13.07.22 - "ಜ್ಞಾನಿಗಳಿಗೂ ಮೇಧಾವಿಗಳಿಗೂ ಈ ವಿಷಯಗಳನ್ನು ಮರೆಮಾಡಿ ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿ"

ಮೊದಲನೇ ವಾಚನ: ಪ್ರವಾದಿ ಯೆಶಾಯನ ಗ್ರಂಥ10:5-7, 13-16


ಆಹಾ, ಅಸ್ಸೀರಿಯ ನಾಡೇ, ನೀನು ನನ್ನ ಕೋಪದ ದಂಡಾಯುಧ, ರೋಷದ ದೊಣ್ಣೆ. ಆ ಧರ್ಮಭ್ರಷ್ಟ ಪ್ರಜೆಗೆ ಇದಿರಾಗಿ ಅಸ್ಸೀರಿಯವನ್ನು ಕಳುಹಿಸುತ್ತೇನೆ. ನನ್ನ ಕೋಪಕ್ಕೆ ಗುರಿಯಾದ ಜನರಿಗೆ ವಿರುದ್ಧ ಕಾರ್ಯವನ್ನು ಕೈಗೊಳ್ಳಲು ಆಜ್ಞೆ ಮಾಡುತ್ತೇನೆ. ನನ್ನ ಪ್ರಜೆಯನ್ನು ಸೂರೆಮಾಡಲು, ಕೊಳ್ಳೆಹೊಡೆಯಲು, ಬೀದಿಯ ಕಸದಂತೆ ತುಳಿದುಬಿಡಲು ಅದಕ್ಕೆ ಆಜ್ಞೆಮಾಡುತ್ತೇನೆ. ಆದರೆ ಅಸ್ಸೀರಿಯದ ಆಲೋಚನೆಯೇ ಬೇರೆ. ಅನೇಕಾನೇಕ ಜನಾಂಗಗಳನ್ನು ತಾನೇ ಸಂಹರಿಸಿ ನಿರ್ಮೂಲಮಾಡಬೇಕೆಂಬ ಯೋಜನೆ ಅದರದು. ಅಸ್ಸೀರಿಯದ ಅನಿಸಿಕೆಯಿದು: “ನಾನು ವಿವೇಕಿ, ನನ್ನ ಭುಜಬಲದಿಂದಲೇ ಇದನ್ನು ಮಾಡಿದ್ದೇನೆ. ನನ್ನ ಜ್ಞಾನಶಕ್ತಿಯಿಂದಲೇ ಇದನ್ನು ಸಾಧಿಸಿದ್ದೇನೆ. ನಾಡುಗಳ ಮಧ್ಯೆಯಿರುವ ಎಲ್ಲೆಗಳನ್ನು ಕಿತ್ತು ಹಾಕಿದ್ದೇನೆ. ಅವು ಕೂಡಿಸಿಟ್ಟುಕೊಂಡಿದ್ದ ನಿಧಿನಿಕ್ಷೇಪಗಳನ್ನು ಸೂರೆ ಮಾಡಿದ್ದೇನೆ. ಗದ್ದುಗೆಯ ಮೇಲೆ ಕುಳಿತಿರುವವರನ್ನು ಮಹಾ ವೀರನಂತೆ ಕೆಡವಿ ಬಿಟ್ಟಿದ್ದೇನೆ. ಹಕ್ಕಿಯ ಗೂಡನ್ನು ಕಂಡುಹಿಡಿಯುವಂತೆ ಜನಾಂಗಗಳ ಆಸ್ತಿಪಾಸ್ತಿಯನ್ನು ಹಿಡಿದುಕೊಂಡಿದ್ದೇನೆ. ಹಕ್ಕಿ ಬಿಟ್ಟು ಹೋದ ಮೊಟ್ಟೆಗಳನ್ನು ಒಟ್ಟುಗೂಡಿಸಿಟ್ಟು ಕೊಳ್ಳುವಂತೆ ಸಮಸ್ತ ರಾಷ್ಟ್ರಗಳನ್ನು ಒಟ್ಟುಗೂಡಿಸಿದ್ದೇನೆ. ರೆಕ್ಕೆಯಾಡಿಸಿ ಬೆದರಿಸಲು ಯಾರೂ ಇರಲಿಲ್ಲ. ಕೊಕ್ಕುತೆರೆದು ಕೀಚುಗುಟ್ಟಲು ಯಾರೂ ಕಾಣಲಿಲ್ಲ.” ಕೊಡಲಿ, ಕಡಿಯುವವನನ್ನೇ ಕಡಿಯಲು ನಿಂತೀತೆ? ಗರಗಸ, ಆಡಿಸುವವನನ್ನೇ ಕತ್ತರಿಸಲು ಎದೆಗೊಂಡೀತೆ? ಕೋಲು, ಹಿಡಿದವನನ್ನೇ ಹೊಡೆದಂತಾಯಿತು! ನಿರ್ಜೀವ ದೊಣ್ಣೆ ಸಜೀವ ಮನುಷ್ಯನನ್ನೇ ಬಡಿದಂತಾಯಿತು! ಆದಕಾರಣ, ಒಡೆಯರಾದ ಸೇನಾಧೀಶ್ವರ ಸರ್ವೇಶ್ವರ ಅಸ್ಸೀರಿಯಾದ ಕೊಬ್ಬಿದ ಯೋಧರಿಗೆ ಕ್ಷಯರೋಗವನ್ನು ಬರಮಾಡುವರು. ಅವರ ದೇಹಕ್ಕೆ ಬೆಂಕಿಯಂತೆ ಉರಿಯುವ ಜ್ವರವನ್ನು ಉಂಟುಮಾಡುವರು.

ಕೀರ್ತನೆ: 94:5-6, 7-8, 9-10, 14-15

ಶ್ಲೋಕ: ಕೈಬಿಡನು ಪ್ರಭು ತನ್ನ ಸ್ವಕೀಯರನು

ಶುಭಸಂದೇಶ: ಮತ್ತಾಯ 11:25-27



ಆ ಸಮಯದಲ್ಲಿ ಯೇಸುಸ್ವಾಮಿ, “ಪಿತನೇ, ಪರಲೋಕ ಭೂಲೋಕಗಳ ಒಡೆಯನೇ, ಜ್ಞಾನಿಗಳಿಗೂ ಮೇಧಾವಿಗಳಿಗೂ ಈ ವಿಷಯಗಳನ್ನು ಮರೆಮಾಡಿ ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿ; ಇದಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ. ಹೌದು, ಪಿತನೇ, ಇದೇ ನಿಮ್ಮ ಸುಪ್ರೀತ ಸಂಕಲ್ಪ. “ನನ್ನ ಪಿತ ಸಮಸ್ತವನ್ನೂ ನನ್ನ ವಶಕ್ಕೆ ಒಪ್ಪಿಸಿದ್ದಾರೆ; ಪುತ್ರನು ಯಾರೆಂಬುದನ್ನು ಪಿತನೇ ಹೊರತು ಬೇರಾರೂ ಅರಿಯರು. ಪಿತನು ಯಾರು ಎಂಬುದನ್ನು ಪುತ್ರನು ಮತ್ತು ಯಾವನಿಗೆ ಪುತ್ರನು ಅವರನ್ನು ಶ್ರುತಪಡಿಸಲು ಇಚ್ಛಿಸುತ್ತಾನೋ, ಅವರೇ ಹೊರತು ಮತ್ತಾರೂ ಅರಿಯರು." ಎಂದು ಹೇಳಿದರು.


12.07.22 - "ತೀರ್ಪಿನ ದಿನ ಸೊದೋಮಿನ ಗತಿ ನಿನಗಿಂತ ಸಹನೀಯವಾಗಿರುವುದು ಎಂಬುದು ನಿನಗೆ ತಿಳಿದಿರಲಿ,”

ಮೊದಲನೇ ವಾಚನ: ಪ್ರವಾದಿ ಯೆಶಾಯನ ಗ್ರಂಥ 7:1-9

ಅದು ಆಹಾಜನ ಕಾಲ. ಇವನು ಯೋತಾಮನ ಮಗ, ಉಜ್ಜೀಯನ ಮೊಮ್ಮಗ, ಜುದೇಯದ ಅರಸ. ಇವನ ಕಾಲದಲ್ಲಿ ಸಿರಿಯದ ಅರಸ ರೆಚೀನ ಮತ್ತು ರೆಮೆಲ್ಯನ ಮಗನೂ ಇಸ್ರಯೇಲಿನ ಅರಸನೂ ಆದ ಪೆಕಹ ಎಂಬವರು ಜೆರುಸಲೇಮಿನ ಮೇಲೆ ದಂಡೆತ್ತಿಬಂದರು. ಆದರೆ ಅದನ್ನು ಜಯಿಸಲು ಅವರಿಂದಾಗಲಿಲ್ಲ. ಸಿರಿಯರ ಸೈನಿಕರು ಈಗಾಗಲೇ ಇಸ್ರಯೇಲಿನ ಗಡಿಯೊಳಗಿದ್ದಾರೆ ಎಂಬ ಸುದ್ದಿ ಜುದೇಯದ ಅರಸನಿಗೆ ಮುಟ್ಟಿದ್ದೇ ತಡ, ಅವನೂ ಅವನ ಪ್ರಜೆಗಳೆಲ್ಲರೂ ಹೆದರಿದರು. ಬಿರುಗಾಳಿಗೆ ಸಿಕ್ಕಿದ ಗಿಡಮರಗಳಂತೆ ನಡುಗಿದರು. ಆಗ ಸರ್ವೇಶ್ವರಸ್ವಾಮಿ ಯೆಶಾಯನಿಗೆ ಹೀಗೆಂದರು : “ನಿನ್ನ ಮಗ ಶೆಯಾರ್ ಯಾಶೂಬನನ್ನು ಕರೆದುಕೊಂಡು ಆಹಾಜಾರಸನನ್ನು ಕಾಣಲುಹೋಗು. ಅಗಸರ ಹೊಲದ ಮೇಲೆ ಹಾದುಹೋಗುವ ರಾಜಮಾರ್ಗದಲ್ಲಿ ಕೆರೆಯ ಕಾಲುವೆಯ ತುದಿಯ ಬಳಿ ಆತ ನಿನಗೆ ಸಿಕ್ಕುವನು. ಅವನಿಗೆ ಈ ಪ್ರಕಾರ ತಿಳಿಸು : ಜೋಕೆ, ಸುಮ್ಮನಿರು, ಹೆದರಬೇಡ. ರೆಚೀನ, ಸಿರಿಯ ಮತ್ತು ಪೆಕಹ - ಇವರೆಲ್ಲರ ಕೋಪ ಎಷ್ಟು ಉಗ್ರವಾಗಿದ್ದರೂ ಅದು ಹೊಗೆಯಾಡುವ ಎರಡು ಮೋಟುಕೊಳ್ಳಿಗಳಿಗೆ ಸಮಾನ. ಆದ್ದರಿಂದ ಎದೆಗುಂದಬೇಡ. ಸಿರಿಯ, ಇಸ್ರಯೇಲ್, ಅರಸನಾದ ಪೆಕಹನೊಂದಿಗೆ ಸೇರಿ ಒಳಸಂಚು ಮಾಡಿದ್ದಾರೆ. ‘ಜುದೇಯ ನಾಡಿಗೆ ಮುತ್ತಿಗೆ ಹಾಕಿ, ಅದನ್ನು ಬೆದರಿಸಿ ಆಕ್ರಮಿಸಿಕೊಳ್ಳೋಣ; ತೆಬೇಲನ ಮಗನಿಗೆ ಅಲ್ಲಿಯೇ ಪಟ್ಟಕಟ್ಟೋಣ’ ಎಂದು ದುರಾಲೋಚನೆ ಮಾಡಿಕೊಂಡಿದ್ದಾರೆ. “ಆದರೆ ಸ್ವಾಮಿ ಸರ್ವೇಶ್ವರ ಆದ ನಾನು ನಿನಗೆ ಹೇಳುತ್ತೇನೆ: ಈ ಯೋಜನೆ ಕೈಗೂಡುವುದಿಲ್ಲ. ಈ ಒಳಸಂಚು ನೆರವೇರುವುದಿಲ್ಲ. ಕಾರಣ, ರಾಜಧಾನಿಯಾದ ದಮಸ್ಕಸ್ಸಿಗಿಂತ ಸಿರಿಯ ಹೆಚ್ಚಲ್ಲ, ರಾಜನಾದ ರೆಚೀನನಿಗಿಂತ ದಮಸ್ಕಸ್‍ಹೆಚ್ಚಲ್ಲ. ಇಸ್ರಯೇಲಿನ ಬಗ್ಗೆ ಹೇಳುವುದಾದರೆ, ಅದು ಅರವತ್ತೈದು ವರ್ಷದೊಳಗೆ ನುಚ್ಚುನೂರಾಗುವುದು, ಅಖಂಡ ರಾಷ್ಟ್ರವಾಗಿ ಉಳಿಯದು. ಅಂತೆಯೇ, ರಾಜಧಾನಿಯಾದ ಸಮಾರ್ಯಕ್ಕಿಂತ ಇಸ್ರಯೇಲ್ ಹೆಚ್ಚಲ್ಲ. ರಾಜನಾದ ಪೆಕಹನಿಗಿಂತ ಸಮಾರ್ಯ ಹೆಚ್ಚಲ್ಲ. ನಿಮ್ಮ ವಿಶ್ವಾಸ ಸ್ಥಿರವಿಲ್ಲದಿದ್ದರೆ, ನಿಮಗೆ ಸ್ಥಿರತೆ ಇರುವುದಿಲ್ಲ.”

ಕೀರ್ತನೆ: 48:2-3, 3-4, 5-6, 7-8
ಶ್ಲೋಕ: ಸರ್ವಶಕ್ತ ಪ್ರಭುವನು ದೇವನಗರದಲ್ಲಿ ಕಂಡೆವು

ಶುಭಸಂದೇಶ: ಮತ್ತಾಯ11:20-24

ಯಾವ ಪಟ್ಟಣಗಳಲ್ಲಿ ಯೇಸುಸ್ವಾಮಿ ಅದ್ಭುತ ಕಾರ್ಯಗಳನ್ನು ಹೇರಳವಾಗಿ ಮಾಡಿದ್ದರೋ ಆ ಪಟ್ಟಣಗಳ ಜನರೇ ಪಾಪಕ್ಕೆ ವಿಮುಖರಾಗಲಿಲ್ಲ. ಆದ್ದರಿಂದ ಆ ಪಟ್ಟಣಗಳನ್ನು ಯೇಸು ಖಂಡಿಸಿದರು; :ಕೊರಾಜ್ಜಿನ್ ಪಟ್ಟಣವೇ, ನಿನಗೆ ಧಿಕ್ಕಾರ! ಬೆತ್ಸಾಯಿದ ಪಟ್ಟಣವೇ, ನಿನಗೆ ಧಿಕ್ಕಾರ! ನಿಮ್ಮಲ್ಲಿ ಮಾಡಿದ ಅದ್ಭುತಕಾರ್ಯಗಳನ್ನು ಟೈರ್ ಮತ್ತು ಸಿದೋನ್ ಪಟ್ಟಣಗಳಲ್ಲಿ ಮಾಡಿದ್ದರೆ, ಅಲ್ಲಿಯವರು ಎಂದೋ ಗೋಣೀತಟ್ಟನ್ನು ಉಟ್ಟುಕೊಂಡು, ಬೂದಿಯನ್ನು ಬಳಿದುಕೊಂಡು ಪಾಪಕ್ಕೆ ವಿಮುಖರಾಗುತ್ತಿದ್ದರು. ಆದುದರಿಂದ ತೀರ್ಪಿನ ದಿನ ಟೈರ್ ಮತ್ತು ಸಿದೋನಿನ ಗತಿಯು ನಿಮಗಿಂತಲೂ ಮೇಲಾಗಿರುವುದೆಂದು ಒತ್ತಿ ಹೇಳುತ್ತೇನೆ. ಎಲೈ ಕಫೆರ್ನವುಮ್ ಪಟ್ಟಣವೇ, ನೀನು ಸ್ವರ್ಗಕ್ಕೇರುವೆ ಎಂದು ನೆನಸುತ್ತೀಯೋ? ಇಲ್ಲ, ಪಾತಾಳಕ್ಕೆ ಇಳಿಯುವೆ. ನಿನ್ನಲ್ಲಿ ಮಾಡಿದ ಅದ್ಭುತಕಾರ್ಯಗಳನ್ನು ಸೊದೋಮಿನಲ್ಲಿ ಮಾಡಿದ್ದರೆ, ಅದು ಇಂದಿನವರೆಗೂ ಅಳಿಯದೆ ಉಳಿಯುತ್ತಿತ್ತು. ಆದುದರಿಂದ ತೀರ್ಪಿನ ದಿನ ಸೊದೋಮಿನ ಗತಿ ನಿನಗಿಂತ ಸಹನೀಯವಾಗಿರುವುದು ಎಂಬುದು ನಿನಗೆ ತಿಳಿದಿರಲಿ,” ಎಂದರು.




11.07.22 - "ನಿಮ್ಮನ್ನು ಸ್ವಾಗತಿಸುವವನು ನನ್ನನ್ನು ಸ್ವಾಗತಿಸುತ್ತಾನೆ;"

ಮೊದಲನೇ ವಾಚನ: ಪ್ರವಾದಿ ಯೆಶಾಯನ ಗ್ರಂಥ 1:10-17 


ಸೊದೋಮಿನ ಅಧಿಪತಿಗಳಂತಿರುವವರೇ, ಸರ್ವೇಶ್ವರಸ್ವಾಮಿಯ ಮಾತನ್ನು ಕೇಳಿರಿ. ಗೊಮೋರದ ಪ್ರಜೆಗಳನ್ನು ಹೋಲುವವರೇ, ನಮ್ಮ ದೇವರ ಉಪದೇಶಕ್ಕೆ ಕಿವಿಗೊಡಿ. ಸ್ವಾಮಿ ಇಂತೆನ್ನುತ್ತಾರೆ : “ನೀವು ಅರ್ಪಿಸುವ ಅಸಂಖ್ಯಾತ ಬಲಿದಾನಗಳಿಂದ ನನಗೇನು ಪ್ರಯೋಜನ? ಟಗರುಗಳು, ಸರ್ವಾಂಗಹೋಮ, ಪುಷ್ಟಪಶುಗಳ ಕೊಬ್ಬು ಇವೆಲ್ಲ ನನಗೆ ಬೇಸರ. ಹೋತಹೋರಿಗಳ, ಕುರಿಮರಿಗಳ ರಕ್ತ ನನಗೆ ತಾತ್ಸಾರ. ನನ್ನ ಸನ್ನಿಧಾನಕ್ಕೆ ಬರುವಾಗ ಇದನ್ನೆಲ್ಲ ತರಬೇಕೆಂದು ನಿಮಗೆ ಹೇಳಿದವರಾರು? ನಿಮ್ಮ ನೈವೇದ್ಯಗಳನ್ನು ಇನ್ನು ತರಬೇಡಿ, ಅವು ವ್ಯರ್ಥ. ನಿಮ್ಮ ಧೂಪಾರತಿ ನನಗೆ ಅಸಹ್ಯ. ನೀವು ಆಚರಿಸುವ ಹಬ್ಬ ಹುಣ್ಣಿಮೆ, ಸಬ್ಬತ್ ವಿಶ್ರಾಂತಿ, ನಿಮ್ಮ ಸಭೆಕೂಟಗಳು ನನಗೆ ಬೇಡ. ಅಧರ್ಮದಿಂದ ಕೂಡಿದ ಇಂಥ ಸಮಾರಂಭಗಳು ನನಗೆ ಇಷ್ಟವಿಲ್ಲ. ನಿಮ್ಮ ಹಬ್ಬ ಹುಣ್ಣಿಮೆಗಳು, ಉತ್ಸವ ದಿನಗಳು ನನ್ನ ಮನಕ್ಕೆ ವಿರುದ್ಧ, ಹೊರಲಾಗದ ಭಾರ, ಸಹಿಸಲಾಗದ ಬೇಸರ. ನೀವು ಕೈಯೆತ್ತಿ ಬೇಡುವಾಗ ನಾನು ಕಣ್ಣುಮುಚ್ಚಿಕೊಳ್ಳುವೆನು. ನೀವು ಎಷ್ಟೇ ಪ್ರಾರ್ಥನೆಗಳನ್ನು ಮಾಡಿದರೂ ನಾನು ಕಿವಿಗೊಡೆನು, ಏಕೆಂದರೆ ನಿಮ್ಮ ಕೈಗಳು ರಕ್ತಸಿಕ್ತವಾಗಿವೆ. ತೊಳೆದುಕೊಳ್ಳಿರಿ, ನಿಮ್ಮನ್ನೆ ಶುದ್ಧಮಾಡಿಕೊಳ್ಳಿರಿ. ಕಣ್ಣಿಗೆ ಕಟ್ಟಿದಂತಿರುವ ನಿಮ್ಮ ದುಷ್ಕೃತ್ಯಗಳು ನೀಗಿಹೋಗಲಿ. ಕೇಡನ್ನು ಬಿಟ್ಟು ಒಳಿತನ್ನು ಕೈಗೊಳ್ಳಿರಿ. ನ್ಯಾಯನೀತಿಗಳಲ್ಲಿ ನಿರತರಾಗಿರಿ. ಹಿಂಸಾತ್ಮಕರನ್ನು ತಿದ್ದಿ ಸರಿಪಡಿಸಿರಿ. ಅನಾಥರಿಗೆ ನ್ಯಾಯ ದೊರಕಿಸಿರಿ. ವಿಧವೆಯರ ಪರವಾಗಿ ವಾದಿಸಿರಿ.

ಕೀರ್ತನೆ: 50:8-9, 16-17, 21, 23
ಶ್ಲೋಕ: ಸನ್ಮಾರ್ಗ ಹಿಡಿದವನಿಗೆ ತೋರುವೆ ಪರಮ ಜೀವೋದ್ದಾರವನು

ನಿನ್ನ ಬಲಿಯರ್ಪಣೆಯನು ನಾ ತಪ್ಪೆಣಿಸುತ್ತಿಲ್ಲ|
ನನ್ನ ಮುಂದಿದೆ ಸತತ ನಿನ್ನ ದಹನಬಲಿಗಳೆಲ್ಲ||
ನಾ ಕೋರುವುದು ನಿನ್ನ ಮನೆಯ ಹೋರಿಗಳನಲ್ಲ|
ನಾ ಬಯಸುವುದು ನಿನ್ನ ಮಂದೆಯ ಹೋತಗಳನ್ನಲ್ಲ||

ನನ್ನ ವಿಧಿಗಳ ಪಠಿಸುವ ಹಕ್ಕು ನಿಮಗೆಂತು?|
ನನ್ನ ನಿಬಂಧನೆಗಳ ನೀವು ಜಪಿಸುವುದೆಂತು||
ನನ್ನ ಮಾತುಗಳನು ನೀವು ತಾತ್ಸಾರ ಮಾಡುತ್ತೀರಿ|
ನನ್ನ ತಿದ್ದುಪಾಟುಗಳನು ನೀವು ಧಿಕ್ಕರಿಸುತ್ತೀರಿ||

ನೀವಿದನ್ನೆಲ್ಲ ಮಾಡಿದರೂ ನಾ ಮೌನಿಯೆನ್ನುವಿರಾ?|
ನಾ ಕೂಡ ನಿಮ್ಮಂಥವನು ಎಂದುಕೊಂಡಿರಾ?||
ಧನ್ಯವಾದದ ಬಲಿಯರ್ಪಿಸುವವನೇ ನನಗೆ ಸನ್ಮಾನಿತನು|
ಸನ್ಮಾರ್ಗ ಹಿಡಿದವನಿಗೆ ತೋರುವೆ ಪರಮ ಜೀವೋದ್ದಾರವನು||

ಘೋಷಣೆ ಕೀರ್ತನೆ 119:34
ಅಲ್ಲೆಲೂಯ, ಅಲ್ಲೆಲೂಯ!

ನೀಡೆನಗೆ ನಿನ್ನ ಶಾಸ್ತ್ರದ ಅರಿವನು | ಪೂರ್ಣಮನದಿಂದ ಆಚರಿಸುವೆನದನು ||
ಅಲ್ಲೆಲೂಯ!

ಶುಭಸಂದೇಶ: ಮತ್ತಾಯ 10:34--11:1

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ನಾನು ಲೋಕಕ್ಕೆ ಸಮಾಧಾನವನ್ನು ತರಲು ಬಂದೆನೆಂದು ಭಾವಿಸಬೇಡಿ; ಸಮಾಧಾನವನ್ನಲ್ಲ, ಛೇದಿಸುವ ಖಡ್ಗವನ್ನು ತರಲು ಬಂದೆನು. ತಂದೆಗೆ ವಿರುದ್ಧ ಮಗನಿಗೂ, ತಾಯಿಗೆ ವಿರುದ್ದ ಮಗಳಿಗೂ, ಅತ್ತೆಗೆ ವಿರುದ್ದ ಸೊಸೆಗೂ ಭೇದ ಹುಟ್ಟಿಸಲು ಬಂದೆನು; ಒಡಹುಟ್ಟಿದವರೇ ಒಬ್ಬನ ಕಡುವೈರಿಗಳಾಗುವರು. "ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ತಂದೆಯನ್ನು ಅತವಾ ತಾಯಿಯನ್ನು ಪ್ರೀತಿಸುವವನು ನನ್ನವನಾಗಲು ಯೋಗ್ಯನಲ್ಲ. ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ತನ್ನ ಮಗನನ್ನು ಅಥವಾ ಮಗಳನ್ನು ಪ್ರೀತಿಸುವವನು ನನ್ನವನಾಗಲು ಯೋಗ್ಯನಲ್ಲ. ತನ್ನ ಶಿಲುಬೆಯನ್ನು ಹೊತ್ತು ನನ್ನನ್ನು ಹಿಂಬಾಲಿಸದವನು ನನ್ನವನಾಗಲು ಯೋಗ್ಯನಲ್ಲ. ತನ್ನ ಪ್ರಾಣವನ್ನು ಕಾಪಾಡಿಕೊಳ್ಳುವವನು ಅದನ್ನು ಕಳೆದುಕೊಳ್ಳುತ್ತಾನೆ. ನನಗೋಸ್ಕರವಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಕಾಪಾಡಿಕೊಳ್ಳುತ್ತಾನೆ. "ನಿಮ್ಮನ್ನು ಸ್ವಾಗತಿಸುವವನು ನನ್ನನ್ನು ಸ್ವಾಗತಿಸುತ್ತಾನೆ; ನನ್ನನ್ನು ಸ್ವಾಗತಿಸುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನೇ ಸ್ವಾಗತಿಸುತ್ತಾನೆ. ಪ್ರವಾದಿಯನ್ನು ಪ್ರವಾದಿಯೆಂದು ಸ್ವಾಗತಿಸುವವನು ಪ್ರವಾದಿಗೆ ಸಿಗುವ ಪ್ರತಿಫಲವನ್ನು ಪಡೆಯುತ್ತಾನೆ. ಸತ್ಪುರುಷನನ್ನು ಸತ್ಪುರುಷನೆಂದು ಸ್ವಾಗತಿಸುವವನು ಸತ್ಪುರುಷನಿಗೆ ಸಿಗುವ ಪ್ರತಿಫಲವನ್ನು ಪಡೆಯುತ್ತಾನೆ. ಯಾರಾದರೂ ಈ ಚಿಕ್ಕವರಲ್ಲಿ ಒಬ್ಬನಿಗೆ ಅವನು ನನ್ನ ಶಿಷ್ಯನೆಂದು ಕುಡಿಯಲು ಒಂದು ಲೋಟ ತಣ್ಣೀರನ್ನು ಕೊಟ್ಟರೂ ಅದಕ್ಕೆ ತಕ್ಕ ಪ್ರತಿಫಲವನ್ನು ಪಡೆಯದೆ ಹೋಗನೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ." ಯೇಸುಸ್ವಾಮಿ ತಮ್ಮ ಹನ್ನೆರಡು ಮಂದಿ ಶಿಷ್ಯರಿಗೆ ಆದೇಶವನ್ನು ಕೊಟ್ಟಾದ ಮೇಲೆ ಅಲ್ಲಿಂದ ಹೊರಟು ಉಪದೇಶ ಮಾಡುವುದಕ್ಕೂ ಬೋಧಿಸುವುದಕ್ಕೂ ಹತ್ತಿರದ ಊರುಗಳಿಗೆ ಹೋದರು.

10.07.22 - "ದಯೆ ತೋರಿದವನೇ ನೆರೆಯವನು,"

ಮೊದಲನೇ ವಾಚನ: ಧರ್ಮೋಪದೇಶಕಾಂಡ  30:10-14

ಮೋಶೆಯು ಇಸ್ರಯೇಲರನ್ನು ಕುರಿತು ಹೀಗೆಂದನು. "ನೀವು ನಿಮ್ಮ ದೇವರಾದ ಸರ್ವೇಶ್ವರನ ನುಡಿಗೆ ವಿಧೇಯರಾಗಿ ಈ ಧರ್ಮಶಾಸ್ತ್ರದ ಆಜ್ಞಾವಿಧಿಗಳನ್ನು ಅನುಸರಿಸಿ ಪೂರ್ಣ ಹೃದಯದಿಂದಲೂ ಮನಸ್ಸಿನಿಂದಲೂ ಅವರ ಕಡೆಗೆ ತಿರುಗಿಕೊಳ್ಳುವಿರಿ. ಅವರು ನಿಮ್ಮ ಪಿತೃಗಳ ವಿಷಯದಲ್ಲಿ ಸಂತೋಷಪಟ್ಟ ಹಾಗೆಯೇ ನಿಮ್ಮ ವಿಷಯದಲ್ಲೂ ಮತ್ತೆ ಸಂತೋಷಪಟ್ಟು ನಿಮಗೆ ಒಳಿತನ್ನುಂಟು ಮಾಡುವರು. ನಾನು ಈಗ ನಿಮಗೆ ಬೋಧಿಸಿದ ಧರ್ಮೋಪದೇಶ ನಿಮಗೆ ಗ್ರಹಿಸುವುದಕ್ಕೆ ಕಷ್ಟವಾದುದಲ್ಲ. ಸಾಧಿಸುವುದಕ್ಕೆ ಅಸಾಧ್ಯವಾದುದ್ದೂ ಅಲ್ಲ. ಇದು ಮೇಲಣ ಲೋಕದಲ್ಲಿರುವ ಮಾತಲ್ಲ. "ನಿಮಗಾಗಿ ಮೇಲಣ ಲೋಕವನ್ನು ಏರಿ ಅದನ್ನು ತಿಳಿದುಕೊಂಡು ಬಂದು ನಮಗೆ ತಿಳಿಸುವಷ್ಟು ಶಕ್ತರು ಯಾರಿದ್ಧಾರೆ? ಇದ್ದಿದ್ದರೆ ನಾವು ಕೈಗೊಳ್ಳುತ್ತಿದ್ದೆವು" ಎಂದುಕೊಳ್ಳುವುದಕ್ಕೆ ಅವಕಾಶವೇನೂ ಇಲ್ಲ. ಇದು ಸಮೂದ್ರದ ಆಚೆ ಇರುವ ಮಾತಲ್ಲ; "ನಿಮಗಾಗಿ  ಸಮೂದ್ರವನ್ನು ದಾಟಿ ಅದನ್ನು ತೆಗೆದುಕೊಂಡು ಬಂದು ನಮಗೆ ತಿಳಿಸುವಷ್ಟು ಶಕ್ತರು ಯಾರಿದ್ದಾರೆ? ಇದ್ದಿದ್ದರೆ ನಾವು ಕೈಗೊಳ್ಳೂತ್ತಿದ್ದೆವು" ಎಂದುಕೊಳ್ಳುವುದಕ್ಕೆ ಆಸ್ಪದವೇನೂ ಇಲ್ಲ. ಅನುಸರಿಸುವುದಕ್ಕೆ ಸಾಧ್ಯವಾಗುವಂತೆ ಈ ವಾಕ್ಯ ನಿಮಗೆ ಸಮೀಪದಲ್ಲಿದೆ; ಇದು ನಿಮ್ಮ ಬಾಯಲ್ಲೇ ಇದೆ; ಹೃದಯದಲ್ಲೇ ಇದೆ.

ಕೀರ್ತನೆ: 69: 14, 17, 30-31, 33-34, 36, 37

ಶ್ಲೋಕ: ಬಡಬಗ್ಗರ ಮೊರೆಗೆ ಪ್ರಭು ಕಿವಿಗೊಡದಿರನು.

ಎರಡನೇ ವಾಚನ: ಕೊಲೊಸ್ಸೆಯರಿಗೆ 1:15-20

ಅದೃಶ್ಯ ದೇವನ ಅದೃಶ್ಯ ರೂಪನು ಕ್ರಿಸ್ತ, ಸೃಷ್ಟಿಗೆಲ್ಲ ಜೇಷ್ಠಪುತ್ರನಾತ. ಇರಲಿ ಇಹದಲಿ, ಇರಲಿ ಪರದಲಿ, ಅಶರೀರ ಒಡೆಯರಾಗಲಿ, ಒಡೆತನವಾಗಲಿ, ಅಧಿಕಾರಿಗಳಾಗಲಿ ಅಧಿಪತ್ಯವಾಗಿರಲಿ, ಅದುದೆಲ್ಲವೂ ಅತನಲಿ.  ಆತನಿಂದ ಆತನಿಗಾಗಿ. ಎಲ್ಲಕ್ಕೂ ಮೊದಲೇ ಇರುವನಾತ, ಸಮಸ್ತಕ್ಕೂ ಆಧಾರಭೂತ. ಸಭೆಯೆಂಬ ಶರೀರಕ್ಕೆ ಶಿರಸ್ಸಾತ, ಆದಿಸಂಭೂತ, ಆಗಲೆಲ್ಲದರಲ್ಲೂ ಅಗ್ರಸ್ಥ, ಸತ್ತವರಿಂದ ಮೊದಲೆದ್ದು ಬಂದನಾತ. ಆ ಸುತನಲ್ಲೇ ಇರಿಸಲು ನಿರ್ಧರಿಸಿದನು ಪಿತದೇವ ತನ್ನ ಸರ್ವ ಸಂಪೂರ್ಣತೆಯನು. ಶಿಲುಬೆಯಿಂದಾತ ಹರಿಸಿದ ರಕುತದಿಂದ ಆಗುತಲಿದೆ ಶಾಂತಿ ಸಮಾಧಾನ, ನಡೆದಿದೆ ದೇವರೊಡನೆ ಸಂಧಾನ, ಇಹಪರಗಳೆಲ್ಲಕ್ಕೂ ಆತನ ಮುಖೇನ.

ಶುಭಸಂದೇಶ: ಲೂಕ

  
ಒಬ್ಬ ಶಾಸ್ತ್ರಜ್ಞನು ಎದ್ದು ಯೇಸುಸ್ವಾಮಿಯನ್ನು ಪರೀಕ್ಷಿಸುವ ಉದ್ದೇಶದಿಂದ "ಬೋಧಕರೇ, ಅಮರ ಜೀವ ನನಗೆ  ಪ್ರಾಪ್ತಿಯಾಗಬೇಕಾದರೆ ನಾನು ಮಾಡಬೇಕಾದುದು ಏನು?" ಎಂದು ಕೇಳಿದನು. ಅದಕ್ಕೆ ಯೇಸು, "ಧರ್ಮಶಾಸ್ತ್ರದಲ್ಲಿ ಏನು ಬರೆದಿದೆ? ಹೇಗೆ ಪಠಿಸುತ್ತೀಯೆ?" ಎಂದು ಮರು ಪ್ರಶ್ನೆ ಹಾಕಿದರು. ಅವನು, "ನಿನ್ನ ಸರ್ವೇಶ್ವರನಾದ ದೇವರನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಶಕ್ತಿಯಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸು ಮತ್ತು ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವರನ್ನೂ ಪ್ರೀತಿಸು" ಎಂದಿದೆ," ಎಂದು ಉತ್ತರ ಕೊಟ್ಟನು. ಯೇಸು, "ಸರಿಯಾಗಿ ಉತ್ತರ ಕೊಟ್ಟೆ. ಅದರಂತೆ ಮಾಡು. ನಿನಗೆ ಅಮರ ಜೀವ ಲಭಿಸುವುದು," ಎಂದರು. ಆದರೆ ಆ ಶಾಸ್ತ್ರಜ್ಞನು ತನ್ನನ್ನು ತಾನೇ ಸಮರ್ಥಿಸಿಕೊಳ್ಳಲು, "ನನ್ನ ನೆರೆಯವರು ಯಾರು?" ಎಂದು ಯೇಸುವನ್ನು ಮತ್ತೆ ಪ್ರಶ್ನಿಸಿದನು. ಯೇಸು ಅವನಿಗೆ ಹೀಗೆಂದು ವಿವರಿಸಿದರು. "ಒಬ್ಬನು ಜೆರುಸಲೇಮಿನಿಂದ ಇಳಿದು ಜೆರಿಕೋವಿಗೆ ಪ್ರಯಾಣ ಮಾಡುತ್ತಿದ್ದಾಗ, ದರೋಡೆಗಾರರ ಕೈಗೆ ಸಿಕ್ಕಿಬಿದ್ದ, ದರೋಡೆಗಾರರು ಅವನನ್ನು ಸುಲಿಗೆಮಾಡಿ, ಹೊಡೆದು ಬಡಿದು, ಅರೆ ಜೀವ ಮಾಡಿ, ಅಲ್ಲೇ ಬಿಟ್ಟುಹೋದರು.

ಅದೇ ಮಾರ್ಗವಾಗಿ ಒಬ್ಬ ಯಾಜಕನು ಹಾದು ಹೋಗಬೇಕಾಗಿ ಬಂದಿತು. ಈತನು, ಅವನನ್ನು ಕಂಡದ್ದೇ ಆಚೆ ಬಳಿಸಿಕೊಂಡು ಹೋದ . ಹಾಗೆಯೇ ಲೇವಿಯೊಬ್ಬನು ಆ ಸ್ಥಳಕ್ಕೆ ಬಂದು ಅವನನ್ನು ನೋಡಿ ಹಾಗೆಯೇ ಬಳಸಿಕೊಂಡು ಹೋದ. ಆದರೆ ಆ ಮಾರ್ಗವಾಗಿ ಪ್ರಯಾಣ ಮಾಡುತ್ತಿದ್ದ ಒಬ್ಬ ಸಮಾರಿಯದವನು ಅಲ್ಲಿಗೆ ಬಂದಾಗ, ಅವನನ್ನು ಕಂಡು ಕನಿಕರಪಟ್ಟ. ಹತ್ತಿರಕ್ಕೆ ಹೋಗಿ ಅವನ ಗಾಯಗಳಿಗೆ ಎಣ್ಣೆಯನ್ನೂ, ದ್ರಾಕ್ಷಾರಸವನ್ನೂ ಹಚ್ಚಿ ಅವುಗಳಿಗೆ ಬಟ್ಟೆ ಕಟ್ಟಿದ. ಬಳಿಕ ಅವನನ್ನು ತನ್ನ ಸ್ವಂತ ವಾಹಕ ಪಶುವಿನ ಮೇಲೆ ಹತ್ತಿಸಿಕೊಂಡು ಒಂದು ಛತ್ರಕ್ಕೆ ಕರೆದುಕೊಂಡು ಹೋಗಿ, ಆರೈಕೆ ಮಾಡಿದ. ಮಾರನೆಯ ದಿನ ಎರಡು ದಿನಾರಿ ನಾಣ್ಯಗಳನ್ನು ಛತ್ರದವನಿಗೆ ಕೊಟ್ಟು, "ಇವನನ್ನು ಚೆನ್ನಾಗಿ ನೋಡಿಕೊ, ಇದಕ್ಕಿಂತ ಹೆಚ್ಚು ವೆಚ್ಚವಾದರೆ ನಾನು ಹಿಂದಿರುಗಿ ಬರುವಾಗ ಸಲ್ಲಿಸುತ್ತೇನೆ," ಎಂದ. ದರೋಡೆಗಾರರ ಕೈಗೆ ಸಿಕ್ಕಿದವನಿಗೆ ಈ ಮೂವರಲ್ಲಿ ಯಾರು ನೆರೆಯವನೆಂದು ನಿನಗೆ ತೋರುತ್ತದೆ?" ಎಂದು ಯೇಸು ಆ ಶಾಸ್ತ್ರಜ್ಞನನ್ನು ಕೇಳಿದರು. ಅದಕ್ಕೆ ಅವನು, "ದಯೆ ತೋರಿದವನೇ ನೆರೆಯವನು," ಎಂದನು. ಆಗ ಯೇಸು, "ಹೋಗು, ನೀನು ಹಾಗೆಯೇ ಮಾಡು," ಎಂದು ಹೇಳಿದರು.





09.07.22 - "ಅನೇಕ ಗುಬ್ಬಚ್ಚಿಗಳಿಗಿಂತ ನೀವು ಎಷ್ಟೋ ಮೌಲ್ಯವುಳ್ಳವರು"

ಮೊದಲನೇ ವಾಚನ: ಪ್ರವಾದಿ ಯೆಶಾಯನ ಗ್ರಂಥ 6:1-8 

ಅರಸ ಉಜ್ಜೀಯನು ಕಾಲವಾದ ವರ್ಷದಲ್ಲಿ ನನಗೆ ಸರ್ವೇಶ್ವರಸ್ವಾಮಿಯಿಂದ ದರ್ಶನವಾಯಿತು: ಉನ್ನತೋನ್ನತ ಸಿಂಹಾಸನದಲ್ಲಿ ಅವರು ಆಸೀನರಾಗಿದ್ದರು. ಅವರ ಮೇಲುವಸ್ತ್ರ ನೆರಿಗೆ ನೆರಿಗೆಯಾಗಿ ದೇವಾಲಯವನ್ನೆಲ್ಲ ಆವರಿಸಿತ್ತು. 2ಅವರ ಸುತ್ತಲು ಸೆರಾಫಿಯರೆಂಬ ತೇಜಸ್ವಿಗಳು ಇದ್ದರು. ಪ್ರತಿಯೊಬ್ಬರಿಗೂ ಆರಾರು ರೆಕ್ಕೆಗಳಿದ್ದವು. ಎರಡು ರೆಕ್ಕೆಗಳಿಂದ ಅವರ ಮುಖ ಮುಚ್ಚಿತ್ತು. ಇನ್ನೆರಡು ರೆಕ್ಕೆಗಳಿಂದ ಅವರ ಪಾದಗಳು ಮುಚ್ಚಿದ್ದವು. ಮತ್ತೆರಡು ರೆಕ್ಕೆಗಳನ್ನು ಬಡಿಯುತ್ತಾ ನೆಲಸೋಕದೆ ನಿಂತಿದ್ದರು. ಅವರಲ್ಲಿ ಒಬ್ಬನು ಮತ್ತೊಬ್ಬನಿಗೆ : “ಪವಿತ್ರ, ಪವಿತ್ರ, ಪವಿತ್ರ ಸೇನಾಧೀಶ್ವರ ಸರ್ವೇಶ್ವರ ಜಗವೆಲ್ಲ ಆತನ ಪ್ರಭಾವಭರಿತ” ಎಂದು ಕೂಗಿ ಹೇಳಿದನು. ಆ ಶಬ್ದಕ್ಕೆ ದೇವಾಲಯದ ಅಸ್ತಿವಾರವೇ ಕಂಪಿಸಿತು. ಧೂಮವು ಆಲಯವನ್ನೆಲ್ಲ ತುಂಬಿತು. ಆಗ ನಾನು “ಅಯ್ಯೋ, ನನ್ನ ಗತಿಯೇನು? ನನ್ನ ಕಥೆ ಮುಗಿಯಿತು. ಅಶುದ್ಧ ವದನದವನು ನಾನು. ಅಶುದ್ಧ ವದನದವರ ಮಧ್ಯೆ ಬಾಳುವವನು. ನನ್ನ ಕಣ್ಣುಗಳು ರಾಜಾಧಿರಾಜನನ್ನು, ಸೇನಾಧೀಶ್ವರ ಸರ್ವೇಶ್ವರನನ್ನು ಕಂಡೆವಲ್ಲಾ!” ಎಂದು ಕೂಗಿಕೊಂಡೆನು. ಆಗ ಸೆರಾಫಿಯರಲ್ಲಿ - ತೇಜಸ್ವಿಯೊಬ್ಬನು ಬಲಿಪೀಠದಿಂದ, ಉರಿಯುವ ಕೆಂಡವೊಂದನ್ನು ಇಕ್ಕಳದಿಂದ ಹಿಡಿದುಕೊಂಡು ನನ್ನತ್ತ ಹಾರಿಬಂದನು. ಆ ಉರಿಕೆಂಡವನ್ನು ನನ್ನ ಬಾಯಿಗೆ ಮುಟ್ಟಿಸಿ: “ಇದು ನಿನ್ನ ತುಟಿಗಳನ್ನು ತಾಕಿದೆ. ಈಗ ದೋಷ ನೀಗಿತು. ನಿನ್ನ ಪಾಪ ಪರಿಹಾರ ಆಯಿತು,” ಎಂದನು. ಆಗ, “ಯಾರನ್ನು ಕಳುಹಿಸಲಿ? ನಮ್ಮ ಪರವಾಗಿ ಹೋಗುವವರು ಯಾರು?” ಎಂಬ ನುಡಿ ಕೇಳಿಸಿತು. ಅದಕ್ಕೆ ನಾನು, “ಇಗೋ, ನಾನು ಸಿದ್ಧ, ನನ್ನನ್ನು ಕಳುಹಿಸಿ” ಎಂದೆನು.

ಕೀರ್ತನೆ: 93:1, 1-2, 5
ಶ್ಲೋಕ:  ವಹಿಸಿಹನು ಪ್ರಭು ರಾಜ್ಯಾಧಿಕಾರವನು

ಶುಭಸಂದೇಶ: ಮತ್ತಾಯ 10:24-33



ಯೇಸುಸ್ವಾಮಿ ಶಿಷ್ಯರಿಗೆ ಕೊಟ್ಟ ಆದೇಶ ಇದು: "ಗುರುವಿಗಿಂತ ಶಿಷ್ಯನು ಶ್ರೇಷ್ಠನಲ್ಲ; ದಾಸನು ದಣಿಗಿಂತ ದೊಡ್ಡವನಲ್ಲ. ಗುರುವಿನಂತೆ ಶಿಷ್ಯನೂ ದಣಿಯಂತೆ ದಾಸನೂ ಆದರೆ ಸಾಕು. ಮನೆಯ ಯಜಮಾನನನ್ನೇ ‘ಬೆಲ್ಜಬೂಲ್’ ಎಂದು ಕರೆದಿರುವಾಗ ಅವನ ಮನೆಯವರನ್ನು ಇನ್ನೆಷ್ಟು ಅವಹೇಳನ ಮಾಡಲಾರರು?” “ಜನರಿಗೆ ಭಯಪಡಬೇಡಿ. ಮುಚ್ಚುಮರೆ ಆಗಿರುವುದೆಲ್ಲ ಬಟ್ಟಬಯಲಾಗುವುದು. ಗುಟ್ಟಾಗಿ ಇರುವುದೆಲ್ಲ ರಟ್ಟಾಗುವುದು. ನಾನು ಕತ್ತಲಲ್ಲಿ ಹೇಳುವುದನ್ನು ನೀವು ಬೆಳಕಿನಲ್ಲಿ ಪ್ರಚುರಪಡಿಸಿರಿ, ಕಿವಿಮಾತಾಗಿ ಕೇಳಿದ್ದನ್ನು ಮನೆಮಾಳಿಗೆಯ ಮೇಲೆ ನಿಂತು ಸಾರಿರಿ. ದೇಹವನ್ನು ಕೊಂದು ಹಾಕುವವರಿಗೆ ಭಯಪಡಬೇಡಿ; ಏಕೆಂದರೆ, ಅವರಿಂದ ಆತ್ಮವನ್ನು ಕೊಲ್ಲಲು ಆಗದು. ಆದರೆ ದೇಹಾತ್ಮಗಳೆರಡನ್ನೂ ನರಕದಲ್ಲಿ ನಾಶಮಾಡಬಲ್ಲ ದೇವರಿಗೆ ಭಯಪಡಿ. ಒಂದು ಕಾಸಿಗೆ ಎರಡು ಗುಬ್ಬಚ್ಚಿಗಳನ್ನು ಮಾರುವುದಿಲ್ಲವೆ? ಆದರೂ ಅವುಗಳಲ್ಲಿ ಒಂದಾದರೂ ನಿಮ್ಮ ತಂದೆಯ ಅನುಮತಿಯಿಲ್ಲದೆ ನೆಲಕ್ಕೆ ಬೀಳುವುದಿಲ್ಲ. ಅಲ್ಲದೆ ನಿಮ್ಮ ತಲೆಗೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಆದುದರಿಂದ ಭಯಪಡಬೇಡಿ; ಅನೇಕ ಗುಬ್ಬಚ್ಚಿಗಳಿಗಿಂತ ನೀವು ಎಷ್ಟೋ ಮೌಲ್ಯವುಳ್ಳವರು. “ಜನರ ಮುಂದೆ, ತಾನು ನನ್ನವನೆಂದು ಬಹಿರಂಗವಾಗಿ ಒಪ್ಪಿಕೊಳ್ಳುವ ಪ್ರತಿಯೊಬ್ಬನನ್ನು ನಾನು ಸಹ ಸ್ವರ್ಗದಲ್ಲಿರುವ ನನ್ನ ಪಿತನ ಮುಂದೆ ನನ್ನವನೆಂದು ಒಪ್ಪಿಕೊಳ್ಳುತ್ತೇನೆ. ಆದರೆ ಯಾವನಾದರೂ ತಾನು ನನ್ನವನಲ್ಲ ಎಂದು ಜನರ ಮುಂದೆ ಬಹಿರಂಗವಾಗಿ ನಿರಾಕರಿಸಿದರೆ, ಅಂಥವನನ್ನು ನಾನು ಸಹ ಸ್ವರ್ಗದಲ್ಲಿರುವ ನನ್ನ ಪಿತನ ಮುಂದೆ ನನ್ನವನಲ್ಲವೆಂದು ನಿರಾಕರಿಸುತ್ತೇನೆ."

08.07.22 - "ಏಕೆಂದರೆ ನೀವು ಹೇಳಬೇಕಾದುದ್ದನ್ನು ಅದೇ ಗಳಿಗೆಯಲ್ಲಿ ನಿಮಗೆ ಕಲಿಸಿಕೊಡಲಾಗುವುದು"

ಮೊದಲನೇ ವಾಚನ: ಪ್ರವಾದಿ ಹೋಶೇಯನ ಗ್ರಂಥ 14:2-10 

ಇಸ್ರಯೇಲ್, ನಿನ್ನ ಸರ್ವೇಶ್ವರನಾದ ದೇವರ ಬಳಿಗೆ ಹಿಂದಿರುಗು. ನಿನ್ನ ಪಾಪದ್ರೋಹಗಳೇ ನಿನ್ನ ಪತನಕ್ಕೆ ಕಾರಣ. ಆದುದರಿಂದ ಪಶ್ಚಾತ್ತಾಪದ ಮಾತುಗಳೊಂದಿಗೆ ದೇವರಿಗೆ ಅಭಿಮುಖವಾಗಿ, “ಪ್ರಭುವೇ, ನಮ್ಮ ಅಪರಾಧವನ್ನು ತೊಡೆದುಹಾಕು. ನಮ್ಮಲ್ಲಿ ಒಳಿತಾದುದನ್ನೇ ಅಂಗೀಕರಿಸು. ನಿನಗೆ ಸ್ತುತಿಬಲಿಯನ್ನು ಸಮರ್ಪಿಸುವೆವು. ಅಸ್ಸೀರಿಯದಿಂದ ನಮಗೆ ರಕ್ಷಣೆ ದೊರಕದು. ನಾವು ಕಾಳಗದ ಕುದುರೆಗಳ ಮೇಲೆ ಇನ್ನೆಂದೂ ಸವಾರಿ ಮಾಡೆವು. ನಮ್ಮ ಕೈಗಳು ನಿರ್ಮಿಸಿರುವ ವಿಗ್ರಹಗಳನ್ನು ವೀಕ್ಷಿಸಿ, ‘ನೀವೇ ನಮ್ಮ ದೇವರು’ ಎಂದು ಜಪಿಸೆವು. ಓ ದೇವಾ, ದಿಕ್ಕಿಲ್ಲದವರಿಗೆ ಕರುಣೆತೋರಿಸುವವನು ನೀನೇ,” ಎಂದು ಹೇಳು. ಸರ್ವೇಶ್ವರ ಇಂತೆನ್ನುತ್ತಾರೆ: ಪರಿಹರಿಸುವೆನು ಜನರ ಭ್ರಷ್ಟತನವನು ಪ್ರೀತಿಸುವೆನು ಮನಪೂರ್ವಕವಾಗಿ ಅವರನು ತ್ಯಜಿಸಿಬಿಡುವೆನು ಅವರ ಮೇಲಿದ್ದ ಕೋಪವನು. ಇರುವೆನು ಇಸ್ರಯೇಲಿಗೆ ಇಬ್ಬನಿಯಂತೆ ಅರಳುವುದು ಆ ನಾಡು ತಾವರೆಯಂತೆ ಬೇರೂರುವುದು ಲೆಬನೋನಿನ ದೇವದಾರು ವೃಕ್ಷದಂತೆ. ಹರಡಿಕೊಳ್ಳುವುದದು ಮರದ ರೆಂಬೆಗಳಂತೆ ಕಂಗೊಳಿಸುವುದು ಚೆಲುವಾದ ಓಲಿವ ಮರದಂತೆ ಅದರ ಪರಿಮಳ ಮನೋಹರ ಲೆಬನೋನಿನ ಲತೆಗಳಂತೆ. ಮರಳಿ ಆಶ್ರಯಿಸುವರು ನನ್ನ ನೆರಳನ್ನು ಆ ಜನತೆ ಅಭಿವೃದ್ಧಿಯಾಗುವರು ಉದ್ಯಾನವನದಂತೆ ಫಲಪ್ರದವಾಗುವರು ಆ ಜನರು ದ್ರಾಕ್ಷಾಲತೆಯಂತೆ ಸುಪ್ರಸಿದ್ಧ ಅವರ ಕೀರ್ತಿ ಲೆಬನೋನಿನ ದ್ರಾಕ್ಷಾರಸದಂತೆ. ನುಡಿವುದು ಎಫ್ರಯಿಮ್, “ನನಗಿನ್ನು ಬೇಡ ವಿಗ್ರಹಗಳ ಗೊಡವೆ”. ಅದಕ್ಕೆ ಒಲಿದು ಕಟಾಕ್ಷಿಸುವವನು ನಾನೇ ಅದಕ್ಕೆ ಹಚ್ಚಹಸಿರಾದ ತುರಾಯಿಮರದಂತಿರುವೆ ಅದಕ್ಕೆ ಫಲವನ್ನು ನೀಡುವವನು ನಾನೇ.” ಬುದ್ಧಿವಂತನು ಈ ಮಾತುಗಳನ್ನು ಗ್ರಹಿಸಿಕೊಳ್ಳಲಿ. ವಿವೇಕಿಯು ಈ ನುಡಿಗಳನ್ನು ಅರ್ಥಮಾಡಿ ಕೊಳ್ಳಲಿ. ಸರ್ವೇಶ್ವರಸ್ವಾಮಿಯ ಮಾರ್ಗಗಳು ನೇರವಾದವುಗಳು. ಸನ್ಮಾರ್ಗಿಗಳು ಅವುಗಳನ್ನು ಕೈಗೊಂಡು ನಡೆಯುವರು. ದುರ್ಮಾರ್ಗಿಗಳು ಅವುಗಳನ್ನು ಕೈಬಿಟ್ಟು ಮುಗ್ಗರಿಸಿ ಬೀಳುವರು.

ಕೀರ್ತನೆ: 51:3-4, 8-9, 12-13, 14, 17

ಶ್ಲೋಕ:  ನಿನ್ನ ಸತ್ಯಸಂಧತೆಯನು ಸಾರುವೆ ಮುಕ್ತಕಂಠದಿಂದ

ಶುಭಸಂದೇಶ: ಮತ್ತಾಯ 10:16-23

ಯೇಸುಸ್ವಾಮಿ ಶಿಷ್ಯರ ನಿಯೋಗವನ್ನು ಕಳುಹಿಸುವಾಗ ಅವರಿಗೆ ಕೊಟ್ಟ ಆದೇಶ ಇದು: “ಗಮನಿಸಿರಿ, ತೋಳಗಳ ನಡುವೆ ಕುರಿಗಳನ್ನು ಬಿಟ್ಟಂತೆ ನಾನು ನಿಮ್ಮನ್ನು ಕಳುಹಿಸುತ್ತಿದ್ದೇನೆ. ಆದುದರಿಂದ ಸರ್ಪಗಳಂತೆ ಸೂಕ್ಷ್ಮಬುದ್ಧಿಯುಳ್ಳವರೂ ಪಾರಿವಾಳಗಳಂತೆ ಸರಳಜೀವಿಗಳೂ ಆಗಿರಿ. ಜನರ ಬಗ್ಗೆ ಜಾಗರೂಕರಾಗಿರಿ! ಅವರು ನಿಮ್ಮನ್ನು ನ್ಯಾಯಸ್ಥಾನಗಳಿಗೆ ಹಿಡಿದೊಪ್ಪಿಸುವರು. ಪ್ರಾರ್ಥನಾಮಂದಿರಗಳಲ್ಲಿ ಕೊರಡೆಗಳಿಂದ ಹೊಡೆಯುವರು. ನನ್ನ ನಿಮಿತ್ತ ನಿಮ್ಮನ್ನು ಅಧಿಕಾರಿಗಳ ಮತ್ತು ಅರಸರುಗಳ ಮುಂದೆ ಎಳೆದೊಯ್ಯುವರು. ಅವರ ಹಾಗೂ ಪರಕೀಯರ ಮುಂದೆ ನೀವು ನನಗೆ ಸಾಕ್ಷಿಗಳಾಗುವಿರಿ. ನಿಮ್ಮನ್ನು ಹಿಡಿದೊಪ್ಪಿಸುವಾಗ ಹೇಗೆ ವಾದಿಸುವುದು, ಏನು ಹೇಳುವುದು ಎಂದು ಚಿಂತಾಕ್ರಾಂತರಾಗಬೇಡಿ. ಏಕೆಂದರೆ ನೀವು ಹೇಳಬೇಕಾದುದ್ದನ್ನು ಅದೇ ಗಳಿಗೆಯಲ್ಲಿ ನಿಮಗೆ ಕಲಿಸಿಕೊಡಲಾಗುವುದು. ಆಗ ಮಾತನಾಡುವವರು ನೀವಲ್ಲ, ನಿಮ್ಮ ತಂದೆಯ ಆತ್ಮವೇ ನಿಮ್ಮ ಮುಖಾಂತರ ಮಾತನಾಡುವುದು. ಸಹೋದರನು ಸಹೋದರನನ್ನೇ ತಂದೆಯು ಮಗನನ್ನೇ ಮರಣಕ್ಕೆ ಗುರಿಮಾಡುವರು. ಮಕ್ಕಳು ಹೆತ್ತವರ ಮೇಲೆ ತಿರುಗಿಬಿದ್ದು ಅವರನ್ನು ಕೊಲ್ಲಿಸುವರು. ನೀವು ನನ್ನವರು; ಆದುದರಿಂದಲೇ ನಿಮ್ಮನ್ನು ಎಲ್ಲರೂ ದ್ವೇಷಿಸುವರು. ಆದರೆ ಕೊನೆಯವರೆಗೂ ಸೈರಣೆಯಿಂದಿರುವವನು ಜೀವೋದ್ಧಾರವನ್ನು ಹೊಂದುವನು. ಒಂದು ಊರಿನಲ್ಲಿ ನಿಮ್ಮನ್ನು ಹಿಂಸೆಪಡಿಸಿದರೆ, ಮತ್ತೊಂದು ಊರಿನಲ್ಲಿ ಆಶ್ರಯ ಪಡೆಯಿರಿ. ನರಪುತ್ರನು ಬರುವಷ್ಟರಲ್ಲಿ ನೀವು ಇಸ್ರಯೇಲ್ ಜನರ ಊರುಗಳನ್ನೆಲ್ಲಾ ಸುತ್ತಿ ಮುಗಿಸಿರಲಾರಿರಿ; ಇದು ನಿಶ್ಚಯ.



07.07.22 - "ಬೋಧನೆಮಾಡಿರಿ. ರೋಗಿಗಳನ್ನು ಗುಣಪಡಿಸಿರಿ, ಸತ್ತವರನ್ನು ಮತ್ತೆ ಬದುಕಿಸಿರಿ"

ಮೊದಲನೇ ವಾಚನ: ಪ್ರವಾದಿ ಹೋಶೇಯನ ಗ್ರಂಥ 11:1, 3-4, 8-9 

ಸರ್ವೇಶ್ವರ ಇಂತೆನ್ನುತ್ತಾರೆ: “ಪ್ರೀತಿಸಿದೆನು ಇಸ್ರಯೇಲನ್ನು ಅದರ ಬಾಲ್ಯಾವಸ್ಥೆಯಿಂದ; ಕರೆದೆನು ನನ್ನ ಆ ಪುತ್ರನನು ಈಜಿಪ್ಟಿನಿಂದ. ಎಫ್ರಯಿಮಿಗೆ ಅಂಬೆಗಾಲಿಡಲು ಕಲಿಸಿದವನು ನಾನೇ ಅದನ್ನು ಕೈಗಳಲ್ಲಿ ಎತ್ತಿಕೊಂಡು ಆಡಿಸಿದವನು ನಾನೇ ಆ ಜನರನ್ನು ಸ್ವಸ್ಥಮಾಡಿದವನೂ ನಾನೇ; ಆದರೆ ಅರಿತುಕೊಳ್ಳದೆಹೋದರು ಈ ವಿಷಯವನೇ. ಬೆಳೆಸಿದೆನು ಅವರನ್ನು ಕರುಣೆಯ ಕಟ್ಟುಗಳಲಿ, ಪ್ರೀತಿಯ ಬಂಧನದಲಿ ಸುಧಾರಿಸಿದೆ ಅವರ ಹೆಗಲಿಗೆ ಬಿಗಿದಿದ್ದ ನೊಗವನ್ನು ಬಿಚ್ಚಿ ಊಟ ಬಡಿಸಿದೆ ಅವರಿಗೆ ನೆಲಸಮ ಬಗ್ಗಿ. “ಹೇಗೆ ತ್ಯಜಿಸಲಿ ಎಫ್ರಯಿಮೇ, ನಿನ್ನನು ಹೇಗೆ ಕೈಬಿಡಲಿ ಇಸ್ರಯೇಲೇ, ನಿನ್ನನು. ಹೇಗೆ ಈಡುಮಾಡಲಿ ದುರ್ಗತಿಗೆ ನಿನ್ನನು ಅದ್ಮದಂತೆ, ಹೇಗೆ ನಾಶಮಾಡಲಿ ನಿನ್ನನು ಚೆಬೋಯೀಮನಂತೆ? ತಡೆಹಿಡಿಯುವೆನು ನನ್ನ ಉಗ್ರಕೋಪವನು ನಾಶಪಡಿಸಲಾರೆ ಮರಳಿ ಎಫ್ರಯಿಮನು. ನರಮಾನವನಲ್ಲ, ದೇವರು ನಾನು ನಿಮ್ಮಲ್ಲಿ ನೆಲೆಯಾಗಿರುವ ಸದಮಲಸ್ವಾಮಿಯು! ನನ್ನದಲ್ಲ ನಾಶಮಾಡುವ ರೋಷವು.

ಕೀರ್ತನೆ: 80:2, 3, 15-16

ಶ್ಲೋಕ:  ದೇವರೇ, ಬೆಳಗಲಿ ನಿನ್ನ ಮುಖಕಾಂತಿ, ಪಡೆವೆವು ರಕ್ಷಣೆಯನು

ಶುಭಸಂದೇಶ:  ಮತ್ತಾಯ 10:7-15


ಹನ್ನೆರಡು ಮಂದಿಯ ನಿಯೋಗವನ್ನು ಕಳುಹಿಸುವಾಗ ಯೇಸುಸ್ವಾಮಿ ಅವರಿಗೆ ಕೊಟ್ಟ ಆದೇಶ ಇದು: "ಪರಕೀಯರತ್ತ ಹೋಗಲೇಬೇಡಿ; ಸಮಾರಿಯದವರ ಯಾವ ಊರಿಗೂ ಕಾಲಿಡಬೇಡಿ. ಅದಕ್ಕೆ ಬದಲು ತಪ್ಪಿಹೋದ ಕುರಿಗಳಂತೆ ಇರುವ ಇಸ್ರಯೇಲ್ ಜನರ ಬಳಿಗೆ ಹೋಗಿರಿ; ಹೋಗುತ್ತಾ, ‘ಸ್ವರ್ಗಸಾಮ್ರಾಜ್ಯವು ಸಮೀಪಿಸಿದೆ’ ಎಂದು ಬೋಧನೆಮಾಡಿರಿ. ರೋಗಿಗಳನ್ನು ಗುಣಪಡಿಸಿರಿ, ಸತ್ತವರನ್ನು ಮತ್ತೆ ಬದುಕಿಸಿರಿ, ಕುಷ್ಠರೋಗಿಗಳನ್ನು ಸ್ವಸ್ಥಮಾಡಿರಿ. ದೆವ್ವಗಳನ್ನು ಬಿಡಿಸಿರಿ, ಉಚಿತವಾಗಿ ಪಡೆದಿರುವಿರಿ, ಉಚಿತವಾಗಿ ಕೊಡಿ. ಜೇಬಿನಲ್ಲಿ ಚಿನ್ನ, ಬೆಳ್ಳಿ, ತಾಮ್ರವನ್ನಾಗಲಿ, ಪ್ರಯಾಣಕ್ಕೆಂದು ಜೋಳಿಗೆಯನ್ನಾಗಲಿ, ಎರಡು ಅಂಗಿಗಳನ್ನಾಗಲಿ, ಕಾಲಿಗೆ ಕೆರವನ್ನಾಗಲಿ, ಕೈಗೆ ದಂಡವನ್ನಾಗಲಿ ತೆಗೆದುಕೊಳ್ಳಬೇಡಿ. ಏಕೆಂದರೆ, ದುಡಿಮೆಗಾರನು ಜೀವನಾಧಾರಕ್ಕೆ ಬಾಧ್ಯನು. “ನೀವು ಒಂದು ಪಟ್ಟಣಕ್ಕಾಗಲಿ, ಹಳ್ಳಿಗಾಗಲಿ ಹೋದಾಗ, ಅಲ್ಲಿ ನಿಮ್ಮನ್ನು ಬರಮಾಡಿಕೊಳ್ಳಲು ಯೋಗ್ಯನು ಯಾರೆಂದು ಕಂಡುಹಿಡಿಯಿರಿ. ಅಲ್ಲಿಂದ ಮುಂದಕ್ಕೆ ಸಾಗುವವರೆಗೂ ಅವನಲ್ಲೇ ತಂಗಿರಿ. ನೀವು ಒಂದು ಮನೆಗೆ ಹೋದಾಗ, “ಈ ಮನೆಗೆ ಶುಭವಾಗಲಿ!” ಎಂದು ಹರಸಿರಿ. ಆ ಮನೆಯವರು ನಿಮ್ಮನ್ನು ಸ್ವಾಗತಿಸಿದರೆ, ನಿಮ್ಮ ಆಶೀರ್ವಾದ ಅವರ ಮೇಲೆ ನೆಲಸಲಿ. ನಿಮ್ಮನ್ನು ಸ್ವಾಗತಿಸದೆಹೋದರೆ, ನಿಮ್ಮ ಆಶೀರ್ವಾದ ನಿಮಗೇ ಹಿಂದಿರುಗಲಿ. ಒಂದು ಮನೆಯೇ ಆಗಲಿ, ಊರೇ ಆಗಲಿ, ನಿಮ್ಮನ್ನು ಸ್ವಾಗತಿಸದೆ ಅಥವಾ ನಿಮಗೆ ಕಿವಿಗೊಡದೆಹೋದರೆ, ಆ ಮನೆಯನ್ನು ಅಥವಾ ಊರನ್ನು ಬಿಟ್ಟು ಮುಂದಕ್ಕೆ ಹೋಗಿರಿ. ಹೋಗುವಾಗ ನಿಮ್ಮ ಪಾದಗಳಿಗೆ ಅಂಟಿರುವ ದೂಳನ್ನೂ ಝಾಡಿಸಿಬಿಡಿ. ತೀರ್ಪಿನ ದಿನ ಆ ಊರಿನ ಗತಿ ಸೊದೋಮ್ ಮತ್ತು ಗೊಮೋರ ಊರುಗಳ ಗತಿಗಿಂತ ಕಠಿಣವಾಗಿರುವುದೆಂದು ನಾನು ನಿಮಗೆ ಒತ್ತಿ ಹೇಳುತ್ತೇನೆ.

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...