25.11.22 - "ಭೂಮ್ಯಾಕಾಶಗಳು ಗತಿಸಿಹೋಗುತ್ತವೆ; ಆದರೆ ನನ್ನ ಮಾತುಗಳು ಶಾಶ್ವತವಾಗಿ ಉಳಿಯುತ್ತವೆ"

ಮೊದಲನೇ ವಾಚನಪ್ರಕಟಣಾ ಗ್ರಂಥ 20:1-4, 11--21:2


ತರುವಾಯ ದೇವದೂತನೊಬ್ಬನು ಸ್ವರ್ಗದಿಂದ ಇಳಿದುಬಂದುದನ್ನು ಕಂಡೆ. ಆತನ ಕೈಯಲ್ಲಿ ಪಾತಾಳದ ಬೀಗದ ಕೈ ಮತ್ತು ದೊಡ್ಡ ಸರಪಣಿ ಇದ್ದವು. ಪಿಶಾಚಿಯೂ ಸೈತಾನನೂ ಆಗಿರುವ ಘಟಸರ್ಪವನ್ನು, ಅಂದರೆ ಪುರಾತನ ಸರ್ಪವನ್ನು, ಆತನು ಹಿಡಿದು ಒಂದು ಸಾವಿರ ವರ್ಷಗಳ ಕಾಲ ಬಂಧನದಲ್ಲಿಟ್ಟನು. ಆ ಒಂದು ಸಾವಿರ ವರ್ಷಗಳ ಕಾಲದವರೆಗೆ, ಅದು ಜನಾಂಗಗಳನ್ನು ಮರುಳುಗೊಳಿಸದಂತೆ ದೇವದೂತನು ಸೈತಾನನನ್ನು ಪಾತಾಳಕ್ಕೆ ದಬ್ಬಿ, ಬಾಗಿಲು ಮುಚ್ಚಿ, ಅದಕ್ಕೆ ಮುದ್ರೆ ಹಾಕಿದನು. ಆ ಸಾವಿರ ವರ್ಷಗಳ ಕಾಲ ಮುಗಿದ ಮೇಲೆ ಅವನಿಗೆ ಸ್ವಲ್ಪಕಾಲ ಬಿಡುಗಡೆ ದೊರೆಯುವುದು. ಬಳಿಕ ಸಿಂಹಾಸನಗಳನ್ನು ಕಂಡೆ. ಅವುಗಳ ಮೇಲೆ ಕುಳಿತಿದ್ದವರಿಗೆ ತೀರ್ಪುಕೊಡುವ ಅಧಿಕಾರವನ್ನು ಕೊಡಲಾಗಿತ್ತು. ಇದಲ್ಲದೆ, ಕ್ರಿಸ್ತೇಸುವಿನ ಪರವಾಗಿ ಸಾಕ್ಷಿಕೊಟ್ಟು ದೇವರ ವಾಕ್ಯದ ಪ್ರಚಾರಕ್ಕಾಗಿ ತಲೆತೆತ್ತ ಜೀವಾತ್ಮಗಳನ್ನು ಕಂಡೆ. ಇವರು ಆ ಮೃಗವನ್ನಾಗಲಿ, ಅದರ ವಿಗ್ರಹವನ್ನಾಗಲಿ ಪೂಜಿಸಿದವರಲ್ಲ; ತಮ್ಮ ಹಣೆಗಳ ಮೇಲಾಗಲಿ, ಕೈಗಳ ಮೇಲಾಗಲಿ ಅದರ ಗುರುತಿನ ಹಚ್ಚೆಯನ್ನೂ ಚುಚ್ಚಿಸಿಕೊಂಡವರಲ್ಲ. ಇವರು ಜೀವಂತರಾಗಿ ಕ್ರಿಸ್ತೇಸುವಿನೊಡನೆ ಒಂದು ಸಾವಿರ ವರ್ಷಗಳು ಆಳುವರು. ಅನಂತರ ಶ್ವೇತವರ್ಣದ ಒಂದು ಮಹಾಸಿಂಹಾಸನವನ್ನು ಕಂಡೆ. ಅದರಲ್ಲಿ ಒಬ್ಬರು ಆಸೀನರಾಗಿದ್ದರು. ಅವರ ಸನ್ನಿಧಿಯಿಂದ ಭೂಮ್ಯಾಕಾಶಗಳು ತಮ್ಮ ಇರುವಿಕೆಯೇ ಇಲ್ಲದಂತೆ ಕಣ್ಮರೆಯಾಗಿ ಹೋದವು. ಇದಲ್ಲದೆ, ಪವಿತ್ರ ನಗರವಾದ ನೂತನ ಜೆರುಸಲೇಮ್ ಸ್ವರ್ಗದಿಂದಲೂ ದೇವರ ಸನ್ನಿಧಿಯಿಂದಲೂ ಕೆಳಗಿಳಿದು ಬರುವುದನ್ನು ಕಂಡೆ. ಅದು ಮದುಮಗನನ್ನು ಎದುರುಗೊಳ್ಳುವುದಕ್ಕಾಗಿ ಅಲಂಕೃತಳಾದ ಮದುವಣಗಿತ್ತಿಯಂತೆ ಶೃಂಗಾರಮಯವಾಗಿತ್ತು. 

ಕೀರ್ತನೆ84:3, 4, 5-6, 8

ಶ್ಲೋಕ: ಇಗೋ ಮಾನವರ ಮಧ್ಯೆಯೇ ಇದೆ ದೇವಾಲಯ  

ಶುಭಸಂದೇಶ: ಲೂಕ 21:29-33


ಯೇಸುಸ್ವಾಮಿ ಶಿಷ್ಯರಿಗೆ ಈ ಸಾಮತಿಯನ್ನು ಹೇಳಿದರು: “ಅಂಜೂರದ ಹಾಗೂ ಇತರ ಮರಗಳನ್ನು ಗಮನಿಸಿರಿ. ಅವುಗಳ ಎಲೆಗಳು ಚಿಗುರುತ್ತಲೇ ವಸಂತಕಾಲ ಆರಂಭಿಸಿತೆಂದು ನೀವೇ ಅರಿತುಕೊಳ್ಳುತ್ತೀರಿ. ಅಂತೆಯೇ ಇವೆಲ್ಲವೂ ಸಂಭವಿಸುವುದನ್ನು ನೋಡುವಾಗ ದೇವರ ಸಾಮ್ರಾಜ್ಯವು ಸಮೀಪಿಸಿತೆಂದು ತಿಳಿದುಕೊಳ್ಳಿರಿ. ಇವೆಲ್ಲ ಸಂಭವಿಸುವವರೆಗೆ ಈ ಪೀಳಿಗೆ ಗತಿಸಿಹೋಗದೆಂದು ಒತ್ತಿಹೇಳುತ್ತೇನೆ. ಭೂಮ್ಯಾಕಾಶಗಳು ಗತಿಸಿಹೋಗುತ್ತವೆ; ಆದರೆ ನನ್ನ ಮಾತುಗಳು ಶಾಶ್ವತವಾಗಿ ಉಳಿಯುತ್ತವೆ.

24.11.22 - "ಸೂರ್ಯ, ಚಂದ್ರ, ನಕ್ಷತ್ರಗಳಲ್ಲಿ ವಿಚಿತ್ರ ಸೂಚನೆಗಳು ಕಾಣಿಸಿಕೊಳ್ಳುವುವು"

ಮೊದಲನೇ ವಾಚನಪ್ರಕಟಣಾ ಗ್ರಂಥ 18:1-2, 21-23; 19:1-3, 9

ಇವುಗಳಾದ ಬಳಿಕ ನಾನು ಮತ್ತೂ ಒಂದು ದಿವ್ಯದರ್ಶನವನ್ನು ಕಂಡೆ. ಸ್ವರ್ಗದಿಂದ ಮತ್ತೊಬ್ಬ ದೇವದೂತನು ಬಂದನು. ಅವನು ವಿಶೇಷ ಅಧಿಕಾರ ಪಡೆದಿದ್ದನು. ಅವನ ತೇಜಸ್ಸು ಭೂಮಿಯನ್ನು ಬೆಳಗಿತು. ಅವನು ಗಟ್ಟಿಯಾದ ಧ್ವನಿಯಿಂದ ಇಂತೆಂದನು: “ಪತನ ಹೊಂದಿದಳು ಪತನ ಹೊಂದಿದಳು ಬಾಬಿಲೋನ್ ಮಹಾನಗರಿ ಪತನ ಹೊಂದಿದಳು ದೆವ್ವದುರಾತ್ಮಗಳಿಗೆ ಬೀಡಾದಳು ಅಶುದ್ಧ ಪ್ರಾಣಿಪಕ್ಷಿಗಳಿಗೆ ಗೂಡಾದಳು. ಆಗ ಒಬ್ಬ ಬಲಿಷ್ಠ ದೇವದೂತನು ಬೀಸುವ ಕಲ್ಲಿನಂತಿದ್ದ ಒಂದು ದೊಡ್ಡ ಕಲ್ಲನ್ನು ಎತ್ತಿ ಸಮುದ್ರಕ್ಕೆ ಎಸೆದು ಹೀಗೆಂದನು : “ಬಾಬಿಲೋನ್ ಮಹಾನಗರವನು ಈ ಪರಿಯಾಗಿ ಎತ್ತೆಸೆಯಲಾಗುವುದು ಅವಳಿದ್ದ ಎಡೆಯು ಯಾರಿಗೂ ಕಾಣಸಿಗದಂತಾಗುವುದು.” “ಎಲೈ ಬಾಬಿಲೋನೇ , ಕಿನ್ನರಿಗಾರರ, ಸಂಗೀತಗಾರರ ಕೊಳಲ ನುಡಿಸುವವರ, ತುತೂರಿಯನೂದುವವರ ಮಧುರ ಗಾನವು ಕೇಳಿಬರದು ನಿನ್ನಲಿ ಮತ್ತೆಂದೂ, ಕುಶಲಕರ್ಮಿಗಳಾರೂ ಕಾಣಸಿಗರು ಇನ್ನೆಂದೂ, ಬೀಸುವ ಕಲ್ಲಿನ ಶಬ್ದವೇ ಇರದು ನಿನ್ನಲ್ಲಿ ಎಂದೆಂದೂ! “ಉರಿಯುವ ದೀಪದ ಬೆಳಕು ಹೊಳೆಯದು ನಿನ್ನಲ್ಲಿ, ವಧುವರರ ಇನಿದನಿ ಕೇಳದು ನಿನ್ನಲ್ಲಿ. ಇದ್ದರು ನಿನ್ನ ವರ್ತಕರು ಇಳೆಗೆ ಧನವಂತರಾಗಿ ಬಿದ್ದವು ರಾಷ್ಟ್ರಗಳು ನಿನ್ನ ಜಾಲಕೆ ವಂಚಿತರಾಗಿ. ಇದಾದ ಬಳಿಕ ನಾನು ಮತ್ತೊಂದು ದಿವ್ಯದರ್ಶನವನ್ನು ಕಂಡೆ. ಸ್ವರ್ಗದಿಂದ ಬಂದ ಒಂದು ಮಹಾಶಬ್ದವನ್ನು ಆಲಿಸಿದೆ. ಅದು ದೊಡ್ಡ ಜನಸಮೂಹದ ಆರ್ಭಟದಂತಿತ್ತು. “ಅಲ್ಲೆಲೂಯ! ಜೀವೋದ್ಧಾರವೂ ಪ್ರಭಾವವೂ ಶಕ್ತಿಯೂ ನಮ್ಮ ದೇವರಲ್ಲುಂಟು. ಆತನ ನ್ಯಾಯತೀರ್ಪು ಸತ್ಯವಾದುದು ನೀತಿಬದ್ಧವಾದುದು. ಇತ್ತಿರುವನಾತ ತೀರ್ಪನು ಮಹಾ ವೇಶ್ಯೆಯ ವಿರುದ್ಧ ಪೃಥ್ವಿಯನೇ ಹೊಲಸೆಬ್ಬಿಸಿದ ವ್ಯಭಿಚಾರಿಣಿಯ ವಿರುದ್ಧ ತನ್ನ ದಾಸರ ರಕ್ತಪಾತದ ಸೇಡನು ತೀರಿಸಿಹನಾತ,” ಎಂದು ಜನಸಮೂಹವು ಘೋಷಿಸಿತು. ಅವರು ಮತ್ತೊಮ್ಮೆ, “ಅಲ್ಲೆಲೂಯ! ಅವಳ ದಹನದಿಂದ ಹೊಗೆ ಸತತ ಮೇಲೇರುತಿಹುದು ಒಂದೇಸಮನೆ” ಎಂದು ಕೂಗಿದರು. ಅನಂತರ ದೇವದೂತನು “ ‘ಯಜ್ಞದ ಕುರಿಮರಿಯ ವಿವಾಹದ ಔತಣಕ್ಕೆ ಆಹ್ವಾನಿತರು ಭಾಗ್ಯವಂತರು’ ಎಂದು ಬರೆ,” ಎಂದು ನನಗೆ ಆಜ್ಞಾಪಿಸಿದನು. “ಇವು ದೇವರ ಸತ್ಯವಾದ ವಾಕ್ಯಗಳು,” ಎಂದು ಸಹ ತಿಳಿಸಿದನು.

 

ಕೀರ್ತನೆ100:2, 3, 4, 5

ಶ್ಲೋಕ: ಯಜ್ಞದ ಕುರಿಮರಿಯ ವಿವಾಹದ ಔತಣಕ್ಕೆ ಆಹ್ವಾನಿತರು ಭಾಗ್ಯವಂತರು 

 

ಶುಭಸಂದೇಶ: ಲೂಕ 21:20-28

 

ಯೇಸು ಶಿಷ್ಯರಿಗೆ ಹೀಗೆಂದರು: “ಜೆರುಸಲೇಮ್ ಪಟ್ಟಣವನ್ನು ಸೈನ್ಯಗಳು ಸುತ್ತುಗಟ್ಟುತ್ತಿರುವುದನ್ನು ನೀವು ಕಾಣುವಾಗ ಅದರ ವಿನಾಶ ಸಮೀಪಿಸಿತೆಂದು ತಿಳಿದುಕೊಳ್ಳಿ. ಆಗ ಜುದೇಯದಲ್ಲಿರುವವರು ಬೆಟ್ಟಗುಡ್ಡಗಳಿಗೆ ಓಡಿಹೋಗಲಿ; ಪಟ್ಟಣದೊಳಗಿರುವವರು ಅಲ್ಲಿಂದ ಹೊರಟುಹೋಗಲಿ; ಹಳ್ಳಿಗಾಡಿನಲ್ಲಿರುವವರು ಪಟ್ಟಣಕ್ಕೆ ಬಾರದಿರಲಿ. ಏಕೆಂದರೆ, ದಂಡನೆಯ ಕಾಲ ಅದು. ಅದನ್ನು ಕುರಿತು ಪವಿತ್ರಗ್ರಂಥದಲ್ಲಿ ಬರೆದಿರುವುದೆಲ್ಲಾ ಆಗ ನೆರವೇರಬೇಕು. ಅಯ್ಯೋ, ಆ ದಿನಗಳಲ್ಲಿ ಗರ್ಭಿಣಿಯರ ಮತ್ತು ಹಾಲೂಡಿಸುವ ತಾಯಂದಿರ ಗೋಳೇನು! ಈ ನಾಡು ಮಹಾವಿಪತ್ತಿಗೆ ಈಡಾಗುವುದು. ಈ ಜನತೆ ದೈವಕೋಪಕ್ಕೆ ಗುರಿಯಾಗುವುದು. ಕೆಲವರು ಕತ್ತಿಯ ಬಾಯಿಗೆ ತುತ್ತಾಗುವರು. ಮತ್ತೆ ಕೆಲವರು ಬಂಧಿತರಾಗಿ ದೇಶದೇಶಗಳಿಗೆ ಕೊಂಡೊಯ್ಯಲ್ಪಡುವರು; ಅನ್ಯದೇಶೀಯರು ತಮ್ಮ ಕಾಲಾವಧಿಯ ತನಕ ಜೆರುಸಲೇಮನ್ನು ತುಳಿದುಹಾಕುವರು. “ಸೂರ್ಯ, ಚಂದ್ರ, ನಕ್ಷತ್ರಗಳಲ್ಲಿ ವಿಚಿತ್ರ ಸೂಚನೆಗಳು ಕಾಣಿಸಿಕೊಳ್ಳುವುವು; ಮೊರೆಯುವ ತೆರೆಗಳ ಹಾಗೂ ಭೋರ್ಗರೆಯುವ ಸಮುದ್ರದ ನಿಮಿತ್ತ ಭೂಮಿಯಲ್ಲಿ ಜನಾಂಗಗಳು ದಿಕ್ಕುತೋಚದೆ ತತ್ತರಿಸಿಹೋಗುವುವು. ಗ್ರಹಶಕ್ತಿಗಳು ಕದಲುವುದರಿಂದ ಧರೆಯಲ್ಲಿ ಏನೇನು ಸಂಭವಿಸುವುದೋ ಎಂಬ ಭಯಭೀತಿಯಿಂದ ಮಾನವರು ದಿಗ್ಭ್ರಮೆಗೊಳ್ಳುವರು. ಆಗ ನರಪುತ್ರನು ಮಹಾಶಕ್ತಿಯಿಂದಲೂ ಮಹಿಮಾ ಪ್ರಭಾವದಿಂದಲೂ ಮೇಘಾರೂಢನಾಗಿ ಬರುವುದನ್ನು ಜನರು ಕಾಣುವರು. ಇವೆಲ್ಲವೂ ಸಂಭವಿಸಲು ತೊಗುವಾಗ ನೀವು ನಿರೀಕ್ಷಿಸುತ್ತಾ ತಲೆಯೆತ್ತಿ ನಿಲ್ಲಿರಿ; ಏಕೆಂದರೆ, ನಿಮ್ಮ ಉದ್ಧಾರವು ಸಮೀಪಿಸಿತು.”

23.11.22 - "ಎಲ್ಲರೂ ನಿಮ್ಮನ್ನು ದ್ವೇಷಿಸುವರು. ಆದರೂ ನಿಮ್ಮ ತಲೆ ಕೂದಲೊಂದೂ ನಾಶವಾಗುವುದಿಲ್ಲ"

ಮೊದಲನೇ ವಾಚನಪ್ರಕಟಣಾ ಗ್ರಂಥ 15:1-4

ಸ್ವರ್ಗದಲ್ಲಿ ಮತ್ತೊಂದು ಚಿಹ್ನೆಯನ್ನು ಕಂಡೆ. ಅದು ಅತ್ಯಾಶ್ಚರ್ಯಕರವಾಗಿ ಇತ್ತು. ಏಳು ದೇವದೂತರ ಕೈಯಲ್ಲಿ ಏಳು ವಿಪತ್ತುಗಳು ಇದ್ದವು. ಇವು ಅಂತಿಮವಾಗಿ ಬಂದೆರಗುವ ವಿಪತ್ತುಗಳು. ಏಕೆಂದರೆಅವುಗಳೊಡನೆ ದೇವರ ಕೋಪಾಗ್ನಿ ಪೂರ್ತಿಯಾಗಿ ಬಂದೆರಗುವುದು.ಇದಲ್ಲದೆಗಾಜಿನ ಸಮುದ್ರದಂತಿದ್ದ ಒಂದು ವಸ್ತು ಕಾಣಿಸಿತುಅದು ಬೆಂಕಿಯಿಂದ ಕೂಡಿತ್ತು. ಮೃಗದ ವಿರುದ್ಧಅದರ ವಿಗ್ರಹದ ವಿರುದ್ಧ ಹಾಗೂ ಅದರ ಹೆಸರನ್ನು ಸೂಚಿಸುವ ಸಂಖ್ಯೆಯ ವಿರುದ್ಧ ಜಯಗಳಿಸಿದವರನ್ನು ಸಹ ಕಂಡೆ. ಅವರು ಗಾಜಿನ ಸಮುದ್ರದ ಬಳಿ ನಿಂತಿದ್ದರುಕೈಗಳಲ್ಲಿ ದೇವರಿತ್ತ ಕಿನ್ನರಿಗಳಿದ್ದವು. ಅವರು ದೇವರ ದಾಸನಾದ ಮೋಶೆಯ ಗೀತೆಯನ್ನೂ ಯಜ್ಞದ ಕುರಿಮರಿಯ ಗೀತೆಯನ್ನೂ ಹಾಡುತ್ತಿದ್ದರು. ಅದು ಯಾವುದೆಂದರೆ :

ಹೇ ದೇವಾ, ಹೇ ಪ್ರಭೂ, ನೀ ಸರ್ವಶಕ್ತ !
ಏನು ಘನ, ಏನು ಅದ್ಭುತ, ನಿನ್ನ ಸತ್ಕಾರ್ಯ !
ರಾಷ್ಟ್ರಗಳಿಗೆಲ್ಲಾ ನೀ ರಾಜಾಧಿರಾಜ
ನಿಜವಾದುದು, ಋಜುವಾದುದು ನಿನ್ನ ಸನ್ಮಾರ್ಗ.
ಹೇ ಪ್ರಭೂ, ನಿನಗಂಜದವರಾರು?
ನಿನ್ನ ನಾಮಸ್ತುತಿ ಮಾಡದವರಾರು?
ಪರಮಪವಿತ್ರ ನೀನಲ್ಲದಿನ್ಯಾರು
ಪ್ರಕಟವಾಗಿವೆ ನಿನ್ನ ನೀತಿಯುತ ಕಾರ್ಯಗಳು
ಬಂದೆರಗಲಿವೆ ನಿನಗೆ ಸಕಲ ಜನಾಂಗಗಳು.”

ಕೀರ್ತನೆ: 98:1, 2-3, 7-8, 9

ಶುಭಸಂದೇಶ: ಲೂಕ 21:12-19


ಇದೆಲ್ಲಾ ಸಂಭವಿಸುವುದಕ್ಕೆ ಮುಂಚೆ ನಿಮ್ಮನ್ನು ಬಂಧಿಸಿ ಹಿಂಸೆಗೊಳಪಡಿಸುವರು. ಪ್ರಾರ್ಥನಾಮಂದಿರಗಳಿಗೂ ಕಾರಾಗೃಹಗಳಿಗೂ ಎಳೆದೊಪ್ಪಿಸುವರು; ನನ್ನ ನಾಮದ ನಿಮಿತ್ತ ಅರಸರ ಹಾಗೂ ಅಧಿಪತಿಗಳ ಮುಂದಕ್ಕೆ ಎಳೆಯುವರು. ಶುಭಸಂದೇಶಕ್ಕೆ ಸಾಕ್ಷಿಕೊಡಲು ಇದು ನಿಮಗೆ ಸದವಕಾಶವಾಗಿರುತ್ತದೆ. ಆಗ ವಾದಿಸುವುದು ಹೇಗೆಂದು ನೀವು ಮುಂಚಿತವಾಗಿ ಚಿಂತಿಸಬೇಕಾಗಿಲ್ಲ; ಇದು ನಿಮಗೆ ಮನದಟ್ಟಾಗಿರಲಿ. ಏಕೆಂದರೆ ನಿಮ್ಮ ವಿರೋಧಿಗಳಾರೂ ಪ್ರತಿಭಟಿಸಲು ಅಥವಾ ವಿರೋಧಿಸಲು ಆಗದಂಥ ವಾಕ್ಚಾತುರ್ಯವನ್ನೂ ಜ್ಞಾನಶಕ್ತಿಯನ್ನೂ ನಿಮಗೆ ಕೊಡುವೆನು. ನಿಮ್ಮ ತಂದೆತಾಯಿಗಳೇ, ಒಡಹುಟ್ಟಿದವರೇ, ಬಂಧುಮಿತ್ರರೇ, ನಿಮ್ಮನ್ನು ಪರಾಧೀನ ಮಾಡುವರು; ಮಾತ್ರವಲ್ಲ, ನಿಮ್ಮಲ್ಲಿ ಕೆಲವರನ್ನು ಕೊಂದುಹಾಕಿಸುವರು. ನೀವು ನನ್ನವರು ಆದುದರಿಂದಲೇ ಎಲ್ಲರೂ ನಿಮ್ಮನ್ನು ದ್ವೇಷಿಸುವರು. ಆದರೂ ನಿಮ್ಮ ತಲೆಕೂದಲೊಂದೂ ನಾಶವಾಗುವುದಿಲ್ಲ. ಸೈರಣೆಯಿಂದಿರಿ, ಸಂರಕ್ಷಣೆಯನ್ನು ಪಡೆಯುವಿರಿ.

22.11.22 - “ಜನಾಂಗಕ್ಕೆ ವಿರುದ್ಧವಾಗಿ ಜನಾಂಗ, ರಾಷ್ಟ್ರಕ್ಕೆ ವಿರುದ್ಧವಾಗಿ ರಾಷ್ಟ್ರ ಯುದ್ಧಕ್ಕಿಳಿಯುವುವು"

ಮೊದಲನೇ ವಾಚನಪ್ರಕಟಣಾ ಗ್ರಂಥ 14:14-19


ಅನಂತರ ನನ್ನ ಕಣ್ಣಿಗೆ ಒಂದು ಬಿಳಿಯ ಮೋಡ ಕಾಣಿಸಿತು. ಆ ಮೋಡದ ಮೇಲೆ ನರಪುತ್ರನಂಥ ವ್ಯಕ್ತಿಯೊಬ್ಬನು ಕುಳಿತಿದ್ದನು. ಆತನ ತಲೆಯ ಮೇಲೆ ಚಿನ್ನದ ಕಿರೀಟವಿತ್ತು; ಕೈಯಲ್ಲಿ ಹರಿತವಾದ ಕುಡುಗೋಲಿತ್ತು. ಇನ್ನೊಬ್ಬ ದೇವದೂತನು ದೇವಮಂದಿರದಿಂದ ಹೊರಗೆ ಬಂದನು. ಈತನು ಮೋಡದ ಮೇಲೆ ಕುಳಿತಿದ್ದ ಅವನನ್ನು ಉದ್ದೇಶಿಸಿ, “ಭೂಮಿಯ ಫಸಲು ಮಾಗಿದೆ, ಕೊಯ್ಲಿನ ಕಾಲ ಬಂದಿದೆ. ನಿನ್ನ ಕುಡುಗೋಲನ್ನು ತೆಗೆದು ಕೊಯಿಲು ಮಾಡಲು ಆರಂಭಿಸು,” ಎಂದು ಗಟ್ಟಿಯಾಗಿ ಕೂಗಿ ಹೇಳಿದನು. ಆಗ ಮೋಡದ ಮೇಲೆ ಕುಳಿತಿದ್ದವನು ತನ್ನ ಕುಡುಗೋಲನ್ನು ಭೂಮಿಯ ಮೇಲೆ ಬೀಸಿದನು. ಭೂಮಿಯ ಕೊಯಿಲು ಮುಗಿಯಿತು. ಮಗದೊಬ್ಬ ದೇವದೂತನು ಸ್ವರ್ಗದ ದೇವಮಂದಿರದಿಂದ ಹೊರಗೆ ಬಂದನು. ಆತನ ಕೈಯಲ್ಲೂ ಹರಿತವಾದ ಕುಡುಗೋಲು ಇತ್ತು. ಬೆಂಕಿಯ ಮೇಲೆ ಅಧಿಕಾರ ಪಡೆದಿದ್ದ ಒಬ್ಬ ದೇವದೂತನು, ಆಗ ಬಲಿಪೀಠದ ಬಳಿಯಿಂದ ಬಂದನು. ಈತ ಕೈಯಲ್ಲಿ ಹರಿತವಾದ ಕುಡುಗೋಲನ್ನು ಹಿಡಿದಿದ್ದ ದೇವದೂತನನ್ನು ಉದ್ದೇಶಿಸಿ, “ನಿನ್ನ ಹರಿತವಾದ ಕುಡುಗೋಲನ್ನು ಕಳುಹಿಸು, ಭೂಮಿಯ ದ್ರಾಕ್ಷಾಫಲಗಳು ಪೂರ್ಣವಾಗಿ ಮಾಗಿವೆ; ಆ ಗೊಂಚಲುಗಳನ್ನು ಕೊಯ್ಯಬೇಕಾಗಿದೆ,” ಎಂದು ಕೂಗಿ ಹೇಳಿದನು. ಆ ದೇವದೂತನು ತನ್ನ ಕುಡುಗೋಲನ್ನು ಭೂಮಿಯ ಮೇಲೆ ಬೀಸಿ ದ್ರಾಕ್ಷಿಯ ಗೊಂಚಲುಗಳನ್ನು ಕೊಯ್ದನು; ಅವುಗಳನ್ನು ದೇವರ ರೋಷವೆಂಬ ದ್ರಾಕ್ಷಿಯ ದೊಡ್ಡ ಆಲೆಗೆ ಎಸೆದನು.

ಕೀರ್ತನೆ96:10, 11-12, 13

ಶ್ಲೋಕ: ಪ್ರಭು ಧರೆಗೆ ನ್ಯಾಯತೀರಿಸಲು ಬಂದೇ ಬರುವರು ಖರೆಯಾಗಿ 

ಶುಭಸಂದೇಶ: ಲೂಕ 21:5-11


“ಈ ಮಹಾದೇವಾಲಯವು ಅಂದವಾದ ಕಲ್ಲುಗಳಿಂದಲೂ ಅಮೂಲ್ಯವಾದ ಕೊಡುಗೆಗಳಿಂದಲೂ ಎಷ್ಟು ಅಲಂಕೃತವಾಗಿದೆ!” ಎಂದು ಕೆಲವರು ಮಾತನಾಡುತ್ತಿದ್ದರು. ಆಗ ಯೇಸು, “ಇವುಗಳನ್ನು ನೀವು ನೋಡುತ್ತಿದ್ದೀರಲ್ಲವೆ? ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದು; ಎಲ್ಲವನ್ನೂ ಕೆಡವಿಹಾಕುವ ಕಾಲವೊಂದು ಬರುವುದು,” ಎಂದರು. “ಗುರುವೇ, ಇದು ಸಂಭವಿಸುವುದು ಯಾವಾಗ? ಇದೀಗಲೆ ಸಂಭವಿಸಲಿದೆ ಎಂದು ತಿಳಿಸುವ ಪೂರ್ವಸೂಚನೆ ಯಾವುದು?” ಎಂದು ಕೆಲವರು ಕೇಳಿದರು. ಅದಕ್ಕೆ ಯೇಸುಸ್ವಾಮಿ, “ನೀವು ಮೋಸ ಹೋಗದಂತೆ ಜಾಗರೂಕರಾಗಿರಿ. ‘ಅನೇಕರು ನಾನೇ ಆತ, ನಾನೇ ಆತ,’ ಎನ್ನುತ್ತಾ ನನ್ನ ಹೆಸರನ್ನೇ ಇಟ್ಟುಕೊಂಡು ಬಂದು, ‘ಕಾಲವು ಸಮೀಪಿಸಿಬಿಟ್ಟಿತು,’ ಎಂದು ಹೇಳುತ್ತಾರೆ. ಅವರನ್ನು ಹಿಂಬಾಲಿಸಬೇಡಿ. ಸಮರ ಸಂಕಲಹಗಳ ಸುದ್ದಿ ಬಂದಾಗ ದಿಗಿಲುಗೊಳ್ಳಬೇಡಿ; ಇವೆಲ್ಲವೂ ಮೊದಲು ಸಂಭವಿಸಲೇಬೇಕು. ಆದರೂ ಅಂತ್ಯವು ಕೂಡಲೇ ಬರುವುದಿಲ್ಲ,” ಎಂದರು. ಅದೂ ಅಲ್ಲದೆ ಯೇಸು ಇಂತೆಂದರು: “ಜನಾಂಗಕ್ಕೆ ವಿರುದ್ಧವಾಗಿ ಜನಾಂಗ, ರಾಷ್ಟ್ರಕ್ಕೆ ವಿರುದ್ಧವಾಗಿ ರಾಷ್ಟ್ರ ಯುದ್ಧಕ್ಕಿಳಿಯುವುವು; ಭೀಕರ ಭೂಕಂಪಗಳಾಗುವುವು; ಕ್ಷಾಮಡಾಮರಗಳು ತಲೆದೋರುವುವು, ಭಯಂಕರ ಘಟನೆಗಳೂ ಬಾಹ್ಯಾಕಾಶದಲ್ಲಿ ಅಪೂರ್ವ ಸೂಚನೆಗಳೂ ಕಾಣಿಸಿಕೊಳ್ಳುವುವು.

21.11.22- "ಈಕೆಯಾದರೋ, ತನ್ನ ಕಡುಬಡತನದಲ್ಲೂ ತನಗಿದ್ದ ಜೀವನಾಧಾರವನ್ನೆಲ್ಲಾ ಕೊಟ್ಟುಬಿಟ್ಟಳು,”

ಮೊದಲನೇ ವಾಚನಪ್ರಕಟಣಾ ಗ್ರಂಥ 14:1-3, 4-5

ಅನಂತರ ಸಿಯೋನ್ ಬೆಟ್ಟದ ಮೇಲೆ ಯಜ್ಞದ ಕುರಿಮರಿಯಾದಾತನುನಿಂತಿರುವುದನ್ನು ಕಂಡೆಆತನ ಸಂಗಡ ಒಂದು ಲಕ್ಷದ ನಲವತ್ತನಾಲ್ಕು ಸಾವಿರ ಮಂದಿ ಇದ್ದರುಇವರು ತಮ್ಮ ಹಣೆಯ ಮೇಲೆ ಯಜ್ಞದ ಕುರಿಮರಿಯ ಮತ್ತು ಆತನ ಪಿತನ ನಾಮಾಂಕಿತವನ್ನು ಬರೆಸಿಕೊಂಡಿದ್ದರುಇದಲ್ಲದೆಸ್ವರ್ಗದಿಂದ ಮಹಾಧ್ವನಿಯೊಂದು ಕೇಳಿಸಿತುಅದು ಭೋರ್ಗರೆಯುವ ಜಲಪ್ರವಾಹದಂತೆಯೂ ದೊಡ್ಡ ಗುಡುಗಿನ ಗರ್ಜನೆಯಂತೆಯೂ ಇತ್ತುನಾವು ಕೇಳಿದಂಥ ಧ್ವನಿ ಕಿನ್ನರಿಯನ್ನು ನುಡಿಸುತ್ತಿರುವ ವಾದ್ಯಗಾರರ ಸ್ವರದಂತಿತ್ತುಒಂದು ಲಕ್ಷದ ನಲವತ್ತ ನಾಲ್ಕು ಸಾವಿರ ಜನರು ಸಿಂಹಾಸನದ ಸಾನ್ನಿಧ್ಯದಲ್ಲಿಯೂ ನಾಲ್ಕು ಜೀವಿಗಳ ಮುಂದೆಯೂ ಸಭಾಪ್ರಮುಖರ ಎದುರಿನಲ್ಲಿಯೂ ನಿಂತು ಒಂದು ಹೊಸಗೀತೆಯನ್ನು ಹಾಡುತ್ತಿದ್ದರುಇಡೀ ಮಾನವಕುಲದವರಲ್ಲಿ ವಿಮೋಚನೆಯನ್ನು ಹೊಂದಿದವರು ಇವರೇಇವರನ್ನುಳಿದು ಬೇರೆ ಯಾರಿಂದಲೂ  ಹಾಡನ್ನು ಕಲಿಯಲಾಗಲಿಲ್ಲಇವರು ಸ್ತ್ರೀಸಂಸರ್ಗದಿಂದ ಮಲಿನರಾಗದವರುಕನ್ಯೆಯರಂತೆ ಕಳಂಕರಹಿತರುಇವರು ಯಜ್ಞದ ಕುರಿಮರಿ ಹೋದೆಡೆಯಲ್ಲೆಲ್ಲಾ ಹಿಂಬಾಲಿಸುವವರುದೇವರಿಗೂ ಯಜ್ಞದ ಕುರಿಮರಿಗೂ ಅರ್ಪಿತವಾದ ಪ್ರಥಮ ಫಲದಂತೆ ಮಾನವಕುಲದವರಲ್ಲಿ ವಿಮೋಚನೆಯನ್ನು ಹೊಂದಿದವರು ಇವರುಸುಳ್ಳು ಮಾತು ಅವರ ಬಾಯಿಂದ ಬರುವುದಿಲ್ಲಅವರು ನಿರ್ದೋಷಿಗಳು.

ಕೀರ್ತನೆ24:1-2, 3-4, 5-6

ಶುಭಸಂದೇಶ: ಲೂಕ 21:1-4 12:41-44

ದೇವಾಲಯದ ಕಾಣಿಕೆಯ ಪೆಟ್ಟಿಗೆಯಲ್ಲಿ ಧನವಂತರು ತಮ್ಮ ಕಾಣಿಕೆಯನ್ನು ಹಾಕುತ್ತಿದ್ದುದನ್ನು ಯೇಸುಸ್ವಾಮಿ ಗಮನಿಸಿದರುಅಷ್ಟರಲ್ಲಿ ಒಬ್ಬ ಬಡವಿಧವೆ ಅಲ್ಲಿಗೆ ಬಂದುತಾಮ್ರದ ಚಿಕ್ಕ ನಾಣ್ಯಗಳೆರಡನ್ನು ಕಾಣಿಕೆಯಾಗಿ ಹಾಕಿದಳುಅದನ್ನು ಕಂಡ ಯೇಸು, “ ಬಡ ವಿಧವೆ ಅವರೆಲ್ಲರಿಗಿಂತಲೂ ಹೆಚ್ಚಾಗಿ ಅರ್ಪಿಸಿದಳೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆಅವರೆಲ್ಲರು ತಮ್ಮ ಅಪರಿಮಿತ ಐಶ್ವರ್ಯದಿಂದ ಕಾಣಿಕೆಯಿತ್ತರುಈಕೆಯಾದರೋತನ್ನ ಕಡುಬಡತನದಲ್ಲೂ ತನಗಿದ್ದ ಜೀವನಾಧಾರವನ್ನೆಲ್ಲಾ ಕೊಟ್ಟುಬಿಟ್ಟಳು,” ಎಂದರು.

20.11.22 - "ಇಂದೇ ನೀನು ನನ್ನೊಡನೆ ಪರಂಧಾಮದಲ್ಲಿರುವೆ"

ಮೊದಲನೇ ವಾಚನ: 2ಸಮುವೇಲ 5:1-3 


ಇಸ್ರಯೇಲರ ಎಲ್ಲ ಕುಲಗಳವರು ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದರು. "ನಾವು ನಿಮ್ಮ ರಕ್ತಸಂಬಂಧಿಗಳು; ಹಿಂದಿನ ದಿವಸಗಳಲ್ಲಿ, ಅಂದರೆ ಸೌಲನ ಆಳ್ವಿಕೆಯಲ್ಲಿ, ಇಸ್ರಯೇಲರ ದಳಪತಿಯಾಗಿ ಹೋಗುತ್ತಾ ಬರುತ್ತಾ ಇದ್ದವರು ನೀವೇ. ನಿಮ್ಮನ್ನು ಕುರಿತು ಸರ್ವೇಶ್ವರಸ್ವಾಮಿ, "ನೀನು ನನ್ನ ಪ್ರಜೆಗಳಾದ ಇಸ್ರಯೇಲರ ನಾಯಕನೂ ಪಾಲಕನೂ ಆಗಿರುವೆ," ಎಂದು ವಾಗ್ದಾನ ಮಾಡಿದ್ದಾರೆ," ಎಂದರು. ಹೆಬ್ರೋನಿನಲ್ಲಿದ್ದ ಅರಸ ದಾವೀದನು ತನ್ನ ಬಳಿಗೆ ಬಂದಿದ್ದ ಇಸ್ರಯೇಲರ ಹಿರಿಯರೊಡನೆ ಅಲ್ಲೇ ಸರ್ವೇಶ್ವರನ ಸನ್ನಿಧಿಯಲ್ಲಿ ಒಪ್ಪಂದ ಮಾಡಿಕೊಂಡನು. ಅವರು ದಾವೀದನನ್ನು ಅಭಿಷೇಕಿಸಿ ಇಸ್ರಯೇಲರ ಅರಸನನ್ನಾಗಿ ಮಾಡಿದರು.


ಕೀರ್ತನೆ: 122:1-2, 3-5 

ಶ್ಲೋಕ: ಪ್ರಭುವಿನಾಲಯಕೆ ಹೋಗೋಣ ಬಾ ಎಂದಾಗ, ಆಯಿತೆನಗೆ ಆನಂದ 

ಎರಡನೇ ವಾಚನ: ಕೊಲೊಸ್ಸೆಯರಿಗೆ 1:11-20 

ಸಹೋದರರೇ, ದೇವರ ಮಹಿಮಾಶಕ್ತಿಯಿಂದ ನೀವು ಬಲಗೊಂಡು ಎಲ್ಲವನ್ನೂ ತಾಳ್ಮೆಯಿಂದಲೂ ಸಮಾಧಾನದಿಂದಲೂ ಸಹಿಸಿಕೊಳ್ಳುವಿರಿ. ಪಿತನಿಗೆ ಹರ್ಷದಿಂದ ಕೃತಜ್ಞತಾಸ್ತುತಿ ಸಲ್ಲಿಸುವಿರಿ. ಏಕೆಂದರೆ, ಬೆಳಕಿನಲ್ಲಿರುವ ದೇವಜನರಿಗೆ ಕಾಯ್ದಿರಿಸಿರುವ ಸ್ವಾಸ್ಥ್ಯದಲ್ಲಿ ಪಾಲುಗಾರರಾಗಲು ನಿಮ್ಮನ್ನು ಯೋಗ್ಯರನ್ನಾಗಿ ಅವರು ಮಾಡಿದ್ದಾರೆ. ದೇವರು ನಮ್ಮನ್ನು ಅಂಧಕಾರದ ಆಡಳಿತದಿಂದ ಬಿಡುಗಡೆಮಾಡಿ ತಮ್ಮ ಪುತ್ರನ ಸಾಮ್ರಾಜ್ಯಕ್ಕೆ ಸುರಕ್ಷಿತವಾಗಿ ತಂದಿದ್ದಾರೆ. ಈ ಪುತ್ರನಲ್ಲಿ ನಮಗೆ ಪಾಪಕ್ಷಮೆ ದೊರಕಿದೆ, ವಿಮಾಚನೆ ಲಭಿಸಿದೆ. ಅದೃಶ್ಯ ದೇವನ ಸದೃಶ್ಯರೂಪನು ಕ್ರಿಸ್ತ, ಸೃಷ್ಟಿಗೆಲ್ಲ ಜೇಷ್ಠಪುತ್ರನಾತ. ಇರಲಿ ಇಹದಲಿ, ಅಶರೀರ ಒಡೆಯರಾಗಲಿ, ಒಡೆತನವಾಗಲಿ, ಅಧಿಕಾರಿಗಳಾಗಲಿ, ಅಧಿಪತ್ಯವಾಗಿರಲಿ, ಅದುದೆಲ್ಲವೂ ಆತನಲಿ. ಆತನಿಂದ, ಆತನಿಗಾಗಿ. ಎಲ್ಲಕ್ಕೂ ಮೊದಲೇ ಇರುವನಾತ, ಸಮಸ್ತಕ್ಕೂ ಆಧಾರಭೂತ. ಸಭೆಯೆಂಬ ಶರೀರಕ್ಕೆ ಶಿರಸ್ಸಾತ, ಆದಿಸಂಭೂತ, ಅಗಲೆಲ್ಲದರಲ್ಲೂ ಅಗ್ರಸ್ಥ, ಸತ್ತವರಿಂದ ಮೊದಲೆದ್ದು ಬಂದನಾತ. ಆ ಸುತನಲ್ಲೇ ಇರಿಸಲು ನಿರ್ಧರಿಸಿದನು ಪಿತದೇವ ತನ್ನ ಸರ್ವ ಸಂಪೂರ್ಣತೆಯನು. ಶಿಲುಬೆಯಿಂದಾತ ಹರಿಸಿದ ರಕುತದಿಂದ ಆಗುತಲಿದೆ ಶಾಂತಿಸಮಾಧಾನ, ನಡೆದಿದೆ ದೇವರೊಡನೆ ಸಂಧಾನ, ಇಹಪರಗಳೆಲ್ಲಕ್ಕೂ ಆತನ ಮುಖೇನ. 

ಶುಭಸಂದೇಶ: ಲೂಕ 23:35-43 


ಶಿಲುಬೆಗೇರಿಸಿದ ಯೇಸುವನ್ನು ಜನರು ನೋಡುತ್ತಾ ನಿಂತಿದ್ದರು. ಅಲ್ಲಿದ್ದ ಮುಖಂಡರು ಯೇಸುವನ್ನು ಮೂದಲಿಸುತ್ತಾ, "ಇವನು ಇತರರನ್ನು ರಕ್ಷಿಸಿದ; ಇವನು ದೇವರಿಂದಲೇ ಅಭಿಷಿಕ್ತನಾದ ಲೋಕೋದ್ಧಾರಕನು ಮತ್ತು ಅವರಿಂದಲೇ ಆಯ್ಕೆಯಾದವನು ಆಗಿದ್ದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ," ಎಂದರು. ಸೈನಿಕರು ಮುಂದೆ ಬಂದು ಹುಳಿರಸವನ್ನು ಅವರತ್ತ ಒಡ್ಡಿ, "ನೀನು ಯೆಹೂದ್ಯರ ಅರಸನಾಗಿದ್ದರೆ ನಿನ್ನನ್ನು ನೀನೇ ರಕ್ಷಿಸಿಕೊ," ಎಂದು ಅಣುಕಿಸುತ್ತಿದ್ದರು. ಯೇಸುವಿನ ಶಿಲುಬೆಯ ಮೇಲ್ಗಡೆ,  " ಇವನು ಯೆಹೂದ್ಯರ ಅರಸ" ಎಂಬ  ಲಿಖಿತವಿತ್ತು. ತೂಗುಹಾಕಿದ್ದ ಅಪರಾಧಿಗಳಲ್ಲಿ ಒಬ್ಬನು, "ನೀನು ಕ್ರಿಸ್ತ ಅಲ್ಲವೆ? ಹಾಗಾದರೆ ನಿನ್ನನ್ನು ನೀನೇ ರಕ್ಷಿಸಿಕೋ , ನಮ್ಮನ್ನೂ ರಕ್ಷಿಸು," ಎಂದು ಹಂಗಿಸಿದನು. ಆದರೆ ಮತ್ತೊಬ್ಬ ಅಪರಾಧಿ ಅವನನ್ನು ಖಂಡಿಸುತ್ತಾ, "ನಿನಗೇ ದೇವರ ಭಯಬೇಡವೆ? ನೀನು ಸಹ ಇದೇ ಶಿಕ್ಷೆಗೆ ಗುರಿಯಾಗಿರುವೆ, ನಮಗೇನೋ ಶಿಕ್ಷೆ ನ್ಯಾಯವಾಗಿದೆ. ನಮ್ಮ ಕೃತ್ಯಕ್ಕೆ ತಕ್ಕ ಫಲ ಸಿಕ್ಕಿದೆ; ಇವರಾದರೋ, ನಿರಪರಾಧಿ!" ಎಂದನು. ಬಳಿಕ ಅವನು, "ಸ್ವಾಮಿ ಯೇಸುವೇ, ನೀವು ರಾಜ್ಯಾಧಿಕಾರದೊಡನೆ ಬರುವಾಗ ನನ್ನನ್ನು ಜ್ಞಾಪಿಸಿಕೊಳ್ಳಿ," ಎಂದು ಬೇಡಿಕೊಂಡನು. ಅವನಿಗೆ ಯೇಸು, "ಇಂದೇ ನೀನು ನನ್ನೊಡನೆ ಪರಂಧಾಮದಲ್ಲಿರುವೆ ಎಂದು ನಿಶ್ಚಯವಾಗಿ ಹೇಳುತ್ತೇನೆ," ಎಂದರು.

19.11.22 - "ದೇವರು ಜೀವಂತರ ದೇವರೇ ಹೊರತು ಮೃತರ ದೇವರಲ್ಲ; ಅವರ ದೃಷ್ಟಿಯಲ್ಲಿ ಸರ್ವರೂ ಜೀವಂತರು,”

ಮೊದಲನೇ ವಾಚನಪ್ರಕಟಣಾ ಗ್ರಂಥ 11:4-12



ಯೋವಾನ್ನನಾದ ನನಗೆ ಈ ವಾಣಿಯು ಕೇಳಿಸಿತು: ಲೋಕಾಧಿಪತಿಯಾದ ದೇವರ ಸಾನ್ನಿಧ್ಯದಲ್ಲಿರುವ ಎರಡು ಓಲಿವ್ ಮರಗಳು ಮತ್ತು ಎರಡು ದೀಪಸ್ತಂಭಗಳು ಇವರೇ. ಯಾವನಾದರು ಇವರಿಗೆ ಕೇಡು ಬಗೆದರೆ ಇವರ ಬಾಯಿಯಿಂದ ಬೆಂಕಿ ಹೊರಟು ಇವರ ಶತ್ರುಗಳನ್ನು ದಹಿಸಿಬಿಡುತ್ತದೆ. ಇವರಿಗೆ ಕೇಡು ಬಗೆಯಬೇಕೆಂದಿರುವವನು ಹೀಗೆಯೇ ಹತನಾಗುತ್ತಾನೆ. ತಾವು ಪ್ರವಾದನೆ ಮಾಡುವ ದಿನಗಳಲ್ಲಿ ಮಳೆ ಬಾರದಂತೆ ಆಕಾಶವನ್ನು ಮುಚ್ಚಿ ಬಿಡುವ ಸಾಮರ್ಥ್ಯ ಇವರಿಗಿದೆ. ಇದಲ್ಲದೆ, ಇವರಿಗೆ ಇಷ್ಟಬಂದಾಗಲೆಲ್ಲಾ ನೀರನ್ನು ರಕ್ತವನ್ನಾಗಿ ಪರಿವರ್ತಿಸುವ ಹಾಗು ಸಕಲ ವಿಧವಾದ ಉಪದ್ರವಗಳಿಂದ ಜಗತ್ತನ್ನು ಪೀಡಿಸುವ ಅಧಿಕಾರ ಇವರಿಗೆ ಇರುತ್ತದೆ. ಇವರ ಸಾಕ್ಷ್ಯನೀಡಿಕೆ ಮುಗಿದ ನಂತರ ಪಾತಾಳಕೂಪದಿಂದ ಮೃಗವೊಂದು ಮೇಲೇರಿಬರುತ್ತದೆ; ಅದು ಇವರೊಡನೆ ಯುದ್ಧಮಾಡಿ, ಜಯಗಳಿಸಿ ಇವರನ್ನು ಕೊಂದುಹಾಕುತ್ತದೆ. ಈ ಸಾಕ್ಷಿಗಳ ಶವಗಳು ಆ ಮಹಾನಗರದ ಬೀದಿಪಾಲಾಗುವುವು. ಆ ನಗರವನ್ನು ಸೊದೋಮ್ ಇಲ್ಲವೆ ಈಜಿಪ್ಟ್ ಎಂದು ಸೂಚ್ಯವಾಗಿ ಕರೆಯಲಾಗಿದೆ. ಈ ಸಾಕ್ಷಿಗಳ ಪ್ರಭುವನ್ನು ಸಹ ಇಲ್ಲಿಯೇ ಶಿಲುಬೆಗೇರಿಸಲಾಯಿತು. ಸಕಲ ದೇಶ, ಭಾಷೆ, ಕುಲ, ಗೋತ್ರಗಳ ಜನರು ಈ ಸಾಕ್ಷಿಗಳ ಶವಗಳನ್ನು ಮೂರುವರೆ ದಿನಗಳ ತನಕ ದಿಟ್ಟಿಸಿ ನೋಡುವರು; ಅವುಗಳನ್ನು ಸಮಾಧಿಮಾಡಲು ಬಿಡಲೊಲ್ಲರು. ಭೂನಿವಾಸಿಗಳನ್ನು ಪೀಡಿಸಿದ್ದ ಆ ಇಬ್ಬರು ಪ್ರವಾದಿಗಳು ಸತ್ತದ್ದಕ್ಕಾಗಿ ಲೋಕದ ಜನರು ಸಂತೋಷದಿಂದ ಸಂಭ್ರಮಿಸುವರು. ಒಬ್ಬರಿಗೊಬ್ಬರು ಬಹುಮಾನಗಳನ್ನು ಹಂಚಿಕೊಳ್ಳುವರು. ಮೂರುವರೆ ದಿನಗಳಾದ ಮೇಲೆ ದೇವರಿಂದ ಜೀವದಾಯಕ ಉಸಿರು ಬಂದು ಆ ಶವಗಳನ್ನು ಹೊಕ್ಕಾಗ ಅವರು ಎದ್ದುನಿಂತರು. ಇದನ್ನು ಕಂಡವರೆಲ್ಲರೂ ಭಯದಿಂದ ನಡುಗಿದರು. ಅನಂತರ ಆ ಪ್ರವಾದಿಗಳಿಗೆ, “ಮೇಲೇರಿ ಬನ್ನಿ,” ಎಂದು ಸ್ವರ್ಗದಿಂದ ಒಂದು ಮಹಾವಾಣಿ ತಿಳಿಸಿತು. ಶತ್ರುಗಳು ಅವರನ್ನು ನೋಡುತ್ತಿದ್ದಂತೆಯೇ ಅವರು ಮೇಘಾರೂಢರಾಗಿ ಸ್ವರ್ಗಕ್ಕೇರಿದರು.

ಕೀರ್ತನೆ144:1, 2, 9-10

ಶ್ಲೋಕ: ಸ್ತುತಿಸ್ತೋತ್ರ ಪ್ರಭುವಿಗೆ, ನನ್ನಾಶ್ರಯ ದುರ್ಗಕೆ 

ಶುಭಸಂದೇಶ: ಲೂಕ 20:27-40


ಸತ್ತಮೇಲೆ ಪುನರುತ್ಥಾನ ಇಲ್ಲ, ಎಂದು ವಾದಿಸುತ್ತಿದ್ದ ಸದ್ದುಕಾಯರಲ್ಲಿ ಕೆಲವರು ಯೇಸುಸ್ವಾಮಿಯ ಬಳಿಗೆ ಬಂದು ಈ ಪ್ರಶ್ನೆ ಹಾಕಿದರು: “ಬೋಧಕರೇ, ‘ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ಹೆಂಡತಿಯನ್ನು ಅವನ ತಮ್ಮನು ಮದುವೆ ಮಾಡಿಕೊಂಡು ಅಣ್ಣನಿಗೆ ಸಂತಾನ ಪಡೆಯಬೇಕು,’ ಎಂದು ಮೋಶೆ ನಮಗಾಗಿ ಬರೆದಿಟ್ಟಿದ್ದಾನಲ್ಲವೆ? ಒಮ್ಮೆ ಏಳುಮಂದಿ ಅಣ್ಣತಮ್ಮಂದಿರಿದ್ದರು. ಅವರಲ್ಲಿ ಮೊದಲನೆಯವನಿಗೆ ಮದುವೆಯಾಯಿತು; ಆದರೆ ಅವನು ಮಕ್ಕಳಿಲ್ಲದೆ ಮೃತನಾದ. ಅವನ ಹೆಂಡತಿಯನ್ನು ಎರಡನೆಯವನು, ಅನಂತರ ಮೂರನೆಯವನು, ತದನಂತರ ಮಿಕ್ಕವರು, ಹೀಗೆ ಏಳುಮಂದಿಯೂ ಒಬ್ಬರಾದ ಮೇಲೆ ಒಬ್ಬರು ಮದುವೆಯಾಗಿ ಸಂತಾನ ಇಲ್ಲದೆಯೇ ನಿಧನರಾದರು. ಕಟ್ಟಕಡೆಗೆ ಆ ಮಹಿಳೆಯೂ ಮರಣಹೊಂದಿದಳು. ಹೀಗಿರುವಲ್ಲಿ ಪುನರುತ್ಥಾನದ ದಿನ ಸತ್ತವರೆಲ್ಲರೂ ಜೀವದಿಂದ ಎದ್ದುಬರುವಾಗ, ಆಕೆ ಯಾರ ಪತ್ನಿಯಾಗುವಳು? ಏಳುಮಂದಿ ಸಹೋದರರೂ ಆಕೆಯನ್ನು ವಿವಾಹ ಆಗಿದ್ದರಲ್ಲವೆ?” ಎಂದರು. ಅದಕ್ಕೆ ಯೇಸು, “ಈ ಲೋಕದ ಜೀವನದಲ್ಲಿ ಜನರು ಮದುವೆ ಮಾಡಿಕೊಳ್ಳುತ್ತಾರೆ, ಮದುವೆ ಮಾಡಿಕೊಡುತ್ತಾರೆ. ಆದರೆ ಸತ್ತವರು ಪುನರುತ್ಥಾನ ಹೊಂದಿ ಮರುಲೋಕ ಜೀವನಕ್ಕೆ ಯೋಗ್ಯರಾದಾಗ ಮದುವೆ ಮಾಡಿಕೊಳ್ಳುವುದೂ ಇಲ್ಲ, ಮದುವೆ ಮಾಡಿಕೊಡುವುದೂ ಇಲ್ಲ. ಅವರು ಅಲ್ಲಿ ದೇವದೂತರಿಗೆ ಸಮಾನರಾಗಿರುವರು; ಅವರು ಎಂದಿಗೂ ಸಾಯುವಂತಿಲ್ಲ; ಪುನರುತ್ಥಾನದ ಫಲ ಆಗಿರುವ ಅವರು ದೇವರ ಮಕ್ಕಳಾಗಿರುವರು. ಸತ್ತವರು ಪುನರುತ್ಥಾನ ಹೊಂದುವುದನ್ನು ಮೋಶೆಯ ಗ್ರಂಥದಲ್ಲಿ, ಅಂದರೆ ‘ಉರಿಯುವ ಪೊದೆ’ಯ ಪ್ರಸ್ತಾಪವಿರುವ ಭಾಗದಲ್ಲಿ ಸ್ಪಷ್ಟಪಡಿಸಲಾಗಿದೆ. ಅಲ್ಲಿ ಸರ್ವೇಶ್ವರನನ್ನು, ‘ಅಬ್ರಹಾಮನ ದೇವರು, ಇಸಾಕನ ದೇವರು, ಯಕೋಬನ ದೇವರು ಆಗಿದ್ದಾರೆ’ ಎಂದು ಹೇಳಲಾಗಿದೆ. ಹೀಗಿರುವಲ್ಲಿ ದೇವರು ಜೀವಂತರ ದೇವರೇ ಹೊರತು ಮೃತರ ದೇವರಲ್ಲ; ಅವರ ದೃಷ್ಟಿಯಲ್ಲಿ ಸರ್ವರೂ ಜೀವಂತರು,” ಎಂದರು. ಇದನ್ನು ಕೇಳಿದ ಕೆಲವು ಧರ್ಮಶಾಸ್ತ್ರಿಗಳು, “ಬೋಧಕರೇ, ಚೆನ್ನಾಗಿ ಹೇಳಿದಿರಿ,” ಎಂದರು. ಮುಂದೆ ಯಾವ ಪ್ರಶ್ನೆ ಕೇಳುವುದಕ್ಕೂ ಅವರಾರು ಧೈರ್ಯಗೊಳ್ಳಲಿಲ್ಲ.

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...