27.01.2026 - ದೈವೇಚ್ಛೆಯನ್ನು ಯಾರು ನೆರವೇರಿಸುತ್ತಾರೋ ಅವರೇ ನನಗೆ ಸಹೋದರ, ಸಹೋದರಿ, ತಾಯಿ

 ಮೊದಲನೇಯ ವಾಚನ : 2 ಸಮುವೇಲ 6:12-15, 17-19


ಹೀಗೆ ಸರ್ವೇಶ್ವರ ತಮ್ಮ ಮಂಜೂಷದ ಕಾರಣ ಓಬೇದೆದೋಮನನ್ನೂ ಅವನಿಗಿರುವುದೆಲ್ಲವನ್ನೂ ಆಶೀರ್ವದಿಸಿದ್ದಾರೆಂಬ ವರ್ತಮಾನ ದಾವೀದನಿಗೆ ಮುಟ್ಟಿತು. ಅವನು ಹೋಗಿ ಓಬೇದೆದೋಮನ ಮನೆಯಲ್ಲಿದ್ದ ದೇವರ ಮಂಜೂಷವನ್ನು ಉತ್ಸವದಿಂದ ದಾವೀದ ನಗರಕ್ಕೆ ತಂದನು. ಸರ್ವೇಶ್ವರನ ಮಂಜೂಷವನ್ನು ಹೊತ್ತವರು ಆರು ಹೆಜ್ಜೆ ನಡೆದ ನಂತರ ದಾವೀದನು ಒಂದು ಎತ್ತನ್ನೂ ಒಂದು ಕೊಬ್ಬಿದ ಕರುವನ್ನೂ ಬಲಿದಾನ ಮಾಡಿದನು. ದಾವೀದನು ಏಫೋದೆಂಬ ನಾರುಮಡಿಯನ್ನು ಮಾತ್ರ ಉಟ್ಟುಕೊಂಡು ಸರ್ವೇಶ್ವರನ ಸನ್ನಿಧಿಯಲ್ಲಿ ಪೂರ್ಣಾವೇಶದಿಂದ ಕುಣಿದಾಡಿದನು. ಹೀಗೆ ದಾವೀದನು ಹಾಗು ಎಲ್ಲ ಇಸ್ರಯೇಲರೂ ಜಯಕಾರಮಾಡುತ್ತಾ ತುತ್ತೂರಿ ಊದುತ್ತಾ ಸರ್ವೇಶ್ವರನ ಮಂಜೂಷವನ್ನು ತಂದನು. ಜನರು ಸರ್ವೇಶ್ವರನ ಮಂಜೂಷವನ್ನು ತಂದು ದಾವೀದನು ಕಟ್ಟಿಸಿದ್ದ ಗುಡಾರದೊಳಗೆ ನಿಯಮಿತ ಸ್ಥಳದಲ್ಲಿ ಇಟ್ಟರು; ಆಗ ದಾವೀದನು ಸರ್ವೇಶ್ವರನಿಗೆ ದಹನಬಲಿಗಳನ್ನೂ ಶಾಂತಿಸಮಾಧಾನ ಬಲಿಗಳನ್ನೂ ಸಮರ್ಪಿಸಿದನು. ಇದಾದ ಮೇಲೆ ಅವನು ಸೇನಾಧೀಶ್ವರ ಸರ್ವೇಶ್ವರನ ಹೆಸರಿನಲ್ಲಿ ಎಲ್ಲರನ್ನೂ ಆಶೀರ್ವದಿಸಿದನು. ನೆರೆದುಬಂದು ಸಭೆ ಸೇರಿದ್ದ ಇಸ್ರಯೇಲರಲ್ಲಿ ಪ್ರತಿಯೊಬ್ಬ ಗಂಡಸಿಗೂ ಹೆಂಗಸಿಗೂ ಒಂದು ರೊಟ್ಟಿಯನ್ನು, ಒಂದು ತುಂಡು ಮಾಂಸವನ್ನು ಹಾಗು ದ್ರಾಕ್ಷಿ ಹಣ್ಣಿನಿಂದ ಮಾಡಿದ ಉಂಡೆಯನ್ನು ಕೊಡಿಸಿದನು. ತರುವಾಯ ಜನರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋದರು.


ಕೀರ್ತನೆ
24:7,8,9,10, v. 7

ಶ್ಲೋಕ:  ಆಗಮಿಸುತಿಹನಿದೋ ಮಹಿಮಾವಂತ ರಾಜಾಧಿರಾಜನು.

1.  ಆಗಮಿಸುತಿಹನಿದೋ ಮಹಿಮಾವಂತ ರಾಜಾಧಿರಾಜನು|
ತೆರೆದು ಸ್ವಾಗತಿಸಲಿ ಕದಗಳು ಸನಾತನ ದ್ವಾರಗಳು||
ಯಾರಿವನು ಮಹಿಮಾವಂತ ರಾಜಾಧಿರಾಜನು?|
ಇವನೇ ಪ್ರಭು, ಯುದ್ಧವೀರನು, ಶಕ್ತಿಸಮರ್ಥನು!||
ಶ್ಲೋಕ

2.  ಆಗಮಿಸುತಿಹನಿದೋ ಮಹಿಮಾವಂತ ರಾಜಾಧಿರಾಜನು|
ತೆರೆದು ಸ್ವಾಗತಿಸಲಿ ಕದಗಳು ಸನಾತನ ದ್ವಾರಗಳು||
ಯಾರಿವನು ಮಹಿಮಾವಂತ ರಾಜಾಧಿರಾಜನು?|
ಇವನೇ ಸೇನಾಧೀಶ್ವರನು, ಮಹಿಮಾರಾಜನು||
ಶ್ಲೋಕ

ಘೋಷಣೆ
(2 ಕೊರಿಂಥ 5:19)

ಅಲ್ಲೆಲೂಯ, ಅಲ್ಲೆಲೂಯ!
ದೇವರು ಕ್ರಿಸ್ತ ಯೇಸುವಿನಲ್ಲಿ ಇಡೀ ಜಗತ್ತನ್ನೇ ತಮ್ಮೊಡನೆ ಸಂದಾನಗೊಳಿಸಿ | ಆ ಸಂದಾನದ ಸಂದೇಶವನ್ನು, ಸಾರುವ ಸೌಭಾಗ್ಯವನ್ನು ನಮಗೆ ಕೊಟ್ಟಿದ್ದಾರೆ ||
ಅಲ್ಲೆಲೂಯ!


ಶುಭಸಂದೇಶ - ಮಾರ್ಕ 03:31 -35

ಯೇಸುಸ್ವಾಮಿಯ ತಾಯಿ ಮತ್ತು ಸಹೋದರರು ಅಲ್ಲಿಗೆ ಬಂದರು. ಒಳಗೆ ಜನರು ಯೇಸುವಿನ ಸುತ್ತಲೂ ಗುಂಪಾಗಿ ಕುಳಿತಿದ್ದರು. ಆದುದರಿಂದ ಅವರು ಹೊರಗೇ ನಿಂತು, ಯೇಸುವಿಗೆ ಬರಬೇಕೆಂದು ಹೇಳಿಕಳುಹಿಸಿದರು. “ನಿಮ್ಮ ತಾಯಿಯೂ ಸಹೋದರರೂ ಹೊರಗೆ ನಿಮಗಾಗಿ ಕಾದಿದ್ದಾರೆ,” ಎಂದು ಯೇಸುವಿಗೆ ತಿಳಿಸಿದರು. ಅದಕ್ಕೆ ಯೇಸು, “ನನಗೆ ತಾಯಿ ಯಾರು?, ಸಹೋದರರು ಯಾರು?” ಎನ್ನುತ್ತಾ ತಮ್ಮ ಸುತ್ತಲೂ ಕುಳಿತಿದ್ದವರ ಮೇಲೆ ದೃಷ್ಟಿ ಹರಿಸಿ, "ಇಗೋ, ನನ್ನ ತಾಯಿ! ಇಗೋ ನನ್ನ ಸಹೋದರರು! ದೈವೇಚ್ಛೆಯನ್ನು ಯಾರು ನೆರವೇರಿಸುತ್ತಾರೋ ಅವರೇ ನನಗೆ ಸಹೋದರ, ಸಹೋದರಿ, ತಾಯಿ,” ಎಂದರು.

No comments:

Post a Comment

29.01.2026 - ಯಾರಾದರೂ ಉರಿಯುವ ದೀಪವನ್ನು ತಂದು ಬಟ್ಟಲ ಒಳಗಾಗಲಿ, ಮಂಚದ ಕೆಳಗಾಗಲಿ ಇಡುವುದುಂಟೇ

  ಮೊದಲನೇಯ ವಾಚನ : 2 ಸಮುವೇಲ 7:18-19, 24-29 ಬಳಿಕ ದಾವೀದನು ಸರ್ವೇಶ್ವರನ ಸನ್ನಿಧಿಗೆ ಹೋಗಿ ಅಲ್ಲಿ ಕುಳಿತುಕೊಂಡು, “ಹೇ ಸರ್ವೇಶ್ವರಾ, ಸರ್ವೇಶ್ವರಾ, ತಾವು ನನ್ನನ್ನು...