ಮೊದಲನೇ ವಾಚನ: ಯೋನನ 4:1-11
ಸರ್ವೇಶ್ವರಸ್ವಾಮಿಯ ವರ್ತನೆಯು ಯೋನನಿಗೆ ಹಿಡಿಸಲಿಲ್ಲ. ಅವನ ಕೋಪ ನೆತ್ತಿಗೇರಿತು. ಆಗ ಅವನು ಹೀಗೆಂದು ಮೊರೆಯಿಟ್ಟನು: "ಸ್ವಾಮಿಾ, ಈ ರೀತಿ ಸಂಭವಿಸುವುದೆಂದು ನಾನು ಸ್ವದೇಶವನ್ನು ಬಿಡುವ ಮುನ್ನವೇ ನಿಮಗೆ ಹೇಳಿದ್ದೇನಲ್ಲವೆ? ಈ ಕಾರಣದಿಂದಲೇ ಅಲ್ಲವೆ ನಾನು ತಾರ್ಷಿಷಿಗೆ ಓಡಿಹೋಗಲು ಪ್ರಯತ್ನಿಸಿದ್ದು? ನೀವು ಪ್ರೀತಿಸ್ವರೂಪಿ, ಕರುಣಾಮಯಿ, ಸಹನಾಶೀಲರಾದ ದೇವರು, ವಿಧಿಸಬೇಕೆಂದಿದ್ದ ಶಿಕ್ಷೆಯನ್ನು ಹಿಂತೆಗೆದುಕೊಳ್ಳುವ ದೇವರು - ಎಂದು ಆಗಲೇ ನನಗೆ ತಿಳಿದಿತ್ತು. ಆದುದರಿಂದ ಸರ್ವೇಶ್ವರಾ, ನನ್ನ ಪ್ರಾಣವನ್ನು ಹಿಂತೆಗೆದುಕೊಳ್ಳಿ. ನಾನು ಬದುಕುವುದಕ್ಕಿಂತ ಸಾಯುವುದೇ ಲೇಸು." ಎಂದು ಮೊರೆಯಿಟ್ಟನು. ಅದಕ್ಕೆ ಸರ್ವೇಶ್ವರ, "ನೀನು ಹೀಗೆ ಸಿಟ್ಟುಗೊಳ್ಳುವುದು ಸರಿಯೇ?" ಎಂದರು. ಅನಂತರ ಯೋನನು ಆ ನಗರವನ್ನು ಬಿಟ್ಟು ಪೂರ್ವದಿಕ್ಕಿಗೆ ಹೋದನು. ಅಲ್ಲಿ ತನಗಾಗಿ ಒಂದು ಗುಡಿಸಲನ್ನು ಕಟ್ಟಿಕೊಂಡನು. ನಗರಕ್ಕೆ ಏನು ಸಂಭವಿಸುತ್ತದೋ ಎಂಬುದನ್ನು ನೋಡಲು ಅದರ ನೆರಳಿನಲ್ಲಿ ಕುಳಿತನು. ದೇವರಾದ ಸರ್ವೇಶ್ವರ ಆ ಸ್ಥಳದಲ್ಲಿ ಒಂದು ಸೋರೆಬಳ್ಳಿ ಮೊಳೆಯುವಂತೆ ಮಾಡಿದರು. ಅದು ಬೆಳೆದು ತಲೆಗೆ ನೆರಳನ್ನೂ ಮನಸ್ಸಿಗೆ ತಣಿವನ್ನೂ ನೀಡಿತು. ಯೋನನಿಗೆ ಬಹಳ ಸಂತೋಷವಾಯಿತು. ಆದರೆ ಮಾರನೆಯ ದಿನ ಮುಂಜಾನೆ ದೇವರ ಆಜ್ಞಾನುಸಾರ ಆ ಗಿಡಕ್ಕೆ ಹುಳುವೊಂದು ಹೊಡೆಯಿತು. ಆಗ ಗಿಡವು ಒಣಗಿಹೋಯಿತು. ಸೂರ್ಯನು ಏರುತ್ತಿರಲು, ಸರ್ವೇಶ್ವರನ ಚಿತ್ತಾನುಸಾರ ಬಿಸಿಯಾದ ಮೂಡಣ ಗಾಳಿ ಬೀಸಿತು. ಬಿಸಿಲಿನ ತಾಪದಿಂದ ಯೋನನು ಮೂರ್ಛೆಹೋಗುವಂತಾದನು; ಸಾವನ್ನು ಅಪೇಕ್ಷಿಸುತ್ತಾ: "ಬದುಕಿರುವುದಕ್ಕಿಂತ ಸಾಯುವುದೇ ಲೇಸು," ಎಂದು ಬೇಡಿಕೊಂಡನು. ಅದಕ್ಕೆ ದೇವರು: "ನೀನು ಸೋರೆಗಿಡದ ವಿಷಯದಲ್ಲಿ ಸಿಟ್ಟುಗೊಳ್ಳುವುದು ಸರಿಯೇ?" ಎಂದು ಕೇಳಲು, ಯೋನನು, "ಹೌದು, ಸಾವನ್ನು ಬಯಸುವಷ್ಟು ಸಿಟ್ಟುಗೊಳ್ಳುವುದು ಸರಿಯಲ್ಲವೇ?" ಎಂದು ಉತ್ತರವಿತ್ತನು. ಆಗ ಸರ್ವೇಶ್ವರ: "ನೀನು ಆ ಗಿಡಕ್ಕಾಗಿ ಶ್ರಮಿಸಲೂ ಇಲ್ಲ, ಅದನ್ನು ಬೆಳೆಸಲೂ ಇಲ್ಲ ಅದು ತಾನಾಗಿಯೇ ಒಂದು ರಾತ್ರಿಯಲ್ಲಿ ಬೆಳೆಯಿತು. ಒಂದೇ ರಾತ್ರಿಯಲ್ಲಿ ಬಾಡಿಹೋಯಿತು. ಅದಕ್ಕಾಗಿ ಇಷ್ಟೊಂದು ಚಿಂತೆಯೇ? ಹೀಗಿರುವಲ್ಲಿ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಂದಿ ನಿರಪರಾಧಿಗಳೂ ಅಪಾರ ಪಶುಪ್ರಾಣಿಗಳೂ ಇರುವ ನಿನೆವೆ ಮಹಾನಗರದ ಬಗ್ಗೆ ನಾನು ಇನ್ನೆಷ್ಟು ಚಿಂತೆಮಾಡಬೇಕು?" ಎಂದರು.
ಕೀರ್ತನೆ: 86:3-4, 5-6, 9--10
ಶ್ಲೋಕ: ಪ್ರಭೂ, ನೀ ದಯಾಳು; ದೇವಾ, ನೀ ಕರುಣಾಮೂರ್ತಿ
ಶುಭಸಂದೇಶ: ಲೂಕ 11:1-4
ಒಮ್ಮೆ ಯೇಸುಸ್ವಾಮಿ ಒಂದು ಸ್ಥಳದಲ್ಲಿ ಪ್ರಾರ್ಥನೆಮಾಡುತ್ತಾ ಇದ್ದರು. ಅವರ ಪ್ರಾರ್ಥನೆ ಮುಗಿದ ಮೇಲೆ ಶಿಷ್ಯರಲ್ಲಿ ಒಬ್ಬನು, "ಪ್ರಭುವೇ ಯೊವಾನ್ನನು ತನ್ನ ಶಿಷ್ಯರಿಗೆ ಪ್ರಾರ್ಥನೆ ಮಾಡುವುದನ್ನು ಕಲಿಸಿದ ಹಾಗೆ ನಮಗೂ ಕಲಿಸಿಕೊಡಿ," ಎಂದನು. ಅದಕ್ಕೆ ಯೇಸು ಇಂತೆಂದರು: "ನೀವು ಹೀಗೆ ಪ್ರಾರ್ಥನೆಮಾಡಬೇಕು: "ತಂದೆಯೇ, ನಿಮ್ಮ ಪವಿತ್ರನಾಮ ಪೂಜಿತವಾಗಲಿ: ನಿಮ್ಮ ಸಾಮ್ರಾಜ್ಯ ಬರಲಿ. ನಮಗೆ ಅಗತ್ಯವಾದ ಆಹಾರವನ್ನು ಅನುದಿನವೂ ಕೊಡಿ. ನಮಗೆ ತಪ್ಪು ಮಾಡಿದ ಪ್ರತಿಯೊಬ್ಬನನ್ನು ನಾವು ಕ್ಷಮಿಸುವುದರಿಂದ, ನಮ್ಮ ಪಾಪಗಳನ್ನು ಕ್ಷಮಿಸಿರಿ. ನಮ್ಮನ್ನು ಶೋಧನೆಗೆ ಒಳಪಡಿಸಬೇಡಿ."
No comments:
Post a Comment