19.12.2025 - 'ಕಟ್ಟಕಡೆಗೆ ಸರ್ವೇಶ್ವರ ನನಗೆ ಕರುಣೆ ತೋರಿದ್ದಾರೆ; ಜನರ ನಡುವೆ ನನಗಿದ್ದ ಅವಮಾನವನ್ನು ತೊಲಗಿಸಿದ್ದಾರೆ,'

ಮೊದಲನೆ ವಾಚನ ನ್ಯಾಯಸ್ಥಾಪಕರ ಗ್ರಂಥದಿಂದ ಇಂದಿನ ವಾಚನ 13:2-7,24-25             ‍                                      


ಚೊರ್ಗಾ ಎಂಬ ಊರಲ್ಲಿ ದಾನ್ ಕುಲದ ಮಾನೋಹ ಎಂಬ ಒಬ್ಬ ಮನುಷ್ಯನಿದ್ದನು. ಅವನ ಹೆಂಡತಿ ಬಂಜೆಯಾಗಿದ್ದುದರಿಂದ ಅವನಿಗೆ ಮಕ್ಕಳಿರಲಿಲ್ಲ. ಒಂದಾನೊಂದು ದಿನ ಸರ್ವೇಶ್ವರನ ದೂತ ಆಕೆಗೆ ಪ್ರತ್ಯಕ್ಷನಾಗಿ, "ಇಗೋ, ಬಂಜೆಯಾಗಿ ಮಕ್ಕಳಿಲ್ಲದಿರುವ ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ.  ಈ ಕಾರಣ ಜಾಗರೂಕತೆಯಿಂದಿರು; ದ್ರಾಕ್ಷಾರಸವನ್ನಾಗಲಿ, ಬೇರೆ ಯಾವ ಮದ್ಯವನ್ನಾಗಲಿ ಕುಡಿಯದಿರು; ಯಾವ ನಿಷಿದ್ಧ ಪದಾರ್ಥವನ್ನೂ ಊಟಮಾಡದಿರು. ನೀನು ಗರ್ಭವತಿಯಾಗಿ ಹೆರುವ ಮಗನ ತಲೆಯ ಮೇಲೆ ಕ್ಷೌರದ ಕತ್ತಿಯನ್ನು ಉಪಯೋಗಿಸಲೇಬಾರದು. ಅವನು ಹುಟ್ಟಿನಿಂದ ದೇವರಿಗೆ ಪ್ರತಿಷ್ಠಿತನಾಗುವನು. ಅವನು ಇಸ್ರಯೇಲರನ್ನು ಫಿಲಿಷ್ಟಿಯರ ಕೈಯಿಂದ ಬಿಡಿಸುವುದಕ್ಕೆ ಪ್ರಾರಂಭಿಸುವನು,"  ಎಂದನು.  ತರುವಾಯ ಆ ಸ್ತ್ರೀ ತನ್ನ ಗಂಡನ ಬಳಿಗೆ ಹೋಗಿ, "ಒಬ್ಬ ದೇವಪುರುಷ ನನ್ನ ಹತ್ತಿರ ಬಂದಿದ್ದನು. ಅವನ ರೂಪ ದೇವದೂತನ ರೂಪದಂತೆ ಘನಗಂಭೀರವಾಗಿತ್ತು. 'ಎಲ್ಲಿಂದ ಬಂದಿರಿ?' ಎಂದು ನಾನು ಅವನನ್ನು ಕೇಳಲಿಲ್ಲ; ಅವನೂ ತನ್ನ ಹೆಸರನ್ನು ತಿಳಿಸಲಿಲ್ಲ.  ಆದರೆ ಆತ ನನಗೆ, 'ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವೆ; ಆದ್ದರಿಂದ ನೀನು ದ್ರಾಕ್ಷಾರಸವನ್ನಾಗಲಿ, ಬೇರೆ ಯಾವ ಮದ್ಯವನ್ನಾಗಲಿ ಕುಡಿಯದಿರು.  ಯಾವ ನಿಷಿದ್ಧ ಆಹಾರವನ್ನೂ ಮುಟ್ಟಬೇಡ; ಆ ಮಗು ಹುಟ್ಟಿದಂದಿನಿಂದ ಸಾಯುವವರೆಗೆ ಪ್ರತಿಷ್ಠಿತನಾಗಿರುವನು,' ಎಂದು ಹೇಳಿದನು,"  ಎಂದಳು.  ಆ ಮಹಿಳೆ ಒಬ್ಬ ಮಗನನ್ನು ಹೆತ್ತು ಅವನಿಗೆ  'ಸಂಸೋನ' ಎಂದು ಹೆಸರಿಟ್ಟಳು. ಹುಡುಗ ಬೆಳೆದು ದೊಡ್ಡವನಾದ. ಸರ್ವೇಶ್ವರನ ಆಶೀರ್ವಾದ ಅವನ ಮೇಲಿತ್ತು.  ಇದಲ್ಲದೆ, ಅವನು ಚೊರ್ಗಕ್ಕೂ ಎಷ್ಟಾವೋಲಿಗೂ ಮಧ್ಯದಲ್ಲಿರುವ ದಾನ್ ಕುಲದ ಪಾಳೆಯದಲ್ಲಿದ್ದಾಗ ಸರ್ವೇಶ್ವರನ ಆತ್ಮ ಅವನನ್ನು ಚೇತನಗೊಳಿಸತೊಡಗಿತು.

- ಪ್ರಭುವಿನ ವಾಕ್ಯ

ಕೀರ್ತನೆ : 71 : 3-4, 5-6, 16-17. v. 8

ಶ್ಲೋಕ:  ನಿನ್ನ ಗುಣಗಾನ ನನ್ನ ಬಾಯ್ತುಂಬ, ನಿನ್ನ ಘೋಷಣೆ ನನಗೆ ದಿನದಾದ್ಯಂತ.

1.  ನೀನಾಗಿರು ನನಗಾಶ್ರಯ ದುರ್ಗ, ಕೋಟೆಕೊತ್ತಲು|

ನೀನೇ ನನ್ನ ದುರ್ಗ, ಕೋಟೆ ನನ್ನನು ರಕ್ಷಿಸಲು||

ದುರುಳರ ಕೈಯಿಂದೆನ್ನನು ದೇವಾ, ಬಿಡೀಸಯ್ಯಾ|| ಕ್ರೂರ ಕೇಡಿಗರ ವಶದಿಂದೆನ್ನನು ತಪ್ಪಿಸಯ್ಯ 

ಶ್ಲೋಕ

 

2.  ಸ್ವಾಮಿ ದೇವಾ, ನೀನೇ ನನ್ನ ಭರವಸೆ|

ಬಾಲ್ಯದಿಂದಲೂ ನೀನೇ ನನ್ನ ನಂಬಿಕೆ||

ಹುಟ್ಟಿನಿಂದಲೇ ನಾ ನಿನಗಂಟಿಕೊಂಡಿರುವೆನಯ್ಯಾ|

ಗರ್ಭದಿಂದಲೇ ನೀ ಎನ್ನನು ಕರೆದು ತಂದೆಯಯ್ಯಾ||

ಶ್ಲೋಕ

 

3.  ಪ್ರಭು ದೇವಾ, ಸ್ಮರಿಸುವೆನು ನಿನ್ನ ಮಹತ್ಕಾರ್ಯಗಳನೆ|

ಪ್ರಕಟಪಡಿಸುವೆನು ನಿನ್ನೊಬ್ಬನ ನ್ಯಾಯನೀತಿಯನೆ||

ದೇವಾ, ಬಾಲ್ಯಾರಭ್ಯ ನನಗೆ ಬೋಧಿಸಿರುವೆಯಲ್ಲವೇ?|

ನಿನ್ನ ಅದ್ಭುತ ಕಾರ್ಯಗಳನೆಂದಿಗೂ ನಾ ಘೋಷಿಸುತ್ತಿರುವೆ||

ಶ್ಲೋಕ


ಘೋಷಣೆ : ಅಲ್ಲೆಲೂಯ, ಅಲ್ಲೆಲೂಯ!

ಇಷಯನ ಬುಡದಿಂದ ಹೊರಟುಬಂದ ಓ ಚಿಗುರೇ, ಸದ್ಧರ್ಮದ ಆಧಾರರಾಗಿರುವವರೇ;| ನಮ್ಮನ್ನು ರಕ್ಷಿಸಲು ಬೇಗನೆ ಬನ್ನಿ ||

ಅಲ್ಲೆಲೂಯ!


ಶುಭಸಂದೇಶ : ಲೂಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 1:5-25

ಜುದೇಯ ಪ್ರಾಂತ್ಯದ ರಸನಾಗಿದ್ದ ಹೆರೋದನ ಕಾಲದಲ್ಲಿ ಅಬೀಯನ ವರ್ಗಕ್ಕೆ ಸೇರಿದ ಜಕರೀಯನೆಂಬ ಒಬ್ಬ ಯಾಜಕನಿದ್ದನು.  ಇವನ ಪತ್ನಿಯ ಹೆಸರು ಎಲಿಜಬೇತ್.  ಇವಳೂ ಆರೋನನ ಯಾಜಕ ವಂಶಕ್ಕೆ ಸೇರಿದವಳು.  ದಂಪತಿಗಳಿಬ್ಬರೂ ದೇವರ ದೃಷ್ಟಿಯಲ್ಲಿ ಭಯಭಕ್ತಿಯುಳ್ಳವರಾಗಿದ್ದರು;  ಸರ್ವೇಶ್ವರನ ವಿಧಿ ನಿಯಮಗಳನ್ನು ನಿಷ್ಠೆಯಿಂದ ಪಾಲಿಸಿಕೊಂಡು ಬರುತ್ತಿದ್ದರು.  ಎಲಿಜಬೇತಳು ಬಂಜೆ ಆದುದರಿಂದ ಅವರಿಗೆ ಮಕ್ಕಳಿರಲಿಲ್ಲ.  ಅಲ್ಲದೆ ಅವರಿಬ್ಬರೂ ಮುದುಕರಾಗಿದ್ದರು.

ಒಮ್ಮೆ ತನ್ನ ವರ್ಗದ ಸರದಿ ಬಂದಾಗ ಜಕರೀಯನು ದೇವರ ಸನ್ನಿಧಿಯಲ್ಲಿ ಯಾಜಕ ವಿಧಿಯನ್ನು ನೆರವೇರಿಸುತ್ತಿದ್ದನು.  ಮಹಾದೇವಾಲಯದ ಗರ್ಭಗುಡಿಯನ್ನು ಪ್ರವೇಶಿಸಿ ಧೂಪಾರತಿಯನ್ನು ಅರ್ಪಿಸುವ ಸರದಿಗೆ, ಯಾಜಕರ ಸಾಂಪ್ರದಾಯದ ಪ್ರಕಾರ, ಚೀಟು ಹಾಕಿದಾಗ ಅದು ಜಕರೀಯನ ಪಾಲಿಗೆ ಬಂದಿತು.  ಅಂತೆಯೇ, ಅವನು ಧೂಪಾರತಿಯನ್ನು ಅರ್ಪಿಸುತ್ತಿದ್ದಾಗ ಭಕ್ತಸಹಮೂಹವು ಹೊರಗೆ ನಿಂತು ಪ್ರಾರ್ಥನೆ ಮಾಡುತ್ತಿತ್ತು. ಆಗ ಧೂಪಪೀಠದ ಬಲಗಡೆ ಅವನಿಗೆ ದೇವದೂತನೊಬ್ಬನು ಪ್ರತ್ಯಕ್ಷನಾದನು.  ಅವನನ್ನು ಕಾಣುತ್ತಲೇ ತತ್ತರಗೊಂಡ ಜಕರೀಯನು ಭಯಭ್ರಾಂತನಾದನು. ದೂತನು ಅವನಿಗೆ, "ಜಕರೀಯಾ, ಭಯಪಡಬೇಡ!  ನಿನ್ನ ಪ್ರಾರ್ಥನೆಯನ್ನು ದೇವರು ಆಲಿಸಿದ್ದಾರೆ.  ನಿನ್ನ ಪತ್ನಿ ಎಲಿಜಬೇತಹಲ್ಲಿ ನಿನಗೆ ಒಂದು ಗಂಡು ಮಗು ಹುಟ್ಟುವುದು.  ನೀನು ಅವನಿಗೆ 'ಯೊವಾನ್ನ' ಎಂದು ನಾಮಕರಣ ಮಾಡಬೇಕು. ಆ ಮಗುವಿನ ಜನನವು ನಿಮಗೆ ಹರ್ಷಾನಂದವನ್ನು ಉಂಟುಮಾಡುವುದು; ಬಹು ಜನಕ್ಕೆ ಸಂತಸವನ್ನು ತರುವುದು.  ಸರ್ವೇಶ್ವರನ ದೃಷ್ಟಿಯಲ್ಲಿ ಅವನು ಮಹಾತ್ಮನಾಗುವನು.  ದ್ರಾಕ್ಷಾರಸವನ್ನಾಗಲಿ, ಮದ್ಯವನ್ನಾಗಲಿ ಅವನು ಸೇವಿಸನು;  ತಾಯಿಯ ಉದರದಿಂದಲೇ ಪವಿತ್ರಾತ್ಮಭರಿತನಾಗುವನು.  ಇಸ್ರಯೇಲರಲ್ಲಿ ಅನೇಕರನ್ನು ಅವರ ದೇವರಾದ ಸರ್ವೇಶ್ವರನ ಕಡೆಗೆ ಮರಳಿ ತಿರುಗಿಸುವನು.  ಎಲೀಯನಂತೆ ಶಕ್ತಿ ಪ್ರಭಾವಗಳಿಂದ ಕೂಡಿದವನಾಗಿ ಪ್ರಭುವಿನ ಮುಂದೂತನಾಗುವನು. ತಂದೆಮಕ್ಕಳನ್ನು ಪುನಃ ಒಂದಾಗಿಸುವನು.  ಸತ್ಪುರುಷರ ಸನ್ಮಾರ್ಗಕ್ಕೆ ಅವಿಧೇಯರು ಹಿಂದಿರುಗುವಂತೆ ಮಾಡುವನು.  ಹೀಗಾಗಿ ಪ್ರಭುವಿಗೆ ಯೋಗ್ಯ ಪ್ರಜೆಯನ್ನು ಸಿದ್ಧಗೊಳಿಸುವನು," ಎಂದನು. ಅದಕ್ಕೆ ಜಕರೀಯನು, "ಈ ಮಾತು ನಿಜವಾಗುವುದೆಂದು ನಾನು ತಿಳಿಯುವುದಾದರೂ ಹೇಗೆ? ನಾನೋ ಮುದುಕ; ನನ್ನ ಪತ್ನಿಗೂ ಮುಪ್ಪು ಎಂದನು. ಆಗ ದೇವದೂತನು, "ನಾನು ದೇವರ ಸನ್ನಿಧಿಯಲ್ಲಿ ಸೇವೆಮಾಡುವ ಗಾಬ್ರಿಯೇಲನ್ನು; ಈ ಶುಭ ಷಸಮಾಚಾರವನ್ನು ನಿನಗೆ ತಿಳಿಸುವುದಕ್ಕಾಗಿ ದೇವರ ಅಪ್ಪಣೆಯ ಪ್ರಕಾರ ಬಂದವನು.  ನಾನು ತಿಳಿಸಿದ ಸಂದೇಶವು ಸಕಾಲದಲ್ಲಿ ನೆರವೇರುವುದು.  ಆದರೆ ನೀನು ಅದನ್ನು ನಂಬದೆ ಹೋದ ಕಾರಣ ಅದೆಲ್ಲಾ ಈಡೇರುವ ತನಕ ಮಾತನಾಡಲಾಗದೆ ಮೂಕನಾಗಿರುವೆ," ಎಂದನು. ಇತ್ತ ಭಕ್ತಜನರು ಜಕರೀಯನಿಗಾಗಿ ಎದುರು ನೋಡುತ್ತಾ ದೇವಾಲಯದಲ್ಲಿ ಅವನು ಇಷ್ಟು ತಡಮಾಡಲು ಕಾರಣವೇನಿರಬಹುದೆಂದು ಆಶ್ಚರ್ಯಪಡುತ್ತಿದ್ದರು.  ಅಷ್ಟರಲ್ಲಿ ಜಕರೀಯನು ಹೊರಗೆ ಬಂದು ಮಾತನಾಡಲೆತ್ನಿಸಿದರೂ ಅವನ ಬಾಯಿಂದ ಮಾತೇ ಹೊರಡಲಿಲ್ಲ. ಬರೀ ಕೈಸನ್ನೆ ಮಾಡುತ್ತಿದ್ದ ಅವನಿಗೆ ದೇವಾಲಯದಲ್ಲಿ ಏನೋ ದಿವ್ಯ ದರ್ಶನ ಆಗಿರಬೇಕೆಂದು ಜನರು ಅರಿತುಕೊಂಡರು. ಅಂದಿನಿಂದ ಅವನು ಮೂಕನಾಗಿಯೇ ಇದ್ದನು. ತನ್ನ ಯಾಜಕ ಸೇವಾಸರದಿಯು ಮುಗಿದ ನಂತರ ಜಕರೀಯನು ಮನೆಗೆ ಹಿಂದಿರುಗಿ ಹೋದನು. ಕೆಲವು ದಿನಗಳಾದ ಬಳಿಕ ಅವನ ಪತ್ನಿ ಎಲಿಜಬೇತಳು ಗರ್ಭಿಣಿಯಾಗಿ, ಐದು ತಿಂಗಳು ಮನೆಯಲ್ಲಿ ಮರೆಯಾಗಿದ್ದಳು. 'ಕಟ್ಟಕಡೆಗೆ ಸರ್ವೇಶ್ವರ ನನಗೆ ಕರುಣೆ ತೋರಿದ್ದಾರೆ; ಜನರ ನಡುವೆ ನನಗಿದ್ದ ಅವಮಾನವನ್ನು ತೊಲಗಿಸಿದ್ದಾರೆ,' ಎಂದುಕೊಳ್ಳುತ್ತಿದ್ದಳು.

ಪ್ರಭುವಿನ ಶುಭಸಂದೇಶ

18.12.25 - "ದಾವೀದ ವಂಶದ ಜೋಸೆಫನೇ, ಮರಿಯಳನ್ನು ನಿನ್ನ ಪತ್ನಿಯನ್ನಾಗಿ ಸ್ವೀಕರಿಸಲು ಅಂಜಬೇಡ. ಆಕೆ ಗರ್ಭಧರಿಸಿರುವುದು ಪವಿತ್ರಾತ್ಮ ಪ್ರಭಾವದಿಂದಲೇ. ಆಕೆ ಒಬ್ಬ ಮಗನನ್ನು ಹೆರುವಳು

ಪ್ರವಾದಿ ಯೆರೆಮಿಯ ಗ್ರಂಥದಿಂದ ಇಂದಿನ ವಾಚನ: 23:5-8

ಸರ್ವೇಶ್ವರ ಹೇಳುವುದನ್ನು ಗಮನಿಸಿರಿ:  "ದಿನಗಳು ಬರಲಿವೆ; ಆಗ ನಾನು ದಾವೀದನೆಂಬ ಮೂಲದಿಂದ ಒಂದು 'ಮೊಳಕೆ'ಯನ್ನು ಚಿಗುರಿಸುವೆನು. ಆತ ಸತ್ಪುರುಷ; ರಾಜನಾಗಿ ಆಳುವನು.  ವಿವೇಕದಿಂದ ಕಾರ್ಯಸಾಧಿಸುವನು.  ಧರೆಯಲ್ಲಿ ನ್ಯಾಯನೀತಿಯನ್ನು ನಿರ್ವಹಿಸುವನು.  ಆತನ ಕಾಲದಲ್ಲಿ ಯೆಹೂದ್ಯರು ಸುರಕ್ಷಿತವಾಗಿ ಇರುವರು. ಇಸ್ರಯೇಲರು ನೆಮ್ಮದಿಯಿಂದ ಬಾಳುವರು.  'ಯೆಹೋವ ಚಿದ್ಕೇನು' (ಎಂದರೆ 'ಸರ್ವೇಶ್ವರನೇ ನಮ್ಮ ಸದ್ಧರ್ಮ,') ಎಂಬ ಹೆಸರು ಆತನಿಗಿರುವುದು.  "ಬರಲಿರುವ ಆ ಕಾಲದಲ್ಲಿ ಜನರು, 'ಇಸ್ರಯೇಲರನ್ನು ಈಜಿಪ್ಟ್ ದೇಶದಿಂದ ಉದ್ಧರಿಸಿದ ಸರ್ವೇಶ್ವರನ ಜೀವದಾಣೆ'  ಎಂದು ಪ್ರಮಾಣ ಮಾಡುವ ಪದ್ಧತಿಯನ್ನು ಬಿಟ್ಟುಬಿಡುವರು.  ಬದಲಿಗೆ  'ಇಸ್ರಯೇಲ್ ಮನೆತನವೆಂಬ ಸಂತಾನವನ್ನು ಉತ್ತರ ನಾಡಿನಿಂದಲೂ ಅವರನ್ನು ತಳ್ಳಲಾಗಿದ್ದ ಸಕಲ ಸೀಮೆಗಳಿಂದಲೂ ಬರಮಾಡಿ ಉದ್ಧರಿಸಿದ ಸರ್ವೇಶ್ವರನ ಜೀವದಾಣೆ' ಎಂದು ಪ್ರಮಾಣ ಮಾಡುವರು.  ಅವರು ಸ್ವಂತ ನಾಡಿನಲ್ಲಿ ಸುಖವಾಗಿ ಬಾಳುವರು." ಇದು ಸರ್ವೇಶ್ವರನಾದ ನನ್ನ ನುಡಿ."

ಪ್ರಭುವಿನ ವಾಕ್ಯ
ದೇವರಿಗೆ ಕೃತಜ್ಞತೆ ಸಲ್ಲಲಿ

ಕೀರ್ತನೆ
72:1-2,12-13,18-19, v. 7

ಶ್ಲೋಕ:  ಬೆಳೆಯಲಿ ಆತನ ಪಾಲನೆಯಲಿ ನ್ಯಾಯನೀತಿ | ಬೆಳಗಲಿ ಚಂದ್ರನಂತೆ ಸದಾ ಸಂಪೂರ್ಣ ಶಾಂತಿ ||

1.  ತಿಳಿಸು ನಿನ್ನ ನ್ಯಾಯವನು ದೇವಾ, ರಾಜನಿಗೆ|
ಕಲಿಸು ನಿನ್ನ ನೀತಿಯನು ರಾಜಕುವರನಿಗೆ||
ಆತನಾಳಲಿ ನಿನ್ನ ಪ್ರಜೆಯನು ನೀತಿಯಿಂದ|
ಪರಿಪಾಲಿಸಲಿ ದೀನದಲಿತರನು ನ್ಯಾಯದಿಂದ||
ಶ್ಲೋಕ

2.  ಏಕೆನೆ ಕಾಪಾಡುವನಾತ ಮೊರೆಯಿಡುವ ಬಡವರನು|
ಉದ್ಧರಿಸುವನಾತ ದಿಕ್ಕಿಲ್ಲದ ದೀನದಲಿತರನು||
ದೀನದರಿದ್ರರಿಗೆ ದಯೆಯ ತೋರುವನು|
ಬಡವರ ಪ್ರಾಣವನು ಕಾಪಾಡುವನು||
ಶ್ಲೋಕ

3.  ಸ್ತುತ್ಯರ್ಹನು ಸ್ವಾಮಿ ದೇವನು, ಇಸ್ರಯೇಲರ ದೇವನು|
ಆತನೋರ್ವನೇ ಮಹತ್ಕಾರ್ಯಗಳನು ಎಸಗುವಂಥವನು||
ಮಹಿಮಾಯುಕ್ತ ಆತನ ನಾಮಕೆ ಸದಾಕಾಲವು ಸ್ತುತಿ|
ಆಮೆನ್, ಆಮೆನ್, ಭೂಮಂಡಲವೆಲ್ಲಾ ಆತನ ಪ್ರಭಾವ ಪೂರ್ತಿ||
ಶ್ಲೋಕ

ಘೋಷಣೆ

ಅಲ್ಲೆಲೂಯ, ಅಲ್ಲೆಲೂಯ!
ಇಸ್ರಯೇಲ್ ಮನೆತನವನ್ನು ಆಳುವ ಓ ಅಧಿಪತಿಯೇ, | ಸಿನಾಯ್ ಪರ್ವತದ ಮೇಲೆ ಮೋಶೆಗೆ ನ್ಯಾಯಶಾಸ್ತ್ರವನ್ನು ಕೊಟ್ಟವರೇ ನಮ್ಮನ್ನು ರಕ್ಷಿಸಲು ಬೇಗನೆ ಬನ್ನಿ||
ಅಲ್ಲೆಲೂಯ!

ಶುಭಸಂದೇಶ

ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 1:18-24

ಕ್ರಿಸ್ತ ಯೇಸುವಿನ ಜನನದ ಪ್ರಕರಣ: ಯೇಸುವಿನ ತಾಯಿ ಮರಿಯಳಿಗೂ ಜೋಸೆಫನಿಗೂ ನಿಶ್ಚಿತಾರ್ಥವಾಗಿತ್ತು.  ಅವರಿಬ್ಬರೂ ಕೂಡಿ ಬಾಳುವುದಕ್ಕೆ ಮುಂಚೆಯೇ ಮರಿಯಳು ಗರ್ಭವತಿಯಾಗಿರುವುದು ತಿಳಿದುಬಂತು.  ಆಕೆ ಗರ್ಭಧರಿಸಿದ್ದು ಪವಿತ್ರಾತ್ಮ ಪ್ರಭಾವದಿಂದ.  ಆಕೆಯ ಪತಿ ಜೋಸೆಫನು ನೀತಿವಂತನು.  ಮರಿಯಳನ್ನು ಅವಮಾನಕ್ಕೆ ಗುರಿಮಾಡುವ ಉದ್ದೇಶ ಅವನದಲ್ಲವಾದ್ದರಿಂದ ಯಾರಿಗೂ ತಿಳಿಯದ ಹಾಗೆ ನಿಶ್ಚಿತಾರ್ಥವನ್ನು ಮುರಿದುಬಿಡಬೇಕೆಂದಿದ್ದನು. ಆತನು ಈ ಕುರಿತು ಆಲೋಚಿಸುತ್ತಿದ್ದಂತೆ, ದೇವದೂತನು ಕನಸಿನಲ್ಲಿ ಕಾಣಿಸಿಕೊಂಡು, "ದಾವೀದ ವಂಶದ ಜೋಸೆಫನೇ, ಮರಿಯಳನ್ನು ನಿನ್ನ ಪತ್ನಿಯನ್ನಾಗಿ ಸ್ವೀಕರಿಸಲು ಅಂಜಬೇಡ. ಆಕೆ ಗರ್ಭಧರಿಸಿರುವುದು ಪವಿತ್ರಾತ್ಮ ಪ್ರಭಾವದಿಂದಲೇ.  ಆಕೆ ಒಬ್ಬ ಮಗನನ್ನು ಹೆರುವಳು. ಆತನಿಗೆ ನೀನು 'ಯೇಸು'  ಎಂಬ ಹೆಸರಿಡಬೇಕು.  ಏಕೆಂದರೆ ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸಿ ಉದ್ಧಾರಮಾಡುವವನು ಆತನೇ!" ಎಂದನು. "ಇಗೋ, ಕನ್ಯೆಯೊಬ್ಬಳು ಗರ್ಭತಳೆದು ಪುತ್ರನೊಬ್ಬನನ್ನು ಪ್ರಸವಿಸುವಳು,  'ಇಮ್ಮಾನುವೇಲ್'  ಎಂದು ಆತನಿಗೆ ಹೆಸರಿಡುವರು"  ಎಂಬುದಾಗಿ ಪ್ರವಾದಿಯ ಮುಖಾಂತರ ಸರ್ವೇಶ್ವರ ಹೇಳಿದ ಪ್ರವಚನ ನೆರವೇರುವಂತೆ ಇದೆಲ್ಲಾ ಸಂಭವಿಸಿತು.  'ಇಮ್ಮಾನುವೇಲ್' ಎಂದರೆ 'ದೇವರು ನಮ್ಮೊಡನೆ ಇದ್ದಾರೆ' ಎಂದು ಅರ್ಥ. ಆಗ ಜೋಸೆಫನು ಎಚ್ಚೆತ್ತು ದೇವದೂತನ ಆಜ್ಞೆಯ ಪ್ರಕಾರ ಮರಿಯಳನ್ನು ವಿವಾಹ ಮಾಡಿಕೊಂಡನು.

17.12.2025 - ದಾವೀದನಿಂದ ಬಾಬಿಲೋನಿನ ದಾಸ್ಯ ದಿನಗಳವರೆಗೆ ಹದಿನಾಲ್ಕು, ಬಾಬಿಲೋನಿನ ದಾಸ್ಯ ದಿನಗಳಿಂದ ಕ್ರಿಸ್ತರವರೆಗೆ ಹದಿನಾಲ್ಕು ತಲೆಮಾರುಗಳು.

ಮೊದಲನೆಯ ವಾಚನ :ಆದಿಕಾಂಡದಿಂದ ಇಂದಿನ ವಾಚನ 49:2,8-10


ಯಕೋಬನ ಮಕ್ಕಳೇ, ಕೂಡಿ ಬಂದು ಕೇಳಿ ನೀವೆಲ್ಲರು, ಆಲಿಸಿ ನಿಮ್ಮ ತಂದೆ ಇಸ್ರಯೇಲನ ಮಾತನ್ನು:  ಯೆಹೂದನೇ,  ವಂದಿಸುವರು ಸಹೋದರರು, ನಿನ್ನ ಕೈಯಲ್ಲಿರುವುದು ಶತ್ರುಗಳ ಕುತ್ತಿಗೆಯು; ಎರಗುವರು ನಿನಗೆ ನಿನ್ನ ಅಣ್ಣತಮ್ಮಂದಿರು.  ನನ್ನ ಪುತ್ರ ಯೆಹೂದ, ನೀ ಪ್ರಾಯದ ಸಿಂಹದಂತೆ, ಬೇಟೆ ಹಿಡಿದು ಬೆಟ್ಟ ಏರಿದ ಕಂಠೀರವನಂತೆ;  ಕಾಲು ಮಡಿಚಿ ಹೊಂಚುಕೂತ ಕೇಸರಿಯಂತೆ. ಈ ಸಿಂಹಣಿಯನ್ನು ಕೆಣಕುವ ಕೆಚ್ಚು ಯಾರಿಗಿದೆ?  ರಾಜ್ಯಾಧಿಕಾರ ಪಡೆದವನು ಬರುವ ತನಕ; ರಾಷ್ಟ್ರಗಳು ಆತನಿಗೆ ತಲೆಬಾಗುವ ತನಕ; ತಪ್ಪದು ರಾಜದಂಡ ಯೆಹೂದನ ಕೈಯಿಂದ, ಕದಲದು ಮುದ್ರೆ ಕೋಲು ಅವನ ವಂಶದಿಂದ.

ಕೀರ್ತನೆ - 72:1-2,3-4,7-8,17, v. 7

ಶ್ಲೋಕ:  ಬೆಳೆಯಲಿ ಆತನ ಪಾಲನೆಯಲಿ ನ್ಯಾಯನೀತಿ | ಬೆಳಗಲಿ ಚಂದ್ರನಂತೆ ಸದಾ ಸಂಪೂರ್ಣ ಶಾಂತಿ ||


1.  ತಿಳಿಸು ನಿನ್ನ ನ್ಯಾಯವನು ದೇವಾ, ರಾಜನಿಗೆ|

ಕಲಿಸು ನಿನ್ನ ನೀತಿಯನು ರಾಜಕುವರನಿಗೆ||

ಆತನಾಳಲಿ ನಿನ್ನ ಪ್ರಜೆಯನು ನೀತಿಯಿಂದ|

ಪರಿಪಾಲಿಸಲಿ ದೀನದಲಿತರನು ನ್ಯಾಯದಿಂದ||

ಶ್ಲೋಕ


2.  ಬೆಟ್ಟಗುಡ್ಡಗಳಿಂದ ಬರಲಿ ಸಮೃದ್ದಿ|

ನಿನ್ನ ಪ್ರಜೆಗೆ ಫಲಿಸಲಿ ನ್ಯಾಯನೀತಿ||

ದೀನದಲಿತರನಾತ ಉದ್ಧರಿಸಲಿ|

ಬಡಬಗ್ಗರಿಗೆ ನ್ಯಾಯ ದೊರಕಿಸಲಿ||

ಶ್ಲೋಕ


3.  ಬೆಳೆಯಲಿ ಆತನ ಪಾಲನೆಯಲಿ ನ್ಯಾಯನೀತಿ|

ಬೆಳಗಲಿ ಚಂದ್ರನಂತೆ ಸದಾ ಸಂಪೂರ್ಣ ಶಾಂತಿ||

ಸಾಗರದಿಂದ ಸಾಗರದವರೆಗಿರಲಿ ಆತನ ಆಧಿಪತ್ಯ|

ಮಹಾ ನದಿಯಿಂದ ಬುವಿ ಎಲ್ಲೆಯವರೆಗಿರಲಿ ಆತನ ಪ್ರಭುತ್ವ||

ಶ್ಲೋಕ


4.  ಶಾಶ್ವತವಾಗಲಿ ಶ್ರೀನಾಮ ಆತನಿಗೆ|

ಬೆಳಗಲಿ ಆತನ ಕೀರ್ತಿ ಸೂರ್ಯನಿರುವವರೆಗೆ||

ಆತನಾಶೀರ್ವಾದ ಕೋರಲಿ ಸರ್ವರು ತಮಗೆ|

ಶುಭವೆನ್ನಲಿ ಸಕಲ ರಾಷ್ಟ್ರಗಳು ಆತನಿಗೆ||

ಶ್ಲೋಕ


ಘೋಷಣೆ : ಅಲ್ಲೆಲೂಯ, ಅಲ್ಲೆಲೂಯ!

ಸಕಲವನ್ನು ಶಕ್ತಿಯಿಂಲೂ, ದಯೆಯಿಂದಲೂ, ಆಳುವ ಮಹೋನ್ನತರ ಜ್ಞಾನವೇ| ಬಂದು ನಮಗೆ ಸತ್ಯದ ಮಾರ್ಗವನ್ನು ತಿಳಿಸಿರಿ ||

ಅಲ್ಲೆಲೂಯ!


ಶುಭಸಂದೇಶ : ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 1:1-17


ಅಬ್ರಹಾಮನ ಮನೆತನಕ್ಕೆ ಸೇರಿದ ದಾವೀದ ಕುಲದ ಯೇಸು ಕ್ರಿಸ್ತರ ವಂಶಾವಳಿ:  ಅಬ್ರಹಾಮನಿಗೆ ಇಸಾಕನು, ಇಸಾಕನಿಗೆ ಯಕೋಬನು, ಯಕೋಬನಿಗೆ ಯೂದ ಹಾಗೂ ಆತನ ಸಹೋದರರು ಹುಟ್ಟಿದರು.  ಯೂದನಿಗೆ ತಾಮರ ಎಂಬವಳಿಂದ, ಪೆರಸ್ ಹಾಗೂ ಜೆರಹನ್ ಹುಟ್ಟಿದರು.  ಪೆರಸನಿಗೆ ಹೆಸ್ರೋನ್, ಹೆಸ್ರೋನನಿಗೆ ರಾಮ್, ರಾಮನಿಗೆ ಅಮ್ಮಿನದಾಬ್, ಅಮ್ಮಿನದಾಬನಿಗೆ ನಹಸ್ಸೋನ್, ಸಹಸ್ಸೋನನಿಗೆ ಸಲ್ಮೋನ್, ಸಲ್ಮೋನನಿಗೆ ರಹಾಬ್ ಎಂಬವಳಿಂದ ಬೋವಜ್, ಬೋವಜನಿಗೆ ರೂತ್ ಎಂಬವಳಿಂದ ಓಬೇದ್, ಓಬೇದನಿಗೆ ಜೆಸ್ಸೆಯ, ಜೆಸ್ಸೆಯನಿಗೆ ದಾವೀದರಸನು ಹುಟ್ಟಿದರು.  ದಾವೀದನಿಗೆ ಊರಿಯನ ಹೆಂಡತಿಯಿಂದ ಸೊಲೋಮೋನ್, ಸೊಲೊಮೋನನಿಗೆ ರೆಹಬ್ಬಾಮ, ರೆಹಬ್ಬಾಮನಿಗೆ ಅಬೀಯ, ಅಬೀಯನಿಗೆ ಆಸನ್ ಹುಟ್ಟಿದರು.  ಆಸನನಿಗೆ ಯೋಸೆಫಾತ್, ಯೋಸೆಫಾತನಿಗೆ ಯೆಹೋರಾಮ್, ಯೆಹೋರಾಮನಿಗೆ ಉಜ್ಜೀಯ ಹುಟ್ಟಿದರು.  ಉಜ್ಜೀಯನಿಗೆ ಯೋತಾಮ್, ಯೋತಾಮನಿಗೆ ಅಹಾಜ್, ಅಹಾಜನಿಗೆ ಹಿಜ್ಕೀಯನು ಹುಟ್ಟಿದರು.  ಹಿಜ್ಕೀಯನಿಗೆ ಮನಸ್ಸೆ, ಮನಸ್ಸೆಗೆ ಆಮೋನ್, ಆಮೋನನಿಗೆ ಯೋಷೀಯ ಹುಟ್ಟಿದರು.  ಯೋಷೀಯನಿಗೆ ಯೆಕೊನ್ಯ ಮತ್ತು ಅವನ ಸಹೋದರರು ಹುಟ್ಟಿದರು. ಈ ಸಮಯದಲ್ಲೇ ಇಸ್ರಯೇಲರನ್ನು ಬಾಬಿಲೋನಿಗೆ ಸೆರೆ ಒಯ್ದದ್ದು.  ಬಾಬಿಲೋನಿಗೆ ಸೆರೆಹೋದ ದಾಸ್ಯ ದಿನಗಳು ಮುಗಿದ ಮೇಲೆ ಯೆಕೊನ್ಯನಿಗೆ ಸಲಥಿಯೇಲ್, ಸಲಥಿಯೇಲನಿಗೆ ಜೆರುಬಾಬೆಲ್, ಜೆರುಬಾಬೆಲನಿಗೆ ಅಬೀಹೂದ್, ಅಬೀಹೂದನಿಗೆ ಎಲ್ಯಕೀಮ್, ಎಲ್ಯಕೀಮನಿಗೆ ಅಜೋರ್ ಹುಟ್ಟಿದರು.  ಅಜೋರನಿಗೆ ಸದೋಕ್, ಸದೋಕನಿಗೆ ಅಖೀಮ್, ಅಖೀಮನಿಗೆ ಎಲಿಹೂದ್ ಎಲಿಹೂದನಿಗೆ ಎಲಿಯಾಜರ್, ಎಲಿಯಾಜರನಿಗೆ ಮತ್ತಾನ್, ಮತ್ತಾನನಿಗೆ ಯಕೋಬ್ ಹುಟ್ಟಿದರು.  ಯಕೋಬನಿಗೆ ಮರಿಯಳ ಪತಿಯಾದ ಜೋಸೆಫನು ಹುಟ್ಟಿದನು. ಈ ಮರಿಯಳಿಂದಲೇ "ಕ್ರಿಸ್ತ" ಎಂದು ಕರೆಯಲಾಗುವ ಯೇಸು ಹುಟ್ಟಿದ್ದು; ಹೀಗೆ ಒಟ್ಟು, ಅಬ್ರಹಾಮನಿಂದ ದಾವೀದನವರೆಗೆ ಹದಿನಾಲ್ಕು, ದಾವೀದನಿಂದ ಬಾಬಿಲೋನಿನ ದಾಸ್ಯ ದಿನಗಳವರೆಗೆ ಹದಿನಾಲ್ಕು, ಬಾಬಿಲೋನಿನ ದಾಸ್ಯ ದಿನಗಳಿಂದ ಕ್ರಿಸ್ತರವರೆಗೆ ಹದಿನಾಲ್ಕು ತಲೆಮಾರುಗಳು.


ಪ್ರಭುವಿನ ಶುಭಸಂದೇಶ,

ಕ್ರಿಸ್ತರೇ ನಿಮಗೆ ಸ್ತುತಿ ಸಲ್ಲಲಿ

16.12.2025 - "ಸುಂಕದವರೂ ವೇಶ್ಯೆಯರೂ ನಿಮಗಿಂತ ಮೊದಲೇ ದೇವರ ಸಾಮ್ರಾಜ್ಯವನ್ನು ಪ್ರವೇಶಿಸುವರು ಎಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ.

ಮೊದಲನೆಯ ವಾಚನ : ಪ್ರವಾದಿ ಜೆಫನ್ಯನ ಗ್ರಂಥದಿಂದ ಇಂದಿನ ವಾಚನ: 3:1-2,9-13


ದಬ್ಬಾಳಿಕೆ ನಡೆಸುವ, ದಂಗೆಯೇಳುವ ದುಷ್ಟ ನಗರಕ್ಕೆ ಧಿಕ್ಕಾರ! ಅದು ಯಾರ ಬುದ್ಧಿಮಾತಿಗೂ ಕಿವಿಗೊಡಲಿಲ್ಲ, ಶಿಕ್ಷಣಕ್ಕೆ ಒಳಪಡಲಿಲ್ಲ.  ಸರ್ವೇಶ್ವರಸ್ವಾಮಿಯಲ್ಲಿ ಭರವಸೆ ಇಡಲಿಲ್ಲ, ತನ್ನ ದೇವರ ಸನ್ನಿಧಿಗೆ ಬರಲಿಲ್ಲ. ಆಗ ಎಲ್ಲರು ಒಮ್ಮನಸ್ಸಿನಿಂದ ನನ್ನನ್ನು ಪೂಜಿಸಿ ನನ್ನ ಹೆಸರೆತ್ತಿ ಪ್ರಾರ್ಥಿಸುವಂತೆ ಜನಾಂಗಗಳ ಬಾಯನ್ನು ಪರಿವರ್ತಿಸಿ ಶುದ್ಧೀಕರಿಸುವೆನು.  ಚದರಹೋಗಿರುವ ನನ್ನ ಜನರು, ನನ್ನ ಭಕ್ತಾದಿಗಳು, ಸುಡಾನಿನ ನದಿಗಳ ಆಚೆಯಿಂದಲೂ ನನಗೆ ಕಾಣಿಕೆಯನ್ನು ತಂದೊಪ್ಪಿಸುವರು.  ನೀನು ನನಗೆ ಎದುರಾಗಿ ದಂಗೆಯೆದ್ದು ಮಾಡಿದ ನಾನಾ  ದುಷ್ಕ್ರತ್ಯಗಳಿಗಾಗಿ ಆ ದಿನದಂದು ನೀನು ನಾಚಿಕೆಪಡುವ ಅವಶ್ಯಕತೆ ಇರುವುದಿಲ್ಲ.  ಏಕೆಂದರೆ ಅತಿ ಗರ್ವದಿಂದ ಮೆರೆಯುವವರನ್ನು ನಿನ್ನ ಮಧ್ಯೆಯಿಂದ ತೊಲಗಿಸಿಬಿಡುವೆನು.  ಅಂದಿನಿಂದ ನನ್ನ ಪವಿತ್ರ ಪರ್ವತದ ಮೇಲೆ ನೀನು ಗರ್ವಪಡದೆ ಬಾಳುವೆ. ದೀನರೂ ನಮ್ರರೂ ಆದ ಜನರನ್ನು ನಿನ್ನಲ್ಲಿ ಉಳಿಸುವೆನು.  ಅವರು ಪ್ರಭುವಿನ ನಾಮದಲ್ಲಿ ಭಯಭಕ್ತಿಯಿಂದಿರುವರು‌.  ಇಸ್ರಯೇಲಿನಲ್ಲಿ ಅಳಿದುಳಿದವರು ಅನ್ಯಾಯಮಾಡರು, ಸುಳ್ಳಾಡರು. ಅವರ ಬಾಯಲ್ಲಿ ಮೋಸವಿರದು.  ಕುರಿಮಂದೆಯಂತೆ ಮೇದು ಸುರಕ್ಷಿತವಾಗಿರುವರು.  ಅವರನ್ನು ಯಾರೂ ಹೆದರಿಸರು.

 - ಪ್ರಭುವಿನ ವಾಕ್ಯ

ದೇವರಿಗೆ ಕೃತಜ್ಞತೆ ಸಲ್ಲಲಿ


ಕೀರ್ತನೆ : 34 : 1-2,5-6, 16-17, 18,22, v. 6

ಶ್ಲೋಕ:  ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು.


1.  ಪ್ರಭುವನು ನಾ ಕೊಂಡಾಡುವೆ ಎಲ್ಲ ಕಾಲದೊಳು|

ಆತನ ಸ್ತುತಿ ಸದಾ ಇಹುದು ನನ್ನ ಬಾಯೊಳು||

ಪ್ರಭುವಿನಲ್ಲಿದೆ ನನ್ನ ಮನದಭಿಮಾನ|

ದೀನರಿದನು ಕೇಳಿ ಪಡೆಯಲಿ ಸುಮ್ಮಾನ||

ಶ್ಲೋಕ


2.  ಆತನತ್ತ ತಿರುಗಿದ ಮುಖ ಅರಳುವುದು|

ಲಜ್ಜೆಯಿಂದೆಂದಿಗು ಕುಂದಿಹೋಗದು||

ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು|

ಸರ್ವಾಪತ್ತಿನಿಂದವನು ಮುಕ್ತಗೊಂಡನು||

ಶ್ಲೋಕ


3.  ದುರ್ಜನರಿಗಾದರೋ ಪ್ರಭು ವಿಮುಖನು|

ಅವರ ಹೆಸರನು ಧರೆಯಿಂದ ಅಳಿಸುವನು||

ಕಿವಿಗೊಡುವನು ಪ್ರಭು ಸಜ್ಜನರ ಮೊರೆಗೆ|

ನೆರವೀವನವರ ಕಷ್ಟನಿವಾರಣೆಗೆ||

ಶ್ಲೋಕ


4.  ಸನಿಹದಲ್ಲಿಹನು ಪ್ರಭು ಭಗ್ನ ಹೃದಯಿಗಳಿಗೆ|

ಉದ್ಧಾರಕನಾತನು ಮನಸ್ಸು ಕುಗ್ಗಿದವರಿಗೆ||

ತನ್ನ ದಾಸರನು ಉದ್ಧಾರ ಮಾಡದಿರನು ಪ್ರಭು|

ತನ್ನ ಶರಣರೊಳೊಬ್ಬರನು ದಂಡಿಸನಾ ವಿಭು||

ಶ್ಲೋಕ


ಘೋಷಣೆ

ಅಲ್ಲೆಲೂಯ, ಅಲ್ಲೆಲೂಯ!

ಇಗೋ, ಸರ್ವೇಶ್ವರಸ್ವಾಮಿ ತಮ್ಮ ಜನರನ್ನು ರಕ್ಷಿಸಲು ಬರುತ್ತಿದ್ದಾರೆ | ಅವರನ್ನು ಸ್ವೀಕರಿಸಲು ಸಿದ್ಧರಿರುವವರು ಧನ್ಯರು ||

ಅಲ್ಲೆಲೂಯ!


ಶುಭಸಂದೇಶ

ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ: 21:28-32


ಆ ಕಾಲದಲ್ಲಿ ಯೇಸು ಮುಖ್ಯ ಯಾಜಕರನ್ನೂ ಪ್ರಜಾಪ್ರಮುಖರನ್ನೂ ಉದ್ದೇಶಿಸಿ ಹೀಗೆಂದರು:"ಈ ಬಗ್ಗೆ ನಿಮಗೇನು ಅನಿಸುತ್ತದೆ?  ಒಬ್ಬಾತನಿಗೆ ಇಬ್ಬರು ಮಕ್ಕಳಿದ್ದರು. ಒಮ್ಮೆ ಆತ ಮೊದಲನೆಯ ಮಗನ ಹತ್ತಿರ ಬಂದು, 'ಮಗನೇ, ಈ ಹೊತ್ತು ದ್ರಾಕ್ಷಿ ತೋಟಕ್ಕೆ ಹೋಗಿ ಕೆಲಸಮಾಡು' ಎಂದ.  ಅದಕ್ಕೆ ಅವನು, 'ನಾನು ಹೋಗುವುದಿಲ್ಲ' ಎಂದು ಉತ್ತರವಿತ್ತ.  ಆದರೂ ಅನಂತರ ಪಶ್ಚಾತ್ತಾಪಪಟ್ಟು ಅವನು ತೋಟಕ್ಕೆ ಹೋದ. ತಂದೆ ಎರಡನೆಯ ಮಗನ ಹತ್ತಿರ ಹೋಗಿ ಅಂತೆಯೇ ತೋಟಕ್ಕೆ ಹೋಗಲು ಹೇಳಿದ.  ಅವನು, 'ಇಗೋ, ಹೋಗುತ್ತೇನಪ್ಪಾ' ಎಂದು ಹೇಳಿದ, ಆದರೆ ಹೋಗಲೇ ಇಲ್ಲ. ಇವರಿಬ್ಬರಲ್ಲಿ ತಂದೆಯ ಇಷ್ಟದಂತೆ ನಡೆದವನು ಯಾರು? "ಎಂದು ಯೇಸು ಕೇಳಿದರು.  "ಮೊದಲನೆಯ ಮಗನೇ," ಎಂದು ಉತ್ತರಿಸಿದರು ಅವರು. ಆಗ ಯೇಸು, "ಸುಂಕದವರೂ ವೇಶ್ಯೆಯರೂ ನಿಮಗಿಂತ ಮೊದಲೇ ದೇವರ ಸಾಮ್ರಾಜ್ಯವನ್ನು ಪ್ರವೇಶಿಸುವರು ಎಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ. ಸ್ನಾನಿಕ ಯೊವಾನ್ನನು ಧರ್ಮಮಾರ್ಗವನ್ನು ತೋರಿಸಲು ಬಂದನು. ನೀವು ಆತನನ್ನು ನಂಬಲಿಲ್ಲ.  ಆದರೆ ಸುಂಕದವರೂ ವೇಶ್ಯೆಯರೂ ಆತನನ್ನು ನಂಬಿದರು.  ಇದನ್ನು ಕಂಡ ಮೇಲೂ ನೀವು ಪಶ್ಚಾತ್ತಾಪ ಪಡಲಿಲ್ಲ,  ಯೊವಾನ್ನನನ್ನು ನಂಬಲೂ ಇಲ್ಲ."

ಪ್ರಭುವಿನ ಶುಭಸಂದೇಶ

ಕ್ರಿಸ್ತರೇ ನಿಮಗೆ ಸ್ತುತಿ ಸಲ್ಲಲಿ

14.12.25 - "ದೇವರೇ, ನೀವೇ ಬಂದು ನಮ್ಮನ್ನು ಕಾಪಾಡಿ!"

ಮೊದಲನೇ ವಾಚನ: ಯೆಶಾಯ 35:1-6, 10


ಆನಂದಿಸಲಿ ಅರಣ್ಯವೂ ಮರುಭೂಮಿಯೂ, ಹೂಗಳಂತೆ ಅರಳಿ ಹರ್ಷಿಸಲಿ ಒಣ ನೆಲವು. ಉಲ್ಲಾಸಿಸಲಿ ಅದು ಹುಲುಸಾಗಿ ಹೂಬಿಟ್ಟು; ಹೌದು, ಸಂತಸ ಸಂಗೀತ ಹಾಡುವಷ್ಟು, ದೊರಕಲಿ ಅದಕ್ಕೆ ಲೆಬನೋನಿನ ಮಹಿಮೆಯು, ಕರ್ಮೆಲಿನ ಮತ್ತು ಶಾರೋನಿನ ವೈಭವವು. ಕಾಣುವುವು ಸರ್ವೇಶ್ವರನ ಮಹಿಮೆಯನು; ನೋಡುವುವು ಇವೆಲ್ಲ ನಮ್ಮ ದೇವರ ವೈಭವವನು. ಜೋಲುಬಿದ್ದ ಕೈಗಳನ್ನು ಬಲಗೊಳಿಸಿರಿ, ನಡುಗುವ ಕಾಲುಗಳನ್ನು ದೃಢಗೊಳಿಸಿರಿ. ಚಂಚಲ ಹೃದಯರಿಗೆ ಹೀಗೆಂದು ಹೇಳಿ: "ಭಯಪಡಬೇಡಿ, ಎದೆಗುಂದಬೇಡಿ, ಬರುವನು ಆ ದೇವನು ಮುಯ್ಯಿತೀರಿಸಲು, ಬರುವನು ಆ ದೇವನು ಪ್ರತಿಕಾರವೆಸಗಲು; ತಾನೇ ಬರುವನು ನಿಮ್ಮನ್ನು ರಕ್ಷಿಸಲು," ಕುರುಡರ ಕಣ್ಣು ಕಾಣುವುದಾಗ, ಕಿವುಡರ ಕಿವಿ ತೆರೆಯುವುದಾಗ, ಜಿಗಿಯುವನು ಕುಂಟನು ಜಿಂಕೆಯಂತೆ ಹಾಡುವುದು ಮೂಕನ ನಾಲಿಗೆ ಹರ್ಷಗೀತೆ. ಒರತೆಗಳು ಒಡೆಯುವುವು ಅರಣ್ಯದಲಿ, ನದಿಗಳು ಹುಟ್ಟಿ ಹರಿಯುವುವು ಒಣನೆಲದಲಿ. ಹಿಂದಿರುಗುವರು ಸರ್ವೇಶ್ವರನಿಂದ ವಿಮೋಚನೆ ಪಡೆದವರು ಜಯಜಯಕಾರದೊಂದಿಗೆ ಸಿಯೋನನು ಸೇರುವರು, ನಿತ್ಯಾನಂದ ಸುಖವಿರುವುದು ಕಿರೀಟಪ್ರದವಾಗಿ,  ಸಿಗುವುದವರಿಗೆ ಹರ್ಷಾನಂದದ ಸವಿ, ತೊಲಗುವುದು ದುಃಖದುಗುಡದ ಕಹಿ.

ಕೀರ್ತನೆ: 146:6b-7, 8-9a, 9bc-10

ಶ್ಲೋಕ: ದೇವರೇ, ನೀವೇ ಬಂದು ನಮ್ಮನ್ನು ಕಾಪಾಡಿ!

1.  ಕೊಟ್ಟ ವಾಗ್ದಾನಗಳನು ತಪ್ಪದೆ ನೆರವೇರಿಸುವವ ಆತನೇ |
    ದೊರಕಿಸುವನು ನ್ಯಾಯ ದಲಿತರಿಗೆ ||
    ಒದಗಿಸುವನು ಆಹಾರ ಹಸಿದವರಿಗೆ |
    ನೀಡುವನು ಬಿಡುಗಡೆ ಬಂಧಿತರಿಗೆ ||

2.  ಕಣ್ಣನ್ನೀಯುವನು ಪ್ರಭು ಕುರುಡರಿಗೆ |
    ಉದ್ದಾರಕನಾ ಪ್ರಭು ಕುಗ್ಗಿದವರಿಗೆ ||
    ರಕ್ಷಿಸುವನು ಪ್ರಭು ಪರದೇಶಿಗಳನು |
    ಆದರಿಸುವನು ಅನಾಥರನು, ವಿಧವೆಯರನು ||

3.  ಆತನ ಬಲವಿರುವುದು ಸಾಧು ಸಜ್ಜನರಿಗೆ |
    ನಿರ್ಮೂಲ ಮಾಡುವನು ದುರ್ಜನರ ಮಾರ್ಗವನು ||
    ಪ್ರಭುವೇ ಅರಸನು ಸದಾ ಕಾಲಕು |
    ಸಿಯೋನ್, ನಿನ್ನ ದೇವನಾಳ್ವನು ತಲತಲಾಂತರಕು ||

ಎರಡನೇ ವಾಚನ: ಯಕೋಬ 5:7-10


ಸಹೋದರರೇ, ಪ್ರಭು ಪುನರಾಗಮಿಸುವವರೆಗೆ ತಾಳ್ಮೆಯಿಂದ ಇರಿ. ರೈತನನ್ನು ಗಮನಿಸಿರಿ ತನ್ನ ಹೊಲದಲ್ಲಿ ಉತ್ತಮ ಬೆಳೆಯನ್ನು ನಿರೀಕ್ಷಿಸುವ ಅವನು ಮುಂಗಾರು ಹಿಂಗಾರು ಮಳೆಗಾಗಿ ತಾಳ್ಮೆಯಿಂದ ಕಾದಿರುತ್ತಾನೆ.  ಹಾಗೆಯೇ, ನೀವೂ ಸಹ ತಾಳ್ಮೆಯಿಂದಿರಿ, ದೃಢಚಿತ್ತರಾಗಿರಿ. ಪ್ರಭುವಿನ ಪುನರಾಗಮನ ಸನ್ನಿಹಿತವಾಗಿದೆ. ಸಹೋದರರೇ, ದಂಡನಾತೀರ್ಪಿಗೆ ಗುರಿಯಾಗದಂತೆ ಒಬ್ಬರ ಮೇಲೊಬ್ಬರು ಗೊಣಗುಟ್ಟಬೇಡಿ. ಇಗೋ, ನ್ಯಾಯಾಧೀಶನು ಬಾಗಿಲ ಬಳಿಯಲ್ಲೇ ನಿಂತಿದ್ದಾನೆ. ಸಹೋದರರೇ, ಸಂಕಷ್ಟಗಳನ್ನು ತಾಳ್ಮೆಯಿಂದ ಸಹಿಸಿದ್ದಕ್ಕೆ ನಿದರ್ಶನ ಬೇಕೇ? ಪ್ರಭುವಿನ ಹೆಸರಿನಲ್ಲಿ ಬೋಧಿಸಿದ ಪ್ರವಾದಿಗಳನ್ನು ಸ್ಮರಿಸಿಕೊಳ್ಳಿ.

ಶುಭಸಂದೇಶ: ಮತ್ತಾಯ 11:2-11


ಯೇಸುಸ್ವಾಮಿಯ ಕಾರ್ಯಕಲಾಪಗಳ ಸುದ್ದಿ, ಸೆರೆಯಲ್ಲಿದ್ದ ಸ್ನಾನಿಕ ಯೊವಾನ್ನನ ಕಿವಿಗೆ ಬಿದ್ದಿತು. ಆತನು ತನ್ನ ಶಿಷ್ಯರಲ್ಲಿ ಕೆಲವರನ್ನು ಅವರ ಬಳಿಗೆ ಕಳುಹಿಸಿದನು. ಇವರು ಬಂದು, "ಯೊವಾನ್ನನು ತಿಳಿಯಪಡಿಸಿದ ಪ್ರಕಾರ ಬರಬೇಕಾದವರು ನೀವೋ? ಅಥವಾ ಬೇರೊಬ್ಬನನ್ನು ನಾವು ಎದುರು ನೋಡಬೇಕೋ?" ಎಂದು ಯೇಸುವನ್ನು ಕೇಳಿದರು. ಅದಕ್ಕೆ ಯೇಸು, "ನೀವು ಕೇಳುವುದನ್ನೂ ಕಾಣುವುದನ್ನೂ ಯೊವಾನ್ನನಿಗೆ ಹೋಗಿ  ತಿಳಿಸಿರಿ. ಕುರುಡರು ನೋಡುತ್ತಾರೆ, ಕುಂಟರು ನಡೆಯುತ್ತಾರೆ, ಕುಷ್ಟರೋಗಿಗಳು ಸ್ವಸ್ಥರಾಗುತ್ತಾರೆ, ಕಿವುಡರು ಕೇಳುತ್ತಾರೆ, ಸತ್ತವರು ಮತ್ತೆ ಜೀವ ಪಡೆಯುತ್ತಾರೆ. ದೀನದಲಿತರಿಗೆ ಶುಭಸಂದೇಶವನ್ನು ಪ್ರಕಟಿಸಲಾಗುತ್ತಿದೆ. ನನ್ನಲ್ಲಿ ವಿಶ್ವಾಸ ಕಳೆದುಕೊಳ್ಳದವನು ಭಾಗ್ಯವಂತನು!" ಎಂದು ಹೇಳಿ ಕಳುಹಿಸಿದರು. ಬಂದಿದ್ದ ಶಿಷ್ಯರು ಹೊರಟುಹೋದಾಗ, ಯೇಸುಸ್ವಾಮಿ ಜನಸಮೂಹಕ್ಕೆ ಯೊವಾನ್ನನನ್ನು ಕುರಿತು ಮಾತನಾಡಿದರು: "ಬೆಂಗಾಡಿನಲ್ಲಿ ನೀವು ಏನನ್ನು ನೋಡಲೆಂದು ಹೋದಿರಿ? ಗಾಳಿಗೆ ಓಲಾಡುವ ಜೊಂಡನ್ನೆ? ಇಲ್ಲವಾದರೆ, ಏಕೆ ಹೋದಿರಿ? ನಯವಾದ ರೇಷ್ಮೆ ಉಡುಪನ್ನು ಧರಿಸಿದ್ದ ವ್ಯಕ್ತಿಯನ್ನು ನೋಡಲು ಹೋದಿರೇನು?  ಅಂತಹ ಉಡುಗೆ ತೊಡುಗೆ ಧರಿಸುವವರು ಅರಮನೆಗಳಲ್ಲಿ ಇರುತ್ತಾರಷ್ಟೆ. ಹಾಗಾದರೆ ಯಾವ ಉದ್ದೇಶದಿಂದ ಹೋದಿರಿ? ಪ್ರವಾದಿಯನ್ನು ನೋಡಲೆಂದೋ? ಹೌದು ಪ್ರವಾದಿಗಿಂತಲೂ ಶ್ರೇಷ್ಠನಾದವನನ್ನು ನೋಡಿದಿರಿ ಎಂಬುದು ನಿಜ. "ಇಗೋ, ನನ್ನ ದೂತನನ್ನು ನಿನಗೆ ಮುಂದಾಗಿ ಕಳುಹಿಸುವೆನು. ಆತನು ನಿನ್ನ ಮಾರ್ಗವನ್ನು ಮುಂಚಿತವಾಗಿ ಸಿದ್ದಗೊಳಿಸುವನು" ಎಂದು ಪವಿತ್ರ ಗ್ರಂಥದಲ್ಲಿ ಉಲ್ಲೇಖಿಸಿರುವುದು ಈ ಯೊವಾನ್ನನನ್ನು ಕುರಿತೇ. ಮಾನವನಾಗಿ ಜನಿಸಿದ್ದವರಲ್ಲಿ ಸ್ನಾನಿಕ ಯೊವಾನ್ನನಿಗಿಂತ ಶ್ರೇಷ್ಠನಾರೂ ಹುಟ್ಟಿಲ್ಲ! ಎಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ. ಆದರೂ ಸ್ವರ್ಗ ಸಾಮ್ರಾಜ್ಯದಲ್ಲಿ ಕನಿಷ್ಠನಾದವನು ಕೂಡ ಅವನಿಗಿಂತ ಶ್ರೇಷ್ಠನೇ ಸರಿ.

13.12.25

ಮೊದಲನೆಯ ವಾಚನ: ಸಿರಾಖನ ಗ್ರಂಥದಿಂದ ಇಂದಿನ ವಾಚನ: 48:1-4,9-11

ಆಮೇಲೆ ಪ್ರವಾದಿ ಎಲೀಯನೆದ್ದನು ಬೆಂಕಿಯಂತೆ, ಉರಿಯಿತವನ ನುಡಿ ಪಂಜಿನಂತೆ. ಕ್ಷಾಮವನ್ನು ಬರಮಾಡಿದನಿವನು ಜನರ ಮೇಲೆ, ಅವರನ್ನು ಕುಂದಿಸಿದನು ತನ್ನ ರೋಷದಿಂದಲೆ. ಆಕಾಶವನ್ನೇ ಮುಚ್ಚಿಬಿಟ್ಟನು ಸರ್ವೇಶ್ವರನ ಹೆಸರಿನಲ್ಲಿ, ಬೆಂಕಿಯಿಳಿಯುವಂತೆ ಮಾಡಿದನು ಮೂರುಸಾರಿ. ಎಲೈ ಎಲೀಯನೇ, ಮಹತ್ಕಾರ್ಯಗಳಲ್ಲಿ ನೀನು ಎಷ್ಟು ಘನವಂತನಾಗಿದ್ದೆ! ನಿನ್ನಂತೆ ಹೆಚ್ಚಳಪಡುವವರು ಯಾರಿದ್ದಾರೆ? ನೀ ಒಯ್ಯಲ್ಪಟ್ಟೆ ಬೆಂಕಿಯ ಬಿರುಗಾಳಿಯಲ್ಲಿ, ಅಗ್ನಿಮಯ ಕುದುರೆಗಳೆಳೆದ ರಥದಲ್ಲಿ. ಕೋಪ ರೌದ್ರಕ್ಕೇರುವುದಕ್ಕೆ ಮುಂಚೆ ಅದನ್ನು ಶಾಂತಪಡಿಸುವುದಕ್ಕಾಗಿ ತಂದೆಯ ಹೃದಯವನ್ನು ಮಗನ ಕಡೆಗೆ ತಿರುಗಿಸುವುದಕ್ಕಾಗಿ ಇಸ್ರಯೇಲಿನ ಕುಲಗಳನ್ನು ಯಥಾಸ್ಥಿತಿಗೆ ತರುವುದಕ್ಕಾಗಿ ತಕ್ಕ ಕಾಲದಲ್ಲಿ ಗದರಿಸುವಾತ ನೀನೆಂದು ಬರೆದಿದೆ ನಿನ್ನ ವಿಷಯವಾಗಿ. ನಿನ್ನನ್ನು ನೋಡುವವರು ಧನ್ಯರು, ಪ್ರೀತಿಯಿಂದ ನಿಧನರಾದವರು ಧನ್ಯರು! ಕಾರಣ, ನಾವು ಸಹ ನಿಜವಾಗಿ ಜೀವಿಸುವೆವು.

ಪ್ರಭುವಿನ ವಾಕ್ಯ
ದೇವರಿಗೆ ಕೃತಜ್ಞತೆ ಸಲ್ಲಲಿ

ಕೀರ್ತನೆ:  80:1-2,14-15,17-18, v. 7
ಶ್ಲೋಕ: ಸರ್ವಶಕ್ತನಾದ ದೇವನೇ, ಉದ್ಧರಿಸೆಮ್ಮನು| ಬೆಳಗಲಿ ನಿನ್ನ ಮುಖಕಾಂತಿ, ಪಡೆವೆವು ರಕ್ಷಣೆಯನು||

ಕಿವಿಗೊಟ್ಟು ಆಲಿಸೋ, ಇಸ್ರಯೇಲಿನ ಮೇಷಪಾಲನೇ|
ವಿರಾಜಿಸು ಕೆರೂಬಿಯರ ಮಧ್ಯೆ ಆಸೀನನಾದವನೇ||
ತೋರ್ಪಡಿಸು ನಿನ್ನ ಶೌರ್ಯವನು|
ಬಂದು ಜಯಪ್ರದನಾಗು ನಮಗೆ||

ಸರ್ವಶಕ್ತನಾದ ದೇವರೇ, ಮರಳಿ ಮುಖ ತೋರಿಸು|
ಪರದಿಂದೀಕ್ಷಿಸಿ ಆ ದ್ರಾಕ್ಷಲತೆಯನು ಪರಾಮರಿಸು||
ಕಾಪಾಡು ನಿನ್ನ ಬಲಗೈ ನೆಟ್ಟು ಸಾಕಿದ ಸಸಿಯನು|
ಕಾದಿರಿಸು ನಿನಗೆಂದೇ ನೀ ಬೆಳೆಸಿದಾ ಬಳ್ಳಿಯನು||

ಕೈ ಹಿಡಿದು ಕಾಪಾಡು ನಿನ್ನ ಬಲಗೈ ಉದ್ಧರಿಸಿದ ಪುರುಷನನು|
ನಿನಗೆಂದೇ ನೀ ಸಾಕಿ ಬೆಳೆಸಿದಾ ವರಪುತ್ರನನು||
ಆಗ ಬಿಟ್ಟಗಲುವುದಿಲ್ಲ ನಾವೆಂದೆಂದಿಗೂ ನಿನ್ನನ್ನು|
ಪುನರ್ಜೀವಗೊಳಿಸು, ಮಾಳ್ಪೆವು ನಿನ್ನ ನಾಮಸ್ಮರಣೆಯನು||

ಘೋಷಣೆ
ಲೂಕ 3:4,6

ಅಲ್ಲೆಲೂಯ, ಅಲ್ಲೆಲೂಯ!
ಪ್ರಭುವಿನ ಮಾರ್ಗವನ್ನು ಸಿದ್ಧಪಡಿಸಿರಿ, ಆತನ ಆಗಮನಕ್ಕಾಗಿ ಹಾದಿಯನ್ನು ಸರಾಗಮಾಡಿರಿ | ಆಗ ದೇವರು ದಯಪಾಲಿಸುವ ಜೀವೋದ್ಧಾರವನ್ನು ಮಾನವರೆಲ್ಲರು ಕಾಣುವರು ||
ಅಲ್ಲೆಲೂಯ!

ಶುಭಸಂದೇಶ: ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 17:10-13

ಆ ಕಾಲದಲ್ಲಿ ಬೆಟ್ಟದಿಂದ ಇಳಿದು ಬರುವಾಗ ಶಿಷ್ಯರು, "ಎಲೀಯನೇ ಮೊದಲು ಬರಬೇಕಾಗಿದೆ ಎಂದು ಶಾಸ್ತ್ರಜ್ಞರು ಹೇಳುತ್ತಾರಲ್ಲಾ ಅದು ಹೇಗೆ?" ಎಂದು ಯೇಸುವನ್ನು ಕೇಳಿದರು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ಎಲೀಯನು ಬಂದು ಎಲ್ಲವನ್ನೂ ಸಜ್ಜುಗೊಳಿಸುವನು ಎಂಬುದು ನಿಜ. ಆದರೆ ನಾನು ನಿಮಗೆ ಹೇಳುತ್ತೇನೆ; ಎಲೀಯನು ಈಗಾಗಲೇ ಬಂದಾಗಿದೆ; ಜನರು ಆತನನ್ನು ಗುರುತಿಸದೇ ತಮಗೆ ಇಷ್ಟಬಂದ ಹಾಗೆ ಹಿಂಸಿಸಿದ್ದೂ ಆಗಿದೆ. ಅಂತೆಯೇ ನರಪುತ್ರನೂ ಅವರ ಕೈಯಿಂದ ಯಾತನೆಯನ್ನು ಅನುಭವಿಸುವನು," ಎಂದರು. ಅವರು ಹೇಳುತ್ತಿರುವುದು ಸ್ನಾನಿಕ ಯೊವಾನ್ನನನ್ನು ಕುರಿತೇ ಎಂದು ಪ್ರೇಷಿತರು ಆಗ ಅರ್ಥಮಾಡಿಕೊಂಡರು.

03.12.2025 - ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ, ಜಗತ್ತಿಗೆಲ್ಲಾ ಶುಭಸಂದೇಶವನ್ನು ಪ್ರಬೋಧಿಸಿರಿ

ಮೊದಲನೆಯ ವಾಚನ : ಪ್ರವಾದಿ ಯೆರೆಮೀಯನ ಗ್ರಂಥದಿಂದ ಇಂದಿನ ಮೊದಲನೆಯ ವಾಚನ: 1:4-8


ಸರ್ವೇಶ್ವರಸ್ವಾಮಿ ಈ ವಾಣಿಯನ್ನು ನನಗೆ ದಯಪಾಲಿಸಿದರು:  "ನಿನ್ನನ್ನು ತಾಯಿಯ ಗರ್ಭದಲ್ಲಿ ರೂಪಿಸುವುದಕ್ಕೆ ಮುಂಚೆಯೇ ನಿನ್ನನ್ನು ನಾನು ತಿಳಿದಿದ್ದೆ;  ನೀನು ಉದರದಿಂದ ಹೊರಬರುವುದಕ್ಕೆ ಮೊದಲೇ ನಿನ್ನನ್ನು ಪವಿತ್ರಿಕರಿಸಿದ್ದೆ;  ನಿನ್ನನ್ನು ರಾಷ್ಟ್ರಗಳಿಗೆ ಪ್ರವಾದಿಯನ್ನಾಗಿ ನೇಮಿಸಿದ್ದೇನೆ." ಅದಕ್ಕೆ ನಾನು, "ಅಯ್ಯೋ, ಸ್ವಾಮಿ ಸರ್ವೇಶ್ವರಾ, ನಾನು ಮಾತು ಬಲ್ಲವನಲ್ಲ, ಇನ್ನೂ ತರುಣ," ಎಂದು ಬಿನ್ನವಿಸಿದೆ.  ಆಗ ಸರ್ವೇಶ್ವರ ನನಗೆ, "ನಾನೊಬ್ಬ ತರುಣ ಎನ್ನಬೇಡ;  ಯಾರ ಬಳಿಗೆ ನಿನ್ನನ್ನು ಕಳಿಸುತ್ತೇನೋ, ಅವರೆಲ್ಲರ ಬಳಿಗೆ ನೀನು ಹೋಗಲೇ ಬೇಕು; ನಾನು ಆಜ್ಞಾಪಿಸುವುದನ್ನೆಲ್ಲ ನುಡಿಯಲೇ ಬೇಕು.  ಅವರಿಗೆ ಅಂಜಬೇಡ; ನಿನ್ನನ್ನು ಕಾಪಾಡಲು ನಾನೆ ನಿನ್ನೊಂದಿಗೆ ಇರುತ್ತೇನೆ; ಇದು ಸರ್ವೇಶ್ವರನಾದ ನನ್ನ ಮಾತು," ಎಂದು ಹೇಳಿದರು.

- ಪ್ರಭುವಿನ ವಾಕ್ಯ

ಕೀರ್ತನೆ 117:1-2 v.   ಮಾರ್ಕ 16:15.

ಶ್ಲೋಕ:  ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ, ಜಗತ್ತಿಗೆಲ್ಲಾ ಶುಭಸಂದೇಶವನ್ನು ಪ್ರಬೋಧಿಸಿರಿ.


1.  ಸ್ತುತಿಮಾಡಿ ಪ್ರಭುವನು ಸಮಸ್ತ ರಾಷ್ಟ್ರಗಳೇ|

ಆತನನ್ನು ಹೊಗಳಿ ಹಾಡಿ ಸರ್ವ ಜನಾಂಗಗಳೇ||

ಶ್ಲೋಕ

 

2.  ನಮ್ಮ ಮೇಲೆ ಆತನಿಗಿರುವ ಪ್ರೀತಿ ಅಚಲ|

ಆತನ ಸತ್ಯಪರತೆ ಇರುವುದು ಅನಂತ ಕಾಲ||

ಶ್ಲೋಕ


ಎರಡನೆಯ ವಾಚನ :ಪೌಲನು ಕೊರಿಂಥಿಯರಿಗೆ ಬರೆದ ಮೊದಲನೆಯ ಪತ್ರದಿಂದ ಇಂದಿನ ಎರಡನೆಯ ವಾಚನ 9:16-19,22-23


ಸಹೋದರರೇ, ಶುಭಸಂದೇಶವನ್ನು ನಾನು ಸಾರುತ್ತಿದ್ದೇನೆಂದು ಕೊಚ್ಚಿಕೊಳ್ಳುವುದಕ್ಕೂ ನನಗೆ ಆಸ್ಪದವಿಲ್ಲ.  ಏಕೆಂದರೆ, ಸಾರಲೇಬೇಕೆಂಬ ಕರ್ತವ್ಯಕ್ಕೆ ನಾನು ಬದ್ಧನಾಗಿದ್ದೇನೆ.  ಸಾರದಿದ್ದರೆ ನನಗೆ ಧಿಕ್ಕಾರವಿರಲಿ!  ನಾನು ಸ್ವಂತ ಇಷ್ಟದಿಂದ ಈ ಕಾರ್ಯವನ್ನು ಕೈಗೊಂಡಿದ್ದರೆ ತಕ್ಕ ಸಂಭಾವನೆ ಇರುತ್ತಿತ್ತು. ಆದರೆ ಈ ಕರ್ತವ್ಯವನ್ನು ನನಗೆ ವಹಿಸಲಾಗಿದೆ.  ಆದುದರಿಂದ ಕರ್ತವ್ಯಬದ್ದನಾಗಿ ಮಾಡುತ್ತಿದ್ದೇನೆ.  ಹಾಗಾದರೆ ನನಗೆ ಸಿಗುವ ಸಂಭಾವನೆಯಾದರೂ ಏನು?  ಶುಭಸಂದೇಶವನ್ನು ಸಾರುವಾಗ ಜೀವನೋಪಾಯಕ್ಕಾಗಿ ನನಗಿರುವ ಹಕ್ಕನ್ನು ಬಲಸಿಕೊಳ್ಳದೆ ಉಚಿತವಾಗಿ ಸಾರುವ ಸೌಭಾಗ್ಯವೇ ನನ್ನ ಸಂಭಾವನೆ. ನಾನು ಸ್ವತಂತ್ರನು, ಯಾರಿಗೂ ದಾಸನಲ್ಲ.  ಆದರೂ ಆದಷ್ಟು ಜನರನ್ನು ಗಳಿಸಿಕೊಳ್ಳಲೆಂದು ಎಲ್ಲರಿಗೂ ದಾಸನಾದೆ.  ವಿಶ್ವಾಸದಲ್ಲಿ ದುರ್ಬಲರನ್ನು ಗಳಿಸಿಕೊಳ್ಳಲು ನಾನೂ ದುರ್ಬಲನಂತಾದೆ.  ಹೇಗಾದರೂ ಸರಿ, ಕೆಲವರನ್ನಾದರೂ ಉದ್ಧರಿಸಲು ಎಲ್ಲರಿಗೂ ಎಲ್ಲವೂ ಆದೆ.  ಶುಭಸಂದೇಶದ ಸೌಭಾಗ್ಯದಲ್ಲಿ ಪಾಲುಗೊಳ್ಳಲೆಂದು ಇದೆಲ್ಲವನ್ನು ಇದೆಲ್ಲವನ್ನು ಶುಭಸಂದೇಶಕ್ಕಾಗಿಯೇ ಮಾಡುತ್ತೇನೆ.

ಪ್ರಭುವಿನ ವಾಕ್ಯ

ದೇವರಿಗೆ ಕೃತಜ್ಞತೆ ಸಲ್ಲಲಿ


ಘೋಷಣೆ :ಮತ್ತಾಯ 28:19,20

ಅಲ್ಲೆಲೂಯ, ಅಲ್ಲೆಲೂಯ!

ಹೋಗಿ, ಸಕಲ ದೇಶಗಳ ಜನರನ್ನು ನನ್ನ ಶಿಷ್ಯರನ್ನಾಗಿ ಮಾಡಿರಿ | ಲೋಕಾಂತ್ಯದವರೆಗೂ ಸದಾ ನಾನು ನಿಮ್ಮೊಡನೆ ಇರುತ್ತೇನೆ ||

ಅಲ್ಲೆಲೂಯ!


ಶುಭಸಂದೇಶ : ಮಾರ್ಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 16:15-20


ಆ ಕಾಲದಲ್ಲಿ ಯೇಸು ಹನ್ನೊಂದು ಮಂದಿ ಶಿಷ್ಯರಿಗೆ ಹೀಗೆಂದು ಹೇಳಿದರು:  "ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ, ಜಗತ್ತಿಗೆಲ್ಲಾ ಶುಭಸಂದೇಶವನ್ನು ಪ್ರಬೋಧಿಸಿರಿ.  ವಿಶ್ವಾಸವಿಟ್ಟು ದೀಕ್ಷಾಸ್ನಾನ ಪಡೆಯುವವನು ಜೀವೋದ್ಧಾರ ಹೊಂದುವನು.  ವಿಶ್ವಾಸಿಸದೆ ಇರುವವನು ಖಂಡನೆಗೆ ಗುರಿಯಾಗುವನು.  ವಿಶ್ವಾಸಿಸುವುದರಿಂದ ಈ ಅದ್ಭುತ ಕಾರ್ಯಗಳು ಆಗುವುವು; ನನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವರು; ಹೊಸ ಭಾಷೆಗಳಲ್ಲಿ ಮಾತಾಡುವರು; ಕೈಗಳಿಂದ ಸರ್ಪಗಳನ್ನು ಎತ್ತಿದರೂ ವಿಷ ಪದಾರ್ಥಗಳನ್ನೇನಾದರು ಕುಡಿದರೂ ಯಾವ ಹಾನಿಯೂ ಅವರಿಗಾಗದು.  ಅವರು ರೋಗಿಗಳ ಮೇಲೆ ಕೈಯಿಟ್ಟರೆ ರೋಗಿಗಳು ಗುಣಹೊಂದುವರು.  " ಎಂದರು ಯೇಸು ಶಿಷ್ಯರೊಡನೆ ಮಾತನಾಡಿದ ಮೇಲೆ ಸ್ವರ್ಗಾರೋಹಣವಾಗಿ ದೇವರ ಬಲಪಾರ್ಶ್ವದಲ್ಲಿ ಆಸೀನರಾದರು. ಇತ್ತ ಶಿಷ್ಯರು ಹೊರಟುಹೋಗಿ, ಎಲ್ಲೆಡೆಗಳಲ್ಲಿಯೂ ಶುಭಸಂದೇಶವನ್ನು ಬೋಧಿಸತೊಡಗಿದರು. ಪ್ರಭು ಯೇಸು ಅವರೊಂದಿಗೆ ಕಾರ್ಯಸಾಧಿಸುತ್ತಾ.  ಮಹತ್ಕಾರ್ಯಗಳಿಂದ ಶುಭಸಂದೇಶವನ್ನು ಸಮರ್ಥಿಸುತ್ತಾ ಇದ್ದರು.

-ಪ್ರಭುವಿನ ಶುಭಸಂದೇಶ

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...