13.03.23 - "ಯೇಸುವನ್ನು ಆ ಊರಹೊರಕ್ಕೆ ಎಳೆದುಕೊಂಡು, ತಮ್ಮ ಊರಿದ್ದ ಗುಡ್ಡದ ತುದಿಗೆ ಕೊಂಡೊಯ್ದು, ಅಲ್ಲಿಂದ ಅವರನ್ನು ಕೆಳಕ್ಕೆ ದಬ್ಬಬೇಕೆಂದಿದ್ದರು"

ಮೊದಲನೇ ವಾಚನ: 2 ಅರಸುಗಳು: 5:1-15


ಸಿರಿಯಾದ ರಾಜನಿಗೆ ನಾಮಾನ್ ಎಂಬೊಬ್ಬ ಸೇನಾಪತಿಯಿದ್ದನು. ಸರ್ವೇಶ್ವರಸ್ವಾಮಿ ಇವನ ಮುಖಾಂತರ ಸಿರಿಯಾದವರಿಗೆ ಜಯವನ್ನು ಅನುಗ್ರಹಿಸಿದ್ದರು. ಆದ್ದರಿಂದ ರಾಜನು ಇವನನ್ನು ಮಹಾಪುರುಷನೆಂದೂ ಸನ್ಮಾನ್ಯನೆಂದೂ ಗೌರವಿಸುತ್ತಿದ್ದನು. ಆದರೆ ಪರಾಕ್ರಮ ಶಾಲಿಯಾದ ಇವನು ಭೀಕರ ಚರ್ಮರೋಗದಿಂದ ನರಳುತ್ತಿದ್ದನು. ಸಿರಿಯಾದವರು, ಒಮ್ಮೆ ಸುಲಿಗೆಗಾಗಿ ಇಸ್ರಯೇಲರ ಪ್ರಾಂತ್ಯಕ್ಕೆ ಹೋಗಿಬರುವಾಗ, ಅಲ್ಲಿನ ಒಬ್ಬ ಹುಡುಗಿಯನ್ನು ಹಿಡಿದುಕೊಂಡು ಬಂದರು. ಆಕೆ ನಾಮಾನನ ಹೆಂಡತಿಗೆ ದಾಸಿಯಾದಳು. ಒಂದು ದಿನ ಆಕೆ ತನ್ನ ಯಜಮಾನಿಗೆ, “ನಮ್ಮ ದಣಿಯವರು ಸಮಾರಿಯದಲ್ಲಿರುವ ಪ್ರವಾದಿಯ ಹತ್ತಿರ ಇದ್ದಿದ್ದರೆ ಎಷ್ಟೋ ಒಳ್ಳೇದಾಗುತ್ತಿತ್ತು; ಅವರು ಇವರನ್ನು ಈ ಚರ್ಮರೋಗದಿಂದ ಗುಣಪಡಿಸುತ್ತಿದ್ದರು,” ಎಂದು ಹೇಳಿದಳು. ನಾಮಾನನು ರಾಜನ ಸನ್ನಿಧಿಗೆ ಹೋಗಿ, ಇಸ್ರಯೇಲ್ ನಾಡಿನ ಹುಡುಗಿ ಹೇಳಿದ್ದನ್ನು ತಿಳಿಸಿದನು. ಅವನು, “ನೀನು ಅಲ್ಲಿಗೆ ಹೋಗಿ ಬಾ; ನಾನು ನಿನ್ನ ಕೈಯಲ್ಲಿ ಇಸ್ರಯೇಲರ ಅರಸನಿಗೆ ಒಂದು ಪತ್ರವನ್ನು ಕೊಡುತ್ತೇನೆ,” ಎಂದನು. ನಾಮಾನನು ಮೂವತ್ತು ಸಾವಿರ ಬೆಳ್ಳಿ, ಆರುಸಾವಿರ ಬಂಗಾರ ನಾಣ್ಯಗಳನ್ನೂ, ಹತ್ತು ದುಸ್ತು ಬಟ್ಟೆಗಳನ್ನೂ ತೆಗೆದುಕೊಂಡು ಸಮಾರಿಯಕ್ಕೆ ಹೋದನು; ತಂದ ಪತ್ರವನ್ನು ಇಸ್ರಯೇಲರ ಅರಸನಿಗೆ ಕೊಟ್ಟನು. ಅದರಲ್ಲಿ, “ನನ್ನ ಸೇವಕ ನಾಮಾನನನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ; ನೀವು ಅವನ ಚರ್ಮರೋಗವನ್ನು ವಾಸಿಮಾಡತಕ್ಕದ್ದೆಂದು ಈ ಪತ್ರದಿಂದ ತಿಳಿದುಕೊಳ್ಳಿ,” ಎಂಬುದಾಗಿ ಬರೆದಿತ್ತು. ಇಸ್ರಯೇಲರ ಅರಸನು ಈ ಪತ್ರವನ್ನು ಓದಿದ ಕೂಡಲೆ, ಸಿಟ್ಟಿನಿಂದ ಬಟ್ಟೆಗಳನ್ನು ಹರಿದುಕೊಡು, ತನ್ನ ಪರಿವಾರದವರಿಗೆ, “ತಾನು ಕಳುಹಿಸಿದ ವ್ಯಕ್ತಿಯನ್ನು ಚರ್ಮರೋಗದಿಂದ ನಾನು ವಾಸಿಮಾಡಬೇಕಂತೆ! ಇದು ಎಂಥ ಅಪ್ಪಣೆ; ನಾನೇನು ದೇವರೋ? ಜೀವದಾನ ಮಾಡುವುದಕ್ಕಾಗಲಿ ಜೀವಹರಣ ಮಾಡುವುದಕ್ಕಾಗಲಿ ನನಗೆ ಸಾಮಥ್ರ್ಯವುಂಟೇ? ಇವನು ನನ್ನೊಡನೆ ಯುದ್ಧಮಾಡುವುದಕ್ಕೆ ನೆಪ ಹುಡುಕುತ್ತಾನಲ್ಲದೆ ಮತ್ತೇನು? ನೀವೇ ಆಲೋಚಿಸಿ ನೋಡಿ,” ಎಂದು ಹೇಳಿದನು. ಇಸ್ರಯೇಲರ ಅರಸನು ಸಿಟ್ಟಿನಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡನೆಂಬುದನ್ನು ದೈವ ಪುರುಷ ಎಲೀಷನು ಕೇಳಿದನು. ದೂತರ ಮುಖಾಂತರ ಅವನಿಗೆ, “ನೀವು ನಿಮ್ಮ ಬಟ್ಟೆಗಳನ್ನು ಹರಿದುಕೊಂಡದ್ದೇಕೆ? ಅವನನ್ನು ನನ್ನ ಬಳಿಗೆ ಕಳುಹಿಸಿ; ಇಸ್ರಯೇಲರಲ್ಲಿ ಒಬ್ಬ ಪ್ರವಾದಿ ಇದ್ದಾನೆಂಬುದು ಅವನಿಗೆ ಗೊತ್ತಾಗಲಿ,” ಎಂದು ಹೇಳಿ ಕಳುಹಿಸಿದನು. ನಾಮಾನನು ರಥರಥಾಶ್ವಗಳೊಡನೆ ಎಲೀಷನ ಮನೆಗೆ ಹೋಗಿ ಬಾಗಿಲಿನ ಮುಂದೆ ನಿಂತನು. ಎಲೀಷನು ಅವನಿಗೆ, “ಹೋಗಿ ಜೋರ್ಡನ್ ನದಿಯಲ್ಲಿ ಏಳು ಸಾರಿ ಸ್ನಾನ ಮಾಡು; ಆಗ ನಿನ್ನ ದೇಹ ಮೊದಲಿದ್ದಂತಾಗುವುದು; ನೀನು ಶುದ್ಧನಾಗುವೆ,” ಎಂದು ಹೇಳಿಕಳುಹಿಸಿದನು. ನಾಮಾನನು ಇದನ್ನು ಕೇಳಿ ಕೋಪಗೊಂಡನು. “ಇದೇನು! ಇವನು ಖಂಡಿತವಾಗಿ ಹೊರಗೆಬಂದು ನಿಂತು, ತನ್ನ ದೇವರಾದ ಸರ್ವೇಶ್ವರನ ಹೆಸರು ಹೇಳಿ, ನನ್ನ ಚರ್ಮದ ಮೇಲೆ ಕೈಯಾಡಿಸಿ, ರೋಗ ವಾಸಿಮಾಡುವನೆಂದು ನೆನಸಿದೆ. ದಮಸ್ಕದ ಅಬಾನಾ ಹಾಗು ಪರ್ಪರ್ ಎಂಬ ನದಿಗಳು ಇಸ್ರಯೇಲರ ಎಲ್ಲಾ ನದಿ ಹೊಳೆಗಳಿಗಿಂತ ಉತ್ತಮವಾಗಿವೆಯಲ್ಲವೇ? ಸ್ನಾನದಿಂದ ವಾಸಿಯಾಗುವ ಹಾಗಿದ್ದರೆ ನಾನು ಅವುಗಳಲ್ಲಿಯೇ ಸ್ನಾನಮಾಡಬಹುದಿತ್ತಲ್ಲವೇ? ಎಂದು ಹೇಳಿ, ಬಹಳ ಸಿಟ್ಟಿನಿಂದ ಹೊರಟುಹೋದನು. ಆಗ ಅವನ ಸೇವಕರು ಹತ್ತಿರ ಬಂದು, “ಯಜಮಾನರೇ, ಪ್ರವಾದಿ ಒಂದು ಕಠಿಣವಾದ ಕೆಲಸವನ್ನು ಹೇಳಿದ್ದರೆ ಅದನ್ನು ಮಾಡುತ್ತಿದ್ದಿರಲ್ಲವೆ? ಹಾಗಾದರೆ ‘ಸ್ನಾನಮಾಡಿ, ಶುದ್ಧರಾಗುವಿರಿ’ ಎಂದು ಹೇಳಿದರೆ ಏಕೆ ಅದರಂತೆ ಮಾಡಬಾರದು?” ಎಂದರು. ಅವನು ಅಂತೆಯೇ ಜೋರ್ಡನಿಗೆ ಹೋಗಿ, ಏಳು ಸಾರಿ ಅದರಲ್ಲಿ ಮುಳುಗಿ ಎದ್ದನು. ಕೂಡಲೆ ದೈವಪುರುಷನ ಮಾತಿಗನುಸಾರ ಅವನ ದೇಹ ಒಂದು ಮಗುವಿನ ದೇಹದಂತೆ ಶುದ್ಧವಾಯಿತು. ಅನಂತರ ನಾಮಾನನು ತನ್ನ ಪರಿವಾರದವರೊಡನೆ ಹಿಂದಿರುಗಿ ದೈವಪುರುಷನ ಬಳಿಗೆ ಹೋಗಿ ಅವನ ಮುಂದೆ ನಿಂತನು. “ಇಸ್ರಯೇಲ್ ನಾಡಿನಲ್ಲಿರುವ ದೇವರ ಹೊರತು, ಲೋಕದಲ್ಲಿ ಬೇರೆ ದೇವರು ಇಲ್ಲವೇ ಇಲ್ಲವೆಂಬುದು ಈಗ ನನಗೆ ಗೊತ್ತಾಯಿತು; ತಾವು ದಯವಿಟ್ಟು ಈ ಕಾಣಿಕೆಯನ್ನು ಅಂಗೀಕರಿಸಬೇಕು,” ಎಂದು ಹೇಳಿದನು.

ಕೀರ್ತನೆ: 42:1-2, 43:3-4

ಶ್ಲೋಕ:  ಜೀವಂತ ದೇವನಿಗಾಗಿ ದಾಹದಿಂದಿದೆ ಎನ್ನ ಮನ, ನಾ ತೆರಳಿ ಪಡೆವುದೆಂತು ಆ ದೇವನ ಮುಖದರ್ಶನ.

ಬಾಯಾರಿದ ಜಿಂಕೆ ಹಾತೊರೆಯುವಂತೆ ತೊರೆಗಾಗಿ I
ದಣಿದೆನ್ನ ಮನ ದೇವಾ, ಹಂಬಲಿಸುತಿದೆ ನಿನಗಾಗಿ II

ಜೀವಂತ ದೇವನಿಗಾಗಿ ದಾಹದಿಂದಿದೆ ಎನ್ನ ಮನ I
ನಾ ತೆರಳಿ ಪಡೆವುದೆಂತು ಆ ದೇವನ ಮುಖದರ್ಶನ? II

ಕಳುಹಿಸು ನಿನ್ನ ಜ್ಯೋತಿಯನು, ನಿನ್ನ ಸತ್ಯವನ್ನು ನನ್ನ ನಡೆಸಲಿಕ್ಕೆ I
ಸೇರಿಸಲೆನ್ನನು ನಿನ್ನ ಪವಿತ್ರ ಪರ್ವತಕೆ, ನಿನ್ನಯ ನಿವಾಸಕೆ II

ಬರುವೆನಾಗ ನಿನ್ನ ಬಲಿಪೀಠದ ಬಳಿಗೆ I
ನನ್ನಾನಂದ ನಿಧಿಯಾದ ನಿನ್ನ ಸನ್ನಿಧಿಗೆ I
ವೀಣೆ ನುಡಿಸಿ ದೇವಾ, ನಿನ್ನ ಸ್ತುತಿಸಲಿಕೆ II

ಶುಭಸ೦ದೇಶ: ಲೂಕ: 4:24-30


ಆದರೆ ಯಾವ ಪ್ರವಾದಿಯೂ ಸ್ವಗ್ರಾಮದಲ್ಲಿ ಸನ್ಮಾನಿತನಲ್ಲ ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಹಿಂದೆ ನಡೆದ ಒಂದು ಸಂಗತಿಯನ್ನು ಕೇಳಿ: ಎಲೀಯನ ಕಾಲದಲ್ಲಿ ಮೂರು ವರ್ಷ ಆರು ತಿಂಗಳು ಮಳೆ ಬಾರದೆ ದೇಶದಲ್ಲೆಲ್ಲಾ ದೊಡ್ಡ ಕ್ಷಾಮ ಬಂದೊದಗಿತ್ತು. ಆಗ ಇಸ್ರಯೇಲ್ ನಾಡಿನಲ್ಲಿ ಎಷ್ಟೋ ಮಂದಿ ವಿಧವೆಯರಿದ್ದರು. ಅವರಾರ ಬಳಿಗೂ ದೇವರು ಎಲೀಯನನ್ನು ಕಳಿಸಲಿಲ್ಲ. ಸಿದೋನ್ ದೇಶಕ್ಕೆ ಸೇರಿದ ಸರೆಪ್ತ ಊರಿನ ಒಬ್ಬ ವಿಧವೆಯ ಬಳಿಗೆ ಮಾತ್ರ ಕಳಿಸಿದರು. ಅಂತೆಯೇ, ಎಲೀಷನೆಂಬ ಪ್ರವಾದಿಯ ಕಾಲದಲ್ಲಿ ಇಸ್ರಯೇಲ್ ನಾಡಿನಲ್ಲಿ ಅನೇಕ ಕುಷ್ಠರೋಗಿಗಳು ಇದ್ದರು. ಅವರಲ್ಲಿ ಸಿರಿಯ ದೇಶದ ನಾಮನನನ್ನು ಬಿಟ್ಟು ಮಿಕ್ಕ ಯಾರೂ ಗುಣಮುಖರಾಗಲಿಲ್ಲ,” ಎಂದು ಹೇಳಿದರು. ಇದನ್ನು ಕೇಳಿ, ಪ್ರಾರ್ಥನಾಮಂದಿರದಲ್ಲಿ ಇದ್ದ ಎಲ್ಲರೂ ಕಡುಗೋಪಗೊಂಡರು. ಯೇಸುವನ್ನು ಆ ಊರಹೊರಕ್ಕೆ ಎಳೆದುಕೊಂಡು, ತಮ್ಮ ಊರಿದ್ದ ಗುಡ್ಡದ ತುದಿಗೆ ಕೊಂಡೊಯ್ದು, ಅಲ್ಲಿಂದ ಅವರನ್ನು ಕೆಳಕ್ಕೆ ದಬ್ಬಬೇಕೆಂದಿದ್ದರು. ಯೇಸುವಾದರೋ, ಅವರ ನಡುವೆಯೇ ನಡೆದು, ತಮ್ಮ ದಾರಿ ಹಿಡಿದು ಹೋದರು.

ಮನಸ್ಸಿಗೊಂದಿಷ್ಟು : ಇಂದಿನ ಶುಭಸಂದೇಶದಲ್ಲಿ ಯೇಸುವನ್ನು ತಮ್ಮ ಸ್ವಂತ ಜನರೇ ಗುಡ್ಡದಿಂದ ತಳ್ಳಲು ಬಯಸುತ್ತಾರೆ. ಕಾರಣ, ಯೇಸು ನಿಷ್ಠುರವಾಗಿ ಮಾತನಾಡಿದರು ಎಂಬುದು. ನ್ಯಾಯದ ಪರವಾಗಿ ಮಾತನಾಡುವವರು ಅನುಭವಿಸಲು ಸಿದ್ಧವಾಗಿರಬೇಕಾದ ಸ್ಥಿತಿ ಇದು. ವ್ಯಕ್ತಿ ಪ್ರಭಾವಿಯಾಗಿದ್ದೂ ಅವನಿಂದ ತಮಗೆ ಸಹಾಯವಾಗುತ್ತಿದ್ದರೆ ಅಥವಾ ಸಹಾಯದ ಸಮಯ ಬರಬಹುದೆಂದರೇ , ಅವನೆಷ್ಟೇ ಅನ್ಯಾಯ ಮಾಡುತ್ತಿದ್ದರೂ ಜನ ಅವನನ್ನು ಖಂಡಿಸುವುದಿಲ್ಲ.  ಆದರೆ ಯೇಸು ಅನ್ಯಾಯವನ್ನು ಎಂದೂ ಸಹಿಸಿಕೊಳ್ಳಲಿಲ್ಲ, ಖಂಡಿಸದೆ ಬಿಡಲಿಲ್ಲ.

ಖಂಡಿಸಲು ಸಾಧ್ಯವಾಗದಿದ್ದರೂ ಸರಿ, ಅನ್ಯಾಯವನ್ನು ಬೆಂಬಲಿಸದಿರೋಣ, ಅದೆಷ್ಟೇ ವ್ಯಯಕ್ತಿಕವಾಗಿ ಪ್ರಯೋಜನಕಾರಿಯಾಗಿದ್ದರೂ....
 

No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...