17.12.23

ಮೊದಲನೆಯ ವಾಚನ: ಯೆಶಾಯ: 61:46-50,53-54

ನನ್ನ ಮೇಲಿದೆ ಸರ್ವೇಶ್ವರಸ್ವಾಮಿಯ ಆತ್ಮ; ನನಗೆ ಅಭಿಷೇಕಮಾಡಿ ಕಳುಹಿಸಿಹನು ಆತ; ಬಡವರಿಗೆ ಶುಭಸಂದೇಶ ಬೋಧಿಸಲೆಂದೆ, ಮನನೊಂದವರನು ಸಂತೈಸಿ ಗುಣಪಡಿಸಲೆಂದೇ, ಬಂಧಿತರಿಗೆ ಬಿಡುಗಡೆಯನ್ನು ಪ್ರಕಟಿಸಲೆಂದೆ, ಬಂಧಿತರಿಗೆ ಬಿಡುಗಡೆಯನು ಪ್ರಕಟಿಸಲೆಂದೇ ಸೆರೆಯಾಳುಗಳಿಗೆ ಬಂಧನಮುಕ್ತಿಯಾಗುವುದನು, ಸರ್ವೇಶ್ವರಸ್ವಾಮಿಯ ಅನುಗ್ರಹದ ವರುಷವನು, ನಮ್ಮ ದೇವರು ಮುಯ್ಯಿತೀರಿಸುವಾ ದಿನವನು ಘೋಷಿಸಲೆಂದೆ, ನಾನು ಪಡೆಯುವೆ ಸರ್ವೇಶ್ವರನಲ್ಲಿ ಪರಮಾನಂದ; ಹಿರಿಹಿಗ್ಗುವುದು ನನ್ನ ದೇವರಲಿ ನನ್ನಾತ್ಮ. ಮದುವಣಿಗನಿಗೆ ಬಾಸಿಂಗವನು ತೊಡಿಸುವಂತೆ ವಧುವಿಗೆ ಆಭರಣಗಳಿಂದ ಅಲಂಕರಿಸುವಂತೆ ಹೊದಿಸಿಹನಾತ ನನಗೆ ಮುಕ್ತಿಯೆಂಬ ವಸ್ತ್ರವನು; ತೊಡಿಸಿಹನು ನನಗೆ ನೀತಿಯೆಂಬ ನಿಲುವಂಗಿಯನು. ಭುವಿಯು ತನ್ನಿಂದ ಬೀಜವನು ಮೊಳೆಯಿಸುವಂತೆ, ತೋಟವು ತನ್ನೊಳು ಸಸಿಯನು ಬೆಳೆಸುವಂತೆ ಸ್ವಾಮಿ ಸರ್ವೇಶ್ವರ, ಸಮಸ್ತ ರಾಷ್ಟ್ರಗಳ ಮುಂದೆ ವೃದ್ಧಿಗೊಳಿಸುವನು ಸದ್ಧರ್ಮವನೆ, ಸ್ತುತಿಸ್ತೋತ್ರವನೆ.

ಕೀರ್ತನೆ: ಲೂಕ 1:46-50,53-54
ಶ್ಲೋಕ: ಹಿರಿಹಿಗ್ಗುವುದು ನನ್ನ ದೇವರಲಿ ನನ್ನಾತ್ಮ |

ಎನ್ನ ಮಾಡುತ್ತಿದೆ ಸರ್ವೇಶ್ವರನ ಸ್ತುತಿ|
ಉಲ್ಲಾಸಿಸುತ್ತಿದೆ ಮುಕ್ತಿದಾತ ದೇವನಲಿ||
ತನ್ನ ದಾಸಿಯ ದೀನತೆಯನು ನೆನಪಿಗೆ ತಂದುಕೊಂಡನಾತ|
ಧನ್ಯರೆಂದು ಹೊಗಳುವರೆನ್ನನು ಇಂದಿನಿಂದ ಸರ್ವ ಜನಾಂಗ||

ಏಕೆನೆ ಮಾಡಿಹನೆನಗೆ ಸರ್ವಶಕ್ತನು ಮಹತ್ಕಾರ್ಯ|
ನಿಜಕ್ಕೂ ಆತನ ನಾಮಧೇಯ ಪರಮಪೂಜ್ಞ||
ಆತನಲಿ ಭಯಭಕ್ತಿಯುಳ್ಳವರಿಗೆ|
ಆತನ ಪ್ರೀತಿ ತಲೆತಲಾಂತರದವರೆಗೆ||

ತೃಪ್ತಿಪಡಿಸಿರುವನಾತ ಹಸಿದವರನು ಮೃಷ್ಟಾನ್ನದಿ|
ಹೊರದೂಡಿರುವನು ಸಿರಿವಂತರನು ಬರಿಗೈಯಲಿ||
ನೆರವಾದನು ತನ್ನ ದಾಸ ಇಸ್ರಯೇಲರಿಗೆ|
ಪೂರ್ವಜರಿಗಿತ್ತ ವಾಗ್ಧಾನದ ಮೇರೆಗೆ||

ಎರಡನೆಯ ವಾಚನ: 1 ಥೆಸಲೋನಿಯರಿಗೆ 5:16-24

ಸಹೋದರರೇ ಸದಾ ಹರ್ಷಚಿತ್ತರಾಗಿರಿ. ಎಡೆಬಿಡದೆ ಪ್ರಾರ್ಥಿಸಿರಿ. ಎಲ್ಲಾ ಸಂದರ್ಭಗಳಲ್ಲೂ ಉಪಕಾರ ಸ್ಮರಣೆಮಾಡಿರಿ. ಕ್ರಿಸ್ತಯೇಸುವಿನಲ್ಲಿ ದೇವರು ನಿಮ್ಮಿಂದ ಇಚ್ಚಿಸುವುದು ಇದನ್ನೇ. ಪವಿತ್ರಾತ್ಮರನ್ನು ನಿಶ್ಚೇತನಗೊಳಿಸಬೇಡಿ. ಪ್ರವಾದನೆಗಳನ್ನು ಅಲ್ಲಗಳೆಯದಿರಿ. ಅವುಗಳನ್ನೆಲ್ಲಾ ಪರಿಶೋಧಿಸಿ ಒಳ್ಳೆಯದನ್ನು ಅಂಗೀಕರಿಸಿ, ಕೆಟ್ಟದ್ದನ್ನೆಲ್ಲಾ ಬಿಟ್ಟುಬಿಡಿ. ಶಾಂತಿದಾಯಕ ದೇವರು ನಿಮ್ಮನ್ನು ಪೂರ್ಣವಾಗಿ ಪವಾನಗೊಳಿಸಲಿ. ನಮ್ಮ ಪ್ರಭು ಯೇಸು ಪುನರಾಗಮಿಸುವಾಗ ನಿಮ್ಮ ಆತ್ಮ, ಪ್ರಾಣ, ದೇಹ - ಇವುಗಳು ದೋಷರಹಿತವಾಗಿಯೂ ಸ್ವಸ್ಥವಾಗಿಯೂ ಇರುವಂತೆ ನಿಮ್ಮನ್ನು ಕಾಪಾಡಲಿ. ನಿಮ್ಮನ್ನು ಕರೆದ ದೇವರು ಇದನ್ನು ಈಡೇರಿಸುವರು; ಏಕೆಂದರೆ, ದೇವರು ನಂಬಿಗಸ್ಥರು.

ಘೋಷಣೆ: ಯೆಶಾಯ 61:1(ಲೂಕ 4:18)

ಅಲ್ಲೆಲೂಯ, ಅಲ್ಲೆಲೂಯ!

ನನ್ನ ಮೇಲಿದೆ ಸರ್ವೇಶ್ವರಸ್ವಾಮಿಯ ಆತ್ಮ;| ನನಗೆ ಅಭಿಷೇಕಮಾಡಿ ಕಳುಹಿಸಿಹನು ಆತ; ಬಡವರಿಗೆ ಶುಭಸಂದೇಶ ಬೋಧಿಸಲೆಂದೆ ||

ಶುಭಸಂದೇಶ: ಯೊವಾನ್ನ 1:6-8,19-28

ದೇವರು ಒಬ್ಬ ವ್ಯಕ್ತಿಯನ್ನು ಕಳುಹಿಸಿದರು. ಆತನ ಹೆಸರು ಯೊವಾನ್ನ. ಈತನು ಸಾಕ್ಷಿಕೊಡಲು ಬಂದನು. ತನ್ನ ಮುಖಾಂತರ ಸರ್ವರೂ ವಿಶ್ವಾಸಿಸುವಂತೆ ಆ ಜ್ಯೋತಿಯನ್ನು ಕುರಿತು ಸಾಕ್ಷಿ ನೀಡಿದನು. ಈತನೇ ಜ್ಯೋತಿಯಾಗಿರಿರಲಿಲ್ಲ; ಆ ಜ್ಯೋತಿಯನ್ನು ಕುರಿತು ಸಾಕ್ಷಿ ನೀಡಲೆಂದೇ ಬಂದವನು. ಜೆರುಸಲೇಮಿನ ಯೆಹೂದ್ಯ ಅಧಿಕಾರಿಗಳು, ಯಾಜಕರನ್ನೂ ಲೇವಿಯರನ್ನೂ ಯೊವಾನ್ನನ ಬಳಿಗೆ ಕಳುಹಿಸಿದರು. ಇವರು, "ನೀನು ಯಾರು? " ಎಂದು ಪ್ರಶ್ನಿಸಿದರು. ಯೊವಾನ್ನನು ಅದಕ್ಕೆ ಉತ್ತರವಾಗಿ, "ಅಭಿಷಿಕ್ತನಾದ ಲೋಕೋದ್ಧಾರಕ ನಾನಲ್ಲ, "ಎಂದು ಸ್ಪಷ್ಟವಾಗಿ ಹೇಳಿದನು. ಏನನ್ನೂ ಮರೆಮಾಚಲಿಲ್ಲ. ಹಾಗಾದರೆ, "ನೀನು ಎಲಿಯನೋ? " ಎಂದು ಕೇಳಲು, 'ಅಲ್ಲ' ಎಂದನು. ನೀನು ಬರಬೇಕಾದ ಪ್ರವಾದಿಯಿರಬಹುದೇ? "ಎಂದು ಕೇಳಲು, "ಅದೂ ಅಲ್ಲ, " ಎಂದು ಮರುನುಡಿದನು. "ಹಾಗಾದರೆ ನೀನು ಯಾರೆಂದು ನಮಗೆ ತಿಳಿಸು. ನಮ್ಮನ್ನು ಕಳುಹಿಸಿದವರಿಗೆ ನಾವು ಉತ್ತರಕೊಡಬೇಕಾಗಿದೆ. ನಿನ್ನನ್ನು ಕುರಿತು ನೀನು ಏನು ಹೇಳುತ್ತೀ? " ಎಂದು ಅವರು ಮತ್ತೊಮ್ಮೆ ಕೇಳಿದರು. ಅದಕ್ಕೆ ಯೊವಾನ್ನನು, " ಪ್ರಭುವಿನ ಮಾರ್ಗವನ್ನು ನೇರಗೊಳಿಸಿರೆಂದು ಬೆಂಗಾಡಿನಲ್ಲಿ ಕೂಗುವವನ ಸ್ವರವೇ ನಾನು, " ಎಂದು ಪ್ರವಾದಿ ಯೆಶಾಯನ ಮಾತುಗಳಲ್ಲೇ ಉತ್ತರಕೊಟ್ಟನು. ಆಗ ಫರಿಸಾಯರ ಕಡೆಯಿಂದ ಬಂದಿದ್ದ ಕೆಲವರು, "ನೀನು ಲೋಕೋದ್ಧಾರಕನಾಗಲಿ, ಎಲೀಯನಾಗಲಿ, ಬರಬೇಕಾಗಿದ್ದ ಪ್ರವಾದಿಯೇ ಆಗಲಿ ಅಲ್ಲವೆಂದ ಮೇಲೆ ಸ್ನಾನದೀಕ್ಷೆ ಕೊಡುವುದೇಕೆ? "ಎಂದು ಪ್ರಶ್ನಿಸಿದರು. ಪ್ರತ್ಯುತ್ತರವಾಗಿ ಯೊವಾನ್ನನು, "ನಾನು ನಿಮಗೆ ನೀರಿನಿಂದ ಸ್ನಾನದೀಕ್ಷೆ ಕೊಡುತ್ತಿದ್ದೇನೆ. ನಿಮಗೆ ತಿಳಿಯದ ಒಬ್ಬ ವ್ಯಕ್ತಿ ನಿಮ್ಮ ನಡುವೆ ಇದ್ದಾರೆ. ನನ್ನ ಬಳಿಕ ಬರಬೇಕಾಗಿದ್ದವರು ಅವರೇ. ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ, " ಎಂದನು. ಯೊವಾನ್ನನು ಸ್ನಾನದೀಕ್ಷೆ ಕೊಡುತ್ತಿದ್ದ ಜೋರ್ಡಾನ್ ನದಿಯ ಆಚೆ ದಡದಲ್ಲಿದ್ದ ಬೆಥನಿಯ ಎಂಬಲ್ಲಿ ಇದೆಲ್ಲವೂ ನಡೆಯಿತು.

15.12.23 - "ದೈವಜ್ಞಾನವೇ ನಿಜವಾದ ಜ್ಞಾನ"

 ಮೊದಲನೇ ವಾಚನ ಯೆಶಾಯ 48:17-19

ನಿನ್ನ ಜೀವೋದ್ಧಾರಕನು ಇಸ್ರಯೇಲಿನ ಪರಮಪಾವನನು ಆದ ಸರ್ವೇಶ್ವರಸ್ವಾಮಿಯೆ ನುಡಿದಿಹನು: "ನಿನಗೆ ಕ್ಷೇಮಕರವಾದ ಮಾರ್ಗವನು ಬೋಧಿಸುವವನೂ ನೀ ಹೋಗಬೇಕಾದ ಹಾದಿಯಲಿ ನಡೆಯಿಸುವವನೂ ಆದಂಥ ಸರ್ವೇಶ್ವರಸ್ವಾಮಿ ದೇವರು ನಾನು. ಎಷ್ಟೋ ಚೆನ್ನಾಗಿರುತ್ತಿತ್ತು ನೀ ನನ್ನ ಆಜ್ಞೆಗಳನ್ನು ಪಾಲಿಸಿದ್ದರೆ ಇರುತಿತ್ತು ನಿನಗೆ ಸುಖಶಾಂತಿ ಮಹಾನದಿಯಂತೆ ನಿನ್ನ ಸತ್ಯಸಂಧತೆ ಸಮುದ್ರ ಅಲೆಗಳಂತೆ. ಆಗಣಿತವಾಗಿರುತಿತ್ತು ನಿನ್ನ ಸಂತತಿ ಕಡಲ ಮರಳಿನಂತೆ, ನಿನ್ನ ಕರುಳಿನ ಕುಡಿಗಳು ಉಸುಬಿನ ಅಣುರೇಣುಗಳಂತೆ, ಅವರ ಹೆಸರುಗಳು ಕೆಟ್ಟು ಅಳಿದುಹೋಗುತ್ತಿರಲಿಲ್ಲ ನನ್ನ ಮುಂದೆ."

ಕೀರ್ತನೆ: 1:1-2, 3, 4, 6

ಶ್ಲೋಕ: ನಾನೇ ಜಗಜ್ಯೋತಿ, ನನ್ನನ್ನು ಹಿಂಬಾಲಿಸುವವನು ಕತ್ತಲಲ್ಲಿ ನಡೆಯುವುದಿಲ್ಲ, ಜೀವದಾಯಕ ಜ್ಯೋತಿ ಅವನಲ್ಲಿರುತ್ತದೆ

ಶುಭಸಂದೇಶ: ಮತ್ತಾಯ 11:16-19
"ಈ ಪೀಳಿಗೆಯನ್ನು ನಾನು  ಯಾರಿಗೆ ಹೋಲಿಸಲಿ? ನಾವು ಕೊಳಲನೂದಲು ನೀವು ಕುಣಿದಾಡಲಿಲ್ಲ; ನಾವು ಶೋಕಗೀತೆಗಳ ಹಾಡಲು ನೀವು ಕಣ್ಣೀರಿಡಲಿಲ್ಲ," ಎಂದು ಪೇಟೆಬೀದಿಗಳಲ್ಲಿ ಕುಳಿತು, ಒಬ್ಬರಿಗೊಬ್ಬರು ಕೂಗಾಡುವ ಮಕ್ಕಳನ್ನು ಇವರು ಹೋಲುತ್ತಾರೆ. ಏಕೆಂದರೆ, ಯೊವಾನ್ನನು ಬಂದನು; ಅವನು ಅನ್ನಪಾನೀಯಗಳನ್ನು ಸೇವಿಸಲಿಲ್ಲ. ಅದಕ್ಕೆ "ಇವನಿಗೆ ದೆವ್ವ ಹಿಡಿದಿದೆ" ಎಂದರು. ನರಪುತ್ರನು ಬಂದನು; ಅನ್ನಪಾನೀಯಗಳನ್ನು ಸೇವಿಸಿದನು. ಇವನೊಬ್ಬ ಹೊಟ್ಟೆಬಾಕ, ಕುಡುಕ, ಸುಂಕದವರ ಹಾಗೂ ಪಾಪಿಷ್ಠರ ಗೆಳೆಯ ಎನ್ನುತ್ತಾರೆ. ಆದರೆ ದೈವಜ್ಞಾನವೇ ನಿಜವಾದ ಜ್ಞಾನವೆಂದು ಅದರ ಕಾರ್ಯಗಳಿಂದಲೇ ಸಮರ್ಥಿಸಲಾಗುತ್ತದೆ," ಎಂದರು.

14.12.23 - "ಸ್ನಾನಿಕ ಯೊವಾನ್ನನಿಗಿಂತ ಶ್ರೇಷ್ಠನಾರೂ ಹುಟ್ಟಿಲ್ಲ! ಎಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ."

ಮೊದಲನೇ ವಾಚನ: ಯೆಶಾಯ 41: 13-20 


ನಿನ್ನ ದೇವರಾದ ಸರ್ವೇಶ್ವರ ನಾನೇ ಭಯಪಡಬೇಡ, ನಿನಗೆ ನಾನೇ ನೆರವಾಗುವೆ ಎಂತಲೇ, ನಿನ್ನ ಕೈ ಹಿಡಿದುಕೊಳ್ಳುವೆ. ಸರ್ವೇಶ್ವರ ಇಂತೆನ್ನುತ್ತಾರೆ: “ಹುಳುವಿನಂತಿರುವ ಯಕೋಬೇ, ಇಸ್ರಯೇಲಿನ ಜನತೆಯೇ, ಭಯಪಡಬೇಡ, ನಾನೇ ನಿನಗೆ ಸಹಾಯಕ ಇಸ್ರಯೇಲಿನ ಪರಮಪಾವನ ಸ್ವಾಮಿಯೇ ನಿನಗೆ ವಿಮೋಚಕ. ಮಾಡಿರುವೆ ನಿನ್ನನ್ನು ಮಸೆದ ಮೊನೆಹಲ್ಲಿನ ಹೊಸ ಕುಂಟೆಯಂತೆ. ನೀನು ಒಕ್ಕುತ್ತಾ ಪುಡಿಪುಡಿ ಮಾಡುವೆ ಬೆಟ್ಟಗಳನೆ ಹೊಟ್ಟು ಧೂಳಾಗಿಸುವೆ ಗುಡ್ಡಗಳನೆ. ನೀನು ತೂರಲು ಅವುಗಳನ್ನು ಕೊಂಡೊಯ್ವುದು ಗಾಳಿ ಚಂಡಮಾರುತವು ಮಾಡುವುದವುಗಳನ್ನು ಚೆಲ್ಲಾಪಿಲ್ಲಿ. ನೀನಾದರೋ ಆನಂದಿಸುವೆ ಸರ್ವೇಶ್ವರ ಸ್ವಾಮಿಯಲಿ. ದೀನದರಿದ್ರರು ನೀರಿಗಾಗಿ ಪರದಾಡುವಾಗ ಬಾಯಾರಿ ಅವರ ನಾಲಿಗೆ ಒಣಗಿಹೋದಾಗ ಪ್ರಸನ್ನನಾಗುವೆ ಸರ್ವೇಶ್ವರನಾದ ನಾನೇ. ಇಸ್ರಯೇಲಿನ ದೇವರಾದ ನಾನವರನ್ನು ಕೈಬಿಡುವೆನೆ? ಹೊರಡಿಸುವೆನು ಬೋಳುಗುಡ್ಡಗಳಲ್ಲಿ ನದಿಗಳನು ತಗ್ಗುತಿಟ್ಟುಗಳಲ್ಲಿ ಒರತೆಗಳನು ಮಾರ್ಪಡಿಸುವೆನು ಕೆರೆಯಾಗಿ ಅರಣ್ಯವನು ಬುಗ್ಗೆಗಳಾಗಿ ಮರುಭೂಮಿಯನು. ನೆಡುವೆನು ಅಡವಿಯಲಿ ದೇವದಾರು, ಕಸ್ತೂರಿ, ಜಾಲಿ, ಸುಗಂಧ ಓಲೀವ್ ಮರಗಳನು; ತೋಪಾಗಿ ಬೆಳೆಸುವೆನು ಅರಣ್ಯದೊಳು ತುರಾಯಿ, ತಪಸಿ, ತಿಲಕ ವೃಕ್ಷಗಳನು. ಇದನು ಕಂಡರಿತು ಗ್ರಹಿಸಿಕೊಳ್ಳುವರು ಜನರು ಮನಸಾರೆ, ನುಡಿವರಾಗ, ‘ಇದನ್ನು ಮಾಡಿದ ಹಸ್ತವು ಸರ್ವೇಶ್ವರಸ್ವಾಮಿಯದೇ, ಇದನ್ನು ಸೃಷ್ಟಿಸಿದಾತ ಇಸ್ರಯೇಲಿನ ಪರಮಪಾವನ ಸ್ವಾಮಿಯೇ.’

ಕೀರ್ತನೆ: 145: 1, 9, 10-11, 12-13ab 

ಶ್ಲೋಕ: ಪ್ರಭು ದಯಾನಿಧಿ, ಕೃಪಾಸಾಗರನು, ಸಹನಶೀಲನು, ಪ್ರೀತಿಪೂರ್ಣನು. 

ಶುಭಸಂದೇಶ: ಮತ್ತಾಯ 11: 11-15 

ಯೇಸು ಜನಸಮೂಹಕ್ಕೆ ಯೋವಾನ್ನನನ್ನು ಕುರಿತು ಹೀಗೆಂದರು: ಮಾನವನಾಗಿ ಜನಿಸಿದ್ದವರಲ್ಲಿ ಸ್ನಾನಿಕ ಯೊವಾನ್ನನಿಗಿಂತ ಶ್ರೇಷ್ಠನಾರೂ ಹುಟ್ಟಿಲ್ಲ! ಎಂದು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ. ಆದರೂ ಸ್ವರ್ಗಸಾಮ್ರಾಜ್ಯದಲ್ಲಿ ಕನಿಷ್ಠನಾದವನು ಕೂಡ ಅವನಿಗಿಂತ ಶ್ರೇಷ್ಟನೇ ಸರಿ. ಯೊವಾನ್ನನು ತನ್ನ ಸಂದೇಶವನ್ನು ಸಾರಿದಂದಿನಿಂದ ಇಂದಿನವರೆಗೆ ಸ್ವರ್ಗಸಾಮ್ರಾಜ್ಯವು ನೂಕುನುಗ್ಗಲಿಗೆ ಗುರಿಯಾಗಿದೆ. ಬಲಪ್ರಯೋಗ ಮಾಡುವವರು ಅದನ್ನು ಸ್ವಾಧೀನಪಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಯೊವಾನ್ನನ ಕಾಲದ ತನಕ ಧರ್ಮಶಾಸ್ತ್ರ ಹಾಗೂ ಎಲ್ಲ ಪ್ರವಾದಿಗಳು ದೇವರ ಸಾಮ್ರಾಜ್ಯವನ್ನು ಕುರಿತು ಪ್ರವಾದನೆ ಮಾಡಿದರು. ಅವರ ಹೇಳಿಕೆಯನ್ನು ನಂಬಲು ನಿಮಗಿಷ್ಟವಿದ್ದರೆ, ಇಗೋ, ಬರತಕ್ಕ ಎಲೀಯನು ಈ ಯೊವಾನ್ನನೇ. ಕೇಳುವುದಕ್ಕೆ ಕಿವಿಯುಳ್ಳವನು ಕೇಳಿಸಿಕೊಳ್ಳಲಿ.

13.12.23 - "ನನ್ನ ನೊಗ ಹಗುರ, ನನ್ನ ಹೊರೆ ಸುಗಮ,"

ಮೊದಲನೇ ವಾಚನ: ಯೆಶಾಯ 40: 25-31 


ಇಂತಿರಲು ನನ್ನನ್ನು ಯಾರಿಗೆ ಹೋಲಿಸಬಲ್ಲಿರಿ?” ಯಾರಿಗೆ ನನ್ನನ್ನು ಸರಿಸಮಾನ ಮಾಡಬಲ್ಲಿರಿ?” ಎಂದು ಕೇಳುತ್ತಿಹರು ಪರಮಪಾವನಸ್ವಾಮಿ. ಕಣ್ಣೆತ್ತಿ, ದಿಟ್ಟಿಸಿನೋಡಿ ಆಕಾಶದತ್ತ ಯಾರು ಆ ತಾರೆಗಳನ್ನು ರಚಿಸಿದಾತ? ಆ ತಾರಾಸಮೂಹವನ್ನು ಕ್ರಮಾನುಸಾರ ನಡೆಸುವಾತ, ಒಂದೊಂದನ್ನೂ ಹೆಸರಿಟ್ಟು ಕರೆಯುವಾತ, ಅವುಗಳಲ್ಲಿ ಒಂದನ್ನೂ ಕಾಣೆಯಾಗಲು ಬಿಡದಾತ, ಅಷ್ಟು ಬಲಾಢ್ಯನು, ಶಕ್ತಿವಂತನು ಆಗ! ಹೀಗಿರಲು ಎಲೈ ಯಕೋಬ್ಯರೇ, ಇಸ್ರಯೇಲರೇ, ‘ಮರೆಯಾಗಿದೆ ಪ್ರಭುವಿಗೆ ನನ್ನ ಕುಂದುಕೊರತೆ, ನ್ಯಾಯನೀತಿ ದೊರಕದಿದೆ ನನಗೆ ಇದರತ್ತ ದೇವರ ಲಕ್ಷ್ಯ ಬೀಳದಿದೆ’ ಎನ್ನುತ್ತಿರುವಿರಿ ಏಕೆ? ನೀವು ಕೇಳಿಲ್ಲವೇ? ನಿಮಗೆ ತಿಳಿದಿಲ್ಲವೇ? ಸರ್ವೇಶ್ವರ ಅನಂತ ದೇವರಲ್ಲವೇ? ಭೂದಿಗಂತಗಳನ್ನು ಆತ ಸೃಜಿಸಿದನಲ್ಲವೇ? ದಣಿವೆಂಬುದು ಇಲ್ಲ, ಬಳಲಿಕೆ ಎಂಬುದು ಇಲ್ಲ ಆತನಿಗೆ. ಆತನ ದಕ್ಷಸಾಮಥ್ರ್ಯ ಅಗಮ್ಯ ಪರಿಶೋಧನೆಗೆ. ದಯಪಾಲಿಸುವನಾತ ಬಲಾಭಿವೃದ್ಧಿಯನ್ನು ಬಳಲಿದವನಿಗೆ ಅನುಗ್ರಹಿಸುವನಾತ ಚೈತನ್ಯವನು ನಿತ್ರಾಣನಿಗೆ. ಯುವಕರೂ ದಣಿದು ಬಳಲುವರು ತರುಣರೂ ಸೊರಗಿ ಮುಗ್ಗರಿಸುವರು. ಸರ್ವೇಶ್ವರನನ್ನು ಎದುರು ನೋಡುವವರು ಹೊಸ ಚೇತನವನ್ನು ಹೊಂದುವರು. ರೆಕ್ಕೆ ಚಾಚಿದ ಹದ್ದುಗಳಂತೆ ಹಾರುವರು ಓಡಿದರೂ ದಣಿದರು, ನಡೆದರೂ ಬಳಲರು.

ಕೀರ್ತನೆ: 103: 1-2, 3-4, 8, 10

ಶ್ಲೋಕ: "ನನ್ನ ಅಂತರಂಗವೇ, ಭಜಿಸು ಪ್ರಭುವನು."


ಶುಭಸಂದೇಶ: ಮತ್ತಾಯ 11: 28-30 


ಈ ಸಮಯದಲ್ಲಿ ಯೇಸು ಹೀಗೆಂದರು: "ದುಡಿದು, ಭಾರಹೊತ್ತು, ಬಳಲಿ ಬೆಂಡಾಗಿರುವ ಸರ್ವಜನರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುತ್ತೇನೆ. ನಾನು ವಿನಯಶೀಲನು, ದೀನಹೃದಯನು; ನನ್ನ ನೊಗಕ್ಕೆ ಹೆಗಲುಕೊಟ್ಟು ನನ್ನಿಂದ ಕಲಿತುಕೊಳ್ಳಿ. ಆಗ ನಿಮಗೆ ವಿಶ್ರಾಂತಿ ಸಿಗುವುದು. ನನ್ನ ನೊಗ ಹಗುರ, ನನ್ನ ಹೊರೆ ಸುಗಮ,".

12.12.23 - "ಸಿಕ್ಕಿದ ಈ ಒಂದು ಕುರಿಗಾಗಿ ಅವನು ಹೆಚ್ಚು ಆನಂದಪಡುತ್ತಾನೆ"

ಮೊದಲನೇ ವಾಚನ: ಯೆಶಾಯ 40:1-11

ನಿಮ್ಮ ದೇವರು ಇಂತೆನ್ನುತ್ತಾರೆ: "ಸಂತೈಸಿ, ನನ್ನ ಜನರನ್ನು ಸಂತೈಸಿರಿ. ಜೆರುಸಲೇಮಿನೊಡನೆ ಪ್ರೀತಿಯಿಂದ ಮಾತನಾಡಿ; ಅದರ ಊಳಿಗತನ ಮುಗಿಯಿತೆನ್ನಿ: ತಕ್ಕ ಪ್ರಾಯಶ್ಚಿತ್ತವಾಗಿದೆ ಅದು ಗೈದ ದೋಷಕ್ಕೆ ಸರ್ವೇಶ್ವರಸ್ವಾಮಿಯಿಂದಲೇ ಅದರ ಎಲ್ಲಾ ಪಾಪಕೃತ್ಯಗಳಿಗೆ ಇಮ್ಮಡಿ ಶಿಕ್ಷೆಯಾಗಿದೆ ಎಂದು ಕೂಗಿ ಹೇಳಿ ಆ ನಗರಿಗೆ" ಇಗೋ, ಈ ವಾಣಿಯನ್ನು. ಕೇಳಿ: "ಸರ್ವೇಶ್ವರಸ್ವಾಮಿಗೆ ಮಾರ್ಗವನ್ನು ಸಿದ್ಧ ಮಾಡಿ ಅರಣ್ಯದಲ್ಲಿ ನಮ್ಮ ದೇವರಿಗೆ ರಾಜಮಾರ್ಗವನ್ನು ಸರಾಗ ಮಾಡಿ ಅಡವಿಯಲ್ಲಿ. ತುಂಬಬೇಕು ಎಲ್ಲ ಹಳ್ಳಕೊಳ್ಳಗಳನ್ನು ಮಟ್ಟಮಾಡಬೇಕು ಎಲ್ಲ ಬೆಟ್ಟಗುಡ್ಡಗಳನ್ನು. ನೆಲಸಮ ಮಾಡಬೇಕು ದಿಬ್ಬ ದಿಣ್ಣೆಗಳನ್ನು. ಸಮತಲಗೊಳಿಸಬೇಕು ತಗ್ಗುಮುಗ್ಗಾದ ಸ್ಥಳಗಳನ್ನು. ಗೋಚರವಾಗುವುದಾಗ ಸರ್ವೇಶ್ವರಸ್ವಾಮಿಯ ಮಹಿಮೆಯು, ಮಾನವರೆಲ್ಲರೂ ಅದನ್ನು ಕಾಣುವರು ಒಟ್ಟಿಗೆ, ಸರ್ವೇಶ್ವರಸ್ವಾಮಿಯೇ ಇದನ್ನು ಬಾಯಾರೆ ನುಡಿದಿದ್ದಾರೆ." ಆ ವಾಣಿ ಮತ್ತೆ ಕೇಳಿಸಿತು: "ಗಟ್ಟಿಯಾಗಿ ಕೂಗು" ಎಂದಿತು. ನಾನೇನೆಂದು ಕೂಗಲಿ ಎನ್ನಲು ಈ ಪರಿಯಾಗಿ ಉತ್ತರಿಸಿತು: "ನರಮಾನವರೆಲ್ಲ ಬರೀ ಹುಲ್ಲಿನಂತೆ ಅವರ ಸೊಬಗೆಲ್ಲಾ ಬಯಲಿನ ಕುಸುಮದಂತೆ. ಪ್ರಭುವಿನ ಶ್ವಾಸ ಬೀಸಲು ಒಣಗಿ ಹೋಗುವುದಾ ಹುಲ್ಲು ಬಾಡಿ ಹೋಗುವುದಾ ಹೂವು ಮಾನವರೆಲ್ಲ ಹುಲ್ಲೇ ಹುಲ್ಲು, ಒಣಗಿ ಹೋಗುವುದಾ ಹುಲ್ಲು, ಬಾಡಿ ಹೋಗುವುದಾ ಹೂವು, ನಮ್ಮ ದೇವರ ನುಡಿಯಾದರೋ ಇರುವುದು ಚಿರಕಾಲವು." ಪರ್ವತವನ್ನೇರು ಶುಭಸಂದೇಶಕಳಾದ ಸಿಯೋನೇ, ಧ್ವನಿಯೇರಿಸು, ನಿರ್ಭಯದಿಂದ ಏರಿಸು "ಇಗೋ, ನಿಮ್ಮ ದೇವರು" ಎಂದು ಜೂದ ನಗರಗಳಿಗೆ ಸಾರು. ಇಗೋ, ಬರುತಿಹನು ಸ್ವಾಮಿ ಸರ್ವೇಶ್ವರ ಶೂರನಂತೆ ರಾಜ್ಯವಾಳುವನು ತನ್ನ ಭುಜಬಲದಿಂದಲೇ ಇಗೋ,  ಶ್ರಮಕ್ಕೆ ತಕ್ಕ ಪ್ರತಿಫಲ ಆತನ ಕೈಯಲ್ಲಿದೆ ಆತ ಜಯಿಸಿದ ಪರಿವಾರ ಆತನ ಮುಂದಿದೆ. ಆತ ಮೇಯಿಸುವನು ತನ್ನ ಮಂದೆಯನ್ನು ಕುರುಬನ ಹಾಗೆ ಮರಿಗಳನ್ನು ಕೈಗೆ ಎತ್ತಿಕೊಳ್ಳುವನು, ಅಪ್ಪಿಕೊಳ್ಳುವನು ಎದೆಗೆ ನಡೆಸುವನು ಹಾಲೂಡಿಸುವ ಕುರಿಗಳನ್ನು ಮೆಲ್ಲಗೆ.

ಕೀರ್ತನೆ: 96:1-2, 3, 10, 11-12, 13
ಶ್ಲೋಕ: ಇಗೋ, ಸರ್ವೇಶ್ವರಸ್ವಾಮಿ ಬರುತಿಹನು ಶೂರನಂತೆ

ಹೊಸಗೀತೆಯನು ಹಾಡಿರಿ ಪ್ರಭುವಿಗೆ|
ವಿಶ್ವವೆಲ್ಲವು ಹಾಡಲಿ ಆತನಿಗೆ||
ಪ್ರಭುವಿಗೆ ಹಾಡಿರಿ, ಆತನ ನಾಮವನು ಕೊಂಡಾಡಿರಿ|
ಆತನ ಮುಕ್ತಿಮಾರ್ಗವನು ಪ್ರತಿನಿತ್ಯವೂ ಸಾರಿರಿ||

ಪ್ರಸಿದ್ಧಪಡಿಸಿರಿ ಆತನ ಘನತೆಯನು ರಾಷ್ಟ್ರಗಳಿಗೆ|
ಆತನದ್ಭುತ ಕಾರ್ಯಗಳನು ಸಕಲ ಜನಾಂಗಗಳಿಗೆ||
ಪ್ರಭು ರಾಜನೆಂದು ಸಾರಿರಿ ರಾಷ್ಟ್ರಗಳಿಗೆ|
ನ್ಯಾಯತೀರ್ಪು ಕೊಡುವನು ಜನಾಂಗಕೆ||

ಹರ್ಷಿಸಲಿ ಆಕಾಶವು, ಸಂತೋಷಿಸಲಿ ಭೂಲೋಕವು|
ಗರ್ಜಿಸಲಿ ಸಮುದ್ರವು ಮತ್ತು ಅದರೊಳಿರುವುದೆಲ್ಲವು||
ಉಲ್ಲಾಸಿಸಲಿ ಹೊಲಗದ್ದೆಗಳು, ಪೈರುಪಚ್ಚೆಗಳು|
ಹರ್ಷಧ್ವನಿಗೈಯಲಿ ಕಾಡಿನ ಫಲವೃಕ್ಷಗಳು||

ಪ್ರಭು ಧರೆಗೆ ನ್ಯಾಯತೀರಿಸಲು|
ಬಂದೇ ಬರುವನು ಖರೆಯಾಗಿ||
ಜಗಕು ಜನತೆಗು ತೀರ್ಪಿಡುವನು|
ನೀತಿ ನಿಯಮಾನುಸಾರವಾಗಿ||

ಘೋಷಣೆ:
ಅಲ್ಲೆಲೂಯ, ಅಲ್ಲೆಲೂಯ!
ಸ್ವಾಮಿ ಸರ್ವೇಶ್ವರಾ, ತಡಮಾಡಬೇಡಿ | ನಿಮ್ಮ ಜನರ ಪಾಪಗಳನ್ನು ಕ್ಷಮಿಸಿರಿ ||
ಅಲ್ಲೆಲೂಯ!

ಶುಭಸಂದೇಶ: ಮತ್ತಾಯ 18:12-14


"ನಿಮ್ಮಲ್ಲಿ ಒಬ್ಬನಿಗೆ ನೂರು ಕುರಿಗಳು ಇವೆಯೆನ್ನೋಣ, ಅವುಗಳಲ್ಲಿ ಒಂದು ಕುರಿ ತಪ್ಪಿಸಿಕೊಂಡು ಹೋಯಿತೆಂದು ಇಟ್ಟುಕೊಳ್ಳಿ, ಆಗ ನಿಮಗೇನು ಅನ್ನಿಸುತ್ತದೆ? ಅವನು ಉಳಿದ ತೊಂಭತ್ತೊಂಭತ್ತು ಕುರಿಗಳನ್ನು ಗುಡ್ಡದಲ್ಲೇ ಬಿಟ್ಟು, ತಪ್ಪಿಸಿಕೊಂಡು ಹೋದ ಆ ಒಂದು ಕುರಿಯನ್ನು ಹುಡುಕಿಕೊಂಡು ಹೋಗುವುದಿಲ್ಲವೇ? ಅದು ಸಿಕ್ಕಿತು ಅನ್ನಿ; ತಪ್ಪಿಸಿಕೊಳ್ಳದ ಈ ತೊಂಭತ್ತೊಂಭತ್ತು ಕುರಿಗಳಿಗಿಂತ ಸಿಕ್ಕಿದ ಈ ಒಂದು ಕುರಿಗಾಗಿ ಅವನು ಹೆಚ್ಚು ಆನಂದಪಡುತ್ತಾನೆ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಅಂತೆಯೇ, ಈ ಚಿಕ್ಕವರಲ್ಲಿ ಒಬ್ಬನು ಕೂಡ ಕಳೆದುಹೋಗಬಾರದು; ಇದೇ ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತ," ಎಂದರು ಯೇಸುಸ್ವಾಮಿ.

11.12.23 - 'ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ," ಎನ್ನುವುದು ಸುಲಭವೋ ಅಥವಾ 'ಎದ್ದು ನಡೆ' ಎನ್ನುವುದು ಸುಲಭವೋ?

ಮೊದಲನೇ ವಾಚನ: ಯೆಶಾಯ  35:1-10

ಆನಂದಿಸಲಿ ಅರಣ್ಯವೂ ಮರಭೂಮಿಯೂ, ಹೂಗಳಂತೆ ಅರಳಿ ಹರ್ಷಿಸಲಿ ಒಣನೆಲವು. ಉಲ್ಲಾಷಿಸಲಿ ಅದು ಹುಲುಸಾಗಿ ಹೂಬಿಟ್ಟು, ಹೌದು, ಸಂತಸ ಸಂಗೀತ ಹಾಡುವಷ್ಟು. ದೊರಕಲಿ ಅದಕ್ಕೆ ಲೆಬನೋನಿನ ಮಹಿಮೆಯು; ಕರ್ಮೆಲಿನ ಮತ್ತು ಶಾರೋನಿನ ವೈಭವವು.  ಕಾಣುವುವು ಸರ್ವೇಶ್ವರನ ಮಹಿಮೆಯನು, ನೋಡುವುವು ಇವೆಲ್ಲ ನಮ್ಮ ದೇವರ ವೈಭವವನ್ನು. ಜೋಲುಬಿದ್ದ ಕೈಗಳನ್ನು ಬಲಗೊಳಿಸಿರಿ. ನಡುಗುವ ಕಾಲುಗಳನ್ನು ದೃಢಗೊಳಿಸಿರಿ. ಚಂಚಲ ಹೃದಯರಿಗೆ ಹೀಗೆಂದು ಹೇಳಿ: "ಭಯಪಡಬೇಡಿ, ಎದೆಗುಂದಬೇಡಿ, ಬರುವನು ಆ ದೇವನು ಮುಯ್ಯಿತೀರಿಸಲು; ಬರುವನು ಆ ದೇವನು ಪ್ರತೀಕಾರವೆಸಗಲು; ತಾನೇ ಬರುವನು ನಿಮ್ಮನ್ನು ರಕ್ಷಿಸಲು." ಕುರುಡರ ಕಣ್ಣು ಕಾಣುವುದಾಗ, ಕಿವುಡರ ಕಿವಿ ತೆರೆಯುವುದಾಗ, ಜಿಗಿಯುವನು ಕುಂಟನು ಜಿಂಕೆಯಂತೆ ಹಾಡುವುದು ಮೂಕನ ನಾಲಿಗೆ ಹರ್ಷಗೀತೆ, ಒರತೆಗಳು ಒಡೆಯುವುವು ಅರಣ್ಯದಲ್ಲಿ ನದಿಗಳು ಹುಟ್ಟಿಹರಿಯುವುವು ಒಣನೆಲದಲ್ಲಿ. ಸರೋವರವಾಗುವುದಾ ಉರಿಗಾಡು ಬುಗ್ಗೆಯಾಗುವುದಾ ಬುವಿ ಬರಡು, ನರಿಗಳು ನಿವಾಸಿಸುವ ಗುಹೆಗಳು ಆಗುವುವು ಹುಲುಸಾದ  ಹುಲ್ಲುಗಾವಲುಗಳು. ಅಲ್ಲಿರುವುದೊಂದು ರಾಜಮಾರ್ಗ ಅದೆನಿಸಿಕೊಳ್ಳುವುದು ಪವಿತ್ರಮಾರ್ಗ ನಡೆಯನು ಅದರೊಳು ಪಾಪಾತ್ಮನು; ಅದಾಗುವುದು ಜನರಿಗೆ ಮೀಸಲು ದಾರಿತಪ್ಪನು ಅಲ್ಲ ನಡೆಯುವ ಮೂಢನು. ಅಲ್ಲಿರದು ಸಿಂಹ ಸಿಂಹಿಣಿ, ಅಲ್ಲಿ ಸೇರದು ಕ್ರೂರ ಪ್ರಾಣಿ, ಕಾಣಸಿಗದಲ್ಲಿ ಇದಾವ ಹಾನಿ, ಪಾಪವಿಮುಕ್ತರೇ ನಡೆವರಲ್ಲಿ. ಹಿಂದಿರುಗುವರು ಸರ್ವೇಶ್ವರನಿಂದ ವಿಮೋಚನೆ ಪಡೆದವರು ಜಯಜಯಕಾರದೊಂದಿಗೆ ಸಿಯೋನನು ಸೇರುವರು. ನಿತ್ಯಾನಂದ ಸುಖವಿರುವುದು ಕಿರೀಟಪ್ರದವಾಗಿ ಸಿಗುವುದವರಿಗೆ ಹರ್ಷಾನಂದದ ಸವಿ ತೊಲಗುವುದು ದುಃಖ ದುಗುಡದ ಕಹಿ.

ಕೀರ್ತನೆ: 85:9, 10, 11-12, 13-14
ಶ್ಲೋಕ: ಅಗೋ, ದೇವನು ತಾನೇ ಬರುವನು ನಿಮ್ಮನ್ನು ರಕ್ಷಿಸಲು.

ಶುಭಸಂದೇಶ: ಲೂಕ 5:17-26

ಒಮ್ಮೆ ಯೇಸುಸ್ವಾಮಿ ಬೋಧನೆ ಮಾಡುತ್ತಾ ಇದ್ದಾಗ, ಫರಿಸಾಯರೂ ಧರ್ಮಶಾಸ್ತ್ರಜ್ಞರೂ ಅವರ ಹತ್ತಿರ ಕುಳಿತ್ತಿದ್ದರು. ಇವರು ಗಲಿಲೇಯ ಹಾಗೂ ಜುದೇಯ ಪ್ರಾಂತ್ಯದ ಊರೂರುಗಳಿಂದಲೂ ಜೆರುಸಲೇಮ್ ಪಟ್ಟಣದಿಂದಲೂ ಬಂದಿದ್ದರು. ಗುಣಪಡಿಸುವಂತಹ ದೈವಶಕ್ತಿ ಯೇಸುವಿನಲ್ಲಿತ್ತು. ಆಗ ಕೆಲವರು ಒಬ್ಬ ಪಾರ್ಶ್ವವಾಯು ರೋಗಿಯನ್ನು ಹಾಸಿಗೆಯ ಸಮೇತ ಹೊತ್ತುಕೊಂಡು ಅಲ್ಲಿಗೆ ಬಂದರು. ರೋಗಿಯನ್ನು ಒಳಕ್ಕೆ ತೆಗೆದುಕೊಂಡು ಹೋಗಿ ಯೇಸುವಿನ ಮುಂದೆ ಇಡಬೇಕೆಂದು ಪ್ರಯತ್ನಿಸಿದರು. ಆದರೆ ಜನಸಂದಣಿಯ ನಿಮಿತ್ತ ದಾರಿ ಮಾಡಲಾಗಲಿಲ್ಲ. ಆಗ ಅವರು ಮನೆಯ ಮೇಲೆ ಹತ್ತಿ , ಹೆಂಚುಗಳನ್ನು ತೆಗೆದು, ಅಲ್ಲಿಂದ ರೋಗಿಯನ್ನು ಹಾಸಿಗೆಯ ಸಹಿತ ಯೇಸುವಿನ ಮುಂದೆ ಇಳಿಸಿದರು. ಯೇಸು ಅವರ ವಿಶ್ವಾಸವನ್ನು ಮೇಚ್ಚಿ,  "ತಮ್ಮಾ, ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ," ಎಂದರು. ಇದನ್ನು ಕೇಳಿದ ಧರ್ಮಶಾಸ್ತ್ರಿಗಳೂ ಫರಿಸಾಯರೂ, "ದೇವದೂಷಣೆ ಆಡುತ್ತಿರುವ ಇವನಾರು? ದೇವರೊಬ್ಬರನ್ನು ಬಿಟ್ಟರೆ ಪಾಪಗಳನ್ನು ಕ್ಷಮಿಸಿ ಪರಿಹರಿಸಲು ಬೇರೆ ಯಾರಿಂದ ಸಾಧ್ಯ?" ಎಂದು ತಮ್ಮಲ್ಲೇ ಹೇಳಿಕೊಳ್ಳಲು  ಆರಂಭಿಸಿದರು. ಯೇಸು ಅವರ ಆಲೋಚನೆಗಳನ್ನು ಗ್ರಹಿಸಿಕೊಂಡು, "ನೀವು ನಿಮ್ಮ ಮನಸ್ಸಿನಲ್ಲಿ ಆಲೋಚಿಸುತ್ತಾ ಇರುವುದೇನು? 'ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ," ಎನ್ನುವುದು ಸುಲಭವೋ ಅಥವಾ 'ಎದ್ದು ನಡೆ' ಎನ್ನುವುದು ಸುಲಭವೋ? ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸಲು ನರಪುತ್ರನಿಗೆ ಅಧಿಕಾರ ಉಂಟೆಂದು ಈ ಮೂಲಕ ನಿಮಗೆ ಖಚಿತವಾಗಬೇಕು," ಎಂದು ಹೇಳಿ, ಅ ಪಾರ್ಶ್ವವಾಯು ರೋಗಿಯ ಕಡೆ ನೋಡಿ,  'ಏಳು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೊರಡು,' ಎಂದು ನಿನಗೆ ಆಜ್ಞಾಪಿಸುತ್ತೇನೆ" ಎಂದರು. ತಕ್ಷಣವೇ ಅವರೆಲ್ಲರೂ ನೋಡುತ್ತಿದ್ದ ಹಾಗೆ ಅವನು ಎದ್ದು, ಮಲಗಿದ್ದ ಹಾಸಿಗೆಯನ್ನು ಎತ್ತಿಕೊಂಡು, ದೇವರನ್ನು ಸ್ತುತಿಸುತ್ತಾ ತನ್ನ ಮನೆಗೆ ಹೋದನು. ಎಲ್ಲರೂ ನಿಬ್ಬೆರಗಾಗಿ, ನಾವು ಈ ದಿನ ಎಂಥ ಅಪೂರ್ವ ಕಾರ್ಯವನ್ನು ಕಂಡೆವು!" ಎಂದು ಭಯಭಕ್ತಿಯಿಂದ ದೇವರನ್ನು ಕೊಂಡಾಡಿದರು.

10.12.23 - "ಸರ್ವೇಶ್ವರನಿಗಾಗಿ ಮಾರ್ಗವನ್ನು ಸಿದ್ಧಪಡಿಸಿರಿ; ಆತನ ಆಗಮನಕ್ಕಾಗಿ ಹಾದಿಯನ್ನು ಸರಾಗಮಾಡಿರಿ"

ಮೊದಲನೇ ವಾಚನ: ಯೆಶಾಯ 40: 1-5, 9-11 


ನಿಮ್ಮ ದೇವರು ಇಂತೆನ್ನುತ್ತಾರೆ: “ಸಂತೈಸಿ, ನನ್ನ ಜನರನ್ನು ಸಂತೈಸಿರಿ. ಜೆರುಸಲೇಮಿನೊಡನೆ ಪ್ರೀತಿಯಿಂದ ಮಾತನಾಡಿ; ಅದರ ಊಳಿಗತನ ಮುಗಿಯಿತೆನ್ನಿ; ತಕ್ಕ ಪ್ರಾಯಶ್ಚಿತ್ತವಾಗಿದೆ ಅದು ಗೈದ ದೋಷಕೆ ಸರ್ವೇಶ್ವರಸ್ವಾಮಿಯಿಂದಲೇ ಅದರ ಎಲ್ಲಾ ಪಾಪಕೃತ್ಯಗಳಿಗೆ ಇಮ್ಮಡಿ ಶಿಕ್ಷೆಯಾಗಿದೆ ಎಂದು ಕೂಗಿ ಹೇಳಿ ಆ ನಗರಿಗೆ” ಇಗೋ, ಈ ವಾಣಿಯನ್ನು ಕೇಳಿ: “ಸರ್ವೇಶ್ವರಸ್ವಾಮಿಗೆ ಮಾರ್ಗವನ್ನು ಸಿದ್ಧಮಾಡಿ ಅರಣ್ಯದಲಿ ನಮ್ಮ ದೇವರಿಗೆ ರಾಜಮಾರ್ಗವನ್ನು ಸರಾಗಮಾಡಿ ಅಡವಿಯಲಿ. ತುಂಬಬೇಕು ಎಲ್ಲ ಹಳ್ಳಕೊಳ್ಳಗಳನು ಮಟ್ಟಮಾಡಬೇಕು ಎಲ್ಲ ಬೆಟ್ಟ ಗುಡ್ಡಗಳನು. ನೆಲಸಮಮಾಡಬೇಕು ದಿಬ್ಬದಿಣ್ಣೆಗಳನು ಸಮತಲಗೊಳಿಸಬೇಕು ತಗ್ಗು ಮುಗ್ಗಾದ ಸ್ಥಳಗಳನು. ಗೋಚರವಾಗುವುದಾಗ ಸರ್ವೇಶ್ವರ ಸ್ವಾಮಿಯ ಮಹಿಮೆಯು, ಮಾನವರೆಲ್ಲರೂ ಅದನ್ನು ಕಾಣುವರು ಒಟ್ಟಿಗೆ, ಸರ್ವೇಶ್ವರಸ್ವಾಮಿಯೇ ಇದನ್ನು ಬಾಯಾರೆ ನುಡಿದಿದ್ದಾರೆ.” ಪರ್ವತವನ್ನೇರು ಶುಭಸಂದೇಶಕಳಾದ ಸಿಯೋನೇ, ಧ್ವನಿಯೇರಿಸು, ಶುಭವಾರ್ತೆ ಸಾರಬಲ್ಲ ಜೆರುಸಲೇಮೇ, ಧ್ವನಿಯೇರಿಸು, ನಿರ್ಭಯದಿಂದ ಏರಿಸು ‘ಇಗೋ, ನಿಮ್ಮ ದೇವರು’ ಎಂದು ಜೂದ ನಗರಗಳಿಗೆ ಸಾರು. ಇಗೋ, ಬರುತಿಹನು ಸ್ವಾಮಿ ಸರ್ವೇಶ್ವರ ಶೂರನಂತೆ ರಾಜ್ಯವಾಳುವನು ತನ್ನ ಭುಜಬಲದಿಂದಲೇ ಇಗೋ, ಶ್ರಮಕ್ಕೆ ತಕ್ಕ ಪ್ರತಿಫಲ ಆತನ ಕೈಯಲ್ಲಿದೆ ಆತ ಜಯಿಸಿದ ಪರಿವಾರ ಆತನ ಮುಂದಿದೆ. ಆತ ಮೇಯಿಸುವನು ತನ್ನ ಮಂದೆಯನ್ನು ಕುರುಬನ ಹಾಗೆ ಮರಿಗಳನ್ನು ಕೈಗೆ ಎತ್ತಿಕೊಳ್ಳುವನು, ಅಪ್ಪಿಕೊಳ್ಳುವನು ಎದೆಗೆ ನಡೆಸುವನು ಹಾಲೂಡಿಸುವ ಕುರಿಗಳನ್ನು ಮೆಲ್ಲಗೆ."

ಕೀರ್ತನೆ: 85: 9-10, 11-12, 13-14 (8)

ಶ್ಲೋಕ: ತೋರಿಸೆಮಗೆ ಪ್ರಭು ಕರುಣೆಯನು, ಅನುಗ್ರಹಿಸೆಮಗೆ ರಕ್ಷಣೆಯನು. 
 
ಎರಡನೇ ವಾಚನ: 2 ಪೇತ್ರ 3: 8-14 

ಪ್ರಿಯರೇ, ಮತ್ತೊಂದು ವಿಷಯವನ್ನು ಮರೆಯದಿರಿ: ಪ್ರಭುವಿನ ದೃಷ್ಟಿಯಲ್ಲಿ ಒಂದು ದಿನ ಸಾವಿರ ವರ್ಷಗಳಂತೆಯೂ ಮತ್ತು ಸಾವಿರ ವರ್ಷಗಳು ಒಂದು ದಿನದಂತೆಯೂ ಇವೆ. ಕೆಲವರು ಭಾವಿಸುವಂತೆ ಪ್ರಭು ತಮ್ಮ ವಾಗ್ದಾನಗಳನ್ನು ನೆರವೇರಿಸುವುದರಲ್ಲಿ ವಿಳಂಬ ಮಾಡುವವರಲ್ಲ; ಆದರೆ ಅವರು ನಿಮ್ಮ ವಿಷಯದಲ್ಲಿ ದೀರ್ಘಶಾಂತಿ, ಸಹನೆಯುಳ್ಳವರು. ಯಾರೊಬ್ಬನೂ ನಾಶವಾಗಬೇಕೆಂಬುದು ಅವರ ಇಚ್ಛೆಯಲ್ಲ; ಎಲ್ಲರೂ ಪಶ್ಚಾತ್ತಾಪಪಟ್ಟು ತಮಗೆ ಅಭಿಮುಖರಾಗಬೇಕೆಂಬುದೇ ಅವರ ಅಪೇಕ್ಷೆ. ಪ್ರಭುವಿನ ದಿನ ಬಂದೇ ತೀರುವುದು. ಅದು ಕಳ್ಳನಂತೆಯೇ ಬರುವುದು. ಆಗ, ಆಕಾಶ ಮಂಡಲವು ಸಿಡಿಲ ಗರ್ಜನೆಯೊಂದಿಗೆ ಅಳಿದು ಹೋಗುವುದು. ಸೂರ್ಯ, ಚಂದ್ರ, ನಕ್ಷತ್ರ, ಗ್ರಹಗಳು ಸುಟ್ಟು ಲಯವಾಗಿ ಹೋಗುವುವು. ಭೂಮಿಯೂ ಅದರಲ್ಲಿರುವ ಸಮಸ್ತವೂ ಉರಿದು ಭಸ್ಮವಾಗುವುವು. ಇವೆಲ್ಲವೂ ಹೀಗೆ ನಾಶವಾಗಿ ಹೋಗುವುದರಿಂದ ನೀವು ಎಂಥವರಾಗಿ ಜೀವಿಸಬೇಕು? ಪರಿಶುದ್ಧರಾಗಿಯೂ ಭಕ್ತಿಪೂರಿತರಾಗಿಯೂ ಬಾಳಬೇಕು. ದೇವರ ಆ ದಿನವನ್ನು ಎದುರು ನೋಡುತ್ತಾ ಅದು ಬೇಗನೆ ಬರಲೆಂದು ಹಾರೈಸಬೇಕು. ಆ ದಿನ, ಆಕಾಶಮಂಡಲವು ಅಗ್ನಿಯಿಂದ ಉರಿದು ಹೋಗುವುದು; ಸೂರ್ಯ, ಚಂದ್ರ, ನಕ್ಷತ್ರ, ಗ್ರಹಗಳು ಶಾಖದಿಂದ ಕರಗಿಹೋಗುವುವು. ನಾವಾದರೋ, ದೇವರ ವಾಗ್ದಾನದ ಪ್ರಕಾರ ನೀತಿಯ ನೆಲೆಯಾಗಿರುವ ನೂತನ ಆಕಾಶಮಂಡಲವೂ ನೂತನ ಭೂಮಂಡಲವೂ ಬರುವುದನ್ನು ಎದುರು ನೋಡುತ್ತಿರುವೆವು. ಪ್ರಿಯರೇ, ಇವುಗಳನ್ನು ಎದುರುನೋಡುವವರಾಗಿರುವ ನೀವು ದೇವರ ದೃಷ್ಟಿಯಲ್ಲಿ ನಿರ್ಮಲರೂ ನಿರ್ದೋಷಿಗಳೂ ಆಗಿದ್ದು ಶಾಂತಿ ಸಮಾಧಾನದಿಂದಿರಲು ಪ್ರಯತ್ನಿಸಿರಿ.

ಶುಭಸಂದೇಶ: ಮಾರ್ಕ 1: 1-8 


ದೇವರ ಪುತ್ರರಾದ ಯೇಸುಕ್ರಿಸ್ತರ ಶುಭಸಂದೇಶ. ಇದು ಪ್ರವಾದಿ ಯೆಶಾಯನು ಮೊದಲೇ ಬರೆದಿಟ್ಟ ಪ್ರಕಾರ ಪ್ರಾರಂಭವಾಯಿತು. “ಇಗೋ, ನನ್ನ ದೂತನನ್ನು ನಿನಗೆ ಮುಂದಾಗಿ ಕಳಿಸುವೆನು ಆತನು ನಿನ್ನ ಮಾರ್ಗವನ್ನು ಮುಂಚಿತವಾಗಿ ಸಿದ್ಧಗೊಳಿಸುವನು,’ ಎಂದು ದೇವರೇ ನುಡಿದಿದ್ದಾರೆ.” “ ‘ಸರ್ವೇಶ್ವರನಿಗಾಗಿ ಮಾರ್ಗವನ್ನು ಸಿದ್ಧಪಡಿಸಿರಿ; ಆತನ ಆಗಮನಕ್ಕಾಗಿ ಹಾದಿಯನ್ನು ಸರಾಗಮಾಡಿರಿ,’ ಎಂದೊಬ್ಬನು ಘೋಷಿಸುತ್ತಿದ್ದಾನೆ, ಬೆಂಗಾಡಿನಲ್ಲಿ.” ಈ ಪ್ರವಾದನೆಗೆ ಅನುಗುಣವಾಗಿ ಯೊವಾನ್ನನು, “ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ; ಸ್ನಾನದೀಕ್ಷೆಯನ್ನು ಪಡೆದುಕೊಳ್ಳಿ. ದೇವರು ನಿಮ್ಮ ಪಾಪಗಳನ್ನು ಕ್ಷಮಿಸಿಬಿಡುವರು,” ಎಂದು ಬೆಂಗಾಡಿನಲ್ಲಿ ಜನರಿಗೆ ಸಾರಿ ಹೇಳುತ್ತಾ ಸ್ನಾನದೀಕ್ಷೆ ಕೊಡುತ್ತಾ ಇದ್ದನು. ಜುದೇಯ ಪ್ರಾಂತ್ಯದ ಎಲ್ಲೆಡೆಗಳಿಂದಲೂ ಜೆರುಸಲೇಮಿನಿಂದಲೂ ಜನರು ಆತನ ಬಳಿಗೆ ಹೋಗುತ್ತಿದ್ದರು. ಅವರು ತಮ್ಮ ಪಾಪಗಳನ್ನು ಒಪ್ಪಿಕೊಳ್ಳುತ್ತಾ ಜೋರ್ಡನ್ ನದಿಯಲ್ಲಿ ಆತನಿಂದ ಸ್ನಾನದೀಕ್ಷೆ ಪಡೆದುಕೊಳ್ಳುತ್ತಿದ್ದರು ಯೊವಾನ್ನನು ಒಂಟೆಯ ತುಪ್ಪಟದ ಹೊದಿಕೆಯನ್ನು ಹೊದ್ದು, ಸೊಂಟಕ್ಕೆ ತೊಗಲಿನ ನಡುಪಟ್ಟಿಯನ್ನು ಕಟ್ಟಿಕೊಳ್ಳುತ್ತಿದ್ದನು. ಮಿಡತೆಗಳೂ ಕಾಡುಜೇನೂ ಆತನ ಆಹಾರವಾಗಿತ್ತು ಆತನು, “ನನ್ನಾನಂತರ ನನಗಿಂತಲೂ ಶಕ್ತರೊಬ್ಬರು ಬರುತ್ತಾರೆ; ಬಗ್ಗಿ ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಅರ್ಹನಲ್ಲ ನಾನು ನಿಮಗೆ ನೀರಿನಿಂದ ಸ್ನಾನದೀಕ್ಷೆ ಕೊಟ್ಟೆನು; ಅವರಾದರೋ ನಿಮಗೆ ಪವಿತ್ರಾತ್ಮ ಅವರಿಂದ ದೀಕ್ಷಾಸ್ನಾನ ಕೊಡುವರು,” ಎಂದು ಘೋಷಿಸುತ್ತಿದ್ದನು.

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...