15.05.2019 - "ಪಿತನು ಹೇಳಿದಂತೆಯೇ ನಾನು ಮಾತನಾಡುತ್ತೇನೆ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 12:24-13:5

ದೇವರ ಶುಭಸಂದೇಶವಾದರೋ ಹಬ್ಬಿ ಹರಡತೊಡಗಿತು. ಬಾರ್ನಬ ಮತ್ತು ಸೌಲನು ತಮ್ಮ ಧರ್ಮಕಾರ್ಯವನ್ನು ಮುಗಿಸಿಕೊಂಡು ಮಾರ್ಕ ಎಂದು ಹೆಸರುಗೊಂಡ ಯೊವಾನ್ನನೊಂದಿಗೆ ಜೆರುಸಲೇಮಿನಿಂದ ಹಿಂದಿರುಗಿದರು. ಅಂತಿಯೋಕ್ಯದ ಧರ್ಮಸಭೆಯಲ್ಲಿ ಕೆಲವು ಪ್ರವಾದಿಗಳೂ ಬೋಧಕರೂ ಇದ್ದರು. ಅವರಾರೆಂದರೆ: ಬಾರ್ನಬ, ಕಾಳನೆಂಬ ಕರೆಯಲಾದ ಸಿಮೆಯೋನ್, ಸಿರೇನಿನ  ಲೂಸಿಯಸ್, ಸಾಮಂತ ಹೆರೋದನ ಬಾಲ್ಯಸ್ನೆಹಿತ ಮೆನಹೇಲ ಮತ್ತು ಸೌಲ. ಒಂದು ದಿನ ಅವರು ದೇವಾರಾಧನೆಯಲ್ಲೂ ಉಪವಾಸ ವೃತದಲ್ಲೂ ನಿರತರಾಗಿದ್ದಾಗ ಪವಿತ್ರಾತ್ಮ, "ಬಾರ್ನಬ ಮತ್ತು ಸೌಲರನ್ನು ನಾನು ಯಾವ ಕಾರ್ಯಕ್ಕಾಗಿ ಕರೆದಿದ್ದೇನೋ ಆ ಕಾರ್ಯಕ್ಕಾಗಿ ಮೀಸಲಾಗಿಡಿ," ಎಂದರು. ಅಂತೆಯೇ ಅವರು ಉಪವಾಸವಿದ್ದು, ಪ್ರಾರ್ಥನೆ ಮಾಡಿ, ಇವರಿಬ್ಬರ ಮೇಲೆ ಹಸ್ತನಿಕ್ಷೇಪಮಾಡಿ  ಕಳುಹಿಸಿಕೊಟ್ಟರು. ಹೀಗೆ ಪವಿತ್ರಾತ್ಮ ಅವರೇ ಕಳುಹಿಸಿದ ಬಾರ್ನಬ ಮತ್ತು ಸೌಲ ಸೆಲೂಸಿಯಾಕ್ಕೆ ಹೋದರು. ಅಲ್ಲಿಂದ ಸೈಪ್ರಸ್ ದ್ವೀಪಕ್ಕೆ ನೌಕಯಾನ ಮಾಡಿದರು. ಅವರು ಸಲಮೀಸ್ ಎಂಬ ಸ್ಥಳಕ್ಕೆ ಬಂದಾಗ ಯೆಹೂದ್ಯರ ಪ್ರಾರ್ಥನಾ ಮಂದಿರಗಳಿಗೆ ಹೋಗಿ ಶುಭಸಂದೇಶವನ್ನು ಸಾರಿದರು. ಮಾರ್ಕನೆನಿಸಿಕೊಂಡ ಯೊವಾನ್ನ ಅವರ ಸಂಗಡವಿದ್ದು ಅವರಿಗೆ ನೆರವಾಗುತ್ತಿದ್ದನು.

ಕೀರ್ತನೆ: 67:2--3, 5, 6, 8
ಶ್ಲೋಕ: ನಿನ್ನ ಕೀರ್ತಿಸಲಿ ದೇವಾ, ಜನರು ಸಂಕೀರ್ತಿಸಲಿ ಅವರೆಲ್ಲರೂ

ಶುಭಸಂದೇಶ: ಯೊವಾನ್ನ 12:44-50

ಯೇಸುಸ್ವಾಮಿ ಗಟ್ಟಿಯಾಗಿ ಕೂಗಿ ಇಂತೆಂದರು: "ನನ್ನಲ್ಲಿ ವಿಶ್ವಾಸವಿಡುವವನು ನನ್ನಲ್ಲಿ ಅಲ್ಲ, ನನ್ನನ್ನು ಕಳುಹಿಸಿದಾತನಲ್ಲೇ ವಿಶ್ವಾಸವಿಡುತ್ತಾನೆ. ನನ್ನನ್ನು ಕಾಣುವವನು ನನ್ನನ್ನು ಕಳುಹಿಸಿದಾತನನ್ನೇ ಕಾಣುತ್ತಾನೆ. ನನ್ನಲ್ಲಿ ವಿಶ್ವಾಸವಿಡುವವನು ಅಂಧಕಾರದಲ್ಲಿ ಉಳಿಯಬಾರದೆಂದು ನಾನೇ ಜಗಜ್ಯೋತಿಯಾಗಿ ಬಂದಿದ್ದೇನೆ. ಯಾವನಾದರೂ ನನ್ನ ಮಾತನ್ನು ಕೇಳಿಯೂ ಅದರಂತೆ ನಡೆಯದೆ ಹೋದರೆ ಅಂಥವನಿಗೆ ತೀರ್ಪುಕೊಡುವವನು ನಾನಲ್ಲ. ನಾನು ಬಂದುದು ಲೋಕದ ಉದ್ಧಾರಕ್ಕಾಗಿ, ತೀರ್ಪು ಕೊಡುವುದಕ್ಕಾಗಿ ಅಲ್ಲ ನನ್ನನ್ನು ನಿರಾಕರಿಸಿ ನನ್ನ  ಮಾತುಗಳನ್ನು ಅಂಗೀಕರಿಸದೆ ಹೋದವನಿಗೆ ತೀರ್ಪುಕೊಡುವಂಥದ್ದು ಒಂದು ಇದೆ. ಅದು ಯಾವುದೆಂದರೆ ನಾನು ಆಡಿದ ಮಾತೇ. ಅಂತಿಮ ದಿನದಂದು ಅದೇ ಅವನಿಗೆ ತೀರ್ಪುಕೊಡುವುದು. ಏಕೆಂದರೆ, ನನ್ನಷ್ಟಕ್ಕೆ ನಾನೇ ಇದನ್ನೆಲ್ಲಾ ಮಾತನಾಡುತ್ತಿಲ್ಲ. ನನ್ನನ್ನು ಕಳುಹಿಸಿದ ಪಿತನೇ. ನಾನು ಏನು ಹೇಳಬೇಕು, ಯಾವ ಮಾತನ್ನು ಆಡಬೇಕು ಎಂದು ನನಗೆ ಆಜ್ಞೆ ಮಾಡಿದ್ದಾರೆ ಅವರ ಆಜ್ಞೆಯೇ ನಿತ್ಯಜೀವದಾಯಕ ಎಂದು ನಾನು ಬಲ್ಲೆ. ಆದ್ದರಿಂದಲೇ ಪಿತನು ಹೇಳಿದಂತೆಯೇ ನಾನು ಮಾತನಾಡುತ್ತೇನೆ.

14.05.2019 - "ನೀವು ಒಬ್ಬರನೊಬ್ಬರು ಪ್ರೀತಿಸಬೇಕೆಂಬುದೇ ನಾನು ನಿಮಗೆ ಕೊಡುವ ಆಜ್ಞೆ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 1:15-17, 20-26


ಸ್ವಲ್ಪ ದಿನಗಳ ನಂತರ ಸುಮಾರು ನೂರಿಪ್ಪತ್ತು ಮಂದಿ ಭಕ್ತವಿಶ್ವಾಸಿಗಳು ಸಭೆಸೇರಿದ್ದರು. ಆಗ ಪೇತ್ರನು ಎದ್ದು ನಿಂತು ಹೀಗೆಂದನು: "ಪ್ರಿಯ ಸಹೋದರರೇ, ಯೇಸುವನ್ನು ಬಂಧಿಸಿದವರಿಗೆ ಮುಂದಾಳಾಗಿದ್ದವನು ಯೂದನು. ಅವನ ವಿಷಯವಾಗಿ ಪವಿತ್ರಾತ್ಮ ಅವರು ದಾವೀದನ ಮುಖಾಂತರ ಮುಂತಿಳಿಸಿದ ವಾಕ್ಯ ನೆರವೇರಲೇಬೇಕಾಗಿತ್ತು. ಈ ಯೂದನು ನಮ್ಮಲ್ಲಿ ಒಬ್ಬನಾಗಿದ್ದವನು, ನಾವು ಕೈಗೊಂಡಿರುವ ಸೇವೆಯಲ್ಲಿ ಭಾಗಿಯಾಗಲು ಆಯ್ಕೆಯಾಗಿದ್ದನು. 'ಅವನ ಮನೆ ಹಾಳಾಗಲಿ, ಅದು ಪಾಳು ಬೀಳಲಿ," ಎಂದೂ, 'ಅವನ ಸ್ಥಾನ ಇನ್ನೊಬ್ಬನದಾಗಲಿ,' ಎಂದೂ ಕೀರ್ತನಾಗ್ರಂಥದಲ್ಲಿ ಬರೆಯಲಾಗಿದೆ. ಆದುದರಿಂದ ಪ್ರಭು ಯೇಸುವಿನ ಪುನರುತ್ದಾನಕ್ಕೆ ನಮ್ಮೊಡನೆ ಸಾಕ್ಷಿಯಾಗಿರಲು ಒಬ್ಬನನ್ನು ನಾವು ಆರಿಸಬೇಕಾಗಿದೆ. ಅಂಥವನು ಯೇಸುವಿನ ಸೇವಾಸಂಚಾರದಲ್ಲೆಲ್ಲಾ ನಮ್ಮೊಡನೆ ಇದ್ದವನಾಗಿರಬೇಕು. ಅಂದರೆ, ಸ್ನಾನಿಕ ಯೊವಾನ್ನನು ಸ್ನಾನದೀಕ್ಷೆಯನ್ನು ಕುರಿತು ಬೋಧಿಸಿದ ದಿನದಿಂದ ಯೇಸುವಿನ ಸ್ವರ್ಗಾರೋಹಣದ ದಿನದವರೆಗೂ ನಮ್ಮ ಸಂಗಡ ಇದ್ದವನಾಗಿರಬೇಕು. ಆಗ ಬಾರ್ನಬ ಎಂದು ಹೆಸರಿಡಲಾದ ಜೋಸೆಫ್ (ಇವನನ್ನು ಯುಸ್ತ ಎಂದು ಕರೆಯುತ್ತಿದ್ದರು)  ಮತ್ತು ಮತ್ತೀಯ ಎಂಬ ಇಬ್ಬರ ಹೆಸರನ್ನು ಸೂಚಿಸಲಾಯಿತು. ಅನಂತರ ಎಲ್ಲರೂ ಪ್ರಾರ್ಥನೆ ಮಾಡುತ್ತಾ, "ಸರ್ವೇಶ್ವರಾ, ನೀವು ಸರ್ವರ ಅಂತರಂಗಗಳನ್ನು ಅರಿತಿರುವಿರಿ. ಯೂದನು ತನ್ನ ಪ್ರೇಷಿತ ಸ್ಥಾನದಿಂದ ಭ್ರಷ್ಟನಾದ, ತನಗೆ ತಕ್ಕುದಾದ ಸ್ಥಳಕ್ಕೆ ತೆರಳಿದ. ಈ ಸೇವಾಸ್ಥಾನಕ್ಕೆ ಇವರಿಬ್ಬರಲ್ಲಿ ನೀವು ಆರಿಸಿದವನು ಯಾರೆಂದು ನಮಗೆ ತೋರಿಸಿರಿ," ಎಂದರು. ಆನಂತರ ಚೀಟುಹಾಕಿದರು. ಅದು ಮತ್ತೀಯನ ಪರವಾಗಿತ್ತು. ಅವನನ್ನು ಹನ್ನೊಂದು ಮಂದಿಯೊಡನೆ ಪ್ರೇಷಿತಸ್ಥಾನಕ್ಕೆ ಸೇರಿಸಿಕೊಳ್ಳಲಾಯಿತು.

ಕೀರ್ತನೆ: 113:1-2, 3-4, 5-6, 7-8
ಶ್ಲೋಕ: ಕೂರಿಸುವಾತ ಅವರನು ಅಧಿಪತಿಗಳ ನಡುವೆ, ತನ್ನ ಪ್ರಜೆಯನಾಳುವ ಅಧಿಪತಿಗಳ ನಡುವೆ

ಶುಭಸಂದೇಶ: ಯೊವಾನ್ನ 15:9-17

ಯೇಸು ತಮ್ಮ ಶಿಷ್ಯರಿಗೆ ಹೇಳಿದ್ದೇನೆಂದರೆ: "ಪಿತನು ನನ್ನನ್ನು ಪ್ರೀತಿಸಿದಂತೆಯೇ ನಾನು ನಿಮ್ಮನ್ನು ಪ್ರೀತಿಸಿದ್ದೇನೆ. ನನ್ನ ಪ್ರೀತಿಯಲ್ಲಿ ನೆಲೆಗೊಂಡು ನಿಲ್ಲಿರಿ. ನನ್ನ ಪಿತನು ಕೊಟ್ಟ ಆಜ್ಞೆಗಳನ್ನು ಪಾಲಿಸಿ ಅವರ ಪ್ರೀತಿಯಲ್ಲಿ ನಾನು ನೆಲೆಗೊಂಡಿರುವ ಹಾಗೆ ನೀವು ಕೂಡ ನಾನು ಕೊಟ್ಟ ಆಜ್ಞೆಗಳನ್ನು ಪಾಲಿಸಿದರೆ ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ. ನನ್ನಲ್ಲಿರುವ ಆನಂದವು ನಿಮ್ಮಲ್ಲಿ ಇರಬೇಕೆಂತಲೂ ನಿಮ್ಮ ಆನಂದವು ತುಂಬಿ ತುಳುಕಬೇಕೆಂತಲೂ ಇದನ್ನೆಲ್ಲಾ ನಿಮಗೆ ಹೇಳುತ್ತಿದ್ದೇನೆ. ನಾನು ಕೊಡುವ ಆಜ್ಞೆ ಏನೆಂದರೆ: ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಸಹ ಒಬ್ಬರನೊಬ್ಬರು ಪ್ರೀತಿಸಬೇಕು. ಗೆಳೆಯರಿಗಾಗಿ ತನ್ನ ಪ್ರಾಣವನ್ನೇ ಧಾರೆಯೆರೆಯುವ ಪ್ರೀತಿಗಿಂತ ಮಿಗಿಲಾದ ಪ್ರೀತಿ ಯಾರಲ್ಲೂ ಇಲ್ಲ. ನಾನು ಆಜ್ಞಾಪಿಸಿದಂತೆ ನಡೆದರೆ ನೀವು ನನ್ನ ಗೆಳೆಯರು. ನಾನಿನ್ನು ನಿಮ್ಮನ್ನು ದಾಸರೆಂದು ಕರೆಯುವುದಿಲ್ಲ. ಧಣಿಯ ಕೆಲಸಕಾರ್ಯಗಳು ದಾಸನಿಗೆ ತಿಳಿಯವು, ನಾನಾದರೋ ಪಿತನಿಂದ ಕೇಳಿಸಿಕೊಂಡದ್ದನ್ನೆಲ್ಲಾ ನಿಮಗೆ ತಿಳಿಸಿದ್ದೇನೆ. ಈ ಕಾರಣ ನಿಮ್ಮನ್ನು ಗೆಳೆಯರೆಂದು ಕರೆದಿದ್ದೇನೆ. ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ. ನಾನೇ ನಿಮ್ಮನ್ನು ಆರಿಸಿಕೊಂಡಿದ್ದೇನೆ. ನೀವು ಲೋಕಕ್ಕೆ ಹೋಗಬೇಕು, ಸಫಲರಾಗಬೇಕು; ಆ ಫಲ ಶಾಶ್ವತವಾಗಿರಬೇಕೆಂದೇ ನಿಮ್ಮನ್ನು ನೇಮಿಸಿದ್ದೇನೆ. ಹೀಗಿರಲಾಗಿ ನೀವು ನನ್ನ ಹೆಸರಿನಲ್ಲಿ ಪಿತನಿಂದ ಏನು ಕೇಳಿದರೂ ನಿಮಗೆ ಅದು ಸಿಗುವುದು. ನೀವು ಒಬ್ಬರನೊಬ್ಬರು ಪ್ರೀತಿಸಬೇಕೆಂಬುದೇ ನಾನು ನಿಮಗೆ ಕೊಡುವ ಆಜ್ಞೆ"

13.05.2019 - "ನಾನು ಬಂದದ್ದಾದರೋ ಜೀವನೀಡಲು"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 11:1-18


ಅನ್ಯಧರ್ಮದವರೂ ಸಹ ದೈವವಾಕ್ಯವನ್ನು ಸ್ವೀಕರಿಸಿದರೆಂಬ ಸುದ್ಧಿ ಜುದೇಯದಲ್ಲಿದ್ದ ಪ್ರೇಷಿತರಿಗೂ ವಿಶ್ವಾಸಿಗಳಿಗೂ ಮುಟ್ಟಿತು. ಪೇತ್ರನು ಜೆರುಸಲೇಮಿಗೆ ಹೋದಾಗ ಅನ್ಯಧರ್ಮದವರಿಗೆ ಸುನ್ನತಿಯಾಗಬೇಕು ಎನ್ನುತ್ತಿದ್ದ ಪಂಗಡದವರು ಮುಂದೆ ಬಂದು, "ನೀನು ಸುನ್ನತಿಯಿಲ್ಲದ ಅನ್ಯಧರ್ಮದವರ ಮನೆಗೆ ಭೇಟಿಕೊಟ್ಟು ಅವರೊಡನೆ ಊಟಮಾಡಿದ್ದೇಕೆ?" ಎಂದು ಆಕ್ಷೇಪಿಸಿದರು. ಅದಕ್ಕೆ ಪೇತ್ರನು ನಡೆದ ವೃತ್ತಾಂತವನ್ನು ಅಮೂಲಾಗ್ರವಾಗಿ ಅವರಿಗೆ ವಿವರಿಸಿದನು: "ಜೊಪ್ಪ ಪಟ್ಟಣದಲ್ಲಿ ನಾನು ಧ್ಯಾನಪರವಶನಾಗಿದ್ದಾಗ ದರ್ಶನವೊಂದನ್ನು ಕಂಡೆ. ಸ್ವರ್ಗದಿಂದ ದೊಡ್ಡ ದುಪ್ಪಟಿಯಂಥ ವಸ್ತು ಒಂದು ಕೆಳಕ್ಕೆ ಇಳಿಯಿತು. ಅದರ ನಾಲ್ಕು ಮೂಲೆಗಳನ್ನು ಹಿಡಿದು ಕೆಳಕ್ಕೆ ಇಳಿದುಬಿಡಲಾಗಿತ್ತು ಅದು ಬಂದು ನನ್ನ ಪಕ್ಕದಲ್ಲೇ ನಿಂತಿತು. ಅದನ್ನು ಗಮನಿಸಿ ನೋಡಿದಾಗ ಅದರಲ್ಲಿ ಪ್ರಾಣಿಗಳೂ ಕಾಡುಮೃಗಗಳೂ ಹರಿದಾಡುವ ಕ್ರಿಮಿಕೀಟಗಳೂ ಹಾರಾಡುವ ಪಕ್ಷಿಗಳೂ ಕಂಡುಬಂದವು. ಆಗ, "ಪೇತ್ರ, ಏಳು, ಕೊಯ್ದು ತಿನ್ನು" ಎಂಬ ವಾಣಿ ನನಗೆ ಕೇಳಿಸಿತು. ಅದಕ್ಕೆ ನಾನು, 'ಬೇಡವೇ ಬೇಡ ಸ್ವಾಮಿ, ಅಶುದ್ದ ಹಾಗು ಅಸ್ಫೃಶ್ಯವಾದುದು ಯಾವುದೂ ನನ್ನ ಬಾಯನ್ನು ಎಂದೂ ಹೊಕ್ಕಿಲ್ಲ,' ಎಂದೆ. ಮತ್ತೊಮ್ಮೆ ಆ ವಾಣಿ ಸ್ವರ್ಗಲೋಕದಿಂದ, "ದೇವರೇ ಶುದ್ಧೀಕರಿಸಿರುವ ಏನನ್ನೂ ನೀನು ಅಶುದ್ಧವೆನ್ನಬೇಡ," ಎಂದು ಉತ್ತರಿಸಿತು. ಹೀಗೆ ಮೂರು ಬಾರಿ ನಡೆದ ಮೇಲೆ, ಅವೆಲ್ಲವನ್ನೂ ಒಟ್ಟಿಗೆ ಸ್ವರ್ಗಕ್ಕೆ ಮರಳಿ ಎಳೆದುಕೊಳ್ಳಲಾಯಿತು. ಅದೇ ಸಮಯಕ್ಕೆ ಸರಿಯಾಗಿ, ಸೆಜರೇಯದಿಂದ ಕಳುಹಿಸಲಾದ ಮೂವರು ಮಂದಿ ನನ್ನನ್ನು ಹುಡುಕಿಕೊಂಡು, ನಾನು ತಂಗಿದ್ದ ಮನೆಗೆ ಬಂದರು. ನಾನು ಸಂಕೋಚಪಡದೆ ಅವರೊಡನೆ ಹೋಗಬೇಕೆಂದು ಪವಿತ್ರಾತ್ಮ ತಿಳಿಸಿದರು. ಜೊಪ್ಪದ ಈ ಆರುಮಂದಿ ಭಕ್ತರೂ ನನ್ನೊಡನೆ ಸೆಜರೇಯಕ್ಕೆ ಬಂದರು. ನಾವೆಲ್ಲರೂ ಕೊರ್ನೇಲಿಯನ ಮನೆಯನ್ನು ಪ್ರವೇಶಿಸಿದೆವು. ಅವನು, "ನನ್ನ ಮನೆಯಲ್ಲೇ ದೂತನೊಬ್ಬನು ಕಾಣಿಸಿಕೊಂಡು, ಈಗಲೇ ಯಾರನ್ನಾದರೂ ಜೊಪ್ಪಕ್ಕೆ ಕಳುಹಿಸಿ ಪೇತ್ರ ಎಂದು ಕರೆಯಲಾಗುವ ಸಿಮೋನನನ್ನು ಬರಹೇಳು. ಅವನು, ನೀನೂ ನಿನ್ನ ಕುಟುಂಬದವರೆಲ್ಲರೂ ಪಡೆಯಬಹುದಾದಂಥ ಜೀವೋದ್ಧಾರದ ಸಂದೇಶವನ್ನು ನೀಡುವನು," ಎಂದು ತಿಳಿಸಿದನು" ಎಂದು ನಮಗೆ ಹೇಳಿದನು. ನಾನು ಉಪದೇಶಮಾಡಲು ಪ್ರಾರಂಭಿಸಿದ ಕೂಡಲೇ ನಮ್ಮ ಮೇಲೆ ಇಳಿದಂತೆ ಅವರ ಮೇಲೂ ಪವಿತ್ರಾತ್ಮ ಇಳಿದು ಬಂದರು. ಆಗ ನನಗೆ, "ಯೊವಾನ್ನನು ನೀರಿನಿಂದ ಸ್ನಾನದೀಕ್ಷೆಯನ್ನು ಕೊಟ್ಟನು. ನೀವಾದರೋ ಪವಿತ್ರಾತ್ಮ ಅವರಿಂದ ದೀಕ್ಷಾಸ್ನಾನವನ್ನು ಪಡೆಯುವಿರಿ," ಎಂಬ ಪ್ರಭುವಿನ ಮಾತುಗಳು ನೆನಪಿಗೆ ಬಂದವು. ನಾವು ಪ್ರಭು ಯೇಸುಕ್ರಿಸ್ತರನ್ನು ವಿಶ್ವಾಸಿಸಿದಾಗ ನಮಗೆ ಕೊಟ್ಟ ವರವನ್ನೇ ದೇವರು ಆ ಅನ್ಯಧರ್ಮದವರಿಗೂ ಕೊಟ್ಟಿರುವರು. ಹೀಗಿರುವಲ್ಲಿ ದೇವರನ್ನು ತಡೆಗಟ್ಟಲು ನಾನಾರು?" ಎಂದನು. ಈ ಮಾತುಗಳನ್ನು ಕೇಳಿದ ಮೇಲೆ ಅವರು ತಮ್ಮ ಆಕ್ಷೇಪಣೆಯನ್ನು ನಿಲ್ಲಿಸಿದರು. ಮಾತ್ರವಲ್ಲ, 'ಅನ್ಯಧರ್ಮದವರೂ ಪಶ್ಚಾತಾಪಪಟ್ಟು ನವಜೀವ ಪಡೆಯುವ ಸದವಕಾಶವನ್ನು ದೇವರು ದಯಪಾಲಿಸಿದ್ದಾರಲ್ಲಾ!'  ಎಂದು ದೈವಸ್ತುತಿ ಮಾಡಿದರು.

ಕೀರ್ತನೆ: 42:2-3, 43:3-4
ಶ್ಲೋಕ: ಜೀವಂತ ದೇವನಿಗಾಗಿ ದಾಹದಿಂದಿದೆ ಎನ್ನ ಮನ ನಾ ತೆರಳಿ ಪಡೆವುದೆಂತು ಆ ದೇವನ ಮುಖದರ್ಶನ

ಶುಭಸಂದೇಶ: ಯೊವಾನ್ನ 10:1-10


"ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಕುರಿಹಟ್ಟಿಗೆ ಬಾಗಿಲ ಮೂಲಕ ಬರದೆ ಗೋಡೆ ಹತ್ತಿ ಬರುವವನು ಕಳ್ಳ ಹಾಗೂ ಕೊಳ್ಳೆಗಾರ. ಬಾಗಿಲ ಮೂಲಕ ಬರುವವನು ಕುರಿಗಾಹಿ. ಕಾವಲುಗಾರನು ಅವನಿಗೆ ಬಾಗಿಲು ತೆರೆಯುತ್ತಾನೆ. ಕುರಿಗಳು ಅವನ ಸ್ವರವನ್ನು ಕೇಳುತ್ತವೆ. ಅವನು ತನ್ನ ಕುರಿಗಳನ್ನು ಹೆಸರಿಟ್ಟು ಕರೆದು ಹೊರೆಗೆ ಬಿಡುತ್ತಾನೆ. ತನ್ನ ಕುರಿಗಳನ್ನೆಲ್ಲಾ ಹೊರಗೆ ಬಿಟ್ಟ ನಂತರ ಅವನು ಅವುಗಳ ಮುಂದೆ ಹೋಗುತ್ತಾನೆ. ಕುರಿಗಳು ಅವನ ಹಿಂದೆ ಹೋಗುತ್ತವೆ. ಏಕೆಂದರೆ ಅವುಗಳಿಗೆ ಅವನ ಸ್ವರ ಗೊತ್ತು. ಅಪರಿಚಿತನನ್ನು ಅವು ಹಿಂಬಾಲಿಸುವುದಿಲ್ಲ; ಅವನಿಂದ ದೂರ ಓಡಿಹೋಗುತ್ತವೆ. ಅಪರಿಚಿತರ ಸ್ವರವನ್ನು ಅವು ಗುರುತಿಸುವುದಿಲ್ಲ." ಯೇಸುಸ್ವಾಮಿ ಹೇಳಿದ ಈ ಸಾಮತಿಯನ್ನು ಕೇಳಿದವರು ಅರ್ಥಮಾಡಿಕೊಳ್ಳಲಿಲ್ಲ. ಆದುದರಿಂದ ಯೇಸುಸ್ವಾಮಿ,  "ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಕುರಿಗಳಿಗೆ ನಾನೇ ಬಾಗಿಲು. ನನಗಿಂತ ಮೊದಲು ಬಂದವರೆಲ್ಲರೂ ಕಳ್ಳರು ಹಾಗೂ ಕೊಳ್ಳೆಗಾರರು, ಕುರಿಗಳು ಅವರಿಗೆ ಕಿವಿಗೊಡಲಿಲ್ಲ. ಹೌದು, ನಾನೇ ಬಾಗಿಲು ನನ್ನ ಮೂಲಕ ಒಳಹೋಗುವವನು ಸುರಕ್ಷಿತನಾಗಿರುತ್ತಾನೆ. ಅವನು ಒಳಗೆ ಹೋಗುತ್ತಾನೆ, ಹೊರಗೆ ಬರುತ್ತಾನೆ; ಮೇವನ್ನು ಕಂಡುಕೊಳ್ಳುತ್ತಾನೆ. ಕಳ್ಳನು ಬರುವುದು ಕಳ್ಳತನಕ್ಕಾಗಿ, ಕೊಲ್ಲುವುದಕ್ಕಾಗಿ ಮತ್ತು ನಾಶಮಾಡುವುದಕ್ಕಾಗಿ ಮಾತ್ರ ನಾನು ಬಂದದ್ದಾದರೋ ಜೀವನೀಡಲು, ಯಥೇಚ್ಛವಾಗಿ ನೀಡಲು" ಎಂದರು.

12.05.2019 - "ನಾನೂ ಪಿತನೂ ಒಂದೇ ಆಗಿದ್ದೇವೆ,"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 13:14, 43-52

ಉಳಿದವರು ಪೆರ್ಗದಿಂದ ಹೊರಟು ಪಿಸಿದಿಯ ಸೀಮೆಗೆ ಸೇರಿದ ಅಂತಿಯೋಕ್ಯಕ್ಕೆ ಬಂದರು. ಸಬ್ಬತ್ ದಿನದಲ್ಲಿ ಪ್ರಾರ್ಥನಾಮಂದಿರಕ್ಕೆ ಹೋಗಿ ಕುಳಿತುಕೊಂಡರು. ಪ್ರಾರ್ಥನಾಕೂಟ ಮುಗಿದಮೇಲೆ ಅನೇಕ ಯೆಹೂದ್ಯರೂ ಯೆಹೂದ್ಯ ಮತಾವಲಂಬಿಗಳಾದ ಅನ್ಯರೂ ಪೌಲ ಮತ್ತು ಬಾರ್ನಬರನ್ನು ಹಿಂಬಾಲಿಸಿದರು. ಈ ಪ್ರೇಷಿತರು ಅವರೊಡನೆ ಮಾತನಾಡಿ ದೈವಾನುಗ್ರಹದಲ್ಲಿ ದೃಡವಾಗಿ ಬಾಳುವಂತೆ ಪ್ರೋತ್ಸಾಹಿಸಿದರು. ಮುಂದಿನ ಸಬ್ಬತ್ ದಿನ ದೇವರ ವಾಕ್ಯವನ್ನು ಕೇಳಲು ನಗರಕ್ಕೆ ನಗರವೇ ಆಗಮಿಸಿತು. ಜನರು ತಂಡೋಪತಂಡವಾಗಿ ಬರುತ್ತಿರುವುದನ್ನು ಕಂಡು ಯೆಹೂದ್ಯರು ಮತ್ಸರಭರಿತರಾದರು. ಅವರು ಪೌಲನ ಮಾತುಮಾತಿಗೂ ವಿರೋಧವಾಗಿ ವಾದಿಸಿ ದೂಷಣೆಮಾಡತೊಡಗಿದರು. ಪೌಲ ಮತ್ತು ಬಾರ್ನಬ ಮತ್ತಷ್ಟು ಧೈರ್ಯದಿಂದ ಮಾತನಾಡಿದರು: "ದೇವರ ವಾಕ್ಯವನ್ನು ಮೊಟ್ಟಮೊದಲು ನಿಮಗೆ ಬೋಧಿಸುವುದು ಅಗತ್ಯವಾಗಿತ್ತು. ಆದರೆ ನೀವು ಅದನ್ನು ನಿರಾಕರಿಸಿ ಅಮರಜೀವಕ್ಕೆ ಅಪಾತ್ರರೆಂದು ನಿಮ್ಮನ್ನು ನೀವೇ ತೀರ್ಮಾನಿಸಿಕೊಂಡಿರಿ. ಆದುದರಿಂದ ನಾವು ನಿಮ್ಮನ್ನು ಬಿಟ್ಟು ಅನ್ಯಧರ್ಮದವರ ಕಡೆ ಹೋಗುತ್ತೇವೆ. ಏಕೆಂದರೆ ಪ್ರಭು ನಮಗಿತ್ತ ಆಜ್ಞೆ ಹೀಗಿದೆ: "ಅನ್ಯಧರ್ಮೀಯರಿಗೆ  ಜ್ಯೋತಿಯನ್ನಾಗಿಯೂ ವಿಶ್ವಪೂರ್ತಿಗೆ ಜೀವೋದ್ಧಾರ ಸಾದನವಾಗಿಯೂ ನಾನು ನಿಮ್ಮನ್ನು ನೇಮಿಸಿದ್ದೇನೆ" ಇದನ್ನು ಕೇಳಿದ ಅನ್ಯಧರ್ಮೀಯರು ಸಂತೋಷಪಟ್ಟು ದೇವರ ಸಂದೇಶಕ್ಕಾಗಿ ಸ್ತುತಿಸಿದರು. ಅಮರ ಜೀವಕ್ಕೆ ಆಯ್ಕೆಯಾದವರೆಲ್ಲರೂ ವಿಶ್ವಾಸಿಗಳಾದರು. ಪ್ರಭುವಿನ ವಾಕ್ಯ ಆ ಪ್ರದೇಶದಲ್ಲೆಲ್ಲಾ ಹಬ್ಬಿ ಹರಡಿತು. ಯೆಹೂದ್ಯರಾದರೋ ದೇವಭಕ್ತೆಯರಾದ ಕುಲೀನ ಸ್ತ್ರೀಯರನ್ನೂ ಪಟ್ಟಣದ ಪ್ರಮುಖ ಜನರನ್ನೂ ಪ್ರಚೋದಿಸಿದರು. ಪೌಲ ಮತ್ತು ಬಾರ್ನಬರನ್ನು ಹಿಂಸಿಸುವಂತೆ ಹುರಿದುಂಬಿಸಿ, ಅವರನ್ನು ಆ ಪ್ರದೇಶದಿಂದ ಹೊರಗಟ್ಟಿದರು. ಇದಕ್ಕೆ ಪ್ರತಿಯಾಗಿ ಪ್ರೇಷಿತರು ತಮ್ಮ ಪಾದ ಧೂಳನ್ನು ಝಾಡಿಸಿ ಇಕೋನಿಯಕ್ಕೆ ಹೊರಟು ಹೋದರು. ಭಕ್ತ ವಿಶ್ವಾಸಿಗಳಾದರೋ ಪರಮಾನಂದಪಟ್ಟರು, ಪವಿತ್ರಾತ್ಮಭರಿತರಾದರು.

ಕೀರ್ತನೆ: 100:1-2, 3, 5
ಶ್ಲೋಕ: ಆತನವರು ನಾವು, ಆತನ ಜನ, ಆತನೇ ಮೇಯಿಸುವ ಕುರಿಗಳು ನಾವು

ಎರಡನೇ ವಾಚನ: ಪ್ರಕಟನಾಗ್ರಂಥ 7:9, 14-17

ಇದಾದ ಬಳಿಕ ನಾನು ಇನ್ನೊಂದು ದಿವ್ಯದರ್ಶನವನ್ನು ಕಂಡೆ: ಯಾರಿಂದಲೂ ಎಣಿಸಲಾಗದಷ್ಟು ಒಂದು ದೊಡ್ಡ ಜನಸಮೂಹವು ನೆರೆದಿತ್ತು. ಅವರು ಎಲ್ಲಾ ದೇಶ, ಭಾಷೆ, ಕುಲಗೋತ್ರಗಳಿಂದ ಬಂದವರಾಗಿದ್ದರು. ಶ್ವೇತಾಂಬರರಾಗಿ ಸಿಂಹಾಸನದ ಮತ್ತು ಯಜ್ಞದ ಕುರಿಮರಿಯಾದನಾತ ಸಾನ್ನಿದ್ಯದಲ್ಲಿ ನಿಂತಿದ್ದರು. ಕೈಗಳಲ್ಲಿ ಕರ್ಜೂರದ ಗರಿಗಳನ್ನು ಹಿಡಿದಿದ್ದರು. ಸಭಾ ಪ್ರಮುಖರಲ್ಲಿ ಒಬ್ಬನು, "ಶ್ವೇತಾಂಬರರಾದ ಇವರೆಲ್ಲರೂ ಯಾರು? ಎಲ್ಲಿಂದ ಬಂದರು?"ಎಂದು ನನ್ನನ್ನು ಪ್ರಶ್ನಿಸಿದನು. ಅದಕ್ಕೆ ನಾನು, "ಸ್ವಾಮೀ ನೀವೇ ಬಲ್ಲಿರಿ", ಎಂದು ಉತ್ತರಕೊಟ್ಟೆ. ಆಗ ಆತನು ನನಗೆ ಹೀಗೆಂದನು: "ಇವರು ಆ ಭೀಕರ ಹಿಂಸೆಬಾಧೆಯನ್ನು ಅನುಭವಿಸಿ ಬಂದವರು. ತಮ್ಮ ನಿಲುವಂಗಿಗಳನ್ನು ಯಜ್ಞದ ಕುರಿಮರಿಯ ರಕ್ತದಿಂದ ತೊಳೆದು ಬಿಳುಪಾಗಿಸಿಕೊಂಡಿದ್ದಾರೆ.  "ಇರುವರು ದೇವರ ಸಿಂಹಾಸನದ ಸಮ್ಮುಖದಲ್ಲೇ ಆರಾಧಿಪರಾತತನನು ಹಗಲಿರುಳು ದೇವಾಲಯದಲ್ಲೇ ಸಂರಕ್ಷಿಪನಾತನು ಅವರನ್ನು ಗುಡಾರದಂತೆ. ಇನ್ನಿರದು ಅವರಿಗೆ ಹಸಿವು ಬಾಯಾರಿಕೆ ತಟ್ಟದವರನು ಬಿಸಿಲಿನ ತಾಪ, ಸೂರ್ಯನ ಕೋಪ. ನಿಂತಿಹನು ಕುರಿಮರಿಯಾದಾತನು ಸಿಂಹಾಸನದ ನಡುವೆ ಕಾಯುವನು ಅವರುಗಳನು ಕುರುಬನಂತೆ. ನಡೆಸುವನು ಅವರನು ಜೀವಜಲದ ಒರತೆಗಳ ಬಳಿಗೆ ದೇವನೊರಸುವನು ಅವರ ಕಂಬನಿಗಳನು ಬಿಡದೆ", ಎಂದು ನನಗೆ ತಿಳಿಸಿದನು.

ಶುಭಸಂದೇಶ: ಯೊವಾನ್ನ 10:27-30

ಯೇಸುಸ್ವಾಮಿ ತಮ್ಮ ಶಿಷ್ಯರನ್ನುದ್ದೇಶಿಸಿ: ನನ್ನ ಕುರಿಗಳಾದರೋ ನನ್ನ ಸ್ವರವನ್ನು ಗುರುತಿಸುತ್ತವೆ. ನಾನು ಅವರನ್ನು ಬಲ್ಲೆನು, ಅವು ನನ್ನನ್ನು ಹಿಂಬಾಲಿಸುತ್ತವೆ. ನಾನು ಅವುಗಳಿಗೆ ನಿತ್ಯ ಜೀವವನ್ನು ಕೊಡುತ್ತೇನೆ. ಅವು ಎಂದಿಗೂ ನಾಶವಾಗುವುದಿಲ್ಲ. ನನ್ನ ಕೈಯಿಂದ ಅವನ್ನು ಯಾರೂ ಕಸಿದುಕೊಳ್ಳಲಾರರು, ಅವನು ನನಗೆ ಕೊಟ್ಟ ಪಿತ ಸರ್ವಶ್ರೇಷ್ಠರು. ಪಿತನ ಕೈಯಿಂದ ಅವನ್ನು ಯಾರೂ ಕಸಿದುಕೊಳ್ಳಲಾರರು. ನಾನೂ ಪಿತನೂ ಒಂದೇ ಆಗಿದ್ದೇವೆ," ಎಂದರು.

11.05.2019 - ನಿತ್ಯಜೀವವನ್ನು ಈಯುವ ನುಡಿ ಇರುವುದು ತಮ್ಮಲ್ಲೇ.

ಮೊದಲನೇ ವಾಚನ : ಪ್ರೇಷಿತರ ಕಾರ್ಯಕಲಾಪಗಳು 9:31-42

ಜುದೇಯ, ಗಲಿಲೇಯ ಮತ್ತು ಸಮಾರಿಯಾದ ಧರ್ಮಸಭೆಯಲ್ಲಿ ಶಾಂತಿ ನೆಲಸಿತು. ಸಭೆ ಬೆಳೆಯುತ್ತಾ ಪ್ರಭುವಿನ ಭಯ ಭಕ್ತಿಯಲ್ಲಿ ಬಾಳುತ್ತಾ ಪವಿತ್ತಾತ್ಮ ಅವರ ನೆರವಿನಿಃದ ಪ್ರವರ್ಧಿಸುತ್ತಾ ಇತ್ತು. ಪೇತ್ರನು ಅಲ್ಲಲ್ಲಿದ್ದ ಭಕ್ತವಿಶ್ವಾಸಿಗಳಿಗೆ ಭೇಟಿ ಕೊಡುತ್ತಾ ಲುದ್ದ ಎಃಬ ಊರಿನಲ್ಲಿ ವಾಸವಾಗಿದ್ದ ಭಕ್ತರ ಬಳಿಗೆ ಬಂದನು. ಅಲ್ಲಿ ಪಾರ್ಶ್ವವಾಯು ಪೀಡಿತನಾಗಿ ಎಂಟು ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಐನೇಯಾ ಎಂಬುವನನ್ನು ಕಂಡನು. ಪೇತ್ಯನು ಅವನಿಗೆ, "ಐನೇಯಾ, ಯೇಸುಕ್ರಿಸ್ತರು ನಿನ್ನನ್ನು ಸ್ವಸ್ಥ ಪಡಿಸುತ್ತಾರೆ. ಎದ್ದು ನಿನ್ನ ಹಾಸಿಗೆಯನ್ನು ಎತ್ತಿಡು," ಎಂದನು. ಆಕ್ಷಣವೇ ಅವನು ಎದ್ದನು. ಲುದ್ದ ಮತ್ತು ಸಾರೋನಿನ ನಿವಾಸಿಗಳೆಲ್ಲರೂ ಅವನನ್ನು ಕಂಡು ಪ್ರಭುವಿನ ಭಕ್ತರಾದರು. ಜೊಪ ಎಂಬ ಊರಿನಲ್ಲಿ ತಬಿಥ ಎಂಬ ಒಬ್ಬ ಭಕ್ತೆ ಇದ್ದಳು. (ಗ್ರೀಕ್ ಭಾಷೆಯಲ್ಲಿ ಅವಳ ಹೆಸರು  "ದೋರ್ಕ") ಅವಳು ಸತ್ಕಾರ್ಯಗಳಲ್ಲೂ ದಾನಧರ್ಮಗಳಲ್ಲೂ ಸದಾ ನಿರತಳಾಗಿದ್ದವಳು. ಅವಳು ಕಾಯಿಲೆಯಿಂದ ಒಂದು ದಿನ ಸತ್ತಳು. ಜನರು ಅವಳ ಶವಕ್ಕೆ ಸ್ನಾನಮಾಡಿಸಿ ಮೇಲಂತಸ್ತಿನ  ಕೋಣೆಯಲ್ಲಿ ಇರಿಸಿದರು. ಲುದ್ದವು ಜೊಪ್ಪಕ್ಕೆ ಸಮೀಪದಲ್ಲೇ ಇತ್ತು. ಪೇತ್ರನು ಲುದ್ದದಲ್ಲಿರುವುದನ್ನು ಕೇಳಿದ ಭಕ್ತಾದಿಗಳು, "ದಯವಿಟ್ಟು ಬೇಗನೆ ನಮ್ಮೂರಿಗೆ ಬನ್ನಿ" ಎಂದು ಇಬ್ಬರ ಮುಖಾಂತರ ಹೇಳಿ ಕಳುಹಿಸಿದರು. ಪೇತ್ರನು ಎದ್ದು ಅವರ ಜೊತೆಯಲ್ಲೇ ಹೊರಟುಬಂದನು. ಅವನನ್ನು ಮೇಲಂತಸ್ತಿನ ಕೋಣೆಗೆ  ಕರೆದುಕೊಂಡು ಹೋದರು. ಅಲ್ಲಿ ಕೂಡಿದ್ದ ವಿಧವೆಯರೆಲ್ಲರೂ ಅವನ ಸುತ್ತುವರಿದು ಅಳುತ್ತಾ, ದೋರ್ಕಳು ಜೀವದಿಂದ ಇದ್ದಾಗ ತಮಗೆ ಮಾಡಿಕೊಟ್ಟ ಬಟ್ಟೆಬರೆಗಳನ್ನು ಅವನಿಗೆ ತೋರಿಸಿದರು.  ಪೇತ್ರನು ಅವರೆಲ್ಲರನ್ನೂ ಹೊರಗೆ ಕಳುಹಿಸಿ ಮೊಣಕಾಲೂರಿ ಪ್ರಾರ್ಥಿಸಿದನು. ಆನಂತರ ಶವದ ಕಡೆಗೆ ತಿರುಗಿ,  "ತಬಿಥಾ, ಮೇಲಕ್ಕೇಳು," ಎಂದನು. ಆಕೆ ಕಣ್ತೆರೆದು ಪೇತ್ರನನ್ನು ನೋಡಿ ಎದ್ದು ಕುಳಿತಳು. ಪೇತ್ರನು ಕೈ ನೀಡಿ ಆಕೆಯನ್ನು ಎತ್ತಿನಿಲ್ಲಿಸಿದನು. ಭಕ್ತರನ್ನೂ ವಿಧವೆಯರನ್ನೂ ಕರೆದು ಜೀವಂತಳಾದ ತಬಿಥಳನ್ನು ಅವರಿಗೆ ತೋರಿಸಿದನು ಈ ಸಮಾಚಾರ ಜೊಪ್ಪದಲ್ಲೆಲ್ಲಾ ಹರಡಿತು. ಅನೇಕರು ಪ್ರಭುವನ್ನು ವಿಶ್ವಾಸಿಸಿದರು.

ಕೀರ್ತನೆ: 116:12-13, 14-15, 16-17

ಶ್ಲೋಕ: ಪ್ರಭು ಎನಗೆ ಮಾಡಿದ ಮಹೋಪಕಾರಗಳಿಗಾಗಿ ನನ್ನಿಂದೇನು ಮಾಡಲು ಸಾಧ್ಯ ಪ್ರತಿಯಾಗಿ?

ಶುಭಸಂದೇಶ: ಯೊವಾನ್ನ 6:60-69

ಯೇಸುಸ್ವಾಮಿಯ ಶಿಷ್ಯರಲ್ಲಿ ಹಲವರು, "ಇವು ಕಟುವಾದ ಮಾತುಗಳು, ಇವನ್ನು ಯಾರುತಾನೇ ಕೇಳಿಯಾರು?" ಎಂದು ಮಾತನಾಡಿಕೊಂಡರು. ಈ ವಿಷಯವಾಗಿ ತಮ್ಮ ಶಿಷ್ಯರು ಗೊಣಗುಟ್ಟುತ್ತಿರುವುದನ್ನು ಯೇಸು ತಾವಾಗಿಯೇ ಅರಿತು, "ಇಷ್ಟು ಮಾತ್ರಕ್ಕೆ ನೀವು ಕಂಗೆಡಬೇಕೆ?  ಹಾಗಾದರೆ ನರಪುತ್ರನು ತಾನು ಮೊದಲಿದ್ದ ಸ್ಥಳಕ್ಕೆ  ಮರಳಿ ಏರುವುದನ್ನು ನೀವು ಕಂಡಾಗ ಏನನ್ನುವಿರಿ? ಸಜೀವವನ್ನು ಕೊಡುವಂಥಾದ್ದು ದೇವರ ಆತ್ಮವೇ. ನರಮಾಂಸದಿಂದ ಏನೂ ಆಗದು. ನಾನು ನಿಮ್ಮೊಡನೆ ಆಡಿದ ಮಾತುಗಳು ಜೀವದಾಯಕ ದೇವರಾತ್ಮವನ್ನು ತರುತ್ತವೆ. ಆದರೂ ನಿಮ್ಮಲ್ಲಿ ಕೆಲವರಿಗೆ ವಿಶ್ವಾಸವಿಲ್ಲ," ಎಂದು ಹೇಳಿದರು. "ಪಿತನು ಅನುಗ್ರಹಿಸಿದ  ಹೊರತು ಯಾರೂ ನನ್ನ ಬಳಿಗೆ  ಬರಲಾರರು," ಎಂದು ನಾನು ಹೇಳಿದುದು ಇದಕ್ಕಾಗಿಯೇ," ಎಂದು ಯೇಸು ಮತ್ತೆ ನುಡಿದರು. ಅಂದಿನಿಂದ ಯೇಸುಸ್ವಾಮಿಯ ಹಿಂಬಾಲಕರಲ್ಲಿ ಹಲವರು ಅವರ ಸಹವಾಸವನ್ನು ಬಿಟ್ಟುಬಿಟ್ಟರು. ಹೋದವರು ಹಿಂದಿರುಗಿ ಬರಲಿಲ್ಲ. ಆಗ ಯೇಸು ಹನ್ನೆರಡು ಮಂದಿ ಶಿಷ್ಯರಿಗೆ, "ನೀವು ಕೂಡ ಹೋಗಬೇಕೆಂದು ಇದ್ದೀರಾ?" ಎಂದು ಕೇಳಿದರು. ಅದಕ್ಕೆ ಸಿಮೋನ ಪೇತ್ರನು, "ಪ್ರಭುವೇ, ನಾವು ಹೋಗುವುದಾದರೂ ಯಾರ ಬಳಿಗೆ? ನಿತ್ಯಜೀವವನ್ನು ಈಯುವ ನುಡಿ ಇರುವುದು ತಮ್ಮಲ್ಲೇ. ತಾವೇ ದೇವರಿಂದ ಬಂದ ಪರಮಪೂಜ್ಯರೂ ಹೌದು. ಇದೇ ನಮ್ಮ ವಿಶ್ವಾಸ ಮತ್ತು ಗ್ರಹಿಕೆ," ಎಂದು ಹೇಳಿದನು.

10.05.2019 - "ಪ್ರಭು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾರೆ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 9:1-20

ಇತ್ತ ಸೌಲನು ಯೇಸುಸ್ವಾಮಿಯ ಅನುಯಾಯಿಗಳಿಗೆ ಬೆದರಿಕೆ ಹಾಕುತ್ತಾ ಅವರನ್ನು ಸಂಹರಿಸಬೇಕೆಂದಿದ್ದನು. ಈ ಹೊಸಮಾರ್ಗವನ್ನು ಅವಲಂಭಿಸುವವರು ಹೆಂಗಸರೇ ಆಗಿರಲಿ ಗಂಡಸರೇ ಆಗಿರಲಿ, ದಮಸ್ಕಸಿನಲ್ಲಿದ್ದರೆ ಅವರನ್ನು ಬಂಧಿಸಿ ಜೆರುಸಲೇಮಿಗೆ ಎಳೆದು ತರಬೇಕೆಂದಿದ್ದನು. ಇದಕ್ಕೆ ಬೇಕಾದ ಪತ್ರಗಳನ್ನು ಕೇಳುವುದಕ್ಕಾಗಿ ಪ್ರಧಾನ ಯಾಜಕನ ಬಳಿಗೆ ಹೋದನು. ದಮಸ್ಕಸಿನಲ್ಲಿರುವ ಪ್ರಾರ್ಥನಾ ಮಂದಿರದ ಅಧಿಕಾರಿಗಳಿಗೆ ತೋರಿಸಲು ಆ ಪತ್ರಗಳನ್ನು ಪಡೆದನು. ಅವನು ಅಲ್ಲಿಂದ ಪ್ರಯಾಣ ಮಾಡುತ್ತಾ ದಮಸ್ಕಸ್ ಪಟ್ಟಣವನ್ನು ಸಮೀಪಿಸಿದನು. ಇದ್ದಕ್ಕಿದ್ದಂತೆ ಆಕಾಶದಿಂದ ಬೆಳಕೊಂದು ಮಿಂಚಿ ಅವನ ಸುತ್ತಲೂ ಆವರಿಸಿತು. ಅವನು ನೆಲಕ್ಕುರುಳಿದನು. "ಸೌಲನೇ, ಸೌಲನೇ, ನನ್ನನ್ನೇಕೆ  ಹಿಂಸಿಸುತ್ತಿರುವೆ?" ಎಂಬ ವಾಣಿ ಅವನಿಗೆ ಕೇಳಿಸಿತು. ಆಗ ಅವನು, "ಪ್ರಭು, ನೀವಾರು?" ಎಂದನು. "ನೀನು ಹಿಂಸೆಪಡಿಸುತ್ತಿರುವ  ಯೇಸುವೇ ನಾನು. ನೀನೆದ್ದು ಪಟ್ಟಣಕ್ಕೆ ಹೋಗು, ಏನು ಮಾಡಬೇಕೆಂದು ನಿನಗೆ ಅಲ್ಲಿ ತಿಳಿಸಲಾಗುವುದು." ಎಂದು ಆ ವಾಣಿ ಹೇಳಿತು. ಸೌಲನೊಡನೆ ಪ್ರಯಾಣ ಮಾಡುತ್ತಿದ್ದವರಿಗೆ ಆ ವಾಣಿ ಕೇಳಿಸಿತ್ತೇ ಹೊರತು, ಯಾರೂ ಕಾಣಿಸಲಿಲ್ಲ. ಅವರು ಸ್ತಬ್ಧರಾದರು. ಸೌಲನು ಮೇಲಕ್ಕೆದ್ದು ಕಣ್ಣರಳಿಸಿ ನೋಡಿದರೂ ಅವನಿಗೇನು ಕಾಣಿಸಲಿಲ್ಲ. ಆದುದರಿಂದ ಸಂಗಡಿಗರು ಅವನ ಕೈಹಿಡಿದು ದಮಸ್ಕಸ್ ಪಟ್ಟಣಕ್ಕೆ ಕರೆದುಕೊಂಡು ಹೋದರು. ಮೂರು ದಿನಗಳವರೆಗೂ ಅವನಿಗೆ ಕಣ್ಣು ಕಾಣಿಸಲಿಲ್ಲ. ಅಲ್ಲದೆ ಅದುವರೆಗೂ ಅವನು ಅನ್ನಪಾನಗಳನ್ನು ಮುಟ್ಟಲಿಲ್ಲ. ದಮಸ್ಕಸಿನಲ್ಲಿ ಅನನೀಯ ಎಂಬ ಶಿಷ್ಯನಿದ್ದನು. ಪ್ರಭು ಅವನಿಗೆ ದರ್ಶನವಿತ್ತು,  "ಅನನೀಯಾ"  ಎಂದು ಕರೆಯಲು ಅವನು, "ಸ್ವಾಮೀ, ಅಪ್ಪಣೆಯಾಗಲಿ," ಎಂದನು. ಪ್ರಭು ಅವನಿಗೆ, "ನೀನೆದ್ದು "ನೇರಬೀದಿ" ಎಂಬ ಹಾದಿಗೆ ಹೋಗು; ತಾರ್ಸದ ಸೌಲ ಎಂಬ ವ್ಯಕ್ತಿಗಾಗಿ ಯೂದನ ಮನೆಯಲ್ಲಿ ವಿಚಾರಿಸು. ಆ ಸೌಲನು ಪ್ರಾರ್ಥನೆಯಲ್ಲಿರುವುದನ್ನು ಕಾಣುವೆ. ಅಲ್ಲದೆ ಅನನೀಯ ಎಂಬುವನು ತನ್ನ ಬಳಿಗೆ ಬಂದು ತಾನು ಮರಳಿ ದೃಷ್ಟಿಯನ್ನು ಪಡೆಯುವಂತೆ ತನ್ನ ಮೇಲೆ ಹಸ್ತನಿಕ್ಷೇಪ ಮಾಡುವುದನ್ನು ದರ್ಶನದಲ್ಲಿ ಕಂಡಿದ್ದಾನೆ," ಎಂದರು. ಅನನೀಯ ಪ್ರತ್ಯುತ್ತರವಾಗಿ, "ಪ್ರಭೂ ಈ ಮನುಷ್ಯ ಜೆರುಸಲೇಮಿನಲ್ಲಿ ತಮ್ಮ ಭಕ್ತರಿಗೆ ಎಷ್ಟು ಕೇಡು ಮಾಡಿದ್ದಾನೆಂಬುದನ್ನು ಅನೇಕರ ಬಾಯಿಂದ ಕೇಳಿದ್ದೇನೆ. ಅಷ್ಟು ಮಾತ್ರವಲ್ಲ, ತಮ್ಮ ನಾಮಸ್ಮರಣೆ ಮಾಡುವವರೆಲ್ಲರನ್ನು ಬಂಧಿಸಲು ಮುಖ್ಯಯಾಜಕರಿಂದ ಅಧಿಕಾರವನ್ನು ಪಡೆದು ಇಲ್ಲಿಗೆ ಬಂದಿದ್ದಾನೆ," ಎಂದನು. ಪ್ರಭು ಅವನಿಗೆ, "ನೀನು ಹೋಗು, ನನ್ನ ನಾಮವನ್ನು ಅನ್ಯಧರ್ಮದವರಿಗೂ ಅರಸರಿಗೂ ಇಸ್ತ್ರಯೇಲಿನ ಜನರಿಗೂ ಪ್ರಕಟಿಸಲು ನಾನು ಆರಿಸಿಕೊಂಡಿರುವ ಸಾಧನ ಅವನು. ಅವನು ನನ್ನ ನಾಮದ ನಿಮಿತ ಎಷ್ಟು ಕಷ್ಟಕಾರ್ಪಣ್ಯಗಳನ್ನು ಅನುಭವಿಸಬೇಕೆಂಬುದನ್ನು ನಾನೇ ಅವನಿಗೆ ತೋರಿಸುತ್ತೇನೆ," ಎಂದರು. ಅಂತೆಯೇ ಅನನೀಯನು ಹೊರಟು ಆ ಮನೆಗೆ ಹೋದನು. ಸೌಲನ ಮೇಲೆ ಹಸ್ತನಿಕ್ಷೇಪ ಮಾಡಿ, "ಸಹೋದರ ಸೌಲನೇ, ಪ್ರಭು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾರೆ," ಎಂದನು. ಆ ಕ್ಷಣವೇ ಸೌಲನ ಕಣ್ಣುಗಳಿಂದ ಪರೆಯೊಂದು ಕಳಚಿಬಿದ್ದಿತು. ಅವನಿಗೆ ಪುನಃ ಕಣ್ಣುಗಳು ಕಾಣತೊಡಗಿದವು. ಎದ್ದು ದೀಕ್ಷಾಸ್ನಾನವನ್ನು  ಪಡೆದನು. ತರುವಾಯ ಊಟಮಾಡಿದ ಮೇಲೆ ಅವನಿಗೆ ತ್ರಾಣ ಬಂದಿತು. ಸೌಲನು ಕೆಲವು ದಿನಗಳವರೆಗೆ ದಮಸ್ಕಸಿನಲ್ಲಿ ಭಕ್ತವಿಶ್ವಾಸಿಗಳೊಡನೆ ಇದ್ದನು. ಆನಂತರ ಸೌಲನು ತಡಮಾಡದೆ ಯೆಹೂದ್ಯರ ಪ್ರಾರ್ಥನಾಮಂದಿರಗಳಿಗೆ ಹೋಗಿ ಯೇಸುವೇ ದೇವರ ಪುತ್ರ ಎಂದು ಭೊಧಿಸಲು ಪ್ರಾರಂಭಿಸಿದನು.

ಕೀರ್ತನೆ: 117:1, 2

ಶ್ಲೋಕ: ಸ್ತುತಿಮಾಡಿ ಪ್ರಭುವನ್ನು ಸಮಸ್ತ ರಾಷ್ಟ್ರಗಳೇ

ಶುಭಸಂದೇಶ :ಯೊವಾನ್ನ 6:52-59

ಅಷ್ಟಕ್ಕೆ ಆ ಯೆಹೂದ್ಯರಲ್ಲಿ ತೀವ್ರ ವಾಗ್ವಾದ ಉಂಟಾಯಿತು. "ಈತನು ತನ್ನ ಮಾಂಸವನ್ನು ತಿನ್ನಲು ಹೇಗೆ ಕೊಟ್ಟಾನು?" ಎಂದು ಕೇಳತೊಡಗಿದರು. ಅದಕ್ಕೆ ಯೇಸು, "ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನೀವು ನರಪುತ್ರನ ಮಾಂಸವನ್ನು ತಿನ್ನದೆ, ಆತನ ರಕ್ತವನ್ನು ಕುಡಿಯದೆ ಹೋದರೆ ನಿಮ್ಮಲ್ಲಿ ಜೀವ ಇರುವುದಿಲ್ಲ. ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನಲ್ಲಿ ನಿತ್ಯಜೀವ ಇರುತ್ತದೆ ಅಲ್ಲದೆ ಅಂತಿಮ ದಿನದಂದು ನಾನು ಅವನನ್ನು ಜೀವಕ್ಕೆ ಎಬ್ಬಿಸುತ್ತೇನೆ. ನನ್ನ ಮಾಂಸವೇ ನಿಜವಾದ ಆಹಾರ; ನನ್ನ ರಕ್ತವೇ ನಿಜವಾದ ಪಾನ. ನನ್ನ ಮಾಂಸವನ್ನು ತಿಂದು,  ನನ್ನ ರಕ್ತವನ್ನು ಕುಡಿಯುವವನು ನನ್ನಲ್ಲಿ ನೆಲಸಿರುತ್ತಾನೆ ನಾನು ಅವನಲ್ಲಿ ನೆಲಸಿರುತ್ತೇನೆ. ಜೀವಸ್ವರೂಪಿ ಆದ ಪಿತನು ನನ್ನನ್ನು ಕಳುಹಿಸಿಕೊಟ್ಟಿರುವರು.  ನಾನು ಅವರಿಂದಲೇ ಜೀವಿಸುತ್ತೇನೆ. ಅಂತೆಯೇ ನನ್ನನ್ನು ಭುಜಿಸುವವರು ನನ್ನಿಂದಲೇ ಜೀವಿಸುತ್ತಾನೆ. ಸ್ವರ್ಗದಿಂದ ಇಳಿದು ಬಂದ ರೊಟ್ಟಿ ಇದೇ ನಿಮ್ಮ ಪೂರ್ವಜರು  "ಮನ್ನ"ವನ್ನು ತಿಂದರೂ ಸಾವಿಗೆ ತುತ್ತಾದರು. ಇದು ಹಾಗಲ್ಲ, ಈ ರೊಟ್ಟಿಯನ್ನು ತಿನ್ನುವವನು ಚಿರಕಾಲ ಬಾಳುವನು," ಎಂದು ಹೇಳಿದರು. ಕಫೆರ್ನವುಮಿನ ಪ್ರಾರ್ಥನಾಮಂದಿರದಲ್ಲಿ ಯೇಸು ಭೋದನೆ ಮಾಡುತ್ತಿದ್ದಾಗ ಆಡಿದ ಮಾತುಗಳಿವು.

ಮನಸಿಗೊಂದಿಷ್ಟು : ಶುಭಸಂದೇಶದ ಅತ್ಯಂತ ಹೃದಯಸ್ಪರ್ಶಿ ಘಟನೆ, ರೂಪಾಂತರವನ್ನು ಇಂದಿನ ವಾಚನದಲ್ಲಿ ಕಾಣುತ್ತೇವೆ. ಕ್ರೈಸ್ತ ತತ್ವಗಳನ್ನು ನಿರ್ನಾಮ ಮಾಡಲು ದಮಸ್ಕಸ್ ಗೆ ಹೊರಟ ಸೌಲನನ್ನು ಯೇಸು ತಮ್ಮ ಪ್ರೀತಿಯಲ್ಲಿ ಬಂಧಿಸುತ್ತಾರೆ. ಅವನ ನೋಡುತ್ತಿದ್ದ ಲೋಕವನ್ನು ಕುರುಡಾಗಿಸಿ ತಮ್ಮ ಬೆಳಕನ್ನು ನೀಡುತ್ತಾರೆ. ನಮ್ಮದೇ ಹಾದಿಯಲ್ಲಿ ನಡೆಯುತ್ತಿರುವ ನಮಗೂ ಆ ರೂಪಾಂತರದ ಭಾಗ್ಯ ದೊರೆಯುವಂತಾಗಲಿ

ಪ್ರಶ್ನೆ : ಕ್ಷಣಾರ್ಧದಲ್ಲಿ ಎಲ್ಲವನ್ನೂ ತ್ಯಜಿಸಿದ ಸೌಲ ನಮಗೆ ಸ್ಪೂರ್ತಿಯೇ?

09.05.2019 - "ಇದನ್ನು ತಿನ್ನುವ ಯಾರಿಗೂ ಸಾವೆಂಬುದು ಇಲ್ಲ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 8:26-40


ಅನಂತರ ದೇವದೂತನು ಫಿಲಿಪ್ಪನಿಗೆ, "ನೀನು ಎದ್ದು ದಕ್ಷಿಣಾಭಿಮುಖವಾಗಿ ಹೋಗು, ಅದು ಜೆರುಸಲೇಮಿನ ಗಾಜಕ್ಕೆ ಹೋಗುವ ಅರಣ್ಯ ಮಾರ್ಗ," ಎಂದನು. ಅಂತೆಯೇ ಫಿಲಿಪ್ಪನು ಹೊರಟನು. ಆಗ ಇಥಿಯೋಪಿಯದ ಕಂಚುಕಿಯೊಬ್ಬನು ಅದೇ ಮಾರ್ಗವಾಗಿ ಬರುತ್ತಿದ್ದನು. ಅವನು ಆ ದೇಶದ ರಾಣಿ ಕಂದಾಕಿಯ ಕೋಶಾಧಿಕಾರಿ ಹಾಗೂ ಸಚಿವ. ದೇವಾರಾಧನೆಗೆಂದು ಜೆರುಸಲೇಮಿಗೆ ಹೋಗಿ  ಹಿಂದಿರುಗುತ್ತಿದ್ದನು. ಅವನು ತನ್ನ ರಥದಲ್ಲಿ ಕುಳಿತು ಯೆಶಾಯನ ಪ್ರವಾದನೆಯನ್ನು ಓದುತ್ತಿದ್ದನು. ಪವಿತ್ರಾತ್ಮರು ಫಿಲಿಪ್ಪನಿಗೆ, "ನೀನು ಮುಂದೆ ಹೋಗಿ ಆ ರಥದ ಜೊತೆಯಲ್ಲೇ ನಡೆ," ಎಂದು ತಿಳಿಸಿದರು. ಫಿಲಿಪ್ಪನು ಮುಂದಕ್ಕೆ ಧಾವಿಸಿ, ಅವನು ಯೆಶಾಯನ ಪ್ರವಾದನೆಯನ್ನು ಓದುತ್ತಿರುವುದನ್ನು ಕೇಳಿಸಿಕೊಂಡನು. "ನೀವು ಓದುತ್ತಿರುವುದು ಅರ್ಥವಾಗುತ್ತಿದೆಯೇ?" ಎಂದು ಪ್ರಶ್ನಿಸಿದನು. ಆ ಅಧಿಕಾರಿ ಪ್ರತ್ಯುತ್ತರವಾಗಿ, "ಯಾರಾದರೂ ವಿವರಿಸದ ಹೊರತು ಇದು ನನಗೆ ಅರ್ಥವಾಗುವುದಾದರೂ ಹೇಗೆ?" ಎಂದನು. ರಥವನ್ನು ಹತ್ತಿ ಕುಳಿತುಕೊಳ್ಳುವಂತೆ ಫಲಿಪ್ಪನನ್ನು ಆಹ್ವಾನಿಸಿದನು. ಅವನು ಓದುತ್ತಿದ್ದ ಪ್ರವಾದನೆ ಇದು: "ವಧ್ಯಸ್ಥಾನಕ್ಕೆ ಒಯ್ದ ಕುರಿಯಂತೆ ತುಪ್ಪಟ ಕತ್ತರಿಸುವವನ ಮುಂದಿರುವ ಮೂಕ ಕುರಿಮರಿಯಂತೆ ಆತನು ಬಾಯ್ದೆರೆಯಲಿಲ್ಲ. ಆತನನ್ನು ಅವಮಾನಪಡಿಸಲಾಯಿತು, ನ್ಯಾಯವನ್ನೇ ಆತನಿಗೆ ನಿರಾಕರಿಸಲಾಯಿತು, ಆತನ ಸಂತತಿಯ ಮಾತೇ ಎತ್ತದಂತಾಯಿತು. ಇದಕಾರಣ ಆತನ ಭೌತಿಕ ಜೀವವನ್ನೇ ಮೊಟುಕುಗೊಳಿಸಲಾಯಿತು."ಆ ಅಧಿಕಾರಿ ಫಿಲಿಪ್ಪನಿಗೆ, "ಇಲ್ಲಿ ಪ್ರವಾದಿ ಯಾರನ್ನು ಕುರಿತು ಈ ಮಾತುಗಳನ್ನು ಹೇಳಿದ್ದಾನೆ. ತನ್ನನ್ನು ಕುರಿತೋ ಅಥವಾ ಬೇರೆಯವರನ್ನು ಕುರಿತೋ, ಹೇಳಬಲ್ಲೆಯಾ?" ಎಂದು ಕೇಳಿದನು. ಆಗ ಫಿಲಿಪ್ಪನು ಮರುತ್ತರವಾಗಿ, ಆ ಪ್ರವಾದನೆಯನ್ನೇ ಆಧಾರವಾಗಿ ತೆಗೆದುಕೊಂಡು, ಯೇಸುವಿನ ಶುಭಸಂದೇಶವನ್ನು ಅವನಿಗೆ ಬೋಧಿಸಿದನು. ಅವರು ಪ್ರಯಾಣ ಮಾಡುತ್ತಾ ದಾರಿಯಲ್ಲಿ ನೀರಿದ್ದ ಒಂದು ಸ್ಥಳಕ್ಕೆ ಬಂದರು. ಅದನ್ನು ಕಂಡ ಆ ಅಧಿಕಾರಿ, "ಇಲ್ಲಿ ನೀರಿದೆ. ನಾನು ದೀಕ್ಷಾಸ್ನಾನವನ್ನು ಪಡೆಯಲು ಏನಾದರೂ ಅಭ್ಯಂತರವಿದೆಯೇ"ಎಂದನು. ಫಿಲಿಪ್ಪನು, "ನೀವು ಹೃದಯಪೂರ್ವಕವಾಗಿ ವಿಶ್ವಾಸಿಸುವುದಾದರೆ ದೀಕ್ಷಾಸ್ನಾನವನ್ನು ಪಡೆಯಬಹುದು," ಎಂದನು. "ಯೇಸುಕ್ರಿಸ್ತ ದೇವರ ಪುತ್ರ ಎಂದು ನಾನು ವಿಶ್ವಾಸಿಸುತ್ತೇನೆ," ಎಂದು ಅಧಿಕಾರಿ ಪ್ರತ್ಯುತ್ತರವಿತ್ತನು. ಅಧಿಕಾರಿಯ ಆಜ್ಞೆಯಂತೆ ರಥವನ್ನು ಅಲ್ಲಿಯೇ ನಿಲ್ಲಿಸಲಾಯಿತು. ಅವರಿಬ್ಬರೂ ನೀರಿಗೆ ಇಳಿದರು. ಫಿಲಿಪ್ಪನು ಅಧಿಕಾರಿಗೆ ದೀಕ್ಷಾಸ್ನಾನವನ್ನು ಕೊಟ್ಟನು. ಅವರಿಬ್ಬರು ನೀರಿನಿಂದ ಮೇಲಕ್ಕೆ ಬಂದೊಡನೆ ಪ್ರಭುವಿನ ಆತ್ಮವು ಫಿಲಿಪ್ಪನನ್ನು ಅಲ್ಲಿಂದ ಕೊಂಡೊಯ್ಯಿತು. ಆ ಅಧಿಕಾರಿ ಫಿಲಿಪ್ಪನನ್ನು ಪುನಃ ಕಾಣಲಿಲ್ಲ; ಅವನು ಸಂತೋಷಭರಿತನಾಗಿ ಪ್ರಯಾಣವನ್ನು ಮುಂದುವರಿಸಿದನು. ಫಿಲಿಪ್ಪನಾದರೋ ಅಜೋತ್ ಎಂಬಲ್ಲಿ ಕಾಣಿಸಿಕೊಂಡನು. ಅಲ್ಲಿಂದ ಸೆಜರೇಯವನ್ನು ತಲುಪುವವರೆಗೆ ಎಲ್ಲಾ ಊರುಗಳಲ್ಲೂ ಶುಭಸಂದೇಶವನ್ನು ಸಾರುತ್ತಾ ಹೋದನು.

ಕೀರ್ತನೆ: 66:8-9, 16-17, 20

ಶ್ಲೋಕ: ಜಗವೆಲ್ಲ ಮಾಡಲಿ ಜಯಕಾರ ದೇವನಿಗೆ

ಶುಭಸಂದೇಶ: ಯೊವಾನ್ನ 6:44-51

ಯೆಹೂದ್ಯರಿಗೆ ಪ್ರತ್ಯುತ್ತರವಾಗಿ ಯೇಸುವು, "ನನ್ನನ್ನು ಕಳುಹಿಸಿಕೊಟ್ಟ ಪಿತನು, ನನ್ನತ್ತ ಸೆಳೆಯದ ಹೊರತು, ಯಾರೂ ನನ್ನ ಬಳಿಗೆ ಬಾರರು. ಬಂದವರನ್ನು ನಾನು ಅಂತಿಮ ದಿನದಂದು ಜೀವಕ್ಕೆ ಎಬ್ಬಿಸುತ್ತೇನೆ. "ದೇವರಿಂದಲೇ ಅವರೆಲ್ಲರೂ ಬೋಧನೆ ಪಡೆಯುವರು,"ಎಂದು ಪ್ರವಾದಿಗಳ ಗ್ರಂಥದಲ್ಲಿ ಬರೆದಿದೆ. ಪಿತನಿಗೆ ಕಿವಿಗೊಟ್ಟು ಅವರಿಂದಲೇ ಕಲಿತುಕೊಂಡ ಪ್ರತಿಯೊಬ್ಬನೂ ನನ್ನ ಬಳಿಗೆ ಬರುತ್ತಾನೆ. ಹಾಗೆಂದ ಮಾತ್ರಕ್ಕೆ ಪಿತನನ್ನು ಯಾರಾದರೂ ಕಣ್ಣಾರೆ ಕಂಡಿದ್ದಾರೆ ಎಂದಲ್ಲ, ದೇವರಿಂದ ಬಂದಿರುವ ಒಬ್ಬನು ಮಾತ್ರ ಪಿತನನ್ನು ಕಂಡಿದ್ದಾನೆ. ವಿಶ್ವಾಸ ಉಳ್ಳವನಲ್ಲಿ ನಿತ್ಯ ಜೀವ ಇದೆಯೆಂದು  ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. ಜೀವದಾಯಕ ರೊಟ್ಟಿ ನಾನೇ. ನಿಮ್ಮ ಪೂರ್ವಜರು  ಮರಳುಗಾಡಿನಲ್ಲಿ "ಮನ್ನ" ವನ್ನು ತಿಂದರು; ಆದರೂ ಸಾವಿಗೆ ತುತ್ತಾದರು. ಸ್ವರ್ಗದಿಂದ ಬಂದ ರೊಟ್ಟಿಯಾದರೋ ಹಾಗಲ್ಲ. ಇದನ್ನು ತಿನ್ನುವ ಯಾರಿಗೂ ಸಾವೆಂಬುದು ಇಲ್ಲ. ನಾನೇ ಸ್ವರ್ಗದಿಂದ ಇಳಿದು ಬಂದ ಜೀವಂತ ರೊಟ್ಟಿ. ಈ ರೊಟ್ಟಿಯನ್ನು ತಿಂದವನು ಚಿರಕಾಲ ಬಾಳುತ್ತಾನೆ. ಲೋಕೋದ್ಧಾರಕ್ಕಾಗಿ ನಾನು ಅರ್ಪಿಸುವ ನನ್ನ ಮಾಂಸವೇ ನಾನು ಕೊಡುವ ರೊಟ್ಟಿ,"ಎಂದು ಹೇಳಿದರು.

ಮನಸಿಗೊಂದಿಷ್ಟು : ಸ್ವರ್ಗದಿಂದಲೇ ಇಳಿದು ಬಂದ ಯೇಸುವಿನಲ್ಲಿ ವಿಶ್ವಾಸವಿಡದೆ ಹೋದರೆ ನಮಗೆ ಈ ಲೋಕದಲ್ಲಿನ ಸುಂದರ ಬದುಕು ಸಿಗದೆ ಹೋಗುವುದು ಮಾತ್ರವಲ್ಲದೆ ಮುಂದಿನ ಸುಂದರ ಲೋಕವೂ ಸಿಗದೆ ಹೋಗಬಹುದು. ಆ ಲೋಕದ ಸುಂದರ ನಿತ್ಯ ಜೀವದ ಬದುಕಿನ ಹಾತೊರೆಯುವಿಕೆ ನಮ್ಮನ್ನು ಈ ಲೋಕದ ಬದುಕನ್ನು ಸುಂದರವಾಗಿಸಬಲ್ಲದು.

ಪ್ರಶ್ನೆ : ಬಾಳಬೇಕಾಗಿರುವ ಇಂದಿನ ಬದುಕು, ಮುಂದಿನ ಆ ಬದುಕಿನ ನಡುವಲ್ಲಿ ನಾವು ಜೀವಿಸುತ್ತಿರುವ ಬದುಕಾವುದು?

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...