ಸಾಧಾರಣ ಕಾಲದ ೩೫ನೇ ಸೋಮವಾರ
ಮೊದಲನೇ ವಾಚನ: ಯೆಶಾಯ 2:1-5
ಜುದೇಯ ಮತ್ತು ಜೆರುಸಲೇಮಿನ ವಿಷಯವಾಗಿ ಆಮೋಚನ ಮಗನಾದ ಯೆಶಾಯನು ಕಂಡ ದರ್ಶನದಲ್ಲಿ ಕೇಳಿಬಂದ ದೈವೋಕ್ತಿ: ಸರ್ವೇಶ್ವರನ ಶ್ರೀ ನಿವಾಸದ ಪರ್ವತವು ಅಂತಿಮ ಕಾಲದಂದು ಪ್ರತಿಷ್ಠಗೊಳ್ಳುವುದು, ಗುಡ್ಡಬೆಟ್ಟಗಳಿಗಿಂತ ಎತ್ತರವಾಗಿ ಬೆಳೆದು ಬರುವುವು ಅದರತ್ತ ಸಕಲ ರಾಷ್ಟ್ರಗಳು ಜಲಧಾರೆಯಂತೆ ಹರಿದು ಬರುವುವು. ದೇಶವಿದೇಶಗಳವರು ಬಂದು ಹೇಳುವರು ಹೀಗೆ: "ಬನ್ನಿ, ಹೋಗೋಣ ಸರ್ವೇಶ್ವರಸ್ವಾಮಿಯ ಪರ್ವತಕ್ಕೆ ಇಸ್ರಯೇಲರ ದೇವ ಮಂದಿರಕ್ಕೆ. ಬೋಧಿಸುವನಾತ ನಮಗೆ ತನ್ನ ಮಾರ್ಗಗಳನ್ನು ನಾವು ಹಿಡಿದು ನಡೆವಂತೆ ಆತನ ಪಥವನ್ನು ಹೊರಡುವುದು ಧರ್ಮಶಾಸ್ತ್ರ ಸಿಯೋನಿನಿಂದ ಸ್ವಾಮಿಯ ದಿವ್ಯವಾಣಿ ಜೆರುಸಲೇಮಿನಿಂದ. ಬಗೆಹರಿಸುವನು ದೇಶದೇಶಗಳ ವ್ಯಾಜ್ಯವನ್ನು ತೀರಿಸುವನು ರಾಷ್ಪ್ರ ರಾಷ್ಪ್ರಗಳ ನ್ಯಾಯವನ್ನು ಹಾಕುವರವರು ಕುಲುಮೆಗೆ ತಮ್ಮಾಯುಧಗಳನ್ನು ಮಾರ್ಪಡಿಸುವರು ಕತ್ತಿಗಳನ್ನು ನೇಗಿಲ ಗುಳಿಗಳನ್ನಾಗಿ ಭರ್ಜಿಗಳನ್ನು ಕುಡುಗೋಲುಗಳನ್ನಾಗಿ. ಕತ್ತಿಯನೆತ್ತರು ಜನಾಂಗ ಜನಾಂಗದೆದುರಿಗೆ ಯುದ್ಧ ವಿದ್ಯಯ ಕಲಿಕೆ ಅಗತ್ಯವಿರದು ಅವರಿಗೆ. ಯಕೋಬ ಮನೆತನದವರೇ, ಬನ್ನಿ, ಸ್ವಾಮಿಯ ಬೆಳಕಿನಲ್ಲಿ ನಡೆಯೋಣ.
ಕೀರ್ತನೆ: 122:1-2, 3-4b, 4cd-5, 6-7, 8-9
ಶ್ಲೋಕ: ಪ್ರಭುವಿನಾಲಯಕೆ ಹೋಗೋಣ ಬಾ ಎಂದಾಗ ಆಯಿತೆನಗೆ ಆನಂದ, ಜನರೆನ್ನ ಕರೆದಾಗ.
ಶುಭಸಂದೇಶ: ಮತ್ತಾಯ 8:5-11
ಯೇಸುಸ್ವಾಮಿ ಕಫೆರ್ನವುಮ್ ಊರಿಗೆ ಬಂದಾಗ ಶತಾಧಿಪತಿಯೊಬ್ಬನು ಅವರನ್ನು ಎದುರುಗೊಂಡನು. "ಪ್ರಭೂ ನನ್ನ ಸೇವಕ ಮನೆಯಲ್ಲಿ ಪಾರ್ಶ್ವವಾಯು ರೋಗದಿಂದ ಹಾಸಿಗೆ ಹಿಡಿದಿದ್ದಾನೆ ಬಹಳವಾಗಿ ನರಳುತ್ತಿದ್ದಾನೆ," ಎಂದು ವಿನಂತಿಸಿದನು. ಯೇಸು, "ನಾನೇ ಬಂದು ಅವನನ್ನು ಗುಣಪಡಿಸುತ್ತೇನೆ," ಎಂದರು. ಅದಕ್ಕೆ ಆ ಶತಾಧಿಪತಿ, "ಪ್ರಭುವೇ, ತಾವು ನನ್ನ ಮನೆಗೆ ಬರುವಷ್ಟು ಯೊಗ್ಯತೆ ನನಗಿಲ್ಲ. ತಾವು ಒಂದೇ ಒಂದು ಮಾತು ಹೇಳಿದರೆ ಸಾಕು, ನನ್ನ ಸೇವಕ ಸ್ವಸ್ಥನಾಗುವನು. ಏಕಂದರೆ, ನಾನೂ ಮತ್ತೊಬ್ಬರ ಕೈಕೆಳಗಿರುವವನು. ನನ್ನ ಅಧೀನದಲ್ಲು ಸೈನಿಕರಿದ್ಧರೆ. ಅವರಲ್ಲಿ ಒಬ್ಬನಿಗೆ ನಾನು 'ಬಾ' ಎಂದರೆ ಬರುತ್ತಾನೆ. ಇನ್ನೊಬ್ಬನಿಗೆ 'ಹೋಗು' ಎಂದರೆ ಹೋಗುತ್ತಾನೆ. ಸೇವಕನಿಗೆ, 'ಇಂಥದ್ದನ್ನು ಮಾಡು' ಎಂದರೆ ಮಾಡುತ್ತಾನೆ." ಎಂದನು. ಈ ಮಾತನ್ನು ಕೇಳಿದ್ದೇ ಯೇಸುವಿಗೆ ಅತ್ಯಾಶ್ಚರ್ಯವಾಯಿತು. ತಮ್ಮನ್ನು ಹಿಂಬಾಲಿಸಿ ಬರುತ್ತಿದ್ದ ಜನರನ್ನು ನೋಡಿ ಹೀಗೆಂದರು: "ಇಂಥ ಗಾಡ ವಿಶ್ವಾಸವನ್ನು ನಾನು ಇಸ್ರಯೇಲ್ ಜನರಲ್ಲಿ ಕೂಡ ಕಾಣಲಿಲ್ಲವೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಪೂರ್ವ ಪಶ್ಚಿಮ ದಿಕ್ಕುಗಳಿಂದ ಅನೇಕ ಜನರು ಬಂದು ಅಬ್ರಾಹಾಮ, ಇಸಾಕ, ಯಕೋಬರ ಸಮೇತ ಸ್ವರ್ಗಸಾಮ್ರಾಜ್ಯದ ಹಬ್ಬದೂಟದಲ್ಲಿ ಭಾಗಿಗಳಾಗುವರು,"
No comments:
Post a Comment