05.05.25 - “ದೇವರು ಕಳುಹಿಸಿದಾತನನ್ನು ನೀವು ವಿಶ್ವಾಸಿಸಬೇಕು. ಇದೇ ದೇವರು ಮೆಚ್ಚುವ ಕಾರ್ಯ

 ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 6:8:15


ಸ್ತೇಫನನ ಬಂಧನ ಸ್ತೇಫನನು ದೈವಾನುಗ್ರಹದಿಂದಲೂ ಶಕ್ತಿಯಿಂದಲೂ ತುಂಬಿದ್ದನು. ಜನರ ಮಧ್ಯೆ ಅದ್ಭುತಗಳನ್ನೂ ಸೂಚಕಕಾರ್ಯಗಳನ್ನೂ ಮಾಡುತ್ತಿದ್ದನು. ಆದರೆ ಕೆಲವರು ಸ್ತೇಫನನ ವಿರೋಧಿಗಳಾಗಿದ್ದರು. ಇವರು ‘ಬಿಡುಗಡೆ ಹೊಂದಿದವರು’ ಎಂಬವರ ಪ್ರಾರ್ಥನಾ ಮಂದಿರಕ್ಕೆ ಸೇರಿದವರು. ಸಿರೇನ್ ಮತ್ತು ಅಲೆಕ್ಸಾಂಡ್ರಿಯದಿಂದ ಬಂದ ಯೆಹೂದ್ಯರೂ ಇದರ ಸದಸ್ಯರಾಗಿದ್ದರು. ಇವರೊಡನೆ ಸಿಲಿಸಿಯ ಹಾಗೂ ಏಷ್ಯಾದ ಯೆಹೂದ್ಯರೂ ಸೇರಿ ಸ್ತೇಫನನೊಂದಿಗೆ ತರ್ಕ ಮಾಡತೊಡಗಿದರು. ಆದರೆ ಸ್ತೇಫನನ ಮಾತಿನಲ್ಲಿ ಕಂಡುಬಂದ ಜ್ಞಾನವನ್ನೂ ಪವಿತ್ರಾತ್ಮ ಶಕ್ತಿಯನ್ನೂ ಎದುರಿಸಲು ಅವರಿಂದಾಗಲಿಲ್ಲ. ಆದುದರಿಂದ ಕೆಲವರಿಗೆ ಲಂಚಕೊಟ್ಟು ‘ಸ್ತೇಫನನು ಮೋಶೆಯನ್ನೂ ದೇವರನ್ನೂ ದೂಷಿಸುತ್ತಾನೆ; ಇದನ್ನು ನಾವು ಕೇಳಿದ್ದೇವೆ’ ಎಂದು ಹೇಳಿಸಿದರು. ಹೀಗೆ ಜನರನ್ನೂ ಪ್ರಮುಖರನ್ನೂ ನ್ಯಾಯಶಾಸ್ತ್ರಜ್ಞರನ್ನೂ ಪ್ರಚೋದಿಸಿದರು. ಸ್ತೇಫನನನ್ನು ಬಂಧಿಸಿ ನ್ಯಾಯಸಭೆಯ ಮುಂದೆ ಎಳೆದು ತರುವಂತೆ ಮಾಡಿದರು. ಕೆಲವು ಸುಳ್ಳುಸಾಕ್ಷಿಗಳನ್ನು ನೇಮಿಸಿಕೊಂಡು ಅವರಿಂದ, ‘ಇವನು ಯಾವಾಗಲೂ ನಮ್ಮ ಪವಿತ್ರ ದೇವಾಲಯದ ವಿರುದ್ಧ ಹಾಗೂ ಮೋಶೆಯ ಧರ್ಮಶಾಸ್ತ್ರದ ವಿರುದ್ಧ ಮಾತನಾಡುತ್ತಾನೆ. ನಜರೇತಿನ ಆ ಯೇಸು ಈ ಮಹಾದೇವಾಲಯವನ್ನು ನಾಶಗೊಳಿಸುವನೆಂದೂ ಮೋಶೆ ನಮಗೆ ವಿಧಿಸಿದ ಸಂಪ್ರದಾಯಗಳನ್ನು ಬದಲಿಸುವನೆಂದೂ ಇವನು ಹೇಳಿರುತ್ತಾನೆ. ಇದನ್ನು ನಾವು ಕೇಳಿದ್ದೇವೆ,’ ಎಂದು ಹೇಳಿಸಿದರು. ನ್ಯಾಯಸಭೆಯಲ್ಲಿ ಕುಳಿತಿದ್ದವರೆಲ್ಲರೂ ಅವನ ಮುಖವನ್ನೇ ದಿಟ್ಟಿಸಿ ನೋಡಿದರು. ಅದು ದೇವದೂತನ ಮುಖದಂತೆ ಕಂಗೊಳಿಸಿತು.

ಕೀರ್ತನೆ: 119:23, 24, 26, 27, 29, 30

ಶ್ಲೋಕ: ಪ್ರಭುವಿನ ಶಾಸ್ತ್ರಾನುಸಾರ ನಡೆದವರು ಧನ್ಯರು.

ಒಳಸಂಚು ಮಾಡುತ್ತಿದ್ದರು ಒಡೆಯರು ಎನಗೆದುರಾಗಿ I
ದಾಸ ನಾನಿರುವೆ ನಿನ್ನ ಆಜ್ಞೆಗಳಲೆ ಮಗ್ನನಾಗಿ II

ನಿನ್ನಾಜ್ಞೆಯು ಆನಂದದಾಯಕ I
ಅವೇ ನನಗೆ ಮಂತ್ರಾಲೋಚಕ II

ನನ್ನ ಗತನಡತೆಯನು ಕೇಳಿ ಸದುತ್ತರಿಸಿದೆಯಯ್ಯಾ I
ನಿನ್ನ ನಿಬಂಧನೆಗಳನೀಗ ನನಗೆ ಉಪದೇಶಿಸಯ್ಯಾ II

ನಿನ್ನ ನಿಯಮಗಳ ಪಥವನೆನಗೆ ತಿಳಿಯಪಡಿಸಯ್ಯಾ I
ನಿನ್ನ ಅದ್ಭುತಕಾರ್ಯಗಳನು ನಾ ಧ್ಯಾನಿಸುವೆನಯ್ಯಾ II

ಮಿಥ್ಯಮಾರ್ಗವನು ನನಗೆ ದೂರಮಾಡಯ್ಯಾ I
ಧರ್ಮಶಾಸ್ತ್ರವನು ಎನಗೆ ಅನುಗ್ರಹಿಸಯ್ಯಾ II

ಆರಿಸಿಕೊಂಡಿರುವೆನು ನಾನು ಸತ್ಯಮಾರ್ಗವನು I
ಇರಿಸಿಕೊಂಡಿಹೆನು ಕಣ್ಮುಂದೆ ನಿನ್ನ ವಿಧಿಗಳನು

ಶುಭಸಂದೇಶ: ಯೊವಾನ್ನ 6:22-29


ನೆರೆದಿದ್ದ ಜನರು ಮಾರನೆಯ ದಿನವೂ ಸರೋವರದ ಆಚೆ ಕಡೆಯೇ ಉಳಿದಿದ್ದರು. ಹಿಂದಿನ ದಿನ ಅಲ್ಲಿ ಒಂದೇ ಒಂದು ದೋಣಿ ಇದ್ದುದನ್ನು ಅವರು ನೋಡಿದ್ದರು. ಯೇಸುಸ್ವಾಮಿ ಶಿಷ್ಯರೊಡನೆ ದೋಣಿಯನ್ನು ಹತ್ತಲಿಲ್ಲವಾದ್ದರಿಂದ ಶಿಷ್ಯರು ಮಾತ್ರ ಹೊರಟು ಹೋಗಿದ್ದಾರೆಂದು ಅವರಿಗೆ ತಿಳಿದಿತ್ತು. ತಿಬೇರಿಯದಿಂದ ಹೊರಟಿದ್ದ ದೋಣಿಗಳು ಅಷ್ಟು ಹೊತ್ತಿಗೆ ಅಲ್ಲಿಗೆ ಬಂದು ಸೇರಿದವು. ಪ್ರಭುವು ದೇವರಿಗೆ ಸ್ತೋತ್ರವನ್ನು ಸಲ್ಲಿಸಿ, ಜನರಿಗೆ ರೊಟ್ಟಿ ಬಡಿಸಿದ್ದ ಸ್ಥಳ ಅಲ್ಲೇ ಪಕ್ಕದಲ್ಲಿತ್ತು. ಯೇಸು ಆಗಲಿ, ಅವರ ಶಿಷ್ಯರಾಗಲಿ ಇಲ್ಲದ್ದನ್ನು ನೋಡಿ ಜನರು ಆ ದೋಣಿಗಳನ್ನು ಹತ್ತಿ ಯೇಸುವನ್ನು ಹುಡುಕುತ್ತಾ ಕಫೆರ್ನವುಮಿಗೆ ಬಂದರು. ಜನರು ಯೇಸುಸ್ವಾಮಿಯನ್ನು ಸರೋವರದ ಆಚೆದಡದಲ್ಲಿ ಕಂಡೊಡನೆ, “ಗುರುದೇವಾ, ತಾವಿಲ್ಲಿಗೆ ಬಂದುದು ಯಾವಾಗ?” ಎಂದು ಕೇಳಿದರು. ಯೇಸು ಅವರಿಗೆ, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನೀವು ನನ್ನನ್ನು ಹುಡುಕಿಕೊಂಡು ಬಂದದ್ದು ಸೂಚಕಕಾರ್ಯಗಳನ್ನು ನೋಡಿ ಗ್ರಹಿಸಿಕೊಂಡಿದ್ದರಿಂದ ಅಲ್ಲ, ಹೊಟ್ಟೆ ತುಂಬುವಷ್ಟು ರೊಟ್ಟಿ ಸಿಕ್ಕಿದ್ದರಿಂದ. ಅಳಿದುಹೋಗುವ ಆಹಾರಕ್ಕಾಗಿ ದುಡಿಯಬೇಡಿ; ಉಳಿಯುವ ಮತ್ತು ನಿತ್ಯಜೀವವನ್ನು ಈಯುವ ಆಹಾರಕ್ಕಾಗಿ ದುಡಿಯಿರಿ. ಇಂಥ ಆಹಾರವನ್ನು ನಿಮಗೆ ನೀಡುವವನು ನರಪುತ್ರನೇ. ಏಕೆಂದರೆ, ಪಿತನಾದ ದೇವರು ತಮ್ಮ ಅಧಿಕಾರ ಮುದ್ರೆಯನ್ನು ಆತನ ಮೇಲೆ ಒತ್ತಿದ್ದಾರೆ,” ಎಂದು ಉತ್ತರಕೊಟ್ಟರು. ಆಗ ಆ ಜನರು, “ದೇವರು ಮೆಚ್ಚುವ ಕಾರ್ಯಗಳನ್ನು ನಾವು ಮಾಡಬೇಕಾದರೆ, ಏನು ಮಾಡಬೇಕು?” ಎಂದು ಕೇಳಿದರು. ಅದಕ್ಕೆ ಯೇಸು, “ದೇವರು ಕಳುಹಿಸಿದಾತನನ್ನು ನೀವು ವಿಶ್ವಾಸಿಸಬೇಕು. ಇದೇ ಅವರು ಮೆಚ್ಚುವ ಕಾರ್ಯ,” ಎಂದರು.

04.05.25 - “ಯೊವಾನ್ನನ ಮಗನಾದ ಸಿಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯಾ?”

ಪ್ರೇಷಿತರ ಕಾರ್ಯಕಲಾಪಗಳಿಂದ ವಾಚನ: 5:27-32 40-41 


ಪ್ರೇಷಿತರನ್ನು ಕರೆತಂದು ನ್ಯಾಯಸಭೆಯ ಮುಂದೆ ನಿಲ್ಲಿಸಲಾಯಿತು. ಪ್ರಧಾನ ಯಾಜಕನು ಅವರನ್ನು ಉದ್ದೇಶಿಸಿ, “ಆ ವ್ಯಕ್ತಿಯ ಹೆಸರಿನಲ್ಲಿ ಉಪದೇಶ ಮಾಡಕೂಡದು ಎಂದು ನಿಮಗೆ ಕಟ್ಟಪ್ಪಣೆ ಮಾಡಿದೆವು. ಆದರೂ ನೀವು ಮಾಡಿರುವುದೇನು? ನಿಮ್ಮ ಬೋಧನೆ ಜೆರುಸಲೇಮ್ ಆದ್ಯಂತ ಹಬ್ಬಿಹರಡಿದೆ. ಅಷ್ಟು ಮಾತ್ರವಲ್ಲ, ಆ ವ್ಯಕ್ತಿಯ ಕೊಲೆಗೆ ನಮ್ಮನ್ನೇ ಹೊಣೆಗಾರರನ್ನಾಗಿ ಮಾಡಬೇಕೆಂದಿರುವಿರಿ,” ಎಂದು ಆಪಾದಿಸಿದನು. ಅದಕ್ಕೆ ಪ್ರತ್ಯುತ್ತರವಾಗಿ ಪೇತ್ರ ಮತ್ತು ಉಳಿದ ಪ್ರೇಷಿತರು, “ನಾವು ವಿಧೇಯರಾಗಬೇಕಾದದ್ದು ದೇವರಿಗೆ, ಮಾನವರಿಗಲ್ಲ. ನೀವು ಶಿಲುಬೆಗೇರಿಸಿ ಕೊಂದುಹಾಕಿದ ಯೇಸುಸ್ವಾಮಿಯನ್ನು ನಮ್ಮ ಪಿತೃಗಳ ದೇವರು ಜೀವಕ್ಕೆ ಎಬ್ಬಿಸಿದ್ದಾರೆ. ದೇವರು ಅವರನ್ನು ತಮ್ಮ ಬಲಪಾರ್ಶ್ವಕ್ಕೆ ಏರಿಸಿ ಮುಂದಾಳನ್ನಾಗಿಯೂ ಲೋಕೋದ್ಧಾರಕನನ್ನಾಗಿಯೂ ನೇಮಿಸಿದ್ದಾರೆ. ಇಸ್ರಯೇಲಿನ ಜನರು ಪಶ್ಚಾತ್ತಾಪಪಟ್ಟು ದೇವರಿಗೆ ಅಭಿಮುಖರಾಗಿ ಪಾಪಕ್ಷಮೆಯನ್ನು ಪಡೆಯಲು ಇವರ ಮುಖಾಂತರ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. ಈ ಘಟನೆಗಳಿಗೆ ನಾವು ಸಾಕ್ಷಿಗಳು; ನಾವು ಮಾತ್ರವಲ್ಲ, ದೈವೇಚ್ಛೆಯಂತೆ ನಡೆಯುವವರಿಗೆ ದೇವರು ದಯಪಾಲಿಸುವ ಪವಿತ್ರಾತ್ಮ ಅವರು ಕೂಡ ಸಾಕ್ಷಿಯಾಗಿದ್ದಾರೆ,” ಎಂದನು. ಪ್ರೇಷಿತರನ್ನು ಒಳಗೆ ಕರೆದು, ಚಾವಟಿಯಿಂದ ಹೊಡೆದು, ಇನ್ನು ಮೇಲೆ ಯೇಸುವಿನ ಹೆಸರಿನಲ್ಲಿ ಬೋಧಿಸಬಾರದೆಂದು ಕಟ್ಟಪ್ಪಣೆಮಾಡಿ ಅವರನ್ನು ಬಿಟ್ಟು ಬಿಟ್ಟರು. ಯೇಸುವಿನ ನಾಮಕ್ಕೋಸ್ಕರ ಅಪಮಾನವನ್ನು ಅನುಭವಿಸುವ ಅರ್ಹತೆಯನ್ನು ಪಡೆದೆವೆಂದು ಪ್ರೇಷಿತರು ಸಂತೋಷಭರಿತರಾಗಿ ನ್ಯಾಯಸಭೆಯಿಂದ ಹೊರ ಬಂದರು.

ಪ್ರಕಟಣಾ ಗ್ರಂಥ :   5:11-14 

ತರುವಾಯ ಯೇಸು ಸ್ವಾಮಿ ತಮ್ಮ ಶಿಷ್ಯರಿಗೆ ಮತ್ತೊಮ್ಮೆ ತಿಬೇರಿಯ ಸರೋವರದ ಬಳಿ ಕಾಣಿಸಿಕೊಂಡರು. ಅದು ಹೀಗೆ ನಡೆಯಿತುಸಿಮೋನ ಪೇತ್ರನು, ದಿದುಮನೆಂಬ ತೋಮನು, ಗಲಿಲೇಯದ ಕಾನಾ ಊರಿನ ನತಾನಯೇಲನು, ಜೆಬೆದಾಯನ ಪುತ್ರರು ಮತ್ತು ಯೇಸುವಿನ ಇನ್ನಿಬ್ಬರು ಶಿಷ್ಯರು ಒಟ್ಟಿಗೆ ಸೇರಿ ಇದ್ದರುಆಗ ಸಿಮೋನ ಪೇತ್ರನು, “ನಾನು ಮೀನು ಹಿಡಿಯಲು ಹೋಗುತ್ತೇನೆ,” ಎಂದನು. ಮಿಕ್ಕವರು, “ನಾವೂ ನಿನ್ನೊಡನೆ ಬರುತ್ತೇವೆ,” ಎಂದರು. ಅವರೆಲ್ಲರೂ ಹೊರಟು ದೋಣಿಯನ್ನು ಹತ್ತಿದರು. ರಾತ್ರಿಯೆಲ್ಲಾ ಅವರಿಗೆ ಒಂದು ಮೀನೂ ಸಿಗಲಿಲ್ಲಬೆಳಗಾಗುವಷ್ಟರಲ್ಲಿ ಯೇಸು ತೀರದಲ್ಲಿ ನಿಂತಿದ್ದರು. ಆದರೆ ಅವರು ಯೇಸು ಎಂದು ಶಿಷ್ಯರಿಗೆ ಹೊಳೆಯಲಿಲ್ಲಯೇಸು ಅವರಿಗೆ, “ಮಕ್ಕಳೇ, ಊಟಕ್ಕೆ ಏನಾದರೂ ಸಿಕ್ಕಿತೇ?” ಎಂದು ಕೇಳಿದರು. “ಏನೂ ಇಲ್ಲ,” ಎಂದರು ಅವರು. “ದೋಣಿಯ ಬಲಗಡೆಗೆ ಬಲೆ ಬೀಸಿರಿ; ಮೀನುಗಳು ಸಿಗುತ್ತವೆ,” ಎಂದು ಯೇಸು ಹೇಳಲು ಅವರು ಹಾಗೆಯೇ ಮಾಡಿದರು. ಆಗ ಮೀನುಗಳು ರಾಶಿರಾಶಿಯಾಗಿ ಸಿಕ್ಕಿದವು. ಬಲೆಯನ್ನು ಎಳೆಯಲೂ ಆಗದೆಹೋಯಿತುಆಗ ಯೇಸುವಿನ ಆಪ್ತಶಿಷ್ಯನು ಪೇತ್ರನಿಗೆ, “ಅವರೇ ಪ್ರಭುಎಂದನು. ಪ್ರಭುವೆಂದು ಕೇಳಿದ್ದೇ ತಡ, ಬರೀ ಮೈಯಲ್ಲಿದ್ದ ಪೇತ್ರನು ಬಟ್ಟೆಯನ್ನು ಹಾಕಿಕೊಂಡು ನೀರಿಗೆ ಧುಮುಕಿದನುಮಿಕ್ಕ ಶಿಷ್ಯರು ಮೀನು ತುಂಬಿದ್ದ ಬಲೆಯನ್ನು ಎಳೆಯುತ್ತಾ ಸುಮಾರು ಮುನ್ನೂರು ಅಡಿ ದೂರದಲ್ಲಿ ಇದ್ದ ದಡಕ್ಕೆ ದೋಣಿಯಲ್ಲೇ ಬಂದರುಅವರು ದಡವನ್ನು ಸೇರಿದಾಗ ಅಲ್ಲಿ ಇದ್ದಲಿನ ಬೆಂಕಿ ಮಾಡಲಾಗಿತ್ತು. ಕೆಂಡದ ಮೇಲೆ ಮೀನುಗಳಿದ್ದವು. ರೊಟ್ಟಿಯೂ ಅಲ್ಲಿತ್ತುಯೇಸು ಅವರಿಗೆ, “ನೀವು ಈಗ ತಾನೇ ಹಿಡಿದ ಮೀನುಗಳಲ್ಲಿ ಕೆಲವನ್ನು ತನ್ನಿ,” ಎಂದು ಹೇಳಿದರುಸಿಮೋನ ಪೇತ್ರನು ದೋಣಿಯನ್ನು ಹತ್ತಿ ಬಲೆಯನ್ನು ದಡಕ್ಕೆ ಎಳೆದುತಂದನು. ಬಲೆಯ ತುಂಬ ದೊಡ್ಡಮೀನುಗಳು - ಒಟ್ಟಿಗೆ ನೂರೈವತ್ತಮೂರು ಇದ್ದವು. ಅಷ್ಟು ಮೀನುಗಳಿದ್ದರೂ ಬಲೆಯು ಹರಿದಿರಲಿಲ್ಲಯೇಸು ಅವರಿಗೆ, “ಬಂದು ಊಟಮಾಡಿ,” ಎಂದು ಅವರನ್ನು ಕರೆದರು. ಅವರು ಪ್ರಭುವೆಂದು ಅರಿತಿದ್ದ ಕಾರಣ ಶಿಷ್ಯರಲ್ಲಿ ಒಬ್ಬನಿಗಾದರೂ, “ನೀವು ಯಾರು?” ಎಂದು ಕೇಳುವಷ್ಟು ಧೈರ್ಯ ಇರಲಿಲ್ಲಯೇಸು ಹತ್ತಿರಕ್ಕೆ ಬಂದು ರೊಟ್ಟಿಯನ್ನು ತೆಗೆದುಕೊಂಡು ಅವರಿಗೆ ಕೊಟ್ಟರು, ಹಾಗೆಯೇ ಮೀನನ್ನೂ ಕೊಟ್ಟರು.

ಯೊವಾನ್ನ 21:1-19 

ಯೇಸು ಸತ್ತು ಜೀವಂತರಾಗಿ ಎದ್ದ ಬಳಿಕ ತಮ್ಮ ಶಿಷ್ಯರಿಗೆ ಕಾಣಿಸಿಕೊಂಡದ್ದು ಇದು ಮೂರನೆಯ ಸಾರಿ. ಅವರೆಲ್ಲರ ಊಟವಾದ ಮೇಲೆ ಯೇಸು ಸಿಮೋನ ಪೇತ್ರನನ್ನು ನೋಡಿ, ಯೊವಾನ್ನನ ಮಗನಾದ ಸಿಮೋನನೇ, ಇವರಿಗಿಂತಲೂ ಹೆಚ್ಚಾಗಿ ನೀನು ನನ್ನನ್ನು ಪ್ರೀತಿಸುತ್ತೀಯಾ?” ಎಂದು ಕೇಳಿದರು. ಅದಕ್ಕೆ ಪೇತ್ರನು, “ಹೌದು ಪ್ರಭೂ, ನಾನು ನಿಮ್ಮನ್ನು ಪ್ರೀತಿಸುತ್ತೇನೆಂದು ನೀವೇ ಬಲ್ಲಿರಿ,” ಎಂದನು. ಯೇಸು ಅವನಿಗೆ, “ನನ್ನ ಕುರಿಮರಿಗಳನ್ನು ಮೇಯಿಸು,” ಎಂದರು.  ಯೇಸು ಎರಡನೆಯ ಬಾರಿ, “ಯೊವಾನ್ನನ ಮಗನಾದ ಸಿಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯಾ?” ಎಂದು ಕೇಳಲು, “ಹೌದು ಪ್ರಭುವೇ, ನಾನು ನಿಮ್ಮನ್ನು ಪ್ರೀತಿಸುತ್ತೇನೆಂದು ನೀವೇ ಬಲ್ಲಿರಿ,” ಎಂದು ಮರುನುಡಿದನು. ಯೇಸು ಅವನಿಗೆ, “ನನ್ನ ಕುರಿಗಳನ್ನು ಕಾಯಿ,” ಎಂದರುಮೂರನೇ ಬಾರಿಯೂ ಯೇಸು, “ಯೊವಾನ್ನನ ಮಗನಾದ ಸಿಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯಾ?” ಎಂದು ಕೇಳಿದರು. “ನೀನು ನನ್ನನ್ನು ಪ್ರೀತಿಸುತ್ತೀಯಾ?” ಎಂದು ಯೇಸು ಮೂರನೇ ಬಾರಿ ಕೇಳಿದ್ದನ್ನು ಕಂಡು ಪೇತ್ರನು ನೊಂದುಕೊಂಡನು. “ಪ್ರಭುವೇ, ನಿಮಗೆ ಎಲ್ಲವು ತಿಳಿದೇ ಇದೆ. ನಾನು ನಿಮ್ಮನ್ನು ಪ್ರೀತಿಸುತ್ತೇನೆ ಎಂದೂ ನಿಮಗೆ ತಿಳಿದಿದೆ,” ಎಂದು ಹೇಳಿದನು. ಅದಕ್ಕೆ ಯೇಸು, “ನನ್ನ ಕುರಿಗಳನ್ನು ಮೇಯಿಸುನಾನು ನಿನಗೆ ಸತ್ಯವಾಗಿ ಹೇಳುತ್ತೇನೆ, ಕೇಳು: ತಾರುಣ್ಯದಲ್ಲಿ ನೀನೇ ನಡುಕಟ್ಟಿಕೊಂಡು ಇಷ್ಟಬಂದ ಕಡೆ ನಡೆದೆ. ವೃದ್ಧಾಪ್ಯದಲ್ಲಾದರೋ ನೀನು ಕೈಚಾಚುವೆ. ಬೇರೊಬ್ಬನು ನಿನ್ನ ನಡುಕಟ್ಟಿ ನಿನಗಿಷ್ಟವಿಲ್ಲದ ಕಡೆ ನಿನ್ನನ್ನು ನಡೆಸಿಕೊಂಡು ಹೋಗುವನು,” ಎಂದು ನುಡಿದರುಪೇತ್ರನು ಎಂಥ ಸಾವಿನಿಂದ ದೇವರ ಮಹಿಮೆಯನ್ನು ಬೆಳಗಿಸಲಿದ್ದಾನೆಂದು ಸೂಚಿಸಿ ಹಾಗೆ ಹೇಳಿದರು. ಇದಾದ ಮೇಲೆ ಯೇಸು ಪೇತ್ರನಿಗೆ, “ನೀನು ನನ್ನನ್ನು ಹಿಂಬಾಲಿಸಿ ಬಾ,” ಎಂದರು.

03.05.25 - "ನಾನು ಪಿತನಲ್ಲಿ ಇದ್ದೇನೆ ಪಿತನು ನನ್ನಲ್ಲಿ ಇದ್ದಾರೆ,"

ಮೊದಲನೇ ವಾಚನ: 1  ಕೊರಿಂಥಿಯರಿಗೆ 15:1-8 

ಪ್ರಿಯ ಸಹೋದರರೇ, ನಾನು ನಿಮಗೆ ಬೋಧಿಸಿದ  ಶುಭಸಂದೇಶವನ್ನು ನೆನಪಿಗೆ ತಂದುಕೊಳ್ಳಿರಿ. ನೀವು ಅದನ್ನು ಸ್ವೀಕರಿಸಿದ್ದೀರಿ. ಅದರಲ್ಲಿ ನೆಲೆಯಾಗಿ ನಿಂತಿದ್ದೀರಿ. ನಾನು ನಿಮಗೆ ಶುಭಸಂದೇಶವೆಂದು ತಿಳಿಸಿದ ಸಂಗತಿಯನ್ನು ದೃಢವಾಗಿ ವಿಶ್ವಾಸಿಸಿದರೆ ನೀವು ಜೀವೋದ್ಧಾರವನ್ನು ಪಡೆಯುವಿರಿ. ಇಲ್ಲವಾದರೆ ನಿಮ್ಮ ವಿಶ್ವಾಸ ನಿರರ್ಥಕವಾದೀತು. ನಾನು ಪಡೆದುಕೊಂಡಿದ್ದನ್ನು ಮುಖ್ಯವಾದುದು ಎಂದೆಣಿಸಿ ನಿಮಗೆ ಒಪ್ಪಿಸಿದ್ದೇನೆ. ಅದು ಯಾವುದೆಂದರೆ, ಪವಿತ್ರ ಗ್ರಂಥದಲ್ಲಿ ಹೇಳಿರುವ ಪ್ರಕಾರ ಕ್ರಿಸ್ತಯೇಸು ನಮ್ಮ ಪಾಪಗಳ ಪರಿಹಾರಕ್ಕಾಗಿ ಪ್ರಾಣತ್ಯಾಗ ಮಾಡಿದರು. ಅವರನ್ನು ಭೂಸ್ಥಾಪನೆ ಮಾಡಲಾಯಿತು. ಅದೇ ಗ್ರಂಥದ ಪ್ರಕಾರ ಮೂರನೆಯ ದಿನ ಅವರು ಪುನರುತ್ದಾನ ಹೊಂದಿದರು. ಆನಂತರ ಕೇಫನಿಗೂ ಹನ್ನೆರಡು ಮಂದಿಗೂ ಕಾಣಿಸಿಕೊಂಡರು. ತರುವಾಯ ಒಂದೇ ಸಮಯದಲ್ಲಿ ಐನೂರಕ್ಕೂ ಹೆಚ್ಚಿನ ಮಂದಿ ಸಹೊದರರಿಗೆ ಪ್ರತ್ಯಕ್ಷರಾದರು. ಅವರಲ್ಲಿ ಕೆಲವರು ಸತ್ತುಹೊಗಿದ್ದರೂ ಬಹು ಮಂದಿ ಇಂದಿಗೂ ಬದುಕಿದ್ದಾರೆ. ಅದಾದ ಮೇಲೆ ಯಕೋಬನಿಗೂ ಆನಂತರ ಪ್ರೇಷಿತರೆಲ್ಲರಿಗೂ ಕಾಣಿಸಿಕೊಂಡರು. ಕಟ್ಟಕಡೆಗೆ ದಿನ ತುಂಬುವ ಮೊದಲೇ ಹುಟ್ಟಿದವನಂತಿರುವ ನನಗೂ ಕಾಣಿಸಿಕೊಂಡರು.

ಕೀರ್ತನೆ: 19:2-3, 4-5
ಶ್ಲೋಕ: ಅವುಗಳ ನುಡಿಮಾತು ವ್ಯಾಪಿಸಿದೆ ಜಗದಾದ್ಯಂತ

ಶುಭಸಂದೇಶ: ಯೊವಾನ್ನ 14:6-14

ಅದಕ್ಕೆ ಯೇಸು, "ಮಾರ್ಗವೂ ಸತ್ಯವೂ ಜೀವವೂ ನಾನೇ.ನನ್ನ ಮುಖಾಂತರ ಬಾರದ ಹೊರತು ಯಾರೂ ಪಿತನ ಬಳಿಗೆ ಬರಲಾರರು. ನೀವು ನನ್ನನ್ನು ಅರಿತವರಾಗಿದ್ದರೆ ನನ್ನ ಪಿತನನ್ನು ಕೂಡ ಅರಿಯುತ್ತಿದ್ದೀರಿ ಹಾಗೂ ಕಂಡೂ ಇದ್ದೀರಿ," ಎಂದು ನುಡಿದರು. ಆಗ ಫಿಲಿಪ್ಪನು, "ಪ್ರಭೂ, ನಮಗೆ ಪಿತನನ್ನು ತೋರಿಸಿ; ಅಷ್ಟೆ ಸಾಕು," ಎಂದನು. ಅದಕ್ಕೆ ಉತ್ತರವಾಗಿ ಯೇಸು, "ನಾನು ಇಷ್ಟುಕಾಲ ನಿಮ್ಮೊಡನೆ ಇದ್ದರೂ ನಾನು ಯಾರೆಂಬುದನ್ನು ನೀನು ಅರಿತುಕೊಳ್ಳಲಿಲ್ಲವೆ? ನನ್ನನ್ನು ನೋಡಿದವನು ಪಿತನನ್ನೇ ನೋಡಿದವನಾಗಿದ್ದಾನೆ. ಹೀಗಿರುವಾಗ, ಫಿಲಿಪ್ಪನೇ, "ನಮಗೆ ಪಿತನನ್ನು ತೋರಿಸಿ" ಎಂದು ಹೇಗೆ ಕೇಳುತ್ತೀ?  ನಾನು ಪಿತನಲ್ಲಿ ಇದ್ದೇನೆ ಪಿತನು ನನ್ನಲ್ಲಿ ಇದ್ದಾರೆ. ಇದನ್ನು ನೀನು ವಿಶ್ವಾಸಿಸುವುದಿಲ್ಲವೇ? ನಾನು ನಿಮಗೆ ಹೇಳುವ ಮಾತುಗಳನ್ನು ನನ್ನಷ್ಟಕ್ಕೆ ನಾನೇ ಆಡುತ್ತಿಲ್ಲ. ಪಿತನೇ ನನ್ನಲ್ಲಿದ್ದುಕೊಂಡು ತಮ್ಮ ಕಾರ್ಯವನ್ನು ಸಾಧಿಸುತ್ತಾರೆ. "ನಾನು ಪಿತನಲ್ಲಿ ಇದ್ದೇನೆ ಪಿತನು ನನ್ನಲ್ಲಿ ಇದ್ದಾರೆ," ಎನ್ನುವ ನನ್ನ ಮಾತುಗಳನ್ನು ವಿಶ್ವಾಸಿಸಿರಿ. ಇಲ್ಲವೇ, ನಾನು ಸಾಧಿಸಿದ ಸುಕೃತ್ಯಗಳ ನಿಮಿತ್ತದಿಂದಾದರೂ ವಿಶ್ವಾಸಿಸಿರಿ; ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನನ್ನಲ್ಲಿ ವಿಶ್ವಾಸವುಳ್ಳವನು ನಾನು ಸಾಧಿಸುವ ಕಾರ್ಯಗಳನ್ನು ಆತನೂ ಸಾಧಿಸುವನು. ಅಷ್ಟೇ ಏಕೆ, ಅವುಗಳಿಗಿಂತಲೂ ಮಹತ್ತಾದುವುಗಳನ್ನು ಸಾಧಿಸುವನು. ಏಕೆಂದರೆ ನಾನು ಪಿತನ ಬಳಿಗೆ ಹೋಗುತ್ತೇನೆ. ಹೀಗೆ ಪಿತನಿಗೆ ಪುತ್ರನಲ್ಲಿ ಮಹಿಮೆ ಉಂಟಾಗುವುದು. ಹೌದು, ನನ್ನ ಹೆಸರಿನಲ್ಲಿ ನೀವು ಏನನ್ನು ಕೇಳಿದರೂ ನಾನು ಅದನ್ನು ಮಾಡಿಯೇ ತೀರುವೆನು."

ಮನಸಿಗೊಂದಿಷ್ಟು : ಯೇಸುವಿನ ನಂತರ ಶಿಷ್ಯರು ಶುಭ ಸಂದೇಶದ ಪ್ರಚಾರದಲ್ಲಿ ಮಾಡಿದ ಸಾಧನೆ ಅಪಾರ. ’ ನನ್ನಲ್ಲಿ ವಿಶ್ವಾಸವುಳ್ಳವನು ಮಹತ್ತಾದುವುಗಳನ್ನು ಸಾಧಿಸುವನು’ ಎಂಬ ಯೇಸುವಿನ ಮಾತು ಶಿಷ್ಯರ ಹಾಗೂ ಅನೇಕ ಸಂತರ ಬಾಳಿನಲ್ಲಿ ನಿಜವಾದುದ್ದನ್ನು ನಾವು ಕಾಣುತ್ತೇವೆ. ಆ ಮಾತು ನಮ್ಮ ಮೂಲಕವೂ ಸಾಕರಾಗೊಳ್ಳಲೆಂಬ ಆಸೆ ನಮ್ಮದಾಗಲಿ.

02.05.25 - “ಇಲ್ಲಿ ಒಬ್ಬ ಹುಡುಗನ ಬಳಿ ಜವೆಗೋದಿಯ ಐದು ರೊಟ್ಟಿಗಳೂ ಎರಡು ವಿೂನುಗಳೂ ಇವೆ"

 ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 5:34-42

ಆಗ ಆ ಸಭಾಸದಸ್ಯರಲ್ಲಿ ಒಬ್ಬನಾದ ಗಮಲಿಯೇಲ್ ಎಂಬ ಫರಿಸಾಯನು ಅಲ್ಲಿದ್ದನು. ಅವನೊಬ್ಬ ಗೌರವಾನ್ವಿತ ಮತ್ತು ಧರ್ಮಪಂಡಿತ. ಅವನು ಎದ್ದು ನಿಂತು ಪ್ರೇಷಿತರನ್ನು ಸ್ವಲ್ಪ ಹೊತ್ತು ಸಭೆಯಿಂದ ಹೊರಗೆ ಕಳುಹಿಸುವಂತೆ ಹೇಳಿ ಸಭೆಯನ್ನುದ್ದೇಶಿಸಿ, “ಇಸ್ರಯೇಲ್ ಸಬಾಸದಸ್ಯರೇ, ಇವರ ವಿರುದ್ಧ ನೀವು ಕೈಗೊಳ್ಳಬೇಕೆಂದಿರುವ ಕ್ರಮದ ಬಗ್ಗೆ ಎಚ್ಚರಿಕೆಯಿಂದಿರಿ. ಸ್ವಲ್ಪ ಕಾಲಕ್ಕೆ ಹಿಂದೆ ತೈದ ಎಂಬವನಿದ್ದ. ತಾನೊಬ್ಬ ಮಹಾಪುರುಷನು ಎಂದು ಹೇಳಿಕೊಳ್ಳುತ್ತಿದ್ದ. ಸುಮಾರು ನಾನೂರು ಮಂದಿ ಅವನ ಅನುಯಾಯಿಗಳಾದರು. ಅವನ ಕೊಲೆಯಾದದ್ದೇ, ಅವನನ್ನು ಹಿಂಬಾಲಿಸಿದವರೆಲ್ಲರೂ ಚದರಿಹೋದರು. ಅವನ ಪಕ್ಷ ನಿರ್ನಾಮವಾಯಿತು. ಅನಂತರ ಜನಗಣತಿಯ ಕಾಲದಲ್ಲಿ ಗಲಿಲೇಯದ ಯೂದ ಎಂಬವನು ಪ್ರಸಿದ್ಧಿಗೆ ಬಂದ. ತನ್ನೆಡೆಗೆ ಹಲವರನ್ನು ಆಕರ್ಷಿಸಿಕೊಂಡ. ಅವನೂ ಹತನಾದ. ಹಿಂಬಾಲಕರೆಲ್ಲರೂ ಚದುರಿಹೋದರು. ಆದುದರಿಂದ ನಾನು ನಿಮಗೆ ಹೇಳುವುದೇನೆಂದರೆ: ಈ ವ್ಯಕ್ತಿಗಳ ಗೊಡವೆಗೆ ಹೋಗಬೇಡಿ; ಇವರನ್ನು ಸುಮ್ಮನೆ ಬಿಟ್ಟುಬಿಡಿ. ಇವರ ಯೋಜನೆ ಅಥವಾ ಕಾರ್ಯ ಮಾನವಕಲ್ಪಿತವಾಗಿದ್ದರೆ ಅದರಷ್ಟಕ್ಕೆ ಅದೇ ನಾಶವಾಗುವುದು. ಇದು ದೈವಸಂಕಲ್ಪವಾಗಿದ್ದರೆ ಅವರನ್ನು ನಾಶಮಾಡಲು ನಿಮ್ಮಿಂದಾಗದು. ನೀವು ದೇವರಿಗೆ ವಿರುದ್ಧ ಹೋರಾಡಿದಂತೆ ಆದೀತು,” ಎಂದು ಹೇಳಿದನು. ಸಭಾಸದಸ್ಯರು ಗಮಲಿಯೇಲನ ಸಲಹೆಯನ್ನು ಅಂಗೀಕರಿಸಿದರು. ಪ್ರೇಷಿತರನ್ನು ಒಳಗೆ ಕರೆದು, ಚಾವಟಿಯಿಂದ ಹೊಡೆದು, ಇನ್ನು ಮೇಲೆ ಯೇಸುವಿನ ಹೆಸರಿನಲ್ಲಿ ಬೋಧಿಸಬಾರದೆಂದು ಕಟ್ಟಪ್ಪಣೆಮಾಡಿ ಅವರನ್ನು ಬಿಟ್ಟುಬಿಟ್ಟರು. ಯೇಸುವಿನ ನಾಮಕ್ಕೋಸ್ಕರ ಅಪಮಾನವನ್ನು ಅನುಭವಿಸುವ ಅರ್ಹತೆಯನ್ನು ಪಡೆದೆವೆಂದು ಪ್ರೇಷಿತರು ಸಂತೋಷಭರಿತರಾಗಿ ನ್ಯಾಯಸಭೆಯಿಂದ ಹೊರಬಂದರು. ಯೇಸುವೇ ಲೋಕೋದ್ದಾರಕನೆಂದು ಪ್ರತಿದಿನ ದೇವಾಲಯದಲ್ಲೂ ಮನೆಮನೆಗಳಲ್ಲೂ ಉಪದೇಶಿಸುವುದರಲ್ಲಿ ಹಾಗೂ ಸಾರುವುದರಲ್ಲಿ ನಿರತರಾದರು.


ಕೀರ್ತನೆ: 27:1, 4, 13-14
ಶ್ಲೋಕ: ನಾನೊಂದನು ಕೋರಿದೆ ಪ್ರಭುವಿನಿಂದ, ವಾಸಿಸಬೇಕು ಜೀವಮಾನವೆಲ್ಲ ನಾನಾತನ ಮಂದಿರದಲಿ 
ನನಗೆ ಬೆಳಕುನನಗೆ ರಕ್ಷೆಪ್ರಭುವೆ I
ನಾನಾರಿಗೂ ಅಳುಕೆನು II
ನನ್ನ ಬಾಳಿಗಾಧಾರ ಪ್ರಭುವೆ I
ನಾನಾರಿಗೂ ಅಂಜೆನು II

ನಾನೊಂದನು ಕೋರಿದೆ ಪ್ರಭುವಿನಿಂದ I
ನಾನದನ್ನೇ ನಿರೀಕ್ಷಿಸಿದೆ ಆತನಿಂದ I
ವಾಸಿಸಬೇಕು ಜೀವಮಾನವೆಲ್ಲ ನಾನಾತನ ಮಂದಿರದಲಿ I
ನಾ ತಲ್ಲೀನನಾಗಬೇಕು ಅಲ್ಲಾತನ ಪ್ರಸನ್ನತೆಯಲಿ II

ಪ್ರಭುವಿನೊಳಿತನು ನಾ ಕಾಣುವೆ ಜೀವಲೋಕದೊಳು I
ನಾನಿಟ್ಟಿರುವೆ ನಂಬಿಕೆ ನಿರೀಕ್ಷೆ ಅದರೊಳು II
ಪ್ರಭುವನು ಎದುರುನೋಡುತ್ತಿರು ಮನವೇ I
ಧೈರ್ಯದಿಂದ ನಿರೀಕ್ಷಿಸುತ್ತಿರು ಎದೆಗುಂದದೆ II


ಶುಭಸಂದೇಶ: ಯೊವಾನ್ನ 6:1-15


ಯೇಸುಸ್ವಾಮಿ ಗಲಿಲೇಯ ಸರೋವರವನ್ನು ದಾಟಿ, ಆಚೆಯ ದಡಕ್ಕೆ ಹೋದರು. ಅದಕ್ಕೆ ತಿಬೇರಿಯ ಸರೋವರವೆಂದು ಹೆಸರು. ಜನರ ದೊಡ್ಡ ಗುಂಪೊಂದು ಅವರ ಹಿಂದೆ ಹೋಯಿತು. ಏಕೆಂದರೆ, ಯೇಸು ಸೂಚಕಕಾರ್ಯಗಳನ್ನು ಮಾಡುತ್ತಾ  ರೋಗಪೀಡಿತರನ್ನು ಗುಣಪಡಿಸುತ್ತಾ ಇದ್ದುದ್ದನ್ನು ಆ ಜನರು ನೋಡಿದ್ದರು. ಯೇಸು ಬೆಟ್ಟವನ್ನು ಹತ್ತಿ ತಮ್ಮ ಶಿಷ್ಯರ ಸಂಗಡ ಕುಳಿತುಕೊಂಡರು. ಯೆಹೂದ್ಯರ ಪಾಸ್ಕ ಹಬ್ಬವು ಹತ್ತಿರವಾಗಿತ್ತು. ಯೇಸು ಕಣ್ಣು ಹಾಯಿಸಿ ನೋಡಿದಾಗ ಆ ದೊಡ್ಡ ಗುಂಪು ತಮ್ಮ ಕಡೆಗೆ ಬರುವುದನ್ನು ಕಂಡರು. “ಈ ಜನರ ಊಟಕ್ಕೆ ರೊಟ್ಟಿಯನ್ನು ನಾವು ಎಲ್ಲಿಂದ ಕೊಂಡುಕೊಳ್ಳುವುದು?” ಎಂದು ಯೇಸು ಫಿಲಿಪ್ಪನನ್ನು ಕೇಳಿದರು. ಫಿಲಿಪ್ಪನನ್ನು ಪರೀಕ್ಷಿಸುವ ಸಲುವಾಗಿ ಅವರು ಹಾಗೆ ಹೇಳಿದರು. ಏಕೆಂದರೆ, ತಾವು ಮಾಡಲಿರುವುದು ಅವರಿಗೆ ತಿಳಿದಿತ್ತು. ಅದಕ್ಕೆ ಫಿಲಿಪ್ಪನು, “ಇನ್ನೂರು ದಿನಾರಿ ನಾಣ್ಯಗಳನ್ನು ಕೊಟ್ಟು ರೊಟ್ಟಿಯನ್ನು ತಂದರೂ ಆಳಿಗೊಂದು ತುಂಡೂ ಬಾರದು,” ಎಂದನು. ಆಗ ಶಿಷ್ಯರಲ್ಲಿ ಒಬ್ಬನು, ಅಂದರೆ ಸಿಮೋನ್ ಪೇತ್ರನ ಸಹೋದರನಾದ ಅಂದ್ರೆಯನು, “ಇಲ್ಲಿ ಒಬ್ಬ ಹುಡುಗನ ಬಳಿ ಜವೆಗೋದಿಯ ಐದು ರೊಟ್ಟಿಗಳೂ ಎರಡು ವಿೂನುಗಳೂ ಇವೆ. ಆದರೆ ಈ ಜನಸಮೂಹಕ್ಕೆ ಇವೆಲ್ಲಿ ಸಾಕಾಗುತ್ತವೆ?” ಎಂದನು. ಯೇಸು, “ಜನರನ್ನು ಊಟಕ್ಕೆ ಕೂರಿಸಿರಿ,” ಎಂದರು. ಅಲ್ಲಿ ಹುಲುಸಾಗಿದ್ದ ಹುಲ್ಲಿನ ಮೇಲೆ ಜನರು ಕುಳಿತುಕೊಂಡರು. ಗಂಡಸರ ಸಂಖ್ಯೆಯೇ ಐದುಸಾವಿರದಷ್ಟಿತ್ತು. ಯೇಸು, ರೊಟ್ಟಿಗಳನ್ನು ತೆಗೆದುಕೊಂಡು ದೇವರಿಗೆ ಸ್ತೋತ್ರವನ್ನು ಸಲ್ಲಿಸಿ, ಕುಳಿತಿದ್ದ ಜನರಿಗೆ ಅವುಗಳನ್ನು ಹಂಚಿದರು. ಹಾಗೆಯೇ ವಿೂನುಗಳನ್ನೂ ಹಂಚಿಕೊಟ್ಟರು. ಎಲ್ಲರೂ ತಮಗೆ ಬೇಕಾದಷ್ಟು ತಿಂದರು. ಅವರೆಲ್ಲರೂ ತಿಂದು ತೃಪ್ತರಾದ ಮೇಲೆ ಯೇಸು, “ತಿಂದುಳಿದ ತುಂಡುಗಳನ್ನೆಲ್ಲಾ ಒಟ್ಟುಗೂಡಿಸಿರಿ; ಒಂದು ತುಂಡೂ ಹಾಳಾಗಬಾರದು,” ಎಂದು ತಮ್ಮ ಶಿಷ್ಯರಿಗೆ ಹೇಳಿದರು. ತಿಂದುಳಿದ ಆ ಐದು ರೊಟ್ಟಿಗಳ ತುಂಡುಗಳನ್ನು ಒಟ್ಟುಗೂಡಿಸಲು ಅವು ಹನ್ನೆರಡು ಬುಟ್ಟಿಗಳ ತುಂಬಾ ಆದವು. ಯೇಸು ಮಾಡಿದ ಈ ಸೂಚಕಕಾರ್ಯಗಳನ್ನು ಕಂಡ ಜನರು, “ಲೋಕಕ್ಕೆ ಬರಬೇಕಾಗಿದ್ದ ಪ್ರವಾದಿ ನಿಜವಾಗಿಯೂ ಇವರೇ,” ಎಂದು ಹೇಳತೊಡಗಿದ್ದರು. ಅವರೆಲ್ಲರೂ ಬಂದು ತಮ್ಮನ್ನು ಹಿಡಿದು ಅರಸನನ್ನಾಗಿ ಮಾಡುವ ಯೋಚನೆಯಲ್ಲಿದ್ದಾರೆ ಎಂಬುದನ್ನು ಅರಿತ ಯೇಸು ತಾವೊಬ್ಬರೇ ಬೆಟ್ಟದ ಕಡೆಗೆ ಹೊರಟುಬಿಟ್ಟರು.

ಮನಸಿಗೊಂದಿಷ್ಟು 

ಇಂದಿನ ಶುಭ ಸಂದೇಶವು ಹಳೆಯ ಒಡಂಬಡಿಕೆಯ ಪ್ರವಾದಿ ಎಲೀಷನ ಇದೇ ರೀತಿಯ  ಘಟನೆಯನ್ನು (2 ಅರಸರು 4:42:44) ನೆನಪಿಸುತ್ತದೆ. ಈ ಶುಭ ಸಂದೇಶದ ಭಾಗದಲ್ಲಿ ನಾವು ಅನೇಕ ಪಾತ್ರಗಳನ್ನು ಕಾಣಬಹುದು. ಈ ಪಾತ್ರಗಳಲ್ಲಿ ನಾವು ಯಾವ ಪಾತ್ರಕ್ಕೆ ಹತ್ತಿರವಾಗಿದ್ದೇವೆ ಎಂಬುದಾಗಿ ಪ್ರಶ್ನಿಸಿಕೊಳ್ಳಲು ಸಹಾಯ ಮಾಡುತ್ತದೆ.

ಯೇಸುವನ್ನು ನೋಡಲು, ಅವರ ಮಾತುಗಳನ್ನು ಕೇಳಲು ಗುಣವಾಗಲು ಬಂದವರ ಜೊತೆ ಪಾಸ್ಕ ಹಬ್ಬಕ್ಕೆ ಹೊರಟಿದ್ದ ಪ್ರವಾಸಿಗರು ಎಲ್ಲರೂ ಅಲ್ಲಿ ಬಂದು ಸೇರಿದ್ದರು. ಯೇಸು ಜನರನ್ನು ನೋಡಿ ಮರುಕ ಗೊಳ್ಳುತ್ತಾರೆ ಅವರಿಗೆ ತಿನ್ನಲು ಏನಾದರೂ ನೀಡಬೇಕು ಎಂದುಕೊಳ್ಳುತ್ತಾರೆ. ಆದರೆ ಪರೀಕ್ಷಿಸಲೋ ಎಂಬಂತೆ ಫಿಲೀಪನನ್ನು ಕೇಳುತ್ತಾರೆ.

ಫೀಲಿಪ್ಪನದು ನಮ್ಮಂತೆಯೇ ಮನೋಭಾವ. ಅಲ್ಲಿ ಸೇರಿದ ದೊಡ್ಡ ಜನಸಮೂಹಇರುವ 200 ದಿನಾರಿಯಷ್ಟು ಸಣ್ಣ ಹಣ ಅವನನ್ನು ನಿರುತ್ಸಾಹಗೊಳಿಸುತ್ತದೆ. ಯೇಸುವೇ ತನ್ನ ಜೊತೆ ಇದ್ದಾರೆ ಎನ್ನುವುದನ್ನು ಆತ ಮರೆಯುತ್ತಾನೆ. ಅಂದ್ರೆಯ ಎಂದಿನಂತೆ ಉತ್ಸಾಹ ತೋರುತ್ತಾನೆ. 5 ರೊಟ್ಟಿ 2 ಮೀನು ಇಟ್ಟಿದ್ದ ಹುಡುಗನನ್ನು ಹುಡುಕಿ ಯೇಸುವಿನ ಬಳಿ ಕರೆ ತರುತ್ತಾನೆ. ಹುಡುಗ ತನ್ನ ಬಳಿಯಿದ್ದ ಆಹಾರವನ್ನು ಹಂಚಿಕೊಳ್ಳಲು ಒಪ್ಪುತ್ತಾನೆ. ಮುಂದಿನದು ಇತಿಹಾಸ. 5000ಕ್ಕಿಂತ ಹೆಚ್ಚಿನ ಜನರ ಹಸಿವು ನೀಗುತ್ತದೆ.

ಈ ಶುಭ ಸಂದೇಶದಲ್ಲಿ ಬರುವ ವಿವಿಧ ರೀತಿಯ ಜನರಲ್ಲಿ ನಾವು ಯಾವ ರೀತಿಯ ವ್ಯಕ್ತಿತ್ವದವರು ಎಂಬುದನ್ನು ಪ್ರಶ್ನಿಸಿಕೊಳ್ಳಬಹುದು. ಯೇಸುವಿನ ಮಾತನ್ನು ಕೇಳಲು ಮಾತ್ರ ಬಂದವರೇ, ಅವರ ಕಾರ್ಯಗಳನ್ನು ನೋಡಲು ಬಂದವರೇ? ನಿಜ ಪ್ರೀತಿಯಿಂದ ಹಾತೊರೆದು ಬಂದವರೇ? ಕೇವಲ ಕುತೂಹಲದಿಂದ ನೊಡಲು ಬಂದ ಪಯಣಿಗರೇಅವರ ಅಗಾಧ ಮಹಿಮೆಯನ್ನು ಕಾಣದ ಫಿಲಿಪ್ ನಂಥವರೇ? ಅದ್ಭುತಕ್ಕೆ ಮುನ್ನುಡಿಯಾದ ಅಂದ್ರೆಯನಂಥವರೇ ಹಂಚಿಕೊಳ್ಳಲು ಸಿದ್ಧನಾಗಿ ಅದ್ಭುತಕ್ಕೆ ಕಾರಣನಾದ ಆ ಹುಡುಗನಂತೆಯೇ?

ಕೊನೆಗೆ ತಮ್ಮ ಅದ್ಭುತ ಕಾರ್ಯದಿಂದ ಸೃಷ್ಟಿಯಾದ ಆಹಾರವು ಸ್ವಲ್ಪವೂ ಹಾಳಾಗದಂತೆ ಎಲ್ಲವನ್ನು ಯೇಸು ಒಟ್ಟುಗೂಡಿಸುತ್ತಾರೆ.  ಅವರ ಅದ್ಭುತ ಹಸ್ತದಲ್ಲಿ ಬಾಳುತ್ತಿರುವ ನಮ್ಮ ಜೀವನ ಹಾಳಾಗದಂತೆ ಅವರಲ್ಲಿ ಒಟ್ಟುಗೂಡೋಣ

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...