10.11.22 - “ಕಾಲ ಒಂದು ಬರುವುದು, ಆಗ ನರಪುತ್ರನೊಂದಿಗೆ ಒಂದು ದಿನವನ್ನಾದರೂ ಕಳೆಯಲು ಹಂಬಲಿಸುವಿರಿ"

ಮೊದಲನೇ ವಾಚನ: ಫಿಲೇಮೊನ 1:7-20


ಸಹೋದರನೇ, ನಿನ್ನ ಪ್ರೀತಿಯನ್ನು ನೆನೆದು ನಾನು ಆನಂದವನ್ನೂ ಆದರಣೆಯನ್ನೂ ಪಡೆಯುತ್ತಿದ್ದೇನೆ. ದೇವಜನರೆಲ್ಲರ ಹೃದಯಗಳನ್ನು ನೀನು ಉಲ್ಲಾಸಪಡಿಸುತ್ತಿರುವೆ. ಆದಕಾರಣ, ನೀನು ಮಾಡಬೇಕಾದುದನ್ನು ಮಾಡು ಎಂದು ಆಜ್ಞಾಪಿಸಲು ಕ್ರಿಸ್ತಯೇಸುವಿನಲ್ಲಿ ನನಗೆ ಧೈರ್ಯ ಮತ್ತು ಅಧಿಕಾರಗಳಿವೆ. ಆದರೂ ನಿನ್ನ ಮೇಲಿರುವ ಪ್ರೀತಿಯ ನಿಮಿತ್ತ ನಾನು ನಿನ್ನಲ್ಲಿ ವಿನಂತಿಸುತ್ತೇನೆ: ವೃದ್ಧಪ್ರಾಯನೂ ಮತ್ತು ಕ್ರಿಸ್ತಯೇಸುವಿಗೋಸ್ಕರ ಈಗ ಸೆರೆಯಾಳೂ ಆಗಿರುವ ಪೌಲನೆಂಬ ನಾನು ಒನೇಸಿಮನ ಪರವಾಗಿ ನಿನ್ನಲ್ಲಿ ವಿಜ್ಞಾಪಿಸುತ್ತೇನೆ. ಇವನು ಯೇಸುವಿನಲ್ಲಿ ನನ್ನ ಸ್ವಂತ ಮಗನಂತಿದ್ದಾನೆ. ಸೆರೆಮನೆಯಲ್ಲೇ ನಾನು ಅವನನ್ನು ಆಧ್ಯಾತ್ಮಿಕವಾಗಿ ಪಡೆದೆನು. ಹಿಂದೆ ಅವನು ನಿನಗೆ ಪ್ರಯೋಜಕನಾಗಿರಲಿಲ್ಲ. ಈಗಲಾದರೋ ನಿನಗೂ ನನಗೂ ಪ್ರಯೋಜಕನಾಗಿದ್ದಾನೆ. ನನಗಂತೂ ಇವನು ಪ್ರಾಣದಂತಿದ್ದರೂ ಈಗ ನಿನ್ನ ಬಳಿಗೆ ಕಳುಹಿಸುತ್ತಿದ್ದೇನೆ. ಶುಭಸಂದೇಶಕ್ಕೋಸ್ಕರ ನಾನು ಸೆರೆಮನೆಯಲ್ಲಿರುವಾಗ ನಿನ್ನ ಬದಲಾಗಿ ನನಗೆ ಸಹಾಯಮಾಡಲು ಇವನನ್ನು ಇಲ್ಲಿಯೇ ಉಳಿಸಿಕೊಳ್ಳಲು ಇಷ್ಟವಿತ್ತು. ಆದರೆ ನನಗೆ ಸಹಾಯವಾಗಲೆಂದು ನಿನ್ನನ್ನು ಖಡ್ಡಾಯಪಡಿಸಲು ನನಗಂತೂ ಇಷ್ಟವಿಲ್ಲ. ನೀನಾಗಿಯೇ ನಿನ್ನ ಸ್ವಂತ ಇಚ್ಛೆಯಿಂದ ಹಾಗೆ ಮಾಡಬೇಕೆಂಬುದು ನನ್ನ ಅಪೇಕ್ಷೆ. ಆದ್ದರಿಂದ ನಿನ್ನ ಒಪ್ಪಿಗೆಯಿಲ್ಲದೆ ನಾನು ಏನನ್ನೂ ಮಾಡುತ್ತಿಲ್ಲ. ಸ್ವಲ್ಪಕಾಲ ಒನೇಸಿಮನು ನಿನ್ನಿಂದ ದೂರವಿದ್ದುದಕ್ಕೆ ಕಾರಣ ಆತನು ಸದಾಕಾಲ ನಿನ್ನವನಾಗುವುದಕ್ಕೋ ಏನೋ. ಈಗ ಅವನು ನಿನ್ನ ಬಳಿಗೆ ಬರುತ್ತಿರುವುದು ಕೇವಲ ಗುಲಾಮನಂತೆ ಅಲ್ಲ. ಅದಕ್ಕಿಂತಲೂ ಬಹಳ ಮೇಲಾದವನಂತೆ, ಕ್ರಿಸ್ತಯೇಸುವಿನಲ್ಲಿ ಪ್ರಿಯ ಸಹೋದರನಂತೆ, ಅವನೆಂದರೆ ನನಗೆಷ್ಟೋ ಪ್ರೀತಿ. ಹಾಗಾದರೆ ನಿನ್ನ ಸೇವಕನೂ ನಮ್ಮ ಪ್ರಭುವಿನಲ್ಲಿ ನಿನ್ನ ಪ್ರಿಯ ಸಹೋದರನೂ ಆಗಿರುವ ಅವನ ಬಗ್ಗೆ ನಿನಗೆ ಮತ್ತಷ್ಟು ಪ್ರೀತಿ ಇರಬೇಕಲ್ಲವೇ? ಆದ್ದರಿಂದ ಕ್ರಿಸ್ತಯೇಸುವಿನಲ್ಲಿ ನಿನಗೂ ನನಗೂ ಅನ್ಯೋನ್ಯತೆ ಇದೆಯೆಂದು ನೀನು ಪರಿಗಣಿಸುವುದಾದರೆ ನನ್ನನ್ನು ಹೇಗೆ ಸ್ವಾಗತಿಸುತ್ತಿದ್ದೆಯೋ ಹಾಗೆಯೇ ಇವನನ್ನು ಸ್ವಾಗತಿಸು. ಇವನು ನಿನಗೇನಾದರೂ ಅನ್ಯಾಯ ಮಾಡಿದ್ದಾದರೆ, ಅಥವಾ ಇವನಿಂದ ನಿನಗೇನಾದರೂ ಸಲ್ಲಬೇಕಾದ ಬಾಕಿಯಿದ್ದರೆ, ಅದೆಲ್ಲವನ್ನೂ ನನ್ನ ಲೆಕ್ಕಕ್ಕೆ ಹಾಕು. ಅದನ್ನು ಪೌಲನೆಂಬ ನಾನೇ ಕೊಟ್ಟು ತೀರಿಸುತ್ತೇನೆ ಎಂದು ನನ್ನ ಹಸ್ತಾಕ್ಷರದಲ್ಲೇ ಬರೆದುಕೊಡುತ್ತಿದ್ದೇನೆ. ಆದರೆ ಈಗ ನೀನು ಏನಾಗಿದ್ದೀಯೋ ಅದು ನನ್ನಿಂದಲೇ. ಹೀಗೆ ನೀನೇ ನನಗೆ ಸಾಲಗಾರನಾಗಿದ್ದೀ ಎಂದು ನಾನು ಹೇಳಬೇಕಾಗಿಲ್ಲ. ಹೌದು, ಪ್ರಿಯ ಸಹೋದರನೇ, ಪ್ರಭುವಿನ ಹೆಸರಿನಲ್ಲಿ ಇದೊಂದು ಉಪಕಾರವನ್ನು ನನಗೆ ಮಾಡಿಕೊಡು; ಕ್ರಿಸ್ತಯೇಸುವಿನಲ್ಲಿ ನನ್ನ ಹೃದಯ ಆನಂದಿಸುವಂತೆ ಮಾಡು.

ಕೀರ್ತನೆ: 146:7, 8-9, 9-10
ಶ್ಲೋಕ: ಇಸ್ರಯೇಲ ಕುಲದೇವರು ಯಾರಿಗೆ ಉದ್ದಾರಕನೂ ಅವನೇ ಧನ್ಯನು 

ಶುಭಸಂದೇಶ: ಲೂಕ 17:20-25


ದೇವರ ಸಾಮ್ರಾಜ್ಯವು ಯಾವಾಗ ಬರುವುದೆಂದು ಫರಿಸಾಯರು ಕೇಳಿದಾಗ ಯೇಸುಸ್ವಾಮಿ ಪ್ರತ್ಯುತ್ತರವಾಗಿ, “ದೇವರ ಸಾಮ್ರಾಜ್ಯವು ಕಣ್ಣುಗಳಿಗೆ ಕಾಣಿಸುವಂತೆ ಬರುವುದಿಲ್ಲ. ‘ಇಗೋ, ಅದು ಇಲ್ಲಿದೆ ಅಥವಾ ಅಲ್ಲಿದೆ,’ ಎಂದು ಹೇಳುವಂತಿಲ್ಲ. ಏಕೆಂದರೆ, ದೇವರ ಸಾಮ್ರಾಜ್ಯವು ನಿಮ್ಮೊಳಗೇ ಇದೆ,” ಎಂದರು.  ಅನಂತರ ಶಿಷ್ಯರನ್ನು ಉದ್ದೇಶಿಸಿ, “ಕಾಲ ಒಂದು ಬರುವುದು, ಆಗ ನರಪುತ್ರನೊಂದಿಗೆ ಒಂದು ದಿನವನ್ನಾದರೂ ಕಳೆಯಲು ಹಂಬಲಿಸುವಿರಿ. ಆದರೆ ನಿಮಗದು ಲಭಿಸದು. ‘ಇಗೋ, ಇಲ್ಲಿದ್ದಾನೆ; ಅಗೋ ಅಲ್ಲಿದ್ದಾನೆ,’ ಎಂದು ಜನರು ಸುದ್ದಿ ಎಬ್ಬಿಸುವರು. ಅದನ್ನು ನೀವು ನೋಡಲು ಹೋಗಬೇಡಿ; ಅಂಥವರನ್ನು ಹಿಂಬಾಲಿಸಲೂ ಬೇಡಿ. ಆಕಾಶದ ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿನವರೆಗೆ ಮಿನುಗಿ ಹೊಳೆಯುವ ಮಿಂಚಿನಂತೆ ನರಪುತ್ರನು ತಾನು ಬರುವ ಕಾಲದಲ್ಲಿ ಕಾಣಿಸಿಕೊಳ್ಳುವನು. ಆದರೆ ಅದಕ್ಕೆ ಮೊದಲು ಆತನು ತೀವ್ರ ಯಾತನೆಯನ್ನು ಅನುಭವಿಸಿ ಈ ಪೀಳಿಗೆಯಿಂದ ತಿರಸ್ಕೃತನಾಗಬೇಕು."ಎಂದರು. 

09.11.22 - “ಈ ದೇವಾಲಯವನ್ನು ಕೆಡವಿಬಿಡಿ, ಮೂರು ದಿನದಲ್ಲಿ ಅದನ್ನು ಪುನಃ ಎಬ್ಬಿಸುವೆನು,”

ಮೊದಲನೇ ವಾಚನ: ಯೆಜೆಕಿಯೇಲಾ 47:1-2, 8-9, 12

ಆಮೇಲೆ ಆ ಪುರುಷ ನನ್ನನ್ನು ದೇವಸ್ಥಾನದ ಬಾಗಿಲಿಗೆ ಪುನಃ ಕರೆದು ತಂದನು: ಇಗೋ, ದೇವಸ್ಥಾನದ ಹೊಸ್ತಿಲ ಕೆಳಗಿನಿಂದ ನೀರು ಹೊರಟು ಪೂರ್ವದಕಡೆಗೆ ಹರಿಯುತ್ತಿತ್ತು. (ದೇವಸ್ಥಾನ ಪೂರ್ವಾಭಿಮುಖವಾಗಿತ್ತು). ಆ ನೀರು ದೇವಸ್ಥಾನದ ಬಲಗಡೆ ಕೆಳಗಿನಿಂದ ಹೊರಟು ಬಲಿಪೀಠದ ದಕ್ಷಿಣದಲ್ಲಿ ಹರಿಯುತ್ತಿತ್ತು. ಆಗ ಅವನು ನನ್ನನ್ನು ಉತ್ತರ ಹೆಬ್ಬಾಗಿಲಿನಿಂದ ದೇವಾಲಯದ ಹೊರಗಿನ ಮಾರ್ಗವಾಗಿ ಸುತ್ತಿಸಿಕೊಂಡು ಪೂರ್ವದ ಹೆಬ್ಬಾಗಿಲಿಗೆ ಕರೆದುತಂದನು. ಅಲ್ಲಿ ನೋಡಲು ಅದರ ಬಲಗಡೆ ಮೆಲ್ಲಮೆಲ್ಲನೆ ಹರಿಯುವ ನೀರು ಕಾಣಿಸಿತು. ಆಗ ಅವನು ನನಗೆ ಹೀಗೆ ಹೇಳಿದನು: “ಈ ಪ್ರವಾಹ ಪೂರ್ವಪ್ರಾಂತ್ಯಕ್ಕೆ ಹೊರಟು ಅರಬಾ ಎಂಬ ಕಣಿವೆಗೆ ಇಳಿದು ಲವಣ ಸಮುದ್ರದ ಕಡೆಗೆ ಹರಿಯುವುದು; ದೇವಸ್ಥಾನದಿಂದ ಹೊರಟ ಪ್ರವಾಹವು ಲವಣಸಮುದ್ರಕ್ಕೆ ಸೇರಲು ಅದರ ನೀರು ಸಿಹಿಯಾಗುವುದು. ಈ ತೊರೆ ಎಲ್ಲೆಲ್ಲಿ ಹರಿಯುತ್ತದೋ ಅಲ್ಲಲ್ಲಿ ಗುಂಪು ಗುಂಪಾಗಿ ಚಲಿಸುವ ಸಕಲವಿಧ ಜಲ ಜಂತುಗಳು ಬದುಕಿ ಬಾಳುವುವು; ವಿೂನುಗಳು ತಂಡೋಪ ತಂಡವಾಗಿರುವುವು. ಈ ನೀರು ಸಮುದ್ರಕ್ಕೆ ಬೀಳಲು ಆ ನೀರೂ ಸಿಹಿಯಾಗುವುದು; ಈ ತೊರೆ ಎಲ್ಲೆಲ್ಲಿ ಹರಿದರೂ ಅಲ್ಲಲ್ಲಿ ಜೀವವುಂಟಾಗುವುದು. ತೊರೆಯ ಎರಡು ದಡಗಳಲ್ಲಿಯೂ ಸಕಲ ಫಲವೃಕ್ಷಗಳು ಬೆಳೆಯುವುವು. ಅವುಗಳ ಎಲೆ ಬಾಡದು, ಹಣ್ಣು ತೀರದು. ತೊರೆಯ ನೀರು ಪವಿತ್ರಾಲಯದೊಳಗಿಂದ ಹೊರಟುಬರುವ ಕಾರಣ ಅವು ತಿಂಗಳು ತಿಂಗಳಲ್ಲಿಯೂ ಹೊಸ ಹೊಸ ಫಲವನ್ನು ಕೊಡುತ್ತಲಿರುವುವು; ಅವುಗಳ ಹಣ್ಣು ಆಹಾರಕ್ಕೂ, ಸೊಪ್ಪು ಔಷಧಕ್ಕೂ ಅನುಕೂಲಿಸುವುವು.”

ಕೀರ್ತನೆ: 46:3,4, 5-6, 8, 11
ಶ್ಲೋಕ: ನದಿಯೊಂದು ಆನಂದಗೊಳಿಸುವುದು ದೇವನಗರವನು ಪುನೀತಗೊಳಿಸುವುದು ಪರಾತ್ಪರನಾ ನಿವಾಸವನು 

ಎರಡನೇ ವಾಚನ: 1 ಕೊರಿಂಥಿಯಾಯರಿಗೆ 3:9-11, 16-17


ಸಹೋದರರೇ, ನಾವು ದೇವರ ಸಹಕಾರ್ಮಿಕರು. ನೀವು ದೇವರೆ ಸಾಗುವಳಿ ಮಾಡುವ ಹೊಲ; ಅವರೆ ನಿರ್ಮಿಸುತ್ತಿರುವ ಮಂದಿರ. ದೇವರು ನನಗಿತ್ತ ವರದಾನಗಳಿಗೆ ಅನುಸಾರವಾಗಿ ನಾನು ಚತುರ ಶಿಲ್ಪಿಯಂತೆ ಅಸ್ತಿವಾರ ಹಾಕಿದೆ. ಇನ್ನೊಬ್ಬನು ಅದರ ಮೇಲೆ ಕಟ್ಟುತ್ತಿದ್ದಾನೆ. ಆದರೆ ಕಟ್ಟುವ ಪ್ರತಿಯೊಬ್ಬನು ತಾನು ಹೇಗೆ ಕಟ್ಟುತ್ತಿದ್ದಾನೆ ಎಂಬುದರ ಬಗ್ಗೆ ಎಚ್ಚರದಿಂದಿರಲಿ. ಈಗಾಗಲೇ ಅಸ್ತಿವಾರ ಹಾಕಲಾಗಿದೆ. ಯೇಸುಕ್ರಿಸ್ತರೇ ಆ ಅಸ್ತಿವಾರ. ಇದಲ್ಲದೆ, ಬೇರೆ ಅಸ್ತಿವಾರವನ್ನು ಯಾರೂ ಹಾಕಲಾಗದು. ನೀವು ದೇವರ ಆಲಯವಾಗಿದ್ದೀರಿ. ದೇವರ ಆತ್ಮವು ನಿಮ್ಮಲ್ಲಿ ವಾಸಿಸುತ್ತದೆಂದು ನಿಮಗೆ ಚೆನ್ನಾಗಿ ತಿಳಿದಿದೆ. ಯಾವನಾದರೂ ದೇವಾಲಯವನ್ನು ನಾಶಮಾಡಿದರೆ ದೇವರು ಅವನನ್ನು ನಾಶಮಾಡುತ್ತಾರೆ. ದೇವರ ಆಲಯವು ಪವಿತ್ರವಾದುದು. ನೀವೇ ಆ ಆಲಯ.

ಶುಭಸಂದೇಶ: ಯೋವಾನ್ನ 2:13-22

ಯೆಹೂದ್ಯರ ಪಾಸ್ಕ ಹಬ್ಬವು ಹತ್ತಿರವಾಗಿದ್ದುದರಿಂದ ಯೇಸುಸ್ವಾಮಿ ಜೆರುಸಲೇಮಿಗೆ ತೆರಳಿದರು. ಅಲ್ಲಿಯ ಮಹಾದೇವಾಲಯದಲ್ಲಿ ದನ, ಕುರಿ ಮತ್ತು ಪಾರಿವಾಳಗಳನ್ನು ಮಾರುವವರು ಮತ್ತು ನಾಣ್ಯವಿನಿಮಯ ಮಾಡುವವರು ವ್ಯಾಪಾರಕ್ಕೆ ಕುಳಿತಿದ್ದರು. ಅದನ್ನು ಕಂಡ ಯೇಸು, ಹಗ್ಗವನ್ನು ಚಾವಟಿಯಂತೆ ಹೆಣೆದು ಅದರಿಂದ ಅವರನ್ನೆಲ್ಲಾ ದೇವಾಲಯದಿಂದ ಹೊರಗಟ್ಟಿದರು. ದನಕುರಿಗಳನ್ನು ಓಡಿಸಿದರು. ನಾಣ್ಯವಿನಿಮಯ ಮಾಡುವವರ ಮೇಜುಗಳನ್ನು ಕೆಡವಿ, ಚಿಲ್ಲರೆ ಹಣವನ್ನು ಚೆಲ್ಲಿದರು. ಪಾರಿವಾಳಗಳನ್ನು ಮಾರುತ್ತಿದ್ದವರಿಗೆ, “ಇವನ್ನು ಇಲ್ಲಿಂದ ತೆಗೆದುಕೊಂಡು ಹೊರಡಿ. ನನ್ನ ಪಿತನ ಆಲಯವನ್ನು ಸಂತೆಯನ್ನಾಗಿ ಮಾಡಬೇಡಿ,” ಎಂದು ಹೇಳಿದರು. ‘ನಿನ್ನ ಆಲಯದ ಮೇಲಿನ ಅಭಿಮಾನವು ನನ್ನನ್ನು ಬೆಂಕಿಯಂತೆ ದಹಿಸುತ್ತದೆ,’ ಎಂದು ಪವಿತ್ರಗ್ರಂಥದಲ್ಲೇ ಬರೆದಿರುವ ವಾಕ್ಯವು ಶಿಷ್ಯರಿಗೆ ಆಗ ನೆನಪಾಯಿತು. ಯೆಹೂದ್ಯರು, “ಇಷ್ಟೆಲ್ಲಾ ಮಾಡಲು ನಿನಗೆ ಅಧಿಕಾರವಿದೆ ಎಂದು ರುಜುವಾತು ಪಡಿಸುವುದಕ್ಕೆ ಯಾವ ಪವಾಡವನ್ನು ಮಾಡಿ ತೋರಿಸಬಲ್ಲೆ?” ಎಂದು ಯೇಸುವನ್ನು ಪ್ರಶ್ನಿಸಿದರು. ಅದಕ್ಕೆ ಯೇಸು, “ಈ ದೇವಾಲಯವನ್ನು ಕೆಡವಿಬಿಡಿ, ಮೂರು ದಿನದಲ್ಲಿ ಅದನ್ನು ಪುನಃ ಎಬ್ಬಿಸುವೆನು,” ಎಂದು ಉತ್ತರಕೊಟ್ಟರು. ಚಕಿತರಾದ ಯೆಹೂದ್ಯರು, “ಈ ದೇವಾಲಯವನ್ನು ಕಟ್ಟಲು ನಲವತ್ತಾರು ವರ್ಷಗಳು ಹಿಡಿದಿವೆ. ನೀನು ಮೂರು ದಿನಗಳಲ್ಲೇ ಅದನ್ನು ಎಬ್ಬಿಸಬಲ್ಲೆಯಾ?” ಎಂದು ಕೇಳಿದರು. ಯೇಸು ಹೇಳಿದ್ದು ತಮ್ಮ ದೇಹವೆಂಬ ದೇಗುಲವನ್ನು ಕುರಿತು. ಅವರು ಸತ್ತು ಪುನರುತ್ಥಾನ ಹೊಂದಿದ ಬಳಿಕ ಶಿಷ್ಯರು ಅವರ ಈ ಮಾತುಗಳನ್ನು ಸ್ಮರಿಸಿಕೊಂಡರು. ಪವಿತ್ರಗ್ರಂಥದಲ್ಲೂ ಯೇಸುವಿನ ಮಾತಿನಲ್ಲೂ ಅವರಿಗೆ ಆಗ ವಿಶ್ವಾಸ ಹುಟ್ಟಿತು.

08.11.22 - "ನೀವು ಸಹ. ನಿಮಗೆ ವಿಧಿಸಿದ್ದನ್ನು ಮಾಡಿ ಮುಗಿಸಿದ ನಂತರ, ‘ನಾವು ಕೇವಲ ಆಳುಗಳು; ನಮ್ಮ ಕರ್ತವ್ಯವನ್ನು ನಾವು ಮಾಡಿದ್ದೇವೆ,’ ಎಂದುಕೊಳ್ಳಿರಿ,”

 ಮೊದಲನೇ ವಾಚನ: ತೀತನಿಗೆ 2:1-8, 11-14

ಪ್ರಿಯನೇ, ನೀನಾದರೋ ಸದ್ಬೋಧನೆಗೆ ತಕ್ಕಂತೆ ಉಪದೇಶಮಾಡು. ಮದ್ಯಾಸಕ್ತಿ ಇಲ್ಲದೆಯೂ ಗೌರವಾಸಕ್ತರಾಗಿಯೂ ಆತ್ಮಸಂಯಮಿಗಳಾಗಿಯೂ ಇರಬೇಕೆಂದು ವೃದ್ಧರಿಗೆ ಬೋಧಿಸು. ವಿಶ್ವಾಸ, ಪ್ರೀತಿ ಮತ್ತು ತಾಳ್ಮೆ ಅವರ ಮುಖ್ಯ ಗುಣಗಳಾಗಿರಬೇಕು. ಅಂತೆಯೇ, ವೃದ್ಧ ಸ್ತ್ರೀಯರು ಸಭ್ಯರಾಗಿ ವರ್ತಿಸಬೇಕು, ಅವರು ಚಾಡಿಹೇಳಬಾರದು; ಮದ್ಯಾಸಕ್ತರಾಗಿರಬಾರದು; ಸದ್ಬೋಧಕಿಯರಾಗಿರಬೇಕೆಂದು ವಿಧಿಸು. ಅವರು ನವಗೃಹಿಣಿಯರಿಗೆ, ತಮ್ಮ ತಮ್ಮ ಗಂಡಂದಿರನ್ನು ಮತ್ತು ಮಕ್ಕಳನ್ನು ಪ್ರೀತಿಸುವಂತೆ ಬುದ್ಧಿ ಹೇಳಬೇಕು. ಗೃಹಿಣಿಯರು, ವಿವೇಕ ಬುದ್ಧಿಯುಳ್ಳವರು, ಪತಿವ್ರತೆಯರು, ಗೃಹಕೃತ್ಯಗಳನ್ನು ಗಮನಿಸುವವರು, ಸುಶೀಲೆಯರು, ಗಂಡಂದಿರಿಗೆ ವಿಧೇಯರು ಆಗಿ ಬಾಳುವುದನ್ನು ವೃದ್ಧಸ್ತ್ರೀಯರಿಂದ ಕಲಿತುಕೊಳ್ಳಲಿ. ಹೀಗೆ, ದೇವರ ವಾಕ್ಯಕ್ಕೆ ಯಾವ ಅಪವಾದವೂ ಬಾರದಂತೆ ಅವರು ನಡೆದುಕೊಳ್ಳಲಿ. ಹಾಗೆಯೇ, ಯುವಕರು ಎಲ್ಲ ವಿಷಯಗಳಲ್ಲೂ ಜಿತೇಂದ್ರಿಯರಾಗಿರಬೇಕೆಂದು ನೀನು ಎಚ್ಚರಿಸು. ಸತ್ಕಾರ್ಯಗಳನ್ನು ಮಾಡುವುದರಲ್ಲಿ ನೀನೇ ಮಾದರಿಯಾಗಿರಬೇಕು ಎಂಬುದನ್ನು ಮರೆಯಬೇಡ. ನಿನ್ನ ಬೋಧನೆ ಯಥಾರ್ಥವೂ ಗಂಭೀರವೂ ಕಳಂಕರಹಿತವೂ ಆಗಿರಲಿ. ಆಗ ನಮ್ಮ ವಿರೋಧಿಗಳು ನಮ್ಮಲ್ಲಿ ತಪ್ಪು ಕಂಡುಹಿಡಿಯಲಾಗದೆ ತಾವೇ ಅಪಮಾನಿತರಾಗುತ್ತಾರೆ. ಎಲ್ಲಾ ಮಾನವರ ಜೀವೋದ್ಧಾರಕ್ಕಾಗಿಯೇ ದೇವರ ಅನುಗ್ರಹವು ಪ್ರಕಟವಾಗಿದೆ. ನಾವು ಭಕ್ತಿಹೀನ ನಡತೆಯನ್ನೂ ಪ್ರಾಪಂಚಿಕ ವ್ಯಾಮೋಹಗಳನ್ನೂ ವಿಸರ್ಜಿಸಿ, ಈ ಲೋಕದಲ್ಲಿ ವಿವೇಕಿಗಳಾಗಿಯೂ ಪ್ರಾಮಾಣಿಕರಾಗಿಯೂ ಭಕ್ತರಾಗಿಯೂ ಜೀವಿಸಬೇಕೆಂದು ಅದು ನಮಗೆ ಬೋಧಿಸುತ್ತದೆ. ಅಲ್ಲದೆ, ಮಹೋನ್ನತ ದೇವರು ಮತ್ತು ನಮ್ಮ ಉದ್ಧಾರಕ ಯೇಸುಕ್ರಿಸ್ತರು ಮಹಿಮಾರೂಪದಲ್ಲಿ ನಮಗೆ ಪ್ರತ್ಯಕ್ಷವಾಗುವ ಸೌಭಾಗ್ಯವನ್ನು ನಾವು ಎದುರುನೋಡಬೇಕೆಂದು ಅದು ಕಲಿಸುತ್ತದೆ. ಯೇಸುಕ್ರಿಸ್ತರು ನಮ್ಮನ್ನು ಸಕಲ ಅಪರಾಧಗಳಿಂದ ವಿಮೋಚಿಸಿ, ಪರಿಶುದ್ಧರನ್ನಾಗಿಸಿ, ಸತ್ಕಾರ್ಯಗಳಲ್ಲಿ ಆಸಕ್ತರಾದ ಒಂದು ಜನಾಂಗವನ್ನಾಗಿ ಮಾಡಿದರು. ನಮ್ಮನ್ನು ತಮ್ಮ ಸ್ವಂತದವರನ್ನಾಗಿಸಿಕೊಳ್ಳಲೆಂದು ತಮ್ಮನ್ನೇ ನಮಗಾಗಿ ಸಮರ್ಪಿಸಿಕೊಟ್ಟನು.

ಕೀರ್ತನೆ: 37:3-4, 18, 23, 27, 29
ಶ್ಲೋಕ: ಸಜ್ಜನರ ಜೀವೋದ್ದಾರ ಪ್ರಭುವಿನಿಂದ  

ಶುಭಸಂದೇಶ: ಲೂಕ 17:7-10


ಯೇಸುಸ್ವಾಮಿ ತಮ್ಮ ಶಿಷ್ಯರನ್ನುದ್ದೇಶಿಸಿ: “ನಿಮಗೆ ಒಬ್ಬ ಆಳಿದ್ದಾನೆಂದು ಭಾವಿಸೋಣ. ಅವನು ಹೊಲ ಉತ್ತೋ, ಕುರಿ ಮೇಯಿಸಿಯೋ ಮನೆಗೆ ಬರುತ್ತಾನೆ. ಬಂದಾಕ್ಷಣವೇ, ‘ಬಾ, ನನ್ನೊಂದಿಗೆ ಊಟಮಾಡು,’ ಎಂದು ನಿಮ್ಮಲ್ಲಿ ಯಾರಾದರೂ ಅವನಿಗೆ ಹೇಳುತ್ತಾರೆಯೇ? ಇಲ್ಲ. ಅದಕ್ಕೆ ಬದಲಾಗಿ ‘ಊಟ ಸಿದ್ಧಮಾಡು; ನಾನು ಊಟಮಾಡಿ ಮುಗಿಸುವ ತನಕ ನಡುಕಟ್ಟಿಕೊಂಡು ನನಗೆ ಉಪಚಾರಮಾಡು. ಅನಂತರ ನೀನು ಊಟಮಾಡುವೆಯಂತೆ,’ ಎಂದು ಹೇಳುತ್ತಾರಲ್ಲವೇ? ತಮ್ಮ ಆಜ್ಞೆಯ ಪ್ರಕಾರ ನಡೆದುಕೊಂಡ ಆಳಿಗೆ ಅವರು ಕೃತಜ್ಞತೆ ಸಲ್ಲಿಸುತ್ತಾರೆಯೇ? ಇಲ್ಲ. ಹಾಗೆಯೇ ನೀವು ಸಹ. ನಿಮಗೆ ವಿಧಿಸಿದ್ದನ್ನು ಮಾಡಿ ಮುಗಿಸಿದ ನಂತರ, ‘ನಾವು ಕೇವಲ ಆಳುಗಳು; ನಮ್ಮ ಕರ್ತವ್ಯವನ್ನು ನಾವು ಮಾಡಿದ್ದೇವೆ,’ ಎಂದುಕೊಳ್ಳಿರಿ,” ಎಂದರು.

07.11.22


ಮೊದಲನೇ ವಾಚನ: ತೀತನಿಗೆ:  1: 1-9

ಕ್ರಿಸ್ತ ವಿಶ್ವಾಸದಲ್ಲಿ ಪುತ್ರನಾಗಿರುವ ತೀತನಿಗೆ - ದೇವರ ದಾಸನೂ ಯೇಸು ಕ್ರಿಸ್ತರ ಪ್ರೇಷಿತನೂ ಆದ ಪೌಲನು ಬರೆಯುವ ಪತ್ರ. ತಂದೆಯಾದ ದೇವರೂ ನಮ್ಮ ಉದ್ದಾರಕರಾದ ಯೇಸು ಕ್ರಿಸ್ತರೂ ನಿನಗೆ ಕೃಪಾಶೀರ್ವಾದವನ್ನೂ ಶಾಂತಿಸಮಾಧಾನವನ್ನೂ ಅನುಗ್ರಹಿಸಲಿ! ದೇವರು, ತಾವು ಆರಿಸಿಕೊಂಡಿರುವ ಜನರ ವಿಶ್ವಾಸವನ್ನು ದೃಢಪಡಿಸಲು ಮತ್ತು ಭಕ್ತಿಯನ್ನು ವೃದ್ದಿಗೊಳಿಸಿ ಅಮರ ಜೀವದತ್ತ ಕರೆದೊಯ್ಯುವ ಸತ್ಯಗಳನ್ನು ಅವರಿಗೆ ಭೋಧಿಸಿಲು ನನ್ನನ್ನು ನೇಮಿಸಿದ್ದಾರೆ. ಈ ಅಮರ ಜೀವವನ್ನು ಕೊಡುವುದಾಗಿ  ಸತ್ಯಪರರಾದ ದೇವರು ಆದಿಯಿಂದಲೂ ನಮಗೆ ವಾಗ್ದಾನ ಮಾಡಿದ್ದರು. ಸೂಕ್ತ ಕಾಲವು ಬಂದಾಗ ಈ ವಾಗ್ದಾನವನ್ನು ಈಡೇರಿಸಿ ತಮ್ಮ ಸಂದೇಶವನ್ನು ಪ್ರಕಟಿಸಿದರು. ನನಗೊಪ್ಪಿಸುವ ಈ ಸಂದೇಶವನ್ನು ಜಗದ್ರಕ್ಷರಾದ ದೇವರ ಆಜ್ಞಾನುಸಾರ ನಾನು ಸಾರುತ್ತಿದ್ದೇನೆ. ನೀನು ಕ್ರೇಟ್ ದ್ವೀಪದಲ್ಲಿ ಇನ್ನೂ ಸರಿಪಡಿಸಬೇಕಾದ ಕೆಲಸಗಳನ್ನು ಕ್ರಮಪಡಿಸಿ, ಅಲ್ಲಿಯ ಪ್ರತಿಯೊಂದು ಪಟ್ಟಣಕ್ಕೂ ಸಭೆಯ ಹಿರಿಯರನ್ನು ನೇಮಿಸಬೇಕೆಂದು ನಿನ್ನನ್ನು ಅಲ್ಲೇ ಬಿಟ್ಟು ಬಂದೆ. ನಾನು ಕೊಟ್ಟ ಸಲಹೆಗಳನ್ನು ಜ್ನಾಪಿಸಿಕೋ; ಸಭಾ ಹಿರಿಯನು ನಿಂದಾರಹಿತನು ಏಕ ಪತ್ನಿ ವೃತಸ್ಥನು ಆಗಿರಬೇಕು. ಆತನ ಮಕ್ಕಳು ವಿಶ್ವಾಸಿಗಳಾಗಿರಬೇಕು. ಅವರು ಸ್ವೇಚ್ಛಾಚಾರಿಗಳಾಗಿರಬಾರದು, ಅವಿಧೇಯರಾಗಿರಬಾರದು. ಏಕೆಂದರೆ ಸಭಾಧ್ಯಕ್ಷನು ದೇವರ ಸೇವೆಯಲ್ಲಿ ಮೇಲ್ವಿಚಾರನಾಗಿರುವುದರಿಂದ ನಿಂದಾರಹಿತನಾಗಿರಬೇಕು. ಆತನು ಗರ್ವಿ ಅಥವಾ ಮುಂಗೋಪಿ ಆಗಿರಬಾರದು. ಕುಡಿತವಾಗಲಿ, ಹಿಂಸಾಚಾರವಾಗಲಿ, ಹಿಂಸಾಪ್ರವೃತ್ತಿಯಾಗಲಿ ಅವನಲ್ಲಿರಬಾರದು. ಅವನು ಲಾಭಕೋರನಾಗಿರಬಾರದು. ಅತಿಥಿ ಸತ್ಕಾರಮಾಡುವವನು ಒಳ್ಳೆಯದನ್ನು ಪ್ರೀತಿಸುವವನು ಆಗಿರಬೇಕು. ಇಂಥವನು ಸ್ವಸ್ಥ ಚಿತ್ತನೂ ನೀತಿವಂತನೂ ಸದ್ಭಕ್ತನೂ ಆತ್ಮಸಂಯಮವುಳ್ಳವನೂ ಆಗಿರಬೇಕು. ವಿಶ್ವಾಸಿಸಲು ಯೋಗ್ಯವಾದ ಹಾಗೂ ಕ್ರೈಸ್ತ ತತ್ವಗಳಿಗೆ ಅನುಗುಣವಾದ ಸಿದ್ದಾಂತಗಳನ್ನು ಅವನು ಭದ್ರವಾಗಿ ಹಿಡಿದವನಾಗಿರಬೇಕು. ಆಗ ಸದ್ಬೋಧನೆಯಿಂದ ಇತರರನ್ನು ಪ್ರೋತ್ಸಾಹಿಸುವುದಕ್ಕು ಅದಕ್ಕೆ ವ್ಯತಿರಿಕ್ತವಾಗಿ ನೆಡೆಯುವವರ ತಪ್ಪುಗಳನ್ನು ಎತ್ತಿತೋರಿಸುವುದಕ್ಕು ಆತನು ಸಮರ್ಥನಾಗುತ್ತಾನೆ.

ಕೀರ್ತನೆ: 24: 1ಬಿ-2, 3-4ಎಬಿ, 5-6
ಶ್ಲೋಕ: ಇಂಥವರೇ ದೇವರ ದರ್ಶಾನಾಭ್ಯರ್ಥಿಗಳು.

ಶುಭಸಂದೇಶ: ಲೂಕ: 17: 1-6


ಯೇಸುಸ್ವಾಮಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, "ಪಾಪಪ್ರಚೋದನೆಗಳು ಬಂದೇಬರುತ್ತವೆ. ಆದರೆ ಅವು ಯಾರಿಂದ ಬರುತ್ತವೋ ಅವನಿಗೆ ಧಿಕ್ಕಾರ! ಅಂಥವನು ಈ ಚಿಕ್ಕವರಲ್ಲಿ ಒಬ್ಬನಿಗೆ ಪಾಪಕ್ಕೆ ಕಾರಣನಾಗುಚುದಕ್ಕಿಂತ, ಬೀಸುವ ಕಲ್ಲನ್ನು ಕುತ್ತಿಗೆಗೆ ಬಿಗಿಸಿಕೊಂಡು ಸಮುದ್ರದಲ್ಲಿ ದಬ್ಬಿಸಿಕೊಳ್ಳುವುದೇ ಲೇಸು. ನೀವಾದರೋ ಎಚ್ಚರಿಕೆಯಿಂದಿರಿ!" "ನಿನ್ನ ಸಹೋದರನು ತಪ್ಪು ಮಾಡಿದರೆ ಅವನನ್ನು ಕಂಡಿಸು; ಪಶ್ಚಾತ್ತಾಪಪಟ್ಟರೆ ಕ್ಷಮಿಸಿಬಿಡು. ಅವನು ದಿನಕ್ಕೆ ಏಳು ಸಾರಿ ನಿನಗೆ ವಿರುದ್ದ ತಪ್ಪು ಮಾಡಿ ಪ್ರತಿಯೊಂದು ಸಾರಿಯೂ ಪಶ್ಚಾತ್ತಾಪಪಟ್ಟು ನಿನ್ನ ಬಳಿಗೆ ಬಂದು, ’ಕ್ಷಮಿಸು,’ ಎಂದು ಕೇಳಿಕೊಂಡರೆ ನೀನು ಅವನನ್ನು ಕ್ಷಮಿಸಲೇಬೇಕು," ಎಂದರು. "ಸ್ವಾಮೀ, ನಮ್ಮ ವಿಶ್ವಾಸವನ್ನು ಹೆಚ್ಚಿಸಿರಿ" ಎಂದು ಪ್ರೇಷಿತರು ಕೇಳಿಕೊಂಡರು. ಆಗ ಯೇಸುಸ್ವಾಮಿ, "ಸಾಸಿವೆ ಕಾಳಿನಷ್ಟು ವಿಶ್ವಾಸ ನಿಮ್ಮಲ್ಲಿದ್ದು, ನೀವು ಈ ಅತ್ತಿಮರಕ್ಕೆ, ’ನೀನು ಬೇರು ಸಹಿತ ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ನಾಟಿಕೋ.’ ಎಂದು ಆಜ್ನಾಪಿಸಿದ್ದೇ ಆದರೆ ಅದು ನಿಮಗೆ ವಿಧೇಯವಾಗಿ ನಡೆದುಕೊಳ್ಳುವುದು," ಎಂದರು.

06.11.22

ಮೊದಲನೇ ವಾಚನ: 2 ಮಕ್ಕಬಿಯರು 7:1-2, 9-14

ಆ ಕಾಲದಲ್ಲಿ ಏಳು ಮಂದಿ ಸಹೋದರರನ್ನು ಅವರ ತಾಯಿಯೊಂದಿಗೆ, ಅರಸನ ಅಪ್ಪಣೆಯ ಮೇರೆಗೆ ದಸ್ತಗಿರಿ ಮಾಡಲಾಯಿತು. ನಿಷೇಧಿಸಲಾಗಿದ್ದ ಹಂದಿಯ ಮಾಂಸವನ್ನು ತಿನ್ನಬೇಕೆಂದು ಅವರನ್ನು ಬಲವಂತ ಪಡಿಸಲಾಗಿತ್ತು. ಚಾಟಿಯಿಂದಲೂ ಬಾರುಗಳಿಂದಲೂ ಹೊಡೆದು ಅವರನ್ನು ಬಾಧಿಸಿದರು ಅವರಲ್ಲೊಬ್ಬನು ಇತರರ ಪರವಾಗಿ ಮಾತನಾಡುತ್ತಾ, "ನಮ್ಮಿಂದ ನೀವು ಏನನ್ನು ತಿಳಿದುಕೊಳ್ಳಬಯಸುತ್ತೀರಿ? ನಮ್ಮ ಪೂರ್ವಜರ ಧರ್ಮವಿಧಿಗಳನ್ನು ಉಲ್ಲಂಘಿಸುವುದಕ್ಕೆ ಬದಲು, ನಾವು ಸಾಯುವುದಕ್ಕೆ ಸಿದ್ದ" ಎಂದನು. ಎರಡನೆಯವನು ಕೊನೆಯುಸಿರು ಎಳೆಯುತ್ತಿರುವಾಗ ಅರಸನನ್ನು ನೋಡಿ, "ಹೇ ಕಟುಕನೇ, ಇಲ್ಲಿರುವಾಗ ನಮ್ಮ ಜೀವವನ್ನು ತೆಗೆದು ಬಿಡುತ್ತೀಯಾ ಸರಿ; ಆದರೆ ವಿಶ್ವದ ಒಡೆಯರಾದ ದೇವರು, ನಮ್ಮನ್ನು ಅಮರ ಹಾಗೂ ಪುನಶ್ಚೇತನಗೊಳಿಸುವ ಜೀವಕ್ಕೆ ಎಬ್ಬಿಸುತ್ತಾರೆ; ಕಾರಣ, ನಾವು ಅವರ ಆಜ್ಞಾಪಾಲನೆಗಾಗಿ ಪ್ರಾಣಬಿಟ್ಟಿದೇವೆ," ಎಂದನು. ಅವನ ತರುವಾಯ ಅವರು ವಿನೋದಕ್ಕಾಗಿ ಮೂರನೆಯವನನ್ನು ಹಿಡಿದುಕೊಂಡರು. ನಾಲಗೆ ಚಾಚಬೇಕೆಂದು ಹೇಳಿದಾಗ ಅವನು ತಕ್ಷಣವೇ ನಾಲಗೆಯನು ಚಾಚಿದನು; ಧೈರ್ಯದಿಂದ ತನ್ನ ಕೈಗಳನ್ನೂ ಮುಂದಕ್ಕೆ ಒಡ್ಡುತ್ತಾ, "ನಾನು ಇವುಗಳನ್ನು ಪರಲೋಕದಿಂದ ಪಡೆದೆನು. ಅವರ ನಿಯಮಕ್ಕಾಗಿ ಇವುಗಳನ್ನು ತೊರೆಯುತ್ತೇನೆ. ಆದರೆ ಪುನಃ ನಾನು ಅವುಗಳನ್ನು ಪಡೆಯುವೆನು, ಇದು ನನ್ನ ದೃಡನಂಬಿಕೆ!" ಎಂದನು. ತತ್ಪರಿಣಾಮವಾಗಿ, ರಾಜನೂ ಅವನೊಂದಿಗಿದ್ದ ಇತರರೂ ಈ ಯಾವಕನಧೈರ್ಯವನ್ನು ನೋಡಿ ನಿಬ್ಬೆರಗಾದರು; ಅವನು ತನ್ನ ಉಪದ್ರವಗಳನ್ನು ಕಿಂಚಿತ್ತು ಲೆಕ್ಕಿಸಲಿಲ್ಲ. ಅವನು ಸತ್ತಮೇಲೆ, ನಾಲ್ಕನೆಯವನನ್ನು ಸಹ ಅದೇ ಪ್ರಕಾರ ಹಿಂಸಿಸಿ ಉಪದ್ರವಪಡಿಸಿದರು. ಅವನು ಪ್ರಾಣಬಿಡುವಾಗ, "ಮರ್ತ್ಯಮಾನವರ ಕೈಗಳಿಂದ ಸಾವನ್ನು ಅನುಭವಿಸಿ, ದೇವರಿಂದ ಮರಳಿ ಎಬ್ಬಿಸಲ್ಪಡುವೆನೆಂಬ ದೇವದತ್ತ ನಿರೀಕ್ಷೆಯನ್ನು ಎದುರುನೋಡುವುದು ಶ್ರೇಯಸ್ಕರ; ನೀವಾದರೋ ಜೀವಕ್ಕೆ ಪುನಃ ಉತ್ಥಾನವಾಗುವಂತಿಲ್ಲ," ಎಂದನು.

ಕೀರ್ತನೆ: 17:1, 5-6, 8, 15
ಶ್ಲೋಕ: ಪ್ರಭೂ, ಎಚ್ಚೆತ್ತು ನಿನ್ನ ಮುಖದರ್ಶನದಿಂದ ತೃಪ್ತನಾಗುವೆನು

ಎರಡನೇ ವಾಚನ: 2 ಥೆಸಲೋನಿಯರಿಗೆ 2:16-3:5

ಸಹೋದರರೇ, ನಮ್ಮನ್ನು ಪ್ರೀತಿಸಿ ನಿತ್ಯಾದರಣೆಯನ್ನೂ ಉತ್ತಮ ನಿರೀಕ್ಷೆಯನ್ನೂ ಅನುಗ್ರಹವಾಗಿ ಕೊಟ್ಟಿರುವ ನಮ್ಮ ಪ್ರಭುವಾದ ಯೇಸುಕ್ರಿಸ್ತರು ಹಾಗೂ ಪಿತನಾದ ದೇವರು ನಿಮ್ಮ ಹೃನ್ಮನಗಳನ್ನು ಉತ್ತೇಜನಗೊಳಿಸಲಿ. ಸಕಲ ಸತ್ಕಾರ್ಯಗಳಲ್ಲೂ ಸನ್ನುಡಿಯಲ್ಲು ನಿಮ್ಮನ್ನು ದೃಢಪಡಿಸಲಿ. ಕೊನೆಯದಾಗಿ ಸಹೋದರರೇ, ನಮಗಾಗಿಯೂ ಪ್ರಾರ್ಥನೆಮಾಡಿ; ಪ್ರಭುವಿನ ಸಂದೇಶ ನಿಮ್ಮಲ್ಲಿ ಹಬ್ಬಿಹರಡಿದಂತೆ ಎಲ್ಲೆಲ್ಲಿಯೂ ಪಸರಿಸಿ ಪ್ರಖ್ಯಾತವಾಗಲಿ. ದುಷ್ಟರ ಹಾಗೂ ಕೆಡುಕರ ಬಲೆಗೆ ನಾವು ಬೀಳದಂತೆ ಪ್ರಾರ್ಥಿಸಿರಿ. ಏಕೆಂದರೆ, ವಿಶ್ವಾಸವೆಂಬುದು ಎಲ್ಲರಲ್ಲಿಯೂ ಇರುವುದಿಲ್ಲ. ಪ್ರಭು ವಿಶ್ವಾಸಕ್ಕೆ ಪಾತ್ರರು. ಅವರು ನಿಮ್ಮನ್ನು ಸದೃಢರನ್ನಾಗಿ ಮಾಡಿ ಕೇಡಿನಿಂದ ನಿಮ್ಮನ್ನು ಕಾಪಾಡುವರು. ನಾವು ನಿಮಗಿತ್ತ ಆಜ್ಞೆಗಳನ್ನು ಪಾಲಿಸಿಕೊಂಡು ಬರುತ್ತಿದ್ದೀರಿ; ಇನ್ನು ಮುಂದೆಯೂ ಪಾಲಿಸುತ್ತೀರಿ ಎಂದು ನಿಮ್ಮ ವಿಷಯವಾಗಿ ಪ್ರಭುವಿನಲ್ಲಿ ನಮಗೆ ಭರವಸೆಯಿದೆ. ದೇವರ ಪ್ರೀತಿಯನ್ನೂ ಕ್ರಿಸ್ತ ಯೇಸುವಿನ ಸಹನೆಯನ್ನೂ ನೀವು ಕಲಿತುಕೊಳ್ಳುವಂತೆ, ಪ್ರಭುವೇ ನಿಮ್ಮ ಅಂತರಂಗವನ್ನು ಬೆಳಗಿಸಲಿ.

ಶುಭಸಂದೇಶ: ಲೂಕ 20:27-38

ಸತ್ತಮೇಲೆ ಪುನರುತ್ಥಾನ ಇಲ್ಲ ಎಂದು ವಾದಿಸುತ್ತಿದ್ದ ಸದ್ದುಕಾಯರಲ್ಲಿ ಕೆಲವರು ಯೇಸುಸ್ವಾಮಿಯ ಬಳಿಗೆ ಬಂದು ಈ ಪ್ರಶ್ನೆಹಾಕಿದರು: "ಬೋಧಕರೇ, "ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ಹೆಂಡತಿಯನ್ನು ಅವನ ತಮ್ಮನು ಮದುವೆ ಮಾಡಿಕೊಂಡು ಅಣ್ಣನಿಗೆ ಸಂತಾನ ಪಡೆಯಬೇಕು," ಎಂದು ಮೋಶೆ ನಮಗಾಗಿ ಬರೆದಿಟ್ಟಿದ್ದಾನಲ್ಲವೆ? ಒಮ್ಮೆ ಏಳುಮಂದಿ ಅಣ್ಣತಮ್ಮಂದಿರಿದ್ದರು. ಅವರಲ್ಲಿ ಮೊದಲನೆಯವನಿಗೆ ಮದುವೆಯಾಯಿತು; ಆದರೆ ಅವನು ಮಕ್ಕಳಿಲ್ಲದೆ ಮೃತನಾದ. ಅವನ ಹೆಂಡತಿಯನ್ನು ಎರಡನೆಯವನು, ಆನಂತರ ಮೂರನೆಯವನು, ತದನಂತರ ಮಿಕ್ಕವರು, ಹೀಗೆ ಏಳು ಮಂದಿಯೂ ಒಬ್ಬರಾದ ಮೇಲೆ ಒಬ್ಬರು ಮದುವೆಯಾಗಿ ಸಂತಾನ ಇಲ್ಲದೆಯೇ ನಿಧನರಾದರು. ಕಟ್ಟಕಡೆಗೆ ಆ ಮಹಿಳೆಯೂ ಮರಣ ಹೊಂದಿದಳು. ಹೀಗಿರುವಲ್ಲಿ ಪುನರುತ್ಥಾನದ ದಿನ ಸತ್ತವರೆಲ್ಲರೂ ಜೀವದಿಂದ ಎದ್ದುಬರುವಾಗ, ಆಕೆ ಯಾರ ಪತ್ನಿಯಾಗುವಳು?" ಏಳು ಮಂದಿ ಸಹೋದರರೂ ಆಕೆಯನ್ನು ವಿವಾಹವಾಗಿದ್ದಾರಲ್ಲವೆ?" ಎಂದರು. ಅದಕ್ಕೆ ಯೇಸು, "ಈ ಲೋಕದ ಜೀವನದಲ್ಲಿ ಜನರು ಮದುವೆ ಮಾಡಿಕೊಳ್ಳುತ್ತಾರೆ, ಮದುವೆ ಮಾಡಿಕೊಡುತ್ತಾರೆ. ಆದರೆ ಸತ್ತವರು ಪುನರುತ್ಥಾನ ಹೊಂದಿ ಮರುಲೋಕ ಜೀವನಕ್ಕೆ ಯೋಗ್ಯರಾದಗ ಮದುವೆ ಮಾಡಿಕೊಳ್ಳುವುದೂ ಇಲ್ಲ, ಮದುವೆ ಮಾಡಿಕೊಡುವುದೂ ಇಲ್ಲ. ಅವರು ಅಲ್ಲಿ ದೇವದೂತರಿಗೆ ಸಮಾನರಾಗಿರುವರು; ಪುನರುತ್ಥಾನದ ಫಲವಾಗಿರುವ ಅವರು ದೇವರ ಮಕ್ಕಳಾಗಿರುವರು. ಸತ್ತವರು ಪುನರುತ್ಥಾನ ಹೊಂದುವುದನ್ನು ಮೋಶೆಯ ಗ್ರಂಥದಲ್ಲಿ, ಅಂದರೆ "ಉರಿಯುವ ಪೊದೆ"ಯ ಪ್ರಸ್ತಾಪವಿರುವ ಭಾಗದಲ್ಲಿ ಸ್ಪಷ್ಟಪಡಿಸಲಾಗಿದೆ. ಅಲ್ಲಿ ಸರ್ವೇಶ್ವರನನ್ನು, "ಅಬ್ರಹಾಮನ ದೇವರು, ಇಸಾಕನ ದೇವರು, ಯಕೋಬನ ದೇವರು ಆಗಿದ್ದಾರೆ" ಎಂದು ಹೇಳಲಾಗಿದೆ. ಹೀಗಿರುವಲ್ಲಿ ದೇವರು ಜೀವಂತ ದೇವರೇ ಹೊರತು ಮೃತರ ದೇವರಲ್ಲ; ಅವರ ದೃಷ್ಟಿಯಲ್ಲಿ ಸರ್ವರೂ ಜೀವಂತರು," ಎಂದರು.

05.11.22 - “ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾಗದು"

 ಮೊದಲನೇ ವಾಚನ: ಫಿಲಿಪ್ಪಿಯರಿಗೆ 4:10-19

ಸಹೋದರರೇ, ನನ್ನ ಬಗ್ಗೆ ನಿಮಗಿರುವ ಮಮತೆಯು ಇಷ್ಟು ದಿನಗಳಾದ ಮೇಲೆ ಪುನಃ ಅರಳಿದ್ದಕ್ಕೆ ಪ್ರಭುವಿನಲ್ಲಿ ನಾನು ಬಹಳ ಸಂತೋಷಪಡುತ್ತೇನೆ. ಇಂಥ ಮಮತೆ ನಿಮಗೆ ಮೊದಲಿನಿಂದ ಇತ್ತಾದರೂ ಅದನ್ನು ವ್ಯಕ್ತಪಡಿಲು ನಿಮಗೆ ಸೂಕ್ತ ಸಂದರ್ಭ ಒದಗಿರಲಿಲ್ಲ. ನಾನು ಯಾವುದೋ ಕೊರತೆಯಲ್ಲಿರುವೆನೆಂದು ಸೂಚಿಸಲು ಇದನ್ನು ಹೇಳುತ್ತಿಲ್ಲ. ನಾನು ಯಾವ ಸ್ಥಿತಿಯಲ್ಲಿದ್ದರೂ ತೃಪ್ತಿಯಿಂದಿರಲು ಕಲಿತುಕೊಂಡಿದ್ದೇನೆ. ಬಡತನ ಇರಲಿ, ಸಿರಿತನವಿರಲಿ, ಕೊರತೆಯಿರಲಿ, ಸಮೃದ್ಧಿ ಇರಲಿ, ಹಸಿದಿರಲಿ, ಹೊಟ್ಟೆ ತುಂಬಿರಲಿ - ಯಾವ ಸ್ಥಿತಿಯಲ್ಲಿದ್ದರೂ, ಎಲ್ಲಾ ವೇಳೆಯಲ್ಲಿಯೂ ತೃಪ್ತನಾಗಿರುವ ರಹಸ್ಯವನ್ನು ತಿಳಿದಿದ್ದೇನೆ. ಸರ್ವೇಶನ ಶಕ್ತಿಯಿಂದ ಸರ್ವವನ್ನೂ ಸಾಧಿಸುವ ಸಾಮರ್ಥ್ಯ ನನಗಿದೆ. ಆದರೂ ನನ್ನ ಸಂಕಷ್ಟಗಳಲ್ಲಿ ಸಹಾಯ ಮಾಡಿದುದು ನಿಮ್ಮ ಸೌಜನ್ಯವೇ ಸರಿ. ಫಿಲಿಪ್ಪಿಯ ಸಹೋದರರೇ, ನಾನು ಶುಭಸಂದೇಶವನ್ನು ಸಾರಲು ಹೊರಟ ಪ್ರಾರಂಭದ ದಿನಗಳಲ್ಲಿ ಮಕೆದೋನಿಯವನ್ನು ಬಿಟ್ಟುಹೋದಾಗ ನೀವಲ್ಲದೆ ಬೇರೆ ಯಾವ ಸಭೆಯೂ ನನ್ನ ಆಯ-ವ್ಯಯಗಳಲ್ಲಿ ನೆರವಾಗಿರಲಿಲ್ಲ. ಇದು ನಿಮಗೆ ತಿಳಿದ ವಿಷಯ. ನಾನು ಥೆಸಲೋನಿಕದಲ್ಲಿದ್ದಾಗಲೂ ನನ್ನ ಕೊರತೆಯನ್ನು ನೀಗಿಸಲು ಒಂದೆರಡು ಬಾರಿ ಧನಸಹಾಯವನ್ನು ಕಳುಹಿಸಿದಿರಿ. ನಿಮ್ಮಿಂದ ಸಹಾಯ ಪಡೆಯಬೇಕೆಂಬುದು ನನ್ನ ಉದ್ದೇಶವಲ್ಲ. ಆದರೆ ಈ ಸಹಾಯದಿಂದ ನಿಮಗೆ ಮುಂದೆ ದೊರಕುವ ಪ್ರತಿಫಲವು ಸಮೃದ್ಧಿಯಾಗಲೆಂದೇ ನನ್ನ ಇಚ್ಛೆ. ನೀವು ಕಳುಹಿಸಿಕೊಟ್ಟಿದ್ದೆಲ್ಲವೂ ನನಗೆ ಸಂದಾಯವಾಗಿದೆ. ಈಗ ಅಗತ್ಯಕ್ಕಿಂತಲೂ ಅಧಿಕವಾಗಿದೆ, ಯಥೇಚ್ಛವಾಗಿದೆ. ಎಪಫ್ರೋದಿತನ ಮೂಲಕ ನೀವು ಕಳುಹಿಸಿದ್ದೆಲ್ಲವೂ ನನಗೆ ತಲುಪಿದೆ. ನಿಮ್ಮ ಕೊಡುಗೆ ಸುಗಂಧ ಕಾಣಿಕೆಯಾಗಿದೆ, ದೇವರಿಗೆ ಮೆಚ್ಚಿಗೆಯಾದ ಇಷ್ಟಾರ್ಥ ಬಲಿಯಾಗಿದೆ. ನನ್ನ ದೇವರು ತಮ್ಮ ಮಹದೈಶ್ವರ್ಯದಿಂದ ನಿಮ್ಮ ಅಗತ್ಯಗಳನ್ನೆಲ್ಲಾ ಕ್ರಿಸ್ತಯೇಸುವಿನ ಮುಖಾಂತರ ಪೂರೈಸುವರು. ನಮ್ಮ ತಂದೆಯಾದ ದೇವರಿಗೆ ನಿರಂತವೂ ಮಹಿಮೆ ಸಲ್ಲಲಿ!

ಕೀರ್ತನೆ: 112:1-2, 5-6, 8, 9

ಶ್ಲೋಕ: ಪ್ರಭುವಿನಲಿ ಭಯಭಕ್ತಿಯುಳ್ಳವನು ಧನ್ಯನು 

ಶುಭಸಂದೇಶ: ಲೂಕ 16:9-15

ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ನಾನು ಹೇಳುವುದನ್ನು ಗಮನಿಸಿರಿ; ಲೌಕಿಕ ಆಸ್ತಿಪಾಸ್ತಿಯಿಂದ ಗೆಳೆಯರನ್ನು ಗಳಿಸಿಕೊಳ್ಳಿರಿ. ಅದು ವ್ಯಯವಾಗಿ ಹೋದಾಗ ನಿಮ್ಮನ್ನು ಅಮರ ನಿವಾಸಕ್ಕೆ ಸ್ವಾಗತಿಸಲಾಗುವುದು. ಸಣ್ಣ ವಿಷಯಗಳಲ್ಲಿ ಪ್ರಾಮಾಣಿಕನಾಗಿ ನಡೆದುಕೊಳ್ಳುವವನು ದೊಡ್ಡ ವಿಷಯಗಳಲ್ಲೂ ಪ್ರಾಮಾಣಿಕನಾಗಿ ನಡೆದುಕೊಳ್ಳುತ್ತಾನೆ. ಸಣ್ಣ ವಿಷಯಗಳಲ್ಲಿ ದ್ರೋಹ ಮಾಡುವವನು ದೊಡ್ಡ ವಿಷಯಗಳಲ್ಲೂ ದ್ರೋಹಮಾಡುತ್ತಾನೆ. ಲೌಕಿಕ ಆಸ್ತಿಪಾಸ್ತಿಗಳ ವಿಷಯದಲ್ಲಿ ನೀವು ಪ್ರಾಮಾಣಿಕರಾಗಿ ನಡೆದುಕೊಳ್ಳದೆಹೋದರೆ, ನಿಮ್ಮನ್ನು ನಂಬಿ ನೈಜ ಸಂಪತ್ತನ್ನು ನಿಮ್ಮ ವಶಕ್ಕೆ ಕೊಡುವವರಾರು? ಇನ್ನೊಬ್ಬರಿಗೆ ಸೇರಿದ ವಸ್ತುಗಳ ವಿಷಯದಲ್ಲಿ ನೀವು ಪ್ರಾಮಾಣಿಕರಾಗಿ ನಡೆದುಕೊಳ್ಳದೆಹೋದರೆ, ನಿಮ್ಮ ಸ್ವಂತಕ್ಕೆ ಏನನ್ನಾದರೂ ಕೊಡುವವರಾರು? “ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾಗದು; ಅವನು ಒಬ್ಬನನ್ನು ದ್ವೇಷಿಸಿ, ಇನ್ನೊಬ್ಬನನ್ನು ಪ್ರೀತಿಸುತ್ತಾನೆ; ಅಥವಾ ಒಬ್ಬನೊಡನೆ ಹೊಂದಿಕೊಂಡು ಇನ್ನೊಬ್ಬನನ್ನು ತಾತ್ಸಾರ ಮಾಡುತ್ತಾನೆ. ದೇವರಿಗೂ ದ್ರವ್ಯಕ್ಕೂ ಒಟ್ಟಿಗೆ ಸೇವೆಮಾಡಲು ನಿಮ್ಮಿಂದಾಗದು,” ಎಂದರು. ಹಣದಾಶೆಯಿಂದ ಕೂಡಿದ್ದ ಫರಿಸಾಯರು ಈ ಮಾತುಗಳನ್ನೆಲ್ಲಾ ಕೇಳಿ, ಯೇಸುವನ್ನು ಪರಿಹಾಸ್ಯಮಾಡಿದರು. ಅದಕ್ಕೆ ಯೇಸು, “ನೀವು ಮಾನವರ ಮುಂದೆ ಸತ್ಪುರುಷರೆಂದು ತೋರಿಸಿಕೊಳ್ಳುತ್ತೀರಿ; ದೇವರಾದರೋ ನಿಮ್ಮ ಅಂತರಂಗವನ್ನು ಅರಿತಿದ್ದಾರೆ. ಮಾನವರಿಗೆ ಅಮೂಲ್ಯವಾದುದು ದೇವರಿಗೆ ಅಸಹ್ಯವಾದುದು,” ಎಂದರು.

04.11.22

ಮೊದಲನೆಯ ವಾಚನ: ಪೌಲನು ಫಿಲಿಪ್ಪಿಯರಿಗೆ ಬರೆದ ಪತ್ರದಿಂದ ವಾಚನ 3:17--4:1

ಸಹೋದರರೇ, ನೀವು ನನ್ನನ್ನು ಅನುಸರಿಸಿರಿ. ನಮ್ಮಂತೆ ಆದರ್ಶಜೀವನ ನಡೆಸುವವರನ್ನು ಅನುಸರಿಸಿ ಬಾಳಿರಿ. ಕ್ರಿಸ್ತ ಯೇಸುವಿನ ಶಿಲುಬೆಗೆ ವಿರೋಧವಾಗಿ ನಡೆಯುವವರು ಆನೇಕರಿದ್ದಾರೆ. ಇದನ್ಯು ನಾನು ಹಲವಾರು ಸಾರಿ ತಿಳಿಸಿರುವಂತೆ ಈಗಲೂ ಅತೀವ ದುಃಖದಿಂದ ಹೇಳುತ್ತಿದ್ದೇನೆ. ಹೊಟ್ಟೆಯೇ ಅವರ ದೇವರು, ನಾಚಿಕೆಪಡಿಸುವ ಕಾರ್ಯಗಳಲ್ಲಿಯೇ ಅವರಿಗೆ ಹೆಮ್ಮೆ, ನಶ್ವರವಾದ ವಿಷಯಗಳಲ್ಲಿಯೇ ಅವರಿಗೆ ವ್ಯಾಮೋಹ. ಹೀಗಾಗಿ, ವಿನಾಶವೇ ಅವರ ಅಂತ್ಯ. ನಾವಾದರೋ ಸ್ವರ್ಗಸಾಮ್ರಾಜ್ಯದ ಪ್ರಜೆಗಳು. ಉದ್ಧಾರಕರಾದ ಪ್ರಭು ಯೇಸುಕ್ರಿಸ್ತರು ಪುನರಾಗಮಿಸುವುದು ಅಲ್ಲಿಂದಲೇ ಎಂದು ಎದುರುನೋಡುತ್ತಿದ್ದೇವೆ. ಅವರು ಸಮಸ್ತವನ್ನು ಸ್ವಾಧೀನಪಡಿಸಿಕೊಳ್ಳುವರು; ನಶ್ವರವಾದ ನಮ್ಮ ದೀನ ದೇಹಗಳನ್ನು ತಮ್ಮ ಶಕ್ತಿಯಿಂದ ರೂಪಾಂತರಗೊಳಿಸಿ ತಮ್ಮ ತೇಜೋಮಯ ಶರೀರದಂತೆ ಮಾಡುವರು. ಹೀಗಿರಲಾಗಿ ಒಲವಿನ ಸಹೋದರರೇ, ನನ್ನ ಅತಿ ಪ್ರಿಯರೇ, ಆಪ್ತರೇ, ನನ್ನ ಮುದುವೂ ಮುಕುಟವೂ ಆದವರೇ, ಪ್ರಭುವಿನಲ್ಲಿ ದೃಢ ವಿಶ್ವಾಸಿಗಳಾಗಿ ಬಾಳಿರಿ.

ಕೀರ್ತನೆ 122:1-5
ಶ್ಲೋಕ: ಪ್ರಭುವಿನಾಲಯಕೆ ಹೋಗೋಣ ಬಾ ಎಂದು ಜನರೆನ್ನ ಕರೆದಾಗ ಆಯಿತೆನಗೆ ಆನಂದ|

ಪ್ರಭುವಿನಾಲಯಕೆ ಹೋಗೋಣ ಬಾ ಎಂದಾಗ|
ಆಯಿತೆನಗೆ ಆನಂದ ಜನರೆನ್ನ ಕರೆದಾಗ||
ನಮ್ಮ ಕಾಲುಗಳು ಓ ಜೆರುಸಲೇಮೇ|
ತಲುಪಿವೆ ನಿನ್ನ ಪುರದ್ವಾರಗಳನೇ||

ನೋಡು ಜೆರುಸಲೇಮ್ ಪಟ್ಟಣವಿದು|
ಗಟ್ಟಿಯಾಗಿಯೇ ಕಟ್ಟಲ್ಪಟ್ಟಿಹುದು|
ಕುಲಗಳು ಯಾತ್ರೆಯಾಗಿ ಬರುವುವು ಇಲ್ಲಿಗೆ||

ಮಾಡುವರಿಲ್ಲಿಯೇ ಪ್ರಭುವಿನ ನಾಮ ಕೀರ್ತನೆ|
ಪಾಲಿಪರಿಂತು ಇಸ್ರಯೇಲರಿಗೆ ವಿಧಿಸಿದಾಜ್ಞೆ||
ಸ್ಥಾಪಿತವಾಗಿವೆಯಿಲ್ಲಿ ನ್ಯಾಯಪೀಠಗಳು|
ದಾವೀದನ ಮನೆತನದವರ ಸಿಂಹಾಸನಗಳು||

ಶುಭಸಂದೇಶ ವಾಚನ: ಲೂಕ 16:1-8

ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರನ್ನು ಉದ್ದೇಶಿಸಿ ಇಂತೆಂದರು: " ಒಬ್ಬ ಧನಿಕನಿದ್ದ, ಅವನ ವ್ಯವಹಾರಗಳನ್ನು ನೋಡಿಕೊಳ್ಳಲು ಒಬ್ಬ ಮೇಸ್ತ್ರಿಯಿದ್ದ. ಇವನು ಧನಿಕನ ಆಸ್ತಿಯನ್ನು ಹಾಳುಮಾಡುತ್ತಿದ್ದಾನೆಂದು ದೂರು ಬಂದಿತು. ಧನಿಕನು ಅವನನ್ನು ಕರೆದು, ' ಏನಿದು, ನಿನ್ನ ವಿಷಯವಾಗಿ ನಾನು ಹೀಗೆಲ್ಲ ಕೇಳುತ್ತಾ ಇದ್ದೇನೆ? ನಿನ್ನ ಕೆಲಸದ ಲೆಕ್ಕಾಚಾರವನ್ನು ಒಪ್ಪಿಸಿಬಿಡು. ಇನ್ನು ನೀನು ಮೇಸ್ತ್ರಿ ಆಗಿರಲು ಆಗದು, ' ಎಂದ. ಆಗ ಆ ಮೇಸ್ತ್ರಿ, 'ಈಗ ಏನು ಮಾಡಲಿ? ಯಜಮಾನನು ನನ್ನನ್ನು ಕೆಲಸದಿಂದ ತೆಗೆದು ಬಿಡುತ್ತಾನಲ್ಲಾ ; ಅಗೆಯಲು ಶಕ್ತಿ ಸಾಲದು; ಭಿಕ್ಷೆ ಬೇಡಲು ನನಗೆ ನಾಚಿಕೆ, 'ಎಂದು ಚಿಂತಾಕ್ರಾಂತನಾದ. ಮರುಕ್ಷಣ, 'ಸರಿ, ಕೆಲಸದಿಂದ ನನ್ನನ್ನು ತೆಗೆದುಹಾಕಿದ ಮೇಲೆ, ಜನರು ನನ್ನನ್ನು ತಮ್ಮ ಮನೆಗೆ ಸೇರಿಸಿಕೊಳ್ಳುವಂತೆ ನಾನು ಏನು ಮಾಡಬೇಕೆಂದು ಈಗ ಗೊತ್ತಾಯಿತು, ' ಎಂದುಕೊಂಡ. ಯಜಮಾನನ ಸಾಲಗಾರರನ್ನು ಒಬ್ಬೊಬ್ಬರನ್ನಾಗಿ ಬರಮಾಡಿಕೊಂಡು, 'ನೀನು ನನ್ನ ಯಜಮಾನನಿಗೆ ತೀರಿಸಬೇಕಾದ ಸಾಲ ಎಷ್ಟು? 'ಎಂದು ಮೊದಲನೆಯವನನ್ನು ಕೇಳಿದ. ಅವನು, 'ನೂರು ಬುದ್ದಲಿ ಎಣ್ಣೆ, 'ಎಂದ. ಅದಕ್ಕೆ ಮೇಸ್ತ್ರಿ, 'ಇಗೋ, ನಿನ್ನ ಪತ್ರ, ಕುಳಿತುಕೊಂಡು " ಐವತ್ತು " ಎಂದು ಬೇಗನೆ ಬರೆ, 'ಎಂದ. ಬಳಿಕ ಇನ್ನೊಬ್ಬನನ್ನು ಕರೆದು, 'ನೀನೆಷ್ಟು ಸಾಲ ತೀರಿಸಬೇಕು? ' ಎಂದು ಕೇಳಿದ. ಅವನು ' ನೂರು ಖಂಡುಗ ಗೋದಿ ' ಎಂದಾಗ, 'ಇಗೋ, ನಿನ್ನ ಪತ್ರ, " ಎಂಭತ್ತು, " ಎಂದು ಬರೆ ' 'ಎಂದ. ಈ ಅಪ್ರಾಮಾಣಿಕ ಮೇಸ್ತ್ರಿ ಮಾಡಿದ ಮುಂದಾಲೋಚನೆಯನ್ನು ಅವನ ಯಜಮಾನ ಪ್ರಶಂಶಿಸಿದ. ಏಕೆಂದರೆ, ತಮ್ಮ ತಮ್ಮ ವ್ಯವಹಾರಗಳಲ್ಲಿ ಲೌಕಿಕ ಜನರು ಬೆಳಕಿನ ರಾಜ್ಯದ ಜನರಿಗಿಂತ ಜಾಣರು."

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...