವರಿಗೆ ಪ್ರಾರ್ಥನೆಮಾಡುವಾಗ, ಅವರನ್ನು “ತಂದೆಯೇ” ಎಂದು ಸಂಬೋಧಿಸುತ್ತೀರಿ. ಅವರು ಪಕ್ಷಪಾತಿ ಅಲ್ಲ. ಎಲ್ಲರಿಗೂ ಅವರವರ ಕೃತ್ಯಗಳಿಗೆ ತಕ್ಕಂತೆ ನ್ಯಾಯತೀರ್ಪು ನೀಡುವವರು. ಆದ್ದರಿಂದ ನಿಮ್ಮ ಇಹಲೋಕದ ಯಾತ್ರೆಯನ್ನು ಭಯಭಕ್ತಿಯಿಂದ ಸಾಗಿಸಿರಿ. ನಿಮ್ಮ ಪೂರ್ವಜರಿಂದ ಪರಂಪರೆಯಾಗಿ ಬಂದಿರುವ ನಿರರ್ಥಕ ನಡವಳಿಕೆಯಿಂದ ನಿಮ್ಮನ್ನು ಬಿಡುಗಡೆಮಾಡಲು ಕೊಡಲಾದ ಬೆಲೆಯು ಎಂಥದ್ದೆಂದು ನಿಮಗೆ ತಿಳಿದಿದೆ. ಅದು ನಶಿಸಿ ಹೋಗುವ ಬೆಳ್ಳಿಬಂಗಾರವಲ್ಲ. ಬದಲಿಗೆ, ಯಾವ ನ್ಯೂನತೆಯೂ ಇಲ್ಲದ, ಯಾವ ಕಳಂಕವೂ ಇಲ್ಲದ ಬಲಿಯ ಕುರಿಮರಿಯಂಥ ಕ್ರಿಸ್ತಯೇಸುವಿನ ಅಮೂಲ್ಯ ರಕ್ತವೇ ಆ ಬೆಲೆ. ವಿಶ್ವಸೃಷ್ಟಿಗೆ ಮೊದಲೇ ಯೇಸುಕ್ರಿಸ್ತರನ್ನು ದೇವರು ಇದಕ್ಕೆಂದು ಗೊತ್ತುಮಾಡಿದ್ದರು. ಈ ಅಂತಿಮ ದಿನಗಳಲ್ಲಿ ನಿಮಗೋಸ್ಕರ ಯೇಸು ಪ್ರತ್ಯಕ್ಷರಾದರು. ಮರಣದಿಂದ ಪುನರುತ್ಥಾನಗೊಳಿಸಿ ಮಹಿಮೆಪಡಿಸಿದ ದೇವರಲ್ಲಿ ನೀವು ವಿಶ್ವಾಸವಿಟ್ಟದ್ದು ಇವರ ಮುಖಾಂತರವೇ. ಹೀಗೆ ನಿಮ್ಮ ವಿಶ್ವಾಸವೂ ನಿರೀಕ್ಷೆಯೂ ದೇವರಲ್ಲೇ ನೆಲೆಗೊಂಡಿವೆ.

ಶುಭಸಂದೇಶ: ಲೂಕ 24:13-35


ಅದೇ ದಿನ ಶಿಷ್ಯರಲ್ಲಿ ಇಬ್ಬರು ಜೆರುಸಲೇಮಿಗೆ ಹನ್ನೊಂದು ಕಿಲೋಮೀಟರಿನಷ್ಟು ದೂರದಲ್ಲಿದ್ದ ಎಮ್ಮಾವು ಎಂಬ ಗ್ರಾಮಕ್ಕೆ ಹೋಗುತ್ತಿದ್ದರು. ಇತ್ತೀಚೆಗೆ ನಡೆದ ವಿಷಯಗಳನ್ನೆಲ್ಲಾ ಕುರಿತು ಅವರು ಸಂಭಾಷಣೆ ಮಾಡುತ್ತಾ ನಡೆಯುತ್ತಿದ್ದರು. ಹೀಗೆ ಮಾತನಾಡಿಕೊಂಡು ಚರ್ಚೆಮಾಡುತ್ತಾ ಹೋಗುತ್ತಿರುವಾಗ, ಯೇಸುಸ್ವಾಮಿಯೇ ಖುದ್ದಾಗಿ ಸಮೀಪಿಸಿ ಅವರ ಜೊತೆ ಸೇರಿಕೊಂಡರು. ಆದರೆ ಇವರಾರೆಂದು ಅವರು ಗುರುತು ಹಚ್ಚಲಿಲ್ಲ. ಕಾರಣ - ಶಿಷ್ಯರಿಗೆ ಕಣ್ಣುಕಟ್ಟಿದಂತಾಗಿತ್ತು. “ನೀವು ತರ್ಕ ಮಾಡಿಕೊಂಡು ಹೋಗುತ್ತಿರುವಿರಲ್ಲಾ, ಏನು ವಿಷಯ?” ಎಂದು ಯೇಸು ಕೇಳಿದರು. ಶಿಷ್ಯರು ಸಪ್ಪೆ ಮುಖಮಾಡಿ ನಿಂತರು. ಆಗ ಅವರಲ್ಲಿ ಒಬ್ಬನಾದ ಕ್ಲೆಯೋಫ, “ಇತ್ತೀಚೆಗೆ ಜೆರುಸಲೇಮಿನಲ್ಲಿ ಜರುಗಿದ ಘಟನೆಗಳನ್ನು ಪಟ್ಟಣಕ್ಕೆ ಪಟ್ಟಣವೇ ತಿಳಿದಿದೆ; ನಿನಗೊಬ್ಬನಿಗೇ ಅವು ತಿಳಿಯದೆ?” ಎಂದನು. “ಏನು ನಡೆಯಿತು?” ಎಂದು ಯೇಸು ಪುನಃ ಕೇಳಿದಾಗ ಆ ಶಿಷ್ಯರಿಬ್ಬರು, “ಇವು ನಜರೇತಿನ ಯೇಸುವಿಗೆ ಸಂಭವಿಸಿದ ಘಟನೆಗಳು. ಅವರು ನಡೆಯಲ್ಲೂ ನುಡಿಯಲ್ಲೂ ದೇವರ ಹಾಗೂ ಸಕಲ ಮಾನವರ ದೃಷ್ಟಿಯಲ್ಲಿ ಪ್ರವಾದಿಯಾಗಿದ್ದರು. ನಮ್ಮ ಮುಖ್ಯ ಯಾಜಕರು ಮತ್ತು ಮುಖಂಡರು ಅವರನ್ನು ಮರಣದಂಡನೆಗೆ ಗುರಿಮಾಡಿಸಿ ಶಿಲುಬೆಗೆ ಜಡಿಸಿದರು. ಇಸ್ರಯೇಲನ್ನು ಬಿಡುಗಡೆ ಮಾಡುವ ಉದ್ಧಾರಕ ಅವರೇ ಎಂದು ನಾವು ನಂಬಿಕೊಂಡಿದ್ದೆವು. ಇಷ್ಟು ಮಾತ್ರವಲ್ಲ, ಇದೆಲ್ಲಾ ಸಂಭವಿಸಿ ಇಂದಿಗೆ ಮೂರುದಿನಗಳು ಆಗಿವೆ. ಆದರೂ ನಮ್ಮಲ್ಲಿ ಕೆಲವು ಮಂದಿ ಮಹಿಳೆಯರು ಮುಂಜಾನೆ ಸಮಾಧಿಯ ಬಳಿಗೆ ಹೋಗಿದ್ದರು. ಅಲ್ಲಿ ಯೇಸುವಿನ ಪಾರ್ಥಿವ ಶರೀರವನ್ನು ಕಾಣಲಿಲ್ಲ. ಹಿಂದಿರುಗಿ ಬಂದು, ‘ನಮಗೆ ದೇವದೂತರು ಪ್ರತ್ಯಕ್ಷರಾದರು; ಇವರು ಯೇಸುಸ್ವಾಮಿ ಸಜೀವದಿಂದ ಇದ್ದಾರೆಂದು ನಮಗೆ ತಿಳಿಸಿದರು,’ ಎಂದು ಹೇಳಿ ನಮ್ಮನ್ನು ದಿಗ್ಭ್ರಾಂತರನ್ನಾಗಿ ಮಾಡಿದರು. ನಮ್ಮ ಸಂಗಡಿಗರಲ್ಲಿ ಕೆಲವರು ಸಮಾಧಿಯ ಬಳಿಗೆ ಹೋಗಿ ನೋಡಿದರು; ಮಹಿಳೆಯರು ಹೇಳಿದ್ದೆಲ್ಲಾ ಸರಿಯಾಗಿತ್ತು. ಆದರೆ ಯೇಸುಸ್ವಾಮಿಯನ್ನು ಮಾತ್ರ ಕಾಣಲಿಲ್ಲ,” ಎಂದರು. ಆಗ ಯೇಸು, “ಎಂಥ ಮತಿಹೀನರು ನೀವು! ಪ್ರವಾದಿಗಳು ಹೇಳಿರುವುದೆಲ್ಲವನ್ನು ನಂಬುವುದರಲ್ಲಿ ಎಷ್ಟು ಮಂದಮತಿಗಳು ನೀವು! ಕ್ರಿಸ್ತನು ಇಂತಹ ಸಂಕಷ್ಟಗಳನ್ನು ಅನುಭವಿಸಿ ತನ್ನ ಮಹಿಮಾಸಿದ್ದಿಯನ್ನು ಪಡೆಯಬೇಕಾಗಿತ್ತು ಅಲ್ಲವೇ?” ಎಂದರು. ಅನಂತರ, ಮೋಶೆ ಹಾಗೂ ಪ್ರವಾದಿಗಳೆಲ್ಲರಿಂದ ಆರಂಭಿಸಿ ಎಲ್ಲಾ ಪವಿತ್ರ ಗ್ರಂಥಗಳಲ್ಲಿ ತಮ್ಮ ವಿಷಯವಾಗಿ ಬರೆದಿರುವುದನ್ನು ಅವರಿಗೆ ವಿವರಿಸಿದರು. ಅಷ್ಟರಲ್ಲಿ ಶಿಷ್ಯರು ತಲುಪಬೇಕಾಗಿದ್ದ ಗ್ರಾಮವು ಸಮೀಪಿಸಿತು. ಯೇಸುಸ್ವಾಮಿ ಇನ್ನೂ ಮುಂದಕ್ಕೆ ಸಾಗುವವರಂತೆ ಕಂಡಿತು. ಆಗ ಶಿಷ್ಯರು, “ಸಂಜೆಯಾಯಿತು, ಕತ್ತಲಾಗುತ್ತ ಬಂದಿತು; ಬಂದು ನಮ್ಮೊಡನೆ ತಂಗಿರಿ,” ಎಂದು ಒತ್ತಾಯಪಡಿಸಿದರು. ಯೇಸು ಅವರೊಡನೆ ತಂಗಲು ಹೋದರು. ಅವರ ಸಂಗಡ ಊಟಕ್ಕೆ ಕುಳಿತಾಗ, ಯೇಸು ರೊಟ್ಟಿಯನ್ನು ತೆಗೆದುಕೊಂಡು, ದೇವರಿಗೆ ಕೃತಜ್ಞತಾ ಸ್ತೋತ್ರ ಸಲ್ಲಿಸಿ, ಅದನ್ನು ಮುರಿದು ಅವರಿಗೆ ಕೊಟ್ಟರು. ಆಗಲೇ ಶಿಷ್ಯರ ಕಣ್ಣುಗಳು ತೆರೆದವು; ಯೇಸುವನ್ನು ಗುರುತುಹಚ್ಚಿದರು. ಆಗ ಯೇಸು ಅವರಿಂದ ಅದೃಶ್ಯರಾದರು. ಶಿಷ್ಯರು ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಾ, “ದಾರಿಯಲ್ಲಿ ಇವರು ನಮ್ಮ ಸಂಗಡ ಮಾತನಾಡುತ್ತಾ ಪವಿತ್ರ ಗ್ರಂಥದ ಅರ್ಥವನ್ನು ನಮಗೆ ವಿವರಿಸುತ್ತಾ ಇದ್ದಾಗ ನಮ್ಮ ಹೃದಯ ಕುತೂಹಲದಿಂದ ಕುದಿಯುತ್ತಾ ಇತ್ತಲ್ಲವೇ?” ಎಂದುಕೊಂಡರು. ಒಡನೇ ಅವರು ಅಲ್ಲಿಂದ ಎದ್ದು ಜೆರುಸಲೇಮಿಗೆ ಹಿಂದಿರುಗಿ ಹೋದರು. ಅಲ್ಲಿ ಹನ್ನೊಂದು ಮಂದಿ ಶಿಷ್ಯರೂ ಅವರ ಸಂಗಡಿಗರೂ ಒಟ್ಟುಗೂಡಿದ್ದರು. “ಪ್ರಭು ಜೀವಂತರಾಗಿ ಎದ್ದಿರುವುದು ನಿಜ ! ಅವರು ಸಿಮೋನನಿಗೆ ಕಾಣಿಸಿಕೊಂಡರು,” ಎಂದು ಅಲ್ಲಿದ್ದವರು ಹೇಳುವುದನ್ನು ಕೇಳಿದರು. ಆಗ ಅವರು ತಾವು ದಾರಿಯಲ್ಲಿ ಕಂಡ ವಿಷಯವನ್ನೂ ರೊಟ್ಟಿ ಮುರಿದು ಕೊಡುವಾಗ ಸ್ವಾಮಿಯನ್ನು ತಾವು ಗುರುತುಹಚ್ಚಿದ ವಿಷಯವನ್ನೂ ಅಲ್ಲಿದ್ದವರಿಗೆ ವರದಿಮಾಡಿದರು.

22.04.23- “ನಾನೇ, ಇನ್ಯಾರೂ ಅಲ್ಲ; ಅಂಜಬೇಡಿ,”

 ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 6:1-7


ಭಕ್ತವಿಶ್ವಾಸಿಗಳ ಸಂಖ್ಯೆ ಹೆಚ್ಚುತ್ತಾ ಬಂದಿತು. ಆಗ ಗ್ರೀಕ್ ಮಾತನಾಡುತ್ತಾ ಇದ್ದವರ ಹಾಗೂ ಸ್ಥಳೀಯ ಭಾಷೆ ಮಾತನಾಡುತ್ತಿದ್ದವರ ನಡುವೆ ಭಿನ್ನಾಭಿಪ್ರಾಯ ಉಂಟಾಯಿತು. ದಿನನಿತ್ಯ ಮಾಡುವ ದೀನದಲಿತರ ಸೇವೆಯಲ್ಲಿ ತಮ್ಮ ಕಡೆಯ ವಿಧವೆಯರನ್ನು ಅಲಕ್ಷ್ಯಮಾಡಲಾಗುತ್ತಿದೆ ಎಂದು ಗ್ರೀಕರು ಗೊಣಗುಟ್ಟಿದರು. ಆಗ ಹನ್ನೆರಡು ಮಂದಿ ಪ್ರೇಷಿತರು ಭಕ್ತವಿಶ್ವಾಸಿಗಳ ಸಭೆಯನ್ನು ಕರೆದು, “ನಾವು ದೇವರ ವಾಕ್ಯದ ಬೋಧನೆಯನ್ನು ಅವಗಣಿಸಿ ಊಟೋಪಚಾರಗಳ ಸೇವೆಯಲ್ಲಿ ಮಗ್ನರಾಗಿ ಇರುವುದು ಸರಿಯಲ್ಲ. ಆದುದರಿಂದ ಸಹೋದರರೇ, ಪವಿತ್ರಾತ್ಮಭರಿತರೂ ಜ್ಞಾನಸಂಪನ್ನರೂ ಸನ್ಮಾನಿತರೂ ಆಗಿರುವ ಏಳು ವ್ಯಕ್ತಿಗಳನ್ನು ನಿಮ್ಮಿಂದ ಆರಿಸಿಕೊಳ್ಳಿ. ನಾವು ಅವರಿಗೆ ಈ ಜವಾಬ್ದಾರಿಯನ್ನು ವಹಿಸುತ್ತೇವೆ. ನಾವಾದರೋ ಪ್ರಾರ್ಥನೆಯಲ್ಲೂ ವಾಕ್ಯೋಪದೇಶದಲ್ಲೂ ನಿರತರಾಗುತ್ತೇವೆ,” ಎಂದರು. ಪ್ರೇಷಿತರ ಈ ಸಲಹೆಯನ್ನು ಇಡೀ ಸಭೆ ಅನುಮೋದಿಸಿತು. ಅಂತೆಯೇ ಅಗಾಧ ವಿಶ್ವಾಸ ಉಳ್ಳವನೂ ಪವಿತ್ರಾತ್ಮಭರಿತನೂ ಆದ ಸ್ತೇಫನ, ಫಿಲಿಪ್ಪ, ಪ್ರೊಖೋರ, ನಿಕನೋರ, ತಿಮೋನ, ಪರ್ಮೇನ ಮತ್ತು ಯೆಹೂದ್ಯ ಮತಾವಲಂಬಿಯಾದ ಅಂತಿಯೋಕ್ಯದ ನಿಕೊಲಾಯ ಎಂಬ ಏಳು ಮಂದಿಯನ್ನು ಆರಿಸಿಕೊಂಡರು. ಪ್ರೇಷಿತರ ಮುಂದೆ ಅವರನ್ನು ನಿಲ್ಲಿಸಿದರು. ಪ್ರೇಷಿತರು ಪ್ರಾರ್ಥನೆಮಾಡಿ ಅವರ ಮೇಲೆ ಹಸ್ತನಿಕ್ಷೇಪ ಮಾಡಿದರು. ದೇವರ ವಾಕ್ಯವು ಪ್ರವರ್ಧಿಸತೊಡಗಿತು. ವಿಶ್ವಾಸಿಗಳ ಸಂಖ್ಯೆ ಜೆರುಸಲೇಮಿನಲ್ಲಿ ಬಹಳವಾಗಿ ಹೆಚ್ಚಿತು. ಬಹುಮಂದಿ ಯಾಜಕರೂ ಆ ವಿಶ್ವಾಸಕ್ಕೆ ಶರಣಾದರು.

ಕೀರ್ತನೆ: 33:1-2, 4-5, 18-19

ಶ್ಲೋಕ: ನಮ್ಮ ಮೇಲಿರಲಿ ಪ್ರಭೂ, ನಿನ್ನ ಅಚಲ ಪ್ರೀತಿ , ಕಾದಿಹೆವು ಇದೋ ನಿನ್ನ ನಂಬಿ ಭರವಸದಿ. 

ಪ್ರಭು, ಕೀರ್ತಿಸುವೆನು ಸದಾ ನಿನ್ನಚಲ ಪ್ರೀತಿಯನು I
ಪ್ರಭು, ಕೀರ್ತಿಸುವೆನು ಸದಾ ನಿನ್ನಚಲ ಪ್ರೀತಿಯನು I

ಸಾರುವೆನು ತಲತಲಾಂತರಕು ನಿನ್ನ ಸತ್ಯತೆಯನು II
ನಿನ್ನಚಲ ಪ್ರೀತಿ ಪ್ರಭು, ನನಗೆ ಶಾಶ್ವತ ಸಿದ್ಧ I

ನಿನ್ನ ಸತ್ಯತೆ ಆಗಸದಂತೆ ಸ್ಥಿರ ಸ್ಥಾಪಿತ II
ಪ್ರಸಿದ್ಧಪಡಿಸುವುದು ಪ್ರಭು, ಗಗನವು ನಿನ್ನ ಮಹತ್ತನು I

ಸಂಕೀರ್ತಿಸುವುದು ಸ್ವರ್ಗೀಯ ಸಭೆ, ನಿನ್ನ ಸತ್ಯತೆಯನು II
ಮೇಘಮಂಡಲದಲಿ ಸಮಾನನಾರು ಪ್ರಭುವಿಗೆ I

ದೇವದೂತರೊಳು ಹೋಲಿಕೆ ಯಾವುದು ಆತನಿಗೆ II
ಧನ್ಯರು ಪ್ರಭು, ನಿನಗೆ ಜಯಕಾರ ಹಾಡುವವರು I

ನಿನ್ನ ಮುಖದ ಪ್ರಕಾಶದೊಳವರು ನಡೆಯುವರು II
ಆನಂದಿಸುವರವರು ಸದಾ ನಿನ್ನ ನಾಮದಲಿ I
ಪ್ರವರ್ಧಿಸುವರವರು ನಿನ್ನ ನ್ಯಾಯನೀತಿಯಲಿ II

ಶುಭಸಂದೇಶ: ಯೊವಾನ್ನ 6:16-21


ಸಾಯಂಕಾಲವಾದ ಮೇಲೆ ಯೇಸುಸ್ವಾಮಿಯ ಶಿಷ್ಯರು ಸರೋವರಕ್ಕೆ ಹೋಗಿ ದೋಣಿಯನ್ನು ಹತ್ತಿ ಕಫೆರ್ನವುಮಿನ ಕಡೆ ಸಾಗಿದರು. ಆಗಲೇ ಕತ್ತಲು ಕವಿದಿತ್ತು. ಯೇಸು ಅವರ ಬಳಿಗೆ ಇನ್ನೂ ಬಂದಿರಲಿಲ್ಲ. ಅಷ್ಟರಲ್ಲಿ ರಭಸವಾದ ಗಾಳಿ ಬೀಸತೊಡಗಿತು. ಸರೋವರವು ಅಲ್ಲೋಲಕಲ್ಲೋಲವಾಯಿತು. ಐದು ಆರು ಕಿಲೋಮೀಟರಿನಷ್ಟು ಹುಟ್ಟು ಹಾಕಿರಬೇಕು. ಆಗ ಯೇಸು ನೀರಿನ ಮೇಲೆ ನಡೆಯುತ್ತಾ ದೋಣಿಯನ್ನು ಸಮೀಪಿಸುತ್ತಿರುವುದು ಶಿಷ್ಯರಿಗೆ ಕಾಣಿಸಿತು. ಅದನ್ನು ನೋಡಿ ಅವರು ಹೆದರಿದರು. ಆಗ ಯೇಸು, “ನಾನೇ, ಇನ್ಯಾರೂ ಅಲ್ಲ; ಅಂಜಬೇಡಿ,” ಎಂದು ಹೇಳಿದರು. ಶಿಷ್ಯರು ಅವರನ್ನು ದೋಣಿಯೊಳಕ್ಕೆ ಬರಮಾಡಿಕೊಳ್ಳುವುದರಲ್ಲಿದ್ದರು. ಅಷ್ಟರಲ್ಲಿ, ದೋಣಿಯು ಸೇರಬೇಕಾಗಿದ್ದ ದಡವನ್ನು ತಲುಪಿತು.

ಮನಸಿಗೊಂದಿಷ್ಟು : ಇಂದಿನ ಶುಭಸಂದೇಶದಲ್ಲಿನ ‘ನಾನೇ ಇನ್ಯಾರು ಅಲ್ಲ’ ಎಂಬ ಮಾತನ್ನು ಗ್ರೀಕ್ ಭಾಷೆಯಲ್ಲಿ ‘ಇಗೋ ಇಮೈ’ ಎನ್ನುತ್ತಾರೆ. ಈ ಪದ ಯೊವಾನ್ನನ ಶುಭಸಂದೇಶದಲ್ಲಿ ಸುಮಾರು 24 ಬಾರಿ ವಿವಿಧ ಸಂದರ್ಭಗಳಲ್ಲಿ ಬಳಕೆಯಾಗಿದೆ ಎನ್ನಲಾಗಿದೆ. ‘ಇಗೋ ಇಮೈ’ ಎಂಬ ಉದ್ಘ್ಗಾರದ ನಂತರ ಆಯಾ ಸಂದರ್ಭಕ್ಕೆ ತಕ್ಕ ಮಾತುಗಳು ಬರುತ್ತದೆ.

ಇದು ಕೇವಲ ಅಂಕಿ ಅಂಶವಲ್ಲ, ಮಾಹಿತಿಯಲ್ಲ. ಯೇಸುವೇ ದೇವರ ಪುತ್ರ, ದೇವರು ಎಂದು ಸ್ಪಷ್ಟಪಡಿಸಲು ಯಾವ ಅವಕಾಶವನ್ನು ಬಿಡದ  ಯೊವಾನ್ನರು ಅಷ್ಟೂ ಸಂದರ್ಭಗಳಲ್ಲಿ ‘ಇಗೋ ಇಮೈ’ ಎಂಬ ಯೇಸುವಿನ  ಮಾತಿನ ಮೂಲಕ ಯೇಸುವಿನ ದೈವತ್ವಕ್ಕೆ ಮುದ್ರೆ ಒತ್ತುತ್ತಾ ಹೋಗುತ್ತಾರೆ.

ಇಲ್ಲಿ ಯೇಸುವನ್ನು ಬಿಟ್ಟು ಶಿಷ್ಯರು ದೋಣಿಯಲ್ಲಿ ಹೋಗಲಿಲ್ಲ. ಯೇಸುವೇ ಅವರನ್ನು ಕಳುಹಿಸಿ ತಾವು ನಡೆದುಕೊಂಡು ಬರುತ್ತಾರೆ. ಗಾಳಿಯ ರಭಸಕ್ಕೆ ಸರೋವರ ಅಲ್ಲೋಲಕಲ್ಲೋಲವಾಗಿ ಶಿಷ್ಯರಿಗೆ ಹೆದರಿಕೆಯಾಗಿರಬೇಕು. ಆದರೆ ಯೇಸು ಸಮೀಪಿಸಿದಾಗ  ಅವರನ್ನು ಗುರುತಿಸದೆ ಮತ್ತಷ್ಟು ಹೆದರುತ್ತಾರೆ. ‘ನಾನೇ ಮತ್ತ್ಯಾರು ಅಲ್ಲ’ ಎನ್ನುವ ಯೇಸುವಿನ ಮಾತಿನೊಂದಿಗೆ ಆ ಘಟನೆ ಸುಖಾಂತ್ಯದಲ್ಲಿ ಕೊನೆಗೊಳ್ಳುತ್ತದೆ.

ನಮ್ಮ ಜೀವನದಲ್ಲಿ ನಾವು ಒಮ್ಮೊಮ್ಮೆ ಯೇಸುವಿನೊಂದಿಗೆ ದೂರ ಸಾಗುತ್ತೇವೆಇನ್ನೂ ಕೆಲವೊಮ್ಮೆ ಯೇಸುವಿನಿಂದ ದೂರ ಸಾಗುತ್ತವೆ. ಆದರೆ ಯೇಸು ಗಮನಿಸುತ್ತಿರುತ್ತಾರೆ. ನಮ್ಮ ಕಷ್ಟದ ಸಮಯದಲ್ಲಿ ಬರುತ್ತಾರೆ. ಆದರೆ ನಾವು ಗಮನಿಸದೆ ಹೋಗುತ್ತೇವೆ. ರಕ್ಷಿಸಲು ತಮ್ಮದೇ ವಿಧಾನಗಳನ್ನು ಬಳಸುತ್ತಾರೆ. ನಾವು ಅರ್ಥಮಾಡಿಕೊಳ್ಳದೆ  ಆ ಶಿಷ್ಯರಂತೆ ಮತ್ತಷ್ಟು ಭಯಪಡುತ್ತೇವೆ. ಕೊನೆಗೆ ಅವರು  ನಮ್ಮನ್ನು  ದಡ ತಲುಪಿಸುತ್ತಾರೆ.

ಯೊವಾನ್ನರ ಶುಭಸಂದೇಶದ ಪ್ರತಿ ವಾಕ್ಯದಲ್ಲೂ ಸುಲಭವಾಗಿ ಕಾಣುವ ಅರ್ಥದ ಜೊತೆಗೆ ಮತ್ತೊಂದು ಗೂಢ ಅರ್ಥವಿರುತ್ತದೆ ಎನ್ನುತ್ತಾರೆ ಚಿಂತಕರು. ‘ನಾನೇ ಇನ್ಯಾರು’ ಅಲ್ಲ ಎನ್ನುವುದು ಆ ಸಂದರ್ಭದ ಮಾತಾದರೂನಮಗೆ ನಮ್ಮ ಬದುಕಿಗೆ ನಮ್ಮ ನಿತ್ಯಜೀವದ ಆಶಯಕ್ಕೆ ‘ಯೇಸು ಮಾತ್ರವೇ, ಇನ್ಯಾರು  ಇಲ್ಲ’ ಎಂಬ ಎಂಬ ಮಾತೇ ನಿತ್ಯ ಸತ್ಯ .

21.04.23 - “ಇಲ್ಲಿ ಒಬ್ಬ ಹುಡುಗನ ಬಳಿ ಜವೆಗೋದಿಯ ಐದು ರೊಟ್ಟಿಗಳೂ ಎರಡು ವಿೂನುಗಳೂ ಇವೆ"

 ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 5:34-42


ಆಗ ಆ ಸಭಾಸದಸ್ಯರಲ್ಲಿ ಒಬ್ಬನಾದ ಗಮಲಿಯೇಲ್ ಎಂಬ ಫರಿಸಾಯನು ಅಲ್ಲಿದ್ದನು. ಅವನೊಬ್ಬ ಗೌರವಾನ್ವಿತ ಮತ್ತು ಧರ್ಮಪಂಡಿತ. ಅವನು ಎದ್ದು ನಿಂತು ಪ್ರೇಷಿತರನ್ನು ಸ್ವಲ್ಪ ಹೊತ್ತು ಸಭೆಯಿಂದ ಹೊರಗೆ ಕಳುಹಿಸುವಂತೆ ಹೇಳಿ ಸಭೆಯನ್ನುದ್ದೇಶಿಸಿ, “ಇಸ್ರಯೇಲ್ ಸಬಾಸದಸ್ಯರೇ, ಇವರ ವಿರುದ್ಧ ನೀವು ಕೈಗೊಳ್ಳಬೇಕೆಂದಿರುವ ಕ್ರಮದ ಬಗ್ಗೆ ಎಚ್ಚರಿಕೆಯಿಂದಿರಿ. ಸ್ವಲ್ಪ ಕಾಲಕ್ಕೆ ಹಿಂದೆ ತೈದ ಎಂಬವನಿದ್ದ. ತಾನೊಬ್ಬ ಮಹಾಪುರುಷನು ಎಂದು ಹೇಳಿಕೊಳ್ಳುತ್ತಿದ್ದ. ಸುಮಾರು ನಾನೂರು ಮಂದಿ ಅವನ ಅನುಯಾಯಿಗಳಾದರು. ಅವನ ಕೊಲೆಯಾದದ್ದೇ, ಅವನನ್ನು ಹಿಂಬಾಲಿಸಿದವರೆಲ್ಲರೂ ಚದರಿಹೋದರು. ಅವನ ಪಕ್ಷ ನಿರ್ನಾಮವಾಯಿತು. ಅನಂತರ ಜನಗಣತಿಯ ಕಾಲದಲ್ಲಿ ಗಲಿಲೇಯದ ಯೂದ ಎಂಬವನು ಪ್ರಸಿದ್ಧಿಗೆ ಬಂದ. ತನ್ನೆಡೆಗೆ ಹಲವರನ್ನು ಆಕರ್ಷಿಸಿಕೊಂಡ. ಅವನೂ ಹತನಾದ. ಹಿಂಬಾಲಕರೆಲ್ಲರೂ ಚದುರಿಹೋದರು. ಆದುದರಿಂದ ನಾನು ನಿಮಗೆ ಹೇಳುವುದೇನೆಂದರೆ: ಈ ವ್ಯಕ್ತಿಗಳ ಗೊಡವೆಗೆ ಹೋಗಬೇಡಿ; ಇವರನ್ನು ಸುಮ್ಮನೆ ಬಿಟ್ಟುಬಿಡಿ. ಇವರ ಯೋಜನೆ ಅಥವಾ ಕಾರ್ಯ ಮಾನವಕಲ್ಪಿತವಾಗಿದ್ದರೆ ಅದರಷ್ಟಕ್ಕೆ ಅದೇ ನಾಶವಾಗುವುದು. ಇದು ದೈವಸಂಕಲ್ಪವಾಗಿದ್ದರೆ ಅವರನ್ನು ನಾಶಮಾಡಲು ನಿಮ್ಮಿಂದಾಗದು. ನೀವು ದೇವರಿಗೆ ವಿರುದ್ಧ ಹೋರಾಡಿದಂತೆ ಆದೀತು,” ಎಂದು ಹೇಳಿದನು. ಸಭಾಸದಸ್ಯರು ಗಮಲಿಯೇಲನ ಸಲಹೆಯನ್ನು ಅಂಗೀಕರಿಸಿದರು. ಪ್ರೇಷಿತರನ್ನು ಒಳಗೆ ಕರೆದು, ಚಾವಟಿಯಿಂದ ಹೊಡೆದು, ಇನ್ನು ಮೇಲೆ ಯೇಸುವಿನ ಹೆಸರಿನಲ್ಲಿ ಬೋಧಿಸಬಾರದೆಂದು ಕಟ್ಟಪ್ಪಣೆಮಾಡಿ ಅವರನ್ನು ಬಿಟ್ಟುಬಿಟ್ಟರು. ಯೇಸುವಿನ ನಾಮಕ್ಕೋಸ್ಕರ ಅಪಮಾನವನ್ನು ಅನುಭವಿಸುವ ಅರ್ಹತೆಯನ್ನು ಪಡೆದೆವೆಂದು ಪ್ರೇಷಿತರು ಸಂತೋಷಭರಿತರಾಗಿ ನ್ಯಾಯಸಭೆಯಿಂದ ಹೊರಬಂದರು. ಯೇಸುವೇ ಲೋಕೋದ್ದಾರಕನೆಂದು ಪ್ರತಿದಿನ ದೇವಾಲಯದಲ್ಲೂ ಮನೆಮನೆಗಳಲ್ಲೂ ಉಪದೇಶಿಸುವುದರಲ್ಲಿ ಹಾಗೂ ಸಾರುವುದರಲ್ಲಿ ನಿರತರಾದರು.

ಕೀರ್ತನೆ: 27:1, 4, 13-14
ಶ್ಲೋಕ: ನಾನೊಂದನು ಕೋರಿದೆ ಪ್ರಭುವಿನಿಂದ, ವಾಸಿಸಬೇಕು ಜೀವಮಾನವೆಲ್ಲ ನಾನಾತನ ಮಂದಿರದಲಿ 


ನನಗೆ ಬೆಳಕುನನಗೆ ರಕ್ಷೆಪ್ರಭುವೆ I

ನಾನಾರಿಗೂ ಅಳುಕೆನು II
ನನ್ನ ಬಾಳಿಗಾಧಾರ ಪ್ರಭುವೆ I
ನಾನಾರಿಗೂ ಅಂಜೆನು II

ನಾನೊಂದನು ಕೋರಿದೆ ಪ್ರಭುವಿನಿಂದ I
ನಾನದನ್ನೇ ನಿರೀಕ್ಷಿಸಿದೆ ಆತನಿಂದ I
ವಾಸಿಸಬೇಕು ಜೀವಮಾನವೆಲ್ಲ ನಾನಾತನ ಮಂದಿರದಲಿ I
ನಾ ತಲ್ಲೀನನಾಗಬೇಕು ಅಲ್ಲಾತನ ಪ್ರಸನ್ನತೆಯಲಿ II

ಪ್ರಭುವಿನೊಳಿತನು ನಾ ಕಾಣುವೆ ಜೀವಲೋಕದೊಳು I
ನಾನಿಟ್ಟಿರುವೆ ನಂಬಿಕೆ ನಿರೀಕ್ಷೆ ಅದರೊಳು II
ಪ್ರಭುವನು ಎದುರುನೋಡುತ್ತಿರು ಮನವೇ I
ಧೈರ್ಯದಿಂದ ನಿರೀಕ್ಷಿಸುತ್ತಿರು ಎದೆಗುಂದದೆ II


ಶುಭಸಂದೇಶ: ಯೊವಾನ್ನ 6:1-15


ಯೇಸುಸ್ವಾಮಿ ಗಲಿಲೇಯ ಸರೋವರವನ್ನು ದಾಟಿ, ಆಚೆಯ ದಡಕ್ಕೆ ಹೋದರು. ಅದಕ್ಕೆ ತಿಬೇರಿಯ ಸರೋವರವೆಂದು ಹೆಸರು. ಜನರ ದೊಡ್ಡ ಗುಂಪೊಂದು ಅವರ ಹಿಂದೆ ಹೋಯಿತು. ಏಕೆಂದರೆ, ಯೇಸು ಸೂಚಕಕಾರ್ಯಗಳನ್ನು ಮಾಡುತ್ತಾ  ರೋಗಪೀಡಿತರನ್ನು ಗುಣಪಡಿಸುತ್ತಾ ಇದ್ದುದ್ದನ್ನು ಆ ಜನರು ನೋಡಿದ್ದರು. ಯೇಸು ಬೆಟ್ಟವನ್ನು ಹತ್ತಿ ತಮ್ಮ ಶಿಷ್ಯರ ಸಂಗಡ ಕುಳಿತುಕೊಂಡರು. ಯೆಹೂದ್ಯರ ಪಾಸ್ಕ ಹಬ್ಬವು ಹತ್ತಿರವಾಗಿತ್ತು. ಯೇಸು ಕಣ್ಣು ಹಾಯಿಸಿ ನೋಡಿದಾಗ ಆ ದೊಡ್ಡ ಗುಂಪು ತಮ್ಮ ಕಡೆಗೆ ಬರುವುದನ್ನು ಕಂಡರು. “ಈ ಜನರ ಊಟಕ್ಕೆ ರೊಟ್ಟಿಯನ್ನು ನಾವು ಎಲ್ಲಿಂದ ಕೊಂಡುಕೊಳ್ಳುವುದು?” ಎಂದು ಯೇಸು ಫಿಲಿಪ್ಪನನ್ನು ಕೇಳಿದರು. ಫಿಲಿಪ್ಪನನ್ನು ಪರೀಕ್ಷಿಸುವ ಸಲುವಾಗಿ ಅವರು ಹಾಗೆ ಹೇಳಿದರು. ಏಕೆಂದರೆ, ತಾವು ಮಾಡಲಿರುವುದು ಅವರಿಗೆ ತಿಳಿದಿತ್ತು. ಅದಕ್ಕೆ ಫಿಲಿಪ್ಪನು, “ಇನ್ನೂರು ದಿನಾರಿ ನಾಣ್ಯಗಳನ್ನು ಕೊಟ್ಟು ರೊಟ್ಟಿಯನ್ನು ತಂದರೂ ಆಳಿಗೊಂದು ತುಂಡೂ ಬಾರದು,” ಎಂದನು. ಆಗ ಶಿಷ್ಯರಲ್ಲಿ ಒಬ್ಬನು, ಅಂದರೆ ಸಿಮೋನ್ ಪೇತ್ರನ ಸಹೋದರನಾದ ಅಂದ್ರೆಯನು, “ಇಲ್ಲಿ ಒಬ್ಬ ಹುಡುಗನ ಬಳಿ ಜವೆಗೋದಿಯ ಐದು ರೊಟ್ಟಿಗಳೂ ಎರಡು ವಿೂನುಗಳೂ ಇವೆ. ಆದರೆ ಈ ಜನಸಮೂಹಕ್ಕೆ ಇವೆಲ್ಲಿ ಸಾಕಾಗುತ್ತವೆ?” ಎಂದನು. ಯೇಸು, “ಜನರನ್ನು ಊಟಕ್ಕೆ ಕೂರಿಸಿರಿ,” ಎಂದರು. ಅಲ್ಲಿ ಹುಲುಸಾಗಿದ್ದ ಹುಲ್ಲಿನ ಮೇಲೆ ಜನರು ಕುಳಿತುಕೊಂಡರು. ಗಂಡಸರ ಸಂಖ್ಯೆಯೇ ಐದುಸಾವಿರದಷ್ಟಿತ್ತು. ಯೇಸು, ರೊಟ್ಟಿಗಳನ್ನು ತೆಗೆದುಕೊಂಡು ದೇವರಿಗೆ ಸ್ತೋತ್ರವನ್ನು ಸಲ್ಲಿಸಿ, ಕುಳಿತಿದ್ದ ಜನರಿಗೆ ಅವುಗಳನ್ನು ಹಂಚಿದರು. ಹಾಗೆಯೇ ವಿೂನುಗಳನ್ನೂ ಹಂಚಿಕೊಟ್ಟರು. ಎಲ್ಲರೂ ತಮಗೆ ಬೇಕಾದಷ್ಟು ತಿಂದರು. ಅವರೆಲ್ಲರೂ ತಿಂದು ತೃಪ್ತರಾದ ಮೇಲೆ ಯೇಸು, “ತಿಂದುಳಿದ ತುಂಡುಗಳನ್ನೆಲ್ಲಾ ಒಟ್ಟುಗೂಡಿಸಿರಿ; ಒಂದು ತುಂಡೂ ಹಾಳಾಗಬಾರದು,” ಎಂದು ತಮ್ಮ ಶಿಷ್ಯರಿಗೆ ಹೇಳಿದರು. ತಿಂದುಳಿದ ಆ ಐದು ರೊಟ್ಟಿಗಳ ತುಂಡುಗಳನ್ನು ಒಟ್ಟುಗೂಡಿಸಲು ಅವು ಹನ್ನೆರಡು ಬುಟ್ಟಿಗಳ ತುಂಬಾ ಆದವು. ಯೇಸು ಮಾಡಿದ ಈ ಸೂಚಕಕಾರ್ಯಗಳನ್ನು ಕಂಡ ಜನರು, “ಲೋಕಕ್ಕೆ ಬರಬೇಕಾಗಿದ್ದ ಪ್ರವಾದಿ ನಿಜವಾಗಿಯೂ ಇವರೇ,” ಎಂದು ಹೇಳತೊಡಗಿದ್ದರು. ಅವರೆಲ್ಲರೂ ಬಂದು ತಮ್ಮನ್ನು ಹಿಡಿದು ಅರಸನನ್ನಾಗಿ ಮಾಡುವ ಯೋಚನೆಯಲ್ಲಿದ್ದಾರೆ ಎಂಬುದನ್ನು ಅರಿತ ಯೇಸು ತಾವೊಬ್ಬರೇ ಬೆಟ್ಟದ ಕಡೆಗೆ ಹೊರಟುಬಿಟ್ಟರು.

ಮನಸಿಗೊಂದಿಷ್ಟು 

ಇಂದಿನ ಶುಭ ಸಂದೇಶವು ಹಳೆಯ ಒಡಂಬಡಿಕೆಯ ಪ್ರವಾದಿ ಎಲೀಷನ ಇದೇ ರೀತಿಯ  ಘಟನೆಯನ್ನು (2 ಅರಸರು 4:42:44) ನೆನಪಿಸುತ್ತದೆ. ಈ ಶುಭ ಸಂದೇಶದ ಭಾಗದಲ್ಲಿ ನಾವು ಅನೇಕ ಪಾತ್ರಗಳನ್ನು ಕಾಣಬಹುದು. ಈ ಪಾತ್ರಗಳಲ್ಲಿ ನಾವು ಯಾವ ಪಾತ್ರಕ್ಕೆ ಹತ್ತಿರವಾಗಿದ್ದೇವೆ ಎಂಬುದಾಗಿ ಪ್ರಶ್ನಿಸಿಕೊಳ್ಳಲು ಸಹಾಯ ಮಾಡುತ್ತದೆ.

ಯೇಸುವನ್ನು ನೋಡಲು, ಅವರ ಮಾತುಗಳನ್ನು ಕೇಳಲು ಗುಣವಾಗಲು ಬಂದವರ ಜೊತೆ ಪಾಸ್ಕ ಹಬ್ಬಕ್ಕೆ ಹೊರಟಿದ್ದ ಪ್ರವಾಸಿಗರು ಎಲ್ಲರೂ ಅಲ್ಲಿ ಬಂದು ಸೇರಿದ್ದರು. ಯೇಸು ಜನರನ್ನು ನೋಡಿ ಮರುಕ ಗೊಳ್ಳುತ್ತಾರೆ ಅವರಿಗೆ ತಿನ್ನಲು ಏನಾದರೂ ನೀಡಬೇಕು ಎಂದುಕೊಳ್ಳುತ್ತಾರೆ. ಆದರೆ ಪರೀಕ್ಷಿಸಲೋ ಎಂಬಂತೆ ಫಿಲೀಪನನ್ನು ಕೇಳುತ್ತಾರೆ.

ಫೀಲಿಪ್ಪನದು ನಮ್ಮಂತೆಯೇ ಮನೋಭಾವ. ಅಲ್ಲಿ ಸೇರಿದ ದೊಡ್ಡ ಜನಸಮೂಹಇರುವ ೨೦೦ ದಿನಾರಿಯಷ್ಟು ಸಣ್ಣ ಹಣ ಅವನನ್ನು ನಿರುತ್ಸಾಹಗೊಳಿಸುತ್ತದೆ. ಯೇಸುವೇ ತನ್ನ ಜೊತೆ ಇದ್ದಾರೆ ಎನ್ನುವುದನ್ನು ಆತ ಮರೆಯುತ್ತಾನೆ. ಅಂದ್ರೆಯ ಎಂದಿನಂತೆ ಉತ್ಸಾಹ ತೋರುತ್ತಾನೆ. 5 ರೊಟ್ಟಿ 2 ಮೀನು ಇಟ್ಟಿದ್ದ ಹುಡುಗನನ್ನು ಹುಡುಕಿ ಯೇಸುವಿನ ಬಳಿ ಕರೆ ತರುತ್ತಾನೆ. ಹುಡುಗ ತನ್ನ ಬಳಿಯಿದ್ದ ಆಹಾರವನ್ನು ಹಂಚಿಕೊಳ್ಳಲು ಒಪ್ಪುತ್ತಾನೆ. ಮುಂದಿನದು ಇತಿಹಾಸ. 5000ಕ್ಕಿಂತ ಹೆಚ್ಚಿನ ಜನರ ಹಸಿವು ನೀಗುತ್ತದೆ.

ಈ ಶುಭ ಸಂದೇಶದಲ್ಲಿ ಬರುವ ವಿವಿಧ ರೀತಿಯ ಜನರಲ್ಲಿ ನಾವು ಯಾವ ರೀತಿಯ ವ್ಯಕ್ತಿತ್ವದವರು ಎಂಬುದನ್ನು ಪ್ರಶ್ನಿಸಿಕೊಳ್ಳಬಹುದು. ಯೇಸುವಿನ ಮಾತನ್ನು ಕೇಳಲು ಮಾತ್ರ ಬಂದವರೇ, ಅವರ ಕಾರ್ಯಗಳನ್ನು ನೋಡಲು ಬಂದವರೇ? ನಿಜ ಪ್ರೀತಿಯಿಂದ ಹಾತೊರೆದು ಬಂದವರೇ? ಕೇವಲ ಕುತೂಹಲದಿಂದ ನೊಡಲು ಬಂದ ಪಯಣಿಗರೇಅವರ ಅಗಾಧ ಮಹಿಮೆಯನ್ನು ಕಾಣದ ಫಿಲಿಪ್ ನಂಥವರೇ? ಅದ್ಭುತಕ್ಕೆ ಮುನ್ನುಡಿಯಾದ ಅಂದ್ರೆಯನಂಥವರೇ ಹಂಚಿಕೊಳ್ಳಲು ಸಿದ್ಧನಾಗಿ ಅದ್ಭುತಕ್ಕೆ ಕಾರಣನಾದ ಆ ಹುಡುಗನಂತೆಯೇ?

ಕೊನೆಗೆ ತಮ್ಮ ಅದ್ಭುತ ಕಾರ್ಯದಿಂದ ಸೃಷ್ಟಿಯಾದ ಆಹಾರವು ಸ್ವಲ್ಪವೂ ಹಾಳಾಗದಂತೆ ಎಲ್ಲವನ್ನು ಯೇಸು ಒಟ್ಟುಗೂಡಿಸುತ್ತಾರೆ.  ಅವರ ಅದ್ಭುತ ಹಸ್ತದಲ್ಲಿ ಬಾಳುತ್ತಿರುವ ನಮ್ಮ ಜೀವನ ಹಾಳಾಗದಂತೆ ಅವರಲ್ಲಿ ಒಟ್ಟುಗೂಡೋಣ


29.08.2026 - ಸ್ನಾನಿಕ ಯೊವಾನ್ನನ ತಲೆಯನ್ನು ಕೇಳು

  ಸಂತ ಸ್ನಾನಿಕ ಯೊವಾನ್ನನ ಶಿರಚ್ಛೇದನ ಮೊದಲನೇ ವಾಚನ: ಯೆರೆಮಿಯ: 1: 17-19 ಆದುದರಿಂದ ನೀನು ನಿನ್ನ ನಡುವನ್ನು ಕಟ್ಟಿ ನಿಂತುಕೊಂಡು ನಾನು ನಿನಗೆ ಆಜ್ಞಾಪಿಸುವುದನ್ನೆಲ್ಲ...