ಮೊದಲನೇಯ ವಾಚನ : 2 ಸಮುವೇಲ 11:1-4, 5-10, 13-17
ರಾಜರು ಸಾಮಾನ್ಯವಾಗಿ ಯುದ್ಧಕ್ಕೆ ಹೊರಡುವ ವಸಂತಕಾಲ ಅದು. ದಾವೀದನು ಯೋವಾಬನನ್ನು, ತನ್ನ ಸೇವಕರನ್ನು ಹಾಗೂ ಎಲ್ಲ ಇಸ್ರಯೇಲರನ್ನು ಯುದ್ಧಕ್ಕೆ ಕಳುಹಿಸಿದನು. ಇವರು ಹೋಗಿ ಅಮ್ಮೋನಿಯರ ಪ್ರಾಂತ್ಯಗಳನ್ನು ಹಾಳು ಮಾಡಿ ರಬ್ಬಕ್ಕೆ ಮುತ್ತಿಗೆ ಹಾಕಿದರು. ದಾವೀದನು ಜೆರುಸಲೇಮಿನಲ್ಲೇ ಇದ್ದನು. ಒಂದು ದಿನ ಸಂಜೆ ಹೊತ್ತಿನಲ್ಲಿ ದಾವೀದನು ಮಂಚದಿಂದೆದ್ದು ಅರಮನೆಯ ಮಾಳಿಗೆಯ ಮೇಲೆ ತಿರುಗಾಡುತ್ತಿದ್ದನು. ಆಗ ಅಲ್ಲಿಂದ ಸುಂದರಿಯಾದ ಒಬ್ಬ ಸ್ತ್ರೀ ಸ್ನಾನ ಮಾಡುವುದನ್ನು ಕಂಡನು. ಕೂಡಲೇ ದಾವೀದನು ಒಬ್ಬನನ್ನು ಕರೆದು ಆ ಸ್ತ್ರೀ ಯಾರೆಂದು ಕೇಳಿದನು. ಅವನು ಆಕೆ “ ಎಲೀಯಾಮನ ಮಗಳೂ ಹಿತ್ತಿಯನಾದ ಉರೀಯನ ಹೆಂಡತಿಯು ಆದ ಬತ್ಷೆಬೆ,” ಎಂದು ಉತ್ತರಕೊಟ್ಟನು. ಆಕೆ ಆಗತಾನೆ ಋತು ಸ್ನಾನ ಮಾಡಿ ಕೊಂಡಿದ್ದಳು. ಆಕೆಯನ್ನು ಕರೆದು ತರುವಂತೆ ದಾವೀದನು ದೂತರನ್ನು ಕಳುಹಿಸಿದನು. ಆಕೆ ಬಂದಳು. ದಾವೀದನು ಆಕೆಯನ್ನು ಕೂಡಿದನು. ಆನಂತರ ಆಕೆ ತನ್ನ ಮನೆಗೆ ಹೋದಳು. ಮುಂದೆ ತಾನು ಗರ್ಭಧರಿಸಿದ್ದು ಗೊತ್ತಾದಾಗ ಆಕೆ ದಾವೀದನಿಗೆ ಸಮಾಚಾರ ಕಳುಹಿಸಿದಳು. ಒಡನೆ ದಾವೀದನು ದೂತರ ಮುಖಾಂತರ ಯೋವಾಬನಿಗೆ “ ಹಿತ್ತೀಯನಾದ ಊರೀಯನನ್ನು ನನ್ನ ಬಳಿಗೆ ಕಳುಹಿಸು” ಎಂದು ಆಜ್ಞಾಪಿಸಿದನು. ಅವನು ಅಂತೆಯೇ ಮಾಡಿದನು. ಊರೀಯನು ಬಂದಾಗ ’ಯೋವಾಬನು, ಸೈನ್ಯದವರು ಹೇಗಿರುತ್ತಾರೆ? ಯುದ್ಧವು ಹೇಗೆ ನಡೆಯುತ್ತಿದೆ” ಎಂದು ವಿಚಾರಿಸಿದನು. ಅನಂತರ ಅವನಿಗೆ “ನೀನು ಮನೆಗೆ ಹೋಗಿ ಕೈಕಾಲು ತೊಳೆದುಕೋ,” ಎಂದು ಹೇಳಿದನು. ಊರೀಯನು ಅರಮನೆಯಿಂದ ಹೊರಟ ಕೂಡಲೇ ಅವನ ಹಿಂದೆಯೇ ಅರಸನ ಭೋಜನ ಪದಾರ್ಥಗಳೂ ಹೋದವು. ಆದರೆ ಊರೀಯನು ಮನೆಗೆ ಹೋಗದೆ ಅರಸರ ಸೇವಕರೊಡನೆ ಅರಮನೆಯ ಬಾಗಿಲಲ್ಲೇ ಮಲಗಿಕೊಂಡನು. ಊರೀಯನು ತನ್ನ ಮನೆಗೆ ಹೋಗಲಿಲ್ಲ ಎಂಬ ವರ್ತಮಾನ ದಾವೀದನಿಗೆ ಮುಟ್ಟಿತು. ಆಗ ದಾವೀದನು ಊರೀಯನಿಗೆ, “ನೀನು ದೀರ್ಘ ಪ್ರಯಾಣ ಮಾಡಿ ಬಂದಿರುವೆಯಲ್ಲ , ಏಕೆ ಮನೆಗೆ ಹೋಗಲಿಲ್ಲ”? ಎಂದನು. ಮರುದಿನ ದಾವೀದನು ಅವನನ್ನು ಅನ್ನಪಾನ ತೆಗೆದುಕೊಳ್ಳಬೇಕೆಂದು ತನ್ನ ಮನೆಗೆ ಕರೆದುಕೊಂಡು ಹೋಗಿ ಕುಡಿಸಿ ಮತ್ತನನ್ನಾಗಿ ಮಾಡಿದನು. ಆದರೆ ಆ ರಾತ್ರಿಯೂ ಅವನು ಹೋಗಿ ತನ್ನ ಯಜಮಾನನ ಸೇವಕರ ಹತ್ತಿರ ಹಾಸಿಗೆ ಹಾಸಿ ಮಲಗಿಕೊಂಡನೆ ಹೊರತು ತನ್ನ ಮನೆಗೆ ಹೋಗಲಿಲ್ಲ. ಮರುದಿನ ಬೆಳಿಗ್ಗೆ ದಾವೀದನು ಯೋವಾಬನಿಗೆ ಒಂದು ಪತ್ರ ಬರೆದು ಅದನ್ನು ಊರೀಯನ ಕೈಯಲ್ಲಿ ಕೊಟ್ಟೂ ಕಳುಹಿಸಿದನು. ಅದರಲ್ಲಿ ಹೀಗೆ ಬರೆಯಲಾಗಿತ್ತು “ ಊರೀಯನು ಗಾಯಗೊಂಡು ಸಾಯುವಂತೆ ಅವನನ್ನು ಘೋರ ಯುದ್ಧ ನಡೆಯುತ್ತಿರುವ ಕಡೆ, ಮುಂಭಾಗದಲ್ಲಿ ನಿಲ್ಲಿಸಿ ನೀವು ಹಿಂದಕ್ಕೆ ಸರಿದುಕೊಳ್ಳಿ.” ಯೋವಾಬನು ಪಟ್ಟಣಕ್ಕೆ ಮುತ್ತಿಗೆ ಹಾಕುವಾಗ ಶತ್ರು ಸೈನಿಕರು ಎಲ್ಲಿ ಪ್ರಬಲರಾಗಿರುತ್ತಾರೆಂದು ಗೊತ್ತು ಮಾಡಿಕೊಂಡು ಊರೀಯನನ್ನು ಅಲ್ಲಿಗೆ ಕಳುಹಿಸಿದನು. ಆ ಊರಿನ ಜನರು ಹೊರಗೆ ಬಂದು ಯೋವಾಬನ ಸೈನ್ಯದೊಡನೆ ಹೋರಾಡಿದರು. ದಾವೀದನ ಸೇವಕರಲ್ಲಿ ಕೆಲವರು ಸತ್ತರು. ಹಿತ್ತಿಯನಾದ ಊರೀಯನೂ ಮಡಿದನು.ಕೀರ್ತನೆ
50:1-5,8-9, v.1
ಶ್ಲೋಕ: ಕೃಪಾಳು ದೇವಾ, ಕರುಣಿಸೆನ್ನನು.
1. ಕೃಪಾಳು ದೇವಾ ಕರುಣಿಸೆನ್ನನು|
ಕರುಣಾನಿಧಿ ಅಳಿಸೆನ್ನ ದೋಷವನು||
ತೊಳೆ ಪೂರ್ತಿಯಾಗಿ ಪಾಪದಿಂದೆನ್ನನು|
ದೋಷಪರಿಹರಿಸಿ ಶುದ್ಧಗೊಳಿಸೆನ್ನನು||
ಶ್ಲೋಕ
2. ಒಪ್ಪಿಕೊಂಡೆನಿದೋ ನಾನೇ ಅಪರಾಧಿ|
ಕಟ್ಟಿದಂತಿದೆ ಕಣ್ಗೆ ಪಾಪ ದಿನವಿಡಿ||
ಹೌದು ದೇವಾ, ನಿನಗೆ ದ್ರೋಹವೆಸಗಿದೆ|
ನಿನ್ನ ಕಣ್ಗೆ ಕೆಟ್ಟದುದನೇ ಮಾಡಿದೆ||
ಶ್ಲೋಕ
3. ನಿನ್ನ ನಿರ್ಣಯವು ನ್ಯಾಯಯುತ|
ನೀ ನೀಡುವ ತೀರ್ಪು ನಿರ್ಲಿಪ್ತ||
ನಾ ಜನಿಸಿದೆ ಪಾಪದಲ್ಲೇ|
ದ್ರೋಹಿ ನಾ ಮಾತೃ ಗರ್ಭದಿಂದಲೇ||
ಶ್ಲೋಕ
4. ಹರ್ಷಾನಂದವನು ಮೊಳಗಿಸೆನ್ನೊಳು|
ಪುಳಕಗೊಳ್ಳುವುವು ನೀ ಮುರಿದೆಲುಬುಗಳು||
ನನ್ನ ಪಾಪದೋಷಕೆ ವಿಮುಖನಾಗು|
ಸರ್ವ ದ್ರೋಹಗಳನು ಅಳಿಸಿಹಾಕು||
ಶ್ಲೋಕ
ಘೋಷಣೆ
2 ತಿಮೊತಿ 1:10
ಅಲ್ಲೆಲೂಯ, ಅಲ್ಲೆಲೂಯ!
ನಮ್ಮ ಉದ್ಧಾರಕ ಕ್ರಿಸ್ತಯೇಸು ಮೃತ್ಯುಶಕ್ತಿಯನ್ನು ವಿನಾಶಗೊಳಿಸಿ | ಅಮರ ಜೀವವನ್ನು ಶುಭಸಂದೇಸದ ಮೂಲಕ ಬೆಳಕಿಗೆ ತಂದರು ||
ಅಲ್ಲೆಲೂಯ!
ಶುಭಸಂದೇಶ : ಮಾರ್ಕ 4:26-34
ಯೇಸು ಸ್ವಾಮಿ ಉಪದೇಶವನ್ನು ಮುಂದುವರಿಸಿ, “ದೇವರ ಸಾಮ್ರಾಜ್ಯವನ್ನು ಯಾವುದಕ್ಕೆ ಹೋಲಿಸೋಣ? ಅದಕ್ಕಾಗಿ ಯಾವ ಸಾಮತಿಯನ್ನು ಉಪಯೋಗಿಸೋಣ? ಭೂಮಿಯಲ್ಲಿರುವ ಕಾಳುಗಳಲ್ಲಿ ಅತಿ ಚಿಕ್ಕದಾಗಿರುವ ಸಾಸಿವೆ ಕಾಳಿಗೂ ಅದನ್ನು ಹೋಲಿಸಬಹುದು. ಸಾಸಿವೆ ಕಾಳು ಚಿಕ್ಕದಾಗಿದ್ದರೂ ಬಿತ್ತನೆಯ ತರುವಾಯ ಮೊಳೆತು ಎಲ್ಲಾ ಕಾಯಿಪಲ್ಯದ ಸಸಿಗಳಿಗಿಂತಲೂ ದೊಡ್ಡದಾಗಿ ಬೆಳೆಯುತ್ತದೆ. ಹಕ್ಕಿಗಳು ಬಂದು ಅದರ ನೆರಳಿನಲ್ಲಿ ಗೂಡುಕಟ್ಟಿ ವಾಸಿಸುವಷ್ಟು ದೊಡ್ಡದಾದ ರಂಬೆಗಳನ್ನು ಅದು ತಳೆಯುತ್ತದೆ,” ಎಂದರು. ಯೇಸುಸ್ವಾಮಿ ಈ ಬಗೆಯ ಸಾಮತಿಗಳನ್ನು ಉಪಯೋಗಿಸಿ ಜನರಿಗೆ ದೇವರ ಸಂದೇಶವನ್ನು ಅವರವರ ತಿಳುವಳಿಕೆಗೆ ತಕ್ಕಂತೆ ಉಪದೇಶಿಸುತ್ತಿದ್ದರು. ಸಾಮತಿಗಳನ್ನು ಉಪಯೋಗಿಸದೆ ಅವರು ಬೋಧಿಸುತ್ತಿರಲಿಲ್ಲ. ಅದರೆ ತಮ್ಮ ಆಪ್ತ ಶಿಷ್ಯರೊಡನೆ ಪ್ರತ್ಯೇಕವಾಗಿದ್ದಾಗ ಅವರಿಗೆ ಎಲ್ಲವನ್ನು ವಿವರಿಸಿ ಹೇಳುತ್ತಿದ್ದರು.

No comments:
Post a Comment