ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

12.01.23 - “ತಾವು ಮನಸ್ಸು ಮಾಡಿದ್ದಲ್ಲಿ ನನ್ನನ್ನು ಗುಣ ಮಾಡಬಲ್ಲಿರಿ,”

ಹಿಬ್ರಿಯರಿಗೆ ಬರೆದ ಪತ್ರದಿ೦ದ ವಾಚನ 3:7-14


ಆದಕಾರಣ ಪವಿತ್ರಾತ್ಮ ಹೇಳುವ ಪ್ರಕಾರ: “ದೇವರ ದನಿಯನು ಕೇಳುವಿರಾದರೆ ನೀವಿಂದು ನಿಮ್ಮ ಪೂರ್ವಜರಂತೆ ಕಲ್ಲಾಗಿಸದಿರಿ ಹೃದಯವನು. ಮರುಭೂಮಿಯಲ್ಲವರು ದೇವರನು ಪರೀಕ್ಷಿಸಿದರು ಆತನ ವಿರುದ್ಧ ಅಲ್ಲೇ ದಂಗೆ ಎದ್ದರು. ಎಂದೇ ದೇವರಿಂತೆಂದರು: ಮರುಭೂಮಿಯಲಿ ಅವರೆನ್ನನು ಕೆಣಕಿದರು; ನಲವತ್ತು ವರುಷ ನಾನೆಸಗಿದ ಮಹತ್ಕಾರ್ಯಗಳನು ಕಂಡರಾದರೂ ಎನ್ನ ಕೆಣಕಿ ಪರೀಕ್ಷಿಸಿದರು. ಎಂತಲೇ ಆ ಜನರ ವಿರುದ್ಧ ಕೆರಳಿ ಇಂತೆಂದನು: ಹಾದಿ ತಪ್ಪಿದ ಹೃದಯಿಗಳು ಇವರೆಂದಿಗೂ, ಗ್ರಹಿಸಿಕೊಳ್ಳರಿವರು ಎನ್ನ ಮಾರ್ಗವನು ಸೇರರು ಎನ್ನ ವಿಶ್ರಾಂತಿಯ ನೆಲೆಯನು ಇವರೆಂದಿಗೂ ಎಂದು ಸಿಟ್ಟುಗೊಂಡು ಶಪಥ ಮಾಡಿದೆನು.” ಸಹೋದರರೇ, ಜೀವಸ್ವರೂಪರಾದ ದೇವರನ್ನು ಬಿಟ್ಟಗಲುವ ಕೆಟ್ಟಬುದ್ಧಿಯೂ ಅವಿಶ್ವಾಸವೂ ನಿಮ್ಮಲ್ಲಿ ಯಾರಿಗೂ ಇರದಂತೆ ಎಚ್ಚರಿಕೆಯಾಗಿರಿ. ನಿಮ್ಮಲ್ಲಿ ಯಾರೂ ಪಾಪದಿಂದ ಮೋಸಹೋಗಿ ಕಠಿಣರಾಗದಂತೆ “ಇಂದು” ಎನ್ನುವ ಕಾಲವು ಇರುವ ತನಕ ಪ್ರತಿನಿತ್ಯವು ಒಬ್ಬರನ್ನೊಬ್ಬರು ಎಚ್ಚರಿಸಿರಿ. ನಾವೆಲ್ಲರೂ ಕ್ರಿಸ್ತಯೇಸುವಿನೊಡನೆ ಸಹಬಾಧ್ಯರು; ಆದರೆ, ಪ್ರಾರಂಭದಲ್ಲಿ ನಮಗಿದ್ದ ನಂಬಿಕೆ-ನಿರೀಕ್ಷೆಯನ್ನು ಕೊನೆಯವರೆಗೂ ಸ್ಥಿರವಾಗಿ ಇರಿಸಿಕೊಳ್ಳಬೇಕು. 

ಕೀರ್ತನೆ: 95:6-7, 8-9, 10-11

ಶ್ಲೋಕ: ಆತನ ಕರೆಗೆ ಕಿವಿಗೊಟ್ಟಿರೆನಿತೋ ಒಳಿತು ನೀವೆಂದೇ.  

ಬನ್ನಿ ಆರಾಧಿಸೋಣ ಬನ್ನಿ, ಬಾಗಿ ವಂದಿಸೋಣ I 
ನಮ್ಮನು ಸೃಜಿಸಿದಾ ಪ್ರಭುವಿಗೆ ಸಾಷ್ಟಾಂಗವೆರಗೋಣ II 
ಆತನೆಮ್ಮ ದೇವರು, ನಾವು ಆತನ ಕೈಮಂದೆ I

ಆತನಿಂದಲೇ ಪಾಲನೆಪೋಷಣೆ ಪಡೆದ ಜನತೆ II 
ಆತನ ಕರೆಗೆ ಕಿವಿಗೊಟ್ಟರೆನಿತೋ ಒಳ್ಳಿತು ನೀವಿಂದೇ I 
ಕಲ್ಲಾಗಿಸಿಕೊಳ್ಳದಿರಿ ಹೃದಯವನು ನಿಮ್ಮ ಪೂರ್ವಜರಂತೆ I

ಮೆರಿಬಾದಲಿ, ಮಸ್ಸಾ ಮರುಭೂಮಿಯಲಿ ಅವರು ಮಾಡಿದಂತೆ II 
ನೋಡಿದರಾದರೂ ನನ್ನ ಮಹತ್ಕಾರ್ಯಗಳನು I 
ಅಲ್ಲವರು ಕೆಣಕಿದರು, ಪರಿಶೋಧಿಸಿದರು ನನ್ನನು II

ನಲವತ್ತು ವರುಷ ಆ ಪೀಳಿಗೆಯ ಬಗ್ಗೆ ನಾ ಬೇಸರಗೊಂಡೆ I 
‘ತಪ್ಪುಮನಸ್ಕರು ಇವರು, ನನ್ನ ಮಾರ್ಗವನು ಮೆಚ್ಚರಿವರು’ ಎಂದುಕೊಂಡೆ II
ಎಂತಲೆ ಸೇರರಿವರು ನನ್ನ ವಿಶ್ರಾಂತಿ ನೆಲೆ I
ಎಂದು ಸಿಟ್ಟಿನಿಂದ ಕೆರಳಿ ನಾ ಶಪಥಮಾಡಿದೆ II

ಮಾರ್ಕನು ಬರೆದ ಶುಭಸ೦ದೇಶ 1:40-45 


ಆ ಕಾಲದಲ್ಲಿ ಕುಷ್ಠರೋಗಿಯೊಬ್ಬನು ಯೇಸುಸ್ವಾಮಿಯ ಬಳಿಗೆ ಬಂದು, ಮೊಣಕಾಲೂರಿ, “ತಾವು ಮನಸ್ಸುಮಾಡಿದ್ದಲ್ಲಿ ನನ್ನನ್ನು ಗುಣಮಾಡಬಲ್ಲಿರಿ,” ಎಂದು ದೈನ್ಯದಿಂದ ಬೇಡಿಕೊಂಡನು. ಯೇಸುವಿನ ಮನ ಕರಗಿತು. ಅವರು ಕೈಚಾಚಿ, ಕುಷ್ಠರೋಗಿಯನ್ನು ಮುಟ್ಟಿ, “ಖಂಡಿತವಾಗಿ ನನಗೆ ಮನಸ್ಸಿದೆ, ನಿನಗೆ ಗುಣವಾಗಲಿ,” ಎಂದರು. ತಕ್ಷಣ ಅವನ ಕುಷ್ಠವು ಮಾಯವಾಯಿತು. ಅವನು ಗುಣಹೊಂದಿದನು. ಯೇಸು ಅವನಿಗೆ, “ಎಚ್ಚರಿಕೆ! ನೀನು ಗುಣಹೊಂದಿರುವುದನ್ನು ಯಾರಿಗೂ ಹೇಳಕೂಡದು. ಆದರೆ ನೆಟ್ಟಗೆ ಯಾಜಕನ ಬಳಿಗೆ ಹೋಗು; ಅವನು ನಿನ್ನನ್ನು ಪರೀಕ್ಷಿಸಿ ನೋಡಲಿ. ಅನಂತರ ಮೋಶೆ ನಿಯಮಿಸಿರುವ ಶುದ್ಧೀಕರಣ ವಿಧಿಗಳನ್ನು ಅನುಸರಿಸು. ಇದು ಜನರಿಗೆ ಸಾಕ್ಷಿಯಾಗಿರಲಿ,” ಎಂದು ಎಚ್ಚರಿಸಿ ಅವನನ್ನು ಕೂಡಲೇ ಕಳುಹಿಸಿಬಿಟ್ಟರು. ಆದರೆ ಅವನು ಹೋಗಿ ಈ ಸಮಾಚಾರವನ್ನು ಎಲ್ಲೆಲ್ಲೂ ಸಾರಿದನು. ಈ ಕಾರಣ ಯೇಸು ಬಹಿರಂಗವಾಗಿ ಯಾವ ಪಟ್ಟಣದೊಳಕ್ಕೂ ಹೋಗಲು ಆಗಲಿಲ್ಲ. ಆದುದರಿಂದ ನಿರ್ಜನ ಪ್ರದೇಶಗಳಲ್ಲೇ ಇರತೊಡಗಿದರು. ಆದರೂ ಜನರು ನಾಲ್ದೆಸೆಗಳಿಂದ ಅವರು ಇದ್ದೆಡೆಗೆ ಬರುತ್ತಲೇ ಇದ್ದರು. 

11.01.23 - “ಅಕ್ಕಪಕ್ಕದ ಊರುಗಳಿಗೆ ಹೋಗೋಣ. ಅಲ್ಲೂ ನಾನು ಶುಭಸಂದೇಶವನ್ನು ಸಾರಬೇಕು"

ಹಿಬ್ರಿಯರಿಗೆ ಬರೆದ ಪತ್ರದಿ೦ದ ವಾಚನ 2:14-18

ಸಹೋದರರೇ, ಮಕ್ಕಳು ರಕ್ತಮಾಂಸಧಾರಿ-ಗಳಾಗಿರುವುದರಿಂದ ಯೇಸುವು ಅವರಂತೆ ರಕ್ತಮಾಂಸಧಾರಿಯಾದರು. ಹೀಗೆ ಮರಣಾಧಿಕಾರಿಯಾಗಿದ್ದ ಸೈತಾನನನ್ನು ತಮ್ಮ ಮರಣದಿಂದಲೇ ಸೋಲಿಸಲು ಮತ್ತು ಮರಣಭಯದ ನಿಮಿತ್ತ ತಮ್ಮ ಜೀವನದುದ್ದಕ್ಕೂ ದಾಸ್ಯದಲ್ಲಿದ್ದವರನ್ನು ಬಿಡುಗಡೆಮಾಡಲು ಅವರು ಮನುಷ್ಯರಾದರು. ಅವರು ಉದ್ಧಾರ ಮಾಡಬಂದುದು ಖಂಡಿತವಾಗಿ ದೇವದೂತರನ್ನಲ್ಲ, ಅಬ್ರಹಾಮನ ಸಂತತಿಯನ್ನು. ಆದಕಾರಣ, ಎಲ್ಲದರಲ್ಲೂ ತಮ್ಮ ಸಹೋದರರಿಗೆ ಸಮಾನರಾಗಬೇಕಾಗಿತ್ತು; ಜನರ ಪಾಪನಿವಾರಣೆಗಾಗಿ ದೇವರ ಕಾರ್ಯಗಳನ್ನು ನಿರ್ವಹಿಸುವ ದಯಾಮಯನೂ ನಂಬಿಕಸ್ಥನೂ ಆದ ಪ್ರಧಾನ ಯಾಜಕನಾಗಬೇಕಾಗಿತ್ತು. ಸ್ವತಃ ತಾವೇ ಶೋಧನೆಗೊಳಗಾಗಿ ಯಾತನೆಯನ್ನು ಅನುಭವಿಸಿದ್ದರಿಂದ ಶೋಧನೆಗೊಳಗಾಗುವವರಿಗೆ ನೆರವಾಗಲು ಯೇಸು ಸಮರ್ಥರಾದರು. 

ಕೀರ್ತನೆ: 105:1-2, 3-4, 6-7, 8-9 
ಶ್ಲೋಕ: ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು. 

ಸಲ್ಲಿಸಿ ಪ್ರಭುವಿಗೆ ಕೃತಜ್ಞತಾಸ್ತೋತ್ರವನು I
ಮಾಡಿರಿ ಆತನ ನಾಮಸ್ಮರಣೆಯನು I
ಸಾರಿರಿ ಜಗಕೆ ಆತನ ಸತ್ಕಾರ್ಯಗಳನು II
ಹಾಡಿ ಪಾಡಿ ಹೊಗಳಿರಿ ಪ್ರಭುವನು I

ಧ್ಯಾನಿಸಿ ನೀವು ಆತನ ಪವಾಡಗಳನು II
ಹೆಮ್ಮೆಪಡಿ, ನೆನೆದಾತನ ಶ್ರೀನಾಮ I
ಹಿಗ್ಗಲಿ ಹೃದಯ, ಕೋರಿ ಆತನ ದರ್ಶನ II

ಅರಸಿರಿ ಪ್ರಭುವನೂ ಆತನ ಶಕ್ತಿಯನೂ I
ಅಪೇಕ್ಷಿಸಿ ನಿತ್ಯವೂ ಆತನ ದರ್ಶನವನು II
ನೆನೆಯಿರಿ ಆತನದ್ಭುತಗಳನು, ಮಹತ್ಕಾರ್ಯಗಳನು I
ಆತನ ವದನ ವಿಧಿಸಿದಾ ನ್ಯಾಯನಿರ್ಣಯಗಳನು II

ಪ್ರಭು ನಮ್ಮ ದೇವನೆಂಬುದು ಶ್ರುತ I
ಆತನಿತ್ತ ತೀರ್ಪು ಇದೋ ವಿಶ್ವವ್ಯಾಪ್ತ II
ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು I

ಸಾವಿರಾರು ತಲೆಗಳವರೆಗೂ ತನ್ನೊಪ್ಪಂದವನು II
ಅಬ್ರಹಾಮನೊಡನೆ ಮಾಡಿಕೊಂಡ ಒಡಂಬಡಿಕೆಯನು I
ಇಸಾಕನಿಗೆ ಆಣೆಯಿಟ್ಟು ಆತ ಹೇಳಿದುದನು II

ಮಾರ್ಕನು ಬರೆದ ಶುಭಸ೦ದೇಶ 1:29-39 


ಆ ಕಾಲದಲ್ಲಿ ಯೇಸುಸ್ವಾಮಿ ಪ್ರಾರ್ಥನಾಮಂದಿರದಿಂದ ಹೊರಟು ಯಕೋಬ ಮತ್ತು ಯೊವಾನ್ನನ ಸಂಗಡ ಸಿಮೋನ ಹಾಗೂ ಅಂದ್ರೆಯನ ಮನೆಗೆ ಹೋದರು. ಸಿಮೋನನ ಅತ್ತೆ ಜ್ವರದಿಂದ ಮಲಗಿದ್ದಳು. ಇದನ್ನು ಯೇಸುವಿಗೆ ತಿಳಿಸಿದರು. ಯೇಸು ಆಕೆಯ ಬಳಿಗೆ ಹೋಗಿ ಕೈಹಿಡಿದು ಎಬ್ಬಿಸಿದರು. ಜ್ವರ ಬಿಟ್ಟುಹೋಯಿತು. ಆಕೆ ಅವರೆಲ್ಲರನ್ನು ಸತ್ಕರಿಸಿದಳು. ಸಂಜೆ ಸೂರ್ಯ ಮುಳುಗಿದ ಮೇಲೆ ಜನರು ರೋಗಿಗಳನ್ನೂ ದೆವ್ವಹಿಡಿದವರನ್ನೂ ಯೇಸುವಿನ ಬಳಿಗೆ ಕರೆತಂದರು. ಊರಿಗೆ ಊರೇ ಆ ಮನೆಯ ಬಾಗಿಲಲ್ಲಿ ನೆರೆಯಿತು. ನಾನಾ ರೋಗಗಳಿಂದ ನರಳುತ್ತಿದ್ದವರನ್ನು ಯೇಸು ಗುಣಪಡಿಸಿದರು. ದೆವ್ವ ಹಿಡಿದವರಿಂದ ದೆವ್ವ ಬಿಡಿಸಿದರು. ತಾವು ಯಾರೆಂಬುದನ್ನು ದೆವ್ವಗಳು ಅರಿತಿದ್ದುದರಿಂದ ಯೇಸು ಅವುಗಳಿಗೆ ಮಾತನಾಡಲು ಅವಕಾಶಕೊಡಲಿಲ್ಲ.ಮುಂಜಾನೆ ಬೆಳಕುಹರಿಯುವ ಮುನ್ನ ಯೇಸುಸ್ವಾಮಿ ಎದ್ದು ಏಕಾಂತ ಪ್ರದೇಶಕ್ಕೆ ಹೋಗಿ ಪ್ರಾರ್ಥನೆಮಾಡುತ್ತಿದ್ದರು. ಇತ್ತ, ಸಿಮೋನನೂ ಅವನ ಜೊತೆಗಾರರೂ ಯೇಸುವನ್ನು ಹುಡುಕಿಕೊಂಡು ಹೋದರು. ಅವರನ್ನು ಕಂಡಕೂಡಲೇ, “ಎಲ್ಲರು ತಮ್ಮನ್ನೇ ಹುಡುಕುತ್ತಿದ್ದಾರೆ,” ಎಂದು ತಿಳಿಸಿದರು. ಅದಕ್ಕೆ ಯೇಸು, “ಅಕ್ಕಪಕ್ಕದ ಊರುಗಳಿಗೆ ಹೋಗೋಣ. ಅಲ್ಲೂ ನಾನು ಶುಭಸಂದೇಶವನ್ನು ಸಾರಬೇಕು. ನಾನು ಬಂದಿರುವುದು ಈ ಉದ್ದೇಶಕ್ಕಾಗಿಯೇ,” ಎಂದರು. ಅನಂತರ ಯೇಸು ಗಲಿಲೇಯ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿ ಅಲ್ಲಿನ ಪ್ರಾರ್ಥನಾಮಂದಿರಗಳಲ್ಲಿ ಪ್ರಬೋಧಿಸುತ್ತಾ ದೆವ್ವಗಳನ್ನು ಬಿಡಿಸುತ್ತಾ ಬಂದರು. 

10.01.23 - “ಇದೇನು ಹೊಸ ಬೋಧನೆ!? ಈತ ದೆವ್ವಗಳಿಗೆ ಕೂಡ ಅಧಿಕಾರದಿಂದ ಆಜ್ಞಾಪಿಸುತ್ತಾನೆ;"

ಹಿಬ್ರಿಯರಿಗೆ ಬರೆದ ಪತ್ರದಿ೦ದ ವಾಚನ 2:5-12 

ಸಹೋದರರೇ, ನಾವು ಪ್ರಸ್ತಾಪಿಸುತ್ತಿರುವ ನೂತನ ಸಾಮ್ರಾಜ್ಯವನ್ನು ದೇವರು ತಮ್ಮ ದೂತರಿಗೆ ಅಧೀನಪಡಿಸಲಿಲ್ಲ. ಅದಕ್ಕೆ ಬದಲಾಗಿ, ಪವಿತ್ರಗ್ರಂಥದಲ್ಲಿ ಒಂದೆಡೆ ಹೀಗೆಂದು ಸ್ಪಷ್ಟವಾಗಿ ಹೇಳಲಾಗಿದೆ:  “ಓ ದೇವಾ,ಹುಲುಮಾನವನೆಷ್ಟರವನು ನೀನವನ ಗಮನಿಸಲು? ನರಪುತ್ರನು ಎನಿತರವನು ನೀನವನ ಅರಸಿಬರಲು?ದೇವದೂತರಿಗಿಂತಲೂ ಆತನನು ತುಸುವೇ ತಗ್ಗಿಸಿದೆ ಘನಗೌರವವನು, ಸಿರಿಮಹಿಮೆಯನು ಮುಕುಟವಾಗಿ ಮುಡಿಸಿದೆ; ಆತನಿಗೆ ನೀನೆಲ್ಲವನು ಅಧೀನವಾಗಿಸಿದೆ.”ಹೀಗೆ ದೇವರು ಎಲ್ಲವನ್ನು ಆತನಿಗೆ ಅಧೀನಪಡಿಸಿರುವುದರಿಂದ ಆತನಿಗೆ ಅಧೀನವಲ್ಲದ್ದು ಏನೂ ಇಲ್ಲವೆಂದಾಯಿತು. ಆದರೂ ಸದ್ಯಕ್ಕೆ ಎಲ್ಲವೂ ಆತನಿಗೆ ಅಧೀನವಾಗಿರುವುದನ್ನು ನಾವು ಕಾಣುತ್ತಿಲ್ಲ. ದೇವದೂತರಿಗಿಂತ ಕೊಂಚಕಾಲವೇ ತುಸು ತಗ್ಗಿಸಲಾದ ಒಬ್ಬರನ್ನು, ಅಂದರೆ ಯೇಸುವನ್ನು ಮಾತ್ರ ನಾವು ಕಾಣುತ್ತೇವೆ. ಇವರು ಯಾತನಾ ಮರಣವನ್ನು ಅನುಭವಿಸಿದ್ದರಿಂದ ‘ಘನಗೌರವವನ್ನೂ ಸಿರಿಮಹಿಮೆಯನ್ನೂ ಮುಕುಟವಾಗಿ’ ಪಡೆದುದನ್ನು ನಾವು ಕಾಣುತ್ತೇವೆ. ದೈವಾನುಗ್ರಹದಿಂದ ಎಲ್ಲಾ ಮಾನವರ ಕಲ್ಯಾಣಕ್ಕಾಗಿ ಅವರು ಸಾವನ್ನು ಅನುಭವಿಸಬೇಕಾಗಿತ್ತು. ಸಮಸ್ತವನ್ನೂ ಸೃಷ್ಟಿಸಿ ಪರಿಪಾಲಿಸಿಕೊಂಡುಬರುವ ದೇವರು ತಮ್ಮ ಮಹಿಮೆಯಲ್ಲಿ ಪಾಲುಗೊಳ್ಳಲು ಮಕ್ಕಳನೇಕರನ್ನು ಕರೆತರುವಂತೆ ಉದ್ಧಾರ ಪ್ರವರ್ತಕರಾದ ಯೇಸುವನ್ನು ಹಿಂಸೆಬಾಧೆಗಳ ಮೂಲಕ ಪರಿಪೂರ್ಣವಾಗಿಸಿದ್ದು ಯುಕ್ತವೇ ಸರಿ. ಪವಿತ್ರಗೊಳಿಸುವವನಿಗೂ ಪವಿತ್ರರಾಗುವವರಿಗೂ ಒಬ್ಬನೇ ತಂದೆ. ಈ ಕಾರಣ, ಪವಿತ್ರಗೊಳಿಸುವ ಯೇಸು, ಪವಿತ್ರರಾಗುವವರನ್ನು ‘ಸಹೋದರರು’ ಎಂದು ಕರೆಯಲು ನಾಚಿಕೆಪಡಲಿಲ್ಲ. “ಸಾರುವೆನು ನನ್ನ ಸೋದರರಿಗೆ ನಿನ್ನ ಮಹಿಮೆಯನು ಮಾಡುವೆನು ಸಭಾಮಧ್ಯೆ ನಿನ್ನ ಗುಣಗಾನವನು,” ಎಂದೂ ಹೇಳುತ್ತಾರೆ. 

ಕೀರ್ತನೆ: 8:2, 5, 6-7, 8-9 
ಶ್ಲೋಕ: ಪ್ರಭೂ, ಮಾನವನನ್ನು ಒಡೆಯನಾಸಿದೆ ನಿನ್ನಯ ಕರಕೃತಿಗಳಿಗೆ. 

ವಿರೋಧಿಗಳ ಬಾಯನು ಮುಚ್ಚಿಸಿದೆ ಬಾಲ ಬಾಲೆಯರ ಬಾಯಿಂದಲೆ I 
ಹಗೆಗಳನು ದುರ್ಗದಂತೆ ತಡೆದೆ ಮೊಲೆಗೂಸುಗಳ ನಾಲಿಗೆಯಿಂದಲೆ II 
ಆದರೆ ದೇವದೂತರಿಗಿಂತ ಕಿಂಚಿತ್ತೆ ಕೀಳಾಗಿಸಿದೆ ಮನುಜನನು I
ಮುಡಿಸಿದೆ ಮುಕುಟವಾಗವನಿಗೆ ಘನಮಾನವನು, ಸಿರಿಹಿರಿಮೆಯನು II

ಒಡೆಯನಾಗಿಸಿದೆ ನಿನ್ನಯ ಕರಕೃತಿಗಳಿಗೆ I 
ಒಳಪಡಿಸಿದೆ ಸಕಲವನು ಅವನ ಪಾದದಡಿಗೆ II 
ಕುರಿಗಳನು, ಕರುಗಳನು, ಕಾಡುಮೃಗಗಳನು I 

ಗರಿಗಳನು, ಮೀನುಗಳನು, ಜಲಚರಗಳನು I
ಕರಗತ ಮಾಡಿದೆ ನೀ ಅವನಿಗೆಲ್ಲವನು II 
ಪ್ರಭು, ಓ ಎಮ್ಮ ಪ್ರಭು, ನಿನ್ನ ನಾಮಾಮೃತ I 
ಬೆಳಗಿದೆ ತನ್ನ ಮಹಿಮೆಯನು ಭುವನ ಪರ್ಯಂತ II

ಅಲ್ಲೆಲೂಯ, ಅಲ್ಲೆಲೂಯ!
ನಿನ್ನ  ಮಾರ್ಗವನು  ಪ್ರಭೂ,  ನನಗೆ  ತೋರಿಸು | ನೀನೊಪ್ಪುವ  ಪಥದಲಿ,  ನಾ  ನಡೆಯ  ಕಲಿಸು ||
ಅಲ್ಲೆಲೂಯ!

ಮಾರ್ಕನು ಬರೆದ ಶುಭಸ೦ದೇಶ 1:21-28 


ಆ ಕಾಲದಲ್ಲಿ ಯೇಸು ಶಿಷ್ಯರೊಂದಿಗೆ  ಕಫೆರ್ನವುಮ್ ಎಂಬ ಊರನ್ನು ಸೇರಿದರು. ಸಬ್ಬತ್‍ದಿನ ಬಂದ ಕೂಡಲೇ ಯೇಸುಸ್ವಾಮಿ ಪ್ರಾರ್ಥನಾಮಂದಿರಕ್ಕೆ ಹೋಗಿ ಬೋಧಿಸತೊಡಗಿದರು. ಅವರ ಉಪದೇಶವನ್ನು ಕೇಳಿ ಜನರು ಬೆರಗಾದರು. ಏಕೆಂದರೆ ಯೇಸು, ಧರ್ಮಶಾಸ್ತ್ರಿಗಳಂತೆ ಬೋಧಿಸದೆ ಅಧಿಕಾರವಾಣಿಯಿಂದ ಪ್ರಬೋಧಿಸುತ್ತಿದ್ದರು. ಅಲ್ಲಿ ದೆವ್ವ ಹಿಡಿದ ಒಬ್ಬನಿದ್ದನು. ಅವನು, “ನಜರೇತಿನ ಯೇಸುವೇ, ನಿಮಗೇಕೆ ನಮ್ಮ ಗೊಡವೆ? ನೀವು ನಮ್ಮ ವಿನಾಶಕ್ಕಾಗಿ ಬಂದವರೇನು? ನೀವು ಯಾರೆಂದು ನನಗೆ ಗೊತ್ತು. ದೇವರಿಂದ ಬಂದ ಪರಮಪೂಜ್ಯರು ನೀವು,” ಎಂದು ಕಿರುಚಿದನು. ಆದರೆ ಯೇಸುಸ್ವಾಮಿ ಅವನನ್ನು ಗದರಿಸಿ, “ಸುಮ್ಮನಿರು, ಇವನನ್ನು ಬಿಟ್ಟು ತೊಲಗು,” ಎಂದು ಆ ದೆವ್ವಕ್ಕೆ ಆಜ್ಞಾಪಿಸಿದರು. ದೆವ್ವವು ಆ ಮನುಷ್ಯನನ್ನು ಒದ್ದಾಡಿಸಿ, ಗಟ್ಟಿಯಾಗಿ ಚೀರುತ್ತಾ ಅವನನ್ನು ಬಿಟ್ಟುಹೋಯಿತು. ಜನರೆಲ್ಲರೂ ಆಶ್ಚರ್ಯಚಕಿತರಾದರು. “ಇದೇನು ಹೊಸ ಬೋಧನೆ!? ಈತ ದೆವ್ವಗಳಿಗೆ ಕೂಡ ಅಧಿಕಾರದಿಂದ ಆಜ್ಞಾಪಿಸುತ್ತಾನೆ; ಅವು ಈತ ಹೇಳಿದ ಹಾಗೆ ಕೇಳುತ್ತವೆಯಲ್ಲ!” ಎಂದು ಪರಸ್ಪರ ಮಾತಾಡಿಕೊಂಡರು. ಕೂಡಲೇ ಗಲಿಲೇಯ ಪ್ರಾಂತ್ಯದ ಎಲ್ಲೆಡೆಗೂ ಯೇಸುವಿನ ಸಮಾಚಾರ ಹಬ್ಬಿ ಹರಡಿತು. 

09.01.23 - "ಇವನೇ ನನ್ನ ಪುತ್ರ; ನನಗೆ ಪರಮ ಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು,"

ಮೊದಲನೇ ವಾಚನ: ಯೆಶಾಯ 42:1-4, 6-7


ಇಗೋ, ನನ್ನ ದಾಸನು! ನನ್ನ ಆಧಾರ ಪಡೆದವನು. ನನ್ನಿಂದ ಆಯ್ಕೆಯಾದವನು, ನನಗೆ ಪರಮ ಪ್ರಿಯನು. ನೆಲೆಗೊಳಿಸಿರುವೆ ಇವನಲ್ಲಿ ನನ್ನ ಆತ್ಮವನು ಅನ್ಯ ರಾಷ್ಟ್ರಗಳಿಗೆ ಸಾರುವನಿವನು ಸದ್ದರ್ಮವನು. ಆತ ಕೂಗಾಡುವಂಥವನಲ್ಲ, ಕಿರಿಚಾಡುವಂಥವನಲ್ಲ, ಹಾದಿಬೀದಿಗಳಲ್ಲಿ ಅವನ ಧ್ವನಿ ಕೇಳಿಸುವುದೇ ಇಲ್ಲ. ಮುರಿಯುವುದಿಲ್ಲ ಆತ, ಜಜ್ಜಿದ ದಂಟನು ನಂದಿಸುವುದಿಲ್ಲ ಆತ, ಕಳೆಗುಂದಿದ ದೀಪವನು ತಪ್ಪದೆ ಸಿದ್ದಿಗೆ ತರುವನಾತ ಸದ್ದರ್ಮವನು. ಎಡವಿಬೀಳನವನು, ಎದೆಗುಂದನವನು, ಜಗದೊಳು ಸ್ಥಾಪಿಸುವ ತನಕ ಸದ್ದರ್ಮವನು, ಎದುರು ನೋಡುವುವು ದ್ವೀಪದ್ವೀಪಾಂತರಗಳು ಆತನ ಧರ್ಮಶಾಸ್ತ್ರವನು. ಸರ್ವೇಶ್ವರಸ್ವಾಮಿಯಾದ ನಾನು ಕೈ ಹಿಡಿದು ಕಾದಿರುಸುವೆನು ನಿನ್ನನು, ಕರೆದಿಹೆನು ನಿನ್ನನು ಸದ್ದರ್ಮಸಾಧನೆಗಾಗಿ, ಇತ್ತಿರುವೆನು ನಿನ್ನನು ಜನರಿಗೆ ಒಡಂಬಡಿಕೆಯಾಗಿ, ನೇಮಿಸಿರುವೆ ನಿನ್ನನು ರಾಷ್ಟ್ರಗಳಿಗೆ ಬೆಳಕಾಗಿ. ಕೊಡುವೆ ನೀನು ಕಣ್ಣನ್ನು ಕುರುಡರಿಗೆ, ತರುವೆ ಬಂಧಿಗಳನ್ನು ಸೆರೆಯಿಂದ ಹೊರಗೆ ಕತ್ತಲೆಯ ಕಾರಾಗೃಹದಿಂದ ಅವರನ್ನು ಬೆಳಕಿಗೆ.

ಕೀರ್ತನೆ: 9: 1-2, 3-4, 3, 9-10
ಶ್ಲೋಕ: ದಯಪಾಲಿಸಲಿ ತನ್ನ ಪ್ರಜೆಗೆ ಸುಕ್ಷೇಮವನು.

ಎರಡನೆಯ ವಾಚನ: ಪ್ರೇಷಿತರ ಕಾರ್ಯಕಲಾಪಗಳು 10:34-38


ಆಗ ಪೇತ್ರನು ಹೀಗೆಂದು ಉಪದೇಶ ಮಾಡಿದನು: "ದೇವರು ಪಕ್ಷಪಾತಿಯಲ್ಲ. ಈ ವಿಷಯ ನನಗೆ ಈಗ ಮನದಟ್ಟಾಗಿದೆ. ದೇವರಿಗೆ ಭಯಪಟ್ಟು ಸತ್ಪುರುಷನಾಗಿ ಬಾಳುವವನು ಯಾವ ಜನಾಂಗದನೇ ಆಗಿರಲಿ, ಅವನು ಅವರ ಮೆಚ್ಚುಗೆಗೆ ಪಾತ್ರನಾಗುತ್ತಾನೆ. ಸಮಸ್ತ ಮಾನವಕೋಟಿಯ ಪ್ರಭುವಾದ ಯೇಸುಕ್ರಿಸ್ತರ ಮುಖಾಂತರ ಶಾಂತಿ ಲಭಿಸುತ್ತದೆ ಎಂಬ ಶುಭಸಂದೇಶವನ್ನು ದೇವರು ಇಸ್ರಯೇಲ್ ಜನಾಂಗಕ್ಕೆ ಸಾರಿದರು. ಈ ವಿಷಯ ನಿಮಗೆ ತಿಳಿಸಿದೆ. ಇತ್ತೀಚೆಗೆ ಜುದೇಯ ನಾಡಿನಾದ್ಯಾಂತ ನಡೆದ ಘಟನೆಗಳು ನಿಮಗೆ ತಿಳಿದೇ ಇರಬೇಕು. ಇವು ನಜ಼ರೇತಿನ ಯೇಸುವಿಗೆ ಸಂಬಂಧಪಟ್ಟ ವಿಷಯಗಳು. ಸ್ನಾನದೀಕ್ಷೆಯನ್ನು ಮಾಡಿಸಿಕೊಳ್ಳಬೇಕೆಂದು ಯೊವಾನ್ನನು ಬೋಧಿಸಿದ ನಂತರ, ಯೇಸು ತಮ್ಮ ಸೇವಾ ವೃತ್ತಿಯನ್ನು ಗಲಿಲೇಯದಲ್ಲಿ ಪ್ರಾರಂಭಿಸಿದರು. ಅವರು ಪವಿತ್ರಾತ್ಮರಿಂದಲೂ ದೈವ ಶಕ್ತಿಯಿಂದಲೂ ಅಭಿಷಿಕ್ತರಾಗಿದ್ದರು. ದೇವರು ತಮ್ಮೊಡನೆ ಇದ್ದುದರಿಂದ ಅವರು ಎಲ್ಲೆಡೆಯಲ್ಲೂ ಒಳಿತನ್ನು ಮಾಡುತ್ತಾ, ಪಿಶಾಚಿಪೀಡಿತರಾದವರನ್ನು ಸ್ವಸ್ಥ ಪಡಿಸುತ್ತಾ ಸಂಚರಿಸಿದರು. 

ಶುಭಸಂದೇಶ: ಮತ್ತಾಯ 3: 13-17



ಯೊವಾನ್ನನಿಂದ ಸ್ನಾನ ದೀಕ್ಷೆ ಪಡೆಯಲು ಯೇಸುಸ್ವಾಮಿ ಗಲಿಲೇಯದಿಂದ ಹೊರಟು ಜೋರ್ಡನ್ ನದಿಯ ಬಳಿಗೆ ಬಂದರು. ಯೊವಾನ್ನನು ಅವರನ್ನು ತಡೆಯಲೆತ್ನಿಸಿದನು. "ನಾನೇ ನಿಮ್ಮಿಂದ ದೀಕ್ಷಾಸ್ನಾನ ಪಡೆಯಬೇಕಾಗಿರುವಲ್ಲಿ ನೀವು ನನ್ನ ಬಳಿಗೆ ಬರುವುದೇ" ಎಂದನು. ಆದರೇ ಯೇಸು, "ಸದ್ಯಕ್ಕೆ ತಡೆಯದಿರು; ನಾವು ದೈವನಿಯಮಕ್ಕೆ ತಲೆಬಾಗುವುದು ಒಳಿತು," ಎಂದರು. ಯೊವಾನ್ನನು ಅದಕ್ಕೆ ಸಮ್ಮತಿಸಿದನು. ಯೇಸು ದೀಕ್ಷಾಸ್ನಾನ ಪಡೆದು ನೀರಿನಿಂದ ಮೇಲಕ್ಕೆ ಬಂದದ್ದೇ ಆಕಾಶವು ಫಕ್ಕನೆ ತೆರೆಯಿತು; ದೇವರಾತ್ಮ ಪಾರಿವಾಳದ ರೂಪದಲ್ಲಿ ತಮ್ಮ ಮೇಲೆ ಇಳಿದು ಬಂದು ನೆಲೆಸುವುದನ್ನು ಕಂಡರು. ಆಗ ಆಕಾಶದಿಂದ, "ಇವನೇ ನನ್ನ ಪುತ್ರ; ನನಗೆ ಪರಮ ಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು," ಎಂಬ ದೈವವಾಣಿ ಕೇಳಿಸಿತು.

08.01.23 - "ಇಸ್ರಯೇಲನ್ನು ಪರಿಪಾಲಿಸುವವನು ನಿನ್ನಿಂದಲೇ ಉದಯಿಸಲಿರುವನು"

ಮೊದಲನೇ ವಾಚನ: ಯೆಶಾಯ  60:1-6 

ನಿನಗೆ ಬೆಳಕು ಬಂದಿದೆ ಜೆರುಸಲೇಮೇ, ಏಳು, ಪ್ರಕಾಶಿಸು; ನಿನ್ನ ಮೇಲೆ ಉದಯಿಸಿದೆ ಸರ್ವೇಶ್ವರನ ತೇಜಸ್ಸು. ಇಗೋ ಜಗತ್ತನು ಮುತ್ತಿದೆ ಕತ್ತಲು, ಜನಾಂಗಗಳನು ಆವರಿಸಿದೆ ಕಾರ್ಗತ್ತಲು. ನಿನ್ನ ಮೇಲಾದರೋ ಉದಯಿಸುವನು ಸರ್ವೇಶ್ವರನು, ನಿನ್ನಲ್ಲಿ ಗೋಚರವಾಗುವುದು ಆತನಾ ತೇಜಸ್ಸು. ರಾಷ್ಟ್ರಗಳು ಬರುವವು ನಿನ್ನ ಬೆಳಕಿಗೆ, ಅರಸರು ನಿನ್ನ ಉದಯದ ಶೋಭೆಗೆ. ನೀ ನೋಡು ಸುತ್ತಮುತ್ತಲು ಕಣ್ಣೆತ್ತಿ, ಬರುತಿಹರು ನಿನ್ನ ಮಕ್ಕಳೆಲ್ಲರು ಗುಂಪಾಗಿ. ದೂರದಿಂದ ಬರುತಿಹರು ಗಂಡುಮಕ್ಕಳು, ಕಂಕುಳಿನಲ್ಲಿ ಹೊತ್ತ ಆ ಹೆಣ್ಣುಮಕ್ಕಳು. ಇದನ್ನು ನೋಡಿ ನೀ ಬೆಳಗುವೆ ಕಾಂತಿಯಿಂದ, ಉಬ್ಬುವುದು ನಿನ್ನ ಎದೆ ಆನಂದದಿಂದ. ಹರಿಯುವುದು ನಿನ್ನೆಡೆಗೆ ಸಮುದ್ರ ವ್ಯಾಪಾರ ಸಮೃದ್ಧಿ, ದೊರಕುವುದು ನಿನಗೆ ಅನ್ಯಜನಾಂಗಗಳ ಆಸ್ತಿಪಾಸ್ತಿ. ತುಂಬಿರುವುದು ನಿನ್ನೊಳು ಒಂಟೆಗಳ ಗುಂಪುಗಳು, ಮಿದ್ಯಾನಿನ, ಏಫದ ಪ್ರಾಯದ ಒಂಟೆಗಳು. ಬರುವರೆಲ್ಲರು ಶೆಬದಿಂದ, ತರುವರು ಬಂಗಾರ, ಧೂಪಗಳನು ಸಾರುವರೆಲ್ಲರು ಸರ್ವೇಶ್ವರನ ಸ್ತುತ್ಯಕಾರ್ಯಗಳನ್ನು. 

ಕೀರ್ತನೆ: 72:1-2, 7-8, 10-11, 12-13 

ಶ್ಲೋಕ: ರಾಜರುಗಳು ಸಾಷ್ಟಾಂಗವೆರಗಲಿ ಸರ್ವೇಶ್ವರಸ್ವಾಮಿಗೆ 

1.  ತಿಳಿಸು ನಿನ್ನ ನ್ಯಾಯವನು ದೇವಾ, ರಾಜನಿಗೆ
     ಕಲಿಸು ನಿನ್ನ ನೀತಿಯನು ರಾಜಕುವರನಿಗೆ
     ಆತನಾಳಲಿ ನಿನ್ನ ಪ್ರಜೆಯನು ನೀತಿಯಿಂದ
     ಪರಿಪಾಲಿಸಲಿ ದೀನದಲಿತರನು ನ್ಯಾಯದಿಂದ

2.  ಬೆಳೆಯಲಿ ಆತನ ಪಾಲನೆಯಲಿ ನ್ಯಾಯನೀತಿ
     ಬೆಳಗಲಿ ಚಂದ್ರನಂತೆ ಸದಾ ಸಂಪೂರ್ಣ ಶಾಂತಿ
     ಸಾಗರದಿಂದ ಸಾಗರದವರೆಗಿರಲಿ ಆತನ ಅಧಿಪತ್ಯ
     ಮಹಾನದಿಯಿಂದ ಭುವಿ ಎಲ್ಲೆಯವರೆಗಿರಲಿ ಆತನ ಪ್ರಭುತ್ವ

3.  ಕಷ್ಟಗಳನರ್ಪಿಸಲಿ ತಾರ್ಷಿಷ್ ಹಾಗೂ ದ್ವೀಪದ್ವೀಪದ ರಾಜರುಗಳು
     ಕಾಣಿಕೆಗಳ ತಂದೊಪ್ಪಿಸಲಿ ಶೆಬಾ ಹಾಗೂ ಸೆಬಾದ ರಾಜರುಗಳು
     ರಾಜರುಗಳು ಸಾಷ್ಟಾಂಗವೆರಗಲಿ ಆತನಿಗೆ
     ಘನರಾಷ್ಟ್ರಗಳು ಸೇವೆಸಲ್ಲಿಸಲಿ ಆತನಿಗೆ

4.  ಏಕೆನೆ ಕಾಪಾಡುವನಾತ ಮೊರೆಯಿಡುವ ಬಡವರನು
     ಉದ್ದರಿಸುವನಾತ ದಿಕ್ಕಿಲ್ಲದ ದೀನದಲಿತರನು
     ದೀನದರಿದ್ರರಿಗೆ ದಯೆಯ ತೋರುವನು
     ದಲಿತರ ಪ್ರಾಣವನು ಕಾಪಾಡುವನು

ಎರಡನೇ ವಾಚನ: ಎಫೆಸಿಯರಿಗೆ  3:2-3, 5-6 

ದೇವರು ತಮ್ಮ ಕೃಪಾತಿಶಯದ ಬಗ್ಗೆ ಸಾರುವ ಹೊಣೆಯನ್ನು ನಿಮ್ಮ ಸಲುವಾಗಿ ನನಗೆ ಕೊಟ್ಟಿರುತ್ತಾರೆಂಬುದನ್ನು ನೀವೇ ಬಲ್ಲಿರಿ. ದೇವರು ತಮ್ಮ ನಿಗೂಢ ಯೋಜನೆಯನ್ನು ನನಗೆ ಪ್ರಕಟಗೊಳ್ಳಿಸಿದ್ದಾರೆ. ಇದರ ಬಗ್ಗೆ ನಾನು ಮೊದಲೇ ನಿಮಗೆ ಸಂಕ್ಷೇಪವಾಗಿ ಬರೆದಿದ್ದೇನೆ. ಹಿಂದಿನ ಕಾಲದವರಿಗೆ ಈ ರಹಸ್ಯವನ್ನು ತಿಳಿಸಿರಲಿಲ್ಲ. ಆದರೆ ಈಗ ದೇವರು ಪವಿತ್ರಾತ್ಮರ  ಪೂಜ್ಯ ಪ್ರೇಷಿತರಿಗೂ ಪ್ರವಾದಿಗಳಿಗೂ ಅದನ್ನು ಪ್ರಕಟಿಸಿದ್ದಾರೆ. ಶುಭಸಂದೇಶದ ಮೂಲಕ ಅನ್ಯಜನರೂ ಯೇಸುಕ್ರಿಸ್ತರಲ್ಲಿ ದೇವಜನರೋಡನೆ ಸಹಬಾಧ್ಯರು, ಹಕ್ಕುದಾರರು, ಒಂದೇ ಶರೀರದ ಅಂಗಗಳು, ಹಾಗೂ ದೇವರು ಮಾಡಿದ ವಾಗ್ದಾನದಲ್ಲಿ ಪಾಲುಗಾರರು - ಇದೇ ಆ ರಹಸ್ಯ. 


ಶುಭಸಂದೇಶ: ಮತ್ತಾಯ 2:1-12 

ಯೇಸುಸ್ವಾಮಿ ಜನಿಸಿದ್ದು ಹೆರೋದರಸನ ಕಾಲದಲ್ಲಿ: ಜುದೇಯ ನಾಡಿನ ಬೆತ್ಲೆಹೇಂ ಎಂಬ ಊರಿನಲ್ಲಿ. ಕೆಲವು ಜ್ಯೋತಿಷಿಗಳು ಪೂರ್ವದಿಕ್ಕಿನಿಂದ ಹೊರಟು ಜೆರುಸಲೇಮಿಗೆ ಬಂದರು. "ಯೆಹೂದ್ಯರ ಅರಸ ಹುಟ್ಟಿದ್ದಾರಲ್ಲವೇ  ಅವರೆಲ್ಲಿ?"  ಎಂದು  ವಿಚಾರಿಸಿದರು; "ಅವರನ್ನು ಸೂಚಿಸುವ ನಕ್ಷತ್ರ ಪೂರ್ವದಲ್ಲಿ ಉದಯಿಸಿದ್ದನ್ನು ಕಂಡು ಅವರನ್ನು ಆರಾಧಿಸಲು ಇಲ್ಲಿಗೆ ಬಂದಿದ್ದೇವೆ" ಎಂದರು. ಇದನ್ನು ಕೇಳಿದ್ದೇ  ಹೆರೋದರಸನು ಬಹಳ ತಳಮಳಗೊಂಡನು; ಅಂತೆಯೇ ಜೆರುಸಲೇಮ್ ಆದ್ಯಂತವೂ ಗಲಿಬಿಲಿಗೊಂಡಿತು. ಯೆಹೂದ್ಯರ ಎಲ್ಲ ಮುಖ್ಯ ಯಾಜಕರನ್ನೂ ಧರ್ಮಶಾಸ್ತ್ರಿಗಳನ್ನೂ ಅವನು ಸಭೆ ಸೇರಿಸಿದನು. " ಕ್ರಿಸ್ತ ಹುಟ್ಟಬೇಕಾದುದು ಎಲ್ಲಿ?" ಎಂದು ಅವರನ್ನು ವಿಚಾರಿಸಿದನು. ಅದಕ್ಕೆ ಅವರು "ಜುದೇಯದಲ್ಲಿರುವ ಬೆತ್ಲೆಹೇಮಿನಲ್ಲೇ ಹುಟ್ಟುವನು; ಏಕೆಂದರೆ "ಜುದೇಯ ನಾಡಿನ ಬೆತ್ಲೆಹೇಮೇ, ಜುದೇಯದ ಪ್ರಮುಖ ಪಟ್ಟಣಗಳಲ್ಲಿ ನೀನು ಅಲ್ಪಳೇನು ಅಲ್ಲ. ಕಾರಣ ನನ್ನ ಪ್ರಜೆ ಇಸ್ರಯೇಲನ್ನು ಪರಿಪಾಲಿಸುವವನು ನಿನ್ನಿಂದಲೇ ಉದಯಿಸಲಿರುವನು", ಎಂದು ಪ್ರವಾದಿ ಬರೆದಿದ್ದಾನೆ. ಎಂದು ಉತ್ತರವಿತ್ತನು. ಆಗ ಹೆರೋದನು ಆ ಜ್ಯೋತಿಷಿಗಳನ್ನು ಗೋಪ್ಯವಾಗಿ ಬರಮಾಡಿಕೊಂಡು ಅವರಿಗೆ ನಕ್ಷತ್ರ ಕಾಣಿಸಿಕೊಂಡ ಕಾಲವನ್ನು ಸ್ಪಷ್ಟವಾಗಿ ಕೇಳಿ ತಿಳಿದುಕೊಂಡನು. ಆನಂತರ ಅವರನ್ನು ಬೆತ್ಲೆಹೇಮಿಗೆ ಕಳುಹಿಸಿಕೊಡುತ್ತಾ, 'ನೀವು ಹೋಗಿ ಆ ಮಗುವನ್ನು ಚೆನ್ನಾಗಿ ಹುಡುಕಿರಿ; ಕಂಡಕೂಡಲೇ ನನಗೆ ಬಂದು ತಿಳಿಸಿರಿ. ನಾನು ಹೋಗಿ ಆ ಮಗುವನ್ನು ಆರಾಧಿಸಬೇಕು," ಎಂದು ಹೇಳಿದನು. ಜ್ಯೋತಿಷಿಗಳು ಅರಸನ ಮಾತಿಗೆ ತಲೆಬಾಗಿ ಹೊರಟರು. ಪೂರ್ವದಿಕ್ಕಿನಲ್ಲಿ ಮೊದಲೇ ಅವರಿಗೆ ಕಾಣಿಕೊಂಡಿದ್ದ ನಕ್ಷತ್ರ ಪುನಃ ಕಾಣಿಸಿಕೊಂಡಿತು. ಅವರು ಪರಮಾನಂದಭರಿತರಾದರು. ಆ ನಕ್ಷತ್ರ ಅವರ ಮುಂದೆ ಮುಂದೆ ಸಾಗುತ್ತಾ ಮಗು ಇದ್ದ ಸ್ಥಳದ ಮೇಲೆ ಬಂದು ನಿಂತುಬಿಟ್ಟಿತು. ಜ್ಯೋತಿಷಿಗಳು ಆ ಮನೆಯನ್ನು ಪ್ರವೇಶಿಸಿ ಮಗುವನ್ನು ತಾಯಿ ಮರಿಯಳ ಬಳಿ ಕಂಡು ಅದಕ್ಕೆ ಸಾಷ್ಟಾಂಗವೆರಗಿ ಆರಾಧಿಸಿದರು. ತಮ್ಮ ತಮ್ಮ ಬೊಕ್ಕಸಗಳನ್ನು ಬಿಚ್ಚಿ ಚಿನ್ನ, ಪರಿಮಳದ್ರವ್ಯ ಮತ್ತು ರಕ್ತಬೋಳ ಇವುಗಳನ್ನು ಮಗುವಿಗೆ ಪಾದಕಾಣಿಕೆಯಾಗಿ ಸಮರ್ಪಿಸಿದರು. ಹೆರೋದನ ಬಳಿಗೆ ಹಿಂದಿರುಗಬಾರದೆಂದು ಕನಸಿನಲ್ಲಿ ದೈವಾಜ್ಞೆಯಾದ್ದರಿಂದ, ಅವರು ಬೇರೆ ಮಾರ್ಗವಾಗಿ ತಮ್ಮ ದೇಶಕ್ಕೆ ಮರಳಿದರು.

07.01.23

 ಮೊದಲನೇ ವಾಚನ: 1 ಯೊವಾನ್ನ 5:14-21

ಪ್ರಿಯರೇ, ದೇವರ ಚಿತ್ತಾನುಸಾರ ಏನನ್ನು ಬೇಡಿಕೊಂಡರೂ ಅವರು ನಮ್ಮ ವಿಜ್ಞಾಪನೆಗೆ ಕಿವಿಗೊಡುತ್ತಾರೆಂಬ ಭರವಸೆ ನಮಗಿದೆ. ನಾವು ಏನನ್ನು ಬೇಡಿಕೊಂಡರೂ ನಮ್ಮ ವಿಜ್ಞಾಪನೆಗೆ ದೇವರು ಕಿವಿಗೊಡುತ್ತಾರೆ ಎಂಬುದು ನಮಗೆ ತಿಳಿದಿದ್ದರೆ ನಾವು ಬೇಡಿದುದೆಲ್ಲವೂ ನಮಗೆ ಲಭಿಸಿದಂತೆಯೇ ಎಂಬುದೂ ನಮಗೆ ತಿಳಿದಿದೆ. ಮಾರಕವಲ್ಲದ ಪಾಪವೊಂದನ್ನು ಸಹೋದರನು ಮಾಡುವುದನ್ನು ಯಾರಾದರೂ ಕಂಡರೆ, ಆ ಸಹೋದರನಿಗಾಗಿ ದೇವರಲ್ಲಿ ಬೇಡಿಕೊಳ್ಳಿರಿ. ದೇವರು ಆ ಸಹೋದರನಿಗೆ ಸಜ್ಜೀವವನ್ನು ಅನುಗ್ರಹಿಸುವರು. ಮಾರಕವಲ್ಲದ ಪಾಪವನ್ನು ಕುರಿತೇ ಈ ಮಾತನ್ನು ಹೇಳುತ್ತಿದ್ದೇನೆ. ಮಾರಕವಾದ ಪಾಪವೂ ಉಂಟು. ಅದರ ವಿಷಯವಾಗಿ ಬೇಡಿಕೊಳ್ಳಬೇಕೆಂದು ನಾನು ಹೇಳುತ್ತಿಲ್ಲ. ಅಕ್ರಮವಾದುದೆಲ್ಲವೂ ಪಾಪವೇ. ಆದರೆ ಮಾರಕವಲ್ಲದಂಥ ಪಾಪವೂ ಇದೆ. ನಮಗೆ ತಿಳಿದಿರುವಂತೆ ದೇವರಿಂದ ಜನಿಸಿದವನು ಪಾಪಜೀವಿಯಾಗಿರುವುದಿಲ್ಲ. ಏಕೆಂದರೆ, ದೇವರ ಪುತ್ರನ ರಕ್ಷಣೆ ಅವನಿಗಿದೆ. ಕೇಡಿಗನ ಹಿಡಿತಕ್ಕೆ ಅವನು ಸಿಗನು. ಇಡೀ ಲೋಕವು ಕೇಡಿಗನ ವಶದಲ್ಲಿ ಇದ್ದರು ಸಹ ನಾವು ದೇವರಿಗೆ ಸೇರಿದವರೆಂಬುದು ನಮಗೆ ತಿಳಿದಿದೆ. ದೇವರ ಪುತ್ರ ಆಗಮಿಸಿ, ಸತ್ಯ ಸ್ವರೂಪರಾದ ದೇವರನ್ನು ನಾವು ತಿಳಿದುಕೊಳ್ಳುವಂತೆ ನಮಗೆ ಅರಿವನ್ನು ನೀಡಿದ್ದಾರೆ. ಇದನ್ನು ನಾವು ಬಲ್ಲೆವು. ದೇವರ ಪುತ್ರರಾದ ಯೇಸುಕ್ರಿಸ್ತರಲ್ಲಿ ನೆಲೆಸಿರುವ ನಾವು ಸತ್ಯಸ್ವರೂಪಿಯಲ್ಲೇ ನೆಲೆಸಿದ್ದೇವೆ. ನಿಜವಾದ ದೇವರೂ ನಿತ್ಯಜೀವವೂ ಇವರೇ. ಪ್ರಿಯ ಮಕ್ಕಳೇ, ಮಿಥ್ಯ ದೇವರುಗಳಿಂದ ನೀವು ದೂರವಿರಿ.

ಕೀರ್ತನೆ: 149: 1-6, 9 v4
ಶ್ಲೋಕ: ಪ್ರೀತಿಸುತ್ತಾನೆ ಪ್ರಭು ತನ್ನ ಪ್ರಜೆಯನು. 

ಶುಭಸಂದೇಶ: ಯೊವಾನ್ನ 3: 22-30

ಆ ಕಾಲದಲ್ಲಿ ಯೇಸುಸ್ವಾಮಿ ತಮ್ಮ ಶಿಷ್ಯರೊಡನೆ ಜುದೇಯ ಪ್ರಾಂತ್ಯಕ್ಕೆ ಬಂದು ಅವರೊಡನೆ ಕೆಲವು ಕಾಲ ಅಲ್ಲೇ ಉಳಿದುಕೊಂಡು ದೀಕ್ಷಾಸ್ನಾನ ಮಾಡಿಸತೊಡಗಿದರು. ಅತ್ತ ಯೊವಾನ್ನನು ಕೂಡ ಸಾಲಿಮ್ ಎಂಬ ಊರಿಗೆ ಹತ್ತಿರವಾಗಿದ್ದ ಐನೋನ್ ಎಂಬ ಸ್ಥಳದಲ್ಲಿ ನೀರು ಹೆಚ್ಚಾಗಿದ್ದುದರಿಂದ ಸ್ನಾನದೀಕ್ಷೆಯನ್ನು ಮಾಡಿಸುತ್ತಿದ್ದನು. ಜನರು ಬಂದು ಸ್ನಾನದೀಕ್ಷೆಯನ್ನು ಪಡೆಯುತ್ತಿದ್ದರು. ಯೊವಾನ್ನನು ಆಗ ಇನ್ನೂ ಬಂಧಿತನಾಗಿರಲಿಲ್ಲ. ಶುದ್ಧಾಚಾರವನ್ನು ಕುರಿತು ಯೊವಾನ್ನನ ಶಿಷ್ಯರಿಗೂ ಯೆಹೂದ್ಯನೊಬ್ಬನಿಗೂ ವಿವಾದ ಎದ್ದಿತು. ಅವರು ಯೊವಾನ್ನನ ಬಳಿಗೆ ಬಂದು, “ಗುರುವೇ, ಜೋರ್ಡನಿನ ಆಚೆಕಡೆಯಲ್ಲಿ ನಿಮ್ಮೊಡನೆ ಒಬ್ಬನು ಇದ್ದನಲ್ಲವೆ? ಆತನನ್ನು ಕುರಿತು ನೀವೇ ಸಾಕ್ಷಿ ಹೇಳಲಿಲ್ಲವೆ? ಈಗ ನೋಡಿ, ಆತನೇ ದೀಕ್ಷಾಸ್ನಾನ ಮಾಡಿಸುತ್ತಿದ್ದಾನೆ. ಎಲ್ಲರೂ ಆತನ ಬಳಿಗೆ ಹೋಗುತ್ತಿದ್ದಾರೆ,” ಎಂದು ದೂರಿತ್ತರು. ಅದಕ್ಕೆ ಯೊವಾನ್ನನು, “ದೇವರು ದಯಪಾಲಿಸದೆ ಹೋದರೆ ಮಾನವನಿಗೇನೂ ದಕ್ಕದು. ನಾನು ಲೋಕೋದ್ಧಾರಕನಲ್ಲ; ಆತನ ಮುಂದೂತ ಮಾತ್ರ’ ಎಂದು ನಾನು ಹೇಳಿದ್ದಕ್ಕೆ ನೀವೇ ಸಾಕ್ಷಿಗಳಾಗಿದ್ದೀರಿ. ಮದುಮಗಳು ಮದುಮಗನಿಗೆ ಸೇರಿದವಳು. ಮದುಮಗನ ಗೆಳೆಯನಾದರೋ ಪಕ್ಕದಲ್ಲಿದ್ದು ಮದುಮಗನ ಕರೆಗೆ ಕಿವಿಗೊಡುತ್ತಾನೆ; ಆತನ ಸ್ವರ ಕೇಳಿ ಹರ್ಷಿಸುತ್ತಾನೆ. ಇಂಥ ಆನಂದದಿಂದ ನಾನೀಗ ಭರಿತನಾಗಿದ್ದೇನೆ. ಆತ ಬೆಳೆಯುತ್ತಿರಬೇಕು, ನಾನು ಅಳಿಯುತ್ತಿರಬೇಕು.

06.01.23 - “ಖಂಡಿತವಾಗಿಯೂ ನನಗೆ ಮನಸ್ಸಿದೆ; ನಿನಗೆ ಗುಣವಾಗಲಿ,”

ಮೊದಲನೇ ವಾಚನ: 1 ಯೊವಾನ್ನ 5: 5-13


ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ್ತದಿಂದ ಸಾಕ್ಷಿಹೊಂದಿದವರು. ಜಲದಿಂದ ಮಾತ್ರವಲ್ಲ, ಜಲ ಮತ್ತು ರಕ್ತದಿಂದ ಸಾಕ್ಷಿಹೊಂದಿದವರು. ಇದಕ್ಕೆ ಪವಿತ್ರಾತ್ಮ ಸಾಕ್ಷಿ. ಏಕೆಂದರೆ, ಪವಿತ್ರಾತ್ಮ ಸತ್ಯಸ್ವರೂಪಿ. ಹೀಗೆ ಪವಿತ್ರಾತ್ಮ, ಜಲ ಮತ್ತು ರಕ್ತವೆಂಬ ಮೂರು ಸಾಕ್ಷಿಗಳು ಇವೆ. ಈ ಮೂರೂ ಕೊಡುವ ಸಾಕ್ಷ್ಯ ಒಂದೇ. ಮನುಷ್ಯರು ಕೊಡುವ ಸಾಕ್ಷ್ಯವನ್ನು ನಾವು ಅಂಗೀಕರಿಸುತ್ತೇವೆ. ದೇವರು ನೀಡುವ ಸಾಕ್ಷ್ಯ ಅದಕ್ಕಿಂತಲೂ ಶ್ರೇಷ್ಠವಾದುದು. ದೇವರ ಈ ಸಾಕ್ಷ್ಯ ಅವರ ಪುತ್ರನನ್ನು ಕುರಿತದ್ದಾಗಿದೆ. ದೇವರ ಪುತ್ರನಲ್ಲಿ ವಿಶ್ವಾಸವಿಡುವವನು ಈ ಸಾಕ್ಷ್ಯವನ್ನು ತನ್ನ ಅಂತರಂಗದಲ್ಲೇ ಹೊಂದಿರುತ್ತಾನೆ. ದೇವರಲ್ಲಿ ವಿಶ್ವಾಸವಿಡದವನಾದರೋ ಅವರನ್ನು ಸುಳ್ಳುಗಾರರನ್ನಾಗಿಸುತ್ತಾನೆ. ಹೇಗೆಂದರೆ, ದೇವರು ತಮ್ಮ ಪುತ್ರನ ಪರವಾಗಿ ಕೊಟ್ಟ ಸಾಕ್ಷ್ಯದಲ್ಲಿ ಅವನಿಗೆ ನಂಬಿಕೆಯಿಲ್ಲ. ದೇವರು ನಮಗೆ ನಿತ್ಯ ಜೀವವನ್ನು ಅನುಗ್ರಹಿಸಿದ್ದಾರೆ. ಆ ಜೀವ ಅವರ ಪುತ್ರನಲ್ಲಿದೆ ಎಂಬುದೇ ಈ ಸಾಕ್ಷ್ಯ. ಯಾರಲ್ಲಿ ದೇವರ ಪುತ್ರ ಇದ್ದಾನೋ ಅವನಲ್ಲಿ ಆ ಜೀವವಿರುತ್ತದೆ. ಯಾರಲ್ಲಿ ದೇವರ ಪುತ್ರನಿಲ್ಲವೋ ಅವನಲ್ಲಿ ಆ ಜೀವ ಇರುವುದಿಲ್ಲ. ದೇವರ ಪುತ್ರನ ನಾಮದಲ್ಲಿ ವಿಶ್ವಾಸ ಇಟ್ಟಿರುವ ನೀವು ನಿತ್ಯಜೀವವನ್ನು ಪಡೆದವರು ಎಂಬುದನ್ನು ತಿಳಿಸಲೆಂದೇ ನಾನು ನಿಮಗೆ ಇದನ್ನೆಲ್ಲಾ ಬರೆದಿದ್ದೇನೆ.

ಕೀರ್ತನೆ: 147: 12-15, 19-20 
ಶ್ಲೋಕ: ಜೆರುಸಲೇಮೇ, ಕೀರ್ತಿಸು ಪ್ರಭುವನು 

ಶುಭಸಂದೇಶ: ಲೂಕ 5: 12-16 



ಯೇಸುಸ್ವಾಮಿ ಒಂದು ಪಟ್ಟಣದಲ್ಲಿ ಇದ್ದಾಗ, ಮೈಯೆಲ್ಲಾ ಕುಷ್ಠ ಹಿಡಿದಿದ್ದ ರೋಗಿ ಒಬ್ಬನು ಅಲ್ಲಿಗೆ ಬಂದು ಅವರಿಗೆ ಅಡ್ಡಬಿದ್ದು, “ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ,” ಎಂದು ಬೇಡಿಕೊಂಡನು. ಯೇಸು ಕೈಚಾಚಿ ಅವನನ್ನು ಮುಟ್ಟಿ, “ಖಂಡಿತವಾಗಿಯೂ ನನಗೆ ಮನಸ್ಸಿದೆ; ನಿನಗೆ ಗುಣವಾಗಲಿ,” ಎಂದರು. ತಕ್ಷಣವೇ ಕುಷ್ಠವು ಮಾಯವಾಗಿ ಅವನು ಗುಣಹೊಂದಿದನು. ಇದನ್ನು ಯಾರಿಗೂ ಹೇಳಕೂಡದು ಎಂದು ಯೇಸು ಅವನನ್ನು ಎಚ್ಚರಿಸಿ, “ನೀನು ನೆಟ್ಟಗೆ ಯಾಜಕನ ಬಳಿಗೆ ಹೋಗು; ಅವನು ನಿನ್ನನ್ನು ಪರೀಕ್ಷಿಸಿ ನೋಡಲಿ; ನಂತರ ಮೋಶೆ ನಿಯಮಿಸಿರುವ ಪ್ರಕಾರ ನೀನು ಗುಣಹೊಂದಿದ್ದಕ್ಕಾಗಿ ಶುದ್ಧೀಕರಣ ವಿಧಿಯನ್ನು ಅನುಸರಿಸು; ಇದು ಜನರಿಗೆ ಸಾಕ್ಷಿಯಾಗಿರಲಿ,” ಎಂದರು. ಯೇಸು ಎಷ್ಟು ಎಚ್ಚರಿಸಿದರೋ ಅಷ್ಟೂ ಅಧಿಕವಾಗಿ ಅವರ ಸುದ್ಧಿ ಹರಡಿತು. ಅವರ ಉಪದೇಶವನ್ನು ಕೇಳುವುದಕ್ಕೂ ತಮ್ಮ ತಮ್ಮ ರೋಗರುಜಿನಗಳಿಂದ ವಿಮುಕ್ತರಾಗುವುದಕ್ಕೂ ಜನರು ತಂಡೋಪತಂಡವಾಗಿ ಬರುತ್ತಿದ್ದರು. ಯೇಸುವಾದರೋ ನಿರ್ಜನ ಪ್ರದೇಶಕ್ಕೆ ಹೋಗಿ ಎಂದಿನಂತೆ ಪ್ರಾರ್ಥನೆಯಲ್ಲಿ ಮಗ್ನರಾಗುತ್ತಿದ್ದರು.