ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

07.09.24 - "ನರಪುತ್ರನು ಸಬ್ಬತ್ತಿಗೆ ಒಡೆಯನಾಗಿದ್ದಾನೆ,”

ಮೊದಲನೇ ವಾಚನ: 1 ಕೊರಿಂಥಿಯರಿಗೆ  4: 6-15

ಸಹೋದರರೇ, ನಿಮ್ಮ ಪ್ರಯೋಜನಕ್ಕಾಗಿ ಇದೆಲ್ಲವನ್ನು ನನಗೂ ಅಪೊಲೋಸನಿಗೂ ಅನ್ವಯಿಸಿ ಹೇಳಿದ್ದೇನೆ. ನೀವು ನಮ್ಮ ಆದರ್ಶವನ್ನು ಅನುಸರಿಸಬೇಕು. ಧರ್ಮಶಾಸ್ತ್ರದಲ್ಲಿ ಬರೆದಿರುವುದನ್ನು ವಿೂರಬಾರದು. ನಿಮ್ಮಲ್ಲಿ ಯಾರೂ ಒಬ್ಬನ ಪಕ್ಷವಹಿಸಿ ಜಂಬ ಕೊಚ್ಚಿಕೊಂಡು ಮತ್ತೊಬ್ಬನನ್ನು ಕಡೆಗಣಿಸಬಾರದು. ಇತರರಿಗಿಂತಲೂ ನಿನ್ನನ್ನು ಶ್ರೇಷ್ಠನನ್ನಾಗಿಸಿದವರು ಯಾರು? ದೇವರಿಂದ ಪಡೆಯದೆ ಇರುವುದು ನಿನ್ನಲ್ಲಿ ಯಾವುದಾದರೂ ಇದೆಯೆ? ಹೀಗೆ ಎಲ್ಲವನ್ನೂ ದೇವರಿಂದ ಪಡೆದ ಮೇಲೆ, ಪಡೆಯದವನಂತೆ ಜಂಬ ಕೊಚ್ಚಿಕೊಳ್ಳುವುದೇಕೆ? ಈಗಾಗಲೇ ನೀವು ಸಂತೃಪ್ತರಾಗಿಬಿಟ್ಟಿರೋ? ಇಷ್ಟಕ್ಕೇ ಶ್ರೀಮಂತರಾಗಿಬಿಟ್ಟಿರೋ? ನಮ್ಮನ್ನು ಬಿಟ್ಟು ನೀವು ಸಿಂಹಾಸನವೇರಿಬಿಟ್ಟಿರೋ? ನೀವು ನಿಜವಾಗಿಯೂ ರಾಜರಾಗಿದ್ದರೆ ಚೆನ್ನಾಗಿರುತ್ತಿತ್ತು! ಆಗ ನಾವೂ ನಿಮ್ಮ ಜೊತೆ ರಾಜ್ಯ ಆಳಬಹುದಿತ್ತು! ಬದಲಿಗೆ, ಪ್ರೇಷಿತರಾದ ನಮ್ಮನ್ನು ದೇವರು ಕಟ್ಟಕಡೆಯವರನ್ನಾಗಿಸಿದ್ದಾರೆಂದು ತೋರುತ್ತದೆ. ಎಲ್ಲರ ಮುಂದೆ ಮರಣದಂಡನೆಗೆ ಎಳೆದೊಯ್ಯಲಾಗುವವರಂತೆ ನಾವು ದೂತರಿಗೂ ಮಾನವರಿಗೂ ಇಡೀ ಜಗತ್ತಿಗೂ ಹಾಸ್ಯಾಸ್ಪದವಾದ ನೋಟವಾಗಿದ್ದೇವೆ. ಕ್ರಿಸ್ತಯೇಸುವಿನ ನಿಮಿತ್ತ ನಾವಂತೂ ಹುಚ್ಚರು, ನೀವಾದರೋ ಕ್ರಿಸ್ತಯೇಸುವಿನಲ್ಲಿ ಬುದ್ದಿವಂತರು; ನಾವು ಬಲಹೀನರು, ನೀವು ಬಲಾಢ್ಯರು; ನಾವು ಅವಮಾನಿತರು, ನೀವು ಸನ್ಮಾನಿತರು! ಈ ಗಳಿಗೆಯವರೆಗೂ ನಾವು ಹಸಿದು ಬಾಯಾರಿದವರು, ಬಟ್ಟೆಬರೆ ಇಲ್ಲದವರು, ಏಟುಪೆಟ್ಟು ತಿನ್ನುವವರು ಮತ್ತು ಮನೆಮಠವಿಲ್ಲದೆ ಅಲೆಯುವವರು ಆಗಿದ್ದೇವೆ. ಸ್ವಂತ ದುಡಿಮೆಯಿಂದ ಜೀವಿಸುತ್ತೇವೆ; ನಮ್ಮನ್ನು ಶಪಿಸುವವರನ್ನು ಆಶೀರ್ವದಿಸುತ್ತೇವೆ; ಹಿಂಸೆಗೊಳಗಾದಾಗ ಸಹಿಸಿಕೊಳ್ಳುತ್ತೇವೆ. ಅಪವಾದ ಹೊರಿಸಿದವರೊಡನೆ ವಿನಯದಿಂದ ವರ್ತಿಸುತ್ತೇವೆ; ಪ್ರಪಂಚದ ಪಾಲಿಗೆ ನಾವೀಗ ಕಸಕ್ಕಿಂತಲೂ ಕಡೆ; ವಿಶ್ವಕ್ಕೇ ಹೊಲಸು! ನಿಮ್ಮನ್ನು ನಾಚಿಕೆಪಡಿಸುವುದಕ್ಕೆ ಇದನ್ನು ಬರೆಯಲಿಲ್ಲ. ನಮ್ಮ ನೆಚ್ಚಿನ ಮಕ್ಕಳಾದ ನಿಮ್ಮನ್ನು ಎಚ್ಚರಿಸಲೆಂದು ಬರೆದೆನು. ನಿಮಗೆ ಕ್ರಿಸ್ತಯೇಸುವಿನಲ್ಲಿ ಸಾವಿರಾರು ಮಂದಿ ಶಿಕ್ಷಕರು ಇರಬಹುದು. ಆದರೆ ನಿಮಗೆ ನಾನೊಬ್ಬನೇ ತಂದೆ. ಶುಭಸಂದೇಶದ ಮೂಲಕ ನಾನೇ ನಿಮ್ಮನ್ನು ಕ್ರಿಸ್ತಯೇಸುವಿನಲ್ಲಿ ಪಡೆದ ತಂದೆ.

ಕೀರ್ತನೆ:  145:17-18, 19-20, 21

ಶ್ಲೋಕ: ಹತ್ತಿರ ಇಹನು ಪ್ರಭು ಕರೆಯುವಾವರೆಲ್ಲರಿಗೆ

ಶುಭಸಂದೇಶ: ಲೂಕ 6:1-5

ಒಂದು ಸಬ್ಬತ್ದಿನ ಯೇಸುಸ್ವಾಮಿ ಗೋದಿಯ ಹೊಲಗಳನ್ನು ಹಾದುಹೋಗುತ್ತಿದ್ದರು. ಅವರ ಶಿಷ್ಯರು ಕೆಲವು ತೆನೆಗಳನ್ನು ಕಿತ್ತು ಕೈಗಳಲ್ಲಿ ಹೊಸಕಿ ತಿನ್ನಲಾರಂಭಿಸಿದರು. ಅದನ್ನು ಕಂಡ ಫರಿಸಾಯರಲ್ಲಿ ಕೆಲವರು, “ಸಬ್ಬತ್ತಿನ ದಿನದಲ್ಲಿ ನಿಷಿದ್ಧವಾದುದನ್ನು ನೀವು ಮಾಡುವುದೇಕೆ?” ಎಂದು ಅವರನ್ನು ಆಕ್ಷೇಪಿಸಿದರು. ಅದಕ್ಕೆ ಯೇಸು, “ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದಾಗ ಏನು ಮಾಡಿದರೆಂಬುದನ್ನು ನೀವು ಓದಿರಬೇಕಲ್ಲವೆ? ದಾವೀದನು ದೇವಮಂದಿರದೊಳಕ್ಕೆ ಹೋಗಿ ಯಾಜಕರ ಹೊರತು ಬೇರೆ ಯಾರೂ ತಿನ್ನಬಾರದಾಗಿದ್ದ ನೈವೇದ್ಯದ ರೊಟ್ಟಿಗಳನ್ನೇ ತೆಗೆದುಕೊಂಡು ತಿಂದುದಲ್ಲದೆ ತನ್ನ ಸಂಗಡಿಗರಿಗೂ ಕೊಟ್ಟನು ಅಲ್ಲವೆ? ನರಪುತ್ರನು ಸಬ್ಬತ್ತಿಗೆ ಒಡೆಯನಾಗಿದ್ದಾನೆ,” ಎಂದು ಉತ್ತರಕೊಟ್ಟರು.

06.09.24 - “ಮದುವಣಿಗನು ಜೊತೆಯಲ್ಲಿರುವಾಗ ಮದುವೆಯ ಅತಿಥಿಗಳನ್ನು ಉಪವಾಸವಿರಿಸಲಾದೀತೆ?"

ಮೊದಲನೇ ವಾಚನ: 1 ಕೊರಿಂಥಿಯರಿಗೆ 4:1-5

ಸಹೋದರರೇ, ನಾವು ಕ್ರಿಸ್ತಯೇಸುವಿನ ದಾಸರೆಂದೂ ದೇವರ ಸತ್ಯಾರ್ಥಗಳ ನಂಬಿಗಸ್ಥ ನಿರ್ವಾಹಕರೆಂದೂ ಜನರು ನಮ್ಮನ್ನು ಪರಿಗಣಿಸಲಿ. ನಿರ್ವಾಹಕರು ಪ್ರಾಮಾಣಿಕರಾಗಿರಬೇಕಾದುದು ಅತ್ಯವಶ್ಯ. ನನ್ನ ವಿಷಯದಲ್ಲಿ ಹೇಳುವುದಾದರೆ, ನಿಮ್ಮಿಂದಾಗಲಿ, ಮಾನವ ನಿಯಮಿತ ನ್ಯಾಯಾಲಯದಿಂದಾಗಲಿ ನನ್ನ ವಿಚಾರಣೆಯಾಗುವುದರ ಬಗ್ಗೆ ನನಗೆ ಕಿಂಚಿತ್ತೂ ಚಿಂತೆಯಿಲ್ಲ. ನನಗೆ ನಾನೇ ನ್ಯಾಯತೀರ್ಪು ಮಾಡಿಕೊಳ್ಳುವುದೂ ಇಲ್ಲ. ನನ್ನಲ್ಲಿ ದೋಷವಿದೆಯೆಂದು ನನ್ನ ಮನಸ್ಸಾಕ್ಷಿಗೆ ತೋರುವುದಿಲ್ಲ. ಆದರೂ ನಾನು ನಿರ್ದೋಷಿಯೆಂದು ಹೇಳುವಂತಿಲ್ಲ. ನನ್ನ ನ್ಯಾಯನಿರ್ಣಯ ಮಾಡುವವರು ಪ್ರಭುವೇ. ಅದೇ ಮೇರೆಗೆ, ನೀವು ಸೂಕ್ತಕಾಲಕ್ಕೆ ಮುಂಚೆ ತೀರ್ಪುಮಾಡಬೇಡಿ; ಪ್ರಭುವಿನ ಪುನರಾಗಮನದವರೆಗೂ ಕಾದುಕೊಂಡಿರಿ. ಕತ್ತಲಲ್ಲಿ ಗುಪ್ತವಾಗಿರುವುಗಳನ್ನು ಪ್ರಭುವು ಬೆಳಕಿಗೆ ತರುವರು; ಅಂತರಂಗದ ಯೋಜನೆಗಳನ್ನು ಬಹಿರಂಗಪಡಿಸುವರು. ಆಗ ಪ್ರತಿಯೊಬ್ಬನಿಗೂ ತಕ್ಕ ಪ್ರಶಂಸೆ ದೇವರಿಂದಲೇ ದೊರಕುವುದು.

ಕೀರ್ತನೆ: 37:3-4, 5-6, 27-28, 39-40

ಶ್ಲೋಕ: ಸಜ್ಜನರ ಜೀವೋದ್ಧಾರ ಪ್ರಭುವಿನಿಂದ 

ಶುಭಸಂದೇಶ: ಲೂಕ 5:33-39


ಕೆಲವರು ಯೇಸುಸ್ವಾಮಿ ಬಳಿಗೆ ಬಂದು, “ಯೊವಾನ್ನನ ಶಿಷ್ಯರು ಪದೇಪದೇ ಉಪವಾಸವಿದ್ದು ಪ್ರಾರ್ಥನೆ ಮಾಡುತ್ತಾರೆ. ಅದರಂತೆಯೇ, ಫರಿಸಾಯರ ಶಿಷ್ಯರೂ ಮಾಡುತ್ತಾರೆ. ನಿನ್ನ ಶಿಷ್ಯರಾದರೋ ತಿಂದು ಕುಡಿಯುವುದರಲ್ಲಿಯೇ ಇದ್ದಾರೆ,” ಎಂದು ಕೆಲವರು ಮೂದಲಿಸಿದರು.  ಅದಕ್ಕೆ ಯೇಸು, “ಮದುವಣಿಗನು ಜೊತೆಯಲ್ಲಿರುವಾಗ ಮದುವೆಯ ಅತಿಥಿಗಳನ್ನು ಉಪವಾಸವಿರಿಸಲಾದೀತೆ? ಮದುವಣಿಗನು ಅವರಿಂದ ಅಗಲಬೇಕಾಗುವ ಕಾಲವು ಬರುವುದು. ಆ ದಿನಗಳು ಬಂದಾಗ ಅವರು ಉಪವಾಸಮಾಡುವರು,” ಎಂದು ಉತ್ತರಕೊಟ್ಟರು. ಮತ್ತೆ ಅವರಿಗೆ ಯೇಸು ಈ ಸಾಮತಿಯನ್ನು ಹೇಳಿದರು: “ಹಳೆಯ ಅಂಗಿಗೆ ತೇಪೆ ಹಾಕಲು ಹೊಸ ಅಂಗಿಯಿಂದ ತುಂಡನ್ನು ಯಾರೂ ಹರಿಯುವುದಿಲ್ಲ. ಹಾಗೆ ಮಾಡಿದ್ದೇ ಆದರೆ ಹೊಸದೂ ಹರುಕಲಾಗಿ, ಹಳೆಯದೂ ಹೊಸ ತೇಪೆಗೆ ಹೊಂದಿಕೆಯಾಗದೆ ಹೋಗುತ್ತದೆ.  ಅಂತೆಯೇ, ಹಳೆಯ ಬುದ್ದಲಿಗಳಲ್ಲಿ ಹೊಸ ಮದ್ಯವನ್ನು ಯಾರೂ ತುಂಬಿಡುವುದಿಲ್ಲ. ತುಂಬಿ ಇಟ್ಟರೆ, ಹೊಸ ಮದ್ಯವು ಬುದ್ದಲಿಗಳನ್ನು ಬಿರಿಯುತ್ತದೆ; ಮದ್ಯ ಚೆಲ್ಲಿಹೋಗುತ್ತದೆ; ಬುದ್ದಲಿಗಳೂ ಹಾಳಾಗುತ್ತವೆ.  ಆದುದರಿಂದ ಹೊಸ ಮದ್ಯವನ್ನು ಹೊಸ ಬುದ್ದಲಿಗಳಲ್ಲೇ ತುಂಬಿಡಬೇಕು.  ಹಳೆ ಮದ್ಯ ಕುಡಿದವನಿಗೆ ಹೊಸದು ರುಚಿಸುವುದಿಲ್ಲ. ಅವನು ಹಳೆಯದೇ ಶ್ರೇಷ್ಠವೆನ್ನುತ್ತಾನೆ,” ಎಂದರು.

05.09.24 - ಇಂದಿನಿಂದ ನೀನು ಮೀನು ಹಿಡಿಯುವ ಬದಲು ಮನುಷ್ಯರನ್ನೇ ಹಿಡಿಯುವವನು ಆಗುವೆ

ಮೊದಲನೆಯ ವಾಚನ: 1 ಕೊರಿಂಥಿಯರಿಗೆ  3:18-23


ಸಹೋದರರೇ, ಯಾರೂ ತನ್ನನ್ನು ತಾನೇ ವಂಚಿಸಿಕೊಳ್ಳದಿರಲಿ. ನಿಮ್ಮಲ್ಲಿ ಯಾರಾದರೂ ಈ ಲೋಕದ ದೃಷ್ಟಿಯಲ್ಲಿ ತಾನು ಜಾಣನೆಂದು ಭಾವಿಸುವುದಾದರೆ ಅಂಥವನು ಮೊದಲು ಹುಚ್ಚನಂತಿರಲು ಕಲಿಯಲಿ. ಆಗ ಅವನು ನಿಜವಾಗಿಯೂ ಜಾಣನಾಗುತ್ತಾನೆ. ಇಹಲೋಕದ ಜಾಣತನವು ದೇವರ ದೃಷ್ಟಿಯಲ್ಲಿ ಹುಚ್ಚುತನವೇ ಸರಿ. " ದೇವರು ಜ್ಞಾನಿಗಳನ್ನು ಅವರ ಜಾಲದಲ್ಲಿಯೇ ಸಿಕ್ಕಿಸುವರು " ಎಂದೂ " ಜ್ಞಾನಿಗಳ ಯೋಜನೆಗಳು ನಿಷ್ಫಲವೆಂಬುದು ಪ್ರಭುವಿಗೆ ತಿಳಿದಿದೆ " ಎಂದೂ ಲಿಖಿತವಾಗಿದೆಯಲ್ಲವೆ? ಆದ್ದರಿಂದ ಕೇವಲ ನರಮಾನವರನ್ನೇ ನೆಚ್ಚಿಕೊಂಡು ಯಾರೂ ಹೆಚ್ಚಳಪಡದಿರಲಿ. ವಾಸ್ತವವಾಗಿ ಸಮಸ್ತವೂ ನಿಮ್ಮದೇ. ಪೌಲ, ಅಪೊಲೋಸ್, ಕೇಫ -- ಇವರಾಗಲಿ; ಜಗತ್ತು, ಜೀವ, ಮರಣ -- ಇವುಗಳಾಗಲಿ, ಅಥವಾ ವರ್ತಮಾನ, ಭವಿಷ್ಯತ್ಕಾಲಗಳಾಗಲಿ, ಇವೆಲ್ಲವೂ ನಿಮ್ಮವೇ. ಆದರೆ ನೀವು ಕ್ರಿಸ್ತ ಯೇಸುವಿಗೆ ಸೇರಿದವರು; ಕ್ರಿಸ್ತ ಯೇಸು ದೇವರಿಗೆ ಸೇರಿದವರು.
-ಪ್ರಭುವಿನ ವಾಕ್ಯ

ಕೀರ್ತನೆ 24:1-6

ಶ್ಲೋಕ: ಜಗವೂ ಅದರ ಜೀವಜಂತುಗಳೆಲ್ಲವೂ ಪ್ರಭುವಿನದೇ.

ಪೊಡವಿಯೂ ಅದರಲ್ಲಿರುವುದೆಲ್ಲವೂ ಪ್ರಭುವಿನದೇ|
ಜಗವೂ ಅದರ ಜೀವಜಂತುಗಳೆಲ್ಲವೂ ಆತನದೇ||
ಕಡಲನು ತಳಪಾಯವನಾಗಿಸಿದವನು ಆತನೇ|
ಜಲರಾಶಿ ನಡುವೆ ಅದನು ಸ್ಥಿರಗೊಳಿಸಿದವನಾತನೇ||

ಪ್ರಭುವಿನ ಶಿಖರವನು ಏರಬಲ್ಲವನಾರು?|
ಆ ನಿವಾಸದಲಿ ನಿಲ್ಲಲು ಯೋಗ್ಯನಾರು?||
ಅಂಥವನಿರಬೇಕು ಶುದ್ಧ ಹಸ್ತನು, ಸುಮನಸ್ಕನು|
ಅನಾಚಾರಕೆ, ಅಪ್ರಮಾಣಿಕತೆಗೆ ಒಲಿಯನವನು||

ಲಭಿಸುವುದಾತನಿಗೆ ಶುಭ ಪ್ರಭುವಿನಿಂದ|
ನೀತಿಯ ಸತ್ಫಲ ರಕ್ಷಕ ದೇವನಿಂದ||
ಇಂಥವರೇ ದೇವರ ದರ್ಶನಾಭ್ಯರ್ಥಿಗಳು|
ಇಂಥವರೇ ಯಕೋಬ ದೇವನ ಭಕ್ತಾದಿಗಳು||

ಶುಭಸಂದೇಶ: ಲೂಕ 5:1-11


ಆ ಕಾಲದಲ್ಲಿ ಯೇಸು ಗೆನೆಸರೇತ್ ಎಂಬ ಸರೋವರದ ತೀರದಲ್ಲಿ ನಿಂತಿದ್ದಾಗ, ಜನಸಮೂಹವು ದೇವರ ವಾಕ್ಯವನ್ನು ಕೇಳಲು ನೂಕುನುಗ್ಗಲಾಗಿ ಬಂದು ಅವರನ್ನು ಒತ್ತರಿಸುತ್ತಿತ್ತು. ಆಗ ದಡದ ಮೇಲಿದ್ದ ಎರಡು ದೋಣಿಗಳು ಯೇಸುವಿನ ಕಣ್ಣಿಗೆ ಬಿದ್ದವು. ಬೆಸ್ತರು ದೋಣಿಗಳನ್ನು ಅಲ್ಲಿಯೇ ಬಿಟ್ಟು ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು. ಆ ದೋಣಿಗಳಲ್ಲಿ ಒಂದು ಸಿಮೋನನದು. ಯೇಸು ಅದನ್ನು ಹತ್ತಿ, ದಡದಿಂದ ಸ್ವಲ್ಪ ದೂರ ತಳ್ಳಲು ಹೇಳಿ, ಅದರಲ್ಲೇ ಕುಳಿತುಕೊಂಡು ತಮ್ಮ ಬೋಧನೆಯನ್ನು ಮುಂದುವರಿಸಿದರು. ಬೋಧನೆ ಮುಗಿದದ್ದೇ ಸಿಮೋನನಿಗೆ, " ನೀರು ಆಳವಾಗಿರುವ ಸ್ಥಳಕ್ಕೆ ದೋಣಿಯನ್ನು ಹಾಯಿಸಿ, ಮೀನುಬೇಟೆಗೆ ನಿಮ್ಮ ಬಲೆಗಳನ್ನು ಹಾಕಿರಿ, " ಎಂದರು, ಅದಕ್ಕೆ ಸಿಮೋನನು, " ಗುರುವೇ, ನಾವು ರಾತ್ರಿಯೆಲ್ಲಾ ದುಡಿದಿದ್ದೇವೆ; ಏನೂ ಸಿಗಲಿಲ್ಲ. ಆದರೂ ನಿಮ್ಮ ಮಾತಿಗೆ ಬೆಲೆ ಕೊಟ್ಟು ಬಲೆಗಳನ್ನು ಹಾಕಿದ್ದೇ ಮೀನುಗಳು ರಾಶಿ ರಾಶಿಯಾಗಿ ಸಿಕ್ಕಿಕೊಂಡವು; ಬಲೆಗಳು ಹರಿದು ಹೋಗುವುದರಲ್ಲಿದ್ದವು. ಆದುದರಿಂದ ಬೇರೆ ದೋಣಿಯಲ್ಲಿದ್ದ ತಮ್ಮ ಸಂಗಡಿಗರಿಗೆ ಸನ್ನೆ ಮಾಡಿ ಸಹಾಯಕ್ಕಾಗಿ ಕರೆದುಕೊಂಡರು. ಅವರೆಲ್ಲರೂ ಸೇರಿ ಮೀನುಗಳನ್ನು ತುಂಬಿಕೊಳ್ಳಲು, ದೋಣಿಗಳೆರಡೂ ಮುಳುಗಲು ಆರಂಭಿಸಿದವು. ಇದನ್ನು ಕಂಡ ಸಿಮೋನ್ ಪ್ರೇತ್ರನು ಯೇಸುವಿನ ಕಾಲಿಗೆ ಬಿದ್ದು, " ಪ್ರಭೂ, ನಾನು ಪಾಪಾತ್ಮ; ನನ್ನಿಂದ ದೂರವಿರಿ! " ಎಂದನು. ಹಿಡಿದ ಮೀನಿನ ರಾಶಿಯನ್ನು ಕಂಡು ಅವನ ಸಂಗಡಿಗರೆಲ್ಲರೂ ನಿಬ್ಬೆರಗಾಗಿ ಹೋಗಿದ್ದರು. ಸಿಮೋನನ ಪಾಲುಗಾರರಾದ ಜೆಬೆದಾಯನ ಮಕ್ಕಳು -- ಯಕೋಬ ಮತ್ತು ಯೊವಾನ್ನರು -- ಹಾಗೆಯೇ ಬೆರಗಾಗಿದ್ದರು. ಆಗ ಯೇಸು ಸಿಮೋನನಿಗೆ, " ಹೀದರಬೇಡ, ಇಂದಿನಿಂದ ನೀನು ಮೀನು ಹಿಡಿಯುವ ಬದಲು ಮನುಷ್ಯರನ್ನೇ ಹಿಡಿಯುವವನು ಆಗುವೆ, " ಎಂದರು. ಆ ಬೆಸ್ತರು ದೋಣಿಗಳನ್ನು ದಡಕ್ಕೆ ಸಾಗಿಸಿದ್ದೇ ಎಲ್ಲವನ್ನೂ ತ್ಯಜಿಸಿಬಿಟ್ಟು ಯೇಸುವನ್ನು ಹಿಂಬಾಲಿಸಿದರು.
- ಪ್ರಭುಕ್ರಿಸ್ತರ ಶುಭಸಂದೇಶ

04.09.24 - “ನೀವು ದೇವರ ಪುತ್ರ”

ಮೊದಲನೇ ವಾಚನ: ೧ ಕೊರಿಂಥಿಯರಿಗೆ 3:1-9

ಪ್ರಿಯ ಸಹೋದರರೇ, ದೇವರ ಆತ್ಮವನ್ನು ಪಡೆದವರೊಡನೆ ಮಾತನಾಡಿದಂತೆ ನಿಮ್ಮೊಡನೆ ನಾವು ಮಾತನಾಡಲಿಲ್ಲ. ಲೌಕಿಕರು ನೀವು; ಕ್ರಿಸ್ತಯೇಸುವಿನಲ್ಲಿ ಹಸುಗೂಸುಗಳು ನೀವು ಎಂದು ಭಾವಿಸಿ ನಿಮ್ಮೊಡನೆ ಮಾತನಾಡಬೇಕಾಯಿತು.  ನಾನು ನಿಮಗೆ ಹಾಲೂಡಿಸಿದೆನು; ಗಟ್ಟಿ ಆಹಾರವನ್ನು ಕೊಡಲಿಲ್ಲ. ಏಕೆಂದರೆ, ಅದನ್ನು ಜೀರ್ಣಿಸಿಕೊಳ್ಳಲು ನಿಮಗೆ ಶಕ್ತಿ ಇರಲಿಲ್ಲ. ಇಂದಿಗೂ ನೀವು ಶಕ್ತರಲ್ಲ. ನೀವು ಇನ್ನೂ ಲೌಕಿಕರಂತೆ ಬಾಳುತ್ತಿದ್ದೀರಿ. ನಿಮ್ಮ ನಡುವೆ ದ್ವೇಷ-ಅಸೂಯೆ, ವಾದ-ವಿವಾದಗಳು ಪ್ರಬಲವಾಗಿದ್ದು ನೀವಿನ್ನೂ ಪ್ರಾಣಿಗಳಂತೆ, ಸಾಧಾರಣ ಮನುಷ್ಯರಂತೆ ವರ್ತಿಸುತ್ತಿದ್ದೀರಲ್ಲವೆ? ಒಬ್ಬನು, ನಾನು ಪೌಲನ ಕಡೆಯವನು; ಇನ್ನೊಬ್ಬನು, ನಾನು ಅಪೊಲೋಸನ ಕಡೆಯವನು, ಎಂದು ನಿಮ್ಮೊಳಗೆ ಕಿತ್ತಾಡುವ ನೀವು ಕೇವಲ ನರಪ್ರಾಣಿಗಳಲ್ಲದೆ ಮತ್ತೇನು? ಅಪೊಲೋಸನು ಯಾರು? ಪೌಲನು ಯಾರು? ನಿಮ್ಮನ್ನು ವಿಶ್ವಾಸಕ್ಕೆ ಕರೆತಂದ ದಾಸರು ನಾವಲ್ಲವೇ? ನಮ್ಮಲ್ಲಿ ಪ್ರತಿಯೊಬ್ಬನು ಪ್ರಭು ನಿಯಮಿಸುವ ಕಾರ್ಯವನ್ನು ನಿರ್ವಹಿಸುತ್ತೇವೆ. ನಾನು ಸಸಿಯನ್ನು ನೆಟ್ಟೆನು; ಅಪೊಲೋಸನು ನೀರೆರೆದನು; ಆದರೆ ಅದನ್ನು ಬೆಳೆಸಿದವರು ದೇವರು. ಆದ್ದರಿಂದ ನೆಡುವವನಾಗಲಿ, ನೀರೆರೆಯುವವನಾಗಲಿ ಪ್ರಮುಖನಲ್ಲ; ಬೆಳವಣಿಗೆ ನೀಡುವ ದೇವರೇ ದೊಡ್ಡವರು. ನೆಡುವವನೂ ನೀರೆರೆಯುವವನೂ ಇಬ್ಬರೂ ಅಗತ್ಯವಾಗಿ ಬೇಕಾದವರೇ. ಅವನವನ ದುಡಿಮೆಗೆ ತಕ್ಕ ಹಾಗೆ ಪ್ರತಿಯೊಬ್ಬನೂ ಸಂಭಾವನೆ ಪಡೆಯುತ್ತಾನೆ. ನಾವು ದೇವರ ಸಹಕಾರ್ಮಿಕರು. ನೀವು ದೇವರೆ ಸಾಗುವಳಿಮಾಡುವ ಹೊಲ; ಅವರೆ ನಿರ್ಮಿಸುತ್ತಿರುವ ಮಂದಿರ.

ಕೀರ್ತನೆ: 33:12-13, 14-15, 20-21

ಶ್ಲೋಕ: ಸ್ವಜನರಾಗಿ ಪ್ರಭು ಆಯ್ದುಕೊಂಡ ಜನತೆ ಧನ್ಯ

ಶುಭಸಂದೇಶ: ಲೂಕ 4:38-44

ಪ್ರಾರ್ಥನಾಮಂದಿರದಿಂದ ಹೊರಟ ಯೇಸುಸ್ವಾಮಿ ಸಿಮೋನನ ಮನೆಗೆ ಬಂದರು. ಆ ಸಿಮೋನನ ಅತ್ತೆ ವಿಷಮಜ್ವರದಿಂದ ನರಳುತ್ತಿದ್ದಳು. ಅಲ್ಲಿದ್ದವರು ಅವಳ ಪರವಾಗಿ ಯೇಸುವಿನಲ್ಲಿ ಮೊರೆಯಿಟ್ಟರು. ಯೇಸು ಆಕೆಯ ಬಳಿ ನಿಂತು, ಬಾಗಿ, ಜ್ವರಕ್ಕೆ ಬಿಟ್ಟುಹೋಗೆಂದು ಆಜ್ಞಾಪಿಸಿದರು; ಅದು ಬಿಟ್ಟುಹೋಯಿತು. ಆ ಕ್ಷಣವೇ ಆಕೆ ಎದ್ದು ಅವರೆಲ್ಲರನ್ನು ಸತ್ಕರಿಸಿದಳು. ಸಂಜೆಯಾಗುತ್ತಿದ್ದಂತೆ ಜನರು ತಮ್ಮ ಮನೆಯಲ್ಲಿ ವಿಧವಿಧವಾದ ಕಾಯಿಲೆಯಿಂದ ನರಳುತ್ತಿದ್ದವರನ್ನೆಲ್ಲಾ ಯೇಸುಸ್ವಾಮಿಯ ಬಳಿಗೆ ಕರೆತಂದರು. ಯೇಸು ಪ್ರತಿಯೊಬ್ಬನ ಮೇಲೆ ತಮ್ಮ ಕೈಯಿಟ್ಟು ಗುಣಪಡಿಸಿದರು.  ಅನೇಕರ ಮೈಮೇಲಿದ್ದ ದೆವ್ವಗಳು ಸಹ, “ನೀವು ದೇವರ ಪುತ್ರ,” ಎಂದು ಬೊಬ್ಬೆಹಾಕುತ್ತಾ ಬಿಟ್ಟುಹೋದುವು. ಇವರೇ ‘ಕ್ರಿಸ್ತ’ ಎಂದು ಅವುಗಳು ತಿಳಿದಿದ್ದರಿಂದ ಯೇಸು ಅವುಗಳನ್ನು ಗದರಿಸಿ ಮಾತೆತ್ತಲು ಬಿಡಲಿಲ್ಲ. ಬೆಳಗಾಗುತ್ತಲೇ, ಯೇಸುಸ್ವಾಮಿ ಅಲ್ಲಿಂದ ಹೊರಟು ನಿರ್ಜನ ಸ್ಥಳಕ್ಕೆ ಹೋದರು. ಜನಸಮೂಹವು ಅವರನ್ನು ಹುಡುಕಿಕೊಂಡು ಅಲ್ಲಿಗೂ ಬಂದಿತು; ತಮ್ಮನ್ನು ಬಿಟ್ಟುಹೋಗಬಾರದೆಂದು ಜನರು ತಡೆಗಟ್ಟಲು ಯತ್ನಿಸಿದರು.  ಅವರಿಗೆ ಯೇಸು, “ದೇವರ ಸಾಮ್ರಾಜ್ಯದ ಶುಭಸಂದೇಶವನ್ನು ಬೇರೆ ಬೇರೆ ಊರುಗಳಿಗೂ ನಾನು ಬೋಧಿಸಬೇಕಾಗಿದೆ. ನನ್ನನ್ನು ಕಳುಹಿಸಿರುವುದು ಅದಕ್ಕಾಗಿಯೇ,” ಎಂದರು.  ಬಳಿಕ ಜುದೇಯ ಪ್ರಾಂತ್ಯದ ಪ್ರಾರ್ಥನಾಮಂದಿರಗಳಲ್ಲಿ ಯೇಸು ಬೋಧಿಸುತ್ತಿದ್ದರು.

03.09.24 - “ಎಂಥಾ ಮಾತುಗಳಿವು! ಅಧಿಕಾರದಿಂದಲೂ ಶಕ್ತಿಯಿಂದಲೂ ದೆವ್ವಗಳಿಗೆ ಕೂಡ ಆಜ್ಞೆ ಮಾಡುತ್ತಾನೆ"

ಮೊದಲನೇ ವಾಚನ: 1 ಕೊರಿಂಥಿಯರಿಗೆ 2:10-16

ಸಹೋದರರೇ, ನಮಗಾದರೋ ದೇವರು ಪವಿತ್ರಾತ್ಮ ಅವರ ಮುಖಾಂತರ ಇವುಗಳನ್ನು ಪ್ರಕಟಿಸಿದ್ದಾರೆ. ಸಕಲವನ್ನು ಹಾಗೂ ದೇವರ ಅಂತರಾಳವನ್ನು ಅವಲೋಕಿಸುವವರು ಈ ಪವಿತ್ರಾತ್ಮರೇ.  ಮಾನವನ ಆಲೋಚನೆಗಳನ್ನು ಅವನ ಅಂತರಾತ್ಮವಲ್ಲದೆ ಮತ್ತಾರು ಬಲ್ಲರು? ಅಂತೆಯೇ, ದೇವರ ಆಲೋಚನೆಗಳನ್ನು ಪವಿತ್ರಾತ್ಮರಲ್ಲದೆ ಬೇರೆ ಯಾರೂ ಅರಿಯಲಾರರು.  ನಾವಾದರೋ ಪ್ರಾಪಂಚಿಕ ಆತ್ಮವನ್ನು ಹೊಂದಿದವರಲ್ಲ. ದೇವರು ನಮಗೆ ದಯಪಾಲಿಸಿರುವ ವರಪ್ರಸಾದಗಳನ್ನು ಅರಿತುಕೊಳ್ಳುವಂತೆ ಮಾಡುವ ಪಾರಮಾರ್ಥಿಕ ಆತ್ಮವನ್ನು ಪಡೆದಿದ್ದೇವೆ. ನಾವು ಇವುಗಳನ್ನು ಮಾನವ ಜ್ಞಾನ ಪ್ರೇರೇಪಿಸಿದ ಮಾತುಗಳಿಂದ ಹೇಳುವುದಿಲ್ಲ. ದೇವರ ಆತ್ಮದಿಂದ ಪ್ರೇರಿತವಾದ ಮಾತುಗಳಿಂದ ಹೇಳುತ್ತೇವೆ. ಹೀಗೆ ಆಧ್ಯಾತ್ಮಿಕ ಸತ್ಯಗಳನ್ನು, ಆಧ್ಯಾತ್ಮಿಕ ವ್ಯಕ್ತಿಗಳಿಗೆ ವಿವರಿಸುತ್ತೇವೆ.  ಭೌತಿಕ ಮನುಷ್ಯನು ದೇವರ ಆತ್ಮದ ವರಗಳನ್ನು ನಿರಾಕರಿಸುತ್ತಾನೆ. ಅವು ಅವನಿಗೆ ಹುಚ್ಚುತನವಾಗಿ ತೋರುತ್ತವೆ. ಅವುಗಳನ್ನು ಗ್ರಹಿಸಲು ಅವನಿಂದಾಗದು. ಏಕೆಂದರೆ, ಆಧ್ಯಾತ್ಮಿಕ ವಿವೇಚನೆಯಿಂದ ಮಾತ್ರ ಅವುಗಳನ್ನು ಅರಿಯಲು ಸಾಧ್ಯ.  ದೇವರ ಆತ್ಮವನ್ನು ಹೊಂದಿದವನು ಎಲ್ಲವನ್ನೂ ವಿಚಾರಣೆಮಾಡಿ ತಿಳಿದುಕೊಳ್ಳುತ್ತಾನೆ. ಅವನನ್ನು ಯಾರೂ ವಿಚಾರಣೆಗೆ ಗುರಿಮಾಡಲಾಗದು.  “ಪ್ರಭುವಿನ ಮನಸ್ಸನ್ನರಿತವರಾರು? ಪ್ರಭುವಿಗೆ ಉಪದೇಶಿಸುವವರಾರು?” ಎಂದು ಲಿಖಿತವಾಗಿದೆ. ನಾವಾದರೋ, ಕ್ರಿಸ್ತಯೇಸುವಿನ ಮನೋಭಾವನೆಯುಳ್ಳವರು.

ಕೀರ್ತನೆ: 145:8-9, 10-11, 12-13, 13-14
ಶ್ಲೋಕ: ಪ್ರಭುವಿನ ಮಾರ್ಗ ಧರ್ಮಸಮ್ಮತ

ಶುಭಸಂದೇಶ: ಲೂಕ 4:31-37


ಬಳಿಕ ಯೇಸುಸ್ವಾಮಿ ಗಲಿಲೇಯ ಪ್ರಾಂತ್ಯದ ಕಫೆರ್ನವುಮ್ ಎಂಬ ಊರಿಗೆ ಬಂದು ಸಬ್ಬತ್ದಿನ ಅಲ್ಲಿನ ಜನರಿಗೆ ಬೋಧಿಸುತ್ತಿದ್ದರು.  ಅವರು ಅಧಿಕಾರವಾಣಿಯಿಂದ ಉಪದೇಶಿಸುತ್ತಿದ್ದುದನ್ನು ಕೇಳಿ ಜನರೆಲ್ಲರೂ ಬೆರಗಾದರು. ದುಷ್ಟ ದೆವ್ವ ಹಿಡಿದಿದ್ದ ಒಬ್ಬನು ಆ ಪ್ರಾರ್ಥನಾಮಂದಿರದಲ್ಲಿ ಇದ್ದನು.  ಅವನು, “ನಜರೇತಿನ ಯೇಸುವೇ, ನಿಮಗೇಕೆ ನಮ್ಮ ಗೊಡವೆ? ನೀವು ನಮ್ಮ ವಿನಾಶಕ್ಕಾಗಿ ಬಂದವರೇನು? ನೀವು ಯಾರೆಂದು ನನಗೆ ಗೊತ್ತು; ದೇವರಿಂದ ಬಂದ ಪರಮಪೂಜ್ಯರು ನೀವು,” ಎಂದು ಗಟ್ಟಿಯಾಗಿ ಕಿರುಚಿದನು.  ಆದರೆ ಯೇಸು ಅವನನ್ನು ಗದರಿಸಿ, “ಸುಮ್ಮನಿರು, ಇವನನ್ನು ಬಿಟ್ಟು ತೊಲಗು,” ಎಂದು ದೆವ್ವಕ್ಕೆ ಆಜ್ಞಾಪಿಸಿದರು. ಆ ದೆವ್ವ ಎಲ್ಲರ ಎದುರಿಗೇ ಅವನನ್ನು ಕೆಡವಿ, ಯಾವ ಕೆಡುಕನ್ನೂ ಮಾಡದೆ ಅವನನ್ನು ಬಿಟ್ಟು ಹೋಯಿತು.  ಜನರೆಲ್ಲರೂ ಆಶ್ಚರ್ಯಚಕಿತರಾದರು. “ಎಂಥಾ ಮಾತುಗಳಿವು! ಅಧಿಕಾರದಿಂದಲೂ ಶಕ್ತಿಯಿಂದಲೂ ದೆವ್ವಗಳಿಗೆ ಕೂಡ ಆಜ್ಞೆಮಾಡುತ್ತಾನೆ; ಅವು ಕೂಡ ಈತ ಹೇಳಿದ ಹಾಗೆ ಕೇಳುತ್ತವಲ್ಲಾ!” ಎಂದು ತಮ್ಮತಮ್ಮೊಳಗೇ ಮಾತನಾಡಿಕೊಂಡರು. ಯೇಸುವಿನ ಸಮಾಚಾರ ಆ ಪ್ರಾಂತ್ಯದಲ್ಲೆಲ್ಲಾ ಹಬ್ಬಿ ಹರಡಿತು.

02.09.04

ಮೊದಲನೆಯ ವಾಚನ:  1 ಕೊರಿಂಥಿಯರಿಗೆ  2:1-5

ಸಹೋದರರೇ, ದೇವರ ಸತ್ಯಾರ್ಥವನ್ನು ಸಾರಲು ನಿಮ್ಮಲ್ಲಿಗೆ ನಾನು ಬಂದಾಗ ವಾಕ್ಚಾತುರ್ಯವನ್ನಾಗಲಿ, ಜ್ಞಾನ ಭಂಡಾರವನ್ನಾಗಲಿ ಪ್ರದರ್ಶಿಸುತ್ತಾ ಬರಲಿಲ್ಲ. ನಾನು ನಿಮ್ಮೊಡನೆ ಇದ್ದಾಗ, ಯೇಸು ಕ್ರಿಸ್ತರನ್ನು, ಅದೂ ಶಿಲುಬೆಗೇರಿಸಲಾದ ಯೇಸುವನ್ನು ಹೊರತು ಬೇರೆ ಯಾವುದನ್ನೂ ಅರಿಯಲು ಆಶಿಸಲಿಲ್ಲ. ಈ ಕಾರಣ, ನಾನು ನಿಮ್ಮ ನಡುವೆ ದುರ್ಬಲನೂ ಭಯಭೀತನೂ ಆಗಿದ್ದೆ. ನನ್ನ ಬೋಧನೆ ಹಾಗೂ ಮಾತುಕತೆ ಕೇವಲ ಬುದ್ಧಿವಂತಿಯಿಂದಾಗಲಿ ಮಾತಿನ ಚಮತ್ಕಾರ್ಯದಿಂದಾಗಲಿ ಕೂಡಿರಲಿಲ್ಲ; ಅದಕ್ಕೆ ಬದಲಾಗಿ ದೇವರ ಆತ್ಮವನ್ನು, ಅವರ ಶಕ್ತಿಯನ್ನು ಸಮರ್ಥಿಸುತ್ತಿದ್ದವು. ಅಂತೆಯೇ ನಿಮ್ಮ ವಿಶ್ವಾಸವು ಮನುಷ್ಯ ಜ್ಞಾನವನ್ನು ಆಧರಿಸಿದೆ, ದೇವರ ಶಕ್ತಿಯನ್ನು ಆಧರಿಸಬೇಕೆಂಬುದೇ ನನ್ನ ಉದ್ದೇಶವಾಗಿತ್ತು.

ಕೀರ್ತನೆ 119:97,98,99,100,101,102
ಶ್ಲೋಕ: ಪ್ರಭೂ, ನಿನ್ನ ಧರ್ಮಶಾಸ್ತ್ರ ನನಗೆನಿತೋ ಪ್ರಿಯ.


ನಿನ್ನ ಧರ್ಮಶಾಸ್ತ್ರ ನನಗೆನಿತೋ ಪ್ರಿಯ|
ನಾನದರಲೇ ದಿನವೆಲ್ಲ ಧ್ಯಾನಮಯ||
ನಿನ್ನಾಜ್ಞೆಗಳು ಸದಾ ನನ್ನೊಂದಿಗಿರುವುದರಿಂದ|
ನಾನಧಿಕ ಬುದ್ಧಿವಂತ ನನ್ನ ಶತ್ರುಗಳಿಗಿಂತ||

ನಿನ್ನ ಕಟ್ಟಳೆಗಳ ಧ್ಯಾನಿ ನಾನಾದುದರಿಂದ|
ನಾನಧಿಕ ಜ್ಞಾನಿ ನನ್ನ ಬೋಧಕರೆಲ್ಲರಿಗಿಂತ||
ನಿನ್ನ ನಿಯಮಗಳನ್ನು ಕೈಗೊಂಡುದರಿಂದ|
ನಾನಧಿಕ ವಿವೇಕಿ ಗುರುಹಿರಿಯರಿಗಿಂತ||

ನಿನ್ನ ವಾಕ್ಯವನ್ನು ಅನುಸರಿಸುವ ಧೈಯದಿಂದ|
ನನ್ನ ಹೆಜ್ಜೆಗಳನ್ನು ತಡೆದೆನು ದುರ್ಮಾರ್ಗದಿಂದ||
ತಪ್ಪಿಸಿಕೊಳ್ಳಲಿಲ್ಲ ನಾ ನಿನ್ನ ವಿಧಿಗಳಿಂದ||
ನೀನೇ ನನಗದರ ಬೋಧನೆ ಮಾಡಿದ್ದರಿಂದ||

ಘೋಷಣೆ (119:135)
ಅಲ್ಲೆಲೂಯ, ಅಲ್ಲೆಲೂಯ!


ಪ್ರಭುವಿನ ನಿಯಮ ನೀತಿಬದ್ಧ ; ಮನಸ್ಸಿಗದು ಗ್ರಹಿಕೆ | ಪ್ರಭುವಿನ ಕಟ್ಟಳೆ ಪರಿಶುದ್ಧ ; ಕಣ್ಣಿಗದು ದೀವಿಗೆ ||
ಅಲ್ಲೆಲೂಯ!

ಶುಭಸಂದೇಶ: ಲೂಕ 4:16-30

ಆ ಕಾಲದಲ್ಲಿ ಯೇಸು ತಾವು ಬೆಳೆದ ಊರಾದ ನಜರೇತಿಗೆ ಬಂದರು. ವಾಡಿಕೆಯ ಪ್ರಕಾರ ಸಬ್ಬತ್ ದಿನ ಪ್ರಾರ್ಥನಾ ಮಂದಿರಕ್ಕೆ ಹೋದರು. ಅಲ್ಲಿ ಪವಿತ್ರ ಗ್ರಂಥವನ್ನು ಓದುವುದಕ್ಕೆ ಎದ್ದು ನಿಂತಾಗ, ಪ್ರವಾದಿ ಯೆಶಾಯನ ಗ್ರಂಥದ ಸುರುಳಿಯನ್ನು ಅವರ ಕೈಗೆ ಕೊಟ್ಟರು. ಅದನ್ನು ಬಿಚ್ಚಿದಾಗ ಈ ಕೆಳಗಿನ ವಚನಗಳು ಯೇಸುವಿನ ಕಣ್ಣಿಗೆ ಬಿದ್ದವು. “ದೇವರಾತ್ಮ ನನ್ನ ಮೇಲಿದೆ ದೀನದಲಿತರಿಗೆ ಶುಭಸಂದೇಶವನ್ನು ಬೋಧಿಸಲೆಂದೆ ಅವರೆನ್ನನು ಅಭಿಷೆಕಿಸಿದ್ದಾರೆ. ಬಂಧಿತರಿಗೆ ಬಿಡುಗಡೆಯನ್ನು, ಅಂಧರಿಗೆ ದೃಷ್ಟಿದಾನವನ್ನು ಪ್ರಕಟಿಸಲೂ ಶೋಷಿತರಿಗೆ ಸ್ವಾತಂತ್ರ್ಯ ನೀಡಲೂ ದೇವರು ತಮ್ಮ ಜನತೆಯನು ಉದ್ಧರಿಸುವ ಕಾಲ ಬಂತೆಂದು ಸಾರಲೂ ಅವರು ನನ್ನನ್ನು ಕಳುಹಿಸಿದ್ದಾರೆ.” ಈ ವಾಕ್ಯವನ್ನು ಓದಿ, ಸುರುಳಿಯನ್ನು ಸುತ್ತಿ ಪ್ರಾರ್ಥನಾ ಮಂದಿರದ ಸೇವಕನ ಕೈಗಿತ್ತು, ಯೇಸು ಕುಳಿತು ಕೊಂಡರು. ಅಲ್ಲಿದ್ದ ಎಲ್ಲರ ಕಣ್ಣುಗಳು ಯೇಸುವಿನ ಮೇಲೆಯೆ ನಾಟಿದ್ದವು. ಆಗ ಯೇಸು, “ನೀವು ಪವಿತ್ರ ಗ್ರಂಥದ ವಾಕ್ಯವನ್ನು ಕೇಳುತ್ತಿದ್ದ ಹಾಗೆಯೇ ಅದು ಇಂದು ನೇರವೇರಿತು,” ಎಂದು ವಿವರಿಸಲಾರಂಭಿಸಿದರು. ಎಲ್ಲರೂ ಅವರನ್ನು ಬಹುವಾಗಿ ಮೆಚ್ಚಿಕೊಂಡರು. ಅವರ ಬಾಯಿಂದ ಬಂದ ಮಧುರ ಮಾತುಗಳನ್ನು ಕೇಳಿ ಅಚ್ಚರಿಗೊಂಡರು. “ಇವನು ಜೋಸೆಫನ ಮಗನಲ್ಲವೇ?” ಎಂದು ಮಾತನಾಡಿಕೊಂಡರು. ಅನಂತರ ಯೇಸು ಅವರಿಗೆ, “ವೈದ್ಯನೇ, ಮೊದಲು ನಿನ್ನನ್ನು ನೀನು ಗುಣಪಡಿಸಿಕೊ” ಎಂಬ ಗಾದೆಯನ್ನು ನೀವು ನಿಸ್ಸಂದೇಹವಾಗಿ ನನಗೆ ಅನ್ವಯಿಸುವಿರಿ; ಅಲ್ಲದೆ ಕಫೇರ್ನವುಮಿನಲ್ಲಿ ನೀನು ಎಂತೆಂಥ ಮಹತ್ಕಾರ್ಯಗಳನ್ನು ಮಾಡಿದೆ ಎಂದು ನಾವು ಕೇಳಿದ್ದೇವೆ; ಅಂಥವುಗಳನ್ನು ಈ ನಿನ್ನ ಸ್ವಂತ ಊರಿನಲ್ಲೂ ಮಾಡು,’ ಎಂದು ಹೇಳುವಿರಿ. ಆದರೆ ಯಾವ ಪ್ರವಾದಿಯು ಸ್ವಗ್ರಾಮದಲ್ಲಿ ಸನ್ಮಾನಿತನಲ್ಲ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಹಿಂದೆ ನಡೆದ ಒಂದು ಸಂಗತಿಯನ್ನು ಕೇಳಿ: ಎಲೀಯನ ಕಾಲದಲ್ಲಿ ಮೂರು ವರ್ಷ ಆರು ತಿಂಗಳು ಮಳೆ ಬಾರದೆ ದೇಶದಲ್ಲೆಲ್ಲಾ ದೊಡ್ಡ ಕ್ಷಾಮ ಬಂದೊದಗಿತ್ತು. ಆಗ ಇಸ್ರಯೇಲ್ ನಾಡಿನಲ್ಲಿ ಎಷ್ಟೋ ಮಂದಿ ವಿಧವೆಯಾಗಿದ್ದರು. ಅವರಾರ ಬಳಿಗೂ ದೇವರು ಎಲೀಯನನ್ನು ಕಳುಹಿಸಲಿಲ್ಲ. ಸಿದೋನ್ ದೇಶಕ್ಕೆ ಸೇರಿದ ಸರೆಪ್ತ ಊರಿನ ಒಬ್ಬ ವಿಧವೆಯ ಬಳಿಗೆ ಮಾತ್ರ ಕಳುಹಿಸಿದರು. ಅಂತೆಯೇ, ಎಲೀಷನೆಂಬ ಪ್ರವಾದಿಯ ಕಾಲದಲ್ಲಿ ಇಸ್ರಯೇಲ್ ನಾಡಿನಲ್ಲಿ ಅನೇಕ ಕುಷ್ಠರೋಗಿಗಳು ಇದ್ದರು. ಅವರಲ್ಲಿ ಸಿರಿಯ ದೇಶದ ನಾಮಾನನು ಬಿಟ್ಟು ಮಿಕ್ಕ ಯಾರೂ ಗುಣಮುಖರಾಗಲಿಲ್ಲ, "ಎಂದು ಹೇಳಿದರು. ಇದನ್ನು ಕೇಳಿ, ಪ್ರಾರ್ಥನಾಮಂದಿರದಲ್ಲಿ ಇದ್ದ ಎಲ್ಲರೂ ಕಡುಗೋಪಗೊಂಡರು. ಯೇಸುವನ್ನು ಆ ಊರ ಹೊರಕ್ಕೆ ಎಳೆದುಕೊಂಡು, ತಮ್ಮ ಊರಿದ್ದ ಗುಡ್ಡದ ತುದಿಗೆ ಕೊಂಡೊಯ್ದು, ಅಲ್ಲಿಂದ ಅವರನ್ನು ಕೆಳಕ್ಕೆ ದಬ್ಬಬೇಕೆಂದಿದ್ದರು. ಯೇಸುವಾದರೋ ಅವರ ನಡುವೆಯೇ ನಡೆದು, ತಮ್ಮ ದಾರಿ ಹಿಡಿದುಹೋದರು.

01.09.24

ಮೊದಲನೆಯ ವಾಚನ: ಧರ್ಮೋಪದೇಶಕಾಂಡ 4:1-2, 6-8

ಇಸ್ರಯೇಲರೇ, ಕೇಳಿ: ನೀವು ಜೀವದಿಂದುಳಿದು ನಿಮ್ಮ ಪಿತೃಗಳ ದೇವರಾದ ಸರ್ವೇಶ್ವರ ನಿಮಗೆ ಕೊಡುವ ನಾಡನ್ನು ಸೇರಿ ಸ್ವಾಧೀನಮಾಡಿಕೊಳ್ಳಬೇಕಾದರೆ ನಾನು ಈಗ ಬೋಧಿಸುವ ಆಜ್ಞಾವಿಧಿಗಳನ್ನು ಗಮನದಿಂದ ಅನುಸರಿಸಬೇಕು. ನಿಮ್ಮ ದೇವರಾದ ಸರ್ವೇಶ್ವರ ಕೊಟ್ಟ ಆಜ್ಞೆಗಳನ್ನೇ ನಾನು ನಿಮಗೆ ತಿಳಿಸುತ್ತಾ ಇದ್ದೇನೆ. ಈ ಆಜ್ಞೆಗಳನ್ನು ನೀವು ಕೈಗೊಳ್ಳಬೇಕೇ ಹೊರತು ಅವುಗಳಿಗೆ ಏನೂ ಕೂಡಿಸಬಾರದು, ಅವುಗಳಿಂದ ಏನೂ ತೆಗೆದುಬಿಡಬಾರದು. ಇವುಗಳನ್ನು ಕೈಗೊಂಡು ಅನುಸರಿಸಿರಿ. ಅನುಸರಿಸಿದ್ದೇ ಆದರೆ ಅನ್ಯಜನಗಳು ನಿಮ್ಮನ್ನು ಜ್ಞಾನಿಗಳೂ ವಿವೇಕಿಗಳೂ ಎಂದು ತಿಳಿಯುವರು, ಈ ಆಜ್ಞೆಗಳ ಬಗ್ಗೆ ಅವರು ಅರಿತುಕೊಂಡಾಗ, ' ಈ ದೊಡ್ಡ ಜನಾಂಗ ಎಂಥಾ ಜ್ಞಾನ ವಿವೇಕವುಳ್ಳ ಜನಾಂಗ, ' ಎಂದು ಮಾತಾಡಿಕೊಳ್ಳುವರು. ನಾವು ಮೊರೆಯಿಡುವಾಗಲೆಲ್ಲಾ ನಮ್ಮ ದೇವರಾದ ಸರ್ವೇಶ್ವರ ನಮಗೆ ಸಮೀಪವಾಗಿರುವಂತೆ ಬೇರೆ ಯಾವ ಜನಾಂಗಕ್ಕೆ, ಅದೆಷ್ಟೇ ದೊಡ್ಡದಾಗಿರಲಿ, ಯಾವ ದೇವರು ಹೀಗೆ ಸಮೀಪವಾಗಿರುತ್ತಾರೆ ? ನಾನು ಈ ದಿನ ನಿಮ್ಮ ಮುಂದಿಡುವ ಇಂಥ ನ್ಯಾಯಯುತವಾದ ಆಜ್ಞಾವಿಧಿಗಳನ್ನು ಒಳಗೊಂಡ ಈ ಧರ್ಮಶಾಸ್ತ್ರಕ್ಕೆ ಸಮಾನವಾದುದು ಬೇರೆ ಯಾವ ಜನಾಂಗಕ್ಕೆ ಉಂಟು ?

ಕೀರ್ತನೆ 15:1-2, 3-4, 5
ಶ್ಲೋಕ: ಯೋಗ್ಯನಾರು ಪ್ರಭೂ, ನಿನ್ನ ಗುಡಾರದಲಿ ಬಿಡಾರಮಾಡಲು ?.

ಅರ್ಹನಾರು ನಿನ್ನ ಪವಿತ್ರ ಶಿಖರದಲಿ ವಾಸವಾಗಿರಲು?
ಅಂಥವನಿರಬೇಕು ನಿರ್ದೋಷಿ, ಸನ್ಮಾರ್ಗಿ
ಸತ್ಯವ ನುಡಿಯಬೇಕು ಹೃತ್ಪೂರ್ವಕವಾಗಿ

ಚಾಡಿಯನು ಹೇಳನು, ಕೇಡನು ಮಾಡನನ್ಯರಿಗೆ
ಗುರಿಮಾಡನವನು ನೆರೆಹೊರೆಯವರನು ನಿಂದೆಗೆ
ಭ್ರಷ್ಟರನು ಧಿಕ್ಕರಿಸುವನು, ಭಕ್ತರನ್ನು ಗೌರವಿಸುವನು

ನಷ್ಟವಾದರೂ ಕೊಟ್ಟಮಾತನು ತಪ್ಪನವನು
ಕೊಡುವನು ಕಡವನು, ಬಯಸನು ಬಡ್ಡಿಯನು
ಎಡವರ ಕೇಡಿಗೆ ಪಡೆಯನು ಲಂಚವನು
ಕದಲನೆಂದಿಗೂ ಈಪರಿ ನಡೆವವನು

ಎರಡನೆಯ ವಾಚನ: ಯಕೋಬ 1:17-18, 21-22, 27

ನನ್ನ ಪ್ರಿಯ ಸಹೋದರರೇ, ಎಲ್ಲಾ ಯೋಗ್ಯ ವರಗಳೂ ಉತ್ತಮ ಕೊಡುಗೆಗಳೂ ಬರುವುದು ಮೇಲಿನಿಂದಲೇ. ಜ್ಯೋತಿರ್ಮಂಡಲವನು ಉಂಟುಮಾಡಿದ ದೇವರೇ ಅವುಗಳ ಮೂಲದಾತರು. ಅವರಲ್ಲಿ ಚಂಚಲತೆ ಇಲ್ಲ, ಮಬ್ಬುಮುಸುಕಿದ ಛಾಯೆಯೂ ಇಲ್ಲ. ಸೃಷ್ಟಿಗಳಲ್ಲೆಲ್ಲಾ ನಾವು ಪ್ರಥಮ ಫಲವಾಗುವಂತೆ ದೇವರು ತಮ್ಮ ಸುಚಿತ್ತದ ಪ್ರಕಾರ ಸತ್ಯವಾಕ್ಯದ ಮೂಲಕ ನಮಗೆ ಜೀವವಿತ್ತರು. ನಿಮ್ಮ ಹೃದಯದಲ್ಲಿ ನೆಟ್ಟಿರುವ ವಾಕ್ಯವನ್ನು ನಮ್ರತೆಯಿಂದ ಪರಿಗ್ರಹಿಸಿರಿ. ಇದು ನಿಮ್ಮ ಜೀವೋದ್ಧಾರ ಮಾಡಬಲ್ಲದು. ದೇವರ ವಾಕ್ಯವನ್ನು ಕಿವಿಯಿಂದ ಕೇಳಿದರೆ ಸಾಕೆಂದು ತಿಳಿದು ಮರುಳಾಗದಿರಿ. ಆ ವಾಕ್ಯವನ್ನು ಅನುಸರಿಸಿ ನಡೆಯುವವರಾಗಿರಿ. ಕಷ್ಟಸಂಕಟಗಳಲ್ಲಿರುವ ಅನಾಥರಿಗೂ ವಿಧವೆಯರಿಗೂ ನೆರವಾಗುವುದು ಹಾಗೂ ಪ್ರಾಪಂಚಿಕ ಮಲಿನತೆಯಿಂದ ದೂರವಿರುವುದು -- ನಮ್ಮ ತಂದೆಯಾದ ದೇವರ ಮುಂದೆ ನಿಷ್ಕಳಂಕವಾದ ಮತ್ತು ನಿರ್ಮಲವಾದ ಧರ್ಮವೆನಿಸುತ್ತದೆ.

ಶುಭಸಂದೇಶ: ಮಾರ್ಕ 7:1-8, 15-16, 21-23

ಆ ಕಾಲದಲ್ಲಿ ಒಮ್ಮೆ ಫರಿಸಾಯರು ಮತ್ತು ಜೆರುಸಲೇಮಿನಿಂದ ಕೆಲವು ಮಂದಿ ಧರ್ಮಶಾಸ್ತ್ರಿಗಳು ಯೇಸುವಿನ ಬಳಿಗೆ ಬಂದು ಸೇರಿದರು. ಯೇಸುವಿನ ಶಿಷ್ಯರಲ್ಲಿ ಕೆಲವರು ಅಶುದ್ದ ಕೈಗಳಿಂದ, ಎಂದರೆ ಶುದ್ಧಾಚಾರಕ್ಕೆ ಅನುಗುಣವಾಗಿ ಕೈತೊಳೆದುಕೊಳ್ಳದೆ ಊಟಮಾಡುವುದನ್ನು ಅವರು ನೋಡಿದರು. ಫರಿಸಾಯರು ಇತರ ಯೆಹೂದ್ಯರಂತೆ ಕೈಗಳನ್ನು ವಿಧಿಬದ್ದವಾಗಿ ತೊಳೆಯದೆ ಊಟಮಾಡುವುದಿಲ್ಲ. ಇದು ಅವರ ಪೂರ್ವಜರಿಂದ ಬಂದ ಸಂಪ್ರದಾಯ. ಪೇಟೆ ಬೀದಿಗಳಿಗೆ ಹೋಗಿ ಬಂದರೆ ಸ್ನಾನಮಾಡಿಯೇ ಊಟಮಾಡುವುದು, ತಂಬಿಗೆ, ಚೆಂಬು, ತಪ್ಪಲೆಗಳನ್ನು ಸೂತ್ರಬದ್ದವಾಗಿ ತೊಳೆಯುವುದು, ಇವೇ ಮೊದಲಾದ ಅನೇಕ ಆಚಾರಗಳು ಅವರಲ್ಲಿ ರೂಢಿಯಲ್ಲಿದ್ದವು. ಆದುದರಿಂದ ಫರಿಸಾಯರೂ ಧರ್ಮಶಾಸ್ತ್ರಿಗಳೂ, " ನಿನ್ನ ಶಿಷ್ಯರು ಪೂರ್ವಜರಿಂದ ಬಂದ ಆಚಾರಗಳನ್ನೇಕೆ ಅನುಸರಿಸುವುದಿಲ್ಲ? ಅಶುದ್ದವಾದ ಕೈಗಳಿಂದಲೇ ಅವರು ಊಟಮಾಡುತ್ತಿದ್ದಾರಲ್ಲಾ ? " ಎಂದು ಯೇಸುವನ್ನು ಕೇಳಿದರು. ಅದಕ್ಕೆ ಯೇಸು, " ಕಪಟಿಗಳೇ, ನಿಮ್ಮ ವಿಷಯದಲ್ಲಿ ಯೆಶಾಯನು ಎಷ್ಟೊಂದು ಚೆನ್ನಾಗಿ ಪ್ರವಾದಿಸಿದ್ದಾನೆ: ' ಬರಿಯ ಮಾತಿನ ಮನ್ನಣೆಯನೀಯುತ, ಹೃದಯವನು ದೂರವಿರಿಸುತ, ನರಕಲ್ಪಿತ ಕಟ್ಟಳೆಗಳನೇ ದೇವವಾಕ್ಯವೆಂದು ಉಪದೇಶಿಸುತ, ಈ ಜನರೆನಗೆ ಮಾಡುವ ಆರಾಧನೆ ವ್ಯರ್ಥ ! ಎಂದರು ದೇವರು.' ನೀವು ದೇವರ ಆಜ್ಞೆಯನ್ನು ತೊರೆದು ಮಾನವನಿರ್ಮಿತ ಸಂಪ್ರದಾಯಗಳನ್ನು ನಿಷ್ಠೆಯಿಂದ ಪರಿಪಾಲಿಸುತ್ತೀರಿ. ನಾನು ಹೇಳುವುದನ್ನು ನೀವೆಲ್ಲರೂ ಕೇಳಿ ಗ್ರಹಿಸಿಕೊಳ್ಳಿ: ಹೊರಗಿನಿಂದ ಮನುಷ್ಯನ ಒಳಗೆ ಹೋಗುವ ಯಾವುದೂ ಅವನನ್ನು ಕಲುಷಿತಗೊಳಿಸುವುದಿಲ್ಲ. ಮನುಷ್ಯನ ಅಂತರಂಗದಿಂದ ಹೊರಬರುವಂತಹುದೇ ಅವನನ್ನು ಕಲುಷಿತಗೊಳಿಸುತ್ತದೆ. ಮಾನವನ ಹೃದಯಾಂತರಾಳದಿಂದ ದುರಾಲೋಚನೆ, ಅನೈತಿಕತೆ, ಕಳ್ಳತನ, ಕೊಲೆ, ವ್ಯಭಿಚಾರ, ಲೋಭ, ಕೆಡಕುತನ, ಮೋಸ, ಭಂಡತನ, ಅಸೂಯೆ, ಅಪದೂರು, ಅಹಂಕಾರ, ಮೂರ್ಖತನ ಮೊದಲಾದವು ಹೊರಬರುತ್ತದೆ. ಈ ಎಲ್ಲಾ ಕೇಡುಗಳು ಮಾನವನ ಅಂತರಂಗದಿಂದಲೇ ಉದ್ಭವಿಸಿ, ಅವನನ್ನು ಅಶುದ್ದ ಮಾಡುತ್ತದೆ, " ಎಂದರು.