14.01.2020 - "ಸುಮ್ಮನಿರು, ಇವನನ್ನು ಬಿಟ್ಟು ತೊಲಗು"

ಮೊದಲನೇ ವಾಚನ: 1 ಸಮುವೇಲ 1:9-20

ಶಿಲೋವಿನಲ್ಲಿ ಅವರು ಅನ್ನ ಪಾನಗಳನ್ನು ತೆಗೆದುಕೊಂಡ ಮೇಲೆ ಹನ್ನಳು ಎದ್ದು ಸರ್ವೇಶ್ವರನ ಮಂದಿರಕ್ಕೆ ಬಂದಳು. ಯಾಜಕ ಏಲಿಯನು ಆ ಮಂದಿರದ ದ್ವಾರದ ನಿಲುವು ಪಟ್ಟಿಗಳ ಬಳಿ ಬಂದು ಪೀಠದ ಮೇಲೆ ಕುಳಿತ್ತಿದ್ದನು. ಹನ್ನಳು ಬಹು ದುಃಖದಿಂದ ಕಣ್ಣೀರಿಡುತ್ತಾ ಸರ್ವೇಶ್ವರನಲ್ಲಿ ಹೀಗೆಂದು ಪ್ರಾರ್ಥಿಸಿದಳು: "ಸರ್ವಶಕ್ತರಾದ ಸರ್ವೇಶ್ವರ, ನಿಮ್ಮ ದಾಸಿಯಾದ ನನ್ನ ದುಃಖವನ್ನು ನೀಗಿಸಿರಿ; ನನ್ನನ್ನು ಪರಾಂಬರಿಸಿರಿ; ನನ್ನನ್ನು ತಿರಸ್ಕರಿಸದೆ ಕನಿಕರ ಪಟ್ಟು ನನಗೊಬ್ಬ ಮಗನನ್ನು ಅನುಗ್ರಹಿಸಿರಿ. ಅವನನ್ನು ಅಮರಣಾಂತರ ನಿಮಗೆ ಸರ್ಮಪಿಸುವೆನು; ಅವನ ತಲೆಯ ಮೇಲೆ ಕ್ಷೌರ ಕತ್ತಿಯನ್ನು ಬರಗೊಡುವುದಿಲ್ಲ ಎಂದು ಹರಕೆ ಮಾಡುತ್ತೇನೆ." ಹನ್ನಳು ಬಹಳ ಹೊತ್ತಿನವರೆಗೆ ಸರ್ವೇಶ್ವರನ ಮುಂದೆ ಪ್ರಾರ್ಥನೆ ಸಲ್ಲಿಸುತ್ತಾ ಇದ್ದಳು. ಏಲಿ ಆಕೆಯ ಬಾಯನ್ನು ಗಮನಿಸಿದನು. ಆಕೆ ಹೃದಯಾಂತರಾಳದಿಂದ ಪ್ರಾರ್ಥಿಸುತ್ತಾ ಇದ್ದಳು; ತುಟಿಗಳು ಅಲುಗಾಡುತ್ತಿದ್ದವು. ಶಬ್ಧ ಮಾತ್ರ ಕೇಳಿಸುತ್ತಿರಲಿಲ್ಲ. ಆದುದ್ದರಿಂದ ಇವಳು  ಕುಡಿದಿರಬೇಕೆಂದು ತಿಳಿದು, "ನಿನ್ನ ಕುಡಿತದ ಅಮಲು ಇನ್ನು ಇಳಿಯಲಿಲ್ಲವೇ? ದ್ರಾಕ್ಷಾರಸದ ನಿಶೆ ನಿನ್ನನ್ನು ಬಿಟ್ಟು ಹೋಗಲಿ". ಎಂದನು. ಆಕೆ, "ಇಲ್ಲ ಸ್ವಾಮಿ, ನಾನು ಕುಡಿದಿಲ್ಲ, ನಾನು ಬಹಳ ದುಃಖಪೀಡಿತಳು; ದ್ರಾಕ್ಷರಸವನ್ನಾಗಲಿ ಬೇರೆ ಯಾವ ಮದ್ಯಯವನ್ನಾಗಲಿ ಕುಡಿದವಳಲ್ಲ. ನನ್ನ ಮನೋವೇದನೆಯನ್ನು ಸರ್ವೇಶ್ವರನ ಮುಂದೆ ತೋಡಿಕೊಳ್ಳುತ್ತಾ ಇದ್ದೇನೆ. ನಿಮ್ಮ ದಾಸಿಯಾದ ನನ್ನ ಅಯೋಗ್ಯಳೆಂದು ನೆನೆಸಬೇಡಿ. ಈವರೆಗೂ ನನ್ನ ಅತಿಯಾದ ಚಿಂತೆಯನ್ನು ವ್ಯಥೆಯನ್ನು ಅರಿಕೆ ಮಾಡುಕೊಳ್ಳುತ್ತಿದ್ದೆ," ಎಂದು ಹೇಳಿದಳು. ಆಗ ಏಲಿ ಆಕೆಗೆ, "ಸಮಾಧಾನದಿಂದ ಹೋಗು. ಇಸ್ರಯೇಲಿನ ದೇವರು ನಿನ್ನ ಪ್ರಾರ್ಥನೆಯನ್ನು ಈಡೇರಿಸಲಿ,"  ಎಂದನು. "ನಿಮ್ಮ ದಾಸಿಯಾದ ನನ್ನ ಮೇಲೆ ಕರುಣೆ ಇರಲಿ," ಎಂದು ಹೇಳಿ ಆಕೆ ಅಲ್ಲಿಂದ ಹೊರಟು ಹೋಗಿ ಊಟ ಮಾಡಿದಳು. ಬಳಿಕ ಅವಳ ದುಃಖ ದೂರವಾಯಿತು. ಮಾರನೆಯ ದಿನ ಬೆಳಿಗ್ಗೆ ಅವರೆಲ್ಲರು ಎದ್ದು ಸರ್ವೇಶ್ವರನನ್ನು ಆರಾಧಿಸಿ ರಾಮಾದಲ್ಲಿದ್ದ ತಮ್ಮ ಮನೆಗೆ ಬಂದರು. ಎಲ್ಕಾನನು ತನ್ನ ಹೆಂಡತಿಯಾದ ಹನ್ನಾಳನ್ನು ಕೂಡಲು ಆಕೆ ಸರ್ವೇಶ್ವರನ ಅನುಗ್ರಹದಿಂದ ಗರ್ಭಿಣಿಯಾದಳು. ದಿನ ತುಂಬಿದ ಮೇಲೆ ಒಬ್ಬ ಮಗನನ್ನು ಹೆತ್ತಳು, "ನಾನು ಇವನನ್ನು ಸರ್ವೇಶ್ವರನಿಂದ ಬೇಡಿ ಪಡೆದೆ," ಎಂದು ಹೇಳಿ ಆ ಮಗುವಿಗೆ ’ಸಮುವೇಲ’ ಎಂದು ಹೆಸರಿಟ್ಟಳು.

ಕೀರ್ತನೆ: 1 ಸಮುವೇಲ 2:1, 4-5, 6-7, 8-10
ಶ್ಲೋಕ: ಆನಂದಿಸುತ್ತಿದೆ ನನ್ನ ಮನ ಸರ್ವೇಶ್ವರನಲಿ.

ಶುಭಸಂದೆಷ: ಮಾರ್ಕ: 1: 21-28

ಯೇಸುಸ್ವಾಮಿಯು ಶಿಷ್ಯರೊಂದಿಗೆ ಕಫೆರ್ನವುಮ್ ಎಂಬ ಊರನ್ನು ಸೇರಿದರು. ಸಬ್ಬತ್ ದಿನ ಬಂದ ಕೂಡಲೇ ಯೇಸುಸ್ವಾಮಿ ಪ್ರಾರ್ಥನಾಮಂದಿರಕ್ಕೆ ಬಂದು ಹೀಗೆ ಬೋಧಿಸತೊಡಗಿದರು. ಅವರ ಉಪದೇಶವನ್ನು ಕೇಳಿ ಜನರು ಬೆರಗಾದರು. ಏಕೆಂದರೆ ಯೇಸು, ಧರ್ಮಶಾಸ್ತ್ರಿಗಳಂತೆ ಬೋಧಿಸದೆ ಅಧಿಕಾರವಾಣಿಯಿಂದ ಪ್ರಬೋಧಿಸುತ್ತಿದ್ದರು. ಅಲ್ಲಿ ದೆವ್ವ ಹಿಡಿದ ಒಬ್ಬನಿದ್ದನು. ಅವನು, "ನಜ಼ರೇತಿನ ಯೇಸುವೇ, ನಿಮಗೇಕೆ ನಮ್ಮ ಗೊಡವೆ? ನೀವು ನಮ್ಮ ವಿನಾಶಕ್ಕಾಗಿ ಬಂದವರೇನು? ನೀವು ಯಾರೆಂದು ನನಗೆ ಗೊತ್ತು. ದೇವರಿಂದ ಬಂದ ಪರಪೂಜ್ಯರು ನೀವು," ಎಂದು ಕಿರುಚಿದನು. ಆದರೆ ಯೇಸುಸ್ವಾಮಿ ಅವನನ್ನು ಗದರಿಸಿ, "ಸುಮ್ಮನಿರು, ಇವನನ್ನು ಬಿಟ್ಟು ತೊಲಗು," ಎಂದು ಆ ದೆವ್ವಕ್ಕೆ ಆಜ್ಞಾಪಿಸಿದರು. ದೆವ್ವವು ಆ ಮನುಷ್ಯನನ್ನು ಒದ್ದಾಡಿಸಿ ಗಟ್ಟಿಯಾಗಿ ಚೀರುತ್ತಾ ಅವನನ್ನು ಬಿಟ್ಟು ಹೋಯಿತು. ಜನರೆಲ್ಲರು ಆಶ್ವರ್ಯಚಕಿತರಾದರು. "ಇದೇನು ಹೊಸ ಬೋಧನೆ!? ಈತ ದೆವ್ವಗಳಿಗೆ ಕೂಡ ಅಧಿಕಾರದಿಂದ ಆಜ್ಞಾಪಿಸುತ್ತಾನೆ’ ಅವು ಈತ ಹೇಳಿದ ಹಾಗೆ ಕೇಳುತ್ತವೆಯಲ್ಲ!" ಎಂದು ಪರಸ್ಪರ ಮಾತಾಡಿಕೊಂಡರು. ಕೂಡಲೇ ಗಲಿಲೇಯ ಪ್ರಾಂತ್ಯದ ಎಲ್ಲೆಡೆಗೂ ಯೇಸುವಿನ ಸಮಾಚಾರ ಹಬ್ಬಿ ಹರಡಿತು.

13.01.2019 - "ನನ್ನನ್ನು ಹಿಂಬಾಲಿಸಿ ಬನ್ನಿ, ನಿಮ್ಮನ್ನು ಮನುಷ್ಯರನ್ನೇ ಹಿಡಿಯುವರನ್ನಾಗಿ ಮಾಡುವೆನು,"


ಮೊದಲನೇ ವಾಚನ: 1 ಸಮುವೇಲ 1:1-8
ಎಫ್ರಯಿಮ್ ಬೆಟ್ಟದ ಪ್ರದೇಶದಲ್ಲಿ ರಾಮಾ ಒಂದು ಊರು. ಆ ಊರಲ್ಲಿ ’ಎಲ್ಕಾನ’ ಎಂಬ ಒಬ್ಬ ಮನುಷ್ಯನಿದ್ದ. ಇವನು ಯೆರೋಹಾಮನ ಮಗ, ಎಲೀಹುವಿನ ಮೊಮ್ಮಗ ಹಾಗು ತೋಹುವಿನ ಮರಿಮಗ. ಈ ತೋಹು ಎಂಬುವನು ಎಫ್ರಯಿಮ್ಯನಾದ ಚೂಫನ ಮಗ. ಎಲ್ಕಾನನಿಗೆ ಇಬ್ಬರು ಹೆಂಡತಿಯರು. ಒಬ್ಬಳು ಹನ್ನ, ಇನ್ನೊಬ್ಬಳು ಪೆನಿನ್ನ. ಪೆನಿನ್ನಗೆ ಮಕ್ಕಳು ಇದ್ದರು; ಆದರೆ ಹನ್ನಳಿಗೆ ಇರಲಿಲ್ಲ. ಎಲ್ಕಾನನು ಪ್ರತಿ ವರ್ಷ ರಾಮಾದಿಂದ ಶಿಲೋವಿಗೆ ಹೋಗಿ ಸೇನಾಧೀಶ್ವರರಾದ ಸರ್ವೇಶ್ವರಸ್ವಾಮಿಗೆ ಬಲಿದಾನವನ್ನು ಸಮರ್ಪಿಸಿ ಆರಾಧಿಸುತ್ತಿದ್ದನು. ಅಲ್ಲಿ ಏಲಿಯನ ಮಕ್ಕಳಾದ ಹೊಫ್ನಿ, ಫೀನೆಹಾಸ ಎಂಬುವರು ಸರ್ವೇಶ್ವರನ ಯಾಜಕರಾಗಿದ್ದರು. ಎಲ್ಕಾನನು ಬಲಿಯರ್ಪಿಸಿದಾಗಲೆಲ್ಲಾ ತನ್ನ ಹೆಂಡತಿಯಾದ ಪೆನಿನ್ನಳಿಗೂ ಆಕೆಯ ಎಲ್ಲ ಗಂಡು ಹೆಣ್ಣುಮಕ್ಕಳಿಗೂ ಬಲಿಭೋಜನದ ಒಂದೊಂದು ಭಾಗವನ್ನು ಕೊಡುತ್ತಿದ್ದನು. ಅವನು ಹನ್ನಳನ್ನು ಬಹಳವಾಗಿ ಪ್ರೀತಿಸುತ್ತಿದ್ದರೂ ಒಂದು ಭಾಗವನ್ನು ಮಾತ್ರ ಆಕೆಗೆ ಕೊಡುತ್ತಾ ಇದ್ದನು. ಏಕೆಂದರೆ ಸರ್ವೇಶ್ವರ ಆಕೆಗೆ ಮಕ್ಕಳನ್ನು ಕೊಟ್ಟಿರಲಿಲ್ಲ. ಇದಲ್ಲದೆ, "ಸರ್ವೇಶ್ವರ ನಿನ್ನನ್ನು ಬಂಜೆಯಾಗಿ ಮಾಡಿದ್ದಾರೆ," ಎಂಬ ಚುಚ್ಚು ಮಾತುಗಳಿಂದ ನೋಯಿಸುತ್ತಿದ್ದಳು ಅವಳ ಸವತಿಯಾದ ಪೆನಿನ್ನಳು. ವರ್ಷ ವರ್ಷವೂ ಇದು ಹಾಗೆಯೇ ನೆಡೆಯುತ್ತಿತ್ತು: ಸರ್ವೇಶ್ವರನ ಮಂದಿರಕ್ಕೆ ಹೋದಾಗಲೆಲ್ಲ ಪೆನಿನ್ನಳು ಹನ್ನಳನ್ನು ಕೆಣಕುತ್ತಿದ್ದಳು. ಇದರಿಂದಾಗಿ ಒಮ್ಮೆ ಹನ್ನಳು ಊಟ ಮಾಡಲೊಲ್ಲದೆ ಅಳುತ್ತಾ ಇದ್ದಳು. ಆಗ ಆಕೆಯ ಗಂಡ ಎಲ್ಕಾನನು ಆಕೆಗೆ, "ಹನ್ನಾ, ಏಕೆ ಅಳುತ್ತಿರುವೆ? ಊಟಮಾಡದಿರುವುದಕ್ಕೆ ಕಾರಣ ಏನು? ವ್ಯಸನಪಡುವುದು ಏಕೆ? ಹತ್ತು ಮಕ್ಕಳಿಗಿಂತಲೂ ನಾನು ನಿನಗೆ ಹೆಚ್ಚಲ್ಲವೆ?" ಎಂದನು.

ಕೀರ್ತನೆ: 116:12-13, 14-17, 18-10

ಶ್ಲೋಕ: ಪ್ರಭುವೇ, ಅರ್ಪಿಸುವೆ ನಾ ನಿನಗೆ ಕೃತಜ್ಞತಾಬಲಿಗಳನ್ನು

ಶುಭಸಂದೇಶ: ಮಾರ್ಕ 1:14-20

ಯೊವಾನ್ನನು ಬಂಧಿತನಾದ ಬಳಿಕ ಯೇಸುಸ್ವಾಮಿ ಗಲಿಲೇಯಕ್ಕೆ ಹೋಗಿ ದೇವರ ಶುಭಸಂದೇಶವನ್ನು ಸಾರಿದರು: "ಕಾಲವು ಪರಿಪಕ್ವವಾಗಿದೆ, ದೇವರ ಸಾಮ್ರಾಜ್ಯವು ಸಮೀಪಿಸಿದೆ; ಪಶ್ಚಾತ್ತಾಪಪಟ್ಟು ಪಾಪಜೀವನಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ. ಶುಭಸಂದೇಶದಲ್ಲಿ ವಿಶ್ವಾಸವಿಡಿ," ಎಂದು ಘೋಷಿಸಿದರು. ಯೇಸುಸ್ವಾಮಿ ಗಲಿಲೇಯ ಸರೋವರದ ತೀರದಲ್ಲಿ ನಡೆದು ಹೋಗುತ್ತಿದ್ದಾಗ ಸಿಮೋನನ್ನೂ ಆತನ ಸಹೋದರ ಅಂದ್ರೇಯನನ್ನೂ ಕಂಡರು. ಬೆಸ್ತರಾದ ಇವರು ಸರೋವರದಲ್ಲಿ ಬಲೆ ಬೀಸುತ್ತಾ ಇದ್ದರು. ಯೇಸು ಅವರಿಗೆ, "ನನ್ನನ್ನು ಹಿಂಬಾಲಿಸಿ ಬನ್ನಿ, ನಿಮ್ಮನ್ನು ಮನುಷ್ಯರನ್ನೇ ಹಿಡಿಯುವರನ್ನಾಗಿ ಮಾಡುವೆನು," ಎಂದು ಕರೆದರು. ತಕ್ಷಣವೇ ಅವರು ತಮ್ಮ ಬಲೆಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು. ಇನ್ನೂ ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಾಗ, ಜೆಬೆದಾಯನ ಮಕ್ಕಳಾದ ಯಕೋಬ ಮತ್ತು ಯೊವಾನ್ನರನ್ನು ಯೇಸು ಕಂಡರು. ಅವರು ದೋಣಿಯಲ್ಲಿ ಕುಳಿತು ತಮ್ಮ ಬಲೆಗಳನ್ನು ಸರಿಪಡಿಸುತ್ತಿದ್ದರು. ಕೂಡಲೇ, ಯೇಸು ಅವರನ್ನು ಕರೆದರು. ಅವರೂ ತಮ್ಮ ತಂದೆ ಜೆಬೆದಾಯನನ್ನು ಕೂಲಿಯಾಳುಗಳ ಸಂಗಡ ದೋಣಿಯಲ್ಲೇ ಬಿಟ್ಟು ಯೇಸುವನ್ನು ಹಿಂಬಾಲಿಸಿದರು.

12.01.2020

ಮೊದಲನೇ ವಾಚನ: ಯೆಶಾಯ 42:1-4, 6-7

ಇಗೋ, ನನ್ನ ದಾಸನು! ನನ್ನ ಆಧಾರ ಪಡೆದವನು. ನನ್ನಿಂದ ಆಯ್ಕೆಯಾದವನು, ನನಗೆ ಪರಮ ಪ್ರಿಯನು. ನೆಲೆಗೊಳಿಸಿರುವೆ ಇವನಲ್ಲಿ ನನ್ನ ಆತ್ಮವನು ಅನ್ಯ ರಾಷ್ಟ್ರಗಳಿಗೆ ಸಾರುವನಿವನು ಸದ್ದರ್ಮವನು. ಆತ ಕೂಗಾಡುವಂಥವನಲ್ಲ, ಕಿರಿಚಾಡುವಂಥವನಲ್ಲ, ಹಾದಿಬೀದಿಗಳಲ್ಲಿ ಅವನ ಧ್ವನಿ ಕೇಳಿಸುವುದೇ ಇಲ್ಲ. ಮುರಿಯುವುದಿಲ್ಲ ಆತ, ಜಜ್ಜಿದ ದಂಟನು ನಂದಿಸುವುದಿಲ್ಲ ಆತ, ಕಳೆಗುಂದಿದ ದೀಪವನು ತಪ್ಪದೆ ಸಿದ್ದಿಗೆ ತರುವನಾತ ಸದ್ದರ್ಮವನು. ಎಡವಿಬೀಳನವನು, ಎದೆಗುಂದನವನು, ಜಗದೊಳು ಸ್ಥಾಪಿಸುವ ತನಕ ಸದ್ದರ್ಮವನು, ಎದುರು ನೋಡುವುವು ದ್ವೀಪದ್ವೀಪಾಂತರಗಳು ಆತನ ಧರ್ಮಶಾಸ್ತ್ರವನು. ಸರ್ವೇಶ್ವರಸ್ವಾಮಿಯಾದ ನಾನು ಕೈ ಹಿಡಿದು ಕಾದಿರುಸುವೆನು ನಿನ್ನನು, ಕರೆದಿಹೆನು ನಿನ್ನನು ಸದ್ದರ್ಮಸಾಧನೆಗಾಗಿ, ಇತ್ತಿರುವೆನು ನಿನ್ನನು ಜನರಿಗೆ ಒಡಂಬಡಿಕೆಯಾಗಿ, ನೇಮಿಸಿರುವೆ ನಿನ್ನನು ರಾಷ್ಟ್ರಗಳಿಗೆ ಬೆಳಕಾಗಿ. ಕೊಡುವೆ ನೀನು ಕಣ್ಣನ್ನು ಕುರುಡರಿಗೆ, ತರುವೆ ಬಂಧಿಗಳನ್ನು ಸೆರೆಯಿಂದ ಹೊರಗೆ ಕತ್ತಲೆಯ ಕಾರಾಗೃಹದಿಂದ ಅವರನ್ನು ಬೆಳಕಿಗೆ.

ಕೀರ್ತನೆ: 9: 1-2, 3-4, 3, 9-10
ಶ್ಲೋಕ: ದಯಪಾಲಿಸಲಿ ತನ್ನ ಪ್ರಜೆಗೆ ಸುಕ್ಷೇಮವನು.

ಎರಡನೆಯ ವಾಚನ: ಪ್ರೇಷಿತರ ಕಾರ್ಯಕಲಾಪಗಳು 10:34-38

ಆಗ ಪೇತ್ರನು ಹೀಗೆಂದು ಉಪದೇಶ ಮಾಡಿದನು: "ದೇವರು ಪಕ್ಷಪಾತಿಯಲ್ಲ. ಈ ವಿಷಯ ನನಗೆ ಈಗ ಮನದಟ್ಟಾಗಿದೆ. ದೇವರಿಗೆ ಭಯಪಟ್ಟು ಸತ್ಪುರುಷನಾಗಿ ಬಾಳುವವನು ಯಾವ ಜನಾಂಗದನೇ ಆಗಿರಲಿ, ಅವನು ಅವರ ಮೆಚ್ಚುಗೆಗೆ ಪಾತ್ರನಾಗುತ್ತಾನೆ. ಸಮಸ್ತ ಮಾನವಕೋಟಿಯ ಪ್ರಭುವಾದ ಯೇಸುಕ್ರಿಸ್ತರ ಮುಖಾಂತರ ಶಾಂತಿ ಲಭಿಸುತ್ತದೆ ಎಂಬ ಶುಭಸಂದೇಶವನ್ನು ದೇವರು ಇಸ್ರಯೇಲ್ ಜನಾಂಗಕ್ಕೆ ಸಾರಿದರು. ಈ ವಿಷಯ ನಿಮಗೆ ತಿಳಿಸಿದೆ. ಇತ್ತೀಚೆಗೆ ಜುದೇಯ ನಾಡಿನಾದ್ಯಾಂತ ನಡೆದ ಘಟನೆಗಳು ನಿಮಗೆ ತಿಳಿದೇ ಇರಬೇಕು. ಇವು ನಜ಼ರೇತಿನ ಯೇಸುವಿಗೆ ಸಂಬಂಧಪಟ್ಟ ವಿಷಯಗಳು. ಸ್ನಾನದೀಕ್ಷೆಯನ್ನು ಮಾಡಿಸಿಕೊಳ್ಳಬೇಕೆಂದು ಯೊವಾನ್ನನು ಬೋಧಿಸಿದ ನಂತರ, ಯೇಸು ತಮ್ಮ ಸೇವಾ ವೃತ್ತಿಯನ್ನು ಗಲಿಲೇಯದಲ್ಲಿ ಪ್ರಾರಂಭಿಸಿದರು. ಅವರು ಪವಿತ್ರಾತ್ಮರಿಂದಲೂ ದೈವ ಶಕ್ತಿಯಿಂದಲೂ ಅಭಿಷಿಕ್ತರಾಗಿದ್ದರು. ದೇವರು ತಮ್ಮೊಡನೆ ಇದ್ದುದರಿಂದ ಅವರು ಎಲ್ಲೆಡೆಯಲ್ಲೂ ಒಳಿತನ್ನು ಮಾಡುತ್ತಾ, ಪಿಶಾಚಿಪೀಡಿತರಾದವರನ್ನು ಸ್ವಸ್ಥ ಪಡಿಸುತ್ತಾ ಸಂಚರಿಸಿದರು. 

ಶುಭಸಂದೇಶ: ಮತ್ತಾಯ 3: 13-17

ಯೊವಾನ್ನನಿಂದ ಸ್ನಾನ ದೀಕ್ಷೆ ಪಡೆಯಲು ಯೇಸುಸ್ವಾಮಿ ಗಲಿಲೇಯದಿಂದ ಹೊರಟು ಜೋರ್ಡನ್ ನದಿಯ ಬಳಿಗೆ ಬಂದರು. ಯೊವಾನ್ನನು ಅವರನ್ನು ತಡೆಯಲೆತ್ನಿಸಿದನು. "ನಾನೇ ನಿಮ್ಮಿಂದ ದೀಕ್ಷಾಸ್ನಾನ ಪಡೆಯಬೇಕಾಗಿರುವಲ್ಲಿ ನೀವು ನನ್ನ ಬಳಿಗೆ ಬರುವುದೇ" ಎಂದನು. ಆದರೇ ಯೇಸು, "ಸದ್ಯಕ್ಕೆ ತಡೆಯದಿರು; ನಾವು ದೈವನಿಯಮಕ್ಕೆ ತಲೆಬಾಗುವುದು ಒಳಿತು," ಎಂದರು. ಯೊವಾನ್ನನು ಅದಕ್ಕೆ ಸಮ್ಮತಿಸಿದನು. ಯೇಸು ದೀಕ್ಷಾಸ್ನಾನ ಪಡೆದು ನೀರಿನಿಂದ ಮೇಲಕ್ಕೆ ಬಂದದ್ದೇ ಆಕಾಶವು ಫಕ್ಕನೆ ತೆರೆಯಿತು; ದೇವರಾತ್ಮ ಪಾರಿವಾಳದ ರೂಪದಲ್ಲಿ ತಮ್ಮ ಮೇಲೆ ಇಳಿದು ಬಂದು ನೆಲೆಸುವುದನ್ನು ಕಂಡರು. ಆಗ ಆಕಾಶದಿಂದ, "ಇವನೇ ನನ್ನ ಪುತ್ರ; ನನಗೆ ಪರಮ ಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು," ಎಂಬ ದೈವವಾಣಿ ಕೇಳಿಸಿತು.

11.01.2020 - "ಆತ ಬೆಳೆಯುತ್ತಿರಬೇಕು, ನಾನು ಅಳಿಯುತ್ತಿರಬೇಕು"

ಮೊದಲನೇ ವಾಚನ: 1 ಯೊವಾನ್ನ 5:14-21


ದೇವರ ಚಿತ್ತಾನುಸಾರ ಏನನ್ನು ಬೇಡಿಕೊಂಡರೂ ಅವರು ನಮ್ಮ ವಿಜ್ಞಾಪನೆಗೆ  ಕಿವಿಗೊಡುತ್ತಾರೆಂಬ ಭರವಸೆ ನಮಗಿದೆ. ನಾವು ಏನನ್ನು ಬೇಡಿಕೊಂಡರೂ  ನಮ್ಮ ವಿಜ್ಞಾಪನೆಗೆ ದೇವರು ಕಿವಿಗೊಡುತ್ತಾರೆ ಎಂಬುದು ನಮಗೆ ತಿಳಿದಿದ್ದರೆ ನಾವು ಬೇಡಿದುದೆಲ್ಲವೂ ನಮಗೆ ಲಭಿಸಿದಂತೆಯೇ ಎಂಬುದೂ ನಮಗೆ ತಿಳಿದಿದೆ. ಮಾರಕವಲ್ಲದ ಪಾಪವೂಂದನ್ನು ಸಹೋದರನು ಮಾಡುವುದನ್ನು ಯಾರಾದರೂ ಕಂಡರೆ, ಆ ಸಹೋದರನಿಗಾಗಿ ದೇವರಲ್ಲಿ ಬೇಡಿಕೊಳ್ಳಿರಿ. ದೇವರು ಆ ಸಹೊದರನಿಗೆ ಸಜ್ಜೀವವನು ಅನುಗ್ರಹಿಸುವರು. ಮಾರಕವಲ್ಲದ ಪಾಪವನ್ನು ಕುರಿತೇ ಈ ಮಾತನ್ನು ಹೇಳುತ್ತಿದ್ದೇನೆ. ಮಾರಕವಲ್ಲದ ಪಾಪವೂ ಉಂಟು. ಅದರ ವಿಷಯವಾಗಿ ಬೇಡಿಕೊಳ್ಳಬೇಕೆಂದು ನಾನು ಹೇಳುತ್ತಿಲ್ಲ. ಅಕ್ರಮವಾದುದೆಲ್ಲವೂ ಪಾಪವೇ ಆದರೆ ಮಾರಕವಲ್ಲದಂಥ ಪಾಪವೂ ಇದೆ. ನಮಗೆ ತಿಳಿದಿರುವಂತೆ ದೇವರಿಂದ ಜನಿಸಿದವನು ಪಾಪಜೀವಿಯಾಗಿರುವುದಿಲ್ಲ. ಏಕೆಂದರೆ, ದೆವರ ಪುತ್ರನ ರಕ್ಷಣೆ ಅವನಿಗಿದೆ. ಕೇಡಿಗನ ವಶದಲ್ಲಿ ಇದ್ದರು ಸಹ ನಾವು ದೇವರಿಗೆ ಸೇರಿದವರೆಂಬುದು ನಮಗೆ ತಿಳಿದಿದೆ. ದೇವರ ಪುತ್ರ ಆಗಮಿಸಿ, ಸತ್ಯಸ್ವರೂಪರಾದ ದೇವರನ್ನು ನಾವು ತಿಳಿದುಕೊಳ್ಳುವಂತೆ ನಮಗೆ ಅರಿವನ್ನು ನೀಡಿದ್ದಾರೆ. ಇದನ್ನು ನಾವು ಬಲ್ಲೆವು. ದೇವರ ಪುತ್ರರಾದ ಯೇಸುಕ್ರಿಸ್ತರಲ್ಲಿ ನೆಲಸಿರುವ ನಾವು ಸತ್ಯಸ್ವರೂಪಿಯಲ್ಲೇ ನೆಲೆಸಿದ್ದೇವೆ ನಿಜವಾದ ದೇವರೂ ನಿತ್ಯಜೀವವೂ ಇವರೇ. ಪ್ರಿಯ ಮಕ್ಕಳೇ, ಮಿಥ್ಯ ದೇವರುಗಳಿಂದ ನೀವು ದೂರವಿರಿ.

 ಕೀರ್ತನೆ: 149:1-2, 3-4, 5-6, 9

 ಶ್ಲೋಕ: ಪ್ರೀತಿಸುತ್ತಾನೆ ಪ್ರಭು ತನ್ನ ಪ್ರಜೆಯನು

 ಶುಭಸಂದೇಶ: ಯೊವಾನ್ನ 3:22-30

ಯೇಸುಸ್ವಾಮಿ ತಮ್ಮ ಶಿಷ್ಯರೊಡನೆ ಜುದೇಯ ಪ್ರಾಂತ್ಯಕ್ಕೆ ಬಂದು ಅವರೊಡನೆ ಕೆಲವು ಕಾಲ ಅಲ್ಲೇ ಉಳಿದುಕೊಂಡು ದೀಕ್ಷಾಸ್ನಾನ ಮಾಡಿಸ ತೊಡಗಿದರು. ಅತ್ತ ಯೊವಾನ್ನನು ಕೂಡ ಸಾಲಿಮ್ ಎಂಬ ಊರಿಗೆ ಹತ್ತಿರವಾಗಿದ್ದ ಐನೋನ್ ಎಂಬ ಸ್ಥಳದಲ್ಲಿ ನೀರು ಹೆಚ್ಚಾಗಿದ್ದುದರಿಂದ ಸ್ನಾನದೀಕ್ಷೆಯನ್ನು ಪಡೆಯುತ್ತಿದ್ದರು. ಯೊವಾನ್ನನು ಆಗ ಇನ್ನೂ ಬಂಧಿತನಾಗಿರಲಿಲ್ಲ. ಶುದ್ಧಾಚಾರವನ್ನು ಕುರಿತು ಯೊವಾನ್ನನ ಶಿಷ್ಯರಿಗೂ ಯೆಹೂದ್ಯನೊಬ್ಬನಿಗೂ ವಿವಾದ ಎದ್ದಿತು. ಅವರು ಯೊವಾನ್ನನ ಬಳಿಗೆ ಬಂದು, "ಗುರುವೇ, ಜೋರ್ಡಾನಿನ ಆಚೆ ಕಡೆಯಲ್ಲಿ ನಿಮ್ಮೊಡನೆ ಒಬ್ಬನು ಇದ್ದನಲ್ಲವೇ ಆತನನ್ನು ಕುರಿತು ನೀವೇ ಸಾಕ್ಷಿ ಹೇಳಲಿಲ್ಲವೆ? ಈಗ ನೋಡಿ, ಆತನೇ ದೀಕ್ಷಸ್ನಾನ ಮಾಡಿಸುತ್ತಿದ್ದಾನೆ. ಎಲ್ಲರೂ ಆತನ ಬಳಿಗೆ ಹೋಗುತ್ತಿದ್ದಾರೆ," ಎಂದು ದೂರಿತ್ತರು. ಅದಕ್ಕೆ ಯೊವಾನ್ನನು, "ದೇವರು ದಯಪಾಲಿಸದೆ ಹೋದರೆ ಮಾನವನಿಗೇನು ದಕ್ಕದು. "ನಾನು ಲೋಕೋದ್ಧಾರಕನಲ್ಲ; ಆತನ ಮುಂದೂತ ಮಾತ್ರ' ಎಂದು ನಾನು ಹೇಳಿದ್ದಕ್ಕೆ ನೀವೇ ಸಾಕ್ಷಿಗಳಾಗಿದ್ದೀರಿ ಮದುಮಗಳು ಮದುಮಗನಿಗೆ ಸೇರಿದವಳು. ಮದುಮಗನ ಗೆಳೆಯನಾದರೋ ಪಕ್ಕದಲ್ಲಿದ್ದು ಮದುಮಗನ ಕರೆಗೆ ಕಿವಿಗೊಡುತ್ತಾನೆ; ಆತನ ಸ್ವರ ಕೇಳಿ ಹರ್ಷಿಸುತ್ತಾನೆ. ಇಂಥ ಆನಂದದಿಂದ ನಾನೀಗ ಭರಿತನಾಗಿದ್ದೇನೆ. ಆತ ಬೆಳೆಯುತ್ತಿರಬೇಕು, ನಾನು ಅಳಿಯುತ್ತಿರಬೇಕು.

10.01.2020 - "ಖಂಡಿತವಾಗಿಯೂ ನನಗೆ ಮನಸ್ಸಿದೆ; ನಿನಗೆ ಗುಣವಾಗಲಿ,"

ಮೊದಲನೇ ವಾಚನ: 1 ಯೊವಾನ್ನ 5:5-13 

ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿ0ದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ್ತದಿಂದ ಸಾಕ್ಷಿ ಹೊಂದಿದವರು. ಜಲದಿಂದ ಮಾತ್ರವಲ್ಲ, ಜಲ ಮತ್ತು ರಕ್ತದಿಂದ ಸಾಕ್ಷಿ ಹೊಂದಿದವರು. ಇದಕ್ಕೆ ಪವಿತ್ರಾತ್ಮ ಸಾಕ್ಷಿ. ಏಕೆಂದರೆ, ಪವಿತ್ರಾತ್ಮ ಸತ್ಯಸ್ವರೂಪಿ. ಹೀಗೆ ಪವಿತ್ರಾತ್ಮ, ಜಲ ಮತ್ತು ರಕ್ತವೆಂಬ ಮೂರು ಸಾಕ್ಷಿಗಳು ಇವೆ. ಈ ಮೂರೂ ಕೊಡುವ ಸಾಕ್ಷ್ಯ ಒಂದೇ. ಮನುಷ್ಯರು ಕೊಡುವ ಸಾಕ್ಷ್ಯವನ್ನು ನಾವು ಅಂಗೀಕರಿಸುತ್ತೇವೆ. ದೇವರು ನೀಡುವ ಸಾಕ್ಷ್ಯ ಅವರ ಪುತ್ರನನ್ನು ಕುರಿತದ್ದಾಗಿದೆ. ದೇವರ ಪುತ್ರನಲ್ಲಿ ವಿಶ್ವಾಸವಿಡುವವನು ಈ ಸಾಕ್ಷ್ಯವನ್ನು ತನ್ನ ಅಂತರಂಗದಲ್ಲೇ ಹೊಂದಿರುತ್ತಾನೆ. ದೇವರಲ್ಲಿ ವಿಶ್ವಾಸವಿಡದವನಾದರೋ ಅವರನ್ನು ಸುಳ್ಳುಗಾರರನ್ನಾಗಿಸುತ್ತಾನೆ. ಹೇಗೆಂದರೆ, ದೇವರು ತಮ್ಮ ಪುತ್ರನ ಪರವಾಗಿ ಕೊಟ್ಟ ಸಾಕ್ಷ್ಯದಲ್ಲಿ ಅವನಿಗೆ ನಂಬಿಕೆಯಿಲ್ಲ. ದೇವರು ನಮಗೆ ನಿತ್ಯ ಜೀವವನ್ನು ಅನುಗ್ರಹಿಸಿದ್ದಾರೆ. ಆ ಜೀವ ಅವರ ಪುತ್ರನಲ್ಲಿದೆ ಎಂಬುದೇ ಈ ಸಾಕ್ಷ್ಯ. ಯಾರಲ್ಲಿ ದೇವರ ಪುತ್ರ ಇದ್ದಾನೋ ಅವನಲ್ಲಿ  ಆ ಜೀವವಿರುತ್ತದೆ. ಯಾರಲ್ಲಿ ದೇವರ ಪುತ್ರನಿಲ್ಲವೋ ಅವನಲ್ಲಿ ಆ ಜೀವ ಇರುವುದಿಲ್ಲ.ದೇವರ ಪುತ್ರನ ನಾಮದಲ್ಲಿ ವಿಶ್ವಾಸ ಇಟ್ಟಿರುವ ನೀವು ನಿತ್ಯಜೀವವನ್ನು ಪಡೆದವರು. ಎಂಬುದನ್ನು ತಿಳಿಸಲೆಂದೇ ನಾನು ನಿಮಗೆ ಇದನ್ನೆಲ್ಲಾ ಬರೆದಿದ್ದೇನೆ. 

ಕೀರ್ತನೆ: 147: 12-13, 14-15, 19-20 

ಶ್ಲೋಕ :  ಜೆರುಸಲೇಮೇ, ಕೀರ್ತಿಸು ಪ್ರಭುವನ್ನು. 

ಶುಭಸಂದೇಶ: ಲೂಕ 5:12-16 

ಯೇಸುಸ್ವಾಮಿ ಒಂದು ಪಟ್ಟಣದಲ್ಲಿ ಇದ್ದಾಗ, ಮೈಯೆಲ್ಲಾ ಕುಷ್ಟ ಹಿಡಿದಿದ್ದ ರೋಗಿ ಒಬ್ಬನು ಅಲ್ಲಿಗೆ ಬಂದು ಅವರಿಗೆ ಅಡ್ಡಬಿದ್ದು, "ಸ್ವಾಮೀ, ತಾವು ಮನಸ್ಸು ಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ," ಎಂದು ಬೇಡಿಕೊಂಡನು. ಯೇಸು  ಕೈಚಾಚಿ ಅವನನ್ನು ಮುಟ್ಟಿ, "ಖಂಡಿತವಾಗಿಯೂ ನನಗೆ ಮನಸ್ಸಿದೆ; ನಿನಗೆ ಗುಣವಾಗಲಿ," ಎಂದರು. ತಕ್ಷಣವೇ ಕುಷ್ಠವು ಮಾಯವಾಗಿ ಅವನು ಗುಣ ಹೊಂದಿದನು. ಇದನ್ನು ಯಾರಿಗೂ ಹೇಳಕೂಡದು ಎಂದು ಯೇಸು ಅವನನ್ನು ಎಚ್ಚರಿಸಿ, "ನೀನು ನೆಟ್ಟಗೆ ಯಾಜಕನ ಬಳಿಗೆ ಹೊಗು; ಅವನು ನಿನ್ನನ್ನು ಪರಿಕ್ಷಿಸಿ ನೋಡಲಿ; ನಂತರ ಮೋಶೆ ನಿಯಮಿಸಿರುವ ಪ್ರಕಾರ ನೀನು ಗುಣಹೊಂದಿದ್ದಕ್ಕಾಗಿ ಶುದ್ಧೀಕರಣ ವಿದಿಯನ್ನು ಅನುಸರಿಸು; ಇದು ಜನರಿಗೆ ಸಾಕ್ಷಿಯಾಗಿರಲಿ," ಎಂದರು. ಯೇಸು ಎಷ್ಟು ಎಚ್ಚರಿಸಿದರೋ ಅಷ್ಟೂ ಅಧಿಕವಾಗಿ ಅವರ ಸುದ್ಧಿ ಹರಡಿತು. ಅವರ ಉಪದೇಶವನ್ನು  ಕೇಳುವುದಕ್ಕೂ ತಮ್ಮ ತಮ್ಮ ರೋಗರುಜಿನಗಳಿಂದ ವಿಮುಕ್ತರಾಗುವುದಕ್ಕೂ  ಜನರು ತಂಡೋಪತಂಡವಾಗಿ ಬರುತ್ತಿದ್ದರು. ಯೇಸುವಾದರೋ ನಿರ್ಜನ ಪ್ರದೇಶಕ್ಕೆ ಹೋಗಿ ಎಂದಿನಂತೆ ಪ್ರಾರ್ಥನೆಯಲ್ಲಿ ಮಗ್ನರಾಗುತ್ತಿದ್ದರು.

09.01.2020 - "ನೀವು ಈ ಪವಿತ್ರ ವಾಕ್ಯವನ್ನು ಕೇಳುತ್ತಿದ್ದ ಹಾಗೆಯೇ ಅದು ಇಂದು ನೆರವೇರಿತು"

ಮೊದಲನೇ ವಾಚನ: 1 ಯೊವಾನ್ನ  4:19-5:4 

ದೇವರು ನಮ್ಮನ್ನು ಮೊದಲು ಪ್ರೀತಿಸಿದ್ದರಿಂದಲೇ ನಾವು ಪ್ರೀತಿಸುತ್ತೇವೆ. ತಾನು ದೇವರನ್ನು ಪ್ರೀತಿಸುತ್ತೇನೆಂದು ಒಬ್ಬನು ಹೇಳುತ್ತಾ ತನ್ನ ಸಹೋದರನನ್ನು ದ್ವೇಷಿಸಿದರೆ, ಅವನು ಸುಳ್ಳುಗಾರನಾಗುತ್ತಾನೆ. ತಾನು ಕಂಡಿರುವ ತನ್ನ ಸಹೋದರನನ್ನು ಪ್ರೀತಿಸದವನು ತಾನು ಕಾಣದಿರುವ ದೇವರನ್ನು ಹೇಗೆ  ಪ್ರೀತಿಸಿಯಾನು? ದೇವರನ್ನು ಪ್ರೀತಿಸುವವನು ತನ್ನ ಸಹೋದರನನ್ನೂ ಪ್ರೀತಿಸಬೇಕೆಂಬುದು ಕ್ರಿಸ್ತಯೇಸು ನಮಗೆ ಮಾಡಿರುವ ಆಜ್ಞೆ, ಯೇಸುವೇ 'ಕ್ರಿಸ್ತ' ಎಂದು ವಿಶ್ವಾಸಿಸುವ ಪ್ರತಿಯೊಬ್ಬನೂ ದೇವರ ಮಗು. ತಂದೆಯನ್ನು ಪ್ರೀತಿಸುವವನು ಆತನ ಮಗುವನ್ನೂ ಪ್ರೀತಿಸುತ್ತಾನೆ. ದೇವರನ್ನು ಪ್ರೀತಿಸಿ,  ಅವರ ಆಜ್ಞೆಗಳನ್ನು ಪಾಲಿಸುವುದರಿಂದ ನಾವು ದೇವರ ಮಕ್ಕಳನ್ನು  ಪ್ರೀತಿಸುತ್ತೇವೆಂಬುದು ನಿಶ್ಚಯ ಆಗುತ್ತದೆ. ದೇವರನ್ನು ಪ್ರೀತಿಸುವುದು ಎಂದರೆ ಅವರು ಕೊಟ್ಟ ಆಜ್ಞೆಗಳನ್ನು ಅನುಸರಿಸಿ ನಡೆಯುವುದೇ. ಅವರ ಆಜ್ಞೆಗಳು ನಮಗೆ ಹೊರೆಯೇನೂ ಅಲ್ಲ. ದೇವರಿಂದ ಜನಿಸಿದ ಪ್ರತಿಯೊಬ್ಬನೂ ಲೋಕವನ್ನು ಜಯಿಸುತ್ತಾನೆ. ಲೋಕವನ್ನು ಜಯಿಸುವಂಥದು ನಮ್ಮ ವಿಶ್ವಾಸವೇ. 

ಕೀರ್ತನೆ:  72:1-2, 14, 15, 17 
ಶ್ಲೋಕ: ಎಲ್ಲಾ ರಾಷ್ಟ್ರಗಳು ಸಾಷ್ಟಾಂಗವೆರಗಲಿ ಸರ್ವೇಶ್ವರಸ್ವಾಮಿಗೆ. 

ಶುಭಸಂದೇಶ:  ಲೂಕ  4:14-22 


ಯೇಸುಸ್ವಾಮಿ ಪವಿತ್ರಾತ್ಮ ಶಕ್ತಿಯಿಂದ ಕೂಡಿ ಗಲಿಲೇಯಕ್ಕೆ ಮರಳಿಬಂದರು. ಅವರ ವಿಷಯ ಸುತ್ತಮುತ್ತೆಲ್ಲಾ ಹರಡಿತು. ಅಲ್ಲಿನ ಪ್ರಾರ್ಥನಾ ಮಂದಿರಗಳಲ್ಲಿ ಅವರು ಭೋಧಿಸುತ್ತಾ ಬಂದರು. ಎಲ್ಲರೂ ಅವರನ್ನು ಹೊಗಳುವವರೇ! ಯೇಸುಸ್ವಾಮಿ ತಾವು ಬೆಳೆದ ಊರಾದ ನಜರೇತಿಗೆ ಬಂದರು. ವಾಡಿಕೆಯ ಪ್ರಕಾರ ಸಬ್ಬತ್ ದಿನ ಪ್ರಾರ್ಥನಾಮಂದಿರಕ್ಕೆ ಹೋದರು. ಅಲ್ಲಿ ಪವಿತ್ರ ಗ್ರಂಥವನ್ನು ಓದುವುದಕ್ಕೆ ಅವರು ಎದ್ದು ನಿಂತಾಗ, ಪ್ರವಾದಿ ಯೆಶಾಯನ ಗ್ರಂಥದ ಸುರುಳಿಯನ್ನು ಅವರ ಕೈಗೆ ಕೊಟ್ಟರು. ಅದನ್ನು ಬಿಚ್ಚಿದಾಗ ಈ ಕೆಳಗಿನ ವಚನಗಳು ಯೇಸುವಿನ ಕಣ್ಣಿಗೆ ಬಿದ್ದವು: "ದೇವರಾತ್ಮ ನನ್ನ ಮೇಲಿದೆ, ದೀನದಲಿತರಿಗೆ  ಶುಭಸಂದೇಶವನ್ನು ಭೋಧಿಸಲೆಂದು ಅವರೆನ್ನನು ಅಭಿಷೇಕಿಸಿದ್ದಾರೆ; ಬಂಧಿತರಿಗೆ ಬಿಡುಗಡೆಯನ್ನು, ಅಂಧರಿಗೆ ದೃಷ್ಟಿದಾನವನ್ನು ಪ್ರಕಟಿಸಲೂ, ಶೋಷಿತರಿಗೆ ಸ್ವಾತಂತ್ರ್ಯ ನೀಡಲೂ ದೇವರು ತಮ್ಮ ಜನತೆಯನ್ನು ಉದ್ಧರಿಸುವ ಕಾಲ ಬಂತೆಂದು ಸಾರಲೂ ಅವರು ನನ್ನನ್ನು ಕಳುಹಿಸಿದ್ದಾರೆ."  ಈ ವಾಕ್ಯವನ್ನು ಓದಿ, ಸುರುಳಿಯನ್ನು ಸುತ್ತಿ, ಪ್ರಾರ್ಥನಾಮಂದಿರದ ಸೇವಕನ ಕೈಗಿತ್ತು, ಯೇಸು ಕುಳಿತುಕೊಂಡರು. ಅಲ್ಲಿದ್ದ ಎಲ್ಲರ ಕಣ್ಣುಗಳು ಅವರ ಮೇಲೆಯೇ ನಾಟಿದ್ದವು. ಆಗ ಯೇಸು, "ನೀವು ಈ ಪವಿತ್ರ ವಾಕ್ಯವನ್ನು ಕೇಳುತ್ತಿದ್ದ ಹಾಗೆಯೇ ಅದು ಇಂದು ನೆರವೇರಿತು," ಎಂದು ವಿವರಿಸಲಾರಂಭಿಸಿದರು. ಎಲ್ಲರೂ ಅವರನ್ನು ಬಹುವಾಗಿ ಮೆಚ್ಚಿಕೊಂಡರು. ಅವರ ಬಾಯಿಂದ ಬಂದ ಮಧುರ ಮಾತುಗಳನ್ನು ಕೇಳಿ ಅಚ್ಚರಿಗೊಂಡರು. "ಇವನು ಜೋಸೆಫನ ಮಗನಲ್ಲವೇ" ಎಂದು ಮಾತನಾಡಿಕೊಂಡರು.

08.01.2020 - ಪ್ರೀತಿಯಲ್ಲಿ ನೆಲೆಸಿರುವವನು ದೇವರಲ್ಲಿ ನೆಲೆಸಿದ್ದಾನೆ

ಮೊದಲನೇ ವಾಚನ:  1 ಯೊವಾನ್ನ 4:11-18 

ಪ್ರಿಯರೇ, ದೇವರೇ ನಮ್ಮನ್ನು ಇಷ್ಟಾಗಿ ಪ್ರೀತಿಸಿರುವಲ್ಲಿ ನಾವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು. ದೇವರನ್ನು ಯಾರೂ ಎಂದೂ ನೋಡಿಲ್ಲ. ಆದರೂ ನಾವು ಒಬ್ಬರನ್ನೊಬ್ಬರು ಪ್ರೀತಿಸಿದರೆ ದೇವರು ನಮ್ಮಲ್ಲಿ ನೆಲಸಿರುತ್ತಾರೆ. ಅವರ ಪ್ರೀತಿ ನಮ್ಮಲ್ಲಿ ಸಿದ್ಧಿಗೆ ಬರುತ್ತದೆ. ದೇವರು ನಮಗೆ ತಮ್ಮ ಆತ್ಮವನ್ನು ನೀಡಿರುವುದರಿಂದಲೇ ನಾವು ಅವರಲ್ಲಿಯೂ ಅವರು ನಮ್ಮಲ್ಲಿಯೂ ನೆಲಸಿರುವುದನ್ನು ತಿಳಿದುಕೊಳ್ಳುತ್ತೇವೆ.  ಪಿತನು ತಮ್ಮ ಪುತ್ರನನ್ನು ಲೋಕೋದ್ಧಾರಕನನ್ನಾಗಿ ಕಳುಹಿಸಿಕೊಟ್ಟಿದ್ದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಇದರ ವಿಷಯವಾಗಿ ಸಾಕ್ಷಿ ಹೇಳುತ್ತೇವೆ. ಯೇಸುವೇ ದೇವರ ಪುತ್ರನೆಂದು ಯಾವನು ಒಪ್ಪಿಕೊಳ್ಳುತ್ತಾನೋ ಅವನಲ್ಲಿ ದೇವರು ನೆಲಸಿದ್ದಾರೆ.  ಅವನೂ ದೇವರಲ್ಲಿ ನೆಲಸಿದ್ದಾನೆ. ಹೀಗೆ ದೇವರು ನಮ್ಮಲ್ಲಿಟ್ಟಿರುವ ಪ್ರೀತಿ ನಮಗೆ ಗೊತ್ತಿದೆ. ಅದರಲ್ಲಿ ನಮಗೆ ವಿಶ್ವಾಸವಿದೆ. ದೇವರು ಪ್ರೀತಿಸ್ವರೂಪಿ. ಪ್ರೀತಿಯಲ್ಲಿ ನೆಲೆಸಿರುವವನು ದೇವರಲ್ಲಿ ನೆಲೆಸಿದ್ದಾನೆ. ದೇವರೂ ಅವನಲ್ಲಿ ನೆಲೆಸಿರುತ್ತಾರೆ. ಇದರಿಂದಾಗಿ, ಪ್ರೀತಿ ನಮ್ಮಲ್ಲಿ ಸಿದ್ಧಿಗೆ ಬಂದಿರುತ್ತದೆ. ನ್ಯಾಯತೀರ್ಪಿನ ದಿನದಂದು ನಾವು ಭರವಸೆಯಿಂದಿರುತ್ತೇವೆ. ಈ ಲೋಕದಲ್ಲಿ ನಮ್ಮ ಬಾಳು ಕ್ರಿಸ್ತಯೇಸುವಿನ ಬಾಳಿನಂತೆ ಇರುವುದರಿಂದಲೇ ಆ ಭರವಸೆ ನಮಗೆ ಇರುತ್ತದೆ. ಪ್ರೀತಿ ಇರುವಲ್ಲಿ ಭೀತಿ ಇರುವುದಿಲ್ಲ. ಪೂರ್ಣ ಪ್ರೀತಿ ಭೀತಿಯನ್ನು ಹೊರದೂಡುತ್ತದೆ. ಭೀತಿ ಇರುವಲ್ಲಿ ಯಾತನೆ ಇರುತ್ತದೆ. ಭೀತಿಯಿಂದಿರುವವನು ಪ್ರೀತಿಯಲ್ಲಿ ಸಿದ್ದಿಗೆ ಬಂದವನಲ್ಲ. 

ಕೀರ್ತನೆ: 72:1-2, 10, 12-13 
ಶ್ಲೋಕ: ರಾಷ್ಟ್ರಗಳು ಸಾಷ್ಟಾಂಗವೆರಗಲಿ ಸರ್ವೇಶ್ವರಸ್ವಾಮಿಗೆ .

ಶುಭಸಂದೇಶ:  ಮಾರ್ಕ  6:45-52 


ಯೇಸುಸ್ವಾಮಿ, ತಾವು ಜನರ ಗುಂಪನ್ನು ಕಳುಹಿಸಿಬಿಡುವಷ್ಟರಲ್ಲಿ ಶಿಷ್ಯರು ದೋಣಿ ಹತ್ತಿ ತಮಗಿಂತ ಮುಂದಾಗಿ ಸರೋವರದ ಆ ಕಡೆಗಿದ್ದ ಬೆತ್ಸಾಯಿದಕ್ಕೆ ಹೋಗುವಂತೆ ಆಜ್ಞಾಪಿಸಿದರು. ಜನರನ್ನು ಬೀಳ್ಕೊಟ್ಟ ಬಳಿಕ ಯೇಸು ಪ್ರಾರ್ಥನೆ ಮಾಡಲು ಬೆಟ್ಟಕ್ಕೆ ಹೋದರು. ಕತ್ತಲೆ ಕವಿದಾಗ ದೋಣಿಯು ಸರೋವರದ ಮಧ್ಯೆ ಸಾಗಿತು. ಇತ್ತ ಯೇಸು ಒಬ್ಬರೇ ದಡದಲ್ಲಿದ್ದರು. ಎದುರುಗಾಳಿ ಬೀಸುತ್ತಿದ್ದದರಿಂದ ಶಿಷ್ಯರು ಹುಟ್ಟುಹಾಕಿ ದಣಿದು ಹೋಗಿದ್ದರು. ಇದನ್ನು ಕಂಡ ಯೇಸು ಸರೋವರದ ನೀರಿನ ಮೇಲೆ ನಡೆದುಕೊಂಡು ಅವರ ಕಡೆಗೆ ಬಂದು, ಅವರನ್ನು ದಾಟಿ ಮುಂದೆ ಹೋಗುವುದರಲ್ಲಿದ್ದರು. ಆಗ ಸುಮಾರು ರಾತ್ರಿ ಕಡೇ ಜಾವದ ಸಮಯ.  ಸರೋವರದ ಮೇಲೆ ನಡೆದು ಬರುತ್ತಿದ್ದ ಯೇಸುವನ್ನು ಶಿಷ್ಯರು ನೋಡಿದರು; ಭೂತವೆಂದು ಭಾವಿಸಿ ಭಯದಿಂದ ಚೀರಿದರು. ಅವರೆಲ್ಲರೂ ಯೇಸುವನ್ನು ನೋಡಿ ದಿಗಿಲುಗೊಂಡಿದ್ದರು. ತಕ್ಷಣವೇ ಯೇಸು ಅವರೊಡನೆ ಮಾತನಾಡುತ್ತಾ, "ಭಯಪಡಬೇಡಿ, ಬೇರೆ ಯಾರೂ ಅಲ್ಲ, ನಾನೇ; ಧ್ಯರ್ಯದಿಂದಿರಿ," ಎಂದು ಅವರೊಡನೆ ಮಾತನಾಡಿ ದೋಣಿಯನ್ನು ಹತ್ತಿದರು. ಆಗ ಎದುರುಗಾಳಿ ನಿಂತು ಹೋಯಿತು. ಶಿಷ್ಯರು ಬೆಕ್ಕಸಬೆರಗಾದರು. ಅವರ ಬುದ್ಧಿ ಮಂದವಾಗಿತ್ತು. ರೊಟ್ಟಿಗಳ ಅದ್ಬುತವನ್ನು ಅವರು ಇನ್ನೂ  ಗ್ರಹಿಸಿಕೊಂಡಿರಲಿಲ್ಲ.

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...