ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

29.07.2025 - "ನೀವೇ ಅಭಿಷಿಕ್ತರಾದ ಲೋಕೋದ್ಧಾರಕ"

 ಮೊದಲನೇ ವಾಚನ: ವಿಮೋಚನಕಾಂಡ 33:7-11; 34:5-9,28

 ಮೋಶೆ ಗುಡಾರವನ್ನು ಪಾಳೆಯದ ಹೊರಗೆ ದೂರದಲ್ಲಿ ಹಾಕಿಸುತ್ತಿದ್ದನು. ಅದಕ್ಕೆ ‘ದೇವದರ್ಶನದ ಗುಡಾರ' ಎಂದು ಹೆಸರಿಟ್ಟನು. ಸರ್ವೇಶ್ವರನಿಂದ ಉತ್ತರವನ್ನು ಬಯಸುತ್ತಿದ್ದವರೆಲ್ಲರು ಪಾಳೆಯದ ಹೊರಗಿದ್ದ ಆ ದೇವದರ್ಶನದ ಗುಡಾರಕ್ಕೆ ಹೋಗುತ್ತಿದ್ದರು. ಮೋಶೆ ಗುಡಾರಕ್ಕೆ ಹೋಗುವಾಗಲೆಲ್ಲಾ ಜನರೆಲ್ಲರು ಎದ್ದು ತಮ್ಮ ತಮ್ಮ ಡೇರೆಗಳ ಬಾಗಿಲಲ್ಲಿ ನಿಂತು ಮೋಶೆ ಆ ಗುಡಾರದೊಳಕ್ಕೆ ಹೋಗುವ ತನಕ ಅವನ ಹಿಂದೆ ನೋಡುತ್ತಿದ್ದರು. ಮೋಶೆ ಗುಡಾರದೊಳಕ್ಕೆ ಹೋದ ಕೂಡಲೆ ಮೇಘ ಸ್ತಂಭವೊಂದು ಇಳಿದು ಆ ಗುಡಾರದ ಬಾಗಿಲಲ್ಲಿ ನಿಲ್ಲುತ್ತಿತ್ತು. ಆಗ ಮೋಶೆಯ ಸಂಗಡ ಸರ್ವೇಶ್ವರ ಮಾತಾಡುತ್ತಿದ್ದರು. ಆ ಮೇಘಸ್ತಂಭ ಗುಡಾರದ ಬಾಗಿಲಲ್ಲಿ ನಿಲ್ಲುವುದನ್ನು ಜನರೆಲ್ಲರು ನೋಡಿ, ಎದ್ದು ನಿಂತು ತಮ್ಮ ತಮ್ಮ ಡೇರೆಗಳ ಬಾಗಿಲಲ್ಲೇ ಅಡ್ಡಬೀಳುತ್ತಿದ್ದರು. ಒಬ್ಬ ಮನುಷ್ಯ ತನ್ನ ಗೆಳೆಯನೊಡನೆ ಹೇಗೆ ಮಾತಾಡುತ್ತಾನೋ ಹಾಗೆಯೇ ಸರ್ವೇಶ್ವರ ಮೋಶೆಯ ಸಂಗಡ ಮುಖಾಮುಖಿಯಾಗಿ ಮಾತಾಡುತ್ತಿದ್ದರು. ತರುವಾಯ ಮೋಶೆ ಪಾಳೆಯಕ್ಕೆ ಮರಳಿ ಬರುತ್ತಿದ್ದನು. ಆದರೆ ನೂನನ ಮಗನಾದ ಯೆಹೋಶುವ ಎಂಬ ಹೆಸರುಳ್ಳ ಯುವಕನೊಬ್ಬನು ಮೋಶೆಯ ಶಿಷ್ಯನಾಗಿ ಆ ಗುಡಾರದಲ್ಲೇ ಇರುತ್ತಿದ್ದನು. ಅದನ್ನು ಬಿಟ್ಟು ಹೋಗುತ್ತಿರಲಿಲ್ಲ.  ಆಗ ಸರ್ವೇಶ್ವರಸ್ವಾಮಿ ಮೇಘಾವ್ರತರಾಗಿ ಇಳಿದುಬಂದು ಅಲ್ಲಿ ಅವನ ಹತ್ತಿರ ನಿಂತು, ‘ಸರ್ವೇಶ್ವರ’ ಎಂಬ ತಮ್ಮ ನಾಮವನ್ನು ಪ್ರಕಟಿಸಿದರು. ಸರ್ವೇಶ್ವರ ಮೋಶೆಯ ಎದುರಿನಲ್ಲಿ ಹಾದುಹೋಗುತ್ತಾ ಹೀಗೆಂದು ಪ್ರಕಟಿಸಿದರು: “ಸರ್ವೇಶ್ವರನು ಕರುಣಾಮಯನು, ದಯಾಳು ದೇವರು. ತಟ್ಟನೆ ಸಿಟ್ಟುಗೊಳ್ಳದವನು, ಪ್ರೀತಿಪಾತ್ರನು, ನಂಬಿಗಸ್ಥನು.  ಸಾವಿರಾರು ತಲೆಗಳವರೆಗೂ ಅಚಲ ಪ್ರೀತಿ ತೋರುವವನು, ದೋಷಾಪರಾಧಗಳನ್ನೂ ಪಾಪಗಳನ್ನೂ  ಕ್ಷಮಿಸುವವನು; ಆದರೂ ತಪ್ಪಿತಸ್ಥರನ್ನು ಶಿಕ್ಷಿಸದೆ ಬಿಡದವನು. ಹೆತ್ತವರ ದೋಷ ಪರಿಣಾಮಗಳನ್ನು ಮಕ್ಕಳ ಮೇಲೆ ಮೂರು ನಾಲ್ಕು ತಲೆಗಳವರೆಗೆ ಬರಮಾಡುವವನು.” ಕೂಡಲೇ ಮೋಶೆ ನೆಲದ ಮೇಲೆ ಅಡ್ಡಬಿದ್ದು ನಮಸ್ಕರಿಸಿ,“ಸ್ವಾಮಿ ಸರ್ವೇಶ್ವರಾ, ನಿಮ್ಮ ಅನುಗ್ರಹ ನಮಗೆ ದೊರಕಿತಾದರೆ, ತಾವೇ ನಮ್ಮ ಜೊತೆಯಲ್ಲಿ ಬರಬೇಕು. ನಮ್ಮ ಜನರು ಹಟಮಾರಿಗಳು. ಆದರೂ ತಾವು ನಮ್ಮ ಪಾಪಗಳನ್ನೂ ಅಧರ್ಮಗಳನ್ನೂ ಕ್ಷಮಿಸಿ ನಿಮ್ಮ ಜನರಾಗುವಂತೆ ನಮ್ಮನ್ನು ಸ್ವೀಕರಿಸಿ,” ಎಂದು ಪ್ರಾರ್ಥಿಸಿದನು. ಮೋಶೆ ಆ ಬೆಟ್ಟದಲ್ಲಿ ನಾಲ್ವತ್ತು ದಿನ ಹಗಲಿರುಳೂ ಅನ್ನಪಾನವಿಲ್ಲದೆ ಸರ್ವೇಶ್ವರನ ಸನ್ನಿಧಿಯಲ್ಲಿ ಇದ್ದನು. ಒಡಂಬಡಿಕೆಯ ವಾಕ್ಯಗಳನ್ನು, ಅಂದರೆ ಹತ್ತು ಆಜ್ಞೆಗಳನ್ನು, ಆ ಕಲ್ಲಿನ ಹಲಗೆಗಳ ಮೇಲೆ ಬರೆದನು.

ಕೀರ್ತನೆ: 103:6-7,8-9,10-11,12-13.v 8

ಶ್ಲೋಕ:  ಪ್ರಭು ದಯಾಳು, ಕೃಪಾಪೂರ್ಣನು.

1.  ಸಾಧಿಸುವನು ಪ್ರಭು ನ್ಯಾಯ ನೀತಿಯನು|
ದೊರಕಿಸುವನು ಶೋಷಿತರಿಗೆ ನ್ಯಾಯವನು||
ತೋರಿಸಿದಾತ ತನ್ನ ಮಾರ್ಗವನು ಮೋಶೆಗೆ|
ತನ್ನ ಮಹತ್ಕಾರ್ಯಗಳನು ಇಸ್ರಯೇಲರಿಗೆ||
ಶ್ಲೋಕ

2.  ಪ್ರಭು ದಯಾಳು, ಕೃಪಾಪೂರ್ಣನು|
ಸಹನಶೀಲನು, ಪ್ರೀತಿಮಯನು||
ಆತನು ಸದಾ ತಪ್ಪು ಹುಡುಕುವವನಲ್ಲ|
ನಿತ್ಯಕ್ಕು ಕೋಪ ಇಟ್ಟುಕೊಳ್ಳುವವನಲ್ಲ||
ಶ್ಲೋಕ

3.  ನಮ್ಮ ಪಾಪಗಳಿಗೆ ತಕ್ಕಂತೆ ಆತ ವರ್ತಿಸಲಿಲ್ಲ|
ನಮ್ಮ ಅಪರಾಧಗಳಿಗೆ ತಕ್ಕ ಹಾಗೆ ದಂಡಿಸಲಿಲ್ಲ||
ಆಕಾಶಮಂಡಲವು ಭೂಮಿಯಿಂದೆಷ್ಟೋ ಉನ್ನತ|
ದೈವಭಯವುಳ್ಳವರಿಗೆ ಆತನ ಕೃಪೆ ಅಷ್ಟೇ ಸನ್ನುತ||
ಶ್ಲೋಕ

4.  ಪಡುವಣದಿಂದ ಮೂಡಣವೆಷ್ಟೋ ದೂರ|
ದೂಡಿದನಾತ ನಮ್ಮ ಪಾಪಗಳನು ಅಷ್ಟು ದೂರ||
ತಂದೆ ಕರುಣೆ ತೋರಿಸುವಂತೆ ಮಕ್ಕಳಿಗೆ|
ಕನಿಕರಿಸುವನಾತ ತನಗೆ ಅಂಜುವವರಿಗೆ||
ಶ್ಲೋಕ

ಶುಭಸಂದೇಶ: ಯೊವಾನ್ನ 11:19-27
ಈ ಶುಭ ಸಂದೇಶದ ಭಾಗವನ್ನು ತುಂತುರು ಧ್ವನಿಸುರಳಿಯ ನಾಟಕ ರೂಪದಲ್ಲಿ ಕೇಳಿ

ಅನೇಕ ಯೆಹೂದ್ಯರು ಮಾರ್ತಳನ್ನೂ ಮರಿಯಳನ್ನೂ ಕಂಡು ಅವರ ಸೋದರನ ಮರಣಕ್ಕಾಗಿ ಸಂತಾಪ ಸೂಚಿಸಲು ಬಂದಿದ್ದರು.  ಯೇಸು ಬರುತ್ತಿದ್ದಾರೆಂದು ಕೇಳಿದೊಡನೆ ಮಾರ್ತ ಅವರನ್ನು ಎದುರುಗೊಳ್ಳಲು ಹೋದಳು. ಮರಿಯ ಮನೆಯಲ್ಲೇ ಇದ್ದಳು. ಮಾರ್ತ ಯೇಸುವನ್ನು ಕಂಡು, "ಪ್ರಭುವೇ, ನೀವು ಇಲ್ಲಿದ್ದಿದ್ದರೆ ನನ್ನ ಸಹೋದರ ಸಾಯುತ್ತಿರಲಿಲ್ಲ. ಈಗಲೂ ದೇವರಲ್ಲಿ ನೀವು ಏನೇ ಕೇಳಿಕೊಂಡರೂ ನಿಮಗವರು ನೀಡುವರೆಂದು ನಾನು ಬಲ್ಲೆ," ಎಂದಳು. ಯೇಸು, "ನಿನ್ನ ಸಹೋದರನು ಜೀವಂತವಾಗಿ ಏಳುವನು," ಎಂದರು. "ಅವನು ಅಂತಿಮ ದಿನದ ಪುನರುತ್ಥಾನದಲ್ಲಿ ಜೀವಂತವಾಗಿ ಏಳುವನೆಂದು ನನಗೆ ತಿಳಿದಿದೆ," ಎಂದಳು ಮಾರ್ತ. ಯೇಸು, ಅವಳಿಗೆ, " ಪುನರುತ್ಥಾನವೂ ಜೀವವೂ ನಾನೇ; ನನ್ನಲ್ಲಿ ವಿಶ್ವಾಸವಿಟ್ಟವನು ಸಾವಿಗೀಡಾದರೂ ಜೀವಿಸುವನು. ಜೀವಿಸುವ ಪ್ರತಿಯೊಬ್ಬನೂ ನನ್ನಲ್ಲಿ ವಿಶ್ವಾಸವಿಟ್ಟನೆಂದರೆ ಅವನೆಂದಿಗೂ ಸಾಯನು. ಇದನ್ನು ನೀನು ವಿಶ್ವಾಸಿಸುತ್ತೀಯಾ?" ಎಂದು ಕೇಳಲು ಅವಳು,  "ಹೌದು ಪ್ರಭುವೇ, ನೀವೇ ಅಭಿಷಿಕ್ತರಾದ ಲೋಕೋದ್ಧಾರಕ; ದೇವರ ಪುತ್ರ; ಈ ಲೋಕಕ್ಕೆ ಬರಬೇಕಾದವರು - ಎಂದು ನಾನು ವಿಶ್ವಾಸಿಸುತ್ತೇನೆ," ಎಂದು ಹೇಳಿದಳು.

No comments:

Post a Comment