26.02.23 - ‘ನಿನ್ನ ದೇವರಾದ ಸರ್ವೇಶ್ವರನನ್ನು ಆರಾಧಿಸು. ಅವರೊಬ್ಬರಿಗೇ ಸೇವೆ ಸಲ್ಲಿಸು,’

ಮೊದಲನೇ ವಾಚನ: ಆದಿಕಾಂಡ 2:7-9; 3:1-7

ದೇವರಾದ ಸರ್ವೇಶ್ವರ ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದರು. ಆಗ ಮನುಷ್ಯನು ಜೀವಾತ್ಮನಾದನು. ಇದಲ್ಲದೆ, ದೇವರಾದ ಸರ್ವೇಶ್ವರ ಪೂರ್ವ ದಿಕ್ಕಿನಲ್ಲಿರುವ ಏದೆನ್ ಪ್ರದೇಶದಲ್ಲಿ ಒಂದು ಉದ್ಯಾನವನವನ್ನು ಮಾಡಿ ತಾವು ರೂಪಿಸಿದ ಮನುಷ್ಯನನ್ನು ಅದರಲ್ಲಿ ಇರಿಸಿದರು. ನೋಟಕ್ಕೆ ರಮ್ಯವೂ ಊಟಕ್ಕೆ ರುಚಿಕರವೂ ಆದ ನಾನಾ ತರದ ಮರಗಳನ್ನು ದೇವರಾದ ಸರ್ವೇಶ್ವರ ಅಲ್ಲಿ ಬೆಳೆಯ ಮಾಡಿದರು. ಆ ವನದ ಮಧ್ಯದಲ್ಲಿ ಜೀವದಾಯಕ ವೃಕ್ಷವನ್ನು ಹಾಗು ಒಳಿತು ಕೆಡಕುಗಳ ಅರಿವನ್ನು ಮೂಡಿಸುವ ವೃಕ್ಷವನ್ನು ಬೆಳೆಯಿಸಿದರು. ಸರ್ವೇಶ್ವರನಾದ ದೇವರು ಉಂಟುಮಾಡಿದ ಭೂಜಂತುಗಳಲ್ಲಿ ಅತಿ ಯುಕ್ತಿಉಳ್ಳದ್ದು ಸರ್ಪ. ಅದು ಮಹಿಳೆಯ ಬಳಿಗೆ ಬಂದು, “ಏನಮ್ಮಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ತಿನ್ನಕೂಡದು ಎಂದು ದೇವರು ಆಜ್ಞೆ ಮಾಡಿರುವುದು ನಿಜವೋ”? ಎಂದು ಕೇಳಿತು. ಅದಕ್ಕೆ ಆ ಮಹಿಳೆ, “ತೋಟದಲ್ಲಿರುವ ಮರಗಳ ಹಣ್ಣುಗಳನ್ನು ನಾವು ತಿನ್ನಬಹುದು; ಆದರೆ ಅದರ ನಡುವೆಯಿರುವ ಈ ಮರದ ಹಣ್ಣನ್ನು ಮಾತ್ರ ತಿನ್ನಲೂ ಕೂಡದು, ಮುಟ್ಟಲೂ ಕೂಡದು, ‘ತಿಂದರೆ ಸಾಯುವಿರಿ’ ಎಂದು ದೇವರು ಹೇಳಿದ್ದಾರೆ,” ಎಂದು ಉತ್ತರ ಕೊಟ್ಟಳು. ಆಗ ಆ ಸರ್ಪ, “ಆ ಮಾತು ನಿಜವಲ್ಲ, ನೀವು ಸಾಯುವುದು ಸುಳ್ಳು. ಇದರ ಹಣ್ಣನ್ನು ತಿಂದ ಕೂಡಲೆ ನಿಮ್ಮ ಕಣ್ಣುಗಳು ತೆರೆಯುವುವು. ನೀವು ದೇವರಂತೆ ಆಗಿ ಒಳಿತು- ಕೆಡುಕುಗಳನ್ನರಿತ ಜ್ಞಾನಿಗಳು ಆಗಿಬಿಡುವಿರಿ. ಇದು ದೇವರಿಗೆ ಚೆನ್ನಾಗಿ ಗೊತ್ತುಂಟು,” ಎಂದಿತು. ಆಗ ಆ ಮಹಿಳೆ, “ಈ ಮರದ ಹಣ್ಣು ಊಟಕ್ಕೆ ಎಷ್ಟು ಚೆನ್ನಾಗಿದೆ, ನೋಟಕ್ಕೆ ಎಷ್ಟು ರಮಣೀಯವಾಗಿದೆ, ಜ್ಞಾನಾರ್ಜನೆಗೆ ಎಷ್ಟು ಆಕರ್ಷಣೀಯವಾಗಿದೆ” ಎಂದು ತಿಳಿದು, ಅದನ್ನು ತೆಗೆದುಕೊಂಡು ತಿಂದಳು; ಸಂಗಡವಿದ್ದ ಗಂಡನಿಗೂ ಕೊಟ್ಟಳು; ಅವನೂ ತಿಂದನು. ಕೂಡಲೆ ಅವರಿಬ್ಬರ ಕಣ್ಣುಗಳು ತೆರೆದವು. ತಾವು ಬೆತ್ತಲೆ ಆಗಿದ್ದೇವೆಂದು ತಿಳಿದು ಅವರು ಅಂಜೂರದ ಎಲೆಗಳನ್ನು ಹೊಲಿದು ಉಟ್ಟುಕೊಂಡರು.

ಕೀರ್ತನೆ 51:3-4, 5-6, 12-13, 17

ಶ್ಲೋಕ: ಕೃಪಾಳು ದೇವಾ, ಕರುಣಿಸೆಮ್ಮನು ಏಕೆಂದರೆ ನಿಮ್ಮ ವಿರುದ್ಧ ಪಾಪವನ್ನು ಮಾಡಿದ್ದೇವೆ

ಎರಡನೇ ವಾಚನ: ರೋಮನರಿಗೆ 5:12-19

ಒಬ್ಬ ಮನುಷ್ಯನಿಂದಲೇ ಪಾಪ, ಪಾಪದಿಂದ ಮರಣ, ಈ ಲೋಕವನ್ನು ಪ್ರವೇಶಿಸಿದವು. ಎಲ್ಲರೂ ಪಾಪ ಮಾಡಿದ್ದರಿಂದ ಮರಣವು ಎಲ್ಲರಿಗೂ ಪ್ರಾಪ್ತಿಯಾಯಿತು. ಧರ್ಮಶಾಸ್ತ್ರವನ್ನು ಕೊಡುವುದಕ್ಕೆ ಮೊದಲೇ ಪಾಪವು ಲೋಕದಲ್ಲಿತ್ತು. ಆದರೆ ಧರ್ಮಶಾಸ್ತ್ರ ಇಲ್ಲದೆ ಇದ್ದುದರಿಂದ ಪಾಪವನ್ನು ಗಣನೆಗೆ ತಂದುಕೊಳ್ಳಲಾಗಲಿಲ್ಲ. ಆದರೂ, ಆದಾಮನ ಕಾಲದಿಂದ ಮೋಶೆಯ ಕಾಲದವರೆಗೂ ಮರಣವು ದಬ್ಬಾಳಿಕೆ ನಡೆಸುತ್ತಿತ್ತು. ದೇವರ ಆಜ್ಞಾವಿಧಿಗಳನ್ನು ವಿೂರಿ ಆದಾಮನು ಮಾಡಿದ ಪಾಪಕ್ಕೆ ಸಮನಾದ ಪಾಪವನ್ನು ಮಾಡದೆ ಇದ್ದವರ ಮೇಲೆಯೂ, ಮರಣದ ಆಳ್ವಿಕೆ ನಡೆಯುತ್ತಿತ್ತು. ಆದಾಮನು ಮುಂಬರಲಿದ್ದ ಮಹಾತ್ಮನ ಮುನ್ಸೂಚನೆಯಾಗಿದ್ದಾನೆ. ಆದರೆ ಆದಾಮನ ಪಾಪಕ್ಕೂ ದೇವರ ಅನುಗ್ರಹಕ್ಕೂ ವ್ಯತ್ಯಾಸವಿದೆ. ಒಬ್ಬ ಮನುಷ್ಯನ ಅಪರಾಧದಿಂದ ಎಲ್ಲರೂ ಮರಣಕ್ಕೊಳಗಾದರು ಎಂಬುದೇನೋ ನಿಜ. ಆದರೆ ದೇವರ ಅನುಗ್ರಹವು ಅದಕ್ಕಿಂತಲೂ ಅತ್ಯಧಿಕವಾದುದು. ಅಂತೆಯೇ, ಯೇಸುಕ್ರಿಸ್ತ ಎಂಬ ಒಬ್ಬ ಮಹಾತ್ಮನ ಅನುಗ್ರಹದಿಂದ ಲಭಿಸುವ ಉಚಿತಾರ್ಥ ವರಗಳು ಇನ್ನೂ ಅಧಿಕಾಧಿಕವಾದುವು ಎಂಬುದೂ ನಿಜ. ದೇವರ ಉಚಿತಾರ್ಥ ವರಕ್ಕೂ ಒಬ್ಬ ಮನುಷ್ಯನ ಪಾಪದ ಪರಿಣಾಮಕ್ಕೂ ಎಷ್ಟೋ ವ್ಯತ್ಯಾಸವಿದೆ. ಆ ಒಂದು ಪಾಪದ ಪರಿಣಾಮವಾಗಿ ಮನುಷ್ಯನು ಅಪರಾಧಿಯೆಂದು ನಿರ್ಣಯಿಸಲ್ಪಟ್ಟನು. ಆದರೆ ಅನೇಕರು ಅಪರಾಧಿಗಳಾದ ಮೇಲೂ ಕೊಡಲಾಗುವ ಉಚಿತಾರ್ಥ ವರವು ದೇವರೊಡನೆ ಸತ್ಸಂಬಂಧವನ್ನು ಉಂಟುಮಾಡುತ್ತದೆ. ಒಬ್ಬ ಮನುಷ್ಯನ ಅಪರಾಧದ ಕಾರಣ, ಒಬ್ಬ ವ್ಯಕ್ತಿಯ ಮುಖಾಂತರ ಮರಣವು ಎಲ್ಲಾ ಮಾನವರ ಮೇಲೆ ದಬ್ಬಾಳಿಕೆ ನಡೆಸಿತು. ಆದರೆ, ಹೇರಳವಾದ ದೈವಾನುಗ್ರಹವನ್ನೂ ದೇವರೊಡನೆ ಸತ್ಸಂಬಂಧವೆಂಬ ಉಚಿತಾರ್ಥ ವರವನ್ನೂ ಪಡೆದವರಾದರೋ ಯೇಸುಕ್ರಿಸ್ತ ಎಂಬ ಮಹಾತ್ಮನ ಮುಖಾಂತರ ಮತ್ತಷ್ಟು ವಿಪುಲವಾಗಿ ಸಜ್ಜೀವವನ್ನು ಪಡೆದು ರಾಜ್ಯವಾಳುತ್ತಾರೆ. ಒಬ್ಬನ ಅಪರಾಧದಿಂದ ಎಲ್ಲಾ ಮಾನವರು ದಂಡನೆಯ ತೀರ್ಪಿಗೆ ಗುರಿಯಾಗುತ್ತಾರೆ. ಹಾಗೆಯೇ ಒಬ್ಬನ ಸತ್ಕಾರ್ಯದಿಂದ ಎಲ್ಲಾ ಮಾನವರು ವಿಮೋಚನೆಯನ್ನೂ ಸಜ್ಜೀವವನ್ನೂ ಪಡೆಯುತ್ತಾರೆ. ಹೇಗೆ ಒಬ್ಬ ಮನುಷ್ಯನ ಅವಿಧೇಯತೆಯಿಂದ ಎಲ್ಲರೂ ಪಾಪಿಗಳಾದರೋ, ಹಾಗೆಯೇ ಒಬ್ಬ ಮನುಷ್ಯನ ವಿಧೇಯತೆಯಿಂದ ಎಲ್ಲರೂ ದೇವರೊಡನೆ ಸತ್ಸಂಬಂಧವನ್ನು ಹೊಂದುತ್ತಾರೆ.

ಶುಭಸಂದೇಶ: ಮತ್ತಾಯ 4:1-11

ಯೇಸುಸ್ವಾಮಿ ಪಿಶಾಚಿಯಿಂದ ಪರಿಶೋಧಿತರಾಗಲೆಂದು ಪವಿತ್ರಾತ್ಮ ಅವರನ್ನು ಬೆಂಗಾಡಿಗೆ ಕರೆದೊಯ್ದರು. ಅಲ್ಲಿ ಯೇಸು ನಲವತ್ತು ದಿನ ಹಗಲಿರುಳೂ ಉಪವಾಸವಿದ್ದರು. ಅನಂತರ ಅವರಿಗೆ ಬಹಳ ಹಸಿವಾಯಿತು. ಆಗ ಶೋಧಕನು ಬಂದು, "ನೀನು ದೇವರ ಪುತ್ರನೆಂಬುದು ಸತ್ಯವಾದರೆ, ಈ ಕಲ್ಲುಗಳು ರೊಟ್ಟಿಗಳಾಗಲೆಂದು ಆಜ್ಞೆಮಾಡು," ಎಂದನು. ಅದಕ್ಕೆ ಯೇಸುಸ್ವಾಮಿ, "ಪವಿತ್ರ ಗ್ರಂಥದಲ್ಲಿ ಹೇಳಿರುವ ಪ್ರಕಾರ, "ಮಾನವನು ಜೀವಿಸುವುದು ಆಹಾರದಿಂದ ಮಾತ್ರವಲ್ಲ; ದೇವರಾಡುವ ಪ್ರತಿಯೊಂದು ನುಡಿಯಿಂದ", ಎಂದರು. ಬಳಿಕ ಪಿಶಾಚಿ ಅವರನ್ನು ಪವಿತ್ರ ನಗರಕ್ಕೆ ಅಂದರೆ ಜೆರುಸಲೇಮಿಗೆ ಕರೆದೊಯ್ದು ಮಹಾದೇವಾಲಯದ ಗೋಪುರದ ತುದಿಯ ಮೇಲೆ ನಿಲ್ಲಿಸಿ, "ನೀನು ದೇವರ ಪುತ್ರನೆಂಬುದು ಸತ್ಯವಾದರೆ ಕಳಕ್ಕೆ ಧುಮುಕು. ಏಕೆಂದರೆ, ಪವಿತ್ರ ಗ್ರಂಥದಲ್ಲಿ ಬರೆದಿರುವ ಪ್ರಕಾರ, ‘ದೇವರೇ ತಮ್ಮ ದೂತರಿಗೆ ಆಜ್ಞೆ ಮಾಡುವರು’ ಮತ್ತು ‘ಇವರು ನಿನ್ನ ಕಾಲುಗಳು ಕಲ್ಲುಗಳಿಗೆ ತಾಕದಂತೆ ನಿನ್ನನ್ನು ಕೈಗಳಲ್ಲಿ ಆತುಗೊಳ್ಳುವರು,’ ಎಂದಿತು. ಅದಕ್ಕೆ ಯೇಸು, “ ‘ನಿನ್ನ ದೇವರು ಸರ್ವೇಶ್ವರ; ನೀನು ಅವರನ್ನು ಪರೀಕ್ಷಿಸಬಾರದು’, ಎಂದೂ ಸಹ ಪವಿತ್ರಗ್ರಂಥದಲ್ಲಿ ಬರೆದಿದೆ,” ಎಂದರು. ಅನಂತರ ಪಿಶಾಚಿ ಯೇಸುವನ್ನು ಬಹಳ ಎತ್ತರವಾದ ಬೆಟ್ಟಕ್ಕೆ ಕೊಂಡೊಯ್ದು, ಪ್ರಪಂಚದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ ತೋರಿಸಿತು. "ನೀನು ನನಗೆ ಅಡ್ಡಬಿದ್ದು ಆರಾಧಿಸುವೆಯಾದರೆ ಇವೆಲ್ಲವನ್ನು ನಿನಗೆ ಕೊಡಬಲ್ಲೆ," ಎಂದಿತು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, "ಸೈತಾನನೇ, ತೊಲಗು, ‘ನಿನ್ನ ದೇವರಾದ ಸರ್ವೇಶ್ವರನನ್ನು ಆರಾಧಿಸು. ಅವರೊಬ್ಬರಿಗೇ ಸೇವೆಸಲ್ಲಿಸು,’ ಎಂದೂ ಪವಿತ್ರಗ್ರಂಥದಲ್ಲಿ ಬರೆದಿದೆ," ಎಂದರು. ಆಗ ಪಿಶಾಚಿ ಯೇಸುವನ್ನು ಬಿಟ್ಟು ತೊಲಗಿತು. ದೇವದೂತರು ಬಂದು ಅವರನ್ನು ಉಪಚರಿಸಿದರು.

ಮನಸ್ಸಿಗೊಂದಿಷ್ಟು : ಶೋಧನೆಗಳು ನಮ್ಮ ಪಾಪಗಳಿಗೆ ದಾರಿಯಲ್ಲ, ಬದಲಾಗಿ ಪಾಪಗಳನ್ನು ಜಯಿಸುವ ಸಾಧನವಾಗಬಲ್ಲದು. ನಮ್ಮನ್ನು ದುರ್ಬಲಗಳಿಸುವುದಕ್ಕಿಂತ ನಮ್ಮನ್ನು ಇನ್ನಷ್ಟು ಶಕ್ತರನ್ನಾಗಿಸಬಲ್ಲದು. ದೇವರ ಚಿತ್ತ ಕಾರ್ಯಗಳನ್ನು ನೆರವೇರಿಸುವವರು ಈ ಶೋಧನೆಗಳನ್ನು ವಿಜಯದ ಮೆಟ್ಟಿಲುಗಳನ್ನಾಗಿ ಬಳಸಿಕೊಂಡು ದೇವರತ್ತ ಏರಬಲ್ಲರು ಎಂಬ ಸಂದೇಶ ಇಂದಿನ ಶುಭಸಂದೇಶದಲ್ಲಿದೆ

ಪ್ರಶ್ನೆ : ನಾವು ಎದುರಿಸುತ್ತಿರುವ ಶೋಧನೆಗಳನ್ನು ನಮ್ಮನ್ನು ದೇವರತ್ತ ಏರಿಸುತ್ತಿದೆಯೇ ಅಥವಾ ವಿಮುಖವಾಗಿಸುತ್ತಿದೆಯೇ?

ಪ್ರಭುವೇ,
ನಮಗೆ ಬಂದೊದಗುವ ಶೋಧನೆ
ತರುವ ಯಾವುದೇ ವೇದನೆ
ಮೀರಿ ಏರುವ ಸಾಧನೆ 
ನಮ್ಮದಾಗಲು ಬೇಕಿದೆ 
ನಿಮ್ಮ ಭರವಸೆಯ ಅನುಮೋದನೆ
-ಚಿತ್ತ

25.02.23 - “ವೈದ್ಯನ ಅವಶ್ಯಕತೆಯಿರುವುದು ರೋಗಿಗಳಿಗೆ, ಆರೋಗ್ಯವಂತರಿಗಲ್ಲ"

ಮೊದಲನೇ ವಾಚನ: ಯೆಶಾಯ 58:9-14

ಸರ್ವೇಶ್ವರ ಇಂತೆನ್ನುತ್ತಾರೆ: "ನೀವು ದಬ್ಬಾಳಿಕೆ ನಡೆಸುವುದನ್ನೂ ಇತರರನ್ನು ಜರೆಯುವುದನ್ನೂ ಕೇಡನ್ನು ನುಡಿಯುವುದನ್ನೂ ನಿಮ್ಮ ನಡುವೆಯಿಂದ ತೊಲಗಿಸಿದರೆ ಹಾಗೂ ಹಸಿದವರಿಗೆ ಜೀವನಾಂಶವನ್ನೂ ಬಡವರಿಗೆ ಅಗತ್ಯವಾದುದನ್ನೂ ನೀಡಿದರೆ, ನಿಮ್ಮ ಜ್ಯೋತಿ ಕತ್ತಲಲ್ಲಿ ಬೆಳಗುವುದು; ಅಂಧಕಾರ ನೀಗಿ ಮಧ್ಯಾಹ್ನವಾಗುವುದು. ಸರ್ವೇಶ್ವರಸ್ವಾಮಿ ನಿಮ್ಮನ್ನು ನಿರಂತರವಾಗಿ ಮುನ್ನಡೆಸುವರು; ಮರುಭೂಮಿಯಲ್ಲೂ ನಿಮಗೆ ಮನಃತೃಪ್ತಿಯನ್ನು ನೀಡುವರು; ನಿಮ್ಮ ಎಲುಬುಗಳನ್ನು ಬಲಪಡಿಸುವರು; ನೀರೆರೆದ ತೋಟದಂತೆಯೂ ಬತ್ತಿಹೋಗದ ಬುಗ್ಗೆಯಂತೆಯೂ ನೀವು ಇರುವಿರಿ. ಪುರಾತನಕಾಲದ ಪಾಳುಬಿದ್ದ ಮನೆಗಳನ್ನು ನಿಮ್ಮವರು ಮರಳಿ ಕಟ್ಟುವರು. ತಲತಲಾಂತರಗಳಿಂದ ಪಾಳುಬಿದ್ದಿರುವ ತಳಹದಿಗಳ ಮೇಲೆ ಕಟ್ಟಡಗಳನ್ನು ನೀವು ನಿರ್ಮಿಸುವಿರಿ. ‘ಬಿದ್ದ ಗೋಡೆಯನ್ನು ಎಬ್ಬಿಸಿದ ರಾಷ್ಟ್ರ, ಹಳೆಯ ದಾರಿಗಳನ್ನು ಸರಾಗಮಾಡಿದ ರಾಷ್ಟ್ರ’ ಎಂಬ ಬಿರುದು ನಿಮಗೆ ಬರುವುದು.” ಸಬ್ಬತ್‍ದಿನದ ಸದಾಚರಣೆ “ನೀವು ಸಬ್ಬತ್‍ದಿನವನ್ನು ತಾತ್ಸಾರ ಮಾಡದೆ, ಆ ನನ್ನ ಪರಿಶುದ್ಧ ದಿನದಲ್ಲಿ ನಿಮ್ಮ ದೈನಂದಿನ ವ್ಯವಹಾರವನ್ನು ನಡೆಸದೆ, ಸ್ವೇಚ್ಛೆಯಾಗಿ ವರ್ತಿಸದೆ, ಸ್ವಕಾರ್ಯದಲ್ಲೇ ನಿರತರಾಗದೆ, ಹರಟೆಮಾತುಗಳಲ್ಲಿ ಕಾಲಕಳೆಯದೆ, ಸರ್ವೇಶ್ವರಸ್ವಾಮಿಯ ಸಬ್ಬತ್‍ದಿನ ಪರಿಶುದ್ಧವಾದುದು, ಸಂತೋಷಕರವಾದುದು, ಮಾನ್ಯತೆಗೆ ಅರ್ಹವಾದುದು ಎಂದು ಸನ್ಮಾನಿಸಿದ್ದೇ ಆದರೆ ನೀವು ಸರ್ವೇಶ್ವರಸ್ವಾಮಿಯಾದ ನನ್ನ ಆನಂದದಲ್ಲಿ ಭಾಗಿಗಳಾಗುವಿರಿ; ನಾನು ನಿಮ್ಮನ್ನು ಉನ್ನತಸ್ಥಾನಕ್ಕೆ ಏರಿಸುವೆನು. ನಿಮ್ಮ ಪಿತೃ ಯಕೋಬನ ಸೊತ್ತನ್ನು ನೀವು ನಿರಂತಕವಾಗಿ ಅನುಭವಿಸುವಂತೆ ಮಾಡುವೆನು,” ಇದು ಸರ್ವೇಶ್ವರಸ್ವಾಮಿಯ ನುಡಿ.

ಕೀರ್ತನೆ: 86:1-2, 3-4, 5-6

ಶ್ಲೋಕ: ನಿನ್ನ ಸತ್ಯಪಥದಲಿ ನಾ ನಡೆವಂತೆ, ಬೋಧಿಸೆನಗೆ ಪ್ರಭೂ, ನಿನ್ನ ಮಾರ್ಗವನು.

ಶುಭಸಂದೇಶ: ಲೂಕ 5:27-32


ಯೇಸುಸ್ವಾಮಿ ಅಲ್ಲಿಂದ ಹೋಗುತ್ತಿದ್ದಾಗ ಲೇವಿ ಎಂಬ ಸುಂಕದವನನ್ನು ಕಂಡರು. ಅವನು ಸುಂಕ ವಸೂಲಿಗಾಗಿ ಉಕ್ಕಡದಲ್ಲಿ ಕುಳಿತಿದ್ದನು. “ನನ್ನನ್ನು ಹಿಂಬಾಲಿಸು,” ಎಂದು ಹೇಳಿ ಯೇಸು ಅವನನ್ನು ಕರೆದರು. ಲೇವಿಯು ಎದ್ದು ಎಲ್ಲವನ್ನೂ ಪರಿತ್ಯಜಿಸಿ, ಯೇಸುವನ್ನು ಹಿಂಬಾಲಿಸಿದನು. ತರುವಾಯ ಆ ಲೇವಿ ತನ್ನ ಮನೆಯಲ್ಲಿ ಯೇಸುವಿಗೆ ಒಂದು ದೊಡ್ಡ ಔತಣವನ್ನು ಏರ್ಪಡಿಸಿದನು. ಬಹುಜನ ಸುಂಕದವರೂ ಇತರರೂ ಯೇಸುವಿನ ಪಂಕ್ತಿಯಲ್ಲೇ ಊಟಕ್ಕೆ ಕುಳಿತಿದ್ದರು. ಇದನ್ನು ಕಂಡ ಫರಿಸಾಯರು ಮತ್ತು ಅವರ ಪಂಥಕ್ಕೆ ಸೇರಿದ ಧರ್ಮಶಾಸ್ತ್ರಜ್ಞರು ಗೊಣಗಾಡುತ್ತಾ, ಯೇಸುವಿನ ಶಿಷ್ಯರ ಬಳಿಗೆ ಬಂದು, “ನೀವು ಸುಂಕದವರ ಮತ್ತು ಪಾಪಿಷ್ಠರ ಜೊತೆಯಲ್ಲಿ ಏಕೆ ತಿನ್ನುತ್ತೀರಿ, ಕುಡಿಯುತ್ತೀರಿ?” ಎಂದು ಪ್ರಶ್ನಿಸಿದರು. ಅದಕ್ಕೆ ಯೇಸು ಪ್ರತ್ಯುತ್ತರವಾಗಿ, “ವೈದ್ಯನ ಅವಶ್ಯಕತೆಯಿರುವುದು ರೋಗಿಗಳಿಗೆ, ಆರೋಗ್ಯವಂತರಿಗಲ್ಲ; ನಾನು ಬಂದಿರುವುದು ಧರ್ಮಿಷ್ಠರನ್ನು ಕರೆಯುವುದಕ್ಕಲ್ಲ, ‘ಪಶ್ಚತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ, ದೇವರಿಗೆ ಅಭಿಮುಖಿಗಳಾಗಿರಿ’ ಎಂದು ಪಾಪಿಷ್ಠರನ್ನು ಕರೆಯುವುದಕ್ಕೆ,” ಎಂದರು.

ಮನಸ್ಸಿಗೊಂದಿಷ್ಟು : ’ಹಿಂಬಾಲಿಸು’ ಎಂಬ ಒಂದೇ ಮಾತಿಗೆ ಎಲ್ಲವನ್ನೂ ತ್ಯಜಿಸಿ  ಹೊರಟ ಮತ್ತಾಯನ ಆ ಕ್ಷಣದ ನಿರ್ಧಾರ ನಮಗೆಷ್ಟು ಕಠಿಣ. ವೈದ್ಯನ ಅವಶ್ಯಕತೆಯಿರುವ ರೋಗಿಗಳಂತ ನಮ್ಮ ಬದುಕಿಗೆ ಯೇಸುವಿನ ಅವಶ್ಯಕತೆ ಇದ್ದರೂ ನಾವು ಯೇಸುವನ್ನು ಬರಮಾಡಿಕೊಳ್ಳುತ್ತಿಲ್ಲ. ಬರಮಾಡಿಕೊಳ್ಳಲು ಬೇಕಾದ ಹೃದಯ ನಮ್ಮದಾಗಲಿ.

ಪ್ರಶ್ನೆ : ಯೇಸು ನನ್ನ ಬಾಳಿಗೆಷ್ಟು ಅವಶ್ಯ?  

ಪ್ರಭುವೇ,
ಬಾ ಹಿಂಬಾಲಿಸು ಎಂದು 
ಕರೆದರೂ ನೀನು
ತಡೆಯೊಡ್ಡುತ್ತಿದೆ 
ನನ್ನೊಳಗಿನ ನಾನು
ಪಾಪ ಸರಿಸಿ ಏರ್ಪಡಿಸುವೆ
ಮನದಲೊಂದೌತಣ
ಮುಂದಿನದೆಲ್ಲಾ ಸಂಭ್ರಮಕ್ಕೆ
ನೀನೊಬ್ಬನೇ ಆಗು ಕಾರಣ
-ಚಿತ್ತ   

24.02.23 - "ಇದೇ ಅಲ್ಲವೆ ನನಗೆ ಇಷ್ಟಕರವಾದ ಉಪವಾಸ ವ್ರತ?"




ಮೊದಲನೇ ವಾಚನ: ಯೆಶಾಯ  58:1-9

ಸರ್ವೇಶ್ವರಸ್ವಾಮಿ ಇಂತೆನ್ನುತ್ತಾರೆ: “ಗಟ್ಟಿಯಾಗಿ ಕೂಗು, ನಿಲ್ಲಿಸಬೇಡ; ಕೊಂಬಿನಂತೆ ಸ್ವರವೆತ್ತಿ ನನ್ನ ಜನರಿಗೆ ಅವರ ದ್ರೋಹವನ್ನು ತಿಳಿಸು; ಯಕೋಬ ವಂಶದವರಿಗೆ ಅವರ ಪಾಪವನ್ನು ತಿಳಿಸು; ತಮ್ಮ ದೇವರ ವಿಧಿನಿಯಮಗಳನ್ನು ಬಿಡದೆ, ಧರ್ಮವನ್ನು ಆಚರಿಸುವ ಜನಾಂಗವೊ ಎಂಬಂತೆ, ಇವರು ದಿನ ದಿನವೂ ನನ್ನ ದರ್ಶನಕ್ಕಾಗಿ ಬರುತ್ತಾರೆ; ನನ್ನ ಮಾರ್ಗವನ್ನು ತಿಳಿದುಕೊಳ್ಳುವುದರಲ್ಲಿ ಸಂತೋಷಿಸುವಂತೆ ನಟಿಸುತ್ತಾರೆ. ಧೈರ್ಯವಾಗಿ ನನ್ನಿಂದ ನ್ಯಾಯವಿಧಿಗಳನ್ನು ಕೇಳುತ್ತಾರೆ. ದೇವ ದರ್ಶನದಲ್ಲಿ ಆನಂದಿಸುವವರಂತೆ ತೋರಿಸಿಕೊಳ್ಳುತ್ತಾರೆ.” ನಾವು ಉಪವಾಸ ಮಾಡಿದ್ದೇವೆ, ನೀನು ಏಕೆ ಕಟಾಕ್ಷಿಸುವುದಿಲ್ಲ? ನಮ್ಮನ್ನು ನಾವೇ ತಗ್ಗಿಸಿಕೊಂಡಿದ್ದೇವೆ, ನೀನು ಗಮನಿಸದೆ ಇರುವುದೇಕೆ?” ಎಂದುಕೊಳ್ಳುತ್ತಾರೆ. “ನಿಮ್ಮ ಉಪವಾಸದ ಪರಿಣಾಮಗಳು ಇಷ್ಟೆ: ವ್ಯಾಜ್ಯ, ಕಲಹ, ಗುದ್ದಾಟ. ಇಲ್ಲಿಯವರೆಗೆ ನೀವು ಮಾಡಿದಂತೆ ಉಪವಾಸ ಮಾಡಿದರೆ, ನಿಮ್ಮ ಪ್ರಾರ್ಥನೆ ಪರಲೋಕವನ್ನು ಮುಟ್ಟುವುದಿಲ್ಲ. ಸ್ವಾರ್ಥ ನಿಗ್ರಹಕ್ಕಾಗಿ ನಾನು ನೇಮಿಸಿದ ಉಪವಾಸದ ದಿನ ಇಂಥದೋ? ಒಬ್ಬನು ಜೊಂಡಿನಂತೆ ತಲೆಯನ್ನು ಬಗ್ಗಿಸಿಕೊಳ್ಳುವುದು, ಗೋಣಿತಟ್ಟನ್ನು ಉಟ್ಟುಕೊಳ್ಳುವುದು, ಬೂದಿಯ ಗುಂಡಿಯಲ್ಲಿ ಕುಳಿತುಕೊಳ್ಳುವುದು, ಇವು ನನಗೆ ಮೆಚ್ಚುಗೆಯಾಗುವ ಉಪವಾಸ ಎನ್ನುತ್ತೀರೊ? “ನಾನು ಹೇಳುವುದನ್ನು ಕೇಳಿ: ಅನ್ಯಾಯದ ಬಂಧನಗಳನ್ನು ಬಿಚ್ಚುವುದು, ಭಾರವಾದ ನೊಗದ ಕಣಿಗಳನ್ನು ಕಳಚುವುದು, ಜರ್ಜರಿತರಾದವರನ್ನು ಬಿಡುಗಡೆಮಾಡುವುದು, ಹಸಿದವರಿಗೆ ಅನ್ನ ಹಾಕುವುದು, ನೆಲೆಯಿಲ್ಲದೆ ಅಲೆಯುತ್ತಿರುವ ಬಡವರನ್ನು ಮನೆಗೆ ಬರಮಾಡಿಕೊಳ್ಳುವುದು, ಬೆತ್ತಲೆಯಾದವರನ್ನು ಕಂಡಾಗ ಅವರಿಗೆ ಬಟ್ಟೆ ಹೊದಿಸುವುದು, ನಿನ್ನ ರಕ್ತ ಸಂಬಂಧಿಕರಿಂದ ಮುಖ ಮರೆಮಾಡಿಕೊಳ್ಳದಿರುವುದು, ಇದೇ ಅಲ್ಲವೆ ನನಗೆ ಇಷ್ಟಕರವಾದ ಉಪವಾಸ ವ್ರತ? “ಇದನ್ನು ಆಚರಿಸುವಾಗ ನೀವು ಉದಯ ಕಾಲದ ಸೂರ್ಯನಂತೆ ಪ್ರಜ್ವಲಿಸುವಿರಿ. ಆರೋಗ್ಯಭಾಗ್ಯವು ನಿಮಗೆ ಬೇಗನೆ ದೊರಕುವುದು. ನಿಮ್ಮ ಸದಾಚಾರವೆ ನಿಮಗೆ ಮುಂಬಲವಾಗಿ ನಡೆಸುವುದು; ಸರ್ವೇಶ್ವರಸ್ವಾಮಿಯ ಮಹಿಮೆ ನಿಮಗೆ ಹಿಂಬಲವಾಗಿ ಇರುವುದು. ಆಗ ನೀವು ಪ್ರಾರ್ಥಿಸಿದರೆ, ಆ ಸ್ವಾಮಿ ನಿಮಗೆ ಉತ್ತರಿಸುವರು; ಮೊರೆಯಿಟ್ಟು ಕರೆದರೆ ‘ಇಗೋ ಆಲಿಸುತ್ತಿದ್ದೇನೆ’ ಎನ್ನುವರು. 

ಕೀರ್ತನೆ: 51:3-4, 5-6, 18-19

ಶ್ಲೋಕ: ನೊಂದ ಬೆಂದ ಮನವನಾತ ಬಲ್ಲೆಯೆನನು

ಶುಭಸಂದೇಶ: ಮತ್ತಾಯ 9: 14-15

ಯೊವಾನ್ನನ ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದರು. “ನಾವೂ ಫರಿಸಾಯರೂ ಉಪವಾಸ ವ್ರತವನ್ನು ಕೈಗೊಳ್ಳುತ್ತೇವೆ. ಆದರೆ ನಿಮ್ಮ ಶಿಷ್ಯರು ಏಕೆ ಹಾಗೆ ಮಾಡುವುದಿಲ್ಲ?" ಎಂದು ಪ್ರಶ್ನೆ ಹಾಕಿದರು. ಅದಕ್ಕೆ ಯೇಸು, "ಮದುವಣಿಗನು ಜೊತೆಯಲ್ಲಿ ಇರುವಷ್ಟು ಕಾಲ ಅವನ ಆಪ್ತರು ದುಃಖಪಡುವುದುಂಟೇ? ಮದುವಣಿಗನು ಅವರಿಂದ ಅಗಲಬೇಕಾಗುವ ಕಾಲವು ಬರುವುದು; ಆಗ ಅವರು ಉಪವಾಸ ಮಾಡುವರು.

ಮನಸ್ಸಿಗೊಂದಿಷ್ಟು : ಕೇವಲ ಆಚರಣೆಗಾಗಿ ಮಾತ್ರವೇ ಮಾಡುವ ಉಪವಾಸ ವ್ರತದ ಬಗ್ಗೆ ಇಂದಿನ ಎರಡೂ ವಾಚನಗಳು ಮಾತನಾಡುತ್ತವೆ.   ದೇವರಿಗೆ ಇಷ್ಟವಾದ  ಉಪವಾಸ ವ್ರತ ಯಾವುದೆಂದು ಯೆಶಾಯ ಪ್ರವಾದಿ ಹೇಳಿದರೆ, "ನಾನು ಜೊತೆಗಿರುವಾಗ ಉಪವಾಸವೇಕೆ ಬೇಕು" ಎನ್ನುತ್ತಾರೆ ಯೇಸು. ನಮ್ಮ ಉಪವಾಸ, ತ್ಯಾಗದಿಂದ ನಮಗೆ ಮಾತ್ರವೇ ಒಳ್ಳೆಯದಾಗಿ ಮತ್ತೊಬ್ಬರಿಗೆ ಅದರಿಂದ ಪ್ರಯೋಜನವಾಗದಿದ್ದರೆ ಅದು ನಿರರ್ಥಕ ಎಂಬ ಪೋಪ್ ಫ್ರಾನ್ಸಿಸ್ ರ  ಮಾತು ಚಿಂತನೆಗೆ ಯೋಗ್ಯವಾಗಿದೆ. 

ಪ್ರಭುವೇ,
ನೀ ನನ್ನ ಜೊತೆಯಿರೇ ದುಃಖವೇಕೆ 
ಕರುಣೆ ಪ್ರೀತಿಯಿಲ್ಲದ ಉಪವಾಸವೇಕೆ?
-ಚಿತ್ತ 

23.02.23 - "ನಾನು ಶುಭವನ್ನೂ ಅಶುಭವನ್ನೂ ಜೀವವನ್ನೂ ಸಾವನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ"


ಮೊದಲನೇ ವಾಚನ: ಧರ್ಮೋಪದೇಶಕಾಂಡ 30:15-20

ಮೋಶೆಯು ಜನರಿಗೆ ಹೀಗೆಂದು ಹೇಳಿದನು: “ಇಗೋ ನೋಡಿ: ನಾನು ಶುಭವನ್ನೂ ಅಶುಭವನ್ನೂ ಜೀವವನ್ನೂ ಸಾವನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ. ನಾನು ಈಗ ನಿಮಗೆ ಬೋಧಿಸುವಂತೆ ನೀವು ನಿಮ್ಮ ದೇವರಾದ ಸರ್ವೇಶ್ವರನನ್ನು ಪ್ರೀತಿಸಿ, ಅವರು ಹೇಳಿದ ಮಾರ್ಗದಲ್ಲಿ ನಡೆದು, ಅವರ ಆಜ್ಞಾವಿಧಿ ನಿರ್ಣಯಗಳನ್ನು ಅನುಸರಿಸಿದರೆ ನೀವು ಬದುಕಿ ಬಾಳುವಿರಿ, ಅಭಿವೃದ್ಧಿಯಾಗುವಿರಿ, ಮತ್ತು ನೀವು ಸ್ವಾಧೀನ ಮಾಡಿಕೊಳ್ಳಲು ಹೋಗುವ ನಾಡಿನಲ್ಲಿ ನಿಮ್ಮ ದೇವರಾದ ಸರ್ವೇಶ್ವರ ನಿಮ್ಮನ್ನು ಆಶೀರ್ವದಿಸುವರು. ಆದರೆ ನೀವು ಅವರನ್ನು ಬಿಟ್ಟು, ಅವರ ಮಾತನ್ನು ಕೇಳಲೊಲ್ಲದೆ, ಮೋಸಹೋಗಿ, ಇತರ ದೇವರುಗಳನ್ನು ಪೂಜಿಸಿ ಅವಲಂಬಿಸಿದರೆ ನೀವು ಸ್ವಾಧೀನ ಮಾಡಿಕೊಳ್ಳಲು ಜೋರ್ಡನ್ ನದಿಯನ್ನು ದಾಟಿ ಹೋಗುವ ನಾಡಿನಲ್ಲಿ ಬಹುಕಾಲ ಇರದೆ ನಾಶ ಆಗಿ ಹೋಗುವಿರಿ. ಇದನ್ನು ನಾನು ಈಗ ನಿಮಗೆ ಖಂಡಿತವಾಗಿ ತಿಳಿಸುತ್ತೇನೆ. ನಾನು ಸಾವು ಜೀವಗಳನ್ನೂ ಶಾಪಾಶೀರ್ವಾದಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ; ಇದಕ್ಕೆ ಭೂಮಿ ಆಕಾಶಗಳೇ ಸಾಕ್ಷಿಗಳಾಗಿರಲಿ; ಆದುದರಿಂದ ನೀವೂ ನಿಮ್ಮ ಸಂತತಿಯವರೂ ಬದುಕಿಬಾಳುವಂತೆ ಜೀವವನ್ನೇ ಆರಿಸಿಕೊಳ್ಳಿ; ನಿಮ್ಮ ದೇವರಾದ ಸರ್ವೇಶ್ವರನನ್ನು ಪ್ರೀತಿಸಿ ಅವರ ಮಾತಿಗೆ ವಿಧೇಯರಾಗಿರಿ; ಅವರನ್ನು ಹೊಂದಿಕೊಂಡೇ ಇರಿ. ಸರ್ವೇಶ್ವರ ನಿಮ್ಮ ಪಿತೃಗಳಾದ ಅಬ್ರಹಾಮ್ ಇಸಾಕ್, ಯಕೋಬರಿಗೆ ಪ್ರಮಾಣಮಾಡಿ ಕೊಟ್ಟ ನಾಡಿನಲ್ಲಿ ನೀವು ಬದುಕಿ ಬಾಳುವುದಕ್ಕೂ ಬಹುಕಾಲ ಇರುವುದಕ್ಕೂ ಅವರೇ ಆಧಾರ.”

ಕೀರ್ತನೆ: 1:1-2, 3, 4, 6

ಶ್ಲೋಕ: ಪ್ರಭುವಿನಲ್ಲೇ ಭರವಸೆಯಿಟ್ಟು ನಡೆವಾತನು ಧನ್ಯನು

ಶುಭಸಂದೇಶ: ಲೂಕ 9:22-25


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: “ನರಪುತ್ರನು ಕಠಿಣವಾದ ಯಾತನೆಯನ್ನು ಅನುಭವಿಸಬೇಕಾಗಿದೆ. ಸಭಾ ಪ್ರಮುಖರಿಂದಲೂ ಮುಖ್ಯ ಯಾಜಕರಿಂದಲೂ ಧರ್ಮಶಾಸ್ತ್ರಿಗಳಿಂದಲೂ ಆತನು ತಿರಸ್ಕೃತನಾಗಿ ಕೊಲ್ಲಲ್ಪಡುವನು. ಆದರೆ ಮೂರನೇ ದಿನ ಆತನು ಪುನರುತ್ಥಾನ ಹೊಂದುವನು,” ಎಂದು ಅವರಿಗೆ ತಿಳಿಸಿದರು. ಯೇಸುಸ್ವಾಮಿ ಎಲ್ಲರನ್ನು ನೋಡಿ ಹೇಳಿದ್ದೇನೆಂದರೆ: “ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಿ, ತನ್ನ ಶಿಲುಬೆಯನ್ನು ಅನುದಿನವೂ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ. ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹಾತೊರೆಯುವವನು ಅದನ್ನು ಕಳೆದುಕೊಳ್ಳುವನು. ಆದರೆ ನನ್ನ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ನಿತ್ಯಕ್ಕೂ ಉಳಿಸಿಕೊಳ್ಳುವನು. ಒಬ್ಬನು ಪ್ರಪಂಚವನ್ನೆಲ್ಲಾ ಗೆದ್ದುಕೊಂಡು ತನ್ನ ಪ್ರಾಣವನ್ನೇ ಕಳೆದುಕೊಂಡರೆ ಅಥವಾ ತೆತ್ತರೆ ಅವನಿಗೆ ಅದರಿಂದ ಬರುವ ಲಾಭವಾದರೂ ಏನು?

ಮನಸ್ಸಿಗೊಂದಿಷ್ಟು :  ಆಯ್ಕೆಗಳು ನಮ್ಮನ್ನು ಗೊಂದಲಕ್ಕೆ ತಳ್ಳಬಹುದು. ಸುಖ-ಸಮೃದ್ಧಿ, ಆಸೆ-ಸೌಲಭ್ಯಗಳ ನಡುವೆ ಶಿಲುಬೆಯನ್ನು ಹೊತ್ತು ತಮ್ಮ ಹಿಂದೆ  ಬರಲು ಯೇಸು ನೀಡುವ ಕರೆ ಕಷ್ಟದ ಆಯ್ಕೆಯೇ. ಇಂದಿನವರೆಗಿನ ನಮ್ಮ ಆಯ್ಕೆ ಯಾವುದಾಗಿತ್ತು. ಮುಂದೆ ಯಾವುದಾಗಬಹುದು? ಯೇಸುವಿನ ಹಿಂದೆ ಸಾಗಲು ನಮಗಿರುವ ಅಡ್ಡಿಗಳೇನು?

ಪ್ರಶ್ನೆ : ಇಂದಿನ ಶುಭಸಂದೇಶದಲ್ಲಿನ ಯೇಸುವಿನ ಕರೆ ನಮ್ಮನ್ನು ಯೋಚಿಸುವಂತೆ ಮಾಡಿದೆಯೇ ಅಥವಾ ಪ್ರತಿ ನಿತ್ಯದ ವಾಕ್ಯದಂತೆ ಇದೂ ಓದಿಗೆ ಮಾತ್ರವೇ?

ಪ್ರಭುವೇ,
ಹೊರಬೇಕಾದ ಶಿಲುಬೆ, ಭಾರವೇ ಸರಿ 
ಹೊತ್ತು ನಿನ್ನ ಹಿಂದೆ ಬರುವುದಾಗಲಿ 
ಈ ನನ್ನ ಜೀವನದ ಗುರಿ
-ಚಿತ್ತ  

22.02.23 - "ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ಅದಕ್ಕೆಲ್ಲ ಪ್ರತಿಫಲ ಕೊಡುವರು"










ಮೊದಲನೇ ವಾಚನ: ಯೊವೇಲ 2:12-18

ಸರ್ವೇಶ್ವರ ಇಂತೆನ್ನುತ್ತಾರೆ: “ಈಗಲಾದರೂ ಮನಃಪೂರ್ವಕವಾಗಿ ನನ್ನ ಕಡೆಗೆ ತಿರುಗಿಕೊಳ್ಳಿ. ಉಪವಾಸ ಕೈಗೊಂಡು, ಅತ್ತು ಗೋಳಾಡಿ.” ನಿಮ್ಮ ಉಡುಪುಗಳನ್ನು ಅಲ್ಲ, ಹೃದಯಗಳನ್ನು ಸೀಳಿರಿ: ನಿಮ್ಮ ದೇವರಾದ ಸರ್ವೇಶ್ವರಸ್ವಾಮಿಯ ಕಡೆಗೆ ತಿರುಗಿಕೊಳ್ಳಿ; ಅವರು ದಯಾವಂತರು, ಕರುಣಾಮೂರ್ತಿ, ಸಹನಶೀಲ, ಪ್ರೀತಿಮಯ. ವಿಧಿಸಬೇಕಾಗಿದ್ದ ದಂಡನೆಗಾಗಿ ಮನನೊಂದುಕೊಳ್ಳುವಂಥವರು. ಒಂದು ವೇಳೆ ಸರ್ವೇಶ್ವರ ತಮ್ಮ ಮನಸ್ಸನ್ನು ಬದಲಾಯಿಸಬಹುದು. ನಿಮ್ಮ ಕಡೆಗೆ ತಿರುಗಿ ನಿಮ್ಮನ್ನು ಆಶೀರ್ವದಿಸಬಹುದು; ನಿಮ್ಮ ದೇವರಾದ ಅವರಿಗೆ ಅರ್ಪಿಸಲು ಬೇಕಾದ ನೈವೇದ್ಯಗಳನ್ನು ಧಾರಾಳವಾಗಿ ಅನುಗ್ರಹಿಸಬಹುದು. ಸಿಯೋನ್ ಶಿಖರದ ಮೇಲೆ ನಿಂತು ಕೊಂಬೂದಿರಿ. ಉಪವಾಸ ದಿನವನ್ನು ಘೋಷಿಸಿರಿ. ಮಹಾಸಭೆಯನ್ನು ಕರೆಯಿರಿ. ಜನರನ್ನು ಒಟ್ಟುಗೂಡಿಸಿರಿ; ಸಭೆಯನ್ನು ಏರ್ಪಡಿಸಿರಿ; ವೃದ್ಧರನ್ನು, ಮಕ್ಕಳನ್ನು, ಮೊಲೆಗೂಸುಗಳನ್ನು ಕರೆತನ್ನಿರಿ. ವಧೂವರರು ತಮ್ಮ ಕಲ್ಯಾಣಗೃಹದಿಂದ ಹೊರಟುಬರಲಿ. ಸರ್ವೇಶ್ವರಸ್ವಾಮಿಯ ಪರಿಚಾರಕರಾದ ಯಾಜಕರು ದೇವಾಲಯದ ದ್ವಾರ ಮಂಟಪಕ್ಕೂ ಬಲಿಪೀಠಕ್ಕೂ ನಡುವೆ ಶೋಕತಪ್ತರಾಗಿ ಹೀಗೆಂದು ಪ್ರಾರ್ಥಿಸಲಿ: “ಕರುಣೆ ತೋರು, ಹೇ ಸರ್ವೇಶ್ವರಾ, ನಿನ್ನ ಪ್ರಜೆಗೆ ನಿಂದೆಯಾಗದಿರಲಿ ನಿನ್ನ ಸ್ವಂತ ಜನತೆಗೆ ಗುರಿಯಾಗದಿರಲಿ ಅವರು ಅನ್ಯರ ತಾತ್ಸಾರಕೆ ‘ನಿಮ್ಮ ದೇವನೆಲ್ಲಿ?’ ಎಂಬ ಪರಕೀಯರ ಹೀಯಾಳಿಕೆಗೆ” ಆಗ ಸರ್ವೇಶ್ವರ ತಮ್ಮ ದೇಶದ ಮೇಲೆ ಅಭಿಮಾನಗೊಂಡು, ತಮ್ಮ ಜನರಿಗೆ ಕರುಣೆ ತೋರಿ ಹೀಗೆಂದರು:

ಕೀರ್ತನೆ: 51:3-4, 5-6, 12-13, 14, 17

ಶ್ಲೋಕ: ಕೃಪಾಳು ದೇವಾ ಕರುಣಿಸೆಮ್ಮನು ನಿಮ್ಮ ವಿರುದ್ಧ ನಾವು ಪಾಪ ಮಾಡಿದ್ದೇವೆ.

ಎರಡನೇ ವಾಚನ: 2 ಕೊರಿಂಥಿಯರಿಗೆ 5:20-6:2

ಸಹೋದರರೇ, ನಾವು ಕ್ರಿಸ್ತಯೇಸುವಿನ ರಾಯಭಾರಿಗಳು. ದೇವರೇ ನಮ್ಮ ಮುಖಾಂತರ ಕರೆನೀಡುತ್ತಿದ್ದಾರೆ. ಅವರೊಡನೆ ಸಂಧಾನಮಾಡಿಕೊಳ್ಳಿರೆಂದು ಕ್ರಿಸ್ತಯೇಸುವಿನ ಹೆಸರಿನಲ್ಲಿ ನಾವು ನಿಮ್ಮನ್ನು ವಿನಂತಿಸುತ್ತೇವೆ. ಪಾಪವನ್ನೇ ಅರಿಯದ ಕ್ರಿಸ್ತಯೇಸುವನ್ನು ದೇವರು ನಮಗೋಸ್ಕರ ಪಾಪಸ್ವರೂಪಿಯನ್ನಾಗಿಸಿದರು. ಕ್ರಿಸ್ತಯೇಸುವಿನಲ್ಲಿ ನಾವು ದೇವರೊಡನೆ ಸತ್ಸಂಬಂಧವನ್ನು ಪಡೆಯಲೆಂದೇ ಹೀಗೆ ಮಾಡಿದರು. ದೇವರೊಡನೆ ದುಡಿಯುತ್ತಿರುವ ನಾವು ನಿಮ್ಮಲ್ಲಿ ವಿಜ್ಞಾಪಿಸುವುದೇನೆಂದರೆ: ದೇವರಿಂದ ನೀವು ಪಡೆದ ವರಪ್ರಸಾದಗಳನ್ನು ವ್ಯರ್ಥಮಾಡಬೇಡಿ. "ಸುಪ್ರಸನ್ನತೆಯ ಕಾಲದಲ್ಲಿ ನಿನ್ನನ್ನಾಲಿಸಿದೆನು; ಉದ್ಧಾರ ದಿನದಂದು ನಿನಗೆ ನೆರವಾದೆನು,” ಎಂದಿದ್ದಾರೆ ದೇವರು. ಇದೇ ಆ ಸುಪ್ರಸನ್ನತೆಯ ಕಾಲ. ಇದೇ ಆ ಉದ್ಧಾರದ ಸುದಿನ.

ಶುಭಸಂದೇಶ: ಮತ್ತಾಯ 6:1-6, 16-18

ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ಜನರಿಗೆ ತೋರಿಸಿಕೊಳ್ಳುವುದಕ್ಕಾಗಿ ನಿಮ್ಮ ಧಾರ್ಮಿಕ ಕಾರ್ಯಗಳನ್ನು ಅವರ ಎದುರಿಗೆ ಪ್ರದರ್ಶಿಸದಂತೆ ಎಚ್ಚರಿಕೆಯಿಂದಿರಿ. ಹಾಗೆ ಮಾಡಿದರೆ, ಸ್ವರ್ಗದಲ್ಲಿರುವ ನಿಮ್ಮ ತಂದೆಯಿಂದ ನಿಮಗೆ ಪ್ರತಿಫಲ ದೊರಕದು. ಅಂತೆಯೇ, ನೀನು ದಾನಧರ್ಮ ಮಾಡುವಾಗ ತುತೂರಿಯನ್ನು ಊದಿಸಬೇಡ. ಜನರ ಹೊಗಳಿಕೆಗಾಗಿ ಕಪಟಿಗಳು ಪ್ರಾರ್ಥನಾಮಂದಿರಗಳಲ್ಲೂ ಹಾದಿಬೀದಿಗಳಲ್ಲೂ ಹೀಗೆ ಪ್ರದರ್ಶನ ಮಾಡುತ್ತಾರೆ. ಅವರಿಗೆ ಬರಬೇಕಾದ ಫಲ ಪೂರ್ತಿಯಾಗಿ ದೊರಕಿದ್ದಾಯಿತೆಂದು ನಿಮಗೆ ಖಚಿತವಾಗಿ ಹೇಳುತ್ತೇನೆ. ಆದರೆ ನೀನು ದಾನಧರ್ಮ ಮಾಡುವಾಗ ನಿನ್ನ ಬಲಗೈ ಕೊಡುವುದು ನಿನ್ನ ಎಡಗೈಗೂ ತಿಳಿಯದ ಹಾಗೆ ಗೋಪ್ಯವಾಗಿರಲಿ. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ನಿನಗೆ ಪ್ರತಿಫಲವನ್ನು ಕೊಡುವರು." "ಪ್ರಾರ್ಥನೆ ಮಾಡುವಾಗ ಕಪಟಿಗಳಂತೆ ಮಾಡಬೇಡಿ. ಜನರು ತಮ್ಮನ್ನು ನೋಡಲೆಂದು ಪ್ರಾರ್ಥನಾ ಮಂದಿರಗಳಲ್ಲೂ ಬೀದಿಯ ಚೌಕಗಳಲ್ಲೂ ನಿಂತು ಪ್ರಾರ್ಥನೆ ಮಾಡಲು ಇಚ್ಛಿಸುತ್ತಾರೆ. ಅವರಿಗೆ ಬರಬೇಕಾದ ಪೂರ್ತಿಫಲ ಆಗಲೇ ಬಂದಾಯಿತೆಂಬುದು ನಿಮಗೆ ಚೆನ್ನಾಗಿ ತಿಳಿದಿರಲಿ. ನೀನು ಪ್ರಾರ್ಥನೆ ಮಾಡುವಾಗ ನಿನ್ನ ಕೊಠಡಿಗೆ ಹೋಗು; ಬಾಗಿಲನ್ನು ಮುಚ್ಚು; ಅಂತರಂಗದಲ್ಲಿರುವ ನಿನ್ನ ತಂದೆಗೆ ಪ್ರಾರ್ಥನೆ ಮಾಡು. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ನಿನಗೆ ಪ್ರತಿಫಲವನ್ನು ಕೊಡುವರು."  "ಉಪವಾಸ ಮಾಡುವಾಗ ಕಪಟಿಗಳಂತೆ ಮುಖ ಸಪ್ಪೆಮಾಡಬೇಡಿ. ಜನರ ಕಣ್ಣಿಗೆ ತಾವು ಉಪವಾಸಿಗಳೆಂದು ತೋರ್ಪಡಿಸಿಕೊಳ್ಳುವುದಕ್ಕಾಗಿ ಅವರು ಮುಖವನ್ನು ಬಾಡಿಸಿಕೊಳ್ಳುತ್ತಾರೆ. ಅವರಿಗೆ ಬರಬೇಕಾದ ಫಲ ಪೂರ್ತಿಯಾಗಿ ದೊರಕಿಯಾಯಿತೆಂದು ನಿಮಗೆ ಖಚಿತವಾಗಿ ಹೇಳುತ್ತೇನೆ. ಆದರೆ ನೀನು ಉಪವಾಸ ಕೈಗೊಂಡಾಗ ಮುಖ ತೊಳೆದುಕೊ, ತಲೆಬಾಚಿಕೊ. ಆಗ ಉಪವಾಸ ಮಾಡುವವನಂತೆ ನೀನು ಜನರಿಗೆ ಕಾಣಿಸಿಕೊಳ್ಳುವುದಿಲ್ಲ; ಅಂತರಂಗದಲ್ಲಿ ಇರುವ ನಿನ್ನ ತಂದೆಗೆ ಮಾತ್ರ ಕಾಣಿಸಿಕೊಳ್ಳುವೆ. ಅಂತರಂಗದಲ್ಲಿ ನಡೆಯುವುದನ್ನು ನೋಡುವ ನಿನ್ನ ತಂದೆ ಅದಕ್ಕೆಲ್ಲ ಪ್ರತಿಫಲ ಕೊಡುವರು."

ಮನಸ್ಸಿಗೊಂದಿಷ್ಟು : ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳಾದ ದಾನ-ಧರ್ಮ ಪ್ರಾರ್ಥನೆ ಹಾಗೂ ಉಪವಾಸ ವ್ರತ ಹೇಗಿರಬೇಕೆಂಬುದನ್ನು ಯೇಸು ಇಂದು ಹೇಳುವುದನ್ನು ನಾವು ಕಾಣುತ್ತೇವೆ. ಆಚರಣೆಗಳು ತಮ್ಮ ಮೂಲ ಅರ್ಥವನ್ನೇ ಕಳೆದುಕೊಂಡು ಕೇವಲ ತೋರ್ಪಡಿಕೆಗೆ ಸೀಮಿತವಾದಾಗ ಅದು ಮನುಷ್ಯರ ಮೆಚ್ಚುಗೆಗಷ್ಟೇ  ಪಾತ್ರವಾಗುತ್ತದೆ. ಆದರೆ ದೇವರನ್ನು ಮೆಚ್ಚಿಸುವುದು ಅವುಗಳ ನಿಜ ಕಾರಣವಾಗಬೇಕು ಎಂಬುದು ಯೇಸುವಿನ ಕರೆ.

ಪ್ರಶ್ನೆ : ನಮ್ಮ ದಿನ ನಿತ್ಯದ ಕಾರ್ಯಗಳು ಯಾರನ್ನು ಹೆಚ್ಚು ಮೆಚ್ಚಿಸುವತ್ತ ಸಾಗುತ್ತಿದೆ? ಮನುಷ್ಯರನ್ನೋ ? ದೇವರನ್ನೋ ?

ಪ್ರಭುವೇ,
ಇಂದಿನವರೆಗಿನ 'ನನ್ನನ್ನು' ಸರಿಸಿ 
ಈಗಿಂದಲೇ  ನಿಮ್ಮನ್ನು ನನ್ನಲಿರಿಸಿ 
-ಚಿತ್ತ 

21.02.23 - "ನಿಮ್ಮಲ್ಲಿ ಮೊದಲಿಗನಾಗ ಬಯಸುವವನು ಎಲ್ಲರಿಗೂ ಕಡೆಯವನಾಗಿರಲಿ"

ಮೊದಲನೇ ವಾಚನ: ಸಿರಾಖನು 2:1-11

ಗನೇ, ದೇವರ ಸೇವೆಮಾಡಲು ಬಯಸುವಿಯೋ? ಹಾಗಾದರೆ ಶೋಧನೆಗಳನ್ನೆದುರಿಸಲು  ನಿನ್ನಾತ್ಮವನ್ನು ಸಿದ್ಧಪಡಿಸಿಕೊ! ನಿನ್ನ ಹೃದಯದಲ್ಲಿರಲಿ ಪ್ರಾಮಾಣಿಕತೆ, ಸ್ಥಿರತೆ ಕಷ್ಟ ಬಂದಾಗ ನಿನಗಿರದಿರಲಿ ಚಂಚಲತೆ. ಆತನನ್ನು ಸೇರಿಕೊಂಡಿರು; ಬಿಟ್ಟಗಲಬೇಡ ಅಭಿವೃದ್ಧಿ ಹೊಂದುವೆ ಅಂತಿಮ ದಿನ. ನಿನ್ನ ಮೇಲೆ ಬಂದುದೆಲ್ಲವನು ಸ್ವೀಕರಿಸು ಬಡತನ ಬಂದರೂ ದೀರ್ಘಶಾಂತಿಯಿಂದಿರು. ಬಂಗಾರದ ಪರೀಕ್ಷೆ ಯಾಗುವುದು ಬೆಂಕಿಯಲ್ಲಿ ಆತನ ಭಕ್ತರ ಪರೀಕ್ಷೆ ಅವಮಾನದ ಕುಲುಮೆಯಲ್ಲಿ. ಆತನಲ್ಲಿಡು ಭರವಸೆ; ನೆರವೀಯುವನಾತ ನಿನಗೆ, ಸರಿಪಡಿಸಿಕೊ ನಿನ್ನ ನಡತೆಯನು; ನಿರೀಕ್ಷೆಯಿಡು ಆತನಲ್ಲೇ. ದೇವರಲ್ಲಿ ಭಯಭಕ್ತಿಯುಳ್ಳವರೇ, ಆತನ ಕರುಣೆಗಾಗಿ ಕಾದಿರಿ ಸನ್ಮಾರ್ಗವನ್ನು ಬಿಟ್ಟು ತೊಲಗಬೇಡಿ; ಬಿದ್ದು ಹೋದೀರಿ! ದೇವರಿಗೆ ಭಯಪಡುವವರೇ, ಆತನಲ್ಲಿಡಿ ಭರವಸೆ ತಕ್ಕ ಪ್ರತಿಫಲ ದೊರಕುವುದು ನಿಮಗೆ ತಪ್ಪದೆ. ದೇವರಿಗೆ ಭಯಪಡುವವರೇ, ಒಳಿತನ್ನು ನಿರೀಕ್ಷಿಸಿರಿ ನಿತ್ಯ ಸಂತೋಷವನ್ನೂ ಕೃಪೆಯನ್ನೂ ಹಾರೈಸಿರಿ. ಹಿಂದಿನವರನ್ನು ಗಮನಿಸಿರಿ; ತಂದುಕೊಳ್ಳಿರಿ ಲಕ್ಷ್ಯಕೆ ದೇವರನ್ನು ನಂಬಿದವರಿಗೆ ಆಗಿದ್ದುಂಟೆ ನಾಚಿಕೆ? ಭಯಭಕ್ತಿಯಿಂದ ಬಾಳಿದವನನು ಆತ ಕೈಬಿಟ್ಟಿದ್ದುಂಟೆ? ಏಕೆನೆ, ಸರ್ವೇಶ್ವರನು ದಯಾಪೂರಿತನು, ಕನಿಕರವುಳ್ಳವನು ಪಾಪಗಳನ್ನು ಕ್ಷಮಿಸುವವನು, ಕಷ್ಟದಲ್ಲಿ ರಕ್ಷಿಸುವವನು.

ಕೀರ್ತನೆ: 37:3-4, 18-19, 27-28, 39-40

ಶ್ಲೋಕ: ಒಳಿತನು ಮಾಡು ಪ್ರಭುವಿನಲಿ ಭರವಸೆ ಇಟ್ಟು

ಶುಭಸಂದೇಶ: ಮಾರ್ಕ 9:30-37


ಯೇಸುಸ್ವಾಮಿ ಮತ್ತು ಶಿಷ್ಯರು ಹೊರಟು ಗಲಿಲೇಯದ ಮಾರ್ಗವಾಗಿ ಮುಂದಕ್ಕೆ ಪ್ರಯಾಣ ಮಾಡಿದರು. ಇದು ಯಾರಿಗೂ ತಿಳಿಯಬಾರದು ಎಂಬುದು ಯೇಸುವಿನ ಇಚ್ಛೆಯಾಗಿತ್ತು. ಕಾರಣ, ತಮ್ಮ ಶಿಷ್ಯರಿಗೆ ಪ್ರಬೋಧಿಸುವುದರಲ್ಲಿ ಅವರು ನಿರತರಾಗಿದ್ದರು. "ನರಪುತ್ರನನ್ನು ಜನರ ವಶಕ್ಕೆ ಒಪ್ಪಿಸಲಾಗುವುದು. ಅವರು ಆತನನ್ನು ಕೊಲ್ಲುವರು. ಕೊಂದ ಮೂರನೆಯ ದಿನ ಆತನು ಪುನರುತ್ದಾನ ಹೊಂದುವನು." ಎಂದು ಯೇಸು ಅವರಿಗೆ ತಿಳಿಸಿದರು. ಆದರೆ ಯೇಸು ಹೇಳಿದ ಆ ಮಾತುಗಳನ್ನು ಶಿಷ್ಯರು ಅರ್ಥಮಾಡಿಕೊಳ್ಳಲಿಲ್ಲ. ಅವುಗಳ ಬಗ್ಗೆ ಪ್ರಶ್ನಿಸಲು ಸಹ ಅಂಜಿದರು. ಅನಂತರ ಅವರೆಲ್ಲರೂ ಕಫೆರ್ನವುಮಿಗೆ ಬಂದರು. ಮನೆ ಸೇರಿದಾಗ  ಯೇಸುಸ್ವಾಮಿ, "ದಾರಿಯಲ್ಲಿ ಬರುತ್ತಾ ನೀವು ನಿಮ್ಮಲ್ಲೇ ಏನು ಚರ್ಚೆಮಾಡುತ್ತಿದ್ದಿರಿ?" ಎಂದು ಶಿಷ್ಯರನ್ನು ಕೇಳಿದರು. ಅವರು ಮೌನತಾಳಿದರು. ಏಕಂದರೆ, ತಮ್ಮಲ್ಲಿ ಯಾವನು ಅತಿ ಶ್ರೇಷ್ಟನು ಎಂದು ತಮ್ಮ ತಮ್ಮಲ್ಲೇ ವಾದಿಸುತ್ತಾ ಬಂದಿದ್ದರು. ಯೇಸು ಕುಳಿತುಕೊಂಡು, ಹನ್ನೆರಡು ಮಂದಿಯನ್ನು ಕರೆದು, ಅವರಿಗೆ, "ನಿಮ್ಮಲ್ಲಿ ಮೊದಲಿಗನಾಗ ಬಯಸುವವನು ಎಲ್ಲರಿಗೂ ಕಡೆಯವನಾಗಿರಲಿ; ಎಲ್ಲರ ಸೇವೆ ಮಾಡುವವನಾಗಿ ಇರಲಿ," ಎಂದರು. ಅನಂತರ ಯೇಸು, ಒಂದು ಚಿಕ್ಕ ಮಗುವನ್ನು ಕರೆದು ಅವರ ಮಧ್ಯೆ ನಿಲ್ಲಿಸಿ, ಅದನ್ನು ತಬ್ಬಿಕೊಂಡು ತಮ್ಮ ಶಿಷ್ಯರಿಗೆ, "ನನ್ನ ಹೆಸರಿನಲ್ಲಿ ಇಂಥ ಮಗುವೊಂದನ್ನು ಯಾರು ಬರಮಾಡಿಕೊಳ್ಳುತ್ತಾನೋ ಅವನು ನನ್ನನ್ನು ಅಲ್ಲ ನನ್ನನ್ನು ಕಳುಹಿಸಿದಾತನನ್ನೇ ಬರಮಾಡಿಕೊಳ್ಳುತ್ತಾನೆ," ಎಂದರು.

ಮನಸಿಗೊಂದಿಷ್ಟು : ಒಂದು ಮಗು ಯಾವುದೇ ರೀತಿಯಲ್ಲಿ, ಕೋನದಲ್ಲಿ ನೋಡಿದರೂ ಅಸಹಾಯಕ. ಅದಕ್ಕೆ ಬೇಕಾಗಿರುವುದು ನಮ್ಮ ಆರೈಕೆ, ಮುದ್ದು. ಬದಲಿಗೆ ಅದು ನೀಡಬಹುದಾದದ್ದು ಕೇವಲ ಪ್ರೀತಿ ಹಾಗೂ ಆತ್ಮ ತೃಪ್ತಿ. ಒಂದು ಮಗುವಿನಷ್ಟೇ ಅಸಹಾಯಕ ಜನರು, ವರ್ಗ ನಮ್ಮೊಡನೆ ಇದ್ದಾರೆ. ಅವರಿಗೆ ಬೇಕಾಗಿರುವುದು ನಮ್ಮ ಗಮನ, ಪ್ರೀತಿಯಷ್ಟೇ

ಪ್ರಶ್ನೆ : ನಮ್ಮ ಬಾಳಿನಲ್ಲಿ ಕಡೆಯವನಾಗಿರಲು ಬಯಸಿ ಸರಿದು ನಿಂತ ಇತ್ತೀಚಿನ ಉದಾಹರಣೆ ಯಾವುದು?

20.02.23 - ’ಸುಜ್ಞಾನ' ಎಂಬುದೆಲ್ಲವೂ ಬರುವುದು ಸರ್ವೇಶ್ವರನಿಂದಲೆ’

ಮೊದಲನೇ ವಾಚನ: ಸಿರಾಖನು 1:1-10

ಸುಜ್ಞಾನ' ಎಂಬುದೆಲ್ಲವೂ ಬರುವುದು ಸರ್ವೇಶ್ವರನಿಂದಲೆ ನಿತ್ಯಕ್ಕೂ
ಅದಿರುವುದು ಆತನ ಬಳಿಯಲ್ಲೇ.
ಎಣಿಸಬಲ್ಲವನಾರು ಕಡಲ ಮರಳಿನ ಕಣಗಳನು
ಮಳೆಯ ಹನಿಗಳನು, ಅನಂತಕಾಲದ ದಿನಗಳನು?
ಅಳೆಯಬಲ್ಲವನಾರು ಆಕಾಶದ ಎತ್ತರವನ್ನು, ಭೂಮಿಯ ಉದ್ದಗಲವನು,
ಪಾತಾಳದ ಆಳವನು? ಅಂತೆಯೇ ಸುಜ್ಞಾನದ ನೆಲೆಯನು?
ಸೃಷ್ಟಿಯಾಯಿತು ಸುಜ್ಞಾನ ಸಂಕುಲಕ್ಕೂ ಮೊದಲೇ
ವಿವೇಚನಾಗ್ರಹಿಕೆ ಕಾಲಕ್ಕೆ ಮಂಚೆಯೇ.
ಉನ್ನತ ಸ್ವರ್ಗದ ದೇವರ ವಾಣಿಯೇ ಸುಜ್ಞಾನದ ಮೂಲ
ಆತನ ಶಾಶ್ವತವಾದ ಆಜ್ಞೆಗಳೇ ಅದರ ಮಾರ್ಗ
ಬಯಲಾಯಿತೆ ಸುಜ್ಞಾನದ ಮೂಲ ಯಾರಿಗಾದರೂ?
 ಅರಿತಿರುವರೆ ಅದರ ಭವ್ಯ ಕಲ್ಪನೆಗಳನು ಯಾರಾದರೂ?
ಪ್ರಕಟವಾಯಿತೆ ಸುಜ್ಞಾನದ ಅರಿವು ಯಾರಿಗಾದರೂ?
ಗ್ರಹಿಸಿರುವರೆ ಅದರ ಮಾರ್ಗಗಳನು ಯಾರಾದರೂ?
ಸುಜ್ಞಾನಿ ಒಬ್ಬನಿಹನು; ಆತನು ಅತ್ಯಂತ ಭಯಂಕರನು
ಆತನೇ ಸಿಂಹಾಸನರೂಢನಾಗಿರುವ ಸರ್ವೇಶ್ವರನು.
ಸುಜ್ಞಾನವನ್ನು ನಿರ್ಮಿಸಿದಾಗ ಸರ್ವೇಶ್ವರನೇ
ಅದನ್ನು ವೀಕ್ಷಿಸಿ ತೂಕಮಾಡಿದಾತ ಆತನೇ
ಅದನ್ನು ಸುರಿಸಿದನು ಸಮಸ್ತ ಸೃಷ್ಟಿ ಕಾರ್ಯಗಳ ಮೇಲೆ.
ಸಕಲ ಜೀವಿಗಳಲ್ಲಿ ನೆಲಸಿರುವುದು ಆತನ ಇಚ್ಛೆಯಂತೆ ದಯಪಾಲಿಸಿರುವನದನ್ನು
 ಹೇರಳವಾಗಿ ಆತನನ್ನು ಪ್ರೀತಿಸುವವರಿಗೆ.

ಕೀರ್ತನೆ: 93:1,1-2, 5
ಶ್ಲೋಕ: ವಹಿಸಿಹನು ಪ್ರಭು ರಾಜ್ಯಾಧಿಕಾರವನು

ಶುಭಸಂದೇಶ: ಮಾರ್ಕ 9:14-29



ವರೆಲ್ಲರೂ ಹಿಂದಿರುಗಿ ಬಂದಾಗ ಉಳಿದ ಶಿಷ್ಯರ ಸುತ್ತಲೂ ಜನರು ದೊಡ್ಡ ಗುಂಪಾಗಿ ನೆರೆದಿರುವುದನ್ನು, ಧರ್ಮಶಾಸ್ತ್ರಿಗಳು ಇವರೊಡನೆ ವಾದಿಸುತ್ತಿರುವುದನ್ನು ಕಂಡರು. ನೆರದಿದ್ದ ಜನರು ಯೇಸುವನ್ನು ಕಂಡೊಡನೆ ಆಶ್ಚರ್ಯಪಟ್ಟು ಓಡಿಬಂದು, ಅವರಿಗೆ ನಮಸ್ಕರಿಸಿದರು. ಯೇಸುಸ್ವಾಮಿ, "ನಿಮ್ಮ ವಾಗ್ವಾದ ಏನು?" ಎಂದು ಕೇಳಿದರು. ಆ ಗುಂಪಿನಲ್ಲಿದ್ದ ಒಬ್ಬನು, "ಬೋಧಕರೇ, ನನ್ನ ಮಗನನ್ನು ತಮ್ಮ ಬಳಿಗೆಂದು ಕರೆತಂದೆ. ಅವನಿಗೆ ಒಂದು ಮೂಕ ದೆವ್ವ ಹಿಡಿದಿದೆ. ಅವನ ಮೇಲೆ ಅದು ಬಂದಾಗಲೆಲ್ಲ ಅವನನ್ನು ನೆಲಕ್ಕೆ ಅಪ್ಪಳಿಸುತ್ತದೆ. ಅವನು ನೊರೆಕಾರುತ್ತಾ ಹಲ್ಲು  ಕಡಿದುಕೊಳ್ಳುತ್ತಾನೆ. ಆಗ ಅವನ ದೇಹವೆಲ್ಲಾ ಮರಗಟ್ಟಿದಂತಾಗುತ್ತದೆ.  ಆ  ಬಿಡಿಸಬೇಕೆಂದು ತಮ್ಮ ಶಿಷ್ಯರನ್ನು ಕೇಳಿಕೊಂಡೆ. ಆದರೆ, ಅದು ಅವರಿಂದಾಗಲಿಲ್ಲ," ಎಂದನು. ಇದನ್ನು ಕೇಳಿ ಯೇಸು, "ಅಯ್ಯೋ, ವಿಶ್ವಾಸವಿಲ್ಲದ ಪೀಳಿಗೆಯೇ, ಇನ್ನೆಷ್ಟು ಕಾಲ ನಿಮ್ಮೊದಿಂಗಿರಲಿ! ಇನ್ನೆಷ್ಟು ಕಾಲ ನಿಮ್ಮನ್ನು ಸಹಿಸಿಕೊಳ್ಳಲಿ! ಅವನನ್ನು ನನ್ನ ಬಳಿಗೆ ಕರೆದುಕೊಂಡು ಬನ್ನಿ ಎಂದರು. ಆಗ ಆ ಹುಡುಗನನ್ನು ಯೇಸುವಿನ ಬಳಿಗೆ ಕರೆತಂದರು. ಯೇಸುವನ್ನು ನೋಡಿದಾಕ್ಷಣ ಆ ದೆವ್ವ ಹುಡುಗನನ್ನು ಅಪ್ಪಳಿಸಿ  ಒದ್ದಾಡಿಸಿತು. ಹುಡುಗ ಹೊರಳಾಡುತ್ತಾ ನೊರೆ ಕಾರಿದನು. ಯೇಸು, "ಇವನಿಗೆ ಎಷ್ಟು ದಿನದಿಂದ ಹೀಗಾಗುತ್ತಿದೆ?" ಎಂದು ಹುಡುಗನ ತಂದೆಯನ್ನು ವಿಚಾರಿಸಿದರು ಅದಕ್ಕೆ ಅವನು "ಬಾಲ್ಯದಿಂದಲೇ ಹೀಗಾಗುತ್ತಿದೆ; ಇದಲ್ಲದೆ ದೆವ್ವವು ಇವನನ್ನು ಕೊಲ್ಲಬೇಕೆಂದು ಪದೇ ಪದೇ ಬೆಂಕಿಗೂ ನೀರಿಗೂ ದೂಡಿದೆ; ತಮ್ಮಿಂದ ಏನಾದರೂ ಸಾಧ್ಯವಾದರೆ, ನಮ್ಮ ಮೇಲೆ ದಯವಿಟ್ಟು ಸಹಾಯ ಮಾಡಿ ," ಎಂದು ಯೇಸುವನ್ನು ಬೇಡಿಕೊಂಡನು. ಅದಕ್ಕೆ ಯೇಸು "ಸಾಧ್ಯವಾದರೆ" ಎನ್ನುತ್ತೀಯಲ್ಲಾ? ದೇವರಲ್ಲಿ ವಿಶ್ವಾಸ ಇಡುವವನಿಗೆ ಎಲ್ಲವೂ ಸಾಧ್ಯ!" ಎಂದರು. ಆಗ ಆ ಬಾಲಕನ ತಂದೆ, "ನಾನು ವಿಶ್ವಾಸಿಸುತ್ತೇನೆ, ನನ್ನ ವಿಶ್ವಾಸದಲ್ಲಿ ಕೊರತೆಯಿದ್ದರೆ ನೆರವು ನೀಡಿ," ಎಂದು ಯೇಸುವಿಗೆ ಮೊರೆ ಇಟ್ಟನು. ಜನಸಂದಣಿ ಬೆಳೆಯುತ್ತಿರುವುದನ್ನು ಕಂಡ ಯೇಸು, ಆ ದೆವ್ವವನ್ನು ಗದರಿಸಿ, "ಎಲೈ, ಕಿವುಡು ಮೂಕ ದೆವ್ವವೇ, ಇವನನ್ನು ಬಿಟ್ಟು ತೊಲಗು; ಇನ್ನೆಂದಿಗೂ ಇವನೊಳಗೆ ಪ್ರವೇಶಿಸ ಕೂಡದೆಂದು ನಿನಗೆ ಆಜ್ಞಾಪಿಸುತ್ತೇನೆ," ಎಂದರು. ದೆವ್ವವು ಚೀರುತ್ತಾ, ಹುಡುಗನನ್ನು ವಿಲವಿಲನೆ ಒದ್ದಾಡಿಸಿ, ಕೊನೆಗೆ ಬಿಟ್ಟುಹೋಯಿತು. ಹುಡುಗನು ಶವದಂತಾದನು. ಅಲ್ಲಿದ್ದವರಲ್ಲಿ ಅನೇಕರು 'ಹುಡುಗ ಸತ್ತುಹೋದ,' ಎಂದುಕೊಂಡರು. ಆದರೆ ಯೇಸು ಅವನ ಕೈಹಿಡಿದು ಎತ್ತಲು ಅವನು ಎದ್ದು ನಿಂತನು. ಅಂದು ಯೇಸುಸ್ವಾಮಿ ಮನೆಗೆ ಬಂದಾಗ, ಶಿಷ್ಯರು ಪ್ರತ್ಯಕವಾಗಿ ಅವರ ಬಳಿಗೆ ಬಂದು, "ಆ ದೆವ್ವವನ್ನು ಹೊರಗಟ್ಟಲು ನಮ್ಮಿಂದೇಕೆ ಆಗಲಿಲ್ಲ?"  ಎಂದು ಕೇಳಿದರು. ಅದಕ್ಕೆ ಯೇಸು, ಈ ಬಗೆಯ ದೆವ್ವವನ್ನು ಹೊರಗಟ್ಟಲು ಪ್ರಾರ್ಥನೆಯೇ ಹೊರತು ಬೇರೆ ಮಾರ್ಗವಿಲ್ಲ," ಎಂದರು.

ಮನಸಿಗೊಂದಿಷ್ಟು :  ’ಸಾಧ್ಯವಾದರೇ’ ಎಂಬ ಬಾಲಕನ ತಂದೆಯ ಮೇಲೆಯೇ ಅವನ ಮಗನ ಗುಣಮುಖವು ಅವಲಂಬಿತವಾಗುವಂತ ವಾತಾವರಣವನ್ನು ಯೇಸು ಸೃಷ್ಟಿಸುತ್ತಾರೆ. ’ವಿಶ್ವಾಸಿಸುತ್ತೇನೆ, ವಿಶ್ವಾಸದಲ್ಲಿ ಕೊರತೆಯಿದ್ದರೆ ನೆರವು ನೀಡಿ’ ಎಂಬ ಮಾತೇ ಕೊನೆಗೆ ಆತನ ಮಗನನ್ನು ದೆವ್ವದಿಂದ ಬಿಡುಗಡೆಗೆ ದಾರಿ ಮಾಡಿಕೊಡುತ್ತದೆ.

ಪ್ರಶ್ನೆ : ನಮ್ಮ ವಿಶ್ವಾಸದ ಕೊರತೆಯಲ್ಲಿ ಯೇಸುವಿನ  ನೆರವಿಗಾಗಿ ಬೇಡಿಕೊಂಡಿದ್ದೇವೆಯೇ? 

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...