24.05.23 - "ನಾನು ಲೋಕಕ್ಕೆ ಸೇರಿದವನಲ್ಲ. ಅಂತೆಯೇ, ಇವರೂ ಲೋಕಕ್ಕೆ ಸೇರಿದವರಲ್ಲ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು  20:28-38


ಪೌಲನು ಎಫೆಸದ ಸಭೆಯ ಹಿರಿಯರನ್ನು ಉದ್ದೇಶಿಸಿ ಮಾತನಾಡುತ್ತಾ ಹೀಗೆಂದನು: "ನೀವು ನಿಮ್ಮ ವಿಷಯದಲ್ಲಿ ಹಾಗೂ ಪವಿತ್ರಾತ್ಮ ನಿಮ್ಮ ಪಾಲನೆಗೆ ವಹಿಸಿರುವ ಮಂದೆಯ ವಿಷಯದಲ್ಲಿ ಜಾಗರೂಕರಾಗಿರಿ. ಪ್ರಭು ತಮ್ಮ ಸ್ವಂತ ರಕ್ತ ಸುರಿಸಿ ಸಂಪಾದಿಸಿದ ಧರ್ಮಸಭೆಗೆ ಉತ್ತಮ ಕುರಿಗಾಹಿಗಳಾಗಿರಿ. ನಾನು ಹೋದ ಬಳಿಕ ಕ್ರೂರವಾದ ತೋಳಗಳು ನಿಮ್ಮ ಮಧ್ಯೆ ನುಗ್ಗುವುವು ಎಂದು ನಾನು ಬಲ್ಲೆ. ಅವು ಮಂದೆಗೆ ಹಾನಿಮಾಡದೆ ಬಿಡವು. ಇದಲ್ಲದೆ ನಿಮ್ಮಲ್ಲೇ ಕೆಲವರು ಎದ್ದು ಭಕ್ತವಿಶ್ವಾಸಿಗಳನ್ನು ತಮ್ಮ ಕಡೆ ಸೆಳೆದುಕೊಳ್ಳಲು ಅಸತ್ಯವಾದವುಗಳನ್ನು ಹೇಳುವರು. ಆದುದರಿಂದ ಎಚ್ಚರಿಕೆ! ನಾನು ಮೂರು ವರ್ಷಗಳ ಕಾಲ ಹಗಲಿರುಳು ಕಣ್ಣೀರಿಡುತ್ತಾ ಪ್ರತಿಯೊಬ್ಬನಿಗೂ ಬುದ್ಧಿ ಹೇಳಿದ್ದೇನೆಂಬುದನ್ನು ಮರೆಯಬೇಡಿ. “ಈಗ ನಿಮ್ಮನ್ನು ದೇವರ ಕೈಗೂ, ಅವರ ಅನುಗ್ರಹ ಸಂದೇಶಕ್ಕೂ ಒಪ್ಪಿಸಿಕೊಡುತ್ತೇನೆ. ಅದು ನಿಮ್ಮನ್ನು ಅಭಿವೃದ್ಧಿಗೊಳಿಸಬಲ್ಲದು. ಮಾತ್ರವಲ್ಲ, ಪಾವನ ಪುರುಷರ ಬಾಧ್ಯತೆಯಲ್ಲಿ ಭಾಗಿಗಳಾಗುವಂತೆ ಮಾಡಬಲ್ಲದು. ನಾನು ಯಾರ ಬೆಳ್ಳಿ ಬಂಗಾರಕ್ಕೂ ಬಟ್ಟೆಬರೆಗೂ ಆಶೆಪಟ್ಟವನಲ್ಲ. ನನ್ನ ಹಾಗೂ ನನ್ನ ಸಂಗಡಿಗರ ಅವಶ್ಯಕತೆಗಳನ್ನು ನೀಗಿಸಲು ಈ ಕೈಗಳೇ ದುಡಿದಿವೆಯೆಂಬುದು ನಿಮ್ಮೆಲ್ಲರಿಗೂ ತಿಳಿದಿದೆ. ಹೀಗೆ ಕಷ್ಟಪಟ್ಟು ದುಡಿದು, ದುರ್ಬಲರಿಗೆ ನೆರವಾಗಬೇಕೆಂದು ನಾನು ನಿಮಗೆ ಹಲವಾರು ವಿಧದಲ್ಲಿ ತೋರಿಸಿಕೊಟ್ಟಿದ್ದೇನೆ. ‘ಕೊಳ್ಳುವ ಕೈಗಿಂತ ಕೊಡುವ ಕೈ ಧನ್ಯವಾದುದು’ ಎಂಬ ಯೇಸುಸ್ವಾಮಿಯ ಮಾತುಗಳನ್ನು ನೆನಪಿನಲ್ಲಿಡಿ.” ಇಷ್ಟು ಹೇಳಿದ ಮೇಲೆ ಪೌಲನು ಅವರೆಲ್ಲರ ಸಂಗಡ ಮೊಣಕಾಲೂರಿ ಪ್ರಾರ್ಥನೆ ಮಾಡಿದನು. ಅನಂತರ ಅವರು ಅವನನ್ನು ತಬ್ಬಿಕೊಂಡು ಮುದ್ದಿಟ್ಟು ಬೀಳ್ಕೊಟ್ಟರು. ಅವರ ಕಣ್ಣಲ್ಲಾದರೋ ನೀರು ಧಾರಾಕಾರವಾಗಿ ಹರಿಯುತ್ತಿತ್ತು. ‘ಇನ್ನೆಂದೂ ನೀವು ನನ್ನ ಮುಖವನ್ನು ಕಾಣಲಾರಿರಿ,’ ಎಂಬ ಅವನ ಮಾತು ಅವರನ್ನು ಅತೀವ ದುಃಖಕ್ಕೆ ಈಡುಮಾಡಿತ್ತು. ಅವರು ಹಡಗಿನವರೆಗೂ ಹೋಗಿ ಅವನನ್ನು ಬೀಳ್ಕೊಟ್ಟರು.

ಕೀರ್ತನೆ: 68:29-30, 33-35, 35-36

ಶ್ಲೋಕ: ಭೂರಾಜ್ಯಗಳೇ, ಸ್ತುತಿಸಿರಿ ದೇವರನು!


ವಸತಿಯಾಯಿತದು ನಿನ್ನ ಜನಮಂದೆಗೆ I
ಆಸ್ಥೆಯಿಂದೊದಗಿಸಿದೆ ದೀನ ದಲಿತರಿಗೆ II
ಹೊರಡಿಸಿದನು ಪ್ರಭು ಶುಭವಾರ್ತೆಯೊಂದನು I
ಹರಡಿತು ಜನಸ್ತೋಮ ಆ ಸಂದೇಶವನು II
ನಮ್ಮ ದೇವರು ಜೀವೋದ್ಧಾರಕ ದೇವರು ಹೌದು I
ಸಾವಿಂದ ತಪ್ಪಿಸುವ ಶಕ್ತಿಸ್ವಾಮಿ ದೇವರದು II
ಸಂಹರಿಸುವನಾತನು ಶತ್ರುಗಳಾ ಶಿರಸ್ಸನು I
ನಸುಕುವನು ದುರ್ಮಾರ್ಗಿಗಳ ಕೇಶ ಕಿರೀಟವನು II

ಶುಭಸಂದೇಶ: ಯೊವಾನ್ನ 17:11-19


ಯೇಸುಸ್ವಾಮಿ ಆಕಾಶದತ್ತ ಕಣ್ಣೇತ್ತಿ ಹೀಗೆಂದು ಪ್ರಾರ್ಥಿಸಿದರು:  ಪವಿತ್ರ ಪಿತನೇ, ನಾವು ಒಂದಾಗಿರುವಂತೆ ನೀವು ನನಗೆ ಕೊಟ್ಟಿರುವ ಇವರೂ ಒಂದಾಗಿರುವ ಹಾಗೆ ನಿಮ್ಮ ನಾಮದ ಶಕ್ತಿಯಿಂದ ಇವರನ್ನು ಸುರಕ್ಷಿತವಾಗಿರಿಸಿರಿ. ನಾನು ಇವರೊಡನೆ ಇದ್ದಾಗ ಇವರನ್ನು ಕಾಪಾಡಿದೆನು. ನೀವಿತ್ತ ಇವರನ್ನು ನಿಮ್ಮ ನಾಮದ ಶಕ್ತಿಯಿಂದ ಸುರಕ್ಷಿತವಾಗಿ ನೋಡಿಕೊಂಡು ಬಂದೆನು. ಪವಿತ್ರಗ್ರಂಥದ ಮಾತು ನೆರವೇರುವಂತೆ ವಿನಾಶಕ್ಕೆ ಗುರಿಯಾಗಬೇಕಿದ್ದ ಒಬ್ಬನನ್ನು ಬಿಟ್ಟರೆ, ಇವರಲ್ಲಿ ಬೇರೆ ಯಾರೂ ನಾಶವಾಗಲಿಲ್ಲ. ಈಗ ನಾನು ನಿಮ್ಮ ಬಳಿಗೆ ಬರುತ್ತಿದ್ದೇನೆ. ನನ್ನ ಆನಂದವು ಅವರ ಹೃದಯದಲ್ಲಿ ತುಂಬಿ ತುಳುಕುವಂತೆ ಈ ಲೋಕದಲ್ಲಿರುವಾಗಲೇ ಇವುಗಳನ್ನು ಹೇಳುತ್ತಿದ್ದೇನೆ. ನಿಮ್ಮ ಸಂದೇಶವನ್ನು ಇವರಿಗೆ ತಿಳಿಸಿದ್ದೇನೆ. ನಾನು ಲೋಕಕ್ಕೆ ಸೇರಿದವನಲ್ಲ. ಅಂತೆಯೇ, ಇವರೂ ಲೋಕಕ್ಕೆ ಸೇರಿದವರಲ್ಲ. ಈ ಕಾರಣ, ಲೋಕಕ್ಕೆ ಇವರ ಮೇಲೆ ದ್ವೇಷವಿದೆ. ಇವರನ್ನು ಲೋಕದಿಂದ ತೆಗೆದುಬಿಡಬೇಕೆಂದು ನಾನು ನಿಮ್ಮನ್ನು ಕೇಳಿಕೊಳ್ಳುತ್ತಿಲ್ಲ. ಆದರೆ ಕೇಡಿಗನಿಂದ ಇವರನ್ನು ಕಾಪಾಡಬೇಕೆಂದು ಕೇಳಿಕೊಳ್ಳುತ್ತೇನೆ. ನಾನು ಲೋಕಕ್ಕೆ ಹೇಗೆ ಸೇರಿದವನಲ್ಲವೋ ಹಾಗೆಯೇ ಇವರೂ ಲೋಕಕ್ಕೆ ಸೇರಿದವರಲ್ಲ. ಇವರನ್ನು ಸತ್ಯಸಂಧರನ್ನಾಗಿಸಿ ನಿಮ್ಮ ಸೇವೆಗೆ ಮೀಸಲಾಗಿಡಿ. ನಿಮ್ಮ ಮಾತೇ ಸತ್ಯ. ನೀವು ನನ್ನನ್ನು ಲೋಕಕ್ಕೆ ಕಳಿಸಿದಂತೆ ನಾನು ಇವರನ್ನು ಲೋಕಕ್ಕೆ ಕಳಿಸಿದ್ದೇನೆ. ಸತ್ಯಸಂಧರಾಗಿ ಇವರು ನಿಮ್ಮ ಸೇವೆಗೆ ಮೀಸಲಾಗಬೇಕೆಂದು ನನ್ನನ್ನು ನಾನೇ ಮೀಸಲಾಗಿಸಿಕೊಂಡಿದ್ದೇನೆ.

23.05.23 - “ನೀವು ಲೋಕದಿಂದ ಆರಿಸಿ ನನಗೆ ಕೊಟ್ಟ ಜನರಿಗೆ ನಿಮ್ಮ ನಾಮವನ್ನು ತಿಳಿಯಪಡಿಸಿದ್ದೇನೆ"

 ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 20:17-27


ಪೌಲನು ಮಿಲೇತದಿಂದ ಎಫೆಸಕ್ಕೆ ಸಮಾಚಾರ ಕಳುಹಿಸಿ, ಅಲ್ಲಿನ ಧರ್ಮಸಭೆಯ ಪ್ರಮುಖರನ್ನು ಬರಮಾಡಿಕೊಂಡನು. ಬಂದಮೇಲೆ ಅವರಿಗೆ ಹೀಗೆಂದನು : “ನಾನು ಏಷ್ಯಪ್ರಾಂತ್ಯದಲ್ಲಿ ಕಾಲಿಟ್ಟ ದಿನ ಮೊದಲ್ಗೊಂಡು ಇಂದಿನವರೆಗೆ ನಿಮ್ಮ ಮಧ್ಯೆ ಹೇಗೆ ಬಾಳಿದೆನೆಂದು ನಿಮಗೆ ತಿಳಿದಿದೆ. ಯೆಹೂದ್ಯರ ಕುತಂತ್ರಗಳಿಂದ ನನಗೆ ಬಂದೊದಗಿದ ಸಂಕಷ್ಟಗಳಲ್ಲಿ ನಾನು ಅತಿ ನಮ್ರತೆಯಿಂದಲೂ ಕಣ್ಣೀರಿಡುತ್ತಲೂ ಪ್ರಭುವಿನ ಸೇವೆಮಾಡಿಕೊಂಡು ಬಂದೆನು. ನಿಮಗೆ ಹಿತಕರವಾದುದೆಲ್ಲವನ್ನು ಬಹಿರಂಗದಲ್ಲೂ ಮನೆಗಳಲ್ಲೂ ಹಿಂಜರಿಯದೆ ಬೋಧಿಸಿದ್ದೇನೆ ಹಾಗೂ ಕಲಿಸಿದ್ದೇನೆ. ಪಾಪಕ್ಕೆ ಪಶ್ಚಾತ್ತಾಪಪಟ್ಟು ದೇವರಿಗೆ ಅಭಿಮುಖರಾಗಬೇಕು, ನಮ್ಮ ಪ್ರಭು ಯೇಸುವಿನಲ್ಲಿ ವಿಶ್ವಾಸವಿಡಬೇಕು, ಎಂದು ಯೆಹೂದ್ಯರಿಗೂ ಗ್ರೀಕರಿಗೂ ಸ್ಪಷ್ಟವಾದ ಎಚ್ಚರಿಕೆಯನ್ನು ಕೊಟ್ಟಿದ್ದೇನೆ. ಈಗಲಾದರೋ, ಪವಿತ್ರಾತ್ಮ ಪರವಶನಾಗಿ ನಾನು ಜೆರುಸಲೇಮಿಗೆ ಹೋಗುತ್ತಿದ್ದೇನೆ. ಅಲ್ಲಿ ನನಗೇನು ಸಂಭವಿಸುವುದೋ ತಿಳಿಯದು. ಸೆರೆಮನೆ ಹಾಗೂ ಸಂಕಷ್ಟಗಳು ನನಗಾಗಿ ಕಾದಿವೆಯೆಂದು ಪವಿತ್ರಾತ್ಮ ಪ್ರತಿಯೊಂದು ಪಟ್ಟಣದಲ್ಲೂ ಕೊಟ್ಟ ಎಚ್ಚರಿಕೆ ಮಾತ್ರ ಸ್ಪಷ್ಟವಾಗಿದೆ. ನನಗಾದರೋ, ನನ್ನ ಪ್ರಾಣವು ತೃಣಕ್ಕೆ ಸಮಾನ. ಪ್ರಭು ಯೇಸು ನನಗೆ ವಿಧಿಸಿದ ಆಯೋಗವನ್ನು, ಅಂದರೆ ದೈವಾನುಗ್ರಹ ಕುರಿತಾದ ಶುಭಸಂದೇಶವನ್ನು ಸಾಕ್ಷ್ಯಪೂರ್ವಕವಾಗಿ ಸಾರುವ ಆಯೋಗವನ್ನು, ಪೂರೈಸುತ್ತಾ ನನ್ನ ಬಾಳಿನ ಗುರಿಯನ್ನು ಮುಟ್ಟುವೆನಾದರೆ, ನನಗೆ ಅಷ್ಟೇ ಸಾಕಾಗಿದೆ. ಇಗೋ, ಇಷ್ಟು ದಿನ ದೇವರ ಸಾಮ್ರಾಜ್ಯವನ್ನು ಪ್ರಕಟಿಸುತ್ತಾ ನಿಮ್ಮ ಮಧ್ಯೆ ಸಂಚರಿಸಿದ ನನ್ನ ಮುಖವನ್ನು ಇನ್ನು ಮುಂದೆ ನೀವು ಯಾರೂ ಕಾಣಲಾರಿರಿ ಎಂದು ನಾನು ಬಲ್ಲೆ. ಇಂತಿರಲು ನಾನು ನಿಮಗೆ ಸಾರಿ ಹೇಳುವುದೇನೆಂದರೆ - “ನಿಮ್ಮಲ್ಲಿ ಯಾರಾದರು ನಾಶವಾದರೆ, ಅದಕ್ಕೆ ನಾನು ಹೊಣೆಯಲ್ಲ. ಏಕೆಂದರೆ, ದೈವಯೋಜನೆಯನ್ನು ಕಿಂಚಿತ್ತೂ ಮರೆಮಾಚದೆ ತಿಳಿಯಪಡಿಸಿದ್ದೇನೆ. 

ಕೀರ್ತನೆ: 68:10-11, 20-21

ಶ್ಲೋಕ: ಭೂರಾಜ್ಯಗಳೇ, ಸ್ತುತಿಸಿರಿ ದೇವರನು!

ವಸತಿಯಾಯಿತದು ನಿನ್ನ ಜನಮಂದೆಗೆ I
ಆಸ್ಥೆಯಿಂದೊದಗಿಸಿದೆ ದೀನ ದಲಿತರಿಗೆ II
ಹೊರಡಿಸಿದನು ಪ್ರಭು ಶುಭವಾರ್ತೆಯೊಂದನು I
ಹರಡಿತು ಜನಸ್ತೋಮ  ಸಂದೇಶವನು II

ನಮ್ಮ ದೇವರು ಜೀವೋದ್ಧಾರಕ ದೇವರು ಹೌದು I
ಸಾವಿಂದ ತಪ್ಪಿಸುವ ಶಕ್ತಿಸ್ವಾಮಿ ದೇವರದು II
ಸಂಹರಿಸುವನಾತನು ಶತ್ರುಗಳಾ ಶಿರಸ್ಸನು I
ನಸುಕುವನು ದುರ್ಮಾರ್ಗಿಗಳ ಕೇಶ ಕಿರೀಟವನು II

ಶುಭಸಂದೇಶ: ಯೊವಾನ್ನ 17:1-11


ಯೇಸು ಸ್ವಾಮಿ ಅವರೊಡನೆ ಹೀಗೆ ಮಾತನಾಡಿದ ಮೇಲೆ ಆಕಾಶದತ್ತ ಕಣ್ಣೆತ್ತಿ ನೋಡಿ, “ಪಿತನೇ, ನಿರೀಕ್ಷಿಸಿದ ಗಳಿಗೆ ಬಂದಿದೆ. ನಿಮ್ಮ ಪುತ್ರನು ನಿಮ್ಮ ಮಹಿಮೆಯನ್ನು ಬೆಳಗಿಸುವಂತೆ ನೀವು ಆತನ ಮಹಿಮೆಯನ್ನು ಬೆಳಗಿಸಿರಿ. ನರಮಾನವರೆಲ್ಲರ ಮೇಲೆ ನೀವು ಆತನಿಗೆ ಅಧಿಕಾರವನ್ನು ಕೊಟ್ಟಿರುವಿರಿ. ಇದರಿಂದಾಗಿ ನೀವು ಆತನಿಗೆ ಒಪ್ಪಿಸಿರುವ ಎಲ್ಲರಿಗೆ ನಿತ್ಯಜೀವವನ್ನು ಆತನು ನೀಡುವನು. ಏಕೈಕ ನಿಜ ದೇವರಾದ ನಿಮ್ಮನ್ನೂ ನೀವು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ಅರಿತುಕೊಳ್ಳುವುದೇ ನಿತ್ಯಜೀವ. ನೀವು ನನಗೆ ಕೊಟ್ಟ ಕಾರ್ಯವನ್ನು ನಾನು ಮಾಡಿ ಮುಗಿಸಿ ನಿಮ್ಮ ಮಹಿಮೆಯನ್ನು ಜಗತ್ತಿಗೆಲ್ಲ ತೋರ್ಪಡಿಸಿದೆನು. ಪಿತನೇ, ಜಗತ್ತು ಉಂಟಾಗುವ ಮೊದಲೇ ನಿಮ್ಮೊಡನೆ ನನಗಿದ್ದ ಅದೇ ಮಹಿಮೆಯನ್ನು ಕೊಟ್ಟು ನನ್ನನ್ನು ಈಗ ನಿಮ್ಮ ಸನ್ನಿಧಿಯಲ್ಲಿ ಮಹಿಮೆಪಡಿಸಿರಿ. “ನೀವು ಲೋಕದಿಂದ ಆರಿಸಿ ನನಗೆ ಕೊಟ್ಟ ಜನರಿಗೆ ನಿಮ್ಮ ನಾಮವನ್ನು ತಿಳಿಯಪಡಿಸಿದ್ದೇನೆ. ಇವರು ನಿಮ್ಮವರಾಗಿದ್ದರು. ಆದರೂ ಇವರನ್ನು ನನಗೆ ಕೊಟ್ಟಿರಿ. ನಿಮ್ಮ ಮಾತಿಗೆ ವಿಧೇಯರಾಗಿ ಇವರು ನಡೆದಿದ್ದಾರೆ. ನೀವು ನನಗೆ ಕೊಟ್ಟಿದೆಲ್ಲವೂ ನಿಜವಾಗಿ ನಿಮ್ಮಿಂದಲೇ ಬಂದಿರುವುದೆಂದು ಈಗ ಇವರಿಗೆ ತಿಳಿದಿದೆ. ನಿಮ್ಮಿಂದ ನಾನು ಕಲಿತುದೆಲ್ಲವನ್ನೂ ಇವರಿಗೆ ತಿಳಿಯಪಡಿಸಿದ್ದೇನೆ. ಅವುಗಳನ್ನು ಇವರು ಅಂಗೀಕರಿಸಿ ನಿಮ್ಮಿಂದಲೇ ನಾನು ಬಂದುದು ನಿಜವೆಂದು ಅರಿತುಕೊಂಡಿದ್ದಾರೆ. ನನ್ನನ್ನು ಕಳುಹಿಸಿದ್ದು ನೀವೇ ಎಂದು ವಿಶ್ವಾಸಿಸಿದ್ದಾರೆ. “ನಾನು ಪ್ರಾರ್ಥಿಸುವುದು ಇವರಿಗಾಗಿ, ಲೋಕಕ್ಕಾಗಿ ಅಲ್ಲ. ನೀವೇ ನನಗೆ ಕೊಟ್ಟವರಿಗಾಗಿ ಪ್ರಾರ್ಥಿಸುತ್ತೇನೆ. ಏಕೆಂದರೆ, ಇವರು ನಿಮ್ಮವರು; ಇವರಿಂದ ನನಗೆ ಮಹಿಮೆ ಉಂಟಾಗಿದೆ. ನನ್ನದೆಲ್ಲವೂ ನಿಮ್ಮದೇ; ನಿಮ್ಮದು ಎಲ್ಲವೂ ನನ್ನದೇ. ನಾನಿನ್ನು ಲೋಕದಲ್ಲಿ ಇರುವುದಿಲ್ಲ. ಇವರಾದರೋ ಲೋಕದಲ್ಲಿ ಇರುತ್ತಾರೆ. ನಾನು ನಿಮ್ಮ ಬಳಿಗೆ ಬರುತ್ತಿದ್ದೇನೆ. ಪವಿತ್ರ ಪಿತನೇ, ನಾವು ಒಂದಾಗಿರುವಂತೆ ನೀವು ನನಗೆ ಕೊಟ್ಟಿರುವ ಇವರೂ ಒಂದಾಗಿರುವ ಹಾಗೆ ನಿಮ್ಮ ನಾಮದ ಶಕ್ತಿಯಿಂದ ಇವರನ್ನು ಸುರಕ್ಷಿತವಾಗಿರಿಸಿರಿ. 

22.05.23

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 19:1-8

ಅಪೊಲ್ಲೋಸನು ಕೊರಿಂಥದಲ್ಲಿ ಇದ್ದಾಗ, ಪೌಲನು ಮೇಲ್ನಾಡಿನ ಪ್ರಾಂತ್ಯದ ಮಾರ್ಗವಾಗಿ ಎಫೆಸಕ್ಕೆ ಬಂದನು. ಅಲ್ಲಿ ಕೆಲವು ಮಂದಿ ಶಿಷ್ಯರನ್ನು ಕಂಡು, “ನೀವು ವಿಶ್ವಾಸಿಸಿದಾಗ ಪವಿತ್ರಾತ್ಮ ಅವರನ್ನು ಪಡೆದಿರೋ?’ ಎಂದು ಕೇಳಿದನು. ಅದಕ್ಕೆ ಅವರು, “ಪವಿತ್ರಾತ್ಮ ಎಂಬವರು ಇದ್ದಾರೆಂದು ನಾವು ಕೇಳಿಯೇ ಇಲ್ಲ,” ಎಂದು ಉತ್ತರಿಸಿದರು. ಹಾಗಾದರೆ ನೀವು ಯಾವ ಸ್ನಾನದೀಕ್ಷೆಯನ್ನು ಪಡೆದಿರಿ?” ಎಂದು ಪೌಲನು ಕೇಳಲು, “ನಾವು ಯೊವಾನ್ನನ ಸ್ನಾನದೀಕ್ಷೆ ಪಡೆದೆವು,” ಎಂದರು. ಆಗ ಪೌಲನು, “ಯಾರು ತಮ್ಮ ಪಾಪದಿಂದ ವಿಮುಖರಾಗಿ ದೇವರಿಗೆ ಅಭಿಮುಖರಾಗುತ್ತಿದ್ದರೋ, ಅಂಥವರಿಗೆ ಯೊವಾನ್ನನು ಸ್ನಾನದೀಕ್ಷೆ ಕೊಡುತ್ತಿದ್ದನು. ಆದರೆ ಆ ಯೊವಾನ್ನನೇ ‘ತನ್ನ ಬಳಿಕ ಬರುವಾತನಲ್ಲಿ ವಿಶ್ವಾಸವಿಡಿ; ಅವರೇ ಯೇಸು’ ಎಂದು ಇಸ್ರಯೇಲರಿಗೆ ಬೋಧಿಸಿದ್ದನು,” ಎಂದನು. ಇದನ್ನು ಕೇಳಿದಾಗ ಅವರು ಪ್ರಭು ಯೇಸುವಿನ ನಾಮದಲ್ಲಿ ದೀಕ್ಷಾಸ್ನಾನವನ್ನು ಪಡೆದರು. ಪೌಲನು ಅವರ ಮೇಲೆ ಹಸ್ತನಿಕ್ಷೇಪ ಮಾಡಲು ಪವಿತ್ರಾತ್ಮ ಅವರ ಮೇಲೆ ಬಂದರು. ಆಗ ಅವರೆಲ್ಲರೂ ನಾನಾ ಭಾಷೆಗಳನ್ನು ಮಾತನಾಡುತ್ತಾ ಪ್ರವಾದಿಸಿದರು. ಇವರು ಸುಮಾರು ಹನ್ನೆರಡು ಮಂದಿ ಇದ್ದಿರಬಹುದು. ಅನಂತರ ಮೂರು ತಿಂಗಳ ಕಾಲ ಪೌಲನು ಪ್ರಾರ್ಥನಾಮಂದಿರಕ್ಕೆ ಹೋಗಿ ಧೈರ್ಯದಿಂದ ಮಾತನಾಡಿದನು. ದೇವರ ಸಾಮ್ರಾಜ್ಯದ ಬಗ್ಗೆ ಅಲ್ಲಿದ್ದವರೊಡನೆ ಚರ್ಚಿಸುತ್ತಾ, ಅವರನ್ನು ವಿಶ್ವಾಸಿಗಳನ್ನಾಗಿಸಲು ಪ್ರಯತ್ನಿಸಿದನು.

ಕೀರ್ತನೆ: 68:2-3, 4-5, 6-7
ಶ್ಲೋಕ: ಭೂರಾಜ್ಯಗಳೇ, ಸ್ತುತಿಸಿರಿ ದೇವರನು!

ಶುಭಸಂದೇಶ: ಯೊವಾನ್ನ 16:29-33

ಶಿಷ್ಯರು ಯೇಸುವಿಗೆ, “ಈಗ ನೀವು ಸಾಮತಿಗಳನ್ನು ಬಳಸದೆ ಸ್ಪಷ್ಟವಾಗಿಯೇ ಮಾತನಾಡುತ್ತಿದ್ದೀರಿ. ನೀವು ಎಲ್ಲವನ್ನೂ ಬಲ್ಲವರು. ಪ್ರಶ್ನೆಗಳಿಗಾಗಿ ನೀವು ಕಾಯಬೇಕಿಲ್ಲ ಎಂದು ನಮಗೀಗ ತಿಳಿಯಿತು. ಆದುದರಿಂದ ನೀವು ದೇವರಿಂದ ಬಂದವರೆಂದು ನಾವು ವಿಶ್ವಾಸಿಸುತ್ತೇವೆ,” ಎಂದರು. ಆಗ ಯೇಸು ಸ್ವಾಮಿ, “ಈಗ ನೀವು ವಿಶ್ವಾಸಿಸುತ್ತೀರೋ? ನೀವೆಲ್ಲರೂ ನನ್ನನ್ನು ಒಬ್ಬಂಟಿಗನಾಗಿ ಬಿಟ್ಟು ನಿಮ್ಮನಿಮ್ಮ ಮನೆಗೆ ಚದರಿಹೋಗುವ ಕಾಲವು ಬರುತ್ತದೆ. ಈಗಾಗಲೇ ಬಂದಿದೆ. ಆದರೆ ಪಿತನು ನನ್ನೊಡನೆ ಇರುವುದರಿಂದ ನಾನು ಒಬ್ಬಂಟಿಗನಲ್ಲ. ನಿಮಗೆ ನನ್ನಲ್ಲಿ ಶಾಂತಿಸಮಾಧಾನ ಲಭಿಸಲೆಂದು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. ಲೋಕದಲ್ಲಿ ನಿಮಗೆ ಕಷ್ಟಸಂಕಟಗಳು ತಪ್ಪಿದ್ದಲ್ಲ, ಆದರೆ ಧೈರ್ಯವಾಗಿರಿ. ನಾನು ಲೋಕವನ್ನು ಜಯಿಸಿದ್ದೇನೆ,” ಎಂದು ಹೇಳಿದರು.

21.05.23

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 1:1-11

ಸನ್ಮಾನ್ಯ ಥೆಯೊಫಿಲನೇ, ಯೇಸುಸ್ವಾಮಿ ಸ್ವರ್ಗಕ್ಕೆ ಆರೋಹಣವಾದ ದಿನದವರೆಗೆ ಮಾಡಿದ ಕಾರ್ಯಗಳನ್ನೂ ನೀಡಿದ ಬೋಧನೆಗಳನ್ನೂ ಕುರಿತು ನನ್ನ ಮೊದಲನೆಯ ಪುಸ್ತಕದಲ್ಲಿ ಬರೆದಿದ್ದೇನೆ. ಸ್ವರ್ಗಾರೋಹಣಕ್ಕೆ ಮೊದಲು ಪ್ರೇಷಿತರನ್ನಾಗಿ ತಾವು ಆರಿಸಿಕೊಂಡಿದ್ದವರಿಗೆ ಪವಿತ್ರಾತ್ಮ ಅವರ ಮುಖಾಂತರ ಉಪದೇಶ ಮಾಡಿದರು. ತಮ್ಮ ಮರಣದ ನಂತರ ಅವರು ನಲವತ್ತು ದಿನಗಳವರೆಗೆ ಆ ಪ್ರೇಷಿತರಿಗೆ ಪ್ರತ್ಯಕ್ಷರಾದರು. ತಾವು ಜೀವಂತವಾಗಿರುವುದನ್ನು ವಿವಿಧ ರೀತಿಯಲ್ಲಿ ಸ್ಪಷ್ಟಪಡಿಸಿದರು. ದೇವರ ಸಾಮ್ರಾಜ್ಯವನ್ನು ಕುರಿತು ಅವರಿಗೆ ಬೋಧಿಸಿದರು. ಒಮ್ಮೆ ಅವರೆಲ್ಲರೂ ಒಂದುಗೂಡಿದ್ದ ಸಂದರ್ಭದಲ್ಲಿ, “ನೀವು ಜೆರುಸಲೇಮನ್ನು ಬಿಟ್ಟು ಹೋಗಬೇಡಿ; ನಾನು ನಿಮಗೆ ತಿಳಿಸಿದಂತೆ ನನ್ನ ಪಿತನು ವಾಗ್ದಾನ ಮಾಡಿರುವ ವರಕ್ಕಾಗಿ ಕಾದುಕೊಂಡಿರಿ. ಏಕೆಂದರೆ, ಯೊವಾನ್ನನು ನೀರಿನಿಂದ ಸ್ನಾನದೀಕ್ಷೆ ಕೊಡುತ್ತಿದ್ದನು; ಆದರೆ ಇನ್ನು ಕೆಲವೇ ದಿನಗಳಲ್ಲಿ ನೀವು ಪವಿತ್ರಾತ್ಮ ಅವರಿಂದ ದೀಕ್ಷಾಸ್ನಾನ ಪಡೆಯುವಿರಿ,” ಎಂದು ಆಜ್ಞಾಪಿಸಿದರು. ಯೇಸುಸ್ವಾಮಿಯ ಸ್ವರ್ಗಾರೋಹಣ ಮತ್ತೊಮ್ಮೆ ಯೇಸುಸ್ವಾಮಿ ತಮ್ಮೊಡನೆ ಇದ್ದಾಗ ಪ್ರೇಷಿತರು, “ಪ್ರಭೂ, ನೀವು ಇದೀಗಲೇ ಇಸ್ರಯೇಲ್ ಜನರ ರಾಜ್ಯವನ್ನು ಪುನರ್ ಸ್ಥಾಪಿಸುವಿರೋ?” ಎಂದು ಕೇಳಿದರು.ಯೇಸು ಪ್ರತ್ಯುತ್ತರವಾಗಿ, “ಸಮಯ ಸಂದರ್ಭಗಳು ನನ್ನ ಪಿತನ ಸ್ವಾಧೀನದಲ್ಲಿವೆ. ಅವುಗಳನ್ನು ತಿಳಿಯುವುದು ನಿಮ್ಮ ಕೆಲಸವಲ್ಲ. ಆದರೆ ಪವಿತ್ರಾತ್ಮ ಅವರು ನಿಮ್ಮ ಮೇಲೆ ಬಂದಾಗ ನೀವು ಶಕ್ತಿಯುತರಾಗುವಿರಿ. ಆಗ ನೀವು ಜೆರುಸಲೇಮಿನಲ್ಲೂ ಜುದೇಯದಲ್ಲೂ ಸಮಾರಿಯದಲ್ಲೂ ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗುವಿರಿ,” ಎಂದರು. ಇದನ್ನು ಹೇಳಿದ ಮೇಲೆ ಪ್ರೇಷಿತರು ನೋಡುತ್ತಿದ್ದಂತೆಯೇ, ಯೇಸು ಸ್ವರ್ಗಾರೋಹಣವಾದರು. ಮೇಘವೊಂದು ಕವಿದು ಅವರನ್ನು ಕಣ್ಮರೆಮಾಡಿತು. ಹೀಗೆ ಮೇಲೇರುತ್ತಿದ್ದ ಯೇಸುಸ್ವಾಮಿಯನ್ನು ನೋಡುತ್ತಿದ್ದ ಪ್ರೇಷಿತರ ದೃಷ್ಟಿ ಇನ್ನೂ ಆಕಾಶದತ್ತ ನಾಟಿತ್ತು. ಆಗ ಬಿಳಿಯ ವಸ್ತ್ರ ಧರಿಸಿದ್ದ ವ್ಯಕ್ತಿಗಳಿಬ್ಬರು ಇದ್ದಕ್ಕಿದ್ದಂತೆ ಅವರ ಪಕ್ಕದಲ್ಲಿ ನಿಂತರು. “ಗಲಿಲೇಯದ ಜನರೇ, ನೀವು ಆಕಾಶವನ್ನು ದಿಟ್ಟಿಸಿ ನೋಡುತ್ತಾ ನಿಂತಿರುವುದೇಕೆ? ಸ್ವರ್ಗಾರೋಹಣರಾದ ಈ ಯೇಸು ನಿಮ್ಮ ಬಳಿಯಿಂದ ಹೇಗೆ ಸ್ವರ್ಗಕ್ಕೆ ಏರಿ ಹೋಗುವುದನ್ನು ಕಂಡಿರೋ ಹಾಗೆಯೇ ಅವರು ಹಿಂದಿರುಗಿ ಬರುವರು,” ಎಂದು ಹೇಳಿದರು.

ಕೀರ್ತನೆ: 47:2-3, 6-7, 8-9
ಶ್ಲೋಕ: ಏರಿದನು ಪ್ರಭು ಜಯಜಯಕಾರದೊಂದಿಗೆ, ಆರೋಹಣವಾದನು ತುತೂರಿನಾದದ ಜೊತೆಗೆ

1.  ಸರ್ವ  ಜನಾಂಗಗಳೇ,  ಚಪ್ಪಾಳೆ  ಹೊಡೆಯಿರಿ|
ಸರ್ವೇಶ್ವರನಿಗೆ  ಜಯಜಯ ಘೋಷಮಾಡಿರಿ||
ಪರಾತ್ಪರನಾದ  ಪ್ರಭುವು  ಘನಗಂಭೀರನು|
ಪ್ರಪಂಚಕ್ಕೆಲ್ಲಾ  ರಾಜಾಧಿರಾಜನು||
ಶ್ಲೋಕ

2.  ಏರಿದನು  ಪ್ರಭು ಜಯಜಯಕಾರದೊಂದಿಗೆ|
ಆರೋಹಣವಾದನು  ತುತೂರಿನಾದದ  ಜೊತೆಗೆ||
ಕೀರ್ತಿಸಿರಿ  ನಮ್ಮ  ದೇವನನು  ಸಂಕೀರ್ತಿಸಿರಿ|
ಕೀರ್ತಿಸಿರಿ  ನಮ್ಮ  ರಾಜನನು  ಸಂಕೀರ್ತಿಸಿರಿ||
ಶ್ಲೋಕ

3.  ದೇವನು  ಭೂಮಂಡಲಕ್ಕೆಲ್ಲಾ  ಒಡೆಯನು|
ಕೀರ್ತನೆಯಿಂದ  ಕೊಂಡಾಡಿರಿ  ಆತನನು||
ವಹಿಸಿಕೊಂಡನು  ದೇವನು  ಸರ್ವಾಧಿಪತ್ಯ|
ಅಲಂಕರಿಸಿಹನು  ತನ್ನ  ಪೂಜ್ಯ  ಗದ್ದುಗೆಯ||
ಶ್ಲೋಕ

ಎರಡನೇ ವಾಚನ: ಎಫೆಸಿಯರಿಗೆ 1:17-23

ನಮ್ಮ ಪ್ರಭು ಯೇಸುಕ್ರಿಸ್ತರ ದೇವರೂ ಮಹಿಮಾನ್ವಿತ ತಂದೆಯೂ ಆದವರು, ನಿಮಗೆ ಜ್ಞಾನವನ್ನೂ ವಿವೇಚನೆಯನ್ನೂ ನೀಡುವ ಆತ್ಮವನ್ನು ದಯಪಾಲಿಸಲಿ; ತಮ್ಮನ್ನು ಸಂಪೂರ್ಣವಾಗಿ ಅರಿತುಕೊಳ್ಳುವ ವರವನ್ನು ಈಯಲಿ, ಎಂದು ಪ್ರಾರ್ಥಿಸುತ್ತೇನೆ. ದೇವರು ನಿಮ್ಮ ಮನೋನೇತ್ರಗಳನ್ನು ತೆರೆಯಲಿ; ಅವರ ಬೆಳಕು ನಿಮಗೆ ಕಾಣುವಂತೆ ಆಗಲಿ. ಹೀಗೆ, ಅವರು ಕರೆದಿರುವ ಜನರಿಗೆ ಲಭಿಸುವ ಭರವಸೆಯ ಭಾಗ್ಯ ಎಂಥದ್ದೆಂದೂ ದೇವಜನರಿಗೆ ಕಾಯ್ದಿರಿಸಿರುವ ಸ್ವಾಸ್ಥ್ಯ ಸಂಪತ್ತು ಎಂಥದ್ದೆಂದೂ ನೀವು ಅರಿತುಕೊಳ್ಳಬೇಕು. ಕ್ರೈಸ್ತವಿಶ್ವಾಸಿಗಳಾದ ನಮ್ಮಲ್ಲಿ ದೇವರು ಸಾಧಿಸಿರುವ ಮಹತ್ಕಾರ್ಯಗಳು ಎಷ್ಟು ಶಕ್ತಿಯುತವಾದುವು ಎಂಬುದು ನಿಮಗೆ ಮನದಟ್ಟಾಗಬೇಕು. ಈ ಮಹಿಮಾಶಕ್ತಿಯಿಂದಲೇ ದೇವರು ಯೇಸುಕ್ರಿಸ್ತರನ್ನು ಮರಣದಿಂದ ಎಬ್ಬಿಸಿದರು; ಸಕಲ ಅಧಿಕಾರ, ಆಧಿಪತ್ಯ, ಪ್ರಭಾವ ಮತ್ತು ಪ್ರಭುತ್ವ ಇವೆಲ್ಲವುಗಳ ಮೇಲೆ ಯೇಸುಕ್ರಿಸ್ತರೇ ಆಡಳಿತ ನಡೆಸುವಂತೆ ಸ್ವರ್ಗಲೋಕದಲ್ಲಿ ಅವರನ್ನು ತಮ್ಮ ಬಲಗಡೆಯಲ್ಲಿ ಆಸೀನರಾಗಿಸಿದ್ದಾರೆ. ಹೀಗೆ ಇಹದಲ್ಲೂ ಪರದಲ್ಲೂ ಕೀರ್ತಿಗಳಿಸಿದವರೆಲ್ಲರಿಗಿಂತಲೂ ಯೇಸುಕ್ರಿಸ್ತರ ಮಹಿಮೆಯೇ ಸರ್ವಶ್ರೇಷ್ಠವಾದುದು. ದೇವರು ಸಮಸ್ತವನ್ನು ಯೇಸುಕ್ರಿಸ್ತರ ಪಾದದಡಿಯಲ್ಲಿರಿಸಿ, ಅವರನ್ನು ಧರ್ಮಸಭೆಯ ಶಿರಸ್ಸನ್ನಾಗಿ ನೇಮಿಸಿದ್ದಾರೆ. ಧರ್ಮಸಭೆಯೇ ಯೇಸುಕ್ರಿಸ್ತರ ದೇಹ. ಎಲ್ಲವನ್ನೂ ಎಲ್ಲಾ ವಿಧದಲ್ಲೂ ಪೂರೈಸುವಾತನಿಂದ ಅದು ಪರಿಪೂರ್ಣ ಉಳ್ಳದ್ದಾಗಿದೆ.

ಶುಭಸಂದೇಶ: ಮತ್ತಾಯ 28:16-20

ಹನ್ನೊಂದು ಮಂದಿ ಶಿಷ್ಯರು ಗಲಿಲೇಯಕ್ಕೆ ಹೋದರು. ಯೇಸು ಸೂಚಿಸಿದ್ದ ಬೆಟ್ಟಕ್ಕೆ ಬಂದರು. ಅಲ್ಲಿ ಯೇಸುಸ್ವಾಮಿಯನ್ನು ಕಂಡು ಅವರನ್ನು ಪೂಜಿಸಿದರು. ಆದರೆ ಕೆಲವರು ಸಂದೇಹಪಟ್ಟರು. ಆಗ ಯೇಸು ಹತ್ತಿರಕ್ಕೆ ಬಂದು ಮಾತಾಡಿದರು: “ಭೂಮಿಯಲ್ಲೂ ಸ್ವರ್ಗದಲ್ಲೂ ಸರ್ವಾಧಿಕಾರವನ್ನು ನನಗೆ ಕೊಡಲಾಗಿದೆ. ಆದ್ದರಿಂದ ನೀವು ಹೋಗಿ, ಸಕಲ ದೇಶಗಳ ಜನರನ್ನು ನನ್ನ ಶಿಷ್ಯರನ್ನಾಗಿ ಮಾಡಿರಿ; ಪಿತ, ಸುತ, ಮತ್ತು ಪವಿತ್ರಾತ್ಮ ನಾಮದಲ್ಲಿ ಅವರಿಗೆ ದೀಕ್ಷಾಸ್ನಾನ ಮಾಡಿಸಿರಿ. ನಾನು ನಿಮಗೆ ಆಜ್ಞಾಪಿಸಿದ ಸಕಲವನ್ನೂ ಅನುಸರಿಸುವಂತೆ ಅವರಿಗೆ ಬೋಧಿಸಿರಿ. ಇಗೋ, ಲೋಕಾಂತ್ಯದವರೆಗೂ ಸದಾ ನಾನು ನಿಮ್ಮೊಡನೆ ಇರುತ್ತೇನೆ,” ಎಂದರು.

20.05.23 - "ಪಿತನಿಗೆ ನಿಮ್ಮ ಮೇಲೆ ಅಕ್ಕರೆಯಿದೆ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 18: 23-28

ಪೌಲನು ಅಂತಿಯೋಕ್ಯದಲ್ಲಿ ಕೆಲಕಾಲವಿದ್ದು ಪುನಃ ಹೊರಟು ಗಲಾತ್ಯ ಮತ್ತು ಫ್ರಿಜಿಯ ಪ್ರದೇಶಗಳಲ್ಲಿ ಸಂಚರಿಸುತ್ತಾ ಭಕ್ತರೆಲ್ಲರನ್ನು ದೃಢಪಡಿಸಿದನು. ಅಲೆಕ್ಸಾಂಡ್ರಿಯದ ಅಪೊಲ್ಲೋಸ್ ಎಂಬ ಯೆಹೂದ್ಯನು ಎಫೆಸಕ್ಕೆ ಬಂದಿದ್ದನು. ಅವನೊಬ್ಬ ಉತ್ತಮ ಭಾಷಣಕಾರ ಹಾಗೂ ಪವಿತ್ರಗ್ರಂಥದಲ್ಲಿ ಪಾಂಡಿತ್ಯಪಡೆದವನು. ಪ್ರಭುವಿನ ಮಾರ್ಗದ ಬಗ್ಗೆ ಅವನಿಗೆ ಉಪದೇಶಮಾಡಲಾಗಿತ್ತು. ಸ್ನಾನಿಕ ಯೊವಾನ್ನನ ಸ್ನಾನದೀಕ್ಷೆ ಒಂದನ್ನೇ ಅವನು ಬಲ್ಲವನಾಗಿದ್ದನು. ಆದರೂ ಯೇಸುಸ್ವಾಮಿಯ ಬಗ್ಗೆ ಉತ್ಸಾಹಭರಿತನಾಗಿ ಉಪದೇಶಮಾಡಿ ಚ್ಯುತಿಯಿಲ್ಲದೆ ಬೋಧಿಸುತ್ತಾ ಬಂದನು. ಇವನು ಪ್ರಾರ್ಥನಾಮಂದಿರದಲ್ಲಿ ಧೈರ್ಯದಿಂದ ಮಾತನಾಡುತ್ತಿದ್ದಾಗ, ಪ್ರಿಸ್ಸಿಲ ಮತ್ತು ಅಕ್ವಿಲರು ಅವನ ಬೋಧನೆಯನ್ನು ಕೇಳಿದರು. ಅವನನ್ನು ಮನೆಗೆ ಕರೆದುಕೊಂಡು ಹೋಗಿ ಪ್ರಭುವಿನ ಮಾರ್ಗವನ್ನು ಇನ್ನೂ ಸೂಕ್ಷ್ಮವಾಗಿ ವಿವರಿಸಿದರು. ಇವನು ಅಖಾಯಕ್ಕೆ ಹೋಗಲು ಇಷ್ಟಪಟ್ಟಾಗ ಭಕ್ತಾದಿಗಳು ಅವನನ್ನು ಪ್ರೋತ್ಸಾಹಿಸಿ, ಅಖಾಯದ ಭಕ್ತಾದಿಗಳಿಗೆ ಪತ್ರ ಬರೆದು, ಇವನನ್ನು ಸ್ವಾಗತಿಸುವಂತೆ ಬಿನ್ನವಿಸಿದರು. ಇವನು ಅಲ್ಲಿಗೆ ಹೋಗಿ ದೇವರ ಕೃಪೆಯಿಂದ ವಿಶ್ವಾಸಿಗಳಾಗಿದ್ದವರಿಗೆ ಬಹುವಾಗಿ ನೆರವಾದನು. ಹೇಗೆಂದರೆ, ಪವಿತ್ರಗ್ರಂಥಾನುಸಾರ ಯೇಸುವೇ ಲೋಕೋದ್ಧಾರಕನೆಂದು ಖಚಿತಪಡಿಸಿ ಯೆಹೂದ್ಯರನ್ನು ಎಲ್ಲರ ಮುಂದೆ ಬಹಿರಂಗವಾಗಿ ಪ್ರತಿಭಟಿಸಿದನು.

ಕೀರ್ತನೆ: 47:2-3, 8-9, 10
ಶ್ಲೋಕ: ದೇವನು ಭೂಮಂಡಲಕ್ಕೆಲ್ಲಾ ಒಡೆಯನು

ಪರಾತ್ಪರನಾದ ಪ್ರಭುವು ಘನಗಂಭೀರನು I
ಪ್ರಪಂಚಕ್ಕೆಲ್ಲ ರಾಜಾಧಿರಾಜನು II
ಜನಾಂಗಗಳನಾತ ನಮಗಧೀನಪಡಿಸಿಹನು I
ರಾಷ್ಟ್ರಗಳನು ನಮಗೆ ಪಾದಪೀಠವಾಗಿಸಿಹನು II
ವಹಿಸಿಕೊಂಡನು ದೇವನು ಸರ್ವಾಧಿಪತ್ಯ I

ಅಲಂಕರಿಸಿಹನು ತನ್ನ ಪೂಜ್ಯ ಗದ್ದುಗೆಯ II
ಒಟ್ಟುಗೂಡಿ ಬಂದರು ಪ್ರಜೆಯ ಪ್ರಮುಖರು I
ಅಬ್ರಹಾಮನ ದೇವಜನರೊಡನೆ ಸೇರಿಕೊಂಡರು II

ಭೂಪಾಲರೆಲ್ಲರೂ ದೇವರಿಗೆ ಅಧೀನರು I
ಸರ್ವೋನ್ನತನುಸಾರ್ವಭೌಮನು ದೇವರು II

ಶುಭಸಂದೇಶ:  ಯೊವಾನ್ನ 16:23-28


ಆ ದಿನದಂದು ನನ್ನಿಂದ ನೀವೇನನ್ನೂ ಕೇಳುವಂತಿಲ್ಲ. ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನೀವು ಪಿತನಲ್ಲಿ ಏನನ್ನು ಬೇಡಿಕೊಂಡರೂ ನಿಮಗೆ ಅವರು ನನ್ನ ಹೆಸರಿನಲ್ಲಿ ಕೊಟ್ಟೇತೀರುವರು. ಈ ತನಕ ನನ್ನ ಹೆಸರಿನಲ್ಲಿ ನೀವೇನನ್ನೂ ಕೇಳಲಿಲ್ಲ. ಕೇಳಿ, ನಿಮಗೆ ದೊರೆಯುವುದು. ಆಗ ನಿಮ್ಮ ಆನಂದವು ತುಂಬಿ ತುಳುಕುವುದು. “ಈ ಸಂಗತಿಗಳನ್ನೆಲ್ಲಾ ನಿಮಗೆ ಸಾಮತಿಗಳ ರೂಪದಲ್ಲಿ ತಿಳಿಸಿರುವೆನು. ಕಾಲವು ಬರಲಿದೆ. ಆಗ ಸಾಮತಿಗಳನ್ನು ಬಳಸದೆ ಸ್ಪಷ್ಟವಾದ ಮಾತಿನಲ್ಲಿ ಪಿತನನ್ನು ಕುರಿತು ನಿಮಗೆ ತಿಳಿಸುವೆನು. ಆ ಕಾಲವು ಬಂದಾಗ ನನ್ನ ಹೆಸರು ಹೇಳಿ ನೀವೇ ಪಿತನಲ್ಲಿ ಬೇಡುವಿರಿ. ನಿಮ್ಮ ಪರವಾಗಿ ನಾನು ಪಿತನಲ್ಲಿ ಬೇಡಿಕೊಳ್ಳುವೆನೆಂದು ನಾನು ಹೇಳುವುದಿಲ್ಲ. ಕಾರಣ, ಪಿತನೇ ನಿಮ್ಮನ್ನು ಪ್ರೀತಿಸುತ್ತಾರೆ. ನೀವು ನನ್ನನ್ನು ಪ್ರೀತಿಸಿ ನಾನು ಅವರಿಂದ ಬಂದವನೆಂದು ವಿಶ್ವಾಸಿಸಿದ್ದರಿಂದ ಪಿತನಿಗೆ ನಿಮ್ಮ ಮೇಲೆ ಅಕ್ಕರೆಯಿದೆ. ಹೌದು, ನಾನು ಪಿತನಿಂದಲೇ ಹೊರಟು ಈ ಲೋಕಕ್ಕೆ ಬಂದಿದ್ದೇನೆ. ಈಗ ಈ ಲೋಕವನ್ನು ಬಿಟ್ಟು ಪಿತನಲ್ಲಿಗೆ ಹೋಗುತ್ತಿದ್ದೇನೆ,” ಎಂದರು.

19.05.23 - "ನಾನು ನಿಮ್ಮನ್ನು ಮರಳಿ ಕಂಡಾಗ, ಹರ್ಷಿಸುವಿರಿ. ಆ ಹರ್ಷವನ್ನು ಯಾರೂ ನಿಮ್ಮಿಂದ ಕಸಿದುಕೊಳ್ಳುವುದಿಲ್ಲ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 18:9-18


ಒಂದು ರಾತ್ರಿ ಪೌಲನಿಗೆ ಪ್ರಭು ದರ್ಶನ ಇತ್ತು, “ಭಯಪಡಬೇಡ, ಬೋಧನೆ ಮಾಡುವುದನ್ನು ಮುಂದುವರಿಸು, ನಾನು ನಿನ್ನೊಡನೆ ಇದ್ದೇನೆ. ಯಾರೂ ನಿನ್ನ ಮೇಲೆ ಬಿದ್ದು ಹಾನಿಮಾಡುವುದಿಲ್ಲ. ಪಟ್ಟಣದ ಅನೇಕ ಜನರು ನನ್ನ ಪರವಾಗಿದ್ದಾರೆ,” ಎಂದರು. ಅಂತೆಯೇ ಪೌಲನು ಒಂದೂವರೆ ವರ್ಷಕಾಲ ಅಲ್ಲಿದ್ದು ದೇವರವಾಕ್ಯವನ್ನು ಜನರಿಗೆ ಬೋಧಿಸಿದನು. ಗಲ್ಲಿಯೋ ಎಂಬವನು ಅಖಾಯದಲ್ಲಿ ರಾಜ್ಯಪಾಲನಾಗಿದ್ದಾಗ, ಯೆಹೂದ್ಯರು ಪೌಲನ ವಿರುದ್ಧ ಒಟ್ಟುಗೂಡಿ ಅವನನ್ನು ಬಂಧಿಸಿ ನ್ಯಾಯಸ್ಥಾನಕ್ಕೆ ಕೊಂಡೊಯ್ದರು. “ಧರ್ಮಶಾಸ್ತ್ರಕ್ಕೆ ವ್ಯತಿರಿಕ್ತವಾದ ರೀತಿಯಲ್ಲಿ ದೇವರನ್ನು ಆರಾಧಿಸುವಂತೆ ಈ ಮನುಷ್ಯ ಜನರನ್ನು ಪ್ರೇರೇಪಿಸುತ್ತಾ ಇದ್ದಾನೆ,” ಎಂದು ಅಲ್ಲಿ ದೂರಿತ್ತರು. ಪೌಲನು ಮಾತನಾಡಬೇಕೆಂದಿರುವಾಗ, ಗಲ್ಲಿಯೋ ಯೆಹೂದ್ಯರನ್ನು ಸಂಬೋಧಿಸಿ, “ಯೆಹೂದ್ಯರೇ, ಅನ್ಯಾಯವಾಗಲಿ, ಅಕ್ರಮವಾಗಲಿ ನಡೆದಿದ್ದ ಪಕ್ಷದಲ್ಲಿ, ನಿಮ್ಮ ಅಪಾದನೆಗಳನ್ನು ತಾಳ್ಮೆಯಿಂದ ಕೇಳಬೇಕಾದುದು ಸರಿಯಷ್ಟೆ. ಆದರೆ ಇದು ನಾಮನೇಮಗಳಿಗೆ ಹಾಗು ನಿಮ್ಮ ಧರ್ಮಶಾಸ್ತ್ರಕ್ಕೆ ಸಂಬಂಧಪಟ್ಟ ಪ್ರಶ್ನೆ. ಅದನ್ನು ನಿಮ್ಮನಿಮ್ಮಲ್ಲೇ ಇತ್ಯರ್ಥಮಾಡಿಕೊಳ್ಳಿ. ಇಂಥ ವಿಷಯಗಳನ್ನು ವಿಚಾರಣೆಮಾಡಲು ನನಗೆ ಮನಸ್ಸಿಲ್ಲ,” ಎಂದು ಹೇಳಿ ಅವರನ್ನು ನ್ಯಾಯಸ್ಥಾನದಿಂದ ಹೊರಗಟ್ಟಿದನು. ಆಗ ಅವರೆಲ್ಲರೂ ಪ್ರಾರ್ಥನಾಮಂದಿರದ ಅಧ್ಯಕ್ಷ ಸೋಸ್ಥೆನನನ್ನು ಬಂಧಿಸಿ, ನ್ಯಾಯಸ್ಥಾನದ ಮುಂದೆಯೇ ಹೊಡೆದರು. ಗಲ್ಲಿಯೋ ಇದೊಂದನ್ನೂ ಲಕ್ಷಿಸಲಿಲ್ಲ. ಇದಾದ ಮೇಲೆ ಪೌಲನು ಕೊರಿಂಥದಲ್ಲಿ ಅನೇಕ ದಿನ ಇದ್ದನು. ಅನಂತರ ಭಕ್ತವಿಶ್ವಾಸಿಗಳನ್ನು ಬೀಳ್ಕೊಟ್ಟು ಅಕ್ವಿಲ ಮತ್ತು ಪ್ರಿಸ್ಸಿಲರೊಡನೆ ಸಿರಿಯಕ್ಕೆ ನೌಕಾಯಾನ ಹೊರಟನು. ತಾನು ಮಾಡಿದ್ದ ಹರಕೆಯ ಪ್ರಕಾರ ಕೆಂಖ್ರೆಯೆಂಬ ಸ್ಥಳದಲ್ಲಿ ಮುಂಡನ ಮಾಡಿಸಿಕೊಂಡನು. 

ಕೀರ್ತನೆ: 47:2-3, 4-5, 6-7
ಶ್ಲೋಕ: ದೇವನು ಭೂಮಂಡಲಕ್ಕೆಲ್ಲಾ ಒಡೆಯನು

ಪರಾತ್ಪರನಾದ ಪ್ರಭುವು ಘನಗಂಭೀರನು I
ಪ್ರಪಂಚಕ್ಕೆಲ್ಲ ರಾಜಾಧಿರಾಜನು II
ಜನಾಂಗಗಳನಾತ ನಮಗಧೀನಪಡಿಸಿಹನು I
ರಾಷ್ಟ್ರಗಳನು ನಮಗೆ ಪಾದಪೀಠವಾಗಿಸಿಹನು II

ಆಯ್ದನಾಡನು ಸೊತ್ತಾಗಿ ನೀಡಿದನೆಮಗೆ I
ಪ್ರತಿಷ್ಠಿತರು ನಾವುಆತನೊಲಿದ ಯಕೋಬಿಗೆ II
ಏರಿದನು ಪ್ರಭು ಜಯಜಯಕಾರದೊಂದಿಗೆ I
ಆರೋಹಣವಾದನು ತುತೂರಿನಾದ ಜೊತೆಗೆ II

ಕೀರ್ತಿಸಿರಿನಮ್ಮ ದೇವನನು ಸಂಕೀರ್ತಿಸಿರಿ I
ಕೀರ್ತಿಸಿರಿನಮ್ಮ ರಾಜನನು ಸಂಕೀರ್ತಿಸಿರಿ II
ದೇವನು ಭೂಮಂಡಲಕ್ಕೆಲ್ಲಾ ಒಡೆಯನು I

ಕೀರ್ತನೆಯಿಂದ ಕೊಂಡಾಡಿರಿ ಆತನನು II


ಶುಭಸಂದೇಶ: ಯೊವಾನ್ನ 16:20-23


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ; ನೀವು ಅತ್ತುಗೋಳಾಡುವಿರಿ; ಲೋಕವಾದರೋ ನಕ್ಕು ನಲಿದಾಡುವುದು. ನೀವು ದುಃಖಪಡುವಿರಿ. ಆದರೆ ನಿಮ್ಮ ದುಃಖ ಆನಂದವಾಗಿ ಮಾರ್ಪಡುವುದು. ಗರ್ಭಿಣಿಯಾದ ಸ್ತ್ರೀಯು ಪ್ರಸವಿಸುವ ಗಳಿಗೆ ಬಂದಾಗ ವೇದನೆಪಡುತ್ತಾಳೆ; ಮಗುವನ್ನು ಹೆರುತ್ತಲೇ ಜಗದಲ್ಲಿ ಮಾನವನೊಬ್ಬನು ಜನಿಸಿದನೆಂಬ ಉಲ್ಲಾಸದಿಂದ ತಾನು ಪಟ್ಟ ವೇದನೆಯನ್ನು ಮರೆತುಬಿಡುತ್ತಾಳೆ; ನಿಮಗೆ ಈಗ ದುಃಖವಿದೆ; ನಾನು ನಿಮ್ಮನ್ನು ಮರಳಿ ಕಂಡಾಗ, ಹರ್ಷಿಸುವಿರಿ. ಆ ಹರ್ಷವನ್ನು ಯಾರೂ ನಿಮ್ಮಿಂದ ಕಸಿದುಕೊಳ್ಳುವುದಿಲ್ಲ. ಆ ದಿನದಂದು ನನ್ನಿಂದ ನೀವೇನನ್ನೂ ಕೇಳುವಂತಿಲ್ಲ. ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನೀವು ಪಿತನಲ್ಲಿ ಏನನ್ನು ಬೇಡಿಕೊಂಡರೂ ನಿಮಗೆ ಅವರು ನನ್ನ ಹೆಸರಿನಲ್ಲಿ ಕೊಟ್ಟೇತೀರುವರು."

18.05.23 - "ನೀವು ದುಃಖಪಡುವಿರಿ. ಆದರೆ ನಿಮ್ಮ ದುಃಖ ಆನಂದವಾಗಿ ಮಾರ್ಪಡುವುದು."

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 18:1-8

ಪೌಲನು ಅಥೆನ್ಸ್ ಅನ್ನು ಬಿಟ್ಟು ಕೊರಿಂಥಕ್ಕೆ ಹೋದನು. ಪೊಂತ ಎಂಬ ಊರಿನ ಅಕ್ವಿಲ ಎಂಬ ಯೆಹೂದ್ಯನನ್ನು ಅಲ್ಲಿ ಕಂಡನು. ಚಕ್ರವರ್ತಿ ಕ್ಲಾಡಿಯಸನು ಯೆಹೂದ್ಯರೆಲ್ಲರೂ ರೋಮ್‍ನಗರವನ್ನು ಬಿಟ್ಟುಹೋಗಬೇಕೆಂದು ಆಜ್ಞಾಪಿಸಿದ್ದರಿಂದ, ಈ ಅಕ್ವಿಲನು ತನ್ನ ಪತ್ನಿ ಪ್ರಿಸ್ಸಿಲಳೊಂದಿಗೆ ಇಟಲಿಯಿಂದ ಇತ್ತೀಚೆಗೆ ಬಂದಿದ್ದನು. ಪೌಲನು ಅವರನ್ನು ನೋಡಲು ಹೋದನು. ಅವರು ತನ್ನಂತೆಯೇ ಗುಡಾರ ಮಾಡುವ ಕಸುಬಿನವರಾಗಿದ್ದರಿಂದ ಅವರಲ್ಲೇ ತಂಗಿದ್ದು ಅವರೊಡನೆ ಕೆಲಸ ಮಾಡುತ್ತಾ ಬಂದನು. ಪ್ರತಿ ಸಬ್ಬತ್‍ ದಿನ ಅವನು ಪ್ರಾರ್ಥನಾಮಂದಿರದಲ್ಲಿ ಚರ್ಚಿಸುತ್ತಾ ಯೆಹೂದ್ಯರನ್ನು ಮತ್ತು ಗ್ರೀಕರನ್ನು ವಿಶ್ವಾಸಿಗಳನ್ನಾಗಿಸಲು ಪ್ರಯತ್ನಿಸುತ್ತಿದ್ದನು. ಸೀಲ ಮತ್ತು ತಿಮೊಥೇಯ ಮಕೆದೋನಿಯದಿಂದ ಬಂದ ಮೇಲೆ ಪೌಲನು ಶುಭಸಂದೇಶವನ್ನು ಸಾರುವುದರಲ್ಲೂ ಯೇಸುವೇ ಬರಬೇಕಾದ ಲೋಕೋದ್ಧಾರಕ ಎಂದು ಯೆಹೂದ್ಯರಿಗೆ ರುಜುವಾತುಪಡಿಸುವುದರಲ್ಲೂ ತನ್ನ ಸಮಯವನ್ನು ಕಳೆದನು. ಆದರೆ ಆ ಯೆಹೂದ್ಯರು ಅವನನ್ನು ಪ್ರತಿಭಟಿಸಿ ದೂಷಿಸಿದರು. ಆಗ ಪೌಲನು ತನ್ನ ಹೊದಿಕೆಯನ್ನು ಒದರಿ, “ನಿಮ್ಮ ವಿನಾಶಕ್ಕೆ ನೀವೇ ಹೊಣೆ; ಅದಕ್ಕೆ ನಾನು ಬಾಧ್ಯನಲ್ಲ. ಇಂದಿನಿಂದ ನಾನು ಅನ್ಯಧರ್ಮೀಯರ ಕಡೆಗೆ ಹೋಗುತ್ತೇನೆ,” ಎಂದನು. ಅಂತೆಯೇ ಅವರನ್ನು ಬಿಟ್ಟು ದೇವರಲ್ಲಿ ಭಯಭಕ್ತಿಯುಳ್ಳವನಾಗಿದ್ದ ತೀತಯುಸ್ತ ಎಂಬವನ ಮನೆಗೆ ಹೋದನು. ಅವನ ಮನೆ ಪ್ರಾರ್ಥನಾ ಮಂದಿರದ ಪಕ್ಕದಲ್ಲೇ ಇತ್ತು. ಪ್ರಾರ್ಥನಾಮಂದಿರದ ಅಧ್ಯಕ್ಷ ಕ್ರಿಸ್ಪ ಎಂಬವನೂ ಅವನ ಮನೆಯವರೆಲ್ಲರೂ ಪ್ರಭುವಿನಲ್ಲಿ ವಿಶ್ವಾಸವಿಟ್ಟರು. ಕೊರಿಂಥದ ಇನ್ನೂ ಅನೇಕ ಜನರು ಪೌಲನ ಬೋಧನೆಯನ್ನು ಕೇಳಿ ವಿಶ್ವಾಸವಿಟ್ಟರು ಮತ್ತು ದೀಕ್ಷಾಸ್ನಾನ ಪಡೆದರು.

ಕೀರ್ತನೆ: 98:1, 2-3, 3-4
ಶ್ಲೋಕ: ರಾಷ್ಟ್ರಗಳಿಗೆ ತೋರಿಸಿಹನು ಪ್ರಭು ಜೀವೋದ್ಧಾರಕ ಶಕ್ತಿಯನು

ಹಾಡಿರಿ ಪ್ರಭುವಿಗೆ ಹೊಸಗೀತೆಯೊಂದನು 
ಎಸಗಿಹನಾತನು ಪವಾಡಕಾರ್ಯಗಳನು I
ಗಳಿಸಿತಾತನ ಕೈ ಪೂತಭುಜ ಗೆಲುವನು II

ಪ್ರಕಟಿಸಿಹನಾ ಪ್ರಭು ತನ್ನ ಮುಕ್ತಿವಿಧಾನವನು I
ರಾಷ್ಟ್ರಗಳಿಗೆ ತೋರಿಸಿಹನು ಜೀವೋದ್ಧಾರಕಾ ಶಕ್ತಿಯನು II
ಕಂಡುಬಂದಿತು ಜಗದ ಎಲ್ಲೆ ಎಲ್ಲೆಗೆ I
ನಮ್ಮ ದೇವ ಸಾಧಿಸಿದ ಜಯಗಳಿಕೆ II
ಸ್ಮರಿಸಿಕೊಂಡನಾ ಪ್ರಭು ತನ್ನ ಪ್ರೀತಿಯನು I
ಇಸ್ರಯೇಲ್ ಕುಲದ ಬಗ್ಗೆ ತನ್ನ ಸತ್ಯತೆಯನು II

ಕಂಡುಬಂದಿತು ಜಗದ ಎಲ್ಲೆ ಎಲ್ಲೆಗೆ I
ನಮ್ಮ ದೇವ ಸಾಧಿಸಿದ ಜಯಗಳಿಕೆ II
ಸ್ಮರಿಸಿಕೊಂಡನಾ ಪ್ರಭು ತನ್ನ ಪ್ರೀತಿಯನು I
ಇಸ್ರಯೇಲ್ ಕುಲದ ಬಗ್ಗೆ ತನ್ನ ಸತ್ಯತೆಯನು II

ಭೂನಿವಾಸಿಗಳೇಮಾಡಿರಿ ಜಯಕಾರ ಪ್ರಭುವಿಗೆ I

ಶುಭಸಂದೇಶ:  ಯೊವಾನ್ನ16:16-20

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: “ತುಸುಕಾಲವಾದ ನಂತರ ನೀವು ನನ್ನನ್ನು ಕಾಣಲಾರಿರಿ. ಅನಂತರ ತುಸುಕಾಲ ಕಳೆಯುತ್ತಲೇ ನನ್ನನ್ನು ಪುನಃ ಕಾಣುವಿರಿ,” ಎಂದರು ಯೇಸುಸ್ವಾಮಿ. ಇದನ್ನು ಕೇಳಿದ ಕೆಲವು ಮಂದಿ ಶಿಷ್ಯರು, “ಇದೇನು ಇವರು ಹೇಳುತ್ತಿರುವುದು? ‘ತುಸುಕಾಲವಾದ ನಂತರ ನೀವು ನನ್ನನ್ನು ಕಾಣಲಾರಿರಿ. ಅನಂತರ ತುಸುಕಾಲ ಕಳೆಯುತ್ತಲೇ ನೀವು ನನ್ನನ್ನು ಪುನಃ ಕಾಣುವಿರಿ ಮತ್ತು ಪಿತನಲ್ಲಿಗೆ ನಾನು ಹೋಗುತ್ತೇನೆ,’ ಎನ್ನುತ್ತಾರಲ್ಲ?  ತುಸುಕಾಲ’ ಎಂದರೇನು? ಇವರ ಮಾತೇ ನಮಗೆ ಅರ್ಥವಾಗುತ್ತಿಲ್ಲವಲ್ಲಾ,” ಎಂದು ತಮ್ಮ ತಮ್ಮೊಳಗೆ ಮಾತನಾಡತೊಡಗಿದರು. ಯೇಸು, ತಮ್ಮಲ್ಲಿ ಅವರು ವಿಚಾರಿಸಬೇಕೆಂದಿದ್ದಾರೆಂದು ತಿಳಿದುಕೊಂಡು, ‘ತುಸುಕಾಲದ ನಂತರ ನೀವು ನನ್ನನ್ನು ಕಾಣಲಾರಿರಿ. ಅನಂತರ ತುಸುಕಾಲ ಕಳೆಯುತ್ತಲೇ ನನ್ನನ್ನು ಪುನಃ ಕಾಣುವಿರಿ’ ಎಂದು ನಾನು ಹೇಳಿದ್ದನ್ನು ಕುರಿತು ನಿಮ್ಮ ನಿಮ್ಮಲ್ಲಿಯೇ ನೀವು ಚರ್ಚಿಸುತ್ತಿರುವುದೇನು? ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನೀವು ಅತ್ತು ಗೋಳಾಡುವಿರಿ; ಲೋಕವಾದರೋ ನಕ್ಕು ನಲಿದಾಡುವುದು. ನೀವು ದುಃಖಪಡುವಿರಿ. ಆದರೆ ನಿಮ್ಮ ದುಃಖ ಆನಂದವಾಗಿ ಮಾರ್ಪಡುವುದು."

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...