ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

07.06.22 - "ಅದೇ ರೀತಿ ನಿಮ್ಮ ಜ್ಯೋತಿ ಜನರ ಮುಂದೆ ಬೆಳಗಲಿ; ಹೀಗೆ ಅವರು ನಿಮ್ಮ ಸತ್ಕಾರ್ಯಗಳನ್ನು ಕಂಡು ಸ್ವರ್ಗದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡಲಿ."

ಮೊದಲನೇ ವಾಚನ: 1 ಅರಸುಗಳು  17:7-16


ಕೆಲವು ದಿವಸಗಳಾದ ನಂತರ ನಾಡಿನಲ್ಲಿ ಮಳೆಯಿಲ್ಲದ್ದರಿಂದ ಹಳ್ಳವು ಬತ್ತಿ ಹೋಯಿತು. ಆಗ ಸರ್ವೇಶ್ವರ ಅವನಿಗೆ: “ನೀನು ಇಲ್ಲಿಂದ ಸಿದೋನ್ಯರ ಸರೆಪ್ತಾ ಊರಿಗೆ ಹೊರಟುಹೋಗಿ ಅಲ್ಲಿ ವಾಸಿಸು. ನಿನ್ನನ್ನು ಪೋಷಿಸಬೇಕೆಂದು ಅಲ್ಲಿನ ಒಬ್ಬ ವಿಧವೆಗೆ ಆಜ್ಞಾಪಿಸಿದ್ದೇನೆ,” ಎಂದರು. ಅವನು ಅಲ್ಲಿಂದ ಹೊರಟು ಸರೆಪ್ತಾದ ಊರು ಬಾಗಿಲಿನ ಸಮೀಪಕ್ಕೆ ಬಂದನು. ಸೌದೆ ಕೂಡಿಸುತ್ತಿದ್ದ ಒಬ್ಬ ವಿಧವೆಯನ್ನು ಕಂಡು ಆಕೆಯನ್ನು ಕರೆದು, “ದಯವಿಟ್ಟು ಕುಡಿಯುವುದಕ್ಕೆ ಒಂದು ತಂಬಿಗೆಯಲ್ಲಿ ನೀರು ತೆಗೆದುಕೊಂಡು ಬಾ,” ಎಂದು ಹೇಳಿದನು. ಆಕೆ ಹೋಗುತ್ತಿರುವಾಗ ಮತ್ತೆ ಆಕೆಯನ್ನು ಕರೆದು, “ನೀನು ಬರುವಾಗ ನನಗೆ ಒಂದು ತುಂಡು ರೊಟ್ಟಿಯನ್ನು ಸಹ ತೆಗೆದುಕೊಂಡು ಬಾ,” ಎಂದನು. ಆಕೆ, “ನಿನ್ನ ದೇವರಾದ ಸರ್ವೇಶ್ವರನಾಣೆ, ನನ್ನ ಹತ್ತಿರ ರೊಟ್ಟಿಯಿಲ್ಲ. ಮಡಕೆಯಲ್ಲಿ ಒಂದು ಹಿಡಿ ಹಿಟ್ಟು, ಕುಡಿಕೆಯಲ್ಲಿ ಸ್ವಲ್ಪ ಎಣ್ಣೆ, ಇವುಗಳ ಹೊರತು ಬೇರೇನೂ ಇಲ್ಲ. ಈಗ ಸೌದೆ ಆಯ್ದುಕೊಂಡು ಹೋಗಿ ನನಗೂ ನನ್ನ ಮಗನಿಗೂ ರೊಟ್ಟಿ ಮಾಡುತ್ತೇನೆ. ಅದನ್ನು ತಿಂದ ಮೇಲೆ ನಾವು ಸಾಯಬೇಕೇ ಹೊರತು ಬೇರೆ ಗತಿಯಿಲ್ಲ,” ಎಂದು ಉತ್ತರ ಕೊಟ್ಟಳು. ಆಗ ಎಲೀಯನು, “ಹೆದರಬೇಡ, ನೀನು ಹೇಳಿದಂತೆ ಮಾಡು; ಆದರೆ ಮೊದಲು ಅದರಿಂದ ನನಗೆ ಒಂದು ಚಿಕ್ಕ ರೊಟ್ಟಿಯನ್ನು ಮಾಡಿಕೊಂಡು ಬಾ; ತರುವಾಯ ನಿನಗೂ ನಿನ್ನ ಮಗನಿಗೂ ಮಾಡಿಕೋ. ಇಸ್ರಯೇಲ್ ದೇವರಾದ ಸರ್ವೇಶ್ವರ ನಿನಗೆ, “ನಾನು ನಾಡಿಗೆ ಮಳೆಯನ್ನು ಕಳುಹಿಸುವವರೆಗೆ ನಿನ್ನ ಮಡಕೆಯಲ್ಲಿರುವ ಹಿಟ್ಟು ತೀರುವುದಿಲ್ಲ, ಕುಡಿಕೆಯಲ್ಲಿರುವ ಎಣ್ಣೆ ಮುಗಿದುಹೋಗುವುದಿಲ್ಲ,” ಎಂದು ಹೇಳುತ್ತಾರೆ ಎಂದನು. ಆಕೆ ಹೋಗಿ ಅವನು ಹೇಳಿದಂತೆಯೇ ಮಾಡಿದಳು. ಆಕೆಯೂ ಆಕೆಯ ಮನೆಯವರೂ ಎಲೀಯನೂ ಅದನ್ನು ಅನೇಕ ದಿವಸಗಳವರೆಗೆ ಊಟಮಾಡಿದರು. ಸರ್ವೇಶ್ವರ ಎಲೀಯನ ಮುಖಾಂತರ ಹೇಳಿದಂತೆ ಮಡಕೆಯಲ್ಲಿದ್ದ ಹಿಟ್ಟು ತೀರಲಿಲ್ಲ; ಕುಡಿಕೆಯಲ್ಲಿದ್ದ ಎಣ್ಣೆ ಮುಗಿದು ಹೋಗಲಿಲ್ಲ

ಕೀರ್ತನೆ: 4:2-3, 4-5, 7-8


ಶ್ಲೋಕ: ಬೆಳಗಿಸಲಿ ನಮ್ಮನು, ಓ ಪ್ರಭೂ, ನಿನ್ನ ಮೊಗದ ಘನತೆ


ಎಲೆ ಮಾನವ, ಎಲ್ಲಿಯತನಕ ಕೆಡಿಸುವೆ ಎನ್ನ ಘನತೆಯ? I
ಅದೆಷ್ಟು ಕಾಲ ಹುರುಳಿಲ್ಲದನು ಬಯಸಿ ಅರಸುವೆ ಹುಸಿಯ? II
ಭಕ್ತನನು ಪ್ರಭು ಪ್ರತ್ಯೇಕಿಸಿಕೊಂಡನೆಂದು ತಿಳಿದುಕೊ I
ನಾ ಮೊರೆಯಿಟ್ಟಾಗ ಆತ ಕಿವಿಗೊಡುವನೆಂದು ಅರಿತುಕೊ II

ಕೋಪಗೊಂಡರೂ ದೂರವಿರು ಪಾಪದಿಂದ I
ಶಯನದಲ್ಲಿದ್ದರೂ ಧ್ಯಾನಿಸು ಹೃದಯದಿಂದ II
ಅರ್ಪಿಸಿರಿ ಯೋಗ್ಯ ಬಲಿಗಳನೆ I
ಇಡಿರಿ ಭರವಸೆ ಪ್ರಭುವಿನಲೆ II

ಧಾನ್ಯದ್ರಾಕ್ಷಿಗಳ ಸುಗ್ಗಿಸಂತಸಕ್ಕಿಂತಲು I
ಮಿಗಿಲಾನಂದ ತುಂಬಿಸಿರುವೆ ನೀ ಎನ್ನೆದೆಯೊಳು II
ಮಲಗಿ ನಿದ್ರಿಸುವೆನು ನಾ ನಿಶ್ಚಿಂತನಾಗಿ I
ಪ್ರಭು ನೀ ಕಾಯುವೆ ಎನ್ನ ಸುರಕ್ಷಿತನಾಗಿ II

ಶುಭಸಂದೇಶ: ಮತ್ತಾಯ 5:13-16 



ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: “ಈ ಧರೆಗೆ ನೀವೇ ಉಪ್ಪು; ಉಪ್ಪೇ ಸಪ್ಪೆಯಾಗಿಬಿಟ್ಟರೆ ಅದಕ್ಕೆ ಇನ್ನಾವುದರಿಂದ ಪುನಃ ರುಚಿಬಂದೀತು? ಇನ್ನು ಅದು ಕೆಲಸಕ್ಕೆ ಬಾರದ ವಸ್ತು. ಜನರು ಅದನ್ನು ಆಚೆ ಬಿಸಾಡುತ್ತಾರೆ. ದಾರಿಗರು ಅದನ್ನು ತುಳಿದುಬಿಡುತ್ತಾರಷ್ಟೆ.” “ಜಗತ್ತಿಗೆ ನೀವೇ ಜ್ಯೋತಿ. ಬೆಟ್ಟದ ಮೇಲಿನ ಪಟ್ಟಣವನ್ನು ಮುಚ್ಚಿಡಲಾಗದು. ಅಂತೆಯೇ ಯಾರೂ ದೀಪವನ್ನು ಹಚ್ಚಿ ಬಟ್ಟಲ ಕೆಳಗೆ ಬಚ್ಚಿಡುವುದಿಲ್ಲ; ದೀಪಸ್ತಂಭದ ಮೇಲೆ ಇಡುತ್ತಾರೆ. ಆಗ ಅದು ಮನೆಯಲ್ಲಿರುವ ಎಲ್ಲರಿಗೆ ಬೆಳಕನ್ನು ಕೊಡುತ್ತದೆ. ಅದೇ ರೀತಿ ನಿಮ್ಮ ಜ್ಯೋತಿ ಜನರ ಮುಂದೆ ಬೆಳಗಲಿ; ಹೀಗೆ ಅವರು ನಿಮ್ಮ ಸತ್ಕಾರ್ಯಗಳನ್ನು ಕಂಡು ಸ್ವರ್ಗದಲ್ಲಿರುವ ನಿಮ್ಮ ತಂದೆಯನ್ನು ಕೊಂಡಾಡಲಿ."

06.06.22 - “ಅಮ್ಮಾ, ಇಗೋ, ನಿನ್ನ ಮಗ,”

ಮೊದಲನೆಯ ವಾಚನ: ಪ್ರೇಷಿತರ ಕಾರ್ಯಕಲಾಪಗಳಿಂದ ವಾಚನ 1: 12-14


ಯೇಸು ಸ್ವರ್ಗಾರೋಹಣವಾದ ನಂತರ ಪ್ರೇಷಿತರು ಓಲಿವ್ ತೋಪಿನ ಗುಡ್ಡದಿಂದ ಸುಮಾರು ಒಂದು ಕಿಲೊವಿೂಟರು ದೂರದಲ್ಲಿರುವ ಜೆರುಸಲೇಮಿಗೆ ಹಿಂದಿರುಗಿದರು. ಅವರು ಯಾರಾರೆಂದರೆ: ಪೇತ್ರ, ಯೊವಾನ್ನ, ಯಕೋಬ, ಅಂದ್ರೆಯ, ಫಿಲಿಪ್ಪ, ತೋಮ, ಬಾರ್ತಲೊಮಾಯ, ಮತ್ತಾಯ, ಅಲ್ಫಾಯನ ಮಗ ಯಕೋಬ, ದೇಶಾಭಿಮಾನಿ ಆದ ಸಿಮೋನ ಮತ್ತು ಯಕೋಬನ ಮಗ ಯೂದ. ಇವರೆಲ್ಲರು ಪಟ್ಟಣವನ್ನು ಸೇರಿದ್ದೇ, ಮೇಲ್ಮಾಳಿಗೆಯಲ್ಲಿದ್ದ ತಮ್ಮ ಕೊಠಡಿಗೆ ಹೋದರು. ಅಲ್ಲಿ ಅವರು ಒಮ್ಮನಸ್ಸಿನಿಂದ ಪ್ರಾರ್ಥನೆಯಲ್ಲಿ ನಿರತರಾಗುತ್ತಿದ್ದರು. ಕೆಲವು ಮಹಿಳೆಯರೂ ಯೇಸುವಿನ ತಾಯಿ ಮರಿಯಳೂ ಯೇಸುವಿನ ಸಹೋದರರೂ ಅವರೊಡನೆ ಇದ್ದರು.

ಕೀರ್ತನೆ 87:1-2, 3, 5, 6-7 
ಶ್ಲೋಕ: ದೈವ ಶ್ರೀನಗರವೇ, ಕೇಳು ಇವನ್ನು, ನಿನ್ನ ಕುರಿತ ಅತಿಯೋಕ್ತಿಗಳನು  

ಶುಭಸಂದೇಶ: ಯೊವಾನ್ನ 19: 25-34


ಯೇಸುವಿನ ತಾಯಿ, ತಾಯಿಯ ಸಹೋದರಿ, ಕ್ಲೋಪನ ಹೆಂಡತಿ ಮರಿಯ ಮತ್ತು ಮಗ್ದಲದ ಮರಿಯ - ಇವರು ಶಿಲುಬೆಯ ಬಳಿಯಲ್ಲಿ ನಿಂತಿದ್ದರು. ಯೇಸು ತಮ್ಮ ತಾಯನ್ನೂ ಆಕೆಯ ಪಕ್ಕದಲ್ಲಿ ನಿಂತಿದ್ದ ತಮ್ಮ ಆಪ್ತ ಶಿಷ್ಯನನ್ನೂ ನೋಡಿ, “ಅಮ್ಮಾ, ಇಗೋ, ನಿನ್ನ ಮಗ,” ಎಂದರು. ಅನಂತರ ತಮ್ಮ ಶಿಷ್ಯನನ್ನು ಕುರಿತು, “ಇಗೋ, ನಿನ್ನ ತಾಯಿ,” ಎಂದರು. ಅಂದಿನಿಂದ ಆ ಶಿಷ್ಯನು ಆಕೆಯನ್ನು ತನ್ನ ಮನೆಯಲ್ಲೇ ಇರಿಸಿಕೊಂಡನು. ಅನಂತರ ತಮ್ಮ ಶಿಷ್ಯನನ್ನು ಕುರಿತು, “ಇಗೋ, ನಿನ್ನ ತಾಯಿ,” ಎಂದರು. ಅಂದಿನಿಂದ ಆ ಶಿಷ್ಯನು ಆಕೆಯನ್ನು ತನ್ನ ಮನೆಯಲ್ಲೇ ಇರಿಸಿಕೊಂಡನು. ಇದಾದ ಮೇಲೆ ಯೇಸುಸ್ವಾಮಿ ನೆರವೇರಬೇಕಾದುದೆಲ್ಲವೂ ನೆರವೇರಿದೆ ಎಂದು ತಿಳಿದು ಪವಿತ್ರಗ್ರಂಥದಲ್ಲಿ ಬರೆದುದು ಈಡೇರುವಂತೆ, “ನನಗೆ ದಾಹವಾಗಿದೆ,” ಎಂದು ನುಡಿದರು. ಬಳಿಯಲ್ಲೇ ಹುಳಿರಸ ತುಂಬಿದ ಪಾತ್ರೆಯೊಂದಿತ್ತು. ಅವರು ಸ್ಪಂಜನ್ನು ಆ ಹುಳಿರಸದಲ್ಲಿ ತೋಯಿಸಿ ಹಿಸೋಪ್‍ಗಿಡದ ಕೋಲಿಗೆ ಸಿಕ್ಕಿಸಿ, ಯೇಸುವಿನ ಬಾಯಿಗೆ ಮುಟ್ಟಿಸಿದರು. ಯೇಸು ಆ ಹುಳಿರಸವನ್ನು ಸೇವಿಸುತ್ತಲೇ, “ಎಲ್ಲಾ ನೆರವೇರಿತು,” ಎಂದು ನುಡಿದು ತಲೆಬಾಗಿ ತಮ್ಮ ಆತ್ಮವನ್ನು ಒಪ್ಪಿಸಿದರು. ತಾವು ಇರಿದವನನ್ನೇ ನಿರೀಕ್ಷಿಸುವರು ಅಂದು ಪಾಸ್ಕ ಹಬ್ಬದ ಹಿಂದಿನ ದಿನ. ಮಾರನೆಯ ದಿನ ಸಬ್ಬತ್ ದಿನವೂ ದೊಡ್ಡ ಹಬ್ಬವೂ ಆಗಿತ್ತು. ಸಬ್ಬತ್ ದಿನದಂದು ಶವಗಳು ಶಿಲುಬೆಯ ಮೇಲೆ ತೂಗಾಡುವುದು ಸರಿಯಲ್ಲ ಎಂದುಕೊಂಡು ಶಿಲುಬೆಗೇರಿಸಲಾಗಿದ್ದವರ ಕಾಲುಗಳನ್ನು ಮುರಿದು ಅವರ ಶವವನ್ನು ಅಂದೇ ತೆಗೆಯಿಸಿಬಿಡಲು ಯೆಹೂದ್ಯರು ಪಿಲಾತನಿಂದ ಅಪ್ಪಣೆ ಕೇಳಿಕೊಂಡರು. ಅಂತೆಯೇ ಸೈನಿಕರು ಬಂದು ಯೇಸುವಿನೊಡನೆ ಶಿಲುಬೆಗೇರಿಸಲಾಗಿದ್ದ ಮೊದಲನೆಯವನ ಮತ್ತು ಎರಡನೆಯವನ ಕಾಲುಗಳನ್ನು ಮುರಿದರು. ತರುವಾಯ ಯೇಸುವಿನ ಬಳಿಗೆ ಬಂದರು. ಯೇಸು ಆಗಲೇ ಸತ್ತುಹೋಗಿರುವುದನ್ನು ಕಂಡು, ಅವರ ಕಾಲುಗಳನ್ನು ಮುರಿಯಲಿಲ್ಲ. ಆದರೂ ಸೈನಿಕರಲ್ಲಿ ಒಬ್ಬನು ಈಟಿಯಿಂದ ಅವರ ಪಕ್ಕೆಯನ್ನು ತಿವಿದನು. ಕೂಡಲೇ ರಕ್ತವೂ ನೀರೂ ಅಲ್ಲಿಂದ ಹೊರಗೆ ಹರಿದು ಬಂದವು.

05.06.22- "ನಿಮಗೆ ಶಾಂತಿ, ಪಿತನು ನನ್ನನ್ನು ಕಳುಹಿಸಿದಂತೆಯೇ ನಾನೂ ನಿಮ್ಮನ್ನು ಕಳುಹಿಸುತ್ತೇನೆ,”

ಪಂಚಾಶತ್ತಮ ಮಹೋತ್ಸವ

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 2:1-11


ಪಂಚಾಶತ್ತಮ ಹಬ್ಬದ ದಿನ ಭಕ್ತವಿಶ್ವಾಸಿಗಳೆಲ್ಲರೂ ಒಂದು ಸ್ಥಳದಲ್ಲಿ ಸಭೆಸೇರಿದ್ದರು. ಫಕ್ಕನೆ ಬಲವಾದ ಬಿರುಗಾಳಿ ಬೀಸುತ್ತಿದೆಯೋ ಎಂಬಂತೆ ಶಬ್ದವೊಂದು ಆಕಾಶದಿಂದ ಕೇಳಿಬಂತು. ಅದು ಅವರು ಕುಳಿತಿದ್ದ ಮನೆಯಲ್ಲೆಲ್ಲಾ ಮಾರ್ದನಿಸಿತು. ಅಲ್ಲದೆ ಅಗ್ನಿಜ್ವಾಲೆಗಳು ಕೆನ್ನಾಲಿಗೆಯಂತೆ ಕಾಣಿಸಿಕೊಂಡವು. ಅವು ವಿಂಗಡ ವಿಂಗಡವಾಗಿ ಪ್ರತಿಯೊಬ್ಬರ ಮೇಲೂ ನೆಲೆಸಿದವು. ಅವರೆಲ್ಲರೂ ಪವಿತ್ರಾತ್ಮಭರಿತರಾದರು. ಆ ಆತ್ಮಪ್ರೇರಣೆಯಿಂದ ಬೇರೆ ಬೇರೆ ಭಾಷೆಗಳಲ್ಲಿ ಮಾತನಾಡತೊಡಗಿದರು. ಅದೇ ಸಮಯದಲ್ಲಿ ವಿಶ್ವದ ಎಲ್ಲಾ ದೇಶಗಳಿಂದ ಧರ್ಮನಿಷ್ಠ ಯೆಹೂದ್ಯರು ಜೆರುಸಲೇಮಿಗೆ ಬಂದು ತಂಗಿದರು. ಆ ಶಬ್ದವನ್ನು ಕೇಳಿದ್ದೇ, ಜನರ ದೊಡ್ಡ ಗುಂಪು ಸೇರಿತು. ಭಕ್ತಾದಿಗಳು ಮಾತನಾಡುತ್ತಿದ್ದುದನ್ನು ತಮ್ಮ ತಮ್ಮ ಭಾಷೆಗಳಲ್ಲೇ ಕೇಳಿದ ಜನರು ದಿಗ್ಭ್ರಮೆಗೊಂಡರು. ಅವರೆಲ್ಲರೂ ವಿಸ್ಮಿತರಾಗಿ, “ಹೀಗೆ ಮಾತನಾಡುವ ಇವರೆಲ್ಲಾ ಗಲಿಲೇಯದವರಲ್ಲವೇ? ನಮ್ಮಲ್ಲಿ ಪ್ರತಿಯೊಬ್ಬನೂ ಇವರು ಮಾತನಾಡುತ್ತಿರುವುದನ್ನು ತನ್ನ ತನ್ನ ಮಾತೃಭಾಷೆಯಲ್ಲೇ ಕೇಳುತ್ತಿರುವುದು ಹೇಗೆ? ನಮ್ಮಲ್ಲಿ ಪಾರ್ಥಿಯರು, ಮೀಡಿಯರು ಮತ್ತು ಎಲಾಮಿನವರೂ, ಮೆಸಪೊಟೇಮಿಯ, ಜುದೇಯ ಮತ್ತು ಕಪ್ಪದೋಸಿಯದವರೂ ಇದ್ದಾರೆ. ಪೊಂತ ಮತ್ತು ಏಷ್ಯದವರೂ, ಫ್ರಿಜಿಯ ಮತ್ತು ಪಾಂಫಿಲಿಯದವರೂ ಇದ್ದಾರೆ. ಈಜಿಪ್ಟ್ ಮತ್ತು ಸಿರೇನಿನ ಬಳಿಯಲ್ಲಿರುವ ಲಿಬಿಯ ಪ್ರಾಂತ್ಯದವರೂ ಸೇರಿದ್ದಾರೆ. ಅದಲ್ಲದೆ ನಮ್ಮಲ್ಲಿ ಕೆಲವರು ರೋಮ್ನಿಂದ ಬಂದಿದ್ದಾರೆ. ಯೆಹೂದ್ಯರೂ ಯೆಹೂದ್ಯ ಧರ್ಮಾವಲಂಬಿಗಳೂ ಆದ ಅನ್ಯರೂ, ಕ್ರೇಟ್ ಮತ್ತು ಅರೇಬಿಯದವರೂ ಇಲ್ಲಿದ್ದಾರೆ. ದೇವರ ಮಹತ್ಕಾರ್ಯಗಳನ್ನು ಕುರಿತು ಇವರು ಮಾತನಾಡುತ್ತಿರುವುದನ್ನು ನಾವೆಲ್ಲರೂ ನಮ್ಮ ನಮ್ಮ ಭಾಷೆಗಳಲ್ಲೇ ಕೇಳುತ್ತಿದ್ದೇವಲ್ಲಾ!” ಎಂದು ಅಚ್ಚರಿಯನ್ನು ವ್ಯಕ್ತಪಡಿಸಿದರು.

ಕೀರ್ತನೆ: 104:1, 24, 29-30, 31, 34
ಶ್ಲೋಕ: ನೀ ಉಸಿರನ್ನೂದಲು ಹೊಸದಾಗುವುವು, ಪುನಶ್ಚೇತನಗೊಳುವುದು ಜಗವೆಲ್ಲವು

ಎರಡನೇ ವಾಚನ: 1 ಕೊರಿಂಥಿಯರಿಗೆ 12:3-7, 12-13

ಸಹೊದರರೇ, ಇಷ್ಟುಮಾತ್ರ ನಿಮಗೆ ಸ್ಪಷ್ಟವಾಗಿ ತಿಳಿದಿರಲಿ; ಪವಿತ್ರಾತ್ಮ ಪ್ರೇರಣೆಯಿಂದ ಮಾತನಾಡುವ ಯಾವಾತನೂ, “ಯೇಸುವಿಗೆ ಧಿಕ್ಕಾರ!” ಎನ್ನಲಾರನು. ಅಂತೆಯೇ, ಪವಿತ್ರಾತ್ಮ ಪ್ರೇರಣೆಯಿಂದಲ್ಲದೆ ಯಾವಾತನೂ, “ಯೇಸುವೇ ಪ್ರಭು,” ಎಂದು ಒಪ್ಪಿಕೊಳ್ಳಲಾರನು. ವರದಾನಗಳು ವಿಧವಿಧವಾಗಿವೆ; ಅವುಗಳನ್ನು ಕೊಡುವ ಪವಿತ್ರಾತ್ಮ ಒಬ್ಬರೇ. ಸೇವೆಗಳು ವಿಧವಿಧವಾಗಿವೆ; ಅವುಗಳನ್ನು ಸ್ವೀಕರಿಸುವ ಪ್ರಭುವು ಒಬ್ಬರೇ. ಶಕ್ತಿಸಾಮರ್ಥ್ಯವು ನಾನಾ ವಿಧ; ಅವುಗಳನ್ನು ಎಲ್ಲರಲ್ಲೂ ಸಾಧಿಸುವ ದೇವರು ಒಬ್ಬರೇ. ಪ್ರತಿಯೊಬ್ಬನಲ್ಲಿ ಕಂಡುಬರುವ ಪವಿತ್ರಾತ್ಮರ ವರದಾನಗಳನ್ನು ಸರ್ವರ ಒಳಿತಿಗಾಗಿಯೇ ಕೊಡಲಾಗಿದೆ. ದೇಹ ಒಂದೇ; ಅಂಗಗಳು ಹಲವು. ಆ ಅಂಗಗಳು ಅನೇಕವಿದ್ದರೂ ಅವು ಸೇರಿ ಒಂದೇ ದೇಹವಾಗುತ್ತದೆ. ಅಂತೆಯೇ ಕ್ರಿಸ್ತಯೇಸು. ಯೆಹೂದ್ಯರಾಗಿರಲಿ, ಗ್ರೀಕರಾಗಿರಲಿ, ಪರತಂತ್ರರಾಗಿರಲಿ, ಸ್ವತಂತ್ರರಾಗಿರಲಿ-ನಾವೆಲ್ಲರೂ ಒಂದೇ ದೇಹವಾಗುವಂತೆ ಒಂದೇ ಆತ್ಮದಿಂದ ದೀಕ್ಷಾಸ್ನಾನ ಹೊಂದಿದ್ದೇವೆ. ಒಂದೇ ಆತ್ಮವನ್ನು ನಮ್ಮೆಲ್ಲರಿಗೂ ಪಾನವಾಗಿ ಕೊಡಲಾಗಿದೆ.

ಶುಭಸಂದೇಶ ಯೊವಾನ್ನ 20:19-23

ಅದೇ ಭಾನುವಾರ ಸಂಜೆ ಶಿಷ್ಯರು ಒಂದು ಮನೆಯಲ್ಲಿ ಕೂಡಿದ್ದರು. ಯೆಹೂದ್ಯರಿಗೆ ಅಂಜಿ ಮನೆಯ ಬಾಗಿಲುಗಳನ್ನು ಮುಚ್ಚಿಕೊಂಡು ಒಳಗೇ ಇದ್ದರು. ಆಗ ಯೇಸು ಬಂದು ಅವರ ನಡುವೆ ನಿಂತರು. “ನಿಮಗೆ ಶಾಂತಿ” ಎಂದು ಹೇಳಿ ತಮ್ಮ ಕೈಗಳನ್ನು ಮತ್ತು ಪಕ್ಕೆಗಳನ್ನು ತೋರಿಸಿದರು. ಪ್ರಭುವನ್ನು ಕಂಡು ಶಿಷ್ಯರಿಗೆ ಮಹದಾನಂದವಾಯಿತು. ಯೇಸು ಪುನಃ, “ನಿಮಗೆ ಶಾಂತಿ, ಪಿತನು ನನ್ನನ್ನು ಕಳುಹಿಸಿದಂತೆಯೇ ನಾನೂ ನಿಮ್ಮನ್ನು ಕಳುಹಿಸುತ್ತೇನೆ,” ಎಂದರು. ಅನಂತರ ಅವರ ಮೇಲೆ ಉಸಿರೂದಿ, “ಪವಿತ್ರಾತ್ಮರನ್ನು ಸ್ವೀಕರಿಸಿರಿ. ಯಾರ ಪಾಪಗಳನ್ನು ನೀವು ಕ್ಷಮಿಸುತ್ತೀರೋ, ಅವರಿಗೆ ಅವನ್ನು ಕ್ಷಮಿಸಲಾಗುವುದು. ಯಾರ ಪಾಪಗಳನ್ನು ನೀವು ಕ್ಷಮಿಸದೇ ಉಳಿಸುತ್ತೀರೋ, ಅವರಿಗೆ ಕ್ಷಮಿಸದೆ ಉಳಿಸಲಾಗುವುದು,” ಎಂದು ನುಡಿದರು.

04.06.22

ಮೊದಲನೆಯ ವಾಚನ: ಪ್ರೇಷಿತರ ಕಾರ್ಯಕಲಾಪಗಳಿಂದ ವಾಚನ 28:16-20, 30-31

ನಾವು ರೋಮ್ ನಗರಕ್ಕೆ ಆಗಮಿಸಿದ ಮೇಲೆ, ತನ್ನನ್ನು ಕಾಯುತ್ತಿದ್ದ ಒಬ್ಬ ಸೈನಿಕನೊಂದಿಗೆ ಪ್ರತ್ಯೇಕವಾಗಿರಲು ಪೌಲನಿಗೆ ಅಪ್ಪಣೆ ಕೊಡಲಾಯಿತು. ಮೂರು ದಿನಗಳ ನಂತರ ಪೌಲನು ಸ್ಥಳೀಯ ಯೆಹೂದ್ಯ ಮುಂಖಡರು ತನ್ನ ಬಳಿಗೆ ಬರುವಂತೆ ಹೇಳಿಕಳುಹಿಸಿದನು. ಅವರು ಬಂದಾಗ, ನನ್ನ ಸೋದರ ಇಸ್ರಯೇಲರೇ, ನಾನು ನಮ್ಮ ಜನರಿಗೆ ವಿರೋಧವಾಗಿಯಾಗಲಿ, ನಮ್ಮ ಪೂರ್ವಜರಿಂದ ಬಂದ ಸಂಪ್ರದಾಯಗಳಿಗೆ ವಿರೋಧವಾಗಿಯಾಗಲಿ, ಏನನ್ನೂ ಮಾಡಿಲ್ಲ, ಆದರೂ ಜೆರುಸಲೇಮಿನಲ್ಲಿ ನನ್ನನ್ನು ಕೈದಿಯನ್ನಾಗಿಸಿ ರೋಮನರ ಕೈಗೆ ಒಪ್ಪಿಸಲಾಯಿತು. ಇವರು ನನ್ನನ್ನು ವಿಚಾರಣೆಗೆ ಒಳಪಡಿಸಿದರು. ಮರಣದಂಡನೆಗೆ ಗುರಿಮಾಡುವಂಥ ಅಪರಾಧ ಏನನ್ನೂ ನನ್ನಲ್ಲಿ ಕಾಣಲಿಲ್ಲ. ಈ ಕಾರಣ ನನ್ನನ್ನು ಬಿಡುಗಡೆ ಮಾಡಬೇಕೆಂದಿದ್ದರು. ಆದರೆ ಯೆಹೂದ್ಯರು ಇದನ್ನು ಪ್ರತಿಭಟಿಸಿದರು. ಆಗ ನಾನು ಚಕ್ರವರ್ತಿಗೇ ಅಪೀಲುಮಾಡಬೇಕಾಯಿತು. ನನ್ನ ಸ್ವದೇಶಿಯರ ಮೇಲೆ ದೋಷರೋಪಣೆ ಮಾಡಬೇಕೆಂದು ನಾನು ಹಾಗೆ ಮಾಡಲಿಲ್ಲ. ಈ ಕಾರಣದಿಂದಲೇ ನಿಮ್ಮನ್ನು ನೋಡಿ ಮಾತನಾಡಲು ಬಯಸಿದೆ. ಇಸ್ರಯೇಲ್ ಜನತೆ ಯಾರ ನಿರೀಕ್ಷೆಯಲ್ಲಿ ಇದೆಯೋ, ಅದರ ನಿಮಿತ್ತವೇ ನಾನು ಹೀಗೆ ಸರಪಣಿಗಳಿಂದ ಬಂಧಿತನಾಗಿದ್ದೇನೆ, " ಎಂದನು. ಪೌಲನು ತಾನು ಬಾಡಿಗೆಗೆ ತೆಗೆದುಕೊಂಡಿದ್ದ ಮನೆಯಲ್ಲಿ ಎರಡು ವರ್ಷಗಳವರೆಗೆ ವಾಸವಾಗಿದ್ದನು. ತನ್ನನ್ನು ನೋಡಲು ಬಂದವರನ್ನೆಲ್ಲಾ ಆದರದಿಂದ ಬರಮಾಡಿಕೊಳ್ಳುತ್ತಿದ್ದನು. ಭಯಭೀತಿಯಿಲ್ಲದೆ ಹಾಗೂ ಅಡ್ಡಿಆತಂಕವಿಲ್ಲದೆ ದೇವರ ಸಾಮ್ರಾಜ್ಯವನ್ನು ಕುರಿತು ಪ್ರಬೋಧಿಸುತ್ತಿದ್ದನು, ಸ್ವಾಮಿ ಯೇಸುಕ್ರಿಸ್ತರ ವಿಷಯವಾಗಿ ಉಪದೇಶಿಸುತ್ತಿದ್ದನು.

ಕೀರ್ತನೆ 11:4-5, 7
ಶ್ಲೋಕ: ಪ್ರಭೂ, ಸತ್ಪುರುಷನು ಸೇರುವನು ನಿಮ್ಮ ಸನ್ನಿಧಿಯನು.

ಪ್ರಭು ಪ್ರಸನ್ನವಿರುವನು ಪವಿತ್ರಾಲಯದಲಿ|
ಸ್ಥಾಪಿಸಿಹನು ಸಿಂಹಾಸನವನು ಪರದಲಿ||
ನರಮಾನವರನು ನೋಡುತಿಹನು ನೇತ್ರಗಳಲಿ|
ಪರೀಕ್ಷಿಸುತಿಹನು ಅವರನು ಸೂಕ್ಷ್ಮ ರೀತಿಯಲಿ||

ಪರೀಕ್ಷಿಸುವನು ಪ್ರಭು ಸಜ್ಜನ ದುರ್ಜನರನು|
ದ್ವೇಷಿಸುವನು ಮನಸಾರೆ ಹಿಂಸಾತ್ಮಕರನು||
ಸತ್ಯಸ್ವರೂಪನಾದ ಪ್ರಭು ಸತ್ಯಪ್ರಿಯನು|
ಸತ್ಪುರುಷನು ಸೇರುವನು ಆತನ ಸನ್ನಿಧಿಯನು||

ಶುಭಸಂದೇಶ: ಯೊವಾನ್ನ 21:20-25

ಪೇತ್ರನು ಹಿಂದುರುಗಿ ನೋಡಿದಾಗ, ಯೇಸುವಿನ ಆಪ್ತನಾಗಿದ್ದ ಶಿಷ್ಯನು ಹಿಂದೆ ಬರುವುದನ್ನು ಕಂಡನು. ( ಭೋಜನದ ಸಮಯದಲ್ಲಿ ಯೇಸುವಿನ ಪಕ್ಕದಲ್ಲೇ ಒರಗಿ, " ಪ್ರಭುವೇ, ನಿಮ್ಮನ್ನು ಹಿಡಿದುಕೊಡುವಂಥ ಸ್ವಾಮಿದ್ರೋಹಿ ಯಾರು? " ಎಂದು ಕೇಳಿದವನೇ ಅವನು). ಇವನನ್ನು ಕಂಡು ಪೇತ್ರನು, " ಪ್ರಭೂ, ಇವನ ವಿಷಯವೇನು? " ಎಂದು ಯೇಸುವನ್ನು ಕೇಳಿದನು. ಅದಕ್ಕೆ ಯೇಸು, " ನಾನು ಬರುವ ತನಕ ಅವನು ಹಾಗೆಯೇ ಇರಬೇಕೆಂಬುದು ನನ್ನ ಬಯಕೆ, ಆದರೆ ಅದರಿಂದ ನಿನಗೇನಾಗಬೇಕು? ನಿನಂತೂ ನನ್ನನ್ನು ಹಿಂಬಾಲಿಸಿ ಬಾ, " ಎಂದರು. ಇದರಿಂದಾಗಿ ಆ ಶಿಷ್ಯನಿಗೆ ಸಾವಿಲ್ಲವೆಂದು ವದಂತಿ ಸೋದರರಲ್ಲಿ ಹಬ್ಬಿತು. ಯೇಸು, ' ನಾನು ಬರುವ ತನಕ ಅವನು ಹಾಗೆಯೇ ಇರಬೇಕೆಂಬುದು ನನ್ನ ಬಯಕೆಯಾದರೆ ಅದರಿಂದ ನಿನಗೇನಾಗಬೇಕು ' ಎಂದು ಹೇಳಿದರೇ ಹೊರತು ಅವನಿಗೆ ಸಾವಿಲ್ಲವೆಂದು ಹೇಳಲಿಲ್ಲ. ಇವುಗಳಿಗೆ ಆ ಶಿಷ್ಯನೇ ಸಾಕ್ಷಿ. ಇದನ್ನೆಲ್ಲಾ ಬರೆದಿಟ್ಟವನು ಅವನೇ. ಅವನ ಸಾಕ್ಷಿ ಸತ್ಯವಾದುದೆಂದು ನಾವು ಬಲ್ಲೆವು. ಯೇಸು ಮಾಡಿದ ಕಾರ್ಯಗಳು ಇನ್ನೂ ಎಷ್ಟೋ ಇವೆ. ಅವನ್ನೆಲ್ಲಾ ಒಂದೊಂದಾಗಿ ಬರೆಯಲು ಹೋದರೆ, ಬರೆಯಬೇಕಾದ ಗ್ರಂದಗಳನ್ನು ಬಹುಶಃ ಲೋಕವೇ ಹಿಡಿಸಲಾರದೆಂದು ನೆನಸುತ್ತೇನೆ.

03.06.22 - "ಚಕ್ರವರ್ತಿಯೇ ನನ್ನ ವಾದವನ್ನು ತೀರ್ಮಾನಿಸಲಿ. ಅಲ್ಲಿಯವರೆಗೆ ನನಗೆ ರಕ್ಷಣೆ ಬೇಕು,"

ಮೊದಲನೆಯ ವಾಚನ: ಪ್ರೇಷಿತರ ಕಾರ್ಯಕಲಾಪಗಳಿಂದ ವಾಚನ 25:13-21


ಕೆಲವು ದಿನಗಳಾದ ನಂತರ ರಾಜ ಅಗ್ರಿಪ್ಪನು ಬೆರ್ನಿಸಳೊಂದಿಗೆ ಫೆಸ್ತನನ್ನು ಅಭಿನಂದಿಸಲು ಸೆಜರೇಯಕ್ಕೆ ಬಂದನು. ಅವರು ಹಲವು ದಿನಗಳವರೆಗೆ ಅಲ್ಲೇ ತಂಗಿದ್ದರು. ಫೆಸ್ತನು ಪೌಲನ ವಿಷಯವನ್ನು ಅವನ ಮುಂದೆ ಪ್ರಸ್ತಾಪಿಸುತ್ತಾ, " ಫೆಲಿಕ್ಸನು ಕೈದಿಯಾಗಿ ಬಿಟ್ಟುಹೋದ ಒಬ್ಬ ವ್ಯಕ್ತಿ ಇಲ್ಲಿದ್ದಾನೆ. ನಾನು ಜೆರುಸಲೇಮಿಗೆ ಹೋಗಿದ್ದಾಗ ಯೆಹೂದ್ಯರ ಮುಖ್ಯಯಾಜಕರೂ ಪ್ರಮುಖರೂ ಅವನ ವಿರುದ್ಧ ಆಪಾದನೆಗಳನ್ನು ತಂದರು. ಅವನಿಗೆ ದಂಡನೆ ವಿಧಿಸುವಂತೆ ಕೇಳಿಕೊಂಡರು. ನಾನು ಅವರಿಗೆ, ' ಆಪಾದಿತನೂ ಆಪಾದಿಸುವವರೂ ಮುಖಾಮುಖಿಯಾಗಿ ನಿಲ್ಲಬೇಕು, ತನ್ನ ಮೇಲೆ ಹೊರಿಸಲಾದ ಆಪಾದನೆಗಳ ವಿರುದ್ಧ ವಾದಿಸಲು ಆಪಾದಿತನಿಗೆ ಅವಕಾಶ ಕೊಡಬೇಕು. ಹಾಗೆ ಮಾಡದೆ ಅವರ ಕೈಗೊಪ್ಪಿಸುವುದು ರೋಮನರ ಪದ್ಧತಿಯಲ್ಲ, ' ಎಂದು ಹೇಳಿದೆ. ಆದುದರಿಂದ ಅವರು ನನ್ನೊಡನೆ ಇಲ್ಲಿಗೆ ಬಂದರು. ನಾನು ತಡಮಾಡದೆ ಮರುದಿನವೇ ನ್ಯಾಯಸ್ಥಾನದಲ್ಲಿ ಕುಳಿತು ಅವನನ್ನು ನನ್ನ ಮುಂದೆ ತರುವಂತೆ ಆಜ್ಞೆಮಾಡಿದೆ. ಆಪಾದಿಸಿದವರು ಅವನ ವಿರುದ್ಧ ಎದ್ದುನಿಂತು ಮಾತನಾಡಿದಾಗ ನಾನು ಭಾವಿಸಿದಂತಹ ಅಪರಾಧವೊಂದನ್ನೂ ಅವನ ಮೇಲೆ ಹೊರಿಸಲಿಲ್ಲ. ಅವನೊಡನೆ ಅವರಿಗಿದ್ದ ವಾದವಿವಾದ ಅವರ ಧರ್ಮಾಚರಣೆಗಳಿಗೆ ಸಂಬಂಧಪಟ್ಟಿತ್ತು. ಯೇಸು ಎಂಬ ಒಬ್ಬ ವ್ಯಕ್ತಿಯನ್ನು ಕುರಿತೂ ವಿವಾದ ಇತ್ತು. ಯೇಸು ಸತ್ತಿದ್ದರೂ ಜೀವಂತನಾಗಿದ್ದಾನೆಂದು ಪೌಲನು ಸಾಧಿಸುತ್ತಿದ್ದನು. ಈ ವಿಷಯಗಳ ಬಗ್ಗೆ ಹೇಗೆ ವಿಚಾರಣೆಮಾಡುವುದೆಂದು ನನಗೆ ತೋಚಲಿಲ್ಲ. ಆದುದರಿಂದ, ' ನೀನು ಜೆರುಸಲೇಮಿಗೆ ಹೋಗಿ, ಅಲ್ಲಿ ಈ ವಿಶಯಗಳ ಬಗ್ಗೆ ವಿಚಾರಣೆಗೆ ಒಳಗಾಗಲು ಇಷ್ಟಪಡುತ್ತೀಯಾ? ' ಎಂದು ಪೌಲನನ್ನು ಕೇಳಿದೆ. ಅದಕ್ಕೆ ಅವನು, ' ಚಕ್ರವರ್ತಿಯೇ ನನ್ನ ವಾದವನ್ನು ತೀರ್ಮಾನಿಸಲಿ. ಅಲ್ಲಿಯವರೆಗೆ ನನಗೆ ರಕ್ಷಣೆ ಬೇಕು, ' ಎಂದು ವಿನಂತಿಸಿದ. ಅಂತೆಯೇ ಅವನನ್ನು ಚಕ್ರವರ್ತಿಯ ಬಳಿಗೆ ಕಳುಹಿಸಲಾಗುವ ತನಕ ಕಾವಲಿನಲ್ಲಿ ಇಡಬೇಕೆಂದು ಆಜ್ಞೆಮಾಡಿದೆ, " ಎಂದನು.

ಕೀರ್ತನೆ 103:1-2, 11-12,19-20
ಶ್ಲೋಕ: ಸ್ಥಾಪಿಸಿಹನು ಪ್ರಭು ಸ್ವರ್ಗದೊಳು ಸಿಂಹಾಸನವನು.

ಭಜಿಸು ನನ್ನ ಮನವೇ, ಭಜಿಸು ಪ್ರಭುವನು|
ನನ್ನ ಅಂತರಂಗವೇ, ಭಜಿಸು ಆತನನು|
ನೆನೆ ಆತನ ಪರಮಪಾವನ ನಾಮವನು||
ಭಜಿಸು ನನ್ನ ಮನವೇ, ಭಜಿಸು ಪ್ರಭುವನು|
ಮರೆಯದಿರು ಆತನ ಉಪಕಾರಗಳೊಂದನು||

ಆಕಾಶಮಂಡಲವು ಭೂಮಿಯಿಂದೆಷ್ಟೋ ಉನ್ನತ|
ದೈವಭಯವುಳ್ಳವರಿಗೆ ಆತನ ಕೃಪೆ ಅಷ್ಟೇ ಸನ್ನುತ||
ಪಡುವಣದಿಂದ ಮೂಡಣವೆಷ್ಟೋ ದೂರ|
ದೂಡಿದನಾತ ನಮ್ಮ ಪಾಪಗಳನು ಅಷ್ಟು ದೂರ||

ಸ್ಥಾಪಿಸಿಹನು ಪ್ರಭು ಸ್ವರ್ಗದೊಳು ಸಿಂಹಾಸನವನು|
ಎಲ್ಲದರ ಮೇಲೆ ನಡೆಸುತಿಹನು ರಾಜ್ಯಾಡಳಿತವನು||
ಭಜಿಸಿರಿ ಪ್ರಭುವನು ದೇವದೂತರುಗಳೇ|
ಆತನ ನುಡಿಯಂತೆಯೇ ನಡೆಯುವ ಜನಾಂಗಗಳೇ||

ಶುಭಸಂದೇಶ: ಯೊವಾನ್ನ 21:15-19


ಆ ಕಾಲದಲ್ಲಿ ಊಟವಾದಮೇಲೆ ಯೇಸು ಸಿಮೋನ ಪೇತ್ರನನ್ನು ನೋಡಿ, "ಯೊವಾನ್ನನ ಮಗನಾದ ಸಿಮೋನನೇ, ಇವರಿಗಿಂತಲೂ ಹೆಚ್ಚಾಗಿ ನೀನು ನನ್ನನ್ನು ಪ್ರೀತಿಸುತ್ತೀಯಾ? " ಎಂದು ಕೇಳಿದರು. ಅದಕ್ಕೆ ಪೇತ್ರನು, " ಹೌದು ಪ್ರಭೂ, ನಾನು ನಿಮ್ಮನ್ನು ಪ್ರೀತಿಸುತ್ತೇನೆಂದು ನೀವೇ ಬಲ್ಲಿರಿ, " ಎಂದನು. ಯೇಸು ಅವನಿಗೆ, " ನನ್ನ ಕುರಿಗಳನ್ನು ಮೇಯಿಸು, " ಎಂದರು. ಯೇಸು ಎರಡನೆಯ ಬಾರಿ, " ಯೊವಾನ್ನನ ಮಗನಾದ ಸಿಮೋನನೇ, ನೀನು ನನ್ನನು ಪ್ರೀತಿಸುತ್ತೀಯಾ? " ಎಂದು ಕೇಳಲು " ಹೌದು ಪ್ರಭುವೇ, ನಾನು ನಿಮ್ಮನ್ನು ಪ್ರೀತಿಸುತ್ತೇನೆಂದು ನೀವೇ ಬಲ್ಲಿರಿ, " ಎಂದು ಮರುನುಡಿದನು. ಯೇಸು ಅವನಿಗೆ, " ನನ್ನ ಕುರಿಗಳನ್ನು ಕಾಯಿ, " ಎಂದರು. ಮೂರನೇ ಬಾರಿಯೂ ಯೇಸು, " ಯೊವಾನ್ನನ ಮಗನಾದ ಸಿಮೋನನೇ, ನೀನು ನನ್ನನು ಪ್ರೀತಿಸುತ್ತೀಯಾ? " ಎಂದು ಕೇಳಿದರು. ' ನೀನು ನನ್ನನ್ನು ಪ್ರೀತಿಸುತ್ತೀಯಾ?' ಎಂದು ಯೇಸು ಮೂರನೇ ಬಾರಿ ಕೇಳಿದ್ದನ್ನು ಕಂಡು ಪೇತ್ರನು ನೊಂದುಕೊಂಡನು. " ಪ್ರಭುವೇ, ನಿಮಗೆ ಎಲ್ಲವು ತಿಳಿದೇ ಇದೆ. ನಾನು ನಿಮ್ಮನ್ನು ಪ್ರೀತಿಸುತ್ತೇನೆಂದು ನಿಮಗೆ ತಿಳಿದಿದೆ, ಎಂದು ಹೇಳಿದನು. ಅದಕ್ಕೆ ಯೇಸು, ನನ್ನ ಕುರಿಗಳನ್ನು ಮೇಯಿಸು, ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ, ಕೇಳು: ತಾರುಣ್ಯದಲ್ಲಿ ನೀನೇ ನಡುಕಟ್ಟಿಕೊಂಡು ಇಷ್ಟಬಂದ ಕಡೆ ನಡೆದೆ. ವೃದ್ಧಾಪ್ಯದಲ್ಲಾದರೋ ನೀನು ಕೈಚಾಚುವೆ. ಬೇರೊಬ್ಬನು ನಿನ್ನ ನಡುಕಟ್ಟಿ ನಿನಗಿಷ್ಟವಿಲ್ಲದ ಕಡೆ ನಿನ್ನನ್ನು ನಡೆಸಿಕೊಂಡು ಹೋಗುವನು, " ಎಂದು ನುಡಿದರು. ಪೇತ್ರನು ಎಂಥ ಸಾವಿನಿಂದ ದೇವರ ಮಹಿಮೆಯನ್ನು ಬೆಳಗಿಸಲಿದ್ದಾನೆಂದು ಸೂಚಿಸಿ ಹಾಗೆ ಹೇಳಿದರು. ಇದಾದ ಮೇಲೆ ಯೇಸು ಪೇತ್ರನಿಗೆ, " ನೀನು ನನ್ನನ್ನು ಹಿಂಬಾಲಿಸಿ ಬಾ, " ಎಂದರು.

02.06.22 - "ಪಿತನೇ, ಇವರೆಲ್ಲಾ ಒಂದಾಗಿರಲಿ."

ಮೊದಲನೆಯ ವಾಚನ: ಪ್ರೇಷಿತರ ಕಾರ್ಯಕಲಾಪಗಳಿಂದ ವಾಚನ 22:30, 23:6-11

ಯೆಹೂದ್ಯರು ಪೌಲನ ವಿರುದ್ಧ ತಂದ ಆಪಾದನೆ ಏನೆಂದು ಖಚಿತವಾಗಿ ತಿಳಿದುಕೊಳ್ಳಲು ಸಹಸ್ರಾಧಿಪತಿ ಅಪೇಕ್ಷಿಸಿದನು. ಮಾರನೆಯ ದಿನ ಪೌಲನನ್ನು ಬಿಡುಗಡೆ ಮಾಡಿದನು. ಮುಖ್ಯಯಾಜಕರು ಮತ್ತು ನ್ಯಾಯಸಭೆಯ ಪ್ರಮುಖರು ಕೂಡುವಂತೆ ಆಜ್ಞಾಪಿಸಿದನು. ಪೌಲನನ್ನು ಕರೆದುಕೊಂಡು ಹೋಗಿ ಆ ಸಭೆಯ ಮುಂದೆ ನಿಲ್ಲಿಸಿದನು. ಸಭೆ ಸೇರಿದ್ದವರಲ್ಲಿ ಕೆಲವರು ಫರಿಸಾಯ ಪಂಥದವರು. ಇದನ್ನು ಗಮನಿಸಿದ ಪೌಲನು, "ಸಹೋದರರೇ, ನಾನೊಬ್ಬ ಫರಿಸಾಯ, ಫರಿಸಾಯರ ವಂಶಜ. ಸತ್ತವರು ಪುನರುತ್ಥಾನ ಹೊಂದುತ್ತಾರೆ ಎಂಬ ನಮ್ಮ ನಿರೀಕ್ಷೆಯ ನಿಮಿತ್ತ ನಾನು ಇಲ್ಲಿ ವಿಚಾರಣೆಗೆ ಗುರಿಯಾಗಿದ್ದೇನೆ, "ಎಂದು ಧ್ವನಿಯೆತ್ತಿ ಸಭೆಯಲ್ಲಿ ಹೇಳಿದನು. ಅವನು ಹೀಗೆ ಹೇಳಿದಾಕ್ಷಣವೇ, ಫರಿಸಾಯರ ಮತ್ತು ಸದ್ದುಕಾಯರ ನಡುವೆ ವಾಗ್ವಾದ ಉಂಟಾಯಿತು. ಸಭೆಯಲ್ಲಿ ಭಿನ್ನಭೇದವುಂಟಾಯಿತು. ಏಕೆಂದರೆ, ಸದ್ದುಕಾಯರು ಪುನರುತ್ಥಾನವಾಗಲಿ, ದೇವದೂತರಾಗಲಿ, ದೇಹರಹಿತ ಆತ್ಮವಾಗಲಿ ಇದೆಯೆಂದು ಒಪ್ಪುವುದಿಲ್ಲ. ಆದರೆ ಫರಿಸಾಯರು ಇವೆಲ್ಲಾ ಇವೆಯೆಂದು ನಂಬುತ್ತಾರೆ. ಆಗ ಅಲ್ಲಿ ದೊಡ್ಡ ಕೂಗಾಟವೆದ್ದಿತು. ಫರಿಸಾಯ ಪಂಥಕ್ಕೆ ಸೇರಿದ ಕೆಲವು ಧರ್ಮಶಾಸ್ತ್ರಿಗಳು ಎದ್ದು ನಿಂತು, " ಈ ಮನುಷ್ಯನಲ್ಲಿ ನಮಗೆ ಯಾವ ದೋಷವೂ ಕಾಣುವುದಿಲ್ಲ. ಒಂದು ಆತ್ಮವೋ ಅಥವಾ ಒಬ್ಬ ದೂತನೇ ಇವನೊಡನೆ ಮಾತನಾಡಿದ್ದರೂ, ಮಾತನಾಡಿರಬಹುದು, " ಎಂದು ವಾದಿಸಿದರು. ಈ ವಾಗ್ವಾದ ವಿಕೋಪಕ್ಕೆ ಹೋದುದರಿಂದ ಪೌಲನನ್ನು ಅವರು ಖಂಡತುಂಡಾಗಿಸಬಹುದೆಂದು ಸಹಸ್ರಾಧಿಪತಿ ಹೆದರಿದನು. ಅವನು ಸೈನಿಕರನ್ನು ಕಳುಹಿಸಿ ಪೌಲನನ್ನು ಸಭೆಯ ಮಧ್ಯದಿಂದ ಎತ್ತಿಕೊಂಡು ಕೋಟೆಗೆ ತರುವಂತೆ ಆಜ್ಞಾಪಿಸಿದನು. ಪ್ರಭು ಅದೇ ರಾತ್ರಿ ಪೌಲನಿಗೆ ಹತ್ತಿರದಲ್ಲೇ ಕಾಣಿಸಿಕೊಂಡು, " ಧೈರ್ಯದಿಂದಿರು, ನೀನು ಜೆರುಸಲೇಮಿನಲ್ಲಿ ನನಗೆ ಸಾಕ್ಷಿಕೊಟ್ಟಂತೆ ರೋಮಿನಲ್ಲೂ ನನಗೆ ಸಾಕ್ಷಿಕೊಡಬೇಕಾಗಿದೆ, " ಎಂದರು.

ಕೀರ್ತನೆ 16:1-2, 5, 7-11.
ಶ್ಲೋಕ: ನೀಡು ದೇವಾ ರಕ್ಷಣೆಯನು, ನಾ ನಿನಗೆ ಶರಣಾಗತನು.

ನೀಡು ದೇವಾ ರಕ್ಷಣೆಯನು|
ನಾ ನಿನಗೆ ಶರಣಾಗತನು||
ನೀನೇ ನನ್ನೊಡೆಯ" ನೆಂದು ನಾ ನುಡಿದೆ|
ನನ್ನ ಸ್ವತ್ತೂ ಸ್ವಾಸ್ಥ್ಯವೂ ನೀನೇ|
ನಿನ್ನ ಕೈಯಲ್ಲಿದೆ ಪ್ರಭೂ, ನನ್ನ ವಿಮೆ||

ಪ್ರಭುವಿಗೆನ್ನ ಧನ್ಯವಾದ - ಆತನೇ ನನಗೆ ಮಾರ್ಗದರ್ಶಕ|
ಅಂಧಕಾರದೊಳೂ ನನ್ನ ಮನಸ್ಸಾಕ್ಷಿಯೇ ನನಗೆ ಬೋಧಕ||
ಇರಿಸಿಕೊಳ್ಳುವೆ ಪ್ರಭುವನು ಸತತ ನನ್ನೆದುರಿಗೆ|
ಆತನಿರಲು ಬಲಕ್ಕೆ ನನಗೆಲ್ಲಿಯದು ಹೆದರಿಕೆ?||

ಇದ ಕಾರಣ ಹರ್ಷದಿಂದಿದೆ ಎನ್ನಯ ಹೃದಯ|
ಆನಂದಗೊಂಡಿದೆ ಮನ, ಸುರಕ್ಷಿತವಿದೆ ಕಾಯ||
ಏಕೆನೆ ದೂಡುವುದಿಲ್ಲ ನೀನು ಎನ್ನನು ಅಧೋಲೋಕಕೆ|
ಬಿಟ್ಟುಕೊಡುವುದಿಲ್ಲ ನಿನ್ನ ಈ ಭಕ್ತನನು ಪಾತಾಳಕೆ||

ತೋರ್ಪಡಿಸುವೆ ಎನಗೆ ಅಮರ ಜೀವಮಾರ್ಗವನು|
ನಿನ್ನ ಸನ್ನಿಧಿ ಕೊಡುವುದು ಪರಮಾನಂದವನು|
ನಿನ್ನ ಬಲಗೈ ನೀಡುವುದು ನಿತ್ಯ ಭಾಗ್ಯವನು||

ಶುಭಸಂದೇಶ: ಯೊವಾನ್ನ 17:20-26

ಆ ಕಾಲದಲ್ಲಿ ಯೇಸು ಆಕಾಶದತ್ತ ಕಣ್ಣೆತ್ತಿ ಹೀಗೆಂದು ಪ್ರಾರ್ಥಿಸಿದರು: "ಇವರಿಗಾಗಿ ಮಾತ್ರವಲ್ಲ, ಇವರ ಮಾತನ್ನು ಕೇಳಿ ನನ್ನಲ್ಲಿ ವಿಶ್ವಾಸವಿಡುವವರಿಗಾಗಿಯೂ ಪ್ರಾರ್ಥಿಸುತ್ತೇನೆ. ಪಿತನೇ, ಇವರೆಲ್ಲಾ ಒಂದಾಗಿರಲಿ. ನೀವು ನನ್ನಲ್ಲಿ, ನಾನು ನಿಮ್ಮಲ್ಲಿ ಇರುವಂತೆಯೇ ಇವರೂ ನಮ್ಮಲ್ಲಿ ಒಂದಾಗಿರಲಿ. ಹೀಗೆ, ನನ್ನನ್ನು ಕಳುಹಿಸಿದವರು ನೀವೇ ಎಂದು ಲೋಕವು ವಿಶ್ವಾಸಿಸುವಂತಾಗಲಿ. ನಾವು ಒಂದಾಗಿರುವಂತೆ ಇವರೂ ಒಂದಾಗಿರಲೆಂದು ನೀವು ನನಗಿತ್ತ ಮಹಿಮೆಯನ್ನು ನಾನು ಇವರಿಗೆ ಕೊಟ್ಟಿದ್ದೇನೆ. ನಾನು ಇವರಲ್ಲಿಯೂ ನೀವು ನನ್ನಲ್ಲಿಯೂ ಇದ್ದು, ಇವರ ಐಕ್ಯಮತ್ಯವು ಪೂರ್ಣಸಿದ್ದಿಗೆ ಬರಲಿ. ಆಗ ನೀವೇ ನನ್ನನ್ನು ಕಳುಹಿಸುವಿರಿ ಎಂದೂ ನನ್ನನ್ನು ಪ್ರೀತಿಸಿದಂತೆಯೇ ಇವರನ್ನು ನೀವು ಪ್ರೀತಿಸಿರುವಿರಿ ಎಂದೂ ಲೋಕಕ್ಕೆ ಮನವರಿಕೆ ಆಗುವುದು. ಪಿತನೇ, ಇವರನ್ನು ನೀವು ನನಗೆ ಕೊಟ್ಟಿರುವಿರಿ. ಜಗತ್ತು ಉಂಟಾಗುವ ಮೊದಲೇ ನೀವು ನನ್ನನ್ನು ಪ್ರೀತಿಸಿ ನನಗಿತ್ತ ಮಹಿಮೆಯನ್ನು ಇವರೂ ಕಾಣುವಂತೆ ನಾನಿದ್ದಲ್ಲಿ ಇವರೂ ಇರಬೇಕೆಂದು ಆಶಿಸುತ್ತೇನೆ. ನೀತಿಸ್ವರೂಪಿಯಾದ ಪಿತನೇ, ಲೋಕವು ನಿಮ್ಮನ್ನು ಅರಿತುಕೊಳ್ಳಲಿಲ್ಲ. ಆದರೆ ನಾನು ಅರಿತಿದ್ದೇನೆ. ನನ್ನನ್ನು ಕಳುಹಿಸಿದವರು ನೀವೆಂದು ಇವರು ತಿಳಿದುಕೊಳ್ಳುತ್ತಾರೆ. ನಿಮ್ಮ ನಾಮವನ್ನು ನಾನು ಇವರಿಗೆ ತಿಳಿಯಪಡಿಸಿದ್ದೇನೆ, ಇನ್ನೂ ತಿಳಿಯಪಡಿಸುತ್ತೇನೆ. ಹೀಗೆ ನೀವು ನನ್ನಲ್ಲಿಟ್ಟ ಪ್ರೀತಿಯು ಇವರಲ್ಲಿಯೂ ಇರುವಂತಾಗುವುದು, ನಾನೂ ಅವರಲ್ಲಿ ಇರುವಂತಾಗುವುದು."

01.06.22

ಮೊದಲನೆಯ ವಾಚನ: ಪ್ರೇಷಿತರ ಕಾರ್ಯಕಲಾಪಗಳಿಂದ ವಾಚನ 20:28-38

ಪೌಲನು ಎಫೆಸದ ಸಭೆಯ ಹಿರಿಯರನ್ನು ಉದ್ದೇಶಿಸಿ ಮಾತನಾಡುತ್ತಾ ಹೀಗೆಂದನು: "ನೀವು ನಿಮ್ಮ ವಿಷಯದಲ್ಲಿ ಹಾಗೂ ಪವಿತ್ರಾತ್ಮ ನಿಮ್ಮ ಪಾಲನೆಗೆ ವಹಿಸಿರುವ ಮಂದೆಯ ವಿಷಯದಲ್ಲಿ ಜಾಗರೂಕರಾಗಿರಿ. ಪ್ರಭು ತಮ್ಮ ಸ್ವಂತ ರಕ್ತ ಸುರಿಸಿ ಸಂಪಾದಿಸಿದ ಧರ್ಮಸಭೆ ಉತ್ತಮ ಕುರಿಗಾಹಿಗಳಾಗಿರಿ. ನಾನು ಹೋದ ಬಳಿಕ ಕ್ರೂರವಾದ ತೋಳಗಳು ನಿಮ್ಮ ಮಧ್ಯೆ ನುಗ್ಗುವುವು ಎಂದು ನಾನು ಬಲ್ಲೆ. ಅವು ಮಂದೆಗೆ ಹಾನಿ ಮಾಡದೆ ಬಿಡವು. ಇದಲ್ಲದೆ ನಿಮ್ಮಲ್ಲೇ ಕೆಲವರು ಎದ್ದು ಭಕ್ತವಿಶ್ವಾಸಿಗಳನ್ನು ತಮ್ಮ ಕಡೆಗೆ ಸೆಲೆದುಕೊಳ್ಳಲು ಅಸತ್ಯವಾದುವುಗಳನ್ನು ಹೇಳುವರು. ಆದುದರಿಂದ ಎಚ್ಚರಿಕೆ! ನಾನು ಮೂರು ವರ್ಷಗಳ ಕಾಲ ಹಗಲಿರುಳು ಕಣ್ಣೀರಿಡುತ್ತಾ ಪ್ರತಿಯೊಬ್ಬನಿಗೂ ಬುದ್ಧಿ ಹೇಳಿದ್ದೇನೆಂಬುದನ್ನು ಮರೆಯಬೇಡಿ. ಈಗ ನಿಮ್ಮನ್ನು ದೇವರ ಕೈಗೂ, ಅವರ ಅನುಗ್ರಹ ಸಂದೇಶಕ್ಕೂ ಒಪ್ಪಿಸಿಕೊಡುತ್ತೇನೆ. ಅದು ನಿಮ್ಮನ್ನು ಅಭಿವೃದ್ಧಿಗೊಳಿಸಬಲ್ಲದು. ಮಾತ್ರವಲ್ಲ, ಪಾವನಪುರುಷರ ಬಾಧ್ಯತೆಯಲ್ಲಿ ಭಾಗಿಗಳಾಗುವಂತೆ ಮಾಡಬಲ್ಲದು. ನಾನು ಯಾರ ಬೆಳ್ಳಿಬಂಗಾರಕ್ಕೂ ಬಟ್ಟೆಬರೆಗೂ ಆಶೆಪಟ್ಟವನಲ್ಲ. ನನ್ನ ಹಾಗೂ ನನ್ನ ಸಂಗಡಿಗರ ಅವಶ್ಯಕತೆಗಳನ್ನು ನೀಗಿಸಲು ಈ ಕೈಗಳೇ ದುಡಿದಿವೆಯೆಂಬುದು ನಿಮ್ಮೆಲ್ಲರಿಗೂ ತಿಳಿದಿದೆ. ಹೀಗೆ ಕಷ್ಟಪಟ್ಟು ದುಡಿದು, ದುರ್ಬಲರಿಗೆ ನೆರವಾಗಬೇಕೆಂದು ನಾನು ನಿಮಗೆ ಹಲವಾರು ವಿಧದಲ್ಲಿ ತೋರಿಸಿಕೊಟ್ಟಿದ್ದೇನೆ. ' ಕೊಳ್ಳುವ ಕೈಗಿಂತ ಕೊಡುವ ಕೈ ಧನ್ಯವಾದುದು ' ಎಂಬ ಯೇಸುವಿನ ಮಾತುಗಳನ್ನು ನೆನಪಿನಲ್ಲಿಡಿ." ಇಷ್ಟು ಹೇಳಿದ ಮೇಲೆ ಪೌಲನು ಅವರೆಲ್ಲರ ಸಂಗಡ ಮೊಣಕಾಲೂರಿ ಪ್ರಾರ್ಥನೆ ಮಾಡಿದನು. ಅನಂತರ ಅವರು ಅವನನ್ನು ತಬ್ಬಿಕೊಂಡು ಮುದ್ದಿಟ್ಟು ಬೀಳ್ಕೊಟ್ಟರು. ಅವರ ಕಣ್ಣಲ್ಲಾದರೋ ನೀರು ಧಾರಾಕಾರವಾಗಿ ಸುರಿಯುತ್ತಿತ್ತು. ' ಇನ್ನೆಂದೂ ನೀವು ನನ್ನ ಮುಖವನ್ನು ಕಾಣಲಾರಿರಿ, ' ಎಂಬ ಅವನ ಮಾತು ಅವರನ್ನು ಅತೀವ ದುಃಖಕ್ಕೆ ಈಡುಮಾಡಿತ್ತು. ಅವರು ಹಡಗಿನವರೆಗೂ ಹೋಗಿ ಅವನನ್ನು ಬೀಳ್ಕೊಟ್ಟರು.

ಕೀರ್ತನೆ 68:28-29, 32-33, 34:35
ಶ್ಲೋಕ: ಭೂರಾಜ್ಯಗಳೇ, ಸ್ತುತಿಸಿರಿ ದೇವರನು.

ನಿನ್ನ ಶಕ್ತಿಸಾಮರ್ಥ್ಯವನು ಹೇ ದೇವಾ, ಪ್ರದರ್ಶಿಸು|
ನಮ್ಮ ಪರ ಪ್ರಯೋಗಿಸಿದ ಬಲವನು ಮರಳಿ ತೋರ್ಪಡಿಸು||
ಜೆರುಸಲೇಮಿನ ನಿನ್ನ ಮಹಾದೇವಾಲಯದ ಪ್ರಯಕ್ತ|
ಅರಸರು ನಿನಗೆ ಕಾಣಿಕೆಯನು ತಂದೊಪ್ಪಿಸುವುದು ಅತಿ ಸೂಕ್ತ||

ಭೂರಾಜ್ಯಗಳೇ, ಸ್ತುತಿಸಿರಿ ದೇವರನು|
ಸಂಕೀರ್ತಿಸಿರಿ ನೀವೆಲ್ಲರು ಪ್ರಭುವನು||
ಆದಿ ಮೊದಲು ಮೇಘಾರೂಢನಾಗಿರುವನು|
ಕೊಂಡಾಡಿರಿ, ಗುಡುಗಿನಂತೆ ಗರ್ಜಿಸುವಾತನನು||

ಸಾರಿರಿ ದೇವರ ಶಕ್ತಿಸಾಮರ್ಥ್ಯವನ್ನು|
ಇಸ್ರಯೇಲರಿಗೆ ತೋರಿದ ಪ್ರಭಾವವನು|
ಗಗನವನು ಆವರಿಸುವಾ ಪ್ರತಿಭೆಯನು||
ಪರಮ ಪವಿತ್ರಾಲಯದಲ್ಲಿಹ ದೇವ ಭಯಭಕುತಿಗೆ ಪಾತ್ರ|
ಪ್ರಜೆಗೆ ಪರಾಕ್ರಮವೀವ ಇಸ್ರಯೇಲ ದೇವನಿಗೆ ಸ್ತೋತ್ರ||

ಶುಭಸಂದೇಶ: ಯೊವಾನ್ನ 17:11-19

ಆ ಕಾಲದಲ್ಲಿ ಯೇಸು ಆಕಾಶದತ್ತ ಕಣ್ಣೆತ್ತಿ ಹೀಗೆಂದು ಪ್ರಾರ್ಥಿಸಿದರು: ಪವಿತ್ರ ಪಿತನೇ, ನಾವು ಒಂದಾಗಿರುವಂತೆ, ನೀವು ನನಗೆ ಕೊಟ್ಟಿರುವ ಇವರೂ ಒಂದಾಗಿರುವ ಹಾಗೆ ನಿಮ್ಮ ನಾಮದ ಶಕ್ತಿಯಿಂದ ಇವರನ್ನು ಸುರಕ್ಷಿತವಾಗಿರಿಸಿರಿ. ನಾನು ಇವರೊಡನೆ ಇದ್ದಾಗ ಇವರನ್ನು ಕಾಪಾಡಿದೆನು. ನೀವಿತ್ತ ಇವರನ್ನು ನಿಮ್ಮ ನಾಮದ ಶಕ್ತಿಯಿಂದ ಸುರಕ್ಷಿತವಾಗಿ ನೋಡಿಕೊಂಡು ಬಂದೆನು. ಪವಿತ್ರಗ್ರಂಥದ ಮಾತು ನೆರವೇರುವಂತೆ ವಿನಾಶಕ್ಕೆ ಗುರಿಯಾಗಬೇಕಿದ್ದ ಒಬ್ಬನನ್ನು ಬಿಟ್ಟರೆ, ಇವರಲ್ಲಿ ಬೇರೆ ಯಾರೂ ನಾಶವಾಗಲಿಲ್ಲ. ಈಗ ನಾನು ನಿಮ್ಮ ಬಳಿಗೆ ಬರುತ್ತಿದ್ದೇನೆ. ನನ್ನ ಆನಂದವು ಅವರ ಹೃದಯದಲ್ಲಿ ತುಂಬಿತುಳುಕುವಂತೆ ಈ ಲೋಕದಲ್ಲಿರುವಾಗಲೇ ಇವುಗಳನ್ನು ಹೇಳುತ್ತಿದ್ದೇನೆ. ನಿಮ್ಮ ಸಂದೇಶವನ್ನು ಇವರಿಗೆ ತಿಳಿಸಿದ್ದೇನೆ. ನಾನು ಲೋಕಕ್ಕೆ ಸೇರಿದವನಲ್ಲ. ಅಂತೆಯೇ, ಇವರೂ ಲೋಕಕ್ಕೆ ಸೇರಿದವರಲ್ಲ. ಈ ಕಾರಣ, ಲೋಕಕ್ಕೆ ಇವರ ಮೇಲೆ ದ್ವೇಷವಿದೆ. ಇವರನ್ನು ಲೋಕದಿಂದ ತೆಗೆದುಬಿಡಬೇಕೆಂದು ನಾನು ನಿಮ್ಮನ್ನು ಕೇಳಿಕೊಳ್ಳುತ್ತಿಲ್ಲ. ಆದರೆ ಕೇಡಿಗನಿಂದ ಇವರನ್ನು ಕಾಪಾಡಬೇಕೆಂದು ಕೇಳಿಕೊಳ್ಳುತ್ತೇನೆ. ನಾನು ಲೋಕಕ್ಕೆ ಹೇಗೆ ಸೇರಿದವನಲ್ಲವೋ ಹಾಗೆಯೇ ಇವರೂ ಲೋಕಕ್ಕೆ ಸೇರಿದವರಲ್ಲ. ಇವರನ್ನು ಸತ್ಯಸಂಧರನ್ನಾಗಿಸಿ ನಿಮ್ಮ ಸೇವೆಗೆ ಮೀಸಲಾಗಿಡಿ. ನಿಮ್ಮ ಮಾತೇ ಸತ್ಯ. ನೀವು ನನ್ನನ್ನು ಲೋಕಕ್ಕೆ ಕಳಿಸಿದಂತೆ ನಾನೂ ಇವರನ್ನು ಲೋಕಕ್ಕೆ ಕಳಿಸಿದ್ದೇನೆ. ಸತ್ಯಸಂಧರಾಗಿ ಇವರು ನಿಮ್ಮ ಸೇವೆಗೆ ಮೀಸಲಾಗಬೇಕೆಂದು ನನ್ನನು ನಾನೇ ಮೀಸಲಾಗಿಸಿಕೊಂಡಿದ್ದೇನೆ.