ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

21.05.2020 - "ನೀವು ದುಃಖಪಡುವಿರಿ. ಆದರೆ ನಿಮ್ಮ ದುಃಖ ಆನಂದವಾಗಿ ಮಾರ್ಪಡುವುದು."

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 18:1-8

ಪೌಲನು ಅಥೆನ್ಸ್ ಅನ್ನು ಬಿಟ್ಟು ಕೊರಿಂಥಕ್ಕೆ ಹೋದನು. ಪೊಂತ ಎಂಬ ಊರಿನ ಅಕ್ವಿಲ ಎಂಬ ಯೆಹೂದ್ಯನನ್ನು ಅಲ್ಲಿ ಕಂಡನು. ಚಕ್ರವರ್ತಿ ಕ್ಲಾಡಿಯಸನು ಯೆಹೂದ್ಯರೆಲ್ಲರೂ ರೋಮ್‍ನಗರವನ್ನು ಬಿಟ್ಟುಹೋಗಬೇಕೆಂದು ಆಜ್ಞಾಪಿಸಿದ್ದರಿಂದ, ಈ ಅಕ್ವಿಲನು ತನ್ನ ಪತ್ನಿ ಪ್ರಿಸ್ಸಿಲಳೊಂದಿಗೆ ಇಟಲಿಯಿಂದ ಇತ್ತೀಚೆಗೆ ಬಂದಿದ್ದನು. ಪೌಲನು ಅವರನ್ನು ನೋಡಲು ಹೋದನು. ಅವರು ತನ್ನಂತೆಯೇ ಗುಡಾರ ಮಾಡುವ ಕಸುಬಿನವರಾಗಿದ್ದರಿಂದ ಅವರಲ್ಲೇ ತಂಗಿದ್ದು ಅವರೊಡನೆ ಕೆಲಸ ಮಾಡುತ್ತಾ ಬಂದನು. ಪ್ರತಿ ಸಬ್ಬತ್‍ ದಿನ ಅವನು ಪ್ರಾರ್ಥನಾಮಂದಿರದಲ್ಲಿ ಚರ್ಚಿಸುತ್ತಾ ಯೆಹೂದ್ಯರನ್ನು ಮತ್ತು ಗ್ರೀಕರನ್ನು ವಿಶ್ವಾಸಿಗಳನ್ನಾಗಿಸಲು ಪ್ರಯತ್ನಿಸುತ್ತಿದ್ದನು. ಸೀಲ ಮತ್ತು ತಿಮೊಥೇಯ ಮಕೆದೋನಿಯದಿಂದ ಬಂದ ಮೇಲೆ ಪೌಲನು ಶುಭಸಂದೇಶವನ್ನು ಸಾರುವುದರಲ್ಲೂ ಯೇಸುವೇ ಬರಬೇಕಾದ ಲೋಕೋದ್ಧಾರಕ ಎಂದು ಯೆಹೂದ್ಯರಿಗೆ ರುಜುವಾತುಪಡಿಸುವುದರಲ್ಲೂ ತನ್ನ ಸಮಯವನ್ನು ಕಳೆದನು. ಆದರೆ ಆ ಯೆಹೂದ್ಯರು ಅವನನ್ನು ಪ್ರತಿಭಟಿಸಿ ದೂಷಿಸಿದರು. ಆಗ ಪೌಲನು ತನ್ನ ಹೊದಿಕೆಯನ್ನು ಒದರಿ, “ನಿಮ್ಮ ವಿನಾಶಕ್ಕೆ ನೀವೇ ಹೊಣೆ; ಅದಕ್ಕೆ ನಾನು ಬಾಧ್ಯನಲ್ಲ. ಇಂದಿನಿಂದ ನಾನು ಅನ್ಯಧರ್ಮೀಯರ ಕಡೆಗೆ ಹೋಗುತ್ತೇನೆ,” ಎಂದನು. ಅಂತೆಯೇ ಅವರನ್ನು ಬಿಟ್ಟು ದೇವರಲ್ಲಿ ಭಯಭಕ್ತಿಯುಳ್ಳವನಾಗಿದ್ದ ತೀತಯುಸ್ತ ಎಂಬವನ ಮನೆಗೆ ಹೋದನು. ಅವನ ಮನೆ ಪ್ರಾರ್ಥನಾ ಮಂದಿರದ ಪಕ್ಕದಲ್ಲೇ ಇತ್ತು. ಪ್ರಾರ್ಥನಾಮಂದಿರದ ಅಧ್ಯಕ್ಷ ಕ್ರಿಸ್ಪ ಎಂಬವನೂ ಅವನ ಮನೆಯವರೆಲ್ಲರೂ ಪ್ರಭುವಿನಲ್ಲಿ ವಿಶ್ವಾಸವಿಟ್ಟರು. ಕೊರಿಂಥದ ಇನ್ನೂ ಅನೇಕ ಜನರು ಪೌಲನ ಬೋಧನೆಯನ್ನು ಕೇಳಿ ವಿಶ್ವಾಸವಿಟ್ಟರು ಮತ್ತು ದೀಕ್ಷಾಸ್ನಾನ ಪಡೆದರು.

ಕೀರ್ತನೆ: 98:1, 2-3, 3-4

ಶ್ಲೋಕ: ರಾಷ್ಟ್ರಗಳಿಗೆ ತೋರಿಸಿಹನು ಪ್ರಭು ಜೀವೋದ್ಧಾರಕ ಶಕ್ತಿಯನು


ಹಾಡಿರಿ ಪ್ರಭುವಿಗೆ ಹೊಸಗೀತೆಯೊಂದನು 
ಎಸಗಿಹನಾತನು ಪವಾಡಕಾರ್ಯಗಳನು I
ಗಳಿಸಿತಾತನ ಕೈ ಪೂತಭುಜ ಗೆಲುವನು II

ಪ್ರಕಟಿಸಿಹನಾ ಪ್ರಭು ತನ್ನ ಮುಕ್ತಿವಿಧಾನವನು I
ರಾಷ್ಟ್ರಗಳಿಗೆ ತೋರಿಸಿಹನು ಜೀವೋದ್ಧಾರಕಾ ಶಕ್ತಿಯನು II
ಕಂಡುಬಂದಿತು ಜಗದ ಎಲ್ಲೆ ಎಲ್ಲೆಗೆ I
ನಮ್ಮ ದೇವ ಸಾಧಿಸಿದ ಜಯಗಳಿಕೆ II
ಸ್ಮರಿಸಿಕೊಂಡನಾ ಪ್ರಭು ತನ್ನ ಪ್ರೀತಿಯನು I
ಇಸ್ರಯೇಲ್ ಕುಲದ ಬಗ್ಗೆ ತನ್ನ ಸತ್ಯತೆಯನು II

ಕಂಡುಬಂದಿತು ಜಗದ ಎಲ್ಲೆ ಎಲ್ಲೆಗೆ I
ನಮ್ಮ ದೇವ ಸಾಧಿಸಿದ ಜಯಗಳಿಕೆ II
ಸ್ಮರಿಸಿಕೊಂಡನಾ ಪ್ರಭು ತನ್ನ ಪ್ರೀತಿಯನು I
ಇಸ್ರಯೇಲ್ ಕುಲದ ಬಗ್ಗೆ ತನ್ನ ಸತ್ಯತೆಯನು II

ಭೂನಿವಾಸಿಗಳೇ, ಮಾಡಿರಿ ಜಯಕಾರ ಪ್ರಭುವಿಗೆ I

ಶುಭಸಂದೇಶ:  ಯೊವಾನ್ನ16:16-20

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: “ತುಸುಕಾಲವಾದ ನಂತರ ನೀವು ನನ್ನನ್ನು ಕಾಣಲಾರಿರಿ. ಅನಂತರ ತುಸುಕಾಲ ಕಳೆಯುತ್ತಲೇ ನನ್ನನ್ನು ಪುನಃ ಕಾಣುವಿರಿ,” ಎಂದರು ಯೇಸುಸ್ವಾಮಿ. ಇದನ್ನು ಕೇಳಿದ ಕೆಲವು ಮಂದಿ ಶಿಷ್ಯರು, “ಇದೇನು ಇವರು ಹೇಳುತ್ತಿರುವುದು? ‘ತುಸುಕಾಲವಾದ ನಂತರ ನೀವು ನನ್ನನ್ನು ಕಾಣಲಾರಿರಿ. ಅನಂತರ ತುಸುಕಾಲ ಕಳೆಯುತ್ತಲೇ ನೀವು ನನ್ನನ್ನು ಪುನಃ ಕಾಣುವಿರಿ ಮತ್ತು ಪಿತನಲ್ಲಿಗೆ ನಾನು ಹೋಗುತ್ತೇನೆ,’ ಎನ್ನುತ್ತಾರಲ್ಲ?  ತುಸುಕಾಲ’ ಎಂದರೇನು? ಇವರ ಮಾತೇ ನಮಗೆ ಅರ್ಥವಾಗುತ್ತಿಲ್ಲವಲ್ಲಾ,” ಎಂದು ತಮ್ಮ ತಮ್ಮೊಳಗೆ ಮಾತನಾಡತೊಡಗಿದರು. ಯೇಸು, ತಮ್ಮಲ್ಲಿ ಅವರು ವಿಚಾರಿಸಬೇಕೆಂದಿದ್ದಾರೆಂದು ತಿಳಿದುಕೊಂಡು, ‘ತುಸುಕಾಲದ ನಂತರ ನೀವು ನನ್ನನ್ನು ಕಾಣಲಾರಿರಿ. ಅನಂತರ ತುಸುಕಾಲ ಕಳೆಯುತ್ತಲೇ ನನ್ನನ್ನು ಪುನಃ ಕಾಣುವಿರಿ’ ಎಂದು ನಾನು ಹೇಳಿದ್ದನ್ನು ಕುರಿತು ನಿಮ್ಮ ನಿಮ್ಮಲ್ಲಿಯೇ ನೀವು ಚರ್ಚಿಸುತ್ತಿರುವುದೇನು? ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನೀವು ಅತ್ತು ಗೋಳಾಡುವಿರಿ; ಲೋಕವಾದರೋ ನಕ್ಕು ನಲಿದಾಡುವುದು. ನೀವು ದುಃಖಪಡುವಿರಿ. ಆದರೆ ನಿಮ್ಮ ದುಃಖ ಆನಂದವಾಗಿ ಮಾರ್ಪಡುವುದು."

20.05.2020 - ಪವಿತ್ರಾತ್ಮ ಬಂದಮೇಲೆ ನಿಮ್ಮನ್ನು ಸಮಗ್ರ ಸತ್ಯದೆಡೆಗೆ ಕರೆದೊಯ್ಯುವರು

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 17:15, 22-18:1

ಪೌಲನನ್ನು ಬಿಟ್ಟುಬರಲು ಹೋದವರು ಅವನ ಜೊತೆ ಅಥೆನ್ಸಿನವರೆಗೆ ಹೋದರು; ಅನಂತರ ಸೀಲ ಮತ್ತು ತಿಮೊಥೇಯರಿಬ್ಬರೂ ಸಾಧ್ಯವಾದಷ್ಟು ಬೇಗ ತನ್ನ ಬಳಿಗೆ ಬಂದು ಸೇರಬೇಕೆಂಬ ಆಜ್ಞೆಯನ್ನು ಪೌಲನಿಂದ ಪಡೆದು, ಅವರು ಬೆರೋಯಕ್ಕೆ ಹಿಂದಿರುಗಿದರು. ಪೌಲನು ಅರಿಯೊಪಾಗಿನ ಸಭೆಯ ಮುಂದೆ ನಿಂತು ಹೀಗೆಂದನು: “ಅಥೆನ್ಸಿನ ಮಹಾಜನರೇ, ನೀವು ಎಲ್ಲಾ ವಿಧದಲ್ಲೂ ಬಹು ಧರ್ಮನಿಷ್ಠರೆಂದು ನನಗೆ ತೋರುತ್ತದೆ. ನಿಮ್ಮ ಪಟ್ಟಣದಲ್ಲಿ ನಾನು ತಿರುಗಾಡುತ್ತಾ, ನೀವು ಪೂಜಿಸುವ ವಿಗ್ರಹಗಳನ್ನು ಗಮನಿಸುತ್ತಾ ಇದ್ದಾಗ ಒಂದು ಬಲಿಪೀಠವು ಕಣ್ಣಿಗೆ ಬಿದ್ದಿತು. ಅದರ ಮೇಲೆ ‘ಅಜ್ಞಾತ ದೇವರಿಗೆ’ ಎಂಬ ಲಿಖಿತವಿತ್ತು. ನೀವು ಅರಿಯದೆ ಆರಾಧಿಸುವ ಆ ದೇವರನ್ನೇ ಅರುಹಿಸಲು ನಾನು ಬಂದಿರುತ್ತೇನೆ. ಜಗತ್ತನ್ನು ಹಾಗೂ ಅದರಲ್ಲಿರುವ ಸಮಸ್ತವನ್ನೂ ಸೃಷ್ಟಿಸಿದ ದೇವರು ಇಹಪರಗಳಿಗೆ ಒಡೆಯರು; ಮಾನವನು ನಿರ್ಮಿಸಿದ ಗುಡಿಗಳಲ್ಲಿ ಅವರು ಮನೆಮಾಡುವಂಥವರಲ್ಲ. ಎಲ್ಲಾ ಜೀವಿಗಳಿಗೆ ಪ್ರಾಣವನ್ನೂ ಶ್ವಾಸವನ್ನೂ ಸಮಸ್ತವನ್ನೂ ಕೊಡುವವರು ಅವರೇ; ಎಂದೇ ಅವರಿಗಾಗಿ ಮಾನವನು ದುಡಿಯಬೇಕಾದ ಅವಶ್ಯಕತೆ ಇಲ್ಲ. ಅಂಥ ಕೊರತೆ ಅವರಿಗೇನೂ ಇಲ್ಲ. ಒಂದೇ ಮೂಲದಿಂದ ಅವರು ಎಲ್ಲಾ ಜನಾಂಗಗಳನ್ನು ಸೃಷ್ಟಿಸಿ ಭೂಮಂಡಲದಲ್ಲೆಲ್ಲಾ ಜೀವಿಸುವಂತೆ ಮಾಡಿದ್ದಾರೆ. ಆಯಾ ಜನಾಂಗದ ಕಾಲಾವಧಿಯನ್ನೂ ಅವರವರ ನೆಲೆಯ ಎಲ್ಲೆಮೇರೆಗಳನ್ನೂ ಮುಂಚಿತವಾಗಿ ಅವರೇ ನಿರ್ಧರಿಸಿದ್ದಾರೆ. ಜನರು ತಮ್ಮನ್ನು ಅರಸಬೇಕೆಂಬುದೇ ಅವರ ಉದ್ದೇಶ; ಹೀಗಾದರೂ ತಮ್ಮನ್ನು ಅರಸಿ ಸಾಕ್ಷಾತ್ಕರಿಸಿಕೊಂಡಾರು ಎಂದು ದೇವರು ಹೀಗೆ ಮಾಡಿದರು. ಆದರೂ, ನಮ್ಮಲ್ಲಿ ಯಾರೊಬ್ಬರಿಂದಲೂ ದೇವರು ದೂರವಿಲ್ಲ. ಏಕೆಂದರೆ, ‘ನಾವು ಜೀವಿಸುವುದೂ ಚಲಿಸುವುದೂ ಇರುವುದೂ ಅವರಲ್ಲೇ’; ನಿಮ್ಮ ಕವಿಗಳಲ್ಲೇ ಕೆಲವರು ಹೇಳಿರುವಂತೆ, ‘ನಾವು ನಿಜವಾಗಿ ದೇವರ ಮಕ್ಕಳು.’ “ನಾವು ದೇವರ ಮಕ್ಕಳಾಗಿರುವುದರಿಂದ ಜನರು ಕಲಾಕುಶಲತೆಯಿಂದಲೂ ಕಲ್ಪನೆಯಿಂದಲೂ ರೂಪಿಸಿದ ಚಿನ್ನ, ಬೆಳ್ಳಿ, ಶಿಲೆಗಳ ಪ್ರತಿಮೆಗೆ ದೇವರು ಸಮಾನರೆಂದು ಭಾವಿಸಲಾಗದು. ಮಾನವರು ತಮ್ಮನ್ನು ಅರಿಯದೆ ಬಾಳಿದ ಕಾಲವನ್ನು ದೇವರು ಗಮನಕ್ಕೆ ತಂದುಕೊಳ್ಳಲಿಲ್ಲ. ಆದರೆ ಈಗ ಎಲ್ಲೆಡೆಯಲ್ಲಿರುವ ಸರ್ವಮಾನವರು ದುರ್ಮಾರ್ಗಗಳನ್ನು ಬಿಟ್ಟು ತಮಗೆ ಅಭಿಮುಖರಾಗಬೇಕೆಂದು ಆಜ್ಞಾಪಿಸುತ್ತಾರೆ. ಏಕೆಂದರೆ, ಅವರು ಒಂದು ದಿನವನ್ನು ಗೊತ್ತುಮಾಡಿದ್ದಾರೆ; ಆ ದಿನದಂದು ತಾವು ನೇಮಿಸಿದ ಒಬ್ಬ ವ್ಯಕ್ತಿಯ ಮುಖಾಂತರ ಇಡೀ ಜಗತ್ತಿಗೆ ನ್ಯಾಯನಿರ್ಣಯ ಮಾಡುವರು. ಇದನ್ನು ಎಲ್ಲರಿಗೂ ಖಚಿತಪಡಿಸಲೆಂದೇ ಆ ವ್ಯಕ್ತಿಯನ್ನು ಮರಣದಿಂದ ಪುನರುತ್ಥಾನಗೊಳಿಸಿದ್ದಾರೆ.” ಸತ್ತವರ ಪುನರುತ್ಥಾನದ ಬಗ್ಗೆ ಪೌಲನು ಮಾತಾಡಿದಾಗ ಕೆಲವರು ಪರಿಹಾಸ್ಯಮಾಡಿದರು. ಉಳಿದವರು, “ಈ ವಿಷಯದ ಬಗ್ಗೆ ನೀನು ಇನ್ನೊಮ್ಮೆ ಹೇಳಬಹುದು, ಆಗ ಕೇಳುತ್ತೇವೆ,” ಎಂದರು. ಹೀಗೆ ಪೌಲನು ಆ ಸಭೆಯಿಂದ ನಿರ್ಗಮಿಸಿದನು. ಕೆಲವರು ಅವನನ್ನು ಸೇರಿಕೊಂಡು ಭಕ್ತವಿಶ್ವಾಸಿಗಳಾದರು. ಇವರಲ್ಲಿ ಅರಿಯೊಪಾಗದ ದಿಯೊನಿಸಿಯನೂ ದಮಾರಿ ಎಂಬ ಸ್ತ್ರೀಯೂ ಮತ್ತಿತರರೂ ಇದ್ದರು.  ಇದಾದಮೇಲೆ ಪೌಲನು ಅಥೆನ್ಸ್ ಅನ್ನು ಬಿಟ್ಟು ಕೊರಿಂಥಕ್ಕೆ ಹೋದನು.

ಕೀರ್ತನೆ: 148:1-2, 11-12, 13, 14

ಶ್ಲೋಕ: ಭೂಮ್ಯಾಕಾಶ ಮೀರಿದೆ ಆತನ ಮಹಿಮೆ

ಹೊಗಳಿರಿ ಸ್ವರ್ಗದಿಂದ ಪ್ರಭುವನು I
ವಂದಿಸಿ ಮಹೋನ್ನತದಲಿ ಆತನನು II
ಆತನ ಸಮಸ್ತ ದೂತರೇ, ಸ್ತುತಿಸಿ ಆತನನು I
ಆತನ ಎಲ್ಲಾ ಗಣಗಳೇ, ಹೊಗಳಿ ಆತನನು II

ಭೂರಾಜರು, ಎಲ್ಲ ಜನಾಂಗಗಳು I
ಅಧಿಕಾರಿಗಳು, ದೇಶಾಧಿಪತಿಗಳು II
ಯುವಕರೂ ಯುವತಿಯರೂ I
ಮುದುಕರೂ ಮಕ್ಕಳೂ II

ಹೊಗಳಲಿ ಇವರೆಲ್ಲರು ಪ್ರಭುವಿನ ನಾಮವನು I
ಭೂಮ್ಯಾಕಾಶ ಮೀರಿದ ಆತನ ಮಹಿಮೆಯನು I
ಆತನ ಮಹತ್ತಾದ ಏಕೈಕ ನಾಮವನು II

ಕೋಡು ಮೂಡಿಸಿಹನು ಪ್ರಭು ತನ್ನ ಪ್ರಜೆಗೆ I
ಖ್ಯಾತಿ ತಂದಿಹನು ತನ್ನ ಭಕ್ತಾದಿಗಳಿಗೆ I
ತನ್ನ ಆಪ್ತಜನರಾದ ಇಸ್ರಯೇಲರಿಗೆ I

ಅಲ್ಲೆಲೂಯ! II

ಶುಭಸಂದೇಶ: ಯೊವಾನ್ನ 16:12-15


ಯೆಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು:  "ನಾನು ನಿಮಗೆ ಹೇಳಬೇಕಾದುದು ಇನ್ನೂ ಎಷ್ಟೋ ಇದೆ. ಸದ್ಯಕ್ಕೆ ಅವು ನಿಮಗೆ ಹೊರಲಾಗದ ಹೊರೆಯಾಗಬಾರದು. ಹೇಗೂ ಸತ್ಯಸ್ವರೂಪಿ ಆದ ಪವಿತ್ರಾತ್ಮ ಬಂದಮೇಲೆ ನಿಮ್ಮನ್ನು ಸಮಗ್ರ ಸತ್ಯದೆಡೆಗೆ ಕರೆದೊಯ್ಯುವರು. ಅವರು ತಮ್ಮಷ್ಟಕ್ಕೆ ತಾವೇ ಏನನ್ನೂ ಬೋಧಿಸದೆ ತಾವು ಕೇಳಿದುದನ್ನು ಕುರಿತೇ ಮಾತನಾಡುವರು; ಮುಂದೆ ನಡೆಯಲಿರುವುದನ್ನೂ ನಿಮಗೆ ತಿಳಿಸುವರು. ಅವರು, ನಾನು ಹೇಳಿದವುಗಳಿಂದಲೇ ಆಯ್ದು ನಿಮಗೆ ತಿಳಿಯಪಡಿಸಿ ನನ್ನ ಮಹಿಮೆಯನ್ನು ಬೆಳಗಿಸುವರು. ಪಿತನಿಗೆ ಇರುವುದೆಲ್ಲವೂ ನನ್ನದೇ. ಆದುದರಿಂದಲೇ ಪವಿತ್ರಾತ್ಮ ನಾನು ಹೇಳಿದವುಗಳಿಂದಲೇ ಆಯ್ದು ನಿಮಗೆ ತಿಳಿಯಪಡಿಸುವರೆಂದು ನಾನು ಹೇಳಿದ್ದು."

19.05.2020 - ನಾನು ಹೋಗುವುದು ನಿಮ್ಮ ಹಿತಕ್ಕಾಗಿಯೇ. ನಾನು ಹೋಗದಿದ್ದರೆ, ಪೋಷಕ ನಿಮ್ಮಲ್ಲಿಗೆ ಬರುವುದಿಲ್ಲ

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 16:22-34

ಜನರ ಗುಂಪು ಅವರೊಡನೆ ಸೇರಿ ದೊಂಬಿಮಾಡಿತು. ನ್ಯಾಯಾಧಿಪತಿಗಳು ಪೌಲ ಮತ್ತು ಸೀಲರ ವಸ್ತ್ರಗಳನ್ನು ಕಿತ್ತುಹಾಕಿಸಿ ಛಡಿ ಏಟುಗಳನ್ನು ಕೊಡುವಂತೆ ಆಜ್ಞೆಮಾಡಿದರು. ಅವರನ್ನು ಚೆನ್ನಾಗಿ ಥಳಿಸಿದ ಮೇಲೆ ಸೆರೆಮನೆಯಲ್ಲಿ ಹಾಕಿ ಎಚ್ಚರಿಕೆಯಿಂದ ನೋಡಿಕೊಳ್ಳಬೇಕೆಂದು ಸೆರೆಮನೆಯ ಅಧಿಕಾರಿಗೆ ಅಪ್ಪಣೆ ವಿಧಿಸಲಾಯಿತು. ಅಂತೆಯೇ, ಆ ಅಧಿಕಾರಿ ಅವರನ್ನು ಸೆರೆಮನೆಯ ಒಳಕೋಣೆಗೆ ತಳ್ಳಿ ಅವರ ಕಾಲುಗಳನ್ನು ಮರದ ದಿಮ್ಮಿಗಳಿಗೆ ಬಿಗಿಸಿದನು. ಸುಮಾರು ನಡುರಾತ್ರಿಯ ಸಮಯ. ಪೌಲ ಮತ್ತು ಸೀಲ ಪ್ರಾರ್ಥನೆಮಾಡುತ್ತಾ ದೇವರಿಗೆ ಸ್ತುತಿಗೀತೆಗಳನ್ನು ಹಾಡುತ್ತಾ ಇದ್ದರು. ಇತರ ಕೈದಿಗಳೆಲ್ಲರೂ ಆಲಿಸುತ್ತಿದ್ದರು. ಇದ್ದಕ್ಕಿದ್ದಂತೆ ಭೀಕರ ಭೂಕಂಪ ಉಂಟಾಯಿತು. ಸೆರೆಮನೆಯ ಅಸ್ತಿವಾರವೇ ಕದಲಿತು. ಆ ಕ್ಷಣವೇ ಕದಗಳೆಲ್ಲಾ ತೆರೆದುವು. ಕೈದಿಗಳೆಲ್ಲರ ಬಂಧನಗಳು ಕಳಚಿಬಿದ್ದವು. ಎಚ್ಚೆತ್ತ ಅಧಿಕಾರಿ ಸೆರೆಮನೆಯ ಬಾಗಿಲುಗಳೆಲ್ಲಾ ತೆರೆದಿರುವುದನ್ನು ಕಂಡನು. ಕೈದಿಗಳೆಲ್ಲರು ತಪ್ಪಿಸಿಕೊಂಡಿರುವರೆಂದು ಭಾವಿಸಿ ತನ್ನ ಖಡ್ಗವನ್ನು ಹಿರಿದು ಆತ್ಮಹತ್ಯೆ ಮಾಡಿಕೊಳ್ಳುವುದರಲ್ಲಿದ್ದನು. ಆಗ ಪೌಲನು ಗಟ್ಟಿಯಾಗಿ ಕೂಗುತ್ತಾ, “ನೀನೇನೂ ಹಾನಿಮಾಡಿಕೊಳ್ಳಬೇಡ, ನಾವೆಲ್ಲರೂ ಇಲ್ಲೇ ಇದ್ದೇವೆ,” ಎಂದನು. ಸೆರೆಮನೆಯ ಅಧಿಕಾರಿ ದೀಪವನ್ನು ತರಿಸಿ, ಒಳಗೆ ಧಾವಿಸಿ ಬಂದು, ಭಯದಿಂದ ನಡುಗುತ್ತಾ ಪೌಲ ಮತ್ತು ಸೀಲರ ಪಾದಕ್ಕೆ ಬಿದ್ದನು. ಅನಂತರ ಅವರನ್ನು ಹೊರಗೆ ಕರೆತಂದು, “ಸ್ವಾಮಿಗಳೇ, ಜೀವೋದ್ಧಾರ ಪಡೆಯಲು ನಾನು ಮಾಡಬೇಕಾದುದು ಏನು?” ಎಂದು ವಿಚಾರಿಸಿದನು. “ಪ್ರಭು ಯೇಸುವಿನಲ್ಲಿ ವಿಶ್ವಾಸವಿಡು, ನೀನೂ ನಿನ್ನ ಮನೆಯವರೆಲ್ಲರೂ ಜೀವೋದ್ಧಾರವನ್ನು ಹೊಂದುವಿರಿ,” ಎಂದು ಅವರು ಉತ್ತರಕೊಟ್ಟರು. ಅನಂತರ ಪ್ರಭುವಿನ ಸಂದೇಶವನ್ನು ಅವನಿಗೂ ಅವನ ಮನೆಯಲ್ಲಿದ್ದ ಎಲ್ಲರಿಗೂ ಬೋಧಿಸಿದರು. ರಾತ್ರಿಯ ವೇಳೆಯಲ್ಲೇ ಸೆರೆಮನೆಯ ಅಧಿಕಾರಿ ಅವರನ್ನು ಕರೆದುಕೊಂಡು ಹೋಗಿ ಅವರ ಗಾಯಗಳನ್ನು ತೊಳೆದನು. ಅನಂತರ ಅವನೂ ಅವನ ಕುಟುಂಬದವರೂ ದೀಕ್ಷಾಸ್ನಾನವನ್ನು ಪಡೆದರು. ಬಳಿಕ ಪೌಲ ಮತ್ತು ಸೀಲರನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಊಟಬಡಿಸಿದನು. ದೇವರಲ್ಲಿ ವಿಶ್ವಾಸವಿಡುವ ಸದವಕಾಶ ದೊರಕಿದ್ದಕ್ಕಾಗಿ ಅವನೂ ಅವನ ಮನೆಯವರೆಲ್ಲರೂ ಉಲ್ಲಾಸಗೊಂಡರು.


ಕೀರ್ತನೆ: 138:1-2, 2-3, 7-8

ಶ್ಲೋಕ: ಇಕ್ಕಟಿನಲ್ಲಿ ನಡೆವಾಗಲೂ ನೀ ರಕ್ಷಿಸುವೆ ಪ್ರಭೂ ಪ್ರಾಣವನು.

ಹೃದಯಪೂರ್ವಕ ವಂದನೆ ಪ್ರಭು ನಿನಗೆ I
ದೇವರುಗಳೆದುರಿಗೆ ನನ್ನ ಕೀರ್ತನೆ ನಿನಗೆ II
ಪೊಗಳುವೆ ನಿನ್ನ ನಾಮವನು ತಲೆಬಾಗಿ ನಿನ್ನ ಪವಿತ್ರಾಲಯದತ್ತ I
ನಿನ್ನ ಪ್ರೀತಿಸತ್ಯತೆಗಳ, ನಾಮ ನುಡಿಗಳ ಮಹತ್ವದ ಪ್ರಯುಕ್ತ II

ಪೊಗಳುವೆ ನಿನ್ನ ನಾಮವನು ತಲೆಬಾಗಿ ನಿನ್ನ ಪವಿತ್ರಾಲಯದತ್ತ I
ನಿನ್ನ ಪ್ರೀತಿಸತ್ಯತೆಗಳ, ನಾಮ ನುಡಿಗಳ ಮಹತ್ವದ ಪ್ರಯುಕ್ತ II
ಮೊರೆಯಿಟ್ಟಾಗ ದಯಪಾಲಿಸಿದೆ ಸದುತ್ತರವನು I
ಅಧಿಕಮಾಡಿದೆ ನೀನು ನನ್ನಾತ್ಮ ಶಕ್ತಿಯನು II

ಇಕ್ಕಟ್ಟಿನಲಿ ನಡೆವಾಗಲೂ ನೀ ರಕ್ಷಿಸುವೆ ಪ್ರಭು, ಪ್ರಾಣವನು I
ಶತ್ರುಕೋಪಕೆ ವಿರುದ್ಧವಾಗಿ ತೋರುವೆ ನೀ ಮುಷ್ಟಿಯನು II
ಸಿದ್ಧಿಗೆ ತರುವೆ ನೀ ಪ್ರಭು, ನನ್ನ ಕಾರ್ಯವನು I
ಶಾಶ್ವತವಾಗಿಸು ನಿನ್ನ ಅಚಲ ಪ್ರಿತಿಯನು I

ಮರೆತುಬಿಡಬೇಡ ನಿನ್ನಯ ಕೈ ಕೃತಿಯನು II

ಯೊವಾನ್ನ 16:5-11


“ನಾನು ನಿಮ್ಮ ಸಂಗಡ ಇದ್ದುದರಿಂದ ಇದನ್ನೆಲ್ಲಾ ಮೊದಲೇ ನಿಮಗೆ ತಿಳಿಸಲಿಲ್ಲ. ಈಗಲಾದರೋ ನನ್ನನ್ನು ಕಳುಹಿಸಿದಾತನಲ್ಲಿಗೆ ನಾನು ತೆರಳುತ್ತೇನೆ. ನಾನು ಹೋಗುವುದು ಎಲ್ಲಿಗೆ ಎಂದು ನೀವು ಯಾರೂ ಕೇಳುತ್ತಿಲ್ಲವಾದರೂ ಇದನ್ನೆಲ್ಲಾ ನಾನು ನಿಮಗೆ ಹೇಳಿದ್ದರಿಂದ ನಿಮ್ಮ ಹೃದಯವು ದುಃಖಭರಿತವಾಗಿದೆ. ವಾಸ್ತವವಾಗಿ ಹೇಳುವುದಾದರೆ, ನಾನು ಹೋಗುವುದು ನಿಮ್ಮ ಹಿತಕ್ಕಾಗಿಯೇ. ನಾನು ಹೋಗದಿದ್ದರೆ, ಪೋಷಕ ನಿಮ್ಮಲ್ಲಿಗೆ ಬರುವುದಿಲ್ಲ. ನಾನು ಹೋದರೆ ಮಾತ್ರ ಅವರನ್ನು ನಿಮ್ಮಲ್ಲಿಗೆ ಕಳುಹಿಸಿಕೊಡಬಲ್ಲೆ. ಆ ಪೋಷಕ ಬಂದು ಪಾಪ, ನ್ಯಾಯನೀತಿ, ಮತ್ತು ಅಂತಿಮತೀರ್ಪು ಇವುಗಳನ್ನು ಕುರಿತು ಲೋಕದ ಜನತೆ ತಾಳಿದ್ದ ತಪ್ಪುಭಾವನೆಗಳನ್ನು ಮನವರಿಕೆ ಮಾಡಿಕೊಡುವರು. ಪಾಪದ ವಿಷಯವಾಗಿ ಅವರ ತಪ್ಪುಭಾವನೆಯನ್ನು ಮನವರಿಕೆ ಮಾಡಿಕೊಡುವರು. ಏಕೆಂದರೆ, ಅವರು ನನ್ನಲ್ಲಿ ವಿಶ್ವಾಸ ಇಡಲಿಲ್ಲ. ನ್ಯಾಯನೀತಿಯ ವಿಷಯವಾಗಿ ಅವರ ತಪ್ಪುಭಾವನೆಯನ್ನು ಮನವರಿಕೆ ಮಾಡಿಕೊಡುವರು. ಏಕೆಂದರೆ, ನಾನು ಪಿತನ ಬಳಿಗೆಹೋಗುತ್ತೇನೆ ಮತ್ತು ನೀವು ನನ್ನನ್ನು ಕಾಣಲಾರಿರಿ. ಅಂತಿಮ ತೀರ್ಪಿನ ವಿಷಯವಾಗಿ ಅವರ ತಪ್ಪುಭಾವನೆಯನ್ನು ಮನವರಿಕೆ ಮಾಡಿಕೊಡುವರು. ಏಕೆಂದರೆ, ಇಹದ ಲೋಕಾಧಿಪತಿಗೆ ಈಗಾಗಲೇ ನ್ಯಾಯತೀರ್ಪನ್ನು ಕೊಡಲಾಗಿದೆ.

18.05.2020 - ಪವಿತ್ರಾತ್ಮರನ್ನು ನಿಮ್ಮ ಪೋಷಕರನ್ನಾಗಿ ನಾನು ಪಿತನಿಂದಲೇ ಕಳುಹಿಸುವೆನು

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 16:11-15

ನಾವು ತ್ರೋವದಲ್ಲಿ ಹಡಗು ಹತ್ತಿ ಸಮೊಥ್ರಕ್ಕೆ ನೇರವಾಗಿ ಪ್ರಯಾಣಮಾಡಿದೆವು. ಮಾರನೆಯ ದಿನ ನೆಯಫೋಲನ್ನು ತಲುಪಿ, ಅಲ್ಲಿಂದ ಮಕೆದೋನಿಯದ ಪ್ರಮುಖ ಪಟ್ಟಣವಾದ ಫಿಲಿಪ್ಪಿಗೆ ಬಂದೆವು. ಇದು ರೋಮಿನ ವಸಾಹತು; ಇಲ್ಲಿ ಕೆಲವು ದಿನಗಳನ್ನು ಕಳೆದೆವು. ಪಟ್ಟಣದ ಹೊರಗಿರುವ ನದಿತೀರದ ಬಳಿ ಯೆಹೂದ್ಯರ ಪ್ರಾರ್ಥನಾ ಸ್ಥಳವಿರಬಹುದೆಂದು ಭಾವಿಸಿ ಸಬ್ಬತ್ದಿನ ಅಲ್ಲಿಗೆ ಹೋದೆವು. ನಾವು ಕುಳಿತುಕೊಂಡು ಅಲ್ಲಿ ಸೇರಿದ್ದ ಮಹಿಳೆಯರೊಡನೆ ಸಂಭಾಷಿಸಿದೆವು. ನಮ್ಮ ಬೋಧನೆಯನ್ನು ಕೇಳಿದ ಆ ಮಹಿಳೆಯರಲ್ಲಿ ಲಿಡಿಯ ಎಂಬವಳು ಒಬ್ಬಳು. ಈಕೆ ಥುವತೈರ ಎಂಬ ಊರಿನವಳು; ಪಟ್ಟೆಪೀತಾಂಬರಗಳ ವ್ಯಾಪಾರಿ ಹಾಗೂ ದೇವಭಕ್ತೆ. ಪೌಲನ ಬೋಧನೆಗೆ ಕಿವಿಗೊಟ್ಟು ಗ್ರಹಿಸುವಂತೆ ಪ್ರಭು ಆಕೆಯ ಹೃದಯವನ್ನು ತೆರೆದರು. ಅಂತೆಯೇ ತನ್ನ ಮನೆಯವರ ಸಮೇತ ದೀಕ್ಷಾಸ್ನಾನವನ್ನು ಪಡೆದಳು. ಅನಂತರ, “ನಾನು ಪ್ರಭುವಿನ ನಿಜವಾದ ವಿಶ್ವಾಸಿಯೆಂದು ನೀವು ಒಪ್ಪಿಕೊಳ್ಳುವುದಾದರೆ ನನ್ನ ಮನೆಗೆ ಬಂದು ತಂಗಿರಿ,” ಎಂದು ನಮ್ಮನ್ನು ಒತ್ತಾಯಪೂರ್ವಕವಾಗಿ ಆಹ್ವಾನಿಸಿದಳು.

ಕೀರ್ತನೆ: 149:1-2, 3-4, 5-6, 9

ಶ್ಲೋಕ: ಪ್ರೀತಿಸುತ್ತಾನೆ ಪ್ರಭು ತನ್ನ ಪ್ರಜೆಯನು!
ಹಾಡಿರಿ ಪ್ರಭುವಿಗೆ ನೂತನ ಕೀರ್ತನೆಯನು I
ಭಕ್ತರ ಸಭೆಯಲಿ ಸ್ತುತಿಮಾಡಿರಿ ಆತನನು II
ಆನಂದಿಸಲಿ ತಮ್ಮ ಸೃಷ್ಟಿಕರ್ತನಲಿ ಇಸ್ರಯೇಲರು I
ತಮ್ಮಾ ರಾಜನಿಗೆ ಜಯಕಾರ ಮಾಡಲಿ ಸಿಯೋನಿನವರು II

ಆತನ ನಾಮವನು ಕೀರ್ತಿಸಲಿ ಕುಣಿತದಿಂದ I
ಆತನನು ಭಜಿಸಲಿ ತಮಟೆ, ಕಿನ್ನರಿಗಳಿಂದ II
ಪ್ರೀತಿಸುತ್ತಾನೆ ಪ್ರಭು ತನ್ನ ಪ್ರಜೆಯನು I
ಜಯಶೀಲರನ್ನಾಗಿಸುತ್ತಾನೆ ದೀನದಲಿತರನು

ಹಿಗ್ಗಲಿ ಭಕ್ತಾದಿಗಳು ದೊರೆತ ವಿಜಯದಲಿ I
ಜಯಕಾರ ಮಾಡಲಿ ತಮ್ಮ ತಮ್ಮ ಶಿಬಿರಗಳಲಿ II
ಇರಲಿ ಪ್ರಭುವಿನ ಸ್ತೋತ್ರ ಅವರ ಬಾಯಲಿ I

ಇದು ತರಲಿ ಭಕ್ತರೆಲ್ಲರಿಗೆ ಗೌರವವನು I



ಯೊವಾನ್ನ 15:26-16:4

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ಪಿತನಿಂದ ಹೊರಡುವ ಸತ್ಯಸ್ವರೂಪಿಯಾದ ಪವಿತ್ರಾತ್ಮರನ್ನು ನಿಮ್ಮ ಪೋಷಕರನ್ನಾಗಿ ನಾನು ಪಿತನಿಂದಲೇ ಕಳುಹಿಸುವೆನು. ಅವರು ಬಂದು ನನ್ನ ಪರವಾಗಿ ಸಾಕ್ಷಿನೀಡುವರು. ಅಂಥಕಾಲ ಬಂದಾಗ ಇದನ್ನೆಲ್ಲಾ ಕುರಿತು ನಾನು ನಿಮ್ಮನ್ನು ಮೊದಲೇ ಎಚ್ಚರಿಸಿದ್ದೇನೆಂದು ನೀವು ನೆನಸಿಕೊಳ್ಳುವಂತೆ ಇದನ್ನು ಹೇಳುತ್ತಿದ್ದೇನೆ."

17.05.2020 - ನೀವು ನನ್ನಲ್ಲಿ ಇರುವಿರಿ ಮತ್ತು ನಾನು ನಿಮ್ಮಲ್ಲಿ ಇರುವೆನು

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 8:5-8, 14-17

ಫಿಲಿಪ್ಪನು ಸಮಾರಿಯದ ಪ್ರಮುಖ ಪಟ್ಟಣ ಒಂದಕ್ಕೆ ಹೋಗಿ ಅಲ್ಲಿಯ ಜನರಿಗೆ ಯೇಸುವೇ ಅಭಿಷಿಕ್ತನಾದ ಲೋಕೋದ್ಧಾರಕನೆಂದು ಸಾರಿದನು. ಜನಸಮೂಹವು ಅವನಿಗೆ ಕಿವಿಕೊಟ್ಟಿತು. ಅವನು ಮಾಡಿದ ಅದ್ಭುತಕಾರ್ಯಗಳನ್ನು ಕಣ್ಣಾರೆ ಕಂಡಿತು; ಅವನ ಬೋಧನೆಯನ್ನು ಒಮ್ಮನಸ್ಸಿನಿಂದ ಸ್ವೀಕರಿಸಿತು. ಅನೇಕರನ್ನು ಹಿಡಿದಿದ್ದ ದೆವ್ವಗಳು ಅಬ್ಬರಿಸುತ್ತಾ ಅವರನ್ನು ಬಿಟ್ಟಗಲಿದವು; ಪಾರ್ಶ್ವವಾಯು ಪೀಡಿತರೂ ಕುಂಟರೂ ಸ್ವಸ್ಥರಾದರು. ಇದರಿಂದ ಆ ಪಟ್ಟಣದಲ್ಲಿ ಉಂಟಾದ ಸಂತೋಷಕ್ಕೆ ಎಲ್ಲೆಯೇ ಇರಲಿಲ್ಲ. 

ಸಮಾರಿಯದ ಜನರು ದೇವರ ವಾಕ್ಯವನ್ನು ಸ್ವೀಕರಿಸಿದ ಸಮಾಚಾರ ಪ್ರೇಷಿತರಿಗೆ ಮುಟ್ಟಿತು. ಅವರು ಪೇತ್ರ ಮತ್ತು ಯೊವಾನ್ನರನ್ನು ಅಲ್ಲಿಗೆ ಕಳುಹಿಸಿದರು. ಇವರು ಬಂದು ಆ ಜನರು ಪವಿತ್ರಾತ್ಮ ಅವರ ವರವನ್ನು ಪಡೆಯಲೆಂದು ಅವರಿಗೋಸ್ಕರ ಪ್ರಾರ್ಥನೆಮಾಡಿದರು. ಏಕೆಂದರೆ, ಅವರು ಪ್ರಭು ಯೇಸುವಿನ ನಾಮದಲ್ಲಿ ದೀಕ್ಷಾಸ್ನಾನವನ್ನು ಪಡೆದಿದ್ದರೇ ಹೊರತು ಅವರಲ್ಲಿ ಯಾರ ಮೇಲೂ ಆ ವರವು ಬಂದಿರಲಿಲ್ಲ. ಪ್ರೇಷಿತರು ಅವರ ಮೇಲೆ ಹಸ್ತನಿಕ್ಷೇಪ ಮಾಡಲು ಅವರು ಪವಿತ್ರಾತ್ಮ ವರವನ್ನು ಪಡೆದರು.

ಕೀರ್ತನೆ: 66:1-3, 4-5, 6-7, 16, 20

ಜಗವೆಲ್ಲ ಮಾಡಲಿ ಜಯಕಾರ ದೇವನಿಗೆ I
ಹಾಡಲಿ ಆತನ ಶ್ರೀನಾಮ ಮಹಿಮೆಗೆ II
ನಿನ್ನ ಕಾರ್ಯಗಳೆನಿತೋ ಚೇತೋಹಾರಿ I
ನಿನ್ನ ಪರಾಕ್ರಮಕೆ ಶತ್ರುಗಳು ಪರಾರಿ II

ಜಗವೆಲ್ಲ ಪೂಜಿಪುದು ನಿನ್ನನು I
ಪೊಗಳಿ ಮಾಳ್ಪುದು ಗುಣಗಾನವನು I
ಕೀರ್ತಿಸುವುದು ನಿನ್ನ ನಾಮವನು” II
ಬನ್ನಿ, ದೇವನತಿಶಯ ಕಾರ್ಯಗಳ ನೋಡಬನ್ನಿ I
ಜನತೆಗಾತ ಮಾಡಿದುದು ಅತ್ಯಾಶ್ಚರ್ಯವೆನ್ನಿ

ಒಣನೆಲವಾಗಿ ಮಾರ್ಪಡಿಸಿದ ಕಡಲನು I
ಕಾಲು ನಡೆಯಲೇ ದಾಟಿಸಿದ ನದಿಯನು I
ಇದ ನಿಮಿತ್ತ ಪಡೆಯೋಣ ಆನಂದವನು II
ಆತನಾಳ್ವಿಕೆ ಶಕ್ತಿಯುತ, ನಿರಂತರ I
ರಾಷ್ಟ್ರಗಳ ಮೇಲೆ ಅವನ ನೇತ್ರ ಕನಿಕರ I
ಜಂಬ ಕೊಚ್ಚದಿರಲಿ ದಂಗೆಕೋರ II

ಬಂದು ಕೇಳಿರಿ ದೇವನಲಿ ಭಯಭಕ್ತಿಯುಳ್ಳವರೆ I
ದೇವನೆನಗೆ ಮಾಡಿದ ಕಾರ್ಯಗಳ ತಿಳಿಸುವೆ ನಿಮಗೆ I

ಎನ್ನ ಪ್ರಾರ್ಥನೆಯನು ತಿರಸ್ಕರಿಸದ ದೇವನಿಗೆ ಸ್ತುತಿ I
ತನ್ನ ಪ್ರೀತಿಯನೆನಗೆ ನಿರಾಕರಿಸದಾತನಿಗೆ ಸನ್ನುತಿ II

ಶ್ಲೋಕ: ಜಗವೆಲ್ಲ ಮಾಡಲಿ ಜಯಕಾರ ದೇವನಿಗೆ

ಎರಡನೇ ವಾಚನ: 1 ಪೇತ್ರನು 3:15-18

ಸಹೋದರರೇ, ಕ್ರಿಸ್ತಯೇಸುವನ್ನು ಪ್ರಭುವೆಂದು ನಿಮ್ಮ ಹೃದಯಗಳಲ್ಲಿ ಪ್ರತಿಷ್ಠಾಪಿಸಿರಿ. ನಿಮ್ಮಲ್ಲಿರುವ ನಂಬಿಕೆ ನಿರೀಕ್ಷೆಯ ಬಗ್ಗೆ ಯಾರಾದರೂ ಪ್ರಶ್ನಿಸಿದರೆ ಅವರಿಗೆ ತಕ್ಕ ಉತ್ತರ ಕೊಡಲು ಸರ್ವದಾ ಸಿದ್ಧರಾಗಿರಿ. ಹಾಗೆ ಉತ್ತರ ಕೊಡುವಾಗ ಮರ್ಯಾದೆಯಿಂದಲೂ ಶಾಂತಿಸಮಾಧಾನದಿಂದಲೂ ಮಾತನಾಡಿ. ನಿಮ್ಮ ಮನಸ್ಸಾಕ್ಷಿ ಶುದ್ಧವಾಗಿರಲಿ. ಆಗ ಉತ್ತಮವಾದ ನಿಮ್ಮ ಕ್ರಿಸ್ತೀಯ ವರ್ತನೆಯನ್ನು ಕಂಡು ದೂಷಿಸಿದವರು, ನಿಮ್ಮನ್ನು ನಿಂದಿಸಿದ್ದಕ್ಕಾಗಿ ತಾವೇ ನಾಚಿಕೆಪಡುವರು. ಕೆಟ್ಟದ್ದನ್ನು ಮಾಡಿ ಶಿಕ್ಷೆಯನ್ನು ಅನುಭವಿಸುವುದಕ್ಕಿಂತ ದೇವರ ಚಿತ್ತವಾದರೆ, ಒಳ್ಳೆಯದನ್ನು ಮಾಡಿ ಶಿಕ್ಷೆಯನ್ನು ಅನುಭವಿಸುವುದೇ ಲೇಸು. ಅಂತೆಯೇ ಕ್ರಿಸ್ತಯೇಸು ನೀತಿವಂತರಾಗಿದ್ದರೂ ಅನೀತಿವಂತರಿಗಾಗಿ ಪ್ರಾಣತ್ಯಾಗಮಾಡಿದರು. ಪಾಪ ನಿವಾರಣಾರ್ಥವಾಗಿ ಒಂದೇ ಸಾರಿಗೆ ಮಾತ್ರವಲ್ಲ, ಎಂದೆಂದಿಗೂ ನಮ್ಮನ್ನು ದೇವರ ಬಳಿಗೆ ಸೇರಿಸಲು ಸತ್ತರು. ದೇಹದಲ್ಲಿ ಅವರು ವಧಿತರಾದರೂ ಆತ್ಮದಲ್ಲಿ ಜೀವಂತರಾದರು.

ಶುಭಸಂದೇಶ: ಯೊವಾನ್ನ 14:15-21


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ನೀವು ನನ್ನನ್ನು ಪ್ರೀತಿಸುವವರಾಗಿದ್ದರೆ ನನ್ನ ಆಜ್ಞೆಗಳನ್ನು ಕೈಗೊಂಡು ನಡೆಯುವಿರಿ. ನಾನೂ ಪಿತನನ್ನು ಕೇಳಿಕೊಳ್ಳುವೆನು; ಅವರು ನಿಮಗೆ ಬೇರೊಬ್ಬ ಪೋಷಕರನ್ನು ಕೊಡುವರು. ಇವರು ನಿಮ್ಮೊಡನೆ ಯಾವಾಗಲೂ ಇರುವರು. ಸತ್ಯಸ್ವರೂಪಿಯಾದ ಪವಿತ್ರಾತ್ಮನೇ ಈ ಪೋಷಕ. ಲೋಕವು ಇವರನ್ನು ಬರಮಾಡಿಕೊಳ್ಳದು. ಏಕೆಂದರೆ ಲೋಕ ಇವರನ್ನು ಕಾಣುವುದೂ ಇಲ್ಲ, ಅರಿತುಕೊಳ್ಳುವುದೂ ಇಲ್ಲ. ಆದರೆ ನೀವು ಇವರನ್ನು ಅರಿಯುವಿರಿ. ಕಾರಣ, ಇವರು ನಿಮ್ಮೊಂದಿಗೂ ನಿಮ್ಮಲ್ಲಿಯೂ ನೆಲಸಿರುವರು. ನಾನು ನಿಮ್ಮನ್ನು ಅನಾಥರನ್ನಾಗಿ ಬಿಟ್ಟುಹೋಗುವುದಿಲ್ಲ. ನಿಮ್ಮ ಬಳಿಗೆ ಪುನಃ ಬರುತ್ತೇನೆ. ಇನ್ನು ತುಸುಕಾಲವಾದ ನಂತರ ಲೋಕವು ನನ್ನನ್ನು ಕಾಣದು. ಆದರೆ ನೀವು ನನ್ನನ್ನು ಕಾಣುವಿರಿ. ನಾನು ಜೀವಿಸುವವನಾಗಿರುವುದರಿಂದ ನೀವೂ ಜೀವಿಸುವಿರಿ. ನಾನು ನನ್ನ ಪಿತನಲ್ಲಿ ಇರುವೆನು; ನೀವು ನನ್ನಲ್ಲಿ ಇರುವಿರಿ ಮತ್ತು ನಾನು ನಿಮ್ಮಲ್ಲಿ ಇರುವೆನು. ಇದನ್ನು ಆ ದಿನದಂದು ನೀವು ಅರಿತುಕೊಳ್ಳುವಿರಿ. ನನ್ನ ಆಜ್ಞೆಗಳನ್ನು ಅಂಗೀಕರಿಸಿ ಅವುಗಳ ಪ್ರಕಾರ ನಡೆಯುವವನೇ ನನ್ನನ್ನು ಪ್ರೀತಿಸುವವನು. ನನ್ನನ್ನು ಪ್ರೀತಿಸುವವನು ನನ್ನ ಪಿತನಿಗೂ ಪ್ರಿಯನಾಗಿರುವನು. ನಾನೂ ಅವನನ್ನು ಪ್ರೀತಿಸಿ ನನ್ನನ್ನೇ ಅವನಿಗೆ ಸಾಕ್ಷಾತ್ಕರಿಸಿಕೊಡುವೆನು.”

16.05.2020 - ನನ್ನನ್ನು ಹಿಂಸೆಗೆ ಗುರಿಮಾಡಿದಂತೆ ನಿಮ್ಮನ್ನೂ ಹಿಂಸೆಗೆ ಗುರಿಮಾಡುವರು

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 16:1-10

ಪೌಲನು ದೆರ್ಬೆಗೂ ಅಲ್ಲಿಂದ ಲುಸ್ತ್ರಕ್ಕೂ ಪ್ರಯಾಣ ಮಾಡಿದನು. ತಿಮೊಥೇಯ ಎಂಬ ಕ್ರೈಸ್ತಭಕ್ತನು ಅಲ್ಲಿ ವಾಸಿಸುತ್ತಿದ್ದನು. ಇವನ ತಾಯಿ ಯೆಹೂದ್ಯಳು ಹಾಗೂ ಕ್ರೈಸ್ತಭಕ್ತಳು. ತಂದೆಯಾದರೋ ಗ್ರೀಕನು. ಲುಸ್ತ್ರ ಮತ್ತು ಇಕೋನಿಯದ ಸಹೋದರರೆಲ್ಲರಿಗೆ ತಿಮೊಥೇಯನ ಬಗ್ಗೆ ಸದಭಿಪ್ರಾಯವಿತ್ತು. ಪೌಲನು ತಿಮೊಥೇಯನನ್ನು ತನ್ನೊಡನೆ ಕರೆದುಕೊಂಡು ಹೋಗಲು ಅಪೇಕ್ಷಿಸಿದನು. ಆ ಪ್ರದೇಶಗಳಲ್ಲಿದ್ದ ಯೆಹೂದ್ಯರಿಗೆ ತಿಮೊಥೇಯನ ತಂದೆ ಗ್ರೀಕನೆಂದು ತಿಳಿದಿದ್ದುದರಿಂದ ಅವನಿಗೆ ಸುನ್ನತಿಮಾಡಿಸಿದನು. ಊರಿಂದ ಊರಿಗೆ ಪ್ರಯಾಣ ಮಾಡುತ್ತಾ, ಜೆರುಸಲೇಮಿನಲ್ಲಿದ್ದ ಪ್ರೇಷಿತರೂ ಸಭಾಪ್ರಮುಖರೂ ನಿರ್ಧರಿಸಿದ ನಿಯಮಗಳನ್ನು ಭಕ್ತರಿಗೆ ಬೋಧಿಸುತ್ತಾ, ಅವುಗಳನ್ನು ಪಾಲಿಸುವಂತೆ ಹೇಳಿದರು. ಹೀಗೆ ಕ್ರೈಸ್ತಸಭೆಗಳು ವಿಶ್ವಾಸದಲ್ಲಿ ದೃಢಗೊಂಡು ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಬೆಳೆಯತೊಡಗಿತು. ಏಷ್ಯದಲ್ಲಿ ಅವರು ಶುಭಸಂದೇಶವನ್ನು ಸಾರಕೂಡದೆಂದು ಪವಿತ್ರಾತ್ಮ ನಿಷೇಧಿಸಿದ್ದರಿಂದ ಅವರು ಫ್ರಿಜಿಯ ಮತ್ತು ಗಲಾತ್ಯಪ್ರದೇಶಗಳ ಮಾರ್ಗವಾಗಿ ಪ್ರಯಾಣಮಾಡಿದರು. ಮೂಸಿಯದ ಗಡಿಯನ್ನು ತಲುಪಿದಾಗ ಅವರು ಬಿಥೂನಿಯ ಪ್ರಾಂತ್ಯಕ್ಕೆ ಹೋಗಲು ಯತ್ನಿಸಿದರು. ಯೇಸುವಿನ ಆತ್ಮ ಅಲ್ಲಿಗೆ ಹೋಗಲು ಸಹ ಅವರನ್ನು ಬಿಡಲಿಲ್ಲ. ಆದುದರಿಂದ ಅವರು ಮೂಸಿಯವನ್ನು ಹಾದು ನೇರವಾಗಿ ತ್ರೋವಕ್ಕೆ ಹೋದರು. ಆ ರಾತ್ರಿ ಪೌಲನಿಗೆ ಒಂದು ದರ್ಶನವಾಯಿತು; ಮಕೆದೋನಿಯದ ಒಬ್ಬ ವ್ಯಕ್ತಿ ಅಲ್ಲಿ ನಿಂತು, “ಮಕೆದೋನಿಯಕ್ಕೆ ಬಂದು ನಮಗೆ ಸಹಾಯಮಾಡಿ,” ಎಂದು ಅಂಗಲಾಚಿದನು. ಪೌಲನಿಗೆ ಈ ದರ್ಶನವಾದ ತಕ್ಷಣ ಆ ಜನರಿಗೆ ಶುಭಸಂದೇಶವನ್ನು ಸಾರಲು ದೇವರು ನಮ್ಮನ್ನು ಕರೆದಿದ್ದಾರೆಂದು ನಾವು ಅರಿತುಕೊಂಡು ಮಕೆದೋನಿಯಕ್ಕೆ ಹೋಗಲು ಸಿದ್ಧರಾದೆವು.

ಕೀರ್ತನೆ: 100:1-2, 3, 5

ಶ್ಲೋಕ: ಭೂನಿವಾಸಿಗಳೇ, ಜಯಘೋಷಮಾಡಿ ಪ್ರಭುವಿಗೆ

ಭೂನಿವಾಸಿಗಳೇ, ಜಯಘೋಷ ಮಾಡಿ ಪ್ರಭುವಿಗೆ I
ಅತಿ ಸಂತೋಷದಿಂದ ಸೇವೆ ಮಾಡಿ ಆತನಿಗೆ I
ಹಾಡುತ, ಪಾಡುತ, ಬನ್ನಿ ಆತನ ಸನ್ನಿಧಿಗೆ II
ಪ್ರಭುವೇ ದೇವರೆಂಬುದನು ಮರೆತುಬಿಡಬೇಡಿ ನೀವು I

ನಮ್ಮ ಸೃಷ್ಟಿಕರ್ತ ಆತನು, ಆತನವರು ನಾವು I
ಆತನ ಜನ, ಆತನೆ ಮೇಯಿಸುವ ಕುರಿಗಳು, ನಾವು II

ಹೌದು, ಪ್ರಭುವೆನಿತೋ ಒಳ್ಳೆಯವನು I
ಇರುವುದಾತನ ಪ್ರೀತಿ ಯುಗಯುಗಕು I
ಆತನ ಸತ್ಯತೆ ತಲತಲಾಂತರಕು II

ಶುಭಸಂದೇಶ: ಯೊವಾನ್ನ 15:18-21

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: “ಲೋಕವು ನಿಮ್ಮನ್ನು ದ್ವೇಷಿಸಿದರೆ, ನನ್ನ ಮೇಲೆ ಅದಕ್ಕೆ ಮೊದಲೇ ದ್ವೇಷವಿತ್ತೆಂಬುದನ್ನು ನೆನಪಿನಲ್ಲಿಡಿ. ನೀವು ಲೋಕದ ಕಡೆಯವರಾಗಿದ್ದರೆ ಲೋಕವು ನಿಮ್ಮನ್ನು ತನ್ನವರೆಂದು ಮಮತೆಯಿಂದ ಕಾಣುತ್ತಿತ್ತು. ನೀವಾದರೋ ಲೋಕದ ಕಡೆಗೆ ಸೇರಿದವರಲ್ಲ. ನಾನು ನಿಮ್ಮನ್ನು ಆರಿಸಿಕೊಂಡಿರುವುದರಿಂದ ನೀವು ಲೋಕದಿಂದ ಬೇರ್ಪಟ್ಟಿದ್ದೀರಿ ಎಂದೇ ಲೋಕಕ್ಕೆ ನಿಮ್ಮ ಮೇಲೆ ದ್ವೇಷವಿದೆ. ಧಣಿಗಿಂತಲೂ ದಾಸನು ದೊಡ್ಡವನಲ್ಲವೆಂದು ನಾನು ನಿಮಗೆ ಹೇಳಿದ್ದನ್ನು ನೆನಪಿಗೆ ತಂದುಕೊಳ್ಳಿ. ಅವರು ನನ್ನನ್ನು ಹಿಂಸೆಗೆ ಗುರಿಮಾಡಿದಂತೆ ನಿಮ್ಮನ್ನೂ ಹಿಂಸೆಗೆ ಗುರಿಮಾಡುವರು. ನನ್ನ ಬೋಧನೆಯ ಮಾತನ್ನು ಅವರು ಅನುಸರಿಸಿ ನಡೆದರೆ ನಿಮ್ಮ ಬೋಧನೆಯ ಮಾತನ್ನು ಅನುಸರಿಸಿ ನಡೆಯುವರು. ನೀವು ನನ್ನವರಾದುದರಿಂದ ಅವರು ನಿಮ್ಮನ್ನು ಹೀಗೆ ಕಾಣುವರು. ಏಕೆಂದರೆ ನನ್ನನ್ನು ಕಳುಹಿಸಿದಾತನನ್ನು ಅವರು ಅರಿಯರು."

15.05.2020

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 15:22-31

ಅನಂತರ ಪ್ರೇಷಿತರೂ ಸಭಾಪ್ರಮುಖರೂ ಇಡೀ ಧರ್ಮಸಭೆಯ ಸಮ್ಮತಿಪಡೆದು, ತಮ್ಮಲ್ಲಿ ಕೆಲವರನ್ನು ಆರಿಸಿ, ಪೌಲ ಮತ್ತು ಬಾರ್ಸಬರೊಂದಿಗೆ ಅಂತಿಯೋಕ್ಯಕ್ಕೆ ಕಳುಹಿಸಬೇಕೆಂದು ನಿರ್ಧರಿಸಿದರು. ಅಂತೆಯೇ, ಸಹೋದರರಲ್ಲಿ ಬಹು ಗೌರವಾನ್ವಿತರಾದ ಬಾರ್ನಬ ಎಂದು ಕರೆಯಲಾದ ಯೂದ ಮತ್ತು ಸೀಲ ಎಂಬ ಇಬ್ಬರನ್ನು ಆರಿಸಿದರು. ಈ ಕೆಳಗಿನ ಪತ್ರವನ್ನು ಬರೆದು ಅವರ ಕೈಯಲ್ಲಿ ಕಳುಹಿಸಿದರು. “ಅಂತಿಯೋಕ್ಯ, ಸಿರಿಯ ಮತ್ತು ಸಿಲಿಸಿಯಗಳಲ್ಲಿ ವಾಸಿಸುವ ಯೆಹೂದ್ಯೇತರ ಸಹೋದರರಿಗೆ - ಪ್ರೇಷಿತರೂ ಸಭಾಪ್ರಮುಖರೂ ನಿಮ್ಮ ಸಹೋದರರೂ ಆದ ನಮ್ಮ ಶುಭಾಶಯಗಳು! ನಮ್ಮ ಕಡೆಯ ಕೆಲವು ಜನರು ನಮ್ಮಿಂದ ಯಾವ ಆದೇಶವನ್ನೂ ಪಡೆಯದೆ ನಿಮ್ಮನ್ನು ತೊಂದರೆಗೆ ಈಡುಮಾಡಿ ನಿಮ್ಮ ಮನಸ್ಸನ್ನು ಕಲಕಿದರೆಂಬ ಸಮಾಚಾರ ನಮ್ಮ ಗಮನಕ್ಕೆ ಬಂದಿದೆ. ಆದುದರಿಂದ ನಾವೆಲ್ಲರೂ ಸಭೆಸೇರಿ ಪ್ರತಿನಿಧಿಗಳನ್ನು ಆರಿಸಿ ನಿಮ್ಮಲ್ಲಿಗೆ ಕಳುಹಿಸಲು ನಿರ್ಧರಿಸಿದೆವು. ನಮ್ಮ ಪ್ರಭುವಾದ ಯೇಸುಕ್ರಿಸ್ತರಿಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟಿರುವ ನಮ್ಮೊಲವಿನ ಬಾರ್ನಬ ಮತ್ತು ಪೌಲರೊಡನೆ ಈ ಪ್ರತಿನಿಧಿಗಳು ಬರುತ್ತಿದ್ದಾರೆ. ಇವರೇ ನಾವು ಕಳುಹಿಸುತ್ತಿರುವ ಯೂದ ಮತ್ತು ಸೀಲ. ಇವರು ನಾವು ಬರೆದಿರುವುದನ್ನು ನಿಮಗೆ ಖುದ್ದಾಗಿ ತಿಳಿಸುವರು. ವಿಗ್ರಹಗಳಿಗೆ ನೈವೇದ್ಯವಾದುದು ಅಪವಿತ್ರವಾದುದು. ಅದನ್ನು ಸೇವಿಸಬಾರದು; ರಕ್ತವನ್ನಾಗಲಿ ಕುತ್ತಿಗೆ ಹಿಸುಕಿ ಕೊಂದ ಪ್ರಾಣಿಗಳನ್ನಾಗಲಿ ತಿನ್ನಬಾರದು; ಅನೈತಿಕತೆಯಿಂದ ದೂರವಿರಬೇಕು. ಈ ಅಗತ್ಯ ನಿಯಮಗಳ ಹೊರತು ಬೇರೆ ಯಾವ ಹೊರೆಯನ್ನೂ ನಿಮ್ಮ ಮೇಲೆ ಹೇರುವುದು ವಿಹಿತವಲ್ಲವೆಂಬುದು ಪವಿತ್ರಾತ್ಮ ಅವರ ಹಾಗೂ ನಮ್ಮ ತೀರ್ಮಾನ. ಈ ನಿಯಮಗಳನ್ನು ಅನುಸರಿಸಿದರೆ, ನಿಮಗೆ ಒಳಿತಾಗುವುದು, ನಿಮಗೆ ಶುಭವಾಗಲಿ!” ಅಂತೆಯೇ ಪ್ರತಿನಿಧಿಗಳು ಅಲ್ಲಿಂದ ಅಪ್ಪಣೆಪಡೆದು ಅಂತಿಯೋಕ್ಯಕ್ಕೆ ಹೋದರು. ಅಲ್ಲಿ ಭಕ್ತಸಭೆಯನ್ನು ಒಟ್ಟುಗೂಡಿಸಿ ಅವರಿಗೆ ಆ ಪತ್ರವನ್ನು ಕೊಟ್ಟರು. ಪತ್ರದಲ್ಲಿದ್ದ ಪ್ರೋತ್ಸಾಹದಾಯಕ ಸಂದೇಶವನ್ನು ಓದಿದ್ದೇ - ಭಕ್ತಾದಿಗಳು ಆನಂದಭರಿತರಾದರು.

ಕೀರ್ತನೆ: 57:8-9, 10, 12
ಶ್ಲೋಕ: ನಿನ್ನ ಸ್ತುತಿಸುವೆನು ಪ್ರಭೂ ಜನಾಂಗಗಳ ಮುಂದೆ

ಶುಭಸಂದೇಶ: ಯೊವಾನ್ನ 15:12-17

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ: "ನಾನು ಕೊಡುವ ಆಜ್ಞೆ ಏನೆಂದರೆ: ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು. ಗೆಳೆಯರಿಗಾಗಿ ತನ್ನ ಪ್ರಾಣವನ್ನೇ ಧಾರೆಯೆರೆಯುವ ಪ್ರೀತಿಗಿಂತ ಮಿಗಿಲಾದ ಪ್ರೀತಿ ಯಾರಲ್ಲೂ ಇಲ್ಲ. ನಾನು ಆಜ್ಞಾಪಿಸಿದಂತೆ ನಡೆದರೆ ನೀವು ನನ್ನ ಗೆಳೆಯರು. ನಾನಿನ್ನು ನಿಮ್ಮನ್ನು ದಾಸರೆಂದು ಕರೆಯುವುದಿಲ್ಲ. ಧಣಿಯ ಕೆಲಸಕಾರ್ಯಗಳು ದಾಸನಿಗೆ ತಿಳಿಯವು. ನಾನಾದರೋ ಪಿತನಿಂದ ಕೇಳಿಸಿಕೊಂಡದ್ದನ್ನೆಲ್ಲಾ ನಿಮಗೆ ತಿಳಿಸಿದ್ದೇನೆ. ಈ ಕಾರಣ ನಿಮ್ಮನ್ನು ಗೆಳೆಯರೆಂದು ಕರೆದಿದ್ದೇನೆ. ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ, ನಾನೇ ನಿಮ್ಮನ್ನು ಆರಿಸಿಕೊಂಡಿದ್ದೇನೆ. ನೀವು ಲೋಕಕ್ಕೆ ಹೋಗಬೇಕು, ಸಫಲರಾಗಬೇಕು; ಆ ಫಲ ಶಾಶ್ವತವಾಗಿರಬೇಕೆಂದೇ ನಿಮ್ಮನ್ನು ನೇಮಿಸಿದ್ದೇನೆ. ಹೀಗಿರಲಾಗಿ ನೀವು ನನ್ನ ಹೆಸರಿನಲ್ಲಿ ಪಿತನಿಂದ ಏನು ಕೇಳಿದರೂ ನಿಮಗೆ ಅದು ಸಿಗುವುದು. ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನಾನು ನಿಮಗೆ ಕೊಡುವ ಆಜ್ಞೆ". ಎಂದರು.