ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

08.02.21

ಮೊದಲನೆಯ ವಾಚನ - ಅದಿಕಾಂಡ 1: 1-19

ಆದಿಯಲ್ಲಿ ದೇವರು ಪರಲೋಕ - ಭೂಲೋಕವನ್ನು ಸೃಷ್ಟಿಮಾಡಿದರು. ಭೂಮಿ ನಿರಾಕಾರವಾಗಿಯೂ ಬರಿದಾಗಿಯೂ ಇತ್ತು. ಆದಿಸಾಗರದ ಮೇಲೆ ಕಗ್ಗತ್ತಲು ಕವಿದಿತ್ತು. ದೇವರಾತ್ಮ ಜಲರಾಶಿಯ ಮೇಲೆ ಚಲಿಸುತ್ತಿತ್ತು. ಆಗ ದೇವರು, “ಬೆಳಕಾಗಲಿ” ಎನ್ನಲು ಬೆಳಕಾಯಿತು. ದೇವರ ಕಣ್ಣಿಗೆ ಅದು ಚೆನ್ನಾಗಿ ಕಂಡಿತು. ಅವರು ಬೆಳಕನ್ನೂ ಕತ್ತಲೆಯನ್ನೂ ಬೇರೆಬೇರೆ ಮಾಡಿ ಬೆಳಕಿಗೆ ಹಗಲೆಂದೂ ಕತ್ತಲೆಗೆ ಇರುಳೆಂದೂ ಹೆಸರಿಟ್ಟರು. ಹೀಗೆ ಬೈಗೂ ಬೆಳಗೂ ಆಗಿ ಮೊದಲನೆಯ ದಿನವಾಯಿತು. ಬಳಿಕ ದೇವರು, “ಜಲರಾಶಿಯ ನಡುವೆ ವಿಸ್ತಾರವಾದ ಒಂದು ಗುಮ್ಮಟವು ಉಂಟಾಗಲಿ, ಅದು ಕೆಳಗಿನ ನೀರನ್ನೂ ಮೇಲಿನ ನೀರನ್ನೂ ಬೇರೆಬೇರೆ ಮಾಡಲಿ,” ಎಂದರು. ಹಾಗೆಯೇ ಆಯಿತು. ಹೀಗೆ ದೇವರು ವಿಸ್ತಾರವಾದ ಗುಮ್ಮಟವೊಂದನ್ನು ಮಾಡಿ ಕೆಳಗಿದ್ದ ನೀರನ್ನು ಮೇಲಿದ್ದ ನೀರಿನಿಂದ ವಿಂಗಡಿಸಿದರು. ದೇವರು ಆ ಗುಮ್ಮಟಕ್ಕೆ “ಆಕಾಶ” ಎಂದು ಹೆಸರಿಟ್ಟರು. ಹೀಗೆ ಬೈಗೂ ಬೆಳಗೂ ಆಗಿ ಎರಡನೆಯ ದಿನ ಆಯಿತು. ಅನಂತರ ದೇವರು, “ಆಕಾಶದ ಕೆಳಗಿರುವ ನೀರೆಲ್ಲ ಒಂದೇ ಸ್ಥಳದಲ್ಲಿ ಕೂಡಿಕೊಳ್ಳಲಿ; ಒಣನೆಲವು ಕಾಣಿಸಿಕೊಳ್ಳಲಿ,” ಎಂದರು. ಹಾಗೆಯೇ ಆಯಿತು. ದೇವರು ಒಣನೆಲಕ್ಕೆ “ಭೂಮಿ” ಎಂದೂ ಜಲರಾಶಿಗೆ “ಸಮುದ್ರ” ಎಂದೂ ಹೆಸರಿಟ್ಟರು. ದೇವರ ಕಣ್ಣಿಗೆ ಅದೂ ಚೆನ್ನಾಗಿ ಕಂಡಿತು. ತರುವಾಯ ದೇವರು, “ಭೂಮಿಯಲ್ಲಿ ಸಸ್ಯಗಳನ್ನೂ - ಎಲ್ಲ ತರದ ದವಸಧಾನ್ಯ, ಹಣ್ಣು ಹಂಪಲು ಇವುಗಳನ್ನು ಬಿಡುವ ಗಿಡಮರಬಳ್ಳಿಗಳನ್ನೂ ಬೆಳೆಯಿಸಲಿ,” ಎಂದರು. ಅದು ಹಾಗೆಯೇ ಆಯಿತು. ಭೂಮಿಯಲ್ಲಿ ಸಸ್ಯಗಳು ಬೆಳೆದವು; ಎಲ್ಲ ತರದ ದವಸಧಾನ್ಯಗಳನ್ನೂ ಹಣ್ಣುಹಂಪಲುಗಳನ್ನೂ ಬಿಡುವ ಗಿಡಮರಬಳ್ಳಿಗಳು ಕಾಣಿಸಿಕೊಂಡವು. ದೇವರ ಕಣ್ಣಿಗೆ ಅವು ಚೆನ್ನಾಗಿ ಕಂಡವು. ಹೀಗೆ ಬೈಗೂ ಬೆಳಗೂ ಆಗಿ ಮೂರನೆಯ ದಿನವಾಯಿತು. ಅದಾದನಂತರ ದೇವರು,“ಹಗಲು ಇರುಳುಗಳನ್ನು ಬೇರೆಬೇರೆ ಮಾಡಲು ಋತುಕಾಲಗಳನ್ನೂ ದಿನಸಂವತ್ಸರಗಳನ್ನೂ ಸೂಚಿಸಲು, ಹಾಗು ಭೂಮಿಗೆ ಬೆಳಕನ್ನೀಯಲು, ಆಕಾಶ ದೀಪಗಳು ಉಂಟಾಗಲಿ,” ಎಂದರು. ಹಾಗೆಯೇ ಆಯಿತು. ಹಗಲನ್ನಾಳುವುದಕ್ಕೆ ಸೂರ್ಯನನ್ನೂ ಇರುಳನ್ನಾಳುವುದಕ್ಕೆ ಚಂದ್ರನನ್ನೂ, ಹೀಗೆ ಎರಡು ದೀವಿಗೆಗಳನ್ನು ಸೃಷ್ಟಿ ಮಾಡಿದರು. ಅದು ಮಾತ್ರವಲ್ಲ, ನಕ್ಷತ್ರಗಳನ್ನೂ ಅವರು ಸೃಷ್ಟಿಮಾಡಿದರು. ಆ ದೀವಿಗೆಗಳನ್ನು ಆಕಾಶದಲ್ಲಿ ಇಟ್ಟು ಭೂಮಿಗೆ ಬೆಳಕನ್ನೀಯುವಂತೆ ಮಾಡಿದರು. ಹಾಗೂ ಹಗಲಿರುಳುಗಳನ್ನು ಆಳುವುದಕ್ಕೂ, ಬೆಳಕನ್ನೂ ಕತ್ತಲನ್ನೂ ಬೇರೆಬೇರೆ ಮಾಡುವುದಕ್ಕೂ ಅವುಗಳನ್ನು ನೇಮಿಸಿದರು. ದೇವರ ಕಣ್ಣಿಗೆ ಅದೂ ಚೆನ್ನಾಗಿ ಕಂಡಿತು. ಹೀಗೆ ಬೈಗೂ ಬೆಳಗೂ ಆಗಿ ನಾಲ್ಕನೆಯ ದಿನ ಆಯಿತು. 
ಪ್ರಭುವಿನ ವಾಕ್ಯ

ಕೀರ್ತನೆ – 104:1-2, 5-6, 10, 12, 24, 34. V.31
ಪ್ರಭು ಸಂತೋಷಿಸಲಿ ತನ್ನ ಸುಕೃತ್ಯಗಳಿಗಾಗಿ II

ಭಜಿಸು ನನ್ನ ಮನವೇ, ಭಜಿಸು, ಪ್ರಭುವನು I
ಪ್ರಭು, ನನ್ನ ದೇವಾ, ನೀ ಸರ್ವೋತ್ತಮನು I

ಮಹಿಮೆ ಪ್ರತಾಪಗಳಿಂದ ಭೂಷಿತನು II
ತೊಟ್ಟುಕೊಂಡಿರುವೆ ಬೆಳಕನೇ ಬಟ್ಟೆಯಂತೆ I

ಹರಡಿಸಿರುವೆ ಆಗಸವನು ಗುಡಾರದಂತೆ II
ಬುವಿಯನು ತಳಹದಿಯ ಮೇಲೆ ಸ್ಥಾಪಿಸಿರುವೆ I

ಅದೆಂದಿಗೂ ಕದಲದಂತೆ ಮಾಡಿರುವೆ II
ಅದಕ್ಕೆ ಹೊದಿಸಿರುವೆ ಸಾಗರವೆಂಬ ವಸ್ತ್ರವನು I

ಆ ಜಲರಾಶಿಗಳು ಮುಳುಗಿಸಿವೆ ಬೆಟ್ಟಗಳನು II
ಬುಗ್ಗೆಗಳು ಚಿಮ್ಮಿ ಓಡಮಾಡುವೆ ತಗ್ಗುಗಳಲಿ I

ನದಿಗಳ ಹರಿಯಮಾಡುವೆ ಗುಡ್ಡಗಳ ನಡುವೆಯಲಿ II
ಅವುಗಳ ಅರುಗಲ್ಲೇ ಇವೆ ಹಕ್ಕಿಗಳ ಗೂಡುಗಳು I

ಕೇಳುತಿವೆ ಕೊಂಬೆಗಳಿಂದಾ ಪಕ್ಷಿಗಳ ಕಲರವಗಳು I
ಸೃಜಿಸಿರುವೆ ಎಲ್ಲವನು ಸುಜ್ಞಾನದಿಂದ I

ಜಗವೆಲ್ಲ ತುಂಬಿದೆ ನಿನ್ನ ಸೃಷ್ಟಿಯಿಂದ II
ಆತನಿಗೊಲಿಯಲಿ ನನ್ನ ಧ್ಯಾನ I
ಆತನಲೇ ಹರ್ಷಿಸಲಿ ನನ್ನ ಮನ II

ಶುಭಸಂದೇಶ - ಮಾರ್ಕ 6: 53-56

ಆ ಕಾಲದಲ್ಲಿ ಯೇಸು ಮತ್ತು ಶಿಷ್ಯರು ಸರೋವರವನ್ನು ದಾಟಿ ಗೆನಸರೇತ್ ಊರಿನ ದಡ ಸೇರಿದರು. ಅವರು ದೋಣಿಯನ್ನು ಕಟ್ಟಿ, ಅದರಿಂದ ಇಳಿದ ಕೂಡಲೇ ಅಲ್ಲಿಯ ಜನರು ಯೇಸುಸ್ವಾಮಿಯ ಗುರುತು ಹಚ್ಚಿದರು. ಒಡನೆ ಸುತ್ತಮುತ್ತಲೆಲ್ಲಾ ಓಡಾಡಿ, ರೋಗಿಗಳನ್ನು ಹಾಸಿಗೆಗಳ ಸಹಿತ ಹೊತ್ತುಕೊಂಡು, ಯೇಸು ಎಲ್ಲೆಲ್ಲಿ ಇದ್ದಾರೆಂದು ಕೇಳಿದರೋ ಅಲ್ಲೆಲ್ಲಾ ಹೋಗತೊಡಗಿದರು.ಯೇಸು ಹಳ್ಳಿಗಳಿಗಾಗಲಿ, ಪಟ್ಟಣಪಾಳೆಯಗಳಿಗಾಗಲಿ ಹೋದಾಗಲೆಲ್ಲಾ ಜನರು ರೋಗಿಗಳನ್ನು ಅಲ್ಲಿಯ ಸಂತೆಬೀದಿ ಚೌಕಗಳಿಗೆ ಕರೆತರುತ್ತಿದ್ದರು. ಅವರ ಉಡುಪಿನ ಅಂಚನ್ನಾದರೂ ಮುಟ್ಟಗೊಡಿಸಬೇಕೆಂದು ಯೇಸುವನ್ನು ಬೇಡಿಕೊಳ್ಳುತ್ತಿದ್ದರು. ಹಾಗೆ ಮುಟ್ಟಿದವರೆಲ್ಲರೂ ಗುಣಹೊಂದುತ್ತಿದ್ದರು. 
ಪ್ರಭುವಿನ ಶುಭಸಂದೇಶ

07.02.21 - “ಅಕ್ಕಪಕ್ಕದ ಊರುಗಳಿಗೆ ಹೋಗೋಣ. ಅಲ್ಲೂ ನಾನು ಶುಭಸಂದೇಶವನ್ನು ಸಾರಬೇಕು. ನಾನು ಬಂದಿರುವುದು ಈ ಉದ್ದೇಶಕ್ಕಾಗಿಯೇ,”

ಮೊದಲನೆಯ ವಾಚನ: ಯೋಬ 7:1-4, 6 - 7;


“ಮಾನವನ ಜೀವನ ಸೈನಿಕರ ಸೇವಾವಧಿಯಂತೆ ಅವನ ದಿನಗಳು ಕಳೆಯುತ್ತವೆ ಜೀತದಾಳಿನ ದಿನಗಳಂತೆ. ನಾನಿರುವೆ ಸಂಜೆಯನು ಬಯಸುವ ದಾಸನಂತೆ ಕೂಲಿಯನು ನಿರೀಕ್ಷಿಸುವ ಕೂಲಿಯಾಳಿನಂತೆ. ನನ್ನ ಪಾಲಿಗೆ ಬಂದಿವೆ ಬೇಸರಿಕೆಯ ಮಾಸಗಳು ನನಗೆ ನೇಮಕವಾಗಿವೆ ಆಯಾಸದ ರಾತ್ರಿಗಳು. ಮಲಗಹೋಗುವಾಗ ‘ಯಾವಾಗ ಏಳುವೆನೋ” ಎನಿಸುತ್ತದೆ ಕಾಳ ರಾತ್ರಿ ಬೆಳೆಯುತ್ತಾ ಹೋಗುತ್ತಿರುತ್ತದೆ ಉದಯದವರೆಗೆ ಅತ್ತಿತ್ತ ಹೊರಳಿ ಸಾಕಾಗುತ್ತದೆ. ನನ್ನ ದಿನಗಳು ಮಗ್ಗದ ಲಾಳಕ್ಕಿಂತ ತ್ವರಿತ ಅವುಗಳಿಗಿದೋ ನಿರೀಕ್ಷೆಯಿಲ್ಲದ ಮುಕ್ತಾಯ. ನೆನೆಸಿಕೊಳ್ಳೋ ದೇವಾ, ನನ್ನ ಜೀವ ಕೇವಲ ಉಸಿರು ನನ್ನ ಕಣ್ಣುಗಳು ಇನ್ನು ಕಾಣವು ನಲಿವು.
ಪ್ರಭುವಿನ ವಾಕ್ಯ

ಕೀರ್ತನೆ: 147: 1, 2-4, 6-7. V. 3

ಶ್ಲೋಕ: ವಾಸಿಮಾಡುವನು ಮುರಿದ ಮನಸ್ಸುಳ್ಳವರನು I

ಕಟ್ಟಿ ಗುಣಪಡಿಸುವನು ಅವರ ಗಾಯಗಳನು II
ನಮ್ಮ ದೇವರನು ಹೊಗಳಿ ಹಾಡುವುದು ಉಚಿತ I
ಆತನ ಸ್ತುತಿ ಮನೋಹರ, ಅದು ಬಲುಸೂಕ್ತ II
ನಿರ್ಮಿಸುತಿಹನು ಪ್ರಭು ಮರಳಿ ಜೆರುಸಲೇಮನು I

ಬಂದು ಸೇರಿಸುತಿಹನು ಚದರಿದ ಇಸ್ರಯೇಲರನು II
ವಾಸಿಮಾಡುವನು ಮುರಿದ ಮನಸ್ಸುಳ್ಳವರನು I
ಕಟ್ಟಿ ಗುಣಪಡಿಸುವನು ಅವರ ಗಾಯಗಳನು II
ನಿಯಮಿಸಿಹನು ತಾರೆಗಳ ಸಂಖ್ಯೆಯನು I
ಇಟ್ಟಿಹನು ಪ್ರತಿಯೊಂದಕೂ ಹೆಸರನು II

ನಮ್ಮ ಪ್ರಭು ಘನವಂತ, ಪರಾಕ್ರಮಿ I
ಅಪರಿಮಿತವಾದುದು ಆತನ ಜ್ಞಾನನಿಧಿ II
ಆಧಾರವಾಗಿಹನು ಪ್ರಭು ದೀನರಿಗೆ I
ತುಳಿದುಬಿಡುವನು ದುರ್ಜನರನು ನೆಲಕೆ II

ಎರಡನೆಯ ವಾಚನ: 1 ಕೊರಿಂಥಿಯರಿಗೆ 9:16 - 19, 22 – 23

ಸಹೋದರರೇ, ಶುಭಸಂದೇಶವನ್ನು ನಾನು ಸಾರುತ್ತಿದ್ದೇನೆಂದು ಕೊಚ್ಚಿಕೊಳ್ಳುವುದಕ್ಕೂ ನನಗೆ ಆಸ್ಪದವಿಲ್ಲ. ಏಕೆಂದರೆ, ಸಾರಲೇಬೇಕೆಂಬ ಕರ್ತವ್ಯಕ್ಕೆ ನಾನು ಬದ್ಧನಾಗಿದ್ದೇನೆ. ಸಾರದಿದ್ದರೆ ನನಗೆ ಧಿಕ್ಕಾರವಿರಲಿ! ನಾನು ಸ್ವಂತ ಇಷ್ಟದಿಂದ ಈ ಕಾರ್ಯವನ್ನು ಕೈಗೊಂಡಿದ್ದರೆ ತಕ್ಕ ಸಂಭಾವನೆ ಇರುತ್ತಿತ್ತು. ಆದರೆ ಈ ಕರ್ತವ್ಯವನ್ನು ನನಗೆ ವಹಿಸಲಾಗಿದೆ. ಆದ್ದರಿಂದ ಕರ್ತವ್ಯಬದ್ಧನಾಗಿ ಮಾಡುತ್ತಿದ್ದೇನೆ. ಹಾಗಾದರೆ ನನಗೆ ಸಿಗುವ ಸಂಭಾವನೆಯಾದರೂ ಏನು? ಶುಭಸಂದೇಶವನ್ನು ಸಾರುವಾಗ ಜೀವನೋಪಾಯಕ್ಕಾಗಿ ನನಗಿರುವ ಹಕ್ಕನ್ನು ಬಳಸಿಕೊಳ್ಳದೆ ಉಚಿತವಾಗಿ ಸಾರುವ ಸೌಭಾಗ್ಯವೇ ನನ್ನ ಸಂಭಾವನೆ. ನಾನು ಸ್ವತಂತ್ರನು, ಯಾರಿಗೂ ದಾಸನಲ್ಲ. ಆದರೂ ಆದಷ್ಟು ಜನರನ್ನು ಗಳಿಸಿಕೊಳ್ಳಲೆಂದು ಎಲ್ಲರಿಗೂ ದಾಸನಾದೆ ವಿಶ್ವಾಸದಲ್ಲಿ ದುರ್ಬಲರನ್ನು ಗಳಿಸಿಕೊಳ್ಳಲು ನಾನೂ ದುರ್ಬಲನಂತಾದೆ. ಹೇಗಾದರೂ ಸರಿ, ಕೆಲವರನ್ನಾದರೂ ಉದ್ಧರಿಸಲು ಎಲ್ಲರಿಗೂ ಎಲ್ಲವೂ ಆದೆ. ಶುಭಸಂದೇಶದ ಸೌಭಾಗ್ಯದಲ್ಲಿ ಪಾಲುಗೊಳ್ಳಲೆಂದು ಇದೆಲ್ಲವನ್ನು ಶುಭಸಂದೇಶಕ್ಕಾಗಿಯೇ ಮಾಡುತ್ತೇನೆ. 
ಪ್ರಭುವಿನ ವಾಕ್ಯ

ಶುಭಸಂದೇಶ ಮಾರ್ಕ 1:29-39


ಯೇಸುಸ್ವಾಮಿ ಪ್ರಾರ್ಥನಾಮಂದಿರದಿಂದ ಹೊರಟು ಯಕೋಬ ಮತ್ತು ಯೊವಾನ್ನನ ಸಂಗಡ ಸಿಮೋನ ಹಾಗೂ ಅಂದ್ರೆಯನ ಮನೆಗೆ ಹೋದರು. ಸಿಮೋನನ ಅತ್ತೆ ಜ್ವರದಿಂದ ಮಲಗಿದ್ದಳು. ಇದನ್ನು ಯೇಸುವಿಗೆ ತಿಳಿಸಿದರು. ಯೇಸು ಆಕೆಯ ಬಳಿಗೆ ಹೋಗಿ ಕೈಹಿಡಿದು ಎಬ್ಬಿಸಿದರು. ಜ್ವರ ಬಿಟ್ಟುಹೋಯಿತು. ಆಕೆ ಅವರೆಲ್ಲರನ್ನು ಸತ್ಕರಿಸಿದಳು. ಸಂಜೆ ಸೂರ್ಯ ಮುಳುಗಿದ ಮೇಲೆ ಜನರು ರೋಗಿಗಳನ್ನೂ ದೆವ್ವಹಿಡಿದವರನ್ನೂ ಯೇಸುವಿನ ಬಳಿಗೆ ಕರೆತಂದರು. ಊರಿಗೆ ಊರೇ ಆ ಮನೆಯ ಬಾಗಿಲಲ್ಲಿ ನೆರೆಯಿತು. ನಾನಾ ರೋಗಗಳಿಂದ ನರಳುತ್ತಿದ್ದವರನ್ನು ಯೇಸು ಗುಣಪಡಿಸಿದರು. ದೆವ್ವ ಹಿಡಿದವರಿಂದ ದೆವ್ವ ಬಿಡಿಸಿದರು. ತಾವು ಯಾರೆಂಬುದನ್ನು ದೆವ್ವಗಳು ಅರಿತಿದ್ದುದರಿಂದ ಯೇಸು ಅವುಗಳಿಗೆ ಮಾತನಾಡಲು ಅವಕಾಶಕೊಡಲಿಲ್ಲ. ಮುಂಜಾನೆ ಬೆಳಕುಹರಿಯುವ ಮುನ್ನ ಯೇಸುಸ್ವಾಮಿ ಎದ್ದು ಏಕಾಂತ ಪ್ರದೇಶಕ್ಕೆ ಹೋಗಿ ಪ್ರಾರ್ಥನೆಮಾಡುತ್ತಿದ್ದರು. 36ಇತ್ತ, ಸಿಮೋನನೂ ಅವನ ಜೊತೆಗಾರರೂ ಯೇಸುವನ್ನು ಹುಡುಕಿಕೊಂಡು ಹೋದರು. ಅವರನ್ನು ಕಂಡಕೂಡಲೇ, “ಎಲ್ಲರು ತಮ್ಮನ್ನೇ ಹುಡುಕುತ್ತಿದ್ದಾರೆ,” ಎಂದು ತಿಳಿಸಿದರು. ಅದಕ್ಕೆ ಯೇಸು, “ಅಕ್ಕಪಕ್ಕದ ಊರುಗಳಿಗೆ ಹೋಗೋಣ. ಅಲ್ಲೂ ನಾನು ಶುಭಸಂದೇಶವನ್ನು ಸಾರಬೇಕು. ನಾನು ಬಂದಿರುವುದು ಈ ಉದ್ದೇಶಕ್ಕಾಗಿಯೇ,” ಎಂದರು. ಅನಂತರ ಯೇಸು ಗಲಿಲೇಯ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿ ಅಲ್ಲಿನ ಪ್ರಾರ್ಥನಾಮಂದಿರಗಳಲ್ಲಿ ಪ್ರಬೋಧಿಸುತ್ತಾ ದೆವ್ವಗಳನ್ನು ಬಿಡಿಸುತ್ತಾ ಬಂದರು.
ಪ್ರಭುವಿನ ಶುಭಸಂದೇಶ

06.02.21 - "ಯೇಸುವಿಗೆ ಮತ್ತು ಅವರ ಶಿಷ್ಯರಿಗೆ ಊಟಮಾಡಲೂ ಬಿಡುವಿರಲಿಲ್ಲ"

ಮೊದಲನೆಯ ವಾಚನ - ಹಿಬ್ರಿ 13: 15-17, 20-21


ಆದ್ದರಿಂದ, ಪ್ರಭುವಾದ ಯೇಸುಕ್ರಿಸ್ತರನ್ನು ಮುಕ್ತಕಂಠದಿಂದ ಗುಣಗಾನಮಾಡುತ್ತಾ ಅವರ ಮುಖಾಂತರ ಸ್ತುತಿಯೆಂಬ ಬಲಿಯನ್ನು ದೇವರಿಗೆ ಸತತವಾಗಿ ಸಮರ್ಪಿಸೋಣ. ಇದಲ್ಲದೆ, ಪರೋಪಕಾರ ಮಾಡುವುದನ್ನೂ ನಿಮಗಿರುವುದನ್ನು ಪರರೊಡನೆ ಹಂಚಿಕೊಳ್ಳುವುದನ್ನೂ ನಿಲ್ಲಿಸಬೇಡಿ. ಇವು ಕೂಡ ದೇವರಿಗೆ ಮೆಚ್ಚುಗೆಯಾದ ಬಲಿಯರ್ಪಣೆಗಳೇ.

ನಿಮ್ಮ ಸಭಾನಾಯಕರಿಗೆ ವಿಧೇಯರಾಗಿರಿ. ಅವರ ಆಜ್ಞೆಗಳನ್ನು ಪಾಲಿಸಿರಿ. ಅವರು ನಿಮ್ಮ ಆತ್ಮಗಳ ಪಾಲಕರು; ದೇವರಿಗೆ ಲೆಕ್ಕ ಒಪ್ಪಿಸಬೇಕಾದವರು. ಈ ಸೇವೆಯನ್ನು ಅವರು ಸಂತೋಷದಿಂದ ಮಾಡುವಂತೆ ನೀವು ನಡೆದುಕೊಳ್ಳಿ. ಅವರು ಮನನೊಂದುಕೊಂಡು ಮಾಡುವ ಸೇವೆಯಿಂದ ನಿಮಗೆ ಒಳಿತಾಗದು

ಸಭೆಯೆಂಬ ಕುರಿಮಂದೆಗೆ ಮಹಾಪಾಲಕರಾದ ಯೇಸುಸ್ವಾಮಿ ಶಾಶ್ವತ ಒಡಂಬಡಿಕೆಯನ್ನು ನಿಶ್ಚಯಪಡಿಸುವುದಕ್ಕಾಗಿ ತಮ್ಮ ರಕ್ತವನ್ನು ಸುರಿಸಿದರು. ಶಾಂತಿದಾತರಾದ ದೇವರು ನಮ್ಮ ಪ್ರಭುವನ್ನು ಸಾವಿನಿಂದ ಜೀವಕ್ಕೆ ಎಬ್ಬಿಸಿದರು. ನೀವು ಇಂಥ ದೇವರ ಚಿತ್ತವನ್ನು ನೆರವೇರಿಸಲು ನಿಮಗೆ ಬೇಕಾದ ಎಲ್ಲಾ ವರದಾನಗಳನ್ನು ಅವರು ನಿಮಗೆ ಅನುಗ್ರಹಿಸಲಿ. ಸ್ವಾಮಿ ಯೇಸುಕ್ರಿಸ್ತರ ಮುಖಾಂತರ ನಾವು ಅವರಿಗೆ ಪ್ರಿಯರಾದವರಾಗಿ ಬಾಳುವಂತಾಗಲಿ. ಯೇಸುಕ್ರಿಸ್ತರಿಗೆ ಯುಗಯುಗಾಂತರಕ್ಕೂ ಮಹಿಮೆ ಸಲ್ಲಲಿ! ಆಮೆನ್.
ಪ್ರಭುವಿನ ವಾಕ್ಯ

ಕೀರ್ತನೆ - 23: 1-4, 5, 6
ಪ್ರಭು ಕುರಿಗಾಹಿಯಾಗಿರಲು ನನಗೆ I
ಕುಂದುಕೊರತೆಗಳೆಲ್ಲಿಯವು ಎನಗೆ? II
ಹಸಿರುಗಾವಲುಗಳಲೆನ್ನ ತಂಗಿಸುವನು I
ತಿಳಿಕೊಳಗಳ ಬಳಿಗೆನ್ನ ಕರೆದೊಯ್ಯುವನು II

ಪುನಶ್ಚೇತನಗೊಳಿಸುವನು ನನ್ನ ಪ್ರಾಣವನಾತ I
ಸನ್ಮಾರ್ಗದಲಿ ನಡೆಸುವನು ತನ್ನ ನಾಮನಿಮಿತ್ತ II
ಕಾರ್ಗತ್ತಲ ಕಣಿವೆಯಲಿ ನಾ ನಡೆವಾಗಲು, ಅಂಜೆನು ಕೇಡಿಗೆ I
ನಿನ್ನ ಕುರಿಗೋಲು, ಊರುಗೋಲು, ಧೈರ್ಯವನು ತರುವುದೆನಗೆ I

ಕಾಣೆನೆಂದಿಗೂ ನಾ ದಿಗಿಲನು, ನೀನಿರಲು ನನ್ನೊಂದಿಗೆ II
ಸಜ್ಜುಗೊಳಿಸುವೆ ನೀ ಶತ್ರುಗಳ ಕಣ್ಮುಂದೆಯೆ ನನಗೌತಣವನು I
ಹಚ್ಚುವೆ ತಲೆಗೆ ತೈಲವನು, ತುಂಬಿತುಳುಕಿಸುವೆ ಪಾನಪಾತ್ರೆಯನು II
ಶುಭಶಾಂತಿಯಿಂದ ನಾ ಬಾಳುವೆ ಜೀವಮಾನವೆಲ್ಲ I
ದೇವಮಂದಿರದಲಿ ನಾ ವಾಸಿಸುವೆ ಚಿರಕಾಲವೆಲ್ಲ II

ಶುಭಸಂದೇಶ - ಮಾರ್ಕ 6: 30-34


ಪ್ರೇಷಿತರು ಯೇಸುಸ್ವಾಮಿಯ ಬಳಿಗೆ ಹಿಂದಿರುಗಿ ಬಂದು ತಾವು ಮಾಡಿದ ಸಕಲ ಕಾರ್ಯಕಲಾಪಗಳ ಹಾಗು ನೀಡಿದ ಬೋಧನೆಯ ವರದಿಯನ್ನು ಒಪ್ಪಿಸಿದರು. ಜನರು ಗುಂಪು ಗುಂಪಾಗಿ ಎಡೆಬಿಡದೆ ಬರುತ್ತಾ ಹೋಗುತ್ತಾ ಇದ್ದುದರಿಂದ ಯೇಸುವಿಗೆ ಮತ್ತು ಅವರ ಶಿಷ್ಯರಿಗೆ ಊಟಮಾಡಲೂ ಬಿಡುವಿರಲಿಲ್ಲ. ಆದುದರಿಂದ ಯೇಸು, “ಬನ್ನಿ, ಪ್ರತ್ಯೇಕವಾಗಿ ನಾವು ನಿರ್ಜನ ಪ್ರದೇಶಕ್ಕೆ ಹೋಗಿ ಸ್ವಲ್ಪ ವಿಶ್ರಮಿಸಿಕೊಂಡು ಬರೋಣ,” ಎಂದರು. ಅಂತೆಯೇ ಅವರೆಲ್ಲರೂ ಪ್ರತ್ಯೇಕವಾಗಿ ದೋಣಿಯನ್ನು ಹತ್ತಿ ಏಕಾಂತ ಪ್ರದೇಶಕ್ಕೆ ಹೊರಟರು. ಆದರೆ ಅವರು ಹೋಗುತ್ತಿರುವುದನ್ನು ಕಂಡು ಗುರುತಿಸಿದ ಅನೇಕರು ಎಲ್ಲಾ ಊರುಗಳಿಂದ ಕಾಲ್ದಾರಿಯಲ್ಲಿ ತ್ವರಿತವಾಗಿ ಸಾಗಿ ಅವರಿಗೆ ಮುಂಚಿತವಾಗಿಯೇ ಆ ಸ್ಥಳವನ್ನು ಸೇರಿದರು. ಯೇಸು ದೋಣಿಯಿಂದ ಇಳಿದಾಗ ಅಲ್ಲಿ ದೊಡ್ಡ ಜನಸಮೂಹವೇ ಸೇರಿತ್ತು. ಆ ಜನರು ಕುರುಬನಿಲ್ಲದ ಕುರಿಗಳಂತಿರುವುದನ್ನು ಕಂಡು ಯೇಸುವಿನ ಮನ ಕರಗಿತು; ಅನೇಕ ವಿಷಯಗಳನ್ನು ಕುರಿತು ಅವರಿಗೆ ಉಪದೇಶವಿತ್ತರು.
ಪ್ರಭುವಿನ ಶುಭಸಂದೇಶ

05-02-2021 - ಯೇಸುಕ್ರಿಸ್ತರು, ನಿನ್ನೆ ಇದ್ದಹಾಗೆಯೇ ಇಂದೂ ಎಂದೆಂದೂ ಇದ್ದಾರೆ

ಮೊದಲನೆಯ ವಾಚನ - ಹಿಬ್ರಿಯರಿಗೆ 13: 1-8


ಸೋದರ ಪ್ರೀತಿಯಲ್ಲಿ ನೆಲೆಯಾಗಿ ನಿಲ್ಲಿರಿ. ಅತಿಥಿ ಸತ್ಕಾರ ಮಾಡುವುದನ್ನು ಮರೆಯದಿರಿ. ಅದನ್ನು ಮಾಡುವಾಗ ಅರಿಯದೆ ಕೆಲವರು ದೇವದೂತರನ್ನೇ ಉಪಚರಿಸಿದ್ದಾರೆ. ಸೆರೆಯಲ್ಲಿರುವವರನ್ನು ಸ್ಮರಿಸಿಕೊಳ್ಳಿ. ಅವರ ಸಂಗಡ ನೀವೂ ಸೆರೆಯಲ್ಲಿರುವಂತೆ ಭಾವಿಸಿಕೊಳ್ಳಿ. ಅನ್ಯಾಯಕ್ಕೆ ಒಳಗಾಗಿರುವವರನ್ನು ಜ್ಞಾಪಕದಲ್ಲಿಟ್ಟುಕೊಳ್ಳಿ. ಅನ್ಯಾಯಕ್ಕೆ ಒಳಗಾಗಬಲ್ಲ ದೇಹವೊಂದು ನಿಮಗೂ ಸಹ ಇದೆಯಲ್ಲವೇ?  ವಿವಾಹ ಬಂಧನವನ್ನು ಎಲ್ಲರೂ ಗೌರವಿಸಲಿ; ದಂಪತಿಗಳ ಸಂಬಂಧವು ನಿಷ್ಕಳಂಕವಾಗಿರಲಿ. ಕಾಮುಕರೂ ವ್ಯಭಿಚಾರಿಗಳೂ ದೇವರ ನ್ಯಾಯತೀರ್ಪಿಗೆ ಗುರಿಯಾಗುತ್ತಾರೆ.

ಹಣದಾಶೆಗೆ ಬಲಿಯಾಗಬೇಡಿ. ನಿಮಗೆ ಇರುವುದರಲ್ಲಿಯೇ ತೃಪ್ತರಾಗಿರಿ. “ಎಂದೆಂದಿಗೂ ನಾನು ನಿನ್ನ ಕೈಬಿಡಲಾರೆ; ತ್ಯಜಿಸಲಾರೆ,” ಎಂದು ದೇವರೇ ಹೇಳಿದ್ದಾರೆ. ಆದ್ದರಿಂದ, “ಸರ್ವೇಶ್ವರ ನನಗೆ ಸಹಾಯಕ, ನಾನು ಭಯಪಡೆನು; ಮಾನವನು ನನಗೇನು ಮಾಡಬಲ್ಲನು?” ಎಂದು ನಾವು ಧೈರ್ಯದಿಂದ ಹೇಳಲು ಸಾಧ್ಯ.

ದೇವರ ವಾಕ್ಯವನ್ನು ನಿಮಗೆ ಹೇಳಿಕೊಟ್ಟ ಹಿಂದಿನ ಸಭಾನಾಯಕರನ್ನು ಮರೆಯಬೇಡಿ. ಅವರು ಹೇಗೆ ಬಾಳಿದರು, ಎಂಥ ಮರಣವನ್ನು ಪಡೆದರು ಎಂಬುದನ್ನು ಕುರಿತು ಆಲೋಚಿಸಿರಿ. ಅವರ ವಿಶ್ವಾಸ ನಿಮಗೆ ಆದರ್ಶವಾಗಿರಲಿ. ಯೇಸುಕ್ರಿಸ್ತರು, ನಿನ್ನೆ ಇದ್ದಹಾಗೆಯೇ ಇಂದೂ ಎಂದೆಂದೂ ಇದ್ದಾರೆ.
ಪ್ರಭುವಿನ ವಾಕ್ಯ

ಕೀರ್ತನೆ - 27: 1, 3, 5, 8-9 V.1

ನನಗೆ ಬೆಳಕು, ನನಗೆ ರಕ್ಷೆ, ಪ್ರಭುವೆ I
ನಾನಾರಿಗೂ ಅಳುಕೆನು II

ನನಗೆ ಬೆಳಕು, ನನಗೆ ರಕ್ಷೆ, ಪ್ರಭುವೆ I
ನಾನಾರಿಗೂ ಅಳುಕೆನು II
ನನ್ನ ಬಾಳಿಗಾಧಾರ ಪ್ರಭುವೆ I
ನಾನಾರಿಗೂ ಅಂಜೆನು II

ಕೇಡು ಮಾಡಬಂದರೆನಗೆ ಕೊಲೆಗಡುಕರು I
ಎಡವಿಬಿದ್ದರು, ತಾವೇ ಅಳಿದುಹೋದರು II
ಸೇನೆ ಸಮೇತ ಶತ್ರು ಬಂದರೂ ಎದೆಗುಂದೆನು I
ಸಮರಕ್ಕೆರಗಿದರೂ ನಾ ಭರವಸೆಯಿಂದಿರುವೆನು II

ಕೇಡುಕಾಲದಲ್ಲಿ ಅವಿತಿಸಿಡುವನು ನನ್ನನ್ನು ತನ್ನ ಗುಡಾರದಲಿ I
ಇರಿಸುವನು ಮರೆಯಾಗಿ ಗರ್ಭಗುಡಿಯಲಿ, ಸುರಕ್ಷಿತ ಶಿಖರದಲಿ II

“ಅರಸೆನ್ನ ಮುಖದರುಶನವನು", ಎಂದೆ ನೀನು I
“ಅರಸುವೆನು ಅದನೆ", ಎಂದು ಮರುನುಡಿದೆ ನಾನು II
ವಿಮುಖನಾಗಬೇಡ ಪ್ರಭು, ಕೋಪದಿಂದೆನ್ನ ತಳ್ಳಬೇಡಯ್ಯಾ I
ರಕ್ಷಕದೇವಾ, ಎನಗೆ ಸಹಾಯಕಾ, ದಾಸನ ಕೈಬಿಡಬೇಡಯ್ಯಾ II


ಶುಭಸಂದೇಶ - ಮಾರ್ಕ 6: 14-29

ಇಷ್ಟರಲ್ಲಿ ಯೇಸುಸ್ವಾಮಿಯ ಹೆಸರು ಮನೆ ಮಾತಾಯಿತು. ಅದು ಹೆರೋದ ಅರಸನ ಕಿವಿಗೂ ಬಿತ್ತು. ಯೇಸುವಿನ ವಿಚಾರವಾಗಿ ಕೆಲವರು, “ಮಡಿದ ಸ್ನಾನಿಕ ಯೊವಾನ್ನನೇ ಮರಳಿ ಜೀವಂತವಾಗಿ ಬಂದಿದ್ದಾನೆ; ಆದುದರಿಂದಲೇ ಮಹತ್ಕಾರ್ಯಗಳನ್ನು ಮಾಡುವ ಶಕ್ತಿ ಇವನಿಗಿದೆ,” ಎನ್ನುತ್ತಿದ್ದರು. ಇನ್ನು ಕೆಲವರು, ‘ಈತನೇ ಎಲೀಯನು’ ಎಂದೂ ಮತ್ತೆ ಕೆಲವರು, “ಪ್ರಾಚೀನ ಪ್ರವಾದಿಗಳಂತೆ ಈತನೂ ಒಬ್ಬ ಪ್ರವಾದಿ,” ಎಂದೂ ಹೇಳುತ್ತಿದ್ದರು. ಇದನ್ನೆಲ್ಲಾ ಕೇಳಿದ ಹೆರೋದನು, “ಹೌದು, ನಾನು ಶಿರಚ್ಛೇದನ ಮಾಡಿದ ಯೊವಾನ್ನನೇ ಮರಳಿ ಜೀವಂತನಾಗಿ ಬಂದಿದ್ದಾನೆ,” ಎಂದನು.

ಹೆರೋದನು ತಾನು ಇಟ್ಟುಕೊಂಡಿದ್ದ ಹೆರೋದಿಯಳ ನಿಮಿತ್ತ ಯೊವಾನ್ನನನ್ನು ಸೆರೆಹಿಡಿಸಿ ಬಂಧನದಲ್ಲಿರಿಸಿದ್ದನು. ಹೆರೋದಿಯಳು ಹೆರೋದನ ಸಹೋದರ ಫಿಲಿಪ್ಪನ ಧರ್ಮಪತ್ನಿ. ಆದರೂ ಹೆರೋದನು ಆಕೆಯನ್ನು ಹೆಂಡತಿಯಾಗಿ ಇಟ್ಟುಕೊಂಡಿದ್ದನು. ಈ ಕಾರಣ ಯೊವಾನ್ನನು, “ನಿನ್ನ ಸಹೋದರನ ಪತ್ನಿಯನ್ನು ನೀನು ಇಟ್ಟುಕೊಂಡಿರುವುದು ನ್ಯಾಯವಲ್ಲ,” ಎಂದು ಪದೇಪದೇ ಅವನನ್ನು ಎಚ್ಚರಿಸುತ್ತಿದ್ದನು. ಇದರ ನಿಮಿತ್ತ ಹೆರೋದಿಯಳು ಯೊವಾನ್ನನ ಮೇಲೆ ಹಗೆಯಿಟ್ಟು ಆತನನ್ನು ಕೊಲ್ಲಿಸಬೇಕು ಎಂದಿದ್ದಳು. ಆದರೆ ತನ್ನ ಸೇಡನ್ನು ತೀರಿಸಿಕೊಳ್ಳಲು ಅವಳಿಂದಾಗಿರಲಿಲ್ಲ. ಏಕೆಂದರೆ, ಯೊವಾನ್ನನು ಸಂತನು ಹಾಗೂ ಸತ್ಪುರುಷನು ಎಂದು ಹೆರೋದನು ಅರಿತು, ಆತನಿಗೆ ಭಯಪಟ್ಟು ಯಾವ ಅಪಾಯವೂ ಆತನಿಗೆ ಬಾರದಂತೆ ನೋಡಿಕೊಳ್ಳುತ್ತಿದ್ದನು. ಯೊವಾನ್ನನು ಹೇಳುತ್ತಿದ್ದ ಮಾತುಗಳನ್ನು ಕೇಳಿದಾಗಲೆಲ್ಲಾ ಹೆರೋದನ ಮನಸ್ಸು ಅಲ್ಲೋಲಕಲ್ಲೋಲವಾಗುತ್ತಿತ್ತು. ಆದರೂ ಆತನ ಮಾತುಗಳನು ಕಿವಿಗೊಟ್ಟು ಕೇಳುತ್ತಿದ್ದನು.

ಕಡೆಗೊಮ್ಮೆ, ಹೆರೋದಿಯಳಿಗೆ ಅನುಕೂಲವಾದ ಸಂದರ್ಭ ಒದಗಿತು. ಹೆರೋದನು ತನ್ನ ಹುಟ್ಟುಹಬ್ಬದ ದಿನಾಚರಣೆಯಂದು, ಆಸ್ಥಾನಿಕರಿಗೂ ಸೇನಾಧಿಪತಿಗಳಿಗೂ ಗಲಿಲೇಯ ಪ್ರಾಂತ್ಯದ ಪ್ರಮುಖರಿಗೂ ಔತಣಕೂಟವನ್ನು ಏರ್ಪಡಿಸಿದನು. ಆ ಸಮಾರಂಭದಲ್ಲಿ ಹೆರೋದಿಯಳ ಮಗಳು ಔತಣ ಶಾಲೆಗೆ ಬಂದು ನರ್ತನ ಮಾಡಿದಳು. ಹೆರೋದನೂ ಅವನ ಜೊತೆಯಲ್ಲಿ ಭೋಜನಕ್ಕೆ ಕುಳಿತಿದ್ದ ಅತಿಥಿಗಳೂ ಅದನ್ನು ಬಹಳವಾಗಿ ಮೆಚ್ಚಿಕೊಂಡರು. ಆಗ ಅರಸ ಹೆರೋದನು ಅವಳಿಗೆ, “ನಿನಗೆ ಏನುಬೇಕಾದರೂ ಕೇಳು, ಕೊಡುತ್ತೇನೆ” ಎಂದನು. “ನೀನು ಏನು ಕೇಳಿಕೊಂಡರೂ ಸರಿ, ನನ್ನ ರಾಜ್ಯದಲ್ಲಿ ಅರ್ಧವನ್ನು ಕೇಳಿಕೊಂಡರೂ ಅದನ್ನು ನಿನಗೆ ಕೊಡುತ್ತೇನೆ,” ಎಂದು ಪ್ರಮಾಣ ಮಾಡಿದನು. ಅವಳು ತನ್ನ ತಾಯಿಯ ಬಳಿಗೆ ಹೋಗಿ, “ಅಮ್ಮಾ, ನಾನು ಏನನ್ನು ಕೇಳಿಕೊಳ್ಳಲಿ?” ಎಂದು ವಿಚಾರಿಸಿದಳು. “ಸ್ನಾನಿಕ ಯೊವಾನ್ನನ ತಲೆಯನ್ನು ಕೇಳು,” ಎಂದು ಆಕೆ ಮಗಳನ್ನು ಪ್ರೇರೇಪಿಸಿದಳು. ಕೂಡಲೆ ಅವಳು ಅರಸನ ಬಳಿಗೆ ಧಾವಿಸಿ, “ಸ್ನಾನಿಕ ಯೊವಾನ್ನನ ತಲೆಯನ್ನು ಇದೀಗಲೇ ಒಂದು ತಟ್ಟೆಯಲ್ಲಿ ತರಿಸಿಕೊಡಿ; ಇದೇ ನನ್ನ ಬೇಡಿಕೆ,” ಎಂದು ಕೇಳಿಕೊಂಡಳು. ಅರಸನಿಗೆ ಅತೀವ ದುಃಖವಾಯಿತು. ಆದರೂ ಅತಿಥಿಗಳೆಲ್ಲರ ಮುಂದೆ ತಾನು ಮಾಡಿದ ಪ್ರಮಾಣದ ನಿಮಿತ್ತ ಅವಳ ಕೋರಿಕೆಯನ್ನು ನಿರಾಕರಿಸಲಾಗಲಿಲ್ಲ. ಆದುದರಿಂದ ಅವನು ಒಬ್ಬ ಪಹರೆಯವನನ್ನು ಕರೆದು, ಕೂಡಲೇ ಯೊವಾನ್ನನ ತಲೆಯನ್ನು ತರಬೇಕೆಂದು ಅವನಿಗೆ ಆಜ್ಞೆ ಮಾಡಿ ಕಳುಹಿಸಿದನು. ಪಹರೆಯವನು ಸೆರೆಮನೆಗೆ ಹೋಗಿ ಯೊವಾನ್ನನ ತಲೆಯನ್ನು ಕತ್ತರಿಸಿ, ಅದನ್ನು ತಟ್ಟೆಯಲ್ಲಿ ಇಟ್ಟು ಹುಡುಗಿಗೆತಂದುಕೊಟ್ಟನು. ಅವಳು ಅದನ್ನು ತನ್ನ ತಾಯಿಗೆ ಕೊಟ್ಟಳು. ಇದನ್ನು ಕೇಳಿದ ಯೊವಾನ್ನನ ಶಿಷ್ಯರು ಅಲ್ಲಿಗೆ ಬಂದು ಶವವನ್ನು ತೆಗೆದುಕೊಂಡು ಹೋಗಿ ಸಮಾಧಿ ಮಾಡಿದರು.
ಪ್ರಭುವಿನ ಶುಭಸಂದೇಶ

04.02.21

ಮೊದಲನೆಯ ವಾಚನ – ಹಿಬ್ರಿಯರಿಗೆ 12: 18-19, 21-24

ಸಹೋದರರೇ, ನೀವು ಇಸ್ರಯೇಲರಂತೆ ಮುಟ್ಟಬಹುದಾದ ಸೀನಾಯ್ ಬೆಟ್ಟಕ್ಕೆ ಬಂದಿಲ್ಲ. ಅಲ್ಲಿ ಬೆಂಕಿ ಧಗಧಗಿಸುತ್ತಿತ್ತು. ಕಾರ್ಗತ್ತಲು ಕವಿದಿತ್ತು; ಮೋಡದ ಮಬ್ಬು ಮುಸುಕಿತ್ತು; ಬಿರುಗಾಳಿ ಬೀಸುತ್ತಿತ್ತು; ಕಹಳೆಗಳು ಮೊಳಗುತ್ತಿದ್ದವು. ಆಗ ಧ್ವನಿಯೊಂದು ಕೇಳಿಬಂತು. ಅದನ್ನು ಕೇಳಿದವರು, ಇನ್ನೆಂದಿಗೂ ಆ ಧ್ವನಿ ತಮ್ಮೊಂದಿಗೆ ಮಾತನಾಡುವುದೇ ಬೇಡವೆಂದು ಕೇಳಿಕೊಂಡರು. ಆ ನೋಟ ಎಷ್ಟು ಭಯಂಕರವಾಗಿತ್ತೆಂದರೆ, ಮೋಶೆ ಕೂಡ, “ನಾನು ಭಯದಿಂದ ನಡುಗುತ್ತಿದ್ದೇನೆ,” ಎಂದು ಹೇಳುವಂತಾಯಿತು! ಆದರೆ ನೀವು ಬಂದಿರುವುದು ಸಿಯೋನ್ ಬೆಟ್ಟಕ್ಕೆ, ಜೀವಂತ ದೇವರ ನಗರಕ್ಕೆ; ಸ್ವರ್ಗೀಯ ಜೆರುಸಲೇಮಿಗೆ, ಅಸಂಖ್ಯ ದೇವದೂತರು ಕೂಡಿರುವ ಉತ್ಸವ ಕೂಟಕ್ಕೆ; ಸ್ವರ್ಗದಲ್ಲಿ ದಾಖಲೆಯಾಗಿರುವ ಜೇಷ್ಠಪುತ್ರನ ಸಭೆಗೆ; ನೀವು ಬಂದಿರುವುದು ಸಕಲ ಮಾನವರ ನ್ಯಾಯಮೂರ್ತಿಯಾದ ದೇವರ ಸನ್ನಿಧಿಗೆ; ಸಿದ್ಧಿಗೆ ಬಂದ ಸತ್ಪುರುಷರ ಆತ್ಮಗಳ ಸಮೂಹಕ್ಕೆ; ಹೊಸ ಒಡಂಬಡಿಕೆಯ ಮಧ್ಯಸ್ಥರಾದ ಯೇಸುಸ್ವಾಮಿಯ ಬಳಿಗೆ, ಹೇಬೆಲನ ರಕ್ತಕ್ಕಿಂತಲೂ ಅಮೋಘವಾಗಿ ಮೊರೆಯಿಡುವ ಪ್ರೋಕ್ಷಣಾರಕ್ತದ ಬಳಿಗೆ ನೀವು ಬಂದಿದ್ದೀರಿ. 
ಪ್ರಭುವಿನ ವಾಕ್ಯ

ಕೀರ್ತನೆ – 48: 1-3, 8, 9-10, V.9
ಶ್ಲೋಕ: ನಿನ್ನಚಲ ಪ್ರೀತಿಯನು ದೇವಾ, ಸ್ಮರಿಸುವೆವು Iನಿನ್ನ ಮಹದಾಲಯದೊಳು ಅದನು ಧ್ಯಾನಿಸುವೆವು II

ಸರ್ವಸ್ತುತಿಗೆ ಪಾತ್ರ, ಪ್ರಭುವು ಪರಮೋನ್ನತ I
ದೇವನಗರದಲಿ ಆತನ ಪವಿತ್ರ ಪರ್ವತ II

ಎತ್ತರದಲಿ ಸುಂದರ, ಉತ್ತರದಲಿ ಸಿಯೋನ್ ಶಿಖರ I
ಆನಂದದಾಯಕ ರಾಜಾಧಿರಾಜನ ಆ ನಗರ II

ಅದರ ಕೋಟೆಕೊತ್ತಲಗಳ ನಡುವೆ ದೇವನು I
ತಾನೇ ಸುಭದ್ರ ದುರ್ಗವೆಂದು ತೋರಿಹನು II

ಕಿವಿಯಾರೆ ಕೇಳಿದಂತೆಯೆ ಕಣ್ಣಾರೆ ಕಂಡೆವು I
ಸರ್ವಶಕ್ತ ಪ್ರಭುವನು ದೇವನಗರದಲಿ ಕಂಡೆವು II

ನಿನ್ನಚಲ ಪ್ರೀತಿಯನು ದೇವಾ, ಸ್ಮರಿಸುವೆವು I
ನಿನ್ನ ಮಹದಾಲಯದೊಳು ಅದನು ಧ್ಯಾನಿಸುವೆವು II

ನಿನ್ನ ನಾಮದಂತೆ ನಿನ್ನಾ ಹೊಗಳಿಕೆ I
ಮುಟ್ಟುತ್ತದೆ ಜಗದ ಎಲ್ಲೆ ಎಲ್ಲೆಗೆ I

ಶುಭಸಂದೇಶ – ಮಾರ್ಕ 6: 7-13

ಅನಂತರ ಯೇಸುಸ್ವಾಮಿ ಸುತ್ತಮುತ್ತಲಿನ ಊರುಗಳಿಗೆ ಹೋಗಿ ಜನರಿಗೆ ಪ್ರಬೋಧಿಸಿದರು. ಇದಲ್ಲದೆ ಹನ್ನೆರಡು ಮಂದಿ ಶಿಷ್ಯರನ್ನು ಕರೆದು ಅವರಿಗೆ ದೆವ್ವಬಿಡಿಸುವ ಅಧಿಕಾರವನ್ನಿತ್ತು, ಅವರನ್ನು ಇಬ್ಬಿಬ್ಬರನ್ನಾಗಿ ಕಳುಹಿಸಿದರು. ಕಳುಹಿಸುವಾಗ, “ಪ್ರಯಾಣ ದಂಡವೊಂದನ್ನು ಹೊರತು ಇನ್ನೇನನ್ನೂ ತೆಗೆದುಕೊಂಡು ಹೋಗಬೇಡಿ. ಬುತ್ತಿ, ಜೋಳಿಗೆ, ಜೇಬಿನಲ್ಲಿ ಹಣ, ಯಾವುದೂ ಬೇಡ. ಪಾದರಕ್ಷೆಯನ್ನು ಮೆಟ್ಟಿಕೊಂಡರೆ ಸಾಕು. ಎರಡು ಅಂಗಿಗಳನ್ನೂ ತೊಟ್ಟುಕೊಳ್ಳಬೇಡಿ,” ಎಂದು ಅಪ್ಪಣೆಮಾಡಿದರು. ಇದಲ್ಲದೆ, “ನೀವು ಯಾವುದೇ ಒಂದು ಊರಿಗೆ ಹೋದಾಗ ಆ ಊರನ್ನು ಬಿಡುವವರೆಗೂ ಆತಿಥ್ಯ ನೀಡುವ ಯಾವುದಾದರೂ ಒಂದು ಮನೆಯಲ್ಲೇ ಉಳಿದುಕೊಳ್ಳಿ. ಯಾವುದೇ ಊರಿನ ಜನರು ನಿಮ್ಮನ್ನು ಸ್ವಾಗತಿಸದೆಯೂ ನಿಮ್ಮ ಬೋಧನೆಗೆ ಕಿವಿಗೊಡದೆಯೂ ಹೋದರೆ, ಆ ಊರನ್ನು ಬಿಟ್ಟುಹೋಗುವಾಗ ನಿಮ್ಮ ಪಾದಕ್ಕೆ ಹತ್ತಿದ ಧೂಳನ್ನು ಕೂಡ ಝಾಡಿಸಿಬಿಡಿ. ಅವರ ವಿರುದ್ಧ ಅದು ಸಾಕ್ಷಿಯಾಗಿರಲಿ,” ಎಂದರು. ಶಿಷ್ಯರು ಹೊರಟುಹೋಗಿ, “ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ,” ಎಂದು ಜನರಿಗೆ ಸಾರಿ ಹೇಳಿದರು. ದೆವ್ವಹಿಡಿದಿದ್ದ ಅನೇಕರಿಂದ ದೆವ್ವಗಳನ್ನು ಹೊರಗಟ್ಟಿದರು. ತೈಲಲೇಪನಮಾಡಿ ಅನೇಕ ರೋಗಿಗಳನ್ನು ಗುಣಪಡಿಸಿದರು.
ಪ್ರಭುವಿನ ಶುಭಸಂದೇಶ

03.02.21

ಮೊದಲನೆಯ ವಾಚನ - ಹಿಬ್ರಿಯರಿಗೆ 12: 4-7, 11-15

ಪಾಪದ ವಿರುದ್ಧ ನೀವು ಕೈಗೊಂಡ ಹೋರಾಟದಲ್ಲಿ ನಿಮ್ಮ ರಕ್ತವನ್ನೇ ಸುರಿಸುವ ಸ್ಥಿತಿಗೆ ನೀವಿನ್ನೂ ಬಂದಿಲ್ಲ. ಮಕ್ಕಳಿಗೆ ಹೇಳುವಂತೆ ದೇವರು ನಿಮಗೆ ಹೇಳಿರುವ ಎಚ್ಚರಿಕೆಯ ಮಾತನ್ನು ನೀವು ಮರೆತುಬಿಟ್ಟಿರೋ? “ಸುಕುಮಾರಾ, ಸರ್ವೇಶ್ವರ ಕೊಡುವ ಶಿಕ್ಷೆಯನ್ನು ತಾತ್ಸಾರ ಮಾಡದಿರು ಅವರು ನಿನ್ನನ್ನು ದಂಡಿಸುವಾಗ ಧೈರ್ಯಗೆಡದಿರು ಸರ್ವೇಶ್ವರ ತಾವು ಪ್ರೀತಿಸುವವನನ್ನು ಶಿಕ್ಷಿಸುವರು; 
ತಮಗೆ ಮಗನೆಂದು ಬರಮಾಡಿಕೊಳ್ಳುವವನನ್ನು ದಂಡಿಸುವರು.” ಶಿಸ್ತಿಗಾಗಿ ಶಿಕ್ಷೆಯನ್ನು ಸಹಿಸಿಕೊಳ್ಳಬೇಕು. ದೇವರು ನಿಮ್ಮನ್ನು ಮಕ್ಕಳಂತೆ ನೋಡಿಕೊಳ್ಳುತ್ತಾರೆ. ತಂದೆಯಿಂದ ಶಿಕ್ಷೆಯನ್ನು ಪಡೆಯದ ಮಗನಿದ್ದಾನೆಯೇ? ಯಾವ ಶಿಕ್ಷೆಯಾದರೂ ತಕ್ಷಣಕ್ಕೆ ಸಿಹಿಯಾಗಿರದೆ ಕಹಿಯಾಗಿಯೇ ಇರುತ್ತದೆ. ಹೀಗೆ ಶಿಸ್ತಿನ ಕ್ರಮಕ್ಕೆ ಒಳಗಾದವರು ಮುಂದಕ್ಕೆ ನ್ಯಾಯನೀತಿಯನ್ನೂ ಶಾಂತಿಸಮಾಧಾನವನ್ನೂ ಪ್ರತಿಫಲವಾಗಿ ಪಡೆಯುತ್ತಾರೆ. ಆದ್ದರಿಂದ, ಜೋತುಬೀಳುವ ನಿಮ್ಮ ಕೈಗಳನ್ನು ಮೇಲೆತ್ತಿ, ಕುಸಿದುಬೀಳುವ ನಿಮ್ಮ ಮೊಣಕಾಲುಗಳನ್ನು ಚೇತರಿಸಿಕೊಳ್ಳಿ. ನೀವು ಹಿಡಿದಿರುವ ಹಾದಿಯನ್ನು ಸರಿಪಡಿಸಿಕೊಳ್ಳಿ. ಆಗ ಕುಂಟುವ ಕಾಲು ಉಳುಕದೆ ವಾಸಿಯಾಗುತ್ತದೆ. ಎಲ್ಲರೊಂದಿಗೂ ಶಾಂತಿಸಮಾಧಾನದಿಂದಿರಲು ಪ್ರಯತ್ನಿಸಿರಿ; ಪರಿಶುದ್ಧತೆಯನ್ನು ಅರಸಿರಿ; ಪರಿಶುದ್ಧತೆಯಿಲ್ಲದೆ ಯಾರೂ ದೇವರನ್ನು ಕಾಣುವಂತಿಲ್ಲ. ನಿಮ್ಮಲ್ಲಿ ಯಾರೂ ದೇವರ ಅನುಗ್ರಹವನ್ನು ಕಳೆದುಕೊಳ್ಳದಂತೆ ಎಚ್ಚರಿಕೆಯಾಗಿರಿ. ಯಾವ ವಿಷದ ಬೇರೂ ನಿಮ್ಮಲ್ಲಿ ತಲೆದೋರಿ, ಅಸಮಾಧಾನವನ್ನು ಹುಟ್ಟಿಸಿ, ಸಭೆಯನ್ನು ಕೆಡಿಸದಂತೆ ನೋಡಿಕೊಳ್ಳಿ.
ಪ್ರಭುವಿನ ವಾಕ್ಯ

ಕೀರ್ತನೆ - 103: 1-2, 13-14, 17-18
ಭಯಭಕ್ತರಿಗೆ ಪ್ರಭುವಿನ ಪ್ರೀತಿಯಾದರೋ ಯುಗಯುಗಾಂತರಕು I

ಭಜಿಸು ನನ್ನ ಮನವೇ, ಭಜಿಸು ಪ್ರಭುವನು I
ನನ್ನ ಅಂತರಂಗವೇ, ಭಜಿಸು ಆತನನು I

ನೆನೆ ಆತನ ಪರಮಪಾವನ ನಾಮವನು II
ಭಜಿಸು ನನ್ನ ಮನವೇ, ಭಜಿಸು ಪ್ರಭುವನು I

ಮರೆಯದಿರು ಆತನ ಉಪಕಾರಗಳೊಂದನು II
ತಂದೆ ಕರುಣೆ ತೋರಿಸುವಂತೆ ಮಕ್ಕಳಿಗೆ I

ಕನಿಕರಿಸುವನಾತ ತನಗೆ ಅಂಜುವವರಿಗೆ II
ಏಕೆನೆ, ನಮ್ಮ ಸ್ವಭಾವವನು ಆತನು ಬಲ್ಲ I

ನಾವು ಹುಡಿಮಣ್ಣೆಂದವನಿಗೆ ತಿಳಿದಿದೆಯಲ್ಲಾ II
ಭಯಭಕ್ತರಿಗೆ ಪ್ರಭುವಿನ ಪ್ರೀತಿಯಾದರೋ ಯುಗಯುಗಾಂತರಕು I

ಅವರ ಮಕ್ಕಳ ಮಕ್ಕಳಿಗೆ ಆತನ ನೀತಿಯು ತಲತಲಾಂತರಕು II
ಅಂತೆಯೇ ಆತನ ನಿಬಂಧನೆಗಳನು ಕೈಗೊಳ್ಳುವವರಿಗೆ I
ಆತನ ವಿಧಿನಿಯಮಗಳು ನೆನಪಿನಲ್ಲಿಟ್ಟು ನಡೆವವರಿಗೆ II

ಶುಭಸಂದೇಶ - ಮಾರ್ಕ 6: 1-6

ಯೇಸುಸ್ವಾಮಿ ಅಲ್ಲಿಂದ ಹೊರಟು ತಮ್ಮ ಸ್ವಂತ ಊರಿಗೆ ಹೋದರು. ಶಿಷ್ಯರು ಅವರನ್ನು ಹಿಂಬಾಲಿಸಿದರು. ಸಬ್ಬತ್‍ದಿನ ಅಲ್ಲಿಯ ಪ್ರಾರ್ಥನಾಮಂದಿರದಲ್ಲಿ ಉಪದೇಶ ಮಾಡತೊಡಗಿದರು. ಕಿಕ್ಕಿರಿದು ನೆರೆದಿದ್ದ ಜನರು ಯೇಸುವಿನ ಬೋಧನೆಯನ್ನು ಕೇಳಿ ಬೆರಗಾದರು. “ಇದೆಲ್ಲಾ ಇವನಿಗೆ ಎಲ್ಲಿಂದ ಬಂದಿತು? ಇವನು ಪಡೆದಿರುವ ಜ್ಞಾನವಾದರೂ ಎಂಥಾದ್ದು? ಇವನಿಂದ ಮಹತ್ಕಾರ್ಯಗಳು ಆಗುವುದಾದರೂ ಹೇಗೆ? ಇವನು ಆ ಬಡಗಿಯಲ್ಲವೆ? ಮರಿಯಳ ಮಗನಲ್ಲವೆ? ಯಕೋಬ, ಯೋಸೆ, ಯೂದ ಮತ್ತು ಸಿಮೋನ ಇವರ ಸಹೋದರನಲ್ಲವೆ? ಇವನ ಸಹೋದರಿಯರು ಇಲ್ಲಿಯೇ ವಾಸಮಾಡುತ್ತಿಲ್ಲವೆ?” ಎಂದು ಹೇಳುತ್ತಾ ಯೇಸುವನ್ನು ತಾತ್ಸಾರಮಾಡಿದರು. ಆಗ ಯೇಸು, “ಪ್ರವಾದಿಗೆ ಬೇರೆ ಎಲ್ಲಿಯಾದರೂ ಗೌರವ ದೊರಕೀತು. ಆದರೆ ಸ್ವಗ್ರಾಮದಲ್ಲಿ, ಸ್ವಜನರಲ್ಲಿ, ಸ್ವಗೃಹದಲ್ಲಿ ಗೌರವ ದೊರಕದು,” ಎಂದರು. ಕೆಲವು ರೋಗಿಗಳ ಮೇಲೆ ಕೈಗಳನ್ನಿರಿಸಿ, ಅವರನ್ನು ಗುಣಪಡಿಸಿದ್ದನ್ನು ಬಿಟ್ಟರೆ ಇನ್ನಾವ ಮಹತ್ತಾದ ಕಾರ್ಯಗಳನ್ನೂ ಅವರು ಅಲ್ಲಿ ಮಾಡಲಾಗಲಿಲ್ಲ. ಆ ಜನರ ಅವಿಶ್ವಾಸವನ್ನು ಕಂಡು ಯೇಸುವಿಗೆ ಬಹಳ ಅಚ್ಚರಿಯಾಯಿತು
ಪ್ರಭುವಿನ ಶುಭಸಂದೇಶ

02.02.21- “ನಿನ್ನ ಮಾತು ಸರ್ವೇಶ್ವರಾ, ನೆರವೇರಿತಿಂದು ಇನ್ನು ತೆರಳಬಿಡು ಶಾಂತಿಯಿಂದ ನಿನ್ನ ದಾಸನಾದ ಎನ್ನನ್ನು"

ಮೊದಲನೆಯ ವಾಚನ - ಮಲಾಕಿ 3: 1-4

ಸೇನಾಧೀಶ್ವರ ಸರ್ವೇಶ್ವರ ಹೇಳುವುದನ್ನು ಕೇಳಿ: “ನಾನು ನನ್ನ ದೂತನನ್ನು ಮುಂದಾಗಿ ಕಳುಹಿಸುತ್ತೇನೆ. ನಾನು ಬರಲು ಮಾರ್ಗವನ್ನು ಆತನು ಸಿದ್ಧಗೊಳಿಸುವನು. ನೀವು ಎದುರು ನೋಡುತ್ತಿರುವ ಸರ್ವೇಶ್ವರ ಇದ್ದಕ್ಕಿದ್ದಂತೆ ತಮ್ಮ ಆಲಯಕ್ಕೆ ಬರುವರು. ಇಗೋ, ನಿಮಗೆ ಪ್ರಿಯನಾದ ದೂತನು ಬರುವನು. ನನ್ನ ಒಡಂಬಡಿಕೆಯನ್ನು ನಿಮಗೆ ಪ್ರಕಟಿಸುವನು.” “ಆದರೆ ಆತನು ಬರುವಾಗ ಆತನನ್ನು ಎದುರುಗೊಳ್ಳಬಲ್ಲವನು ಯಾರು? ಆತನ ದರ್ಶನವನ್ನು ಪಡೆದು ಬದುಕಬಲ್ಲವನು ಯಾರು? ಆತನು ಅಕ್ಕಸಾಲಿಗನ ಕುಲುಮೆಯ ಬೆಂಕಿಗೂ ಅಗಸನ ಚೌಳಿಗೂ ಸಮಾನನು. ಬೆಳ್ಳಿಯನ್ನು ಶುದ್ಧೀಕರಿಸುವ ಅಕ್ಕಸಾಲಿಗನಂತೆ ಲೇವಿಯ ವಂಶದವರನ್ನು ಶುದ್ಧಗೊಳಿಸುವನು; ಬೆಳ್ಳಿಬಂಗಾರದಂತೆ ಶುದ್ಧೀಕರಿಸುವನು. ಆಗ ಅವರು ಯೋಗ್ಯವಾದ ಕಾಣಿಕೆಗಳನ್ನು ಸರ್ವೇಶ್ವರಸ್ವಾಮಿಗೆ ತಂದೊಪ್ಪಿಸುವರು. ಪೂರ್ವದಿನಗಳಲ್ಲಿ, ಪುರಾತನ ಕಾಲದಲ್ಲಿ ಇದ್ದಂತೆ ಜೂದಾ ಮತ್ತು ಜೆರುಸಲೇಮಿನ ಜನರ ಕಾಣಿಕೆಗಳು ಆ ಸ್ವಾಮಿಗೆ ಮೆಚ್ಚುಗೆಯಾಗಿರುವುವು.”
ಪ್ರಭುವಿನ ವಾಕ್ಯ

ಕೀರ್ತನೆ: 24: 7-10

ಶ್ಲೋಕ: ಯಾರಿವನು ಮಹಿಮಾವಂತ ರಾಜಾಧಿರಾಜನು? ಇವನೇ ಪ್ರಭು.

ಆಗಮಿಸುತಿಹನಿದೋ ಮಹಿಮಾವಂತ ರಾಜಾಧಿರಾಜನು I
ತೆರೆದು ಸ್ವಾಗತಿಸಲಿ ಕದಗಳು, ಸನಾತನ ದ್ವಾರಗಳು II

ಯಾರಿವನು ಮಹಿಮಾವಂತ ರಾಜಾಧಿರಾಜನು? I
ಇವನೇ ಪ್ರಭು, ಯುದ್ಧವೀರನು, ಶಕ್ತಿಸಮರ್ಥನು! II

ಆಗಮಿಸುತಿಹನಿದೋ ಮಹಿಮಾವಂತ ರಾಜಾಧಿರಾಜನು I
ತೆರೆದು ಸ್ವಾಗತಿಸಲಿ ಕದಗಳು, ಸನಾತನ ದ್ವಾರಗಳು II

ಯಾರಿವನು ಮಹಿಮಾವಂತ ರಾಜಾಧಿರಾಜನು? I
ಇವನೇ ಸೇನಾಧೀಶ್ವರನು, ಮಹಿಮಾರಾಜನು II

ಎರಡನೆಯ ವಾಚನ - ಹಿಬ್ರಿಯರಿಗೆ 2: 14-18

ಇದಲ್ಲದೆ, ಮಕ್ಕಳು ರಕ್ತಮಾಂಸಧಾರಿಗಳಾಗಿರುವುದರಿಂದ ಯೇಸುವು ಅವರಂತೆ ರಕ್ತಮಾಂಸಧಾರಿಯಾದರು. ಹೀಗೆ ಮರಣಾಧಿಕಾರಿಯಾಗಿದ್ದ ಸೈತಾನನನ್ನು ತಮ್ಮ ಮರಣದಿಂದಲೇ ಸೋಲಿಸಲು ಮತ್ತು ಮರಣಭಯದ ನಿಮಿತ್ತ ತಮ್ಮ ಜೀವನದುದ್ದಕ್ಕೂ ದಾಸ್ಯದಲ್ಲಿದ್ದವರನ್ನು ಬಿಡುಗಡೆಮಾಡಲು ಅವರು ಮನುಷ್ಯರಾದರು. ಅವರು ಉದ್ಧಾರ ಮಾಡಬಂದುದು ಖಂಡಿತವಾಗಿ ದೇವದೂತರನ್ನಲ್ಲ, ಅಬ್ರಹಾಮನ ಸಂತತಿಯನ್ನು. ಆದಕಾರಣ, ಎಲ್ಲದರಲ್ಲೂ ತಮ್ಮ ಸಹೋದರರಿಗೆ ಸಮಾನರಾಗಬೇಕಾಗಿತ್ತು; ಜನರ ಪಾಪನಿವಾರಣೆಗಾಗಿ ದೇವರ ಕಾರ್ಯಗಳನ್ನು ನಿರ್ವಹಿಸುವ ದಯಾಮಯನೂ ನಂಬಿಕಸ್ಥನೂ ಆದ ಪ್ರಧಾನ ಯಾಜಕನಾಗಬೇಕಾಗಿತ್ತು. ಸ್ವತಃ ತಾವೇ ಶೋಧನೆಗೊಳಗಾಗಿ ಯಾತನೆಯನ್ನು ಅನುಭವಿಸಿದ್ದರಿಂದ ಶೋಧನೆಗೊಳಗಾಗುವವರಿಗೆ ನೆರವಾಗಲು ಯೇಸು ಸಮರ್ಥರಾದರು.
ಪ್ರಭುವಿನ ವಾಕ್ಯ

ಶುಭಸಂದೇಶ - ಲೂಕ 2: 22-40 


ಮೋಶೆಯ ನಿಯಮದ ಪ್ರಕಾರ ಸೂತಕ ದಿನಗಳು ಮುಗಿದು ಶುದ್ಧೀಕರಣ ದಿನ ಬಂದಾಗ, ತಂದೆತಾಯಿಗಳು ಆ ಮಗುವನ್ನು ಎತ್ತಿಕೊಂಡು ಜೆರುಸಲೇಮಿಗೆ ಹೋದರು. ಏಕೆಂದರೆ, ‘ಮೊದಲು ಜನಿಸಿದ ಪ್ರತಿಯೊಂದು ಗಂಡು ಮಗುವನ್ನು ಸರ್ವೇಶ್ವರನಿಗೆ ಸಮರ್ಪಿಸಬೇಕಾಗಿತ್ತು. ಅಲ್ಲದೆ, ಧರ್ಮಶಾಸ್ತ್ರದಲ್ಲೇ ಉಲ್ಲೇಖಿಸಿರುವಂತೆ ಒಂದು ಜೋಡಿ ಬೆಳವಹಕ್ಕಿಗಳನ್ನಾಗಲಿ, ಎರಡು ಪಾರಿವಾಳದ ಮರಿಗಳನ್ನಾಗಲಿ, ಬಲಿಯನ್ನಾಗಿ ಅರ್ಪಿಸಬೇಕಾಗಿತ್ತು. ಆಗ ಜೆರುಸಲೇಮಿನಲ್ಲಿ ಸಿಮೆಯೋನನೆಂಬ ಒಬ್ಬನು ವಾಸವಾಗಿದ್ದನು. ಸತ್ಪುರುಷನೂ ದೈವಭಕ್ತನೂ ಆದ ಇವನು, ಇಸ್ರಯೇಲ್ ಜನತೆಯ ಉದ್ಧಾರಕ ಯಾವಾಗ ಬರುವನೋ ಎಂದು ನಿರೀಕ್ಷಿಸುತ್ತಾ ಇದ್ದನು. ಪವಿತ್ರಾತ್ಮ ಇವನಲ್ಲಿ ನೆಲೆಸಿದ್ದರು. ಸರ್ವೇಶ್ವರ ಕಳುಹಿಸಲಿರುವ ಅಭಿಷಿಕ್ತನಾದ ಲೋಕೋದ್ಧಾರಕನ ದರ್ಶನವಾಗುವವರೆಗೆ ತನಗೆ ಸಾವಿಲ್ಲವೆಂದು ಪವಿತ್ರಾತ್ಮರಿಂದಲೇ ಆಶ್ವಾಸನೆ ಪಡೆದಿದ್ದನು. ಆ ಪವಿತ್ರಾತ್ಮರಿಂದ ಪ್ರೇರಿತನಾಗಿ ಅವನು ಮಹಾದೇವಾಲಯಕ್ಕೆ ಬಂದನು. ಧರ್ಮ ಶಾಸ್ತ್ರದ ವಿಧಿಯನ್ನು ಪೂರೈಸಲು ಬಾಲಯೇಸುವನ್ನು ತಂದೆತಾಯಿಗಳು ದೇವಾಲಯಕ್ಕೆ ತಂದಾಗ, ಸಿಮೆಯೋನನು ಆ ಮಗುವನ್ನು ತನ್ನ ಕೈಗಳಲ್ಲಿ ಎತ್ತಿಕೊಂಡು ದೇವರನ್ನು ಹೀಗೆಂದು ಸ್ತುತಿಸಿದನು:
“ನಿನ್ನ ಮಾತು ಸರ್ವೇಶ್ವರಾ, ನೆರವೇರಿತಿಂದು
ಇನ್ನು ತೆರಳಬಿಡು ಶಾಂತಿಯಿಂದ ನಿನ್ನ ದಾಸನಾದ ಎನ್ನನ್ನು.
ನೀನಿತ್ತ ಉದ್ಧಾರಕನನು ನಾ ಕಂಡೆ ಕಣ್ಣಾರೆ
ಜನರೆಲ್ಲರ ಸಮ್ಮುಖದಲ್ಲಿ ನೀನೀತನನು ಪ್ರತ್ಯಕ್ಷ ಮಾಡಿರುವೆ.
ಈತ ಅನ್ಯಜನರನ್ನು ಬೆಳಗಿಸುವ ಜ್ಯೋತಿ
ನಿನ್ನ ಜನ ಇಸ್ರಯೇಲರಿಗೆ ತರುವನು ಕೀರ್ತಿ.”
ಮಗುವಿನ ವಿಷಯವಾಗಿ ಹೇಳಿದ ಈ ಮಾತುಗಳನ್ನು ಕೇಳಿ ತಂದೆತಾಯಿಗಳು ಆಶ್ಚರ್ಯಪಟ್ಟರು. ಅವರನ್ನು ಸಿಮೆಯೋನನು ಆಶೀರ್ವದಿಸಿದನು. ತಾಯಿ ಮರಿಯಳಿಗೆ, “ಇಗೋ, ಈ ಮಗು ಇಸ್ರಯೇಲರಲ್ಲಿ ಅನೇಕರ ಉನ್ನತಿಗೂ ಅನೇಕರ ಅವನತಿಗೂ ಕಾರಣನಾಗುವನು. ಅನೇಕರು ಪ್ರತಿಭಟಿಸುವ ದೈವಸಂಕೇತವಾಗುವನು. ಇದರಿಂದ ಅನೇಕರ ಹೃದಯದಾಳದ ಭಾವನೆಗಳು ಬಯಲಾಗುವುವು. ನಿನ್ನ ವಿಷಯದಲ್ಲಿ ಹೇಳುವುದಾದರೆ, ದುಃಖವೆಂಬ ಅಲಗೊಂದು ನಿನ್ನ ಅಂತರಂಗವನ್ನು ಸೀಳುವುದು,” ಎಂದು ಹೇಳಿದನು. ಇದಲ್ಲದೆ ಅಲ್ಲಿ ಅಶೇರನ ವಂಶಕ್ಕೆ ಸೇರಿದ ಫನುವೇಲನ ಮಗಳಾದ ಅನ್ನಳೆಂಬ ಪ್ರವಾದಿನಿಯಿದ್ದಳು. ಅವಳು ಮುದಿಪ್ರಾಯದವಳು, ಮದುವೆಯಾಗಿ ಏಳು ವರ್ಷ ಮಾತ್ರ ಗಂಡನೊಡನೆ ಬಾಳಿ ವಿಧವೆಯಾದವಳು. ಅವಳಿಗೆ ಸುಮಾರು ಎಂಬತ್ತನಾಲ್ಕು ವರ್ಷ ವಯಸ್ಸು. ಮಹಾದೇವಾಲಯವನ್ನು ಬಿಟ್ಟು ಅವಳು ಎಲ್ಲಿಗೂ ಹೋಗುತ್ತಿರಲಿಲ್ಲ; ಹಗಲಿರುಳು ಉಪವಾಸ ಪ್ರಾರ್ಥನೆಗಳಿಂದ ದೇವಾರಾಧನೆಯಲ್ಲಿ ನಿರತಳಾಗಿದ್ದಳು. ಅವಳು ಅದೇ ಸಂದರ್ಭದಲ್ಲಿ ಅಲ್ಲಿಗೆ ಬಂದು, ದೇವರಿಗೆ ಕೃತಜ್ಞತಾಸ್ತುತಿ ಸಲ್ಲಿಸಿ, ಜೆರುಸಲೇಮಿನ ವಿಮೋಚನೆಯನ್ನು ಎದುರು ನೋಡುತ್ತಿದ್ದ ಅಲ್ಲಿಯವರಿಗೆಲ್ಲಾ ಆ ಶಿಶುವಿನ ವಿಷಯವಾಗಿ ಹೇಳತೊಡಗಿದಳು. ಸರ್ವೇಶ್ವರನ ಧರ್ಮಶಾಸ್ತ್ರಕ್ಕನುಸಾರ ಎಲ್ಲ ವಿಧಿಗಳನ್ನು ನೆರವೇರಿಸಿದ ಮೇಲೆ ಜೋಸೆಫ್ ಮತ್ತು ಮರಿಯಳು ಗಲಿಲೇಯ ಪ್ರಾಂತ್ಯದಲ್ಲಿದ್ದ ತಮ್ಮ ಸ್ವಗ್ರಾಮವಾದ ನಜರೇತಿಗೆ ಹಿಂದಿರುಗಿದರು. ಬಾಲಕ ಯೇಸು ಬೆಳೆದಂತೆ ಶಕ್ತರೂ ಜ್ಞಾನ ಸಂಪೂರ್ಣರೂ ಆದರು. ಇದಲ್ಲದೆ ದೈವಾನುಗ್ರಹ ಅವರ ಮೇಲಿತ್ತು.
ಪ್ರಭುವಿನ ಶುಭಸಂದೇಶ