ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

09.11.21

ಮೊದಲನೇ ವಾಚನ: ಯೆಜೆಕಿಯೇಲ 47:1-2, 8-9, 12 

ಆ ಮನುಷ್ಯ ನನ್ನನ್ನು ದೇವಸ್ಥಾನದ ಬಾಗಿಲಿಗೆ ಪುನಃ ಕರೆದು ತಂದನು: ಇಗೋ, ದೇವಸ್ಥಾನದ ಹೊಸ್ತಿಲ ಕೆಳಗಿನಿಂದ ನೀರು ಹೊರಟು ಪೂರ್ವದಕಡೆಗೆ ಹರಿಯುತ್ತಿತ್ತು. (ದೇವಸ್ಥಾನ ಪೂರ್ವಾಭಿಮುಖವಾಗಿತ್ತು). ಆ ನೀರು ದೇವಸ್ಥಾನದ ಬಲಗಡೆ ಕೆಳಗಿನಿಂದ ಹೊರಟು ಬಲಿಪೀಠದ ದಕ್ಷಿಣದಲ್ಲಿ ಹರಿಯುತ್ತಿತ್ತು. ಆಗ ಅವನು ಉತ್ತರ ಹೆಬ್ಬಾಗಿಲಿನಿಂದ ದೇವಾಲಯದ ಹೊರಗಿನ ಮಾರ್ಗವಾಗಿ ಸುತ್ತಿಸಿಕೊಂಡು ಪೂರ್ವದ ಹೆಬ್ಬಾಗಿಲಿಗೆ ಕರೆದು ತಂದನು. ಅಲ್ಲಿ ನೋಡಲು ಅದರ ಬಲಗಡೆ ಮೆಲ್ಲಮೆಲ್ಲನೆ ಹರಿಯುವ ನೀರು ಕಾಣಿಸಿತು. ಆಗ ಅವನು ನನಗೆ ಹೀಗೆ ಹೇಳಿದನು:, "ಈ ಪ್ರವಾಹ ಪೂರ್ವಪ್ರಾಂತ್ಯಕ್ಕೆ ಹೊರಟು ಅರಬಾ ಎಂಬ ಕಣಿವೆಗೆ ಇಳಿದು ಲವಣ ಸಮುದ್ರದ ಕಡೆಗೆ ಹರಿಯುವುದು: ದೇವಸ್ಥಾನದಿಂದ ಹೊರಟ ಪ್ರವಾಹವು ಲವಣಸಮುದ್ರಕ್ಕೆ ಸೇರಲು ಅದರ ನೀರು ಸಿಹಿಯಾಗುವುದು. ಈ ತೊರೆ ಎಲ್ಲೆಲ್ಲಿ ಹರಿಯುತ್ತದೋ ಅಲ್ಲಲ್ಲಿ ಗಂಪು ಗುಂಪಾಗಿ ಚಲಿಸುವ ಸಕಲ ವಿಧ ಜಲ ಜಂತುಗಳು ಬದುಕಿ ಬಾಳುವುವು; ಮಿಾನುಗಳು ತಂಡೋಪತಂಡವಾಗಿರುವುವು. ಈ ನೀರು ಸಮುದ್ರಕ್ಕೆ ಬೀಳಲು ಆ ನೀರು ಸಿಹಿಯಾಗುವುದು; ಈ ತೊರೆ ಎಲ್ಲೆಲ್ಲಿ ಹರಿದರೂ ಅಲ್ಲಲ್ಲಿ ಜೀವವುಂಟಾಗುವುದು. ತೊರೆಯ ಎರಡು ದಡಗಳಲ್ಲಿಯೂ ಸಕಲ ಫಲವೃಕ್ಷಗಳು ಬೆಳೆಯುವುವು. ಅವುಗಳ ಎಲೆ ಬಾಡದು, ಹಣ್ಣು ತೀರದು. ತೊರೆಯ ನೀರು ಪವಿತ್ರಾಲಯದೊಳಗಿಂದ ಹೊರಟು ಬಂದ ಕಾರಣ ಅವು ತಿಂಗಳು ತಿಂಗಳಲ್ಲಿಯೂ ಹೊಸ ಹೊಸ ಫಲವನ್ನು ಕೊಡುತ್ತಲಿರುವುವು; ಅವುಗಳ ಹಣ್ಣು ಆಹಾರಕ್ಕೂ, ಸೊಪ್ಪು ಔಷಧಕ್ಕೂ ಅನುಕೂಲಿಸುವುವು." 

ಕೀರ್ತನೆ: 46:3, 4, 5-6, 8, 11 

ಶ್ಲೋಕ: ನದಿಯೊಂದು ಆನಂದಗೊಳಿಸುವುದು ದೇವನಗರವನು ಪುನೀತಗೊಳಿಸುವುದು ಪರಾತ್ಪರನ ನಿವಾಸವನು.  

ಎರಡನೇ ವಾಚನ:  1 ಕೊರಿಂಥಿಯರಿಗೆ 3:9-11, 16-17 

ಸಹೋದರರೇ, ನಾವು ದೇವರ ಸಹ ಕಾರ್ಮಿಕರು. ನೀವು ದೇವರೇ ಸಾಗುವಳಿ ಮಾಡುವ ಹೊಲ; ಅವರೇ ನಿರ್ಮಿಸುತ್ತಿರುವ ಮಂದಿರ. ದೇವರು ನನಗಿತ್ತ ವರದಾನಗಳಿಗೆ ಅನುಸಾರವಾಗಿ ನಾನು ಚತುರ ಶಿಲ್ಪಿಯಂತೆ ಅಸ್ತಿವಾರ ಹಾಕಿದೆ. ಇನ್ನೊಬ್ಬನು ಅದರ ಮೇಲೆ ಕಟ್ಟುತ್ತಿದ್ದಾನೆ. ಆದರೆ ಕಟ್ಟುವ ಪ್ರತಿಯೊಬ್ಬನು ತಾನು ಹೇಗೆ ಕಟ್ಟುತ್ತಿದ್ದೇನೆ ಎಂಬುದರ ಬಗ್ಗೆ ಎಚ್ಚರದಿಂದಿರಲಿ. ಈಗಾಗಲೇ ಅಸ್ತಿವಾರ ಹಾಕಲಾಗಿದೆ. ಯೇಸುಕ್ರಿಸ್ತರೇ ಆ ಅಸ್ತಿವಾರ. ಇದಲ್ಲದೆ, ಬೇರೆ ಅಸ್ತಿವಾರವನ್ನು ಯಾರೂ ಹಾಕಲಾಗದು. ನೀವು ದೇವರ ಆಲಯವಾಗಿದ್ದೀರಿ. ದೇವರ ಆತ್ಮವು ನಿಮ್ಮಲ್ಲಿ ವಾಸಿಸುತ್ತದೆಂದು ನಿಮಗೆ ಚೆನ್ನಾಗಿ ತಿಳಿದಿದೆ. ಯಾವನಾದರೂ ದೇವಾಲಯವನ್ನು ನಾಶಮಾಡಿದರೆ ದೇವರು ಅವನನ್ನು ನಾಶಮಾಡುತ್ತಾರೆ. ದೇವರ ಆಲಯವು ಪವಿತ್ರವಾದುದು. ನೀವೇ ಆ ಆಲಯ.

 ಶುಭಸಂದೇಶ: ಯೊವಾನ್ನ 2:13-22 


ಯೆಹೂದ್ಯರ ಪಾಸ್ಕ ಹಬ್ಬವು ಹತ್ತಿರವಾಗಿದ್ದುದರಿಂದ ಯೇಸುಸ್ವಾಮಿ ಜೆರುಸಲೇಮಿಗೆ ತೆರಳಿದರು. ಅಲ್ಲಿಯ ಮಹಾದೇವಾಲಯದಲ್ಲಿ ದನ, ಕುರಿ ಮತ್ತು ಪಾರಿವಾಳಗಳನ್ನು ಮಾರುವವರು ಮತ್ತು ನಾಣ್ಯ ವಿನಿಮಯ ಮಾಡುವವರು ವ್ಯಾಪಾರಕ್ಕೆ ಕುಳಿತ್ತಿದ್ದರು. ಅದನ್ನು ಕಂಡ ಯೇಸು, ಹಗ್ಗವನ್ನು ಚಾವಟಿಯಂತೆ ಹೆಣೆದು ಅದರಿಂದ ಅವರನೆಲ್ಲಾ ದೇವಾಲಯದಿಂದ ಹೊರಗಟ್ಟಿದರು. ದನ ಕುರಿಗಳನ್ನು ಓಡಿಸಿದರು. ನಾಣ್ಯ ವಿನಿಮಯ ಮಾಡುವವರ ಮೇಜುಗಳನ್ನು ಕೆಡವಿ, ಚಿಲ್ಲರೆ ಹಣವನ್ನು ಚೆಲ್ಲಿದರು. ಪಾರಿವಾಳಗಳನ್ನು ಮಾರುತ್ತಿದ್ದವರಿಗೆ, "ಇವನ್ನು  ಇಲ್ಲಿಂದ ತೆಗೆದುಕೊಂಡು ಹೊರಡಿ. ನನ್ನ ಪಿತನ ಆಲಯವನ್ನು ಸಂತೆಯನ್ನಾಗಿ ಮಾಡಬೇಡಿ," ಎಂದು ಹೇಳಿದರು. "ನಿನ್ನ ಆಲಯದ ಮೇಲಿನ ಅಭಿಮಾನವು ನನ್ನನ್ನು ಬೆಂಕಿಯಂತೆ ದಹಿಸುತ್ತದೆ," ಎಂದು ಪವಿತ್ರ ಗ್ರಂಥದಲ್ಲೇ ಬರೆದಿರುವ ವಾಕ್ಯವು ಶಿಷ್ಯರಿಗೆ ಆಗ ನೆನಪಾಯಿತು. ಯೆಹೂದ್ಯರು, "ಇಷ್ಟೆಲ್ಲಾ ಮಾಡಲು ನಿನಗೆ ಅಧಿಕಾರವಿದೆ ಎಂದು ರುಜುವಾತುಪಡಿಸುವುದಕ್ಕೆ ಯಾವ ಪವಾಡವನ್ನು ಮಾಡಿ ತೋರಿಸಬಲ್ಲೆ?"  ಎಂದು ಯೇಸುವನ್ನು ಪ್ರಶ್ನಿಸಿದರು. ಅದಕ್ಕೆ ಯೇಸು, "ಈ ದೇವಾಲಯವನ್ನು ಕೆಡವಿಬಿಡಿ, ಮೂರು ದಿನಗಳಲ್ಲಿ ಅದನ್ನು ಪುನಃ ಎಬ್ಬಿಸುವೆನು," ಎಂದು ಉತ್ತರಕೊಟ್ಟರು. ಚಕಿತರಾದ ಯೆಹೂದ್ಯರು, "ಈ ದೇವಾಲಯವನ್ನು ಕಟ್ಟಲು ನಲವತ್ತಾರು ವರ್ಷಗಳು ಹಿಡಿದಿವೆ. ನೀನು ಮೂರು ದಿನಗಳಲ್ಲೇ ಅದನ್ನು ಎಬ್ಬಿಸಬಲ್ಲೆಯಾ?" ಎಂದು ಕೇಳಿದರು. ಯೇಸು ಹೇಳಿದ್ದು ತಮ್ಮ ದೇಹವೆಂಬ ದೇಗುಲವನ್ನು ಕುರಿತು. ಅವರು ಸತ್ತು ಪುನರುತ್ಥಾನ ಹೊಂದಿದ ಬಳಿಕ ಶಿಷ್ಯರು ಅವರ ಈ ಮಾತುಗಳನ್ನು ಸ್ಮರಿಸಿಕೊಂಡರು. ಪವಿತ್ರ ಗ್ರಂಥದಲ್ಲೂ ಯೇಸುವಿನ ಮಾತಿನಲ್ಲೂ ಅವರಿಗೆ ಆಗ ವಿಶ್ವಾಸ ಹುಟ್ಟಿತು.

08.11.21 - "ನಿನ್ನ ಸಹೋದರನು ತಪ್ಪು ಮಾಡಿದರೆ ಅವನನ್ನು ಖಂಡಿಸು; ಪಶ್ಚಾತ್ತಾಪಪಟ್ಟರೆ ಕ್ಷಮಿಸಿ ಬಿಡು"

ಮೊದಲನೇ ವಾಚನ: ಜ್ಞಾನ ಗ್ರಂಥ 1:1-7

ಪೊಡವಿಯ ಪಾಲಕರೇ, ನ್ಯಾಯ ನೀತಿಯನ್ನು ಪ್ರೀತಿಸಿರಿ ಯಥಾರ್ಥ ಚಿತ್ತರಾಗಿ ಸರ್ವೇಶ್ವರನನ್ನು ಧ್ಯಾನಿಸಿರಿ ನಿಷ್ಕಪಟ ಮನಸ್ಸಿನಿಂದ ಆತನನ್ನು ಅರಸಿರಿ. ಸರ್ವೇಶ್ವರನು ದರ್ಶನವೀಯುವುದು ತನ್ನಲ್ಲಿ ಅಪನಂಬಿಕೆ ಪಡದವರಿಗೆ ಸರ್ವೇಶ್ವರನನ್ನು ಅರಿತುಕೊಂಡವರು ಅವರನ್ನು ಗುರಿಪಡಿಸರು ಪರೀಕ್ಷೆಗೆ. ದುರಾಲೋಚನೆಗಳು ಮಾನವನನ್ನು ದೂರ ಮಾಡುತ್ತವೆ ದೇವರಿಂದ. ದೇವರನ್ನು ಪರೀಕ್ಷಿಸಲೆತ್ನಿಸುವವನನ್ನು ಹುಚ್ಚನನ್ನಾಗಿಸುತ್ತದೆ ಆತನ ಶಕ್ತಿ ಸಾಮರ್ಥ್ಯ. ಸುಜ್ಞಾನ ಪ್ರವೇಶಿಸದು ಕಪಟಾತ್ಮವನ್ನು ಪಾಪಾಧೀನವಾದ ಹೃದಯದಲ್ಲಿ ಅದು ತಂಗದು. ಸುಶಿಕ್ಷಿತವಾದ ನಿರ್ಮಲ ಆತ್ಮ ಮೋಸದೆಡೆ ನಿಲ್ಲದು ಅವಿವೇಕ ಆಲೋಚನೆಗಳಿಂದದು ಓಡಿಹೋಗುವುದು ಅನ್ಯಾಯವು ಸಮೀಪಿಸಿದಾಗ ಅದು ಅಸಹ್ಯಪಡುವುದು. ಸುಜ್ಞಾನವೆಂಬುದು ಮಾನವನನ್ನು ಸ್ನೇಹಿಸುವ ಚೈತನ್ಯವು ಆದರೆ ದೇವದೂಷಣೆ ಆಡುವವರನ್ನು ಅದು ದಂಡಿಸದೆ ಬಿಡದು. ಏಕೆಂದರೆ ಅಂತರಾಲೋಚನೆಗಳಿಗೆ ದೇವರೇ ಸಾಕ್ಷಿ ಆತ ಹೃದಯಗಳನ್ನೂ ವೀಕ್ಷಿಸುತ್ತಾನೆ ಗಮನಿಸಿ ನಾಲಿಗೆ ಆಡುವುದನ್ನು ಅರ್ಥಮಾಡಿಕೊಳ್ಳುತ್ತಾನೆ ಚೆನ್ನಾಗಿ. ಸರ್ವೇಶ್ವರನ ಚೈತನ್ಯ ವಿಶ್ವವನ್ನು ತುಂಬಿದೆ ಸಮಸ್ತವನ್ನು ಒಟ್ಟಿಗೆ ಹಿಡಿದಿರುವ ಅದಕ್ಕೆ ಪ್ರತಿಯೊಂದೂ ತಿಳಿದಿದೆ.

ಕೀರ್ತನೆ: 139:1-3, 4-6, 7-8, 9-10
ಶ್ಲೋಕ: ನಡೆಸೆನ್ನ ಓ ಪ್ರಭೂ, ಆ ಸನಾತನ ಪಥದಲಿ

ಪ್ರಭೂ, ಪರಿಶೋಧಿಸಿರುವೆ ನೀ ನನ್ನನು|
ಅರಿತುಕೊಂಡಿರುವೆ ಅಂತರಂಗವನು||
ನಾ ಕೂರುವುದೂ ಏಳುವುದೂ ನಿನಗೆ ಗೊತ್ತಿದೆ|
ನನ್ನಾಲೋಚನೆ ದೂರದಿಂದಲೇ ನಿನಗೆ ತಿಳಿದಿದೆ||
ನನ್ನ ನಡೆಯನು, ನಿದ್ರೆಯನು ನೀ ಬಲ್ಲಾತ|
ನನ್ನ ನಡತೆಯಲ್ಲವೂ ನಿನಗೆ ಸುಪರಿಚಿತ||

ಪ್ರಭೂ ನಾ ಮಾತೆತ್ತುವುದಕ್ಕೆ ಮುಂಚಿತವಾಗಿ|
ತಿಳಿದುಹೋಗಿದೆ ಎಲ್ಲ ನಿನಗೆ ಪೂರ್ತಿಯಾಗಿ||
ನನ್ನ ಹಿಂದೆಯೂ ಮುಂದೆಯೂ ನೀನಿರುವೆ|
ಅಭಯ ಹಸ್ತವನು ನನ್ನ ಮೇಲಿರಿಸಿರುವೆ||
ನನ್ನ ಕುರಿತು ನಿನಗಿರುವ ಅರಿವು ಅಗಾಧ|
ನನ್ನ ಬುದ್ಧಿಗದು ಸಿಲುಕದಷ್ಟು ಉನ್ನತ||

ನಾನೆಲ್ಲಿಗೆ ಹೋಗಲು ಸಾಧ್ಯ, ನಿನ್ನಾತ್ಮನಿಂದ ತಪ್ಪಿಸಿಕೊಳ್ಳಲು?|
ನಾನೆಲ್ಲಿಗೆ ಓಡಲು ಸಾಧ್ಯ, ನಿನ್ನ ಸನ್ನಿಧಿಯಿಂದ ಮರೆಯಾಗಲು?||
ಆಕಾಶಕ್ಕೆ ನಾನೇರಿದರೂ ನೀನಿರುವೆ ಅಲ್ಲಿ|
ಪಾತಾಳದಲಿ ನಾ ನಿದ್ರಿಸಿದರೂ ನೀನಿರುವೆ ಅಲ್ಲಿ||

ನಾನರುಣನ ರೆಕ್ಕೆಗಳನ್ನೇರಿ ಹಾರಿದರೂ|
ಸಮುದ್ರ ಕಟ್ಟಕಡೆಗಳಲಿ ನಾ ಸೇರಿದರೂ||
ಅಲ್ಲೂ ನನ್ನ ನಡೆಸುವುದು ನಿನ್ನ ಕೈ|
ನನ್ನ ಹಿಡಿದಿರುವುದು ನಿನ್ನ ಬಲಗೈ||

ಶುಭಸಂದೇಶ: ಲೂಕ 17:1-6

ಯೇಸುಸ್ವಾಮಿ ತಮ್ಮ ಶಿಷ್ಯರನ್ನು ಉದ್ದೇಶಿಸಿ, "ಪಾಪ ಪ್ರಚೋದನೆಗಳು ಬಂದೇ ಬರುತ್ತವೆ. ಆದರೆ ಅವು ಯಾರಿಂದ ಬರುತ್ತವೋ ಅವನಿಗೆ ಧಿಕ್ಕಾರ! ಅಂಥವನು ಈ ಚಿಕ್ಕವರಲ್ಲಿ ಒಬ್ಬನಿಗೆ ಪಾಪಕ್ಕೆ ಕಾರಣನಾಗುವುದಕ್ಕಿಂತ, ಬೀಸುವ ಕಲ್ಲನ್ನು ಕುತ್ತಿಗೆಗೆ ಬಿಗಿಸಿಕೊಂಡು ಸಮುದ್ರದಲ್ಲಿ ದಬ್ಬಿಸಿಕೊಳ್ಳುವುದೇ ಲೇಸು. ನೀವಾದರೋ ಎಚ್ಚರಿಕೆಯಿಂದಿರಿ! "ನಿನ್ನ ಸಹೋದರನು ತಪ್ಪು ಮಾಡಿದರೆ ಅವನನ್ನು ಖಂಡಿಸು; ಪಶ್ಚಾತ್ತಾಪಪಟ್ಟರೆ ಕ್ಷಮಿಸಿಬಿಡು. ಅವನು ದಿನಕ್ಕೆ ಏಳುಸಾರಿ ನಿನಗೆ ವಿರುದ್ಧ ತಪ್ಪು ಮಾಡಿ ಪ್ರತಿಯೊಂದು ಸಾರಿಯೂ ಪಶ್ಚಾತ್ತಾಪಪಟ್ಟು ನಿನ್ನ ಬಳಿಗೆ ಬಂದು, "ಕ್ಷಮಿಸು," ಎಂದು ಕೇಳಿಕೊಂಡರೆ ನೀನು ಅವನನ್ನು ಕ್ಷಮಿಸಲೇಬೇಕು," ಎಂದರು. ಸ್ವಾಮಿಾ, ನಮ್ಮ ವಿಶ್ವಾಸವನ್ನು ಹೆಚ್ಚಿಸಿರಿ," ಎಂದು ಪ್ರೇಷಿತರು ಕೇಳಿಕೊಂಡರು. ಆಗ ಯೇಸುಸ್ವಾಮಿ, "ಸಾಸಿವೆ ಕಾಳಿನಷ್ಟು ವಿಶ್ವಾಸ ನಿಮ್ಮಲ್ಲಿದ್ದು, ನೀವು ಈ ಅತ್ತಿ ಮರಕ್ಕೆ, "ನೀನು ಬೇರು ಸಹಿತ ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ನಾಟಿಕೊ," ಎಂದು ಆಜ್ಞಾಪಿಸಿದ್ದೇ ಆದರೆ ಅದು ನಿಮಗೆ ವಿಧೇಯವಾಗಿ ನಡೆದುಕೊಳ್ಳುವುದು.

07.11.21

ಮೊದಲನೆಯ ವಾಚನ: 1 ಅರಸ 17:10-16

ಎಲೀಯನು ಅಲ್ಲಿಂದ ಹೊರಟು ಸರೆಪ್ತಾದ ಊರು ಬಾಗಿಲಿನ ಸಮೀಪಕ್ಕೆ ಬಂದನು. ಸೌದೆ ಕೂಡಿಸುತ್ತಿದ್ದ ಒಬ್ಬ ವಿಧವೆಯನ್ನು ಕಂಡು ಆಕೆಯನ್ನು ಕರೆದು, " ದಯವಿಟ್ಟು ಕುಡಿಯುವುದಕ್ಕೆ ಒಂದು ತಂಬಿಗೆಯಲ್ಲಿ ನೀರು ತೆಗೆದುಕೊಂಡು ಬಾ, " ಎಂದು ಹೇಳಿದನು. ಆಕೆ ಹೋಗುತ್ತಿರುವಾಗ ಮತ್ತೆ ಆಕೆಯನ್ನು ಕರೆದು, " ನೀನು ಬರುವಾಗ ನನಗೆ ಒಂದು ತುಂಡು ರೊಟ್ಟಿಯನ್ನು ಸಹ ತೆಗೆದುಕೊಂಡು ಬಾ, " ಎಂದನು. ಆಕೆ, " ನಿನ್ನ ದೇವರಾದ ಸರ್ವೇಶ್ವರನಾಣೆ, ನನ್ನ ಹತ್ತಿರ ರೊಟ್ಟಿಯಿಲ್ಲ. ಮಡಕೆಯಲ್ಲಿ ಒಂದು ಹಿಡಿ ಹಿಟ್ಟು, ಕುಡಿಕೆಯಲ್ಲಿ ಸ್ವಲ್ಪ ಎಣ್ಣೆ, ಇವುಗಳ ಹೊರತು ಬೇರೇನೂ ಇಲ್ಲ. ಈಗ ಸೌದೆ ಆಯ್ದುಕೊಂಡು ಹೋಗಿ ನನಗೂ ನನ್ನ ಮಗನಿಗೂ ರೊಟ್ಟಿ ಮಾಡುತ್ತೇನೆ. ಅದನ್ನು ತಿಂದ ಮೇಲೆ ನಾವು ಸಾಯಬೇಕೇ ಹೊರತು ಬೇರೆ ಗತಿಯಿಲ್ಲ, " ಎಂದು ಉತ್ತರಕೊಟ್ಟಳು. ಆಗ ಎಲೀಯನು, " ಹೆದರಬೇಡ, ನೀನು ಹೇಳಿದಂತೆ ಮಾಡು, ಆದರೆ ಮೊದಲು ಅದರಿಂದ ನನಗೆ ಒಂದು ಚಿಕ್ಕ ರೊಟ್ಟಿಯನ್ನು ಮಾಡಿಕೊಂಡು ಬಾ, ತರುವಾಯ ನಿನಗೂ ನಿನ್ನ ಮಗನಿಗೂ ಮಾಡಿಕೋ. ಇಸ್ರಯೇಲ್ ದೇವರಾದ ಸರ್ವೇಶ್ವರ ನಿನಗೆ, " ನಾನು ನಾಡಿಗೆ ಮಳೆಯನ್ನು ಕಳುಹಿಸುವವರೆಗೆ ನಿನ್ನ ಮಡಕೆಯಲ್ಲಿರುವ ಹಿಟ್ಟು ತೀರುವುದಿಲ್ಲ, ಕುಡಿಕೆಯಲ್ಲಿರುವ ಎಣ್ಣೆ ಮುಗಿದು ಹೋಗುವುದಿಲ್ಲ, " ಎಂದು ಹೇಳುತ್ತಾರೆ ಎಂದನು. ಆಕೆ ಹೋಗಿ ಅವನು ಹೇಳಿದಂತೆಯೇ ಮಾಡಿದಳು. ಆಕೆಯೂ ಆಕೆಯ ಮನೆಯವರೂ ಎಲೀಯನೂ ಅದನ್ನು ಅನೇಕ ದಿವಸಗಳವರೆಗೆ ಊಟಮಾಡಿದರು. ಸರ್ವೇಶ್ವರ ಎಲೀಯನ ಮುಖಾಂತರ ಹೇಳಿದಂತೆ ಮಡಕೆಯಲ್ಲಿದ್ದ ಹಿಟ್ಟು ತೀರಲಿಲ್ಲ, ಕುಡಿಕೆಯಲ್ಲಿದ್ದ ಎಣ್ಣೆ ಮುಗಿದು ಹೋಗಲಿಲ್ಲ.

ಕೀರ್ತನೆ 146:6-10
ಶ್ಲೋಕ: ಮನವೇ, ವಂದಿಸು ಪ್ರಭುವನು.

ಕೊಟ್ಟ ವಾಗ್ದಾನಗಳನು ತಪ್ಪದೆ ನೆರವೇರಿಸುವವ ಆತನೇ|
ದೊರಕಿಸುವನು ನ್ಯಾಯ ದಲಿತರಿಗೆ||
ಒದಗಿಸುವನು ಆಹಾರ ಹಸಿದವರಿಗೆ|
ನೀಡುವನು ಬಿಡುಗಡೆ ಬಂಧಿತರಿಗೆ||

ಕಣ್ಣನೀಯುವನು ಪ್ರಭು ಕುರುಡರಿಗೆ|
ಉದ್ಧಾರಕನಾ ಪ್ರಭು ಕುಗ್ಗಿದವರಿಗೆ||
ಆತನ ಒಲವಿರುವುದು ಸಾಧು ಸಜ್ಜನರಿಗೆ|
ರಕ್ಷಣೆಯನೀಯುವನು ಪ್ರಭು ಪರದೇಶಿಗಳಿಗೆ||

ಆದರಿಸುವನು ಅನಾಥರನು, ವಿಧವೆಯರನು|
ನಿರ್ಮೂಲ ಮಾಡುವನು ದುರ್ಜನರ ಮಾರ್ಗವನು||
ಪ್ರಭುವೇ ಅರಸನು ಸದಾಕಾಲಕು|
ಸಿಯೋನ್, ನಿನ್ನ ದೇವನಾಳ್ವನು ತಲತಲಾಂತರಕು||

ಎರಡನೆಯ ವಾಚನ: ಹಿಬ್ರಿಯರಿಗೆ 9:24-28

ಸಹೋದರರೇ, ಕ್ರಿಸ್ತ ಯೇಸು ಪ್ರವೇಶಿಸಿದ್ದು ದೇವಾಲಯದ ಛಾಯೆಯಂತಿರುವ ಮಾನವನಿರ್ಮಿತ ಗರ್ಭಗುಡಿಯನ್ನಲ್ಲ, ನಮ್ಮ ಪರವಾಗಿ ದೇವರ ಸಮ್ಮುಖದಲ್ಲಿ ಉಪಸ್ಥಿತರಾಗಲು ಸಾಕ್ಷಾತ್ ಸರ್ಗವನ್ನೇ ಅವರು ಪ್ರವೇಶಿಸಿದರು. ಪ್ರಧಾನ ಯಾಜಕನು ಪ್ರತಿವರ್ಷವೂ ಪ್ರಾಣಿಗಳ ರಕ್ತವನ್ನು ತೆಗೆದುಕೊಂಡು ಗರ್ಭಗುಡಿಯನ್ನು ಪ್ರವೇಶಿಸುವಂತೆ ಯೇಸು ಪ್ರವೇಶಿಸಲಿಲ್ಲ. ಅವರು ಸ್ವರ್ಗವನ್ನು ಪ್ರವೇಶಿಸಿದ್ದು ಪದೇಪದೇ ತಮ್ಮನ್ನು ಸಮರ್ಪಿಸಿಕೊಳ್ಳುವುದಕ್ಕೂ ಅಲ್ಲ. ಹಾಗೆ ಸಮರ್ಪಿಸಬೇಕಾಗಿದ್ದ ಪಕ್ಷದಲ್ಲಿ ಲೋಕಾದಿಯಿಂದಲೂ ಅವರು ಅನೇಕ ಸಾರಿ ಮರಣಯಾತನೆಯನ್ನು ಅನುಭವಿಸಬೇಕಾಗಿ ಬರುತ್ತಿತ್ತು, ಅದಕ್ಕೆ ಬದಲಾಗಿ ಯುಗಾಂತ್ಯವಾದ ಈ ಕಾಲದಲ್ಲಿ, ಪಾಪ ನಿವಾರಣೆ ಮಾಡಬೇಕೆಂಬ ಉದ್ದೇಶದಿಂದ ಒಮ್ಮೆಗೇ ತಮ್ಮನ್ನು ತಾವೇ ಬಲಿಯಾಗಿ ಸಮರ್ಪಿಸಿಕೊಳ್ಳಲೆಂದು ಯೇಸು ಪ್ರತ್ಯಕ್ಷರಾದರು. ಪ್ರತಿಯೊಬ್ಬ ಮಾನವನು ಸಾಯುವುದು ಒಂದೇ ಸಾರಿ. ಅನಂತರ ಅವನು ನ್ಯಾಯತೀರ್ಪಿಗೆ ಗುರಿಯಾಗಬೇಕು. ಹಾಗೆಯೇ, ಎಲ್ಲಾ ಮಾನವರ ಪಾಪಗಳನ್ನು ಹೊತ್ತು ಹೋಗಲಾಡಿಸಲು ಕ್ರಿಸ್ತ ಯೇಸು ಒಮ್ಮೆಗೆ ಎಲ್ಲಾ ಕಾಲಕ್ಕೂ ತಮ್ಮನ್ನೇ ಬಲಿಯಾಗಿ ಸಮರ್ಪಿಸಿಕೊಂಡರು. ಅವರು ಮತ್ತೆ ಪ್ರತ್ಯಕ್ಷರಾಗುವರು, ಪಾಪನಿವಾರಣೆ ಮಾಡಲೆಂದು ಅಲ್ಲ, ತಮ್ಮನ್ನು ನಂಬಿ ನಿರೀಕ್ಷಿಸಿಕೊಂಡಿರುವವರನ್ನು ಜೀವೋದ್ಧಾರ ಮಾಡಲೆಂದು.

ಶುಭಸಂದೇಶ ವಾಚನ: ಮಾರ್ಕ 12:38-44

ಆ ಕಾಲದಲ್ಲಿ ಜನಸಮೂಹವು ಸಂತಸಚಿತ್ತದಿಂದ ಯೇಸುವಿನ ಮಾತುಗಳನ್ನು ಆಲಿಸುತ್ತಿತ್ತು. ಯೇಸು ತಮ್ಮ ಉಪದೇಶವನ್ನು ಮುಂದುವರಿಸುತ್ತಾ, " ಧರ್ಮಶಾಸ್ತ್ರಿಗಳ ಬಗ್ಗೆ ಎಚ್ಚರಿಕೆ ! ಅವರು ನಿಲುವಂಗಿಗಳನ್ನು ಧರಿಸಿಕೊಂಡು ತಿರುಗಾಡುತ್ತಾರೆ, ಪೇಟೆ ಬೀದಿಗಳಲ್ಲಿ ವಂದನೋಪಚಾರಗಳನ್ನೂ ಪ್ರಾರ್ಥನಾ ಮಂದಿರಗಳಲ್ಲಿ ಉನ್ನತ ಆಸನಗಳನ್ನೂ ಔತಣ ಸಮಾರಂಭಗಳಲ್ಲಿ ಶ್ರೇಷ್ಠಸ್ಥಾನಗಳನ್ನೂ ಅಪೇಕ್ಷಿಸುತ್ತಾರೆ. ವಿಧವೆಯರ ಮನೆಮಾರುಗಳನ್ನು ದೋಚಿಕೊಳ್ಳುವ ಈ ಜನ ನಟನೆಗಾಗಿ ದೀರ್ಘವಾಗಿ ಜಪತಪಗಳನ್ನು ಮಾಡುತ್ತಾರೆ. ಇವರನ್ನು ದೇವರು ಬಹಳ ಕಠಿಣವಾದ ದಂಡನೆಗೆ ಗುರಿಪಡಿಸುವರು, " ಎಂದರು. ಯೇಸು ದೇವಾಲಯದಲ್ಲಿ ಕಾಣಿಕೆಪೆಟ್ಟಿಗೆಗಳಿಗೆ ಎದುರಾಗಿ ಕುಳಿತಿದ್ದರು. ಜನರು ಅದರಲ್ಲಿ ಹಣಹಾಕುವ ರೀತಿ ಅವರ ಕಣ್ಣಿಗೆ ಬಿತ್ತು. ಧನವಂತರನೇಕರು ಹೆಚ್ಚು ಹೆಚ್ಚು ಹಣವನ್ನು ಹಾಕುತ್ತಿದ್ದರು. ಅಷ್ಟರಲ್ಲಿ ಬಡ ವಿಧವೆಯೊಬ್ಬಳು ಅಲ್ಲಿಗೆ ಬಂದಳು. ತಾಮ್ರದ ಚಿಕ್ಕ ನಾಣ್ಯಗಳೆರಡನ್ನು ಕಾಣಿಕೆಯಾಗಿ ಹಾಕಿದಳು. ಆಗ ಯೇಸು ತಮ್ಮ ಶಿಷ್ಯರನ್ನು ಕರೆದು, " ಕಾಣಿಕೆಪೆಟ್ಟಿಗೆಯಲ್ಲಿ ಹಣಹಾಕಿದ ಎಲ್ಲರಿಗಿಂತಲೂ ಈ ವಿಧವೆ ಹೆಚ್ಚಾಗಿ ಅರ್ಪಿಸಿದಳು ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಇವರೆಲ್ಲರೂ ತಮ್ಮ ಅಪರಿಮಿತ ಐಶ್ವರ್ಯದಿಂದ ಕಾಣಿಕೆಯಿತ್ತರು. ಈಕೆಯಾದರೋ ತನ್ನ ಕಡುಬಡತನದಲ್ಲೂ ತನ್ನಲ್ಲಿ ಇದ್ದುದೆಲ್ಲವನ್ನು ಅರ್ಪಿಸಿದಳು. ತನ್ನ ಜೀವನಾಧಾರವನ್ನೇ ಕೊಟ್ಟುಬಿಟ್ಟಳು, " ಎಂದರು.

06.11.21 - " ಸಣ್ಣ ವಿಷಯಗಳಲ್ಲಿ ದ್ರೋಹಮಾಡುವವನು ದೊಡ್ಡ ವಿಷಯಗಳಲ್ಲೂ ದ್ರೋಹಮಾಡುತ್ತಾನೆ."

ಮೊದಲನೇ ವಾಚನ: ರೋಮನರಿಗೆ 16:3-9, 16, 22-27

ಕ್ರಿಸ್ತ ಯೇಸುವಿನ ಸೇವೆಯಲ್ಲಿ ನನ್ನ ಸಹೋದ್ಯೋಗಿಗಳಾದ ಪ್ರಿಸಿಲ್ಲಳಿಗೂ ಅಕ್ವಿಲನಿಗೂ ನನ್ನ ವಂದನೆಗಳನ್ನು ತಿಳಿಸಿರಿ. ಅವರು ನನ್ನ ಪ್ರಾಣರಕ್ಷೆಣೆಗಾಗಿ ತಮ್ಮ ಪ್ರಾಣಗಳನ್ನೇ ಅಪಾಯಕ್ಕೆ ಈಡಾಗಿಸಿದವರು. ಅದಕ್ಕಾಗಿ ನಾನು ಅವರಿಗೆ ಚಿರಋಣಿ. ನಾನು ಮಾತ್ರವಲ್ಲ, ಯೆಹೂದ್ಯೇತರ ಸಭೆಗಳ ಎಲ್ಲರೂ ಅವರು ಮಾಡಿದ ಉಪಕಾರಕ್ಕೆ ಚಿರಋಣಿಗಳಾಗಿದ್ದಾರೆ. ಅವರ ಮನೆಯಲ್ಲಿ ಸೇರುವ ಸಭೆಗೂ ನನ್ನ ಶುಭಾಶಯಗಳು. ನನ್ನ ಆಪ್ತ ಗೆಳೆಯ ಎಪೈನೆತನಿಗೆ ನನ್ನ ಪ್ರಣಾಮಗಳು, ಏಷ್ಯಸೀಮೆಯಲ್ಲಿ ಮೊತ್ತಮೊದಲಿಗೆ ಕ್ರಿಸ್ತ ಯೇಸುವನ್ನು ವಿಶ್ವಾಸಿಸಿದವನು ಆತನೇ. ನಿಮಗಾಗಿ ಬಹಳ ಶ್ರಮ ವಹಿಸಿದ ಮರಿಯಳಿಗೂ ನನ್ನ ನಮಸ್ಕಾರಗಳು. ನನ್ನ ಸ್ವದೇಶಿಯರೂ ನನ್ನೊಡನೆ ಸೆರೆಯಲ್ಲಿ ಇದ್ದವರೂ ಆದ ಅಂದ್ರೋನಿಕನಿಗೂ ಯೂನ್ಯನಿಗೂ ನನ್ನ ನಮನಗಳು. ಅವರು ಪ್ರೇಷಿತರಂತೆ ಸನ್ಮಾನಿತರು, ಕ್ರಿಸ್ತ ಯೇಸುವನ್ನು ವಿಶ್ವಾಸಿಸುವುದರಲ್ಲಿ ನನಗಿಂತಲೂ ಮೊದಲಿಗರು. ಪ್ರಭುವಿನಲ್ಲಿ ನನ್ನ ಆಪ್ತ ಗೆಳೆಯನಾದ ಅಂಪ್ಲಿಯಾತನಿಗೆ ನನ್ನ ವಂದನೆಗಳು. ಯೇಸುಕ್ರಿಸ್ತರ ಸೇವೆಯಲ್ಲಿ ನನ್ನ ಸಹೋದ್ಯೋಗಿಯಾದ ಉರ್ಬಾನನಿಗೂ ನನ್ನ ಮಿತ್ರ ಸ್ತಾಕುನಿಗೂ ವಂದನೆಗಳು. ಪವಿತ್ರವಾದ ಮುದ್ದನ್ನಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ. ಎಲ್ಲಾ ಕ್ರೈಸ್ತ ಸಭೆಗಳವರು ನಿಮಗೆ ತಮ್ಮ ವಂದನೆಗಳನ್ನು ಕಳುಹಿಸಿದ್ದಾರೆ. ಈ ಪತ್ರವನ್ನು ಬರೆದುಕೊಟ್ಟ ತೆರ್ತ್ಯನೆಂಬ ನಾನೂ ನಿಮ್ಮನ್ನು ಪ್ರಭುವಿನಲ್ಲಿ ವಂದಿಸುತ್ತೇನೆ. ನನಗೂ ಸಮಸ್ತ ಸಭೆಗೂ ಅತಿಥಿಸತ್ಕಾರ ನೀಡುತ್ತಿರುವ ಗಾಯನು ನಿಮ್ಮನ್ನು ವಂದಿಸುತ್ತಾನೆ. ಈ ಪಟ್ಟಣದ ಖಜಾಂಚಿ ಎರಸ್ತನೂ ಸಹೋದರ ಕ್ವರ್ತನೂ ನಿಮಗೆ ವಂದನೆಗಳನ್ನು ಹೇಳಿದ್ದಾರೆ. ನಮ್ಮ ಪ್ರಭು ಯೇಸುಕ್ರಿಸ್ತರ ಅನುಗ್ರಹವು ನಿಮ್ಮೆಲ್ಲರೊಡನೆ ಇರಲಿ ! ಆಮೆನ್. ಅನಾದಿಯಿಂದಲೂ ಗುಪ್ತವಾಗಿದ್ದ ರಹಸ್ಯವು ಈಗ ಪ್ರಕಟವಾಗಿದೆ. ಶಾಶ್ವತ ದೇವರ ಆಜ್ಞೆಯ ಮೇರೆಗೆ ಅನ್ಯಧರ್ಮಿಯರೂ ವಿಧೇಯರಾಗಿ ವಿಶ್ವಾಸಿಸುವಂತೆ ಪ್ರವಾದನಾ ಗ್ರಂಥಗಳ ಮೂಲಕ ಆ ರಹಸ್ಯವನ್ನು ಈಗ ಅವರಿಗೆ ತಿಳಿಸಲಾಗುತ್ತಿದೆ. ಇದನ್ನು ಬೆಳಕಿಗೆ ತರುವ ನನ್ನ ಸಂದೇಶದ ಮೂಲಕ ಮತ್ತು ಯೇಸುಕ್ರಿಸ್ತರನ್ನು ಕುರಿತ ಬೋಧನೆಯ ಮೂಲಕ ದೇವರು ನಿಮ್ಮನ್ನು ವಿಶ್ವಾಸದಲ್ಲಿ ದೃಢಪಡಿಸಲು ಶಕ್ತರು. ಜ್ಞಾನಾಂಬುದಿಯಾದ ಆ ಏಕೈಕ ದೇವರಿಗೆ ಯೇಸುಕ್ರಿಸ್ತರ ಮುಖಾಂತರ ಯುಗಯುಗಾಂತರಕ್ಕೂ ಮಹಿಮೆ ಸಲ್ಲಲಿ ! ಆಮೆನ್.

ಕೀರ್ತನೆ 144:2-5, 10-11
ಶ್ಲೋಕ: ಯುಗಯುಗಾಂತರಕೂ ನಿನ್ನ ನಾಮಕ್ಕೆ ನಮನ.

ಹೊಗಳುವೆನು ನಾ ದಿನದಿನವೂ ನಿನ್ನನ್ನು|
ಭಜಿಸುವೆನೆಂದಿಗೂ ನಿನ್ನ ಹೆಸರನು||
ಪ್ರಭು ಮಹಾತ್ಮನು, ಸುತ್ಯಾರ್ಹನು|
ಆತನ ಮಹಿಮೆ ಅಗಮ್ಯವಾದದು||

ತಲೆಮಾರು ತಲೆಮಾರಿಗೆ ನುತಿಸುವುದು ನಿನ್ನ ಕಾರ್ಯಗಳನು|
ತಿಳಿಸುವುದು ಪ್ರಭೂ, ನೀ ಮಾಡಿದೆಲ್ಲಾ ಮಹತ್ಕಾರ್ಯಗಳನು||
ಧ್ಯಾನಿಸುವೆನು ನಿನ್ನ ಅದ್ಭುತಕಾರ್ಯಗಳನು|
ನಿನ್ನ ಮಹೋನ್ನತ ಮಹಿಮಾ ಪ್ರಭಾವವನು||

ಪ್ರಭೂ, ನಿನ್ನನು ಸ್ತುತಿಪುದು ಸೃಷ್ಟಿಯೆಲ್ಲವು|
ಕೊಂಡಾಡುವುದು ನಿನ್ನನು ಭಕ್ತಸಮೂಹವು||
ಪ್ರಸಿದ್ದಪಡಿಸುವರು ನಿನ್ನ ರಾಜ್ಯದ ಮಹತ್ವವನು|
ವರ್ಣಿಸುವರವರು ನಿನ್ನ ಶಕ್ತಿಸಾಮರ್ಥ್ಯವನು||

ಶುಭಸಂದೇಶ: ಲೂಕ 16:9-15

ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ನಾನು ಹೇಳುವುದನ್ನು ಗಮನಿಸಿರಿ, ಲೌಕಿಕ ಆಸ್ತಿಪಾಸ್ತಿಯಿಂದ ಗೆಳೆಯರನ್ನು ಗಳಿಸಿಕೊಳ್ಳಿರಿ. ಅದು ವ್ಯಯವಾಗಿಹೋದಾಗ ನಿಮ್ಮನ್ನು ಅಮರ ನಿವಾಸಕ್ಕೆ ಸ್ವಾಗತಿಸಲಾಗುವುದು. ಸಣ್ಣ ವಿಷಯಗಳಲ್ಲಿ ಪ್ರಾಮಾಣಿಕನಾಗಿ ನಡೆದುಕೊಳ್ಳುವವನು ದೊಡ್ಡ ವಿಷಯಗಳಲ್ಲೂ ಪ್ರಾಮಾಣಿಕನಾಗಿ ನಡೆದುಕೊಳ್ಳುತ್ತಾನೆ. ಸಣ್ಣ ವಿಷಯಗಳಲ್ಲಿ ದ್ರೋಹಮಾಡುವವನು ದೊಡ್ಡ ವಿಷಯಗಳಲ್ಲೂ ದ್ರೋಹಮಾಡುತ್ತಾನೆ. ಲೌಕಿಕ ಆಸ್ತಿಪಾಸ್ತಿಗಳ ವಿಷಯದಲ್ಲಿ ನೀವು ಪ್ರಾಮಾಣಿಕರಾಗಿ ನಡೆದುಕೊಳ್ಳದೆ ಹೋದರೆ, ನಿಮ್ಮನ್ನು ನಂಬಿ ನೈಜ ಸಂಪತ್ತನ್ನು ನಿಮ್ಮ ವಶಕ್ಕೆ ಕೊಡುವವರಾರು? ಇನ್ನೊಬ್ಬರಿಗೆ ಸೇರಿದ ವಸ್ತುಗಳ ವಿಷಯದಲ್ಲಿ ನೀವು ಪ್ರಾಮಾಣಿಕರಾಗಿ ನಡೆದುಕೊಳ್ಳದೆ ಹೋದರೆ, ನಿಮ್ಮ ಸ್ವಂತಕ್ಕೆ ಏನನ್ನಾದರೂ ಕೊಡುವವರಾರು ? ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾಗದು, ಅವನು ಒಬ್ಬನನ್ನು ದ್ವೇಷಿಸಿ, ಇನ್ನೊಬ್ಬನನ್ನು ಪ್ರೀತಿಸುತ್ತಾನೆ, ಅಥವಾ ಒಬ್ಬನೊಡನೆ ಹೊಂದಿಕೊಂಡು ಇನ್ನೊಬ್ಬನನ್ನು ತಾತ್ಸಾರ ಮಾಡುತ್ತಾನೆ. ದೇವರಿಗೂ ದ್ರವ್ಯಕ್ಕೂ ಒಟ್ಟಿಗೆ ಸೇವೆಮಾಡಲು ನಿಮ್ಮಿಂದಾಗದು. " ಹಣದಾಶೆಯಿಂದ ಕೂಡಿದ್ದ ಫರಿಸಾಯರು ಈ ಮಾಗುಗಳನ್ನೆಲ್ಲಾ ಕೇಳಿ, ಯೇಸುವನ್ನು ಪರಿಹಾಸ್ಯಮಾಡಿದರು. ಅದಕ್ಕೆ ಯೇಸು, " ನೀವು ಮಾನವರ ಮುಂದೆ ಸತ್ಪುರುಷರೆಂದು ತೋರಿಸಿಕೊಳ್ಳುತ್ತೀರಿ, ದೇವರಾದರೋ ನಿಮ್ಮ ಅಂತರಂಗವನ್ನು ಅರಿತಿದ್ದಾರೆ. ಮಾನವರಿಗೆ ಅಮೂಲ್ಯವಾದುದು ದೇವರಿಗೆ ಅಸಹ್ಯವಾದುದು, " ಎಂದರು.

05.11.21 - "ಅಪ್ರಾಮಾಣಿಕ ಮೇಸ್ತ್ರಿ ಮಾಡಿದ ಮುಂದಾಲೋಚನೆಯನ್ನು ಅವನ ಯಜಮಾನ ಪ್ರಶಂಸಿಸಿದ"

ಮೊದಲನೇ ವಾಚನ: ರೋಮನರಿಗೆ 15:14-21

ಸಹೋದರರೇ, ನೀವು ಗುಣಸಂಪನ್ನರೂ ಒಬ್ಬರಿಗೊಬ್ಬರು ಬುದ್ಧಿ ಹೇಳಿಕೊಳ್ಳಲು ಸಮರ್ಥರೂ ಆಗಿದ್ದೀರಿ ಎಂದು ನಾನು ಚೆನ್ನಾಗಿ ಬಲ್ಲೆ. ಆದರೂ ಕೆಲವು ವಿಷಯಗಳತ್ತ ನಿಮ್ಮ ಗಮನ ಸೆಳೆಯುವ ಉದ್ದೇಶದಿಂದ ಅಲ್ಲಲ್ಲಿ ಹೆಚ್ಚಿನ ಧೈರ್ಯವಹಿಸಿ ಬರೆದಿದ್ದೇನೆ. ದೇವರು ನನಗೆ ದಯಪಾಲಿಸಿರುವ ವಿಶೇಷ ವರದಾನದಿಂದಾಗಿ ಈ ಪ್ರಕಾರ ಬರೆದಿದ್ದೇನೆ ಈ ವರದಿಂದಲೇ ಯೆಹೂದ್ಯರಲ್ಲದ ಜನರಿಗೆ ನಾನು ಕ್ರಿಸ್ತ ಯೇಸುವಿನ ದಾಸನಾದೆ. ಯೆಹೂದ್ಯರಲ್ಲದವರು ಪವಿತ್ರಾತ್ಮರ ಮೂಲಕ ಪರಿಶುದ್ಧರಾಗಿ, ದೇವರಿಗೆ ಸಮರ್ಪಕ ಕಾಣಿಕೆಯಾಗುವಂತೆ ದೇವರ ಶುಭಸಂದೇಶವನ್ನು ಸಾರುವುದೇ ನನ್ನ ಪೂಜ್ಯಸೇವೆ, ಅದುವೇ ನನ್ನ ಯಾಜಕ ಸೇವೆ. ದೇವರಿಗಾಗಿ ಸಲ್ಲಿಸುವ ಈ ಸೇವೆಯನ್ನು ಕುರಿತು ನಾನು ಕ್ರಿಸ್ತಯೇಸುವಿನಲ್ಲಿ ಹೆಮ್ಮೆಪಡಲು ಕಾರಣ ಉಂಟು. ಕ್ರಿಸ್ತ ಯೇಸು ನನ್ನ ಮುಖಾಂತರ ಅಂದರೆ, ನನ್ನ  ಬೋಧನೆ ಹಾಗು ಸಾಧನೆಗಳ ಮೂಲಕ, ಸೂಚಕ ಹಾಗೂ ಅದ್ಬುತ ಕಾರ್ಯಗಳ ಮೂಲಕ ಮತ್ತು ಪವಿತ್ರಾತ್ಮರ ಶಕ್ತಿಯ ಮೂಲಕ ಯೆಹೂದ್ಯರಲ್ಲದವರನ್ನೂ ತಮ್ಮ ಶರಣರನ್ನಾಗಿಸಿಕೊಂಡಿದ್ದಾರೆ. ಇದೊಂದನ್ನು ಬಿಟ್ಟು ಬೇರೆ ಯಾವುದನ್ನು ಕುರಿತು ಹೊಗಳಿಕೊಳ್ಳಲು ನಾನು ಧೈರ್ಯಗೊಳ್ಳುವುದಿಲ್ಲ ಜೆರುಸಲೇಮಿನಿಂದ ಪ್ರಾರಂಭಿಸಿ ಇಲ್ಲುರಿಕ ಪ್ರಾಂತ್ಯದವರಿಗೂ ಸುತ್ತಮುತ್ತಲಿನಲ್ಲೂ ನಾನು ಸಂಚಾರಮಾಡಿ, ಕ್ರಿಸ್ತ ಯೇಸುವಿನ ಶುಭಸಂದೇಶವನ್ನು ಪೂರ್ತಿಯಾಗಿ ಪ್ರಚಾರಮಾಡಿದ್ದೇನೆ. ಮತ್ತೊಬ್ಬನು ಹಾಕಿದ ಅಸ್ತಿವಾರದ ಮೇಲೆ ನಾನು ಕಟ್ಟುವುದು ಸರಿಯಲ್ಲವೆಂಬುದು ನನ್ನ ಅಭಿಪ್ರಾಯ. ಆದಕಾರಣ ಕ್ರಿಸ್ತ ಯೇಸುವಿನ ನಾಮವು ಪ್ರಚಾರವಾಗದ ಕಡೆ ಹೋಗಿ ಶುಭಸಂದೇಶವನ್ನು ಸಾರಬೇಕೆಂಬುದೇ ನನ್ನ ಆಕಾಂಕ್ಷೆ. "ಯಾರಿಗೆ ಆತನ ಸುದ್ದಿ ಮುಟ್ಟಿಲ್ಲವೋ ಅವರು ಆತನನ್ನು ನೋಡುವರು; ಯಾರು ಆತನ ವರ್ತಮಾನ ಕೇಳಿಲ್ಲವೋ ಅವರು ಅತನನ್ನು ಗ್ರಹಿಸಿಕೊಳ್ಳುವರು," ಎಂಬುದಾಗಿ ಪವಿತ್ರಗ್ರಂಥದಲ್ಲಿ ಬರೆದಿರುವ ಪ್ರಕಾರ ನನ್ನ ಕಾರ್ಯವನ್ನು ನಡೆಸಿದ್ದೇನೆ.

ಕೀರ್ತನೆ: 98:1, 2-3, 3-4
ಶ್ಲೋಕ: ರಾಷ್ಟ್ರಗಳಿಗೆ ತೋರಿಸಿಹನು ಜೀವೋದ್ಧಾರಕಾ ಶಕ್ತಿಯನು

ಹಾಡಿರಿ ಪ್ರಭುವಿಗೆ ಹೊಸಗೀತೆಯೊಂದನು|
ಎಸಗಿಹನಾತನು ಪವಾಡ ಕಾರ್ಯಗಳನು||
ಗಳಿಸಿತಾತನ ಕೈ ಪೂತಭುಜ ಗೆಲುವನು||

ಪ್ರಕಟಿಸಿಹನಾ ಪ್ರಭು ತನ್ನ ಮುಕ್ತಿವಿಧಾನವನು|
ರಾಷ್ಟ್ರಗಳಿಗೆ ತೋರಿಸಿಹನು ಜೀವೋದ್ಧಾರಕ ಶಕ್ತಿಯನು||
ಸ್ಮರಿಸಿಕೊಂಡನಾ ಪ್ರಭು ತನ್ನ ಪ್ರೀತಿಯನು|
ಇಸ್ರಯೇಲ್ ಕುಲದ ಬಗ್ಗೆ ತನ್ನ ಸತ್ಯತೆಯನು||

ಕಂಡು ಬಂದಿತು ಜಗದ ಎಲ್ಲೆ ಎಲ್ಲೆಗೆ|
ನಮ್ಮ ದೇವ ಸಾಧಿಸಿದ ಜಯಗಳಿಕೆ||
ಭೂನಿವಾಸಿಗಳೇ, ಮಾಡಿರಿ ಜಯಕಾರ ಪ್ರಭುವಿಗೆ|
ಮುದದಿ ಹಾಡಿರಿ, ಮಾಡಿರಿ ಸುಮಧುರ ಭಜನೆ||

ಶುಭಸಂದೇಶ: ಲೂಕ 16:1-8

ಯೇಸುಸ್ವಾಮಿ ತಮ್ಮ ಶಿಷ್ಯರನ್ನು ಉದ್ದೇಶಿಸಿ ಇಂತೆಂದರು: "ಒಬ್ಬನು ಧನಿಕನಿದ್ದ, ಅವನ ವ್ಯವಹಾರಗಳನ್ನು ನೋಡಿಕೊಳ್ಳಲು ಒಬ್ಬ ಮೇಸ್ತ್ರಿಯಿದ್ದ. ಇವನು ಧನಿಕನ ಆಸ್ತಿಯನ್ನು ಹಾಳುಮಾಡುತ್ತಿದ್ದಾನೆಂದು ದೂರು ಬಂದಿತು. ಧನಿಕನು ಅವನನ್ನು ಕರೆದು, "ಏನಿದು, ನಿನ್ನ ವಿಷಯವಾಗಿ ನಾನು ಹೀಗೆಲ್ಲ ಕೇಳುತ್ತಾ ಇದ್ದೇನೆ? ನಿನ್ನ ಕೆಲಸದ ಲೆಕ್ಕಾಚಾರವನ್ನು ಒಪ್ಪಿಸಿಬಿಡು. ಇನ್ನು ನೀನು ಮೇಸ್ತ್ರಿ ಆಗಿರಲು ಆಗದು," ಎಂದ. ಆಗ ಮೇಸ್ತ್ರಿ, "ಈಗ ಏನು ಮಾಡಲಿ? ಯಜಮಾನನು ನನ್ನನ್ನು ಕೆಲಸದಿಂದ ತೆಗೆದು ಬಿಡುತ್ತಾನಲ್ಲಾ; ಅಗೆಯಲು ಶಕ್ತಿ ಸಾಲದು; ಭಿಕ್ಷೆ ಬೇಡಲು ನನಗೆ ನಾಚಿಕೆ," ಎಂದು ಚಿಂತಾಕ್ರಾಂತನಾದ, ಮರುಕ್ಷಣ, "ಸರಿ, ಕೆಲಸದಿಂದ ನನ್ನನ್ನು ತೆಗೆದುಹಾಕಿದ ಮೇಲೆ ಜನರು ನನ್ನನ್ನು ತಮ್ಮ ಮನೆಗೆ ಸೇರಿಸಿಕೊಳ್ಳುವಂತೆ ನಾನು ಏನು ಮಾಡಬೇಕೆಂದು ಈಗ ಗೊತ್ತಾಯಿತು," ಎಂದುಕೊಂಡ. ಯಜಮಾನನ ಸಾಲಗಾರರನ್ನು ಒಬ್ಬೊಬ್ಬರನ್ನಾಗಿ ಬರಮಾಡಿಕೊಂಡ. "ನೀನು ನನ್ನ ಯಜಮಾನನಿಗೆ ತೀರಿಸಬೇಕಾದ ಸಾಲ ಎಷ್ಟು?" ಎಂದು ಮೊದಲನೆಯವನನ್ನು ಕೇಳಿದ. ಅವನು, "ನೂರು ಬುದ್ದಲಿ ಎಣ್ಣೆ," ಎಂದ. ಅದಕ್ಕೆ ಮೇಸ್ತ್ರಿ, "ಇಗೋ, ನಿನ್ನ ಪತ್ರ, ಕುಳಿತುಕೊಂಡು "ಐವತ್ತು" ಎಂದು ಬೇಗನೆ ಬರೆ," ಎಂದ. ಬಳಿಕ ಇನ್ನೊಬ್ಬನನ್ನು ಕರೆದು, "ನೀನೆಷ್ಟು ಸಾಲ ತೀರಿಸಬೇಕು?" ಎಂದು ಕೇಳಿದ. ಅವನು "ನೂರು ಖಂಡುಗ ಗೋದಿ" ಎಂದಾಗ "ಇಗೋ ನಿನ್ನ ಪತ್ರ, "ಎಂಬತ್ತು"ಎಂದು ಬರೆ", ಎಂದ. ಈ ಅಪ್ರಾಮಾಣಿಕ ಮೇಸ್ತ್ರಿ ಮಾಡಿದ ಮುಂದಾಲೋಚನೆಯನ್ನು ಅವನ ಯಜಮಾನ ಪ್ರಶಂಸಿಸಿದ. ಏಕೆಂದರೆ, ತಮ್ಮ ತಮ್ಮ ವ್ಯವಹಾರಗಳಲ್ಲಿ ಲೌಕಿಕ ಜನರು ಬೆಳಕಿನ ರಾಜ್ಯದ ಜನರಿಗಿಂತ ಜಾಣರು.

04.11.21 - "ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖನಾಗಿ ದೇವರಿಗೆ ಅಭಿಮುಖನಾಗುವ ಒಬ್ಬ ಪಾಪಿಯ ವಿಷಯವಾಗಿ ಹೆಚ್ಚು ಸಂತೋಷ ಉಂಟಾಗುತ್ತದೆ"

 ಮೊದಲನೇ ವಾಚನ: ರೋಮನರಿಗೆ 14:7-12


ಸಹೋದರರೇ, ನಮ್ಮಲ್ಲಿ ಯಾರೂ ತನಗಾಗಿಯೇ ಬದುಕುವುದಿಲ್ಲ; ತನಗಾಗಿಯೇ ಸಾಯುವುದಿಲ್ಲ. ನಾವು ಬದುಕಿದರೂ ಪ್ರಭುವಿಗಾಗಿಯೇ; ಸತ್ತರೂ ಅವರಿಗಾಗಿಯೇ. ನಾವು ಬದುಕಿದರೂ ಸತ್ತರೂ ಪ್ರಭುವಿಗೆ ಸೇರಿದವರು, ಏಕೆಂದರೆ, ಸತ್ತವರಿಗೂ ಬದುಕುವವರಿಗೂ ಪ್ರಭುವಾಗಬೇಕೆಂಬ ಉದ್ದೇಶದಿಂದಲೇ ಕ್ರಿಸ್ತ ಯೇಸು ಸತ್ತು ಜೀವಂತರಾದುದ್ದು. ಹೀಗಿರುವಲ್ಲಿ ಸಸ್ಯಹಾರಿಯೇ, ನೀನು ನಿನ್ನ ಸಹೋದರರನ್ನು ದೋಷಿಯೆಂದು ತೀರ್ಪಿಡುವುದೇಕೆ? ಮಾಂಸಹಾರಿಯೇ, ನಿನ್ನ ಸಹೋದರನನ್ನು ಹೀನೈಸುವುದೇಕೆ? ನಾವೆಲ್ಲರೂ ದೇವರ ನ್ಯಾಯಸ್ಥಾನದ ಮುಂದೆ ನಿಲ್ಲಬೇಕಲ್ಲವೆ? ಪವಿತ್ರ ಗ್ರಂಥದಲ್ಲಿ;  "ಎಲ್ಲರೂ ನನಗೆ ಸಾಷ್ಟಾಂಗವೆರಗುವರು ಎಲ್ಲರೂ ನನ್ನನ್ನು ದೇವರೆಂದು ನಿವೇದಿಸುವರು ಇದಕ್ಕೆ ಜೀವಸ್ವರೂಪನಾದ  ನಾನೇ ಸಾಕ್ಷಿ," ಎಂದು ಸರ್ವೇಶ್ವರಸ್ವಾಮಿ ಹೇಳಿದ್ದಾರೆ. ನಮ್ಮಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ವಿಷಯವಾಗಿ ದೇವರಿಗೆ ಲೆಕ್ಕವನ್ನು ಒಪ್ಪಿಸಬೇಕು.

ಕೀರ್ತನೆ: 27:1, 4, 13-14
ಶ್ಲೋಕ: ನನಗೆ ಬೆಳಕು, ನನಗೆ ರಕ್ಷೆ ಪ್ರಭುವೇ

ನನಗೆ ಬೆಳಕು, ನನಗೆ ರಕ್ಷೆ ಪ್ರಭುವೇ|
ನಾನಾರಿಗೂ ಅಳುಕೆನು||
ನನ್ನ ಬಾಳಿಗಾಧಾರ ಪ್ರಭುವೇ|
ನಾನಾರಿಗೂ ಅಂಜೆನು||

ನಾನೊಂದನು ಕೋರಿದೆ ಪ್ರಭುವಿನಿಂದ|
ನಾನದನ್ನೇ ನಿರೀಕ್ಷಿಸಿದೆ ಆತನಿಂದ||
ವಾಸಿಸಬೇಕು ಜೀವಮಾನವೆಲ್ಲ ನಾನಾತನ ಮಂದಿರದಲಿ|
ನಾ ತಲ್ಲೀನನಾಗಬೇಕು ಅಲ್ಲಾತನ ಪ್ರಸನ್ನತೆಯಲಿ||

ಪ್ರಭುವಿನೊಳಿತನು ನಾ ಕಾಣುವೆ ಜೀವಲೋಕದೊಳು|
ನಾನಿಟ್ಟಿರುವೆ ನಂಬಿಕೆ ನಿರೀಕ್ಷೆ ಅದರೊಳು||
ಪ್ರಭುವನು ಎದುರುನೋಡುತ್ತಿರು ಮನವೇ|
ಧೈರ್ಯದಿಂದ ನಿರೀಕ್ಷಿಸುತ್ತಿರು ಎದೆಗುಂದದೆ||

ಶುಭಸಂದೇಶ: ಲೂಕ 15:1-10

ಯೇಸುಸ್ವಾಮಿಯ ಉಪದೇಶವನ್ನು ಕೇಳಲು ಎಲ್ಲಾ ಸುಂಕದವರೂ ಪಾಪಿಗಳೂ ಬರುತ್ತಿದ್ದರು. ಇದನ್ನು ಕಂಡ ಫರಿಸಾಯರು ಮತ್ತು ಧರ್ಮಶಾಸ್ತ್ರಿಗಳು, "ಈ ಮನುಷ್ಯ ಪಾಪಿಗಳನ್ನು ಬರಮಾಡಿಕೊಳ್ಳುತ್ತಾನೆ; ಅವರೊಡನೆ ಊಟಮಾಡುತ್ತಾನೆ," ಎಂದು ಗೊಣಗಿದರು. ಆ ಸಂದರ್ಭದಲ್ಲಿ ಯೇಸು ಈ ಸಾಮತಿಯನ್ನು ಹೇಳಿದರು: "ನಿಮ್ಮಲ್ಲಿ ಯಾರ ಬಳಿಯಾದರೂ ನೂರು ಕುರಿಗಳು ಇವೆಯೆನ್ನೋಣ. ಅವುಗಳಲ್ಲಿ ಒಂದು ಕುರಿ ಕಾಣದೆ ಹೋದಾಗ ಅವನೇನು ಮಾಡುತ್ತಾನೆ? ಇರುವ ತೊಂಭತ್ತೊಂಭತ್ತು ಕುರಿಗಳನ್ನು ಹುಲ್ಲುಗಾವಲಿನಲ್ಲೇ ಬಿಟ್ಟು ಕಾಣದೆ ಹೋದ ಆ ಒಂದು ಕುರಿ ಸಿಕ್ಕುವ ತನಕ ಹುಡುಕಿಕೊಂಡು ಹೋಗುತ್ತಾನಲ್ಲವೆ? ಅದು ಸಿಕ್ಕಿದಾಗ ಸಿಕ್ಕಿತೆಂಬ ಸಂತೋಷದಿಂದ ಅದನ್ನು ಹೆಗಲ ಮೇಲೆ ಎತ್ತಿಕೊಂಡು ಮನೆಗೆ ಬರುತ್ತಾನೆ; ಸ್ನೇಹಿತರನ್ನೂ ನೆರೆಯವರನ್ನೂ ಒಟ್ಟಿಗೆ ಕರೆಯುತ್ತಾನೆ. "ಕಳೆದು ಹೋಗಿದ್ದ ಕುರಿ ಸಿಕ್ಕಿತು; ನನ್ನೊಡನೆ ಸೇರಿ ಸಂತೋಷಪಡಿ," ಎನ್ನುತ್ತಾನೆ. ಅಲ್ಲವೆ? ಅದೇ ರೀತಿಯಲ್ಲಿ, ಪಶ್ಚಾತ್ತಾಪದ ಅವಶ್ಯಕತೆಯಿಲ್ಲದ ತೊಂಭತ್ತೊಂಭತ್ತು ಸತ್ಪುರುಷರ ವಿಷಯವಾಗಿ ಸ್ವರ್ಗದಲ್ಲಿ ಉಂಟಾಗುವ ಸಂತೋಷಕ್ಕಿಂತ, ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖನಾಗಿ ದೇವರಿಗೆ ಅಭಿಮುಖನಾಗುವ ಒಬ್ಬ ಪಾಪಿಯ ವಿಷಯವಾಗಿ ಹೆಚ್ಚು ಸಂತೋಷ ಉಂಟಾಗುತ್ತದೆ ಎಂಬುವುದರಲ್ಲಿ ಸಂದೇಹವಿಲ್ಲ. ಅಂತೆಯೇ, ಮನೆಯಾಕೆಯೊಬ್ಬಳು ತನ್ನ ಬಳಿಯಿದ್ದ ಹತ್ತು ನಾಣ್ಯಗಳಲ್ಲಿ ಒಂದನ್ನು ಕಳೆದುಕೊಂಡಳು ಎನ್ನೋಣ. ಆಗ ಅವಳೇನು ಮಾಡುತ್ತಾಳೆ?ದೀಪ ಹಚ್ಚಿ ಮನೆಯನ್ನು ಗುಡಿಸಿ, ಕಳೆದು ಹೋದ ನಾಣ್ಯ ಸಿಕ್ಕುವವರೆಗೂ ಚೆನ್ನಾಗಿ ಹುಡುಕಾಡುತ್ತಾಳೆ, ಅಲ್ಲವೇ? ಅದು ಸಿಕ್ಕಿದಾಗ ತನ್ನ ಗೆಳತಿಯರನ್ನೂ ನೆರೆಯವರನ್ನೂ ಒಟ್ಟಿಗೆ ಕರೆದು, "ಕಳೆದುಹೋದ ನಾಣ್ಯ ಸಿಕ್ಕಿಬಿಟ್ಟಿತು‌. ನನ್ನೊಡನೆ ಸೇರಿ ಸಂತೋಷಪಡಿ," ಎನ್ನುತ್ತಾಳಲ್ಲವೆ? ಅದೇ ಮೇರೆಗೆ ಪಶ್ಚಾತ್ತಾಪಪಟ್ಟು ದೇವರಿಗೆ ಅಭಿಮುಖನಾಗುವ ಒಬ್ಬ ಪಾಪಿಯ ವಿಷಯವಾಗಿ ದೇವದೂತರಿಗೆ ಸಂತೋಷ ಉಂಟಾಗುತ್ತದೆಂಬುದು ನಿಶ್ಚಯ," ಎಂದರು.

03.11.21 - "ತನ್ನ ಶಿಲುಬೆಯನ್ನು ಹೊತ್ತು ನನ್ನ ಹಿಂದೆ ಬಾರದವನು ನನ್ನ ಶಿಷ್ಯನಾಗಲಾರನು"

ಮೊದಲನೇ ವಾಚನ: ರೋಮನರಿಗೆ 13:8-10

ಸಹೋದರರೇ, ಒಬ್ಬರನೊಬ್ಬರು ಪ್ರೀತಿಸಬೇಕೆಂಬ ಋಣವೇ ಹೊರತು ಬೇರೆ ಯಾವ ವಿಧವಾದ ಋಣವೂ ನಿಮಗಿರಬಾರದು. ಏಕೆಂದರೆ ಪರರನ್ನು ಪ್ರೀತಿಸುವವನು ಧರ್ಮಶಾಸ್ತ್ರವನ್ನು ಪೂರ್ಣವಾಗಿ ನೆರವೇರಿಸಿದವನು. "ವ್ಯಭಿಚಾರ ಮಾಡಬೇಡ, ಕೊಲಬೇಡ, ಕಳಬೇಡ, ದುರಾಶೆ ಪಡಬೇಡ,"  ಈ ಮುಂತಾದ ಆಜ್ಞೆಗಳೆಲ್ಲವೂ "ನೀನು ನಿನ್ನನ್ನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವರನ್ನೂ ಪ್ರೀತಿಸು," ಎಂಬ ಒಂದೇ ಆಜ್ಞೆಯಲ್ಲಿ ಅಡಗಿದೆ. ಪ್ರೀತಿಯು ಪರರಿಗೆ ಕೇಡು ಬಗೆಯದು. ಆದಕಾರಣ ಪ್ರೀತಿಯೇ ಧರ್ಮಶಾಸ್ತ್ರದ ಪೂರೈಕೆ.

ಕೀರ್ತನೆ: 112:1-2, 4-5, 9
ಶ್ಲೋಕ: ದಯೆತೋರಿ ಧನಸಹಾಯ ಮಾಡುವವನು ಭಾಗ್ಯವಂತನು

ಪ್ರಭುವಿನಲ್ಲಿ ಭಯಭಕ್ತಿಯುಳ್ಳವನು ಧನ್ಯನು|
ಆತನ ಆಜ್ಞೆಗಳಲಿ ಹಿಗ್ಗುವವನು ಭಾಗ್ಯನು ||
ಬಲಿಷ್ಠವಾಗುವುದು ಜಗದೊಳು ಅವನ ಸಂತಾನ|
ಸಜ್ಞನರ ಸಂತತಿ ಪಡೆವುದು ಆಶೀರ್ವಚನ||

ಸಜ್ಜನರಿಗೆ ಮೂಡುವುದು ಜ್ಯೋತಿ ಕತ್ತಲೊಳು|
ನ್ಯಾಯಪ್ರಿಯನು ಆತ, ದಯಾವಂತ, ಕೃಪಾಳು||
ದಯೆತೋರಿ ಧನಸಹಾಯ ಮಾಡುವವನು ಭಾಗ್ಯವಂತ|
ನ್ಯಾಯದಿಂದ ವ್ಯವಹರಿಸುವಂಥ ಮನುಜನು ಭಾಗ್ಯವಂತ||

ಉದಾರತೆಯಿಂದ ಕೊಡುವನು ಬಡವರಿಗೆ|
ಫಲಿಸುವುದು ಅವನಾ ನೀತಿ ಸದಾಕಾಲಕೆ|
ಮಹಿಮೆತರುವ ಕೋಡು ಮೂಡುವುದು ಅವನಿಗೆ||

ಶುಭಸಂದೇಶ: ಲೂಕ 14:25-33

ಜನರು ಗುಂಪುಗುಂಪಾಗಿ ಯೇಸುಸ್ವಾಮಿಯ ಸಂಗಡ ಹೋಗುತ್ತಿದ್ದರು. ಆಗ ಯೇಸು ಅವರ ಕಡೆಗೆ ತಿರುಗಿ ಹೀಗೆಂದರು: "ನನ್ನಲ್ಲಿಗೆ ಬರುವ ಯಾರೊಬ್ಬನು ತನ್ನ ತಂದೆ - ತಾಯಿ, ಹೆಡತಿ - ಮಕ್ಕಳು, ಸೋದರ - ಸೋದರಿಯರನ್ನು ಮಾತ್ರವಲ್ಲ, ತನ್ನ ಪ್ರಾಣವನ್ನು ಕೂಡ ತ್ಯಜಿಸದ  ಹೊರತು, ನನ್ನ ಶಿಷ್ಯನಾಗಲಾರನು. ತನ್ನ ಶಿಲುಬೆಯನ್ನು ಹೊತ್ತು ನನ್ನ ಹಿಂದೆ ಬಾರದವನು ನನ್ನ ಶಿಷ್ಯನಾಗಲಾರನು ನಿಮ್ಮಲ್ಲಿ ಒಬ್ಬನು ಒಂದು ಗೋಪುರವನ್ನು ಕಟ್ಟಲು ಇಚ್ಛಿಸಿದರೆ, ಕೆಲಸವನ್ನು ಮುಗಿಸಲು ತನ್ನಿಂದ ಸಾಧ್ಯವೇ ಎಂದು ನೋಡಲು ಮೊದಲು ಕುಳಿತು, ಬೇಕಾಗುವ ಖರ್ಚುವೆಚ್ಚವನ್ನು ಲೆಕ್ಕ ಹಾಕುವುದಿಲ್ಲವೇ? ಇಲ್ಲದೆ ಹೋದರೆ, ಇವನು ಅಸ್ತಿವಾರ ಹಾಕಿದ ಮೇಲೆ ಕೆಲಸ ಪೂರೈಸದೆ ಇರುವುದನ್ನು ಕಂಡು, "ಕಟ್ಟಲಾರಂಭಿಸಿದ; ಮುಗಿಸಲು ಇವನಿಂದಾಗಲಿಲ್ಲ!" ಎಂದು ನೋಡುವವರೆಲ್ಲರೂ ಅವನನ್ನು ಪರಿಹಾಸ್ಯಮಾಡುವರು. ಹಾಗೆಯೇ, ಅರಸನೊಬ್ಬನು ಇನ್ನೊಬ್ಬ ಅರಸನ ವಿರುದ್ಧ ಯುದ್ಧಕ್ಕೆ ಹೋಗುವುದಕ್ಕೆ ಮುಂಚೆ ಇಪ್ಪತ್ತು ಸಾವಿರ ಸೈನ್ಯದೊಡನೆ ಬರುವ ಶತ್ರುವನ್ನು ತನ್ನ ಹತ್ತು ಸಾವಿರ ಸೈನ್ಯದಿಂದ ಎದುರಿಸಲು ಸಾಧ್ಯವೇ ಎಂದು ಮೊದಲು ಕುಳಿತು ಆಲೋಚನೆ ಮಾಡುವುದಿಲ್ಲವೇ? ಸಾಧ್ಯವಿಲ್ಲದಿದ್ದರೆ, ಶತ್ರುರಾಜನು ದೂರದಲ್ಲಿರುವಾಗಲೇ ದೂತರನ್ನು ಕಳುಹಿಸಿ, ಸಂಧಾನಕ್ಕೆ ಶರತ್ತುಗಳೇನೆಂದು ವಿಚಾರಿಸುತ್ತಾನೆ. ಅದೇ ಮೇರೆಗೆ, ನಿಮ್ಮಲ್ಲಿ ಯಾವನು ತನಗಿರುವುದನ್ನೆಲ್ಲಾ ಪರಿತ್ಯಾಗ ಮಾಡುವುದಿಲ್ಲವೋ ಅವನು ನನ್ನ ಶಿಷ್ಯನಾಗಲಾರ".