14.01.2019 - "ನನ್ನನ್ನು ಹಿಂಬಾಲಿಸಿ ಬನ್ನಿ"

ಮೊದಲನೇ ವಾಚನ: ಹಿಬ್ರಿಯರಿಗೆ  1:1-6

ಸಹೋದರರೇ, ಪೂರ್ವಕಾಲದಲ್ಲಿ ದೇವರು ನಮ್ಮ ಪಿತೃಗಳೊಡನೆ ಹಲವಾರು ವಿಧದಲ್ಲಿ, ಅನೇಕ ಸಾರಿ ಪ್ರವಾದಿಗಳ ಮುಂಖಾತರ ಮಾತನಾಡಿದರು. ಆದರೆ, ಇತ್ತೀಚಿನ ಅಂತಿಮ ದಿನಗಳಲ್ಲಿ ಅವರು ತಮ್ಮ ಪುತ್ರನ ಮುಖೇನ ನಮ್ಮೊಡನೆ ಮಾತನಾಡಿದ್ದಾರೆ. ದೇವರು ಇಡೀ ವಿಶ್ವವನ್ನು ಉಂಟುಮಾಡಿದ್ದು ಇವರ ಮುಖಾಂತರವೇ;  ಸಮಸ್ತಕ್ಕೂ ಬಾಧ್ಯನನ್ನಾಗಿ ನೇಮಿಸಿರುವುದು ಇವರನ್ನೇ, ಇವರೇ ದೇವರ ಮಹಿಮೆಯ ತೇಜಸ್ಸು; ಇವರೇ ದೈವತ್ವದ ಪಡಿಯಚ್ಚು; ತಮ್ಮ ಶಕ್ತಿಯುತ ವಾಕ್ಯದಿಂದ ಇವರೇ ಸಮಸ್ತಕ್ಕೂ ಆಧಾರ; ನಮ್ಮ ಪಾಪಗಳನ್ನು ತೊಡೆದು ಹಾಕಿ, ಸ್ವರ್ಗದಲ್ಲಿ ಮಹೋನ್ನತ  ದೇವರ  ಪುತ್ರನು ದೇವದೂತರಿಗಿಂತಲೂ ಶ್ರೇಷ್ಠ; ಅವರಿಗಿಂತಲೂ ಹೆಸರುವಾಸಿಯಾದತ. ಏಕೆಂದರೆ, ದೇವರು ತಮ್ಮ ದೂತರಲ್ಲಿ ಯಾರಿಗಾದರೂ - "ನೀನೇ ನನ್ನ ಪುತ್ರ; ನಾನೇ ನಿನ್ನನಿಂದು ಪಡೆದವ," ಎಂದು ಎಂದಾದರೂ ಹೇಳಿದ್ದುಂಟೇ? ಅಥವಾ, "ನಾನಾತನಿಗೆ ಪಿತನು, ಆತನೆನಗೆ ಪುತ್ರನು," ಎಂದಾಗಲಿ ಹೇಳಿದ್ದುಂಟೇ? ಇದಲ್ಲದೆ ದೇವರು ತಮ್ಮ ಚೊಚ್ಚಲ ಮಗನನ್ನು ಭೂಲೋಕಕ್ಕೆ ಕಳುಹಿಸುವಾಗ; "ದೇವದೂತರೆಲ್ಲರೂ ಆತನನ್ನು ಆರಾಧಿಸಲಿ," ಎಂದಿದ್ದಾರೆ.

ಕೀರ್ತನೆ: 97:1, 2, 6, 7, 9

ಶ್ಲೋಕ: ಘೋಷಿಸುತ್ತದೆ ಗಗನ ಮಂಡಲ ಆತನ ನೀತಿಯನ್ನು, ಕಾಣುತ್ತದೆ  ಸಕಲ ಜನಾಂಗ ಆತನ ಮಹಿಮೆಯನ್ನು.

ಶುಭಸಂದೇಶ: ಮಾರ್ಕ  1:14-20


ಯೊವಾನ್ನನು ಬಂಧಿತನಾದ ಬಳಿಕ ಯೇಸುಸ್ವಾಮಿ ಗಲಿಲೇಯಕ್ಕೆ ಹೋಗಿ ದೇವರ ಶುಭಸಂದೇಶವನ್ನು ಸಾರಿದರು: "ಕಾಲವು ಪರಿಪಕ್ವವಾಗಿದೆ, ದೇವರ ಸಾಮ್ರಾಜ್ಯವು ಸಮೀಪಿಸಿದೆ; ಪಶ್ಚಾತ್ತಾಪಪಟ್ಟು ಪಾಪಜೀವನಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ. ಶುಭಸಂದೇಶದಲ್ಲಿ ವಿಶ್ವಾಸವಿಡಿ," ಎಂದು ಘೋಷಿಸಿದರು. ಯೇಸುಸ್ವಾಮಿ ಗಲಿಲೆಯ ಸರೋವರದ  ತೀರದಲ್ಲಿ ನಡೆದುಹೊಗುತ್ತಿದ್ದಾಗ ಸಿಮೋನನನ್ನೂ ಅತನ ಸಹೋದರ ಆಂದ್ರೇಯನನ್ನೂ ಕಂಡರು. ಬೆಸ್ತರಾದ ಇವರು ಸರೋವರದಲ್ಲಿ  ಬಲೆಬೀಸುತ್ತಾ ಇದ್ದರು. ಯೇಸು ಅವರಿಗೆ, "ನನ್ನನ್ನು ಹಿಂಬಾಲಿಸಿ ಬನ್ನಿ, ನಿಮ್ಮನ್ನು ಮನುಷ್ಯರನ್ನೇ ಹಿಡಿಯುವವರನ್ನಾಗಿ ಮಾಡುವೆನು," ಎಂದು ಕರೆದರು. ತಕ್ಷಣವೇ ಅವರು ತಮ್ಮ ಬಲೆಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು. ಇನ್ನೂ ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಾಗ, ಜೆಬೆದಾಯನ ಮಕ್ಕಳಾದ ಯಕೋಬ ಮತ್ತು ಯೊವಾನ್ನರನ್ನು ಯೇಸು ಕಂಡರು. ಅವರು ದೋಣಿಯಲ್ಲಿ ಕುಳಿತು ತಮ್ಮ ಬಲೆಗಳನ್ನು ಸರಿಪಡಿಸುತ್ತಿದ್ದರು. ಕೂಡಲೇ, ಯೇಸು ಅವರನ್ನು ಕರೆದರು. ಅವರೂ ತಮ್ಮ ತಂದೆ ಜೆಬೆದಾಯನನ್ನು ಕೂಲಿಯಾಳುಗಳ ಸಂಗಡ ದೋಣಿಯಲ್ಲೇ ಬಿಟ್ಟು ಯೇಸುವನ್ನು ಹಿಂಬಾಲಿಸಿದರು.

13.01.2019 - "ಅವರು ನಮಗೆ ಪವಿತ್ರಾತ್ಮ ಅವರಿಂದಲೂ ಅಗ್ನಿಯಿಂದಲೂ ದಿಕ್ಷಾಸ್ನಾನ ಕೊಡುವರು"

ಮೊದಲನೇ ವಾಚನ: ಯೆಶಾಯ 40:1-5, 9-11 (ಯೆಶಾಯ: 41:1-4, 6-7)

ನಿಮ್ಮ ದೇವರು ಇಂತೆನ್ನುತ್ತಾರೆ: "ಸಂತೈಸಿ, ನನ್ನ ಜನರನ್ನು ಸಂತೈಸಿರಿ. ಜೆರುಸಲೇಮಿನೊಡನೆ ಪ್ರೀತಿಯಿಂದ ಮಾತನಾಡಿ; ಅದರ ಊಳಿಗತನ ಮುಗಿಯಿತೆನ್ನಿ; ತಕ್ಕ ಪ್ರಾಯಶ್ಚಿತ್ತವಾಗಿದೆ ಅದು ಗೈದ ದೋಷಕೆ ಸರ್ವೇಶ್ವರ ಸ್ವಾಮಿಯಿಂದಲೇ ಅದರ ಎಲ್ಲಾ ಪಾಪಕೃತ್ಯಗಳಿಗೆ ಇಮ್ಮಡಿ ಶಿಕ್ಷೆಯಾಗಿದೆ ಎಂದು ಕೂಗಿ ಹೇಳಿ ಆ ನಗರಿಗೆ," ಇಗೋ, ಈ ವಾಣಿಯನ್ನು ಕೇಳಿ: "ಸರ್ವೇಶ್ವರಸ್ವಾಮಿಗೆ ಮಾರ್ಗವನ್ನು ಸಿದ್ದಮಾಡಿ ಅರಣ್ಯದಲ್ಲಿ ನಮ್ಮ ದೇವರಿಗೆ ರಾಜಮಾರ್ಗವನ್ನು ಸರಾಗಮಾಡಿ ಅಡವಿಯಲ್ಲಿ. ತುಂಬಬೇಕು ಎಲ್ಲ ಹಳ್ಳಕೊಳ್ಳಗಳನ್ನು, ಮಟ್ಟಮಾಡಬೇಕು ಎಲ್ಲ ಬೆಟ್ಟಗುಡ್ಡಗಳನ್ನು. ನೆಲಸಮಮಾಡಬೇಕು ದಿಬ್ಬದಿಣ್ಣೆಗಳನು ಸಮತಲಗೊಳಿಸಬೇಕು ತಗ್ಗುಮುಗ್ಗಾದ ಸ್ಥಳಗಳನ್ನು. ಗೋಚರವಾಗುವುದಾಗ ಸರ್ವೇಶ್ವರಸ್ವಾಮಿಯ  ಮಹಿಮೆಯು, ಮಾನಲರೆಲ್ಲರೂ ಅದನ್ನು ಕಾಣುವರು. ಒಟ್ಟಿಗೆ, ಸರ್ವೇಶ್ವರಸ್ವಾಮಿಯೇ ಇದನ್ನು ಬಾಯಾರೆ ನುಡಿದಿದ್ದಾರೆ." ಪರ್ವತವನ್ನೇರು ಶುಭಸಂದೇಶಕಳಾದ ಸಿಯೋನೇ,  ಧ್ವನಿಯೇರಿಸು, ಶುಭವಾರ್ತೆ ಸಾರಬಲ್ಲ ಜೆರುಸಲೇಮೇ, ಧ್ವನಿಯೇರಿಸು, ನಿರ್ಭಯದಿಂದ ಏರಿಸು; 'ಇಗೋ, ನಿಮ್ಮ ದೇವರು' ಎಂದು ಜೂದ ನಗರಗಳಿಗೆ ಸಾರು. ಇಗೋ, ಬರುತಿಹನು ಸ್ವಾಮಿ ಸರ್ವೇಶ್ವರ ಶೂರನಂತೆ ರಾಜ್ಯವಾಳುವನು ತನ್ನ ಭುಜಬಲದಿಂದಲೇ‌. ಇಗೋ, ಶ್ರಮಕ್ಕೆ ತಕ್ಕ ಪ್ರತಿಫಲ ಆತನ ಕೈಯಲ್ಲಿದೆ ಆತ ಜಯಿಸಿದ ಪರಿವಾರ ಆತನ ಮುಂದಿದೆ. ಆತ ಮೇಯಿಸುವನು ತನ್ನ ಮಂದೆಯನ್ನು ಕುರುಬನ ಹಾಗೆ ಮರಿಗಳನ್ನು ಕೈಗೆ ಎತ್ತಿಕೊಳ್ಳುವನು, ಅಪ್ಪಿಕೊಳ್ಳುವನು ಎದೆಗೆ ನಡೆಸುವನು ಹಾಲೂಡಿಸುವ ಕುರಿಗಳನ್ನು ಮೆಲ್ಲಗೆ.

ಕೀರ್ತನೆ: 104:1-2, 3-4, 24-25, 27-28, 29-30

ಶ್ಲೋಕ: ಭಜಿಸು ನನ್ನ ಮನವೇ, ಭಜಿಸು, ಪ್ರಭುವನು

ಎರಡನೇ ವಾಚನ: ತೀತ 2:11-14, 3:4-7 

ಎಲ್ಲಾ ಮಾನವರ ಜೀವೋದ್ಧಾರಕ್ಕಾಗಿಯೇ ದೇವರ ಅನುಗ್ರಹವು ಪ್ರಕಟವಾಗಿದೆ. ನಾವು ಭಕ್ತಿಹೀನ ನಡತೆಯನ್ನೂ ಪ್ರಾಪಂಚಿಕ ವ್ಯಾಮೋಹಗಳನ್ನೂ ವಿಸರ್ಜಿಸಿ, ಈ ಲೋಕದಲ್ಲಿ ವಿವೇಕಿಗಳಾಗಿಯೂ ಪ್ರಾಮಾಣಿಕರಾಗಿಯೂ ಭಕ್ತರಾಗಿಯೂ ಜೀವಿಸಬೇಕೆಂದು ಅದು ನಿಮಗೆ ಭೋಧಿಸುತ್ತದೆ. ಅಲ್ಲದೆ, ಮಹೋನ್ನತ ದೇವರು ಮತ್ತು ನಮ್ಮ ಉದ್ಧಾರಕ ಯೇಸುಕ್ರಿಸ್ತರು ಮಹಿಮಾರೂಪದಲ್ಲಿ ನಮಗೆ ಪ್ರತ್ಯಕ್ಷವಾಗುವ ಸೌಭಾಗ್ಯವನ್ನುನಾವು ಎದುರುನೋಡಬೇಕೆಂದು ಅದು ಕಲಿಸುತ್ತದೆ. ಯೇಸುಕ್ರಿಸ್ತರು ನಮ್ಮನ್ನು ಸಕಲ ಅಪರಾಧಗಳಿಂದ ವಿಮೋಚಿಸಿ, ಪರಿಶುದ್ಧರನ್ನಾಗಿಸಿ ಸತ್ಕಾರ್ಯಗಳಲ್ಲಿ ಆಸಕ್ತರಾದ ಒಂದು ಜನಾಂಗವನ್ನಾಗಿ ಮಾಡಿದರು‌. ನಮ್ಮನ್ನು ತಮ್ಮ ಸ್ವಂತದವರನ್ನಾಗಿಸಿಕೊಳ್ಳಲೆಂದು ತಮ್ಮನ್ನೇ ನಮಗಾಗಿ ಸಮರ್ಪಿಸಿಕೊಟ್ಟರು. ಹೀಗಿರುವಾಗ, ಜಗದ ರಕ್ಷಕರಾದ ದೇವರ ದಯೆಯೂ ಅವರ ಜನಪ್ರೇಮವೂ ಪ್ರಕಟವಾದವು. ಆಗ ಅವರೇ ನಮ್ಮನ್ನು ಉದ್ಧರಿಸಿದರು. ನಮ್ಮ ಸ್ವಂತ ಪುಣ್ಯಕಾರ್ಯಗಳು ನಮಗೆ ಈ ಉದ್ಧಾರವನ್ನು ತರಲಿಲ್ಲ. ಪುನರ್ಜನ್ಮವನ್ನು ಸೂಚಿಸುವ ಸ್ನಾನ ಹಾಗೂ ನೂತನ ಜೀವವನ್ನೀಯುವ ಪವಿತ್ರಾತ್ಮ ಈ ಮೂಲಕ ಅವರೇ ನಮ್ಮನ್ನು ಕರುಣೆಯಿಂದ ಉದ್ಧಾರಮಾಡಿದರು. ಪವಿತ್ರಾತ್ಮರನ್ನು ನಮ್ಮ ಉದ್ಧಾರಕ ಯೇಸುಕ್ರಿಸ್ತರ ಮುಖಾಂತರ ದೇವರು ನಮಗೆ ಧಾರಾಳವಾಗಿ ಅನುಗ್ರಹಿಸಿದ್ದಾರೆ.  ಹೀಗೆ ದೈವಾನುಗ್ರಹದಿಂದ ನಾವು ದೇವರೋಡನೆ ಸತ್ಸಂಬಂದವನ್ನು ಹೊಂದಿದೆವು ನಿತ್ಯಜೀವದ ಭರವಸೆಯನ್ನು ಪಡೆದು ಆ ಜೀವಕ್ಕೆ  ಬಾಧ್ಯಸ್ಥರಾದೆವು. ಇದು ಸತ್ಯವಾದ ಮಾತು. 

ಶುಭಸಂದೇಶ: ಲೂಕ 3:15-16, 21-22

"ಈ ಯೊವಾನ್ನನೇ ಎಲ್ಲರು ಎದುರು ನೋಡುತ್ತಾ ಇರುವ ಅಭಿಷಿಕ್ತನಾದ ಲೋಕೋದ್ಧಾರಕ ಆಗಿರಬಹುದೇ" ಎಂದು ಜನರು ತಮ್ಮ ಮನಸ್ಸಿನಲ್ಲೇ ಆಲೋಚಿಸುತ್ತಿದ್ದರು. ಅದಕ್ಕೆ ಉತ್ತರವಾಗಿ ಯೊವಾನ್ನನು, "ನಾನು ನಿಮಗೆ ನೀರಿನಿಂದ ಸ್ನಾನದೀಕ್ಷೆ ಕೊಡುತ್ತಿದ್ದೇನೆ. ಆದರೆ ನನಗಿಂತಲೂ ಶಕ್ತರೊಬ್ಬರು ಬರುತ್ತಾರೆ. ಅವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಅರ್ಹನಲ್ಲ; ಅವರು ನಮಗೆ ಪವಿತ್ರಾತ್ಮ ಅವರಿಂದಲೂ ಅಗ್ನಿಯಿಂದಲೂ ದಿಕ್ಷಾಸ್ನಾನ ಕೊಡುವರು," ಎಂದನು. ಜನರೆಲ್ಲರು ಸ್ನಾನದೀಕ್ಷೆ ಪಡೆಯುತ್ತಾ ಇದ್ದರು. ಯೆಸುಸ್ವಾಮಿಯೂ ಬಂದು ಸ್ನಾನದೀಕ್ಷೆ ಪಡೆದು ಪ್ರಾರ್ಥಿಸುತ್ತಿರಲು ಆಕಾಶವು ತೆರೆಯಿತು. ಆಗ ಪವಿತ್ತಾತ್ಮ ಸಶರೀರವಾಗಿ ಒಂದು ಪಾರಿವಾಳದ ರೂಪದಲ್ಲಿ ಯೇಸುವಿನ ಮೇಲೆ ಇಳಿದರು ಅಲ್ಲದೆ, "ನೀನೇ ನನ್ನ ಪುತ್ರ ನನಗೆ ಪರಮಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು," ಎಂಬ ದೈವವಾಣಿ ಕೇಳಿಸಿತು.

12.01.2019 - "ಆತ ಬೆಳೆಯುತ್ತಿರಬೇಕು, ನಾನು ಅಳಿಯುತ್ತಿರಬೇಕು"

ಮೊದಲನೇ ವಾಚನ: 1 ಯೊವಾನ್ನ 5:14-21


ದೇವರ ಚಿತ್ತಾನುಸಾರ ಏನನ್ನು ಬೇಡಿಕೊಂಡರೂ ಅವರು ನಮ್ಮ ವಿಜ್ಞಾಪನೆಗೆ  ಕಿವಿಗೊಡುತ್ತಾರೆಂಬ ಭರವಸೆ ನಮಗಿದೆ. ನಾವು ಏನನ್ನು ಬೇಡಿಕೊಂಡರೂ  ನಮ್ಮ ವಿಜ್ಞಾಪನೆಗೆ ದೇವರು ಕಿವಿಗೊಡುತ್ತಾರೆ ಎಂಬುದು ನಮಗೆ ತಿಳಿದಿದ್ದರೆ ನಾವು ಬೇಡಿದುದೆಲ್ಲವೂ ನಮಗೆ ಲಭಿಸಿದಂತೆಯೇ ಎಂಬುದೂ ನಮಗೆ ತಿಳಿದಿದೆ. ಮಾರಕವಲ್ಲದ ಪಾಪವೂಂದನ್ನು ಸಹೋದರನು ಮಾಡುವುದನ್ನು ಯಾರಾದರೂ ಕಂಡರೆ, ಆ ಸಹೋದರನಿಗಾಗಿ ದೇವರಲ್ಲಿ ಬೇಡಿಕೊಳ್ಳಿರಿ. ದೇವರು ಆ ಸಹೊದರನಿಗೆ ಸಜ್ಜೀವವನು ಅನುಗ್ರಹಿಸುವರು. ಮಾರಕವಲ್ಲದ ಪಾಪವನ್ನು ಕುರಿತೇ ಈ ಮಾತನ್ನು ಹೇಳುತ್ತಿದ್ದೇನೆ. ಮಾರಕವಲ್ಲದ ಪಾಪವೂ ಉಂಟು. ಅದರ ವಿಷಯವಾಗಿ ಬೇಡಿಕೊಳ್ಳಬೇಕೆಂದು ನಾನು ಹೇಳುತ್ತಿಲ್ಲ. ಅಕ್ರಮವಾದುದೆಲ್ಲವೂ ಪಾಪವೇ ಆದರೆ ಮಾರಕವಲ್ಲದಂಥ ಪಾಪವೂ ಇದೆ. ನಮಗೆ ತಿಳಿದಿರುವಂತೆ ದೇವರಿಂದ ಜನಿಸಿದವನು ಪಾಪಜೀವಿಯಾಗಿರುವುದಿಲ್ಲ. ಏಕೆಂದರೆ, ದೆವರ ಪುತ್ರನ ರಕ್ಷಣೆ ಅವನಿಗಿದೆ. ಕೇಡಿಗನ ವಶದಲ್ಲಿ ಇದ್ದರು ಸಹ ನಾವು ದೇವರಿಗೆ ಸೇರಿದವರೆಂಬುದು ನಮಗೆ ತಿಳಿದಿದೆ. ದೇವರ ಪುತ್ರ ಆಗಮಿಸಿ, ಸತ್ಯಸ್ವರೂಪರಾದ ದೇವರನ್ನು ನಾವು ತಿಳಿದುಕೊಳ್ಳುವಂತೆ ನಮಗೆ ಅರಿವನ್ನು ನೀಡಿದ್ದಾರೆ. ಇದನ್ನು ನಾವು ಬಲ್ಲೆವು. ದೇವರ ಪುತ್ರರಾದ ಯೇಸುಕ್ರಿಸ್ತರಲ್ಲಿ ನೆಲಸಿರುವ ನಾವು ಸತ್ಯಸ್ವರೂಪಿಯಲ್ಲೇ ನೆಲೆಸಿದ್ದೇವೆ ನಿಜವಾದ ದೇವರೂ ನಿತ್ಯಜೀವವೂ ಇವರೇ. ಪ್ರಿಯ ಮಕ್ಕಳೇ, ಮಿಥ್ಯ ದೇವರುಗಳಿಂದ ನೀವು ದೂರವಿರಿ.

 ಕೀರ್ತನೆ: 149:1-2, 3-4, 5-6, 9

 ಶ್ಲೋಕ: ಪ್ರೀತಿಸುತ್ತಾನೆ ಪ್ರಭು ತನ್ನ ಪ್ರಜೆಯನು

 ಶುಭಸಂದೇಶ: ಯೊವಾನ್ನ 3:22-30

ಯೇಸುಸ್ವಾಮಿ ತಮ್ಮ ಶಿಷ್ಯರೊಡನೆ ಜುದೇಯ ಪ್ರಾಂತ್ಯಕ್ಕೆ ಬಂದು ಅವರೊಡನೆ ಕೆಲವು ಕಾಲ ಅಲ್ಲೇ ಉಳಿದುಕೊಂಡು ದೀಕ್ಷಾಸ್ನಾನ ಮಾಡಿಸತೊಡಗಿದರು. ಅತ್ತ ಯೊವಾನ್ನನು ಕೂಡ ಸಾಲಿಮ್ ಎಂಬ ಊರಿಗೆ ಹತ್ತಿರವಾಗಿದ್ದ ಐನೋನ್ ಎಂಬ ಸ್ಥಳದಲ್ಲಿ ನೀರು ಹೆಚ್ಚಾಗಿದ್ದುದರಿಂದ ಸ್ನಾನದೀಕ್ಷೆಯನ್ನು ಪಡೆಯುತ್ತಿದ್ದರು. ಯೊವಾನ್ನನು ಆಗ ಇನ್ನೂ ಬಂಧಿತನಾಗಿರಲಿಲ್ಲ. ಶುದ್ಧಾಚಾರವನ್ನು ಕುರಿತು ಯೊವಾನ್ನನ ಶಿಷ್ಯರಿಗೂ ಯೆಹೂದ್ಯನೊಬ್ಬನಿಗೂ ವಿವಾದ ಎದ್ದಿತು. ಅವರು ಯೊವಾನ್ನನ ಬಳಿಗೆ ಬಂದು, "ಗುರುವೇ, ಜೋರ್ಡಾನಿನ ಆಚೆ ಕಡೆಯಲ್ಲಿ ನಿಮ್ಮೊಡನೆ ಒಬ್ಬನು ಇದ್ದನಲ್ಲವೇ ಆತನನ್ನು ಕುರಿತು ನೀವೇ ಸಾಕ್ಷಿ ಹೇಳಲಿಲ್ಲವೆ? ಈಗ ನೋಡಿ, ಆತನೇ ದೀಕ್ಷಸ್ನಾನ ಮಾಡಿಸುತ್ತಿದ್ದಾನೆ. ಎಲ್ಲರೂ ಆತನ ಬಳಿಗೆ ಹೋಗುತ್ತಿದ್ದಾರೆ," ಎಂದು ದೂರಿತ್ತರು. ಅದಕ್ಕೆ ಯೊವಾನ್ನನು, "ದೇವರು ದಯಪಾಲಿಸದೆ ಹೋದರೆ ಮಾನವನಿಗೇನು ದಕ್ಕದು. "ನಾನು ಲೋಕೋದ್ಧಾರಕನಲ್ಲ; ಆತನ ಮುಂದೂತ ಮಾತ್ರ' ಎಂದು ನಾನು ಹೇಳಿದ್ದಕ್ಕೆ ನೀವೇ ಸಾಕ್ಷಿಗಳಾಗಿದ್ದೀರಿ ಮದುಮಗಳು ಮದುಮಗನಿಗೆ ಸೇರಿದವಳು. ಮದುಮಗನ ಗೆಳೆಯನಾದರೋ ಪಕ್ಕದಲ್ಲಿದ್ದು ಮದುಮಗನ ಕರೆಗೆ ಕಿವಿಗೊಡುತ್ತಾನೆ; ಆತನ ಸ್ವರ ಕೇಳಿ ಹರ್ಷಿಸುತ್ತಾನೆ. ಇಂಥ ಆನಂದದಿಂದ ನಾನೀಗ ಭರಿತನಾಗಿದ್ದೇನೆ. ಆತ ಬೆಳೆಯುತ್ತಿರಬೇಕು, ನಾನು ಅಳಿಯುತ್ತಿರಬೇಕು.

11.01.19 - "ಖಂಡಿತವಾಗಿಯೂ ನನಗೆ ಮನಸ್ಸಿದೆ; ನಿನಗೆ ಗುಣವಾಗಲಿ,"

ಮೊದಲನೇ ವಾಚನ: 1 ಯೊವಾನ್ನ 5:5-13 

ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿ0ದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ್ತದಿಂದ ಸಾಕ್ಷಿ ಹೊಂದಿದವರು. ಜಲದಿಂದ ಮಾತ್ರವಲ್ಲ, ಜಲ ಮತ್ತು ರಕ್ತದಿಂದ ಸಾಕ್ಷಿ ಹೊಂದಿದವರು. ಇದಕ್ಕೆ ಪವಿತ್ರಾತ್ಮ ಸಾಕ್ಷಿ. ಏಕೆಂದರೆ, ಪವಿತ್ರಾತ್ಮ ಸತ್ಯಸ್ವರೂಪಿ. ಹೀಗೆ ಪವಿತ್ರಾತ್ಮ, ಜಲ ಮತ್ತು ರಕ್ತವೆಂಬ ಮೂರು ಸಾಕ್ಷಿಗಳು ಇವೆ. ಈ ಮೂರೂ ಕೊಡುವ ಸಾಕ್ಷ್ಯ ಒಂದೇ. ಮನುಷ್ಯರು ಕೊಡುವ ಸಾಕ್ಷ್ಯವನ್ನು ನಾವು ಅಂಗೀಕರಿಸುತ್ತೇವೆ. ದೇವರು ನೀಡುವ ಸಾಕ್ಷ್ಯ ಅವರ ಪುತ್ರನನ್ನು ಕುರಿತದ್ದಾಗಿದೆ. ದೇವರ ಪುತ್ರನಲ್ಲಿ ವಿಶ್ವಾಸವಿಡುವವನು ಈ ಸಾಕ್ಷ್ಯವನ್ನು ತನ್ನ ಅಂತರಂಗದಲ್ಲೇ ಹೊಂದಿರುತ್ತಾನೆ. ದೇವರಲ್ಲಿ ವಿಶ್ವಾಸವಿಡದವನಾದರೋ ಅವರನ್ನು ಸುಳ್ಳುಗಾರರನ್ನಾಗಿಸುತ್ತಾನೆ. ಹೇಗೆಂದರೆ, ದೇವರು ತಮ್ಮ ಪುತ್ರನ ಪರವಾಗಿ ಕೊಟ್ಟ ಸಾಕ್ಷ್ಯದಲ್ಲಿ ಅವನಿಗೆ ನಂಬಿಕೆಯಿಲ್ಲ. ದೇವರು ನಮಗೆ ನಿತ್ಯ ಜೀವವನ್ನು ಅನುಗ್ರಹಿಸಿದ್ದಾರೆ. ಆ ಜೀವ ಅವರ ಪುತ್ರನಲ್ಲಿದೆ ಎಂಬುದೇ ಈ ಸಾಕ್ಷ್ಯ. ಯಾರಲ್ಲಿ ದೇವರ ಪುತ್ರ ಇದ್ದಾನೋ ಅವನಲ್ಲಿ  ಆ ಜೀವವಿರುತ್ತದೆ. ಯಾರಲ್ಲಿ ದೇವರ ಪುತ್ರನಿಲ್ಲವೋ ಅವನಲ್ಲಿ ಆ ಜೀವ ಇರುವುದಿಲ್ಲ.ದೇವರ ಪುತ್ರನ ನಾಮದಲ್ಲಿ ವಿಶ್ವಾಸ ಇಟ್ಟಿರುವ ನೀವು ನಿತ್ಯಜೀವವನ್ನು ಪಡೆದವರು. ಎಂಬುದನ್ನು ತಿಳಿಸಲೆಂದೇ ನಾನು ನಿಮಗೆ ಇದನ್ನೆಲ್ಲಾ ಬರೆದಿದ್ದೇನೆ. 

ಕೀರ್ತನೆ: 147: 12-13, 14-15, 19-20 

ಶ್ಲೋಕ :  ಜೆರುಸಲೇಮೇ, ಕೀರ್ತಿಸು ಪ್ರಭುವನ್ನು. 

ಶುಭಸಂದೇಶ: ಲೂಕ 5:12-16 

ಯೇಸುಸ್ವಾಮಿ ಒಂದು ಪಟ್ಟಣದಲ್ಲಿ ಇದ್ದಾಗ, ಮೈಯೆಲ್ಲಾ ಕುಷ್ಟ ಹಿಡಿದಿದ್ದ ರೋಗಿ ಒಬ್ಬನು ಅಲ್ಲಿಗೆ ಬಂದು ಅವರಿಗೆ ಅಡ್ಡಬಿದ್ದು, "ಸ್ವಾಮೀ, ತಾವು ಮನಸ್ಸು ಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ," ಎಂದು ಬೇಡಿಕೊಂಡನು. ಯೇಸು  ಕೈಚಾಚಿ ಅವನನ್ನು ಮುಟ್ಟಿ, "ಖಂಡಿತವಾಗಿಯೂ ನನಗೆ ಮನಸ್ಸಿದೆ; ನಿನಗೆ ಗುಣವಾಗಲಿ," ಎಂದರು. ತಕ್ಷಣವೇ ಕುಷ್ಠವು ಮಾಯವಾಗಿ ಅವನು ಗುಣ ಹೊಂದಿದನು. ಇದನ್ನು ಯಾರಿಗೂ ಹೇಳಕೂಡದು ಎಂದು ಯೇಸು ಅವನನ್ನು ಎಚ್ಚರಿಸಿ, "ನೀನು ನೆಟ್ಟಗೆ ಯಾಜಕನ ಬಳಿಗೆ ಹೊಗು; ಅವನು ನಿನ್ನನ್ನು ಪರಿಕ್ಷಿಸಿ ನೋಡಲಿ; ನಂತರ ಮೋಶೆ ನಿಯಮಿಸಿರುವ ಪ್ರಕಾರ ನೀನು ಗುಣಹೊಂದಿದ್ದಕ್ಕಾಗಿ ಶುದ್ಧೀಕರಣ ವಿದಿಯನ್ನು ಅನುಸರಿಸು; ಇದು ಜನರಿಗೆ ಸಾಕ್ಷಿಯಾಗಿರಲಿ," ಎಂದರು. ಯೇಸು ಎಷ್ಟು ಎಚ್ಚರಿಸಿದರೋ ಅಷ್ಟೂ ಅಧಿಕವಾಗಿ ಅವರ ಸುದ್ಧಿ ಹರಡಿತು. ಅವರ ಉಪದೇಶವನ್ನು  ಕೇಳುವುದಕ್ಕೂ ತಮ್ಮ ತಮ್ಮ ರೋಗರುಜಿನಗಳಿಂದ ವಿಮುಕ್ತರಾಗುವುದಕ್ಕೂ  ಜನರು ತಂಡೋಪತಂಡವಾಗಿ ಬರುತ್ತಿದ್ದರು. ಯೇಸುವಾದರೋ ನಿರ್ಜನ ಪ್ರದೇಶಕ್ಕೆ ಹೋಗಿ ಎಂದಿನಂತೆ ಪ್ರಾರ್ಥನೆಯಲ್ಲಿ ಮಗ್ನರಾಗುತ್ತಿದ್ದರು.

10.01.2019 - "ನೀವು ಈ ಪವಿತ್ರ ವಾಕ್ಯವನ್ನು ಕೇಳುತ್ತಿದ್ದ ಹಾಗೆಯೇ ಅದು ಇಂದು ನೆರವೇರಿತು"

ಮೊದಲನೇ ವಾಚನ: 1 ಯೊವಾನ್ನ  4:19-5:4 

ದೇವರು ನಮ್ಮನ್ನು ಮೊದಲು ಪ್ರೀತಿಸಿದ್ದರಿಂದಲೇ ನಾವು ಪ್ರೀತಿಸುತ್ತೇವೆ. ತಾನು ದೇವರನ್ನು ಪ್ರೀತಿಸುತ್ತೇನೆಂದು ಒಬ್ಬನು ಹೇಳುತ್ತಾ ತನ್ನ ಸಹೋದರನನ್ನು ದ್ವೇಷಿಸಿದರೆ, ಅವನು ಸುಳ್ಳುಗಾರನಾಗುತ್ತಾನೆ. ತಾನು ಕಂಡಿರುವ ತನ್ನ ಸಹೋದರನನ್ನು ಪ್ರೀತಿಸದವನು ತಾನು ಕಾಣದಿರುವ ದೇವರನ್ನು ಹೇಗೆ  ಪ್ರೀತಿಸಿಯಾನು? ದೇವರನ್ನು ಪ್ರೀತಿಸುವವನು ತನ್ನ ಸಹೋದರನನ್ನೂ ಪ್ರೀತಿಸಬೇಕೆಂಬುದು ಕ್ರಿಸ್ತಯೇಸು ನಮಗೆ ಮಾಡಿರುವ ಆಜ್ಞೆ, ಯೇಸುವೇ 'ಕ್ರಿಸ್ತ' ಎಂದು ವಿಶ್ವಾಸಿಸುವ ಪ್ರತಿಯೊಬ್ಬನೂ ದೇವರ ಮಗು. ತಂದೆಯನ್ನು ಪ್ರೀತಿಸುವವನು ಆತನ ಮಗುವನ್ನೂ ಪ್ರೀತಿಸುತ್ತಾನೆ. ದೇವರನ್ನು ಪ್ರೀತಿಸಿ,  ಅವರ ಆಜ್ಞೆಗಳನ್ನು ಪಾಲಿಸುವುದರಿಂದ ನಾವು ದೇವರ ಮಕ್ಕಳನ್ನು  ಪ್ರೀತಿಸುತ್ತೇವೆಂಬುದು ನಿಶ್ಚಯ ಆಗುತ್ತದೆ. ದೇವರನ್ನು ಪ್ರೀತಿಸುವುದು ಎಂದರೆ ಅವರು ಕೊಟ್ಟ ಆಜ್ಞೆಗಳನ್ನು ಅನುಸರಿಸಿ ನಡೆಯುವುದೇ. ಅವರ ಆಜ್ಞೆಗಳು ನಮಗೆ ಹೊರೆಯೇನೂ ಅಲ್ಲ. ದೇವರಿಂದ ಜನಿಸಿದ ಪ್ರತಿಯೊಬ್ಬನೂ ಲೋಕವನ್ನು ಜಯಿಸುತ್ತಾನೆ. ಲೋಕವನ್ನು ಜಯಿಸುವಂಥದು ನಮ್ಮ ವಿಶ್ವಾಸವೇ. 

ಕೀರ್ತನೆ:  72:1-2, 14, 15, 17 
ಶ್ಲೋಕ: ಎಲ್ಲಾ ರಾಷ್ಟ್ರಗಳು ಸಾಷ್ಟಾಂಗವೆರಗಲಿ ಸರ್ವೇಶ್ವರಸ್ವಾಮಿಗೆ. 

ಶುಭಸಂದೇಶ:  ಲೂಕ  4:14-22 


ಯೇಸುಸ್ವಾಮಿ ಪವಿತ್ರಾತ್ಮ ಶಕ್ತಿಯಿಂದ ಕೂಡಿ ಗಲಿಲೇಯಕ್ಕೆ ಮರಳಿಬಂದರು. ಅವರ ವಿಷಯ ಸುತ್ತಮುತ್ತೆಲ್ಲಾ ಹರಡಿತು. ಅಲ್ಲಿನ ಪ್ರಾರ್ಥನಾ ಮಂದಿರಗಳಲ್ಲಿ ಅವರು ಭೋಧಿಸುತ್ತಾ ಬಂದರು. ಎಲ್ಲರೂ ಅವರನ್ನು ಹೊಗಳುವವರೇ! ಯೇಸುಸ್ವಾಮಿ ತಾವು ಬೆಳೆದ ಊರಾದ ನಜರೇತಿಗೆ ಬಂದರು. ವಾಡಿಕೆಯ ಪ್ರಕಾರ ಸಬ್ಬತ್ ದಿನ ಪ್ರಾರ್ಥನಾಮಂದಿರಕ್ಕೆ ಹೋದರು. ಅಲ್ಲಿ ಪವಿತ್ರ ಗ್ರಂಥವನ್ನು ಓದುವುದಕ್ಕೆ ಅವರು ಎದ್ದು ನಿಂತಾಗ, ಪ್ರವಾದಿ ಯೆಶಾಯನ ಗ್ರಂಥದ ಸುರುಳಿಯನ್ನು ಅವರ ಕೈಗೆ ಕೊಟ್ಟರು. ಅದನ್ನು ಬಿಚ್ಚಿದಾಗ ಈ ಕೆಳಗಿನ ವಚನಗಳು ಯೇಸುವಿನ ಕಣ್ಣಿಗೆ ಬಿದ್ದವು: "ದೇವರಾತ್ಮ ನನ್ನ ಮೇಲಿದೆ, ದೀನದಲಿತರಿಗೆ  ಶುಭಸಂದೇಶವನ್ನು ಭೋಧಿಸಲೆಂದು ಅವರೆನ್ನನು ಅಭಿಷೇಕಿಸಿದ್ದಾರೆ; ಬಂಧಿತರಿಗೆ ಬಿಡುಗಡೆಯನ್ನು, ಅಂಧರಿಗೆ ದೃಷ್ಟಿದಾನವನ್ನು ಪ್ರಕಟಿಸಲೂ, ಶೋಷಿತರಿಗೆ ಸ್ವಾತಂತ್ರ್ಯ ನೀಡಲೂ ದೇವರು ತಮ್ಮ ಜನತೆಯನ್ನು ಉದ್ಧರಿಸುವ ಕಾಲ ಬಂತೆಂದು ಸಾರಲೂ ಅವರು ನನ್ನನ್ನು ಕಳುಹಿಸಿದ್ದಾರೆ."  ಈ ವಾಕ್ಯವನ್ನು ಓದಿ, ಸುರುಳಿಯನ್ನು ಸುತ್ತಿ, ಪ್ರಾರ್ಥನಾಮಂದಿರದ ಸೇವಕನ ಕೈಗಿತ್ತು, ಯೇಸು ಕುಳಿತುಕೊಂಡರು. ಅಲ್ಲಿದ್ದ ಎಲ್ಲರ ಕಣ್ಣುಗಳು ಅವರ ಮೇಲೆಯೇ ನಾಟಿದ್ದವು. ಆಗ ಯೇಸು, "ನೀವು ಈ ಪವಿತ್ರ ವಾಕ್ಯವನ್ನು ಕೇಳುತ್ತಿದ್ದ ಹಾಗೆಯೇ ಅದು ಇಂದು ನೆರವೇರಿತು," ಎಂದು ವಿವರಿಸಲಾರಂಭಿಸಿದರು. ಎಲ್ಲರೂ ಅವರನ್ನು ಬಹುವಾಗಿ ಮೆಚ್ಚಿಕೊಂಡರು. ಅವರ ಬಾಯಿಂದ ಬಂದ ಮಧುರ ಮಾತುಗಳನ್ನು ಕೇಳಿ ಅಚ್ಚರಿಗೊಂಡರು. "ಇವನು ಜೋಸೆಫನ ಮಗನಲ್ಲವೇ" ಎಂದು ಮಾತನಾಡಿಕೊಂಡರು.

09.01.2019 - ಪ್ರೀತಿಯಲ್ಲಿ ನೆಲೆಸಿರುವವನು ದೇವರಲ್ಲಿ ನೆಲೆಸಿದ್ದಾನೆ

ಮೊದಲನೇ ವಾಚನ:  1 ಯೊವಾನ್ನ 4:11-18 

ಪ್ರಿಯರೇ, ದೇವರೇ ನಮ್ಮನ್ನು ಇಷ್ಟಾಗಿ ಪ್ರೀತಿಸಿರುವಲ್ಲಿ ನಾವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು. ದೇವರನ್ನು ಯಾರೂ ಎಃದು ನೋಡಿಲ್ಲ. ಆದರೂ ನಾವು ಒಬ್ಬರನ್ನೊಬ್ಬರು ಪ್ರೀತಿಸಿದರೆ ದೇವರು ನಮ್ಮಲ್ಲಿ ನೆಲಸಿರುತ್ತಾರೆ. ಅವರ ಪ್ರೀತಿ ನಮ್ಮಲ್ಲಿ ಸಿದ್ಧಿಗೆ ಬರುತ್ತದೆ. ದೇವರು ನಮಗೆ ತಮ್ಮ ಆತ್ಮವನ್ನು ನೀಡಿರುವುದರಿಂದಲೇ ನಾವು ಅವರಲ್ಲಿಯೂ ಅವರು ನಮ್ಮಲ್ಲಿಯೂ ನೆಲಸಿರುವುದನ್ನು ತಿಳಿದುಕೊಳ್ಳುತ್ತೇವೆ.  ಪಿತನು ತಮ್ಮ ಪುತ್ರನನ್ನು ಲೋಕೋದ್ಧಾರಕನನ್ನಾಗಿ ಕಳುಹಿಸಿಕೊಟ್ಟಿದ್ದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಇದರ ವಿಷಯವಾಗಿ ಸಾಕ್ಷಿ ಹೇಳುತ್ತೇವೆ. ಯೇಸುವೇ ದೇವರ ಪುತ್ರನೆಂದು ಯಾವನು ಒಪ್ಪಿಕೊಳ್ಳುತ್ತಾನೋ ಅವನಲ್ಲಿ ದೇವರು ನೆಲಸಿದ್ದಾರೆ.  ಅವನೂ ದೇವರಲ್ಲಿ ನೆಲಸಿದ್ದಾನೆ. ಹೀಗೆ ದೇವರು ನಮ್ಮಲ್ಲಿಟ್ಟಿರುವ ಪ್ರೀತಿ ನಮಗೆ ಗೊತ್ತಿದೆ. ಅದರಲ್ಲಿ ನಮಗೆ ವಿಶ್ವಾಸವಿದೆ. ದೇವರು ಪ್ರೀತಿಸ್ವರೂಪಿ. ಪ್ರೀತಿಯಲ್ಲಿ ನೆಲೆಸಿರುವವನು ದೇವರಲ್ಲಿ ನೆಲೆಸಿದ್ದಾನೆ. ದೇವರೂ ಅವನಲ್ಲಿ ನೆಲೆಸಿರುತ್ತಾರೆ. ಇದರಿಂದಾಗಿ, ಪ್ರೀತಿ ನಮ್ಮಲ್ಲಿ ಸಿದ್ಧಿಗೆ ಬಂದಿರುತ್ತದೆ. ನ್ಯಾಯತೀರ್ಪಿನ ದಿನದಂದು ನಾವು ಭರವಸೆಯಿಂದಿರುತ್ತೇವೆ. ಈ ಲೋಕದಲ್ಲಿ ನಮ್ಮ ಬಾಳು ಕ್ರಿಸ್ತಯೇಸುವಿನ ಬಾಳಿನಂತೆ ಇರುವುದರಿಂದಲೇ ಆ ಭರವಸೆ ನಮಗೆ ಇರುತ್ತದೆ. ಪ್ರೀತಿ ಇರುವಲ್ಲಿ ಭೀತಿ ಇರುವುದಿಲ್ಲ. ಪೂರ್ಣ ಪ್ರೀತಿ ಭೀತಿಯನ್ನು ಹೊರದೂಡುತ್ತದೆ. ಭೀತಿ ಇರುವಲ್ಲಿ ಯಾತನೆ ಇರುತ್ತದೆ. ಭೀತಿಯಿಂದಿರುವವನು ಪ್ರೀತಿಯಲ್ಲಿ ಸಿದ್ಧಗೆ ಬಂದವನಲ್ಲ. 

ಕೀರ್ತನೆ: 72:1-2, 10, 12-13 
ಶ್ಲೋಕ: ರಾಷ್ಟ್ರಗಳು ಸಾಷ್ಟಾಂಗವೆರಗಲಿ ಸರ್ವೇಶ್ವರಸ್ವಾಮಿಗೆ .

ಶುಭಸಂದೇಶ:  ಮಾರ್ಕ  6:45-52 


ಯೇಸುಸ್ವಾಮಿ, ತಾವು ಜನರ ಗುಂಪನ್ನು ಕಳುಹಿಸಿಬಿಡುವಷ್ಟರಲ್ಲಿ ಶಿಷ್ಯರು ದೋಣಿ ಹತ್ತಿ ತಮಗಿಂತ ಮುಂದಾಗಿ ಸರೋವರದ ಆ ಕಡೆಗಿದ್ದ ಬೆತ್ಸಾಯಿದಕ್ಕೆ ಹೋಗುವಂತೆ ಆಜ್ಞಾಪಿಸಿದರು. ಜನರನ್ನು ಬೀಳ್ಕೊಟ್ಟ ಬಳಿಕ ಯೇಸು ಪ್ರಾರ್ಥನೆ ಮಾಡಲು ಬೆಟ್ಟಕ್ಕೆ ಹೋದರು. ಕತ್ತಲೆ ಕವಿದಾಗ ದೋಣಿಯು ಸರೋವರದ ಮಧ್ಯೆ ಸಾಗಿತು. ಇತ್ತ ಯೇಸು ಒಬ್ಬರೇ ದಡದಲ್ಲಿದ್ದರು. ಎದುರುಗಾಳಿ ಬೀಸುತ್ತಿದ್ದದರಿಂದ ಶಿಷ್ಯರು ಹುಟ್ಟುಹಾಕಿ ದಣಿದು ಹೋಗಿದ್ದರು. ಇದನ್ನು ಕಂಡ ಯೇಸು ಸರೋವರದ ನೀರಿನ ಮೇಲೆ ನಡೆದುಕೊಂಡು ಅವರ ಕಡೆಗೆ ಬಂದು, ಅವರನ್ನು ದಾಟಿ ಮುಂದೆ ಹೋಗುವುದರಲ್ಲಿದ್ದರು. ಆಗ ಸುಮಾರು ರಾತ್ರಿ ಕಡೇ ಜಾವದ ಸಮಯ.  ಸರೋವರದ ಮೇಲೆ ನಡೆದು ಬರುತ್ತಿದ್ದ ಯೇಸುವನ್ನು ಶಿಷ್ಯರು ನೋಡಿದರು; ಭೂತವೆಂದು ಭಾವಿಸಿ ಭಯದಿಂದ ಚೀರಿದರು. ಅವರೆಲ್ಲರೂ ಯೇಸುವನ್ನು ನೋಡಿ ದಿಗಿಲುಗೊಂಡಿದ್ದರು. ತಕ್ಷಣವೇ ಯೇಸು ಅವರೊಡನೆ ಮಾತನಾಡುತ್ತಾ, "ಭಯಪಡಬೇಡಿ, ಬೇರೆ ಯಾರೂ ಅಲ್ಲ, ನಾನೇ; ಧ್ಯರ್ಯದಿಂದಿರಿ," ಎಂದು ಅವರೊಡನೆ ಮಾತನಾಡಿ ದೋಣಿಯನ್ನು ಹತ್ತಿದರು. ಆಗ ಎದುರುಗಾಳಿ ನಿಂತು ಹೋಯಿತು. ಶಿಷ್ಯರು ಬೆಕ್ಕಸಬೆರಗಾದರು. ಅವರ ಬುದ್ಧಿ ಮಂದವಾಗಿತ್ತು. ರೊಟ್ಟಿಗಳ ಅದ್ಬುತವನ್ನು ಅವರು ಇನ್ನೂ  ಗ್ರಹಿಸಿಕೊಂಡಿರಲಿಲ್ಲ.

08.01.2019 - "ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?"

ಮೊದಲನೇ ವಾಚನ: 1ಯೊವಾನ್ನ  4:7-10  

ಪ್ರಿಯರೇ, ನಾವು ಒಬ್ಬರನ್ನೊಬ್ಬರು ಪ್ರೀತಿಸೋಣ. ಪ್ರೀತಿ ದೇವರಿಂದ ಉಗಮವಾದುದು. ಪ್ರೀತಿಸುವವನು ದೇವರ ಮಗನು. ಅವನು ದೇವರನ್ನು ಬಲ್ಲವನು. ಪ್ರೀತಿಸದವನು ದೇವರನ್ನು ಬಲ್ಲವನಲ್ಲ. ಏಕೆಂದರೆ, ದೇವರು ಪ್ರೀತಿಸ್ವರೂಪಿ. ತಮ್ಮ ಏಕೈಕ ಪುತ್ರನ ಮುಖಾಂತರ ನಾವು ಸಜ್ಜೀವವನ್ನು ಪಡೆಯುವಂತೆ ದೇವರು ಅವರನ್ನು ಲೋಕಕ್ಕೆ ಕಳುಹಿಸಿದರು. ನಮ್ಮ ಮೇಲೆ ದೇವರಿಗಿರುವ ಪ್ರೀತಿ ಹೀಗೆ ವ್ಯಕ್ತವಾಯಿತು. ನಾವು ದೇವರನ್ನು ಪ್ರೀತಿಸಿದ್ದರಲ್ಲಿ ಅಲ್ಲ, ಅವರು ನಮ್ಮನ್ನು ಪ್ರೀತಿಸಿ ನಮ್ಮ ಪಾಪ ನಿವಾರಣಾರ್ಥವಾಗಿ ತಮ್ಮ ಪುತ್ರನನ್ನು ಕಳುಹಿಸಿದ್ದರಲ್ಲಿಯೇ ಪ್ರೀತಿಯ ನಿಜಗುಣ ತೋರಿಬರುತ್ತದೆ. 

ಕೀರ್ತನೆ:  71:1-2, 3-4, 7-8 

ಶ್ಲೋಕ: ರಾಷ್ಟ್ರಗಳು ಸಾಷ್ಟಾಂಗವೆರಗಲಿ ಸರ್ವೇಶ್ವರಸ್ವಾಮಿಗೆ. 

ಶುಭಸಂದೇಶ: ಮಾರ್ಕ  6:34-44 


ಯೇಸು ದೋಣಿಯಿಂದ ಇಳಿದಾಗ ಅಲ್ಲಿ ದೊಡ್ಡ ಜನಸಮೂಹವೇ ಸೇರಿತ್ತು. ಆ ಜನರು ಕುರುಬನಿಲ್ಲದ ಕುರಿಗಳಂತಿರುವುದನ್ನು ಕಂಡು ಯೇಸುವಿನ ಮನ ಕರಗಿತು; ಅನೇಕ ವಿಷಯಗಳನ್ನು ಕುರಿತು ಅವರಿಗೆ ಉಪದೇಶವಿತ್ತರು. ಅಷ್ಟರಲ್ಲಿ ಸಂಜೆಯಾಗುತ್ತಾ ಬಂದಿತು. ಶಿಷ್ಯರು ಯೇಸುವಿನ ಬಳಿಗೆ ಬಂದು, "ಈಗಾಗಲೇ ಹೊತ್ತು ಮೀರಿಹೋಯಿತು; ಇದು ನಿರ್ಜನ ಪ್ರದೇಶ; ಇನ್ನು ಜನರನ್ನು ಕಳುಹಿಸಿಬಿಡಿ. ಅವರು ಸಮೀಪದ ಊರುಕೇರಿಗಳಿಗೆ ಹೋಗಿ ಊಟಕ್ಕೆ ಏನಾದರೂ ಕೊಂಡುಕೊಳ್ಳಲಿ," ಎಂದರು. ಆಗ ಯೇಸು, "ನೀವೇ ಅವರಿಗೆ ಊಟಕ್ಕೆನಾದರೂ ಕೊಡಿ," ಎಂದರು. ಅದಕ್ಕೆ ಶಿಷ್ಯರು "ನಾವು ಹೋಗಿ ಇನ್ನೂರು ದೆನಾರಿ ನಾಣ್ಯಗಳ ಬೆಲೆಯಷ್ಟು ರೊಟ್ಟಿಯನ್ನು ಕೊಂಡು ತಂದು ಅವರಿಗೆ ಉಟಕ್ಕೆ ಬಡಿಸೋಣವೇನು?" ಎಂದರು. ಯೇಸು, "ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ? ಹೋಗಿ ನೋಡಿಕೊಂಡು ಬನ್ನಿ," ಎಂದರು. ಅವರು ವಿಚಾರಿಸಿಕೊಂಡು ಬಂದು, "ನಮ್ಮಲ್ಲಿ ಐದು ರೊಟ್ಟಿ ಮತ್ತು ಎರಡು ಮೀನುಗಳಿವೆ," ಎಂದು ತಿಳಿಸಿದರು. ಎಲ್ಲರು ಪಂಕ್ತಿಪಂಕ್ತಿಯಾಗಿ ಹಸಿರುಹುಲ್ಲಿನ ಮೇಲೆ ಊಟಕ್ಕೆ  ಕುಳಿತುಕೊಳ್ಳಬೇಕೆಂದು ಯೇಸು ಅಪ್ಪಣೆಮಾಡಿದರು. ಅವರು ಐವತ್ತರಂತೆಯೂ ನೂರರಂತೆಯೂ ಪಂಕ್ತಿಯಲ್ಲಿ ಕುಳಿತರು. ಯೇಸು ಆ ಐದು ರೊಟ್ಟಿಗಳನ್ನೂ ಎರಡು ಮೀನುಗಳನ್ನೂ ತೆಗೆದುಕೊಂಡು, ಸ್ವರ್ಗದತ್ತ ಕಣ್ಣೆತ್ತಿ ನೋಡಿ, ದೇವರಿಗೆ ಸ್ತೋತ್ರ ಸಲ್ಲಿಸಿದರು. ತರುವಾಯ ಆ ರೊಟ್ಟಿಗಳನ್ನು ಮುರಿದು ಜನರಿಗೆ ಬಡಿಸುವಂತೆ ಅವನ್ನು ಶಿಷ್ಯರಿಗೆ ಕೊಟ್ಟರು. ಅಂತೆಯೇ ಎರಡು ಮೀನುಗಳನ್ನು ಜನರೆಲ್ಲರಿಗೆ ಹಂಚುವಂತೆ ಮಾಡಿದರು. ಎಲ್ಲರೂ ಹೊಟ್ಟೆ ತುಂಬಾ ತಿಂದು ತೃಪ್ತರಾದರು. ಇನ್ನೂ ಉಳಿದಿದ್ದ  ರೊಟ್ಟಿ ಮತ್ತು ಮೀನಿನ ತುಂಡುಗಳನ್ನು ಒಟ್ಟುಗೂಡಿಸಿದಾಗ, ಅವು ಹನ್ನೆರಡು ಬುಟ್ಟಿ ತುಂಬ ಆದವು. ಊಟ ಮಾಡಿದವರಲ್ಲಿ ಗಂಡಸರ ಸಂಖ್ಯೆಯೇ ಐದು ಸಾವಿರ.

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...