ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

10.07.2025 - "ತೀರ್ಪಿನ ದಿನ ಆ ಊರಿನ ಗತಿ ಸೊದೋಮ್ ಮತ್ತು ಗೊಮೋರ ಊರುಗಳ ಗತಿಗಿಂತ ಕಠಿಣವಾಗಿರುವುದೆಂದು ನಾನು ನಿಮಗೆ ಒತ್ತಿ ಹೇಳುತ್ತೇನೆ"

 ಮೊದಲನೆಯ ವಾಚನ: ಆದಿಕಾಂಡ 44:18-21, 23-29; 45:1-5



ಆಗ ಯೆಹೂದನು ಹತ್ತಿರಕ್ಕೆ ಬಂದು, “ನನ್ನೊಡೆಯಾ, ತಮ್ಮ ಸೇವಕನಾದ ನಾನು ಒಂದು ಮಾತನ್ನು ಅರಿಕೆಮಾಡಿಕೊಳ್ಳುತ್ತೇನೆ: ನನ್ನ ಮೇಲೆ ಸಿಟ್ಟುಮಾಡಬೇಡಿ; ತಾವು ಫರೋಹನಿಗೆ ಸಮಾನರು. ಒಡೆಯರಾದ ತಾವು ಸೇವಕರಾದ ನಮ್ಮನ್ನು, ‘ನಿಮಗೆ ತಂದೆಯಾಗಲಿ, ತಮ್ಮನಾಗಲಿ ಇದ್ದಾರೋ?’ ಎಂದು ಕೇಳಿದಿರಿ. ನಾವು ‘ತಂದೆ ಇದ್ದಾರೆ, ಅವರು ಮುದುಕ; ಮುಪ್ಪಿನಲ್ಲಿ ಅವರಿಗೆ ಹುಟ್ಟಿದ ಒಬ್ಬ ಚಿಕ್ಕ ಹುಡುಗ ಇದ್ದಾನೆ. ಅವನ ಒಡಹುಟ್ಟಿದವನು ಸತ್ತುಹೋದ. ಅವನ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದವರಲ್ಲಿ ಅವನೊಬ್ಬನೇ ಉಳಿದಿದ್ದಾನೆ. ಅವನ ಮೇಲೆ ತಂದೆಗೆ ಅಪಾರ ಪ್ರೀತಿ,’ ಎಂದು ಹೇಳಿದೆವು. ಅದಕ್ಕೆ ತಾವು ಸೇವಕರಾದ ನಮಗೆ, ‘ನಾನು ಆ ಹುಡುಗನನ್ನು ನೋಡಬೇಕು, ಅವನನ್ನು ನನ್ನ ಬಳಿಗೆ ಕರೆದು ತನ್ನಿ,’ ಎಂದು ಅಪ್ಪಣೆಕೊಟ್ಟಿರಿ. ಅದಕ್ಕೆ ತಾವು, ‘ನಿಮ್ಮ ತಮ್ಮನು ಬಾರದಿದ್ದರೆ ನೀವು ಮತ್ತೊಮ್ಮೆ ನನ್ನ ಮುಖವನ್ನು ನೋಡಕೂಡದು,’ ಎಂದು ಆಜ್ಞೆಕೊಟ್ಟಿರಿ. “ತಮ್ಮ ಸೇವಕರಾದ ನಾವು ನಮ್ಮ ತಂದೆಯ ಬಳಿಗೆ ಹೋದಾಗ ಒಡೆಯರ ಮಾತನ್ನು ತಿಳಿಸಿದೆವು. ನಮ್ಮ ತಂದೆ, ‘ನೀವು ಇನ್ನೊಮ್ಮೆ ಹೋಗಿ ಧಾನ್ಯ ಕೊಂಡುಕೊಂಡು ಬನ್ನಿ’ ಎಂದಾಗ, ನಾವು, ‘ಹೋಗಲಾಗದು, ತಮ್ಮನು ನಮ್ಮ ಜೊತೆಯಲ್ಲಿ ಇಲ್ಲವಾದರೆ ಆ ಮನುಷ್ಯನ ಮುಖವನ್ನು ನೋಡಲಾಗದು. ತಮ್ಮನು ನಮ್ಮ ಸಂಗಡ ಬಂದರೆ ಮತ್ತೆ ಹೋಗುತ್ತೇವೆ’ ಎಂದು ಹೇಳಿದೆವು. ಅದಕ್ಕೆ ತಮ್ಮ ಸೇವಕರಾದ ನಮ್ಮ ತಂದೆ, ‘ನನ್ನ ಪತ್ನಿಯಲ್ಲಿ ನನಗೆ ಇಬ್ಬರೇ ಗಂಡು ಮಕ್ಕಳು ಹುಟ್ಟಿದರೆಂಬುದು ನಿಮಗೆ ತಿಳಿದ ವಿಷಯ. ಅವರಲ್ಲಿ ಒಬ್ಬನು ನನ್ನನ್ನು ಬಿಟ್ಟು ಹೊರಟು ಹೋದ: ಅವನು ನಿಸ್ಸಂದೇಹವಾಗಿ ಕಾಡುಮೃಗದಿಂದ ಸೀಳಿಹಾಕಲ್ಪಟ್ಟಿರಬೇಕು ಎಂದು ತಿಳಿದುಕೊಂಡೆ; ಅಂದಿನಿಂದ ಅವನನ್ನು ನಾನು ಕಂಡಿಲ್ಲ. ಈಗ ಇವನನ್ನೂ ನನ್ನ ಬಳಿಯಿಂದ ತೆಗೆದುಕೊಂಡು ಹೋಗಬೇಕೆಂದಿದ್ದೀರಿ. ಇವನಿಗೂ ಏನಾದರು ಆಪತ್ತು ಒದಗಿದರೆ, ಈ ನರೆಕೂದಲಿನ ಮುದುಕ ಸಂಕಟದಿಂದ ಸಮಾಧಿ ಸೇರಲು ನೀವೇ ಕಾರಣರಾಗುತ್ತೀರಿ’ ಎಂದರು. ಇದನ್ನು ಕೇಳಿದ ಮೇಲೆ ತನ್ನ ಪರಿವಾರದವರ ಮುಂದೆ, ತನ್ನನ್ನೇ ಇನ್ನು ತಡೆಹಿಡಿದುಕೊಳ್ಳಲು ಜೋಸೆಫನಿಂದ ಆಗಲಿಲ್ಲ. “ಇಲ್ಲಿಂದ ಎಲ್ಲರನ್ನು ಆಚೆ ಕಳಿಸಿರಿ,” ಎಂದು ಬಾಯ್ತೆರೆದು ಹೇಳಿದ. ಜೋಸೆಫನು ಅಣ್ಣತಮ್ಮಂದಿರಿಗೆ ತನ್ನ ಪರಿಚಯ ಸಿಗುವಂತೆ ಮಾಡುವಾಗ ಇತರರು ಯಾರೂ ಹತ್ತಿರ ಇರಲಿಲ್ಲ. ಅವನು ಗಟ್ಟಿಯಾಗಿ ಅತ್ತದ್ದು ಈಜಿಪ್ಟಿನವರಿಗೆ ಕೇಳಿಸಿತು; ಫರೋಹನ ಮನೆಯವರಿಗೂ ಆ ಸುದ್ದಿ ಮುಟ್ಟಿತು. ಜೋಸೆಫನು ತನ್ನ ಅಣ್ಣ ತಮ್ಮಂದಿರಿಗೆ, “ನಾನೇ ಜೋಸೆಫ್! ನನ್ನ ತಂದೆ ಇನ್ನೂ ಇದ್ದಾರೋ?” ಎಂದು ಕೇಳಿದ. ಅವರು ತತ್ತರಗೊಂಡು ಉತ್ತರಿಸಲಾರದೆ ಹೋದರು. ಜೋಸೆಫನು, “ಹತ್ತಿರಕ್ಕೆ ಬನ್ನಿ” ಎನ್ನಲು, ಅವರು ಹತ್ತಿರಕ್ಕೆ ಬಂದರು. ಅವನು ಅವರಿಗೆ, “ಈಜಿಪ್ಟ್ ದೇಶಕ್ಕೆ ಹೋಗಲಿ” ಎಂದು ನೀವು ಮಾರಿಬಿಟ್ಟ ನಿಮ್ಮ ತಮ್ಮ ಜೋಸೆಫ್ ನಾನೇ. ನೀವು ನನ್ನನ್ನು ಇಲ್ಲಿಗೆ ಮಾರಿದ್ದಕ್ಕಾಗಿ ವ್ಯಸನಪಡಬೇಡಿ, ನಿಮ್ಮನ್ನೇ ನಿಂದಿಸಿಕೊಳ್ಳಬೇಡಿ. ಏಕೆಂದರೆ ಜೀವ ರಕ್ಷಣೆಗಾಗಿಯೇ ದೇವರು ನನ್ನನ್ನು ನಿಮಗೆ ಮುಂಚಿತವಾಗಿ ಇಲ್ಲಿಗೆ ಕಳುಹಿಸಿದರು.

ಕೀರ್ತನೆ 105:16-17, 18-19, 20-21
ಶ್ಲೋಕ: ಧ್ಯಾನಿಸಿ ನೀವು ಪ್ರಭುವಿನ ಪವಾಡಗಳನು. 

ತದನಂತರ ಬರಮಾಡಿದನಾ ನಾಡಿನಲಿ ಕ್ಷಾಮವನು
ಮುರಿದುಬಿಟ್ಟನು ಆಹಾರವೆ0ಬ ಊರುಗೊಲನು
ಕಳುಹಿಸಿದ ಅವರಿಗೆ ಮು0ದಾಗಿ ಒಬ್ಬಾತನನು
ದಾಸತ್ವಕೆ ಮಾರಲಾದ ಆ ಜೋಸೆಫನನು

ಅವನ ಕಾಲು ನೊ0ದವು ಸ0ಕೋಲೆಗಳಿಂದ
ಕುತ್ತಿಗೆ ಕೊರೆಯಿತು ಕಬ್ಬಿಣದ ಕೋಳಗಳಿಂದ
ಕ್ರಮೇಣ ಕೈಗೊ0ಡಿತು ಜೋಸೆಫನು ನುಡಿದದ್ದು
ಪ್ರಭುವಿನ ವಾಣಿ ಕ0ಡುಬ0ದಿತು ಸತ್ಯವೆಂದು

ಬಿಡಿಸಲವನನು ಅರಸ ಕಳಿಸಿದ ಆಳನು
ಬಿಡುಗಡೆ ಮಾಡಿದ ಜನಾಧಿಪತಿ ಅವನನು
ನೇಮಿಸಿದವನನು ತನ್ನ ಮನೆಗೆ ಯಾಜಮಾನನ್ನಾಗಿ
ಮಾಡಿದ ತನ್ನಾಸ್ತಿಗೆಲ್ಲಾ ಅಧಿಕಾರಿಯನ್ನಾಗಿ

ಶುಭಸಂದೇಶ: ಮತ್ತಾಯ 10:6-15

ಅದಕ್ಕೆ ಬದಲು ತಪ್ಪಿಹೋದ ಕುರಿಗಳಂತೆ ಇರುವ ಇಸ್ರಯೇಲ್ ಜನರ ಬಳಿಗೆ ಹೋಗಿರಿ; ಹೋಗುತ್ತಾ, ‘ಸ್ವರ್ಗ ಸಾಮ್ರಾಜ್ಯವು ಸಮೀಪಿಸಿದೆ’ ಎಂದು ಬೋಧನೆ ಮಾಡಿರಿ. ರೋಗಿಗಳನ್ನು ಗುಣಪಡಿಸಿರಿ, ಸತ್ತವರನ್ನು ಮತ್ತೆ ಬದುಕಿಸಿರಿ, ಕುಷ್ಠರೋಗಿಗಳನ್ನು ಸ್ವಸ್ಥಮಾಡಿರಿ, ದೆವ್ವಗಳನ್ನು ಬಿಡಿಸಿರಿ. ಉಚಿತವಾಗಿ ಪಡೆದಿರುವಿರಿ, ಉಚಿತವಾಗಿ ಕೊಡಿ. ಜೇಬಿನಲ್ಲಿ ಚಿನ್ನ, ಬೆಳ್ಳಿ, ತಾಮ್ರವನ್ನಾಗಲಿ, ಪ್ರಯಾಣಕ್ಕೆಂದು ಜೋಳಿಗೆಯನ್ನಾಗಲಿ, ಎರಡು ಅಂಗಿಗಳನ್ನಾಗಲಿ, ಕಾಲಿಗೆ ಕೆರವನ್ನಾಗಲಿ, ಕೈಗೆ ದಂಡವನ್ನಾಗಲಿ ತೆಗೆದುಕೊಳ್ಳಬೇಡಿ. ಏಕೆಂದರೆ, ದುಡಿಮೆಗಾರನು ಜೀವನಾಧಾರಕ್ಕೆ ಬಾಧ್ಯನು. "ನೀವು ಒಂದು ಪಟ್ಟಣಕ್ಕಾಗಲಿ, ಹಳ್ಳಿಗಾಗಲಿ ಹೋದಾಗ, ಅಲ್ಲಿ ನಿಮ್ಮನ್ನು ಬರಮಾಡಿಕೊಳ್ಳಲು ಯೋಗ್ಯನು ಯಾರೆಂದು ಕಂಡುಹಿಡಿಯಿರಿ. ಅಲ್ಲಿಂದ ಮುಂದಕ್ಕೆ ಸಾಗುವವರೆಗೂ ಅವನಲ್ಲೇ ತಂಗಿರಿ. ನೀವು ಒಂದು ಮನೆಗೆ ಹೋದಾಗ, "ಈ ಮನೆಗೆ ಶುಭವಾಗಲಿ!" ಎಂದು ಹರಸಿರಿ. ಆ ಮನೆಯವರು ನಿಮ್ಮನ್ನು ಸ್ವಾಗತಿಸಿದರೆ, ನಿಮ್ಮ ಆಶೀರ್ವಾದ ಅವರ ಮೇಲೆ ನೆಲಸಲಿ. ನಿಮ್ಮನ್ನು ಸ್ವಾಗತಿಸದೆ ಹೋದರೆ, ನಿಮ್ಮ ಆಶೀರ್ವಾದ ನಿಮಗೇ ಹಿಂದಿರುಗಲಿ. ಒಂದು ಮನೆಯೇ ಆಗಲಿ, ಊರೇ ಆಗಲಿ, ನಿಮ್ಮನ್ನು ಸ್ವಾಗತಿಸದೆ ಅಥವಾ ನಿಮಗೆ ಕಿವಿಗೊಡದೆ ಹೋದರೆ, ಆ ಮನೆಯನ್ನು ಅಥವಾ ಊರನ್ನು ಬಿಟ್ಟು ಮುಂದಕ್ಕೆ ಹೋಗಿರಿ. ಹೋಗುವಾಗ ನಿಮ್ಮ ಪಾದಗಳಿಗೆ ಅಂಟಿರುವ ಧೂಳನ್ನೂ ಝಾಡಿಸಿಬಿಡಿ. ತೀರ್ಪಿನ ದಿನ ಆ ಊರಿನ ಗತಿ ಸೊದೋಮ್ ಮತ್ತು ಗೊಮೋರ ಊರುಗಳ ಗತಿಗಿಂತ ಕಠಿಣವಾಗಿರುವುದೆಂದು ನಾನು ನಿಮಗೆ ಒತ್ತಿ ಹೇಳುತ್ತೇನೆ.

07.07.2025 - "ನಾನು ಅವರ ಉಡುಪನ್ನು ಮುಟ್ಟಿದರೂ ಸಾಕು, ಗುಣ ಹೊಂದುವೆನು"

 ಮೊದಲನೇ ವಾಚನ: ಆದಿಕಾಂಡ 28: 10-22


ಯಕೋಬನು ಖಾರಾನಿಗೆ ಹೋಗಬೇಕೆಂದು ಬೇರ್ಷೆಬದಿಂದ ಹೊರಟನು. ಪ್ರಯಾಣ ಮಾಡುತ್ತಾ ಅವನು ಒಂದು ಸ್ಥಳಕ್ಕೆ ಬಂದು ಸೇರಿದನು. ಹೊತ್ತು ಮುಳುಗಿದ್ದ ಕಾರಣ ಆ ರಾತ್ರಿ ಅಲ್ಲಿಯೇ ಇಳಿದುಕೊಂಡನು. ಅಲ್ಲಿದ್ದ ಕಲ್ಲುಗಳಲ್ಲಿ ಒಂದು ಕಲ್ಲನ್ನು ತಲೆದಿಂಬಾಗಿ ಇಟ್ಟುಕೊಂಡು ಆ ಸ್ಥಳದಲ್ಲೇ ಮಲಗಿಕೊಂಡನು. ಆ ರಾತ್ರಿ ಅವನಿಗೆ ಒಂದು ಕನಸು ಬಿತ್ತು. ಆ ಕನಸಿನಲ್ಲಿ ಒಂದು ನಿಚ್ಚಣಿಗೆ ನೆಲದ ಮೇಲೆ ನಿಂತಿತ್ತು; ಅದರ ತುದಿ ಆಕಾಶವನ್ನು ಮುಟ್ಟಿತ್ತು. ಅದರ ಮೇಲೆ ದೇವದೂತರು ಹತ್ತುತ್ತಾ ಇಳಿಯುತ್ತಾ ಇದ್ದರು. ಇದಲ್ಲದೆ, ಸರ್ವೇಶ್ವರಸ್ವಾಮಿ ಅವನ ಬಳಿಯಲ್ಲೇ ನಿಂತು, “ನಿನ್ನ ತಂದೆಯೂ ಅಬ್ರಹಾಮನ ದೇವರೂ ಇಸಾಕನ ದೇವರೂ ಆಗಿರುವ ಸರ್ವೇಶ್ವರ ನಾನೇ. ನೀನು ಮಲಗಿಕೊಂಡಿರುವ ಈ ನಾಡನ್ನು ನಿನಗೂ ನಿನ್ನ ಸಂತತಿಗೂ ಕೊಡುತ್ತೇನೆ. ನಿನ್ನ ಸಂತತಿ ಭೂಮಿಯ ಧೂಳಿನಂತೆ ಅಸಂಖ್ಯ ಆಗುವುದು; ನೀನು ಪೂರ್ವಪಶ್ಚಿಮ - ದಕ್ಷಿಣೋತ್ತರ ದಿಕ್ಕುಗಳಿಗೆ ಹರಡಿಕೊಳ್ಳುವೆ. ನಿನ್ನ ಮುಖಾಂತರ ಹಾಗೂ ನಿನ್ನ ಸಂತತಿಯ ಮುಖಾಂತರ ಜಗದ ಎಲ್ಲ ರಾಷ್ಟ್ರಗಳೂ ಆಶೀರ್ವಾದ ಪಡೆಯುವುವು. ಗಮನಿಸು, ನಾನು ನಿನ್ನೊಂದಿಗೆ ಇರುತ್ತೇನೆ. ನೀನು ಎಲ್ಲಿಗೆ ಹೋದರೂ ನಿನ್ನನ್ನು ಕಾಪಾಡಿ ಈ ನಾಡಿಗೆ ಮರಳಿ ಬರಮಾಡುತ್ತೇನೆ. ನಾನು ನಿನಗೆ ಹೇಳಿದ್ದನ್ನೆಲ್ಲ ನೆರವೇರಿಸದೆ ಬಿಡುವುದಿಲ್ಲ,” ಎಂದರು. ಯಕೋಬನು ನಿದ್ರೆಯಿಂದ ಎಚ್ಚೆತ್ತನು. “ನಿಶ್ಚಯವಾಗಿ ಸರ್ವೇಶ್ವರ ಈ ಸ್ಥಳದಲ್ಲಿದ್ದಾರೆ; ಇದು ನನಗೆ ತಿಳಿಯದೆ ಹೋಯಿತು!” ಎಂದುಕೊಂಡನು; ಅಲ್ಲದೆ ಭಯಭಕ್ತಿಯಿಂದ, “ಇದು ಮಹಾಗಂಭೀರವಾದ ಸ್ಥಳ; ದೇವರ ಸ್ಥಾನವೇ ಹೊರತು ಬೇರೆಯಲ್ಲ, ಇದು ಪರಲೋಕದ ಬಾಗಿಲು!” ಎಂದನು. ಯಕೋಬನು ಬೆಳಗಿನ ಜಾವದಲ್ಲಿ ಎದ್ದು ತಾನು ತಲೆದಿಂಬಾಗಿ ಇಟ್ಟುಕೊಂಡಿದ್ದ ಆ ಕಲ್ಲನ್ನು ಸ್ಮಾರಕಸ್ತಂಭವಾಗಿ ನೆಟ್ಟನು. ಅದರ ಮೇಲೆ ಎಣ್ಣೆ ಹೊಯ್ದು ಅಭ್ಯಂಗಿಸಿದನು. ‘ಲೂಜ್’ ಎಂದು ಹೆಸರು ಪಡೆದಿದ್ದ ಆ ಊರಿಗೆ ‘ಬೇತೇಲ್’ ಎಂದು ನಾಮಕರಣ ಮಾಡಿದನು. ಅದೂ ಅಲ್ಲದೆ ಅವನು ಹೀಗೆಂದು ಹರಕೆ ಮಾಡಿಕೊಂಡನು: “ದೇವರು ನನ್ನ ಸಂಗಡವಿದ್ದು ನಾನು ಕೈಗೊಂಡ ಪ್ರಯಾಣದಲ್ಲಿ ನನ್ನನ್ನು ಕಾಪಾಡಿ, ಹೊಟ್ಟೆಗೆ ಊಟವನ್ನೂ ಮೈಗೆ ಬಟ್ಟೆಯನ್ನೂ ಕೊಟ್ಟು, ನನ್ನ ತಂದೆಯ ಮನೆಗೆ ಸುರಕ್ಷಿತವಾಗಿ ಮರಳಿ ಬರಮಾಡಿದರೆ ಸರ್ವೇಶ್ವರಸ್ವಾಮಿಯೇ ನನಗೆ ದೇವರು ಆಗುವರು. ನಾನು ಸ್ಮಾರಕಸ್ತಂಭವಾಗಿ ನೆಟ್ಟಿರುವ ಈ ಕಲ್ಲು ದೇವರ ಮನೆಯಾಗುವುದು; ಅದು ಮಾತ್ರವಲ್ಲ, ನೀವು ನನಗೆ ಕೊಡುವ ಎಲ್ಲ ಆಸ್ತಿಪಾಸ್ತಿಯಲ್ಲಿ ಹತ್ತರಲ್ಲಿ ಒಂದು ಪಾಲನ್ನು ನಿಮಗೆ ಸಮರ್ಪಿಸುತ್ತೇನೆಂದು ಮಾತುಕೊಡುತ್ತೇನೆ.”

ಕೀರ್ತನೆ: 91:1-2, 3-4, 14-15
ಶ್ಲೋಕ:  ನೀನೇ ನನ್ನ ರಕ್ಷಕನೂ ದುರ್ಗವೂ ನಾ ನಂಬಿದ ದೇವನು

ಪರಾತ್ಪರ ಮೊರೆಹೊಕ್ಕಿರುವವನು
ಸರ್ವಶಕ್ತನ ಆಶ್ರಯದಲ್ಲಿ ಸುರಕ್ಷಿತನು
ನಾನಾತನಿಗೆ ನೀನೇ ನನ್ನ ರಕ್ಷಕನು
ದುರ್ಗವೂ ನಾ ನಂಬಿರುವ ದೇವನು ಎನ್ನುವೆನು

ತಪ್ಪಿಸುವನಾತನು ಬೇಟೆಗಾರನ ಬಲೆಯಿಂದ
ರಕ್ಷಿಸುವನು ಮಾರಕವಾದ ವ್ಯಾಧಿಯಿಂದ
ಹುದುಗಿಸುವನು ನಿನ್ನನು ತನ್ನ ಗರಿಗಳ ತೆಕ್ಕೆಯಲಿ
ಆಶ್ರಯ ಪಡುವೆ ನಿ ಆತನ ರಕ್ಕೆಗಳಡಿಯಲಿ

ಪ್ರಭು ನನ್ನ ಭಕ್ತನಾದ್ದರಿ0ದ ವಿಮೋಚಿಸುವೆನು ಅವನನು
ನನ್ನ ನಾಮವನು ಅರಿತವನಾದ್ದರಿಂದ ರಕ್ಷಿಸುವೆನು
ನನಗೆ ಮೊರೆಯಿಟ್ಟಾಗ ಕಿವಿಗೊಡುವೆನು
ಸಂಕಟದೊಳು ಅವನ ಸಂಗಡವಿರುವೆನು
ಅವನನು ಉದ್ದರಿಸಿ ಘನಪಡಿಸುವೆನು

ಶುಭಸಂದೇಶ: ಮತ್ತಾಯ 9:18-26


ಯೇಸುಸ್ವಾಮಿ ಹೀಗೆ ಬೋಧಿಸುತ್ತಿರುವಾಗಲೇ ಯೆಹೂದ್ಯ ಅಧಿಕಾರಿಯೊಬ್ಬನು ಅಲ್ಲಿಗೆ ಬಂದನು. ಅವನು ಯೇಸುವಿನ ಮುಂದೆ ಮೊಣಕಾಲೂರಿ, "ನನ್ನ ಮಗಳು ಈಗ ತಾನೆ ಸತ್ತುಹೋದಳು. ಆದರೂ ತಾವು ದಯಮಾಡಿಸಿ ತಮ್ಮ ಹಸ್ತವನ್ನು ಆಕೆಯ ಮೇಲಿಡಬೇಕು. ಅವಳು ಮರಳಿ ಬದುಕುವಳು," ಎಂದು ಬೇಡಿಕೊಂಡನು. ಯೇಸು ಎದ್ದು ಅವನ ಹಿಂದೆ ಹೊರಟರು. ಶಿಷ್ಯರೂ ಹಿಂಬಾಲಿಸಿ ಹೋದರು. ಹೋಗುತ್ತಿದ್ದಾಗ, ಹನ್ನೆರಡು ವರ್ಷಗಳಿಂದ ರಕ್ತಸ್ರಾವ ರೋಗದಿಂದ ಬಹಳವಾಗಿ ನರಳುತ್ತಿದ್ದ ಒಬ್ಬ ಮಹಿಳೆ ಹಿಂಬದಿಯಿಂದ ಬಂದು ಯೇಸುಸ್ವಾಮಿಯ ಉಡುಪಿನ ಅಂಚನ್ನು ಮುಟ್ಟಿದಳು. "ನಾನು ಅವರ ಉಡುಪನ್ನು ಮುಟ್ಟಿದರೂ ಸಾಕು, ಗುಣಹೊಂದುವೆನು" ಎಂದುಕೊಂಡಿದ್ದಳು ಆಕೆ. ಯೇಸು ಹಿಂದಿರುಗಿ ಆಕೆಯನ್ನು ನೋಡಿ, "ಮಗಳೇ, ಹೆದರಬೇಡ; ನಿನ್ನ ವಿಶ್ವಾಸ ನಿನ್ನನ್ನು ಗುಣಪಡಿಸಿದೆ," ಎಂದರು. ಆ ಕ್ಷಣದಲ್ಲೇ ಆಕೆ ವ್ಯಾಧಿಯಿಂದ ಮುಕ್ತಳಾದಳು. ಯೇಸು ಆ ಅಧಿಕಾರಿಯ ಮನೆಯನ್ನು ತಲುಪಿದರು. ಅಲ್ಲಿ ವಾದ್ಯಗಾರರನ್ನೂ ಗದ್ದಲ ಮಾಡುತ್ತಿದ್ದ ಜನಜಂಗುಳಿಯನ್ನೂ ಕಂಡು, "ಎಲ್ಲರೂ ಇಲ್ಲಿಂದ ಹೊರಡಿರಿ, ಬಾಲಕಿ ಸತ್ತಿಲ್ಲ; ನಿದ್ರಿಸುತ್ತಿದ್ದಾಳೆ" ಎಂದರು. ಜನರು ನಕ್ಕು ಅವರನ್ನು ಪರಿಹಾಸ್ಯ ಮಾಡಿದರು. ಆದರೂ ಜನರ ಗುಂಪನ್ನು ಹೊರಗೆ ಕಳುಹಿಸಿ, ಯೇಸು ಕೊಠಡಿಯೊಳಕ್ಕೆ ಹೋಗಿ, ಬಾಲಕಿಯ ಕೈಹಿಡಿದು ಎಬ್ಬಿಸಿದರು. ಆಕೆ ಎದ್ದಳು. ಈ ಸಮಾಚಾರ ಆ ನಾಡಿನಲ್ಲೆಲ್ಲಾ ಹಬ್ಬಿ ಹರಡಿತು.

06.07.2025 - "ಹೋಗಿರಿ, ತೋಳಗಳ ನಡುವೆ ಕುರಿಮರಿಗಳನ್ನು ಬಿಟ್ಟಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ."

ಮೊದಲನೇ ವಾಚನ: ಯೆಶಾಯ 66:10-14


"ಜೆರುಸಲೇಮನ್ನು ಪ್ರೀತಿಸುವವರೇನೀವೆಲ್ಲರೂ ಆನಂದಿಸಿರಿ ಆಕೆಯೊಂದಿಗೆಹರ್ಷಗೊಳ್ಳಿರಿ ಆಕೆಯ ಬಗ್ಗೆ ಆಕೆಯ ನಿಮಿತ್ತ  ದುಃಖಿಸುವವರೇ, "ಸಾಂತ್ವನ ನೀಡುವ ಆಕೆಯ ಸ್ತನ್ಯದಿಂದ ತೃಪ್ತಿಗೊಳ್ಳುವೆವುಹೌದುಆಕೆಯ ಸಿರಿ ಸಮೃದ್ಧಿಯನ್ನು ಹೀರುತ್ತಾ ಹಿಗ್ಗುವೆವು," ಎಂದು ನೀವೆಲ್ಲರು ಉಲ್ಲಾಸಪಡಿ ಆಕೆಯೊಂದಿಗೆ." ಸರ್ವೇಶ್ವರಸ್ವಾಮಿ ಹೀಗೆನ್ನುತ್ತಾರೆ: "ಇಗೋಆಕೆಗೆ ಹರಿಯಮಾಡುವೆನು ಸುಕಶಾಂತಿಯನ್ನು ನದಿಯಂತೆ ನೀಡುವೆ ರಾಷ್ಟ್ರಗಳ ವೈಭವವನು ತುಂಬಿ ತುಳುಕುವ ತೊರೆಯಂತೆ ನೀವಿರುವಿರಿ ಹಾಲುಕುಡಿವ ಹಸುಳೆಯಂತೆ ಎತ್ತಿಕೊಳ್ಳಲಾಗುವುದು ನಿಮ್ಮನ್ನು ತಾಯ ಕಂಕುಳಲಿ ನಲಿದಾಡುವಿರಿ ನೀವು ಆಕೆಯ ಮಡಿಲಲಿ. ನಾನೇ ನಿಮ್ಮನ್ನು ಸಂತೈಸುವೆನು ತಾಯಿಯಂತೆ ಸಾಂತ್ವನ ದೊರಕುವುದು ನಿಮಗೆ ಜೆರುಸಲೇಮಿನಲ್ಲೆ. ಇದನ್ನು ಕಂಡಾಗ ನಿಮ್ಮೆದೆ ಸಂತಸದಿಂದ ಉಬ್ಬುವುದು. ಚಿಗುರುವುದು ಹಸಿಹುಲ್ಲಂತೆ ನಿಮ್ಮೆಲುಬು. "ಸರ್ವೇಶ್ವರನ ಕೃಪಾಹಸ್ತ ತನ್ನ ಭಕ್ತರ ಮೇಲೆ ಆತನ ರೋಷಾವೇಶ ಶತ್ರುಗಳ ಮೇಲೆ" ಎಂಬುವುದು ವ್ಯಕ್ತವಾಗುವುದು ನಿಮಗೆ.

ಕೀರ್ತನೆ: 66:1-3, 4-5, 6-7, 16, 20

ಶ್ಲೋಕ: ಜಗವೆಲ್ಲ ಮಾಡಲಿ ಜಯಕಾರ ದೇವನಿಗೆ

ಎರಡನೇ ವಾಚನ: ಗಲಾತ್ಯರಿಗೆ  6:14-18


ನಮಗಾದರೋ ನಮ್ಮ ಪ್ರಭು ಯೇಸುಕ್ರಿಸ್ತರ ಶಿಲುಬೆಯನ್ನು ಬಿಟ್ಟು ಬೇರಾವುದರಲ್ಲೂ ಹೆಚ್ಚಳಪಡುವುದು ಬೇಡವೇ ಬೇಡ. ಆ ಶಿಲುಬೆಯ ಮೂಲಕನನ್ನ ಪಾಲಿಗೆ ಲೋಕವೇ ಶಿಲುಬೆಗೆ ಜಡಿಸಿಕೊಂಡು ಸತ್ತಿದೆನಾನೂ ಸಹ ಲೋಕದ ಪಾಲಿಗೆ ಶಿಲುಬೆಗೆ ಜಡಿಸಿಕೊಂಡು ಸತ್ತಿದ್ದೇನೆ. ಸುನ್ನತಿ ಮಾಡಿಸಿಕೊಳ್ಳುವುದೋಮಾಡಿಸಿ ಕೊಳ್ಳದಿರುವುದೋ ಮಹತ್ತಾದುದಲ್ಲ. ಹೊಸ ಸೃಷ್ಟಿಯಾಗುವುದೇ ಮಹತ್ತರವಾದುದು ಈ ನಿಯಮವನ್ನು ಅನುಸರಿಸುವ ಎಲ್ಲರಿಗೂಅಂದರೆ ನಿಜ ಇಸ್ರಯೇಲರಾದ  ದೇವಜನರೆಲ್ಲರಿಗೂ ಶಾಂತಿ ಸಮಾಧಾನವೂ ಕೃಪಾಶೀರ್ವಾದವೂ ಲಭಿಸಲಿ! ಇನ್ನು ಮೇಲೆ ಯಾರೂ ನನಗೆ ತೊಂದರೆ ಕೊಡದಿರಲಿ. ಯೇಸುವಿನ ದಾಸನೆಂದು ಸೂಚಿಸುವ ಕೆಂಗುರುತುಗಳು ನನ್ನ ದೇಹದಲ್ಲಿ ಮುದ್ರಿತವಾಗಿವೆ. ಸಹೋದರರೇನಮ್ಮ ಪ್ರಭು ಯೇಸುಕ್ರಿಸ್ತರ ಅನುಗ್ರಹ ನಿಮ್ಮೊಡನೆ ಇರಲಿ! ಆಮೆನ್.

ಶುಭಸಂದೇಶ: ಲೂಕ  10:1-12, 17-20 (10:19)


ಯೇಸುಸ್ವಾಮಿ ಇನ್ನೂ ಎಪ್ಪತ್ತೆರಡು ಮಂದಿಯನ್ನು ನೇಮಿಸಿ ಅವರನ್ನು ಇಬ್ಬಿಬ್ಬರಾಗಿ ತಾವೇ ಹೋಗಲಿದ್ದ ಊರುಗಳಿಗೂ ಸ್ಥಳಗಳಿಗೂ ಮುಂದಾಗಿ ಕಳಿಸಿದರು. ಕಳುಹಿಸುವಾಗ ಅವರಿಗೆ ಹೇಳಿದ್ದೇನೆಂದರೆ, "ಬೆಳೆಯೇನೋ ಹೇರಳವಾಗಿದೆಕೊಯ್ಲುಗಾರರೂ ವಿರಳ. ಆದುದರಿಂದ ಕೊಯ್ಲಿಗೆ ಆಳುಗಳನ್ನು ಕಳುಹಿಸುವಂತೆ ಬೆಳೆಯ ಯಜಮಾನನನ್ನು ಬೇಡಿಕೊಳ್ಳಿ. ಹೋಗಿರಿತೋಳಗಳ ನಡುವೆ ಕುರಿಮರಿಗಳನ್ನು ಬಿಟ್ಟಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ. ಹಣದ ಚೀಲವನ್ನಾಗಲಿಜೋಳಿಗೆಯನ್ನಾಗಲಿಪಾದರಕ್ಷೆಗಳನ್ನಾಗಲಿ ತೆಗೆದುಕೊಂಡು ಹೋಗದಿರಿ. ದಾರಿಯಲ್ಲಿ ಯಾರಿಗೂ ವಂದನೋಪಚಾರಗಳನ್ನು ಮಾಡಿಕೊಂಡಿರಬೇಡಿ. ನೀವು ಯಾವ ಮನೆಗೆ ಹೋದರೂ, "ಈ ಮನೆಗೆ ಶಾಂತಿ," ಎಂದು ಆಶೀರ್ವಾದ ಮಾಡಿಶಾಂತಿಪ್ರಿಯನು ಅಲ್ಲಿದ್ದರೆ ನಿಮ್ಮ ಆಶೀರ್ವಾದವು ಅವನ ಮೇಲೆ ನೆಲೆಸುವುದು. ಇಲ್ಲವಾದರೆಅದು ನಿಮಗೆ ಹಿಂದಿರುಗುವುದು. ಮನೆಯಿಂದ ಮನೆಗೆ ಹೋಗದೆ ಆ ಮನೆಯಲ್ಲೇ ತಂಗಿದ್ದುಅಲ್ಲಿಯವರು ಕೊಡುವ ಅನ್ನಪಾನೀಯಗಳನ್ನು ಸೇವಿಸಿರಿ. ದುಡಿಮೆಗಾರನು ಕೂಲಿಗೆ ಬಾಧ್ಯನು. ನೀವು ಯಾವ ಊರಿಗೆ ಹೋದರೂ ಜನರು ನಿಮ್ಮನ್ನು ಸ್ವಾಗತಿಸಿದಾಗಅವರು ಬಡಿಸಿದ್ದನ್ನು ಭುಜಿಸಿರಿ. ಅಲ್ಲಿರುವ ರೋಗಿಗಳನ್ನು ಗುಣಪಡಿಸಿರಿ. "ದೇವರ ಸಾಮ್ರಾಜ್ಯ ನಿಮ್ಮನ್ನು ಸಮೀಪಿಸಿದೆ," ಎಂದು ತಿಳಿಸಿರಿ. ಆದರೆ ನೀವು ಹೋಗುವ ಊರಿನ ಜನರು ನಿಮ್ಮನ್ನು ಸ್ವಾಗತಿಸದೆ ಹೋದರೆರಸ್ತೆಗಳಿಗೆ ಹೋಗಿ, "ನಿಮ್ಮ ಪಾದಗಳಿಗೆ ಅಂಟಿರುವ ನಿಮ್ಮ ಊರಿನ ಧೂಳನ್ನು ಕೂಡ ನಿಮಗೆ ವಿರುದ್ಧವಾಗಿ ಒದರಿಬಿಡುತ್ತೇವೆ. ಆದರೂ ದೇವರ ಸಾಮ್ರಾಜ್ಯ ಸಮೀಪಿಸಿದೆ ಎಂಬುದನ್ನು ಮಾತ್ರ ನೀವು ಗಮನದಲ್ಲಿಡಿ," ಎಂದು ತಿಳಿಸಿರಿ. ತೀರ್ಪಿನ ದಿನ ಈ ಊರಿನ ಗತಿ ಸೊದೋಮ್ ಊರಿನ ಗತಿಗಿಂತಲೂ ಕಠಿಣವಾಗಿರುವುದೆಂದು ನಾನು ನಿಮಗೆ ಹೇಳುತ್ತೇನೆ." ಕಳುಹಿಸಲಾದ ಎಪ್ಪತ್ತೆರಡು ಮಂದಿ ಸಂತೋಷಭರಿತರಾಗಿ ಹಿಂದಿರುಗಿ ಬಂದು, "ಸ್ವಾಮೀ ನಿಮ್ಮ ಹೆಸರಿನಲ್ಲಿ ಆಜ್ಞೆಮಾಡಿದಾಗ ದೆವ್ವಗಳು ಕೂಡ ನಮಗೆ ಅದೀನವಾಗುತ್ತವೆ," ಎಂದು ವರದಿ ಮಾಡಿದರು. ಅದಕ್ಕೆ ಯೇಸು, "ಸೈತಾನನು ಆಕಾಶದಿಂದ ಸಿಡಿಲಿನಂತೆ ಬೀಳುವುದನ್ನು ಕಂಡೆನು. ಇಗೋಸರ್ಪಗಳನ್ನು ಹಾಗೂ ಚೇಳುಗಳನ್ನು ತುಳಿಯುವುದಕ್ಕೂ ಶತ್ರುವಿನ ಸಮಸ್ತ ಶಕ್ತಿಯನ್ನು ಜಯಿಸುವುದಕ್ಕೂ  ನಿಮಗೆ ಅಧಿಕಾರ ಕೊಟ್ಟಿದ್ದೇನೆ. ಯಾವುದೂ ನಿಮಗೆ ಹಾನಿಮಾಡದು. ಆದರೂ ದೆವ್ವಗಳು ನಿಮಗೆ ಅಧೀನವಾಗಿವೆಯೆಂದು ಸಂತೋಷಪಡುವುದಕಿಂತ ನಿಮ್ಮ ಹೆಸರುಗಳು ಸ್ವರ್ಗದಲ್ಲಿ ಲಿಖಿತವಾಗಿವೆ ಎಂದು ಸಂತೋಷಪಡಿ," ಎಂದು ಹೇಳಿದರು.

05.07.2025 - "ಹಳೆಯ ಅಂಗಿಗೆ ಹೊಸ ಬಟ್ಟೆಯ ತೇಪೆಯನ್ನು ಯಾರೂ ಹಾಕುವುದಿಲ್ಲ"

 ಮೊದಲನೇ ವಾಚನ: ಆದಿಕಾಂಡ  27:1-5, 15-29



ಇಸಾಕನಿಗೆ ಮುಪ್ಪಿನಿಂದ ಕಣ್ಣು ಕಾಣಲಾರದಷ್ಟು ಮಬ್ಬಾಯಿತು. ಅವನು ತನ್ನ ಹಿರಿಯ ಮಗ ಏಸಾವನನ್ನು ಕರೆದು, "ಮಗನೇ," ಎನ್ನಲು ಏಸಾವನು, "ಇಗೋ, ಇಲ್ಲೇ ಇದ್ದೇನೆ," ಎಂದನು. ಇಸಾಕನು ಅವನಿಗೆ, "ನೋಡು, ನಾನು ಮುದುಕನಾಗಿಬಿಟ್ಟೆ ಯಾವಾಗ ಸಾಯುತ್ತೇನೋ ಗೊತ್ತಿಲ್ಲ; ಆದುದರಿಂದ ನಿನ್ನ ಆಯುಧಗಳನ್ನೂ ಬಿಲ್ಲುಬತ್ತಳಿಕೆಗಳನ್ನೂ ತೆಗೆದುಕೊಂಡು ಕಾಡಿಗೆ ಹೋಗು; ಬೇಟೆ ಮಾಡಿ ಬೇಟೆಯ ಮಾಂಸವನ್ನು ತೆಗೆದುಕೊಂಡು ಬಾ; ಅದರಿಂದ ನನಗಿಷ್ಟವಾಗಿರುವ ಸವಿಯೂಟವನ್ನು ಅಣಿಮಾಡಿ ಬಡಿಸು. ಸಾವು ಬರುವುದಕ್ಕೆ ಮುಂಚೆ ನಾನು ನಿನ್ನನ್ನು ಮನಸ್ಸಾರೆ ಆಶೀರ್ವದಿಸುತ್ತೇನೆ," ಎಂದು ಹೇಳಿದನು. ಇಸಾಕನು ತನ್ನ ಮಗ ಏಸಾವನಿಗೆ ಹೇಳಿದ ಮಾತು ರೆಬೆಕ್ಕಳ ಕಿವಿಗೆ ಬಿದ್ದಿತು. ತನ್ನ ಹಿರಿಯ ಮಗ ಏಸಾವನ ಬಟ್ಟೆಗಳಲ್ಲಿ ಶ್ರೇಷ್ಠವಾದವು ಮನೆಯಲ್ಲಿ ಆಕೆಯ ವಶದಲ್ಲಿದ್ದವು. ಅವುಗಳನ್ನು ತೆಗೆದು ಕಿರಿಯ ಮಗ ಯಕೋಬನಿಗೆ ತೊಡಿಸಿದಳು. ಮೇಕೆಮರಿಗಳ ಚರ್ಮವನ್ನು ಅವನ ಕೈಗಳಿಗೂ ನುಣುಪಾದ ಕೊರಳಿಗೂ ಸುತ್ತಿದಳು. ತಾನು ಸಿದ್ಧ ಮಾಡಿದ ಸವಿಯೂಟವನ್ನು ಸುಟ್ಟಿದ್ದ ರೊಟ್ಟಿಯನ್ನೂ ತನ್ನ ಮಗ ಯಕೋಬನ ಕೈಗೆ ಕೋಟ್ಟಳು. ಯಕೋಬನು,  ತಂದೆಯ ಬಳಿಗೆ ಹೋಗಿ, "ಅಪ್ಪಾ" ಎಂದು ಕರೆದನು. ತಂದೆಯು, "ಏನು ಮಗನೇ,  ನೀನು ಯಾವ ಮಗನು?" ಎಂದು ಕೇಳಿದನು. ಯಕೋಬನು; "ನಾನೇ ನಿಮ್ಮ ಹಿರಿಯ ಮಗ ಏಸಾವನು; ನಿಮ್ಮ ಅಪ್ಪಣೆಯಂತೆ ಮಾಡಿಕೊಂಡು ಬಂದಿದ್ದೇನೆ. ಎದ್ದು ಕುಳಿತುಕೊಂಡು ನಾನು ತಂದಿರುವ ಬೇಟೆ ಮಾಂಸವನ್ನು ಊಟಮಾಡಿ ನನ್ನನ್ನು ಆಶೀರ್ವದಿಸಿ," ಎಂದು ಹೇಳಿದನು. ಇಸಾಕನು, "ಏನು ಮಗನೇ, ಇಷ್ಟು ಬೇಗನೆ ಬೇಟೆ ಹೇಗೆ ಸಿಕ್ಕಿತು?" ಎಂದು ಕೇಳಿದನು. ಯಕೋಬನು, "ನಿಮ್ಮ ದೇವರಾದ ಸರ್ವೇಶ್ವರ ಅದನ್ನು ನನ್ನೆದುರಿಗೆ ಬರಮಾಡಿದರು." ಎಂದನು. ಆಗ ಇಸಾಕನು ಅವನಿಗೆ, "ಮಗನೇ, ಹತ್ತಿರಕ್ಕೆ ಬಾ ನೀನು ನನ್ನ ಮಗನೋ ಅಲ್ಲವೋ, ಎಂದು ಮುಟ್ಟಿ ತಿಳಿದುಕೊಳ್ಳಬೇಕು," ಎಂದನು. ಯಕೋಬನು ಹತ್ತಿರಕ್ಕೆ ಬಂದಾಗ ತಂದೆ ಇಸಾಕನು ಅವನನ್ನು ಮುಟ್ಟಿ ನೋಡಿ, "ಸ್ವರವೇನೋ ಯಕೋಬನ ಸ್ವರ; ಆದರೆ ಕೈ", ಏಸಾವನ ಕೈ", ಎಂದುಕೊಂಡನು. ಯಕೋಬನ ಕೈಗಳುಅವನ ಅಣ್ಣನ ಕೈಗಳಂತೆ ರೋಮಮಯವಾಗಿ ಇದ್ದುದರಿಂದ ಇಸಾಕನು ಅವನ ಗುರುತನ್ನು ತಿಳಿಯಲಾರದೆ ಅವನನ್ನು ಆಶೀರ್ವದಿಸಿದನು. ಆದರೂ ಮರಳಿ, "ನೀನು ನಿಶ್ಚಯವಾಗಿ ನನ್ನ ಮಗ ಏಸಾವನೋ" ಎಂದು ಕೇಳಿದನು. ಯಕೋಬನು "ಹೌದು,"  ಎಂದು ಉತ್ತರಕೊಟ್ಟನು. ಆಗ ಇಸಾಕನು, "ಊಟಮಾಡಲು ಆ ಬೇಟೆಮಾಂಸವನ್ನು ತಂದು ಬಡಿಸು. ಆಮೇಲೆ ನಿನ್ನನ್ನು ಆಶೀರ್ವದಿಸುತ್ತೇನೆ," ಎಂದನು. ಅಂತೆಯೇ ಯಕೋಬನು ಹತ್ತಿರಕ್ಕೆ ತಂದು ಬಡಿಸಿದಾಗ ಇಸಾಕನು ಊಟಮಾಡಿದನು; ಕೊಟ್ಟ ದ್ರಾಕ್ಷಾರಸವನ್ನು ಕುಡಿದನು. ಬಳಿಕ ಅವನ ತಂದೆ ಇಸಾಕನು, "ಮಗನೇ, ಹತ್ತಿರ ಬಂದು ನನಗೆ ಮುತ್ತು ಕೊಡು," ಎಂದನು. ಅವನು ಹತ್ತಿರ ಬಂದು ಮುದ್ದಿಟ್ಟಾಗ ಇಸಾಕನು ಅವನ ಉಡುಗೆತೊಡಿಗೆಗಳ ಸುವಾಸನೆಯನ್ನು ಮೂಸಿ ನೋಡಿ, ಅವನಿಗೆ ಹೀಗೆಂದು ಆಶೀರ್ವಾದ ಮಾಡಿದನು -- "ನನ್ನ ಸುಕುಮಾರನಿಂದೇಳುವ ಸುವಾಸನೆ ಸರ್ವೇಶ್ವರನಾಶೀರ್ವದಿಸಿದ ಮೊಗೆನೆಲದ ಸುವಾಸನೆಯಂತಿದೆ. ದಯಪಾಲಿಸಲಿ ದೇವ ನಿನಗೆ ಆಗಸದ ಮಂಜನು, ಸಾರವುಳ್ಳ ಹೊಲವನು; ಅನುಗ್ರಹಿಸಲಿ ಹೇರಳ ದವಸಧಾನ್ಯವನು, ದ್ರಾಕ್ಷಾರಸವನ್ನು. ಸೇವೆಗೈಯಲಿ ನಿನಗೆ ಹೊರನಾಡುಗಳು, ಅಡ್ಡಬೀಳಲಿ ನಿನಗೆ ಹೊರಜನಾಂಗಗಳು. ಒಡೆಯನಾಗು ಸೋದರರಿಗೆ, ಅಡ್ಡಬೀಳಲಿ ತಾಯಕುಡಿ ನಿನಗೆ. ಶಾಪವಿರಲಿ ನಿನ್ನನ್ನು ಶಪಿಸುವವರಿಗೆ, ಆಶೀರ್ವಾದವು ನಿನ್ನನ್ನು ಹರಸುವವರಿಗೆ!"

ಕೀರ್ತನೆ: 135:1-2, 3-4, 5-6

ಶ್ಲೋಕ: ಪ್ರಭು ಒಳ್ಳೆಯವನು, ಆತನಿಗೆ ಸ್ತುತಿಸ್ತೋತ್ರ

ಶುಭಸಂದೇಶ: ಮತ್ತಾಯ 9:14-17

ಯೊವಾನ್ನನ ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದರು. "ನಾವೂ ಫರಿಸಾಯರೂ ಉಪವಾಸ ವ್ರತವನ್ನು ಕೈಗೊಳ್ಳುತ್ತೇವೆ. ಆದರೆ ನಿಮ್ಮ ಶಿಷ್ಯರು ಏಕೆ ಹಾಗೆ ಮಾಡುವುದಿಲ್ಲ?" ಎಂದು ಪ್ರಶ್ನೆ ಹಾಕಿದರು. ಅದಕ್ಕೆ ಯೇಸು, "ಮದುವಣಿಗನು ಜೊತೆಯಲ್ಲಿರುವಷ್ಟು ಕಾಲ ಅವನ ಆಪ್ತರು ದುಃಖಪಡುವುದುಂಟೇ? ಮದುವಣಿಗನು ಅವರಿಂದ ಅಗಲಬೇಕಾಗುವ ಕಾಲ ಬರುವುದು; ಆಗ ಅವರು ಉಪವಾಸ ಮಾಡುವರು. "ಹಳೆಯ ಅಂಗಿಗೆ ಹೊಸ ಬಟ್ಟೆಯ ತೇಪೆಯನ್ನು ಯಾರೂ ಹಾಕುವುದಿಲ್ಲ. ಏಕೆಂದರೆ ಹೊಸ ತೇಪೆಯು ಹಳೆಯ ಅಂಗಿಯನ್ನು ಹಿಂಜುವುದರಿಂದ ಹರಕು ಹೆಚ್ಚಾಗುತ್ತದೆ. ಅಂತೆಯೇ ಹಳೆಯ ಬುದ್ದಲಿಗಳಲ್ಲಿ ಹೊಸ ಮದ್ಯವನ್ನು ತುಂಬಿಡುವುದಿಲ್ಲ. ತುಂಬಿಟ್ಟರೆ ಬುದ್ದಲಿಗಳು ಬಿರಿಯುತ್ತವೆ, ಮದ್ಯವು ಚೆಲ್ಲಿಹೋಗುತ್ತದೆ; ಬುದ್ದಲಿಗಳು ಹಾಳಾಗುತ್ತವೆ. ಹೊಸ ಮದ್ಯವನ್ನು ಹೊಸ ಬುದ್ದಲಿಗಳಲ್ಲೇ ತುಂಬಿಡುತ್ತಾರೆ. ಆಗ ಎರಡೂ ಉಳಿಯುತ್ತವೆ," ಎಂದರು.

04.07.2025 - "ನನಗೆ ಬೇಕಾದುದು ದಯೆ, ಯಜ್ಞಬಲಿಯಲ್ಲ"

 ಮೊದಲನೇ ವಾಚನ: ಆದಿಕಾಂಡ 23:1-4, 19; 24:1-8, 62-67


ಸಾರಳು ನೂರಿಪ್ಪತ್ತೇಳು ವರ್ಷ ಬದುಕಿದ್ದಳು. ಇಷ್ಟು ವರ್ಷಗಳಾದ ಮೇಲೆ ಆಕೆ ಕಾನಾನ್ ನಾಡಿನ ಹೆಬ್ರೋನೆಂಬ ಕಿರ್ಯತರ್ಬದಲ್ಲಿ ಕಾಲವಾದಳು. ಅಬ್ರಹಾಮನು ಅಲ್ಲಿಗೆ ಬಂದು ಅವಳಿಗಾಗಿ ಕಣ್ಣೀರಿಟ್ಟು ಗೋಳಾಡಿದನು. ಅನಂತರ ಅವನು ಶವದ ಬಳಿಯಿಂದ ಎದ್ದು ಹಿತ್ತಿಯರ ಬಳಿಗೆ ಬಂದು, ನಿಮ್ಮ ಮಧ್ಯೆ ನಾನೊಬ್ಬ ಹೊರನಾಡಿಗ, ಒಬ್ಬ ಪ್ರವಾಸಿ, ಮೃತಳಾಗಿರುವ ನನ್ನ ಪತ್ನಿಯನ್ನು ಸಮಾಧಿ ಮಾಡಲು ಸ್ವಲ್ಪ ಜವಿೂನನ್ನು ನನ್ನ ಸ್ವಂತಕ್ಕೆ ಕೊಡಬೇಕೆಂದು ಕೇಳಿಕೊಳ್ಳುತ್ತೇನೆ,” ಎಂದನು. ಇದಾದ ಮೇಲೆ ಹೆಬ್ರೋನೆಂಬ ಮಮ್ರೆಗೆ ಎದುರಾಗಿರುವ ಮಕ್ಪೇಲದ ಜಮೀನಿನಲ್ಲಿರುವ ಗವಿಯೊಳಗೆ ಸಮಾಧಿ ಮಾಡಿದನು. ಅಬ್ರಹಾಮನು ಆಗ ತುಂಬು ವಯಸ್ಸಿನ ಮುದುಕ.ಸರ್ವೇಶ್ವರಸ್ವಾಮಿ ಅವನ ಎಲ್ಲ ಕೆಲಸಕಾರ್ಯಗಳನ್ನು ಆಶೀರ್ವದಿಸಿದ್ದರು. ಒಮ್ಮೆ ಅವನು, ತನ್ನ ಆಸ್ತಿಯನ್ನು ನೋಡಿಕೊಳ್ಳುತ್ತಿದ್ದ ಹಿರಿಯ ಸೇವಕನಿಗೆ, “ನನ್ನ ಮಗ ಇಸಾಕನಿಗೆ ಹೆಣ್ಣನ್ನು ನಾನು ವಾಸಮಾಡುತ್ತಿರುವ ಕಾನಾನ್ಯರಿಂದ ತರಬಾರದು; ನನ್ನ ಸ್ವಂತ ನಾಡಿಗೂ ನನ್ನ ಬಂಧುಬಳಗದವರ ಬಳಿಗೂ ಹೋಗಿ ಅವರಿಂದಲೇ ಅವನಿಗೆ ಹೆಣ್ಣು ತರಬೇಕು. ಹಾಗೆ ಮಾಡುತ್ತೇನೆಂದು ನೀನು ನನ್ನ ತೊಡೆಯ ಕೆಳಗೆ ಕೈಯಿಟ್ಟು ಇಹಪರಲೋಕಗಳ ಸರ್ವೇಶ್ವರನಾದ ದೇವರ ಮೇಲೆ ಪ್ರಮಾಣ ಮಾಡಬೇಕು,” ಎಂದು ಹೇಳಿದನು. ಅದಕ್ಕೆ ಆ ಸೇವಕ, “ಒಂದು ವೇಳೆ ಆ ಕನ್ಯೆಗೆ ಈ ನಾಡಿಗೆ ನನ್ನೊಡನೆ ಬರಲು ಇಷ್ಟ ಇಲ್ಲದೆ ಹೋದೀತು. ಆಗ, ನೀವು ಬಿಟ್ಟುಬಂದ ನಾಡಿಗೆ ನಿಮ್ಮ ಮಗನನ್ನು ಮರಳಿ ಕರೆದುಕೊಂಡು ಹೋಗಬಹುದೆ?” ಎಂದು ವಿಚಾರಿಸಿದ. ಅಬ್ರಹಾಮನು ಅವನಿಗೆ, “ಅದೆಂದಿಗೂ ಕೂಡದು; ಅಲ್ಲಿಗೆ ನನ್ನ ಮಗನನ್ನು ಕರೆದುಕೊಂಡು ಹೋಗಲೇಬಾರದು. ನನ್ನ ತಂದೆಯ ಮನೆಯಿಂದಲೂ ನಾನು ಹುಟ್ಟಿದ ನಾಡಿನಿಂದಲೂ ನನ್ನನ್ನು ಇಲ್ಲಿಗೆ ಕರೆತಂದು, ‘ನಿನ್ನ ಸಂತತಿಗೆ ಈ ನಾಡನ್ನು ಕೊಡುತ್ತೇನೆ,’ ಎಂದು ಪರಲೋಕ ದೇವರಾದ ಸರ್ವೇಶ್ವರಸ್ವಾಮಿ ಪ್ರಮಾಣ ಮಾಡಿ ಹೇಳಿದ್ದಾರೆ. ಅವರೇ ತಮ್ಮ ದೂತನನ್ನು ನಿನ್ನ ಮುಂದೆ ಕಳುಹಿಸಿ, ನೀನು ಅಲ್ಲಿಂದ ನನ್ನ ಮಗನಿಗೆ ಹೆಣ್ಣು ತರುವುದಕ್ಕೆ ಅನುಕೂಲ ಮಾಡಿ ಕೊಡುವರು. ಇಲ್ಲಿಗೆ ನಿನ್ನ ಸಂಗಡ ಬರಲು ಆ ಕನ್ಯೆಗೆ ಇಷ್ಟವಿಲ್ಲದೆ ಹೋದರೆ, ನಾನು ಮಾಡಿಸಿದ ಪ್ರಮಾಣದಿಂದ ನೀನು ಬಿಡುಗಡೆಯಾಗಿರುವೆ. ಹೇಗೂ ನನ್ನ ಮಗನನ್ನು ಮರಳಿ ಅಲ್ಲಿಗೆ ಕರೆದುಕೊಂಡು ಹೋಗಕೂಡದು,” ಎಂದು ಮತ್ತೊಮ್ಮೆ ಒತ್ತಿ ಹೇಳಿದನು. ಇತ್ತ ಇಸಾಕನು ‘ಲಹ್ಯೆರೋಯಿ’ ಎಂಬಲ್ಲಿಗೆ ಹೋಗಿಬಂದು ಕಾನಾನ್ ನಾಡಿನ ದಕ್ಷಿಣ ಪ್ರಾಂತದಲ್ಲಿ ವಾಸಮಾಡುತ್ತಿದ್ದನು. ಸಂಜೆ ವೇಳೆಯಲ್ಲಿ ಅವನು ವಿಶ್ರಾಂತಿಗಾಗಿ ತಿರುಗಾಡಲು ಹೋಗಿದ್ದನು. ಕಣ್ಣೆತ್ತಿ ನೋಡಿದಾಗ ಒಂಟೆಗಳು ಬರುತ್ತಿರುವುದು ಅವನಿಗೆ ಕಾಣಿಸಿತು. ರೆಬೆಕ್ಕಳೂ ಕಣ್ಣೆತ್ತಿ ಇಸಾಕನನ್ನು ನೋಡಿ ಒಂಟೆಯಿಂದ ಕೆಳಗಿಳಿದಳು. “ನಮ್ಮ ಕಡೆ ಹೊಲದಲ್ಲಿ ನಡೆದು ಬರುತ್ತಿರುವ ಆ ಮನುಷ್ಯ ಯಾರು?” ಎಂದು ಆ ಸೇವಕನನ್ನು ಕೇಳಿದಳು. “ಅವನೇ ನನ್ನೊಡೆಯ” ಎಂದು ಹೇಳಿದಾಗ ಆಕೆ ಮುಸಕು ಹಾಕಿಕೊಂಡಳು. ಆ ಸೇವಕನು ತಾನು ಮಾಡಿದ ಕಾರ್ಯಗಳನ್ನೆಲ್ಲ ಇಸಾಕನಿಗೆ ವರದಿ ಮಾಡಿದನು. ಇಸಾಕನು ಆಕೆಯನ್ನು ತನ್ನ ತಾಯಿ ಸಾರಳ ಗುಡಾರಕ್ಕೆ ಕರೆದುಕೊಂಡು ಹೋದನು. ಹೀಗೆ ಅವನು ರೆಬೆಕ್ಕಳನ್ನು ವರಿಸಿದನು; ಆಕೆ ಅವನಿಗೆ ಪತ್ನಿಯಾದಳು. ಆಕೆಯ ಮೇಲಿನ ಪ್ರೀತಿ, ತನ್ನ ತಾಯಿ ಸಾರಳನ್ನು ಕಳೆದುಕೊಂಡಿದ್ದ ಅವನಿಗೆ ಸಾಂತ್ವನ ತಂದಿತು.

ಕೀರ್ತನೆ: 106:1-2, 3-5
ಶ್ಲೋಕ:  ತೋರಿ ಪ್ರಭುವಿಗೆ ನಿಮ್ಮ ಕೃತಜ್ಞಾತಾಸ್ತೋತ್ರ.  

ಪ್ರಭು  ದಯಾಪೂರಿತ,  ಆತನ  ಪ್ರೀತಿ  ಶಾಶ್ವತ
ತೋರಿ  ಆತನಿಗೆ  ನಿಮ್ಮ  ಕೃತಜ್ಞತಾ  ಸ್ತೋತ್ರ
ವರ್ಣಿಸಬಲ್ಲವನಾರು  ಆತನ  ಮಹತ್ಕಾರ್ಯಗಳನು
ಯೋಗ್ಯರೀತಿಯಲಿ  ಹೊಗಳಬಲ್ಲವರಾರು  ಆತನನು?

ನ್ಯಾಯದಂತೆ  ನಡೆಯುವವರು  ಧನ್ಯರು
ಅವಿರತವಾಗಿ  ನೀತಿವಂತರು  ಧನ್ಯರು
ಮರೆಯಬೇಡೆನ್ನನು  ಪ್ರಭೂ,  ನಿನ್ನ  ಪ್ರಜೆಗೆ  ದಯೆತೋರುವಾಗ

ನೆರವು  ನೀಡೆನಗೆ  ಸ್ವಾಮಿ,  ನೀನಾ  ಜನರನು  ಉದ್ಧರಿಸುವಾಗ
ನೀನಾರಿಸಿಕೊಂಡಿರುವ  ಪ್ರಗತಿಯನು  ನಾ  ಕಾಣಮಾಡು
ನಿನ್ನ  ಜನಾಂಗದವರ  ಸಂತಸವನು  ನಾ  ಸವಿಯಮಾಡು
ನಿನ್ನ  ಸ್ಸಕೀಯರ  ಮಹಿಮೆಯಲ್ಲೆನಗೆ  ಪಾಲನ್ನು  ನೀಡು

ಶುಭಸಂದೇಶ: ಮತ್ತಾಯ 9:9-13


ಯೇಸುಸ್ವಾಮಿ ಆ ಸ್ಥಳವನ್ನು ಬಿಟ್ಟು ಮುಂದಕ್ಕೆ ಹೋಗುತ್ತಿದ್ದಾಗ ಮತ್ತಾಯ ಎಂಬುವನನ್ನು ಕಂಡರು. ಅವನು ಸುಂಕ ವಸೂಲಿಗಾಗಿ ಉಕ್ಕಡದಲ್ಲಿ ಕುಳಿತಿದ್ದನು. "ನನ್ನನ್ನು ಹಿಂಬಾಲಿಸು," ಎಂದು ಹೇಳಿ ಯೇಸು ಅವನನ್ನು ಕರೆದರು. ಮತ್ತಾಯನು ಎದ್ದು ಅವರನ್ನು ಹಿಂಬಾಲಿಸಿದನು. ಇದಾದ ಮೇಲೆ ಯೇಸುಸ್ವಾಮಿ ಮತ್ತಾಯನ ಮನೆಯಲ್ಲಿ ಊಟಕ್ಕೆ ಕುಳಿತಿದ್ದರು. ಬಹುಮಂದಿ ‘ಸುಂಕದವರೂ’, ‘ಪಾಪಿಷ್ಠರೂ’ ಅಲ್ಲಿಗೆ ಬಂದರು. ಯೇಸು ಮತ್ತು ಅವರ ಶಿಷ್ಯರು ಕುಳಿತಿದ್ದ ಪಂಕ್ತಿಯಲ್ಲೇ ಇವರೂ ಊಟಕ್ಕೆ ಕುಳಿತರು. ಫರಿಸಾಯರು ಇದನ್ನು ಕಂಡದ್ದೇ ಯೇಸುವಿನ ಶಿಷ್ಯರನ್ನು ಉದ್ದೇಶಿಸಿ, "ನಿಮ್ಮ ಗುರು ಇಂತಹ ಬಹಿಷ್ಕ್ರತ ಜನರ ಜೊತೆಯಲ್ಲಿ ಊಟ ಮಾಡುವುದೇ?" ಎಂದು ಆಕ್ಷೇಪಿಸಿದರು. ಇದನ್ನು ಕೇಳಿಸಿಕೊಂಡ ಯೇಸು, "ವೈದ್ಯನ ಅವಶ್ಯಕತೆ ಇರುವುದು ರೋಗಿಗಳಿಗೆ; ಆರೋಗ್ಯವಂತರಿಗಲ್ಲ. ನೀವು ಹೋಗಿ, "ನನಗೆ ಬೇಕಾದುದು ದಯೆ, ಯಜ್ಞಬಲಿಯಲ್ಲ" ಎಂದು ಪವಿತ್ರ ಗ್ರಂಥದಲ್ಲಿ ಬರೆದಿರುವ ವಾಕ್ಯದ ಅರ್ಥವನ್ನು ಕಲಿತುಕೊಳ್ಳಿ. ನಾನು ಕರೆಯಲು ಬಂದಿರುವುದು ಧರ್ಮಿಷ್ಠರನ್ನಲ್ಲ, ಪಾಪಿಷ್ಠರನ್ನು" ಎಂದರು.

03.07.2025 - ವಿಶ್ವಾಸರಹಿತನಾಗಿರಬೇಡ, ವಿಶ್ವಾಸಿಸು

 ಮೊದಲನೇ ವಾಚನ : ಪ್ರೇಷಿತರ ಕಾರ್ಯಕಲಾಪಗಳು  : 10:24-35 


ಮರುದಿವಸ ಅವನು ಸೆಜರೇಯವನ್ನು ತಲುಪಿದನು. ಇತ್ತ ಕೊರ್ನೇಲಿಯನು ತಾನು ಆಹ್ವಾನಿಸಿದ ನೆಂಟರಿಷ್ಟರೊಡನೆಮತ್ತು ಆಪ್ತಮಿತ್ರರೊಡನೆ ಪೇತ್ರನಿಗಾಗಿ ಕಾಯುತ್ತಿದ್ದನು. ಪೇತ್ರನು ಮನೆಯನ್ನು ಪ್ರವೇಶಿಸುತ್ತಿದ್ದಂತೆ ಕೊರ್ನೇಲಿನು ಅವನನ್ನು ಎದುರಗೊಂಡುಪಾದಕ್ಕೆರಗಿಸಾಷ್ಟಾಂಗ ನಮಸ್ಕಾರ ಮಾಡಿದನು. ಪೇತ್ರನು ಅವನನ್ನು ಮೇಲಕ್ಕೆಬ್ಬಿಸಿ,   ಎದ್ದು ನಿಲ್ಲು,  ನಾನೂ ಒಬ್ಬ ಸಾಮಾನ್ಯ ಮನುಷ್ಯನೇ,” ಎಂದನು.

ಕೊರ್ನೇಲಿಯನೊಡನೆ ಮಾತನಾಡುತ್ತಾ ಪೇತ್ರನು ಮನೆಯೊಳಕ್ಕೆ ಬಂದಾಗ ಅಲ್ಲಿ ಅನೇಕ ಜನರು ಸಭೆ ಸೇರಿರುವುದನ್ನು ಕಂಡನು. ಪೇತ್ರನು ಅವರಿಗೆ, “ಯೆಹೂದ್ಯನೊಬ್ಬನು ಅನ್ಯಧರ್ಮದವರೊಡನೆ ಸಂಪರ್ಕ ಇಟ್ಟುಕೊಳ್ಳುವುದು ಅಥವಾ ಅವರಿಗೆ ಭೇಟಿಕೊಡುವುದು ಧರ್ಮನಿಷಿದ್ಧ ಎಂಬುದು ನಿಮಗೆ ತಿಳಿದೇ ಇದೆಆದರೆನಾನು ಯಾರನ್ನೂ ಅಶುದ್ಧ ಅಥವಾ ಅಸ್ಪೃಶ್ಯ ಎನ್ನಬಾರದೆಂದು ದೇವರು ನನಗೆ ತೋರಿಸಿಕೊಟ್ಟಿದ್ದಾರೆ. ಆದುದರಿಂದಲೇ ನೀವು ಹೇಳಿಕಳುಹಿಸಿದಾಗ ನಾನು ಯಾವ ಆಕ್ಷೇಪಣೆಮಾಡದೆ ಬಂದಿದ್ದೇನೆಈಗ ನನ್ನನ್ನು ಕರೆದ ಕಾರಣವೇನೆಂದು ತಿಳಿಯಬಯಸುತ್ತೇನೆ,” ಎಂದನು.

ಆಗ ಕೊರ್ನೇಲಿಯನು, “ನಾನು ಮೂರು ದಿನಗಳ ಹಿಂದೆ ಮಧ್ಯಾಹ್ನ ಮೂರು ಗಂಟೆಯ ಇದೇ ಸಮಯದಲ್ಲಿ ಪ್ರಾರ್ಥನೆ ಮಾಡುತ್ತಾ ಇದ್ದೆ. ಹಠಾತ್ತನೆ ಶೋಭಾಯಮಾನ ವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬನು ನನ್ನೆದುರಿಗೆ ನಿಂತನು. ಅವನು, “ಕೊರ್ನೇಲಿಯಾದೇವರು ನಿನ್ನ ಪ್ರಾರ್ಥನೆಯನ್ನು ಆಲಿಸಿದ್ದಾರೆನಿನ್ನ ದಾನಧರ್ಮಗಳನ್ನು ಮೆಚ್ಚಿದ್ದಾರೆ. ಯಾರನ್ನಾದರೂ ಜೊಪ್ಪಕ್ಕೆ ಕಳುಹಿಸಿ ಪೇತ್ರ ಎಂದು ಕರೆಯಲಾದ ಸಿಮೋನನನ್ನು ಬರಮಾಡಿಕೊಅವನು ಸಮುದ್ರತೀರದಲ್ಲಿ ವಾಸಿಸುತ್ತಿರುವಚರ್ಮ ಹದಮಾಡುವ ಸಿಮೋನನ ಮನೆಯಲ್ಲಿ ತಂಗಿದ್ದಾನೆ,” ಎಂದನು. ಅಂತೆಯೇ ನಾನು ತಕ್ಷಣ ತಮ್ಮನ್ನು ಕರೆತರಲು ಕಳುಹಿಸಿದೆತಾವು ಇಲ್ಲಿಗೆ ದಯಮಾಡಿಸಿದಿರಿಪ್ರಭು ತಮಗೆ ಆಜ್ಞಾಪಿಸಿರುವುದನ್ನೆಲ್ಲಾ ಕೇಳಲು ನಾವೆಲ್ಲರೂ ಇಲ್ಲಿ ದೇವರ ಸನ್ನಿಧಿಯಲ್ಲಿ ಸೇರಿದ್ದೇವೆ,” ಎಂದನು.

ಆಗ ಪೇತ್ರನು ಹೀಗೆಂದು ಉಪದೇಶ ಮಾಡಿದನು: “ದೇವರು ಪಕ್ಷಪಾತಿಯಲ್ಲ ವಿಷಯ ನನಗೆ ಮನದಟ್ಟಾಗಿದೆ. ದೇವರಿಗೆ ಭಯಪಟ್ಟು ಸತ್ಪುರುಷನಾಗಿ ಬಾಳುವವನು ಯಾವ ಜನಾಂಗದವನೇ ಆಗಿರಲಿಅವನು ಅವರ ಮೆಚ್ಚುಗೆಗೆ ಪಾತ್ರನಾಗುತ್ತಾನೆ.

-ಪ್ರಭುವಿನ ವಾಕ್ಯ

ಎರಡನೇ ವಾಚನ  : ಹಿಬ್ರಿಯರಿಗೆ 1:2-3 


ಆದರೆಇತ್ತೀಚಿನ ಅಂತಿಮ ದಿನಗಳಲ್ಲಿ ಅವರು ತಮ್ಮ ಪುತ್ರನ ಮುಖೇನ ನಮ್ಮೊಡನೆ ಮಾತನಾಡಿದ್ದಾರೆದೇವರು ಇಡೀ ವಿಶ್ವವನ್ನು ಉಂಟುಮಾಡಿದ್ದು ಇವರ ಮುಖಾಂತರವೇಸಮಸ್ತಕ್ಕೂ ಬಾಧ್ಯನನ್ನಾಗಿ ನೇಮಿಸಿರುವುದು ಇವರನ್ನೇ. ಇವರೇ ದೇವರ ಮಹಿಮೆಯ ತೇಜಸ್ಸುಇವರೇ ದೈವತ್ವದ ಪಡಿಯಚ್ಚುತಮ್ಮ ಶಕ್ತಿಯುತ ವಾಕ್ಯದಿಂದ ಇವರೇ ಸಮಸ್ತಕ್ಕೂ ಆಧಾರನಮ್ಮ ಪಾಪಗಳನ್ನು ತೊಡೆದುಹಾಕಿಸ್ವರ್ಗದಲ್ಲಿ ಮಹೋನ್ನತ ದೇವರ ಬಲಪಾರ್ಶ್ವದಲ್ಲಿ ಆಸೀನರಾಗಿರುವವರೂ ಇವರೇ.

-ಪ್ರಭುವಿನ ವಾಕ್ಯ

ಶುಭಸಂದೇಶ: ಯೊವಾನ್ನ20:24-29

ಹನ್ನೆರಡು ಮಂದಿಯಲ್ಲಿ ಒಬ್ಬನಾದ ದಿದುಮ ಎಂಬ ತೋಮನು, ಯೇಸು ಸ್ವಾಮಿ ಬಂದಾಗ ಶಿಷ್ಯರೊಡನೆ ಇರಲಿಲ್ಲ. ಉಳಿದ ಶಿಷ್ಯರು, “ನಾವು ಪ್ರಭುವನ್ನು ನೋಡಿದೆವು,” ಎಂದು ಹೇಳಿದರು. ಅದಕ್ಕೆ ಅವನು, “ಅವರ ಕೈಗಳಲ್ಲಿ ಮೊಳೆಗಳಿಂದಾದ ಗಾಯದ ಕಲೆಯನ್ನು ನಾನು ನೋಡಬೇಕು. ಮೊಳೆಗಳು ಜಡಿದಿದ್ದ ಜಾಗದಲ್ಲಿ ನನ್ನ ಬೆರಳನ್ನಿಡಬೇಕು, ಅವರ ಪಕ್ಕೆಯಲ್ಲಿ ನನ್ನ ಕೈಯನ್ನು ಇಟ್ಟು ನೋಡಬೇಕು. ಆ ಹೊರತು ನಾನು ನಂಬುವುದೇ ಇಲ್ಲ,” ಎಂದುಬಿಟ್ಟನು.

ಎಂಟು ದಿನಗಳು ಕಳೆದವು. ಶಿಷ್ಯರು ಪುನಃ ಒಳಗೆ ಒಟ್ಟುಗೂಡಿದ್ದರು. ತೋಮನೂ ಅವರೊಡನೆ ಇದ್ದನು. ಬಾಗಿಲುಗಳು ಮುಚ್ಚಿದ್ದರೂ ಯೇಸು ಬಂದು ಅವರ ನಡುವೆ ನಿಂತು, “ನಿಮಗೆ ಶಾಂತಿ” ಎಂದರು. ಆಮೇಲೆ ತೋಮನಿಗೆ, “ಇಗೋ ನೋಡು, ನನ್ನ ಕೈಗಳು; ನಿನ್ನ ಬೆರಳನ್ನು ತಂದು ಇಲ್ಲಿಡು. ನಿನ್ನ ಕೈಯನ್ನು ಚಾಚಿ ನನ್ನ ಪಕ್ಕೆಯಲ್ಲಿಡು. ವಿಶ್ವಾಸರಹಿತನಾಗಿರಬೇಡ, ವಿಶ್ವಾಸಿಸು,” ಎಂದು ಹೇಳಿದರು. ಆಗ ತೋಮನು, “ನನ್ನ ಪ್ರಭುವೇ, ನನ್ನ ದೇವರೇ,” ಎಂದನು. ಯೇಸು ಅವನಿಗೆ, “ನನ್ನನ್ನು ಕಂಡುದರಿಂದ ತಾನೆ ನಿನಗೆ ವಿಶ್ವಾಸ ಹುಟ್ಟಿತು? ಕಾಣದೆ ವಿಶ್ವಾಸಿಸುವವರು ಧನ್ಯರು,” ಎಂದು ಹೇಳಿದರು.

02.07.2025 - "ಆಗ ಊರಿಗೆ ಊರೇ ಯೇಸುವನ್ನು ನೋಡಲು ಬಂದಿತು"

 ಮೊದಲನೇ ವಾಚನ: ಆದಿಕಾಂಡ 21:5, 8-20

ಇಸಾಕನು ಹುಟ್ಟಿದಾಗ ಅಬ್ರಹಾಮನಿಗೆ ನೂರು ವರ್ಷವಾಗಿತ್ತು. ಕ್ರಮೇಣ ಆ ಮಗು ಬೆಳೆದು ಹಾಲು ಕುಡಿಯುವುದನ್ನು ಬಿಟ್ಟಿತು. ಇಸಾಕನು ಮೊಲೆ ಬಿಟ್ಟ ಆ ದಿನದಂದು ಅಬ್ರಹಾಮನು ದೊಡ್ಡ ಔತಣವನ್ನು ಏರ್ಪಡಿಸಿದ್ದನು. ಈಜಿಪ್ಟಿನ ಹಾಗರಳಿಂದ ಅಬ್ರಹಾಮನಿಗೆ ಹುಟ್ಟಿದ ಹುಡುಗನು ತನ್ನ ಮಗ ಇಸಾಕನೊಡನೆ ನಕ್ಕುನಲಿದಾಡುವುದನ್ನು ಸಾರಳು ಕಂಡಳು. ಆಕೆ ಅಬ್ರಹಾಮನಿಗೆ, “ಈ ದಾಸಿಯನ್ನೂ ಅವಳ ಮಗನನ್ನೂ ಮನೆಯಿಂದ ಕಳುಹಿಸಿಬಿಡಿ. ದಾಸಿಯ ಮಗನು ನನ್ನ ಮಗನೊಂದಿಗೆ ಹಕ್ಕು ಬಾಧ್ಯಸ್ಥನಾಗಬಾರದು,” ಎಂದು ಹೇಳಿದಳು. ಈ ಮಾತನ್ನು ಕೇಳಿ ಅಬ್ರಹಾಮನಿಗೆ ಬಹು ದುಃಖವಾಯಿತು. ಕಾರಣ - ಆ ದಾಸಿಯ ಮಗನೂ ಅವನ ಸ್ವಂತ ಮಗನಾಗಿದ್ದನು. ಆದರೆ ದೇವರು, ಅಬ್ರಹಾಮನಿಗೆ, “ನಿನ್ನ ಮಗನ ಹಾಗೂ ದಾಸಿಯ ಬಗ್ಗೆ ನಿನಗೆ ಚಿಂತೆಬೇಡ; ಸಾರಳು ಹೇಳಿದಂತೆಯೇ ಮಾಡು, ಏಕೆಂದರೆ ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಎನಿಸಿಕೊಳ್ಳುವರು. ಈ ದಾಸಿಯ ಮಗನು ನಿನ್ನಿಂದ ಹುಟ್ಟಿದವನಾದ್ದರಿಂದ ಅವನಿಂದಲೂ ಒಂದು ರಾಷ್ಟ್ರ ಉತ್ಪತ್ತಿಯಾಗುವಂತೆ ಮಾಡುತ್ತೇನೆ,” ಎಂದು ಹೇಳಿದರು. ಮಾರನೆಯ ದಿನ ಬೆಳಿಗ್ಗೆ ಅಬ್ರಹಾಮನು ಹಾಗರಳಿಗೆ ಬುತ್ತಿಯನ್ನೂ ನೀರಿನ ತಿತ್ತಿಯನ್ನೂ ಕೊಟ್ಟು, ಹೆಗಲ ಮೇಲೆ ಮಗುವನ್ನು ಕೂರಿಸಿ ಕಳುಹಿಸಿಬಿಟ್ಟನು. ಅವಳು ಹೊರಟು ಬೇರ್ಷೆಬದ ಕಾಡಿನಲ್ಲಿ ಅಲೆಯುತ್ತಿದ್ದಳು. ತಿತ್ತಿಯಲ್ಲಿದ್ದ ನೀರು ಮುಗಿದುಹೋಯಿತು. ಮಗು ಸಾಯುವುದನ್ನು ನಾನು ನೋಡಲಾರೆ ಎಂದುಕೊಂಡು, ಅವಳು ಆ ಮಗುವನ್ನು ಒಂದು ಗಿಡದ ನೆರಳಿನಲ್ಲಿ ಬಿಟ್ಟು ಒಂದು ಬಾಣವನ್ನೆಸೆಯುವಷ್ಟು ದೂರ ಹೋಗಿ ಕುಳಿತುಕೊಂಡು ಗಟ್ಟಿಯಾಗಿ ಅತ್ತಳು. ಇತ್ತ ಆ ಹುಡುಗನ ಕೂಗು ದೇವರಿಗೆ ಕೇಳಿಸಿತು. ದೇವದೂತನು ಆಕಾಶದಿಂದ ಹಾಗರಳನ್ನು ಕರೆದು, “ಹಾಗರಳೇ, ನಿನಗೇನು ಆಯಿತು? ಅಂಜಬೇಡ; ಆ ಹುಡುಗನು ಬಿದ್ದು ಇರುವ ಸ್ಥಳದಿಂದಲೇ ಅವನ ಕೂಗು ದೇವರನ್ನು ಮುಟ್ಟಿತು; ನೀನೆದ್ದು ಹೋಗಿ ಅವನನ್ನು ಎತ್ತಿಕೊ; ಅವನನ್ನು ಕೈ ಬಿಡಬೇಡ; ಅವನಿಂದ ಒಂದು ದೊಡ್ಡ ರಾಷ್ಟ್ರ ಉತ್ಪತ್ತಿಯಾಗುವಂತೆ ಮಾಡುತ್ತೇನೆ,” ಎಂದು ಹೇಳಿದನು. ಇದಲ್ಲದೆ ದೇವರು ಅವಳ ಕಣ್ಣನ್ನು ತೆರೆದರು; ನೀರಿನ ಬಾವಿಯೊಂದು ಅವಳಿಗೆ ಕಾಣಿಸಿತು; ತಿತ್ತಿಯಲ್ಲಿ ನೀರನ್ನು ತುಂಬಿಸಿಕೊಂಡು ಹೋಗಿ ಆ ಹುಡುಗನಿಗೆ ಕುಡಿಸಿದಳು. ಹುಡುಗನ ಸಂಗಡ ದೇವರಿದ್ದರು.

ಕೀರ್ತನೆ: 34:6-7, 9-10, 11-12
ಶ್ಲೋಕ: ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು. 

ಭಯಭಕುತಿಯುಳ್ಳವರ ಸುತ್ತಲು ಕಾವಲಿದ್ದು I
ಕಾಯುವನು ಪ್ರಭುವಿನ ದೂತನೆ ಬಂದಿಳಿದು II
ಸವಿದು ನೋಡು ಪ್ರಭುವಿನ ಮಾಧುರ್ಯವನು I
ಆತನನು ಆಶ್ರಯಿಸಿಕೊಂಡವನು ಧನ್ಯನು II

ದೇವಜನರೆ, ನಿಮಗಿರಲಿ ಪ್ರಭುವಿನ ಭಯಭಕುತಿ I
ಅಂಥವರಿಗಿರದು ಯಾವ ಕುಂದುಕೊರತೆಯ ಭೀತಿ II
ಯುವ ಕೇಸರಿಗೆ ಇರಬಹುದು ಹಸಿವು, ದಾಹ I
ಪ್ರಭುವನು ಅರಸುವವರಿಗಿರದು ಒಳಿತಿನ ಅಭಾವ II

ಬನ್ನಿ ಮಿತ್ರರೇ, ಆಲಿಸಿರೀ ಮಾತನು I
ಕಲಿಸುವೆನು ನಾ ನಿಮಗೆ ದೇವ ಭಯವನು II
ಎಲೆ ಮಾನವ, ಬಲುದಿನ ಬಾಳಲು ಬಯಸುವೆಯಾ? I
ಆಯುರಾರೋಗ್ಯ ಭಾಗ್ಯವನು ಆಶಿಸುವೆಯಾ? II

ಕಾದಿಡು ನಾಲಿಗೆಯನು ಕೇಡನು ಆಡದಂತೆ I
ಬಿಗಿಯಿಡು ತುಟಿಯನ್ನು ಕುಟಿಲವನು ನುಡಿಯದಂತೆ II

ಶುಭಸಂದೇಶ: ಮತ್ತಾಯ 8:28-34


ಯೇಸುಸ್ವಾಮಿ ಗಲಿಲೇಯ ಸರೋವರವನ್ನು ದಾಟಿ, ಆಚೆಯ ಕಡೆಯಿದ್ದ ಗದರೇನ ಎಂಬ ಪ್ರಾಂತ್ಯಕ್ಕೆ ಬಂದರು. ದೆವ್ವ ಹಿಡಿದಿದ್ದ ಇಬ್ಬರು ಸಮಾಧಿಯ ಗುಹೆಗಳಿಂದ ಹೊರಬಂದು ಅವರಿಗೆ ಎದುರಾದರು. ಅವರಿಬ್ಬರೂ ಮಹಾಕ್ರೂರಿಗಳು. ಈ ಕಾರಣ ಯಾರೂ ಆ ಮಾರ್ಗವಾಗಿ ಹೋಗಲಾಗುತ್ತಿರಲಿಲ್ಲ. ಅವರು ಯೇಸುವನ್ನು ನೋಡಿದೊಡನೆಯೇ "ಓ ದೇವರ ಪುತ್ರನೇ, ನಿಮಗೇಕೆ ನಮ್ಮ ಗೊಡವೆ? ನಿಯಮಿತ ಕಾಲಕ್ಕೆ ಮುಂಚೆಯೇ ನಮ್ಮನ್ನು ಪೀಡಿಸಲು ಬಂದಿರಾ?" ಎಂದು ಕೂಗಿಕೊಂಡರು. ಹಂದಿಗಳ ದೊಡ್ಡ ಹಿಂಡೊಂದು ಅಲ್ಲಿಂದ ಸ್ವಲ್ಪ ದೂರದಲ್ಲೇ ಮೇಯುತ್ತಿತ್ತು. "ನೀವು ನಮ್ಮನ್ನು ಹೊರದೂಡಿದ್ದೇ ಆದರೆ ಆ ಹಂದಿಗಳ ಹಿಂಡಿಗೆ ನಮ್ಮನ್ನು ಕಳುಹಿಸಿಕೊಡಿ," ಎಂದು ಆ ದೆವ್ವಗಳು ಯೇಸುವನ್ನು ಬೇಡಿಕೊಂಡವು. ಯೇಸು, "ಹೋಗಿ" ಎಂದು ಅಪ್ಪಣೆಯಿತ್ತರು. ದೆವ್ವಗಳು ಹೊರಗೆ ಬಂದು ಹಂದಿಗಳ ಹಿಂಡನ್ನು ಹೊಕ್ಕವು. ಆ ಕ್ಷಣವೇ ಆ ಹಿಂಡೆಲ್ಲಾ ಬೆಟ್ಟದ ಕಡಿದಾದ ಬದಿಯಿಂದ ಧಾವಿಸಿ, ಸರೋವರಕ್ಕೆ ಬಿದ್ದು, ನೀರುಪಾಲಾಗಿ ಹೋಯಿತು. ಹಂದಿ ಮೇಯಿಸುತ್ತಿದ್ದವರು ಅಲ್ಲಿಂದ ಪಲಾಯನ ಮಾಡಿ ಊರಿಗೆ ಓಡಿಹೋಗಿ ನಡೆದದ್ದೆಲ್ಲವನ್ನೂ ಮತ್ತು ದೆವ್ವ ಮೆಟ್ಟಿದ್ದವರಿಗೆ ಸಂಭವಿಸಿದ್ದನ್ನೂ ವರದಿಮಾಡಿದರು. ಆಗ ಊರಿಗೆ ಊರೇ ಯೇಸುವನ್ನು ನೋಡಲು ಬಂದಿತು. ಅವರನ್ನು ಕಂಡು ತಮ್ಮ ಆಸುಪಾಸನ್ನು ಬಿಟ್ಟು ಹೋಗಬೇಕೆಂದು ಮನವಿ ಮಾಡಿಕೊಂಡಿತು.

01.07.2025 - "ಯೇಸು ಎದ್ದು ನಿಂತು ಸುಂಟರಗಾಳಿಯನ್ನೂ ಸರೋವರವನ್ನೂ ಗದರಿಸಿದರು. ಆಗ ವಾತಾವರಣ ಪ್ರಶಾಂತವಾಯಿತು."

 ಮೊದಲನೆಯ  ವಾಚನ : ಆದಿಕಾಂಡದಿಂದ  ಇಂದಿನ  ವಾಚನ  19:15-29

ಮೂಡುವುದಕ್ಕೆ  ಮುಂಚೆ  ದೂತರು  ಲೋಟನಿಗೆ,  " ಏಳು,  ನಿನ್ನ  ಹೆಂಡತಿ  ಮತ್ತು  ಹೆಣ್ಣುಮಕ್ಕಳಿಬ್ಬರನ್ನು  ಕರೆದುಕೊಂಡು  ಬೇಗನೆ  ಹೊರಡು ;  ಇಲ್ಲದಿದ್ದರೆ  ಊರಿಗೆ  ಬರಲಿರುವ  ದಂಡನೆಯಲ್ಲಿ  ನೀನೂ  ಸಿಕ್ಕಿಕೊಂಡು  ನಾಶವಾಗಬೇಕಾದೀತು, " ಎಂದು  ಹೇಳಿ  ತ್ವರೆಪಡಿಸಿದನು.  ಅವನು  ಇನ್ನೂ  ತಡಮಾಡುತ್ತಿರುವುದನ್ನು  ಕಂಡು,  ಆ  ಮನುಷ್ಯರು  ಅವನನ್ನು  ಹಾಗು  ಅವನ  ಹೆಂಡತಿ  ಮಕ್ಕಳನ್ನು  ಕೈಹಿಡಿದು  ಹೊರಗೆ  ತಂದು  ಊರಾಚೆಗೆ  ಬಿಟ್ಟರು.  ಸರ್ವೇಶ್ವರಸ್ವಾಮಿಗೆ  ಅವನ  ಮೇಲೆ  ಅಷ್ಟು  ಕನಿಕರವಿತ್ತು.  ಊರ  ಹೊರಗೆ  ಬಿಟ್ಟಾದ  ಮೇಲೆ  ಆ  ಇಬ್ಬರಲ್ಲಿ  ಒಬ್ಬನು,  " ಪ್ರಾಣ  ಉಳಿಸಿಕೊಳ್ಳಬೇಕಾದರೆ  ಓಡಬೇಕು,  ಹಿಂದಕ್ಕೆ  ತಿರುಗಿ  ನೋಡಬಾರದು ;  ಬಯಲುಸೀಮೆಯಲ್ಲೂ  ನಿಲ್ಲದೆ  ಗುಡ್ಡಗಾಡಿಗೆ  ಓಡಬೇಕು,  ಇಲ್ಲವಾದರೆ  ನಾಶವಾದೀತು !  "ಎಂದು  ಎಚ್ಚರಿಸಿದನು.  ಅದಕ್ಕೆ  ಲೋಟನು,  "ಸ್ವಾಮಿ,  ಅದು  ನನ್ನಿಂದಾಗದು ;  ನಿಮ್ಮ  ದಾಸನ  ಮೇಲೆ  ಮರುಕವಿಟ್ಟು,  ಪ್ರಾಣ  ಉಳಿಸಿದ್ದೇನೋ  ಮಹಾ  ಉಪಕಾರವಾಯಿತು ;  ಆದರೆ  ಗುಡ್ಡಗಾಡಿಗೆ  ಓಡಿಹೋಗಲು  ನನ್ನಿಂದಾಗದು,  ಅಲ್ಲಿಗೆ  ಸೇರುವುದಕ್ಕೆ  ಮುಂಚೆಯೇ  ಈ  ವಿಪತ್ತಿಗೆ  ಸಿಕ್ಕಿ  ಸತ್ತೇನು.  ಆದುದರಿಂದ  ಅಗೋ,  ಅಲ್ಲಿ  ಊರೊಂದು  ಕಾಣಿಸುತ್ತಿದೆ ;  ಅದು  ಅಷ್ಟೇನು  ದೂರವಲ್ಲ,  ಚಿಕ್ಕ  ಊರು,  ಹೌದಲ್ಲವೆ ?  ಅಲ್ಲಿಗಾದರೂ  ಹೋಗಲು  ಅಪ್ಪಣೆಯಾದರೆ  ಪ್ರಾಣ  ಉಳಿಯುತ್ತದೆ, " ಎಂದನು.  ಅದಕ್ಕಾತನು, " ಸರಿ,  ಹಾಗೆಯೇ  ಆಗಲಿ,  ಈ  ನಿನ್ನ  ಕೋರಿಕೆಯನ್ನು  ನೆರವೇರಿಸುತ್ತೇನೆ.  ನೀನು  ಹೇಳಿದ  ಆ  ಊರನ್ನು  ಹಾಳುಮಾಡುವುದಿಲ್ಲ.  ಬೇಗನೆ  ಅಲ್ಲಿಗೆ  ಹೋಗಿ  ಸುರಕ್ಷಿತವಾಗಿರು.  ನೀನು  ಅಲ್ಲಿಗೆ  ಮುಟ್ಟುವ  ತನಕ  ನಾನು  ಏನನ್ನೂ  ಮಾಡಲಿಕ್ಕಾಗುವುದಿಲ್ಲ,  " ಎಂದನು.   ಲೋಟನು  ಆ  ಊರನ್ನು  ಚಿಕ್ಕದು  ಎಂದು  ಕರೆದುದಕ್ಕಾಗಿ  ಅದಕ್ಕೆ  "ಚೋಗರ್"  ಎಂದು  ಹೆಸರಾಯಿತು.  ಲೋಟನು  ಚೋಗುರನ್ನು  ಮುಟ್ಟುವಷ್ಟರಲ್ಲಿ  ಸೂರ್ಯೋದಯವಾಗಿತ್ತು.  ಆಗ  ಸರ್ವೇಶ್ವರಸ್ವಾಮಿ  ಸೊದೋಮ್ - ಗೊಮೋರಗಳ  ಮೇಲೆ  ಅಗ್ನಿ,  ಉರಿಯುತ್ತಿರುವ  ಗಂಧಕಮಳೆ  ಸುರಿಸಿದರು.  ಆ  ಪಟ್ಟಣಗಳನ್ನೂ,  ಇಡೀ  ಆ  ಬಯಲುಸೀಮೆಯನ್ನೂ  ಅವುಗಳ  ನಿವಾಸಿಗಳನ್ನೂ  ಹೊಲಗಳ  ಬೆಳೆಯೆಲ್ಲವನ್ನೂ  ಹಾಳುಮಾಡಿದರು.  ಲೋಟನ  ಹೆಂಡತಿಯೋ,  ಅವನ  ಹಿಂದೆ  ಬರುತ್ತಿದ್ದಾಗ  ಹಿಂದಿರುಗಿ  ನೋಡಿದಳು ;  ಕೂಡಲೇ  ಉಪ್ಪಿನ  ಕಂಬವಾಗಿ  ಮಾರ್ಪಟ್ಟಳು.  ಇತ್ತ  ಅಬ್ರಾಮನು  ಬೆಳಿಗ್ಗೆ  ಎದ್ದು  ತಾನು  ಸರ್ವೇಶ್ವರಸ್ವಾಮಿ  ಸನ್ನಿಧಿಯಲ್ಲಿ  ನಿಂತಿದ್ದ  ಸ್ಥಳಕ್ಕೆ  ಮರಳಿ  ಬಂದನು.  ಸೊದೋಮ್ - ಗೊಮೋರ  ಹಾಗೂ  ಆ  ಬಯಲುಸೀಮೆಯತ್ತ  ಅವನು  ಕಣ್ಣು  ಹಾಯಿಸಿದಾಗ,  ಇಗೋ,  ಆ  ಪ್ರದೇಶದಿಂದ  ಹೊಗೆ,  ದೊಡ್ಡ  ಆವಿಗೆಯ  ಹೊಗೆಯಂತೆ  ಭುಗಿಲೇರುತ್ತಿತ್ತು.   ದೇವರು  ಆ  ಬಯಲುಸೀಮೆಯ  ಪಟ್ಟಣಗಳನ್ನು  ನಾಶಮಾಡಿದಾಗ  ಲೋಟನು  ವಾಸವಾಗಿದ್ದ  ಊರುಗಳನ್ನೇನೋ  ಹಾಳುಮಾಡಿದರು.  ಆದರೆ  ಅಬ್ರಾಮನನ್ನು  ನೆನಪಿಗೆ  ತಂದುಕೊಂಡು  ಲೋಟನನ್ನು ತಪ್ಪಿಸಿ  ಕಾಪಾಡಿದರು.

- ಪ್ರಭುವಿನ  ವಾಕ್ಯ

ಕೀರ್ತನೆ 26:2-3,9-10,11-12.
ಶ್ಲೋಕ: ಕೈಬಿಡದ ನಿನ್ನೊಲವು ನನ್ನ ಕಣ್ಮುಂದಿದೆ |

ಪರೀಕ್ಷಿಸು,  ಪ್ರಭೂ,  ಎನ್ನನ್ನು  ಪರಿಶೀಲಿಸು|

ಹೃನ್ಮನಗಳೆಲ್ಲವನು  ನೀ  ಪರಿಶೋಧಿಸು||

ಕೈಬಿಡದ  ನಿನ್ನೊಲವು  ನನ್ನ  ಕಣ್ಮುಂದಿದೆ|

ನೀ  ತೋರಿದ  ಸತ್ಯ  ಪಥದಲಿ,  ನಾ  ನಡೆದೆ||

 

ಪಾಪಿಗಳ  ಸಮೇತ  ಎನ್ನ  ಪ್ರಾಣವನಳಿಸಬೇಡಯ್ಯಾ|

ಕೊಳೆಪಾತಕರ  ಸಮೇತ  ಎನ್ನ  ಜೀವ  ತೆಗೆಯಬೇಡಯ್ಯಾ||

ಇದೆ    ಜನರ  ಕೈಗಳಲಿ  ಕೆಡಕುತನ|

ಬಲಗೈ  ತುಂಬ  ಲಂಚಕೋರತನ||

 

ನೀತಿಯ  ಪಥದೊಳು  ನಾ  ನಡೆವೆನಯ್ಯಾ|

ಕರುಣೆ  ತೋರುವ  ಪ್ರಭೂ,  ರಕ್ಷಿಸಯ್ಯಾ||

ಸಮತಳದಲಿ  ನಿಂತಿವೆ  ನನ್ನ  ಪಾದಗಳು|

ಸ್ತುತಿಸುವೆ  ನಾ  ಪ್ರಭುವನು  ಭಕ್ತರ  ಸಭೆಯೊಳು||

 ಘೋಷಣೆ       2 ತಿಮೊಥೇಯ  1:10

 ಅಲ್ಲೆಲೂಯಅಲ್ಲೆಲೂಯ!

ಮೃತ್ಯುಶಕ್ತಿಯನ್ನು  ವಿನಾಶಗೊಳಿಸಿ,  ಅಮರಜೀವವನ್ನು  ಶುಭಸಂದೇಶದ  ಮೂಲಕ  ಬೆಳಕಿಗೆ  ತಂದವರು  ಯೇಸುವೇ,,

ಅಲ್ಲೆಲೂಯ!

ಶುಭಸಂದೇಶ  ವಾಚನ : ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 8:23-27

ಆ  ಕಾಲದಲ್ಲಿ  ಯೇಸು  ದೋಣಿಯನ್ನು  ಹತ್ತಿದರು.  ಶಿಷ್ಯರು  ಹತ್ತಿ  ಅವರ  ಸಂಗಡ  ಹೋದರು‌.  ಇದ್ದಕ್ಕಿದ್ದ  ಹಾಗೆ  ಸರೋವರದಲ್ಲಿ  ರಭಸವಾದ  ಬಿರುಗಾಳಿ  ಎದ್ದಿತು.  ದೋಣಿ  ಅಲೆಗಳಿಂದ  ಮುಳುಗಿ  ಹೋಗುವುದರಲ್ಲಿತ್ತು.  ಯೇಸುವಾದರೋ  ನಿದ್ರಾವಶರಾಗಿದ್ದರು.  ಶಿಷ್ಯರು  ಹತ್ತಿರಕ್ಕೆ  ಬಂದು  ಅವರನ್ನು  ಎಬ್ಬಿಸಿ,  "ಪ್ರಭೂ,  ಕಾಪಾಡಿ,  ನಾವು  ನೀರುಪಾಲಾಗುತ್ತಿದ್ದೇವೆ,  " ಎಂದರು.  ಅದಕ್ಕೆ  ಯೇಸು,  "ಅಲ್ಪ  ವಿಶ್ವಾಸಿಗಳೇ,  ನಿಮಗೇಕೆ  ಇಷ್ಟು  ಭಯ?  "ಎಂದರು.  ಅನಂತರ  ಎದ್ದುನಿಂತು  ಸುಂಟರಗಾಳಿಯನ್ನೂ  ಸರೋವರವನ್ನೂ  ಗದರಿಸಿದರು.  ಆಗ  ವಾತಾವರಣ  ಪ್ರಶಾಂತವಾಯಿತು.   ಶಿಷ್ಯರು  ನಿಬ್ಬೆರಗಾದರು. " ಗಾಳಿಯೂ  ಸರೋವರವೂ  ಇವರು  ಹೇಳಿದಂತೆ  ಕೆಳಬೇಕಾದರೆ  ಇವರೆಂತಹ  ವ್ಯಕ್ತಿಯಾಗಿರಬೇಕು ! " ಎಂದುಕೊಂಡರು.

-ಪ್ರಭುಕ್ರಿಸ್ತರ  ಶುಭಸಂದೇಶ