ಮೊದಲನೇ ವಾಚನ: ರೋಮನರಿಗೆ 2:1-11
ಇತರರು ದೋಷಿಗಳೆಂದು ತೀರ್ಪುನೀಡುವ ಮಾನವನೇ, ನೀನು ಯಾರೇ ಆಗಿರು, ನೀನು ಮಾತ್ರ ನಿರ್ದೋಷಿಯೆಂದು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಇತರರಿಗೆ ತೀರ್ಪು ನೀಡುವ ನೀನು ಅವರು ಮಾಡುವ ತಪ್ಪುಗಳನ್ನು ನೀನೂ ಮಾಡಿದೆಯಾದರೆ, ನಿನ್ನನ್ನು ನೀನೇ ದೋಷಿಯೆಂದು ತೀರ್ಪು ಮಾಡಿಕೊಂಡ ಹಾಗಾಯಿತು. ಇಂಥ ಅಪರಾಧಗಳನ್ನು ಮಾಡುವವರ ಬಗ್ಗೆ ದೇವರು ನೀಡುವ ತೀರ್ಪು ನ್ಯಾಯಬದ್ಧವಾದುದು ಎಂಬುದನ್ನು ನಾವು ಬಲ್ಲೆವು. ಹೀಗಿರುವಾಗ, ಇತರರಿಗೆ ಯಾವ ಅಪರಾಧಕ್ಕಾಗಿ ತೀರ್ಪುನೀಡಿದೆಯೋ ಅಂಥ ಅಪರಾಧವನ್ನೇ ನೀನೂ ಮಾಡುತ್ತಿರುವೆಯಲ್ಲಾ! ದೇವರು ಕೊಡುವ ನ್ಯಾಯತೀರ್ಪಿನಿಂದ ನೀನು ಮಾತ್ರ ತಪ್ಪಿಸಿಕೊಳ್ಳುವಿಯೆಂದು ನೆನೆಸುತ್ತೀಯೋ? ಅಥವಾ ದೇವರ ಅಪಾರ ದಯೆಯನ್ನೂ ಶಾಂತಿಸಹನೆಯನ್ನೂ ಉಪೇಕ್ಷಿಸುತ್ತೀಯೋ? ನೀನು ದೇವರಿಗೆ ಅಭಿಮುಖನಾಗಬೇಕೆಂಬ ಉದ್ದೇಶದಿಂದಲೇ ಅವರು ನಿನ್ನ ಮೇಲೆ ಅಷ್ಟು ದಯೆದಾಕ್ಷಿಣ್ಯದಿಂದ ಇದ್ದಾರೆ ಎಂಬುದು ನಿನಗೆ ತಿಳಿಯದೋ? ಆದರೆ ನಿನ್ನ ಕಠಿಣ ಹೃದಯ, ಮೊಂಡುಸ್ವಭಾವ, ಆದ್ದರಿಂದ ದೇವರ ಕೋಪ ಹಾಗು ನ್ಯಾಯವಾದ ತೀರ್ಪು ವ್ಯಕ್ತವಾಗುವ ದಿನದಂದು ನಿನಗೆ ವಿಧಿಸಲಾಗುವಶಿಕ್ಷೆಯನ್ನು ನೀನಾಗಿಯೇ ಸಂಗ್ರಹಿಸಿಕೊಳ್ಳುತ್ತಿದ್ದೀಯೆ. ಪ್ರತಿಯೊಬ್ಬನಿಗೂ ದೇವರು ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುತ್ತಾರೆ. ಸತ್ಕಾರ್ಯಗಳಲ್ಲಿ ನಿರತರಾಗಿದ್ದು, ಮಹಿಮೆಯನ್ನು, ಗೌರವವನ್ನು, ಅಮರತ್ವವನ್ನು ಅರಸುತ್ತಾ ಬಾಳುವವರಿಗೆ ದೇವರು ನಿತ್ಯಜೀವವನ್ನು ದಯಪಾಲಿಸುತ್ತಾರೆ. ಸ್ವಾರ್ಥಸಾಧಕರಾಗಿದ್ದು, ಸತ್ಯಕ್ಕೆ ಮಣಿಯದೆ, ದುರ್ಮಾರ್ಗವನ್ನೇ ಅವಲಂಬಿಸಿ ನಡೆಯುವವರ ಮೇಲೆ ದೇವರ ಕೋಪವೂ ಆಕ್ರೋಶವೂ ಎರಗುತ್ತದೆ. ಯೆಹೂದ್ಯರನ್ನು ಮೊದಲ್ಗೊಂಡು, ಇತರರಿಗೂ ಪಾಪಕೃತ್ಯಗಳನ್ನು ಮಾಡುವ ಪ್ರತಿಯೊಬ್ಬರಿಗೂ ಕಷ್ಟಸಂಕಟಗಳು ಕಾದಿರುತ್ತದೆ. ಅಂತೆಯೇ, ಯೆಹೂದ್ಯರನ್ನು ಮೊದಲ್ಗೊಂಡು ಇತರರಿಗೂ ಸತ್ಕಾರ್ಯಗಳನ್ನು ಮಾಡುವ ಪ್ರತಿಯೊಬ್ಬರಿಗೂ ಮಹಿಮೆ, ಗೌರವ, ಶಾಂತಿ ಲಭಿಸುತ್ತವೆ. ದೇವರು ಪಕ್ಷಪಾತಿ ಅಲ್ಲ.
ಕೀರ್ತನೆ: 62:2-3, 6-7, 9
ಶ್ಲೋಕ: ಸರ್ವರಿಗೂ ನೀಡುವೆ ಕೃತ್ಯಕ್ಕೆ ತಕ್ಕ ಫಲ
ಶುಭಸಂದೇಶ: ಲೂಕ 11:42-46
ಯೇಸುಸ್ವಾಮಿ ಫರಿಸಾಯರನ್ನುದ್ದೇಶಿಸಿ ಹೀಗೆಂದರು: "ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಪುದಿನ, ಸದಾಪು ಮುಂತಾದ ಪಲ್ಯಗಳಲ್ಲೂ ಹತ್ತರಲ್ಲಿ ಒಂದು ಪಾಲು ಸಲ್ಲಿಸುತ್ತೀರಿ, ಸರಿ. ಆದರೆ ನ್ಯಾಯನೀತಿಯನ್ನೂ ದೇವರ ಪ್ರೀತಿಯನ್ನೂ ಬದಿಗೊತ್ತಿದ್ದೀರಿ. ನೀವು ಅವುಗಳನ್ನು ಅಲಕ್ಷ್ಯ ಮಾಡದೆ, ಇವುಗಳನ್ನು ಅನುಷ್ಠಾನಕ್ಕೆ ತರಬೇಕಾಗಿತು. ಫರಿಸಾಯರೇ, ನಿಮಗೆ ಧಿಕ್ಕಾರ! ಪ್ರಾರ್ಥನಾಮಂದಿರಗಳಲ್ಲಿ ಪ್ರಧಾನ ಆಸನಗಳನ್ನೂ ಪೇಟೆ ಬೀದಿಗಳಲ್ಲಿ ವಂದನೋಪಚಾರಗಳನ್ನೂ ಅಪೇಕ್ಷಿಸುತ್ತೀರಿ. ಅಯ್ಯೋ, ನಿಮಗೆ ಧಿಕ್ಕಾರ! ನೀವು ನೆಲಸಮವಾದ ಸಮಾಧಿಗಳಂತೆ ಇದ್ದೀರಿ. ಸಮಾಧಿಗಳೆಂದು ತಿಳಿಯದೆಯೆ ಜನರು ಅವುಗಳ ಮೇಲೆ ನಡೆದಾಡುತ್ತಾರೆ," ಎಂದರು. ಇದನ್ನು ಕೇಳಿದ ಒಬ್ಬ ಧರ್ಮಶಾಸ್ತ್ರಜ್ಞನು, "ಬೋಧಕರೇ, ನೀವು ಹಿಗೆ ಮಾತನಾಡುವುದರಿಂದ ನಮ್ಮನ್ನೂ ಖಂಡಿಸಿದಂತಾಯಿತು," ಎಂದನು. ಅದಕ್ಕೆ ಯೇಸು, "ಶಾಸ್ತ್ರಜ್ಞರೇ, ನಿಮಗೂ ಧಿಕ್ಕಾರ! ಹೊರಲಾಗದ ಹೊರೆಗಳನ್ನು ನೀವು ಜನರ ಮೇಲೆ ಹೇರುತ್ತೀರಿ; ನೀವಾದರೋ ನಿಮ್ಮ ಕಿರುಬೆರಳಿಂದ ಕೂಡ ಅವುಗಳನ್ನು ಮುಟ್ಟುವುದಿಲ್ಲ," ಎಂದರು.
No comments:
Post a Comment