11.08.22 - “ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸೋದರನನ್ನು ಮನಃಪೂರ್ವಕವಾಗಿ ಕ್ಷಮಿಸಬೇಕು."

 ಮೊದಲನೇ ವಾಚನ: ಪ್ರವಾದಿ ಯೆಜೆಕಿಯೇಲನ ಗ್ರಂಥ 12:1-12


ಸರ್ವೇಶ್ವರ ನನಗೆ ಅನುಗ್ರಹಿಸಿದ ವಾಣಿ ಇದು:  “ನರಪುತ್ರನೇ, ನೀನು ದ್ರೋಹಿವಂಶದ ಮಧ್ಯೆ ವಾಸಿಸುತ್ತಿರುವೆ. ಆ ವಂಶದವರು ದ್ರೋಹಿಗಳಾಗಿರುವುದರಿಂದ ಕಣ್ಣಿದ್ದರೂ ಕಾಣರು, ಕಿವಿಯಿದ್ದರೂ ಕೇಳರು. “ನರಪುತ್ರನೇ, ವಲಸೆಹೋಗುವುದಕ್ಕೆ ಬೇಕಾದ ಸಾಮಗ್ರಿಗಳನ್ನು ನೀನು ಕೂಡಿಸಿಕೊಂಡು ಹಗಲಿನಲ್ಲಿ ಅವರ ಕಣ್ಣೆದುರಿಗೇ ಹೊರಡು. ಅಂದರೆ, ನಿನ್ನ ವಾಸಸ್ಥಳವನ್ನು ಬಿಟ್ಟು ಅವರು ನೋಡುವ ಹಾಗೆ ಬೇರೊಂದು ಸ್ಥಳಕ್ಕೆ ಹೋಗು: ಅವರು ದ್ರೋಹಿವಂಶದವರಾಗಿದ್ದರೂ ಒಂದು ವೇಳೆ ತಮ್ಮ ದ್ರೋಹವನ್ನು ಮನಸ್ಸಿಗೆ ತಂದುಕೊಳ್ಳಬಹುದು. ನೀನು ನಿನ್ನ ಸಾಮಗ್ರಿಗಳನ್ನು ವಲಸೆಯ ಸಾಮಗ್ರಿಗಳನ್ನೊ ಎಂಬಂತೆ ಹಗಲಿನಲ್ಲಿ ಅವರ ಕಣ್ಣೆದುರಿಗೆ ಮನೆಯೊಳಗಿಂದ ಆಚೆಗೆ ಹಾಕಿ ವಲಸೆ ಹೋಗುವವನಂತೆ ಸಾಯಂಕಾಲ ಅವರ ಸಮಕ್ಷಮ ಹೊರಟುಹೋಗು. ಅವರು ನೋಡುತ್ತಿರುವಾಗ, ನೀನು ಗೋಡೆಯನ್ನು ತೋಡಿ, ಕಂಡಿಯ ಮೂಲಕ ನಿನ್ನ ಸಾಮಗ್ರಿಗಳನ್ನು ಸಾಗಿಸಿಕೊಂಡು ಹೋಗು. ಅವರ ಕಣ್ಣ ಮುಂದೆ, ಅದನ್ನು ಹೆಗಲ ಮೇಲೆಹಾಕಿ, ಕತ್ತಲಲ್ಲಿ ಹೊತ್ತುಕೊಂಡುಹೋಗು; ನೆಲವನ್ನು ನೋಡದಂತೆ ಮೋರೆಯನ್ನು ಮುಚ್ಚಿಕೋ; ನಾನು ನಿನ್ನನ್ನು ಇಸ್ರಯೇಲ್ ವಂಶದವರಿಗೆ ಮುಂಗುರುತನ್ನಾಗಿ ಮಾಡಿದ್ದೇನೆ.” ಆಗ ನಾನು ನನಗಾದ ಅಪ್ಪಣೆಯನ್ನು ನೆರವೇರಿಸಿದೆ: ಹಗಲಿನಲ್ಲಿ ನನ್ನ ಸಾಮಗ್ರಿಗಳನ್ನು ವಲಸೆಯ ಸಾಮಗ್ರಿಗಳನ್ನೋ ಎಂಬಂತೆ ಮನೆಯೊಳಗಿನಿಂದ ಆಚೆಗೆ ಹಾಕಿದೆ; ಸಾಯಂಕಾಲ ನನ್ನ ಕೈಯಿಂದಲೇ ಗೋಡೆಯನ್ನು ಕಂಡಿಮಾಡಿ, ಕತ್ತಲಲ್ಲಿ ಆ ಸಾಮಗ್ರಿಗಳನ್ನು ಆಚೆಗೆ ಸಾಗಿಸಿ, ಅವರ ಕಣ್ಣ ಮುಂದೆ ಹೆಗಲ ಮೇಲೆ ಹೊತ್ತುಕೊಂಡು ಹೋದೆ. ಬೆಳಿಗ್ಗೆ ಸರ್ವೇಶ್ವರನಿಂದ ಈ ವಾಣಿ ನನಗೆ ಕೇಳಿಸಿತು: “ನರಪುತ್ರನೇ, ದ್ರೋಹಿವಂಶದವರಾದ ಇಸ್ರಯೇಲರು, ‘ನೀನು ಏನು ಮಾಡುತ್ತಿರುವೆ?’ ಎಂದು ನಿನ್ನನ್ನು ಕೇಳಿದ್ದಾರಲ್ಲವೆ? ನೀನು ಅವರಿಗೆ ಹೀಗೆ ನುಡಿ, ‘ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ಈ ಹೊರೆ ಜೆರುಸಲೇಮಿನಲ್ಲಿರುವ ರಾಜನಿಗೂ ಅಲ್ಲಿನ ಇಸ್ರಯೇಲ್ ವಂಶದವರೆಲ್ಲರಿಗೂ ಸಂಬಂಧಪಟ್ಟಿದೆ; ಇದನ್ನೂ ನುಡಿ, - ‘ನಾನು ನಿಮಗೆ ಮುಂಗುರುತಾಗಿದ್ದೇನೆ. ನಾನು ಮಾಡಿದಂತೆಯೇ ಅವರಿಗಾಗುವುದು: ಅವರು ವಲಸೆಯಾಗಿ ಸೆರೆಹೋಗುವರು. ಅವರಲ್ಲಿನ ರಾಜನು ಹೆಗಲ ಮೇಲೆ ಹೊರೆಯನ್ನು ಹೊತ್ತುಕೊಂಡು ಕತ್ತಲಲ್ಲಿ ಹೊರಟುಹೋಗುವನು: ಅವನು ಗೋಡೆಯನ್ನು ತೋಡಿ, ಕಂಡಿಯ ಮೂಲಕ ಸಾಮಗ್ರಿಗಳನ್ನು ಆಚೆಗೆ ಸಾಗಿಸುವನು; ಅವನು ಮೋರೆಯನ್ನು ಮುಚ್ಚಿಕೊಳ್ಳುವನು, ಭೂಮಿಯು ಅವನ ಕಣ್ಣಿಗೆ ಕಾಣಿಸದು.

ಕೀರ್ತನೆ: 78:56-57, 58-59, 61-62

ಶ್ಲೋಕ: ಮರೆಯರು ನನ್ನ ಮಹತ್ಕಾರ್ಯಗಳನು

1.  ಆದರೂ  ಬಂಡೆದ್ದು  ಪರೀಕ್ಷಿಸಿದರು  ಪರಾತ್ಪರ  ದೇವರನು|
ಕೈಗೊಂಡು  ನಡೆಯದೆ  ಹೋದರು  ಆತನ  ವಿಧಿನಿಯಮಗಳನು||
ನಂಬಿಕೆಗೆಟ್ಟು  ದ್ರೋಹಿಗಳಾದರು  ತಮ್ಮ  ಹಿರಿಯರಂತೆ|
ಆತನಿಗೆ  ಎದುರುಬಿದ್ದರು  ಹಿಮ್ಮುಖವಾದ  ಬಿಲ್ಲಿನಂತೆ||

2.  ಬೇಸರಗೊಳಿಸಿದರು  ತಮ್ಮ  ಪೂಜಾಸ್ಥಾನದಿಂದ|
ರೇಗಿಸಿದರಾತನನು  ಕೆತ್ತನೆಯ  ವಿಗ್ರಹಗಳಿಂದ||
ರಣರೌದ್ರನಾದನು  ಇದನರಿತ  ದೇವನು|
ತೊರೆದನು  ಅಸಹ್ಯದಿಂದ  ಇಸ್ರಯೇಲರನು||

3.  ಒಪ್ಪಿಸಿದನು  ತನ್ನ  ಬಲುಮೆಯನು  ಕೈಸೆರೆಗೆ|
ತನ್ನ  ಮಹಿಮೆಯನು  ವಿರೋಧಿಗಳ  ಕೈವಶಕ್ಕೆ||
ಗುರಿಮಾಡಿದನು  ತನ್ನ  ಪ್ರಜೆಯನು  ಖಡ್ಗಕೆ|
ಉಗ್ರವಾದನು  ತನ್ನ  ವಾರಸುದಾರರಿಗೆ||

ಘೋಷಣೆ                 ಕೀರ್ತನೆ 119:88

ಅಲ್ಲೆಲೂಯ, ಅಲ್ಲೆಲೂಯ!
ನಿನ್ನಚಲ  ಪ್ರೀತಿಗನುಸಾರ  ಚೈತನ್ಯಗೊಳಿಸೆನ್ನನು,  
ಕೈಗೊಳ್ಳುವೆನಾಗ  ನಿನ್ನ  ಬಾಯುಸುರಿದ  ಕಟ್ಟಳೆಗಳನು,
ಅಲ್ಲೆಲೂಯ!


ಶುಭಸಂದೇಶ: ಮತ್ತಾಯ 18:21-19:1

ಪೇತ್ರನು ಯೇಸುವಿನ ಬಳಿಗೆ ಬಂದು, “ಸ್ವಾವಿೂ, ನನಗೆ ವಿರುದ್ಧ ದ್ರೋಹ ಮಾಡುತ್ತಾ ಇರುವ ನನ್ನ ಸಹೋದರನನ್ನು ಎಷ್ಟು ಸಲ ಕ್ಷಮಿಸಬೇಕು? ಏಳು ಸಲವೇ?” ಎಂದು ಕೇಳಿದನು. “ಏಳು ಸಲವಲ್ಲ, ಏಳೆಪ್ಪತ್ತು ಸಲ ಕ್ಷಮಿಸಬೇಕು ಎಂದು ನಾನು ನಿನಗೆ ಒತ್ತಿ ಹೇಳುತ್ತೇನೆ” ಎಂದು ಯೇಸು ಉತ್ತರವಿತ್ತರು. ಯೇಸು ತಮ್ಮ ಮಾತನ್ನು ಮುಂದುವರಿಸುತ್ತಾ, “ಸ್ವರ್ಗಸಾಮ್ರಾಜ್ಯಕ್ಕೆ ಈ ಹೋಲಿಕೆ ಅನ್ವಯಿಸುತ್ತದೆ: ಒಬ್ಬ ರಾಜನಿದ್ದ. ಅವನು ತನ್ನ ಸೇವಕರಿಂದ ಲೆಕ್ಕ ಕೇಳಲು ನಿರ್ಧರಿಸಿದ. ಲೆಕ್ಕ ತೆಗೆದುಕೊಳ್ಳಲು ಆರಂಭಿಸಿದಾಗ ಹತ್ತು ಸಾವಿರ ‘ಚಿನ್ನದ ನಾಣ್ಯ’ಗಳನ್ನು ಸಾಲವಾಗಿ ತೆರಬೇಕಾಗಿದ್ದ ಒಬ್ಬನನ್ನು ಅವನ ಸಮ್ಮುಖಕ್ಕೆ ಕರೆತರಲಾಯಿತು. ಆದರೆ ಸಾಲ ತೀರಿಸಲು ಅವನ ಕೈಯಲ್ಲಿ ಹಣವಿರಲಿಲ್ಲ. ಆದುದರಿಂದ ಅವನಿಗಿದ್ದುದೆಲ್ಲವನ್ನು ಮಾತ್ರವಲ್ಲ, ಅವನನ್ನೂ ಅವನ ಮಡದಿ ಮಕ್ಕಳನ್ನೂ ಗುಲಾಮಗಿರಿಗೆ ಮಾರಿ, ಸಾಲ ತೀರಿಸುವಂತೆ ರಾಜ ಆಜ್ಞಾಪಿಸಿದ. ಆಗ ಆ ಸೇವಕ ರಾಜನ ಕಾಲಿಗೆ ಬಿದ್ದು ಬೇಡಿಕೊಂಡ: ‘ಸ್ವಲ್ಪ ಸೈರಿಸಿಕೊಳ್ಳಿ ಸ್ವಾವಿೂ, ನಿಮ್ಮ ಸಾಲವನ್ನೆಲ್ಲಾ ತೀರಿಸಿಬಿಡುತ್ತೇನೆ,’ ಎಂದು ಅಂಗಲಾಚಿದ. ರಾಜನಿಗೆ ಕನಿಕರ ಉಂಟಾಯಿತು. ಆ ಸೇವಕನನ್ನು ಬಿಡುಗಡೆಮಾಡಿ ಅವನ ಸಾಲವನ್ನು ಮನ್ನಿಸಿ ಬಿಟ್ಟ. “ಆದರೆ ಅದೇ ಸೇವಕ ಹೊರಗೆ ಬಂದದ್ದೇ ತನಗೆ ಕೇವಲ ನೂರು ‘ಬೆಳ್ಳಿಕಾಸು’ ಸಾಲ ತೆರಬೇಕಾಗಿದ್ದ ಒಬ್ಬ ಜೊತೆ ಸೇವಕನನ್ನು ಎದುರುಗೊಂಡ. ಅವನನ್ನು ಹಿಡಿದು, ‘ನನಗೆ ಕೊಡಬೇಕಾದ ಸಾಲವನ್ನು ಈಗಲೇ ಕೊಟ್ಟು ತೀರಿಸು,’ ಎಂದು ಕುತ್ತಿಗೆ ಹಿಸುಕಿದ. ಆಗ ಆ ಜೊತೆಗಾರ, ‘ಸ್ವಲ್ಪ ಸೈರಿಸಿಕೊ, ಕೊಟ್ಟುಬಿಡುತ್ತೇನೆ,’ ಎಂದು ಕಾಲಿಗೆ ಬಿದ್ದು ಕೇಳಿಕೊಂಡ. ಆದರೂ ಅವನು ಒಪ್ಪಲಿಲ್ಲ. ಅಷ್ಟುಮಾತ್ರವಲ್ಲ, ಸಾಲ ತೀರಿಸುವ ತನಕ ಆ ಜೊತೆಗಾರನನ್ನು ಸೆರೆಗೆ ಹಾಕಿಸಿದ. ಇದೆಲ್ಲವನ್ನು ಕಂಡ ಇತರ ಸೇವಕರು ಬಹಳವಾಗಿ ನೊಂದುಕೊಂಡರು. ರಾಜನ ಬಳಿಗೆ ಹೋಗಿ ನಡೆದುದೆಲ್ಲವನ್ನೂ ವರದಿಮಾಡಿದರು. ರಾಜನು ಅವನನ್ನು ಕರೆಯಿಸಿ, ‘ಎಲೋ ನೀಚ, ನೀನು ಬೇಡಿಕೊಂಡಿದ್ದರಿಂದ ಪೂರ್ತಿ ಸಾಲವನ್ನು ನಾನು ಮನ್ನಾಮಾಡಿದೆ. ನಾನು ನಿನಗೆ ದಯೆ ತೋರಿಸಿದಂತೆ ನೀನೂ ನಿನ್ನ ಜೊತೆಗಾರನಿಗೆ ದಯೆ ತೋರಿಸಬೇಕಿತ್ತು ಅಲ್ಲವೇ?’ ಎಂದು ಸಿಟ್ಟುಗೊಂಡ. ಬಳಿಕ ತನಗೆ ಬರಬೇಕಾಗಿದ್ದ ಸಾಲವನ್ನು ತೀರಿಸುವವರೆಗೂ ಅವನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿದ. “ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸೋದರನನ್ನು ಮನಃಪೂರ್ವಕವಾಗಿ ಕ್ಷಮಿಸಬೇಕು. ಇಲ್ಲದಿದ್ದರೆ ಸ್ವರ್ಗದಲ್ಲಿರುವ ನನ್ನ ತಂದೆ ನಿಮಗೆ ಇದರಂತೆಯೇ ಮಾಡುವರು,” ಎಂದರು. ಈ ವಿಷಯಗಳನ್ನು ಹೇಳಿಯಾದ ಮೇಲೆ, ಯೇಸುಸ್ವಾಮಿ ಗಲಿಲೇಯವನ್ನು ಬಿಟ್ಟು ಜೋರ್ಡನ್ ನದಿಯ ಆಚೆಕಡೆ ಇದ್ದ ಜುದೇಯ ಪ್ರಾಂತ್ಯಕ್ಕೆ ಬಂದರು.

                                                                 ಪೂಜಾರ್ಪಣೆ 






10.08.22 - "ನನ್ನ ಸೇವೆ ಮಾಡುವವನು ನನ್ನ ಪಿತನಿಂದ ಸನ್ಮಾನ ಹೊಂದುತ್ತಾನೆ,”

ಮೊದಲನೇ ವಾಚನ: 2 ಕೊರಿಂಥಿಯರಿಗೆ 9:6-10

ಸಹೋದರರೇ ವಿರಳವಾಗಿ ಬಿತ್ತುವವನು ವಿರಳವಾಗಿ ಕೊಯ್ಯುತ್ತಾನೆ ಹೇರಳವಾಗಿ ಬಿತ್ತುವವನು ಹೇರಳವಾಗಿ ಕೊಯ್ಯುತ್ತಾನೆ. ಇದು ನಿಮಗೆ ತಿಳಿದಿರಲಿ ಪ್ರತಿಯೊಬ್ಬನೂ ತನ್ನ ಮನಸ್ಸಿನಲ್ಲಿ ನಿಶ್ಚಯಿಸಿಕೊಂಡಷ್ಟು ನೀಡಲಿ. ಒಲ್ಲದ ಮನಸ್ಸಿನಿಂದಾಗಲಿ ಬಲಾತ್ಕಾರದಿಂದಾಗಲಿ ಕೊಡುವುದು ಬೇಡ. ನಗುನಗುತ್ತಾ ನೀಡುವಾತನನ್ನು ದೇವರು ಪ್ರೀತಿಸುತ್ತಾರೆ.  ಸಕಲ ವಿಧವಾದ ವರದಾನಗಳನ್ನು ನಿಮಗೆ ಯಥೇಚ್ಛವಾಗಿ ನೀಡಬಲ್ಲ ಶಕ್ತಿ ದೇವರಿಗಿದೆ. ನೀವು ಸದಾ ಸಮೃದ್ಧಿಯಿಂದಿರುವಿರಿ. ಹೀಗೆ ಸಕಲ ಸತ್ಕಾರ್ಯಗಳಿಗೆ ಹೃತ್ಪೂರ್ವಕವಾಗಿ ನೆರವಾಗುವಿರಿ. “ದೀನದಲಿತರಿಗೆ ಧಾರಾಳವಾಗಿ ನೀಡುವನು; ಅನವರತ ಇರುವುದು ಅವನ ದಾನಧರ್ಮದ ಫಲವು,” ಎಂದು ಪವಿತ್ರಗ್ರಂಥದಲ್ಲಿ ಬರೆದಿದೆ. ಬಿತ್ತುವವನಿಗೆ ಬೀಜವನ್ನೂ ಉಣ್ಣುವವನಿಗೆ ಊಟವನ್ನೂ ಒದಗಿಸುವ ದೇವರು, ಬಿತ್ತನೆಗೆ ಬೇಕಾದ ಬೀಜವನ್ನು ನಿಮಗೂ ಕೊಟ್ಟು ಅದನ್ನು ಬೆಳೆಸುವರು. ನಿಮ್ಮ ದಾನಧರ್ಮದ ಫಲಗಳು ಸಮೃದ್ಧಿಗೊಳ್ಳುವಂತೆ ಮಾಡುವರು.

ಕೀರ್ತನೆ                       112:1-2, 5-9

ಶ್ಲೋಕ:   ದಯೆತೋರಿ  ಧನಸಹಾಯ  ಮಾಡುವವನು  ಭಾಗ್ಯವಂತ.

1.  ಪ್ರಭುವಿನಲಿ  ಭಯಭಕ್ತಿಯುಳ್ಳವನು  ಧನ್ಯನು|
ಆತನಾಜ್ಞೆಗಳಲಿ  ಹಿಗ್ಗುವವನು  ಭಾಗ್ಯನು||
ಬಲಿಷ್ಠವಾಗುವುದು  ಜಗದೊಳು  ಅವನ  ಸಂತಾನ|
ಸಜ್ಜನರ  ಸಂತತಿ  ಪಡೆವುದು  ಆಶೀರ್ವಚನ||

ಶ್ಲೋಕ

2.  ದಯೆತೋರಿ  ಧನಸಹಾಯ  ಮಾಡುವವನು  ಭಾಗ್ಯವಂತ|
ನ್ಯಾಯದಿಂದ  ವ್ಯವಹರಿಸುವಂಥಾ  ಮನುಜನು  ಭಾಗ್ಯವಂತ||
ಅಚಲನಾಗಿರುವನು  ನೀತಿವಂತನು|
ಮರೆಯಲಾರರು  ಎಂದಿಗೂ  ಆತನನು||

ಶ್ಲೋಕ

3.  ಅಶುಭವಾರ್ತೆಯ  ಭಯಭೀತಿ  ಯಾವುದೂ  ಅವನಿಗಿಲ್ಲ|
ಪ್ರಭುವಿನಲಿ  ಭರವಸೆಯಿಟ್ಟ  ಆ  ಭನವು  ಅಸ್ಥಿರವಲ್ಲ||
ದೃಢವಿದೆ  ಅವನ  ಮನ,  ಎದೆಗುಂದನವನು|
ಕಾಣುವನು  ದುರಳರಿಗಾಗುವ  ದಂಡನೆಯನು||

ಶ್ಲೋಕ

4.  ಉದಾರತೆಯಿಂದ  ಕೊಡುವನು  ಬಡವರಿಗೆ|
ಫಲಿಸುವುದು  ಅವನಾ  ನೀತಿ  ಸದಾಕಾಲಕೆ|
ಮಹಿಮೆತರುವ  ಕೋಡು  ಮೂಡುವುದು  ಅವನಿಗೆ||

ಶ್ಲೋಕ

ಘೋಷಣೆ

ಅಲ್ಲೆಲೂಯ, ಅಲ್ಲೆಲೂಯ!
ನಾನೇ  ಜಗಜ್ಯೋತಿ,  ನನ್ನನ್ನು  ಹಿಂಬಾಲಿಸುವವನು  ಕತ್ತಲಲ್ಲಿ  ನಡೆಯುವುದಿಲ್ಲ,  ಜೀವದಾಯಕ  ಜ್ಯೋತಿ  ಅವನಲ್ಲಿರುತ್ತದೆ,,
ಅಲ್ಲೆಲೂಯ!

ಶ್ಲೋಕ: ದಯೆತೋರಿ ಧನಸಹಾಯ ಮಡುವವನು ಭಾಗ್ಯವಂತ

ಶುಭಸಂದೇಶ: ಯೊವಾನ್ನ 12:24-26


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ; ಗೋದಿಯ ಕಾಳು ಭೂಮಿಯಲ್ಲಿ ಬಿದ್ದು ಸಾಯದಿದ್ದರೆ ಅದು ಒಂಟಿಯಾಗಿ ಉಳಿಯುತ್ತದೆ; ಅದು ಸತ್ತರೆ ಮಾತ್ರ ಸಮೃದ್ಧಿಯಾದ ಫಲವನ್ನು ಕೊಡುತ್ತದೆ.  ತನ್ನ ಪ್ರಾಣವನ್ನು ಪ್ರೀತಿಸುವವನು ಅದನ್ನು ಕಳೆದುಕೊಳ್ಳುತ್ತಾನೆ. ತನ್ನ ಪ್ರಾಣವನ್ನು ಈ ಲೋಕದಲ್ಲಿ ದ್ವೇಷಿಸುವವನು ಅದನ್ನು ನಿತ್ಯಜೀವಕ್ಕಾಗಿ ಕಾಯ್ದಿರಿಸಿಕೊಳ್ಳುತ್ತಾನೆ. ನನ್ನ ಸೇವೆ ಮಾಡಬೇಕೆಂದಿರುವವನು ನನ್ನನ್ನು ಹಿಂಬಾಲಿಸಲಿ. ಆಗ ನಾನಿರುವಲ್ಲಿಯೇ ನನ್ನ ಸೇವಕನೂ ಇರುತ್ತಾನೆ. ನನ್ನ ಸೇವೆ ಮಾಡುವವನು ನನ್ನ ಪಿತನಿಂದ ಸನ್ಮಾನ ಹೊಂದುತ್ತಾನೆ,” ಎಂದರು.

ಪೂಜಾರ್ಪಣೆ 



ಸಂತ ಸ್ಮರಣೆ - ಸಂತ ಲಾರೆನ್ಸ್ 

3ನೇ ಶತಮಾನದ ಸಂತ ಲಾರೆನ್ಸ್ ಬಡವರ ಸೇವೆಗಾಗಿ ನೇಮಿಸಲ್ಪಟ್ಟ 7 ಉಪಯಾಜಕರಲ್ಲಿ ಒಬ್ಬರಾಗಿದ್ದರು. ಕ್ರೈಸ್ತರ ಮೇಲೆ ಭೀಕರ ಚಿತ್ರಹಿಂಸೆ ಪ್ರಾರಂಭವಾದಾಗ ಜಗದ್ಗುರು ಸಂತ ಸಿಕ್ಸ್ ತಸ್ ಮತ್ತು ನಾಲ್ವರು ಉಪಯಾಜರು ಮರಣದಂಡನೆಗೆ ಒಳಗಾಗುತ್ತಾರೆ. ಮರಣದಂಡನೆಗೆ ಅವರು ನಡೆಯುತ್ತಿರುವಾಗ ಲಾರೆನ್ಸ್ ಎದುರು ಬಂದು "ತಂದೆಯೇ, ನಿಮ್ಮ ಉಪಾಸಕನನ್ನು ಬಿಟ್ಟು, ನೀವೆಲ್ಲಿಗೆ ಹೋಗುತ್ತಿದ್ದೀರಿ?" ಎಂದು ಕೇಳಿದಾಗ, ಜಗದ್ಗುರು ಸಿಕ್ಸ್ ತಸ್ "ನಿನ್ನ ಬಿಟ್ಟು ಹೋಗುತ್ತಿಲ್ಲ ಮಗು, ಇನ್ನೂ ಮೂರು ದಿನಗಳಲ್ಲಿ ನೀನು ನನ್ನನ್ನು ಹಿಂಬಾಲಿಸುವೆ" ಎಂದರು.

 ಈ ಮೂರು ದಿನಗಳು ಲಾರೆನ್ಸರ ಬದುಕಿನ ಶ್ರೇಷ್ಠ ದಿನಗಳಾದವು. ರೋಮ್ ಸೈನ್ಯದ ದಂಡನಾಯಕ ಕ್ರೈಸ್ತ ದೇವಾಲಯಗಳಲ್ಲಿ ಬಹಳಷ್ಟು ಚಿನ್ನ-ಬೆಳ್ಳಿ ಅಪಾರವಾದ ಸಂಪತ್ತು ಇರುವುದೆಂದು ತಿಳಿದು ಸಂತ ಲಾರೆನ್ಸಾ ರನ್ನು ಕರೆದು, ನೀವು ಚಿನ್ನದ ಬಟ್ಟಲುಗಳಲ್ಲಿ ಪೂಜೆ ಅರ್ಪಿಸುತ್ತಿರಂತೆ, ರಕ್ತವನ್ನು ಬೆಳ್ಳಿಯ ಪಾತ್ರೆಗಳಲ್ಲಿ ಕುಡಿಯುತ್ತಿರಂತೆ, ಪೂಜೆಯಲ್ಲಿ ಚಿನ್ನದ ಮೇಣದಬತ್ತಿಯ ಸ್ತಂಭಗಳನ್ನು ಇಡುತ್ತಿದ್ದಂತೆ, ನಿಮ್ಮ ಧರ್ಮದ ಸಿದ್ಧಾಂತವೇ ಹೇಳುತ್ತದೆ: 'ಸೀಜರನಿಗೆ ಸೇರಿದ್ದನ್ನು ಸೀಜರನಿಗೆ ಒಪ್ಪಿಸಿ' ಎಂದು. ನಿಮ್ಮ ದೇವರು ಭೂಮಿಗೆ ಬಂದಾಗ ಇದನ್ನೆಲ್ಲಾ ತರಲಿಲ್ಲ. ದೇವರ ವಾಕ್ಯವನ್ನು ಮಾತ್ರ ತಂದ. ಆದ್ದರಿಂದ ಎಲ್ಲವನ್ನೂ ನನಗೆ ತಂದು ಒಪ್ಪಿಸು"  ಎನ್ನುತ್ತಾನೆ.

 ಮೂರು ದಿನಗಳ ಕಾಲಾವಕಾಶ ಕೇಳಿದ ಸಂತ ಲಾರೆನ್ಸ್ ತನ್ನ ವಶದಲ್ಲಿದ್ದ ಎಲ್ಲಾ ಹಣವನ್ನು ಬಡಬಗ್ಗರಿಗೆ ಹಂಚುತ್ತಾರೆ. ಇದು ಸಾಲದು ಎಂಬಂತೆ ಚಿನ್ನದ ಪೂಜಾಪಾತ್ರೆಗಳನ್ನು ಮಾರಿ ಬಡವರಿಗೆ ಹಂಚುತ್ತಾರೆ. ಮೂರು ದಿನಗಳ ನಂತರ ಕುರುಡರು, ಕುಂಟರು, ಅಂಗವಿಕಲರು, ನಿರ್ಗತಿಕರು ಮತ್ತು ಬಡವರನ್ನು ಒಟ್ಟಿಗೆ ನಿಲ್ಲಿಸಿ ದಂಡನಾಯಕನ ಆಗಮನಕ್ಕೆ ಕಾಯುತ್ತಾರೆ. ದಂಡನಾಯಕ ಬಂದಾಗ ಎದುರಿಗಿದ್ದವರನ್ನು ತೋರಿಸಿ "ಇಗೋ ನಮ್ಮ ಚರ್ಚಿನ ಆಸ್ತಿ" ಎನ್ನುತ್ತಾರೆ. ಕೋಪೋದ್ರಿಕ್ತನಾದ ದಂಡನಾಯಕ ಅವರಿಗೆ ಮರಣದಂಡನೆ ವಿಧಿಸುತ್ತಾನೆ. ಅದು ಸಾಧಾರಣ ಮರಣ ದಂಡನೆ ಅಲ್ಲ. ದೊಡ್ಡ ಬಾಣಲೆಯ ಉರಿಯುವ ಕೆಂಡಗಳ ಮೇಲೆ ಲಾರೆನ್ಸ್ ನನ್ನು ಮಲಗಿಸಿ ಜೀವ ತೆಗೆಯುವುದು. ಹೀಗೆ ಸ್ವಲ್ಪ ಸ್ವಲ್ಪವೇ ಬೆಂದು ಸಾಯುವ ಗಳಿಗೆಯಲ್ಲಿ ಲಾರೆನ್ಸ್ ಹೇಳಿದರಂತೆ: "Assum est; Versa, et Manduca". ಅಂದರೆ "ಚೆನ್ನಾಗಿ ಬಂದಿದೆ, ಒಮ್ಮೆ ತಿರುಗಿಸಿ ನಂತರ ತಿನ್ನಿ". ಸಂತ ಅಂಬ್ರೋಸ್ ಈ ಘಟನೆಯನ್ನು ದಾಖಲಿಸಿದ್ದಾರೆ.

 ಸಂತ ಲಾರೆನ್ಸರ ಬಗೆಗೆ ನಮಗೆ ತಿಳಿದಿರುವುದು ಬಹಳ ಕಡಿಮೆ. ಜಗದ್ಗುರು ಸಂತ ಸಿಕ್ಸ್ ತುಸ್ ನಂತರ ರೋಮ್ ಚಕ್ರವರ್ತಿ ವಲೇರಿಯನ್ 258 ರಲ್ಲಿ ಲಾರೆನ್ಸ್ ಮತ್ತು ಇತರ ಇಬ್ಬರು ಉಪನ್ಯಾಸಕರನ್ನು ಮರಣದಂಡನೆಗೆ ಗುರಿಮಾಡಿದ್ದಷ್ಟೇ ಇತಿಹಾಸದಿಂದ ನಾವು ತಿಳಿದಿರುವುದು. ಸಂತ ಡಮಸಸ್, ಅಂಬ್ರೋಸ್ ಮತ್ತು ಅಗಸ್ಟಿನ್ ರು ತಮ್ಮ ಬರಹಗಳಲ್ಲಿ ಸಂತ ಲಾರೆನ್ಸರ ಬಗ್ಗೆ ಸಾಕಷ್ಟು ವಿವರಗಳನ್ನು ಉಲ್ಲೇಖಿಸುತ್ತಾರೆ.

ಸಂತ ಲಾರೆನ್ಸರ ಸಮಾಧಿಯ ಮೇಲೆ ಕಟ್ಟಲಾದ ದೇವಾಲಯ ರೋಮ್ನ ಏಳು ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿತ್ತು. ಇಂದಿಗೂ ರೋಮ್ ನಗರಕ್ಕೆ ಹೋಗುವ ಭಕ್ತಾದಿಗಳಿಗೆ ಇದೊಂದು ಪುಣ್ಯಕ್ಷೇತ್ರವಾಗಿದೆ.


09.08.22 - "ಈ ಮಗುವಿನಂತೆ ನಮ್ರಭಾವವುಳ್ಳವನೇ ಸ್ವರ್ಗಸಾಮ್ರಾಜ್ಯದಲ್ಲಿ ಎಲ್ಲರಿಗಿಂತ ದೊಡ್ಡವನು"

ಮೊದಲನೇ ವಾಚನ: ಪ್ರವಾದಿ ಯೆಜೆಕಿಯೇಲನ ಗ್ರಂಥ 2:8-3:4

ನರಪುತ್ರನೇ, ನಾನು ನಿನಗೆ ನುಡಿಯುವ ಮಾತನ್ನು ಕೇಳು; ಅವಿಧೇಯರಾದ ಆ ವಂಶದವರಂತೆ ನೀನು ಅವಿಧೇಯನಾಗಬೇಡ; ನಾನು ಕೊಡುವುದನ್ನು ಬಾಯಿತೆರೆದು ತಿಂದು ಬಿಡು,” ಎಂದರು. ಇಗೋ, ನಾನು ನೋಡುತ್ತಿದ್ದಂತೆ ಒಂದು ಕೈ ನನ್ನ ಕಡೆಗೆ ಚಾಚಿತ್ತು; ಅದರಲ್ಲಿ ಗ್ರಂಥದ ಸುರುಳಿಯೊಂದು ಕಾಣಿಸಿತು. ಆ ಸುರುಳಿಯನ್ನು ನನ್ನೆದುರಿನಲ್ಲೆ ಬಿಚ್ಚಿದರು. ಅದರ ಎರಡು ಬದಿಗಳಲ್ಲಿಯೂ ಬರೆದಿತ್ತು: ಅದು ಪ್ರಲಾಪ, ಶೋಕ, ಶಾಪ ಇವುಗಳ ಬರಹದಿಂದ ಕೂಡಿತ್ತು. ಬಳಿಕ ಸರ್ವೇಶ್ವರ ನನಗೆ, “ನರಪುತ್ರನೇ, ನಿನಗೆ ಕೊಟ್ಟ ಈ ಸುರುಳಿಯನ್ನು ತಿನ್ನು; ಅನಂತರ ಇಸ್ರಯೇಲ್ ವಂಶದವರಿಗೆ ಸಾರು, ಹೋಗು,” ಎಂದು ಆಜ್ಞಾಪಿಸಿದರು. ನಾನು ಬಾಯಿ ತೆರೆದೆ; ಅವರೇ ಆ ಸುರುಳಿಯನ್ನು ನನಗೆ ತಿನ್ನಿಸಿದರು. ತಿನ್ನಿಸುತ್ತಾ, “ನರಪುತ್ರನೇ, ನಾನು ಕೊಡುವ ಈ ಸುರುಳಿಯನ್ನು ತಿಂದು ಹೊಟ್ಟೆ ತುಂಬಿಸಿಕೋ,” ಎಂದರು. ನಾನು ಅದನ್ನು ತಿಂದು ಬಿಟ್ಟೆ; ಅದು ನನ್ನ ಬಾಯಿಗೆ ಜೇನಿನಂತೆ ಸಿಹಿಯಾಗಿತ್ತು. ಆಮೇಲೆ ಸರ್ವೇಶ್ವರ ನನಗೆ ಹೀಗೆಂದರು: “ನರಪುತ್ರನೇ, ನೀನು ಇಸ್ರಯೇಲ್ ವಂಶದವರ ಬಳಿಗೆ ಹೋಗಿ ನಾನು ತಿಳಿಸುವ ಮಾತುಗಳನ್ನು ಅವರಿಗೆ ಹೇಳು."

ಕೀರ್ತನೆ: 119:14, 24, 72, 103, 111, 131

ಶ್ಲೋಕ:  ನಿನ್ನ  ನುಡಿ  ಎನಿತೊ  ರುಚಿ  ನನ್ನ  ನಾಲಿಗೆಗೆ.

1.  ಸಿರಿಸಂಪತ್ತಿಗಿಂತ  ಮಿಗಿಲಾಗಿ
ಆನಂದಿಪೆ  ನಿನ್ನ  ಮಾರ್ಗಿಯಾಗಿ
ನಿನ್ನಾಜ್ಞೆಯು   ಆನಂದದಾಯಕ
ಅವೇ  ನನಗೆ  ಮಂತ್ರಾಲೋಚಕ

2.  ಸಾವಿರಾರು  ಚಿನ್ನ  ಬೆಳ್ಳಿ  ನಾಣ್ಯಗಳಿಗಿಂತ
ನಿನ್ನ  ಬಾಯಿಂದ  ಬಂದ  ಧರ್ಮಶಾಸ್ತ್ರ  ಉಚಿತ
ನಿನ್ನ  ನುಡಿ  ಎನಿತೊ  ರುಚಿ  ನನ್ನ  ನಾಲಿಗೆಗೆ
ಜೇನುತುಪ್ಪಕ್ಕಿಂತ  ಸಿಹಿ  ನನ್ನ  ಬಾಯಿಗೆ

3.  ಹೃದಯಾನಂದಕರ  ನಿನ್ನ  ಕಟ್ಟಳೆಗಳು
ನನಗಮರ  ಸ್ವಾಸ್ಥ್ಯವಾದುವುವು   ಅವುಗಳು
ಬಾಯ್ದೆರೆದು  ಹಾತೊರೆಯುತ್ತಿರುವೆ
ನಿನ್ನ  ಆಜ್ಞೆಗಳನು  ಅರಸುತಿರುವೆ

ಘೋಷಣೆ                   ಕೀರ್ತನೆ 119:34

ಅಲ್ಲೆಲೂಯ, ಅಲ್ಲೆಲೂಯ!
ನೀಡೆನಗೆ  ನಿನ್ನ  ಶಾಸ್ತ್ರದ  ಅರಿವನು,
ಪೂರ್ಣಮನದಿಂದ  ಆಚರಿಸುವೆನದನು,,
ಅಲ್ಲೆಲೂಯ!

ಶುಭಸಂದೇಶ: ಮತ್ತಾಯ 18:1-5, 10, 12-14


ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, “ಸ್ವರ್ಗಸಾಮ್ರಾಜ್ಯದಲ್ಲಿ ಎಲ್ಲರಿಗಿಂತಲೂ ದೊಡ್ಡವನು ಯಾರು?” ಎಂದು ಕೇಳಿದರು. ಯೇಸು ಒಂದು ಚಿಕ್ಕ ಮಗುವನ್ನು ತಮ್ಮ ಹತ್ತಿರಕ್ಕೆ ಕರೆದು, ಅದನ್ನು ಶಿಷ್ಯರ ನಡುವೆ ನಿಲ್ಲಿಸಿ ಹೀಗೆಂದರು: “ನೀವು ಪರಿವರ್ತನೆ ಹೊಂದಿ ಮಕ್ಕಳಂತೆ ಆಗದಿದ್ದರೆ ಸ್ವರ್ಗಸಾಮ್ರಾಜ್ಯವನ್ನು ಸೇರಲಾರಿರಿ, ಎಂದು ನಿಶ್ಚಯವಾಗಿ ಹೇಳುತ್ತೇನೆ. ಈ ಮಗುವಿನಂತೆ ನಮ್ರಭಾವವುಳ್ಳವನೇ ಸ್ವರ್ಗಸಾಮ್ರಾಜ್ಯದಲ್ಲಿ ಎಲ್ಲರಿಗಿಂತ ದೊಡ್ಡವನು. ನನ್ನ ಹೆಸರಿನಲ್ಲಿ ಇಂತಹ ಮಗುವೊಂದನ್ನು ಸ್ವೀಕರಿಸುವವನು ನನ್ನನ್ನೇ ಸ್ವೀಕರಿಸುತ್ತಾನೆ.” “ಎಚ್ಚರಿಕೆ! ಈ ಚಿಕ್ಕವರಲ್ಲಿ ಯಾರನ್ನೂ ತೃಣೀಕರಿಸಬೇಡಿ.  ಸ್ವರ್ಗದಲ್ಲಿನ ಇವರ ದೂತರು ಸದಾಕಾಲ ನನ್ನ ಸ್ವರ್ಗೀಯ ಪಿತನ ಸಮ್ಮುಖದಲ್ಲಿ ಇದ್ದಾರೆ; ಇದು ನಿಮಗೆ ತಿಳಿದಿರಲಿ. “ನಿಮ್ಮಲ್ಲಿ ಒಬ್ಬನಿಗೆ ನೂರು ಕುರಿಗಳು ಇವೆಯೆನ್ನೋಣ. ಅವುಗಳಲ್ಲಿ ಒಂದು ಕುರಿ ತಪ್ಪಿಸಿಕೊಂಡು ಹೋಯಿತೆಂದು ಇಟ್ಟುಕೊಳ್ಳಿ. ಆಗ ನಿಮಗೇನು ಅನ್ನಿಸುತ್ತದೆ? ಅವನು ಉಳಿದ ತೊಂಬತ್ತೊಂಬತ್ತು ಕುರಿಗಳನ್ನು ಗುಡ್ಡದಲ್ಲೇ ಬಿಟ್ಟು, ತಪ್ಪಿಸಿಕೊಂಡುಹೋದ ಆ ಒಂದು ಕುರಿಯನ್ನು ಹುಡುಕಿಕೊಂಡು ಹೋಗುವುದಿಲ್ಲವೇ? ಅದು ಸಿಕ್ಕಿತು ಅನ್ನಿ; ತಪ್ಪಿಸಿಕೊಳ್ಳದ ಆ ತೊಂಬತ್ತೊಂಬತ್ತು ಕುರಿಗಳಿಗಿಂತ ಸಿಕ್ಕಿದ ಆ ಒಂದು ಕುರಿಗಾಗಿ ಅವನು ಹೆಚ್ಚು ಆನಂದಪಡುತ್ತಾನೆ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಅಂತೆಯೇ, ಈ ಚಿಕ್ಕವರಲ್ಲಿ ಒಬ್ಬನು ಕೂಡ ಕಳೆದುಹೋಗಬಾರದು; ಇದೇ ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತ."




08.08.22

ಮೊದಲನೇ ವಾಚನ: ಹಬಕ್ಕೂಕ 1.12 - 2.4

ಸರ್ವೇಶ್ವರಾ, ನನ್ನ ದೇವರೇ, ಪರಮ ಪಾವನ ಸ್ವಾಮಿಯೇ, ಅನಾದಿಯಿಂದ ಇರುವಂಥವರು ನೀವು. ನಾವು ಖಂಡಿತ ಸಾಯುವುದಿಲ್ಲ. ನಮ್ಮನ್ನು ದಂಡಿಸುವಂತೆ ಆ ಬಾಬಿಲೋನಿನವರನ್ನು ನೇಮಿಸಿದವರು ನೀವು; ಅವರನ್ನು ಪ್ರಬಲಗೊಳಿಸಿದವರು ನೀವು. ನಮಗೆ ಪೊರೆಬಂಡೆ ನೀವೇ. ಕೇಡನ್ನು ನೋಡಲಾರದಷ್ಟು ನಿಷ್ಕಳಂಕ ನಿಮ್ಮ ಕಣ್ಣು. ಕೆಡುಕನ್ನು ಸಹಿಸಲಾಗದಷ್ಟು ಪವಿತ್ರರು ನೀವು. ಇಂತಿರಲು ಕೆಡುಕನ್ನು ನೋಡಿ ಕೊಂಡಿರುವಿರೇಕೆ? ದುಷ್ಟನು ಶಿಷ್ಟನಾದವನನ್ನು ಕಬಳಿಸುತ್ತಿರುವುದನ್ನು ನೋಡಿ ಸುಮ್ಮನಿರುವಿರೇಕೆ? ಮನುಜರನ್ನು ಕಡಲ ಮೀನುಗಳಿಗೆ ಸಮನಾಗಿಸಿರುವಿರಿ, ಏಕೆ? ನಾಯಕನಿಲ್ಲದ ಕ್ರಿಮಿಕೀಟಗಳ ಗತಿಗೆ ಇಳಿಸಿರುವಿರಿ, ಏಕೆ? ಈ ಕಾರಣ ಆ ಬಾಬಿಲೋನಿಯರು ಮಾನವರನ್ನು ಗಾಳದಿಂದ ಸೆಳೆದುಕೊಳ್ಳುತ್ತಾರೆ; ಬಲೆಯಿಂದ ಬಾಚಿಕೊಳ್ಳುತ್ತಾರೆ; ತಮ್ಮ ಜಾಲದಲ್ಲಿ ರಾಶಿ ಹಾಕಿಕೊಳ್ಳುತ್ತಾರೆ; ಹಿರಿಹಿರಿ ಹಿಗ್ಗುತ್ತಾರೆ. ತಮ್ಮ ಬಲೆಗೆ ಬಲಿಕೊಡುತ್ತಾರೆ; ಧೂಪ ಹಾಕುತ್ತಾರೆ. ಅವುಗಳ ಮೂಲಕವೇ ಅವರ ಜೀವನ ಗಟ್ಟಿ; ಅವರ ಭೋಜನ ಪುಷ್ಟಿ. ಹೀಗೆ ಅವರು ನಿರಂತರವಾಗಿ ತಮ್ಮ ಬಲೆಯಿಂದ ಭಾಗ್ಯವನ್ನು ಪಡೆದುಕೊಳ್ಳುತ್ತಿರಬೇಕೋ? ದಯದಾಕ್ಷಿಣ್ಯವಿಲ್ಲದೆ ರಾಷ್ಟ್ರಗಳನ್ನು ನಾಶ ಮಾಡುತ್ತಿರಬೇಕೋ? “ನಾನು ಕಾವಲುಗಾರನಾಗಿ ನಿಲ್ಲುವೆನು. ಕಾವಲುಗೋಪುರವನ್ನೇ ಹತ್ತಿ ನಿಂತುಕೊಳ್ಳುವೆನು. ಸರ್ವೇಶ್ವರ ನನಗೆ ಏನು ಹೇಳುವರೋ, ಯಾವ ಉತ್ತರ ಕೊಡುವರೋ, ಎಂದು ಎದುರುನೋಡುವೆನು.” ಆಗ ಸರ್ವೇಶ್ವರ ನನಗೆ ಕೊಟ್ಟ ಉತ್ತರ ಇದು: “ನೀನು ಕಂಡ ದರ್ಶನವನ್ನು ಬರೆ. ಓದುವವನು ಶೀಘ್ರವಾಗಿ ಓದುವಂತೆ ಹಲಗೆಗಳ ಮೇಲೆ ಅದನ್ನು ಕೆತ್ತು. ನಿಯಮಿತ ಕಾಲದಲ್ಲಿ ಆ ದರ್ಶನ ನೆರವೇರುವುದು. ಅದರ ಅಂತಿಮ ಪರಿಣಾಮ ಶೀಘ್ರದಲ್ಲಿ ಗೊತ್ತಾಗುವುದು. ತಡವಾದರೂ ಕಾದಿರು; ಮೋಸಮಾಡದು. ಅದು ಖಂಡಿತವಾಗಿ ಕೈಗೂಡುವುದು; ತಾಮಸವಾಗದು. ನೋಡು, ನೇರಮನಸ್ಕನಲ್ಲದವನು, ಉಬ್ಬಿಹೋಗಿರುವ ಆ ದುರ್ಜನನು ಉಳಿಯನು; ದೇವರೊಂದಿಗೆ ಸತ್ಸಂಬಂಧ ಹೊಂದಿರುವ ಸಜ್ಜನನು ವಿಶ್ವಾಸದಿಂದಲೇ ಬಾಳುವನು.

ಕೀರ್ತನೆ 9:7-8, 9-10, 11-12
ಶ್ಲೋಕ: ನಿನ್ನನ್ನು ಅರಸುವವರನು ಹೇ ಪ್ರಭೂ, ನೀ ಕೈ ಬಿಡುವವನಲ್ಲ


ಶುಭಸಂದೇಶ: ಮತ್ತಾಯ 17.14-20

ಜನರ ಗುಂಪು ಇದ್ದಲ್ಲಿಗೆ ಅವರೆಲ್ಲರು ಮರಳಿಬಂದರು. ಆಗ ಒಬ್ಬನು ಯೇಸುಸ್ವಾಮಿಯ ಬಳಿಗೆ ಬಂದು, "ಪ್ರಭೂ, ನನ್ನ ಮಗನ ಮೇಲೆ ಕನಿಕರವಿಡಿ, ಅವನು ಮೂರ್ಛಾರೋಗಿ, ಅವನ ಕಷ್ಟ ಹೇಳತೀರದು, ಆಗಾಗ ಬೆಂಕಿಯಲ್ಲೋ ನೀರಿನಲ್ಲೋ ಬಿದ್ದು ಬಿಡುತ್ತಾನೆ. ಅವನನ್ನು ತಮ್ಮ ಶಿಷ್ಯರ ಬಳಿಗೆ ಕರೆದುಕೊಂಡು ಬಂದೆ. ಆದರೆ ಅವನನ್ನು ಗುಣಪಡಿಸಲು ಅವರಿಂದಾಗಲಿಲ್ಲ," ಎಂದು ಮೊಣಕಾಲೂರಿ ಯಾಚಿಸಿದನು. ಅದಕ್ಕೆ ಯೇಸು, "ಅಯ್ಯೋ ವಿಶ್ವಾಸವಿಲ್ಲದ ವಕ್ರ ಪೀಳಿಗೆಯೇ, ಇನ್ನೆಷ್ಟುಕಾಲ ನಾನು ನಿಮ್ಮೊಂದಿಗಿರಲಿ? ಇನ್ನೆಷ್ಟು ಕಾಲ ನಿಮ್ಮನ್ನು ಸಹಿಸಿಕೊಳ್ಳಲಿ?" ಎಂದು ಹೇಳಿ, "ಆ ಹುಡುಗನನ್ನು ಇಲ್ಲಿ ನನ್ನ ಬಳಿಗೆ ಕರೆದುಕೊಂಡು ಬನ್ನಿ," ಎಂದರು. ಅನಂತರ ಆ ಹುಡುಗನಲ್ಲಿದ್ದ ದೆವ್ವವನ್ನು ಅವರು ಗದರಿಸಿದೊಡನೆಯೇ, ಅದು ಅವನನ್ನು ಬಿಟ್ಟು ಹೋಯಿತು. ಅವನು ತಕ್ಷಣವೇ ಸ್ವಸ್ಥನಾದನು. ತರುವಾಯ ಶಿಷ್ಯರು ಪ್ರತ್ಯೇಕವಾಗಿ ಯೇಸುವಿನ ಬಳಿಗೆ ಬಂದು, "ಆ ದೆವ್ವವನ್ನು ಬಿಡಿಸಲು ನಮ್ಮಿಂದಾಗಲಿಲ್ಲವಲ್ಲ, ಅದೇಕೆ?" ಎಂದು ಕೇಳಿದರು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ನಿಮ್ಮ ಅಲ್ಪವಿಶ್ವಾಸವೇ ಅದಕ್ಕೆ ಕಾರಣ. ನಾನು ನಿಶ್ಚಯವಾಗಿ ಹೇಳುತ್ತೇನೆ: ನಿಮಗೆ ಸಾಸಿವೆ ಕಾಳಿನಷ್ಟು ವಿಶ್ವಾಸವಾದರೂ ಇದ್ದಲ್ಲಿ, ಈ ಬೆಟ್ಟಕ್ಕೆ ಇಲ್ಲಿಂದ ಆ ಸ್ಥಳಕ್ಕೆ ಹೋಗು, ಎಂದು ಹೇಳಿದರೆ ಅದು ಹೋಗುತ್ತದೆ.

ಸಂತ ಸ್ಮರಣೆ  - ಸಂತ ಡೊಮಿನಿಕ್ - St.Dominic

 ಒಂದು ಕನಸು ಮತ್ತು ಒಂದು ದೃಶ್ಯ. ಪಾಪದಿಂದ ಉರಿಯುತ್ತಿದ್ದ ಈ ಲೋಕದ ಮೇಲೆ ದೇವರ ಮಹಾನ್ ಕೋಪ. ಆದರೆ ಮಾತೆ ಮರಿಯ ದೇವರಲ್ಲಿ ಪ್ರಾರ್ಥಿಸಿ ಭೂಮಿಯ ಮೇಲಿನ ಇಬ್ಬರು ವ್ಯಕ್ತಿಗಳ ಕಡೆಗೆ ಬೆರಳು ಮಾಡಿ ತೋರಿಸುತ್ತಾರೆ. ಮಾರನೆಯ ದಿನ ಈ ವ್ಯಕ್ತಿ ದೇವಾಲಯದಲ್ಲಿ ಚಿಂದಿಬಟ್ಟೆ ಹುಟ್ಟಿದ ಇನ್ನೊಬ್ಬ ವ್ಯಕ್ತಿಯನ್ನು ಕಾಣುತ್ತಾನೆ. ತಾನು ಕನಸಿನಲ್ಲಿ ಕಂಡಿದ್ದು ಇದೇ ವ್ಯಕ್ತಿ. ಆತನ ಬಳಿಗೆ ಹೋಗಿದ್ದೇ ಆ ವ್ಯಕ್ತಿಯನ್ನು ಅಪ್ಪಿಕೊಂಡು ಹೇಳುತ್ತಾನೆ:"ನೀನು ನನ್ನ ಸಂಗಾತಿ, ನನ್ನ ಜೊತೆ ನಡೆಯಬೇಕು. ನಾವಿಬ್ಬರೂ ಒಟ್ಟಿಗಿದ್ದರೆ ಜಗತ್ತಿನ ಯಾವ ಶಕ್ತಿಯೂ ನಮ್ಮನ್ನು ಎದುರಿಸಲಾರದು." ಹೀಗೆ ಹೇಳಿದ ವ್ಯಕ್ತಿಯೇ ಸಂತ ಡೊಮಿನಿಕ್. ಚಿಂದಿ ಬಟ್ಟೆಲ್ಲಿದ್ದವರು ಅಸಿಸ್ಸಿಯ ಸಂತ ಫ್ರಾನ್ಸಿಸ್. ಸಮಕಾಲೀನ ಸಂಗಾತಿಗಳಾದ ಈ ಇಬ್ಬರು ಸಂತರು ವಿಶ್ವದಲ್ಲೇ ಪ್ರಖ್ಯಾತವಾದ 'ಡೊಮಿನಿಕನ್ಸ್' ಮತ್ತು 'ಫ್ರಾನ್ಸಿಸ್ಕನ್ಸ್' ಎಂಬ ಪ್ರಸಿದ್ಧ ಧಾರ್ಮಿಕ ಸಭೆಗಳ ಸ್ಥಾಪಕರಾಗಿ ವಿಶ್ವವಿಖ್ಯಾತರಾದರು.

 ಸ್ಪಾನಿಷ್ ಭಾಷೆಯಲ್ಲಿ 'ಡೊಮಿಂಗೊ' ಎಂದರೆ 'ನಾನು ದೇವರಿಗೆ ಸೇರಿದವನು' ಎಂದರ್ಥ. ಈ 'ಡೊಮಿಂಗೋ ಮತ್ತಾರೂ ಅಲ್ಲ, ಶ್ರೀಮಂತ ಕುಲಿನ ಪೆಲಿಕ್ಸ್ ದೆ ಗುಸ್ ಮಾನ್ ಮತ್ತು ಜೋವಾನ್ ಆಫ್ ಆಜಾ ಇವರ ಪುತ್ರ ಡೊಮಿನಿಕ್. 1170 ರಲ್ಲಿ ಸ್ಪೇನ್ ದೇಶದ ಕಾಸ್ಟಿಲ್ಲೆ ಎಂಬಲ್ಲಿ ಹುಟ್ಟಿದ ಡೊಮಿನಿಕ್ ಅಗಸ್ಟಿನಿಯನ್ ನ ಫ್ರೈಯರ್ಸ ಎಂಬ ಸಭೆ ಸೇರಿ ಧರ್ಮಗುರುವಾಗುತ್ತಾರೆ.

 ಇಷ್ಟಾದರೂ ಅವರಿಗೆ ನಿಜವಾದ ಆಧ್ಯಾತ್ಮ ಸೆಳೆತ ಬಂದದ್ದು 1203ರಲ್ಲಿ. ಒಮ್ಮೆ ತನ್ನ ಧರ್ಮಾಧ್ಯಕ್ಷ ಡಿಯೇಗೋ ಇವರ ಜೊತೆ ಡೆನ್ ಮಾರ್ಕ್ ಗೆ ಪ್ರಯಾಣ ಮಾಡುತ್ತಿದ್ದಾಗ 'ಆಲ್ಬಿಜೆನ್ಸಸ್' ಎಂಬ ಒಂದು ಪಾಷಂಡಿ ಸಂಪ್ರದಾಯ ವಿರೋಧಿ ಪಂಥದ ಪರಿಚಯವಾಗುತ್ತದೆ. ಈ ಆಲ್ಬಿಜೆನ್ಸ್ ಎರಡು ತತ್ವಗಳನ್ನು ನಂಬಿದ್ದರು. ಅದು ಒಳಿತು ಮತ್ತು ಕೆಡುಕು. ಆತ್ಮ ಒಳಿತು ಮತ್ತು ದೇಹ ಕೆಡುಕಾದ್ದರಿಂದ ದೇಹಕ್ಕೆ ಸಂಬಂಧಪಟ್ಟ ಎಲ್ಲವನ್ನೂ ಅವರು ತಿರಸ್ಕರಿಸುತ್ತಿದ್ದರು, ಇಲ್ಲವೇ ನಿರ್ಲಕ್ಷಿಸುತ್ತಿದ್ದಾರು. ದೇಹ ಕೆಡುಕು ಎನಿಸಿಬಿಟ್ಟಿದ್ದರಿಂದ ಅವರು ಸಂತಾನವೃದ್ಧಿಗೆ ಮುಂದಾಗುತ್ತಿರಲಿಲ್ಲ. ಜೊತೆಗೆ ಆದಷ್ಟು ಕಡಿಮೆ ಅನ್ನ ಪಾನೀಯಗಳನ್ನು ಸ್ವೀಕರಿಸುತ್ತಿದ್ದರು. ಈ ತತ್ವದ ಆಧಾರದ ಮೇಲೆ ದೇಹ ಮತ್ತು ಆತ್ಮದ ನಡುವೆ ನಿರಂತರ ಸಂಘರ್ಷವಿರುತ್ತಿತ್ತು. ಈ ಕಾರಣದಿಂದ ಅವರು ದೇವರು ಮನುಷ್ಯರಾದದ್ದುನ್ನು ಮತ್ತು ಧರ್ಮಸಭೆಯ ಸಂಸ್ಕಾರಗಳನ್ನು ನಂಬುತ್ತಿರಲಿಲ್ಲ. ಇದೆಲ್ಲದರ ಪರಿಣಾಮವಾಗಿ, ಈ ಆಲ್ಬಿಜೆನ್ಸ್ ಪಂಥದವರು ಕಠಿಣ ವೃತ ಮತ್ತು ತಪಸ್ಸಿನ ಜೀವನ ಶೈಲಿ ಅಳವಡಿಸಿಕೊಂಡಿದ್ದರಿಂದ ಬಹಳಷ್ಟು ಸಾಮಾನ್ಯ ಜನ ಇವೆರೆಡೆಗೆ ಆಕರ್ಷಿತರಾಗಿದ್ದರು. ಈ ಪಂಥ ಪ್ರಸಿದ್ಧ ವಾಗುತ್ತಾ ಬಂತು.

 ಈ ಪಂಥದ ತತ್ವ ಮತ್ತು ಸಿದ್ಧಾಂತಗಳ ವಿರುದ್ಧ ಜನರಿಗೆ ತಿಳುವಳಿಕೆ ನೀಡಿ ಹೊರಹೋದವರನ್ನು ಮತ್ತೆ ಧರ್ಮಕ್ಕೆ ಸೆಳೆಯಲು ಜಗದ್ಗುರು ಮೂರನೇ ಇನ್ನೊಸೆಂಟ್ ಒಂದು ವಿಶೇಷ ಬೋಧಕ ಮಾರ್ಗವನ್ನು ಸ್ಥಾಪಿಸುತ್ತಾರೆ. ಜಗದ್ಗುರುಗಳ ಈ ಆದೇಶವನ್ನು ಗಂಭೀರವಾಗಿ ತೆಗೆದುಕೊಂಡ ಡೊಮಿನಿಕ್ ಮತ್ತು ಅವರ ಧರ್ಮಾಧ್ಯಕ್ಷರು ಈ ಪಾಷಂಡಿ ಪಂಥವನ್ನು ಎದುರಿಸಲು ಅವರದೇ ತತ್ವ ಅನುಸರಿಸಿ ಕಠಿಣ ತಪಸ್ಸಿನ ಜೀವನ ನಡೆಸುವುದರಿಂದ ಮಾತ್ರ ಸಾಧ್ಯ ಎಂಬ ನಿಲುವಿಗೆ ಬರುತ್ತಾರೆ. ಕಾರಣ ಈ ಪಂಥದ ಗುರುಗಳು ಕಠಿಣ ಜೀವನ ನಡೆಸುತ್ತಿದ್ದರೆ ಕಥೋಲಿಕ ಗುರುಗಳನ್ನು ಐಷಾರಾಮ ಜೀವನವಾಗಿತ್ತು. ಬೋಧನೆ ಮತ್ತು ಪಾಲನಾ ಕಾರ್ಯಕ್ಕೆ ಕುದುರೆಗಳ ಮೇಲೆ ಸಾಗುತ್ತಿದ್ದುದಲ್ಲದೆ, ಸಾಕಷ್ಟು ಸೇವಕರು ಮತ್ತು ನೌಕರವರ್ಗ ಹೊಂದಿದ್ದು, ಅತಿಥಿ ಗೃಹಗಳಲ್ಲೇ ಅವರು ಬಿಡಾರ ಹೂಡುತ್ತಿದ್ದರು.

 ಹೀಗೆ ಕಥೋಲಿಕ ಗುರುಗಳಿಗೆ ಹೊಸ ಜೀವನ ಶೈಲಿ ಅಳವಡಿಸಿ ಹಿನ್ನಲೆಯಲ್ಲಿ ಸ್ವತಃ ತಾವೇ ಬೋಧನೆ ಮಾಡಲು ಪ್ರಾರಂಭಿಸುತ್ತಾರೆ ಡೊಮಿನಿಕ್. ತಮ್ಮ ಹೊಸತನದ ಬೋಧನೆ ಪರಿಣಾಮಕಾರಿಯಾಗಿ ಅನೇಕರು ಮತ್ತೆ ಕಥೋಲಿಕ ಧರ್ಮಕ್ಕೆ ಬರುತ್ತಾರೆ. ಹೀಗೆ ಆ ಪಂಥದಿಂದ ಹೊರಬಂದ ಮಹಿಳೆಯರಿಗಾಗಿ ಡೊಮಿನಿಕ್ ಒಂದು ಕನ್ಯಾ ಸ್ತ್ರೀ ಮಠವನ್ನು ಸ್ಥಾಪಿಸುತ್ತಾರೆ. 1215 ರಲ್ಲಿ ಟೂಲೌಸ್ ಎಂಬ ಊರಿನಲ್ಲಿ ಧರ್ಮಕ್ಷೇತ್ರಗಳ ಬೋಧಕರು(Diocesan Preachers) ಎಂಬ ಬೋಧಕ ಗುರುಗಳ ಸಭೆಯನ್ನು ಪ್ರಾರಂಭಿಸುತ್ತಾರೆ. ಈ ಗುರುಗಳಿಗೆ ತಪಸ್ಸು, ದೈವ ಶಾಸ್ತ್ರದಲ್ಲಿ ನೈಪುಣ್ಯತೆ ಮತ್ತು ನೈತಿಕ ಜೀವನ ಮಾದರಿಯ ನ್ನಾಗಿಡುತ್ತಾರೆ. ಮುಂದೆ ಈ ಸಭೆ 'ಡೊಮಿನಿಕನ್ ಧಾರ್ಮಿಕ ಸಭೆ' ಎಂದು ಹೊಸದಾಗಿ ನಾಮಕರಣ ಗೊಳ್ಳುತ್ತದೆ.

 1221, ಆಗಸ್ಟ್ 6ರಂದು ಸಂತ ಡೊಮಿನಿಕ್ ತಮ್ಮ ಅಂತಿಮ ಯಾತ್ರೆ ಕೈಗೊಳ್ಳುವ ಸಂದರ್ಭದಲ್ಲಿ ಡೊಮಿನಿಕನ್ ಸಭೆ ಬಹಳಷ್ಟು ಪ್ರಸಿದ್ಧಿ ಪಡೆದು ಇಟಲಿ, ಫ್ರಾನ್ಸ್, ಇಂಗ್ಲೆಂಡ್, ಪೋಲೆಂಡ್, ಸ್ಪೇನ್ ಮುಂತಾದ ರಾಷ್ಟ್ರಗಳಲ್ಲಿ ಪ್ರಬಲವಾಗಿ ಹಬ್ಬಿತ್ತು. ಸಂತ ಡೊಮಿನಿಕ್ ರ ಆಕರ್ಷಕ ವ್ಯಕ್ತಿತ್ವ, ಸತ್ಯದ ಪ್ರೇಮ, ಕರ್ತವ್ಯಪ್ರಜ್ಞೆ, ಜಪಸರದ ಬಗೆಗಿನ ವಿಶೇಷ ಭಕ್ತಿ, ಪಾಪಿಯೆನಿಸಿಕೊಂಡವನ ಮೇಲೆ ಆದರದ ಪ್ರೀತಿ, ಅವರ ಪರಿಶುದ್ಧತೆಗೆ ಮತ್ತು ಬೋಧನೆಗೆ ಸೂಕ್ಷ್ಮ ವೇದಿಕೆಯನ್ನು ಒದಗಿಸಿತ್ತು.

 1234,ಜುಲೈ 3ರಂದು ಸಂತ ಡೊಮಿನಿಕ್ ರ ಕಾರ್ಯವನ್ನು ಹತ್ತಿರದಿಂದ ಕಂಡಿದ್ದ ಜಗದ್ಗುರು 9ನೇ ಗ್ರೆಗೊರಿ ಇವರನ್ನು ಸಂತ ಪದವಿಗೆ ಏರಿದರು. ಈ ಸಮಯದಲ್ಲಿ ಉದ್ಘೋಷ ಮಾಡಿದ ಜಗದ್ಗುರು "ಸಂತ ಪೇತ್ರ ಮತ್ತು ಪೌಲರಿಗಿಂತ ಕಡಿಮೆ ಪರಿಶುದ್ಧತೆಯನ್ನು ಇವರಲ್ಲಿ ನಾನು ಕಂಡಿಲ್ಲ" ಎಂದರು.

ಡೊಮಿನಿಕ್ ಕರಿಗೋ ಫ್ರಾನ್ಸಿಸ್ಕರಿಗೂ ಇಂದಿಗೂ ವಿಶೇಷ ನಂಟಿದೆ. ಇಬ್ಬರೂ ಸಂತರ ಹಬ್ಬಗಳಲ್ಲಿ ಒಟ್ಟಿಗೆ ಸೇರಿ ಪೂಜೆ ಅರ್ಪಿಸುವ ರೂಢಿ ಹಲವು ಕಡೆಯಿದೆ.

07.08.22 - "ಹೆಚ್ಚು ಪಡೆದವನಿಂದ ಹೆಚ್ಚು ನಿರೀಕ್ಷಿಸಲಾಗುವುದು"

ಮೊದಲನೇ ವಾಚನ: ಸುಜ್ಞಾನ ಗ್ರಂಥ 18:6-9

ಆ ರಾತ್ರಿಯ ಘಟನೆಗಳನ್ನು ನಮ್ಮ ಪೂರ್ವಜರಿಗೆ ಮೊದಲೇ ತಿಳಿಸಲಾಗಿತ್ತು ಎಂದೇ ಅವರು ನಂಬಿದ್ಧ ವಾಗ್ದಾನಗಳಿಂದ ಧೈರ್ಯತಂದುಕೊಂಡರು ಹೀಗೆ ಶತ್ರುಗಳ ಆಳಿವನು. ಸಜ್ಜನರ ಉದ್ಧಾರವನ್ನು ನಿಮ್ಮ ಜನರು ನಿರೀಕ್ಷಿಸಿದರು. ಯಾವ ಸಾಧನಗಳಿಂದ ಶತ್ರುಗಳಿಗೆ ನೀವು ಮುಯ್ಯಿ ತೀರಿಸಿದಿರೋ ಅವುಗಳಿಂದಲೇ ನಮ್ಮನ್ನು ತಮ್ಮ ಬಳಿಗೆ ಕರೆದು ಗೌರವಿಸಿದಿರಿ. ಸಜ್ಜನರ ಸ್ವಂತ ಕುಮಾರರು ಬಲಿಯನ್ನರ್ಪಿಸಿದರು ರಹಸ್ಯವಾಗಿ ದೇವ ನಿಯಮದ ನಿಬಂಧನೆಗಳನ್ನು ಅಂಗೀಕರಿಸಿದರು ಒಮ್ಮನಸ್ಸಾಗಿ. ಅಂತೆಯೇ ಹೆತ್ತವರು ತಾವು ದೇವಜನರೆಂದು ಒಪ್ಪಿಕೊಂಡರು. ಸುಖ - ಸಂಕಟಗಳಲ್ಲಿ ಭಾಗಿಗಳೆಂದು ಹಾಡಿದರು ಪೂರ್ವಜರ ಸ್ತುತಿ ಗೀತೆಯನ್ನು.

ಕೀರ್ತನೆ: 33:1, 12, 18-19, 20-22
ಶ್ಲೋಕ: ಸ್ವಜನರಾಗಿ ಆತನಾಯ್ದುಕೊಂಡ ಜನತೆ ಧನ್ಯ

ಎರಡನೇ ವಾಚನ: ಹಿಬ್ರಿಯರಿಗೆ 11:1-2, 8-9

ವಿಶ್ವಾಸವೆಂಬುದು ನಾವು ನಿರೀಕ್ಷಿಸುವಂಥವುಗಳು ನಮಗೆ ದೊರಕುತ್ತವೆ ಎಂಬ ದೃಡನಂಬಿಕೆ ಹಾಗು ಕಣ್ಣಿಗೆ ಕಾಣದಂಥವುಗಳು ನಿಶ್ಚಯವಾದವು ಎಂಬ ನಿಲುವು ಆಗಿದೆ. ನಮ್ಮ ಪೂರ್ವಜರು ದೈವ ಸಮ್ಮತಿಯನ್ನು ಪಡೆದದ್ದು ವಿಶ್ವಾಸದಿಃದಲೇ. ಅಬ್ರಹಾಮನು ದೇವರ ಕರೆಗೆ ಓಗೊಡುವುದಕ್ಕೂ ವಿಶ್ವಾಸವೇ ಕಾರಣವಾಗಿತ್ತು. ಆತನು ಆ ಕರೆಗನುಸಾರವಾಗಿ ತಾನು ಬಾಧ್ಯವಾಗಿ ಹೊಂದಬೇಕಾಗಿದ್ದ ನಾಡಿಗೆ ಹೊರಟನು. ತಾನು ಸೇರಬೇಕಾಗಿದ್ದ ನಾಡಿಗೆ ಹೊರಟನು. ತಾನು ಸೇರಬೇಕಾಗಿದ್ದ ಸ್ಥಳ ಯಾವುದೆಂದು ತಿಳಿಯದಿದ್ದರೂ ಸ್ವದೇಶವನ್ನು ಬಿಟ್ಟು ತೆರಳಿದನು. ದೇವರು ವಾಗ್ದಾನ ಮಾಡಿದ ನಾಡಿಗೆ ಬಂದಾಗಲೂ ಆತನು ಅದೇ ವಿಶ್ವಾಸದ ನಿಮಿತ್ತ ಒಬ್ಬ ಅನ್ಯದೇಶೀಯನಂತೆ ಬಾಳಿದನು. ಡೇರೆಗಳಲ್ಲಿದ್ದುಕೊಂಡು ಒಬ್ಬ ಪ್ರವಾಸಿಗನಂತೆ ಜೀವಿಸಿದನು. ಅದೇ ವಾಗ್ದಾನಕ್ಕೆ ಸಹಬಾಧ್ಯಸ್ಥರಾದ ಇಸಾಕನೂ, ಯಕೋಬನೂ ಅವನಂತೆಯೇ ಡೇರೆಗಳಲ್ಲಿ ವಾಸಿಸಿದರು. ಏಕೆಂದರೆ, ಶಾಶ್ವತವಾದ ಅಸ್ತಿವಾರವುಳ್ಳ ಅಂದರೆ, ದೇವರೇ ನಿಯೋಜಿಸಿ ನಿರ್ಮಿಸಿದ ನಗರವನ್ನು ಆತನು ಎದುರು ನೋಡುತ್ತಿದ್ದನು. ಇದಲ್ಲದೆ, ಪ್ರಾಯ ಮೀರಿದ ಸಾರಾಳು ಕೂಡ ವಿಶ್ವಾಸದ ಮೂಲಕವಾಗಿಯೇ ಗರ್ಭವತಿಯಾಗುವ ಶಕ್ತಿಯನ್ನು ಪಡೆದಳು; ವಾಗ್ದಾನಮಾಡಿದ ದೇವರು ನಂಬಿಗಸ್ಥರು ಎಂಬ ಭರವಸೆ ಆಕೆಗಿತ್ತು. ಹೀಗೆ ಮೃತಪ್ರಾಯನಾಗಿದ್ದ ಒಬ್ಬ ವೆಕ್ತಿ ಆಕಾಶದ ನಕ್ಷತ್ರಗಳಂತೆಯೂ ಕಡಲ ತೀರದ ಮರಳಿನಂತೆಯೂ ಅಸಂಖ್ಯಾತವಾದ ಸಂತತಿಗೆ ತಂದೆಯಾದನು. ಇವರೆಲ್ಲರೂ ವಿಶ್ವಾಸವುಳ್ಳವರಾಗಿಯೇ ಮೃತರಾದರು. ದೇವರು ವಾಗ್ದಾನ ಮಾಡಿದವುಗಳನ್ನು ಪಡೆಯದಿದ್ದರೂ ಅವುಗಳನ್ನು ದೂರದಿಂದಲೇ ನೋಡಿ ಸ್ವಾಗತಿಸಿ ಸಂತೋಷಪಟ್ಟರು; ತಾವು ಜಗತ್ತಿನಲ್ಲಿ ಕೇವಲಪರದೇಶಿಗಳೂ ಪ್ರವಾಸಿಗರೂ ಎಂಬದನ್ನು ಒಪ್ಪಿಕೊಂಡರು. ಹೀಗೆ ಒಪ್ಪಿಕೊಳ್ಳುವವರೇ ಸ್ವದೇಶವನ್ನು ಅರಸುವವರು ಎಂಬುದನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತಾರೆ. ತಾವು ಬಿಟ್ಟು ಬಂದ ನಾಡಿನ ಮೇಲೆ ಅವರು ಮನಸ್ಸಿಡಲಿಲ್ಲ, ಹಾಗಿದ್ದಿದ್ದರೆ, ಮರಳಿ ಅಲ್ಲಿಗೆ ಹೋಗುವುದಕ್ಕೆ ಅವರಿಗೆ ಅವಕಾಶ ಯಾವಾಗಲೂ ಇರುತ್ತಿತ್ತು. ಆದರೆ, ಅವರು ಬಯಸಿದ್ದು ಶ್ರೇಷ್ಟವಾದ ನಾಡನ್ನು, ಅಂದರೆ ಸ್ವರ್ಗವನ್ನು. ಆದ್ದರಿಃದಲೇ ದೇವರು, "ಅವರ ದೇವರು" ಎಂದು ಕರೆಸಿಕೊಳ್ಳಲು ಅವಮಾನಪಡಲಿಲ್ಲ. ಅದಕ್ಕೆ ಬದಲು, ಅವರಿಗಾಗಿ ಒಂದು ನಗರವನ್ನು ಸಜ್ಜುಗೊಳಿಸಿದ್ದಾರೆ. ವಿಶ್ವಾಸವಿದ್ಧುದರಿಂದಲೇ ಅಬ್ರಹಾಮನು ತಾನು ಪರಿಶೋಧಿತನಾದಾಗ ಇಸಾಕನನ್ನು ಬಲಿಯಾಗಿ ಅರ್ಪಿಸಲು ಮುಂದೆ ಬಂದನು. "ಇಸಾಕನಿಂದ ಹುಟ್ಟುವವರು. ನಿನ್ನ ಸಂತತಿ ಎನಿಸಿಕೊಳ್ಳುವರು," ಎಂಬ ವಾಗ್ದಾನವನ್ನು ಪಡೆದಿದ್ದರೂ ಅಬ್ರಹಾಮನು ತನ್ನ ಆ ಏಕಮಾತ್ರ ಪುತ್ರನನ್ನು ಬಲಿಕೊಡಲು ಹಿಂಜರಿಯಲಿಲ್ಲ. ಏಕೆಂದರೆ, ಸತ್ತವರನ್ನು ದೇವರು ಜೀವಕ್ಕೆ ಎಬ್ಬಿಸಬಲ್ಲರು ಎಂಬುದನ್ನು ಅಬ್ರಹಾಮನು ತಿಳಿದಿದ್ದನು. ಅಂತೆಯೇ, ತನ್ನ ಮಗನನ್ನು ಸಾವಿನಿಂದ ಮರಳಿ ಪಡೆದನು. ಮುಂಬರಲಿರುವ ಘಟನೆಗೆ ಇದೊಂದು ಮುನ್ಸೂಚನೆಯಾಗಿತ್ತು.

ಶುಭಸಂದೇಶ: ಲೂಕ 12:32-48



ಯೇಸು ತಮ್ಮ ಶಿಷ್ಯರಿಗೆ ಹೇಳಿದ್ದೇನೆಂದರೆ, "ಪುಟ್ಟ ಮಂದೆಯೇ, ಭಯಪಡಬೇಡ. ನಿನ್ನ ತಂದೆ ತಮ್ಮ ಸಾಮ್ರಾಜ್ಯವನ್ನು ನಿನಗೆ ನೀಡಲು ಇಷ್ಟಪಟ್ಟಿದ್ದಾರೆ. ನಿಮ್ಮ ಆಸ್ತಿಪಾಸ್ತಿಗಳನ್ನು ಮಾರಿ, ದಾನಧರ್ಮ ಮಾಡಿರಿ. ನಶಿಸದ ಹಣಚೀಲಗಳನ್ನು ಗಳಿಸಿಕೊಳ್ಳಿರಿ; ಲಯವಾಗದ ಸಂಪತ್ತನ್ನು ಸ್ವರ್ಗದಲ್ಲಿ ಶೇಕರಿಸಿಟ್ಟುಕೊಳ್ಳಿರಿ. ಅಲ್ಲಿ ಅದು ಕಳ್ಳನಿಗೆ ದಕ್ಕುವಂತಿಲ್ಲ: ನುಸಿಹಿಡಿದು ನಾಶವಾಗುವಂತಿಲ್ಲ. ನಿಮ್ಮ ನಿಧಿ ಎಲ್ಲಿದೆಯೋ ಅಲ್ಲೇ ಇರುವುದು. ನಿಮ್ಮ ಹೃದಯ . ನಿಮ್ಮ ನಡು ಕಟ್ಟಿರಲಿ; ನಿಮ್ಮ ದೀಪ ಉರಿಯುತ್ತಿರಲಿ. ತಟ್ಟಿದ ತಕ್ಷಣ ಯಜಮಾನನಿಗೆ ಬಾಗಿಲು ತೆರೆಯಲು ಸಿದ್ಧರಿರುವ ಸೇವರಂತೆ ಇರಿ. ತಮ್ಮ ಯಜಮಾನನು ಮದುವೆ ಔತಣ ಮುಗಿಸಿಕೊಂಡು ಯಾವಾಗ ಹಿಂದಿರುಗುತ್ತಾನೋ, ಎಂದು ಅವರು ಎದುರು ನೋಡುತ್ತಾ ಇರುತ್ತಾರೆ. ಯಜಮಾನನು ಬಂದು ಯಾವ ಯಾವ ಸೇವಕ ಎಚ್ಚರವಾಗಿದ್ದಾನೆಂದು ಕಂಡುಕೊಳ್ಳುತ್ತಾನೋ, ಅಂಥವರು ಭಾಗ್ಯವಂತರು. ಏಕೆಂದರೆ, ಯಜಮಾನನೇ ನಡು ಕಟ್ಟಿ ನಿಂತು, ಅವರನ್ನು ಊಟಕ್ಕೆ ಕೂರಿಸಿ, ಒಬ್ಬೊಬ್ಬನಿಗೂ ತಾನೇ ಉಪಚಾರ ಮಾಡುವನೆಂದು ನಿಶ್ಚಯವಾಗಿ ಹೇಳುತ್ತೇನೆ. ಯಜಮಾನನು ಬರುವಾಗ ನಡು ರಾತ್ರಿಯಾಗಿರಲಿ, ಮುಂಜಾವವಾಗಿರಲಿ, ಎಚ್ಚರದಿಂದ ಇರುವ ಸೇವಕರನ್ನು ಆತನು ಕಂಡರೆ ಅವರು ಭಾಗ್ಯವಂತರು. ಕಳ್ಳನು ಬರುವ ಗಳಿಗೆಯು ಮನೆಯ ಯಜಮಾನನಿಗೆ ತಿಳಿದರೆ, ಅವನು ತನ್ನ ಮನೆಗೆ ಕನ್ನಹಾಕಲು ಬಿಡುವನೇ? ಇಲ್ಲ. ಇದನ್ನು ಚೆನ್ನಾಗಿ ತಿಳಿದುಕೊಂಡು ನೀವು ಸಹ ಸಿದ್ಧರಾಗಿರಿ. ಏಕೆಂದರೆ, ನರಪುತ್ರನು ನೀವು ನಿರೀಕ್ಷಿಸದ ಗಳಿಗೆಯಲ್ಲಿ ಬರುವನು," ಎಂದರು ಆಗ ಪೇತ್ರನು, "ಪ್ರಭೂ, ನೀವು ಹೇಳಿದ ಈ ಸಾಮತಿ ನಮಗೆ ಮಾತ್ರ ಅನ್ವಯಿಸುತ್ತದೋ ಅಥವಾ ಎಲ್ಲರಿಗೋ?" ಎಂದು ಕೇಳಿದನು. ಅದಕ್ಕೆ ಪ್ರಭು ಹೀಗೆಂದರು: "ಪ್ರಾಮಾಣಿಕನೂ ವಿವೇಕಿಯೂ ಆದ ಮೇಸ್ತ್ರಿ ಯಾರು? ಕಾಲ ಕಾಲಕ್ಕೆ ಸರಿಯಾಗಿ ಕೂಲಿಯಾಳುಗಳಿಗೆ ದವಸ ಧಾನ್ಯಗಳನ್ನು ಅಳೆದುಕೊಟ್ಟು, ಮನೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಯಜಮಾನನು ನೇಮಿಸಿದ್ದ ಮೇಸ್ತ್ರಿಯೇ. ಯಜಮಾನನು ಮನೆಗೆ ಹಿಂದಿರುಗಿ ಬಂದಾಗ ಆ ಸೇವಕನು ತನ್ನ ಕರ್ತವ್ಯವನ್ನು ನಿಷ್ಠೆಯಿಂದ ನೆರವೇರಿಸುತ್ತಿದ್ದರೆ ಅವನು ಧನ್ಯನು. ಅಂಥವನನ್ನು ಯಜಮಾನನು ತನ್ನ ಎಲ್ಲ ಆಸ್ತಿಪಾಸ್ತಿಗೆ ಆಡಳಿತಗಾರನನ್ನಾಗಿ ನೇಮಿಸುವನೆಂದು ನಿಮಗೆ ನಿಜವಾಗಿ ಹೇಳುತ್ತೇನೆ. ಆದರೆ ಆ ಸೇವಕನು ತನ್ನಲ್ಲೇ, "ನನ್ನ ಯಜಮಾನ ಬಹಳ ತಡಮಾಡಿ ಬರುತ್ತಾನೆ", ಎಂದುಕೊಂಡು ಗಂಡಾಳು ಹೆಣ್ಣಾಳು ಎನ್ನದೆ ಹೊಡೆಯುವುದಕ್ಕೂ ಅಮಲೇರುವಷ್ಟು ತಿಂದು ಕುಡಿಯುವುದಕ್ಕೂ ತೊಡಗಿದರೆ ಅವನು ನಿರೀಕ್ಷಿಸದ ದಿನದಲ್ಲಿ, ತಿಳಿಯದ ಗಳಿಗೆಯಲ್ಲಿ ಯಜಮಾನನು ಬಂದು ಅವನನ್ನು ಚಿತ್ರ ಹಿಂಸೆಗೂ ವಿಶ್ವಾಸಹೀನರ ದುರ್ಗತಿಗೂ ಗುರಿ ಮಾಡುವನು. ಸೇವಕನು ಯಜಮಾನನ ಇಷ್ಟಾರ್ಥವನ್ನು ಅರಿತುಕೊಂಡಿದ್ದರೂ ಅಜಾಗರೂಕನಾಗಿ ಇದ್ದರೆ ಕಠಿಣ ಶಿಕ್ಷೆಗೆ ಗುರಿಯಾಗುತ್ತಾನೆ. ಹೆಚ್ಚು ಪಡೆದವನಿಂದ ಹೆಚ್ಚು ನಿರೀಕ್ಷಿಸಲಾಗುವುದು. ಇನ್ನೂ ಹೆಚ್ಚು ವಹಿಸಿಕೊಂಡವನಿಂದ ಇನ್ನೂ ಹೆಚ್ಚಾಗಿ ಕೇಳಲಾಗುವುದು.

05.08.22 - ಪ್ರಪಂಚವನ್ನೆಲ್ಲಾ ಗೆದ್ದುಕೊಂಡರೂ ಒಬ್ಬನು ತನ್ನ ಪ್ರಾಣವನ್ನೇ ಕಳೆದುಕೊಂಡರೆ ಅದರಿಂದ ಅವನಿಗೆ ದೊರಕುವ ಲಾಭವೇನು?

ಮೊದಲನೇ ವಾಚನ: ಪ್ರವಾದಿ ಯೆರೆಮೀಯನ ಗ್ರಂಥ 1:15, 2:-2; 3:1-3, 6-7


ಇಗೋ, ಉತ್ತರದ ರಾಜ್ಯಗಳನ್ನೆಲ್ಲಾ ನಾನು ಕರೆಯುವೆನು; ಅವರು ಬಂದು ಜೆರುಸಲೇಮಿನ ಊರಬಾಗಿಲುಗಳ ಎದುರಿನಲ್ಲೂ ಅದರ ಎಲ್ಲ ಪೌಳಿಗೋಡೆಗಳ ಸುತ್ತಲೂ ಜುದೇಯದ ಎಲ್ಲ ನಗರಗಳಲ್ಲೂ ತಮ್ಮ ತಮ್ಮ ಸಿಂಹಾಸನಗಳನ್ನು ಹಾಕಿಕೊಳ್ಳುವರು. “ನೀನು ಹೋಗಿ ಜೆರುಸಲೇಮ್ ನಗರಕ್ಕೇ ಕೇಳಿಸುವಂತೆ ಈ ಸಂದೇಶವನ್ನು ಸಾರು: ನೀನು ಯೌವನದಲ್ಲಿ ನನ್ನ ಮೇಲಿಟ್ಟಿದ್ದ ಪ್ರೀತಿಯನ್ನು, ನವ ವಧುವಾಗಿ ನನಗೆ ತೋರಿಸಿದ ಪ್ರೇಮವನ್ನು, ಹಾಗು ಬಿತ್ತನೆಯಿಲ್ಲದ ಅರಣ್ಯಮಾರ್ಗವಾಗಿ ನನ್ನನ್ನು ಹಿಂಬಾಲಿಸಿದಾಗ ಅನುಸರಿಸುತ್ತಿದ್ದ ನಿನ್ನ ಪಾತಿವ್ರತ್ಯವನ್ನು ನನ್ನ ನೆನಪಿನಲ್ಲಿ ಇಟ್ಟುಕೊಂಡಿದ್ದೇನೆ; ಇದು ನಿನ್ನ ಹಿತಕ್ಕಾಗಿಯೇ. ಇಸ್ರಯೇಲಿನ ವಿಶ್ವಾಸಘಾತ ಸರ್ವೇಶ್ವರಸ್ವಾಮಿ ಹೀಗೆನ್ನುತ್ತಾರೆ: “ಗಂಡನು ತ್ಯಜಿಸಿದವಳು, ಅವನಿಂದ ಹೊರಟು ಮತ್ತೊಬ್ಬನವಳಾದ ಮೇಲೆ, ಅವಳನ್ನು ಆ ಗಂಡನು ಮತ್ತೆ ಸೇರಿಸಿಕೊಳ್ಳುತ್ತಾನೆಯೆ? ಸೇರಿಸಿಕೊಂಡರೆ ಆ ನಾಡು ಕೆಟ್ಟು ಅಪವಿತ್ರವಾಗಿ ಹೋಗುವುದಿಲ್ಲವೇ? ಹೀಗಿರಲು ಓ ಇಸ್ರಯೇಲ್, ಬಹು ಮಂದಿ ಮಿಂಡರೊಡನೆ ವೇಶ್ಯವಾಟಿಕೆ ನಡೆಸಿದ ನೀನು ನನ್ನ ಬಳಿಗೆ ಬರುವೆಯಾ? ಕಣ್ಣೆತ್ತಿ ಬೋಳು ಬೆಟ್ಟಗಳನ್ನು ನೋಡು, ಯಾವುದರಲ್ಲಿ ತಾನೆ ನೀನು ವೇಶ್ಯೆಯಾಗಿ ವರ್ತಿಸಲಿಲ್ಲ? ಅರಬೀಯನು ಅಡವಿಯಲ್ಲಿ ಹೊಂಚು ಹಾಕುವ ಹಾಗೆ ನೀನು ದಾರಿಯ ಮಗ್ಗುಲಲ್ಲಿ ಅವರಿಗಾಗಿ ಹೊಂಚುಹಾಕುತ್ತಾ ಕುಳಿತಿದ್ದೆ. ನಿನ್ನ ವೇಶ್ಯೆತನದಿಂದಲೂ ನಿನ್ನ ಕೆಟ್ಟತನದಿಂದಲೂ ನಾಡನ್ನು ಅಪವಿತ್ರ ಮಾಡಿರುವೆ. ಆದಕಾರಣವೇ ಹದಮಳೆಗೆ ಅಡ್ಡಿಯಾಯಿತು. ವಸಂತಕಾಲದ ಮಳೆ ಬರದೆಹೋಯಿತು. ಇನ್ನೂ ನೀನು ವೇಶ್ಯೆ ಮುಖದವಳು, ಲಜ್ಜೆಗೆಟ್ಟವಳು! ಅರಸ ಯೋಷೀಯನ ಕಾಲದಲ್ಲಿ ಸರ್ವೇಶ್ವರ ಸ್ವಾಮಿ ನನಗೆ ಹೀಗೆಂದು ಹೇಳಿದರು - “ಭ್ರಷ್ಟಳಾದ ಇಸ್ರಯೇಲ್ ಮಾಡಿದ್ದನ್ನು ನೋಡಿದೆಯಾ? ಅವಳು ನನ್ನನ್ನು ತೊರೆದುಬಿಟ್ಟು ಎತ್ತರವಾದ ಗುಡ್ಡಗಳನ್ನೆಲ್ಲ ಹತ್ತಿ, ಹುಲುಸಾಗಿ ಬೆಳೆದ ಎಲ್ಲ ಮರಗಳ ಕೆಳಗೆ ಹೋಗಿ ವೇಶ್ಯೆಯಂತೆ ವರ್ತಿಸುತ್ತಿದ್ದಾಳೆ. ಅವಳು ಇಂಥವುಗಳನ್ನೆಲ್ಲ ಮಾಡಿದ ಮೇಲೆ ನನ್ನ ಬಳಿಗೆ ಮರಳಿ ಬಂದೇ ಬರುವಳು ಎಂದುಕೊಂಡಿದ್ದೆ. ಆದರೆ ಬರಲಿಲ್ಲ. ಆಗ ಜುದೇಯವೆಂಬ ದ್ರೋಹಿಯಾದ ಅವಳ ತಂಗಿ ಇದನ್ನು ನೋಡಿದಳು.


ಕೀರ್ತನೆ: 32:35, 36, 39, 41
ಶ್ಲೋಕ: ಕುರಿಮಂದೆಯನ್ನು ಕಾಯುವ ಕುರುಬನಂತೆ ಪ್ರಭು ನಮ್ಮನ್ನು ಕಾಪಾಡುವರು 

ಶುಭಸಂದೇಶ: ಮತ್ತಾಯ 16:24-28


ಅನಂತರ ತಮ್ಮ ಶಿಷ್ಯರಿಗೆ ಹೀಗೆಂದರು: “ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಿ ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ. ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹಾತೊರೆಯುವವನು ಅದನ್ನು ಕಳೆದುಕೊಳ್ಳುವನು. ಆದರೆ ನನ್ನ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಕಂಡುಕೊಳ್ಳುವನು. ಪ್ರಪಂಚವನ್ನೆಲ್ಲಾ ಗೆದ್ದುಕೊಂಡರೂ ಒಬ್ಬನು ತನ್ನ ಪ್ರಾಣವನ್ನೇ ಕಳೆದುಕೊಂಡರೆ ಅದರಿಂದ ಅವನಿಗೆ ದೊರಕುವ ಲಾಭವೇನು? ಅಥವಾ ಮನುಷ್ಯನು ತನ್ನ ಪ್ರಾಣಕ್ಕೆ ಈಡಾಗಿ ಏನನ್ನು ತಾನೇ ಕೊಡಬಲ್ಲನು? ನರಪುತ್ರನು ತನ್ನ ಪಿತನ ಪ್ರಭಾವದೊಡನೆ ತನ್ನ ದೂತರ ಸಮೇತ ಬರಲಿದ್ದಾನೆ. ಆಗ ಪ್ರತಿಯೊಬ್ಬ ಮಾನವನಿಗೆ ಅವನವನ ಕೃತ್ಯಕ್ಕೆ ತಕ್ಕ ಪ್ರತಿಫಲ ಕೊಡುವನು. ಇಲ್ಲಿರುವವರಲ್ಲಿ ಕೆಲವರು ನರಪುತ್ರನು ತನ್ನ ಸಾಮ್ರಾಜ್ಯದಲ್ಲಿ ಪ್ರತ್ಯಕ್ಷನಾಗುವುದನ್ನು ಕಾಣುವುದಕ್ಕೆ ಮುನ್ನ ಸಾವನ್ನು ಸವಿಯುವುದಿಲ್ಲ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ," ಎಂದರು.

06.08.22 - "ಅವರ ಮುಖ ಸೂರ್ಯನಂತೆ ಪ್ರಕಾಶಿಸಿತು"

ಮೊದಲನೇ ವಾಚನ: ದಾನಿಯೇಲ 7:9-10, 13-14

ನಾನು ನೋಡುತ್ತಿದ್ದ ಹಾಗೆ: ಸಿಂಹಾಸನಗಳನ್ನು ಹಾಕಲಾಯಿತು. ಮಹಾವೃದ್ಧನೊಬ್ಬನು ಆಸೀನನಾದನು. ಆತನ ಉಡುಪು ಬೆಳ್ಳಗಿತ್ತು ಹಿಮದಂತೆ. ಆತನ ತಲೆಗೂದಲಿತ್ತು ನಿರ್ಮಲವಾದ ಬಿಳಿಯ ಉಣ್ಣೆಯಂತೆ. ಆತನ ಸಿಂಹಾಸನ ಅಗ್ನಿಜ್ವಾಲೆಗಳು. ಧಗಧಗಿಸುವ ಬೆಂಕಿ ಅದರ ಚಕ್ರಗಳು.  ಆ ಸಿಂಹಾಸನದ ಸಮ್ಮುಖದಿಂದ ಪ್ರಜ್ವಲ ಪ್ರವಾಹವೊಂದು ಉಕ್ಕಿ ಹರಿದುಬಂದಿತು. ಲಕ್ಷೋಪಲಕ್ಷ ದೂತರು ಆತನಿಗೆ ಸೇವೆಸಲ್ಲಿಸುತ್ತಿದ್ದರು. ಕೋಟ್ಯಾನುಕೋಟಿ ಕಿಂಕರರು ಆತನ ಮುಂದೆ ನಿಂತಿದ್ದರು. ನ್ಯಾಯಸಭೆಯವರು ತೀರ್ಪುನೀಡಲು ಕುಳಿತುಕೊಂಡರು. ಪಟ್ಟಿಪುಸ್ತಕಗಳನ್ನು ತೆರೆಯಲಾಯಿತು. ನಾನು ಕಂಡ ರಾತ್ರಿಯ ಕನಸಿನಲ್ಲಿ ನರಪುತ್ರನಂತಿರುವವನು ಆಕಾಶದ ಮೇಘಗಳೊಂದಿಗೆ ಬಂದು ಆ ಮಹಾವೃದ್ಧನನ್ನು ಸಮೀಪಿಸಿದನು. ಅವನನ್ನು ಆತನ ಸನ್ನಿಧಿಗೆ ತಂದರು. ಸಕಲ ರಾಷ್ಟ್ರ-ಕುಲ-ಭಾಷೆಗಳವರು ಅವನಿಗೆ ಸೇವೆ ಸಲ್ಲಿಸಲೆಂದು ಅವನಿಗೆ ದೊರೆತನ, ಘನತೆ, ರಾಜ್ಯತ್ವ ಇವುಗಳನ್ನು ಕೊಡಲಾಯಿತು. ಅವನ ಆಳ್ವಿಕೆಗೆ ಅಂತ್ಯವಿಲ್ಲ, ಅದು ಶಾಶ್ವತವಾದುದು, ಅವನ ರಾಜ್ಯ ಎಂದಿಗೂ ಅಳಿಯದು!

ಕೀರ್ತನೆ: 97:1-2, 5-6, 9

ಶ್ಲೋಕ: ಪ್ರಭುವೇ, ಸರ್ವಾಧಿಕಾರಿ ನೀನು ಲೋಕಕ್ಕೆಲ್ಲಾ

ಎರಡನೇ ವಾಚನ: ಪೇತ್ರ 1:16-19

ನಮ್ಮ ಪ್ರಭು ಯೇಸುಕ್ರಿಸ್ತರ ಶಕ್ತಿಸಾಮರ್ಥ್ಯವನ್ನು ಮತ್ತು ಅವರ ಪುನರಾಗಮನವನ್ನು ನಿಮಗೆ ತಿಳಿಯಪಡಿಸುವಾಗ ಚಮತ್ಕಾರದಿಂದ ಕಲ್ಪಿಸಿದ ಕಟ್ಟುಕತೆಗಳನ್ನು ಆಧರಿಸಿ ನಾವು ಮಾತನಾಡಲಿಲ್ಲ. ನಾವೇ ಅವರ ಮಹತ್ತನ್ನು ಕಣ್ಣಾರೆಕಂಡು ಅದನ್ನು ತಿಳಿಯಪಡಿಸಿದ್ದೇವೆ.  ತಂದೆಯಾದ ದೇವರಿಂದ ಅವರು ಗೌರವವನ್ನೂ ಮಹಿಮೆಯನ್ನೂ ಪಡೆದಾಗ, “ಈತನು ನನ್ನ ಪುತ್ರ, ನನಗೆ ಪ್ರಿಯನಾದವನು; ನನ್ನ ಅಪಾರ ಮೆಚ್ಚುಗೆಗೆ ಪಾತ್ರನು,” ಎಂದು ಅವರನ್ನು ಕುರಿತೇ ವಾಣಿಯೊಂದು ಮಹೋನ್ನತ ವೈಭವದಿಂದ ಕೇಳಿಬಂದಿತು.  ಆಗ ನಾವು ಆ ಪುನೀತ ಪರ್ವತದ ಮೇಲೆ ಅವರೊಡನೆ ಇದ್ದೆವು. ಸ್ವರ್ಗದಿಂದ ಆ ವಾಣಿಯನ್ನು ನಾವು ಕೇಳಿದೆವು. ಆದ್ದರಿಂದ ಪ್ರವಾದನೆಯ ಸಂದೇಶವು ನಮಗೆ ಮತ್ತಷ್ಟು ಖಚಿತವಾಗಿ ಗೊತ್ತಾಗಿದೆ. ಇದನ್ನು ನೀವು ಕತ್ತಲಲ್ಲಿ ಬೆಳಗುವ ದೀಪವೆಂದು ಪರಿಗಣಿಸಿ ಲಕ್ಷ್ಯಕೊಟ್ಟರೆ ಒಳ್ಳೆಯದು. ನಿಮ್ಮ ಹೃದಯದಲ್ಲಿ ಬೆಳಕು ಹರಿದು ಅರುಣೋದಯದ ನಕ್ಷತ್ರವು ಮೂಡುವವರೆಗೂ ಈ ದೀಪವು ಬೆಳಗುತ್ತಿರುತ್ತದೆ.

ಶುಭಸಂದೇಶ: ಮತ್ತಾಯ 17:1-9


ಪೇತ್ರ, ಯಕೋಬ ಮತ್ತು ಆತನ ಸಹೋದರ ಯೊವಾನ್ನ ಇವರನ್ನು ಯೇಸುಸ್ವಾಮಿ ಪ್ರತ್ಯೇಕವಾಗಿ ತಮ್ಮೊಡನೆ ಕರೆದುಕೊಂಡು ಎತ್ತರವಾದ ಒಂದು ಬೆಟ್ಟಕ್ಕೆ ಹೋದರು. ಅಲ್ಲಿ ಆ ಶಿಷ್ಯರ ಕಣ್ಣೆದುರಿಗೇ ಸ್ವಾಮಿ ರೂಪಾಂತರ ಹೊಂದಿದರು, ಅವರ ಮುಖ ಸೂರ್ಯನಂತೆ ಪ್ರಕಾಶಿಸಿತು. ಅವರ ಉಡುಪು ಬೆಳಕಿನಂತೆ ಪ್ರಜ್ವಲಿಸಿತು. ಇದ್ದಕ್ಕಿದ್ದ ಹಾಗೆ ಮೋಶೆ ಮತ್ತು ಎಲೀಯ ಪ್ರತ್ಯಕ್ಷರಾಗಿ ಯೇಸುವಿನೊಡನೆ ಮಾತನಾಡುತ್ತಿದ್ದುದು ಅವರಿಗೆ ಕಾಣಿಸಿತು. ಆಗ ಪೇತ್ರನು ಯೇಸುವಿಗೆ, “ಪ್ರಭೂ, ನಾವು ಇಲ್ಲೇ ಇರುವುದು ಎಷ್ಟು ಒಳ್ಳೆಯದು! ಅಪ್ಪಣೆಯಾದರೆ ಇಲ್ಲಿ ಮೂರು ಗುಡಾರಗಳನ್ನು ಕಟ್ಟುವೆನು. ತಮಗೊಂದು, ಮೋಶೆಗೊಂದು, ಎಲೀಯನಿಗೊಂದು,” ಎಂದನು. ಪೇತ್ರ ಇನ್ನೂ ಮಾತನಾಡುತ್ತಿರುವಾಗಲೇ ಪ್ರಕಾಶಮಾನವಾದ ಮೇಘವೊಂದು ಅವರನ್ನು ಆವರಿಸಿತು; ಆ ಮೇಘದಿಂದ ಒಂದು ವಾಣಿ, ‘ಈತನು ನನ್ನ ಪುತ್ರ, ನನಗೆ ಪರಮಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು. ಈತನ ಮಾತಿಗೆ ಕಿವಿಗೊಡಿ,” ಎಂದಿತು. ಶಿಷ್ಯರು ಈ ವಾಣಿಯನ್ನು ಕೇಳಿ ಭಯಭ್ರಾಂತರಾದರು; ಬೋರಲು ಬಿದ್ದರು. ಆಗ ಯೇಸು ಅವರ ಹತ್ತಿರಕ್ಕೆ ಬಂದು ಅವರನ್ನು ಮುಟ್ಟಿ, “ಏಳಿ, ಭಯಪಡಬೇಡಿ,” ಎಂದರು. ಅವರು ಕಣ್ಣೆತ್ತಿ ನೋಡಿದಾಗ ಯೇಸುವನ್ನು ಬಿಟ್ಟು ಮತ್ತೆ ಯಾರನ್ನೂ ಕಾಣಲಿಲ್ಲ. ಅವರೆಲ್ಲರು ಬೆಟ್ಟದಿಂದ ಇಳಿದುಬರುವಾಗ ಯೇಸು, “ನರಪುತ್ರನು ಸತ್ತು ಪುನರುತ್ಥಾನ ಹೊಂದುವ ತನಕ ನೀವು ಕಂಡ ಈ ದರ್ಶನವನ್ನು ಯಾರಿಗೂ ಹೇಳಬೇಡಿ,” ಎಂದು ಆಜ್ಞಾಪಿಸಿದರು. 

29.08.2026 - ಸ್ನಾನಿಕ ಯೊವಾನ್ನನ ತಲೆಯನ್ನು ಕೇಳು

  ಸಂತ ಸ್ನಾನಿಕ ಯೊವಾನ್ನನ ಶಿರಚ್ಛೇದನ ಮೊದಲನೇ ವಾಚನ: ಯೆರೆಮಿಯ: 1: 17-19 ಆದುದರಿಂದ ನೀನು ನಿನ್ನ ನಡುವನ್ನು ಕಟ್ಟಿ ನಿಂತುಕೊಂಡು ನಾನು ನಿನಗೆ ಆಜ್ಞಾಪಿಸುವುದನ್ನೆಲ್ಲ...