ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

24.11.23 - "ಪ್ರಾರ್ಥನಾಲಯವೀ ನನ್ನ ಆಲಯ!" ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ; ನೀವಾದರೋ ಇದನ್ನು ಕಳ್ಳಕಾಕರ ಗುಹೆಯನ್ನಾಗಿ ಮಾರ್ಪಡಿಸಿದ್ದೀರಿ,"

ಮೊದಲನೇ ವಾಚನ: 1 ಮಕ್ಕಬಿಯರು 4:36-37, 52-59 


ಇತ್ತ ಯೂದನು ಅವನ ಬಂಧುಗಳೂ, "ನಮ್ಮ ಶತ್ರುಗಳಂತೂ ಸೋತುಹೋದರು; ನಾವಿನ್ನು ಪವಿತ್ರಾಲಯವನ್ನು ಶುಚಿಮಾಡುವುದಕ್ಕೆ ಹೋಗೋಣ; ಅದನ್ನು ಹೊಸದಾಗಿ ಪ್ರತಿಷ್ಠಿಸೋಣ," ಎಂದುಕೊಂಡರು. ಸೈನ್ಯವೆಲ್ಲಾ ಮರಳಿ ಕೂಡಿಬರಲು, ಅವರೆಲ್ಲರು ಸಿಯೋನ್ ಗಿರಿಗೆ ಹೋದರು. ಅವರು 148ನೇ ವರ್ಷದ ಒಂಭತ್ತನೆಯ ತಿಂಗಳಾದ ಮಾರ್ಗಶಿರ ಮಾಸದ ಇಪ್ಪತ್ತೈದನೆಯ ದಿವಸ ನಸುಕಿನಲ್ಲಿಯೇ ಎದ್ದು ತಾವು ಹೊಸದಾಗಿ ರಚಿಸಿದ್ದ ದಹನಬಲಿಪೀಠದ ಮೇಲೆ ಧರ್ಮಶಾಸ್ತ್ರಕ್ಕೆ ಸರಿಯಾಗಿ ಬಲಿಯನ್ನು ಅರ್ಪಿಸಿದರು. ಯಾವ ದಿನ ಮತ್ತು ಯಾವ ಗಳಿಗೆಯಲ್ಲಿ ಅನ್ಯರು ಅದನ್ನು ಹೊಲೆಮಾಡಿದ್ದರೋ ಅದೇ ದಿನದ ಗಾಯನ, ವೀಣೆ, ಕಿನ್ನರಿ, ತಾಳಗಳ ಸಂಭ್ರಮದಿಂದ ಅದನ್ನು ಹೊಸದಾಗಿ ಪ್ರತಿಷ್ಠಿಸಿದರು. ಜನರೆಲ್ಲರು ಬೋರಲು ಬಿದ್ದು, ತಮಗೆ ಜಯವನ್ನು ಕೊಟ್ಟ ದೇಶರನ್ನು ಕೊಂಡಾಡಿ ಆರಾಧಿಸಿದರು. ಬಲಿಪೀಠದ ಪ್ರತಿಷ್ಠೆಯ ಹಬ್ಬವನ್ನು ಎಂಟು ದಿನಗಳವರೆಗೆ ಆಚರಿಸಿದರು. ಉಲ್ಲಾಸದಿಂದ ದಹನಬಲಿಗಳನ್ನು ಅರ್ಪಿಸಿದರು.  ವಿಮೋಚನಾ ಮತ್ತು ಕೃತಜ್ಞತಾಸ್ತುತಿಯ ಬಲಿಯನ್ನು ಅರ್ಪಿಸಿದರು ದೇವಾಲಯದ ಮುಂಭಾಗವನ್ನು ಚಿನ್ನದ ಮುಕುಟಗಳಿಂದಲೂ ಸಣ್ಣ ಸಣ್ಣ ಗುಬುಟುಗಳಿಂದಲೂ ಶೃಂಗರಿಸಿ, ಅದರ ಮಹಾದ್ವಾರಗಳನ್ನೂ ಯಾಜಕರ ಕೋಣೆಗಳನ್ನೂ ಪ್ರತಿಷ್ಠಿಸಿ, ಅವುಗಳಿಗೆ ಕದಗಳನ್ನು ಹಚ್ಚಿದರು. ಜನರಲ್ಲಿ ಉತ್ಸಾಹವು ತುಂಬಿತು; ಅನ್ಯ ಜನರಿಂದಾಗಿದ್ದ ಅಪಮಾನವು ದೂರವಾಯಿತು.  ತರುವಾಯ ಯೂದನು, ಅವನ ಬಂಧುಗಳು ಹಾಗು ಇಸ್ರಯೇಲರ ಸಭೆಯೆಲ್ಲವು ಕೂಡಿ, ಬಲಿಪಿಠದ ಪ್ರತಿಷ್ಠಿಯ ದಿನಗಳನ್ನು ಪ್ರತಿವರ್ಷ ಇದೇ ಕಾಲದಲ್ಲಿ ಅಂದರೆ, ಮಾರ್ಗಶಿರ ಮಾಸದ ಇಪ್ಪತ್ತೈದನೆಯ ದಿವಸದಿಂದ ಎಂಟು ದಿನಗಳವರೆಗೆ ಅತಿ ಸಂಭ್ರಮ ಸಂತೋಷದಿಂದ ಆಚರಿಸಬೇಕೆಂದು ಗೊತ್ತುಮಾಡಿದರು. 

1 ಪೂ. ವೃ; 29:10, 11-12 
ಶ್ಲೋಕ: ಹೇ ದೇವಾ, ಹಾಡುವೆವು ಕೀರ್ತನೆ ನಿನ್ನ ನಾಮ ಪ್ರತಿಭೆಗೆ 

ಶುಭಸಂದೇಶ: ಲೂಕ 19:45-48 


ಯೇಸುಸ್ವಾಮಿ ಮಹಾದೇವಾಲಯವನ್ನು ಪ್ರವೇಶಿಸಿದರು. ಅಲ್ಲಿ ಮಾರಾಟ ಮಾಡುತ್ತಿದ್ದವರನ್ನು ಹೊರಗಟ್ಟುತ್ತಾ, "ಪ್ರಾರ್ಥನಾಲಯವೀ ನನ್ನ ಆಲಯ!" ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ; ನೀವಾದರೋ ಇದನ್ನು ಕಳ್ಳಕಾಕರ ಗುಹೆಯನ್ನಾಗಿ ಮಾರ್ಪಡಿಸಿದ್ದೀರಿ," ಎಂದರು. ಪ್ರತಿನಿತ್ಯ ಯೇಸು ದೇವಾಲಯದಲ್ಲಿ ಬೋಧಿಸುತ್ತಿದ್ದರು," ಇತ್ತ ಮುಖ್ಯ ಯಾಜಕರೂ ಧರ್ಮಶಾಸ್ತ್ರಿಗಳೂ ಪ್ರಜಾಪ್ರಮುಖರೂ ಅವರನ್ನು ಕೊಲೆಮಾಡಲು ಹವಣಿಸುತ್ತಿದ್ದರು. ಆದರೆ ಅವರಿಂದ ಏನೂ ಮಾಡಲಾಗಲಿಲ್ಲ. ಏಕೆಂದರೆ, ಜನರೆಲ್ಲರೂ ಯೇಸುವಿನ ಬೋಧನೆಗೆ ಮಾರುಹೋಗಿದ್ದರು. ಅವರ ಬಾಯಿಂದ ಬಂದ ಒಂದೊಂದು ಮಾತನ್ನು ಕೇಳಲು ಆತುರರಾಗಿದ್ದರು.

25.11.23

ಮೊದಲನೇ ವಾಚನ: 1 ಮಕ್ಕಬಿಯರು  6:1-13 

ಅರಸ ಅಂತಿಯೋಕನು ಮೆಸಪಟೋಮಿಯದಲ್ಲಿ ಸಂಚಾರಮಾಡುತ್ತಿದ್ದನು. ಪರ್ಷಿಯಾದಲ್ಲಿದ್ದ ಎಲಿಮ ಎಂಬಲ್ಲಿ ಒಂದು ಊರು ಸಿರಿಸಂಪತ್ತು, ಬೆಳ್ಳಿಬಂಗಾರಗಳಿಗೆ ಹೆಸರಾಗಿದೆ. ಅಲ್ಲಿದ್ದ ಒಂದು ದೇವಾಲಯ ಅಪಾರ ನಿಧಿಯುಳ್ಳದ್ದಾಗಿದೆ, ಮೊದಲು ಗ್ರೀಸ್ ದೇಶವನ್ನು  ಆಳುತ್ತಿದ್ದ ಮ್ಯಾಸಿಡೋನಿಯದ ಅರಸ ಫಿಲಿಪ್ಪನ ಮಗ ಅಲೆಕ್ಸಾಂಡರನು ಬಿಟ್ಟುಹೋಗಿದ್ದ ಚಿನ್ನದ ಡಾಲೂ ಕವಚಗಳೂ ಅದರಲ್ಲಿಯೇ ಇವೆ ಎಂಬ ಸಮಾಚಾರವನ್ನು ಅವನು ಕೇಳಿದನು. ಆ ಊರನ್ನು ಹಿಡಿದುಕೊಂಡು ಸುಲಿಗೆ ಮಾಡಬೇಕೆಂಬ ಹವಣಿಕೆಯಿಂದ ಅಲ್ಲಿಗೆ ಬಂದನು. ಆದರೆ ಅವನಿಗೆ ಅದು ಸಾಧ್ಯವಾಗಲಿಲ್ಲ. ಏಕೆಂದರೆ ಈ ಸುದ್ದಿ ಆ ಊರೊಳಗಿದ್ದ ಜನರಿಗೆ ಮುಟ್ಟಲು ಅವರು ಅವನ ಸಂಗಡ ಯುದ್ಧಮಾಡಿದರು. ಅವನು ಬಹುವ್ಯಸನಕ್ರಾಂತನಾಗಿ ಅಲ್ಲಿಂದ ಕಾಲುಕಿತ್ತು, ಬಾಬಿಲೋನಿಗೆ ಹಿಂದಿರುಗಿದನು. ಇದಲ್ಲದೆ ಅಂತಿಯೋಕನು ಪರ್ಷಿಯದಲ್ಲಿದ್ದಾಗ ಒಬ್ಬನು ಬಂದು. ಅವನಿಗೆ ಹೀಗೆಂದು ವರದಿಮಾಡಿದನು. "ಜುದೇಯದ ವಿರುದ್ಧ ಹೋಗಿದ್ದ ಸೈನ್ಯವೆಲ್ಲಾ ಹಿಂದೂಡಲ್ಪಟ್ಟಿತು. ಮಾದಲು ಅಪಾರ ಬಲದೊಂದಿಗೆ ಹೋದ ಲುಸ್ಯನು ನಾಚಿಕೆಗೀಡಾಗಿ ಹಿದಿರುಗಿದನು. ಅವನ ಸೈನ್ಯದವರು ಬಿಟ್ಟುಹೋಗಿದ್ದ ಎಲ್ಲವನ್ನು ಜುದೇಯದವರು ದೋಚಿಕೊಂಡು ಹೋದರು. ಆದುದರಿಂದ ಈಗ ಅವರು ಶಸ್ತ್ರಾಸ್ತ್ರಗಳುಳ್ಳವರಾಗಿ ಪರಾಕ್ರಮದ ವಿಷಯಗಳಲ್ಲಿ ಯಾವ ಕೊರತೆಯೂ ಇಲ್ಲದೆ ಬಲಾಧ್ಯರಾಗಿದ್ದಾರೆ. ಜೆರುಸಲೇಮಿನಲ್ಲಿದ್ದ ಬಲಿಪೀಠದ ಮೇಲೆ ನೀವು ಕಟ್ಟಿಸಿದ್ದ "ವಿನಾಶಕರ ವಿಕಟಮೂರ್ತಿ"ಯನ್ನು ಕೆಡವಿ ಹಾಕಿದ್ದಾರೆ. ದೇವಾಲಯದ ಸುತ್ತಲೂ ಮೊದಲಿನಂತೆ ಎತ್ತರವಾದ ಗೋಡೆಗಳನ್ನು ಕಟ್ಟಿಸಿದ್ದಾರೆ. ನಿಮಗೆ ಸೇರಿದ ಬೆತ್ಸೂರ ಊರನ್ನು ಭದ್ರಗೊಳಿಸಿದ್ದಾರೆ," ಎಂದರು. ಅರಸನು ಈ ಸುದ್ದಿಯನ್ನು ಕೇಳಿ ಆಶ್ಚರ್ಯ ಚಕಿತನಾದನು. ಹಾಗು ಬಹು ಖಿನ್ನನಾದನು. ತಾನು ಹಾರೈಸಿದಂತೆ ಆಗದಿದ್ದುದನ್ನು ಕಂಡು ದುಃಖಕ್ರಾಂತನಾಗಿ ನೊಂದು, ಹಾಸಿಗೆ ಹಿಡಿದನು. ಅವನು ಬಹು ದುಃಖಿತನಾಗಿ ಇನ್ನು ಸಾಯುವುದೇ ಲೇಸೆಂದೆಣಿಸಿ ಅಲ್ಲಿಯೇ ಬಹುದಿನದವರೆಗೆ ನಿಂತುಬಿಟ್ಟನು. ತನ್ನ ಸ್ನೇಹಿತರನ್ನು ಅಲ್ಲಿಗೆ ಕರೆಸಿಕೊಂಡನು. ಅವರಿಗೆ, "ನನ್ನ ಕಣ್ಣಿಗೆ ನಿದ್ರೆಯಿಲ್ಲ; ಚಿಂತೆಯಿಂದ ನನ್ನ ಅಂತರಂಗವು ಕುಂದಿಹೋಗಿದೆ. ನಾನು ನನ್ನ ಅಧಿಕಾರದಲ್ಲಿ ಮೆರೆಯುತ್ತಿದ್ದಾಗ ಜನೋಪಕಾರಿಯೂ ಪ್ರೀತಿಪಾತ್ರನೂ ಆಗಿದ್ದೆ; ಆದರೆ ಈಗ ಎಂತಹ ವಿಪತ್ತಿಗೆ ನಾನು ಗುರಿಯಾದೆ; ಎಂತಹ ಮಹಾ ಪ್ರವಾಹದಲ್ಲಿ ನಾನೀಗ ಸಿಕ್ಕಿಬಿದ್ದಿದ್ದೇನೆ! ಜೆರುಸಲೇಮಿನಲ್ಲಿ ನಾನು ನಡೆಸಿದ ಅತ್ಯಾಚಾರಗಳ ಸ್ಮರಣೆ ನನಗೀಗ ಬರುತ್ತಿದೆ. ಅಲ್ಲಿದ್ದ ಬೆಳ್ಳಿ ಬಂಗಾರದ ಪಾತ್ರೆಗಳನ್ನೆಲ್ಲ ನಾನು ಅಪಹರಿಸಿದೆ. ಕಾರಣವಿಲ್ಲದೆ ಜುದೇಯದ ನಿವಾಸಿಗಳನ್ನು ನಾಶಮಾಡುವುದಕ್ಕೆ ಜನರನ್ನು ಕಳುಹಿಸಿದೆ. ಈ ಕಾರಣದಿಂದಲೇ, ಈಗ ನನ್ನ ಮೇಲೆ ಈ ವಿಪತ್ತು ಬಂದಿದೆ. ಎಂದು ನನಗೀಗ ಗೊತ್ತಾಯಿತು ಅದುದರಿಂದಲೇ ನಾನೀಗ ಚಿಂತಾನುತಾಪದಿಂದ ಪರದೇಶದಲ್ಲಿ ಸಾಯುತ್ತಿದ್ದೇನೆ", ಎಂದು ಹೇಳಿದನು. 

ಕೀರ್ತನೆ: 9:1-3, 5, 16, 18 
ಶ್ಲೋಕ: ಪ್ರಭೂ, ನೀನಿತ್ತ ಮುಕ್ತಿಗಾಗಾ ಆನಂದಗೊಳ್ಳುವೆನು 

ಶುಭಸಂದೇಶ: ಲೂಕ 20:27-40 

ಸತ್ತಮೇಲೆ ಪುನರುತ್ಥಾನ ಇಲ್ಲ ಎಂದು ವಾದಿಸುತ್ತಿದ್ದ ಸದ್ದುಕಾಯರಲ್ಲಿ ಕೆಲವರು ಯೇಸುಸ್ವಾಮಿಯ ಬಳಿಗೆ ಬಂದು ಈ ಪ್ರಶ್ನೆಹಾಕಿದರು: "ಬೋಧಕರೇ, "ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ಹೆಂಡತಿಯನ್ನು ಅವನ ತಮ್ಮನು ಮದುವೆ ಮಾಡಿಕೊಂಡು ಅಣ್ಣನಿಗೆ ಸಂತಾನ ಪಡೆಯಬೇಕು," ಎಂದು ಮೋಶೆ ನಮಗಾಗಿ ಬರೆದಿಟ್ಟಿದ್ದಾನಲ್ಲವೆ? ಒಮ್ಮೆ ಏಳುಮಂದಿ ಅಣ್ಣತಮ್ಮಂದಿರಿದ್ದರು. ಅವರಲ್ಲಿ ಮೊದಲನೆಯವನಿಗೆ ಮದುವೆಯಾಯಿತು; ಆದರೆ ಅವನು ಮಕ್ಕಳಿಲ್ಲದೆ ಮೃತನಾದ. ಅವನ ಹೆಂಡತಿಯನ್ನು ಎರಡನೆಯವನು, ಅನಂತರ ಮೂರನೆಯವನು, ತದನಂತರ ಮಿಕ್ಕವರು, ಹೀಗೆ ಏಳು ಮಂದಿಯೂ ಒಬ್ಬರಾದ ಮೇಲೆ ಒಬ್ಬರು ಮದುವೆಯಾಗಿ ಸಂತಾನ ಇಲ್ಲದೆಯೇ ನಿಧನರಾದರು. ಕಟ್ಟಕಡೆಗೆ ಆ ಮಹಿಳೆಯೂ  ಮರಣ ಹೊಂದಿದಳು. ಹೀಗಿರುವಲ್ಲಿ ಪುನರುತ್ಥಾನದ  ದಿನ ಸತ್ತವರೆಲ್ಲರೂ ಜೀವದಿಂದ ಎದ್ದುಬರುವಾಗ, ಆಕೆ ಯಾರ ಪತ್ನಿಯಾಗುವಳು? ಏಳೂ ಮಂದಿ ಸಹೋದರರೂ ಆಕೆಯನ್ನು ವಿವಾಹ ಆಗಿದ್ದಾರಲ್ಲವೆ?" ಎಂದರು. ಅದಕ್ಕೆ ಯೇಸು, " ಈ ಲೋಕದ ಜೀವನದಲ್ಲಿ ಜನರು ಮದುವೆ ಮಾಡಿಕೊಳ್ಳುತ್ತಾರೆ, ಮದುವೆ ಮಾಡಿಕೊಡುತ್ತಾರೆ. ಅದರೆ ಸತ್ತವರು ಪುನರುತ್ಥಾನ ಹೊಂದಿ ಮರುಲೋಕ ಜೀವನಕ್ಕೆ ಯೋಗ್ಯರಾದಾಗ ಮದುವೆ ಮಾಡಿಕೊಳ್ಳುವುದೂ ಇಲ್ಲ, ಮದುವೆ ಮಾಡಿಕೊಡುವುದೂ ಇಲ್ಲ. ಅವರು ಅಲ್ಲಿ ದೇವದೂತರಿಗೆ ಸಮಾನರಾಗಿರುವರು; ಅವರು ಎಂದಿಗೂ ಸಾಯುವಂತಿಲ್ಲ; ಪುನರುತ್ಥಾನದ  ಫಲವಾಗಿರುವ ಅವರು ದೇವರ ಮಕ್ಕಳಾಗಿರುವರು. ಸತ್ತವರು ಪುನರುತ್ಥಾನ ಹೊಂದುವುದನ್ನು ಮೋಶೆಯ ಗ್ರಂಥದಲ್ಲಿ, ಅಂದರೆ "ಉರಿಯುವ ಪೊದೆ"ಯ ಪ್ರಸ್ತಾಪವಿರುವ ಭಾಗದಲ್ಲಿ ಸ್ವಷ್ಟಪಡಿಸಲಾಗಿದೆ. ಅಲ್ಲಿ ಸರ್ವೇಶ್ವರನನ್ನು, "ಅಬ್ರಹಾಮನ ದೇವರು, ಇಸಾಕನ ದೇವರು, ಯಕೋಬನ ದೇವರು ಆಗಿದ್ದಾರೆ" ಎಂದು ಹೇಳಲಾಗಿದೆ. ಹೀಗಿರುವಲ್ಲಿ ದೇವರು ಜೀವಂತರ ದೇವರೇ ಹೊರತು ಮೃತರ ದೇವರಲ್ಲ; ಅವರ ದೃಷ್ಟಿಯಲ್ಲಿ ಸರ್ವರೂ ಜೀವಂತರು," ಎಂದರು. ಇದನ್ನು ಕೇಳಿದ ಕೆಲವು ಧರ್ಮಶಾಸ್ತ್ರಿಗಳು, "ಬೋಧಕರೇ, ಚೆನ್ನಾಗಿ ಹೇಳಿದಿರಿ," ಎಂದರು. ಮುಂದೆ ಯಾವ ಪ್ರಶ್ನೆ ಕೇಳುವುದಕ್ಕೂ ಅವರಾರು ಧೈರ್ಯಗೊಳ್ಳಲಿಲ್ಲ.

23.11.23

ಮೊದಲನೇ ವಾಚನ: 1 ಮಕ್ಕಬಿಯರು 2:15-29 

ಧರ್ಮ ವಿರೋಧ ಕಾರ್ಯಗಳಲ್ಲಿ ತೊಡಗಿದ್ದ ಅರಸನ ಅಧಿಕಾರಿಗಳು ಯಜ್ಞ ಅರ್ಪಿಸುವುದಕ್ಕಾಗಿ ಮೋದೀನ್ ಊರಿಗೆ ಬಂದರು. ಅನೇಕ ಜನ ಇಸ್ರಯೇಲರು ಅದೇ ಎಡೆಗೆ ಬಂದರು.  ಮತ್ತಾತಿಯನು ಅವನ ಮಕ್ಕಳೂ ಅಲ್ಲಿಗೆ ಬಂದರು. ಅರಸನ ಅಧಿಕಾರಿಗಳು ಮತ್ತಾತಿಯನನ್ನು ಉದ್ದೇಶಿಸಿ, "ನೀನು ಈ ಊರಿಗೆ ಮುಖ್ಯಸ್ಥ, ಸನ್ಮಾನಿತ ಹಾಗು ಹಿರಿಯವನು. ನಿನ್ನ ಮಕ್ಕಳ ಹಾಗೂ ಬಂಧು ಬಳಗದವರ ಬೆಂಬಲ ನಿನಗಿದೆ. ಆದುದರಿಂದ ನೀನೇ ಮುಂದಾಳಾಗಿ ನಿಂತು, ಎಲ್ಲ ಜನಾಂಗದವರು ಜುದೇಯದ ನಿವಾಸಿಗಳು ಹಾಗು ಜೆರುಸಲೇಮಿನಲ್ಲಿ ಉಳಿದಿರುವವರು ಮಾಡಿದಂತೆ, ಅರಸನ ಅಪ್ಪಣೆಯ ಮೇರೆಗೆ ನಡೆದುಕೊ; ಆಗ ನೀನು ನಿನ್ನ ಮನೆಯವರೂ ಅರಸನ ಮಿತ್ರರೆಂದು ಪರಿಗಣಿತರಾಗುವಿರಿ; ನಿನಗೂ ನಿನ್ನ ಮಕ್ಕಳಿಗೂ ಬೆಳ್ಳಿ , ಬಂಗಾರ ಮತ್ತಿತರ ಸಂಭಾವನೆಗಳನ್ನು  ಗೌರವಾರ್ಥವಾಗಿ ಕೊಡಲಾಗುವುದು," ಎಂದು ಹೇಳಿದರು. ಆಗ ಮತ್ತಾತಿಯನು ಉದ್ವೇಗದಿಂದ, "ಅರಸನ ಸಾಮ್ರಾಜ್ಯದಲ್ಲಿರುವ ಎಲ್ಲ ಜನಾಂಗಗಳು ಬೇಕಾದರೆ ಆತನ ಮಾತನ್ನು ಕೇಳಲಿ; ಪ್ರತಿಯೊಬ್ಬನು ತನ್ನ ಪೂರ್ವಜರ ಪೂಜಾಕ್ರಮಗಳನ್ನು ತೊರೆದು, ಅರಸನ ಆಜ್ಞೆಯ ಮೇರೆಗೆ ಬೇಕಾದರೆ ನಡೆಯಲಿ; ಆದರೆ ನಾನು, ನನ್ನ ಮಕ್ಕಳು, ನನ್ನ ಬಂಧುಬಳಗದವರು ನಮ್ಮ ಪಿತ್ರುಗಳ ಒಡಂಬಡಿಕೆಯ ಪ್ರಕಾರವೇ ನಡೆಯುತ್ತೇವೆ. ಧರ್ಮಶಾಸ್ತ್ರದ ನಿಬಂಧನೆಗಳನ್ನು ನಾವು ಉಲ್ಲಂಘಿಸಲಾರೆವು. ಇಲ್ಲ, ಎಂದಿಗೂ ಇಲ್ಲ; ಅರಸನ ಮಾತನ್ನು ಕೇಳಿ, ನಾವು ನಮ್ಮ ಆರಾಧನಾ ವಿಧಿಗಳನ್ನು ಬಿಟ್ಟು ಎಡಕ್ಕಾಗಲಿ, ಬಲಕ್ಕಾಗಲಿ ಹೋಗುವುದಿಲ್ಲ," ಎಂದು ಗಟ್ಟಿಯಾಗಿ ಹೇಳಿದನು. ಅವನು ಈ ಮಾತುಗಳನ್ನಾಡಿ ಮುಗಿಸುವಷ್ಟರಲ್ಲಿ ಒಬ್ಬ ಯೆಹೂದ್ಯನು, ಮೋದೀನದ ಒಂದು ಜಗಲಿಯ ಮೇಲೆ ಅರಸನ ಅಪ್ಪಣೆಯ ಮೇರೆಗೆ ಏರ್ಪಡಿಸಲಾಗಿದ್ದ ಯಜ್ಞವನ್ನು ಅರ್ಪಿಸಲು ಅಲ್ಲಿಗೆ ಬಂದು ಎಲ್ಲರ ಮುಂದೆ ನಿಂತನು. ಮತ್ತಾತಿಯನು ಅದನ್ನು ನೋಡಿ ಆವೇಶಪೂರಿತನಾದನು; ಅವನ ಮೈ ನಡುಗಿತು. ನ್ಯಾಯ ಪ್ರಮಾಣಕ್ಕನುಸಾರ ತನ್ನ ಕೋಪವನ್ನು ತೋರಿಸಲು ಓಡಿಹೋಗಿ, ಅದೇ ಜಗಲಿಯ ಮೇಲೆ ಆ ವ್ಯಕ್ತಿಯನ್ನು ಕಡಿದುಹಾಕಿದನು. ಅಂಥ ಯಜ್ಞವನ್ನು ಅರ್ಪಿಸಲು ಜನರನ್ನು ಒತ್ತಾಯಪಡಿಸಿದ್ದ ಅಧಿಕಾರಿಯನ್ನು ಕೂಡ ಕೊಂದು ಹಾಕಿದನು; ಆ ಜಗಲಿಯನ್ನೂ ಕೆಡವಿ ಹಾಕಿದನು. ಸಾಲು ಎಂಬುವನ ಮಗ ಜಿಮ್ರಿ ಎಂಬುವನಿಗೆ ಫಫೀನೆಹಾಸನು ಮಾಡಿದಂತೆಯೇ ಇವನೂ ಧರ್ಮಶಾಸ್ತ್ರದ ಬಗ್ಗೆ ಅಭಿಮಾನವುಳ್ಳವನಾಗಿದ್ದನು. ತರುವಾಯ ಮತ್ತಾತಿಯನು ಊರಲ್ಲೆಲ್ಲಾ ಘಂಟಾಘೋಷವಾಗಿ, "ಧರ್ಮಶಾಸ್ತ್ರದ ಬಗ್ಗೆ ಅಭಿಮಾನವುಳ್ಳವನು, ಒಡಂಬಡಿಕೆಯನ್ನು ಕಾಪಾಡಿಕೊಳ್ಳಲು ಆಶಿಸುವವನು, ನನ್ನ ಹಿಂದೆ ಬರಲಿ," ಎಂದು ಕರೆಕೊಟ್ಟನು. ಆನಂತರ ಅವನೂ ಅವನ ಮಕ್ಕಳೂ ಊರಲ್ಲಿ ತಮಗಿದ್ದುದನ್ನೆಲ್ಲ ಅಲ್ಲೇ ಬಿಟ್ಟು ಗುಡ್ಡಗಳಿಗೆ ಓಡಿಹೋದರು. ಇವರಂತೆಯೇ ನ್ಯಾಯನೀತಿಯನ್ನು ಅರಸುತ್ತಿದ್ದ ಅನೇಕರು ಕಾಡುಸೇರಿ ಅಲ್ಲೇ ಬೀಡುಮಾಡಿದರು. 

ಕೀರ್ತನೆ: 50:1-2, 5-6, 14-15 
ಶ್ಲೋಕ: ಸನ್ಮಾರ್ಗ ಹಿಡಿವವನಿಗೆ ತೋರುವೆ ಪರಮ ಜೀವೋದ್ಧಾರವನು 

ಶುಭಸಂದೇಶ: ಲೂಕ 19:41-44 


ಯೇಸುಸ್ವಾಮಿ ಜೆರುಸಲೇಮ್ ಪಟ್ಟಣಕ್ಕೆ ಇನ್ನೂ ಹತ್ತಿರವಾಗಿ ಬಂದು ಅದನ್ನು ನೋಡಿ, "ಇಂದಾದರೂ ನೀನು ಶಾಂತಿಮಾರ್ಗವನ್ನು ಅರಿತುಕೊಂಡಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು. ಆದರೆ ಅದು ಈಗ ನಿನ್ನ ಕಣ್ಣಿಗೆ ಮರೆಯಾಗಿದೆ. ಕಾಲವು ಬರುವುದು. ಆಗ ಶತ್ರುಗಳು ನಿನ್ನ ಸುತ್ತಲೂ ಆಳ್ವೇಲಿಯೆಬ್ಬಿಸಿ, ಮುತ್ತಿಗೆ ಹಾಕಿ, ಎಲ್ಲೆಡೆಯೂ ನುಗ್ಗಿ, ನಿನ್ನನ್ನೂ ನಿನ್ನೊಳಗಿನ ಜನರನ್ನೂ ಧ್ವಂಸ ಮಾಡುವರು;, ನಿನ್ನಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲದಂತೆ ಮಾಡುವರು. ಏಕೆಂದರೆ, ದೇವರು ನಿನ್ನನ್ನು ಅರಸಿ ಬಂದ ಕಾಲವನ್ನು ನೀನು ಅರಿತುಕೊಳ್ಳದೆ ಹೋದೆ," ಎಂದು ಅದರ ಸಲುವಾಗಿ ಕಣ್ಣೀರಿಟ್ಟರು.

22.11.23 - "ಉಳ್ಳ ಪ್ರತಿಯೊಬ್ಬನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ; ಇಲ್ಲದವನಿಂದ ಇರುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ, ಇದು ನಿಶ್ಚಯ,"

ಮೊದಲನೇ ವಾಚನ: 2 ಮಕ್ಕಬಿಯರು 7:1, 20-31

ಆ ಕಾಲದಲ್ಲಿ ಏಳು ಮಂದಿ ಸಹೋದರರನ್ನು ಅವರ ತಾಯಿಯೊಂದಿಗೆ, ಅರಸನ ಅಪ್ಪಣೆಯ ಮೇರೆಗೆ ದಸ್ತಗಿರಿ ಮಾಡಲಾಯಿತು. ನಿಷೇಧಿಸಲಾಗಿದ್ದ ಹಂದಿಯ  ಮಾಂಸವನ್ನು ತಿನ್ನಬೇಕೆಂದು ಅವರನ್ನು ಬಲವಂತ ಪಡಿಸಲಾಗಿತ್ತು. ಚಾಟಿಯಿಂದಲೂ ಬಾರುಗಳಿಂದಲೂ ಹೊಡೆದು ಅವರನ್ನು ಬಾಧಿಸಿದರು. ಎಲ್ಲಕ್ಕಿಂತಲೂ ಮಿಗಿಲಾಗಿ ಅವರ ತಾಯಿಯ ವರ್ತನೆ ಅತೀ ಆಶ್ಚರ್ಯಕರವಾಗಿತ್ತು! ಆಕೆ ಚಿರಸ್ಮರಣೆಗೆ ಪಾತ್ರಳಾದವಳು. ಒಂದೇ ದಿನದಲ್ಲಿ ತನ್ನ ಏಳು ಮಕ್ಕಳು ಕಣ್ಮುಂದೆ ಸತ್ತಿದ್ದರೂ ದೇವರಲ್ಲಿ ಅವಳಿಗಿದ್ದ ನಂಬಿಕೆಯ ನಿಮಿತ್ತ ಎಲ್ಲವನ್ನೂ ಧೈರ್ಯದಿಂದ ಸಹಿಸಿಕೊಂಡಳು. ಉದಾತ್ತ ಮನೋಭಾವದಿಂದ ತುಂಬಿದವಳಾಗಿ, ತನ್ನ ಸ್ತ್ರೀಸಹಜವಾದ ಆವೇಶದೊಂದಿಗೆ  ಪೌರುಷತ್ವವನ್ನೂ ಕೂಡಿಸಿ, ಒಬ್ಬೊಬ್ಬನಿಗೂ ಮಾತೃಭಾಷೆಯಲ್ಲಿ: "ನೀವು ಹೇಗೆ ನನ ಉದರದಲ್ಲಿ ಉದ್ಭವಿಸಿದಿರಿ ಎಂಬುದನ್ನು ನಾನು ಅರಿಯೆ. ನಿಮಗೆ ಜೀವವನ್ನೂ ಉಸಿರನ್ನೂ ಕೊಟ್ಟದ್ದು ನಾನಲ್ಲ. ನಿಮ್ಮ ದೇಹದ ಅಂಗಾಂಗಗಳನ್ನು ಜೋಡಿಸಿದ್ದೂ ನಾನಲ್ಲ. ಲೋಕವನ್ನು ಸೃಷ್ಟಿಸಿದವರೇ ಅದನ್ನೆಲ್ಲ ಮಾಡಿದ್ದು. ಅವರೇ ಮಾನವ ಕೋಟೆಯನ್ನು ಉಂಟುಮಾಡಿದವರು. ಸಕಲಕ್ಕೂ ಆದಿಕಾರಣರು ಅವರೇ ಅವರ ಆಜ್ಞೆಗಳನ್ನು ಪಾಲಿಸುವುದಕ್ಕಾಗಿ ನೀವು ಹಿಂಸೆಗೊಳಗಾಗುವುದರಿಂದ, ಅವರು ಕರುಣೆಯಿಂದ ನಿಮಗೆ ಜೀವವನ್ನೂ ಉಸಿರನ್ನೂ ಹಿಂದಕ್ಕೆ ಕೊಡುವರು." ಎಂದು ಹುರಿದುಂಬಿಸಿದಳು. ಇದರಿಂದ ಅಂತಿಯೋಕನಿಗೆ ಅವಮಾನವಾದಂತೆ ತೋರಿತು.  ತನ್ನನ್ನೇ ಅವಳು ಹೀನೈಸುತ್ತಿದ್ದಾಳೆಂಬುದರ ಬಗ್ಗೆ ಸಂಶಯ ಮೂಡಿತು. ಅವಳ ಕೊನೆಯ ಮಗ ಇನ್ನೂ ಉಳಿದಿದ್ದ. ಅಂತಿಯೋಕನು ಅವನನ್ನು ಮಾತುಗಳಿಂದ ಪುಸಲಾಯಿಸಿದನು; ಅವನು ತನ್ನ ಪೂರ್ವಜರ ಆಚಾರಗಳನ್ನು ತೊರೆದು ಬಿಡುವುದಾದರೆ ಅವನನ್ನು ಐಶ್ವರ್ಯವಂತನನ್ನಾಗಿ, ಉನ್ನತ ಪದವಿಯುಳ್ಳವನಾಗಿ ಮಾಡುವುದಾಗಿಯೂ ಅವನನ್ನು ತನ್ನ ಸ್ನೇಹಿತನೆಂದೆಣಿಸಿ ರಾಜ್ಯದ ವ್ಯವಹಾರಗಳ ಮೇಲ್ವಿಚಾರಕನಾಗಿ ನೇಮಿಸುವುದಾಗಿಯೂ ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದನು. ಆದರೆ ಆ ಯುವಕನು ಅವನಿಗೆ ಯಾವ ವಿಧದಲ್ಲೂ ಕಿವಿಗೊಡಲಿಲ್ಲ. ಆಗ ಅರಸನು ಆ ತಾಯಿಯನ್ನು ಬಳಿಗೆ ಕರೆಸಿ, ತನ್ನ ಪ್ರಾಣವನ್ನು ಉಳಿಸಿಕೊಳ್ಳುವಂತೆ ಆ ಹುಡುಗನಿಗೆ ಬುದ್ಧಿ ಹೇಳಬೇಕೆಂದು ಒತ್ತಾಯಿಸಿದನು. ಅರಸನು ಬಹಳವಾಗಿ ಒತ್ತಾಯಿಸಿದ ಮೇಲೆ, ತಾಯಿ ಮಗನಿಗೆ ಬುದ್ಧಿ ಹೇಳಿದಳು. ಮಗನ ಮೇಲೆ ಒರಗಿಕೊಂಡು, ಕ್ರೂರಿಯಾದ ಅರಸನನ್ನು ಪರಿಹಾಸ್ಯ ಮಾಡುತ್ತಾ, ಮಾತೃಭಾಷೆಯಲ್ಲೇ ಹೀಗೆಂದಳು: "ಮಗನೇ, ನನ್ನ ಮೇಲೆ ಮರುಕವಾಗಿರು. ಒಂಬತ್ತು ತಿಂಗಳು ನಿನ್ನನ್ನು ನನ್ನ ಉದರದಲ್ಲಿ ಹೊತ್ತೆ. ಮೂರು ವರ್ಷ ಮೊಲೆಯೂಡಿಸಿ ನಿನ್ನನ್ನು ಸಾಕಿಸಲಹಿದೆ. ನಿನ್ನ ಜೀವನದ ಈ ಗಳಿಗೆಯವರೆಗೂ ನಿನ್ನನ್ನು ಪೋಷಿಸಿ ಸಾಕಿದೆ. ನಿನ್ನ ಆರೈಕೆ ಮಾಡಿದೆ. ಮಗನೇ, ಸ್ವರ್ಗವನ್ನೂ ಭೂಮಿಯನ್ನೂ ಅದರಲ್ಲಿರುವುದೆಲ್ಲವನ್ನೂ ನೋಡು, ಏನೂ ಇಲ್ಲದೆ ದೇವರು ಅದೆಲ್ಲವನ್ನೂ ಉಂಟುಮಾಡಿದರು. ಮಾನವ ಕೋಟಿಯು ಸಹ ಆದೇ ರೀತಿ ಉಂಟಾಯಿತು; ಇದನ್ನು ಒಪ್ಪಿಕೋ. ಈ ಕಟುಕನಿಗೆ ನೀನು ಹೆದರಬೇಡ. ನೀನು ನಿನ್ನ ಸಹೋದರರಿಗೆ ಯೋಗ್ಯ ತಮ್ಮನೆಂದು ಸಾಬೀತುಪಡಿಸು. ಸಾವನ್ನು ಅಪ್ಪು. ಹೀಗೆ ದೇವರ ಕರುಣೆಯಿಂದ, ನಿನ್ನ ಸಹೋದರರೊಂದಿಗೆ ನಿನ್ನನ್ನು ನಾನು ಪುನಃ ಪಡೆಯುವಂತಾಗಲಿ!" ಆಕೆ ಇನ್ನೂ ಮಾತಾಡುತ್ತಿರುವಾಗಲೇ, ಆ ಯುವಕನು, "ಏತಕ್ಕಾಗಿ ಇನ್ನೂ ಕಾದಿದ್ದೀರಿ? ನಾನು ಅರಸನ ಆಜ್ಞೆಯನ್ನು ಪಾಲಿಸುವುದಿಲ್ಲ. ಬದಲಿಗೆ ಮೋಶೆಯ ಮುಖಾಂತರ ನಮ್ಮ ಪೂರ್ವಜರಿಗೆ ಕೊಟ್ಟ ನಿಯಮವನ್ನು ಅನುಸರಿಸುತ್ತೇವೆ. ಹಿಬ್ರಿಯರಾದ ನಮ್ಮ ಜನರಿಗೆ ಇಂಥ ದುಷ್ಕೃತ್ಯಗಳನ್ನು ಎಸಗಿರುವ ನೀನು ಖಂಡಿತವಾಗಿಯೂ ದೇವರ ಕೈಯಿಂದ ತಪ್ಪಿಸಿಕೊಳ್ಳುವಂತಿಲ್ಲ," ಎಂದನು.

ಕೀರ್ತನೆ: 17:1, 5-6, 8, 15
ಶ್ಲೋಕ: ಪ್ರಭೂ, ಎಚ್ಚೆತ್ತು ನಿನ್ನ ಮುಖದರ್ಶನದಿಂದ ತೃಪ್ತನಾಗುವೆನು

ಲಕ್ಷ್ಯವಿಡು, ಓ ಪ್ರಭೂ, ಎನ್ನ ನ್ಯಾಯವಾದ ಮೊರೆಗೆ|
ಕಿವಿಗೊಡು, ನಿಷ್ಕಪಟ ಬಾಯಿಂದ ಬಂದ ಪ್ರಾರ್ಥನೆಗೆ||

ನಿನ್ನ ಮಾರ್ಗದಿಂದ ಕಾಲು ಜಾರಲು ಬಿಡದೆ|
ನಿನ್ನ ಪಥದಲಿ ದಿಟ್ಟ ಹೆಜ್ಜೆಯಿಟ್ಟು ನಡೆದೆ||
ಸದುತ್ತರ ಪಾಲಿಪೆಯೆಂದು ನಂಬಿ ಬೇಡುವೆನಯ್ಯಾ|
ಮೊರೆಯಿಡುವೆ ದೇವಾ, ಕಿವಿಗೊಟ್ಟು ಆಲಿಸಯ್ಯಾ||

ನಿನ್ನ ರೆಕ್ಕೆಗಳ ನೆರಳಲಿ ಎನ್ನ ಮರೆಸಿಡು|
ಸತ್ಯಸಂಧನಾದ ನಾನೋ ಸೇರುವೆ ನಿನ್ನ ಸಾನಿಧ್ಯವನು|
ಎಚ್ಚೆತ್ತು ನಿನ್ನ ಮುಖದರ್ಶನದಿಂದ ತೃಪ್ತನಾಗುವೆನು||


ಶುಭಸಂದೇಶ: ಲೂಕ 19:11-28


ಯೇಸುಸ್ವಾಮಿ ಈಗ ಜೆರುಸಲೇಮಿಗೆ ಸಮೀಪದಲ್ಲೇ ಇದ್ದರು. ಅವರ ಮಾತುಗಳನ್ನು ಕೇಳುತ್ತಿದ್ದ ಜನರು ದೇವರ ಸಾಮ್ರಾಜ್ಯ ಇದೀಗಲೇ ಪ್ರತ್ಯಕ್ಷವಾಗುವುದೆಂದು ಭಾವಿಸಿದ್ದರು. ಈ ಕಾರಣ ಯೇಸು ಅವರಿಗೆ ಒಂದು ಸಾಮತಿಯನ್ನು ಹೇಳಿದರು: "ಕುಲೀನನೊಬ್ಬ ರಾಜಪದವಿಯನ್ನು ಗಳಿಸಿಬರಲು ದೂರದ ರಾಜಧಾನಿಗೆ ಹೊರಟ. ಹೊರಡುವಾಗ ತನ್ನ ಹತ್ತು ಮಂದಿ ಸೇವಕರನ್ನು ಕರೆದು, ಒಬ್ಬೊಬ್ಬನಿಗೂ ಒಂದರಂತೆ ಹತ್ತು ಚಿನ್ನದ ನಾಣ್ಯಗಳನ್ನು ಕೊಟ್ಟು, "ನಾನು ಬರುವತನಕ ವ್ಯಪಾರ ಮಾಡಿಕೊಂಡಿರಿ," ಎಂದು ಹೇಳಿ ಹೋದ. ಅವನ ನಾಡಿಗರಾದರೋ ಅವನನ್ನು ದ್ವೇಷಿಸುತ್ತಿದ್ದರು. "ಇವನು ನಮಗೆ ರಾಜನಾಗುವುದು ಬೇಡ," ಎಂದು ತಿಳಿಸಲು ಅವನ ಹಿಂದೆಯೇ  ತಮ್ಮ ಪ್ರತಿನಿಧಿಗಳನ್ನು ಕಳುಹಿಸಿದರು. ಆದರೂ ಅವನು ರಾಜಪದವಿಯನ್ನು ಪಡೆದು ಹಿಂದಿರುಗಿ ಬಂದ. ತನ್ನಿಂದ ಹಣಪಡೆದ ಸೇವಕರು ವ್ಯಾಪಾರಮಾಡಿ ಎಷ್ಟೆಷ್ಟು ಲಾಭಗಳಿಸಿದ್ದಾರೆಂದು ತಿಳಿದುಕೊಳ್ಳುವುದಕ್ಕಾಗಿ ಅವರನ್ನು ಕೂಡಲೇ ತನ್ನ ಬಳಿಗೆ ಕರೆತರಲು ಆಜ್ಞಾಪಿಸಿದ. ಮೊದಲನೆಯವನು ಮುಂದೆ ಬಂದು, "ಪ್ರಭುವೇ, ನಿಮ್ಮ ಒಂದು ನಾಣ್ಯದಿಂದ ನಾನು ಹತ್ತು ನಾಣ್ಯಗಳನ್ನು ಸಂಪಾದಿಸಿದ್ದೇನೆ," ಎಂದ. ಅದಕ್ಕೆ ಅವನು, "ಭಲಾ, ನೀನು ಒಳ್ಳೆಯ ಸೇವಕ, ಸ್ವಲ್ಪದರಲ್ಲಿ ನೀನು ಪ್ರಮಾಣಿಕನಾಗಿದ್ದೆ. ಆದ್ದರಿಂದ ಹತ್ತು ಪಟ್ಟಣಗಳಿಗೆ ಅಧಿಪತಿಯಾಗಿರು" ಎಂದ. ಎರಡನೆಯ ಸೇವಕನು ಬಂದು, "ಪ್ರಭುವೇ, ನೀವು ಕೊಟ್ಟ ಒಂದು ನಾಣ್ಯದಿಂದ ಐದು ನಾಣ್ಯಗಳನ್ನು ಸಂಪಾದಿಸಿದ್ದೇನೆ," ಎಂದ. ಅದಕ್ಕೆ ರಾಜ, "ನೀನು ಐದು ಪಟ್ಟಣಗಳಿಗೆ ಅಧಿಪತಿಯಾಗಿರು," ಎಂದ. ಬಳಿಕ ಮತೊಬ್ಬ ಸೇವಕನು ಬಂದು, "ಇಗೋ, ಪ್ರಭುವೇ, ನಿಮ್ಮ ಚಿನ್ನದ ನಾಣ್ಯ; ನಿಮಗೆ ಭಯಪಟ್ಟು ಇದನ್ನು ಬಟ್ಟೆಯಲ್ಲಿ ಭದ್ರವಾಗಿ ಕಟ್ಟಿ ಇಟ್ಟಿದ್ದೆ. ಏಕೆಂದರೆ, ನೀವು ಕಠಿಣ ಮನುಷ್ಯರು; ನೀವು ಕೂಡಿಡದ್ದನ್ನು ಕೊಂಡು ಹೋಗುತ್ತೀರಿ, ಬಿತ್ತದಿದ್ದನ್ನು ಕೊಯಿಲು ಮಾಡುತ್ತೀರಿ," ಎಂದ. ರಾಜ ಅವನನ್ನು ನೋಡಿ, "ಎಲಾ ದುಷ್ಟ  ಸೇವಕನೇ, ನೀನು ಆಡಿದ ಮಾತಿನಿಂದಲೇ ನಿನಗೆ ತೀರ್ಪುಕೊಡುತ್ತೇನೆ. ನಾನು ಕೂಡಿಡದ್ದನ್ನು ಕೊಂಡುಹೋಗುವ, ಬಿತ್ತದ್ದನ್ನು ಕೊಯಿಲುಮಾಡುವ ಕಠಿಣ ಮನುಷ್ಯನೆಂದು ನಿನಗೆ ತಿಳಿದಿತ್ತು ಅಲ್ಲವೆ? ಹಾಗಾದರೆ ನನ್ನ ಹಣವನ್ನೇಕೆ ಬಡ್ಡಿ ಅಂಗಡಿಯಲ್ಲಿ ಹಾಕಿಡಲಿಲ್ಲ? ನಾನು ಬಂದು ಬಡ್ಡಿಸಮೇತ ನನ್ನ ಅಸಲನ್ನು ತೆಗೆದುಕೊಳ್ಳುತ್ತಿದ್ದೆನಲ್ಲಾ," ಎಂದು ಹೇಳಿ ಪರಿಚಾರಕರಿಗೆ, "ಇವನಿಂದ ಆ ಚಿನ್ನದ ನಾಣ್ಯವನ್ನು ಕಿತ್ತು  ಹತ್ತು ನಾಣ್ಯಗಳುಳ್ಳವನಿಗೆ ಕೊಡಿ," ಎಂದ. ಅದಕ್ಕವರು, "ಪ್ರಭುವೇ, ಅವನಲ್ಲಿ ಈಗಾಗಲೇ ಹತ್ತು ನಾಣ್ಯಗಳಿವೆಯಲ್ಲಾ?" ಎಂದರು. ಆಗ ರಾಜ, "ಉಳ್ಳ ಪ್ರತಿಯೊಬ್ಬನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ; ಇಲ್ಲದವನಿಂದ ಇರುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ, ಇದು ನಿಶ್ಚಯ," ಎಂದ. ಅಲ್ಲದೆ, "ನಾನು ತಮಗೆ ರಾಜನಾಗುವುದು ಬೇಡವೆಂದ ನನ್ನ ಶತ್ರುಗಳನ್ನು ಇಲ್ಲಿಗೆ ಎಳೆದು ತಂದು ನನ್ನ ಮುಂದೆಯೇ ಸಂಹರಿಸಿರಿ," ಎಂದ." ಇದನ್ನೆಲ್ಲಾ ಹೇಳಿ ಆದ ಮೇಲೆ ಯೇಸುಸ್ವಾಮಿ ಅವರೆಲ್ಲರಿಗಂತ ಮುಂದಾಗಿ ನಡೆದು ಜೆರುಸಲೇಮಿನತ್ತ ತೆರಳಿದರು.

21.11.23

ಮೊದಲನೆಯ ವಾಚನ: ಮಕ್ಕಬಿ 6:18-31

ಧರ್ಮಶಾಸ್ತ್ರ ಪಂಡಿತರಲ್ಲಿ ಅತೀ ನಿಪುಣನಾದ ಎಲ್ಲಾಜಾರನು ವಯೋವೃದ್ದನು, ಉಜ್ಜಲರೂಪ ಉಳ್ಳವನು. ಅವನು ಹಂದಿಮಾಂಸವನ್ನು ತಿನ್ನಲು ಬಲತ್ಕಾರದಿಂದ ಬಾಯ್ದೆರೆಯ ಮಾಡಿದರು. ಅವನಾದರೋ, ಹೊಲಸಾದ ಜೀವನ ನಡೆಸುವುದಕ್ಕಿಂತ ಮರ್ಯಾದೆಯಿಂದ ಸಾಯುವುದು ಲೇಸೆಂದು ಎಣಿಸಿದನು. ಬಾಯೊಳಗಿಂದ ಆ ಮಾಂಸವನ್ನು ಉಗಿದುಬಿಟ್ಟನು. ಬದುಕುವುದಕ್ಕಿಂತ ಹೆಚ್ಚಾಗಿ ನಿಷೇಧಿಸಲಾದ ಆಹಾರವನ್ನು ರುಚಿಸಲು ಧೈರ್ಯದಿಂದ ನಿರಾಕರಿಸಿದನು. ಹೀಗೆ ತಾನೇ ಯಾತನೆಯ ಸ್ಥಳಕ್ಕೆ ಮುನ್ನಡೆದು ಬಂದನು. ನಿಷಿದ್ಧ ಬಲಿಭೋಜನದ ಉಸ್ತುವಾರಿ ನೋಡುವಂಥವರು, ಎಲ್ಲಾಜಾರನನ್ನು ಬಹುಕಾಲ ಅರಿತವರಾದ್ದರಿಂದ, ಅವನನ್ನು ರಹಸ್ಯವಾಗಿ ಕೊಂಡೊಯ್ದು ಬೇರೆ ಯಾವುದಾದರೂ ತಿನ್ನಬಹುದಾದ ಮಾಂಸವನ್ನು ಸ್ವಿಕರಿಸಿ, ಅರಸನ ಆಜ್ಞೆಗನುಣವಾಗಿ ಬಲಿಭೋಜನ ಆಹಾರವನ್ನು ತಿನ್ನುವಂತೆ ನಟಿಸಬೇಕೆಂದು ಗುಟ್ಟಾಗಿ ಸಲಹೆಕೊಟ್ಟರು. ಹೀಗೆ ಅವರೊಂದಿಗಿದ್ದ ಸ್ನೇಹದ ನಿಮಿತ್ತ, ಅವನನ್ನು ಮರಣಶಿಕ್ಷೆಯಿಂದ ತಪ್ಪಿಸಲು ಕರುಣೆಯ ಒಂದು ದಾರಿಯನ್ನು ತೋರಿಸಿದರು. ಆದರೆ ಅವನು ತನ್ನ ವಯಸ್ಸಿನ ಯೋಗ್ಯತೆಗೆ, ಮುಪ್ಪಿನ ಘನತೆಗೆ, ನೆರೆಕೂದಲಿಗೆ ಸಲ್ಲತಕ್ಕ ಗೌರವಕ್ಕೆ, ಬಾಲ್ಯದಿಂದಲೂ ಕಾಪಾಡಿಕೊಂಡು ಬಂದ ಸನ್ನಡತೆಗೆ ತಕ್ಕಂತೆ, ಎಲ್ಲಕ್ಕಿಂತಲೂ ಹೆಚ್ಚಾಗಿ ದೇವರು ತಾವೇ ನೀಡಿದ ಪವಿತ್ರ ನಿಯಮಕ್ಕೆ ಅನುಗುಣವಾಗಿ, ಉದಾತ್ತ ನಿರ್ಧಾರವನ್ನು ಕೈಗೊಂಡು, ಕೂಡಲೇ ಮೃತ್ಯುಲೋಕಕ್ಕೆ ತನ್ನನ್ನು ಕಳುಹಿಸಿಬಿಡಬೇಕೆಂದು ಕೇಳಿಕೊಂಡನು. " ಇಂಥಾ ನಟನೆ ವಯೋವೃದ್ದನಾದ ನನಗೆ ತಕ್ಕುದಲ್ಲ. ತೊಂಬತ್ತು ವರ್ಷದ ವ್ಯಕ್ತಿಯಾದ ಎಲ್ಲಾಜಾರನೇ ತನ್ನ ಧರ್ಮವನ್ನು ಉಲ್ಲಘಿಸಿ, ಪರಕೀಯರ ಪದ್ಧತಿಯನ್ನು ಅನುಸರಿಸಿದ್ದಾನೆಂದು ಹೇಳುತ್ತಾರೆ. ಬದುಕಲು ಸ್ವಲ್ಪಕಾಲಕ್ಕೆ ಈ ರೀತಿ ವರ್ತಿಸುವುದರಿಂದ ಯುವಕರನ್ನು ತಪ್ಪುದಾರಿಗೆ ಎಳೆದಂತಾಗುತ್ತದೆ. ನನ್ನ ಮುಪ್ಪಿನ ಕಳಂಕವನ್ನೂ ನಿಂದೆಯನ್ನೂ ತಂದುಕೊಂಡಂತಾಗುತ್ತದೆ. ತಾತ್ಕಾಲಿಕವಾಗಿ ನಾನು ನರಮಾನವರ ಶಿಕ್ಷೆಯಿಂದ ಸಧ್ಯಕ್ಕೆ ತಪ್ಪಿಸಿಕೊಂಡರೂ, ಸರ್ವಶಕ್ತ ದೇವರ ಕೈಯಿಂದ ಜೀವಂತವಾಗಿ ಆಗಲಿ, ಸತ್ತಾಗ ಆಗಲಿ, ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದುದರಿಂದ, ಅವರು ಈಗ ನನ್ನ ಪ್ರಾಣತೆಗೆಯುವುದಕ್ಕೆ ನಾನೇ ಧೈರ್ಯದಿಂದ ಸಮ್ಮತಿಸುವುದರಿಂದ ನನ್ನ ಮುಪ್ಪಿನ ಘನತೆಗೆ ಯೋಗ್ಯನೆಂದು ಸ್ಪಷ್ಟೀಕರಿಸುತ್ತೇನೆ. ಹೀಗೆ ಪೂಜ್ಯ ಹಾಗೂ ಪವಿತ್ರ ನಿಯಮಕ್ಕಾಗಿ ಆಸಕ್ತಿಯಿಂದ ಮತ್ತು ಧಾರಳ ಮನಸ್ಸಿನಿಂದ ಒಳ್ಳೆಯವನಾಗಿ ಹೇಗೆ ಮರಣಹೊಂದಬಹುದು ಎಂಬ ಭವ್ಯ ಆದರ್ಶವನ್ನು ಚಿಕ್ಕವರಿಗೆ ನೀಡಿದಂತಾಗುತ್ತದೆ, " ಎಂದನು. ಇಷ್ಟನ್ನು ಹೇಳಿದ ಮೇಲೆ ಅವನು ವಧ್ಯಸ್ಥಾನಕ್ಕೆ ನೆಟ್ಟಿಗೆ ಹೋದನು. ಸ್ವಲ್ಪಹೊತ್ತಿಗೆ ಮುಂಚೆ ಸ್ನೇಹ ಪರವಾಗಿ ವರ್ತಿಸುತ್ತಿದ್ದ ಆ ಬೆಂಗಾವಲಿನವರು, ಅವನು ಮಾತಾಡಿದ್ದು ಹುಚ್ಚುತನದಿಂದ ಎಂದೆಣಿಸಿ ಅವನ ಮೇಲೆ ತಿರುಗಿಬಿದ್ದರು. ಮರಣದ ಹಂತವನ್ನು ತಲುಪುವವರೆಗೆ ಅವನನ್ನು ಹೊಡೆದರು. ಆಗ ಎಲ್ಲಾಜಾರನು ನಿಟ್ಟುಸಿರು ಬಿಡುತ್ತಾ, " ನಾನು ಮರಣದಿಂದ ತಪ್ಪಿಸಿಕೊಳ್ಳಬಹುದಾಗಿದ್ದರೂ ಸರ್ವೇಶ್ವರನಲ್ಲಿರುವ ಭಯಭಕ್ತಿಯ ನಿಮಿತ್ತವೇ ಚಾಟಿಯಿಂದಾದ ಈ ದೈಹಿಕ ಯಾತನೆಯನ್ನು ಸಂತೋಷದಿಂದ ಸಹಿಸಿಕೊಳ್ಳುತ್ತೇನೆ. ಹೀಗೆ ಹಿಂಸೆಯನ್ನು ಹೃತ್ಪೂರ್ವಕವಾಗಿ ಅನುಭವಿಸುತ್ತಿದ್ದೇನೆ ಎಂಬುದು ಪರಮ ಪವಿತ್ರ ಜ್ಞಾನಿಯಾದ ಸರ್ವೇಶ್ವರನಿಗೆ ತಿಳಿದಿದೆ, " ಎಂದನು. ಹೀಗೆ ಎಲ್ಲಾಜಾರನು ಸಾವನ್ನು ಅಪ್ಪಿದನು, ಅವನ ಮರಣ ಚಿಕ್ಕವರಿಗೆ ಮಾತ್ರವಲ್ಲ, ಜನಾಂಗದ ಬಹುಭಾಗದವರಿಗೆ ಉದಾತ್ತ ಆದರ್ಶವಾಗಿತ್ತು. ಚಿರಸ್ಮರಣೆಯ ಪುಣ್ಯ ದಾಖಲೆಯಾಗಿತ್ತು.

ಕೀರ್ತನೆ 3:1-6
ಶ್ಲೋಕ: ಕಾಯ್ದು ಕಾಪಾಡುವನು ಪ್ರಭು ನನ್ನನು.

ಪ್ರಭೂ, ನನಗೆ ವಿರೋಧಿಗಳು ಅನೇಕ|
ನನಗೆದುರಾಗಿ ನಿಂತವರು ಅತ್ಯಧಿಕ||
ಈತನಿಗೆ ದೇವರ ನೆರವೆನಿತು?|
ಇಂತಿದೆ ಹಲವರ ಕೆಣಕು ಮಾತು||

ನೀನಾದರೋ ಪ್ರಭೂ, ನನಗೆ ರಕ್ಷೆ, ವಿಜಯದಾತ|
ನಾನು ತಲೆಯೆತ್ತಿ ನಡೆಯುವಂತೆ ಮಾಡುವಾತ||
ಸ್ವರವೆತ್ತಿ ಎನ್ನ ಪ್ರಭುವಿಗೆ ನಾ ಮೊರೆಯಿಡುವೆನು|
ಸಿರಿಸಿಖರದಿಂದಾತನು ಸದುತ್ತರ ನೀಡುವನು||

ಹಾಯಾಗಿ ಮಲಗಿ ನಿದ್ರಿಸುವೆನು|
ಸುಖಿಯಾಗಿ ಮರಳಿ ಎದ್ದೇಳುವೆನು|
ಕಾಯ್ದು ಕಾಪಾಡುವನು ಪ್ರಭು ನನ್ನನು||
ಶತ್ರುಗಳು ಸಾವಿರವಿದ್ದರೂ ನಾನವರಿಗಂಜೆನು|
ಸುತ್ತುವರಿದು ಸನ್ನದ್ಧರಾಗಿದ್ದರೂ ಭಯಪಡೆನು||

ಶುಭಸಂದೇಶ ವಾಚನ: ಲೂಕ 19:1-10

ಆ ಕಾಲದಲ್ಲಿ ಯೇಸು ಜೆರಿಕೊ ಪಟ್ಟಣವನ್ನು ಪ್ರವೇಶಿಸಿ ಅದರ ಬೀದಿಗಳಲ್ಲಿ ಹಾದುಹೋಗುತ್ತಿದ್ದರು. ಅಲ್ಲಿ ಜಕ್ಕಾಯ ಎಂಬವನಿದ್ದನು. ಅವನು ಸುಂಕವಸೂಲಿಯವರ ಮುಖಂಡ ಹಾಗೂ ಧನಾಢ್ಯ. ಯೇಸು ಯಾರೆಂದು ನೋಡಬೇಕೆಂಬ ಅಪೇಕ್ಷೆ ಅವನದು. ಆದರೆ ಅವನು ಗಿಡ್ಡ ವ್ಯಕ್ತಿ. ಜನಜಂಗುಳಿಯ ಮಧ್ಯೆ ಯೇಸುವನ್ನು ನೋಡಲು ಪ್ರಯತ್ನಿಸಿದರೂ ಅವನಿಂದಾಗಲಿಲ್ಲ. ಆದಕಾರಣ ಮುಂದಕ್ಕೆ ಓಡಿಹೋಗಿ ಯೇಸು ಬರುತ್ತಿದ್ದ ಆ ಮಾರ್ಗದಲ್ಲಿ ಒಂದು ಆಲದ ಮರವನ್ನು ಕಂಡು ಅದನ್ನು ಹತ್ತಿದನು. ಯೇಸು ಆ ಸ್ಥಳಕ್ಕೆ ಬಂದು ತಲೆಯೆತ್ತಿ ನೋಡಿ, " ಜಕ್ಕಾಯಾ, ಒಡನೆ ಇಳಿದು ಬಾ, ಈ ದಿನ ನಿನ್ನ ಮನೆಯಲ್ಲಿ ನಾನು ತಂಗಬೇಕು, " ಎಂದರು. ಜಕ್ಕಾಯನು ತಕ್ಷಣವೇ ಇಳಿದು ಬಂದು ಯೇಸುವನ್ನು ಸಂತೋಷದಿಂದ ಸ್ವಾಗತಿಸಿದನು. ಇದನ್ನು ನೋಡಿದವರೆಲ್ಲರು, " ಯೇಸು ಪಾಪಿಷ್ಠನ ಮನೆಗೆ ಅತಿಥಿಯಾಗಿ ಹೋಗುತ್ತಾನಲ್ಲಾ? " ಎಂದು ಗೊಣಗುಟ್ಟಿದರು. ಜಕ್ಕಾಯನು ನೆರೆದಿದ್ದ ಜನರ ಮುಂದೆ ಎದ್ದುನಿಂತು ಯೇಸುವಿಗೆ, " ಪ್ರಭುವೇ, ನನ್ನ ಆಸ್ತಿಪಾಸ್ತಿಯಲ್ಲಿ ಅರ್ಧಭಾಗವನ್ನು ಬಡಬಗ್ಗರಿಗೆ ಕೊಟ್ಟುಬಿಡುತ್ತೇನೆ. ಯಾರಿಗಾದರೂ ಮೋಸಮಾಡಿ ಅವರಿಂದೇನಾದರೂ ನಾನು ಕಸಿದುಕೊಂಡಿದ್ದರೆ ಅದಕ್ಕೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ, " ಎಂದನು. ಆಗ ಯೇಸು, " ಇಂದು ಈ ಮನೆ ಉದ್ಧಾರವಾಯಿತು. ಇವನು ಕೂಡ ಅಬ್ರಹಾಮನ ವಂಶಕ್ಕೆ ಸೇರಿದವನಲ್ಲವೆ? ನರಪುತ್ರನು ಬಂದಿರುವುದು ಪತಿತರನ್ನು ಅರಸಿ ಉದ್ಧರಿಸುವುದಕ್ಕೆ, " ಎಂದು ಹೇಳಿದರು.

20.11.23 - ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಮಾಡಿದೆ

ಮೊದಲನೆಯ ವಾಚನ: ಮಕ್ಕಬಿ 1:10-15, 41-43, 54-57, 62-64


ಮ್ಯಾಸಿಡೋನಿಯದ ಅರಸ ಅಲೆಕ್ಸಾಂಡರನು ನೇಮಿಸಿದ ಅಧಿಕಾರಿಗಳಿಂದ ವಿಷಲತೆಯ ಬೇರೊಂದು ಚಿಗುರಿಕೊಂಡಿತು. ಇವನೇ ಅಂತಿಯೋಕ ಎಪಿಫನೆಸ್ ಎಂಬುವನು. ಇವನು 'ಅಂತಿಯೋಕ' ಎಂಬ ರಾಜನ ಮಗ, ರೋಮ್ ನಗರದಲ್ಲಿ ಒತ್ತೆಯಾಳಾಗಿ ಬಿದ್ದಿದ್ದ. ಗ್ರೀಕ್ ರಾಜ್ಯದ ನೂರ ಮೂವತ್ತೇಳನೇ ವರ್ಷದಲ್ಲಿ ಇವನು ಪಟ್ಟಕ್ಕೆ ಬಂದ. ಆ ದಿನಗಳಲ್ಲಿ ಧರ್ಮಶಾಸ್ತ್ರವನ್ನು ಮೀರಿ ನಡೆಯುತ್ತಿದ್ದ ಕೆಲವರು ಇಸ್ರಾಯೇಲಿನಲ್ಲಿ ತಲೆಯೆತ್ತಿಕೊಂಡರು. ಇವರು, " ನಮ್ಮ ಸುತ್ತಮುತ್ತಲಿನ ಅನ್ಯಜನರ ಸಂಗಡ ಸಂಧಾನ ಮಾಡಿಕೊಳ್ಳೋಣ ಬನ್ನಿ, ನಾವು ಅವರಿಂದ ಬೇರೆಯಾದಾಗಿನಿಂದ ಬಹಳ ಸಂಕಟಗಳಿಗೆ ಈಡಾಗಿದ್ದೇವೆ, " ಎಂದು ಹೇಳುತ್ತಾ ಅನೇಕರನ್ನು ತಪ್ಪುದಾರಿಗೆ ಎಳೆದರು. ಹಲವರಿಗೆ ಈ ಸಲಹೆ ಹಿತಕರವಾಗಿಯೇ ಕಂಡಿತು. ಕೆಲವು ಮಂದಿ ಅರಸನವರೆಗೂ ಹೋದರು. ಅರಸನೂ ಅವರಿಗೆ ಅನ್ಯ ಜನರ ಆಚಾರವಿಚಾರಗಳನ್ನು ಅನುಸರಿಸಲು ಅಪ್ಪಣೆಕೊಟ್ಟನು. ಪರಿಣಾಮವಾಗಿ, ಅವರು ಹೋಗಿ ಅನ್ಯ ಜನರ ಸಂಪ್ರದಾಯದಂತೆ ಜೆರುಸಲೇಮಿನಲ್ಲೆ ಒಂದು ವ್ಯಾಯಾಮಶಾಲೆಯನ್ನು ಕಟ್ಟಿಸಿದರು. ಸುನ್ನತಿ ಚಿಹ್ನೆಗಳನ್ನು ಮರೆಮಾಚಿದರು, ಪವಿತ್ರ ಒಡಂಬಡಿಕೆಯನ್ನು ಮೀರಿದರು, ಅನ್ನಜನರೊಡನೆ ಒಂದೇ ಜನಾಂಗದಂತೆ ಬಾಳಬೇಕು, ಪ್ರತಿಯೊಬ್ಬನು ತನ್ನ ಸ್ವಂತ ಧರ್ಮವನ್ನು ಬಿಟ್ಟುಬಿಡಬೇಕು, " ಎಂದು ಪ್ರಕಟಿಸಿದನು. ಎಲ್ಲ ಜನಾಂಗದವರು ಅರಸನ ಮಾತಿಗೆ ಓಗೊಟ್ಟಿದ್ದರು. ಇಸ್ರಯೇಲರಲ್ಲಿ ಅನೇಕರು ಅವನ ಪೂಜೆಮಾಡಲು ಒಪ್ಪಿ, ಮೂರ್ತಿಗಳಿಗೆ ಬಲಿ ಅರ್ಪಿಸಿದರು, ಸಬ್ಬತ್ ದಿನವನ್ನು ಅಪವಿತ್ರಗೊಳಿಸಿದರು. ಅರಸನು ನೂರ ನಲವತೈದು ವರ್ಷದ ಮಾರ್ಗಶಿರ ಮಾಸದ ಹದಿನೈದನೆಯ ದಿನದಂದು ' ವಿನಾಶಕರ ವಿಕಟಮೂರ್ತಿ ' ಯನ್ನು ಬಲಿಪೀಠದ ಮೇಲೆ ಸ್ಥಾಪಿಸಿದನು. ಜುದೇಯದ ಊರುಕೇರಿಗಳಲ್ಲಿ ಎಲ್ಲೆಲ್ಲೂ ವಿಗ್ರಹಗಳಿಗೆ ಪೀಠಗಳನ್ನು ನಿರ್ಮಿಸಲಾಯಿತು. ಮನೆಯ ಬಾಗಿಲುಗಳಲ್ಲೂ ಊರಬೀದಿಗಳಲ್ಲೂ ಧೂಪಾರತಿಗಳನ್ನು ಎತ್ತಿಸಲಾಯಿತು. ಕೈಗೆ ಸಿಕ್ಕಿದ ಧರ್ಮಶಾಸ್ತ್ರ ಗ್ರಂಥಗಳನ್ನು ಹರಿದು ಬೆಂಕಿಗೆ ಹಾಕಲಾಯಿತು. ಯಾರಾರಲ್ಲಿ ಒಡಂಬಡಿಕೆಯ ಗ್ರಂಥವಿತ್ತೋ ಯಾರಾರು ಧರ್ಮಶಾಸ್ತ್ರಕ್ಕೆ ಬದ್ಧರಾಗಿದ್ದರೋ ಅವರನ್ನು ರಾಜಾಜ್ಞೆಯಂತೆ ಮರಣಕ್ಕೆ ಗುರಿಮಾಡಲಾಯಿತು. ಆದರೂ ಇಸ್ರಯೇಲರಲ್ಲಿ ಅನೇಕರು ರಾಜಾಜ್ಞೆಯನ್ನು ಪ್ರತಿಭಟಿಸಿ, ಅಶುದ್ದ ಆಹಾರವನ್ನು ತಿನ್ನಲು ನಿರಾಕರಿಸಿದರು. ಪವಿತ್ರ ಒಡಂಬಡಿಕೆಯನ್ನು ಮೀರಿ ಅಂಥ ಆಹಾರವನ್ನು ತಿನ್ನುವುದಕ್ಕಿಂತ ಸಾಯುವುದೇ ಲೇಸೆಂದು ಎಣಿಸಿ ಸಾವಿಗೆ ಸಿದ್ದರಾದರು. ಅಂತೆಯೇ ಹಲವರು ಪ್ರಾಣತ್ಯಾಗ ಮಾಡಿದರು. ಆಗ ಭೀಕರ ಕೋಪಾಗ್ನಿ ಇಸ್ರಾಯೇಲಿನ ಮೇಲೆ ಉರಿಯಹತ್ತಿತ್ತು.

ಕೀರ್ತನೆ: 119:53, 61, 134, 150, 155, 158
ಶ್ಲೋಕ: ನಿನ್ನಚಲ ಪ್ರೀತಿಗನುಸಾರ ಚೈತನ್ಯಗೊಳಿಸೆನ್ನನು.

ನಿನ್ನ ಶಾಸ್ತ್ರದ ಭ್ರಷ್ಟರನು ಕಂಡಾಗ|
ನನಗೆ ಬರುತ್ತದೆ ಕೋಪೋದ್ರೇಕ||
ದುರ್ಜನರ ಪಾಶಗಳು ಸುತ್ತಿಕೊಂಡಿವೆ ನನ್ನನ್ನು|
ಆದರು ನಾ ಮರೆಯಲಿಲ್ಲ ನಿನ್ನ ಧರ್ಮಶಾಸ್ತ್ರವನು||

ಜನಶೋಷಣೆಯಿಂದ ಮುಕ್ತಗೊಳಿಸೆನ್ನನು|
ಕೈಗೊಳ್ಳುವೆನು ಆಗ ನಿನ್ನ ನಿಯಮಗಳನು||
ದುಷ್ಕರ್ಮಿಗಳು ಬಂದಿಹರೆನ್ನ ಸಮೀಪಕ್ಕೆ|
ದೂರವಿರುವರು ಅವರು ನಿನ್ನ ಧರ್ಮಶಾಸ್ತ್ರಕ್ಕೆ||

ದೂರವಿದೆ ದುರುಳರಿಗೆ ಆ ಜೀವೋದ್ಧಾರ|
ಅವರಿಗಿದೆ ನಿನ್ನ ನಿಬಂಧನೆಗಳ ತಾತ್ಸಾರ||
ಆ ದ್ರೋಹಿಗಳನು ಕಂಡಾಗ ಆಗುತಿದೆ ಅಸಹ್ಯ|
ಏಕೆನೆ ನಿನ್ನ ನುಡಿಯಂತೆ ಅವರು ನಡೆಯರಯ್ಯಾ||

ಶುಭಸಂದೇಶ: ಲೂಕ 18:35-43


ಆ ಕಾಲದಲ್ಲಿ ಯೇಸು ಜೆರಿಕೊ ಪಟ್ಟಣವನ್ನು ಸಮೀಪಿಸುತ್ತಿದ್ದಾಗ ಕುರುಡನೊಬ್ಬನು ದಾರಿಯ ಪಕ್ಕದಲ್ಲಿ ಕುಳಿತು ಭಿಕ್ಷೆ ಬೇಡುತ್ತಿದ್ದನು. ಜನಸಂದಣಿಯ ಶಬ್ದವನ್ನು ಆಲಿಸಿ, ಅದೇನೆಂದು ವಿಚಾರಿಸಿದನು. " ನಜರೇತಿನ ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾರೆ, " ಎಂದು ಅವನಿಗೆ ತಿಳಿಸಲಾಯಿತು. ಕೂಡಲೇ ಅವನು, " ಯೇಸುವೇ, ದಾವೀದ ಕುಲಪುತ್ರರೇ, ನನಗೆ ದಯೆತೋರಿ, " ಎಂದು ಗಟ್ಟಿಯಾಗಿ ಕೂಗಿಕೊಂಡನು. ಮುಂದೆ ಹೋಗುತ್ತಿದ್ದವರು, " ಸುಮ್ಮನಿರು " ಎಂದು ಅವನನ್ನು ಗದರಿಸಿದರು. ಅವನಾದರೋ, " ದಾವೀದ ಕುಲಪುತ್ರರೇ, ನನಗೆ ದಯೆತೋರಿ, " ಎಂದು ಮತ್ತಷ್ಟು ಗಟ್ಟಿಯಾಗಿ ಕೂಗಿಕೊಂಡನು. ಇದನ್ನು ಕೇಳಿ ಯೇಸು ಅಲ್ಲೇ ನಿಂತು, ಅವನನ್ನು ತಮ್ಮ ಬಳಿಗೆ ಕರೆದುತರುವಂತೆ ಅಪ್ಪಣೆ ಮಾಡಿದರು. ಅವನು ಹತ್ತಿರಕ್ಕೆ ಬಂದಾಗ, " ನನ್ನಿಂದ ನಿನಗೇನಾಗಬೇಕು? " ಎಂದು ಕೇಳಲು ಅವನು, " ಸ್ವಾಮಿ, ನನಗೆ ಕಣ್ಣು ಕಾಣುವಂತೆ ಮಾಡಿ, " ಎಂದು ಪ್ರಾರ್ಥಿಸಿದನು. ಯೇಸು ಅವನಿಗೆ, " ದೃಷ್ಟಿಯನ್ನು ಪಡೆ, ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಮಾಡಿದೆ, " ಎಂದರು. ಆ ಕ್ಷಣವೇ ಅವನಿಗೆ ದೃಷ್ಟಿ ಬಂದಿತು. ದೇವರನ್ನು ಸ್ತುತಿಸುತ್ತಾ ಅವನೂ ಯೇಸುವನ್ನು ಹಿಂಬಾಲಿಸಿದನು. ಇದನ್ನು ನೋಡಿದ ಜನರೆಲ್ಲರೂ ದೇವರನ್ನು ಕೊಂಡಾಡಿದರು.


19.11.23 - "ಬಾ, ನಿನ್ನ ಧಣಿಯ ಸೌಭಾಗ್ಯದಲ್ಲಿ ಭಾಗಿಯಾಗು,"

ಮೊದಲನೇ ವಾಚನ: ಜ್ಞಾನೋಕ್ತಿಗಳು 31:10-13, 19-20, 30-31

ಗುಣವತಿಯಾದ ಹೆಂಡತಿ ಎಲ್ಲಿ ಸಿಕ್ಕಾಳು? ಆಕೆ ಹವಳಕ್ಕಿಂತಲೂ ಬಹು ಮೌಲ್ಯಳು. ಗಂಡನು ಆಕೆಯಲ್ಲಿ ಹೃತ್ಪೂರ್ವಕ ನಂಬಿಕೆಯಿಡುವನು; ಅವನಿಗೆ ಆದಾಯದ ಕೊರತೆ ಇರದು. ಜೀವಮಾನವಿಡೀ ಆಕೆ ಅವನಿಗೆ ಒಳ್ಳೆಯದನ್ನೆ ಮಾಡುವಳು; ಎಂದಿಗೂ ಆಕೆ ಅವನಿಗೆ ಕೇಡನ್ನು ಬಗೆಯಳು. ಉಣ್ಣೆಯನ್ನೂ ಸೆಣಬನ್ನೂ ಹುಡುಕಿ ತರುವಳು; ತನ್ನ ಕೈಗಳಿಂದಲೇ ಬಟ್ಟೆಯನ್ನು ನೇಯುವಳು. ರಾಟೆಯನ್ನು ತಾನೆ ಆಡಿಸುತ್ತಾಳೆ; ಕದಿರನ್ನು ಕೈಯಿಂದ ಹಿಡಿಯುತ್ತಾಳೆ. ಬಡವರಿಗೆ ಕೈಬಿಚ್ಚಿ ಕೊಡುತ್ತಾಳೆ; ದಿಕ್ಕಿಲ್ಲದವರಿಗೆ ಕೈಚಾಚಿ ನೀಡುತ್ತಾಳೆ. ಆಕರ್ಷಣೆ ನೆಚ್ಚತಕ್ಕದಲ್ಲ. ಅಲಂಕಾರ ನೆಲೆಯಾದುದಲ್ಲ; ಸರ್ವೇಶ್ವರನಲ್ಲಿ ಭಯಭಕ್ತಿಯುಳ್ಳವಳೆ ಸ್ತುತ್ಯಾರ್ಹಳು. ಆಕೆಯ ಕೈ ಕೆಲಸಕ್ಕೆ ತಕ್ಕ ಪ್ರತಿಫಲ ಲಭಿಸಲಿ; ಆಕೆಯ ಕಾರ್ಯಗಳೇ ಆಕೆಯನ್ನು ಪುರದ್ವಾರಗಳಲ್ಲಿ ಹೊಗಳಲಿ!

ಕೀರ್ತನೆ: 128:1-2, 3, 4-5
ಶ್ಲೋಕ: ಧನ್ಯನು ಪ್ರಭುವಿನಲಿ ಭಯಭಕ್ತಿಯುಳ್ಳವನು. 

ಎರಡನೇ ವಾಚನ: 1 ಥೆಸೆಲೋನಿಯರಿಗೆ 5:1-6


ಸಹೋದರರೇ, ಇದೆಲ್ಲ ನಡೆಯಲಿರುವ ಸಮಯ ಸಂದರ್ಭಗಳನ್ನು ಕುರಿತು ನಿಮಗೆ ಬರೆಯುವ ಅವಶ್ಯಕತೆಯಿಲ್ಲ.  ರಾತ್ರಿಯಲ್ಲಿ ಕಳ್ಳನು ಬರುವ ಹಾಗೆ ಪ್ರಭುವಿನ ದಿನವು ಬರುವುದೆಂದು ನೀವು ಚೆನ್ನಾಗಿ ಬಲ್ಲಿರಿ. ಎಲ್ಲವೂ ಶಾಂತ, ಸುಭದ್ರವೆಂದು ಜನರು ಎಣಿಸುತ್ತಿರುವಾಗಲೇ, ಗರ್ಭಿಣಿಗೆ ಪ್ರಸವವೇದನೆ ಉಂಟಾಗುವಂತೆ, ವಿನಾಶವು ಫಕ್ಕನೆ ಅವರ ಮೇಲೆ ಬಂದೆರಗುವುದು. ಇದರಿಂದ ಯಾರೂ ತಪ್ಪಿಸಿಕೊಳ್ಳುವಂತಿಲ್ಲ. ಸಹೋದರರೇ, ಕಳ್ಳನಂತೆ ಆ ದಿನವು ನಿಮ್ಮನ್ನು ದಿಗ್ಭ್ರಮೆಗೊಳಿಸದಿರಲಿ. ಏಕೆಂದರೆ, ನೀವಿನ್ನು ಅಂಧಕಾರಕ್ಕೆ ಸೇರಿದವರಲ್ಲ. ಆ ದಿನವು ದಿಢೀರನೆ ನಿಮ್ಮ ಮೇಲೆ ಬರಬಾರದು. ನೀವೆಲ್ಲರೂ ಬೆಳಕಿನ ಹಾಗೂ ಹಗಲಿನ ಮಕ್ಕಳು. ನಾವು ಕತ್ತಲೆಗಾಗಲಿ, ರಾತ್ರಿಗಾಗಲಿ ಸೇರಿದವರಲ್ಲ. ಅಂದ ಮೇಲೆ, ಇತರರಂತೆ ನಾವು ನಿದ್ದೆಮಾಡದೆ ಎಚ್ಚರವಾಗಿದ್ದು ಸ್ವಸ್ಥಚಿತ್ತರಾಗಿ ವರ್ತಿಸೋಣ.

ಶುಭಸಂದೇಶ:, ಮತ್ತಾಯ 25:14-30



ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: “ಅದೂ ಅಲ್ಲದೆ ಆ ದಿನಗಳಲ್ಲಿ ಸ್ವರ್ಗಸಾಮ್ರಾಜ್ಯ ಇಂತಿರುವುದು: ಒಬ್ಬಾತ ಪ್ರವಾಸ ಹೊರಡಲಿದ್ದ. ತನ್ನ ಸೇವಕರನ್ನು ಕರೆದು ಅವರ ವಶಕ್ಕೆ ತನ್ನ ಆಸ್ತಿಯನ್ನು ಒಪ್ಪಿಸಿದ. ಒಬ್ಬನಿಗೆ ಐದು ತಲೆಂತು, ಇನ್ನೊಬ್ಬನಿಗೆ ಎರಡು, ಮತ್ತೊಬ್ಬನಿಗೆ ಒಂದು - ಹೀಗೆ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ವಹಿಸಿಕೊಟ್ಟು ಹೊರಟುಹೋದ. ಐದು ತಲೆಂತು ಪಡೆದ ಸೇವಕ ಒಡನೇ ಹೋಗಿ ಆ ಮೊತ್ತದಿಂದ ವ್ಯಾಪಾರಮಾಡಿ ಇನ್ನೂ ಐದನ್ನು ಸಂಪಾದಿಸಿದ. ಎರಡು ಪಡೆದವನೂ ಹಾಗೆಯೇ ಮಾಡಿ ಇನ್ನೂ ಎರಡನ್ನು ಸಂಪಾದಿಸಿದ. ಒಂದು ತಲೆಂತು ಪಡೆದವನು ಮಾತ್ರ, ಅದನ್ನು ತೆಗೆದುಕೊಂಡು ಹೋಗಿ ಭೂಮಿ ಅಗೆದು, ಅದರಲ್ಲಿ ತನ್ನ ಧಣಿಯ ಆ ಹಣವನ್ನು ಹೂತಿಟ್ಟ. ಬಹಳ ಕಾಲವಾದ ಬಳಿಕ ಆ ಧಣಿ ಹಿಂದಿರುಗಿಬಂದ. ಸೇವಕರಿಂದ ಲೆಕ್ಕಾಚಾರ ಕೇಳಿದ. ಐದು ತಲೆಂತು ಪಡೆದವನು ಇನ್ನೂ ಐದು ತಲೆಂತುಗಳನ್ನು ಮುಂದೆ ತಂದು, ‘ಒಡೆಯಾ, ನೀವು ನನ್ನ ವಶಕ್ಕೆ ಐದು ತಲೆಂತು ಒಪ್ಪಿಸಿದಿರಿ. ಇಗೋ ನೋಡಿ, ಮತ್ತೆ ಐದು ತಲೆಂತು ಸಂಪಾದಿಸಿದ್ದೇನೆ,’ ಎಂದ. ಅದಕ್ಕೆ ಆ ಧಣಿ, “ಭಲಾ, ನೆಚ್ಚಿನ ಸೇವಕ, ನೀನು ಪ್ರಾಮಾಣಿಕ, ಈ ಚಿಕ್ಕ ಕಾರ್ಯದಲ್ಲಿ ಪ್ರಾಮಾಣಿಕನಾಗಿದ್ದ ನಿನಗೆ ದೊಡ್ಡ ಜವಾಬ್ದಾರಿಯನ್ನೇ ವಹಿಸುತ್ತೇನೆ. ಬಾ, ನಿನ್ನ ಧಣಿಯ ಸೌಭಾಗ್ಯದಲ್ಲಿ ಭಾಗಿಯಾಗು,’ ಎಂದ. ಎರಡು ತಲೆಂತು ಪಡೆದಿದ್ದವನೂ ಮುಂದೆ ಬಂದು, ‘ಒಡೆಯಾ, ನೀವು ನನ್ನ ವಶಕ್ಕೆ ಎರಡು ತಲೆಂತುಗಳನ್ನು ಒಪ್ಪಿಸಿದಿರಿ. ಇಗೋ ನೋಡಿ, ಇನ್ನೂ ಎರಡು ತಲೆಂತುಗಳನ್ನು ಸಂಪಾದಿಸಿದ್ದೇನೆ,’ ಎಂದ. ಧಣಿ ಅವನಿಗೂ, ‘ಭಲಾ, ನೆಚ್ಚಿನ ಸೇವಕ, ನೀನು ಪ್ರಾಮಾಣಿಕ. ಈ ಚಿಕ್ಕ ಕಾರ್ಯದಲ್ಲಿ ಪ್ರಾಮಾಣಿಕನಾಗಿದ್ದ ನಿನಗೂ ದೊಡ್ಡ ಜವಾಬ್ದಾರಿಯನ್ನೇ ವಹಿಸುತ್ತೇನೆ. ಬಾ, ನಿನ್ನ ಧಣಿಯ ಸೌಭಾಗ್ಯದಲ್ಲಿ ನೀನೂ ಭಾಗಿಯಾಗು,’ ಎಂದ. ತರುವಾಯ ಒಂದು ತಲೆಂತು ಪಡೆದವನೂ ಮುಂದೆ ಬಂದ; ‘ಒಡೆಯಾ, ನಿಮ್ಮ ಮನಸ್ಸು ಕಠಿಣ ಎಂಬುದನ್ನು ನಾನು ಬಲ್ಲೆ. ನೀವು ಬಿತ್ತದ ಎಡೆಯಲ್ಲಿ ಕೊಯ್ಲುಮಾಡುವವರು; ನೀವು ತೂರದ ಎಡೆಯಲ್ಲಿ ರಾಶಿಮಾಡುವವರು; ಆದ್ದರಿಂದ ನಾನು ಭಯಪಟ್ಟೆ; ಹೋಗಿ ನಿಮ್ಮ ತಲೆಂತನ್ನು ಭೂಮಿಯಲ್ಲಿ ಹೂತಿಟ್ಟೆ. ಇಗೋ, ಸ್ವೀಕರಿಸಿ, ನಿಮ್ಮದು ನಿಮಗೆ ಸಂದಿದೆ,’ ಎಂದ. “ಆಗ ಧಣಿ ಅವನಿಗೆ, ‘ಎಲವೋ, ಮೈಗಳ್ಳನಾದ ದುಷ್ಟ ಸೇವಕ, ನಾನು ಬಿತ್ತದ ಎಡೆಯಲ್ಲಿ ಕೊಯ್ಲುಮಾಡುವವನು; ನಾನು ತೂರದ ಎಡೆಯಲ್ಲಿ ರಾಶಿಮಾಡುವವನು ಎಂದು ನಿನಗೆ ಗೊತ್ತಿತ್ತಲ್ಲವೆ? ಹಾಗಾದರೆ ನನ್ನ ಹಣವನ್ನು ನೀನು ಬಡ್ಡಿ ಅಂಗಡಿಯಲ್ಲಿ ಹಾಕಿಡಬೇಕಿತ್ತು; ನಾನು ಬಂದು ಬಡ್ಡಿಸಮೇತ ನನ್ನ ಅಸಲನ್ನು ಪಡೆಯುತ್ತಿದ್ದೆ,’ ಎಂದ. ಅನಂತರ ಪರಿಚಾರಕರಿಗೆ, ‘ಇವನಿಂದ ಆ ತಲೆಂತು ನಾಣ್ಯವನ್ನು ಕಿತ್ತು ಹತ್ತು ತಲೆಂತು ಇರುವವನಿಗೆ ಕೊಡಿ. ಉಳ್ಳ ಪ್ರತಿಯೊಬ್ಬನಿಗೆ ಇನ್ನೂ ಹೆಚ್ಚಾಗಿ ಕೊಡಲಾಗುತ್ತದೆ. ಅವನು ಸಮೃದ್ಧನಾಗುತ್ತಾನೆ. ಇಲ್ಲದವನಿಂದ ಇರುವ ಕಿಂಚಿತ್ತನ್ನೂ ಕಸಿದುಕೊಳ್ಳಲಾಗುತ್ತದೆ. ಅಪ್ರಯೋಜಕನಾದ ಈ ಸೇವಕನನ್ನು ಹೊರಗಿನ ಕಗ್ಗತ್ತಲೆಗೆ ದಬ್ಬಿರಿ. ಅಲ್ಲಿ ಕಟಕಟನೆ ಹಲ್ಲುಕಡಿದುಕೊಂಡು ಗೋಳಾಡಬೇಕಾಗುವುದು,’ ಎಂದು ಹೇಳಿದ."