ಮೊದಲನೇ ವಾಚನ: ಸಂಖ್ಯಾಕಾಂಡ 21:4-9
ಇಸ್ರಯೇಲರು ಹೋರ್ ಬೆಟ್ಟದಿಂದ ಹೊರಟು ಎದೋಮ್ಯರ ನಾಡನ್ನು ಸುತ್ತಿಕೊಂಡು ಹೋಗುವುದಕ್ಕೆ ಕೆಂಪುಕಡಲಿನ ಮಾರ್ಗವಾಗಿ ಪ್ರಯಾಣ ಮಾಡಿದರು. ಈ ಮಾರ್ಗದ ಆಯಾಸ ದಿಂದ ಅವರಿಗೆ ಬೇಸರವಾಯಿತು. ಆಗ ಅವರು ದೇವರಿಗೂ ಮೋಶೆಗೂ ವಿರುದ್ಧ ಮಾತಾಡ ತೊಡಗಿದರು: “ನೀವು ನಮ್ಮನ್ನು ಈ ಮರಳುಗಾಡಿನಲ್ಲಿ ಕೊಲ್ಲಬೇಕೆಂದು ಈಜೆಪ್ಟ್ ದೇಶದಿಂದ ಕರೆದುಕೊಂಡು ಬಂದಿರೋ? ಇಲ್ಲಿ ಆಹಾರವಿಲ್ಲ, ನೀರೂ ಇಲ್ಲ; ಈ ನಿಸ್ಸಾರವಾದ ಆಹಾರವನ್ನು ತಿಂದು ತಿಂದು ನಮಗೆ ಬೇಸರವಾಗಿದೆ,” ಎಂದು ಹೇಳತೊಡಗಿದರು. ಅದಕ್ಕೆ ಸರ್ವೇಶ್ವರ ವಿಷಸರ್ಪಗಳನ್ನು ಅವರ ನಡುವೆ ಬರಮಾಡಿದರು. ಅವು ಆ ಜನರನ್ನು ಕಚ್ಚಿದವು. ಬಹುಜನ ಸತ್ತುಹೋದರು. ಆಗ ಜನರು ಮೋಶೆಯ ಬಳಿಗೆ ಬಂದು, “ನಾವು ನಿಮಗೂ ಸರ್ವೇಶ್ವರನಿಗೂ ವಿರುದ್ಧ ಮಾತಾಡಿ ದೋಷಿಗಳಾದೆವು. ಈ ಸರ್ಪಗಳು ನಮ್ಮನ್ನು ಬಿಟ್ಟು ತೊಲಗುವಂತೆ ಸರ್ವೇಶ್ವರನನ್ನು ಪ್ರಾರ್ಥಿಸಿ,” ಎಂದು ಬೇಡಿಕೊಂಡರು. ಮೋಶೆ ಜನರ ಪರವಾಗಿ ಪ್ರಾರ್ಥಿಸಿದನು. ಸರ್ವೇಶ್ವರ ಅವನಿಗೆ, “ನೀನು ಕಂಚಿನಿಂದ ವಿಷಸರ್ಪದ ಆಕಾರವನ್ನು ಮಾಡಿಸಿ, ಧ್ವಜಸ್ತಂಭದ ಮೇಲೆ ಎತ್ತಿ ನಿಲ್ಲಿಸು. ಸರ್ಪಗಳಿಂದ ಗಾಯಗೊಂಡ ಪ್ರತಿ ಒಬ್ಬನು ಅದನ್ನು ನೋಡಿ ಬದುಕಿಕೊಳ್ಳುವನು,” ಎಂದು ಆಜ್ಞಾಪಿಸಿದರು. ಅಂತೆಯೆ ಮೋಶೆ ಕಂಚಿನಿಂದ ಸರ್ಪದ ಆಕಾರವನ್ನು ಮಾಡಿಸಿ ಧ್ವಜಸ್ತಂಭದ ಮೇಲೆ ಇಡಿಸಿದನು. ಸರ್ಪಗಳಿಂದ ಗಾಯಗೊಂಡವರಲ್ಲಿ ಯಾರು ಯಾರು ಆ ಕಂಚಿನ ಸರ್ಪವನ್ನು ಲಕ್ಷ್ಯವಿಟ್ಟು ನೋಡಿದರೋ ಅವರೆಲ್ಲರೂ ಬದುಕಿಕೊಂಡರು.
ಕೀರ್ತನೆ: 102:2-3, 16-18, 19-21
ಶ್ಲೋಕ: ಕಿವಿಗೊಡು ಪ್ರಭೂ, ನನ್ನ ಪ್ರಾರ್ಥನೆಗೆ ನನ್ನ ಕೂಗು ಸೇರಲಿ ನಿನ್ನ ಬಳಿಗೆ
ಕಿವಿಗೊಡು ಪ್ರಭು, ನನ್ನ ಪ್ರಾರ್ಥನೆಗೆ I
ನನ್ನ ಕೂಗು ಸೇರಲಿ ನಿನ್ನ ಬಳಿಗೆ II
ಕಷ್ಟಕಾಲದೊಳು ವಿಮುಖನಾಗಬೇಡ ನೀನೆನಗೆ I
ಕಿವಿಗೊಡು, ಮೊರೆಯಿಡುವಾಗಲೆ, ಸದುತ್ತರಿಸು ಬೇಗನೆ II
ಹೆದರುವುವು ಪ್ರಭುವೆಂಬ ನಿನ್ನ ನಾಮಕೆ ಜನಾಂಗಗಳು I
ಭಯಪಡುವರು ನಿನ್ನ ಪ್ರತಾಪಕೆ ಭೂರಾಜರುಗಳು II
ಏಕೆನೆ ಪುನರುದ್ಧರಿಸುವನು ಸಿಯೋನನು I
ಪ್ರತ್ಯಕ್ಷಮಾಡುವನಾತ ತನ್ನ ಮಹಿಮೆಯನು II
ತಿರಸ್ಕರಿಸನಾತ ನಿರ್ಗತಿಕರ ಮೊರೆಯನು I
ನೆರವೇರಿಸದೆ ಬಿಡನು ಅವರ ಕೋರಿಕೆಯನು II
ಮುಂದಣ ಸಂತತಿಗಿದು ಶಾಸನವಾಗಿರಲಿ I
ಮುಂದೆ ಹುಟ್ಟುವ ಪ್ರಜೆ ಪ್ರಭುವನು ಹೊಗಳಲಿ II
ಭೂಲೋಕವನು ವೀಕ್ಷಿಸಿದನು ಪ್ರಭು ಪರಲೋಕದಿಂದ I
ದೃಷ್ಟಿಸಿದನು ತನ್ನ ಉನ್ನತ ಪವಿತ್ರಸ್ಥಾನದಿಂದ II
ಆಲಿಸಿದಾತನು ಬಂಧಿತರ ಗೋಳಾಟವನು I
ಬಿಡಿಸಿಹನು ಮರಣತೀರ್ಪಿಗೆ ಗುರಿಯಾದವರನು II
ಶುಭಸಂದೇಶ: ಯೊವಾನ್ನ 8:21-30

ಮನಸ್ಸಿಗೊಂದಿಷ್ಟು : ಯೇಸು ಸ್ವಾಮಿ ಬಹಳ ಬೇಸರವಾಗಿ ಮಾತನಾಡುವುದನ್ನು ಕಾಣಬಹುದು. ಅಂತರಂಗದ ನಮ್ಮೆಲ್ಲ ಹುಳುಕುಗಳು ನಮಗೆ ತಿಳಿದಿದೆ , ಅದು ಯೇಸುವಿಗೂ ತಿಳಿದಿದೆ. ಅವೆಲ್ಲವನ್ನೂ ತಿಳಿಗೊಳಿಸಲು ನಮ್ಮ ಆಧ್ಯಾತ್ಮಿಕ ವೈದ್ಯನಾಗಿ, ರಕ್ಷಕನಾಗಿ ಬರುವ ಯೇಸುವನ್ನು ನಾವು ತಿರಸ್ಕರಿಸುತ್ತಾ ನಡೆದರೆ, ನಮ್ಮ ಬಗ್ಗೆಯೂ ಯೇಸು ಸ್ವಾಮಿ ಬೇಸರಗೊಳ್ಳಬಹುದು ಎಂಬ ಮುನ್ನೆಚ್ಚರಿಕೆ ನಮ್ಮದಾಗಲಿ.
ಪ್ರಶ್ನೆ : ಹಂಬಲಗಳ ನಮ್ಮ ಬಾಳಲ್ಲಿ ಯೇಸುವಿನ ಹಂಬಲಿಕೆ ಎಷ್ಟು?
No comments:
Post a Comment