01.03.23 - "ಪ್ರವಾದಿ ಯೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ"

ಮೊದಲನೇ ವಾಚನ: ಯೋನ 3:1-10


ಯೋನನಿಗೆ ಸರ್ವೇಶ್ವರಸ್ವಾಮಿಯ ವಾಣಿ ಪುನಃ ಕೇಳಿಸಿತು: “ಎದ್ದು ಮಹಾನಗರವಾದ ನಿನೆವೆಗೆ ಹೋಗು. ನಾನು ನಿನಗೆ ತಿಳಿಸಿದ ಸಂದೇಶವನ್ನು ಅಲ್ಲಿಯ ನಿವಾಸಿಗಳಿಗೆ ಸಾರು,” ಎಂದಿತು. ಸ್ವಾಮಿಯ ಆಜ್ಞಾನುಸಾರ ಯೋನನು ನಿನೆವೆಗೆ ಹೋದನು. ಅದೊಂದು ವಿಸ್ತಾರವಾದ ನಗರ. ಅದನ್ನು ಹಾದು ಹೋಗಲು ಮೂರು ದಿನಗಳು ಹಿಡಿಯುತ್ತಿತ್ತು. ನಗರವನ್ನು ಪ್ರವೇಶಿಸಿ ಒಂದು ದಿನದ ಪ್ರಯಾಣ ಮಾಡಿದ ನಂತರ ಯೋನನು ಸ್ವಾಮಿಯ ಸಂದೇಶವನ್ನು ಸಾರುತ್ತಾ, “ಜನರೇ ಕೇಳಿ: ನಿಮ್ಮ ನಗರ ನಲವತ್ತು ದಿನಗಳಲ್ಲಿ ನಾಶವಾಗುವುದು,” ಎಂದನು. ಆ ನಗರದ ನಿವಾಸಿಗಳು ದೇವರ ಸಂದೇಶವನ್ನು ನಂಬಿದರು. ಪ್ರತಿಯೊಬ್ಬನೂ ಉಪವಾಸ ಕೈಗೊಳ್ಳಬೇಕೆಂದು ನಿರ್ಧರಿಸಿದರು. ಹಿರಿಯರು ಮೊದಲುಗೊಂಡು ಕಿರಿಯರವರೆಗೆ – ಎಲ್ಲರೂ ಮನಃಪರಿವರ್ತನೆಯ ಚಿಹ್ನೆಯಾಗಿ ಗೋಣಿ ತಟ್ಟನ್ನು ಉಟ್ಟುಕೊಂಡರು. ಈ ಸಂಗತಿ ನಿನೆವೆಯ ಅರಸನ ಕಿವಿಗೆ ಬಿದ್ದಿತು. ಅವನು ಸಿಂಹಾಸನದಿಂದ ಇಳಿದು, ತನ್ನ ರಾಜವಸ್ತ್ರಗಳನ್ನು ತೆಗೆದುಬಿಟ್ಟು, ಗೋಣಿತಟ್ಟನ್ನು ಉಟ್ಟುಕೊಂಡು ಬೂದಿಯಲ್ಲಿ ಕುಳಿತು ಕೊಂಡನು. ಕೂಡಲೇ ತನ್ನ ಪ್ರಜೆಗಳಿಗೆ ಈ ರಾಜಾಜ್ಞೆಯನ್ನು ನಿನೆವೆಯಲ್ಲಿ ಹೊರಡಿಸಿದನು: “ಅರಸನ ಹಾಗೂ ಆತನ ಆಪ್ತ ಪ್ರಮುಖರ ಆಜ್ಞೆಯಿದು: ಜನರಾಗಲೀ, ದನಕರುಗಳಾಗಲೀ, ಕುರಿಮೇಕೆಗಳಾಗಲೀ, ಯಾರೂ ಏನನ್ನೂ ತಿನ್ನಬಾರದು, ಕುಡಿಯಲೂಬಾರದು. ಎಲ್ಲ ಜನರೂ ಗೋಣಿತಟ್ಟನ್ನು ಉಟ್ಟುಕೊಳ್ಳಬೇಕು: ಪ್ರಾಣಿಗಳಿಗೂ ಹೊದಿಸಬೇಕು. ದೇವರನ್ನು ಶ್ರದ್ಧೆಯಿಂದ ಪ್ರಾರ್ಥಿಸಬೇಕು. ಎಲ್ಲರೂ ದೌರ್ಜನ್ಯವನ್ನು ತ್ಯಜಿಸಿ, ಹಿಂಸಾಚಾರವನ್ನು ಕೈಬಿಡಬೇಕು. ಹೀಗೆ ಮಾಡಿದ್ದೇ ಆದರೆ, ದೇವರು ಒಂದು ವೇಳೆ ತಮ್ಮ ಮನಸ್ಸನ್ನು ಬದಲಾಯಿಸಿ, ತಮ್ಮ ಉಗ್ರ ಕೋಪವನ್ನು ತಡೆದಾರು, ನಾವು ನಾಶವಾಗದೆ ಉಳಿದೇವು.” ಆ ಜನರು ಮಾಡಿದುದೆಲ್ಲವನ್ನು ದೇವರು ಗಮನಿಸಿದರು. ತಮ್ಮ ದುರ್ನಡತೆಯನ್ನು ಜನರು ಕೈಬಿಟ್ಟದ್ದನ್ನು ಕಂಡು, ಮನ ಮರುಗಿ ಅವರಿಗೆ ವಿಧಿಸಬೇಕೆಂದಿದ್ದ ಶಿಕ್ಷೆಯನ್ನು ತಡೆ ಹಿಡಿದರು.

ಕೀರ್ತನೆ: 51:3-4, 12-13, 18-19

ಶ್ಲೋಕ: ನೊಂದ ಬೆಂದ ಮನವನಾತ ಒಲ್ಲೆಯೆನನು.

ಶುಭಸಂದೇಶ: ಲೂಕ 11:29-32

ಜನರ ಗುಂಪು ಹೆಚ್ಚುತ್ತಿದ್ದಾಗ, ಯೇಸುಸ್ವಾಮಿ ಹೀಗೆಂದು ಮುಂದುವರಿಸಿದರು: “ಈ ಪೀಳಿಗೆ ಕೆಟ್ಟ ಪೀಳಿಗೆ. ಇದು ಅದ್ಭುತ ಕಾರ್ಯವನ್ನು ಸಂಕೇತವಾಗಿ ಕೋರುತ್ತದೆ. ಪ್ರವಾದಿ ಯೋನನ ಸಂಕೇತವೇ ಹೊರತು ಬೇರೆ ಯಾವ ಸಂಕೇತವೂ ಇದಕ್ಕೆ ದೊರಕದು. ಹೇಗೆಂದರೆ, ನಿನೆವೆ ನಗರದ ಜನರಿಗೆ ಪ್ರವಾದಿ ಯೋನನು ಸಂಕೇತವಾದಂತೆ ನರಪುತ್ರನು ಈ ಸಂತತಿಗೆ ಸಂಕೇತವಾಗಿರುವನು. “ದೈವ ತೀರ್ಪಿನ ದಿನ ದಕ್ಷಿಣ ದೇಶದ ರಾಣಿ ಈ ಪೀಳಿಗೆಗೆ ಎದುರಾಗಿ ನಿಂತುಕೊಂಡು, ಇವರನ್ನು ಅಪರಾಧಿಗಳೆಂದು ತೋರಿಸುವಳು. ಆಕೆ ಸೊಲೊಮೋನನ ಜ್ಞಾನೋಕ್ತಿಗಳನ್ನು ಕೇಳುವುದಕ್ಕಾಗಿ ದೇಶದ ಕಟ್ಟಕಡೆಯಿಂದ ಬಂದಳು. ಆದರೆ, ಸೊಲೊಮೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ. ತೀರ್ಪಿನ ದಿನ ನಿನೆವೆ ನಗರದವರು ಈ ಪೀಳಿಗೆಗೆ ಎದುರಾಗಿ ನಿಂತು ಇದನ್ನು ಅಪರಾಧಿ ಎಂದು ತೋರಿಸುವರು. ಏಕೆಂದರೆ, ಪ್ರವಾದಿ ಯೋನನ ಬೋಧನೆಯನ್ನು ಕೇಳಿ ಪಶ್ಚಾತ್ತಾಪಪಟ್ಟು ಅವರು ದೇವರಿಗೆ ಅಭಿಮುಖರಾದರು. ಆದರೆ ಪ್ರವಾದಿ ಯೋನನಿಗಿಂತಲೂ ಮೇಲಾದವನು ಇಗೋ, ಇಲ್ಲಿದ್ದಾನೆ. 

ಮನಸ್ಸಿಗೊಂದಿಷ್ಟು :  ಪ್ರವಾದಿ ಯೋನನ ಮಾತಿಗೆ ಬೆಲೆ ಕೊಟ್ಟು ಪಶ್ಚಾತ್ತಾಪಪಟ್ಟ ನೆನೆವೆ ನಗರ ಒಂದೆಡೆ , ದೇವರ ಜ್ಞಾನವನ್ನು ಸೊಲೋಮೋನನಲ್ಲಿ ಕಾಣಲು ಬಂದ ರಾಣಿಯ ಚರಿತ್ರೆ ಇನ್ನೊಂದೆಡೆ. ಇದರ ನಡುವೆ ದೇವರ ಪುತ್ರನೇ ಜೊತೆಯಲ್ಲಿದ್ದರೂ ನಂಬದ, ಸಂತೋಷಿಸದ, ಅವರ ಮಾತಿಗೆ ಬೆಲೆ ಕೊಡದ, ಪಾಪಕ್ಕೆ ಪಶ್ಚಾತ್ತಾಪ ಪಡದ ಜನರ ಬಗ್ಗೆ ಯೇಸು ನಿರಾಸೆಯಿಂದ ಮಾತಾಡುತ್ತಾರೆ. ನಾವೂ ಕೂಡ ಯೇಸುವನ್ನು ಆ ನಿರಾಸೆಗೆ ತಳ್ಳದಂತೆ ನಡೆದುಕೊಳ್ಳಬೇಕಾಗಿದೆ. 

ಪ್ರಶ್ನೆ : ಮೂರು ದಿನ ಮೀನಿನ ದೇಹದಲ್ಲಿದ್ದು ಹೊರ ಬಂದ ಯೋನನಿಗಿಂತ , ಅಪಾರ ಜ್ಞಾನಿಯಾದ ಸೊಲೋಮೋನನಿಗಿಂತ ಶ್ರೇಷ್ಟರೂ, ನಮ್ಮ ಹೃದಯದಲ್ಲಿ ನೆಲಸಲು ಹಾತೊರೆಯುತ್ತಿರುವವರೂ ಆದ ಯೇಸುವಿಗೆ ನಮ್ಮ ಪ್ರತಿಕ್ರಿಯೆ ಏನು?

ಪ್ರಭುವೇ,
ನನ್ನ ಪ್ರತಿ ಉಸಿರೂ 
ನಿನ್ನ ಕರುಣೆಯ ಸಂಕೇತ
ಈ ನನ್ನ ಜೀವ ಭಾವ
ನಿನ್ನ ತ್ಯಾಗದೇ ನಿರ್ಮಿತ  
ಕೇಳಲಾರೆ ಬೇರಾವ ಅದ್ಭುತ
ನನ್ನೊಳಗಿರು ನೀ ಓ ಜೀವದಾತ
-ಚಿತ್ತ

28.02.23 - "ನೀನು ಪ್ರಾರ್ಥನೆ ಮಾಡುವಾಗ ನಿನ್ನ ಕೊಠಡಿಗೆ ಹೋಗು; ಬಾಗಿಲನ್ನು ಮುಚ್ಚು; ಅಂತರಂಗದಲ್ಲಿರುವ ನಿನ್ನ ತಂದೆಗೆ ಪ್ರಾರ್ಥನೆ ಮಾಡು"

ಮೊದಲನೇ ವಾಚನ: ಯೆಶಾಯ 55:10-11


ಸ್ವಾಮಿ ಸರ್ವೇಶ್ವರ ಹೀಗೆನ್ನುತ್ತಾರೆ: ಮಳೆಯೂ ಹಿಮವೂ ಆಕಾಶಮಂಡಲದಿಂದಿಳಿದು ಬಂದು ತೋಯಿಸಿ, ಹಸಿರುಗೊಳಿಸಿ, ಹುಲುಸು ಮಾಡುತ್ತವೆ ಭೂಮಿಯನು. ಬಿತ್ತುವವನಿಗೆ ಬೀಜ, ಉಣ್ಣುವವನಿಗೆ ಆಹಾರ ಒದಗಿಸದೆ, ಹಿಂದಿರುಗಿ ಬರುವುದಿಲ್ಲ ಅವು ಸುಮ್ಮನೆ ಬಂದಲ್ಲಿಗೆ. ಅಂತೆಯೇ, ನನ್ನ ಬಾಯಿಂದ ಹೊರಡುವ ಮಾತು ನನ್ನ ಇಷ್ಟಾರ್ಥವನು ನೆರವೇರಿಸಿದ ಹೊರತು, ನನ್ನ ಉದ್ದೇಶವನು ಕೈಗೂಡಿಸಿದ ಹೊರತು, ನನ್ನ ಬಳಿಗೆ ವ್ಯರ್ಥವಾಗಿ ಹಿಂದಿರುಗದು.

ಕೀರ್ತನೆ: 34:4-5, 5-7, 16-17, 18-19

ಶ್ಲೋಕ: ಸಜ್ಜನನಿಗೊದುವ ಸಂಕಟಗಳು ವಿಪರೀತ, ಪ್ರಭುವೆಲ್ಲವನು ನಿವಾರಿಸುವುದು ನಿಶ್ಚಿತ

1. ಬನ್ನಿ, ಕೊಂಡಾಡುವ ಪ್ರಭು ದೇವನನು|
ಘನಪಡಿಸೋಣ ಆತನ ಶ್ರೀ ನಾಮವನು||
ಬೇಡಿಕೊಳ್ಳಲು ಕೊಟ್ಟನಾತ ಸದುತ್ತರವನು|
ಭಯಭೀತಿಯಿಂದೆನ್ನನು ಮುಕ್ತನಾಗಿಸಿಹನು||

2. ಆತನತ್ತ ತಿರುಗಿದ ಮುಖ ಅರಳುವುದು|
ಲಜ್ಜೆಯಿಂದೆಂದಿಗು ಕುಂದಿ ಹೋಗದು||
ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು|
ಸರ್ವಾಪತ್ತಿನಿಂದವನು ಮುಕ್ತಗೊಂಡನು||

3. ದುರ್ಜನರಿಗಾದರೋ ಪ್ರಭು ವಿಮುಖನು|
ಅವರ ಹೆಸರನು ಧರೆಯಿಂದ ಅಳಿಸುವನು||
ಸಜ್ಜನರನು ಪ್ರಭು ಕಟಾಕ್ಷಿಸುವನು|
ಅವರ ಮೊರೆಗಾತ ಕಿವಿಗೊಡುವನು||

4. ಕಿವಿಗೊಡುವನು ಪ್ರಭು ಸಜ್ಜನರ ಮೊರೆಗೆ|
ನೆರವೀವನವರ ಕಷ್ಟ ನಿವಾರಣೆಗೆ||
ಸನಿಹದಲ್ಲಿಹನು ಪ್ರಭು ಭಗ್ನ ಹೃದಯಿಗಳಿಗೆ|
ಉದ್ಧಾರಕನಾತನು ಮನಸ್ಸು ಕುಗ್ಗಿದವರಿಗೆ||

ಶುಭಸಂದೇಶ: ಮತ್ತಾಯ 6:7-15

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು:  "ಪ್ರಾರ್ಥನೆ ಮಾಡುವಾಗ ಪರಕೀಯರಂತೆ ನಿರರ್ಥಕ ಪದಗಳನ್ನು ಪಿಸುಗುಟ್ಟಬೇಡ. ತಮ್ಮ ಪ್ರಾರ್ಥನೆ ದೀರ್ಘವಾದಷ್ಟೂ ದೇವರು ಆಲಿಸುತ್ತಾರೆಂದು ಅವರು ಭಾವಿಸುತ್ತಾರೆ. ನೀವು ಅವರಂತೆ ಆಗಬೇಡಿ. ನಿಮ್ಮ ಅಗತ್ಯಗಳೇನೆಂದು ನೀವು ಕೇಳುವುದಕ್ಕೆ ಮೊದಲೇ ನಿಮ್ಮ ತಂದೆಗೆ ಗೊತ್ತಿದೆ. ಆದುದರಿಂದ ಹೀಗೆಂದು ಪ್ರಾರ್ಥನೆ ಮಾಡಿ: "ಸ್ವರ್ಗದಲ್ಲಿರುವ ಓ ನಮ್ಮ ತಂದೆಯೇ, ನಿಮ್ಮ ಪವಿತ್ರ ನಾಮ ಪೂಜಿತವಾಗಲಿ; ನಿಮ್ಮ ಸಾಮ್ರಾಜ್ಯ ಬರಲಿ; ನಿಮ್ಮ ಚಿತ್ತ ಸ್ವರ್ಗದಲ್ಲಿ ನೆರವೇರುವ ಪ್ರಕಾರ ಜಗತ್ತಿನಲ್ಲಿಯೂ ನೆರವೇರಲಿ. ನಮ್ಮ ಅನುದಿನದ ಆಹಾರವನ್ನು ನಮಗಿಂದು ಕೊಡಿ. ನಮಗೆ ತಪ್ಪು ಮಾಡಿದವರನ್ನು ನಾವು ಕ್ಷಮಿಸುವ ಪ್ರಕಾರ ನಾವು ಮಾಡಿದ ತಪ್ಪುಗಳನ್ನು ಕ್ಷಮಿಸಿ. ನಮ್ಮನ್ನು ಶೋಧನೆಗೆ ಒಳಪಡಿಸಬೇಡಿ; ಕೇಡಿನಿಂದ ನಮ್ಮನ್ನು ರಕ್ಷಿಸಿರಿ. "ಜನರ ತಪ್ಪುಗಳನ್ನು ನೀವು ಕ್ಷಮಿಸಿದರೆ ಸ್ವರ್ಗದಲ್ಲಿರುವ ನಿಮ್ಮ ತಂದೆ ನಿಮ್ಮನ್ನು ಕ್ಷಮಿಸುವರು. ಜನರನ್ನು ನೀವು ಕ್ಷಮಿಸದಿದ್ದರೆ, ನಿಮ್ಮ ತಂದೆಯೂ ನಿಮ್ಮ ತಪ್ಪುಗಳನ್ನು ಕ್ಷಮಿಸರು."


ಮನಸ್ಸಿಗೊಂದಿಷ್ಟು : ಪರಲೋಕ ಪ್ರಾರ್ಥನೆಯ ಮೊದಲ ಭಾಗವು ದೇವರಿಗೆ ಸ್ತೋತ್ರ ಸಲ್ಲಿಸುತ್ತಾ ಅವರಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಂಡರೆ, ಎರಡನೆಯ ಭಾಗವು ಅವಶ್ಯಕತೆಗಳತ್ತ ಗಮನ ಹರಿಸುತ್ತದೆ. ದೇವರಿಗೆ ಸಲ್ಲಬೇಕಾದ ಎಲ್ಲ ಸ್ತುತಿ ಗೌರವಗಳು ಸಂದರೆ ನಮ್ಮ ಬಾಳು ಸುಂದರವಾಗಿ, ನಮ್ಮ ಅವಶ್ಯಕತೆಗಳು ದೇವರ ಅನುಗ್ರಹದಿಂದ  ನೆರವೇರುತ್ತದೆ. ಕ್ಷಮೆ ನಾವು ಕೊಟ್ಟಂತೆ ನಮಗೆ ದೊರಕುತ್ತದೆ.    

ಪ್ರಶ್ನೆ : ಪರಲೋಕ ಪ್ರಾರ್ಥನೆ ನಮ್ಮ ಬಾಳಿಗೆಷ್ಟು ಪ್ರಸ್ತುತ?

ಪ್ರಭುವೇ,
ನೀವೇ ಕಲಿಸಿಕೊಟ್ಟ ಈ ಪ್ರಾರ್ಥನೆ 
ಆಗಲಿ ನನ್ನ ಅನುದಿನದ  ನಿವೇದನೆ
ನನ್ನೀ  ಹೃದಯದಲ್ಲಿ ನಿಮ್ಮ ಚಿತ್ತ
ನೆರವೇರುತ್ತ ಸಾಗುತ್ತಿರಲಿ  ನಿಮ್ಮತ್ತ
-ಚಿತ್ತ

27.02.23 - "ನಾನು ಹಸಿದಿದ್ದೆ, ನನಗೆ ಆಹಾರ ಕೊಟ್ಟಿರಿ; ಬಾಯಾರಿದ್ದೆ, ಕುಡಿಯಲು ಕೊಟ್ಟಿರಿ"

ಮೊದಲನೇ ವಾಚನ: ಯಾಜಕಕಾಂಡ 19:1-2, 11-18

ಮೋಶೆಗೆ ಹೇಳಿದರು: “ನಿಮ್ಮ ದೇವರಾದ ಸರ್ವೇಶ್ವರನೆಂಬ ನಾನು ಪರಿಶುದ್ಧ ನಾಗಿರುವಂತೆ ನೀವು ಕೂಡ ಪರಿಶುದ್ಧರಾಗಿರಬೇಕು. ಕಳಬೇಡಹುಸಿಯನ್ನು ನುಡಿಯಲು ಬೇಡಒಬ್ಬರನ್ನೊಬ್ಬರು ಮೋಸಗೊಳಿಸುವುದು ಬೇಡ. ನನ್ನ ಹೆಸರಿನ ಮೇಲೆ ಸುಳ್ಳಾಣೆಯಿಟ್ಟು ನಿನ್ನ ದೇವರ ನಾಮಕ್ಕೆ ಅಪಕೀರ್ತಿ ತರಬೇಡನಾನೇ ಸರ್ವೇಶ್ವರ.ಮತ್ತೊಬ್ಬನನ್ನು ಬಲಾತ್ಕರಿಸಬೇಡಅವನ ಸೊತ್ತನ್ನು ಅಪಹರಿಸಬೇಡಕೂಲಿಯವನ ಕೂಲಿಯನ್ನು ಮರುದಿನದವರೆಗೆ ನಿನ್ನ ಬಳಿಯಲ್ಲೇ ಇಟ್ಟುಕೊಳ್ಳಬೇಡ. ಕಿವುಡರನ್ನು ದೂಷಿಸಬೇಡಕುರುಡರು ನಡೆಯುವ ದಾರಿಯಲ್ಲಿ ಎರಡು ಕಲ್ಲನ್ನು ಇಡಬೇಡನಿನ್ನ ದೇವರಲ್ಲಿ ಭಯಭಕ್ತಿಯಿರಲಿನಾನೇ ಸರ್ವೇಶ್ವರ. ವ್ಯಾಜ್ಯತೀರಿಸುವಾಗ ಅನ್ಯಾಯವಾದ ತೀರ್ಪನ್ನು ಕೊಡಬೇಡಬಡವನ ಬಡತನವನ್ನಾಗಲಿದೊಡ್ಡವನ ಘನತೆಯನ್ನಾಗಲಿ ಲಕ್ಷ್ಯಮಾಡದೆ ಪಕ್ಷಪಾತವಿಲ್ಲದ ತೀರ್ಪನ್ನು ಕೊಡು.ನಿನ್ನ ಜನರ ನಡುವೆ ಚಾಡಿಕೋರನಾಗಿ ತಿರುಗಾಡಬೇಡಮತ್ತೊಬ್ಬನಿಗೆ ಮರಣಶಿಕ್ಷೆ ಆಗಲೇಬೇಕೆಂದು ಛಲಹಿಡಿಯಬೇಡನಾನೇ ಸರ್ವೇಶ್ವರ.ಸಹೋದರನ ಬಗ್ಗೆ ಒಳಗೊಳಗೇ ಹಗೆ ಇಟ್ಟುಕೊಳ್ಳಬೇಡನೆರೆಯವನ ದೋಷಕ್ಕೆ ನೀನು ಒಳಗಾಗದಂತೆ ಅವನ ತಪ್ಪನ್ನು ಅವನಿಗೆ ಎತ್ತಿ ತೋರಿಸಲೇಬೇಕು. ನಿನ್ನ ಸ್ವಜನರಲ್ಲಿ ಯಾರಿಗೂ ಕೇಡಿಗೆ ಕೇಡು ಮಾಡಬೇಡಅವರಿಗೆ ವಿರುದ್ಧ ಮತ್ಸರ ಇಟ್ಟುಕೊಳ್ಳಬೇಡನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸುನಾನು ಸರ್ವೇಶ್ವರ.

ಕೀರ್ತನೆ : 19:8,9,10,15

ಶ್ಲೋಕ : ಸ್ವಾಮಿ ಸರ್ವೇಶ್ವರಾ, ನಿಮ್ಮ ಮಾತುಗಳೇ ಆತ್ಮ ಮತ್ತು ಜೀವವಾಗಿದೆ

ಶುಭಸಂದೇಶ : ಮತ್ತಾಯ  25:31-46 

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು : ನರಪುತ್ರನು ತನ್ನ ಮಹಿಮೆಯಲ್ಲಿ ಸಮಸ್ತ ದೇವದೂತರ ಸಮೇತ ಬರುವಾಗ ತನ್ನ ಮಹಿಮಾನ್ವಿತ ಸಿಂಹಾಸನದಲ್ಲಿ ಆಸೀನನಾಗಿರುವನು. ಸರ್ವಜನಾಂಗಗಳನ್ನು ಆತನ ಸಮ್ಮುಖದಲ್ಲಿ ಒಟ್ಟುಗೂಡಿಸಲಾಗುವುದುಕುರುಬನು ಕುರಿಗಳನ್ನು ಆಡುಗಳಿಂದ ಬೇರ್ಪಡಿಸುವಂತೆ ಆತನು ಅವರನ್ನು ಬೇರ್ಪಡಿಸುವನು. ಕುರಿಗಳನ್ನು ತನ್ನ ಬಲಗಡೆಯಲ್ಲೂ ಆಡುಗಳನ್ನು ತನ್ನ ಎಡಗಡೆಯಲ್ಲೂ ಇರಿಸುವನು. ಆಗ ಅರಸನು ತನ್ನ ಬಲಗಡೆಯಿರುವ ಜನರಿಗೆ, ‘ನನ್ನ ಪಿತನಿಂದ ಧನ್ಯರೆನಿಸಿಕೊಂಡವರೇಬನ್ನಿಲೋಕಾದಿಯಿಂದ ನಿಮಗಾಗಿ ಸಿದ್ಧಮಾಡಿದ ಸಾಮ್ರಾಜ್ಯವನ್ನು ಸ್ವಾಸ್ತ್ಯವಾಗಿ ಪಡೆಯಿರಿ. ಏಕೆಂದರೆನಾನು ಹಸಿದಿದ್ದೆನನಗೆ ಆಹಾರ ಕೊಟ್ಟಿರಿಬಾಯಾರಿದ್ದೆಕುಡಿಯಲು ಕೊಟ್ಟಿರಿಅಪರಿಚಿತನಾಗಿದ್ದೆನನಗೆ ಆಶ್ರಯ ಕೊಟ್ಟಿರಿ. ಬಟ್ಟೆಬರೆಯಿಲ್ಲದೆ ಇದ್ದೆನನಗೆ ಉಡಲು ಕೊಟ್ಟಿರಿರೋಗದಿಂದಿದ್ದೆನನ್ನನ್ನು ಆರೈಕೆಮಾಡಿದಿರಿಬಂಧಿಯಾಗಿದ್ದೆನೀವು ನನ್ನನ್ನು ಸಂಧಿಸಿದಿರಿ,’ ಎಂದು ಹೇಳುವನು. ಅದಕ್ಕೆ  ಸಜ್ಜನರು, ‘ಸ್ವಾಮೀತಾವು ಯಾವಾಗ ಹಸಿದಿದ್ದನ್ನು ಕಂಡು ನಾವು ಆಹಾರ ಕೊಟ್ಟೆವುಬಾಯಾರಿದ್ದನ್ನು ಕಂಡು ಕುಡಿಯಲು ಕೊಟ್ಟೆವುಯಾವಾಗ ತಾವು ಅಪರಿಚಿತರಾಗಿದ್ದನ್ನು ಕಂಡು ನಾವು ಆಶ್ರಯಕೊಟ್ಟೆವುಬಟ್ಟೆಬರೆಯಿಲ್ಲದ್ದನ್ನು ಕಂಡು ಉಡಲು ಕೊಟ್ಟೆವುತಾವು ರೋಗಿಯಾಗಿರುವುದನ್ನು ಅಥವಾ ಬಂಧಿಯಾಗಿರುವುದನ್ನು ಕಂಡು ನಾವು ಸಂಧಿಸಲು ಬಂದೆವು?’ ಎಂದು ಕೇಳುವರು. ಆಗ ಅರಸನು ಪ್ರತ್ಯುತ್ತರವಾಗಿ, ‘ ನನ್ನ ಸೋದರರಲ್ಲಿ ಒಬ್ಬನಿಗೆಅವನೆಷ್ಟೇ ಕನಿಷ್ಟನಾಗಿರಲಿನೀವು ಹೀಗೆ ಮಾಡಿದಾಗಲೆಲ್ಲಾ ಅದನ್ನು ನನಗೇ ಮಾಡಿದಿರಿಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ,’ ಎನ್ನುವನು.

ಅನಂತರ ಆತನು ತನ್ನ ಎಡಗಡೆ ಇರುವವರನ್ನು ನೋಡಿ, ‘ಶಾಪಗ್ರಸ್ತರೇನನ್ನಿಂದ ತೊಲಗಿರಿಪಿಶಾಚಿಗೂ ಅವನ ದೂತರಿಗೂ ಸಿದ್ಧಮಾಡಿರುವ ಆರದ ಬೆಂಕಿಗೆ ಬೀಳಿರಿ. ಏಕೆಂದರೆ ನಾನು ಹಸಿದಿದ್ದೆನೀವು ನನಗೆ ಆಹಾರಕೊಡಲಿಲ್ಲಬಾಯಾರಿದ್ದೆಕುಡಿಯಲು ಕೊಡಲಿಲ್ಲಅಪರಿಚಿತನಾಗಿದ್ದೆನನಗೆ ಆಶ್ರಯ ನೀಡಲಿಲ್ಲಬಟ್ಟೆಬರೆಯಿಲ್ಲದೆ ಇದ್ದೆನನಗೆ ಉಡಲು ಕೊಡಲಿಲ್ಲರೋಗಿಯಾಗಿದ್ದೆಬಂಧಿಯಾಗಿದ್ದೆನೀವು ನನ್ನನ್ನು ಸಂಧಿಸಲಿಲ್ಲ,’ ಎಂದು ಹೇಳುವನು. ಅದಕ್ಕೆ ಅವರು ಕೂಡ, ‘ಸ್ವಾಮೀತಾವು ಯಾವಾಗ ಹಸಿದಿದ್ದಿರಿಬಾಯಾರಿದ್ದಿರಿಅಪರಿಚಿತರಾಗಿದ್ದಿರಿಯಾವಾಗ ಬಟ್ಟೆಬರೆ ಇಲ್ಲದೆ ಇದ್ದಿರಿರೋಗಿಯಾಗಿದ್ದಿರಿಮತ್ತು ಬಂಧಿಯಾಗಿ ಇದ್ದಿರಿ ಮತ್ತು ನಾವು ಅವನ್ನು ಕಂಡು ನಿಮಗೆ ಉಪಚಾರಮಾಡದೆಹೋದೆವುಎಂದು ಪ್ರಶ್ನಿಸುವರು. ಅದಕ್ಕೆ ಪ್ರತ್ಯುತ್ತರವಾಗಿ ಅರಸನು, ‘ಇವರಲ್ಲಿ ಒಬ್ಬನಿಗೆಅವನೆಷ್ಟೇ ಕನಿಷ್ಠನಾಗಿರಲಿನೀವು ಹಾಗೆ ಮಾಡದೆಹೋದಾಗ ಅದನ್ನು ನನಗೇ ಮಾಡಲಿಲ್ಲ,’ ಎನ್ನುವರುಹೀಗೆ  ದುರ್ಜನರು ನಿತ್ಯ ಶಿಕ್ಷೆಗೂ ಸಜ್ಜನರು ನಿತ್ಯಜೀವಕ್ಕೂ ಹೋಗುವರು,” ಎಂದು ಹೇಳಿದರು ಸ್ವಾಮಿ.

ಮನಸ್ಸಿಗೊಂದಿಷ್ಟು : ಸಂತ ಮಾರ್ಟಿನ್ ಆಫ್ ಟೂರ್ಸ್ ಸೈನಿಕರಾಗಿದ್ದಾಗ ಚಳಿಯಲ್ಲಿ ಬಟ್ಟೆಯಿಲ್ಲದೆ ನಿಂತಿದ್ದ ಬಿಕ್ಷುಕನನ್ನು ನೋಡಿದರು. ಕೊಡಲು ಹಣವಿಲ್ಲದ್ದರಿಂದ ಹಾಕಿಕೊಂಡಿದ್ದ ತಮ್ಮ ಸೈನಿಕ ಬಟ್ಟೆಯನ್ನು ಅರ್ಧ ಕತ್ತರಿಸಿ ಕೊಡುತ್ತಾರೆ. ರಾತ್ರಿ ಮಾರ್ಟಿನ್ ಅವರಿಗೊಂದು ಕನಸು ಕಾಣುತ್ತದೆ. ಬಿಕ್ಷುಕನಿಗೆ ಕೊಟ್ಟ ಆ ಹರಿದ ಬಟ್ಟೆಯನ್ನು ಯೇಸುಸ್ವಾಮಿ ಸ್ವರ್ಗದಲ್ಲಿ ಹಾಕಿಕೊಂಡಿದ್ದಾರೆ. ಆಗ ದೇವದೂತರು ’ಸ್ವಾಮಿ ಇದೇನು ಯಾವುದೋ ಹಳೆಯ, ಹರಿದ ಬಟ್ಟೆ ಧರಿಸಿದ್ದೀರಾ? ಯಾರು ಕೊಟ್ಟಿದ್ದು ಎಂದು ಕೇಳಲು, ಯೇಸುಸ್ವಾಮಿ ’ನನ್ನ ಸೇವಕ ಮಾರ್ಟಿನ್ ಕೊಟ್ಟಿದು’ ಎನ್ನುತ್ತಾರೆ ಯೇಸು. ಮಾರ್ಟಿನ ನ ಜೀವನ ಅಲ್ಲಿಂದ ಬದಲಾಯಿತು

ಪ್ರಶ್ನೆ : ಹಸಿದ, ಬಾಯಾರಿದ , ಆಶ್ರಯ ಬೇಡಿದವರತ್ತ ನಮ್ಮ ಪ್ರತಿಕ್ರಿಯೆ ಏನು?

ಪ್ರಭುವೇ,
ಕಾಣಲಾರದಾಗಿದ್ದೇನೆ ಹಸಿದವರಲ್ಲಿ
ಬಾಯಾರಿದವರಲ್ಲಿ, ಅಪರಿಚಿತರಲ್ಲಿ ನಿನ್ನ
ಸದಾ ಕಾಣುತ್ತಲೇ ಇರುವಂತೆ ತೆರೆಯಿರಿ

 ಈ ನನ್ನ ಹೃದಯವ, ಅಂತರಂಗದ ಕಣ್ಣ

26.02.23 - ‘ನಿನ್ನ ದೇವರಾದ ಸರ್ವೇಶ್ವರನನ್ನು ಆರಾಧಿಸು. ಅವರೊಬ್ಬರಿಗೇ ಸೇವೆ ಸಲ್ಲಿಸು,’

ಮೊದಲನೇ ವಾಚನ: ಆದಿಕಾಂಡ 2:7-9; 3:1-7

ದೇವರಾದ ಸರ್ವೇಶ್ವರ ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದರು. ಆಗ ಮನುಷ್ಯನು ಜೀವಾತ್ಮನಾದನು. ಇದಲ್ಲದೆ, ದೇವರಾದ ಸರ್ವೇಶ್ವರ ಪೂರ್ವ ದಿಕ್ಕಿನಲ್ಲಿರುವ ಏದೆನ್ ಪ್ರದೇಶದಲ್ಲಿ ಒಂದು ಉದ್ಯಾನವನವನ್ನು ಮಾಡಿ ತಾವು ರೂಪಿಸಿದ ಮನುಷ್ಯನನ್ನು ಅದರಲ್ಲಿ ಇರಿಸಿದರು. ನೋಟಕ್ಕೆ ರಮ್ಯವೂ ಊಟಕ್ಕೆ ರುಚಿಕರವೂ ಆದ ನಾನಾ ತರದ ಮರಗಳನ್ನು ದೇವರಾದ ಸರ್ವೇಶ್ವರ ಅಲ್ಲಿ ಬೆಳೆಯ ಮಾಡಿದರು. ಆ ವನದ ಮಧ್ಯದಲ್ಲಿ ಜೀವದಾಯಕ ವೃಕ್ಷವನ್ನು ಹಾಗು ಒಳಿತು ಕೆಡಕುಗಳ ಅರಿವನ್ನು ಮೂಡಿಸುವ ವೃಕ್ಷವನ್ನು ಬೆಳೆಯಿಸಿದರು. ಸರ್ವೇಶ್ವರನಾದ ದೇವರು ಉಂಟುಮಾಡಿದ ಭೂಜಂತುಗಳಲ್ಲಿ ಅತಿ ಯುಕ್ತಿಉಳ್ಳದ್ದು ಸರ್ಪ. ಅದು ಮಹಿಳೆಯ ಬಳಿಗೆ ಬಂದು, “ಏನಮ್ಮಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ತಿನ್ನಕೂಡದು ಎಂದು ದೇವರು ಆಜ್ಞೆ ಮಾಡಿರುವುದು ನಿಜವೋ”? ಎಂದು ಕೇಳಿತು. ಅದಕ್ಕೆ ಆ ಮಹಿಳೆ, “ತೋಟದಲ್ಲಿರುವ ಮರಗಳ ಹಣ್ಣುಗಳನ್ನು ನಾವು ತಿನ್ನಬಹುದು; ಆದರೆ ಅದರ ನಡುವೆಯಿರುವ ಈ ಮರದ ಹಣ್ಣನ್ನು ಮಾತ್ರ ತಿನ್ನಲೂ ಕೂಡದು, ಮುಟ್ಟಲೂ ಕೂಡದು, ‘ತಿಂದರೆ ಸಾಯುವಿರಿ’ ಎಂದು ದೇವರು ಹೇಳಿದ್ದಾರೆ,” ಎಂದು ಉತ್ತರ ಕೊಟ್ಟಳು. ಆಗ ಆ ಸರ್ಪ, “ಆ ಮಾತು ನಿಜವಲ್ಲ, ನೀವು ಸಾಯುವುದು ಸುಳ್ಳು. ಇದರ ಹಣ್ಣನ್ನು ತಿಂದ ಕೂಡಲೆ ನಿಮ್ಮ ಕಣ್ಣುಗಳು ತೆರೆಯುವುವು. ನೀವು ದೇವರಂತೆ ಆಗಿ ಒಳಿತು- ಕೆಡುಕುಗಳನ್ನರಿತ ಜ್ಞಾನಿಗಳು ಆಗಿಬಿಡುವಿರಿ. ಇದು ದೇವರಿಗೆ ಚೆನ್ನಾಗಿ ಗೊತ್ತುಂಟು,” ಎಂದಿತು. ಆಗ ಆ ಮಹಿಳೆ, “ಈ ಮರದ ಹಣ್ಣು ಊಟಕ್ಕೆ ಎಷ್ಟು ಚೆನ್ನಾಗಿದೆ, ನೋಟಕ್ಕೆ ಎಷ್ಟು ರಮಣೀಯವಾಗಿದೆ, ಜ್ಞಾನಾರ್ಜನೆಗೆ ಎಷ್ಟು ಆಕರ್ಷಣೀಯವಾಗಿದೆ” ಎಂದು ತಿಳಿದು, ಅದನ್ನು ತೆಗೆದುಕೊಂಡು ತಿಂದಳು; ಸಂಗಡವಿದ್ದ ಗಂಡನಿಗೂ ಕೊಟ್ಟಳು; ಅವನೂ ತಿಂದನು. ಕೂಡಲೆ ಅವರಿಬ್ಬರ ಕಣ್ಣುಗಳು ತೆರೆದವು. ತಾವು ಬೆತ್ತಲೆ ಆಗಿದ್ದೇವೆಂದು ತಿಳಿದು ಅವರು ಅಂಜೂರದ ಎಲೆಗಳನ್ನು ಹೊಲಿದು ಉಟ್ಟುಕೊಂಡರು.

ಕೀರ್ತನೆ 51:3-4, 5-6, 12-13, 17

ಶ್ಲೋಕ: ಕೃಪಾಳು ದೇವಾ, ಕರುಣಿಸೆಮ್ಮನು ಏಕೆಂದರೆ ನಿಮ್ಮ ವಿರುದ್ಧ ಪಾಪವನ್ನು ಮಾಡಿದ್ದೇವೆ

ಎರಡನೇ ವಾಚನ: ರೋಮನರಿಗೆ 5:12-19

ಒಬ್ಬ ಮನುಷ್ಯನಿಂದಲೇ ಪಾಪ, ಪಾಪದಿಂದ ಮರಣ, ಈ ಲೋಕವನ್ನು ಪ್ರವೇಶಿಸಿದವು. ಎಲ್ಲರೂ ಪಾಪ ಮಾಡಿದ್ದರಿಂದ ಮರಣವು ಎಲ್ಲರಿಗೂ ಪ್ರಾಪ್ತಿಯಾಯಿತು. ಧರ್ಮಶಾಸ್ತ್ರವನ್ನು ಕೊಡುವುದಕ್ಕೆ ಮೊದಲೇ ಪಾಪವು ಲೋಕದಲ್ಲಿತ್ತು. ಆದರೆ ಧರ್ಮಶಾಸ್ತ್ರ ಇಲ್ಲದೆ ಇದ್ದುದರಿಂದ ಪಾಪವನ್ನು ಗಣನೆಗೆ ತಂದುಕೊಳ್ಳಲಾಗಲಿಲ್ಲ. ಆದರೂ, ಆದಾಮನ ಕಾಲದಿಂದ ಮೋಶೆಯ ಕಾಲದವರೆಗೂ ಮರಣವು ದಬ್ಬಾಳಿಕೆ ನಡೆಸುತ್ತಿತ್ತು. ದೇವರ ಆಜ್ಞಾವಿಧಿಗಳನ್ನು ವಿೂರಿ ಆದಾಮನು ಮಾಡಿದ ಪಾಪಕ್ಕೆ ಸಮನಾದ ಪಾಪವನ್ನು ಮಾಡದೆ ಇದ್ದವರ ಮೇಲೆಯೂ, ಮರಣದ ಆಳ್ವಿಕೆ ನಡೆಯುತ್ತಿತ್ತು. ಆದಾಮನು ಮುಂಬರಲಿದ್ದ ಮಹಾತ್ಮನ ಮುನ್ಸೂಚನೆಯಾಗಿದ್ದಾನೆ. ಆದರೆ ಆದಾಮನ ಪಾಪಕ್ಕೂ ದೇವರ ಅನುಗ್ರಹಕ್ಕೂ ವ್ಯತ್ಯಾಸವಿದೆ. ಒಬ್ಬ ಮನುಷ್ಯನ ಅಪರಾಧದಿಂದ ಎಲ್ಲರೂ ಮರಣಕ್ಕೊಳಗಾದರು ಎಂಬುದೇನೋ ನಿಜ. ಆದರೆ ದೇವರ ಅನುಗ್ರಹವು ಅದಕ್ಕಿಂತಲೂ ಅತ್ಯಧಿಕವಾದುದು. ಅಂತೆಯೇ, ಯೇಸುಕ್ರಿಸ್ತ ಎಂಬ ಒಬ್ಬ ಮಹಾತ್ಮನ ಅನುಗ್ರಹದಿಂದ ಲಭಿಸುವ ಉಚಿತಾರ್ಥ ವರಗಳು ಇನ್ನೂ ಅಧಿಕಾಧಿಕವಾದುವು ಎಂಬುದೂ ನಿಜ. ದೇವರ ಉಚಿತಾರ್ಥ ವರಕ್ಕೂ ಒಬ್ಬ ಮನುಷ್ಯನ ಪಾಪದ ಪರಿಣಾಮಕ್ಕೂ ಎಷ್ಟೋ ವ್ಯತ್ಯಾಸವಿದೆ. ಆ ಒಂದು ಪಾಪದ ಪರಿಣಾಮವಾಗಿ ಮನುಷ್ಯನು ಅಪರಾಧಿಯೆಂದು ನಿರ್ಣಯಿಸಲ್ಪಟ್ಟನು. ಆದರೆ ಅನೇಕರು ಅಪರಾಧಿಗಳಾದ ಮೇಲೂ ಕೊಡಲಾಗುವ ಉಚಿತಾರ್ಥ ವರವು ದೇವರೊಡನೆ ಸತ್ಸಂಬಂಧವನ್ನು ಉಂಟುಮಾಡುತ್ತದೆ. ಒಬ್ಬ ಮನುಷ್ಯನ ಅಪರಾಧದ ಕಾರಣ, ಒಬ್ಬ ವ್ಯಕ್ತಿಯ ಮುಖಾಂತರ ಮರಣವು ಎಲ್ಲಾ ಮಾನವರ ಮೇಲೆ ದಬ್ಬಾಳಿಕೆ ನಡೆಸಿತು. ಆದರೆ, ಹೇರಳವಾದ ದೈವಾನುಗ್ರಹವನ್ನೂ ದೇವರೊಡನೆ ಸತ್ಸಂಬಂಧವೆಂಬ ಉಚಿತಾರ್ಥ ವರವನ್ನೂ ಪಡೆದವರಾದರೋ ಯೇಸುಕ್ರಿಸ್ತ ಎಂಬ ಮಹಾತ್ಮನ ಮುಖಾಂತರ ಮತ್ತಷ್ಟು ವಿಪುಲವಾಗಿ ಸಜ್ಜೀವವನ್ನು ಪಡೆದು ರಾಜ್ಯವಾಳುತ್ತಾರೆ. ಒಬ್ಬನ ಅಪರಾಧದಿಂದ ಎಲ್ಲಾ ಮಾನವರು ದಂಡನೆಯ ತೀರ್ಪಿಗೆ ಗುರಿಯಾಗುತ್ತಾರೆ. ಹಾಗೆಯೇ ಒಬ್ಬನ ಸತ್ಕಾರ್ಯದಿಂದ ಎಲ್ಲಾ ಮಾನವರು ವಿಮೋಚನೆಯನ್ನೂ ಸಜ್ಜೀವವನ್ನೂ ಪಡೆಯುತ್ತಾರೆ. ಹೇಗೆ ಒಬ್ಬ ಮನುಷ್ಯನ ಅವಿಧೇಯತೆಯಿಂದ ಎಲ್ಲರೂ ಪಾಪಿಗಳಾದರೋ, ಹಾಗೆಯೇ ಒಬ್ಬ ಮನುಷ್ಯನ ವಿಧೇಯತೆಯಿಂದ ಎಲ್ಲರೂ ದೇವರೊಡನೆ ಸತ್ಸಂಬಂಧವನ್ನು ಹೊಂದುತ್ತಾರೆ.

ಶುಭಸಂದೇಶ: ಮತ್ತಾಯ 4:1-11

ಯೇಸುಸ್ವಾಮಿ ಪಿಶಾಚಿಯಿಂದ ಪರಿಶೋಧಿತರಾಗಲೆಂದು ಪವಿತ್ರಾತ್ಮ ಅವರನ್ನು ಬೆಂಗಾಡಿಗೆ ಕರೆದೊಯ್ದರು. ಅಲ್ಲಿ ಯೇಸು ನಲವತ್ತು ದಿನ ಹಗಲಿರುಳೂ ಉಪವಾಸವಿದ್ದರು. ಅನಂತರ ಅವರಿಗೆ ಬಹಳ ಹಸಿವಾಯಿತು. ಆಗ ಶೋಧಕನು ಬಂದು, "ನೀನು ದೇವರ ಪುತ್ರನೆಂಬುದು ಸತ್ಯವಾದರೆ, ಈ ಕಲ್ಲುಗಳು ರೊಟ್ಟಿಗಳಾಗಲೆಂದು ಆಜ್ಞೆಮಾಡು," ಎಂದನು. ಅದಕ್ಕೆ ಯೇಸುಸ್ವಾಮಿ, "ಪವಿತ್ರ ಗ್ರಂಥದಲ್ಲಿ ಹೇಳಿರುವ ಪ್ರಕಾರ, "ಮಾನವನು ಜೀವಿಸುವುದು ಆಹಾರದಿಂದ ಮಾತ್ರವಲ್ಲ; ದೇವರಾಡುವ ಪ್ರತಿಯೊಂದು ನುಡಿಯಿಂದ", ಎಂದರು. ಬಳಿಕ ಪಿಶಾಚಿ ಅವರನ್ನು ಪವಿತ್ರ ನಗರಕ್ಕೆ ಅಂದರೆ ಜೆರುಸಲೇಮಿಗೆ ಕರೆದೊಯ್ದು ಮಹಾದೇವಾಲಯದ ಗೋಪುರದ ತುದಿಯ ಮೇಲೆ ನಿಲ್ಲಿಸಿ, "ನೀನು ದೇವರ ಪುತ್ರನೆಂಬುದು ಸತ್ಯವಾದರೆ ಕಳಕ್ಕೆ ಧುಮುಕು. ಏಕೆಂದರೆ, ಪವಿತ್ರ ಗ್ರಂಥದಲ್ಲಿ ಬರೆದಿರುವ ಪ್ರಕಾರ, ‘ದೇವರೇ ತಮ್ಮ ದೂತರಿಗೆ ಆಜ್ಞೆ ಮಾಡುವರು’ ಮತ್ತು ‘ಇವರು ನಿನ್ನ ಕಾಲುಗಳು ಕಲ್ಲುಗಳಿಗೆ ತಾಕದಂತೆ ನಿನ್ನನ್ನು ಕೈಗಳಲ್ಲಿ ಆತುಗೊಳ್ಳುವರು,’ ಎಂದಿತು. ಅದಕ್ಕೆ ಯೇಸು, “ ‘ನಿನ್ನ ದೇವರು ಸರ್ವೇಶ್ವರ; ನೀನು ಅವರನ್ನು ಪರೀಕ್ಷಿಸಬಾರದು’, ಎಂದೂ ಸಹ ಪವಿತ್ರಗ್ರಂಥದಲ್ಲಿ ಬರೆದಿದೆ,” ಎಂದರು. ಅನಂತರ ಪಿಶಾಚಿ ಯೇಸುವನ್ನು ಬಹಳ ಎತ್ತರವಾದ ಬೆಟ್ಟಕ್ಕೆ ಕೊಂಡೊಯ್ದು, ಪ್ರಪಂಚದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ ತೋರಿಸಿತು. "ನೀನು ನನಗೆ ಅಡ್ಡಬಿದ್ದು ಆರಾಧಿಸುವೆಯಾದರೆ ಇವೆಲ್ಲವನ್ನು ನಿನಗೆ ಕೊಡಬಲ್ಲೆ," ಎಂದಿತು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ಸೈತಾನನೇ, ತೊಲಗು, ‘ನಿನ್ನ ದೇವರಾದ ಸರ್ವೇಶ್ವರನನ್ನು ಆರಾಧಿಸು. ಅವರೊಬ್ಬರಿಗೇ ಸೇವೆಸಲ್ಲಿಸು,’ ಎಂದೂ ಪವಿತ್ರಗ್ರಂಥದಲ್ಲಿ ಬರೆದಿದೆ," ಎಂದರು. ಆಗ ಪಿಶಾಚಿ ಯೇಸುವನ್ನು ಬಿಟ್ಟು ತೊಲಗಿತು. ದೇವದೂತರು ಬಂದು ಅವರನ್ನು ಉಪಚರಿಸಿದರು.

ಮನಸ್ಸಿಗೊಂದಿಷ್ಟು : ಶೋಧನೆಗಳು ನಮ್ಮ ಪಾಪಗಳಿಗೆ ದಾರಿಯಲ್ಲ, ಬದಲಾಗಿ ಪಾಪಗಳನ್ನು ಜಯಿಸುವ ಸಾಧನವಾಗಬಲ್ಲದು. ನಮ್ಮನ್ನು ದುರ್ಬಲಗಳಿಸುವುದಕ್ಕಿಂತ ನಮ್ಮನ್ನು ಇನ್ನಷ್ಟು ಶಕ್ತರನ್ನಾಗಿಸಬಲ್ಲದು. ದೇವರ ಚಿತ್ತ ಕಾರ್ಯಗಳನ್ನು ನೆರವೇರಿಸುವವರು ಈ ಶೋಧನೆಗಳನ್ನು ವಿಜಯದ ಮೆಟ್ಟಿಲುಗಳನ್ನಾಗಿ ಬಳಸಿಕೊಂಡು ದೇವರತ್ತ ಏರಬಲ್ಲರು ಎಂಬ ಸಂದೇಶ ಇಂದಿನ ಶುಭಸಂದೇಶದಲ್ಲಿದೆ

ಪ್ರಶ್ನೆ : ನಾವು ಎದುರಿಸುತ್ತಿರುವ ಶೋಧನೆಗಳನ್ನು ನಮ್ಮನ್ನು ದೇವರತ್ತ ಏರಿಸುತ್ತಿದೆಯೇ ಅಥವಾ ವಿಮುಖವಾಗಿಸುತ್ತಿದೆಯೇ?

ಪ್ರಭುವೇ,
ನಮಗೆ ಬಂದೊದಗುವ ಶೋಧನೆ
ತರುವ ಯಾವುದೇ ವೇದನೆ
ಮೀರಿ ಏರುವ ಸಾಧನೆ 
ನಮ್ಮದಾಗಲು ಬೇಕಿದೆ 
ನಿಮ್ಮ ಭರವಸೆಯ ಅನುಮೋದನೆ
-ಚಿತ್ತ

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...