"ಜ್ಞಾನಿಗಳಿಗೂ ಮೇಧಾವಿಗಳಿಗೂ ಮರೆಮಾಡಿ, ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿ"
ಕಳುಹಿಸಲಾಗಿದ್ದ ಎಪ್ಪತ್ತೆರಡು ಮಂದಿ ಸಂತೋಷಭರಿತರಾಗಿ ಹಿಂದಿರುಗಿ ಬಂದು, “ಸ್ವಾಮಿ, ನಿಮ್ಮ ಹೆಸರಿನಲ್ಲಿ ಆಜ್ಞೆಮಾಡಿದಾಗ ದೆವ್ವಗಳು ಕೂಡ ನಮಗೆ ಅಧೀನವಾಗುತ್ತವೆ,” ಎಂದು ವರದಿಮಾಡಿದರು. ಅದಕ್ಕೆ ಯೇಸು, “ಸೈತಾನನು ಆಕಾಶದಿಂದ ಸಿಡಿಲಿನಂತೆ ಬೀಳುವುದನ್ನು ಕಂಡೆನು. ಇಗೋ, ಸರ್ಪಗಳನ್ನು ಹಾಗೂ ಚೇಳುಗಳನ್ನು ತುಳಿಯುವುದಕ್ಕೂ ಶತ್ರುವಿನ ಸಮಸ್ತ ಶಕ್ತಿಯನ್ನು ಜಯಿಸುವುದಕ್ಕೂ ನಿಮಗೆ ಹಾನಿಮಾಡದು. ಆದರೂ ದೆವ್ವಗಳು ನಿಮಗೆ ಅಧೀನವಾಗಿವೆಯೆಂದು ಸಂತೋಷಪಡುವುದಕ್ಕಿಂತ ನಿಮ್ಮ ಹೆಸರುಗಳು ಸ್ವರ್ಗದಲ್ಲಿ ಲಿಖಿತವಾಗಿವೆ ಎಂದು ಸಂತೋಷಪಡಿರಿ,” ಎಂದು ಹೇಳಿದರು.
ಅದೇ ಗಳಿಗೆಯಲ್ಲಿ ಯೇಸುಸ್ವಾಮಿ ಪವಿತ್ರಾತ್ಮರಿಂದ ಹರ್ಷಾವೇಶಗೊಂಡು, “ಪಿತನೇ, ಭೂಸ್ವರ್ಗಗಳ ಒಡೆಯನೇ, ಈ ವಿಷಯಗಳನ್ನು ಜ್ಞಾನಿಗಳಿಗೂ ಮೇಧಾವಿಗಳಿಗೂ ಮರೆಮಾಡಿ, ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿ; ಇದಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ. ಹೌದು ಪಿತನೇ, ಇದೇ ನಿಮ್ಮ ಸುಪ್ರೀತ ಸಂಕಲ್ಪ. ನನ್ನ ಪಿತ ಸಮಸ್ತವನ್ನೂ ನನ್ನ ವಶಕ್ಕೆ ಒಪ್ಪಿಸಿದ್ದಾರೆ. ಪುತ್ರನು ಯಾರೆಂದು ಪಿತನ ಹೊರತು ಬೇರಾರೂ ಅರಿಯರು. ಪಿತನು ಯಾರೆಂದು ಪುತ್ರನು ಮತ್ತು ಯಾರಿಗೆ ಪುತ್ರನು ಅವರನ್ನು ಶ್ರುತಪಡಿಸಲು ಇಚ್ಚಿಸುತ್ತಾನೋ ಅವನೇ ಹೊರತು ಮತ್ತಾರೂ ಅರಿಯರು,” ಎಂದು ಹೇಳಿದರು. ಅನಂತರ ಯೇಸು ಶಿಷ್ಯರ ಕಡೆ ತಿರುಗಿ, ಅವರಿಗೆ ಪ್ರತ್ಯೇಕವಾಗಿ, “ನೀವು ಕಾಣುವುದನ್ನು ಕಾಣುವ ಕಣ್ಣುಗಳು ಭಾಗ್ಯವುಳ್ಳವು. ಏಕೆಂದರೆ, ಎಷ್ಟೋ ಪ್ರವಾದಿಗಳು ಹಾಗೂ ಅರಸರು ನೀವು ನೋಡುವುದನ್ನು ನೋಡುವುದಕ್ಕೂ, ನೀವು ಕೇಳುವುದನ್ನು ಕೇಳುವುದಕ್ಕೂ ಆಶಿಸಿದರು. ಆದರೂ ಅದನ್ನು ಅವರು ನೋಡಲೂ ಇಲ್ಲ, ಕಾಣಲೂ ಇಲ್ಲ ಎಂದು ನಿಮಗೆ ಹೇಳುತ್ತೇನೆ,” ಎಂದರು.
No comments:
Post a Comment