ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

08.04.2019 - "ನಾನೇ ಜಗಜ್ಯೋತಿ"

ಮೊದಲನೇ ವಾಚನ: ಸುಸನ್ನಳ ಗ್ರಂಥ 1:41-62 

ಅವರು ಜನರ ಹಿರಿಯರ ಮಾತ್ರವಲ್ಲ ನ್ಯಾಯಾಧೀಶರೂ ಆಗಿದ್ದರಿಂದ ಕೂಡಿದ್ದ ಸಭಿಕರು ಅವರ ಮಾತನ್ನು ನಂಬಿ ಆಕೆಗೆ ಮರಣದಂಡನೆಯನ್ನು ವಿಧಿಸಿದರು. ಆಗ ಸುಸನ್ನಳು ಗಟ್ಟಿಯಾಗಿ ಕೂಗಿ, "ನಿತ್ಯರಾದ ದೇವರೇ, ನೀವು ಎಲ್ಲ ಗುಟ್ಟನ್ನು ತಿಳಿದವರು. ಎಲ್ಲ ವಿಷಯಗಳನ್ನು, ಅವು ಹುಟ್ಟುವ ಮೊದಲೇ ಅರಿತವರೂ ಆಗಿದ್ದೀರಿ. ಇವರು ನನ್ನ ವಿರುದ್ಧ ಸುಳ್ಳುಸಾಕ್ಷಿ ಹೇಳಿದ್ದಾರೆಂಬುದು ನಿಮಗೆ ಗೊತ್ತಿದೆ. ಇವರು ನನ್ನ ವಿರುದ್ದ ಹೊಟ್ಟೆಕಿಚ್ಚಿನಿಂದ ಹೇಳಿದ ಕಾರ್ಯಗಳನ್ನು ನಾನು ಮಾಡಿದ್ದೇ ಇಲ್ಲ. ಆದರೂ ಈಗ ನಾನು ಸಾಯಲೇಬೇಕು," ಎಂದು ಮೊರೆಯಿಟ್ಟಳು. ಸರ್ವೇಶ್ವರಸ್ವಾಮಿ ಆಕೆಯ ಮೊರೆಯನ್ನು ಆಲಿಸಿದರು. ಜನರು ಅವಳನ್ನು ಕೊಲ್ಲುವುದಕ್ಕೆ ಸಾಗಿಸಿಕೊಂಡು ಹೋಗುತ್ತಿರುವಾಗ ದೇವರು ದಾನಿಯೇಲನೆಂಬ ಯುವಕನಲ್ಲಿದ್ದ ಪವಿತ್ರಾತ್ಮನನ್ನು ಚೇತನಗೊಳಿಸಿದರು. ದಾನಿಯೇಲನು, "ಈ ಮಹಿಳೆಯ ರಕ್ತಪಾತಕ್ಕೆ ನಾನು ಹೊಣೆ ಅಲ್ಲ," ಎಂದು ಕೂಗಿ ಹೇಳಿದನು. ಜನರೆಲ್ಲರು ಅವನ ಕಡೆಗೆ ತಿರುಗಿಕೊಂಡು, "ನೀನು ಆಡಿದ ಮಾತಿನ ಮರ್ಮವೇನು?" ಎಂದು ವಿಚಾರಿಸಿದರು. ಅವನು ಅವರ ಮಧ್ಯೆ ನಿಂತು, "ಇಸ್ರಯೇಲಿನ ಕುಲಪುತ್ರರೇ, ನೀವು ಇಷ್ಟು ಬುದ್ಧಿಹೀನರೋ?  ಪರಿಕ್ಷೆಮಾಡದೆ, ಸತ್ಯವನ್ನು ಅರಿತುಕೊಳ್ಳದೆ, ಇಸ್ರಯೇಲಿನ ಕುಲಪುತ್ರಿಯೊಬ್ಬಳಿಗೆ ದಂಡನೆ ವಿಧಿಸಿದಿರೋ? ನ್ಯಾಯಸ್ಥಾನಕ್ಕೆ ಮರಳಿ ಬನ್ನಿ, ಏಕೆಂದರೆ ಇವಳ ಮೇಲೆ ಸುಳ್ಳುಸಾಕ್ಷಿ ಹೇಳಲಾಗಿದೆ," ಎಂದು ಹೇಳಿದನು. ಜನರೆಲ್ಲರು ಕೂಡಲೆ ಹಿಂದಿರುಗಿ ಬಂದರು. ಜನನಾಯಕರು ದಾನಿಯೇಲನಿಗೆ, "ಬಾ, ನಮ್ಮ ನಡುವೆ ಕುಳಿತುಕೊಂಡು ಆ ವಿಷಯವನ್ನು ನಮಗೆ ವಿವರಿಸು. ಹಿರಿಯರಿಗೆ ಕೊಟ್ಟಂಥ ಗೌರವವನ್ನು ದೇವರು  ನಿನಗೆ ಕೊಟ್ಟಂತಿದೆ!" ಎಂದರು. ಆಗ ದಾನಿಯೇಲನು, "ಇವರಿಬ್ಬರನ್ನು ಬೇರ್ಪಡಿಸಿ ದೂರದೂರದಲ್ಲಿ ಇಡಿ. ನಾನು  ಇವರನ್ನು ಪರೀಕ್ಷಿಸುತ್ತೇನೆ. ಎಂದನು ಅಂತೆಯೇ ಅವರನ್ನು ಬೇರ್ಪಡಿಸಲಾಯಿತು. ಆಮೇಲೆ ಅವರಿಬ್ಬರಲ್ಲಿ ಒಬ್ಬನನ್ನು ಕರೆದು ಅವನಿಗೆ, "ಕೆಟ್ಟತನದಲ್ಲೆ ಬೆಳೆದು ಮುಪ್ಪಾಗಿರುವವನೇ, ನೀನು ಹಿಂದೆ ಮಾಡಿದ ಪಾಪಗಳು ಇಂದು ಬಯಲಿಗೆ ಬಂದಿವೆ. "ನಿರಪರಾಧಿಗೂ ನೀತಿವಂತನಿಗೂ ಮರಣದಂಡನೆ ವಿಧಿಸಲೇಕೂಡದು" ಎಂದು ಸರ್ವೇಶ್ವರಸ್ವಾಮಿ ಹೇಳಿದ್ದರೂ ಅನ್ಯಾಯವಾದ ತೀರ್ಪುಕೊಟ್ಟು, ನರಪರಾಧಿಯನ್ನು ದಂಡಿಸಿ, ಅಪರಾಧಿಗಳನ್ನು ಬಿಡುಗಡೆಮಾಡುತ್ತಾ ಬಂದಿರುವೆ. ಈಗ ಹೇಳು, ಇವಳನ್ನು ನೀನು ನೋಡಿದ್ದೇ ಆದರೆ, ಇವರು ಯಾವ ಗಿಡದ ಅಡಿಯಲ್ಲಿ ಕೂಡಿದ್ದರು, ನನಗೆ ತಿಳಿಸು," ಎಂದನು. ಅದಕ್ಕೆ ಅವನು "ಬಗಿನಿ ಮರದ ಅಡಿಯಲ್ಲಿ," ಎಂದು ಉತ್ತರವಿತ್ತನು ಅದಕ್ಕೆ ದಾನಿಯೇಲನು, "ನಿನ್ನ ಪ್ರಾಣಕ್ಕೆ ವಿರುದ್ಧ ಚೆನ್ನಾಗಿ ಸುಳ್ಳಾಡಿದೆ. ದೇವದೂತನು ಈಗಲೆ ದೇವರಿಂದ ತೀರ್ಮಾನ ಪಡೆದು ನಿನ್ನನ್ನು ಬಗೆದುಹಾಕಿ, ಎರಡು ತುಂಡಾಗಿ ಮಾಡಲಿದ್ದಾನೆ," ಎಂದು ಹೇಳಿ ಅವನನ್ನು ಪಕ್ಕಕ್ಕೆ ಸರಿಸಿದನು. ಬಳಿಕ ಎರಡನೆಯವನನ್ನು‌ಕರೆತರಲು ಆಜ್ಞಾಪಿಸಿದನು. ಅವನನ್ನು ನೋಡಿ, "ಯೆಹೂದ ವಂಶಕ್ಕೆ ಅಯೋಗ್ಯವಾದ ಎಲೈ ಕಾನಾನ್ ವಂಶಜನೇ, ಸೌಂದರ್ಯವು ನಿನ್ನನ್ನು ಮೋಸಗೊಳಿಸಿತು ಕಾಮವು ನಿನ್ನ ಮನಸ್ಸನ್ನು ಕೆಡಿಸಿತು. ಇಸ್ರಯೇಲಿನ ಕುಲಪುತ್ರಿಯರೊಂದಿಗೆ ನೀವು ಇದೇ ರೀತಿ ವರ್ತಿಸುತ್ತಾ ಬಂದಿರಿ. ಅವರು ಅಂಜಿಕೆಯಿಂದ ನಿಮಗೆ ವಶವಾಗುತ್ತಿದ್ದರು. ಆದರೆ ಜುದೇಯದ ಈ ಕುಲಪುತ್ರಿ ಮಾತ್ರ ನಿಮ್ಮ ಅಧರ್ಮಕ್ಕೆ ಇಂಬುಕೊಡಲಿಲ್ಲ. ಈಗ ಹೇಳು, ಯಾವ ಮರದ ಕೆಳಗೆ ಇವರು ಕೂಡಿದ್ದನ್ನು ನೀನು ಕಂಡುಹಿಡಿದೆ?" ಎಂದನು. ಅವನು, "ಕಡವಾಲ ಮರದ ಕೆಳಗೆ' ಎಂದು ಉತ್ತರಕೊಟ್ಟ. ಆಗ ದಾನಿಯೇಲನು, "ನೀನು ಸಹ ನಿನ್ನ ಕುತ್ತಿಗೆಗೆ ವಿರುದ್ಧ ಚೆನ್ನಾಗಿ ಸುಳ್ಳಾಡಿದೆ. ನಿನ್ನನ್ನು ಕಡಿದು ಎರಡು ಹೋಳಾಗಿ ಮಾಡಿ ನಿಮ್ಮಿಬ್ಬರನ್ನೂ ನಾಶಮಾಡಲು ದೇವದೂತನು ಕೈಯಲ್ಲಿ ಕತ್ತಿಹಿಡಿದು ಕಾದಿದ್ಧಾನೆ," ಎಂದು ನುಡಿದನು. ಕೂಡಿದ್ದ ಸಭಿಕರೆಲ್ಲರು ಆಗ ಗಟ್ಟಿಯಾಗಿ ಕೂಗುತ್ತಾ, ತನ್ನಲ್ಲಿ ಭರವಸೆಯಿಟ್ಟವರನ್ನು ಸಂರಕ್ಷಿಸಿ ಕಾಪಾಡುವ ದೇವರನ್ನು ಕೊಂಡಾಡಿದರು. ಅಲ್ಲದೆ, ದಾನಿಯೇಲನು ಆ ಇಬ್ಬರು ಹಿರಿಯರನ್ನು ಸುಳ್ಳು ಸಾಕ್ಷಿಗಳೆಂದು ತೋರಿಸಿಕೊಟ್ಟ ಕಾರಣ, ಸಭಿಕರು ಅವರ ವಿರುದ್ಧ ಎದ್ದು ನಿಂತು ಪ್ರತಿಭಟಿಸಿದರು. ಹೊಟ್ಟೆಕಿಚ್ಚಿನಿಂದ ನೆರೆಯವರ ಮೇಲೆ ಏನು ದಂಡನೆ ತೆರಬೇಕೆಂದಿದ್ದರೋ ಅದನ್ನೇ ಮೋಶೆಯ ಧರ್ಮಶಾಸ್ತ್ರದ ಪ್ರಕಾರ ಅವರ ಮೇಲೆ ತಂದು, ಅವರನ್ನು ಕೊಲ್ಲಿಸಿದರು. ಹೀಗೆ ನಿರ್ದೋಷಿಯ ರಕ್ತ, ಅಂದು ಸುರಕ್ಷಿತವಾಯಿತು.

ಕೀರ್ತನೆ: 23:1-3, 3-4, 5, 6 

ಶ್ಲೋಕ: ಕಾರ್ಗತ್ತಲ ಕಣಿವೆಯಲಿ ನಾ ನಡೆವಾಗಲು ಕಾಣನೆಂದಿಗೂ ನಾ ದಿಗಿಲನು, ನೀನಿರಲು ನನ್ನೊಂದಿಗೆ 

ಶುಭಸಂದೇಶ: ಯೊವಾನ್ನ 8:12-20 

ಯೇಸುಸ್ವಾಮಿ ಜನರನ್ನು ಕಂಡು ಹೀಗೆಂದರು: "ನಾನೇ ಜಗಜ್ಯೋತಿ, ನನ್ನನ್ನು ಹಿಂಬಾಲಿಸುವವನು ಕತ್ತಲಲ್ಲಿ ನಡೆಯುವುದಿಲ್ಲ. ಜೀವದಾಯಕ ಜ್ಯೋತಿ ಅವನಲ್ಲಿರುತ್ತದೆ." ಅದಕ್ಕೆ ಫರಿಸಾಯರು, "ಈಗ ನೀನು ನಿನ್ನ ಪರವಾಗಿಯೇ ಸಾಕ್ಷಿ ನೀಡುತ್ತಿರುವೆ, ಅಂಥ ಸಾಕ್ಷಿಗೆ ಬೆಲೆಯಿಲ್ಲ," ಎಂದರು. ಅದಕ್ಕೆ ಯೇಸು, "ನಾನೇ ನನ್ನ ಪರವಾಗಿ ಸಾಕ್ಷಿ ನೀಡಿದರೂ ನನ್ನ ಸಾಕ್ಷಿಗೆ ಬೆಲೆಯುಂಟು. ಏಕೆಂದರೆ, ನಾನು ಎಲ್ಲಿಂದ ಬಂದೆ, ಎಲ್ಲಿಗೆ ಹೋಗುತ್ತಿರುವೆ, ಎಂದು ನನಗೆ ತಿಳಿದಿದೆ. ನಿಮಗಾದರೋ ನಾನು ಬಂದುದು ಎಲ್ಲಿಂದ, ಹೋಗುವುದು ಎಲ್ಲಿಗೆ' ಎಂದು ತಿಳಿಯದು. ನೀವು ತೀರ್ಪು ಕೊಡುವುದು ಲೋಕದ ದೃಷ್ಟಿಯಿಂದ. ನಾನಾದರೋ ಯಾರ ಬಗ್ಗೆಯೂ ತೀರ್ಪು ಕೊಡಲು ಹೋಗುವುದಿಲ್ಲ. ನಾನು ತೀರ್ಪು ಕೊಟ್ಟರೂ ಅದು ಯಥಾರ್ಥವಾದುದು. ಕಾರಣ, ತೀರ್ಪು ಕೊಡುವವನು ನಾನೊಬ್ಬನೇ ಅಲ್ಲ; ನನ್ನನ್ನು ಕಳುಹಿಸಿದ ಪಿತ ಸಹ ನನ್ನೊಡನೆ ಇದ್ದಾರೆ. ಇಬ್ಬರ ಸಾಕ್ಷ್ಯ ಒಂದೇ ಆಗಿದ್ದರೆ ಅದು ಸತ್ಯವೆಂದು ನಿಮ್ಮ ಧರ್ಮಶಾಸ್ತ್ರದಲ್ಲಿಯೇ ಬರೆದಿದೆ. ನಾನು ನನ್ನ ಪರವಾಗಿ ಸಾಕ್ಷಿ ಹೇಳುತ್ತೇನೆ; ನನ್ನನ್ನು ಕಳುಹಿಸಿದ ಪಿತ ಸಹ ನನ್ನ ಪರವಾಗಿ ಸಾಕ್ಷಿ ಹೇಳುತ್ತಾರೆ," ಎಂದು ನುಡಿದರು.  ಅದಕ್ಕೆ ಅವರು, "ನಿನ್ನ ಪಿತನೆಲ್ಲಿ?" ಎಂದು ಕೇಳಿದರು. ಯೇಸು, "ನೀವು ನನ್ನನ್ನು ಅರಿತಿಲ್ಲ, ನನ್ನ ಪಿತನನ್ನೂ ಅರಿತಿಲ್ಲ. ನೀವು ನನ್ನನ್ನು ಅರಿತಿದ್ದರೆ, ನನ್ನ ಪಿತನನ್ನೂ ಅರಿಯುತ್ತಿದ್ಧಿರಿ," ಎಂದರು. ಮಹಾದೇವಾಲಯದೊಳಗೆ ಕಾಣಿಕೆ ಪೆಟ್ಟಿಗೆಗಳನ್ನಿಟ್ಟ ಕೋಣೆಯಲ್ಲಿ ಯೇಸು ಮಾತಾಡುತ್ತಾ ಹೇಳಿದ ಮಾತುಗಳಿವು. ಅವರ ಗಳಿಗೆ ಇನ್ನೂ ಬಾರದಿದ್ದ ಕಾರಣ ಯಾರೂ ಅವರನ್ನು ಬಂಧಿಸಲಿಲ್ಲ.

ಮನಸಿಗೊಂದಿಷ್ಟು : ಜೀವನದ ಎಷ್ಟೋ ಸಮಸ್ಯೆಗಳಿಗೆ ಮಾನವ ಮಿತಿಯ ಜ್ಞಾನದಿಂದ ಉತ್ತರವಿಲ್ಲ.  ಆದರಿಂದಲೇ ಕತ್ತಲಲ್ಲಿರುವವನಿಗೆ ಬೆಳಕು ಅಗತ್ಯ. ಆ ಅಗತ್ಯ ಬೆಳಕು ನಾನೇ ಎನ್ನುತ್ತಾರೆ ಯೇಸು. ಆ ಬೆಳಕನ್ನು ಅರಿಯುತ್ತಾ, ಅದರಲ್ಲೇ ನಡೆಯುವ ಮನಸು ನಮ್ಮದಾದಾಗ ನಾವು ಎಡವುವುದಿಲ್ಲ. ಎಡವಿದರೂ ಎದ್ದು ನಡೆಯಲು ಬೇಕಾದ ದಾರಿ ಪ್ರಕಾಶಮಾನ. ಬೆಳಕತ್ತ ಸಾಗೋಣ, ಕತ್ತಲು ಬೆನ್ನ ಹಿಂದಿರುತ್ತದೆ.

ಪ್ರಶ್ನೆ : ನಾವು ಬೆಳಕತ್ತ ಮುಖ ಮಾಡಿದ್ದೇವೆಯೇ ಅಥವಾ ಬೆನ್ನು ತೋರಿಸುತ್ತಿದ್ದೇವೆಯೇ?

07.04.2019 - "ಇನ್ನು ಮೇಲೆ ಪಾಪ ಮಾಡಬೇಡ,"

ಮೊದಲನೇ ವಾಚನ: ಯೆಶಾಯ 43:16-21


ಸಮುದ್ರದ ಮಧ್ಯೆ ದಾರಿ ಮಾಡಿದವನಾರೋ, ಭೋರ್ಗರೆವ ಜಲರಾಶಿಗಳಲ್ಲಿ ಮಾರ್ಗ- ಬೇರ್ಪಡಿಸಿದವನಾರೋ, ಅಶ್ವರಥಭಟಸೈನ್ಯಗಳನ್ನು ಹೊರಡಿಸಿದವನಾರೋ, ಅವು ಬಿದ್ದು ಏಳಲಾಗದೆ, ಬತ್ತಿ ಕರಗಿ ಹೋಗುವಂತೆ ಮಾಡಿದವನಾರೋ, ಆ ಸ್ವಾಮಿ ಸರ್ವೇಶ್ವರ ನುಡಿದ ಮಾತಿದೋ: "ಗತಿಸಿಹೋದ ಘಟನೆಗಳನ್ನು ನೆನೆಯಬೇಕಾಗಿಲ್ಲ. ಪುರಾತನ ಕಾರ್ಯಗಳ ನೆನಪಿಸಿಕೊಳ್ಳಬೇಕಾಗಿಲ್ಲ. ಇಗೋ, ನೂತನ ಕಾರ್ಯವನು ನಾನೆಸಗುವೆ, ಈಗಲೇ ಅದು ತಲೆದೋರುತಲಿದೆ, ನಿಮಗೆ ಕಾಣುವುದಿಲ್ಲವೆ? ಮಾರ್ಗವನ್ನು ಏರ್ಪಡಿಸಿರುವೆ ಮರಭೂಮಿಯಲಿ, ಹರಿಸುವೆ ತೊರೆಗಳನ್ನು ಅರಣ್ಯದಲಿ. ಕಾಡುಮೃಗಗಳು, ನರಿ, ಉಷ್ಟ್ರಪಕ್ಷಿಗಳು ಕೂಗಿ ಕೊಂಡಾಡುವುವು ನನ್ನನ್ನು. ಏಕೆನೆ ಕೊಡುವೆ ನೀರನ್ನು ಮರುಭೂಮಿಯಲಿ, ಹರಿಸುವೆನು ತೊರೆನದಿಗಳನ್ನು ಅರಣ್ಯದಲಿ. ನಾ ಸೃಷ್ಟಿಸಿದ ಆಪ್ತ ಜನಕೆ ನೀಡುವೆನು ಜಲಪಾನವನು; ಎಂದೇ ಸ್ತುತಿಸಿಕೊಂಡಾಡುವರು ನನ್ನನ್ನು."

ಕೀರ್ತನೆ: 126:1-2, 2-3, 4-5, 6

ಶ್ಲೋಕ: ಪ್ರಭು ನಮಗೆ ಮಹತ್ಕಾರ್ಯ ಮಾಡಿದರು ಖಚಿತ ಎಂತಲೇ ನಾವಾನಂದಭರಿತರಾಗುವುದು ಉಚಿತ

ಎರಡನೇ ವಾಚನ: ಫಿಲಿಪ್ಪಿಯರಿಗೆ 3:8-14

ಪ್ರಭು ಯೇಸುಕ್ರಿಸ್ತರನ್ನು ಅರಿತುಕೊಳ್ಳುವುದೇ ಉತ್ಕೃಷ್ಟವಾದುದೆಂದು ಮನದಟ್ಟಾಗಿರುವುದರಿಂದ ಸಮಸ್ತವನ್ನು ವ್ಯರ್ಥವೆಂದೇ ಎಣಿಸುತ್ತೇನೆ. ಅವರನ್ನು ಲಭ್ಯವಾಗಿಸಿಕೊಳ್ಳುವ ಸಲುವಾಗಿ ಎಲ್ಲವನ್ನೂ ತೊರೆದುಬಿಟ್ಟಿದ್ದೇನೆ. ಎಲ್ಲವನ್ನೂ ಕಸವೆಂದೇ ಪರಿಗಣಿಸುತ್ತೇನೆ. ಧರ್ಮಶಾಸ್ತ್ರದ ಪಾಲನೆಯಿಂದ ದೊರಕುವ, ನನ್ನದೇ ಎಂದು ಹೇಳಿಕೊಳ್ಳಬಹುದಾದ ಸತ್ಸಂಬಂಧ ಯಾವುದೂ ನನಗಿಲ್ಲ. ಪ್ರತಿಯಾಗಿ,  ನಾನು ಕ್ರಿಸ್ತಯೇಸುವಿನಲ್ಲಿಟ್ಟಿರುವ ವಿಶ್ವಾಸದ ಪ್ರಯುಕ್ತ ದೇವರೊಂದಿಗೆ ಸರಿಯಾದ ಸತ್ಸಂಬಂಧವನ್ನು ಹೊಂದಿದ್ದೇನೆ. ಈ ಸಂಬಂಧವು ದೇವರು ನನಗೆ ದಯಪಾಲಿಸಿರುವ ಅನುಗ್ರಹ. ನನ್ನ ವಿಶ್ವಾಸದ ಆಧಾರದ ಮೇಲೆ ಅವರೇ ನೀಡಿರುವ ಕೃಪಾವರ. ಯೇಸುಸ್ವಾಮಿಯನ್ನು ಅರಿಯಬೇಕು; ಅವರ ಪುನರುತ್ದಾನದ ಪ್ರಭಾವವನ್ನು ಅನುಭವಿಸಬೇಕು; ಅವರ ಯಾತನೆಗಳಲ್ಲಿ ಪಾಲುಗೊಳ್ಳಬೇಕು; ಅವರ ಮರಣದಲ್ಲಿ ಅವರಂತೆಯೇ ಆಗಬೇಕು - ಇದೇ ನನ್ನ ಹೆಬ್ಬಯಕೆ. ಹೀಗೆ ನಾನೂ ಸಹ ಮೃತ್ಯುಂಜಯನಾಗುತ್ತೇನೆ ಎಂಬುದೇ ನನ್ನ ನಂಬಿಕೆ - ನಿರೀಕ್ಷೆ. ಈಗಾಗಲೇ ನಾನಿದೆಲ್ಲವನ್ನೂ ಸಾಧಿಸಿದ್ದೇನೆ, ಪರಿಪೂರ್ಣತೆಯನ್ನು ಗಳಿಸಿದ್ದೇನೆ. ಎಂದು ನೀವು ಭಾವಿಸಬಾರದು. ಕ್ರಿಸ್ತಯೇಸು ನನ್ನನ್ನು ಯಾವುದಕ್ಕಾಗಿ ತಮ್ಮವನ್ನಾಗಿ ಮಾಡಿಕೊಂಡರೋ, ಅದನ್ನು ನನ್ನದಾಗಿಸಿಕೊಳ್ಳಲು ನಾನು ಪ್ರಯತ್ನಿಸುತ್ತಿದ್ದೇನೆ. ಸಹೋದರರೇ, ಆ ಗುರಿಯನ್ನು ತಲುಪಿದ್ದೇನೆಂದು ನಾನೆಂದೂ  ಹೇಳಿಕೊಂಡಿಲ್ಲ. ಆದರೆ ಇದು ನಿಜ. ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು, ಮುಂದಿನವುಗಳ ಮೇಲೆ  ಕಣ್ಣಿಟ್ಟು ನಾನು ಓಡುತ್ತಿದ್ದೇನೆ. ಮೇಲಣ ಬಹುಮಾನವನ್ನು ಪಡೆಯಲೆಂದು ದೇವರು ನನಗೆ ಕ್ರಿಸ್ತಯೇಸುವಿನ ಮುಖಾಂತರ ಕರೆನೀಡಿದ್ದಾರೆ. ಆ ಗುರಿಯನ್ನು ತಲುಪಲೆಂದೇ ನಾನು ಮುಂದೋಡುತ್ತಲಿದ್ದೇನೆ.

ಶುಭಸಂದೇಶ: ಯೊವಾನ್ನ 8:1-11

ಯೇಸುಸ್ವಾಮಿ ಓಲಿವ್ ಗುಡ್ಡಕ್ಕೆ ಹೋದರು. ಮರುದಿನ ಮುಂಜಾನೆ ಅವರು ಮತ್ತೆ ಮಹಾದೇವಾಲಯಕ್ಕೆ ಬಂದರು. ಜನರು ಸುತ್ತಲೂ ಬಂದು ನೆರೆಯಲು ಯೇಸು ಕುಳಿತುಕೊಂಡು ಭೋಧಿಸತೊಡಗಿದರು. ಆಗ ಧರ್ಮಶಾಸ್ತ್ರಿಗಳೂ ಫರಿಸಾಯರೂ ಒಬ್ಬ ಹೆಂಗಸನ್ನು ಅಲ್ಲಿಗೆ ಕರೆತಂದರು; ಅವಳು ವ್ಯಭಿಚಾರಮಾಡುತ್ತಿದ್ದಾಗಲೇ ಸಿಕ್ಕಿಬಿದ್ದಿದ್ದಳು. ಅವಳನ್ನು ಎಲ್ಲರ ಮಂದೆ ನಿಲ್ಲಿಸಿ, "ಭೋಧಕರೇ, ಈ ಹೆಂಗಸು ವ್ಯಭಿಚಾರಮಾಡುತ್ತಿದ್ದಾಗಲೇ ಸಿಕ್ಕಿಬಿದ್ದಳು. ಇಂಥವರನ್ನು ಕಲ್ಲೆಸೆದು ಕೊಲ್ಲಬೇಕೆಂದು ಮೋಶೆಯೇ ಧರ್ಮಶಾಸ್ತ್ರದಲ್ಲಿ ವಿಧಿಸಿದ್ದಾನೆ. ಈ ಕುರಿತು ನಿಮ್ಮ ಅಭಿಪ್ರಾಯವೇನು?" ಎಂದು ಪ್ರಶ್ನಿಸಿದರು. ಯೇಸುವನ್ನು ಮಾತಿನಲ್ಲಿ ಸಿಕ್ಕಿಸಿ ಅವರ ಮೇಲೆ ತಪ್ಪುಹೊರಿಸಬೇಕೆಂಬುದೇ ಅವರ ಉದ್ಧೇಶವಾಗಿತ್ತು. ಯೇಸುವಾದರೋ ಬಗ್ಗಿಕೊಂಡು ಬೆರಳಿನಿಂದ ಮರಳ ಮೇಲೆ ಏನೆನೋ ಬರೆಯುತ್ತಾ ಕುಳಿತರು. ಬಂದವರಾದರೋ ಮೇಲಿಂದ ಮೇಲೆ ಪ್ರಶ್ನೆ ಹಾಕುತ್ತಲೇ ಇದ್ದರು.

ಆಗ ಯೇಸು ನೆಟ್ಟಗೆ ಕುಳಿತು, "ನಿಮ್ಮಲ್ಲಿ ಪಾಪ ಮಾಡದವನು ಯಾವನೋ ಅಂಥವನು ಇವಳ ಮೇಲೆ ಮೊದಲನೆಯ ಕಲ್ಲು ಬೀರಲಿ" ಎಂದು ಹೇಳಿ, ಪುನಃ ಬಗ್ಗಿಕೊಂಡು ನೆಲದ ಮೇಲೆ ಬರೆಯತೊಡಗಿದರು. ಇದನ್ನು ಕೇಳಿದ್ದೇ ಹಿರಿಯರಿಂದ ಹಿಡಿದು ಅವರೆಲ್ಲರೂ ಒಬ್ಬೊಬ್ಬರಾಗಿ ಅಲ್ಲಿಂದ ಕಾಲುಕಿತ್ತರು. ಕೊನೆಗೆ ಅಲ್ಲಿ ಉಳಿದವರೆಂದರೆ, ಯೇಸು ಮತ್ತು ನಿಂತುಕೊಂಡಿದ್ದ ಆ ಹೆಂಗಸು. ಆಗ ಯೇಸು ತಲೆಯೆತ್ತಿ, "ತಾಯೀ, ಅವರೆಲ್ಲಾ ಎಲ್ಲಿ? ನಿನಗೆ ಯಾರೂ  ಶಿಕ್ಷೆ ವಿಧಿಸಲಿಲ್ಲವೇ?" ಎಂದು ಕೇಳಿದರು. ಅವಳು "ಇಲ್ಲ, ಸ್ವಾಮೀ," ಎಂದಳು. ಯೇಸು ಅವಳಿಗೆ, "ನಾನೂ ನಿನಗೆ ಶಿಕ್ಷೆ ವಿಧಿಸುವುದಿಲ್ಲ, ಹೋಗು; ಇನ್ನು ಮೇಲೆ ಪಾಪ ಮಾಡಬೇಡ," ಎಂದರು.

ಮನಸಿಗೊಂದಿಷ್ಟು : "ಇನ್ನು ಮೇಲೆ ಪಾಪ ಮಾಡಬೇಡ" ಎಂಬ ಯೇಸುವಿನ ಆ ಕೊನೆ ವಾಕ್ಯ, ಅವರಿಗೆ ಜನರ ಮೇಲೆ ಅದೂ ಪಾಪಿಗಳ ಮೇಲೆ ಇದ್ದ ಆತ್ಮವಿಶ್ವಾಸವನ್ನು ತೋರುತ್ತದೆ. "ಇನ್ನು ಮೇಲೆ" ಎಂಬುದರಲ್ಲೇ  ಹಿಂದಿನದರ ಬಗೆಗಿನ ಕ್ಷಮೆ, ಮುಂದಿನದರ ಬಗೆಗಿನ ಭರವಸೆಯನ್ನು ತೋರುತ್ತದೆ. ನಮ್ಮ ಪಾಪಗಳು, ತಪ್ಪುಗಳು ನಮ್ಮನ್ನು ಕೊರೆಯುತ್ತಿದ್ದರೆ, ಯೇಸುವಿನ ಈ ವಾಕ್ಯ ನಮಗೆ ಸಾಂತ್ವನ ನೀಡಬೇಕು, ಮುಂದಿನ ದಾರಿ ತೋರಬೇಕು. ಆದರೆ ಪಶ್ಚಾತ್ತಾಪದ ಮನಸು ನಮ್ಮದಾಗಬೇಕಷ್ಟೇ.

ಪ್ರಶ್ನೆ:  ನಮ್ಮದೇ ತಪ್ಪುಗಳಿದ್ದರೂ ಮತ್ತೊಬ್ಬರನ್ನು ಅದೆಷ್ಟು ಬಾರಿ ದೂಷಿಸಿದ್ದೇವಲ್ಲವೇ?

06.04.2019 - "ಆತನು ಮಾತನಾಡುವಂತೆ ಯಾರೂ ಎಂದೂ ಮಾತನಾಡಿದ್ದಿಲ್ಲ."

ಮೊದಲನೇ ವಾಚನ: ಯೆರೆಮೀಯ 11:18-20

ಸರ್ವೇಶ್ವರಸ್ವಾಮಿ ತಿಳಿಸಿದ್ದರಿಂದಲೇ ಶತ್ರುಗಳು ನನಗೆ ವಿರುದ್ಧ ಹೂಡಿದ  ಕುತಂತ್ರವು ನನಗೆ ಗೊತ್ತಾಯಿತು. ಅವರ ಕೃತ್ಯಗಳನ್ನು ನನಗೆ ತೋರಿಸಲಾಯಿತು. ನಾನಾದರೋ ವಧೆಗೆ ಒಯ್ಯುವ ಸಾಧು ಕುರಿಯಂತೆ ಇದ್ದೆ. "ಮರವನ್ನು ಫಲಸಹಿತ ನಾಶಪಡಿಸೋಣ, ಜೀವ ಲೋಕದಿಂದ ಇವನನ್ನು ನಿರ್ಮೂಲ ಮಾಡೋಣ. ಅವನ ಹೆಸರೇ ಇಲ್ಲದಂತಾಗಲಿ," ಎಂದು ಅವರು ಕುಯುಕ್ತಿ ಕಲ್ಪಿಸಿದ್ದರು. ಆದರೆ ಅದು ನನಗೆ ತಿಳಿದಿರಲಿಲ್ಲ. ಆಗ ನಾನು, "ಸೇನಾಧೀಶ್ವರರಾದ ಸರ್ವೇಶ್ವರಾ, ನೀವು ಹೃನ್ಮನಗಳನ್ನು ಪರೀಕ್ಷಿಸಿ ನ್ಯಾಯವಾದ ತೀರ್ಪನ್ನು ನೀಡುವವರು. ನೀವು ಅವರಿಗೆ ಮಾಡುವ ಪ್ರತಿಕಾರವನ್ನು ನಾನು ಕಾಣುವೆನು. ನನ್ನ ವ್ಯಾಜ್ಯವನ್ನು ನಿಮ್ಮ ಕೈಗೊಪ್ಪಿಸಿದ್ದೇನೆ," ಎಂದೆನು.

ಕೀರ್ತನೆ:7:2-3, 9-10, 11-12

ಶ್ಲೋಕ: ನಿನ್ನಾಶ್ರಯವನರಸಿ ಹೇ ಸ್ವಾಮೀ ದೇವಾ, ನಾ ಬಂದಿಹೆನು.

ಶುಭಸಂದೇಶ: ಯೊವಾನ್ನ 7:40-53

ಯೇಸುಸ್ವಾಮಿ ಹೇಳಿದ್ದನ್ನು ಕೇಳಿ ನೆರೆದಿದ್ದವರಲ್ಲಿ ಕೆಲವರು, "ಬರಬೇಕಾಗಿದ್ದ ಪ್ರವಾದಿ ಈತನೇ ಸರಿ," ಎಂದರು. ಇನ್ನೂ ಕೆಲವರು, "ಈತನೇ ಲೋಕೋದ್ಧಾರಕ," ಎಂದರು. ಮತ್ತೆ ಕೆಲವರು, "ಲೋಕೋದ್ಧಾರಕ ಗಲಿಲೇಯದಿಂದ ಬರುವುದುಂಟೇ? 'ಆತ ದಾವೀದ ವಂಶಜನು; ಆತನು ಹುಟ್ಟುವುದು ದಾವೀದನ ಊರಾದ ಬೆತ್ಲೆಹೇಮಿನಲ್ಲಿ' ಎಂದು ಪವಿತ್ರ ಗ್ರಂಥವೇ ಹೇಳಿದೆಯಲ್ಲವೆ?" ಎಂದು ವಾದಿಸಿದರು. ಹೀಗೆ ಯೇಸುವನ್ನು ಕುರಿತು ಜನರಲ್ಲಿ ಭಿನ್ನಾಭಿಪ್ರಾಯ ಉಂಟಾಯಿತು. ಕೆಲವರಿಗಂತೂ ಯೇಸುವನ್ನು ಹಿಡಿದು ಬಂಧಿಸಬೇಕೆನಿಸಿತು. ಆದರೆ ಯಾರೂ ಅವರ ಮೇಲೆ ಕೈಹಾಕಲಿಲ್ಲ. ಕಾವಲಾಳುಗಳು ಹಿಂದಿರುಗಿದಾಗ, ಮುಖ್ಯಯಾಜಕರು ಮತ್ತು ಫರಿಸಾಯರು, "ಅವನನ್ನೇಕೆ ನೀವು ಹಿಡಿದು ತರಲಿಲ್ಲ?" ಎಂದು ಕೇಳಿದರು. ಅವರು, "ಆತನು ಮಾತನಾಡುವಂತೆ ಯಾರೂ ಎಂದೂ ಮಾತನಾಡಿದ್ದಿಲ್ಲ." ಎಂದು ಉತ್ತರಿಸಿದರು. ಅದಕ್ಕೆ ಫರಿಸಾಯರು, "ಏನು, ನೀವು ಕೂಡ ಅವನಿಗೆ ಮರುಳಾಗಿಬಿಟ್ಟಿರೋ? ನಮ್ಮ ಮುಖಂಡರಲ್ಲಾಗಲಿ, ಫರಿಸಾಯರಲ್ಲಾಗಲಿ, ಯಾರಾದರೂ ಅವನನ್ನು ನಂಬಿದ್ದುಂಟೆ? ಧರ್ಮಶಾಸ್ತ್ರದ ಗಂಧವೂ ಇಲ್ಲದ ಜನಜಂಗುಳಿ ಶಾಪಗ್ರಸ್ತವಾಗಿದೆ," ಎಂದರು. ಅಲ್ಲಿದ್ದ ಫರಿ‌ಸಾಯರಲ್ಲಿ ನಿಕೋದೇಮನು ಒಬ್ಬನು. ಹಿಂದೆ ಯೇಸುವನ್ನು ಕಾಣಲು ಬಂದಿದ್ದವನು ಈತನೇ, ಈತನು ಅವರಿಗೆ, "ಒಬ್ಬ ವ್ಯಕ್ತಿಯ ಹೇಳಿಕೆಯನ್ನು ಕೇಳದೆ, ಆತನು ಮಾಡಿರುವುದನ್ನು ಕಂಡುಕೊಳ್ಳದೆ, ಆತನನ್ನು ದೋಷಿಯೆಂದು ನಿರ್ಧರಿಸುವುದು ಶಾಸ್ತ್ರಸಮ್ಮತವೇ?" ಎಂದು ಕೇಳಿದನು. ಅದಕ್ಕೆ ಅವರು, "ನೀನೂ ಗಲಿಲೇಯದವನೋ? ಪವಿತ್ರಗ್ರಂಥವನ್ನು ಓದಿ ನೋಡು; ಗಲಿಲೇಯದಿಂದ ಯಾವ ಪ್ರವಾದಿಯೂ ತಲೆಯೆತ್ತುವುದಿಲ್ಲ, ಎಂಬುದು ನಿನಗೆ ಗೊತ್ತಾಗುತ್ತದೆ," ಎಂದು ಉತ್ತರ ಕೊಟ್ಟರು. ಬಳಿಕ ಎಲ್ಲರೂ ತಮ್ಮತಮ್ಮ ಮನೆಗಳಿಗೆ ತೆರಳಿದರು.

05.04.2019 - "ನಾನು ಬಂದುದು ಆತನಿಂದಲೇ. ಆತನೇ ನನ್ನನ್ನು ಕಳುಹಿಸಿದ್ದು,"

ಮೊದಲನೇ ವಾಚನ: ಸುಜ್ಞಾನ ಗ್ರಂಥ 2:1, 12-22


ದೇವರಿಲ್ಲದವರು ಅಪವಾದ ಮಾಡಿಕೊಂಡರು ಈ ಪರಿ: "ನಮ್ಮ ಬದುಕು ಅಲ್ಪಕಾಲಿಕ ಹಾಗು ದುಃಖಕರ, ಮರಣಕ್ಕೆ ಮದ್ದಿಲ್ಲ, ಸತ್ತವರಿಂದ ಹಿಂದಿರುಗಿದವರಿಲ್ಲ. ನೀತಿವಂತನಿಗಾಗಿ ಹೊಂಚುಹಾಕೋಣ ಬಲೆಯೊಡ್ಡಿ, ಅವನು ನಮಗೊಂದು ಪೀಡೆ, ನಮ್ಮ ನಡತೆಗೆ ಅಡ್ಡಿ. ಆರೋಪಿಸುತ್ತಾನೆ, ಧರ್ಮಕ್ಕೆ ವಿರುದ್ಧ ಪಾಪಕಟ್ಟಿಕೊಂಡೆವೆಂದು ದೂಷಿಸುತ್ತಾನೆ, ಸಂಪ್ರದಾಯದ ವಿರುದ್ಧ ಪಾಪ ಮಾಡಿದೆವೆಂದು, ಹೇಳಿಕೊಳ್ಳುತ್ತಾನೆ ತಾನೇ ದೇವರನ್ನು ಬಲ್ಲವನೆಂದು, ಕರೆದುಕೊಳ್ಳುತ್ತಾನೆ ತನ್ನನ್ನು ತಾನೇ ದೇವರ ಮಗನೆಂದು ನಮ್ಮ ಆಲೋಚನೆಗಳನ್ನು ಆಕ್ಷೇಪಿಸುವ ವ್ಯಕ್ತಿ ಅವನು, ಅವನನ್ನು ನೋಡಿದ್ದೇ ನಮ್ಮ ಉಲ್ಲಾಸ ಕುಂದಿಹೋಗುವುದು. ಏಕೆಂದರೆ ಅವನು ಇತರರಂತೆ ಅಲ್ಲ, ಅವನ ಮಾರ್ಗವೋ ನಮಗೆ ವಿಚಿತ್ರ, ಅವನ ಎಣಿಕೆಯಲ್ಲಿ ನಾವೆಲ್ಲರು ನಕಲಿ ನಾಣ್ಯದಂತೆ, ನಮ್ಮಿಂದ ದೂರವಾಗುತ್ತಾನೆ ಹೇಸಿಕೆಯನ್ನು ಕಂಡಂತೆ. ನೀತಿವಂತರ ಮರಣ ಸಂತೋಷಕರವೆನ್ನುತ್ತಾನೆ, ದೇವರೇ ತನ್ನ ತಂದೆಯೆಂದು ಕೊಚ್ಚಿಕೊಳ್ಳುತ್ತಾನೆ. ಅವನ ಮಾತುಗಳೇ ಸತ್ಯವೇನೋ ನೋಡೋಣ, ಅವನ ಜೀವಾಂತ್ಯದ ಗತೆ ಏನೆಂದು ಪರೀಕ್ಷಿಸೋಣ ನೀತಿವಂತ ದೇವಕುಮಾರನಾಗಿದ್ದರೆ ದೇವರು ಅವನಿಗೆ ನೆರವಾಗಬೇಕು, ಶತ್ರುಗಳ ಕೈಯಿಂದ ಅವನನ್ನು ತಪ್ಪಿಸಿ ಕಾಪಾಡಬೇಕು. ಅಂಥವನನ್ನು ಹಿಂಸಿಸಿ, ಪೀಡಿಸಿ, ಪರೀಕ್ಷಿಸೋಣ, ಅವನಲ್ಲಿ ಸೌಜನ್ಯ ಎಷ್ಟಿದೆಯೆಂದು ತಿಳಿಯೋಣ, ಅನ್ಯಾಯದೆದುರು ತಾಳ್ಮೆಯೆಷ್ಟಿದೆಯೆಂದು ಶೋಧಿಸೋಣ; ಅವಮಾನಕರ ಮರಣಶಿಕ್ಷೆಯನ್ನು ಅವನಿಗೆ ವಿಧಿಸೋಣ. "ದೇವರು ರಕ್ಷಿಸುತ್ತಾನೆ" ಎಂದಾಗಿತ್ತಲ್ಲವೇ ಅವನ ವಾದ?" ಈ ಪರಿ ಆಲೋಚಿಸಿ ವಂಚಿತರಾದವರು ದುರುಳರು. ಅವರ ದುಷ್ಟತನವೇ ಅವರನ್ನು ಕುರುಡರನ್ನಾಗಿಸಿತು. ದೇವರ ನಿಗೂಢ ಯೋಜನೆಯನ್ನು ಅವರು ಅರಿಯಲಿಲ್ಲ ಪವಿತ್ರ  ಜೀವನಕ್ಕೆ ದೊರಕುವ ಫಲವನ್ನು ಹಾರೈಸಲಿಲ್ಲ, ನಿರ್ದೋಷಿಗಳಿಗೆ ಸಂಭಾವನೆಯಿದೆಯೆಂದು ನಂಬಲಿಲ್ಲ.

ಕೀರ್ತನೆ: 34:17-18, 19-20, 21, 23

ಶ್ಲೋಕ: ಸನಿಹದಲ್ಲಿಹನು ಪ್ರಭು ಬಗ್ನ ಹೃದಯಿಗಳಿಗೆ

ಶುಭಸಂದೇಶ: ಯೊವಾನ್ನ 7:1-2, 10, 25-30

ಇದಾದ ಬಳಿಕ ಯೇಸುಸ್ವಾಮಿ ಗಲಿಲೇಯದಲ್ಲಿ ಸಂಚರಿಸತೊಡಗಿದರು. ಯೆಹೂದ್ಯರು ತಮ್ಮನ್ನು ಕೊಲ್ಲಲು ಹವಣಿಸುತ್ತಿದ್ದುದರಿಂದ ಜುದೇಯದಲ್ಲಿ ಸಂಚರಿಸಲು ಅವರು ಇಷ್ಟಪಡಲಿಲ್ಲ. ಯೆಹೂದ್ಯರ ಪರ್ಣಕುಟೀರಗಳ ಹಬ್ಬವುಳತ್ತಿರವಾಗುತ್ತಿತ್ತು. ಯೇಸುವಿನ ಸೋದರರು ಹಬ್ಬಕ್ಕೆ ಹೋದರು. ಯೇಸುವೂ ಅಲ್ಲಿಗೆ ಹೋದರು. ಬಹಿರಂಗವಾಗಿ ಅಲ್ಲ, ಗುಟ್ಟಾಗಿ. ಜೆರುಸಲೇಮಿನ ಕೆಲವು ಮಂದಿ ಇದನ್ನು ಕೇಳಿ, "ಅವರು ಕೊಲ್ಲಬೇಕೆಂದು ಹವಣಿಸುತ್ತಾ ಇರುವುದು ಈತನನ್ನೇ ಅಲ್ಲವೆ? ಇಗೋ, ಈತ ಬಹಿರಂಗವಾಗಿ ಮಾತನಾಡುತ್ತಿದ್ದಾನೆ. ಆದರೂ ಈತನಿಗೆ ವಿರುದ್ಧವಾಗಿ ಅವರಾರೂ ಮಾತೆತ್ತುತ್ತಿಲ್ಲ! ಈತನೇ ಲೋಕೋದ್ಧರಕನೆಂದು ಆ ಮುಖಂಡರಿಗೆ ಹೊಳೆದಿರಬಹುದೆ? ಲೋಕೋದ್ಧಾರಕನು ಕಾಣಿಸಿಕೊಳ್ಳುವಾಗ ಆತನು ಎಲ್ಲಿಂದ ಬಂದವನೆಂದು  ಯಾರಿಗೂ ತಿಳಿದಿರುವುದಿಲ್ಲ. ಆದರೆ ಈತನು ಎಲ್ಲಿಂದ ಬಂದವನೆಂದು ನಮಗೆಲ್ಲರಿಗೂ ತಿಳಿದಿದೆಯಲ್ಲಾ!" ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. ಆದುದರಿಂದ ದೇವಾಲಯದಲ್ಲಿ ಭೋಧಿಸುತ್ತಿದ್ದ ಯೇಸುಸ್ವಾಮಿ ಗಟ್ಟಿಯಾಗಿ ಇಂತೆಂದರು: "ನಾನು ಯಾರೆಂದು, ಎಲ್ಲಿಂದ ಬಂದವನೆಂದು ನೀವು ಬಲ್ಲಿರೋ? ನಾನು ನನ್ನಷ್ಟಕ್ಕೇ ಬಂದವನಲ್ಲ; ನನ್ನನ್ನು ಕಳುಹಿಸಿದಾತನು ಸತ್ಯಸ್ವರೂಪಿ, ಆತನನ್ನು ನೀವು ಅರಿತಿಲ್ಲ. ನಾನಾದರೋ ಆತನನ್ನು ಅರಿತಿದ್ದೇನೆ. ಏಕೆಂದರೆ, ನಾನು ಬಂದುದು ಆತನಿಂದಲೇ. ಆತನೇ ನನ್ನನ್ನು ಕಳುಹಿಸಿದ್ದು," ಇದನ್ನು ಕೇಳಿದ ಯೆಹೂದ್ಯರು ಯೇಸುವನ್ನು ಹಿಡಿದು ಬಂಧಿಸಲು ಪ್ರಯತ್ನಿಸಿದರು. ಆದರೆ ಅವರ ಗಳಿಗೆ ಇನ್ನೂ ಬಾರದೆ ಇದ್ದ ಕಾರಣ ಯಾರೂ ಅವರ ಮೇಲೆ ಕೈಹಾಕಲಿಲ್ಲ.

04.04.2019 - "ನಾನು ಮನುಷ್ಯರಿಂದ ಬರುವ ಗೌರವವನ್ನು ಅರಸುವುದಿಲ್ಲ"

 ಮೊದಲನೇ ವಾಚನ: ವಿಮೋಚನಾಕಾಂಡ 32:7-14 


ಇತ್ತ ಸರ್ವೇಶ್ವರ ಮೋಶೆಗೆ, "ನೀನು ಕೂಡಲೆ ಬೆಟ್ಟದಿಂದ ಇಳಿದು ಹೋಗು. ಈಜಿಪ್ಟಿನಿಂದ ನೀನು ಕರೆದು ತಂದ ನಿನ್ನ ಜನರು ಕೆಟ್ಟುಹೋದರು. ನಾನು ಅವರಿಗೆ ಆಜ್ಞಾಪಿಸಿದ ಮಾರ್ಗವನ್ನು ಇಷ್ಟು ಬೇಗನೆ ತೊರೆದುಬಿಟ್ಟು ತಮಗೆ ಲೋಹದ ಹೋರಿ ಕರುವನ್ನು ಮಾಡಿಸಿಕೊಂಡು, ಅದಕ್ಕೆ ಅಡ್ಡಬಿದ್ದು, ಬಲಿಗಳನ್ನರ್ಪಿಸಿ, "ಇಸ್ರಯೇಲರೇ ನೋಡಿ, ನಿಮ್ಮನ್ನು ಈಜಿಪ್ಟಿನಿಂದ ಕರೆದು ತಂದ ದೇವರು" ಎಂದು ಹೇಳಿಕೊಳ್ಳುತ್ತಿದ್ದಾರೆ. "ಈ ಜನರ ಸ್ವಭಾವ ನನಗೆ ಗೊತ್ತಿದೆ. ಇವರು ನನ್ನ ಆಜ್ಞೆಗೆ ಬಗ್ಗದ ಹಟಮಾರಿಗಳು. ಆದಕಾರಣ ನೀನು ನನಗೆ ಅಡ್ಡ ಬರಬೇಡ. ನನ್ನ ಕೋಪಾಗ್ನಿ ಉರಿಯಲಿ. ಅವರನ್ನು ಸುಟ್ಟು ಭಸ್ಮ ಮಾಡುವೆನು. ಬಳಿಕ ನಿನ್ನಿಂದಲೇ ಬೇರೆ ಒಂದು ದೊಡ್ಡ ಜನಾಂಗ ಉದಯಿಸುವಂತೆ ಮಾಡುವೆನು," ಎಂದು ಹೇಳಿದರು ಆಗ ಮೋಶೆ ತನ್ನ ದೇವರಾದ ಸರ್ವೇಶ್ವರನನ್ನು ಹೀಗೆಂದು ಬೇಡಿಕೊಂಡನು: "ಸ್ವಾಮಿ ಸರ್ವೇಶ್ವರಾ, ಮಹಾಶಕ್ತಿಯಿಂದಲೂ ಭುಜಬಲದಿಂದಲೂ ತಾವೇ ಈಜಿಪ್ಟಿನಿಂದ ಬಿಡಿಸಿದ ತಮ್ಮ ಪ್ರಜೆಯ ಮೇಲೆ ಕೋಪಾಗ್ನಿ ಕಾರಬಹುದೆ? ತಾವು ಕೋಪಾಗ್ನಿಯನ್ನು ಬಿಟ್ಟು, ತಮ್ಮ ಪ್ರಜೆಗೆ ಕೇಡು ಮಾಡಬೇಕೆಂಬ ಮನಸ್ಸನ್ನು ಮಾರ್ಪಡಿಸಿಕೊಳ್ಳಿ. ತಮ್ಮ ದಾಸರಾದ ಅಬ್ರಹಾಮ್, ಇಸಾಕ್, ಹಾಗು ಯಕೋಬರನ್ನು ನೆನಪಿಗೆ ತಂದುಕೊಳ್ಳಿ ತಾವು ತಮ್ಮ ಜೀವದಾಣೆ ಪ್ರಮಾಣ ಮಾಡಿ ಅವರಿಗೆ, "ನಾನು ನಿಮ್ಮ ಸಂತತಿಯನ್ನು ಹೆಚ್ಚಿಸಿ ಆಕಾಶದ ನಕ್ಷತ್ರಗಳಷ್ಟು ಅಸಂಖ್ಯವಾಗಿ ಮಾಡುವೆನು; ನಾನು ಸೂಚಿಸಿರುವ ಈ ಪ್ರದೇಶಗಳನ್ನೆಲ್ಲಾ ನಿಮ್ಮ ಸಂತತಿಯವರಿಗೆ ಕೊಡುವೆನು; ಮತ್ತು ಅವರು ಈ ನಾಡನ್ನು ಶಾಶ್ವತವಾಗಿ ಸ್ವಾಧೀನದಲ್ಲಿಟ್ಟುಕೊಳ್ಳುವರು" ಎಂದು ನಾವು ಮಾತುಕೊಡಲಿಲ್ಲವೇ" ಎಂದನು. ಆಗ ಸರ್ವೇಶ್ವರ ತಮ್ಮ ಪ್ರಜೆಗಳಿಗೆ ಮಾಡುವೆನೆಂದು ಹೇಳಿದ ಕೇಡಿನ ಬಗ್ಗೆ ಮನಸ್ಸನ್ನು ಮಾರ್ಪಡಿಸಿಕೊಂಡರು. 

ಕೀರ್ತನೆ: 106:19-20,  21-22, 23 

ಶ್ಲೋಕ: ಮರೆಯಬೇಡವೆನ್ನ ಪ್ರಭೂ, ನಿನ್ನ ಪ್ರಜೆಗೆ ದಯೆತೋರುವಾಗ 

ಶುಭಸಂದೇಶ:ಯೊವಾನ್ನ 5:31-47 

"ನನ್ನ ಪರವಾಗಿ ನಾನೇ ಸಾಕ್ಷಿ ನೀಡಿದರೆ ನನ್ನ ಸಾಕ್ಷಿಗೆ ಬೆಲೆಯಿರದು. ನನ್ನ ಪರವಾಗಿ ಸಾಕ್ಷಿ ನೀಡುವಾತನು ಇನ್ನೊಬ್ಬನಿದ್ದಾನೆ. ಆತನು ನೀಡುವ ಸಾಕ್ಷ್ಯಕ್ಕೆ ಬೆಲೆಯಿದೆ ಎಂದು ನಾನು ಬಲ್ಲೆ. ನೀವೇ ಯೊವಾನ್ನನ ಬಳಿಗೆ ದೂತರನ್ನು ಕಳುಹಿಸಿದ್ದಿರಿ. ಆತನು ಸತ್ಯವನ್ನು ಕುರಿತು ಸಾಕ್ಷಿ ಹೇಳಿದ್ದಾನೆ ನನಗೆ ಮಾನವ ಸಾಕ್ಷಿ ಬೇಕೆಂದು ಅಲ್ಲ; ಆದರೆ ಇದನ್ನೆಲ್ಲಾ ನಿಮ್ಮ ಉದ್ಧಾರಕೆಂದು ನಾನು ಹೇಳುತ್ತಿದ್ದೇನೆ. ಯೊವಾನ್ನನು ಉಜ್ವಲವಾಗಿ ಉರಿಯುವ ದೀಪದಂತೆ ಇದ್ದನು. ಆ ಬೆಳಕಿನಲ್ಲಿ ನೀವು ಸ್ವಲ್ಪ ಕಾಲ ನಲಿದಾಡಿದಿರಿ. ಯೊವಾನ್ನನು ನೀಡಿದ ಸಾಕ್ಷ್ಯಕ್ಕಿಂತಲೂ ಮಿಗಿಲಾದ ಸಾಕ್ಷ್ಯ ನನಗುಂಟು: ನಾನು ಸಾಧಿಸುತ್ತಿರುವ ಸುಕೃತ್ಯಗಳೇ. ಅಂದರೆ, ಪಿತನು ನನಗೆ ಮಾಡಿ ಮುಗಿಸಲು ಕೊಟ್ಟ ಕಾರ್ಯಗಳೇ, ನಾನು ಪಿತನಿಂದ ಬಂದವನೆಂದು ನನ್ನ ಪರವಾಗಿ ಸಾಕ್ಷಿಕೊಡುತ್ತದೆ. ನನ್ನನ್ನು ಕಳುಹಿಸಿದ ಪಿತನೇ ನನ್ನ ಪರವಾಗಿ ಸಾಕ್ಷಿ ನೀಡಿದ್ದಾರೆ. ನೀವಾದರೋ ಅವರ ಧ್ವನಿಯನ್ನು ಎಂದೂ ಕೇಳಿಲ್ಲ, ಅವರ ದರ್ಶನವನ್ನು ಎಂದೂ ಕಂಡಿಲ್ಲ. ಅವರ ಸಂದೇಶ ನಿಮ್ಮಲ್ಲಿ ನೆಲಸಿಲ್ಲ. ಏಕೆಂದರೆ, ಅವರು ಕಳುಹಿಸಿದವನಲ್ಲಿ ನೀವು ವಿಶ್ವಾಸವಿಡಲಿಲ್ಲ. ಪವಿತ್ರ ಗ್ರಂಥದಿಂದಲೇ ನಿತ್ಯ ಜೀವ ಲಭಿಸುವುದೆಂದು ಭಾವಿಸಿ, ನೀವು ಅದನ್ನು ಪರಿಶೀಲಿಸಿ ನೋಡುತ್ತೀರಿ. ಆ ಗ್ರಂಥವು ಸಹ ನನ್ನ ಪರವಾಗಿ ಸಾಕ್ಷಿ ಹೇಳುತ್ತದೆ. ಆದರೂ ನಿತ್ಯ ಜೀವವನ್ನು ಪಡೆಯುವುದಕ್ಕಾಗಿ ನನ್ನ ಬಳಿಗೆ ಬರಲು ನಿಮಗೆ ಇಷ್ಟವಿಲ್ಲ. "ನಾನು ಮನುಷ್ಯರಿಂದ ಬರುವ ಗೌರವವನ್ನು ಅರಸುವುದಿಲ್ಲ. ದೇವರ ಮೇಲೆ ನಿಮಗೆ ಪ್ರೀತಿಯಿಲ್ಲವೆಂದು ನಾನು ಚೆನ್ನಾಗಿ ಬಲ್ಲೆ. ನಾನು ಬಂದಿರುವುದು ಪಿತನ ಹೆಸರಿನಲ್ಲೇ. ಆದರೂ ನೀವು ನನ್ನನ್ನು ಬರಮಾಡಿಕೊಳ್ಳುವುದಿಲ್ಲ. ಬೇರೊಬ್ಬರನ್ನು ತನ್ನ ಸ್ವಂತ ಹೆಸರಿನಲ್ಲಿ ಬಂದನೆಂದರೆ ಅಂಥವನನ್ನು ನೀವು ಬರಮಾಡಿಕೊಳ್ಳುತ್ತೀರಿ. ಕಾರಣ, ದೇವರಿಂದ ಸಿಗುವಂಥ ಗೌರವವನ್ನು ಅರಸದೆ ನಿಮ್ಮ ನಿಮ್ಮಲ್ಲೇ ಪರಸ್ಪರ ಗೌರವವನ್ನು ಬಯಸುತ್ತೀರಿ. ಹೀಗಿರುವಲ್ಲಿ, ನಿಮ್ಮಲ್ಲಿ ವಿಶ್ವಾಸ ಮೂಡಲು ಹೇಗೆ ತಾನೆ ಸಾಧ್ಯ? ಪಿತನ ಮುಂದೆ ನಾನು ನಿಮ್ಮನ್ನು ಅಪಾದಿಸುತ್ತಿರುವೆನೆಂದು ಎಣಿಸಬೇಡಿ. ಅಪಾದಿಸುವವನು ಒಬ್ಬನಿದ್ದಾನೆ. ಆತನೇ ನೀವು ಆಶ್ರಯಿಸಿಕೊಂಡಿರುವ ಮೋಶೆ. ಮೋಶೆಯಲ್ಲಿ ನಿಮಗೆ ವಿಶ್ವಾಸ ಇದ್ದಿದ್ದರೆ ನನ್ನಲ್ಲಿ ವಿಶ್ವಾಸ ಇಡುತ್ತಿದ್ದಿರಿ. ಏಕೆಂದರೆ, ಆತನು ಬರೆದುದು ನನ್ನನ್ನು ಕುರಿತೇ. ಆತನು ಬರೆದುದರಲ್ಲಿ ನಿಮಗೆ ನಂಬಿಕೆಯಿಲ್ಲವೆಂದ ಮೇಲೆ ನನ್ನ ಮಾತಿನಲ್ಲಿ ನಿಮಗೆ ಹೇಗೆ ನಂಬಿಕೆ ಹುಟ್ಟೀತು?"

ಮನಸಿಗೊಂದಿಷ್ಟು : ದೈವ ಶಾಸ್ತ್ರವನ್ನು ಅಭ್ಯಾಸಿಸುವುದರಲ್ಲಿ, ಬೋಧಿಸುವುದರಲ್ಲಿ, ಅರ್ಥೈಸುವಲ್ಲಿ ಆತ್ತ್ಯುತ್ತಮರೆನಿಸಿಕೊಂಡಿದ್ದ ಯೆಹೂದ್ಯರು ಜೀವಂತ ವಾಕ್ಯವೇ ಜೊತೆಗಿದ್ದರೂ ಗುರುತಿಸದೆ ಹೋದರು. ದೈವ ವಾಕ್ಯಗಳನ್ನು ದೇವರ ಕೋನದಿಂದಲ್ಲದೆ ತಮ್ಮ ಜ್ಞಾನದ ಮೂಲಕ ಅರ್ಥೈಸುವ ಪ್ರಯತ್ನದಿಂದಾಗಿ ಅವರ ಮನಸುಗಳು ಮುಚ್ಚಿತ್ತು. ನಾವು ಸಹ ಕೇವಲ ಔಪಚಾರಿಕವಾಗಿ ಪ್ರಾರ್ಥನೆ, ಆಚರಣೆಗಳಲ್ಲಿ ಮಾತ್ರ ತೊಡಗಿಕೊಂಡು ಮನಸಿನಲ್ಲಿ ದೇವರ ಪ್ರೀತಿಯಿಲ್ಲದಿದ್ದರೆ, ಇಂದಿನ ಶುಭಸಂದೇಶದಲ್ಲಿನ ಯೇಸುವಿನ ಮಾತು ನಮಗೂ ಅನ್ವಯ.

ಪ್ರಶ್ನೆ : ನಾವು ಯಾರ ಗೌರವವನು ಹೆಚ್ಚು ಬಯಸುತ್ತಿದ್ದೇವೆ? ಮನುಷ್ಯರದ್ದೋ? ದೇವರದ್ದೋ?

03.04.2019 - "ಒಂದು ವೇಳೆ ತಾಯಿ ಮರೆತರೂ ನಾ ನಿನ್ನನ್ನು ಮರೆಯೆ."

 ಮೊದಲನೇ ವಾಚನ: ಯೆಶಾಯ  49:8-15 

ತಮ್ಮ ಪ್ರಜೆಗೆ ಇಂತೆನ್ನುತ್ತಾರೆ ಸರ್ವೇಶ್ವರಸ್ವಾಮಿ: "ನಿನಗೆ ದಯಪಾಲಿಸಿರುವೆನು ಸದುತ್ತರವನ್ನು ಪ್ರಸನ್ನತೆಯ ಕಾಲದಲಿ ಸಹಾಯ ನೀಡುವೆನು ರಕ್ಷಣೆಯ ದಿನದಲಿ ನಿನ್ನನ್ನು ಕಪಾಡಿ ನೇಮಿಸುವೆನು ಜನತೆಗೆ ಸ್ಥಿರ ಒಡಂಬಡಿಕೆಯಾಗಿ. "ಹೊರಟು ಹೋಗಿರಿ" ಎನ್ನುವೆನು ಸೆರೆಯಾಳುಗಳಿಗೆ "ಬೆಳಕಿಗೆ ಬನ್ನಿರಿ" ಎನ್ನುವೆನು ಕತ್ತಲಲ್ಲಿರುವವರಿಗೆ ಪಾಳುಬಿದ್ದ ಸೊತ್ತುಗಳನ್ನು ಹಂಚಿಕೊಡುವೆನು ಅವರಿಗೆ. ದೇಶವನ್ನು ಪುನಃ ತರುವೆನು ಪೂರ್ವಸ್ಥಿತಿಗೆ ದಾರಿಯುದ್ಧಕ್ಕೂ ಆಹಾರ ಒದಗಿಸುವೆನು ನನ್ನ ಪ್ರಜೆಗೆ ಬೋಳು ಬೆಟ್ಟಗಳೆಲ್ಲ ಹುಲ್ಲುಗಾವಲುಗಳಾಗುವುವು ನನ್ನಾ ಮಂದೆಗೆ. ಇರದು ಅವರಿಗೆ ಹಸಿವು ಬಾಯಾರಿಕೆ, ಬಡಿಯವು ಅವರಿಗೆ ಬಿಸಿಲುಬೇಗೆ. ನಡೆಸುವೆನು ನೀರುಕ್ಕುವ ಚಿಲುಮೆಗಳ ಬಳಿಗೆ, ಕರುಣಾಕರನು  ಅವರಿಗೆ. ಸಮದಾರಿಯಾಗಿಸುವೆನು ನನ್ನ ಬೆಟ್ಟಗುಡ್ಡಗಳನು, ಎತ್ತರಿಸುವೆನು ನನ್ನ ರಾಜಮಾರ್ಗಗಳನು. ನೋಡಿ, ಬರುತಿಹರು ನನ್ನ ಜನರು ದೂರದಿಂದ ಹೌದು, ಬರುತಿಹರು ಉತ್ತರ ಪಶ್ಚಿಮದಿಂದ, ದಕ್ಷಿಣದ ಆ ಆಶ್ವಾನ್ ನಾಡಿನಿಂದ. ಹರ್ಷಧ್ವನಿಗೈ ಆಕಾಶವೇ, ಉಲ್ಲಾಸಪಡು ಪೊಡವಿಯೇ, ತಟ್ಟಾಡಿರಿ ಬೆಟ್ಟಗಡ್ಡಗಳೇ, ಏಕೆನೆ ಸಂತೈಸಿಹನು ಸರ್ವೇಶ್ವರ ತನ್ನ ಪ್ರಜೆಯನು, ಕನಿಕರಿಸಿಹನು ಶೋಷಿತರಾದ ತನ್ನ ಜನರನು. ಜೆರುಸಲೇಮಿನ ಜನರಾದರೋ ಇಂತೆಂದರು: ಸರ್ವೇಶ್ವರ ನಮ್ಮನ್ನು ಕೈ ಬಿಟ್ಟಿಹನು, ಆ ಸ್ವಾಮಿ ನಮ್ಮನ್ನು ಮರೆತುಬಿಟ್ಟಿಹನು." ಹೆತ್ತ ತಾಯಿಗೆ ತನ್ನ ಕಂದನ ಪ್ರೀತಿ ಬತ್ತಿಹೋಗುವುದುಂಟೆ? ಆಕೆ ತನ್ನ ಮೊಲೆಗೂಸನ್ನು ಮರೆತುಬಿಡುವುದುಂಟೆ? ಒಂದು ವೇಳೆ ಆಕೆ ಮರೆತರೂ ನಾ ನಿನ್ನನ್ನು ಮರೆಯೆ." 

ಕೀರ್ತನೆ: 145:8-9, 13-14, 17-18 

ಶ್ಲೋಕ: ಪ್ರಭು ದಯಾನಿಧಿ, ಕೃಪಾಸಾಗರನು ಸಹನಶೀಲನು, ಪ್ರೀತಿಪೂರ್ಣನು 

ಶುಭಸಂದೇಶ: ಯೊವಾನ್ನ 5:17-30 

ಯೆಹೂದ್ಯರ ಆಕ್ಷೇಪಣೆಗೆ ಉತ್ತರವಾಗಿ ಯೇಸು, "ನನ್ನ ಪಿತ ಸತತವೂ ಕಾರ್ಯನಿರತರು. ಅವರಂತೆಯೇ ನಾನು ಸದಾ ಕಾರ್ಯನಿರತನಾಗಿದ್ದೇನೆ," ಎಂದು ನುಡಿದರು. ಯೇಸು ಸಬ್ಬತ್ತಿನ ನಿಯಮವನ್ನು ಮುರಿದುದೇ ಅಲ್ಲದೆ, ದೇವರನ್ನು ತನ್ನ ಪಿತನೆಂದು ಹೇಳಿಕೊಳ್ಳುತ್ತಾ, ತನ್ನನ್ನೇ ದೇವರಿಗೆ ಸರಿಸಮ ಮಾಡಿಕೊಳ್ಳುತ್ತಿದ್ದಾನೆಂದು ಯೆಹೂದ್ಯರು ಅವರನ್ನು ಕೊಲ್ಲಲು ಮತ್ತಷ್ಟು ಹವಣಿಸಿದರು. ಯೇಸುಸ್ವಾಮಿ ಅವರನ್ನು ಉದ್ದೇಶಿಸಿ ಹೀಗೆಂದರು: ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಪುತ್ರನು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು; ಪಿತನು ಮಾಡುವುದನ್ನು ಕಂಡು ತಾನೂ ಹಾಗೆಯೇ ಮಾಡುತ್ತಾನೆ ಪಿತನು ಮಾಡುವುದನ್ನೇ ಪುತ್ರನೂ ಮಾಡುವುದು. ಪುತ್ರನೆಂದರೆ ಪಿತನಿಗೆ ಪ್ರೀತಿ. ಆದುದರಿಂದ ತಾವು ಮಾಡುವುದನ್ನೆಲ್ಲಾ ಪುತ್ರನಿಗೆ ತೋರಿಸುತ್ತಾರೆ. ಇದಲ್ಲದೆ ಇನ್ನೂ ಎಷ್ಟೋ ಮಿಗಿಲಾದ ಕಾರ್ಯಗಳನ್ನು ಪುತ್ರನಿಗೆ ತೋರಿಸುತ್ತಾರೆ. ಅವುಗಳನ್ನು ಕಂಡು ನೀವು ಬೆರಗಾಗುವಿರಿ. ಪಿತನು ಸತ್ತವರನ್ನು ಎಬ್ಬಿಸಿ ಅವರಿಗೆ ಜೀವವನ್ನು ಕೊಡುವಂತೆಯೇ ಪುತ್ರನು ತನಗೆ ಬೇಕಾದವರಿಗೆ ಜೀವವನ್ನು ಕೊಡುತ್ತಾನೆ. ಅಲ್ಲದೆ, ಪಿತನು ಯಾರನ್ನೂ ತೀರ್ಪಿಗೆ ಗುರಿಮಾಡುವುದಿಲ್ಲ. ತೀರ್ಪುಕೊಡುವ ಅಧಿಕಾರವನ್ನೆಲ್ಲಾ ಅವರು ಪುತ್ರನಿಗೆ ಕೊಟ್ಟಿದ್ದಾರೆ. ಏಕೆಂದರೆ, ತಮ್ಮನ್ನು ಗೌರವಿಸುವಂತೆಯೇ ಜನರೆಲ್ಲರು ಪುತ್ರನನ್ನು ಗೌರವಿಸಬೇಕೆಂಬುದು ಅವರ ಬಯಕೆ. ಪುತ್ರನನ್ನು ಗೌರವಿಸದವನು ಆತನನ್ನು ಕಳುಹಿಸಿದ ಪಿತನನ್ನು ಗೌರವಿಸುವುದಿಲ್ಲ. ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನನ್ನ ಮಾತಿಗೆ ಕಿವಿಗೊಟ್ಟು ನನ್ನನ್ನು ಕಳುಹಿಸಿದ ಆತನಲ್ಲಿ ವಿಶ್ವಾಸವಿಡುವವನು ನಿತ್ಯಜೀವವನ್ನು ಪಡೆದಿರುತ್ತಾನೆ. ಅವನು ಖಂಡನೆಗೆ ಗುರಿಯಾಗನು. ಅವನು ಈಗಾಗಲೇ ಸಾವನ್ನು ದಾಟಿ ಜೀವವನ್ನು ಸೇರಿರುತ್ತಾನೆ. ಸತ್ಯವಾಗಿ ನಿಮಗೆ ಮತ್ತೆ ಹೇಳುತ್ತೇನೆ; ಸತ್ತವರು ದೇವರ ಪುತ್ರನ ಧ್ವನಿಯನ್ನು ಕೇಳುವ ಕಾಲ ಬರುವುದು; ಈಗಾಗಲೇ ಬಂದಿದೆ; ಈ ಧ್ವನಿಯನ್ನು ಕೇಳುವವರು ಜೀವಿಸುವರು. ಪಿತನು ತಾನೇ ಸ್ವಯಂ ಜೀವ ಮೂಲವಾಗಿರುವಂತೆ ಪುತ್ರನು ಸಹ ಸ್ವಯಂ ಜೀವ ಮೂಲವಾಗಿರುವಂತೆ ಕರುಣಿಸಿದ್ದಾರೆ. ಅದೂ ಅಲ್ಲದೆ, ಆತನು ನರಪುತ್ರನಾಗಿರುವ ಕಾರಣ ತೀರ್ಪನ್ನು ಕೊಡುವ ಹಕ್ಕನ್ನು ಆತನಿಗೇ ದಯಪಾಲಿಸಿದ್ದಾರೆ. ಇದನ್ನು ಕೇಳಿ ನೀವು ಬೆರಗಾಗುವುದು ಬೇಡ. ಸತ್ತ ಸಮಾಧಿಯಲ್ಲಿರುವವರೆಲ್ಲರೂ ಆತನ ಧ್ವನಿಯನ್ನು ಕೇಳುವ ಕಾಲ ಬರುವುದು. ಹಾಗೆ ಕೇಳಿದವರೆಲ್ಲಾ ಸಮಾಧಿಯನ್ನು ಬಿಟ್ಟು ಎದ್ದುಬರುವರು: ಸಜ್ಜನರು ಸಜೀವಕ್ಕಾಗಿ ಪುನರುತ್ದಾನರಾಗುವರು, ದುರ್ಜನರು ದಂಡನಾ ತೀರ್ಪಿಗಾಗಿ ಪುನರುತ್ದಾನರಾಗುವರು. ನನ್ನಷ್ಟಕ್ಕೇ ನಾನೇ ಏನೂ ಮಾಡಲಾರೆ. ಪಿತನು ನನಗೆ ತಿಳಿಸಿದ ಪ್ರಕಾರ ನಾನು ತೀರ್ಪುಕೊಡುತ್ತೇನೆ. ಈ ನನ್ನ ತೀರ್ಪು ನ್ಯಾಯ ಬದ್ಧ ಆದುದು. ಏಕೆಂದರೆ, ನಾನು ನನ್ನ ಸ್ವಂತ ಇಚ್ಛೆಯನ್ನು ನೆರವೇರಿಸದೆ ಪಿತನ ಚಿತ್ತವನ್ನೇ ನೆರವೇರಿಸಲು ಆಶಿಸುತ್ತೇನೆ.

ಮನಸಿಗೊಂದಿಷ್ಟು : ಇಲ್ಲಿ ಯೇಸು ತಮ್ಮ ಹಾಗೂ ಪಿತ ದೇವರ ನಡುವಿನ ಸಂಬಂಧದ ಬಗ್ಗೆ ಅತ್ಯಂತ ಪ್ರಭಾವಶಾಲಿಯಾಗಿ ಮಾತನಾಡುತ್ತಾರೆ. ತಮಗೆ ಪಿತ ದೇವರು ನೀಡಿರುವ ಪರಮ ಅಧಿಕಾರದ ಬಗ್ಗೆ ಮಾತನಾಡುತ್ತಲೇ ತಾನು ತನ್ನ ಇಚ್ಛೆಗಿಂತಲೂ ಪಿತ ದೇವರ ಇಚ್ಛೆಯನ್ನೇ ಬಯಸುತ್ತೇನೆ ಎನ್ನುತ್ತಾರೆ. ನಮ್ಮ ಬಾಳಿನಲ್ಲಿ ನಾವು ದೇವರ ಚಿತ್ತ ಬಯಸಿದ್ದೇ ಆದರೆ, ಯೇಸು ಮತ್ತು ದೇವರ ಅವಿನಾಭಾವ ಸಂಬಂಧ ನಮ್ಮದೂ ದೇವರದೂ ಆಗಬಹುದು.

ಪ್ರಶ್ನೆ : ಸಜ್ಜನರಿಗೆ ಸಜೀವ  ನೀಡುವ ಪುನರುತ್ಥಾನದಲ್ಲಿ ನಮ್ಮ ನಂಬಿಕೆ ಎಷ್ಟು? 

02.04.2019 - "ನಿನಗೆ ಗುಣ ಹೊಂದಲು ಮನಸ್ಸಿದೆಯೇ?"

 ಮೊದಲನೇ ವಾಚನ: ಯೆಜೆಕಿಯೇಲ 47:1-9, 12

 ಆಮೇಲೆ ಆ ಪುರುಷ ನನ್ನನ್ನು ದೇವಸ್ಥಾನದ ಬಾಗಿಲಿಗೆ ಪುನಃ ಕರೆದು ತಂದನು: ಇಗೋ, ದೇವಸ್ಥಾನದ ಹೊಸ್ತಿಲ ಕೆಳಗಿನಿಂದ ನೀರು ಹೊರಟು ಪೂರ್ವದ ಕಡೆಗೆ ಹರಿಯುತ್ತಿತ್ತು. (ದೇವಸ್ಥಾನ ಪೂರ್ವಾಭಿಮುಖವಾಗಿತ್ತು) ಆ ನೀರು ದೇವಸ್ಥಾನದ ಬಲಗಡೆ ಕೆಳಗಿನಿಂದ ಹೊರಟು ಬಲಿಪೀಠದ ದಕ್ಷಿಣದಲ್ಲಿ ಹರಿಯುತ್ತಿತ್ತು. ಆಗ ಅವನು ನನ್ನನ್ನು ಉತ್ತರ ಹೆಬ್ಬಾಗಿಲಿನಿಂದ ದೇವಾಲಯದ ಹೊರಗಿನ ಮಾರ್ಗವಾಗಿ ಸುತ್ತಿಸಿಕೊಂಡು ಪೂರ್ವದ ಹೆಬ್ಬಾಗಿಲಿಗೆ ಕರೆತಂದನು. ಅಲ್ಲಿ ನೋಡಲು ಅದರ ಬಲಗಡೆ ಮೆಲ್ಲಮೆಲ್ಲನೆ ಹರಿಯುವ ನೀರು ಕಾಣಿಸಿತು. ಆ ಪುರುಷನು ಕೈಯಲ್ಲಿ ಹುರಿಯನ್ನು ಹಿಡಿದುಕೊಂಡು ಪೂರ್ವದಂಡೆಗೆ ಮುಂದುವರಿದು ಐನೂರು ಮೀಟರ್ ಅಳೆದು, ನನ್ನನ್ನು ನೀರಿನ ಆಚೆಗೆ ದಾಟಿಸುವಾಗ ಆ ನೀರು ಹೆಜ್ಜೆ ಮುಳುಗುವಷ್ಟಿತ್ತು. ಅವನು ಪುನಃ ಐನೂರು ಮೀಟರ್ ಅಳೆದು ದಾಟಿಸುವಾಗ ಆ ನೀರು ಮೊಣಕಾಲಿನವರೆಗೆ ಇತ್ತು. ಅವನು ಮತ್ತೆ ಐನೂರು ಮೀಟರ್ ಅಳೆದು ನನ್ನನ್ನು ನೀರಿನ ಆಚೆ ದಾಟಿಸುವಾಗ ಆ ನೀರು ಸೊಂಟದವರೆಗೆ ಇತ್ತು. ಅವನು ಮತ್ತೆ ಅಳೆದು ಐನೂರು ಮೀಟರ್ ಅಳೆದಾಗ ಅದು ನನ್ನಿಂದ ದಾಟಲಾಗದ ತೊಂದರೆಯಾಗಿತ್ತು; ನೀರು ಏರಿ ಈಜಾಡುವಷ್ಟು ಪ್ರವಾಹವಾಗಿತ್ತು. ದಾಟಲಾಗದ ತೊರೆಯಾಗಿತ್ತು; ಆಗ ಅವನು ನನಗೆ, "ನರಪುತ್ರನೇ, ಇದನ್ನು ನೋಡಿದೆಯಾ?" ಎಂದು ಹೇಳಿ ನನ್ನನ್ನು ತೊರೆಯ ದಡಕ್ಕೆ ಹತ್ತಿಸಿ ಹಿಂದಿರುಗಿಸಿದನು. ನಾನು ಹಿಂದಿರುಗಲು, ಇಗೋ, ತೊರೆಯ ಎರಡು ದಡಗಳಲ್ಲಿಯೂ ಅನೇಕಾನೇಕ ವೃಕ್ಷಗಳು ಕಾಣಿಸಿದವು. ಆಗ ಅವನು ನನಗೆ ಹೀಗೆ ಹೇಳಿದನು: "ಈ ಪ್ರವಾಹ ಪೂರ್ವಪ್ರಾಂತ್ಯಕ್ಕೆ ಹೊರಟು ಅರಬಾ ಎಂಬ ಕಣಿವೆಗೆ ಇಳಿದು ಲವಣ ಸಮುದ್ರದ ಕಡೆಗೆ ಹರಿಯುವುದು: ದೇವಸ್ಥಾನದಿಂದ ಹೊರಟ ಪ್ರವಾಹವು ಲವಣಸಮುದ್ರಕ್ಕೆ ಸೇರಲು ಅದರ ನೀರು ಸಿಹಿಯಾಗುವುದು. ಈ ತೊರೆ ಎಲ್ಲೆಲ್ಲಿ ಹರಿಯುತ್ತದೋ ಅಲ್ಲಲ್ಲಿ  ಗುಂಪು ಗುಂಪಾಗಿ ಚಲಿಸುವ ಸಕಲವಿಧ ಜಲಜಂತು ಬದುಕಿ ಬಾಳುವುವು; ಈ ತೊರೆ ಎಲ್ಲೆಲ್ಲಿ ಹರಿದರೂ ಅಲ್ಲಲ್ಲಿ ಜೀವವುಂಟಾಗುವುದು. ತೊರೆಯ ಎರಡು ದಡಗಳಲ್ಲಿಯೂ ಸಕಲ ಫಲವೃಕ್ಷಗಳು ಬೆಳೆಯುವುವು. ಅವುಗಳ ಎಲೆ ಬಾಡದು, ಹಣ್ಣು ತೀರದು. ತೊರೆಯ ನೀರು ಪವಿತ್ರಾಲಯದೊಳಗಿಂದ ಹೊರಟುಬರುವ ಕಾರಣ ಅವು ತಿಂಗಳು ತಿಂಗಳಲ್ಲಿಯೂ ಹೊಸ ಹೊಸ ಫಲವನ್ನು ಕೊಡುತ್ತಲ್ಲಿರುವುವು; ಅವುಗಳ ಹಣ್ಣು ಆಹಾರಕ್ಕೂ, ಸೊಪ್ಪು ಔಷದಕ್ಕೂ ಅನುಕೂಲಿಸುವುವು. 

ಕೀರ್ತನೆ: 46:2-3, 5-6, 8-9 

ಶ್ಲೋಕ: ನಮ್ಮ ಕಡೆಯಿರುವನು ಸೇನಾಧೀಶ್ವರ ಪ್ರಭುವು, ಯಕೋಬ ಕುಲದೇವರು ನಮಗಾಶ್ರಯ ದುರ್ಗವು 

ಶುಭಸಂದೇಶ: ಯೊವಾನ್ನ 5:1-16 

ಇದಾದ ಮೇಲೆ ಯೆಹೂದ್ಯರ ಹಬ್ಬ ಬಂದಿತು. ಯೇಸುಸ್ವಾಮಿ ಜೆರುಸಲೇಮಿಗೆ ತೆರಳಿದರು. ಅಲ್ಲ, 'ಕುರಿಬಾಗಿಲು' ಎಂಬ ಸ್ಥಳದ ಬಳಿ ಐದು ಮಂಟಪಗಳಿಂದ ಕೂಡಿದ ಒಂದು ಕೊಳವಿದೆ. ಅದನ್ನು ಹಿಬ್ರಿಯ ಭಾಷೆಯಲ್ಲಿ "ಬೆತ್ಸಥ" ಎಂದು ಕರೆಯುತ್ತಾರೆ. ಕುರುಡರು, ಕುಂಟರು, ಪಾರ್ಶ್ವವಾಯು ಪೀಡಿತರು ಮೊದಲಾದ ಅನೇಕ ರೋಗಿಗಳು ಆ ಮಂಟಪದಲ್ಲಿ ಬಿದ್ದುಕೊಳ್ಳುತ್ತಾ ಇದ್ದರು. ಮೂವತ್ತೆಂಟು ವರ್ಷ ಕಾಯಿಲೆಯಿಂದ ನರಳುತ್ತಿದ್ದ ಒಬ್ಬ ರೋಗಿ ಅಲ್ಲಿ ಮಲಗಿದ್ದನು. ಯೇಸು ಅವನನ್ನು ನೋಡಿ, ದೀರ್ಘಕಾಲದಿಂದ ಅವನು ಹಾಗೆ ಬಿದ್ದುಕೊಂಡಿರುವುದನ್ನು ತಿಳಿದು, "ನಿನಗೆ ಗುಣಹೊಂದಲು ಮನಸ್ಸಿದೆಯೇ?" ಎಂದು ಕೇಳಿದರು. "ಸ್ವಾಮೀ, ನೀರು ಉಕ್ಕಿದಾಗ ನನ್ನನ್ನು ಕೊಳಕ್ಕಿಳಿಸಲು ಸಹಾಯಕರು ಇರುವುದಿಲ್ಲ; ನಾನು ಹೋಗುವಷ್ಟರಲ್ಲಿ ಬೇರೆ ಯಾರಾದರೂ ಇಳಿದು ಬಿಡುತ್ತಾರೆ," ಎಂದು ಉತ್ತರಿಸಿದ ಆ ರೋಗಿ. ಯೇಸು ಅವನಿಗೆ, "ಎದ್ದು ನಿಲ್ಲು, ನಿನ್ನ ಹಾಸಿಗೆಯನ್ನು ಸುತ್ತಿಕೊಂಡು ನಡೆ," ಎಂದರು. ಆ ಕ್ಷಣವೇ ಅವನು ಗುಣಹೊಂದಿ ತನ್ನ ಹಾಸಿಗೆಯನ್ನು ಸುತ್ತಿಕೊಂಡು ನಡೆಯತೊಡಗಿದನು. ಅದು ಸಬ್ಬತ್ತಿನ ದಿನವಾಗಿತ್ತು. ಆದುದರಿಂದ ಯೆಹೂದ್ಯ ಅಧಿಕಾರಿಗಳು ಗುಣಹೊಂದಿದ ಆ ಮನುಷ್ಯನಿಗೆ, "ಇಂದು ಸಬ್ಬತ್ತಿನ ದಿನ. ನೀನು ಹಾಸಿಗೆಯನ್ನು ಎತ್ತಿಕೊಂಡು ನಡೆಯುವುದು ನಿಷಿದ್ದ," ಎಂದು ಹೇಳಿದರು. ಅದಕ್ಕೆ ಅವನು: "ನನ್ನನ್ನು ಗುಣಪಡಿಸಿದವರೇ, "ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ ಎಂದು ಹೇಳಿದರು," ಎಂದು ಉತ್ತರಕೊಟ್ಟನು. ಅಧಿಕಾರಿಗಳು, "ಅದನ್ನು ಎತ್ತಿಕೊಂಡು ನಡೆ ಎಂದ ಅವನು ಯಾರು?" ಎಂದು ಪ್ರಶ್ನಿಸಿದರು. ತನ್ನನ್ನು ಗುಣಪಡಿಸಿದವರು ಯಾರೆಂದು ಅವನಿಗೆ ತಿಳಿದಿರಲಿಲ್ಲ; ಅಲ್ಲದೆ ಜನಸಂದಣಿಯ ನಿಮಿತ್ತ ಯೇಸು ಆಗಲೇ ಮರೆಯಾಗಿ ಬಿಟ್ಟಿದ್ದರು. ಆನಂತರ ದೇವಾಲಯದಲ್ಲಿ ಯೇಸು ಆ ಮನುಷ್ಯನನ್ನು ಕಂಡು, "ನೋಡು ನೀನು ಗುಣಹೊಂದಿರುವೆ: ಇನ್ನುಮೇಲೆ ಪಾಪ ಮಾಡುವುದನ್ನು ಬಿಟ್ಟುಬಿಡು. ಇಲ್ಲದಿದ್ದರೆ ನಿನ್ನ ಗತಿ ಇನ್ನಷ್ಟು ಚಿಂತಾಜನಕವಾದೀತು" ಎಂದರು. ಆ ಮನುಷ್ಯ ಅಲ್ಲಿಂದ ಯೆಹೂದ್ಯರ ಬಳಿಗೆ ಹೋಗಿ, "ನನ್ನನ್ನು ಗುಣಪಡಿಸಿದವನು ಯೇಸುವೇ," ಎಂದು ತಿಳಿಸಿದನು. ಯೇಸು ಇದನ್ನು ಸಬ್ಬತ್ ದಿನದಲ್ಲಿ ಮಾಡಿದ್ದರಿಂದ ಯೆಹೂದ್ಯರು ಅವರಿಗೆ ಕಿರುಕುಳ ಕೊಡಲು ತೊಡಗಿದರು.

ಮನಸಿಗೊಂದಿಷ್ಟು  :  ಲೋಕದಲ್ಲಿ, ನಮ್ಮ ಬಾಳಿನಲ್ಲಿ ನಮ್ಮನ್ನು ಸೋಲಿನೆಡೆಗೆ, ನಿರಾಸೆಯೆಡೆಗೆ ತಳ್ಳುವ ಸಂಗತಿಗಳು ಎದುರಾಗತ್ತಲೇ ಇರುತ್ತವೆ. ವರ್ಷಗಳಿಂದ ಕಾಡುವ ನೋವುಗಳಿರುತ್ತವೆ. "ಗುಣ ಹೊಂದಲು ಮನಸಿದೆಯೇ" ಎಂಬ ಯೇಸುವಿನ ಪ್ರಶ್ನೆ ಒಂದಲ್ಲ ಒಂದು ದಿನ ನಮಗೆ ಎದುರಾಗುತ್ತದೆ.  ಆ ದಿನಕ್ಕೆ ಕಾಯೋಣ. ನಮ್ಮೆಲ್ಲ ನಿರಾಸೆ, ಸೋಲನ್ನು ಸುತ್ತಿ ಎದ್ದು ನಡೆಯೋಣ.

ಪ್ರಶ್ನೆ : "ನಿನಗೆ ಗುಣಹೊಂದಲು ಮನಸ್ಸಿದೆಯೇ?"