ಮೊದಲನೇ ವಾಚನ: ಯೊವೇಲ 3:12-21
14.10.23 - "ದೇವರ ವಾಕ್ಯವನ್ನು ಕೇಳಿ, ಅದನ್ನು ಅನುಸರಿಸುವವನು ಹೆಚ್ಚು ಭಾಗ್ಯವಂತನು!"
13.10.23 - "ಸ್ವರ್ಗದಿಂದ ಒಂದು ಅದ್ಬುತ ಕಾರ್ಯವನ್ನು ಮಾಡಿತೋರಿಸುವಂತೆ ಕೇಳಿದರು"
ಮೊದಲನೇ ವಾಚನ: ಯೊವೇಲ 1:13-15; 2:1-2

ಯಾಜಕರೇ, ಗೋಣಿತಟ್ಟನ್ನುಟ್ಟು ರೋದಿಸಿರಿ; ಬಲಿಪೀಠದ ಪರಿಚಾರಕರೇ, ಪ್ರಲಾಪಿಸಿರಿ; ದೇವರ ದಾಸರೇ, ಬನ್ನಿ; ಗೋಣಿತಟ್ಟನ್ನುಟ್ಟು ಜಾಗರಣೆ ಮಾಡಿರಿ. ದೇವರ ಆಲಯದಲ್ಲಿ ಧ್ಯಾನಪಾನ ನ್ಯೆವೇದ್ಯಗಳು ನಿಂತುಹೋಗಿವೆ. ಉಪವಾಸ ವ್ರತವನ್ನು ಕೈಗೊಂಡು ಮಹಾಸಭೆಯನ್ನು ಕರೆಯಿರಿ; ಹಿರಿಯರನ್ನೂ ನಾಡಿನ ಜನಸಾಮಾನ್ಯರನ್ನೂ ಸೇರಿಸಿರಿ; ದೇವರಾದ ಸರ್ವೇಶ್ವರಸ್ವಾಮಿಯ ಆಲಯಕ್ಕೆ ಬರಮಾಡಿರಿ; ಆ ಸ್ವಾಮಿಗೆ ಪ್ರಾರ್ಥನೆಮಾಡಿರಿ. ಸರ್ವೇಶ್ವರಸ್ವಾಮಿಯ ದಿನ ಸಮಿಾಪಿಸಿದೆ. ಆ ದಿನ ಸರ್ವಶಕ್ತನಿಂದ ವಿನಾಶವನ್ನು ತರಲಿದೆ; ಎಂಥಾ ಭಯಂಕರ ದಿನವದು! ಸಿಯೋನಿನಲ್ಲಿ ಕೊಂಬೂದಿರಿ; ನನ್ನ ಪರಿಶುದ್ಧ ಪರ್ವತದಲ್ಲಿ ಎಚ್ಚರಿಕೆಯ ವಾಣಿ ಮೊಳಗಲಿ; ಸಮಸ್ತ ದೇಶನಿವಾಸಿಗಳು ಹೆದರಿ ನಡುಗಲಿ, ಸರ್ವೇಶ್ವರಸ್ವಾಮಿಯ ದಿನ ಬರಲಿದೆ, ಸನ್ನಿತವಾಗಿದೆ. ಅದು ಕಾರಿರುಳಿನ ಕರಾಳ ದಿನ, ಕಾರ್ಮುಗಿಲ ಕಾರ್ಗತ್ತಲ ದಿನ. ಮುಂಬೆಳಕು ಗುಡ್ಡದಿಂದ ಗುಡ್ಡಕ್ಕೆ ಹರಡುವಂತೆ ಪ್ರಬಲವಾದ ದೊಡ್ಡ ಸೈನ್ಯವೊಂದು ಬರುತ್ತಿದೆ; ಇಂಥ ಸೈನ್ಯ ಹಿಂದೆಂದೂ ಬಂದಿಲ್ಲ, ತಲತಲಾಂತರಕ್ಕೂ ಬಬರುವಂತಿಲ್ಲ.
12.10.23 - "ನಿಮ್ಮ ತಂದೆ ತಮ್ಮನ್ನು ಕೇಳಿಕೊಳ್ಳುವವರಿಗೆ ಪವಿತ್ರಾತ್ಮ ಅವರನ್ನೇ ಅನುಗ್ರಹಿಸಬಲ್ಲರು"
ಮೊದಲನೇ ವಾಚನ: ಮಲಾಕಿಯನ 3:13-4:2
11.10.23 - "ನಿಮ್ಮ ಸಾಮ್ರಾಜ್ಯ ಬರಲಿ"
ಮೊದಲನೇ ವಾಚನ: ಯೋನ 4:1-11
ಸರ್ವೇಶ್ವರಸ್ವಾಮಿಯ ವರ್ತನೆಯು ಯೋನನಿಗೆ ಹಿಡಿಸಲಿಲ್ಲ. ಅವನ ಕೋಪ ನೆತ್ತಿಗೇರಿತು. ಆಗ ಅವನು ಹೀಗೆಂದು ಮೊರೆಯಿಟ್ಟನು: "ಸ್ವಾಮಿಾ, ಈ ರೀತಿ ಸಂಭವಿಸುವುದೆಂದು ನಾನು ಸ್ವದೇಶವನ್ನು ಬಿಡುವ ಮುನ್ನವೇ ನಿಮಗೆ ಹೇಳಿದ್ದೇನಲ್ಲವೆ? ಈ ಕಾರಣದಿಂದಲೇ ಅಲ್ಲವೆ ನಾನು ತಾರ್ಷಿಷಿಗೆ ಓಡಿಹೋಗಲು ಪ್ರಯತ್ನಿಸಿದ್ದು? ನೀವು ಪ್ರೀತಿಸ್ವರೂಪಿ, ಕರುಣಾಮಯಿ, ಸಹನಾಶೀಲರಾದ ದೇವರು, ವಿಧಿಸಬೇಕೆಂದಿದ್ದ ಶಿಕ್ಷೆಯನ್ನು ಹಿಂತೆಗೆದುಕೊಳ್ಳುವ ದೇವರು - ಎಂದು ಆಗಲೇ ನನಗೆ ತಿಳಿದಿತ್ತು. ಆದುದರಿಂದ ಸರ್ವೇಶ್ವರಾ, ನನ್ನ ಪ್ರಾಣವನ್ನು ಹಿಂತೆಗೆದುಕೊಳ್ಳಿ. ನಾನು ಬದುಕುವುದಕ್ಕಿಂತ ಸಾಯುವುದೇ ಲೇಸು." ಎಂದು ಮೊರೆಯಿಟ್ಟನು. ಅದಕ್ಕೆ ಸರ್ವೇಶ್ವರ, "ನೀನು ಹೀಗೆ ಸಿಟ್ಟುಗೊಳ್ಳುವುದು ಸರಿಯೇ?" ಎಂದರು. ಅನಂತರ ಯೋನನು ಆ ನಗರವನ್ನು ಬಿಟ್ಟು ಪೂರ್ವದಿಕ್ಕಿಗೆ ಹೋದನು. ಅಲ್ಲಿ ತನಗಾಗಿ ಒಂದು ಗುಡಿಸಲನ್ನು ಕಟ್ಟಿಕೊಂಡನು. ನಗರಕ್ಕೆ ಏನು ಸಂಭವಿಸುತ್ತದೋ ಎಂಬುದನ್ನು ನೋಡಲು ಅದರ ನೆರಳಿನಲ್ಲಿ ಕುಳಿತನು. ದೇವರಾದ ಸರ್ವೇಶ್ವರ ಆ ಸ್ಥಳದಲ್ಲಿ ಒಂದು ಸೋರೆಬಳ್ಳಿ ಮೊಳೆಯುವಂತೆ ಮಾಡಿದರು. ಅದು ಬೆಳೆದು ತಲೆಗೆ ನೆರಳನ್ನೂ ಮನಸ್ಸಿಗೆ ತಣಿವನ್ನೂ ನೀಡಿತು. ಯೋನನಿಗೆ ಬಹಳ ಸಂತೋಷವಾಯಿತು. ಆದರೆ ಮಾರನೆಯ ದಿನ ಮುಂಜಾನೆ ದೇವರ ಆಜ್ಞಾನುಸಾರ ಆ ಗಿಡಕ್ಕೆ ಹುಳುವೊಂದು ಹೊಡೆಯಿತು. ಆಗ ಗಿಡವು ಒಣಗಿಹೋಯಿತು. ಸೂರ್ಯನು ಏರುತ್ತಿರಲು, ಸರ್ವೇಶ್ವರನ ಚಿತ್ತಾನುಸಾರ ಬಿಸಿಯಾದ ಮೂಡಣ ಗಾಳಿ ಬೀಸಿತು. ಬಿಸಿಲಿನ ತಾಪದಿಂದ ಯೋನನು ಮೂರ್ಛೆಹೋಗುವಂತಾದನು; ಸಾವನ್ನು ಅಪೇಕ್ಷಿಸುತ್ತಾ: "ಬದುಕಿರುವುದಕ್ಕಿಂತ ಸಾಯುವುದೇ ಲೇಸು," ಎಂದು ಬೇಡಿಕೊಂಡನು. ಅದಕ್ಕೆ ದೇವರು: "ನೀನು ಸೋರೆಗಿಡದ ವಿಷಯದಲ್ಲಿ ಸಿಟ್ಟುಗೊಳ್ಳುವುದು ಸರಿಯೇ?" ಎಂದು ಕೇಳಲು, ಯೋನನು, "ಹೌದು, ಸಾವನ್ನು ಬಯಸುವಷ್ಟು ಸಿಟ್ಟುಗೊಳ್ಳುವುದು ಸರಿಯಲ್ಲವೇ?" ಎಂದು ಉತ್ತರವಿತ್ತನು. ಆಗ ಸರ್ವೇಶ್ವರ: "ನೀನು ಆ ಗಿಡಕ್ಕಾಗಿ ಶ್ರಮಿಸಲೂ ಇಲ್ಲ, ಅದನ್ನು ಬೆಳೆಸಲೂ ಇಲ್ಲ ಅದು ತಾನಾಗಿಯೇ ಒಂದು ರಾತ್ರಿಯಲ್ಲಿ ಬೆಳೆಯಿತು. ಒಂದೇ ರಾತ್ರಿಯಲ್ಲಿ ಬಾಡಿಹೋಯಿತು. ಅದಕ್ಕಾಗಿ ಇಷ್ಟೊಂದು ಚಿಂತೆಯೇ? ಹೀಗಿರುವಲ್ಲಿ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಂದಿ ನಿರಪರಾಧಿಗಳೂ ಅಪಾರ ಪಶುಪ್ರಾಣಿಗಳೂ ಇರುವ ನಿನೆವೆ ಮಹಾನಗರದ ಬಗ್ಗೆ ನಾನು ಇನ್ನೆಷ್ಟು ಚಿಂತೆಮಾಡಬೇಕು?" ಎಂದರು.
ಶ್ಲೋಕ: ಪ್ರಭೂ, ನೀ ದಯಾಳು; ದೇವಾ, ನೀ ಕರುಣಾಮೂರ್ತಿ
10.10.23
ಮೊದಲನೇ ವಾಚನ: ಯೋನನ 3:1-10
ಯೋನನಿಗೆ ಸ್ವಾಮಿಯ ವಾಣಿ ಪುನಃ ಕೇಳಿಸಿತು: "ಎದ್ದು ಮಹಾನಗರವಾದ ನಿನೆವೆಗೆ ಹೋಗು, ನಾನು ನಿನಗೆ ತಿಳಿಸಿದ ಸಂದೇಶವನ್ನು ಅಲ್ಲಿಯ ನಿವಾಸಿಗಳಿಗೆ ಸಾರು," ಎಂದಿತು. ಸ್ವಾಮಿಯ ಆಜ್ಞಾನುಸಾರ ಯೋನನು ನಿನೆವೆಗೆ ಹೋದನು. ಅದೊಂದು ವಿಸ್ತಾರವಾದ ನಗರ. ಅದನ್ನು ಹಾದುಹೋಗಲು ಮೂರು ದಿನಗಳು ಹಿಡಿಯುತ್ತಿತ್ತು. ನಗರವನ್ನು ಪ್ರವೇಶಿಸಿ ಒಂದು ದಿನದ ಪ್ರಯಾಣಮಾಡಿದ ನಂತರ ಯೋನನು ಸ್ವಾಮಿಯ ಸಂದೇಶವನ್ನು ಸಾರುತ್ತಾ, "ಜನರೇ ಕೇಳಿ; ನಿಮ್ಮ ನಗರ ನಲವತ್ತು ದಿನಗಳಲ್ಲಿ ನಾಶವಾಗುವುದು," ಎಂದನು. ಆ ನಗರದ ನಿವಾಸಿಗಳು ದೇವರ ಸಂದೇಶವನ್ನು ನಂಬಿದರು. ಪ್ರತಿಯೊಬ್ಬನೂ ಉಪವಾಸ ಕೈಗೊಳ್ಳಬೇಕೆಂದು ನಿರ್ಧರಿಸಿದರು. ಹಿರಿಯರು ಮೊದಲುಗೊಂಡು ಕಿರಿಯರವರೆಗೆ - ಎಲ್ಲರೂ ಮನಪರಿವರ್ತನೆ ಚಿಹ್ನೆಯಾಗಿ ಗೋಣಿತಟ್ಟನ್ನು ಉಟ್ಟುಕೊಂಡರು ಈ ಸಂಗತಿ ನಿನೆವೆಯ ಅರಸನ ಕಿವಿಗೆ ಬಿದ್ದಿತು. ಅವನು ಸಿಂಹಾಸನದಿಂದ ಇಳಿದು, ತನ್ನ ರಾಜವಸ್ತ್ರಗಳನ್ನು ತೆಗೆದುಬಿಟ್ಟು, ಗೋಣಿತಟ್ಟನ್ನು ಉಟ್ಟುಕೊಂಡು ಬೂದಿಯಲ್ಲಿ ಕುಳಿತುಕೊಂಡನು. ಕೂಡಲೇ ತನ್ನ ಪ್ರಜೆಗಳಿಗೆಈ ರಾಜಾಜ್ಞೆಯನ್ನು ನಿನೆವೆಯಲ್ಲಿ ಹೊರಡಿಸಿದನು: "ಅರಸನ ಹಾಗೂ ಆತನ ಆಪ್ತ ಪ್ರಮುಖರ ಆಜ್ಞೆಯಿದು: ಜನರಾಗಲೀ ದನಕರುಗಳಾಗಲೀ, ಕುರಿಮೇಕೆಗಳಾಗಲೀ, ಯಾರೂ ಏನನ್ನೂ ತಿನ್ನಬಾರದು, ಕುಡಿಯಲೂಬಾರದು. ಎಲ್ಲ ಜನರೂ ಗೋಣಿತಟ್ಟನ್ನು ಉಟ್ಟುಕೊಳ್ಳಬೇಕು: ಪ್ರಾಣಿಗಳಿಗೂ ಹೊದಿಸಬೇಕು. ದೇವರನ್ನು ಶ್ರದ್ಧೆಯಿಂದ ಪ್ರಾರ್ಥಿಸಬೇಕು. ಎಲ್ಲರೂ ದೌರ್ಜನ್ಯವನ್ನು ತ್ಯಜಿಸಿ, ಹಿಂಸಾಚಾರವನ್ನು ಕೈಬಿಡಬೇಕು. ಹೀಗೆ ಮಾಡಿದ್ದೇ. ಆದರೆ, ದೇವರು ಒಂದುವೇಳೆ ತಮ್ಮ ಮನಸ್ಸನ್ನು ಬದಲಾಯಿಸಿ, ತಮ್ಮ ಉಗ್ರಕೋಪವನ್ನು ತಡೆದಾರು, ನಾವು ನಾಶವಾಗದೆ ಉಳಿದೇವು." ಆ ಜನರು ಮಾಡಿದುದೆಲ್ಲವನ್ನು ದೇವರು ಗಮನಿಸಿದರು. ತಮ್ಮ ದುರ್ನಡತೆಯನ್ನು ಜನರು ಕೈಬಿಟ್ಟದ್ದನ್ನು ಕಂಡು, ಮನಮರುಗಿ ಅವರಿಗೆ ವಿಧಿಸಬೇಕೆಂದಿದ್ದ ಶಿಕ್ಷೆಯನ್ನು ತಡೆಹಿಡಿದರು.
ಶ್ಲೋಕ: ಪಾಪಗಳ ನೀ ಪಟ್ಟಿಮಾಡಿದೆಯಾದರೆ ಪ್ರಭೂ ನಿನ್ನ ಮುಂದೆ ಯಾರು ತಾನೆ ನಿಲ್ಲಬಲ್ಲರು ವಿಭೂ?
ಯೇಸುಸ್ವಾಮಿ ತಮ್ಮ ಶಿಷ್ಯರೊಡನೆ ಪ್ರಯಾಣ ಮುಂದುವರಿಸಿ ಒಂದು ಹಳ್ಳಿಗೆ ಬಂದರು. ಅಲ್ಲಿ ಮಾರ್ತಳೆಂಬ ಮಹಿಳೆ ಅವರನ್ನು ತಮ್ಮ ಮನೆಗೆ ಅಮಂತ್ರಿಸಿದಳು. ಆಕೆಗೆ ಮರಿಯಳೆಂಬ ಸೋದರಿ ಇದ್ದಳು. ಈಕೆ ಪ್ರಭುವಿನ ಪಾದದ ಬಳಿ ಕುಳಿತುಕೊಂಡು ಅವರ ಬೋಧನೆಯನ್ನು ಆಲಿಸುತ್ತಿದ್ದಳು. ಮಾರ್ತಳಾದರೋ, ಅತಿಥಿಸತ್ಕಾರದ ಗಡಿಬಿಡಿಯಲ್ಲಿ ಇದ್ದಳು. ಅವಳು ಬಂದು, "ಪ್ರಭೂ, ನನ್ನ ಸೋದರಿ ಈ ಕೆಲಸವನ್ನೆಲ್ಲಾ ನನ್ನೊಬ್ಬಳಿಗೇ ಬಿಟ್ಟಿದ್ದಾಳೆ. ನೀವಿದನ್ನು ಗಮನಿಸಬಾರದೇ? ನನಗೆ ಸಹಾಯ ಮಾಡುವಂತೆ ಅವಳಿಗೆ ಹೇಳಿ," ಎಂದಳು. ಯೇಸು ಆಕೆಗೆ ಪ್ರತ್ಯುತ್ತರವಾಗಿ, "ಮಾರ್ತಾ, ಮಾರ್ತಾ, ನೀನು ಅನಾವಶ್ಯ ಚಿಂತೆ ಪೇಚಾಟಗಳಿಗೆ ಒಳಗಾಗಿರುವೆ. ಆದರೆ ಅಗತ್ಯವಾದುದು ಒಂದೇ. ಮರಿಯಳು ಉತ್ತಮವಾದುದನ್ನೇ ಆರಿಸಿಕೊಂಡಿದ್ದಾಳೆ. ಅದನ್ನು ಆಕೆಯಿಂದ ಕಸಿದುಕೊಳ್ಳಲಾಗದು," ಎಂದರು.
09.10.23 - " ನನ್ನ ನೆರೆಯವನು ಯಾರು?"
ಒಂದು ದಿನ ಅಮಿತ್ತಾಯನ ಮಗನಾದ ಯೋನನಿಗೆ ಸರ್ವೇಶ್ವರರಸ್ವಾಮಿಯ ವಾಣಿ ಕೇಳಿಸಿತು. " ನಿನೆವೆ ಮಹಾನಗರದ ನಿವಾಸಿಗಳು ಎಷ್ಟು ದುಷ್ಟರೆಂಬುದು ನನಗೆ ತಿಳಿದುಬಂದಿದೆ. ನೀನು ಅಲ್ಲಿಗೆ ಹೋಗು. ಅವರನ್ನು ಕಟುವಾಗಿ ಖಂಡಿಸು, " ಆದರೆ ಯೋನನು ಆ ಸ್ವಾಮಿಯ ಸನ್ನಿಧಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ನಿನೆವೆಗೆ ಹೋಗುವುದರ ಬದಲು ತಾರ್ಷಿಷಿಗೆ ಅಭಿಮುಖವಾಗಿ ಓಡಿಹೋಗಲು ಹೊರಟನು. ಜೊಪ್ಪ ಎಂಬ ಊರನ್ನು ತಲುಪಿದಾಗ ತಾರ್ಷಿಷಿಗೆ ಹೊರಡಲಿದ್ದ ಹಡಗೊಂದನ್ನು ಕಂಡನು. ಪ್ರಯಾಣದ ದರವನ್ನು ತೆತ್ತು ಸಹನಾವಿಕರೊಂದಿಗೆ ಹಡಗನ್ನು ಹತ್ತಿದನು. ಹೀಗೆ ಯೋನನು ಸರ್ವೇಶ್ವರಸ್ವಾಮಿಯ ಸನ್ನಿಧಿಯಿಂದ ದೂರ ಹೋಗಬಹುದೆಂದು ಭಾವಿಸಿದನು. ಆದರೆ ಸರ್ವೇಶ್ವರ ಸಮುದ್ರದಲ್ಲಿ ಬಿರುಗಾಳಿಯೊಂದನ್ನು ಬರಮಾಡಿದರು. ಅಲೆಗಳ ಹೊಡೆತಕ್ಕೆ ಹಡಗು ನುಚ್ಚುನೂರಾಗಿ ಒಡೆದುಹೋಗುವುದರಲ್ಲಿತ್ತು. ದಿಗ್ಭ್ರಾಂತರಾದ ನಾವಿಕರು ಪ್ರಾಣ ರಕ್ಷಣೆಗಾಗಿ ತಮ್ಮ ದೇವದೇತೆಗಳ ಮೊರೆಹೊಕ್ಕರು. ಪ್ರಾಣಾಪಾಯದಿಂದ ಪಾರಾಗಲು ತಮ್ಮಲ್ಲಿದ್ದ ಸರಕು ಸಾಮಾಗ್ರಿಗಳನ್ನು ಸಮುದ್ರಕ್ಕೆ ಎಸೆದರು. ಇಷ್ಟರೊಳಗೆ ಯೋನನು ಹಡಗಿನ ತಳಭಾಗಕ್ಕೆ ಇಳಿದುಹೋಗಿ ಹಾಯಾಗಿ ಮಲಗಿದ್ದನು. ಅವನಿಗೆ ಗಾಢನಿದ್ರೆ ಹತ್ತಿತ್ತು. ಇದನ್ನು ಕಂಡ ನೌಕಾಧಿಕಾರಿ ಅಲ್ಲಿಗೆ ಬಂದು, ಅವನನ್ನು ಎಬ್ಬಿಸುತ್ತಾ, " ಏನಯ್ಯಾ, ಹಾಯಾಗಿ ಇಲ್ಲಿ ನಿದ್ರೆ ಮಾಡುತ್ತಿದ್ದೀಯಲ್ಲ, ಎದ್ದೇಳು. ನಿನ್ನ ದೇವರಿಗೆ ಮೊರೆಯಿಡು. ಅವರಾದರೂ ನಮ್ಮ ಮೇಲೆ ಕರುಣೆತೋರಿ, ನಾವು ನಾಶವಾಗದಂತೆ ಕಾಪಾಡಿಯಾರು, " ಎಂದನು. ಆಮೇಲೆ ನಾವಿಕರು: " ನಮಗೆ ಸಂಭವಿಸಿರುವ ಈ ದುರಂತಕ್ಕೆ ಕಾರಣ ಯಾರಿರಬಹುದು? ಬನ್ನಿ, ಚೀಟುಹಾಕಿ ನೋಡೋಣ " ಎಂದು ತಮ್ಮತಮ್ಮಲ್ಲೇ ಮಾತನಾಡಿಕೊಂಡರು. ಹಾಗೆ ಮಾಡಿದಾಗ ಚೀಟು ಯೋನನ ಹೆಸರಿಗೆ ಬಂತು. ಆಗ ನಾವಿಕರು: " ನೀನು ಯಾರು? ಎಲ್ಲಿಂದ ಬಂದೆ? ಯಾವ ಕೆಲಸದ ಮೇಲೆ ಬಂದೆ? ನೀನು ಯಾವ ಜನಾಂಗದವನು? ಈ ದುರಂತಕ್ಕೆ ಕಾರಣ ಯಾರು? " ಎಂದು ಪ್ರಶ್ನಿಸಿದರು. ಅದಕ್ಕೆ ಯೋನನು: " ನಾನು ಹಿಬ್ರಿಯನು. ಸಮುದ್ರವನ್ನೂ ಭೂಮಿಯನ್ನೂ ಸೃಷ್ಟಿಸಿದ ಪರಲೋಕ ದೇವರಾದ ಸರ್ವೇಶ್ವರನ ಭಕ್ತನು ನಾನು, " ಎಂದು ಉತ್ತರಿಸಿದನು. ಅಲ್ಲದೆ ತಾನು ಆ ಸ್ವಾಮಿಯ ಸನ್ನಿಧಿಯಿಂದ ಓಡಿಹೋಗುತ್ತಿರುವುದಾಗಿಯೂ ತಿಳಿಸಿದನು. ಇದನ್ನು ಕೇಳಿದ್ದೇ ನಾವಿಕರು ಭಯಭ್ರಾಂತರಾದರು. " ಎಂಥಾ ತಪ್ಪು ಮಾಡಿದೆ! " ಎಂದು ಅವನನ್ನು ಖಂಡಿಸಿದರು. ಆಗ ಬಿರುಗಾಳಿ ಮತ್ತಷ್ಟು ತೀವ್ರಗೊಳ್ಳುತ್ತಿತ್ತು. ನಾವಿಕರು ಯೋನನಿಗೆ: " ಸಮುದ್ರ ಶಾಂತವಾಗಬೇಕಾದರೆ ನಿನ್ನನ್ನು ಏನು ಮಾಡಬೇಕು? ಹೇಳು, " ಎಂದು ಕೇಳಿದರು. ಯೋನನು: " ನನ್ನನ್ನು ಎತ್ತಿ ಸಮುದ್ರಕ್ಕೆ ಎಸೆಯಿರಿ. ಆಗ ಅದು ಶಾಂತವಾಗುವುದು. ನೀವು ಇಂಥ ಭೀಕರ ಬಿರುಗಾಳಿಗೆ ತುತ್ತಾಗಲು ನಾನೇ ಕಾರಣ. ಇದನ್ನು ನಾನು ಚೆನ್ನಾಗಿ ಬಲ್ಲೆ, " ಎಂದನು. ನಾವಿಕರು ಅವನ ಸಲಹೆಗೆ ಒಪ್ಪದೆ, ಹಡಗನ್ನು ದಡಕ್ಕೆ ಸಾಗಿಸಲು ತಮ್ಮ ಶಕ್ತಿ ಸಾಮರ್ಥ್ಯವನ್ನೆಲ್ಲ ಪ್ರಯೋಗಿಸಿ ಹುಟ್ಟುಹಾಕಿದರು. ಆದರೆ ಸಾಧ್ಯವಾಗಲಿಲ್ಲ. ಸಮುದ್ರವು ಅಲ್ಲೋಲಕಲ್ಲೋಲವಾಗುತ್ತಲೇ ಇತ್ತು. ಆಗ ಅವರು ಬೇರೆ ದಿಕ್ಕುತೋಚದೆ ಸರ್ವೇಶ್ವರಸ್ವಾಮಿಗೆ ಮೊರೆಯಿಡುತ್ತಾ : " ಸ್ವಾಮಿ, ಈ ನಿರಪರಾಧಿಯ ಪ್ರಾಣಹಾನಿಗೆ ನಾವು ಹೊಣೆಯಲ್ಲ. ಇದಕ್ಕಾಗಿ ನಮ್ಮನ್ನು ನಾಶಮಾಡಬೇಡಿ. ಇದೆಲ್ಲವೂ ಸಂಭವಿಸಿರುವುದು ನಿಮ್ಮ ಚಿತ್ತವಲ್ಲವೇ? " ಎಂದು ದೈನ್ಯದಿಂದ ಪ್ರಾರ್ಥಿಸಿದರು. ಬಳಿಕ ಅವರು ಯೋನನನ್ನು ಎತ್ತಿ ಸಮುದ್ರಕ್ಕೆ ಎಸೆದರು. ತಕ್ಷಣವೇ, ಭೋರ್ಗರೆಯುತ್ತಿದ್ದ ಸಮುದ್ರ ಶಾಂತವಾಯಿತು. ಇದನ್ನು ಕಂಡು ಜನರು ಸರ್ವೇಶ್ವರಸ್ವಾಮಿಗೆ ಬಹುವಾಗಿ ಭಯಪಟ್ಟರು, ಯಜ್ಞವನ್ನು ಅರ್ಪಿಸಿ, ಹರಕೆಗಳನ್ನು ಸಲ್ಲಿಸಿದರು. ಇತ್ತ ಸರ್ವೇಶ್ವರಸ್ವಾಮಿಯ ಆಜ್ಞಾನುಸಾರ ದೊಡ್ಡ ಮೀನೊಂದು ಬಂದು ಯೋನನನ್ನು ನುಂಗಿತು. ಅವನು ಆದರ ಹೊಟ್ಟೆಯಲ್ಲಿ ಮೂರು ಹಗಲು, ಮೂರು ಇರುಳು ಇದ್ದನು. ಸರ್ವೇಶ್ವರಸ್ವಾಮಿಯ ಆಜ್ಞೆಯ ಪ್ರಕಾರ ಆ ಮೀನು ಯೋನನನ್ನು ದಡದ ಮೇಲೆ ಕಕ್ಕಿತು.
ಆ ಕಾಲದಲ್ಲಿ ಒಬ್ಬ ಶಾಸ್ತ್ರಜ್ಞನು ಎದ್ದು ಯೇಸುವನ್ನು ಪರೀಕ್ಷಿಸುವ ಉದ್ದೇಶದಿಂದ " ಬೋಧಕರೇ, ಅಮರಜೀವ ನನಗೆ ಪ್ರಾಪ್ತಿಯಾಗಬೇಕಾದರೆ ನಾನು ಮಾಡಬೇಕಾದುದು ಏನು? " ಎಂದು ಕೇಳಿದನು. ಅದಕ್ಕೆ ಯೇಸು, " ಧರ್ಮಶಾಸ್ತ್ರದಲ್ಲಿ ಏನು ಬರೆದಿದೆ? ಹೇಗೆ ಪಠಿಸುತ್ತೀಯೆ? " ಎಂದು ಮರುಪ್ರಶ್ನೆ ಹಾಕಿದರು. ಅವನು, " ' ನಿನ್ನ ಸರ್ವೇಶ್ವರನಾದ ದೇವರನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಶಕ್ತಿಯಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸು ಮತ್ತು ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು ' ಎಂದಿದೆ, " ಎಂದು ಉತ್ತರ ಕೊಟ್ಟನು. ಯೇಸು, " ಸರಿಯಾಗಿ ಉತ್ತರಕೊಟ್ಟೆ. ಅದರಂತೆ ಮಾಡು. ನಿನಗೆ ಅಮರ ಜೀವ ಲಭಿಸುವುದು, " ಎಂದರು. ಆದರೆ ಆ ಶಾಸ್ತ್ರಜ್ಞನು ತನ್ನನ್ನು ತಾನೇ ಸಮರ್ಥಿಸಿಕೊಳ್ಳಲು,. " ನನ್ನ ನೆರೆಯವನು ಯಾರು? " ಎಂದು ಯೇಸುವನ್ನು ಮತ್ತೆ ಪ್ರಶ್ನಿಸಿದನು. ಆಗ ಯೇಸು ಅವನಿಗೆ ಹೀಗೆಂದು ವಿವರಿಸಿದರು: " ಒಬ್ಬನು ಜೆರುಸಲೇಮಿನಿಂದ ಇಳಿದು ಜೆರಿಕೋವಿಗೆ ಪ್ರಯಾಣ ಮಾಡುತ್ತಿದ್ದಾಗ, ದರೋಡೆಗಾರರ ಕೈಗೆ ಸಿಕ್ಕಿಬಿದ್ದ. ದರೋಡೆಗಾರರು ಅವನನ್ನು ಸುಲಿಗೆ ಮಾಡಿ, ಹೊಡೆದು ಬಡಿದು, ಅರೆಜೀವ ಮಾಡಿ ಅಲ್ಲೇ ಬಿಟ್ಟುಹೋದರು. ಅದೇ ಮಾರ್ಗವಾಗಿ ಒಬ್ಬ ಯಾಜಕನು ಹಾದು ಹೋಗಬೇಕಾಗಿ ಬಂದಿತು. ಈತನು, ಅವನನ್ನು ಕಂಡದ್ದೇ ಆಚೆ ಬಳಸಿಕೊಂಡು ಹೋದ. ಹಾಗೆಯೇ ಲೇವಿಯೊಬ್ಬನು ಆ ಸ್ಥಳಕ್ಕೆ ಬಂದು ಅವನನ್ನು ನೋಡಿ, ಹಾಗೆಯೇ ಬಳಸಿಕೊಂಡು ಹೋದ. ಆದರೆ ಆ ಮಾರ್ಗವಾಗಿ ಪ್ರಯಾಣಮಾಡುತ್ತಿದ್ದ ಒಬ್ಬ ಸಮಾರಿಯದವನು ಅಲ್ಲಿಗೆ ಬಂದಾಗ, ಅವನನ್ನು ಕಂಡು ಕನಿಕರಪಟ್ಟ. ಹತ್ತಿರಕ್ಕೆ ಹೋಗಿ ಅವನ ಗಾಯಗಳಿಗೆ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹಚ್ಚಿ ಅವುಗಳಿಗೆ ಬಟ್ಟೆ ಕಟ್ಟಿದ. ಬಳಿಕ ಅವನನ್ನು ತನ್ನ ಸ್ವಂತ ವಾಹಕಪಶುವಿನ ಮೇಲೆ ಹತ್ತಿಸಿಕೊಂಡು ಒಂದು ಛತ್ರಕ್ಕೆ ಕರೆದುಕೊಂಡು ಹೋಗಿ, ಆರೈಕೆ ಮಾಡಿದ. ಮಾರನೆಯ ದಿನ ಎರಡು ದಿನಾರಿ ನಾಣ್ಯಗಳನ್ನು ಛತ್ರದವನಿಗೆ ಕೊಟ್ಟು, ' ಇವನನ್ನು ಚೆನ್ನಾಗಿ ನೋಡಿಕೊ, ಇದಕ್ಕಿಂತ ಹೆಚ್ಚು ವೆಚ್ಚವಾದರೆ ನಾನು ಹಿಂದಿರುಗಿ ಬರುವಾಗ ಸಲ್ಲಿಸುತ್ತೇನೆ, ' ಎಂದ. " ದರೋಡೆಗಾರರ ಕೈಗೆ ಸಿಕ್ಕಿದವನಿಗೆ ಈ ಮೂವರಲ್ಲಿ ಯಾರು ನೆರೆಯವನೆಂದು ನಿನಗೆ ತೋರುತ್ತದೆ? " ಎಂದು ಯೇಸು ಆ ಶಾಸ್ತ್ರಜ್ಞನನ್ನು ಕೇಳಿದರು. ಅದಕ್ಕೆ ಅವನು, " ದಯೆ ತೋರಿದವನೇ ನೆರೆಯವನು, " ಎಂದನು. ಆಗ ಯೇಸು, " ಹೋಗು, ನೀನೂ ಹಾಗೆಯೇ ಮಾಡು, " ಎಂದು ಹೇಳಿದರು.
08.10.23 - ‘ದೇವರ ಸಾಮ್ರಾಜ್ಯವನ್ನು ನಿಮ್ಮಿಂದ ಕಿತ್ತುಕೊಂಡು ತಕ್ಕ ಫಲಕೊಡುವ ಜನತೆಗೆ ನೀಡಲಾಗುವುದು'
ಮೊದಲನೇ ವಾಚನ: ಪ್ರವಾದಿ ಯೆಶಾಯನ ಗ್ರಂಥ 5:1-7
ಹಾಡುವೆ ನಾನೆನ್ನ ಪ್ರಿಯನಿಗೆ ಗೀತೆಯೊಂದನು ಅವನ ದ್ರಾಕ್ಷಾವನದ ಕುರಿತು ಪ್ರೇಮಗೀತೆಯನು: ಪ್ರಿಯತಮನಿಗೆ ಇತ್ತೊಂದು ದ್ರಾಕ್ಷಿಯ ತೋಟ ಫಲವತ್ತಾಗಿಹ ಗುಡ್ಡದ ಮೇಲಿನ ತೋಟ. ಆರಿಸಿ ಎಸೆದನು ಕಲ್ಲುಮುಳ್ಳುಗಳನು ಅಗೆದು ಹದಮಾಡಿದನಾತ ಗುಡ್ಡವನು. ನೆಟ್ಟನು ಒಳ್ಳೊಳ್ಳೆ ದ್ರಾಕ್ಷಿಯ ಸಸಿಗಳನು ಕಟ್ಟಿದನು ಕಾವಲಿಗಾಗಿ ಅಟ್ಟಣೆಯೊಂದನು ಕಟ್ಟಿದನು ಅದರೊಳಗೆ ಆಲೆಯೊಂದನು. ನಿರೀಕ್ಷಿಸುತ್ತಿರೆ ಆತ ಸಿಹಿದ್ರಾಕ್ಷಿ ಹಣ್ಣನು, ಬಿಟ್ಟಿತದೋ ಅವನಿಗೆ ಹುಳಿ ಹಣ್ಣನು! ಆದುದರಿಂದ ನನ್ನ ಪ್ರಿಯನು ಹೀಗೆಂದು ಕೇಳುತ್ತಾನೆ: “ಜೆರುಸಲೇಮಿನ ನಿವಾಸಿಗಳೇ, ಜುದೇಯದ ಜನರೇ, ನನಗೂ ನನ್ನ ತೋಟಕ್ಕೂ ಮಧ್ಯೆ ಇರುವ ವ್ಯಾಜ್ಯವನ್ನು ತೀರಿಸಿರಿ. ನನ್ನ ತೋಟಕ್ಕಾಗಿ ನಾನು ಮಾಡಿದ್ದಕ್ಕಿಂತಲೂ ಇನ್ನೇನು ಮಾಡಬೇಕಾಗಿತ್ತು? ಅದು ಸಿಹಿದ್ರಾಕ್ಷಿಯನ್ನು ಕೊಡುವುದೆಂದು ನಾನು ನಿರೀಕ್ಷಿಸುತ್ತಿರಲು, ಅದು ಹುಳಿ ಹಣ್ಣನ್ನು ಕೊಟ್ಟಿತೇಕೆ? ನನ್ನ ಈ ತೋಟಕ್ಕೆ ಏನು ಮಾಡುವೆನೆಂದು ಹೇಳುತ್ತೇನೆ, ಕೇಳಿ: ಕಿತ್ತೆಸೆಯುವೆನು ಅದರ ಬೇಲಿಯನು; ತುತ್ತಾಗುವುದದು ದನಕರುಗಳಿಗೆ. ಕೆಡವಿಹಾಕುವೆನು ಅದರ ಗೋಡೆಯನು; ಈಡಾಗುವುದದು ಪರರ ತುಳಿದಾಟಕ್ಕೆ. ಬಂಜರು ಭೂಮಿಯಾಗಿಸುವೆನು ಅದನ್ನು; ಕುಡಿಕತ್ತರಿಸುವರಾರೂ ಇರರು ಅದಕ್ಕೆ. ಮುಳ್ಳುಕಳೆ ಬೆಳೆಯುವುದು ಅದರೊಳಗೆ. ನೀಡುವೆನು ಆಣತಿಯೊಂದನು ಮೋಡಗಳಿಗೆ; ಸುರಿಸವು ತುಂತುರು ಮಳೆಯನ್ನೂ ಅದಕ್ಕೆ. ಇಸ್ರಯೇಲ್ ಮನೆತನವೇ ಸೇನಾಧೀಶ್ವರ ಸರ್ವೇಶ್ವರ ನೆಟ್ಟ ಆ ದ್ರಾಕ್ಷಿಯ ತೋಟ. ಜುದೇಯದ ಜನರೇ ಆತ ನಾಟಿಮಾಡಿದಾ ಸುಂದರ ಸಸಿತೋಟ. ನ್ಯಾಯನೀತಿಯನು ನಿರೀಕ್ಷಿಸಿದನಾತ ಆದರೆ ಸಿಕ್ಕಿತವನಿಗೆ ರಕ್ತಪಾತ! ಸತ್ಸಂಬಂಧವನು ಎದುರುನೋಡಿದನಾತ ಇಗೋ, ದಕ್ಕಿತವನಿಗೆ ದುಃಖಿತರ ಆರ್ತನಾದ!
ಕೀರ್ತನೆ: 80:9, 12, 13-14, 15-16, 19-20
ಶ್ಲೋಕ: ಅನುಗ್ರಹಿಸಿದನು ಪ್ರಭು ಸ್ವರ್ಗದ ದವಸಧಾನ್ಯವನು
ಎರಡನೇ ವಾಚನ: ಫಿಲಿಪ್ಪಿಯರಿಗೆ 4:6-9
ಶುಭಸಂದೇಶ: ಮತ್ತಾಯ 21:33-43