ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

25.12.2018

ಸರ್ವರಿಗೂ ಕ್ರಿಸ್ತ ಜಯಂತಿಯ ಶುಭಾಶಯಗಳು. ಕ್ರಿಸ್ತ ಜನನ ನಮ್ಮೆಲ್ಲರಿಗೂ ಹರುಷದ ಜೊತೆಗೆ ಅಧ್ಯಾತ್ಮಿಕ ಬೆಳಕನ್ನು ಹೊತ್ತು ತರಲಿ ಎಂದು ಹಾರೈಸುವ ಜೀವ ವಾಕ್ಯ ತಂಡ 

ಮೊದಲನೇ ವಾಚನ: ಯೆಶಾಯ 52:7-10

ಶುಭಕರ ಸಮಾಚಾರವನು ತರುವ, ಶಾಂತಿಸಮಾಧಾನವನು ಸಾರುವ, ಸಂತಸದ ಸಂದೇಶವನು ಅರುಹುವ, ಜೀವೋದ್ಧಾರವನು ಪ್ರಕಟಿಸುವ, "ನಿನ್ನ ದೇವರೇ ರಾಜ್ಯಭಾರವಹಿಸುವ" ಎಂದು ಸಿಯೋನಿಗೆ ತಿಳಿಯಪಡಿಸುತ್ತ, ಪರ್ವತಗಳಿಂದ ಇಳಿದುಬರುವ ಶಾಂತಿದೂತನ ಪಾದಪದ್ಯಗಳು ಎಷ್ಟೊಂದು ಸುಂದರ! ಆಲಿಸಿ ಕೇಳು ನಿನ್ನ ಕಾವಲುಗಾರರ ಕೂಗನು: ಸರ್ವೇಶ್ವರ ಸಿಯೋನಿಗೆ ಮರಳಿ ಬರುತ್ತಿರುವುದನು ಕಣ್ಣಾರೆ ಕಂಡು ಕೂಡಿಹಾಡುತ್ತಿಹರು ಗೀತೆಯನು. ಜೆರುಸಲೇಮಿನ ಹಾಳುಬಿದ್ದ ಪ್ರದೇಶಗಳೇ, ಜಯಕಾರಮಾಡಿ ತಟ್ಟನೆ, ಹಾಡಿರಿ ಒಟ್ಟಿಗೆ. ಬಿಡುಗಡೆ ಮಾಡಿರುವನು ಸರ್ವೇಶ್ವರ ಜೆರುಸಲೇಮನು. ತಂದಿರುವನು ತನ್ನ ಜನರಿಗೆ ಸಮಾಧಾನವನು. ಪ್ರದರ್ಶಿಸಿಹನು ಸ್ವಾಮಿ ಸರ್ವೇಶ್ವರನು ರಾಷ್ಟ್ರಗಳಿಗೆಲ್ಲ ತನ್ನ ಶ್ರೀಶಕ್ತಿಯನು. ಕಾಣುವುವು ಜಗದ ಎಲ್ಲೆ ಎಲ್ಲೆಗಳು ನಮ್ಮ ದೇವ ಸಾಧಿಸುವ ಮುಕ್ತಿಯನು.

ಕೀರ್ತನೆ: 98:1, 2-3, 3-4, 5-6

ಶ್ಲೋಕ: ಕಂಡುಬಂದಿತು ಜಗದ ಎಲ್ಲೆ ಎಲ್ಲೆಗೆ, ನಮ್ಮ ದೇವ ಸಾಧಿಸಿದ ಜಯಗಳಿಕೆ.

ಎರಡನೇ ವಾಚನ: ಹಿಬ್ರಿಯರಿಗೆ 1:1-6
 
ಪೂರ್ವಕಾಲದಲ್ಲಿ ದೇವರು ನಮ್ಮ ಪಿತೃಗಳೊಡನೆ ಹಲವಾರು ವಿಧದಲ್ಲಿ, ಅನೇಕ ಸಾರಿ ಪ್ರವಾದಿಗಳ ಮುಖಾಂತರ ಮಾತನಾಡಿದರು. ಆದರೆ, ಇತ್ತೀಚಿನ ಅಂತಿಮ ದಿನಗಳಲ್ಲಿ ಅವರು ತಮ್ಮ ಪುತ್ರನ ಮುಖೇನ ನಮ್ಮೊಡನೆ ಮಾತನಾಡಿದ್ದಾರೆ. ದೇವರು ಇಡೀ ವಿಶ್ವವನ್ನು ಉಂಟುಮಾಡಿದ್ದು ಇವರ ಮುಖಾಂತರವೇ;  ಸಮಸ್ತಕ್ಕೂ ಬಾಧ್ಯನನ್ನಾಗಿ ನೇಮಿಸಿರುವುದು ಇವರನ್ನೇ, ಇವರೇ ದೇವರ ಮಹಿಮೆಯ ತೇಜಸ್ಸು; ಇವರೇ ದೃವತ್ವದ ಪಡಿಯಚ್ಚು; ತಮ್ಮ ಶಕ್ತಿಯುಕ್ತ ವಾಕ್ಯದಿಂದ ಇವರೇ ಸಮಸ್ತಕ್ಕೂ ಆಧಾರ; ನಮ್ಮ ಪಾಪಗಳನ್ನು ತೊಡೆದು ಹಾಕಿ, ಸ್ವರ್ಗದಲ್ಲಿ ಮಹೋನ್ನತ ದೇವರ ಬಲ ಪಾರ್ಶ್ವದಲ್ಲಿ ಆಸೀನರಾಗಿರುವವರೂ ಇವರೇ. ಹೀಗೆ ದೇವರ ಪುತ್ರನು ದೇವದೂತರಿಗಿಂತಲೂ ಶ್ರೇಷ್ಠ; ಅವರಿಗಿಂತಲೂ ಹೆಸರುವಾಸಿಯಾದಾತ, ಏಕೆಂದರೆ, ದೇವರು ತಮ್ಮ ದೂತರಲ್ಲಿ ಯಾರಿಗಾದರೂ  "ನೀನೇ ನನ್ನ ಪುತ್ರ; ನಾನೇ ನಿನ್ನನಿಂದು ಪಡೆದವ," ಎಂದು ಎಂದಾದರೂ ಹೇಳಿದ್ದುಂಟೇ? ಅಥವಾ,  "ನಾನಾತನಿಗೆ ಪಿತನು, ಆತನೆನಗೆ ಪುತ್ರನು,".ಎಂದಾಗಲಿ ಹೇಳಿದ್ಧುಂಟೇ? ಇದಲ್ಲದೆ ದೇವರು ತಮ್ಮ ಚೊಚ್ಚಲ ಮಗನನ್ನು ಭೂಲೋಕಕ್ಕೆ ಕಳುಹಿಸುವಾಗ: " ದೇವದೂತರೆಲ್ಲರೂ ಆತನನ್ನು  ಆರಾಧಿಸಲಿ," ಎಂದಿದ್ದಾರೆ.

 ಶುಭಸಂದೇಶ: ಯೊವಾನ್ನ  1:1-18

ಜಗತ್ತು ಉಂಟಾಗುವ ಮೊದಲೇ 'ದಿವ್ಯವಾಣಿ' ಎಂಬುವರಿದ್ದರು. ಆ ದಿವ್ಯವಾಣಿ ದೇವರಾಗಿದ್ದರು. ಆ ದಿವ್ಯವಾಣಿ ದೇವರೊಂದಿಗೆ ಇದ್ದರು; ಅನಾದಿಯಿಂದಲೇ ಅವರು ದೇವರೊಂದಿಗೆ ಇದ್ದರು. ದಿವ್ಯವಾಣಿಯ ಮುಖಾಂತರವೇ ಸಮಸ್ತವೂ ಉಂಟಾಯಿತು. ಉಂಟಾದವುಗಳಲ್ಲಿ ಯಾವುದೂ ಆ ದಿವ್ಯವಾಣಿಯಿಂದಲ್ಲದೆ ಆದುದಲ್ಲ. ಆ ದಿವ್ಯವಾಣಿಯಲ್ಲಿ ಸಜ್ಜೀವವಿತ್ತು. ಆ ಜೀವವೇ ಮಾನವಜನಾಂಗದ ಜ್ಯೋತಿಯಾಗಿತ್ತು. ಆ ಜ್ಯೋತಿ ಕತ್ತಲಲ್ಲಿ ಪ್ರಕಾಶಿಸುತ್ತದೆ. ಕತ್ತಲಿಗಾದರೋ ಅದನ್ನು ನಿಗ್ರಹಿಸಲಾಗಲಿಲ್ಲ. ದೇವರು ಒಬ್ಬ ವ್ಯಕ್ತಿಯನ್ನು ಕಳುಹಿಸಿದರು. ಆತನ ಹೆಸರು ಯೊವಾನ್ನ. ಈತನು ಸಾಕ್ಷಿಕೊಡಲು ಬಃದನು. ತನ್ನ ಮುಖಾಂತರ ಸರ್ವರೂ ವಿಶ್ವಾಸಿಸುವಂತೆ ಆ ಜ್ಯೋತಿಯನ್ನು ಕುರಿತು ಸಾಕ್ಷಿ ನೀಡಿದನು. ಈತನೇ ಜ್ಯೋತಿಯಾಗಿರಲಿಲ್ಲ; ಆ ಜ್ಯೋತಿಯನ್ನು ಕುರಿತು ಸಾಕ್ಷಿ ನೀಡಲೆಂದೇ ಬಂದವನು. ನಿಜವಾದ ಜ್ಯೋತಿ ಆ ದಿವ್ಯವಾಣಿಯೇ. ಮಾನವರೆಲ್ಲರನ್ನು ಬೆಳಗಿಸಲು ಲೊಕಕ್ಕೆ ಆಗಮಿಸಲಿದ್ದ ಜಗಜ್ಯೋತಿ ಅವರೇ. ದಿವ್ಯವಾಣಿ ಲೋಕದಲ್ಲಿ ಇದ್ದರು. ಅವರ ಮುಖಾಂತರವೇ ಲೋಕವು ಉಂಟಾಯಿತು. ಲೋಕವಾದರೋ ಅವರನ್ನು ಅರಿತುಕೊಳ್ಳದೆ ಹೋಯಿತು. ಅವರು ತಮ್ಮ ಸ್ವದೇಶಕ್ಕೆ ಬಂದರು; ಸ್ವಜನರೇ ಅವರನ್ನು ಬರಮಾಡಿಕೊಳ್ಳದೆ ಹೋದರು. ಕೆಲವರಾದರೋ ಅವರನ್ನು ಬರಮಾಡಿಕೊಂಡರು. ಅಂಥವರಿಗೆ, ಅಂದರೆ ಅವರಲ್ಲಿ ವಿಶ್ವಾಸ ಇಟ್ಟವರಿಗೆ, ದೇವರ ಮಕ್ಕಳಾಗುವ ಹಕ್ಕನ್ನು ಅವರು ಕೊಟ್ಟರು. ಅಂಥವರ ಜನನವು ರಕ್ತಸಂಬಧದಿಂದ ಅಲ್ಲ, ಶಾರೀರಕ ಇಚ್ಚೆಯಿಂದ ಅಲ್ಲ, ಮಾನವಸಹಜ ಬಯಕೆಯಿಂದಲೂ ಅಲ್ಲ, ದೇವರಿಂದಲೇ ಆದುದು. ಆ ದಿವ್ಯವಾಣಿ ಮನುಷ್ಯ ಆದರು. ಮನುಷ್ಯನಾಗಿ ನಮ್ಮೊಡನೆ ವಾಸಮಾಡಿದರು. ಅವರ ಮಹಿಮೆಯನ್ನು ನಾವು ನೋಡಿದೆವು, ಪಿತನಿಂದ ಪಡೆದ ಆ ಮಹಿಮೆ ಏಕೈಕ ಪುತ್ರನಿಗೆ ಮೀಸಲಾದ ಮಹಿಮೆಯೇ. ಎಂದೇ ಅವರು ವರಪ್ರಸಾದದಿಂದಲೂ ಸತ್ಯದಿಂದಲೂ ಪರಿಪೂರ್ಣರಾಗಿದ್ದರು. ಯೊವಾನ್ನನು ಅವರನ್ನು ಕುರಿತು ಸಾಕ್ಷಿ ನುಡಿಯುತ್ತಾ, "ಅವರು ನನ್ನ ಬಳಿಕ ಬಂದವರಾದರೂ ನನಗಿಂತ ಮೊದಲೇ ಇದ್ದವರು; ಆದುದರಿಃದ ಅವರು ನನಗಿಂತಲೂ ಶ್ರೇಷ್ಟರು' ಎಂದು ನಾನು ಹೇಳಿದ್ದು ಅವರನ್ನು ಕುರಿತೇ," ಎಂದು ಘೋಷಿಸಿದನು. ಅವರ ಪರಿಪೂರ್ಣತೆಯಿಂದ ನಾವೆಲ್ಲರು ವರಪ್ರಸಾದದ ಮೇಲೆ ವರಪ್ರಸಾದವನ್ನು ಪಡೆದಿದ್ದೇವೆ. ಧರ್ಮಶಾಸ್ತ್ರವನ್ನು ಮೋಶೆಯ ಮುಖಾಂತರ ಕೊಡಲಾಯಿತು. ವರಪ್ರಸಾದ ಹಾಗೂ ಸತ್ಯವಾದರೋ ಯೇಸುಕ್ರಿಸ್ತರ ಮುಖಾಂತರ ಬಂದವು. ಯಾರೂ ಎಂದೂ ದೇವರನ್ನು ಕಂಡಿಲ್ಲ; ಪಿತನ ವಕ್ಷಸ್ಥಳದಲ್ಲಿರುವ ಸ್ವಂತ ದೇವರಾಗಿರುವ ಏಕೈಕ ಪುತ್ರನೇ ಅವರನ್ನು ತಿಳಿಯಪಡಿಸಿದ್ದಾರೆ.

No comments:

Post a Comment